Tuesday, March 25, 2014
ಕೋಸ್ಟಲ್‌ವುಡ್‌ನಲ್ಲಿ ರಾಥೋಡ್ ಹಾಡು
* ಸ್ಟೀವನ್ ರೇಗೊ, ದಾರಂದಕುಕ್ಕು
ಪಕ್ಕಾ ಲೋಕಲ್ ಆಗಿ ಯೋಚನೆ ಮಾಡುತ್ತಿದ್ದ ಕರಾವಳಿಯ ಸಿನಿಮಾ ನಿರ್ದೇಶಕರು ಈಗ ಬಾಲಿವುಡ್ ರೇಂಜ್‌ಗೆ ಏರಿದ್ದಾರೆ. ಹೊಸ ಯೋಚನೆಗಳ ಜತೆಗೆ ಸಂಗೀತ ಕ್ಷೇತ್ರದಲ್ಲೂ ಗಂಭೀರವಾಗಿ ಕೆಲಸ ಮಾಡುವ ಪರಂಪರೆ ಕೋಸ್ಟಲ್‌ವುಡ್‌ನಲ್ಲಿ ಮೊಳಕೆಯೊಡೆಯುತ್ತಿದೆ.
ಇತ್ತೀಚಿನ ಒಂದಷ್ಟು ತುಳು ಚಿತ್ರಗಳ ಹಾಡುಗಳನ್ನು ಕೇಳಿ, ಅಲ್ಲಿರುವ ಧ್ವನಿ ಬಾಲಿವುಡ್ ಗಾಯಕರದು. ಉದಿತ್ ನಾರಾಯಣ್, ಕೈಲಾಶ್ ಕೇರ್, ಆಲಿಖಾನ್, ಸಿದ್ಧಾರ್ಥ್ ಮಹದೇವನ್, ಸೋನು ನಿಗಮ್, ವಿನೋದ್ ರಾಥೋಡ್.. ಹೀಗೆ ಬಾಲಿವುಡ್ ಸಿಂಗರ್ಸ್ ಬಾಯಲ್ಲಿ ಪಕ್ಕಾ ತುಳು ಹಾಡುಗಳನ್ನು ಹಾಡಿಸುತ್ತಿದ್ದಾರೆ.
ತುಳು ಚಿತ್ರರಂಗದ ವ್ಯಾಪ್ತಿ ಸೀಮಿತ.ದಕ್ಷಿಣ ಕನ್ನಡದ ಗಡಿ ದಾಟಿದರೆ ಮಾರುಕಟ್ಟೆ ಇಲ್ಲ ಎಂಬ ಮಾತಿದೆ. ಕರಾವಳಿಯಲ್ಲಿ ತುಳು ನಾಟಕಗಳು ಪ್ರೇಕ್ಷಕರನ್ನು ಸೆಳೆಯುವಷ್ಟು ಇಂದಿಗೂ ತುಳು ಚಿತ್ರಗಳು ಸೆಳೆಯುತ್ತಿಲ್ಲ. ಆದರೂ ಬಾಲಿವುಡ್ ಗಾಯಕರಾ? ಎಂಬ ಪ್ರಶ್ನೆ ಬರುತ್ತದೆ. ಆದರೆ, ಜನರನ್ನು ಸೆಳೆಯಬೇಕಾದರೆ ಏನಾದರೂ ಹೊಸತನ ನೀಡಬೇಕು, ಫ್ರೆಶ್‌ನೆಸ್ ಇರಬೇಕು ಎಂಬುದು ಇಲ್ಲಿನ ನಿರ್ದೇಶಕರ ಮಾತು.
ಈಗ ಇಂತಹ ಸರದಿಯಲ್ಲಿ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕ ವಿನೋದ್ ರಾಥೋಡ್ ಬಂದು ಸೇರಿದ್ದಾರೆ. ಅಂದಹಾಗೆ ಕೋಸ್ಟಲ್‌ವುಡ್‌ನ ‘ಮುಳ್ಳ ಬೇಲಿ’( ಮುಳ್ಳಿನ ಬೇಲಿ)ಯಲ್ಲಿ ವಿನೋದ್ ಎರಡು ಹಾಡುಗಳನ್ನು ಹಾಡಿದ್ದಾರೆ. ಲಕ್ಷಗಟ್ಟಲೆ ತೂಗುವ ಹಿನ್ನೆಲೆ ಗಾಯಕ ವಿನೋದ್ ರಾಥೋಡ್ ತುಳು ಚಿತ್ರದಲ್ಲಿ ಹಾಡಲು ಹೇಗೆ ಒಪ್ಪಿಕೊಂಡರು ಎನ್ನುವುದು ಸೋಜಿಗ ವಿಷ್ಯಾವಾಗಿ ಮುಂದೆ ನಿಂತಿದೆ.
ಈ ಕುರಿತು ಚಿತ್ರದ ನಿರ್ದೇಶಕ ಶರತ್‌ಚಂದ್ರ ಕುಮಾರ್ ಕದ್ರಿಯವರಲ್ಲಿ ಕೇಳಿದರೆ ಹೇಳುವುದು ಹೀಗೆ: ಒಬ್ಬ ದೊಡ್ಡ ಹಿನ್ನೆಲೆಗಾಯಕ ತೀರಾ ಸೀಮಿತ ಮಾರುಕಟ್ಟೆ ಹೊಂದಿರುವ ತುಳು ಚಿತ್ರದಲ್ಲಿ ಹಾಡಲು ಒಪ್ಪಿಕೊಂಡಿರುವುದು ಒಂದು ಮ್ಯಾಜಿಕ್ ಎನ್ನಬಹುದು. ಚಿತ್ರದಲ್ಲಿ ಐದು ಹಾಡುಗಳಿವೆ. ಅದರಲ್ಲಿ ಎರಡು ಹಾಡುಗಳಿಗೆ ನೀವು ಹಾಡಬೇಕು ಎಂದು ವಿನಂತಿ ಮಾಡಿಕೊಂಡೇ ಒಂದ್ ಸಲ ಯೋಚನೆ ಮಾಡಿ ‘ಯೆಸ್’ ಅಂದುಬಿಟ್ಟರು. ನೀವು ನನ್ನ ಅಜ್ಜನ ಹಾಗೆ ಕಾಣುತ್ತೀರಿ. ಅದಕ್ಕೂ ಮುಖ್ಯವಾಗಿ ಪ್ರಾದೇಶಿಕ ಭಾಷೆಯ ಚಿತ್ರವೊಂದರಲ್ಲಿ ಹಾಡುವುದು ಎಂದರೆ ನನಗೂ ಖುಷಿ ಎಂದು ಬಿಟ್ಟರು.
ಚಿತ್ರದ ಟೈಟಲ್ ಹಾಡು ‘ಮುಳ್ಳಬೇಲಿ’ಯಂತೂ ವಿನೋದ್‌ಗೆ ಅತೀ ಇಷ್ಟವಾಯಿತು. ತುಳು ಭಾಷೆಯಲ್ಲಿರುವ ಹಾಡಿನ ಸಾಹಿತ್ಯವನ್ನು ಕೇಳಿ ಖುಷಿಯಾದರು ಎನ್ನುತ್ತಾರೆ ಶರತ್ ಚಂದ್ರ ಕುಮಾರ್ ಕದ್ರಿ. ಅಂದಹಾಗೆ ಚಿತ್ರದ ಸಂಗೀತ ನಿರ್ದೇಶಕರು ಕೂಡ ಮುಂಬಯಿಯ ಹಿರಿಯ ಸಂಗೀತ ನಿರ್ದೇಶಕ ಜಿತಿನ್ ಶ್ಯಾಮ್ ಕೊಟ್ಟಿದ್ದಾರೆ. ರಾಥೋಡ್ ಜತೆಗೆ ಸಂದೀಪ್ ದಾತೆ, ಬೊಬ್ಬಿ ದತ್ತಾ, ಸುದಕ್ಷಿಣ ದೀಕ್ಷಿತ್, ವಾಯ್ಸ್ ಆಪ್ ಕರ್ನಾಟಕದ ವಿನ್ನರ್ ಡಾ. ನಿತಿನ್ ಆಚಾರ್ಯ, ಪುತ್ತೂರಿನ ಕವಿತಾ ಗೋಶಲ್ ಹಾಡಿದ್ದಾರೆ. ಇದರಲ್ಲಿ ಮುಂಬಯಿಯ ಖ್ಯಾತ ರಿರ್ಕಾಡಿಸ್ಟ್ ಅಮೊಂಗ್ ಡೇನಿಯಲ್ ಅವರ ಸಂಗೀತ ಪರಿಕರಣಗಳ ಸಂಯೋಜನೆ ‘ಮುಳ್ಳ ಬೇಲಿ’ಚಿತ್ರದ ಹಾಡುಗಳಿಗೆ ಹೊಸ ಟಚ್ ಸಿಕ್ಕಿದೆ.
ಅಂದಹಾಗೆ ಬಾಲಿವುಡ್ ಗಾಯಕರಿಂದ ಹಾಡಿಸುವುದು ಕೂಡಾ ದುಬಾರಿ. ಇಲ್ಲಿಂದ ಮುಂಬಯಿಗೆ ಹೋಗಿ ಲಕ್ಷಗಟ್ಟಲೆ ಕೊಟ್ಟು ಹಾಡಿಸಬೇಕು. ಕನ್ನಡಕ್ಕಾದರೆ ಓಕೆ, ಮಾರುಕಟ್ಟೆ ಸ್ವಲ್ಪ ಮಟ್ಟಿಗಾದರೂ ದೊಡ್ಡದು, ಸೆಟಲೈಟ್ ರೈಟ್ಸ್ ಕೂಡ ಸಿಗುತ್ತದೆ. ಆದರೆ ತುಳು ಚಿತ್ರರಂಗಕ್ಕೆ ಬಜೆಟ್ ಹೊರೆಯಾಗುವುದಿಲ್ಲವೇ ಎಂಬ ಪ್ರಶ್ನೆ ಬರುತ್ತದೆ. ಸಿನಿಮಾದಲ್ಲಿ ಹೊಸತನವಿದ್ದರೆ ಹಾಡು ಹಿಟ್ ಆದರೆ, ಸಿನಿಮಾ ಹಿಟ್ ಆದರೆ ಬಜೆಟ್ ತನ್ನಿಂತಾನೇ ಬರುತ್ತದೆ ಎಂಬುದು ಇಲ್ಲಿನ ನಿರ್ದೇಶಕರ ಮಾತು. ಈ ಎಲ್ಲ ವಿಷ್ಯಾಗಳನ್ನು ನೋಡುತ್ತಾ ಹೋದಂತೆ ತುಳು ಚಿತ್ರರಂಗ ಅಪ್‌ಡೇಟ್ ಆಗುತ್ತಿದೆ ಅನ್ನೋದೇ ಡಬ್ಬಲ್ ಖುಷಿಯಾಗುತ್ತದೆ.
Monday, March 24, 2014
ಕೊಚಾಡಿಯನ್‌ನಲ್ಲಿ ‘ಮಂಗಳೂರು’ ಸ್ಟೋರಿ ! exclusive in regobalcony
* ಸ್ಟೀವನ್ ರೇಗೊ, ದಾರಂದಕುಕ್ಕು
‘ಕೊಚಾಡಿಯನ್’ ಈಗ ಭಾರತೀಯ ಸಿನಿಮಾರಂಗವೇ ಎದುರು ನೋಡುತ್ತಿದೆ. ಈ ಚಿತ್ರದ ಉದ್ದಕ್ಕೂ ೩ಡಿಯನ್ನು ಆಳವಡಿಸಿಕೊಂಡಿರುವ ಕಾರಣ ಭಾರತೀಯ ಚಿತ್ರರಂಗದಲ್ಲಿಯೇ ಇದೊಂದು ವಿಶಿಷ್ಟ ಪ್ರಯೋಗ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ. ಅದಕ್ಕೂ ಮಿಗಿಲಾಗಿ ಚಿತ್ರರಂಗದ ಸೂಪರ್‌ಸ್ಟಾರ್ ರಜನೀಕಾಂತ್ ಇಂತಹ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಇದೇ ಮೊದಲ ಸಲವಾಗಿರುವ ಕಾರಣ ನಿರೀಕ್ಷೆಯ ಪೊಟ್ಟಣ ಬಿಚ್ಚಿಕೊಂಡಿದೆ.
ಅಂದಹಾಗೆ ‘ಕೊಚಾಡಿಯನ್’ ಸಿನಿಮಾವೇ ಒಂದು ಐತಿಹಾಸಿಕ ಸ್ಟೋರಿ ಲೈನ್ ಸಿನಿಮಾ. ಇದರ ಆರಂಭ ತಮಿಳುನಾಡಿನ ಪಾಂಡ್ಯ ದೊರೆಯಾದ ಕೊಚಾಡಿಯನ್ ರಣಧೀರನ್ ಎಂಬವನಿಂದ ಚಿತ್ರದ ಕತೆ ಶುರುವಾಗುತ್ತದೆ. ಈತ ತಮಿಳುನಾಡಿನಲ್ಲಿ ಆಳ್ವಿಕೆ ನಡೆಸುತ್ತಾ ಕೇರಳ ಹಾಗೂ ತಂಜವೂರು ಪ್ರದೇಶಗಳಲ್ಲಿ ಆಳ್ವಿಕೆ ನಡೆಸಿಕೊಂಡು ಬರುತ್ತಿದ್ದ ಚೇರ ಹಾಗೂ ಚೋಳ ರಾಜಮನೆತನ ರಾಜರನ್ನು ಗೆದ್ದುಕೊಂಡು ಮೆರೆದಾಡುತ್ತಿದ್ದ. ಅದರಲ್ಲೂ ಪಾಂಡ್ಯ ರಾಜಮನೆತನ ರಣಧೀರನ್ ಸಮಯದಲ್ಲಿ ಉತ್ತುಂಗಕ್ಕೆ ತಲುಪಿತ್ತು.
ಇಂತಹ ಒಂದು ರಾಜಮನೆತನದ ದೊರೆ ರಣಧೀರನ್ ಕತೆಯೇ ‘ಕೊಚಾಡಿಯನ್’ ಚಿತ್ರಕ್ಕೆ ಮೂಲ ಬಂಡವಾಳ ಎನ್ನಲಾಗುತ್ತಿದೆ. ಆದರೆ ಈ ಕುರಿತು ರಜನೀಕಾಂತ್ ಪುತ್ರಿ ನಿರ್ದೇಶಕಿ ಸೌಂದರ್ಯ, ಚಿತ್ರದ ಕತೆಗಾರ ಕೆ.ಎಸ್.ರವಿಕುಮಾರ್ ರಣಧೀರನ್ ಕತೆಗೂ ಚಿತ್ರದ ಕತೆಗೂ ಸಂಬಂಧವಿಲ್ಲ. ಆದರೆ ಚಿತ್ರದ ಓಟದಲ್ಲಿ ಪಾಂಡ್ಯ ಮನೆತನದ ವಿಷ್ಯಾವಂತೂ ಬಂದು ಹೋಗುತ್ತದೆ ಎಂದು ಈ ಹಿಂದೆ ತಮಿಳುನಾಡಿನಲ್ಲಿ ಚಿತ್ರದ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.
ಕೊಚಾಡಿಯನ್‌ನಲ್ಲಿ ಮಂಗಳಪುರಂ:
‘ಕೊಚಾಡಿಯನ್’ ಸಿನಿಮಾದಲ್ಲಿ ‘ಮಂಗಳಪುರಂ’ ಎಂದರೆ ಈಗೀನ ಮಂಗಳೂರಿನ ಕತೆ ಅಡಕವಾಗಿದೆ. ಮಂಗಳೂರು ಪಟ್ಟಣವನ್ನು ಈ ಹಿಂದೆ ಮಂಗಳಪುರಂ ಎಂದೇ ಕರೆಯಲಾಗುತ್ತಿತ್ತು.‘ಮಂಗಳಪುರಂ’ ಎನ್ನುವ ಹೆಸರನ್ನು ಕೂಡ ಪಾಂಡ್ಯ ದೊರೆಯಾದ ಚೆಟ್ಟಯೇನ್ ಇಟ್ಟಿದ್ದರು. ಇದೇ ನಗರವನ್ನು ಮುಖ್ಯ ಪಟ್ಟಣವಾಗಿ ಪಾಂಡ್ಯ ಮನೆತನದ ಅಧೀನದಲ್ಲಿ ಉಳಿದಿತ್ತು.
ಇವನ ನಂತರ ಬಂದ ಪಾಂಡ್ಯ ದೊರೆಗಳು ಕೂಡ ‘ಮಂಗಳಪುರಂ’ವನ್ನು ಮುಖ್ಯ ಪಟ್ಟಣವಾಗಿ ಇಟ್ಟುಕೊಂಡೇ ಆಳ್ವಿಕೆ ನಡೆಸಿದರು. ಕೊಂಚಾಡಿಯನ್ ರಣಧೀರನ್‌ಗೂ ಈ ಪಟ್ಟಣ ಅತೀಯಾಗಿ ಇಷ್ಟವಾಯಿತು.ಬಹುತೇಕ ಸಮಯವನ್ನು ‘ಮಂಗಳಪುರಂ’ನಲ್ಲಿಯೇ ಕಳೆಯುತ್ತಿದ್ದ ಎಂದು ಇತಿಹಾಸದ ಪುಟಗಳು ಹೇಳುತ್ತಿದೆ.
ಕೊಚಾಡಿಯನ್ ಸಿನಿಮಾದ ಆರಂಭದ ದೃಶ್ಯಗಳು ಕೂಡ ‘ಮಂಗಳಪುರಂ’ನಿಂದಲೇ ಆರಂಭವಾಗುತ್ತದೆ ಎನ್ನುವ ಚಿತ್ರತಂಡದ ಮಾತು. ಅದಕ್ಕೂ ಮುಖ್ಯವಾಗಿ ಮಂಗಳಪುರಂ ಉಳಿವಿನ ಹೋರಾಟದಲ್ಲಿ ಕೊಚಾಡಿಯನ್ ರಣಧೀರನ್ ತೋರಿಸುವ ಸಾಮರ್ಥ್ಯ ಕೂಡ ಮಂಗಳೂರು ಕತೆಯ ಮಹತ್ವವನ್ನು ಚಿತ್ರದಲ್ಲಿ ಒತ್ತಿ ಹೇಳುತ್ತಿದೆ.
ಟೋಟಲಿ ಭಾರತೀಯ ಚಿತ್ರರಂಗದಲ್ಲಿಯೇ ವಿಭಿನ್ನ ೩ಡಿ ಹಾಗೂ ಖರ್ಚುವೆಚ್ಚದ ದೃಷ್ಟಿಯಿಂದ ಕೊಚಾಡಿಯನ್ ಸಿನಿಮಾವಂತೂ ಶುರುವಾಗುವ ಹಂತದಿಂದ ಹಿಡಿದು ಕೊನೆಗೆ ಥಿಯೇಟರ್‌ನ ಬಾಗಿಲು ಬಡಿಯುವ ತನಕನೂ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರಗಿಟ್ಟಿಸಿಕೊಳ್ಳುತ್ತಿದೆ. ಅದಕ್ಕೂ ಮುಖ್ಯವಾಗಿ ರಜನೀಕಾಂತ್ ಅಭಿಮಾನಿಗಳಲ್ಲೂ ಚಿತ್ರದ ಕುರಿತು ಹವಾವೊಂದು ಸೃಷ್ಟಿಯಾಗಿದೆ.
Friday, March 21, 2014
ಬಾಲಿವುಡ್ ನಾಯಕಿಯರು ಈಗ ನಿರ್ಮಾಪಕಿಯರು
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಪಡಸಾಲೆಯ ವಿಷ್ಯಾನೇ ಹಾಗೇ ಅಲ್ಲಿ ಬಣ್ಣದಾಟವಿದೆ ಅದಕ್ಕೂ ಮಿಗಿಲಾಗಿ ದುಡ್ಡು ಪ್ಲಸ್ ಗೌರವ ಜತೆಗೆ ಸಿಕ್ಕಿಕೊಂಡಿರುತ್ತದೆ. ಇವೆಲ್ಲಗಳನ್ನು ಜತೆಯಾಗಿ ನೋಡಿದಾಗ ಯಾರು ಕೂಡ ಬಣ್ಣದ ಲೋಕಕ್ಕೆ ಎಂಟ್ರಿಯಾಗಲು ಬಯಸುತ್ತಾರೆ. ಇಲ್ಲಿ ಬಂದ ನಂತರ ತಮ್ಮ ಫಿಲ್ಮೋಗ್ರಾಫಿಯ ಮೂಲಕ ಒಂದು ಹಂತಕ್ಕೆ ತಲುಪಿ ನಂತರ ಅಲ್ಲಿಂದ ಒಂದೊಂದು ಮೆಟ್ಟಿಲು ಕೆಳಗೆ ಜಾರುತ್ತಾರೆ. ಕೊನೆಗೆ ಅತ್ತ ಸಿನಿಮಾನೂ ಇಲ್ಲ ಇತ್ತ ಕಡೆಯಲ್ಲೂ ಗ್ಲಾಮರ್ ಕೂಡ ಉಳಿಯದೇ ಹೋದಾಗ ಬಣ್ಣದ ಬದುಕಿನ ನಂಟು ಬಿಡಲು ಸಾಧ್ಯವಾಗದೇ ಕೊನೆಗೆ ಬಾಲಿವುಡ್‌ನಲ್ಲಿ ಹೊಸ ರೋಲ್‌ನಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಾರೆ. ಅದುವೇ ನಿರ್ಮಾಪಕಿಯರು. ಅಂದಹಾಗೆ ಈಗ ಬಾಲಿವುಡ್ ಅಂಗಳದಲ್ಲಿ ಸಿನಿಮಾ ನಟಿಯರು ಚಿತ್ರದ ನಿರ್ಮಾಣದ ನೊಗ ಹೊತ್ತ ಪ್ರಕರಣಗಳು ಒಂದೊಂದಾಗಿ ಹೊರಬೀಳುತ್ತಿದೆ. ಅದು ಯಾರು ಅಂತೀರಾ ಇಲ್ಲಿದೆ ನಟಿಯರು ಬದಲಾಗಿ ನಿರ್ಮಾಪಕಿಯಾದವರ ಕತೆ..
* ಗ್ಲಾಮರ್ ಗೊಂಬೆ ಶಿಲ್ಪಾ ಶೆಟ್ಟಿ :
ಶಿಲ್ಪಾ ಶೆಟ್ಟಿ ಮೂಲತಃ ಕರಾವಳಿಯ ಬಂಟರ ಹುಡುಗಿ. ಅದರಲ್ಲೂ ಬಾಲಿವುಡ್‌ನಲ್ಲಿ ನಟಿಯಾಗಿ ನಂತರ ಫಿಟ್ನೆಸ್ ಎಕ್ಸ್‌ಪರ್ಟ್ ಸೇರಿದಂತೆ ಉದ್ಯಮ ರಂಗದಲ್ಲೂ ಶಿಲ್ಪಾ ಕೆಲಸ ಮಾಡಿದ್ದಾರೆ. ಕ್ರಿಕೆಟ್ ಹೆಣ್ಣು ಮಕ್ಕಳಿಗೆ ತಕ್ಕದಲ್ಲ ಎನ್ನುವ ಮಾತಿಗೆ ವಿರುದ್ಧವಾಗಿ ತಾನೇ ಐಪಿಎಲ್ ತಂಡವೊಂದನ್ನು ಖರೀದಿ ಮಾಡಿ ಯಶಸ್ವಿಯಾಗಿ ತಂಡದ ಬಲ ಹೆಚ್ಚಿಸುತ್ತಿದ್ದಾರೆ. ಈಗ ಬಾಲಿವುಡ್‌ನಲ್ಲಿ ನಿರ್ಮಾಪಕರಾಗಿ ಸೌಂಡ್ ಮಾಡಲು ಹೊರಟಿದ್ದಾರೆ.ಆಂದಹಾಗೆ ಮಾ.೨೮ಕ್ಕೆ ತೆರೆಗೆ ಬರಲು ಹವಣಿಸುತ್ತಿರುವ ‘ಡಿಸ್ಕ್ಯೂನ್’ ನಿರ್ಮಾಪಕರಾಗಿ ಶಿಲ್ಪಾ ಶೆಟ್ಟಿ ಹಾಗೂ ಸುನೀಲ್ ಲೂಲು ಕಾರ‍್ಯ ನಿರ್ವಹಿಸಿದ್ದಾರೆ.
ಬಹಳ ದಿನಗಳ ನಂತರ ಹರ್ಮನ್ ಬೇವಾಜಾ ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಹರ್ಮನ್ ಜತೆಗೆ ಐಟಂ ಸಾಂಗ್‌ವೊಂದರಲ್ಲಿ ಕುಣಿದಿದ್ದಾರೆ. ನಾಯಕಿಯಾಗಿ ಹೊಸ ಹುಡುಗಿ ಅಯೇಷಾ ಖುರುನಾ ಚಿತ್ರದಲ್ಲಿ ನಟಿಸಿದ್ದಾರೆ. ಸನ್ನಿ ಡಿಯೋಲ್ ಅವರ ಆಕ್ಷನ್ ಕೂಡ ಚಿತ್ರದಲ್ಲಿ ಕಾಣಸಿಗಲಿದೆ. ಟೋಟಲಿ ಸಿನಿಮಾದ ಕುರಿತು ಶಿಲ್ಪಾ ಶೆಟ್ಟಿ ಹೇಳುವ ಮಾತು ಹೀಗಿದೆ: ಭೂಗತ ಜಗತ್ತಿನಲ್ಲಿ ಮಸಾಲೆ ಹಾಗೂ ಮನರಂಜನೆಯನ್ನು ನೀಡುವ ಪ್ರಯತ್ನ ಈ ಚಿತ್ರದಲ್ಲಿ ಸಾಗಿದೆ. ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸ ಇದೆ.
ಭಟ್ಟರ ಹುಡುಗಿ ಪೂಜಾ ಭಟ್:
ಬಾಲಿವುಡ್ ಅಂಗಳಲ್ಲಿ ‘ಡ್ಯಾಡಿ’, ‘ದಿಲ್ ಹೈ ಕೀ ಮಾನ್‌ತಾ ನಹೀಂ’, ‘ಝಕಂ’ ಚಿತ್ರದ ಮೂಲಕ ಹೊರ ಬಂದ ಪ್ರತಿಭೆ ಪೂಜಾ ಭಟ್. ಮೂಲತಃ ನಿರ್ದೇಶಕ ಹಾಗೂ ನಿರ್ಮಾಪಕರ ಮನೆತನದಿಂದ ಬಂದ ಪೂಜಾ ಭಟ್ ಆರಂಭದಲ್ಲಿ ಸಿನಿಮಾದಲ್ಲಿ ನಟಿಯಾಗಿಯೇ ಗುರುತಿಸಿಕೊಂಡವರು ಒಂದು ಹಂತದವರೆಗೂ ನಟಿಯಾಗಿ ನಂತರ ತಮ್ಮ ಕ್ಷೇತ್ರವನ್ನು ನಿರ್ಮಾಣ, ನಿರ್ದೇಶನದತ್ತ ಕಣ್ಣು ನೆಟ್ಟವರು. ೯೭ರಲ್ಲಿ ‘ತಾಮನ್ನಾ’ಕ್ಕೆ ನಿರ್ಮಾಪಕರಾಗಿ ಮಾತ್ರ ಕೆಲಸ ಮಾಡದೇ ಅದರಲ್ಲೂ ಬಣ್ಣ ಹಚ್ಚಿದರು. ಈ ನಂತರ ತಮ್ಮದೇ ಬ್ಯಾನರ್ ಫಿಶ್‌ಐ ನೆಟ್‌ವರ್ಕ್ ಮೂಲಕ ೧೦ಕ್ಕೂ ಅಧಿಕ ಸಿನಿಮಾಗಳನ್ನು ಬಾಲಿವುಡ್‌ನ ಅಂಗಳಕ್ಕೆ ತಂದರು. ಅದರಲ್ಲಿ ‘ದುಸ್ಮಾನ್’, ‘ಝಕಂ’ ಜಿಸ್ಮ್, ಜಿಸ್ಮ್-೨ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ.
ಬೋಲ್ಡ್ ಬ್ಯೂಟಿ ಅಮೀಷಾ ಪಟೇಲ್:
ಹೃತಿಕ್ ರೋಷನ್ ಅಭಿನಯದ ‘ಕಹೋ ನಾ ಪ್ಯಾರ್ ಹೈ’ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ ನಂತರ ಗದ್ದರ್‌ನಲ್ಲಿ ಪಕ್ಕಾ ಗ್ರಾಮೀಣ ಭಾರತದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡ ಅಮೀಷಾ ಪಟೇಲ್ ನಂತರ ದಿನಗಳಲ್ಲಿ ಯಾವುದೇ ಮ್ಯಾಜಿಕ್ ಮಾಡಲು ವಿಫಲರಾದರು. ಅವರು ನಟಿಸಿದ ‘ಹಮ್ರಾಝ್’, ‘ಹನಿಮೂನ್ ಟ್ರಾವೆಲ್ಸ್’ ಚಿತ್ರಗಳು ತಕ್ಕಮಟ್ಟಿನ ಯಶಸ್ಸು ಕಟ್ಟಿಕೊಟ್ಟಿತ್ತು. ಈಗ ‘ದೇಸಿ ಮ್ಯಾಜಿಕ್’ ಚಿತ್ರವೊಂದನ್ನು ಅಮೀಷಾ ಪಟೇಲ್ ನಿರ್ಮಾಪಕರಾಗುತ್ತಿದ್ದಾರೆ. ಜಾಹೇದ್ ಖಾನ್, ಶಾಹಿಲ್ ಶ್ರಾಫ್, ಅಮೀಷಾ ಪಟೇಲ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರೂಪದರ್ಶಿಯ ಅವತಾರ ದಿಯಾ ಮಿರ್ಜಾ:
ಬಾಲಿವುಡ್ ಅಂಗಳಕ್ಕೆ ಬರುವುದಕ್ಕೂ ಮೊದಲು ರೂಪದರ್ಶಿಯಾಗಿ ಮಿಂಚಿ ನಂತರ ನಟನಾ ಕ್ಷೇತ್ರಕ್ಕೆ ಬಂದು ಬಿದ್ದು ಹೋದ ಹುಡುಗಿ ದಿಯಾ ಮಿರ್ಜಾ. ‘ಹೇ ಬೇಬಿ’, ‘ಶೂಟೌಟ್ ಎಟ್ ಲೋಖನ್‌ವಾಲಾ’ ‘ಪರಿಣಿತಾ’ ಹಾಗೂ ‘ಹನಿಮೂನ್ ಟ್ರಾವೆಲ್ಸ್’ ಚಿತ್ರಗಳಲ್ಲಿ ಸೆಕೆಂಡ್ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ತೆರೆ ಮರೆಗೆ ಸರಿದ ದಿಯಾ ಮಿರ್ಜಾ ಈಗ ನಟ ಜಾಹೇದ್ ಖಾನ್ ಜತೆಗೂಡಿ ‘ಬೋರ್ನ್ ಫ್ರಿ’ ಎನ್ನುವ ಪ್ರಾಡಕ್ಷನ್ ಹೌಸ್‌ವೊಂದನ್ನು ತೆರೆದಿದ್ದಾರೆ. ೨೦೧೧ರಲ್ಲಿ ಈ ಬ್ಯಾನರ್‌ಯಡಿಯಲ್ಲಿ ಲವ್, ಬ್ರೇಕ್ ಆಫ್ಸ್, ಜೀಂದಿಗಿಯಲ್ಲಿ ಇಬ್ಬರು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.ಚಿತ್ರ ಹೇಳಿಕೊಳ್ಳುವಂತೆ ಯಶಸ್ವಿಯಾಗಿಲ್ಲ. ಈ ಬಳಿಕ ವಿದ್ಯಾ ಬಾಲನ್ ನಟಿಸುತ್ತಿರುವ ‘ಬಾಬಿ ಜಾಸೂಸ್’ ಚಿತ್ರಕ್ಕೆ ಹಣ ಸುರಿದಿದ್ದಾರೆ.
ಚೆಲ್ಲು ಹುಡುಗಿ ಪ್ರೀತಿ ಝಿಂಟಾ:
ಬಾಲಿವುಡ್ ನಟಿಯಾಗಿ ಕಮ್ ರೂಪದರ್ಶಿಯಾಗಿ ಕೂಡ ಪ್ರೀತಿ ಸಕ್ಸಸ್ ಕಂಡಿದ್ದಾರೆ. ಅದರಲ್ಲೂ ‘ಸೋಲ್ಜರ್’, ‘ಕಲ್ ಹೋ ನಾ ಹೋ’ ಚಿತ್ರಗಳು ಪ್ರೀತಿಗೆ ಹೆಸರು ಹಾಗೂ ಹಣ ಎಲ್ಲವೂ ಕೊಟ್ಟಿತ್ತು. ಇದರ ಜತೆಗೆ ಮಾಜಿ ಪ್ರಿಯಕರ ನೆಸ್ ವಾಡಿಯಾ ಜತೆಗೂಡಿ ಐಪಿಎಲ್ ಕ್ರಿಕೆಟ್ ತಂಡವೊಂದನ್ನು ಖರೀದಿ ಮಾಡಿ ನಡೆಸುತ್ತಿದ್ದಾರೆ. ೨೦೧೩ರಲ್ಲಿ ತೆರೆಗೆ ಬಂದ ‘ಈಷ್ಕ್ ಇನ್ ಫ್ಯಾರಿಸ್’ನಲ್ಲಿ ನಟಿಸುವ ಜತೆಗೆ ಚಿತ್ರಕ್ಕೆ ಬಂಡವಾಳ ತಂದು ಸುರಿದವರು ಕೂಡ ಪ್ರೀತಿ ಝಿಂಟಾ ಎನ್ನುವುದು ಗಮನಿಸಬೇಕಾದ ವಿಷ್ಯಾ.
ವಿಶ್ವ ಸುಂದರಿ ಲಾರಾದತ್ತ:
ವಿಶ್ವ ಸುಂದರಿ ಕಿರೀಟಧಾರೀಣಿ ಲಾರಾದತ್ತ ಸೌಂದರ್ಯದ ಮೂಲಕವೇ ಬಾಲಿವುಡ್ ಅಂಗಳಕ್ಕೆ ಜಿಗಿದ ನಟಿ. ಟೆನಿಸ್ ತಾರೆ ಮಹೇಶ್ ಭೂಪತಿಯನ್ನು ಒಲಿಸಿಕೊಂಡಿರುವ ಲಾರಾದತ್ತ ‘ನೋ ಎಂಟ್ರಿ’ ಹಾಗೂ ‘ಪಾರ್ಟನರ್’ ಚಿತ್ರದಿಂದ ಸಾಕಷ್ಟು ಹೆಸರು ಬೆಳೆಸಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾದ ‘ಚಲೋ ದಿಲ್ಲಿ’ಯಲ್ಲಿ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಮನೀಷಾ ಕೊಯಿರಾಲಾ:
‘ಸೌದಾಗಾರ್’ ಹಾಗೂ ‘ಬಾಂಬೇ’ ಚಿತ್ರದ ಮೂಲಕ ಮನೀಷಾ ಕೊಯಿರಾಲಾ ಎನ್ನುವ ನೇಪಾಳಿ ಬೆಡಗಿ ಬಾಲಿವುಡ್ ಅಂಗಳದಲ್ಲಿ ಸುದ್ದಿ ಮಾಡಿದಳು. ೨೦೦೪ರಲ್ಲಿ ತೆರೆಗೆ ಬಂದ ‘ಪೈಸಾ ವಸೂಲ್’ ಚಿತ್ರಕ್ಕೆ ಮನೀಷಾ ಕೊಯಿರಾಲಾ ಹಣ ಸುರಿದಿದ್ದಾರೆ. ಆದರೆ ಚಿತ್ರ ಮಾತ್ರ ಯಶಸ್ಸು ಕಾಣಲೇ ಇಲ್ಲ.
ಹರ್ಷಿತಾ ಭಟ್:
ಶಾರೂಕ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ‘ಅಶೋಕ’ದಲ್ಲಿ ಕಾಣಿಸಿಕೊಂಡ ಹರ್ಷಿತಾ ಭಟ್ ೨೦೧೧ರಲ್ಲಿ ‘ಶಕಲ್ ಪೇ ಮತ್ ಜಾ’ವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ನಿರ್ದೇಶನ ಮಾಡಿದ್ದು ಖ್ಯಾತ ನಿರ್ದೇಶಕ ಶುಭಾ ಮುಖರ್ಜಿ. ಟೋಟಲಿ ಹಾಸ್ಯ ಚಿತ್ರವಾದರೂ ಬಾಕ್ಸಾಫೀಸ್‌ನಲ್ಲಿ ಕಮಾಲ್ ತೋರಿಸಲು ವಿಫಲವಾಯಿತು.
ಸುಶ್ಮಿತಾ ಸೇನ್:
೨೦೦೭ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಸುಶ್ಮಿತಾ ಸೇನ್ ಇಂಗ್ಲೀಷ್ ಚಿತ್ರ ‘ಝಾನ್ಸಿ ಕೀ ರಾಣಿ’ಗೆ ಹಣ ಸುರಿದು ನಿರ್ಮಾಪಕರಾದರು. ಆದರೆ ಚಿತ್ರವಂತೂ ಬಾಕ್ಸಾಫೀಸ್‌ನಲ್ಲಿ ಸೋತು ಹೋಯಿತು. ಈ ಬಳಿಕ ಸುಶ್ಮಿತಾ ಸೇನ್ ನಿರ್ಮಾಣ ಕ್ಷೇತ್ರಕ್ಕೆ ಕಾಲೇ ಇಟ್ಟಿಲ್ಲ.
ಗೆದ್ದು ಬಂದ ಜೂಹೀ ಚಾವ್ಲಾ:
ಬಾಲಿವುಡ್ ನಟಿ ಜೂಹೀ ಚಾವ್ಲಾ ತಮ್ಮ ನಟನೆಯ ಮೂಲಕ ಸಾಕಷ್ಟು ಹೆಸರುಗಳಿಸಿಕೊಳ್ಳುವುದರ ಜತೆಗೆ ನಿರ್ಮಾಣ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಉಳಿಸಿಕೊಂಡಿದ್ದಾರೆ. ಬಾಲಿವುಡ್ ನಟ ಶಾರೂಕ್ ಖಾನ್, ನಿರ್ದೇಶಕ ಅಜೀಜ್ ಮಿರ್ಜಾ ಅವರನ್ನು ಒಳಗೊಂಡ ‘ಡ್ರೀಮ್ಸ್ ಅಲ್‌ಮಿಟೇಟ್’ ಎನ್ನುವ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಈ ಸಂಸ್ಥೆಯ ಅಡಿಯಲ್ಲಿ ಬಂದ ‘ಪಿರ್ ಬೀ ದಿಲ್ ಹಿಂದೂಸ್ತಾನಿ’ ಚಿತ್ರವನ್ನು ತೆರೆಗೆ ತಂದರು. ಈ ಚಿತ್ರದಲ್ಲಿ ಶಾರೂಕ್ ಹಾಗೂ ಜೂಹೀ ಇಬ್ಬರು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಜತೆಯಲ್ಲಿ ಶಾರೂಕ್ ಜತೆಗೂಡಿ ಐಪಿಎಲ್ ತಂಡವೊಂದನ್ನು ಖರೀದಿ ಮಾಡಿದ್ದಾರೆ.
ಧೋನಿಯಾಟದಲ್ಲಿ ರಾಜಪೂತ್ ಮಿಂಚು
*ಸ್ಟೀವನ್ ರೇಗೊ, ದಾರಂದಕುಕ್ಕು
ಮಹೇಂದ್ರ ಸಿಂಗ್ ಧೋನಿ ಇದು ಭಾರತೀಯ ಕ್ರಿಕೆಟ್‌ನಲ್ಲಿ ಸದಾ ಕಾಲ ಮಿಂಚುವ ಹೆಸರು. ಶಾರ್ಟ್ ಆಂಡ್ ಸ್ವೀಟಾಗಿ ಯಾವ ರೀತಿಯಲ್ಲೂ ಧೋನಿಯನ್ನು ಲೆಕ್ಕಹಾಕಿದರೂ ಕೂಡ ಆತನ ಮಿಂಚುವ ಬ್ಯಾಟಿಂಗ್, ಎದೆಗುಂದದ ಧೈರ್ಯವಂತಿಕೆ ಹಾಗೂ ಪದೇ ಪದೇ ಬದಲಾಗುತ್ತಿರುವ ಹೇರ್ ಸ್ಟೈಲ್‌ಗಳಿಂದಲೇ ಕ್ರಿಕೆಟ್ ರಂಗದಲ್ಲಿ ಅಳ್ವಿಕೆ ಮಾಡುತ್ತಿರುವ ಹೆಸರು. ಈಗ ಧೋನಿಯ ಕತೆಯನ್ನು ಇಟ್ಟುಕೊಂಡು ಸಿನಿಮಾವೊಂದು ಬಾಲಿವುಡ್ ಅಂಗಳದಲ್ಲಿ ಮೂಡಲಿದೆ.
ಅಂದಹಾಗೆ ಈಗಾಗಲೇ ದೇಶದ ನಾನಾ ಭಾಷೆಗಳಲ್ಲಿ ಧೋನಿಯ ಬಗ್ಗೆ ಸಿನಿಮಾಗಳನ್ನು ಥಿಯೇಟರ್‌ಗಳಿಗೆ ಬಿಡಲಾಗಿದೆ. ಎಲ್ಲವೂ ಅವರೇಜ್ ಕಲೆಕ್ಷನ್‌ಗಳಿಂದ ಸುದ್ದಿಯಾಗಿತ್ತು. ಅದರಲ್ಲೂ ತೀರಾ ಕುತೂಹಲವನ್ನು ಹುಟ್ಟುಹಾಕಿದ ಕನ್ನಡಿಗ ಪ್ರಕಾಶ್ ರಾಜ್( ರೈ) ಅವರ ನಿರ್ಮಾಣದ ತಮಿಳಿನ ‘ಧೋನಿ’ಯಂತೂ ಪುಟ್ಟ ಪೋರನೊಬ್ಬ ಕ್ರಿಕೆಟಿಗನಾಗಬೇಕು ಎಂದು ಬಯಸುವ ಕತೆಯಿಂದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದೆಲ್ಲವೂ ಧೋನಿಯ ಹೆಸರು ಹಾಗೂ ಆತನ ಕ್ರಿಕೆಟ್ ಬಗ್ಗೆ ಮಾತ್ರ ಹೆಣೆಯಲಾದ ಕತೆಗಳಿಂದ ಸಿನಿಮಾ ನಿರ್ಮಾಣವಾಗಿತ್ತು. ಆದರೆ ಈಗ ಬರುತ್ತಿರುವ ಚಿತ್ರವಂತೂ ಧೋನಿಯ ಆತ್ಮಕತೆಯನ್ನೇ ಸಿನಿಮಾ ಮಾಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ರಾಂಚಿಯಿಂದ ಹಿಡಿದು ಇಂದು ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಮಿಂಚಿದ ಎಲ್ಲ ವಿಚಾರಗಳು ಸಿನಿಮಾದಲ್ಲಿ ದಾಖಲಾಗುತ್ತದೆ.
ಇದು ಬಾಲಿವುಡ್ ಪಡಸಾಲೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಾಗಿರುವ ಕಾರಣದಿಂದ ಮಸಾಲೆ, ಗ್ಲಾಮರ್ ಹಾಗೂ ಮನರಂಜನೆಯೂ ಇರಲಿದೆ. ಬಾಲಿವುಡ್ ನಿರ್ದೇಶಕ ನೀರಜ್ ಪಾಂಡೆ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಅಂದಹಾಗೆ ನೀರಜ್ ಪಾಂಡೆ ಪ್ರತಿಭಾವಂತ ನಿರ್ದೇಶಕ. ಈ ಹಿಂದೆ ‘ವೆಡ್‌ನೆಸ್ ಡೇ’ ಚಿತ್ರ ತರುವ ಮೂಲಕ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡಿದ್ದರು. ಈ ಬಳಿಕ ಸ್ಪೆಶಲ್-೨೬,ವನ್ನು ಕೂಡ ನಿರ್ದೇಶನ ಮಾಡಿದ್ದರು. ಇದು ದೇಶದ ಭ್ರಷ್ಟಾಚಾರದ ಕುರಿತಾದ ಸಿನಿಮಾವಾಗಿತ್ತು. ಇದರ ಜತೆಗೆ ನೀರಜ್ ನಿರ್ಮಾಪಕರಾಗಿ ‘ದೀ ರಾಯಲ್ ಬೆಂಗಾಲ್ ಟೈಗರ್’ ಹಾಗೂ ‘ಟೋಟಲ್ ಸೀಯಾಪ್ಪ’ದಲ್ಲೂ ಕೆಲಸ ಮಾಡಿದ್ದಾರೆ.
ಬಾಲಿವುಡ್‌ಗೆ ದಕ್ಕಿದ ರಾಜ್‌ಪೂತ್:
ಸುಶಾಂತ್ ಸಿಂಗ್ ರಾಜಪೂತ್ ಈ ಹೆಸರು ಕೇಳಿದಾಕ್ಷಣ ಬಾಲಿವುಡ್‌ನ ಬಿಗ್ ಹಿಟ್ ಚಿತ್ರಗಳ ಲೀಸ್ಟ್‌ನಲ್ಲಿರುವ ‘ಕೈ ಪೋಚೆಂ’ ಸಿನಿಮಾ ಎದುರು ನಿಂತು ಬಿಡುತ್ತದೆ. ಆರಂಭದ ಚಿತ್ರದಲ್ಲಿಯೇ ಸುಶಾಂತ್ ಭರ್ಜರಿ ಹಿಟ್ ಚಿತ್ರ ಕೊಡುವ ಜತೆಗೆ ದೊಡ್ಡ ಬ್ಯಾನರ್‌ನ ಚಿತ್ರಗಳ ನಾಯಕನಾಗಿಯೂ ಬುಕ್ ಆಗಿದ್ದರು. ಯಶ್ ರಾಜ್ ಬ್ಯಾನರ್‌ನ ‘ಶುದ್ಧ್ ದೇಸಿ ರೋಮ್ಯಾನ್ಸ್’ ಜತೆಗೆ ಆಮೀರ್ ಖಾನ್ ಬ್ಯಾನರ್‌ನಲ್ಲಿ ಬರುತ್ತಿರುವ ‘ಪೀಕೆ’ಯಲ್ಲೂ ಸುಶಾಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ನೀರಜ್ ಪಾಂಡೆ ನಿರ್ದೇಶನದ ಧೋನಿ ಆತ್ಮಕತೆ ಆಧಾರಿತ ಚಿತ್ರಕ್ಕೆ ರಾಜ್‌ಪೂತ್ ಒಪ್ಪಿಗೆ ನೀಡಿದ್ದಾರೆ. ಚಿತ್ರಕ್ಕಾಗಿ ರಾಜ್‌ಪೂತ್ ಈಗಾಗಲೇ ಧೋನಿಯ ಜೆರ್ಸಿ, ಮ್ಯಾನರಿಸಂ, ಧೋನಿಯ ಆಟಗಳ ಕ್ಲಿಪ್ಪಿಂಗ್, ಸಂದರ್ಶನಗಳನ್ನು ನೋಡುತ್ತಿದ್ದಾರೆ.
ಸುಶಾಂತ್ ಕ್ರಿಕೆಟಿಗ ಧೋನಿ ಬರುವ ನ್ಯೂಜಿಲ್ಯಾಂಡ್ ಸರಣಿಗೂ ಮೊದಲು ಭೇಟಿ ಮಾಡಿ ಅವರ ಜತೆಯಲ್ಲಿ ತನ್ನ ಚಿತ್ರದ ಕುರಿತಾಗಿ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ ಎನ್ನುವ ಮಾತು ಕೂಡ ಬಾಲಿವುಡ್ ಅಂಗಳದಲ್ಲಿ ಓಡುತ್ತಿದೆ. ಇದರ ಜತೆಗೆ ಧೋನಿ ಪತ್ನಿ ಸಾಕ್ಷಿ ಕೂಡ ಈ ಚಿತ್ರದಲ್ಲಿ ಚಿತ್ರೀಸುವ ಇರಾದೆ ಚಿತ್ರದ ನಿರ್ದೇಶಕರಿಗೆ ಇದೆ.
ಈ ಕಾರಣದಿಂದ ಸಾಕ್ಷಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಇಲ್ಲವೇ ಶ್ರದ್ಧಾ ಕಪೂರ್ ಅವರನ್ನು ಆಯ್ಕೆ ಮಾಡುವ ಕುರಿತು ಸಿನಿಮಾ ನಿರ್ದೇಶಕರು ಯೋಚನೆ ಮಾಡುತ್ತಿದ್ದಾರೆ ಎನ್ನುವ ಮಾತಿದೆ. ೨೦೧೫ರ ಹೊತ್ತಿಗೆ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. ಇದಕ್ಕೆ ಬಹುಮುಖ್ಯ ಕಾರಣ ಧೋನಿಯ ದೇಹ ರಚನೆ. ಇದಕ್ಕಾಗಿ ಸುಶಾಂತ್ ಧೋನಿಯಂತೆ ದೇಹ ರಚನೆಗಾಗಿ ಕಸರತ್ತು ಮಾಡಲಿದ್ದಾರೆ. ಬಹುಕೋಟಿ ವೆಚ್ಚದ ಈ ಸಿನಿಮಾ ದೇಶ ಹಾಗೂ ವಿದೇಶ ಎರಡರಲ್ಲೂ ಚಿತ್ರೀಕರಣ ನಡೆಯಲಿದೆ.
Tuesday, March 18, 2014
ಬೊಂಬಯಿ ಮಿಠಾಯಿಗೆ ರಾಜಸ್ತಾನಿ ಹುಡುಗಿ !
* ಸ್ಟೀವನ್ ರೇಗೊ, ದಾರಂದಕುಕ್ಕು
ದಿಶಾ ಪಾಂಡೇ ಬೇಸಿಕಲಿ ರಾಜಸ್ತಾನಿ ಬೆಡಗಿ. ಅದಕ್ಕೂ ಮುಖ್ಯವಾಗಿ ತಮಿಳು ಹಾಗೂ ತೆಲುಗು ಎರಡು ಭಾಷೆಯ ಸಿನಿಮಾಗಳಲ್ಲೂ ಒಂದೇ ರೀತಿಯ ಖದರ್ ಬೆಳೆಸಿಕೊಂಡ ಹುಡುಗಿ ಈಗ ಸ್ಯಾಂಡಲ್‌ವುಡ್ ಸಿನಿಮಾಕ್ಕೆ ಕಾಲಿಟ್ಟಿದ್ದಾರೆ. ಅಂದಹಾಗೆ ಈ ಹಿಂದೆ ಕನ್ನಡದ ಚಿತ್ರ ‘ಶ್ರೀಮತಿ ಜಯಲಲಿತಾ’ ಸಿನಿಮಾಕ್ಕೆ ನಾಯಕಿಯಾಗಿ ಬುಕ್ ಆಗಿರುವ ದಿಶಾ ಪಾಂಡೇ ಸ್ಯಾಂಡಲ್‌ವುಡ್‌ನ ಮತ್ತೊಂದು ಚಿತ್ರಕ್ಕೂ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ಚಿತ್ರದ ಹೆಸರು ಬೊಂಬಾಯಿ ಮಿಠಾಯಿ ಇದನ್ನು ನಿರ್ದೇಶನ ಮಾಡುತ್ತಿರುವವರು ಚಂದ್ರಮೋಹನ್. ಇದರಲ್ಲಿ ಇಬ್ಬರು ನಾಯಕರು ವಿಕ್ರಂ ಹಾಗೂ ನಿರಂಜನ್ ಎನ್ನುವುದು ಸಧ್ಯಕ್ಕೆ ಚಿತ್ರ ತಂಡ ಬಿಟ್ಟುಕೊಂಡಿರುವ ಮಾಹಿತಿ. ಚಿತ್ರದಲ್ಲಿ ಒಬ್ಬ ನಾಯಕಿ ಹಾಗೂ ಇಬ್ಬರು ನಾಯಕರು ಎಂದಾಗಲೇ ಚಿತ್ರ ಪ್ರೇಮಕತೆಯನ್ನು ಒಳಗೊಂಡಿದೆ ಎಂಬ ವಿಚಾರವನ್ನು ಅರ್ಥಮಾಡಿಕೊಳ್ಳಬೇಕು. ಚಿತ್ರದಲ್ಲಿ ‘ಟು ವೇ ಲವ್’ ಮುಖ್ಯವಾಗಿ ಕಾಣಸಿಗಲಿದೆ.
ಅಂದಹಾಗೆ ದಿಶಾ ಪಾಂಡೆ ತನ್ನ ಚಿತ್ರದ ಬಗ್ಗೆ ಹೇಳುವ ಮಾತು ಹೀಗಿದೆ: ಚಿತ್ರದಲ್ಲಿ ನನ್ನ ಪಾತ್ರ ಅದಿತಿ. ಅವಳು ಉತ್ತರ ಭಾರತದಿಂದ ಹೆತ್ತವರ ಜತೆಗೆ ಬೆಂಗಳೂರಿಗೆ ಬರುತ್ತಾಳೆ. ಮುಖ್ಯವಾಗಿ ಅವಳಿಗೆ ಐತಿಹಾಸಿಕ ಸ್ಥಳಗಳ ಬಗ್ಗೆ ಹೆಚ್ಚಿನ ಕುತೂಹಲವಿರುತ್ತದೆ. ಇದೇ ಆಸಕ್ತಿಯನ್ನು ಬೆಳೆಸಿಕೊಂಡ ಹುಡುಗರ ಪರಿಚಯವಾಗುತ್ತದೆ. ಚಿತ್ರದಲ್ಲಿ ಹಾಸ್ಯ, ಪ್ರೇಮ, ಮನರಂಜನೆ ಎಲ್ಲವೂ ಸಿಗಲಿದೆ ಎನ್ನುವುದು ಅವರು ಮಾತು.
ಚಿತ್ರದ ಬಹುತೇಕ ಚಿತ್ರೀಕರಣ ರಾಜ್ಯದಲ್ಲಿಯೇ ನಡೆಯಲಿದೆ ಎನ್ನುವುದು ಚಿತ್ರತಂಡ ಬಿಚ್ಚಿಡುವ ಮಾತು. ತಮಿಳು ಹಾಗೂ ತೆಲುಗು ಎರಡು ಸಿನಿಮಾ ಕ್ಷೇತ್ರದಲ್ಲೂ ಸಾಣೇ ನಡೆಯುತ್ತಿರುವ ಬೆಡಗಿ ದಿಶಾ ಪಾಂಡೆ ಕನ್ನಡಕ್ಕೆ ಯಾಕೆ ಬಂದಳು ಅಂತಾ ಕೇಳಿದ್ರೆ ಅವಳು ಹೇಳುವ ಮಾತು ಹೀಗಿದೆ: ನನಗೆ ಐತಿಹಾಸಿಕ ಸ್ಥಳಗಳನ್ನು ಸುತ್ತಾಟ ಮಾಡಬೇಕು ಎನ್ನುವ ಬಯಕೆ ಬಹಳಷ್ಟಿತ್ತು. ಆದರೆ ಚಿತ್ರಗಳ ನಿರಂತರ ಶೂಟಿಂಗ್‌ನಿಂದಾಗಿ ಯಾವುದಕ್ಕೂ ಪುರುಸೊತ್ತು ಇಲ್ಲದೇ ಹೋಯಿತು. ಈಗ ಇಂತಹ ವಿಚಾರದ ಮೇಲೆ ಸಿನಿಮಾವೊಂದು ಸಿದ್ಧವಾಗುತ್ತಿದೆ ಎಂದಾಗ ನಾನು ಕಣ್ಣುಮುಚ್ಚಿಕೊಂಡು ಒಪ್ಪಿಕೊಂಡೆ. ಚಿತ್ರದಲ್ಲೂ ನನಗೆ ಬಹಳಷ್ಟು ಅವಕಾಶವಿದೆ ಎನ್ನುತ್ತಾರೆ ಅವರು. ಟೋಟಲಿ ತಮಿಳು, ತೆಲುಗು ಎರಡು ಭಾಷೆಗಳನ್ನು ಕಲಿತುಬಂದಿರುವ ದಿಶಾ ಪಾಂಡೆ ಈಗ ಕನ್ನಡ ಕಲಿಯಲು ಆರಂಭಮಾಡಿದ್ದಾರೆ. ಚಿತ್ರಕ್ಕೆ ಅವರೇ ಧ್ವನಿಯಾಗುತ್ತಾರೆ ಎನ್ನುವುದು ಚಿತ್ರ ತಂಡದ ಮಾತು. ಅದಕ್ಕೂ ಮುಖ್ಯವಾಗಿ ‘ಬೊಂಬಾಯಿ ಮಿಠಾಯಿ’ ಸಿನಿಮಾನೂ ಈ ವರ್ಷದ ಕೊನೆಭಾಗದಲ್ಲಿ ತೆರೆಗೆ ಅಪ್ಪಳಿಸಲಿದೆ ಅಲ್ಲಿಯವರೆಗೂ ಕನ್ನಡದ ಸಿನಿ ಪ್ರೇಕ್ಷಕರು ಕಾಯಲೇಬೇಕು.
Monday, March 17, 2014
ಬಾಲಿವುಡ್ ಬಿಟ್ಟ ಹುಡುಗ ನೀಲ್
* ಸ್ಟೀವನ್ ರೇಗೊ,ದಾರಂದಕುಕ್ಕು
ನೀಲ್ ನಿತಿನ್ ಮುಕೇಶ್ ಎಂದಾಗ ನತದೃಷ್ಟ ಎನ್ನುವ ಮಾತು ಗೊತ್ತಿಲ್ಲದೇ ಪ್ರೇಕ್ಷಕರ ಮನದಲ್ಲಿ ಅರಳಿಬಿಡುತ್ತದೆ. ಇದು ನೀಲ್ ನಟಿಸಿದ ಫಿಲ್ಮೋಗ್ರಾಫಿ ನೋಡಿದ ಎಲ್ಲರೂ ಹೇಳುವ ಮಾತು. ಒಂದಲ್ಲ ಎರಡಲ್ಲ ಬರೋಬರಿ ೧೧ ಬಾಲಿವುಡ್ ಚಿತ್ರಗಳಲ್ಲಿ ನೀಲ್ ನಟಿಸಿದ್ದಾರೆ. ಆದರೆ ಒಂದೇ ಒಂದು ಸಿನಿಮಾ ಕೂಡ ಬಾಕ್ಸಾಫೀಸ್ ರೆಕಾರ್ಡ್ ಮುರಿಯುವ ಮಾತೇ ಆಡಿಲ್ಲ.
ಅದಕ್ಕೂ ಮುಖ್ಯವಾಗಿ ಸಾಮಾನ್ಯ ಕಲೆಕ್ಷನ್ ಕಂಡು ಥಿಯೇಟರ್‌ನಿಂದಲೇ ಡುಮ್ಕಿ ಹೊಡೆದಿದೆ. ಈ ಎಲ್ಲ ವಿಚಾರಗಳಿಂದ ನೀಲ್ ನಿತಿನ್ ಮುಕೇಶ್ ಸಧ್ಯಕ್ಕೆ ಬಾಲಿವುಡ್ ಬಿಟ್ಟು ಕಾಲಿವುಡ್ ಸಿನಿಮಾ ರಂಗದಲ್ಲೇ ಠಿಕಾಣಿ ಹೂಡುತ್ತಾರೆ ಎನ್ನುವ ಗುಸುಗುಸು ಕಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಲು ಆರಂಭವಾಗಿದೆ. ಇವುಗಳ ಜತೆಯಲ್ಲಿ ನೀಲ್ ನಿತಿನ್ ಮುಕೇಶ್ ಅವರ ಬತ್ತಳಿಕೆಯಲ್ಲಿ ಬಾಲಿವುಡ್‌ನ ಎರಡು ಚಿತ್ರಗಳಿವೆ.
ಆದರೆ ಅದು ಪಕ್ಕಾ ಸಿನಿಮಾಗಳಲ್ಲ. ಅಂದರೆ ಕಳೆದ ಎರಡು ವರ್ಷಗಳಿಂದ ಹೆಸರು ಮಾತ್ರ ಬುಕ್ಕಿಂಗ್ ನಡೆದಿದೆ. ಉಳಿದಂತೆ ಸಿನಿಮಾದ ಕೆಲಸ ಕಾರ‍್ಯಗಳು ಆರಂಭವೇ ಆಗಿಲ್ಲ. ಈ ಕಾರಣದಿಂದ ಈ ಎರಡು ಚಿತ್ರಗಳನ್ನು ಬಿಟ್ಟು ನೀಲ್ ಬಗ್ಗೆ ಮಾತಿಗಿಳಿದರೆ ಹುಟ್ಟುವ ಪ್ರಶ್ನೆ ನೀಲ್ ಈಗ ನಿರುದ್ಯೋಗಿ ! ಆದರೂ ಈಗ ಕಾಲಿವುಡ್‌ನಿಂದ ಅವಕಾಶವೊಂದು ಬಡಿದಿದೆ. ಚಿತ್ರನೂ ದೊಡ್ಡ ಬ್ಯಾನರ್‌ನಡಿಯಲ್ಲಿ ಸಿದ್ಧವಾಗುತ್ತಿದೆ. ಈ ಎಲ್ಲ ಕಾರಣಗಳಿಂದ ನೀಲ್ ಕಾಲಿವುಡ್ ಅಂಗಳದಲ್ಲಿಯೇ ತನ್ನ ಆಟ ಮುಂದುವರಿಸುತ್ತಾರೆ ಎನ್ನುವುದು ಗುಲ್ಲು.
ಕಾಲಿವುಡ್ ಮೇಲೆ ನೀಲ್ ಕಣ್ಣು:
ತೀರಾ ಇತ್ತೀಚೆಗೆ ಕಾಲಿವುಡ್ ಅಂಗಳದ ಖ್ಯಾತ ನಿರ್ದೇಶಕ ಎ.ಆರ್.ಮುರುಗದಾಸ್ ತಮ್ಮ ಹೆಸರಿಡದ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ನೀಲ್ ನಿತಿನ್ ಮುಕೇಶ್‌ರನ್ನು ಬುಕ್ ಮಾಡಿದ್ದಾರೆ. ಅಂದಹಾಗೆ ಇದು ನೀಲ್ ಕಾಲಿವುಡ್‌ನಿಂದ ಬಂದ ಎರಡನೇ ಆಫರ್ ಎನ್ನುವುದು ಗಮನಿಸಬೇಕಾದ ವಿಷ್ಯಾ. ಈ ಹಿಂದೆ ಚಿತ್ರ ನಿರ್ದೇಶಕ ಸುಸೈ ಗಣೇಶ್ ಅವರ ‘ಶಾರ್ಟ್ ಕಟ್ ರೋಮಿಯೋ’ ಹಿಂದಿಯಲ್ಲಿ ಬಂದಿತ್ತು. ಆದರೆ ಚಿತ್ರದ ನಿರ್ದೇಶಕ ಸುಸೈ ಗಣೇಶ್ ಪಕ್ಕಾ ಕಾಲಿವುಡ್ ಇಂಡಸ್ಟ್ರಿಯ ಜನ. ಅದಕ್ಕೂ ಮುಖ್ಯವಾಗಿ ಈ ಚಿತ್ರ ತಮಿಳುನಾಡಿನಲ್ಲೂ ಓಡಿತ್ತು. ಆದರೆ ಬಾಲಿವುಡ್ ಅಂಗಳದಲ್ಲಿ ಸುದ್ದಿ ಮಾಡಲು ವಿಫಲವಾಯಿತು. ಈ ಬಳಿಕ ನೀಲ್ ನಟಿಸಿದ ಯಾವುದೇ ಚಿತ್ರಗಳು ಬಾಲಿವುಡ್ ಅಂಗಳದಲ್ಲಿ ಬಂದೇ ಇಲ್ಲ.
ಅದಕ್ಕೂ ಮುಖ್ಯವಾಗಿ ಕಾಲಿವುಡ್ ಪಡಸಾಲೆಯಲ್ಲೇ ನೀಲ್ ನಿತಿನ್ ಓಡಾಡಿಕೊಂಡಿರುವುದನ್ನು ಗಮನಿಸಿದ ಮುರುಗದಾಸ್ ತಮ್ಮ ಮುಂದಿನ ಚಿತ್ರಕ್ಕೆ ನೀಲ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಹಿಂದೆ ನಟ ವಿಜಯ್ ಅವರನ್ನು ಹಾಕಿಕೊಂಡು ಮಾಡಿದ ‘ತೂಫಾಕಿ’ ಚಿತ್ರ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡಿತ್ತು. ಈಗ ಮುರುಗದಾಸ್ ವಿಜಯ್ ಯನ್ನು ನಾಯಕನಾಗಿ ನೀಲ್ ನಿತಿನ್ ಮುಕೇಶ್ ರನ್ನು ವಿಲನ್ ಆಗಿ ಚಿತ್ರದಲ್ಲಿ ತೋರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ವರ್ಷದ ಕೊನೆ ಭಾಗದಲ್ಲಿ ಚಿತ್ರ ಹೊರಬರುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ. ಅದಕ್ಕೂ ಮಿಗಿಲಾಗಿ ನೀಲ್ ನಿತಿನ್ ಕಾಲಿವುಡ್‌ನಲ್ಲೇ ತಮ್ಮ ಮುಂದಿನ ಚಿತ್ರ ಬದುಕು ಕಳೆಯುತ್ತಾರಾ ಎನ್ನುವುದು ಕಾದು ನೋಡಬೇಕು.
ಕನ್ನಡದಲ್ಲಿ ‘ನವ್ಯಾ’ ದೃಶ್ಯಂ
* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಯಾಂಡಲ್‌ವುಡ್ ಸಿನಿಮಾ ಅಡ್ಡಾದಲ್ಲಿ ಮಲಯಾಳಂ ಬೆಡಗಿ ನವ್ಯಾ ನಾಯರ್ ಎಂಟ್ರಿ ಕೊಡುತ್ತಿದ್ದಾರೆ. ಮಲಯಾಳಂ ಸಿನಿಮಾ ‘ದೃಶ್ಯಂ’ ಈಗಾಗಲೇ ಕಲೆಕ್ಷನ್ ವಿಚಾರದಲ್ಲಿ ಬಾಕ್ಸಾಫೀಸ್ ಗಲ್ಲಾ ಪೆಟ್ಟಿಗೆಯನ್ನು ದೋಚಿಕೊಂಡಿತ್ತು. ಇದೇ ಸಿನಿಮಾವನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಹಿಂದಿಯಲ್ಲೂ ಸೆಟ್ಟೇರಿಸುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ. ಅಂದಹಾಗೆ ಕನ್ನಡದ ದೃಶ್ಯಂಗಾಗಿ ನವ್ಯಾ ನಾಯರ್ ಬುಕ್ ಆಗಿದ್ದಾರೆ ಎನೋದು ಗಾಂಧಿನಗರದಲ್ಲಿ ಹರಡಿಕೊಂಡಿರುವ ಮಾತು.
ಮಲಯಾಳಂನ ದೃಶ್ಯಂನಲ್ಲಿ ನಟಿ ಮೀನಾ ಮಾಡಿದ ಪಾತ್ರವನ್ನು ಕನ್ನಡದಲ್ಲಿ ನವ್ಯಾ ಮಾಡುತ್ತಿದ್ದಾರೆ. ಈ ಕುರಿತು ನವ್ಯಾ ಹೇಳುವ ಮಾತು ಹೀಗಿದೆ: ಈ ಪಾತ್ರದ ಕುರಿತು ನನಗೆ ಅಪಾರ ನಿರೀಕ್ಷೆ ಇದೆ. ಆದರೆ ನನ್ನ ಪುತ್ರನಿಗೆ ಈಗ ಮೂರರ ಹರೆಯ. ಅವನ ಭವಿಷ್ಯದ ದೃಷ್ಟಿಯಿಂದ ಹತ್ತಿರ ಇರೋದು ನನ್ನ ಕರ್ತವ್ಯ. ಈ ಕಾರಣದಿಂದಲೇ ನಾನು ಎಲ್ಲ ಚಿತ್ರಗಳನ್ನು ಕೈ ಬಿಟಟೆ. ಆದರೆ ದೃಶ್ಯಂನ ಮೀನಾರ ಪಾತ್ರ ಮಾತ್ರ ನನಗೆ ಬಹಳ ಹಿಡಿಸಿತು. ಈ ಕಾರಣದಿಂದ ಚಿತ್ರ ಮಾಡುತ್ತಿದ್ದೇನೆ.
ಮಲಯಾಳಂನಲ್ಲಿ ಬಂದಿರುವ ದೃಶ್ಯಂವನ್ನು ನಾನು ನೋಡಿದ್ದೇನೆ. ಚಿತ್ರ ತುಂಬಾನೇ ಅದ್ಬುತವಾಗಿದೆ. ಅದಕ್ಕೂ ಮಿಗಿಲಾಗಿ ಚಿತ್ರದಲ್ಲಿರುವ ಸಂದೇಶ ಎಲ್ಲವೂ ಬಹಳಷ್ಟು ಹಿಡಿಸಿಬಿಟ್ಟಿದೆ. ನಾನು ಖಂಡಿತವಾಗಿಯೂ ನನ್ನ ಪಾತ್ರಕ್ಕೆ ನ್ಯಾಯ ದೊರಕಿಸಿಕೊಡಬಲ್ಲೇ ಎನ್ನುವ ಧೈರ್ಯವಿದೆ ಎನ್ನುವುದು ನವ್ಯಾ ನಾಯರ್ ಮಾತು. ಖ್ಯಾತ ನಿರ್ದೇಶಕ ಪಿ. ವಾಸು ಈ ಚಿತ್ರವನ್ನು ಹೊರತರುತ್ತಿದ್ದಾರೆ. ನಟ ವಿ. ರವಿಚಂದ್ರನ್ ಮಲಯಾಳಂನ ಮೋಹನ್‌ಲಾಲ್ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಮಾಡುತ್ತಿದ್ದಾರೆ.
ಕನ್ನಡ ನನಗೇನು ಹೊಸದಾದ ಸಿನಿಮಾ ಇಂಡಸ್ಟ್ರಿ ಅಲ್ಲ. ಕನ್ನಡದ ಸಿನಿಮಾಗಳನ್ನು ನೋಡಿದ್ದೇನೆ ಹಾಗೂ ಸ್ಯಾಂಡಲ್‌ವುಡ್ ಸಿನಿಮಾ ನಟ, ನಟಿಯರ ಜತೆಗೂ ನನಗೆ ಸ್ನೇಹವಿದೆ.ಟೋಟಲಿ ಈ ಬಾರಿಯಂತೂ ದೊಡ್ಡ ತಂಡದ ಜತೆಗೆ ಮಾಡುತ್ತಿದ್ದೇನೆ ಎನ್ನೋದು ಮಾತ್ರ ಕೊಂಚ ಭಯ ಹುಟ್ಟಿಸುತ್ತಿದೆ ಎನ್ನುತ್ತಾರೆ ನವ್ಯಾ ನಾಯರ್.
ಮದುವೆಯಾಗಿ ಮಗುವಾದ ನಂತರ ನವ್ಯಾ ಸಿನಿಮಾ ಇಂಡಸ್ಟ್ರಿಯಿಂದ ಕೊಂಚ ದೂರವೇ ಉಳಿದು ಬಿಟ್ಟಿದ್ದರು. ಮಲಯಾಳಂ ಚಿತ್ರ ‘ನಮ್ಮದು ವೀಡು’ ಬಳಿಕ ಕನ್ನಡದಲ್ಲಿ ನವ್ಯಾ ಕಾಣಿಸಿಕೊಳ್ಳುತ್ತಿದ್ದಾರೆ. ನವ್ಯಾ ಹೇಳುವಂತೆ ‘ ಈ ಹಿಂದೆ ಸಿನಿಮಾ ನನ್ನ ಬದುಕಿನ ಒಂದು ಭಾಗವಾಗಿತ್ತು. ಆದರೆ ಈಗ ಅದೊಂದು ಹವ್ಯಾಸವಾಗಿ ಹೋಗಿದೆ. ಅಂದಹಾಗೆ ನವ್ಯಾ ನಾಯರ್ ಮಗುವಾದ ನಂತರ ಮನೆಯಲ್ಲಿ ಕೂತು ಏನೂ ಮಾಡುತ್ತಿದ್ದರು ಎನ್ನುವ ಕುತೂಹಲ ಬಹಳಷ್ಟು ಅವರ ಅಭಿಮಾನಿಗಳನ್ನು ಕಾಡುತ್ತಿತ್ತು. ನಿಜಕ್ಕೂ ನವ್ಯಾ ತಮ್ಮ ಸಿನಿ ಬದುಕಿನ ಕುರಿತಾಗಿ ಒಂದು ಕೃತಿಯನ್ನು ಹೊರತರುವ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಅವರ ಆಪ್ತ ಮೂಲದ ಮಾತು. ಮಗುವಿನ ಹಾರೈಕೆಯಲ್ಲಿ ಮಗ್ನರಾಗಿರುವ ನವ್ಯಾ ತಮ್ಮದೇ ಬ್ಲಾಗ್ ಹಾಗೂ ಸೋಶಿಯಲ್ ನೆಟ್‌ವರ್ಕ್ ಸೈಟ್‌ಗಳ ಮೂಲಕ ಅಭಿಮಾನಿಗಳನ್ನು ಹಿಡಿದುಕೊಳ್ಳುವ ಕೆಲಸವನ್ನಂತೂ ಮಾಡುತ್ತಾ ಬರುತ್ತಿದ್ದಾರೆ. ಟೋಟಲಿ ನವ್ಯಾ ನಾಯರ್ ಇರುವ ದೃಶ್ಯಂ ಬಿಡುಗಡೆಯ ಮೊದಲೇ ನಿರೀಕ್ಷೆಯ ಪೊಟ್ಟಣವನ್ನು ಬಿಚ್ಚಿಕೊಟ್ಟಿದೆ.
Subscribe to:
Posts (Atom)






