Sunday, August 28, 2011

ಯೋಡ್ಲಿಂಗ್ ಕಿಂಗ್ ‘ಕಿಶೋರ’


ಕಿಶೋರ್ ಕುಮಾರ್ ಎಂದರೆ ಬರೀ ಹಾಡುಗಾರ ಎಂದೇ ಬಹಳಷ್ಟು ಜನರಿಗೆ ಗೊತ್ತು. ಆದರೆ ಕಿಶೋರ್ ಕುಮಾರ್ ಒಬ್ಬ ಸಂಪೂರ್ಣ ಕಲಾವಿದ. ಸಿನಿಮಾದಂತೆ ಬದುಕಿದ ಕಲಾವಿದ ಕಿಶೋರ್ ಯಾಕೆ ಇಷ್ಟವಾಗುತ್ತಾರೆ ಗೊತ್ತಾ..?

ಕಿಶೋರ್ ಕುಮಾರ್ ಬರೀ ಗಾಯಕನಲ್ಲ ಒಬ್ಬ ಸಂಪೂರ್ಣ ಕಲಾವಿದ ಎಂದು ಹೇಳಿಕೊಂಡವರು ಬೇರೆ ಯಾರು ಅಲ್ಲ ಮಾರಾಯ್ರೆ ಗಾನ ಕೋಗಿಲೆ ಲತಾ ಮಂಗೇಶ್ಕರ್. ಈ ಮಾತು ನೂರಕ್ಕೆ ನೂರರಷ್ಟು ನಿಜ. ಕಿಶೋರ್ ಬರೀ ಹಿನ್ನೆಲೆ ಗಾಯಕನಾಗಿ ಉಳಿದು ಹೋಗಲಿಲ್ಲ. ಆದರೆ ಕಿಶೋರ್ ಕುಮಾರ್ ಎಂದರೆ ಅವರು ಬರೀ ಹಾಡುಗಾರರು ಎಂದೇ ಸಿನಿಮಾ ಮಂದಿಗೆ, ಅವರ ಅಭಿಮಾನಿಗಳಿಗೆ ಗೊತ್ತಿತ್ತು. ಕಿಶೋರ್ ಎಲ್ಲ ಕ್ಷೇತ್ರದಲ್ಲೂ ಪಳಗಿ ಬಂದವರು. ನಟನೆ, ಗಾಯನ, ನಿರ್ದೇಶನ, ನಿರ್ಮಾಪಕ, ಸಾಹಿತ್ಯ, ಚಿತ್ರಕತೆ ಹೀಗೆ ಎಲ್ಲವೂ ಕಿಶೋರ್ಗೆ ತುಂಬಾ ಇಷ್ಟವಾಗಿತ್ತು.
ಕಿಶೋರ್ ಕುಮಾರ್ ಹಾಡುಗಳೆಂದರೆ ಮಧುರತೆ ಜತೆಯಲ್ಲಿ ಕೊಂಚ ರಾಕ್ ಆಂಡ್ ರೋಲ್ ಕಲ್ಚರ್ ಮಿಕ್ಸ್ ಆಗಿ ಕೇಳುವ ಕಿವಿಗಳಿಗೆ ಹೊಸ ಅನುಭವ ಹುಟ್ಟುಹಾಕುತ್ತಿತ್ತು. ಆರ್ಡಿ ಬರ್ಮನ್ ಸಂಗೀತ ನಿರ್ದೇಶನದ ‘ಸಾಗರ್’ಚಿತ್ರದ ‘ಸಾಗರ್ ಕಿನಾರೆ...’ ಹಾಡುಗಳು ಮತ್ತೆ ಕೇಳುತ್ತಿದ್ದಾಗ ತಣ್ಣನೆ ಮನಸ್ಸನ್ನು ಅಲ್ಲಿಯೇ ಸವರಿಕೊಂಡಂತೆ ಆಗಿ ಬಿಡುತ್ತದೆ ಎಂದು ಖ್ಯಾತ ಗಾಯಕ ಮುಕೇಶ್ ಹೇಳಿದ್ದರು. ಕಲ್ಯಾಣ್ ಆನಂದ್ಜೀ ಸಂಗೀತ ನಿರ್ದೇಶನದ ‘ಕೋರಾ ಕಾಗಾಜ್’ ಚಿತ್ರದ ‘ಮೇರಾ ಜೀವನ್ ಕೋರಾ ಕಾಗಾಜ್..’ ಹಾಡು ಮತ್ತೊಂದು ಸಾರಿ ರೇಡಿಯೋ, ಟಿವಿಯಲ್ಲಿ ಕೇಳುತ್ತಿದ್ದಾರೆ ಸಾಕು ಜೀವನ ಪಾವನವಾಯಿತು ಎಂದುಕೊಳ್ಳಬೇಕು ಎಂದು ಗಾಯಕಿ ಆಶಾಜೀ ಪದೇ ಪದೇ ಹೇಳಿಕೊಳ್ಳುತ್ತಿದ್ದರಂತೆ.
ಇದೇ ಕಿಶೋರ್ ಕುಮಾರ್ ಅವರ ಹಾಡುಗಳಿಗೆ ಇದ್ದ ಬೇಡಿಕೆ. ಈಗಲೂ ಗೂಗಲ್ ಸರ್ಚ್ ಎಂಜಿನ್ನೊಳಗೆ ಹುಡುಕಾಡಿ ನೋಡಿದರೆ ಸಾಕು. ಕಿಶೋರ್ ಕುಮಾರ್ ಹಾಡುಗಳ ಅಭಿಮಾನಿಗಳ ಸಂಖ್ಯೆ ಬರೋಬರಿ ನಾಲ್ಕು ಮಿಲಿಯಕ್ಕಿಂತ ಜಾಸ್ತಿ ಇದೆ. ಈಗಲೂ ಹಳೆಯ ಟಾಪ್ ಟೆನ್ ಸಾಂಗ್ ಲೀಸ್ಟ್ನಲ್ಲಿ ಕಿಶೋರ್ ಕುಮಾರ್ ಅವರ ಹಾಡುಗಳು ಭದ್ರ ಸ್ಥಾನ ಪಡೆದುಕೊಂಡಿದೆ. ಆದರೂ ಕಿಶೋರ್ ಕುಮಾರ್ ಎಂದರೆ ಒಬ್ಬ ಕ್ರೇಜಿಮ್ಯಾನ್ ಜತೆಗೆ ಮನರಂಜನೆ ಕೊಡುವ ಮನುಷ್ಯ.
ಕಿಶೋರ್ ಕುಮಾರ್ರ ಮೂಲ ಹೆಸರು ಅಬ್ಬಾಸ್ ಕುಮಾರ್ ಗಂಗೋಲಿ. ಬಾಂಬೇ ಟಾಕೀಸ್ ಸಿನಿಮಾದ ಮೂಲಕ ಕಿಶೋರ್ ಕುಮಾರ್ ಎಂದು ಹೆಸರು ಬದಲಾಯಿಸಿ ಬಿಟ್ಟರು. ಮಧ್ಯಪ್ರದೇಶದ ಮಧ್ಯವರ್ಗದ ಕುಟುಂಬದಲ್ಲಿ ಕಿಶೋರ್ ಹುಟ್ಟಿದವರು. ಅಂದಹಾಗೆ ನಟ ಅಶೋಕ್ ಕುಮಾರ್ ಹಾಗೂ ನಟ ಕಲ್ಯಾಣ್ ಕುಮಾರ್ ಕಿಶೋರ್ ಕುಮಾರ್ರ ಹಿರಿಯ ಸಹೋದರರು. ಅಶೋಕ್ ಕುಮಾರ್ಗೂ ತಮ್ಮ ಕಿಶೋರ್ ಒಳ್ಳೆಯ ನಟ ಆಗಬೇಕೆಂಬ ಕನಸ್ಸಿತ್ತು. ಆ ಕಾಲದಲ್ಲಿ ನಟರಿಗೆ ಒಳ್ಳೆಯ ಸಂಭಾವಣೆ ಬರುತ್ತಿತ್ತು.
ಕಿಶೋರ್ಗೂ ನಟನೆಯ ಜತೆಯಲ್ಲಿ ಹಾಡುವ ತಾಕತ್ತು ಇದೆ ಎಂದು ಗೊತ್ತಾದ ಕೂಡಲೇ ಅಶೋಕ್ ಕುಮಾರ್ ಕಿಶೋರ್ ಕುಮಾರ್ಗೆ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟರು. ಕಿಶೋರ್ ಕೆಲವೊಂದು ಚಿತ್ರಗಳಲ್ಲಿ ನಟಿಸಿದ ನಂತರ ನಟನೆ ಬೋರ್ ಅನ್ನಿಸಿಬಿಟ್ಟಿತ್ತು. ಹಾಡುವ ಚಾನ್ಸ್ಗಾಗಿ ಕಿಶೋರ್ ಸಂಗೀತ ನಿರ್ದೇಶಕರ ಬಳಿ ಓಡಲಾರಂಭಿಸಿದರು. ಆದರೆ ಕಿಶೋರ್ ಆರಂಭದಲ್ಲಿ ಸಂಗೀತ ನಿರ್ದೇಶಕರ ಬಳಿ ಹೋದಾಗ ‘ ಆಪ್ಕೀ ಅವಾಜ್ ಮೇ ವೋ ಬಾತ್ ನಹೀ ಹೈ’( ನಿಮ್ಮ ಕಂಠದಲ್ಲಿ ಅಂತಹ ಮಾತಿಲ್ಲ) ಎಂದು ಹೇಳಿ ಕಿಶೋರ್ರ ಉತ್ಸಾಹಕ್ಕೆ ತಣ್ಣೀರು ಹಾಕಿಬಿಟ್ಟರು. ಆದರೆ ಕಿಶೋರ್ ಹಾಡುಗಾರಿಕೆಯನ್ನು ಅಪಾರ ಪ್ರೀತಿಸಿದರು. ಜತೆಗೆ ಹಾಡುಗಳ ಮೂಲಕ ನಿರಂತರವಾಗಿ ಬೆಳೆಯುತ್ತಾ ಹೋದರು.
೧೯೪೮ರಲ್ಲಿ ದೇವಾನಂದ್ ನಟಿಸಿದ ಚಿತ್ರವೊಂದರಲ್ಲಿ ಕಿಶೋರ್ ಕುಮಾರ್ ಹಾಡುವ ಮೂಲಕ ಬಾಲಿವುಡ್ ಸಂಗೀತ ಲೋಕಕ್ಕೆ ಹೊಸ ಸೈಗಲ್ ಶೈಲಿಯನ್ನು ಪರಿಚಯಿಸಿದರು. ಈ ಶೈಲಿ ಕಿಶೋರ್ ಹಾಡುಗಳಲ್ಲಿ ಖಾಯಂ ಆಗಿ ಕೇಳಿಬರುತ್ತಿತ್ತು. ಹಾಡಿನ ಜತೆಯಲ್ಲಿ ‘ಆಪ್ ಟಿಕೇಟ್’, ‘ಚಾಲ್ತಿ ಕಾ ನಾಮ್ ಘಾಡಿ’ ‘ಪಂಟ್ಯೂಸ್’, ‘ಪಡೋಸನ್’ ಚಿತ್ರಗಳ ಮೂಲಕ ಕಿಶೋರ್ ಹಾಸ್ಯ ಚಕ್ರವರ್ತಿಯಾಗಿ ಮರೆದರು.
ಬಾಲಿವುಡ್ ಸಂಗೀತ ನಿರ್ದೇಶಕ ಎಸ್.ಡಿ. ಬರ್ಮನ್( ಸಚಿನ್ ದೇವ್ ಬರ್ಮನ್)ರ ಬಹುತೇಕ ಸಂಗೀತ ನಿರ್ದೇಶನದ ಹಾಡುಗಳಿಗೆ ಕಿಶೋರ್ ಕುಮಾರ್ ಅವರು ಹಿನ್ನೆಲೆ ಗಾಯಕರಾಗಿ ಇರುತ್ತಿದ್ದರು. ಎಸ್.ಡಿ. ಬರ್ಮನ್ರ ೧೧೨ ಹಾಡುಗಳನ್ನು ಕಿಶೋರ್ ಕುಮಾರ್ ಒಬ್ಬರೇ ಹಾಡಿಕೊಂಡು ಬಂದಿದ್ದಾರೆ. ಎಸ್.ಡಿ. ಬರ್ಮನ್ರ ನಂತರ ಬಂದ ಅವರ ಪುತ್ರ ಆರ್.ಡಿ. ಬರ್ಮನ್ರ ಸಂಗೀತ ನಿರ್ದೇಶನದಲ್ಲಿ ಕಿಶೋರ್ ಹಾಡಿದ್ದರು. ಈ ಮೂಲಕ ಎರಡು ಪೀಳಿಗೆಯ ನಿರ್ದೇಶಕರ ಜತೆಯಲ್ಲಿ ಕೆಲಸ ಮಾಡಿದ ಅನುಭವ ಕಿಶೋರ್ ಬಗಲಿಗಿತ್ತು. ಅದರಲ್ಲೂ ನಟ ರಾಜ್ ಕಪೂರ್ ಯಾವುದೇ ಸಿನಿಮಾಗಳಲ್ಲಿ ನಟಿಸಿದರೂ ಅವರಿಗೆ ಕಿಶೋರ್ ಕುಮಾರ್ ಹಾಡುಗಳು ಇರಲೇ ಬೇಕಿತ್ತು.
ಆದರೆ ಕಿಶೋರ್ ಕುಮಾರ್ ಆರ್.ಡಿ. ಬರ್ಮನ್ ಸಂಗೀತ ನಿರ್ದೇಶನದಲ್ಲಿ ಬಂದ ‘ಕಟಿ ಪತಂಗ್’ ಚಿತ್ರದ ‘ಯೇ ಜೋ ಮೊಹಬ್ಬತ್’ ‘ಅಮರ್ ಪ್ರೇಮ್’ ಚಿತ್ರದ ‘ಚಿಂಗಾರಿ ಕೋಯಿ ಬಡ್ಕೇ’ ಹಾಡುಗಳು ಯುವ ಪೀಳಿಗೆಯನ್ನು ಅತಿಯಾಗಿ ಇಷ್ಟಪಟ್ಟಿತು. ೧೯೬೯ರಲ್ಲಿ ಬಾಲಿವುಡ್ನಲ್ಲಿ ಬಿಡುಗಡೆಯಾದ ‘ಆರಾಧನಾ’ ಚಿತ್ರ ‘ಮೇರಿ ಸಪ್ನೋಕಿ ರಾಣಿ...’ ಮತ್ತು ‘ರೂಪ್ ತೇರಾ ಮಸ್ತಾನಾ’ ಹಾಡುಗಳು ಯುವಪೀಳಿಗೆಯಲ್ಲಿ ಕಿಶೋರ್ ಕುಮಾರ್ರ ಸ್ಥಾನವನ್ನು ಭದ್ರ ಮಾಡಿತು.
ಕಿಶೋರ್ ಕುಮಾರ್ ಭಾರತೀಯ ಸಿನಿಮಾ ಇಂಡಸ್ಟ್ರಿಗೆ ಹೊಸ ಶೈಲಿಯ ಯೋಡ್ಲಿಂಗ್ ಸಂಗೀತವನ್ನು ನೀಡುವ ಮೂಲಕ ಸಂಗೀತದಲ್ಲಿ ಬದಲಾವಣೆಗಳು ಅವಶ್ಯಕ ಎಂದು ತೋರಿಸಿ ಬಿಟ್ಟರು. ಅದರಲ್ಲೂ ‘ಮೇ ಹೂ ಜುಮುರೂ’ ಹಾಗೂ ‘ಹಾಲ್ ಕೈಸಾ ಹೇ ಜನಾಬ್ ಅಪ್ಕಾ’ ಹಾಡುಗಳು ಸಂಗೀತ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿತು.
ದೇಶದ ಬಹುತೇಕ ಭಾಷೆಗಳಲ್ಲಿ ಹಾಡಿರುವ ಕಿಶೋರ್ ಕುಮಾರ್ ೮ಕ್ಕೂ ಅದಿಕ ಫಿಲ್ಮ್-ರ್ ಅವಾರ್ಡ್ಗಳನ್ನು ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಪಡೆದುಕೊಂಡಿದ್ದರು. ಕಿಶೋರ್ ಕುಮಾರ್ ಸಿನಿಮಾ ಕ್ಷೇತ್ರದಲ್ಲಿ ಮಿಂಚುತ್ತಿದ್ದಂತೆ ವೈವಾಹಿಕ ಬದುಕಿನಲ್ಲಿ ಹಾದಿ ತಪ್ಪಿ ಬಿಟ್ಟಿದ್ದರು. ಕಿಶೋರ್ ಕುಮಾರ್ ನಾಲ್ವರನ್ನು ವಿವಾಹವಾಗಿದ್ದರು. ರೂಮಾ ಗುವಾ, ಮಧುಬಾಲ, ಯೋಗಿತಾ ಬಾಲಿ ಹಾಗೂ ಕೊನೆಯದಾಗಿ ಲೀನಾ ಚಂದ್ವಾರ್ಕರ್ ಕಿಶೋರ್ ಕುಮಾರ್ ಪತ್ನಿಯಾಗಿ ಸ್ಥಾನ ಪಡೆದುಕೊಂಡಿದ್ದರು. ಆರಂಭದ ಪತ್ನಿ ರೂಮಾರಿಗೆ ಅಮಿತ್ ಕುಮಾರ್ ಎಂಬ ಪುತ್ರನಿದ್ದಾನೆ. ಹಿನ್ನೆಲೆ ಗಾಯಕನಾಗಿ ಅಮಿತ್ ಕುಮಾರ್ ಬಹಳಷ್ಟು ಸಿನಿಮಾಗಳಲ್ಲಿ ಹಾಡಿದ್ದಾರೆ. ಲೀನಾ ಚಂದ್ವಾರ್ಕರ್ಗೆ ಸುಮಿತ್ ಕುಮಾರ್ ಎಂಬ ಪುತ್ರನಿದ್ದಾನೆ.
ಕಿಶೋರ್ ಕುಮಾರ್ ತನ್ನ ಬದುಕಿನ ಕೊನೆಯವರೆಗೂ ಸಂಗೀತ ಕ್ಷೇತ್ರವನ್ನು ಬಿಟ್ಟಿರಲಿಲ್ಲ. ಕೊನೆಗಾಲದಲ್ಲಿ ಸಿನಿಮಾಗಳನ್ನು ಬಿಟ್ಟು ವೇದಿಕೆಗಳಲ್ಲಿ ನಿಂತು ಹಾಡಲು ಆರಂಭ ಮಾಡಿದ್ದರು. ಯಾರಾದರೂ ಈ ವಿಚಾರದಲ್ಲಿ ಕಿಶೋರ್ ಬಳಿ ಪ್ರಶ್ನೆ ಕೇಳುತ್ತಿದ್ದಾಗ ‘ ಸ್ಟೇಜ್ ಶೋಗಳಿಂದ ಬಂದ ಹಣವನ್ನು ತೆರಿಗೆ ಕಟ್ಟಲು ಬಳಸುತ್ತಿದ್ದೇನೆ’ ಎನ್ನುತ್ತಿದ್ದರಂತೆ !! ಅದರಲ್ಲೂ ಸಿನಿಮಾಗಳಲ್ಲಿ ನಟಿಸುವಾಗಲೂ ನಿರ್ಮಾಪಕ ಸರಿಯಾಗಿ ಸಂಭಾವನೆ ಕೊಡದೇ ಹೋದರೆ ಅರ್ಧ ಮೇಕಪ್ ಮಾಡಿ ನಟನೆ ಮಾಡುತ್ತಿದ್ದರು ಎನ್ನುವ ವಿಚಾರ ಅವರ ಆಪ್ತ ವಲಯದಿಂದ ಹೊರಬರುತ್ತದೆ.
ಕಿಶೋರ್ ಕುಮಾರ್ ವ್ಯಕ್ತಿತ್ವನೂ ಬಹಳಷ್ಟು ವಿಚಿತ್ರವಾಗಿತ್ತು. ಕಿಶೋರ್ ತಮ್ಮ ಸುತ್ತಮುತ್ತಲಿರುವ ಮರಗಳ ಜತೆಯಲ್ಲಿ ಮಾತಿಗೆ ನಿಂತುಬಿಡುತ್ತಿದ್ದರು. ಮನೆಯಲ್ಲಿರುವ ಮರಗಳಿಗೂ ಒಂದೊಂದು ಹೆಸರುಗಳನ್ನು ಕೊಟ್ಟಿದ್ದರು. ಅದರ ಮೂಲಕವೇ ಮರಗಳ ಜತೆಯಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಕಿಶೋರ್ ಕುಮಾರ್ ಬದುಕಿನಲ್ಲೂ ಅಷ್ಟೇ ಮನರಂಜನೆ ನೀಡುವ ವ್ಯಕ್ತಿಯಾಗಿ ಎಲ್ಲರಿಗೂ ಕಾಣಿಸುತ್ತಿದ್ದರು. ಕಿಶೋರ್ ಕುಮಾರ್ ಕೊನೆಗಾಲದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಹೋದರೂ ಕೂಡ ಅವರ ಹಾಡುಗಳು ಇಂದಿಗೂ ಕಿಶೋರ್ ಅಮರ ಎನ್ನುತ್ತಿದೆ.

Friday, August 26, 2011

ಮಂಗಾಥ ಇದು ಅಜಿತ್ ಆಟ !


ತಮಿಳಿನ ಅಲ್ಟಿಮೇಟ್ ಸ್ಟಾರ್ ಅಜಿತ್ ಕುಮಾರ್ ಈ ಬಾರಿ ‘ಅಂದರ್ ಬಾಹರ್’ ಆಟ ಆಡುತ್ತಿದ್ದಾರೆ. ಅಂದಹಾಗೆ ಇದು ಅಜಿತ್ ಕುಮಾರ್ನ ೫೦ನೇ ಆಟ. ಕಾಲಿವುಡ್ನಲ್ಲಿ ಈ ಆಟ ಸಖತ್ ಆಗಿ ನಡೆಯುತ್ತಾ ಎನ್ನೋದು ಮಾತ್ರ ಪ್ರೇಕ್ಷಕ ಮಹಾಪ್ರಭು ಅನ್ಸರ್ ಕೊಡಬೇಕು.

ಗಣೇಶನ ಹಬ್ಬಕ್ಕೆ ಕಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ‘ಅಂದರ್ ಬಾಹರ್’ ಆಟ ಆರಂಭವಾಗಲಿದೆ ಎನ್ನೋದು ತಮಿಳಿನ ಚಿತ್ರ ನಿರ್ದೇಶಕ ವೆಂಕಟ್ ಪ್ರಭು ಅವರ ಮಾತು. ಅರೇ... ಇದೇನ್ ‘ಅಂದರ್ ಬಾಹರ್’ ಆಟ ಎನ್ನುವ ಮೊದಲು ಆ.೩೧ ರಂದು ಕ್ಲೌಡ್ ನೈನ್ ಮೂವೀಸ್ ಬ್ಯಾನರ್ನಡಿಯಲ್ಲಿ ‘ಮಂಗಾಥ’ ಸಿನಿಮಾ ಥಿಯೇಟರ್ಗಳಿಗೆ ಒಮ್ಮೆಲೆ ದಾಳಿ ಮಾಡಲಿದೆ. ಇದು ತಮಿಳಿನ ಅಲ್ಟಿಮೇಟ್ ಸ್ಟಾರ್ ನಟ ಅಜಿತ್ ಕುಮಾರ್ ನಟಿಸಿರುವ ೫೦ ನೇ ಚಿತ್ರ ಅನ್ನೋದು ಗೊತ್ತಿರಬೇಕು.
ಅಂದಹಾಗೆ ತಮಿಳಿನಲ್ಲಿ ಅಜಿತ್ ಸಿನಿಮಾ ಬಂದು ಬಹಳಷ್ಟು ದಿನಗಳೇ ಆದವು. ‘ಅಸಲ್’ ಈ ಹಿಂದಿನ ಚಿತ್ರ. ೨೦೧೦ ಪೆಬ್ರವರಿಯಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಒಂದರ್ಥದಲ್ಲಿ, ಅಲ್ಲಿಂದ ಇಲ್ಲಿವರೆಗೆ ಅಜಿತ್ ಕಾಣೆಯಾಗಿದ್ದರು! ಅದೇನೋ, ಪೆರಾರಿ ಕಾರ್ ರೇಸ್ ಮಾಡುತ್ತೇನೆ ಅಂತ ಹೇಳಿಕೊಂಡು ಹೋಗಿದ್ದ ಅಜಿತ್, ಈಗ ಮರಳಿ ಬಂದಿದ್ದಾರೆ. ಹಾಗೆ ಸುಮ್ಮನೇ ಬರುತ್ತಿಲ್ಲ ಅವರು. ಈ ಬಾರಿ ತಮ್ಮ ಅಭಿಮಾನಿಗಳಿಗೆ ಭೂರಿ ಭೋಜನ ಹೊತ್ತೇ ಬರುತ್ತಿದ್ದಾರೆ.
‘ಅಸಲ್’, ಅಜಿತ್ ಅವರ ೪೯ನೇ ಸಿನಿಮಾ. ಇದೀಗ ಅವರ ಅಭಿನಯದ ೫೦ನೇ ಸಿನಿಮಾ ಬಿಡುಗಡೆಗೆ
ಸಿದ್ಧವಾಗಿದೆ. ಅದರ ಹೆಸರು ಮಂಗಾಥ. ಹೀಗೆಂದರೆ, ತಮಿಳಿನಲ್ಲಿ ‘ಅಂದರ್ ಬಾಹರ್’ ಎಂದರ್ಥ. ಇನ್ನು
ಸಿಂಪಲ್ ಆಗಿ ಹೇಳಬೇಕೆಂದರೆ, ಜೂಜಾಟ ! ಶೀರ್ಷಿಕೆಯಲ್ಲೇ, ‘ಗೇಮ್’ ಇರುವುದರಿಂದ ಇಡೀ
ಸಿನಿಮಾ ಸಖತ್ ‘ಗೇಮ್ ಪ್ಲ್ಯಾನ್’ನಲ್ಲೇ ನಡೆದಿದ್ದು, ಸಿನಿಮಾ ಗೇಮ್ ಕೂಡ ಸೂಪರ್ ಆಗಿಯೇ ಇರಲಿದೆ
ಎಂದುಕೊಂಡರೆ ಅದು ಪ್ರೇಕ್ಷಕನ ತಪ್ಪಲ್ಲ ಬಿಡಿ.
‘ಮಂಗಾಥ’ ಬಹು ತಾರಾಗಣ ಹೊಂದಿರುವ ಚಿತ್ರ. ಅಲ್ಟಿಮೇಟ್ ಸ್ಟಾರ್ ಅಜಿತ್ ಕುಮಾರ್ ಅಲ್ಲದೇ , ಅರ್ಜುನ್ ಸರ್ಜಾ ಹಾಗೂ ತೆಲುಗಿನ ವೈಭವ್ ರೆಡ್ಡಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ತ್ರಿಷಾ ಕೃಷ್ಣನ್ ನಾಯಕಿ. ಕನ್ನಡದ ಲಕ್ಷ್ಮೀ ರೇ ಕೂಡ ಚಿತ್ರದಲ್ಲಿದ್ದಾರೆ. ಇತ್ತೀಚೆಗೆ ತಮಿಳಿನ ಕಮರ್ಷಿಯಲ್ ಚಿತ್ರಗಳ ತಯಾರಿಕೆಯಲ್ಲಿ ಬಹಳ ಮುಂದಿರುವ ದಯಾನಿದಿ ಅಳಗಿರಿಯ ಕ್ಲೌಡ್ ನೈನ್ ಮೂವೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದರಿಂದ ಪ್ರಚಾರದ ವಿಚಾರದಲ್ಲಿ ಚಿತ್ರ ಈಗಾಗಲೇ ದೊಡ್ಡ ಮಾರ್ಕೆಟ್ನ್ನು ಕಟ್ಟಿ ಕೊಡುವಲ್ಲಿ ಸಕ್ಸಸ್ ಕಂಡಿದೆ.
ಪವಿತ್ರ ರಂಜಾನ್ ಮತ್ತು ಗೌರಿ-ಗಣೇಶ ಹಬ್ಬವನ್ನು ಟಾರ್ಗೆಟ್ ಮಾಡಿಕೊಂಡು ಸಿನಿಮಾ ಬರುವುದರಿಂದ ಚಿತ್ರದ ಕುರಿತು ನಿರೀಕ್ಷೆಗಳು ಹೆಚ್ಚಾಗುತ್ತಿದೆ. ಯುವನ್ ಶಂಕರ್ ರಾಜಾ ಅವರಿಗೆ ಮತ್ತೆ ಮೂವರು ಸಂಗೀತ ನಿರ್ದೇಶಕರು ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವಲ್ಲಿ ಸಹಾಯ ಮಾಡುತ್ತಿದ್ದಾರಂತೆ. ಕಾರ್ತಿಕ್ ರಾಜಾ, ಭಾವತರಣಿ ಮತ್ತು ಪ್ರೇಮ್ಜಿ ಅವರೇನ್ ಆ ಮೂವರು.
ಟೋಟಲಿ ‘ಅಂದರ್ ಬಾಹರ್’ ಆಟ ಕಾಲಿವುಡ್ನಲ್ಲಿ ಭರ್ಜರಿಯಾಗಿ ನಡೆಯುತ್ತಾ ಎನ್ನೋದು ಮಾತ್ರ ಪ್ರೇಕ್ಷಕ ಪ್ರಭುವೇ ಅನ್ಸರ್ ಕೊಡಬೇಕು. ಅದರಲ್ಲೂ ತಮಿಳಿನ ಮತ್ತೊಬ್ಬ ಸ್ಟಾರ್ ನಟ ವಿಜಯ್ ಅವರ ೫೦ ನೇ ಚಿತ್ರ ‘ಸುರ’ ದೊಡ್ಡ ಮಟ್ಟದ ಯಶಸ್ಸು ಸಿಗದೇ ಕಾಲಿವುಡ್ನಲ್ಲಿ ಹೆಸರು ಉಳಿಸಿಕೊಂಡ ರೀತಿ ನೋಡುತ್ತಿದ್ದಾರೆ ‘ಮಂಗಾಥ’ ಚಿತ್ರದ ಗತಿಯೇನು ಎನ್ನೋದು ಪ್ರೇಕ್ಷಕನ ಮನದಲ್ಲಿ ಕಾಡದೇ ಇರಲಾರದು. ಏನೇ ಆದರೂ ಅಜಿತ್ ಕುಮಾರ್ ೫೦ನೇ ಚಿತ್ರ ಹಿಟ್ ಆದರೆ ಮುಂದಿನ ‘ಬಿಲ್ಲಾ-೨’ ಚಿತ್ರದ ಕುರಿತು ನಿರೀಕ್ಷೆಗಳು ಗರಿಕೆದರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಾಗಿಲ್ಲ ಎನ್ನಬಹುದು.

Thursday, August 25, 2011

ಸಾಂಗ್ ಆಫ್ ದಿ ಲಿಟಲ್ ರೋಡ್...ಪಥೇರ್ ಪಾಂಚಾಲಿ




ಅದೊಂದು ಕರಾಳ ರಾತ್ರಿ... ಹೊರಗೆ ಭಯಂಕರವಾದ ಸುಂಟರ ಗಾಳಿ... ರಭಸವಾಗಿ ಸುರಿಯುವ ಮಳೆ... ಪುಟ್ಟ ಹೆಂಚಿನ ಮನೆಯೊಳಗಿಂದ ಕೇಳುತ್ತಿದೆ ನರಳಾಟದ ದನಿ. ಕುದಿಯುವ ಜ್ವರದಲ್ಲಿ ಮಲಗಿದ್ದಾಳೆ ದುರ್ಗಾ. ತಾಯಿ ಸರ್ಬಜಯಾ ಮುಖದಲ್ಲಿ ಆತಂಕ. ಮನೆಯೊಳಗೆ ಬೇರಾರು ಇಲ್ಲ. ಉರಿಯುತ್ತಿರುವ ಪುಟ್ಟ ದೀಪ ಬೀಸುವ ಗಾಳಿಯೊಡನೆ ಹೋರಾಡುತ್ತಿದೆ. ಮನೆಯೊಳಗೆ ನುಗ್ಗುತ್ತಿರುವ ಮಳೆ ನೀರನ್ನು ತಡೆಯಲು ತಾಯಿ ಶತಪ್ರಯತ್ನ ನಡೆಸುತ್ತಿದ್ದಾಳೆ. ಸುರಿಯುವ ಮಳೆಯ ವೇಗದೊಡನೆ ಹೆಚ್ಚುತ್ತಿರುವ ಮಗಳ ನರಳಾಟಕ್ಕೆ ಆಕೆ ಅಸಹಾಯಕಳಾಗಿದ್ದಾಳೆ. ಒಂದೇ ಕ್ಷಣ ಮಳೆಯ ಆರ್ಭಟ ತಾರಕಕ್ಕೇರುತ್ತದೆ. ಉರಿಯುತ್ತಿದ್ದ ದೀಪ ಗಾಳಿಯ ಹೊಡೆತಕ್ಕೆ ನಂದಿ ಹೋಗುತ್ತದೆ. ದುರ್ಗಾ ತಾಯಿಯನ್ನು ಬಲವಾಗಿ ಅಪ್ಪಿ ಹಿಡಿಯುತ್ತಾಳೆ ..ಆಕೆಯ ನರಳಾಟ ನಿಂತು ಹೋಗುತ್ತದೆ. ಸರ್ಬಜಯಾ ದುರ್ಗಾಳ ಹಣೆಯ ಮೇಳೆ ಕೈಯ್ಯನ್ನಿಡುತ್ತಾಳೆ... ದುರ್ಗಾ ತಣ್ಣಗಾಗಿರುತ್ತಾಳೆ. ವೀಕ್ಷಕ ನಿಟ್ಟುಸಿರೊಂದನ್ನು ಬಿಡುತ್ತಾನೆ.
ಇಪ್ಪತ್ತೊಂದನೇ ಶತಮಾನದಲ್ಲಿ ಭಾರತೀಯ ಚಿತ್ರರಂಗಕ್ಕೆ ಅಂತರಾಷ್ಟ್ರೀಯ ಮನ್ನಣೆಯನ್ನು ತಂದುಕೊಟ್ಟ ಏಕೈಕ ಸಿನಿಮಾ ನಿರ್ದೇಶಕ ಸತ್ಯಜಿತ್ ರೇ . ಇವರ ನಿರ್ದೇಶನದ ಮೊದಲ ಬಂಗಾಲಿ ಚಿತ್ರ ಪಥೇರ್ ಪಾಂಚಾಲಿ ಭಾರತೀಯ ಚಿತ್ರರಂಗವನ್ನು ಜಗತ್ತಿಗೇ ಪರಿಚಯಿಸಿತು. ರೇ ನಿರ್ದೇಶನದ ಪಥೇರ್ ಪಂಚಾಲಿ, ಅಪರಾಜಿತೋ ಮತ್ತು ಅಪುರ್ ಸಂಸಾರ್ ಈ ಮೂರೂ ಚಿತ್ರಗಳು ’ಅಪ್ಪು ಟ್ರಿಲಾಜಿ’ ಎಂಬ ಹೆಸರಿನಡಿಯಲ್ಲಿ ಇಂದು ಜಾಗತಿಕ ಚಿತ್ರರಂಗದಲ್ಲಿ ಗುರುತಿಸಲ್ಪಡುತ್ತವೆ.
ಅಪ್ಪು ಟ್ರಿಲಾಜಿಯಲ್ಲಿರುವ ಎಲ್ಲಾ ಚಿತ್ರಗಳ ನಾಯಕ ಕೇವಲ ಒಬ್ಬ ವ್ಯಕ್ತಿ...ಆತನೇ ಅಪ್ಪು. ಅಪ್ಪು ಟ್ರಿಲಾಜಿ ಸಾಮಾನ್ಯ ವ್ಯಕ್ತಿಯ ಸಾಮಾನ್ಯ ಕಥೆ. ಅಪ್ಪುವಿನ ಜನನಕ್ಕೂ ಮುಂಚಿನಿಂದ ಪ್ರಾರಂಭವಾಗುವ ಚಿತ್ರ ಕೊನೆಗೊಳ್ಳುವುದು ಆತನ ಮತ್ತು ಆತನ ಮಗನ ಒಂದಾಗುವಿಕೆಯಿಂದ. ಈ ಎರಡು ಘಟನೆಗಳ ನಡುವೆ ಅಪ್ಪುವಿನ ಜೀವನವೇ ಅಡಗಿದೆ. ನೋವು, ನಲಿವು, ಅಸಹಾಯಕತೆ, ಅನಿರೀಕ್ಷಿತತೆ...ಹೀಗೆ ನೂರಾರು ಭಾವಗಳ ಮೇಳೈಸುವಿಕೆಯಿಂದಾಗಿ ಅಪ್ಪು ಟ್ರಿಲಾಜಿ ಇಂದಿಗೂ ಜೀವಂತವಾಗಿದೆ.
ಪಥೇರ್ ಪಾಂಚಾಲಿ ಅಪ್ಪು ಟ್ರಿಲಾಜಿ ಸರಣಿಯ ಮೊದಲ ಚಿತ್ರ. ಬಂಗಾಲೀ ಬ್ರಾಹ್ಮಣ ಕುಟುಂಬವೊಂದರ ಕಥಾಧಾರಿತ ಚಿತ್ರ ಇದು. ಈ ಚಿತ್ರದ ತಂದೆಯ ಪಾತ್ರಕ್ಕೆ ( ಹರಿಲಾಲ್) ಸಾಹಿತ್ಯದ ಗೀಳು. ಹೆಸರು ಗಳಿಸುವ ಆಸೆಯಲ್ಲಿ ಮನೆಯನ್ನೇ ಮರೆತವನಾತ. ಕಡುಬಡತನದಲ್ಲಿ ಸಂಸಾರ ನೌಕೆಯನ್ನು ಸಾಗಿಸಲು ಹರಸಾಹಸ ಪಡುವವಳು ತಾಯಿ ಸರ್ಬಜಯಾ. ವೃದ್ಧಾಪ್ಯದಲ್ಲೂ ಜೀವನೋತ್ಸಾಹವನ್ನು ಕಳೆದುಕೊಳ್ಳದೇ ಕುಟುಂಬದ ಎಲ್ಲಾ ವಿಚಾರಗಳಲ್ಲಿ ಮೂಗು ತುರಿಸಿ ಆಗಾಗ್ಗೆ ಸೊಸೆಯ ಕೋಪಕ್ಕೆ ತುತ್ತಾಗುವ ಅಜ್ಜಿ ಇಂದಿರ್. ಪ್ರಪಂಚದ ಗೊಡವೆ ಇಲ್ಲದೇ ಪ್ರತಿನಿತ್ಯವೂ ಬಾಲ್ಯದ ಸವಿಯನ್ನುಣ್ಣುವ ಮಗಳು ದುರ್ಗಾ...ಹೀಗೆ ಪಥೇರ್ ಪಾಂಚಾಲಿಯ ಕಥೆ ಸಾಗುತ್ತಿರುತ್ತದೆ...ಅಷ್ಟರಲ್ಲೇ ಚಿತ್ರಕ್ಕೆ ಹೊಸ ಪಾತ್ರವೊಂದರ ಪ್ರವೇಶವಾಗುತ್ತದೆ.
ಅದೇ ಅಪ್ಪುವಿನ ಜನನ.
ಮಗನ ಜನನದಿಂದ ಹರಿಲಾಲ್ ಬದಲಾಗುವುದಿಲ್ಲ. ಆತನ ಬೇಜವಾಬ್ಧಾರೀತನ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಅದೊಂದು ದಿನ ಏನನ್ನೋ ಅರಸುತ್ತಾ ಮನೆಯಿಂದ ಹೊರಟ ಆತ ಅದೆಷ್ಟೋ ತಿಂಗಳುಗಳು ಬಿಟ್ಟು ಮನೆಗೆ ಬಂದಾಗ ಮನೆ ತುಂಬಾ ಮೌನ. ಮಡದಿಯ ಕಣ್ಣುಗಳಲ್ಲಿ ಕಂಬನಿ...ಕಣ್ಣ ಮುಂದೆ ಓಡಾಡುತ್ತಿದ್ದ ದುರ್ಗಾ ಅಂದೇಕೋ ಆತನಿಗೆ ಕಾಣಿಸುವುದಿಲ್ಲ. ದುರ್ಗಾಳ ಸಾವು ಅಪ್ಪುವಿನ ಜೀವನದ ಮೊದಲ ಆಘಾತ. ಆಕೆ ಆತನ ಅಕ್ಕನಲ್ಲ ತಾಯಿಯಂತಿದ್ದವಳು. ಪ್ರತಿನಿತ್ಯ ಚಲಿಸುವ ರೈಲನ್ನು ಹಿಂಬಾಲಿಸುತ್ತಾ ಗದ್ದೆಗಳ ನಡುವೆ ತಾನು ದುರ್ಗಾ ಕೈ ಹಿಡಿದು ಓಡಿದ್ದು... ಕ್ಯಾಂಡೀ ಮಾಮನನ್ನು ಪೀಡಿಸಿ ಐಸ್ ಕ್ಯಾಂಡಿ ತಿಂದದ್ದು...ಹೊಲಗಳಲ್ಲಿ ಕಬ್ಬಿನ ಜಲ್ಲೆಯನ್ನು ಮೆದ್ದದ್ದು ಇವೆಲ್ಲವೂ ಅಪ್ಪುವಿನ ಜೀವನದಲ್ಲಿ ಎಂದೂ ಮಾಸದ ಸವಿ ನೆನಪುಗಳು...ನೆನಪಾದಾಗಲೆಲ್ಲಾ ಆತನ ಕಣ್ಣುಗಳು ಹನಿಗೂಡುತ್ತವೆ...ಏಕಾಂತ ಕಾಡುತ್ತದೆ.
ದುರ್ಗಾಳ ಸಾವು ಕಥೆಗೆ ಹೊಸ ತಿರುವೊಂದನ್ನು ನೀಡುತ್ತದೆ. ಹರಿಲಾಲ್ ಕುಡುಂಬ ಹಳ್ಳಿ ಬಿಟ್ಟು ಬನಾರಸಿಗೆ ತೆರಳುತ್ತದೆ. ಪಟ್ಟಣದ ಜೀವನ ಪ್ರಾರಂಭವಾಗುತ್ತದೆ. ಪಥೇರ್ ಪಾಂಚಾಲಿ ಕೊನೆಗೊಂಡರೂ ಅಪ್ಪುವಿನ ಕತೆ ಮುಂದುವರಿಯುತ್ತದೆ. ಅಪರಾಜಿತೋ ಅಪ್ಪುವಿನ ಕಿಶೋರ ಜೀವನವನ್ನು ಚಿತ್ರಿಸುತ್ತದೆ. ಪಟ್ಟಣಕ್ಕೆ ಬಂದ ಕೆಲವೇ ದಿನಗಳಲ್ಲಿ ಹರಿಲಾಲ್ ಅನಾರೋಗ್ಯದಿಂದ ಸಾವನ್ನಪ್ಪುತ್ತಾನೆ. ತಾಯಿ-ಮಗ ಭವಿಷ್ಯದ ಕುರಿತು ಚಿಂತಿತರಾಗುತ್ತಾರೆ. ಸರ್ಬಜಯಾ ಮಗನ ಶಿಕ್ಷಣಕ್ಕಾಗಿ ಕೂಲಿಯವಳಾಗಿ ಬಿಡುತ್ತಾಳೆ. ಅಪ್ಪು ಹೆಚ್ಚಿನ ಓದಿಗಾಗಿ ಕಲ್ಕತ್ತಾ ಸೇರುತ್ತಾನೆ. ತಾಯಿ ಒಂಟಿಯಾಗುತ್ತಾಲೆ. ಅನಾರೋಗ್ಯ ಆಕೆಯನ್ನು ಕಾಡುತ್ತಿರುತ್ತದೆ. ಅದೊಂದು ದಿನ ಮಗನ ಬರುವಿಕೆಯನ್ನು ನಿರೀಕ್ಷಿಸುತ್ತಾ ಸರ್ಬಜಯಾ ತಾನು ಕುಳಿತ ಮರದಡಿಯೇ ಪ್ರಾಣ ಬಿಡುತ್ತಾಳೆ. ಅಪ್ಪು ವಿರಾಗಿಯಾಗುತ್ತಾನೆ. ತಾಯಿಯ ಸಾವು ಆತನಿಗೆ ಪ್ರಪಂಚವನ್ನೇ ಮರೆಸುತ್ತದೆ.
ಅಪುರ್ ಸಂಸಾರ ಅಪ್ಪು ಟ್ರಿಲಾಜಿಯ ಕೊನೆಯ ಚಿತ್ರ. ಗೆಳೆಯನೊಬ್ಬನೇ ಈಗ ಅಪ್ಪುವಿನ ಪ್ರಪಂಚ. ಜೀವನದುದ್ದಕ್ಕೂ ತಾನು ಅನಾಥ ಎಂಬ ಭಾವನೆ ಅಪ್ಪುವಿನಲ್ಲಿ ಬೆಳೆಯುತ್ತಾ ಹೋಗುತ್ತದೆ. ಅದೊಂದು ದಿನ ಗೆಳೆಯನ ತಂಗಿಯ ಮದುವೆಗೆಂದು ಹೋದ ಅಪ್ಪು ವಿಯಾಟದಿಂದ ತಾನೇ ಮದುಮಗನಾಗುತ್ತಾನೆ. ವಿವಾಹವಾಗಿ ಸಂಸಾರಸ್ಥನಾಗುತ್ತಾನೆ. ಸಂಸಾರ ಸುಖದಲ್ಲಿ ತೇಲಾಡುತ್ತಾನೆ. ಅಷ್ಟರಲ್ಲೇ ಇನ್ನೊಂದು ಸಾವು...ಗರ್ಬಿಣಿಯಾಗಿದ್ದ ಮಡದಿ ಗಂಡು ಮಗುವಿಗೆ ಜನ್ಮವಿತ್ತು ಕಣಚ್ಚುತ್ತಾಳೆ.
ಅಪ್ಪು ಸೋತು ಹೋಗುತ್ತಾನೆ. ಸಾವುಗಳ ನೋವಿನಿಂದ ತಲ್ಲಣಿಸುತ್ತಾನೆ. ಸಂಬಂಧಗಳೇ ದುಖಃಕ್ಕೆ ಕಾರಣವೆಂದು ಎಲ್ಲಾ ಸಂಬಂಧಗಳನ್ನು ಕಳಚಿಕೊಳ್ಳಲು ಯತ್ನಿಸುತ್ತಾನೆ. ತನ್ನ ನವಜಾತ ಶಿಶುವಿನ ಮುಖವನ್ನೂ ನೋಡದೇ ಲೋಕ ಪರ್ಯಟನೆಗೆ ಹೊರಡುತ್ತಾನೆ. ಚಿತ್ರ ಕೊನೆ ತಲುಪುತ್ತಿದ್ದಂತೇ ಒಂಟಿತನ ಆತನನ್ನು ಕಾಡುತ್ತದೆ. ರಕ್ತ ಸಂಬಂಧದ ಸೆಳೆತ ಹೆಚ್ಚಾಗುತ್ತದೆ. ಅಪ್ಪು ಹಾಗೂ ಆತನ ಮಗ ಒಂದಾಗುತ್ತಾರೆ. ಅಪ್ಪುವಿನ ನವಜೀವನಕ್ಕೆ ನಾಂದಿ ಹಾಡುತ್ತಾ ಅಪ್ಪು ಟ್ರಿಲಾಜಿ ಮುಕ್ತಾಯಗೊಳ್ಳುತ್ತದೆ.
ಅಪ್ಪು ಟ್ರಿಲಾಜಿಯ ಮೂರು ಚಿತ್ರಗಳಲ್ಲಿ ಪಥೇರ್ ಪಾಂಚಾಲಿಯನ್ನು ಅತ್ಯತ್ತಮ ಚಿತ್ರವೆಂದು ಪರಿಗಣಿಸಲಾಗುತ್ತದೆ. ಇಪ್ಪತ್ತರ ದಶಕದಲ್ಲಿದ್ದ ಬಂಗಾಲದ ಗ್ರಾಮೀಣ ಜೀವನವನ್ನು ಚಿತ್ರಿಸುವ ಈ ಚಿತ್ರ ಭಾವನಾತ್ಮಕವಾಗಿ ವೀಕ್ಷಕರನ್ನು ಸೆರೆ ಹಿಡಿಯುತ್ತದೆ. ಮಾನವ ಸಂಬಂಧಗಳ ವಿಭಿನ್ನ ತಿರುವುಗಳನ್ನು ಅವರ ಮುಂದಿಡುವ ಮೂಲಕ ಚಿಂತನೆಗೆ ಎಡೆಮಾಡಿ ಕೊಡುತ್ತದೆ. ಚಿತ್ರದುದ್ದಕ್ಕೂ ರವಿಶಂಕರ್ ಅವರು ನೀಡಿದ ಅದ್ಭತ ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಿದೆ. ಸುಬ್ರಾತ ಮಿತ್ರಾ ಅವರ ಕ್ಯಾಮರಾವರ್ಕ್ನಲ್ಲಿ ಮೂಡಿಬಂದ ಚಿತ್ರದ ಎಲ್ಲಾ ಶಾಟ್ಗಳು ಕಲಾತ್ಮಕವಾಗಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾಗಿವೆ.

ಸತ್ಯಜಿತ್ ರೇ...
ಸಾಹಿತ್ಯ ಪ್ರಿಯರಾದ ಸತ್ಯಜಿತ್ ರೇ ಭಿಭೂತೀ ಭೂಷಣ ಬಂಧೋಪಾಧ್ಯಾಯರ ಕಾದಂಬರಿಯೊಂದರಿಂದ ಪ್ರಭಾವಿತರಾಗಿ ತಮ್ಮ ಮೊದಲ ಚಿತ್ರ ಪಥೇರ್ ಪಾಂಚಾಲಿಯನ್ನು ನಿರ್ದೇಶಿಸಿದ್ದರು. ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಯಿತು. ರೇ ತಮ್ಮ ನಿರ್ದೇಶನವನ್ನು ಮುಂದುವರಿಸಿದರು. ಅಪ್ಪು ಟ್ರಿಲಾಜಿಯ ಬಳಿಕ ಚಾರುಲತಾ, ಜಲ್ಸಾಘರ್, ದೇವಿ ..ಹೀಗೆ ಒಂದರ ಮೇಲೊಂದು ಯಶಸ್ವೀ ಚಿತ್ರಗಳನ್ನು ನೀರುತ್ತಾ ಬಂದರು. ಚಿತ್ರಗಳ ಜತೆಗೆ ಡಾಕ್ಯೂಮೆಂಟರಿಗಳನ್ನು ನಿರ್ದೇಶಿಸಿದರು. ಪ್ರತಿಯೊಂದರಲ್ಲೂ ತಮ್ಮದೇ ಆದ ಭಿನ್ನತೆಯನ್ನು ಕಾಯ್ದುಕೊಂಡರು. ಪಾಶ್ಚಾತ್ಯ ನಿಯೋರಿಯಲಿಸ್ಟಿಕ್ ಚಿತ್ರಗಳಿಂದ ಅತಿಯಾಗಿ ಪ್ರಭಾವಿತರಾದ ರೇ ತಮ್ಮ ಚಿತ್ರಗಳಲ್ಲೂ ಮಧ್ಯಮ ವರ್ಗದ ಜೀವನವನ್ನು ಬಿಂಬಿಸತೊಡಗಿದರು. ಆ ಮೂಲಕ ಭಾರತದಲ್ಲೂ ನಿಯೋ ರಿಯಲಿಸ್ಟಿಕ್ ಸಂಪ್ರದಾಯವನ್ನು ಹುಟ್ಟು ಹಾಕಿದರು.
ರೇ ನಿರ್ದೇಶನದ ಚಿತ್ರಗಳಲ್ಲಿ ಮಾನವೀಯ ಸಂಬಂಧಗಳಿಗೆ ಎಲ್ಲಿಲ್ಲದ ಪ್ರಾಶಸ್ತ್ಯ. ನೈಜ ಜೀವನವಷ್ಟೇ ಅವರ ಚಿತ್ರದ ಕಥಾವಸ್ತು. ಇವರ ಚಿತ್ರಗಳಲ್ಲಿ ಸಾವು ಪ್ರತಿಯೊಬ್ಬರಿಗೂ ಎದುರಾಗುವ ಸಹಜ ಕ್ರಿಯೆ. ಆಧುನಿಕ ಚಿತ್ರಗಳಲ್ಲಿ ಕಾಣಸಿಗುವ ಸಾವಿನ ಭೀಕರತೆ ಇವರ ಚಿತ್ರಗಳಲ್ಲಿ ಹುಡುಕಿದರೂ ಕಾಣಿಸುವುದಿಲ್ಲ. ಇವರ ಒಂದೊಂದು ಚಿತ್ರಗಳಲ್ಲೂ ಜೀವನದ ಒಂದೊಂದು ಮುಖದ ಪರಿಚಯ ವೀಕ್ಷಕನಿಗಾಗುತ್ತದೆ. ರೇ ಚಿತ್ರಗಳ ಕಥಾವಸ್ತು ಎಷ್ಟು ನೈಜವೋ ಅಷ್ಟೇ ನೈಜ ಇವರ ಸಿನಿಮ್ಯಾಟಿಕ ಟೆಕ್ನೀಕ್. ಇವರ ಚಿತ್ರಗಳಲ್ಲಿ ಕಾಣ ಸಿಗುವ ಚಲಿಸುವ ರೈಲು, ಓಡಾಡುವ ಮೋಡಗಳು, ಸುರಿಯುವ ಮಳೆ ಎಲ್ಲವೂ ನೈಜ. ಕೃತಕ ಶಾಟ್ಗಳಿಗೆ ರೇ ಚಿತ್ರಗಳಲ್ಲಿ ಕಡಿಮೆ ಪ್ರಾಧಾನ್ಯತೆ.
ಸಾಂಕೇತಿಕವಾಗಿ ವಿಷಯಗಳನ್ನು ಕಮ್ಯೂನಿಕೇಟ್ ಮಾಡುವ ಪಾಶ್ಚಾತ್ಯರ ನಿರ್ದೇಶನ ಶೈಲಿಯನ್ನು ರೇ ತಮ್ಮ ಚಿತ್ರಗಳಲ್ಲೂ ಅಳವಡಿಸಿಕೊಂಡಿದ್ದರು. ಇವರ ಚಿತ್ರಗಳಲ್ಲಿ ಮಳೆ ಸುರಿಯುತ್ತಿದೆ ಎಂದರೇ ಪ್ರೇಕ್ಷಕರಿಗೆ ಮುಂದೇನಾಗುತ್ತದೋ ಎಂಬ ಆತಂಕ. ರೇ ಚಿತ್ರಗಳಲ್ಲಿ ಮಳೆ ಟ್ರಾಜಿಡಿಯ ಸಂಕೇತ. ಪಥೇರ್ ಪಾಂಚಾಲಿಯಲ್ಲಿ ರೇ ಸಾವನ್ನು ಸೂಚಿಸುವ ಸಂಕೇತವಾಗಿ ಮಳೆಯನ್ನು ಬಳಸಿರುವ ಪರಿ ಅದ್ಭುತ. ಅನಿರೀಕ್ಷಿತ ಆಘಾತಗಳು ರೇ ಚಿತ್ರಗಳ ಸ್ಪೆಷಾಲಿಟಿ. ಎಷ್ಟೇ ಕಷ್ಟವಾದರೂ ಸರಿ ಪಾತ್ರಕ್ಕೆ ನ್ಯಾಯ ಕೊಡುವವರು ಸಿಕ್ಕುವವರೆಗೆ ಇವರು ತಮ್ಮ ಹುಡುಕಾಟವನ್ನು ನಿಲ್ಲಿಸುತ್ತಿರಲಿಲ್ಲ. ಪಥೇರ್ ಪಾಂಚಾಲಿ ಚಿತ್ರದಲ್ಲಿನ ಇಂದಿರ್ ಎಂಬ ಪಾತ್ರದ ನಿರ್ವಹಣೆಗಾಗಿ ನೂರರ ಸಮೀಪದ ಬಂಗಾಳಿ ನಾಟಕ ಕಲಾವಿದೆ ಚುನ್ನಿಬಾಲಾ ದೇವಿಗಾಗಿ ರೇ ಹಲವಾರು ತಿಂಗಳುಗಳ ಕಾಲ ಚಿತ್ರವನ್ನು ಸ್ಥಗಿತಗೊಳಿಸಿ ಹುಡುಕಾಟ ನಡೆಸಿದ್ದರು ಎಂದರೆ ಆಶ್ಚರ್ಯವೆನಿಸಬಹುದು.
ಸತ್ಯಜಿತ್ ರೇ ಚಿತ್ರಗಳಲ್ಲಿ ಬಳಸಲ್ಪಡುವ ಹಾಡುಗಳ ತುಂಬಾ ಕಥೆಯ ಭಾವಗಳೇ ವ್ಯಕ್ತವಾಗುತ್ತವೆ. ಕ್ಲಾಸಿಕಲ್ ಇನ್ಸ್ಟ್ರುಮೆಂಟಲ್ ಸಂಗೀತವನ್ನಷ್ಟೇ ತಮ್ಮ ಚಿತ್ರಗಳ ಹಿನ್ನೆಲೆಗೆ ಉಪಯೋಗಿಸುತ್ತಿದ್ದ ರೇ ಚಿತ್ರದ ಶೂಟಿಂಗ್ ಪ್ರಾರಂಭಿಸುವ ಬಹಳ ಮುಂಚಿತವಾಗಿ ಅದರ ಸಂಗೀತದ ಬಗ್ಗೆ ಯೋಚಿಸುತ್ತಿದ್ದರು. ಒಬ್ಬ ಉತ್ತಮ ಚಿತ್ರ ನಿರ್ದೇಶಕನ ಜತೆಜತೆಗೇ ರೇ ಒಬ್ಬ ಅತ್ಯತ್ತಮ ವಿಮರ್ಶಕ ಹಾಗೂ ಸಿನಿಮಾಟೊಗ್ರಾಫರ್ ಕೂಡಾ ಆಗಿದ್ದರು. ಪಾಶ್ಚಾತ್ಯ ಸಿನಿಮಾವನ್ನು ಭಾರತೀಯರಿಗೆ ಪರಿಚಯಿಸುವ ನಿಟ್ಟಿನಲ್ಲಿ ೧೯೪೭ರಲ್ಲಿ ಕಲ್ಕತ್ತಾ ಫಿಲ್ಮ್ ಸೊಸೈಟಿಯನ್ನು ಸ್ಥಾಪಿಸಿದರು. ಆ ಮೂಲಕ ಸಿನಿಮಾ ಅಧ್ಯಯನ ಯೋಗ್ಯ ವಿಚಾರವೆಂದು ಜನಸಾಮಾನ್ಯರಿಗೆ ಮನದಟ್ಟು ಮಾಡಿಸುವ ಪ್ರಯತ್ನ ಮಾಡಿದರು.
ಮೂವತ್ತೆರಡು ನಾಷನಲ್ ಫಿಲ್ಮ್ ಅವಾರ್ಡ್ಗಳು ಹಾಗೂ ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಮೇಲು ರೇ ಅವರ ಸಿನಿಮಾ ನಿರ್ದೇಶನದ ತೆವಲು ಕಡಿಮೆಯಾಗಲಿಲ್ಲ. ಮನಸ್ಸು ಯೌವ್ವನದಲ್ಲಿದ್ದರೂ ದೇಹ ಮುಪ್ಪಾಗಿತ್ತು. ಅನಾರೋಗ್ಯದ ನಡುವೆಯೇ ’ಘರ್ ಬೈರೆ’ ಚಿತ್ರವನ್ನು ನಿರ್ದೇಶಿಸಿದರು. ಸಾವಿಗೆ ಕೆಲವೇ ವಾರಗಳ ಮುಂಚೆ ಶ್ರೇಷ್ಟ ಗೌರವ ಆಸ್ಕರ್ ಪ್ರಶಸ್ತಿಯನ್ನು ಪಡೆದ ರೇ ತಮ್ಮ ಎಪ್ಪತ್ತನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು.
ಇದೇ ಆಗಸ್ಟ್ ೨೬ಕ್ಕೆ ಸತ್ಯಜಿತ್ ರೇ ನಿರ್ದೇಶನದ ಮೊದಲ ಚಿತ್ರ ಪಥೇರ್ ಪಾಂಚಾಲಿ ಬಿಡುಗಡೆಗೊಂಡು ಐವತ್ತಾರು ವರುಷಗಳು ತುಂಬುತ್ತವೆ. ಕಮರ್ಶಿಯಲ್ ಚಿತ್ರಗಳ ಅಬ್ಬರದ ನಡುವೆ ಇಂದು ಹಳೆಯ ಕಲಾತ್ಮಕ ಚಿತ್ರಗಳ ನೆನಪುಗಳು ಮಸುಕಾಗಿ ಬಿಟ್ಟಿವೆ. ಕಲಾತ್ಮಕ ಚಿತ್ರಗಳನ್ನು ಆಸ್ವಾದಿಸುವ ಮನಸ್ಸುಗಳು ಕಡಿಮೆಯಾಗುತ್ತಿವೆ ಎಂಬ ಕೂಗು ಇಂದು ಎಲ್ಲೆಲ್ಲೂ ಕೇಳಿ ಬರುತ್ತಿದೆ. ನಿರ್ದೇಶಕರೂ ಹೆಚ್ಚಿನ ಸಂಖ್ಯೆಯಲ್ಲಿ ಕಮರ್ಶಿಯಲ್ ಚಿತ್ರಗಳತ್ತ ಒಲವು ತೋರುತ್ತಿದ್ದಾರೆ. ಎಲ್ಲೋ ಅಲ್ಲೊಂದು ಇಲ್ಲೊಂದು ಕಲಾತ್ಮಕ ಚಿತ್ರಗಳು ಚಿತ್ರರಂಗದಲ್ಲಿ ಮಿಂಚಿ ಮರೆಯಾಗುತ್ತಿವೆ. ಯುವನಜತೆಯಲ್ಲಿ ಕಲಾತ್ಮಕ ಚಿತ್ರಗಳ ಕುರಿತು ಅರಿವು ಮೂಡಬೇಕಾದಲ್ಲಿ ಇಂತಹ ಅರ್ಥಪೂರ್ಣ ಚಿತ್ರಗಳನ್ನೊಮ್ಮೆ ಮೆಲುಕು ಹಾಕುವ ಕೆಲಸವನ್ನು ನಾವೆಲ್ಲರೂ ಮಾಡಬೇಕಾಗಿದೆ.

* ಅಕ್ಷತಾ ಭಟ್. ಸಿ.ಎಚ್.
( ನಗರದ ಖಾಸಗಿ ಕಾಲೇಜುವೊಂದರಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿಯಾಗಿ ಅಕ್ಷತಾ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಜತೆಯಲ್ಲಿ ಹಳೆಯ ಸಿನಿಮಾಗಳನ್ನು ನೋಡಿ ಬರೆಯವುದು ಅವರ ನೆಚ್ಚಿನ ಆಸಕ್ತಿ ಕ್ಷೇತ್ರವಾಗಿದೆ. ‘ಪಥೇರ್ ಪಾಂಚಾಲಿ’ ಸಿನಿಮಾ ಬಂದು ಆ.೨೬ರಂದು ಬರೋಬರಿ ೫೬ ವರ್ಷಗಳು ಸಲ್ಲುತ್ತಿದೆ. ಈ ನೆಪದಲ್ಲಿ ಚಿತ್ರ, ನಿರ್ದೇಶಕನ ಸುತ್ತ ಅಕ್ಷತಾ ಬರೆದುಕೊಂಡಿದ್ದಾರೆ)

ಶಿಲ್ಪಾ ಶೆಟ್ಟಿಯ ಗುಡ್ ನ್ಯೂಸ್ !



‘ಮದುವೆ ಆಗಿ ಇಷ್ಟು ದಿನ ಆಯ್ತು, ಏನು ಗುಡ್ ನ್ಯೂಸ್ ಇಲ್ವಾ? ...’ಅಂತಾ ಕುಡ್ಲದ ಪೊಣ್ಣು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯಲ್ಲಿ ಯಾರೆಲ್ಲ ಪ್ರಶ್ನೆ ಕೇಳುತ್ತಿದ್ದಾರೋ ಅವರಿಗೆಲ್ಲ ಶಿಲ್ಪಾ ಶೆಟ್ಟಿ ಗುಡ್ ನ್ಯೂಸ್ ಬಿಟ್ಟು ಕೊಟ್ಟಿದ್ದಾರೆ. ಅದೇನ್ ನ್ಯೂಸ್ ಅಂತೀರಾ.. ಮುಂದೆ ಓದಿ...


‘ಮದುವೆ ಆಗಿ ಇಷ್ಟು ದಿನ ಆಯ್ತು, ಏನು ಗುಡ್ ನ್ಯೂಸ್ ಇಲ್ವಾ? ...’ ಅಂತಾ ಕುಡ್ಲದ ಪೊಣ್ಣು( ಕರಾವಳಿಯ ಹುಡುಗಿ) ಶಿಲ್ಪಾ ಶೆಟ್ಟಿ ಹೋದ, ಬಂದ ಕಡೆಗಳಲ್ಲೆಲ್ಲಾ ಇಂಥದ್ದೊಂದು ಪ್ರಶ್ನೆ ಎದ್ದು ನಿಲ್ಲುತ್ತದೆಯಂತೆ. ಶಿಲ್ಪಾಳಿಗಂತೂ ಈ ಪ್ರಶ್ನೆಗಳಿಗೆ ಅನ್ಸರ್ ಕೊಟ್ಟು ಕೊಟ್ಟು ಸಾಕೋ ಸಾಕಾಗಿ ಹೋಗಿದೆ. ಅದರಲ್ಲೂ ಮಾಧ್ಯಮಗಳು ಇದೇ ವಿಚಾರದ ಮೇಲೆ ಮತ್ತೆ ಮತ್ತೆ ಕಟುಕಿದಾಗ ಮಾತ್ರ ಶಿಲ್ಪಾ ಕಂಗಾಲಾಗಿ ಹೋಗುತ್ತಾರಂತೆ ! ಆದರೆ, ಈಗ ಶಿಲ್ಪಾ ಅದೆಲ್ಲವನ್ನೂ ತಲೆಯಿಂದ ಹೊರಹಾಕಿ ತನ್ನ ಚಿತ್ರಗಳ ಕಡೆಗೆ ಗಮನ ಕೊಡುತ್ತಿದ್ದಾರೆ ಎಂದು ಟ್ವಿಟ್ಟರ್ನಲ್ಲಿ ಶಿಲ್ಪಾ ಟ್ಟಿಟ್ ಮಾಡಿದ್ದಾರೆ.
ಆದರೆ ಮಾಧ್ಯಮವೊಂದರಲ್ಲಿ ಶಿಲ್ಪಾ ಶೆಟ್ಟಿ ನೀಡಿದ ಸಂದರ್ಶನದಲ್ಲಿ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎನ್ನುವ ಹೇಳಿಕೆಯನ್ನು ಕೊಟ್ಟು ದಂಗು ಮೂಡಿಸಿದ್ದಾರೆ. ಅರೇ... ಮೊದಲ ಗುಡ್ ನ್ಯೂಸ್ ಹೇಳಿದ್ದು, ಕೇಳಿಲ್ಲ. ಈಗ ಮೂರನೇ ಗುಡ್ ನ್ಯೂಸ್ ಯಾವುದಪ್ಪಾ ಅಂತಾ ಕೇಳಿದರೆ. ಶಿಲ್ಪಾರ ನೆಚ್ಚಿನ ಹೆಣ್ಣು ನಾಯಿ ಎರಡು ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ ! ಈ ಎರಡು ಮುದ್ದಾದ ಮರಿಗಳು ತನ್ನದು ಎಂದು ಉದಾರತೆ ತೋರಿಸಿದ್ದಾರೆ.
ಅಂದಹಾಗೆ ಶಿಲ್ಪಾ ಮತ್ತು ತಾಯಿ ಸುನಂದಾ ಶೆಟ್ಟಿ ಜತೆಗೂಡಿ ಹೊಸ ಪ್ರಾಡ್ರಕ್ಷನ್ ಕಂಪನಿಯೊಂದನ್ನು ಹುಟ್ಟು ಹಾಕುತ್ತಿದ್ದಾರೆ. ಇದೇ ಶಿಲ್ಪಾರ ಮೂರನೇ ಗುಡ್ ನ್ಯೂಸ್ ಕಮ್ ಮೂರನೇ ಮಗುವಂತೆ ! ಇಂಡೋ- ಜಪಾನ್ ಬ್ಯಾನರ್ನಡಿಯಲ್ಲಿ ನಿರ್ಮಾಣವಾಗುತ್ತಿರುವ ‘ದೀ ಡಿಸೈಯರ್: ಎ ಜರ್ನಿ ಆಫ್ ದೀ ವುಮನ್ ’ಎನ್ನುವ ಚಿತ್ರ ಈಗಾಗಲೇ ಹಲವು ಫಿಲ್ಮ್ ಫೆಸ್ಟಿವಲ್ಗಳಿಗೆ ನಾಮಂಕಿತಗೊಂಡಿದೆ. ೯೫ ನಿಮಿಷಗಳಿಗೆ ಇಳಿಸಿರುವ ಈ ಚಿತ್ರದಲ್ಲಿ ನಾಟ್ಯಗಾರ್ತಿಯೊಬ್ಬರ ಸುತ್ತ ಹಣೆದ ಕಥೆಯಾಗಿದ್ದು ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಖುದ್ದು ಶಿಲ್ಪಾ ಶೆಟ್ಟಿ ತಾಯಿ ಸುನಂದಾ ಶೆಟ್ಟಿ ವಹಿಸಿಕೊಂಡಿದ್ದಾರೆ ಎನ್ನುವ ಮಾಹಿತಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಇನ್ನು ಕೆಲವೇ ದಿನಗಳಲ್ಲಿ ಈ ಪ್ರಾಡಕ್ಷನ್ ಕಂಪನಿಯ ಕೆಲಸಗಳು ಆರಂಭವಾಗಲಿದೆ. ಇದರ ಜತೆಯಲ್ಲಿ ಖಾಸಗಿ ಟಿವಿ ವಾಹಿನಿಗಳಿಗೆ ಈ ಕಂಪನಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಿದೆ. ಈ ಕಂಪನಿ ಹುಟ್ಟುವುದಕ್ಕೆ ಕಾಯುತ್ತಿದ್ದಾರೆ ಶಿಲ್ಪಾ. ಅದೂ ಆದರೆ, ಶಿಲ್ಪಾ ಮೂರು ಮಕ್ಕಳ ತಾಯಿಯಾದಂತೆ. ಬರೀ ಬೇರೆಯವರ ಮಕ್ಕಳ ಬಗ್ಗೆ ತಲೆ ಕರೆದುಕೊಂಡರೇ ಸಾಕೇ..? ನಮ್ಮ ಮಗು ಯಾವಾಗ ಎಂದು ಶಿಲ್ಪಾರ ಪತಿ ರಾಜ್ ಕುಂದ್ರಾ ಸಿಟ್ಟಾಗಿ ಕೇಳಿದ್ರೂ ತಪ್ಪಿಲ್ಲ ಅಲ್ವಾ..?
ಈ ಎಲ್ಲ ವಿಷ್ಯಾಗಳನ್ನು ಕೇಳುತ್ತಾ ಇದ್ರೆ, ಇದೇ ವರ್ಷದ ಮಾರ್ಚ್ ತಿಂಗಳ ಕೊನೆಯಲ್ಲಿ ಕಾರ್ಕಳದ ಗುತ್ತಿನ ನಾಗಬನದಲ್ಲಿ ಕರಾವಳಿಯ ಪೊಣ್ಣು ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಜತೆ ಸೇರಿಕೊಂಡು ನಾಗಬನದ ಸುತ್ತ ಬರೀ ಕಾಲಲ್ಲಿ ಪ್ರದರ್ಶನ ಹಾಕಿ ಬೇಡಿದ ಪ್ರಾರ್ಥನೆಯಂತೂ ನಾಗ ಲೋಕಕ್ಕೆ ಮುಟ್ಟಿರಬಹುದು ಎಂದು ಕುಡ್ಲ ಪೇಟೆ ಮೂಲೆಯಲ್ಲಿ ನಿಂತು ಎಲೆ ಅಡಕೆ ಜಗಿಯುವ ಹಿರಿಯರು ವಟಗುಟ್ಟುತ್ತಿದ್ದಾರೆ. ಅದೇನ್ ಇರಲಿ ಈ ಮೂರು ಗುಡ್ ನ್ಯೂಸ್ಗಳನ್ನು ಬಿಟ್ಟು ನಾಲ್ಕನೇ ಗುಡ್ ನ್ಯೂಸ್ ಯಾವಾಗ ಅಂತಾ ಶಿಲ್ಪಾರಲ್ಲಿ ಕೇಳಲೇ ಬೇಕು. ಈ ಗುಡ್ ನ್ಯೂಸ್ ಬೇರೆ ನ್ಯೂಸ್ಗಳ ಜತೆಯಲ್ಲಿ ಮಿಕ್ಸ್ ಆಫ್ ಹಾಗದಿದ್ದಾರೇ ಸಾಕು ಅಲ್ವಾ..?

ಬಾಲ್ಡ್ ಬ್ಯೂಟಿ ಶಿಲ್ಪಾ
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಯಶ್ರಾಜ್ ಬ್ಯಾನರ್ನ ‘ದೋಸ್ತಾನಾ’ ಚಿತ್ರದ ಐಟಂ ಸಾಂಗ್ನ ನಂತರ ‘ದೀ ಡಿಸೈಯರ್’ ಚಿತ್ರದಲ್ಲಿ ಸಂಪೂರ್ಣವಾಗಿ ಮುಳುಗಿದ್ದರು. ಭಾರತೀಯ ಕಲೆ, ಸಂಸ್ಕೃತಿ, ನೃತ್ಯ ಮೊದಲಾದ ವಿಚಾರಗಳ ಸುತ್ತ ಗೌತಮಿ ಎಂಬ ನಾಟ್ಯಗಾರ್ತಿ ಚೀನಾದ ವ್ಯಕ್ತಿಯೊಬ್ಬನನ್ನು ಪ್ರೀತಿಸುವ ಕಥಾ ಹಂದರವನ್ನು ಚಿತ್ರ ಹೊಂದಿದೆ. ಚಿತ್ರದ ಕೇಂದ್ರ ಬಿಂದುವಿನಲ್ಲಿ ಶಿಲ್ಪಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಕೂದಲು ಕಳೆದುಕೊಂಡು ಬಾಲ್ಡ್ಯಾಗಿ ಶಿಲ್ಪಾ ನಟಿಸುವ ಮೂಲಕ ಬಾಲಿವುಡ್ನಲ್ಲಿ ಹೊಸ ಗೆಟಪ್ಗೆ ಶಿಲ್ಪಾ ನಾಂದಿ ಹಾಡಿದ್ದಾರೆ. ಎಲ್ಲವೂ ಬಾಲಿವುಡ್ನಲ್ಲಿ ಉಳಿಯುವ ಕಸರತ್ತು ಎಂದು ಬಣ್ಣದ ನಗರಿಯ ಪಂಡಿತರ ಮಾತು.

Wednesday, August 24, 2011

ವಾಸಿಂ ಅಕ್ರಂ ಮತ್ತೆ ಬೋಲ್ಡ್ !


ಶಾರೂಕ್ ಮಾಲೀಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲಿಂಗ್ ಕೋಚ್ ಆಗಿ ವಾಸಿಂ ಅಕ್ರಂ ಭಾರತಕ್ಕೆ ಬಂದಿದ್ದಾಗ, ಪಾಕಿಸ್ತಾನದ ಸೂಪರ್ ಮೊಡೆಲ್ ಹಮೈಮಾ ಮಲ್ಲಿಕ್ ಕೂಡ ಜತೆಯಲ್ಲಿದ್ದರಂತೆ ! ಅಂದಹಾಗೆ ವಾಸಿಂ ಆಂಡ್ ಮಲ್ಲಿಕಾ ಕತೆ ಏನ್ ಗೊತ್ತಾ ..?

ವಾಸಿಂ ಅಕ್ರಂ. ಈ ಹೆಸರು ಕ್ರಿಕೆಟ್ ನೋಡುವ ಬಹಳಷ್ಟು ಮಂದಿಗೆ ಬಹಳ ಹತ್ತಿರದಿಂದ ಗೊತ್ತಿರಬಹುದು. ವಾಸಿಂ ಅಕ್ರಂ ಬೌಲಿಂಗ್ ಮಾಡ್ತಾರೆ ಎಂದಾದರೆ ಬ್ಯಾಟ್ಸ್ಮನ್ಗಳ ಮನದ ಮೂಲೆಯಲ್ಲಿ ಭಯದ ನೆರಳು ಭೂತದಂತೆ ಕಾಡುತ್ತದೆ. ಒಂದ್ ಸಾರಿ ವಾಸಿಂ ಓವರ್ ಮುಗಿದರೆ ಸಾಕು ಅನ್ನಿಸಿಬಿಡುತ್ತದೆ ಎಂದು ವಿಶ್ವದ ಶ್ರೇಷ್ಟ ಬ್ಯಾಟ್ಸ್ಮನ್ ಅನ್ನಿಸಿಕೊಂಡ ವೆಸ್ಟ್ ಇಂಡೀಸ್ ತಂಡದ ಮಾಜಿ ಕ್ರಿಕೆಟ್ ಆಟಗಾರ ಬ್ರಯಾನ್ ಲಾರಾ ವಾಸಿಂ ಕುರಿತು ಮಾಧ್ಯಮವೊಂದರಲ್ಲಿ ಬಹಿರಂಗವಾಗಿ ಹೇಳಿಕೆಕೊಟ್ಟಿದ್ದರು.
ಅಂದಹಾಗೆ ಈಗ ಬ್ರಯಾನ್ ಲಾರಾ ಕೂಡ ಕ್ರಿಕೆಟ್ ಬಗ್ಗೆ ಮಾತನಾಡುತ್ತಿಲ್ಲ. ವಾಸಿಂ ಕೂಡ ಕ್ರಿಕೆಟ್ ಜೀವನಕ್ಕೆ ವಿರಾಮ ಹಾಡಿದ್ದಾರೆ. ಇಬ್ಬರೂ ತಮಗೆ ಇಷ್ಟ ಬಂದಾಗ ಕ್ರಿಕೆಟ್ ಗ್ಯಾಲರಿಯಲ್ಲಿ ಕೂತು ಒಮ್ಮೊಮ್ಮೆ ಕ್ರಿಕೆಟ್ ನೋಡುವುದು, ಕ್ರಿಕೆಟ್ ಕುರಿತು ತಮಗೂ ಮಾತನಾಡಲು ಬರುತ್ತೆ ಅಂತಾ ಹೇಳಿಕೊಂಡು ಕಮೆಂಟರಿ ಹೊಡೆಯುವುದು, ಕ್ರಿಕೆಟ್ ಆಟಗಾರರಿಗೆ ತರಬೇತಿ ಕೊಡುವ ಕೋಚ್ ಆಗಿ ಫೀಲ್ಡ್ಗೆ ಬಂದರೆ ಬಿಟ್ಟರೆ ಬೇರೆ ಅವರೇನು ಮಾಡುತ್ತಾರೆ ಎನ್ನುವ ಕುತೂಹಲ ವಿಶ್ವದಲ್ಲಿ ಧರ್ಮದಂತೆ ಹರಡಿರುವ ಕ್ರಿಕೆಟ್ ಅಭಿಮಾನಿಗಳಲ್ಲಿ ಇದ್ದೇ ಇರುತ್ತದೆ.
ಅದರಲ್ಲೂ ವಾಸಿಂ ಅಕ್ರಂ ಕುರಿತು ಕುತೂಹಲ ಇನ್ನೂ ಕೂಡ ಜಾಸ್ತಿ. ವಾಸಿಂ ಪಕ್ಕದ ದೇಶ ಪಾಕಿಸ್ತಾನದವರು, ಜತೆಯಲ್ಲಿ ಬೋರ್ ಅನ್ನಿಸಿದಾಗಲೆಲ್ಲಾ ಭಾರತಕ್ಕೆ ಬಂದು ಕುಟುಂಬ ಸಹಿತ ಠಿಕಾಣಿ ಹೂಡುತ್ತಾರೆ. ಕುಟುಂಬದವರಿಗೆ ಏನೇ ಬೇಕಾದರೂ ಭಾರತದಲ್ಲಿ ಅದಕ್ಕೆ ಮದ್ದು ಹುಡುಕುವ ವಾಸಿಂ ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಭಾರತವನ್ನು ಪ್ರೀತಿಸುತ್ತಾರೆ. ಅದಕ್ಕೊಂದು ಉದಾಹರಣೆ ಇಲ್ಲಿದೆ.
ಹ್ಯೂಮಾ ಮುಫ್ತಿ ಇವರು ವಾಸಿಂ ಅಕ್ರಂರ ಪ್ರೀತಿಯ ಮಡದಿ. ನಾನಾ ಅಂಗವೈಪಲ್ಯ ಕಾಯಿಲೆಯಿಂದ ಬಳಲುತ್ತಿದ್ದಾಗ ಅವರನ್ನು ಚೆನ್ನೈಯಲ್ಲಿರುವ ಅಪೋಲೋ ಹಾಸ್ಪಿಟಲ್ಗೆ ಸೇರಿಸಿದ್ದರು. ಆದರೆ ಯಾಕೋ ಏನೋ ೨೫ ಅಕ್ಟೋಬರ್ ೨೦೦೯ರಲ್ಲಿ ಹ್ಯೂಮಾ ಚಿಕಿತ್ಸೆ ಪಲಕಾರಿಯಾಗದೇ ವಾಸಿಂರ ಕೈ ಬಿಟ್ಟು ಹೋದರು. ಈ ನಂತರ ವಾಸಿಂ ಪದೇ ಪದೇ ಭಾರತದಲ್ಲಿಯೇ ನಿಲ್ಲುವ ಮನಸ್ಸು ಮಾಡಿದ್ದರು. ಹ್ಯೂಮಾ ಹೋದ ನಂತರ ಹೊಸ ಬಾಳಿನ ಗೆಳತಿ ಕಮ್ ಪಾಕಿಸ್ತಾನದ ಸೂಪರ್ ಮೊಡೆಲ್ ಹಮೈಮಾ ಮಲ್ಲಿಕ್ ಜತೆಯಲ್ಲಿ ಭಾರತದಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದರು ಎಂದು ಮಲ್ಲಿಕ್ ಈಗ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.
ರೆಡ್ ಚಿಲ್ಲಿ ಹಾಗೂ ಶಾರೂಕ್ ಖಾನ್ ಮಾಲೀಕತ್ವದ ಐಪಿಎಲ್ ತಂಡ ಕೊಲ್ಕತ್ತಾ ನೈಟ್ರೈಡರ್ಸ್ (ಕೆಕೆಆರ್)ಪರವಾಗಿ ವಾಸಿಂ ಬೌಲಿಂಗ್ ಕೋಚ್ ಆಗಿ ಭಾರತಕ್ಕೆ ಬಂದಿದ್ದರು. ಆದರೆ ವಾಸಿಂ ಈ ಸಮಯದಲ್ಲಿ ಮಲ್ಲಿಕಾರನ್ನು ಜತೆಯಲ್ಲಿಯೇ ಕರೆದುಕೊಂಡು ಬಂದಿದ್ದರು ಎನ್ನುವ ಮಾಹಿತಿ ನಿಧಾನವಾಗಿ ಪಾಕ್ನ ಮಾಧ್ಯಮಗಳ ಮೂಲಕ ಹೊರಬಂದಿದೆ. ಆದರೆ ಮಲ್ಲಿಕಾ ವಾಸಿಂ ಕುರಿತು ಯಾವುದೇ ಹೇಳಿಕೆ ಕೊಟ್ಟಿಲ್ಲ ಎಂದು ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ. ಎಲ್ಲರೂ ಸೇರಿ ವಾಸಿಂ ಹಾಗೂ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ವಾಸಿಂಗೆ ಎರಡು ಮಕ್ಕಳಿವೆ ಜತೆಯಲ್ಲಿ ನನಗೂ ಕೇರಿಯರ್,ಕುಟುಂಬವಿದೆ ಇದೆಲ್ಲವೂ ಸುಳ್ಳು ಎಂದು ಕಡ್ಡಿ ತುಂಡಾಗುವ ರೀತಿಯಲ್ಲಿ ಪಾಕಿಸ್ತಾನದ ಖಾಸಗಿ ಟಿವಿ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ವಾಸಿಂ ಅಕ್ರಂರ ಗರ್ಲ್ಪ್ರೆಂಡ್ ಎಂದು ಹೇಳಿಕೊಂಡು ತಿರುಗಾಡುವ ಅವಶ್ಯಕತೆ ನನಗೇನೂ ಬಿದ್ದಿಲ್ಲ. ನನಗೆ ಈಗ ವೃತ್ತಿ ಬದುಕೇ ದೊಡ್ಡದು. ನಾನು ಭಾರತಕ್ಕೆ ಹೋಗಿದ್ದು ಬರೀ ಕೆಕೆ ಆರ್ ತಂಡವನ್ನು ಹುರಿದುಂಬಿಸಲು ಮಾತ್ರ ಹೋಗಿದ್ದೆ, ವಾಸಿಂ ತಂಡದಲ್ಲಿದ್ದಾರೆ ಎಂಬ ವಿಚಾರಕ್ಕೆ ನಾನು ಅಲ್ಲಿಗೆ ಹೋಗಿಲ್ಲ . ಪಾಕ್ ಮಾಧ್ಯಮಗಳು ಈ ವಿಚಾರವನ್ನೇ ದೊಡ್ಡದು ಮಾಡಿವೆ ಇದು ಸರಿಯಲ್ಲ ಎಂದು ಮಲ್ಲಿಕಾ ವಾಹಿನಿಯಲ್ಲಿ ತಿಳಿಸಿದ್ದಾರೆ.
ವಾಸಿಂ ಹಾಗೂ ನಾನು ಜಸ್ಟ್ ಒಳ್ಳೆಯ ಗೆಳೆಯರು. ನಮ್ಮ ಜತೆಯಲ್ಲಿ ಅಂತಹ ಯಾವುದೇ ಸಂಬಂಧಗಳಿಲ್ಲ. ವಾಸಿಂರ ಮಕ್ಕಳಿಬ್ಬರನ್ನು ಕಂಡರೆ ನನಗೆ ಬಹಳ ಪ್ರೀತಿ. ಅದಕ್ಕಾಗಿ ಅವರ ಮನೆಗೆ ಹೋದರೆ ಇಲ್ಲಸಲ್ಲದ ಆರೋಪಗಳನ್ನು ನನ್ನ ಮೇಲೆ ಹೊರಿಸಲಾಗುತ್ತಿದೆ. ಭಾರತದಲ್ಲಿರುವ ಮಾಧ್ಯಮಗಳಿಗಂತೂ ಹಳದಿ ರೋಗ ಅಂಟಿಬಿಟ್ಟಿದೆ. ಕ್ರಿಕೆಟರ್ ಜತೆಯಲ್ಲಿ ಸೆಲೆಬ್ರಿಟಿ ಕಾಣಿಸಿಕೊಂಡರೆ ಅವರ ನಡುವೆ ಲಿಂಕ್ ಕೊಡುವ ಪರಂಪರೆ ಹುಟ್ಟಿದೆ.
ವಾಸಿಂ ಭಾರತದ ಟಿವಿ ಚಾನೆಲ್ವೊಂದರ ರಿಯಾಲಿಟಿ ಶೋವಿನಲ್ಲಿ ಜಡ್ಜ್ ಆಗಿದ್ದಾಗ ಸುಸ್ಮಿತಾ ಸೇನ್ ಜತೆಯಲ್ಲೂ ಲಿಂಕ್ ಇದೆ ಎನ್ನುವ ಮಾಹಿತಿಯನ್ನು ಭಾರತದ ಮಾಧ್ಯಮಗಳು ಹರಿಯಬಿಟ್ಟಿದ್ದರು. ಇದೆಲ್ಲವೂ ರಿಯಾಲಿಟಿ ಶೋವಿನ ಪ್ರಚಾರಕ್ಕಾಗಿ ಮಾಡಿದ ತಂತ್ರ ಎಂದು ನಂತರ ಗೊತ್ತಾಯಿತು. ಮಾಧ್ಯಮಗಳು ಹೇಳುವ ಮಾತಿಗೆಲ್ಲ ನಾನು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಮಲ್ಲಿಕಾ ವಾಹಿನಿಯೊಂದರಲ್ಲಿ ಬಿಚ್ಚು ಮಾತನಾಡಿದ್ದಾರೆ. ಆದರೆ ವಾಸಿಂ ಈ ಕುರಿತು ಯಾವುದೇ ಮಾಧ್ಯಮಗಳಿಗೆ ಹೇಳಿಕೆ ಕೊಡಲು ಮುಂದೆ ಬಂದಿಲ್ಲ. ಅಂದಹಾಗೆ ಮಲ್ಲಿಕಾರ ಮಾತಿನ ಮುಂದೆ ವಾಸಿಂ ಅಕ್ರಂ ಮಾತು ಡಲ್ ಹೊಡೆದಿದೆ ಎಂದು ಬಿಡೋಣ ಅಲ್ವಾ..?