Wednesday, March 18, 2015

ತುಳುಚಿತ್ರರಂಗದ ಟೇಲರ್ ಯುಗಾಂತ್ಯ

* ಸ್ಟೀವನ್ ರೇಗೊ,ದಾರಂದಕುಕ್ಕು ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿ ಪುಟ್ಟ ಟೈಲರ್ ಶಾಪ್‌ನಲ್ಲಿ ಕೂತು ಟೈಲರಿಂಗ್ ವೃತ್ತಿ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಏಕ್‌ದಂ ತುಳು ರಂಗಭೂಮಿಗೆ ಬರುತ್ತಾರೆ. ಅಲ್ಲಿ ತಮ್ಮ ವಿಶೇಷ ಕತೆ, ರಂಗವೇದಿಕೆಯ ಸಜ್ಜಿಕೆಯಲ್ಲಿ ಹೊಸ ಛಾಪು ಮೂಡಿಸುತ್ತಾ ಹೋಗುತ್ತಿದ್ದಂತೆ ಸಿನಿಮಾ ರಂಗಭೂಮಿ ಅವರನ್ನು ಕೈ ಬೀಸಿ ಕರೆದುಕೊಳ್ಳುತ್ತದೆ. ಮತ್ತೆ ಇಡೀ ಸಿನಿಮಾ ರಂಗದಲ್ಲಿ ಭೀಷ್ಮರಾಗಿ ಕಾಣಿಸಿಕೊಂಡು ಹೊಳೆಯುವ ನಕ್ಷತ್ರವಾಗಿ ಕಣ್ಮರೆಯಾಗುತ್ತಾರೆ. ಇದು ಕೆ.ಎನ್. ಟೇಲರ್ ಎನ್ನುವ ಹಿರಿಯ ತುಳು ನಟನ ಕುರಿತಾದ ಪುಟ್ಟ ಮಾಹಿತಿ. ಕೆ.ಎನ್.ಟೇಲರ್ ಸಿನಿಮಾಗಳೆಂದರೆ ಪಕ್ಕಾ ಕನ್ನಡದ ಹಿರಿ ನಟ ರಾಜ್‌ಕುಮಾರ್ ಅವರನ್ನು ಬದಿಗಿಟ್ಟುಕೊಂಡು ನೋಡಿದ ಅನುಭವ ಸಿನಿಮಾ ಪ್ರೇಕ್ಷಕನಿಗೆ ಆಗಿ ಬಿಡುತ್ತಿತ್ತು. ಸೇಮ್ ಟು ಸೇಮ್ ರಾಜ್‌ಕುಮಾರ್ ಅವರ ಹಾವಭಾವಗಳನ್ನು ಟೇಲರ್ ತಮ್ಮ ಚಿತ್ರಗಳಲ್ಲಿ ಪ್ರದರ್ಶಿಸುತ್ತಿದ್ದರು. ಸೂಜಿ ಮೀಸೆಯಲ್ಲಿ ತಮ್ಮ ವಿಶಿಷ್ಟ ಕ್ರಾಪ್ ಮಾಡಿದ ಕೂದಲಿನಿಂದ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವ ತಾಕತ್ತು ಟೇಲರ್‌ಗೆ ಸಿದ್ದಿಸಿತ್ತು. ವಿಶಿಷ್ಟ ಮಾದರಿಯಲ್ಲಿ ಡೈಲಾಗ್ ಡೆಲಿವರಿ ಜತೆಗೆ ಪ್ರತಿ ಚಿತ್ರದಲ್ಲೂ ಭಿನ್ನ ನಟನೆಗೆ ಒತ್ತುಕೊಡುತ್ತಾ ಸಿನಿಮಾದ ತುಂಬಾ ಅವರ ಓಡಾಟ ಸಿನಿಮಾ ನೋಡುವ ಮಂದಿಗೆ ಇಷ್ಟವಾಗಿ ಬಿಡುತ್ತಿತ್ತು ಎನ್ನುವುದು ಅವರ ಸಿನಿಮಾಗಳನ್ನು ನೋಡಿದವರ ಮಾತು. ಟೋಟಲಿ ಎಲ್ಲ ಮಾದರಿಯಲ್ಲೂ ಟೇಲರ್ ತುಳು ಸಿನಿಮಾದ ರಾಜ್‌ಕುಮಾರ್ ಅವರೇ ಆಗಿ ಹೋಗಿದ್ದರು. ರಂಗಭೂಮಿಯ ಪ್ರಯೋಗಶೀಲ: ಕೆ.ಎನ್.ಟೇಲರ್ ಆರಂಭದಲ್ಲಿ ಟೈಲರಿಂಗ್ ವೃತ್ತಿ ಮಾಡಿಕೊಂಡಿದ್ದವರು. ಅವರಿಗೆ ರಂಗಭೂಮಿಯ ನಂಟು ಹೇಗೆ ಬಂತು ಎನ್ನುವ ಕುತೂಹಲದ ಮಾತಿಗೆ ಅವರ ಗೆಳೆಯರು ಹೇಳುವುದು ಹೀಗೆ: ಟೇಲರ್ ಟೈಲರಿಂಗ್ ವೃತ್ತಿ ಮಾಡಿಕೊಳ್ಳುತ್ತಿದ್ದಾಗ ಒಂದೊಂದು ಕತೆಯನ್ನು ಅಭಿನಯಿಸುತ್ತಾ ಹೇಳುತ್ತಿದ್ದರು. ಬಂದ ಗ್ರಾಹಕರಲ್ಲೂ ಅದೇ ರೀತಿ ಮಾತನಾಡುತ್ತಾ ಮುಂದೆ ಗೆಳೆಯರು ಸಲಹೆಯ ಪಡೆದು ಗಣೇಶ ನಾಟಕ ಸಭಾವನ್ನು ಹುಟ್ಟುಹಾಕಿದರು. ಈ ಬಳಿಕ ಮುಂಬಯಿ, ಬೆಂಗಳೂರು, ಮಂಗಳೂರು ಸೇರಿದಂತೆ ಕರಾವಳಿಯ ಉದ್ದ ಅಗಲಕ್ಕೂ ಟೇಲರ್ ನಾಟಕಗಳು ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಒಂದು ಪ್ರದರ್ಶನ ಕಾಣುತ್ತಿದ್ದಂತೆ ಮತ್ತೊಂದು ಪ್ರದರ್ಶನಕ್ಕೆ ಅಲ್ಲಿಯೇ ಪ್ರೇಕ್ಷಕರು ದುಂಬಾಲು ಬೀಳುತ್ತಿದ್ದರು. ಹೀಗೆ ಅವರ ನಾಟಕಗಳು ಬಹಳ ಜನಪ್ರಿಯತೆಯ ಜತೆಗೆ ಸಿನಿಮಾವಾಗಿ ತೆರೆಗೆ ಬಂತು. ಅಂದಹಾಗೆ ಅವರು ತುಳು ನಾಡಿಗೆ ಅರ್ಪಿಸಿದ ಒಟ್ಟು ನಾಟಕಗಳ ಸಂಖ್ಯೆ ಹದಿನೇಳು. ‘ಬೊಂಬಾಯಿ ಕಂಡನೆ’, ‘ಪುದರ್ ಕೇನಡೆ’, ‘ಡಾ. ಶಂಕರ್’, ‘ತಮ್ಮಲೆ ಅರುವತ್ತನ ಕೋಲ’, ‘ಏರ್ ಮಲ್ತಿನ ತಪ್ಪು’, ‘ಶಾಂತಿ’, ‘ಕಲ್ಲ್‌ದ ದೇವೆರ್’, ‘ಯಾನ್ ಸನ್ಯಾಸಿ ಆಪೆ’, ‘ಕಾಸ್‌ದಾಯೆ ಕಂಡೆನಿ’, ‘ಬಾಡಾಯಿದ ಬಂಗಾರ್’, ‘ಕಂಡನೆ ಬುಡೆದಿ’, ‘ಇಂದ್ರನ ಆಸ್ತಿ’, ‘ಕಲ್ಜಿಗದ ವಿಶ್ವಾಮಿತ್ರ ಮೇನಕೆ’, ‘ಏರೆನ್ಲಾ ನಂಬೊಡ್ಜಿ’, ‘ದೇವೆರ್ ಕೊರ್ಪೆರ್’, ‘ಸೈನಗಾಂಡಲಾ ಸತ್ಯ ಪನ್ಲೆ’, ‘ದಾಸುನ ಮದ್ಮೆ ’ ಮುಂತಾದ ನಾಟಕಗಳು ತುಳು ನಾಟಕರಂಗದ ಅಭ್ಯುದಯದ ಅಡಿಪಾಯವೆಂದೇ ಹೇಳಬೇಕು. ರಂಗಭೂಮಿಯ ಮೇಲೆ ಜೀವಂತ ಪ್ರಾಣಿಗಳನ್ನು ತಂದು ಪ್ರೇಕ್ಷಕರಿಗೆ ಮುದ ಕೊಡುತ್ತಿದ್ದ ಅವರ ನಾಟಕಗಳಲ್ಲಿ ಕತೆಗೆ ಬಹಳ ಒತ್ತು ನೀಡುತ್ತಿದ್ದರು ಎನ್ನುವುದು ಅವರ ನಾಟಕಗಳ ಅಭಿಮಾನಿಗಳು ಹೇಳುತ್ತಿರುವ ಮಾತು. ೨೦೧೩ರಲ್ಲಿ ಕೆ.ಎನ್.ಟೇಲರ್ ಮತ್ತೆ ರಂಗಭೂಮಿಗೆ ಪ್ರವೇಶ ಪಡೆಯಲು ಪ್ರಯತ್ನ ಪಟ್ಟಿದ್ದರು. ಅವರ ಬಹು ನಿರೀಕ್ಷೆ ಹುಟ್ಟುಹಾಕಿದ ನಾಟಕ ‘ಏರೆನ್ಲಾ ನಂಬೊಡ್ಚಿ ’ ಮಂಗಳೂರು ಪುರಭವನದಲ್ಲಿ ಪ್ರದರ್ಶನ ಕಂಡಿತ್ತು. ಇದು ಸಿನಿಮಾ ಮಾಡುವ ಇರಾದೆಯಿಂದ ಮಂಗಳೂರಿನ ಉದ್ಯಮಿಯೊಬ್ಬರ ಪ್ರಾಯೋಜಕತ್ವದಲ್ಲಿ ಮಾಡಲಾಗಿತ್ತು. ಆದರೆ ಕಮರ್ಷಿಯಲ್ ದುನಿಯಾಕ್ಕೆ ಈ ಕತೆ ಅಷ್ಟಾಗಿ ಒಗ್ಗಿ ಬರೋದಿಲ್ಲ ಎನ್ನುವುದಕ್ಕೆ ಸಿನಿಮಾ ಮಾಡುವ ಯೋಜನೆಗೆ ಕಲ್ಲು ಬಿತ್ತು. ಈ ಬಳಿಕ ಗಣೇಶ ನಾಟಕ ಸಭಾ ೫೫ ವರ್ಷಗಳನ್ನು ಪೂರೈಸಿದ ಖುಷಿಯಲ್ಲಿ ಮತ್ತೆ ಟೇಲರ್ ರಂಗಭೂಮಿ ಏರಿದ್ದರು. ಅಲ್ಲೂ ತಮ್ಮ ಇಷ್ಟದ ನಾಟಕವನ್ನು ಪ್ರದರ್ಶನ ಮಾಡಿ ಎಲ್ಲರಿಂದಲೂ ಭೇಷ್ ಎನ್ನಿಸಿಕೊಂಡಿದ್ದರು ಎನ್ನುತ್ತಾರೆ ಅವರ ಆಪ್ತ ವಲಯ. ಆದರೆ ಇದರ ಬಳಿಕ ತುಳುರಂಗಭೂಮಿಯ ವೇದಿಕೆ ಏರಲು ಟೇಲರ್‌ಗೆ ಆರೋಗ್ಯ ಸಾಥ್ ಕೊಟ್ಟಿರಲಿಲ್ಲ. ಪದೇ ಪದೇ ಕಾಯಿಲೆಗೆ ಗುರಿಯಾಗುತ್ತಿದ್ದ ಟೇಲರ್ ಗಣೇಶ ನಾಟಕ ಸಭಾದಿಂದ ಹೊಸ ಪ್ರತಿಭೆಗಳನ್ನು ಹಾಕಿಕೊಂಡು ನಾಟಕಗಳನ್ನು ಮಾಡುತ್ತಾ ಕರಾವಳಿಯ ತುಂಬಾ ಓಡಾಟಬೇಕು ಎನ್ನುವ ಯೋಜನೆ ಇಟ್ಟುಕೊಂಡಿದ್ದರು. ತುಳುವರ ಪಾಲಿನ ರಾಜ್‌ಕುಮಾರ್: ತುಳು ಚಿತ್ರರಂಗಕ್ಕೆ ಟೇಲರ್ ಎಂಟ್ರಿ ತೀರಾ ವಿಚಿತ್ರ ತುಳು ರಂಗಭೂಮಿಯಲ್ಲಿ ಗಣೇಶ ನಾಟಕ ಸಭಾ ಕಟ್ಟಿಕೊಂಡು ನಾಟಕಗಳನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದಾಗ ಅವರಿಗೆ ಬಣದಣದ ಲೋಕದ ಟಚ್ ದಿಢೀರ್ ಆಗಿ ಬಂತು. ಒಂದರ ನಂತರ ಒಂದು ಚಿತ್ರಗಳನ್ನು ಮಾಡುತ್ತಾ ಪಕ್ಕಾ ತುಳು ಸಿನಿಮಾ ರಂಗದ ಭೀಷ್ಮರಾಗಿ ಕಾಣಿಸಿಕೊಂಡರು. ತುಳು ಚಿತ್ರರಂಗದಲ್ಲಿ ಬರೋಬರಿ ೯ ಸಿನಿಮಾಗಳನ್ನು ಕೊಡುವ ಮೂಲಕ ತುಳು ಚಿತ್ರರಂಗದ ಭರ್ಜರಿ ಕೊಯ್ಲಿಗೆ ಸಾಥ್ ಕೊಟ್ಟಿದ್ದರು. ‘ದಾರೆದ ಬುಡೆದಿ’, ‘ಪಗೆತ ಪುಗೆ’, ‘ಬಿಸತ್ತಿ ಬಾಬು’, ‘ಯಾನ್ ಸನ್ಯಾಸಿ ಆಪೆ’, ‘ಕಾಸ್ ದಾಯೇ ಕಂಡಾನಿ’ ‘ಏರ್ ಮಲ್ತಿನಾ ತಪ್ಪು’ ‘ತುಳುನಾಡ ಸಿರಿ’, ‘ಸಾವಿರೊ ಡೊರ್ತಿ ಸಾವಿತ್ರಿ’, ‘ಭಾಗ್ಯವಂತೆದಿ’ ಮುಂತಾದ ಸಿನೆಮಾಗಳು ಟೇಲರ್ ಅವರ ನಟನೆಗೆ ಸಾಕ್ಷಿಯಾಗಿತ್ತು. ಅಂದಹಾಗೆ ಅವರ ಹೆಚ್ಚಿನ ಕತೆಗಳಿಗೆ ಅವರ ನಾಟಕಗಳೇ ಬಂಡವಾಳವಾಗಿತ್ತು. ಕತೆಯ ಗಟ್ಟಿತನ ಸಿನಿಮಾದಲ್ಲೂ ಉಳಿಕೆಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿತ್ತು. ಒಂದರ ಹಿಂದೆ ಒಂದು ಚಿತ್ರಗಳು ಕಾಣಿಸಿಕೊಳ್ಳುತ್ತಿದ್ದಂತೆ ಟೇಲರ್ ತುಳು ಸಿನಿಮಾ ರಂಗದಲ್ಲಿ ಬೆಳೆಯುತ್ತಾ ಹೋದರು. ರಾಜ್-ಟೇಲರ್ ಕಾಂಬೀನೇಷನ್: ಡಾ.ರಾಜ್‌ಕುಮಾರ್ ಹಾಗೂ ಕೆ.ಎನ್.ಟೇಲರ್ ಇಬ್ಬರು ತುಂಬಾ ಆತ್ಮೀಯತೆಯನ್ನು ಇಟ್ಟುಕೊಂಡಿದ್ದರು. ಅಂದು ಚಿತ್ರದ ಎಲ್ಲಕ್ಕೂ ಮದ್ರಾಸ್‌ಗೆ ಹೋಗಬೇಕಿತ್ತು. ರೆಕಾರ್ಡಿಂಗ್‌ಗಾಗಿ ಕನ್ನಡ ಸಿನಿಮಾದವರು ಕೂಡ ಅಲ್ಲಿಗೆ ಬರುತ್ತಿದ್ದರು. ಇದೇ ಸಮಯದಲ್ಲಿ ಟೇಲರ್- ರಾಜ್ ಭೇಟಿ ನಡೆಯುತ್ತಿತ್ತು. ಚಿತ್ರರಂಗದ ಬಗ್ಗೆ ನಟನೆಯ ಕುರಿತು ಮಾತುಕತೆ ನಡೆಯುತ್ತಿತ್ತು. ಇದೇ ಮುಂದೆ ಹೋಗಿ ಒಂದ್ ಬಾರಿ ನಟಿ ಜಯಮಾಲಾ ಅವರನ್ನು ಕೆ.ಎನ್. ಟೇಲರ್ ಡಾ. ರಾಜ್‌ಗೆ ಪರಿಚಯ ಮಾಡಿಕೊಟ್ಟಿದ್ದರು. ಆಗಲೇ ಡಾ.ರಾಜ್ ಜಯಮಾಲಾ ತನ್ನ ಮುಂದಿನ ಚಿತ್ರಕ್ಕೆ ನಟಿ ಎಂದು ಘೋಷಣೆ ಮಾಡಿದ್ದರು. ಈ ಬಳಿಕ ಜಯಮಾಲಾ ಕನ್ನಡದಲ್ಲಿಯೇ ಉಳಿದುಬಿಟ್ಟರು. ಇದರ ಜತೆಗೆ ಜಯಮಾಲಾ ಸಹೋದರಿ ವಿಜಯಮಾಲಾಗೂ ನಟನೆ ಹಾಗೂ ಗಾಯಕಿಯಾಗಿ ಕನ್ನಡಕ್ಕೆ ಪರಿಚಯ ಮಾಡಿಕೊಟ್ಟವರು ಇದೇ ಟೇಲರ್ ಎನ್ನುವುದು ಟೇಲರ್ ಜತೆಯಲ್ಲಿ ದುಡಿದ ನಿರ್ಮಾಪಕ ಶ್ರೀನಿವಾಸ್ ಹೇಳುವ ಮಾತು. ನಮ್ಮ ಭಾಗ್ಯ ಬಿಡುಗಡೆ ಕಾಣಲೇ ಇಲ್ಲ: ಕೆ.ಎನ್.ಟೇಲರ್ ಅತೀ ಹೆಚ್ಚು ನಿರೀಕ್ಷೆ ಇಟ್ಟುಕೊಂಡ ಚಿತ್ರ ‘ನಮ್ಮ ಭಾಗ್ಯ’ ಇಷ್ಟರ ವರೆಗೆ ಅವರ ಚಿತ್ರಗಳು ಕಪ್ಪು ಬಿಳುಪು ಮಾದರಿಯಲ್ಲಿ ಕಾಣಿಸಿಕೊಂಡರೆ ಈ ಚಿತ್ರ ಕಲರ್ ಸ್ಕೋಪ್‌ನಲ್ಲಿ ಪ್ರೇಕ್ಷಕರ ಮುಂದೆ ಇಡಬೇಕು ಎನ್ನುವ ಕನಸ್ಸು ಅವರದಾಗಿತ್ತು. ಕನ್ನಡದ ಸ್ಟಾರ್ ನಟಿಯಾಗಿದ್ದ ಮಂಜುಳಾ ಅವರನ್ನು ನಾಯಕಿಯಾಗಿ ಇಟ್ಟುಕೊಂಡು ಚಿತ್ರ ಮಾಡಿದರೂ ಚಿತ್ರ ಆರ್ಥಿಕ ಕಾರಣಗಳಿಂದ ಕ್ಲೈಮ್ಯಾಕ್ಸ್ ಹಾದಿಯಲ್ಲಿ ನಿಂತೇ ಹೋಯಿತು. ಆದರೆ ೨೫ ವರ್ಷಗಳ ಬಳಿಕ ಚಿತ್ರವನ್ನು ಮತ್ತೆ ಆರಂಭಿಸಿ ತೆರೆಗೆ ತರಬೇಕು ಎನ್ನುವುದಕ್ಕೆ ಟೇಲರ್ ಒದ್ದಾಟ ಮಾಡುತ್ತಿದ್ದರು. ಚಿತ್ರ ಬಿಡುಡಗೆಗೆ ಬರೋಬರಿ ೨೫ ಲಕ್ಷ ಹಿಂದೆ ಖರ್ಚು ಮಾಡಿದ್ದರು. ಆದರೆ ಈಗ ೧೦ ಲಕ್ಷ ಖರ್ಚು ಮಾಡಿದರೆ ಸಿನಿಮಾ ಹೊರಗೆ ತರಬಹುದು ಎನ್ನುವುದು ಟೇಲರ್ ಅವರ ಮಾತಾಗಿತ್ತು.
ಹೆಸರಲ್ಲೇ ವೃತ್ತಿ ಬಂತು: ಕೆ.ಎನ್.ಟೇಲರ್ ಹೆಸರು ಹೇಗೆ ಬಂತು ಎನ್ನುವ ಕುತೂಹಲ ಬಹಳ ಮಂದಿಯಲ್ಲಿ ಇದೆ. ಆದರೆ ನಿಜಕ್ಕೂ ಟೇಲರ್ ಎನ್ನುವುದು ವೃತ್ತಿಯಿಂದ ಬಂದ ಹೆಸರು. ಕೆ ಎಂದರೆ ಕಡಂದಲೆ ಎನ್ ಎಂದರೆ ನಾರಾಯಣ ಹಾಗೂ ಟೈಲರ್ ವೃತ್ತಿಯಿಂದಾಗಿ ಟೇಲರ್ ಹೆಸರು ಅವರಿಗೆ ಖಾಯಂ ಉಳಿದು ಹೋಯಿತು. ಮುಖ್ಯವಾಗಿ ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿ ಪುಟ್ಟ ಅಂಗಡಿಯಲ್ಲಿ ಬಹಳ ವರ್ಷಗಳಿಂದ ಟೈಲರಿಂಗ್ ವೃತ್ತಿ ಮಾಡುತ್ತಾ ಅಲ್ಲಿಯೇ ಪಕ್ಕದಲ್ಲಿದ್ದ ಗಣಪತಿ ಹೈಸ್ಕೂಲ್‌ನಲ್ಲಿ ಸಂಜೆ ಹೊತ್ತು ನಾಟಕದ ಕುರಿತು ತರಬೇತಿ ನಡೆಯುತ್ತಿತ್ತು. ನಾಟಕದ ಖಯಾಳಿ ಹೆಚ್ಚಿದಂತೆ ಪುಟ್ಟ ಅಂಗಡಿ ಮಾರಾಟ ಮಾಡಿ ಪಡುಬಿದ್ರಿಯ ಕಡೆ ಟೇಲರ್ ಹೊರಟು ನಿಂತರು ಎನ್ನುವುದು ಅವರ ಗೆಳೆಯ ಶ್ರೀನಿವಾಸ್ ಹೇಳುವ ಮಾತು. ಇದೇ ವರ್ಷದಲ್ಲಿ ಎರಡು ಸಂಭ್ರಮ: ಕೆ.ಎನ್. ಟೇಲರ್ ಅವರು ೨೦೧೫ರ ಏಪ್ರಿಲ್‌ನಲ್ಲಿ ತಮ್ಮ ದಾಂಪತ್ಯ ಬದುಕಿನ ೬೦ ವರ್ಷಗಳ ಜತೆಯಲ್ಲಿ ಗಣೇಶನಾಟಕ ಸಭಾದ ೫೮ ವರ್ಷದ ಆಚರಣೆ ಮಾಡುವ ಕುರಿತು ಯೋಜನೆ ಹಾಕಿಕೊಂಡಿದ್ದರು. ಆರೋಗ್ಯ ಆಗಾಗ ಕೈ ಕೊಡುತ್ತಿದ್ದಾಗಲೂ ಕಾರ‍್ಯಕ್ರಮದ ಕುರಿತು ರೂಪುರೇಷೆಗಳನ್ನು ಸಿದ್ಧ ಮಾಡುತ್ತಾ ಬರುತ್ತಿದ್ದರು. ಇದೇ ಸಮಯದಲ್ಲಿ ನಮ್ಮ ಭಾಗ್ಯ ಸಿನಿಮಾವನ್ನು ತೆರೆಗೆ ತರುವುದಕ್ಕಾಗಿ ಬೆಂಗಳೂರಿನ ಉದ್ಯಮಿಯೊಬ್ಬರ ಜತೆಗೆ ಮಾತುಕತೆ ಕೂಡ ನಡೆಸಿದ್ದರು ಎನ್ನುವುದು ಟೇಲರ್ ಅವರ ಮತ್ತೊಬ್ಬ ಗೆಳೆಯ ಶರತ್ ಹೇಳುವ ಮಾತು. ಯುಗಾದಿಗೆ ಹುಟ್ಟಿಕೊಂಡ ಗಣೇಶ ನಾಟಕ ಸಭಾ ಕೆ.ಎನ್. ಟೇಲರ್ ಅವರ ಗಣೇಶ ನಾಟಕ ಸಭಾ ಹುಟ್ಟಿಕೊಂಡದ್ದು ಯುಗಾದಿ ದಿನದಂದು ಎನ್ನುವುದು ವಿಶೇಷ. ೧೯೫೮ರಲ್ಲಿ ಸೌರಮಾನ ಯುಗಾದಿಯಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ರಾಜ್ಯ ಸ್ತಿತ್ವಕ್ಕೆ ಬರುವ ಮೊದಲು ಮೈಸೂರು ಸರಕಾರದಲ್ಲಿ ಆರೋಗ್ಯ ಮಂತ್ರಿಯಾಗಿದ್ದ ಡಾ. ನಾಗಪ್ಪ ಆಳ್ವ ಅವರು ಟೇಲರ್ ಅವರ ನಾಟಕಗಳನನು ತಪ್ಪದೇ ನೋಡುತ್ತಿದ್ದರು. ನಾಗಪ್ಪ ಅವರ ಪುತ್ರ ಡಾ.ಜೀವರಾಜ ಆಳ್ವರಿಗೂ ಇದೇ ಖಯಾಲಿ ಇತ್ತು. ಟೇಲರ್ ಅವರ ನಾಟಕಗಳಲ್ಲಿ ಆಳ್ವರು ಕೂಡ ಬಣ್ಣ ಹಾಕಿದ ಉದಾಹರಣೆಗಳಿವೆ. ಸಜಾನ್ ರೇ ಹಳೆಯ ಟ್ಯೂನ್ ಮೋಹ ! ಕೆ.ಎನ್. ಟೇಲರ್ ಅವರು ಬಾಲಿವುಡ್ ಗಾಯಕ ಮುಕೇಶ್ ಅವರ ಬಹು ದೊಡ್ಡ ಅಭಿಮಾನಿ. ಅದರಲ್ಲೂ ತೀಸ್ರಿ ಕಸಂ ಚಿತ್ರದ ಸೂಪರ್ ಹಿಟ್ ಹಾಡು ‘ಸಜಾನ್ ರೇ ಛೂಟ್ ಮತ್ ಬೋಲೋ...’ ಹಾಡು ಟೇಲರ್‌ಗೆ ಬಹಳ ಇಷ್ಟವಾಗಿತ್ತು. ಇದನ್ನು ತಮ್ಮ ಮೊಬೈಲ್ ಟ್ಯೂನ್ ಮಾಡಿಸಿಕೊಂಡಿದ್ದರು. ಇಡೀ ಹಾಡು ಕೇಳಿದ ಬಳಿಕವೇ ಹಲೋ ಯಾನ್ ಟೇಲರ್ ಪಾತೆರೂನಾ.. ಎಂದು ಸಂಭೋದನೆಗೆ ಇಳಿಯುತ್ತಿದ್ದರು.

No comments:

Post a Comment