Wednesday, March 5, 2014

ಕನ್ನಡಕ್ಕೆ ಬಂದ್ರು ಬಾಲಿವುಡ್ ದೊಡ್ಡಣ್ಣ ಕಬೀರ್ ಗುರು ಬಿಗ್ ಬಿ

* ಸ್ಟೀವನ್ ರೇಗೊ, ದಾರಂದಕುಕ್ಕು ಸ್ಯಾಂಡಲ್‌ವುಡ್ ಸಖತ್ ಖುಷಿ ಮೂಡ್‌ನಲ್ಲಿದೆ. ಯಾಕ್ ಅಂತೀರಾ..ಬಾಲಿವುಡ್ ಅಂಗಳದ ದಿಗ್ಗಜರೊಬ್ಬರು ಸ್ಯಾಂಡಲ್‌ವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸೂಚನೆಯೊಂದು ಗಾಂಧಿನಗರದ ಗಲ್ಲಿಯಲ್ಲಿ ಜೋರಾಗಿ ಕೇಳಿಸಿಕೊಳ್ಳುತ್ತಿದೆ. ಹೌದು. ಇದು ಬಾಲಿವುಡ್ ಪಡಸಾಲೆಯ ಬಿಗ್ ಬಿಯ ಮಾತು. ಅಂದಹಾಗೆ ಬಾಲಿವುಡ್‌ನ ಬಿಗ್ ಬಿಗೆ ಕನ್ನಡ ಸಿನಿಮಾ ರಂಗ ಹೊಸತೇನೂ ಅಲ್ಲ.. ಈ ಹಿಂದೆ ಕನ್ನಡದ ಮೇಷ್ಟ್ರು ಎಂದೇ ಕರೆಸಿಕೊಳ್ಳುವ ನಾಗತಿಹಳ್ಳಿ ಚಂದ್ರ ಶೇಖರ್ ಅವರ ಸಿನಿಮಾ ಅಮೃತಧಾರೆಯಲ್ಲಿ ಬಿಗ್ ಬಿ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರಾದೇಶಿಕ ಭಾಷೆಯ ಸಿನಿಮಾಗಳಲ್ಲೂ ನಟಿಸಲು ತಾನು ರೆಡಿ ಎನ್ನುವ ಮಾತನ್ನು ಗಟ್ಟಿಯಾಗಿ ಹೇಳಿದ್ದರು.
ಈ ಬಳಿಕ ಬಿಗ್ ಬಿ ಬಾಲಿವುಡ್ ಸಿನಿಮಾಗಳಲ್ಲಿಯೇ ಪೂರ್ತಿ ಮುಳುಗಿ ಹೋಗಿದ್ದರ ಪರಿಣಾಮ ಕನ್ನಡದ ಬಹುತೇಕ ಸಿನಿಮಾ ನಿರ್ದೇಶಕರ ಕೈಗೆ ಬಿಗ್ ಬಿ ಸಿಗಲೇ ಇಲ್ಲ. ಆದರೂ ಕನ್ನಡದ ಸಿನಿಮಾ ನಿರ್ದೇಶಕರು ಹಾಗೂ ನಿರ್ಮಾಪಕರು ಬಿಗ್ ಬಿ ಹಿಂದೆ ಬೀಳುವ ಕೆಲಸವನ್ನು ಮಾತ್ರ ಬಿಟ್ಟಿರಲಿಲ್ಲ. ಈಗ ಇಂತಹ ಒಂದು ಅವಕಾಶ ಕನ್ನಡದ ಸಿನಿಮಾ ನಿರ್ದೇಶಕ ನರೇಂದ್ರ ಬಾಬು ಅವರ ಕೈಗೆ ಸಿಕ್ಕಿದೆ. ಅವರು ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರ ‘ಕಬೀರ’ದಲ್ಲಿ ಬಿಗ್ ಬಿ ಕಾಣಿಸಿಕೊಳ್ಳುವ ಮಾತುಗಳು ಕೇಳಿಸಿಕೊಳ್ಳುತ್ತಿದೆ. ಅಂದಹಾಗೆ ಇದು ಸಂತ. ಕಬೀರ್‌ದಾಸ್ ಮೇಲೆ ಮೂಡಿಬರುತ್ತಿರುವ ಸಿನಿಮಾ ಎನ್ನುವ ಮಾತಿದೆ. ಕಬೀರ್ ಪಾತ್ರದಲ್ಲಿ ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕಾಣಿಸಿಕೊಂಡರೆ ಕಬೀರ್‌ರ ಗುರು ಪಾತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಿ ಜತೆ ಶಿವಣ್ಣ ಈ ಹಿಂದೆ ನಟಿಸಿದ್ದರು: ಶಿವರಾಜ್ ಕುಮಾರ್ ಹಾಗೂ ಬಿಗ್ ಬಿ ಅಮಿತಾಬ್ ಬಚ್ಚನ್ ಈ ಹಿಂದೆ ಕೂಡ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ದೇಶದ ಖ್ಯಾತ ಜುವೆಲ್ಲರಿ ಕಂಪನಿಯ ಜಾಹೀರಾತಿನಲ್ಲಿ ಶಿವಣ್ಣ ಅವರ ತಂದೆಯ ಪಾತ್ರದಲ್ಲಿ ಬಿಗ್ ಬಿ ಕಾಣಿಸಿಕೊಂಡಿದ್ದರು. ಇಲ್ಲಿ ತಂದೆ- ಮಗನ ಸೂಕ್ಷ್ಮ ಸಂಬಂಧಗಳ ಅನಾವರಣವನ್ನು ಚಿತ್ರಿಸಿಕೊಳ್ಳುವ ಮೂಲಕ ಜಾಹೀರಾತು ಸಖತ್ ವರ್ಕ್ ಔಟ್ ಆಗಿತ್ತು. ಈಗಲೂ ಈ ಜಾಹೀರಾತು ವಾಹಿನಿಗಳಲ್ಲಿ ಓಡಾಡಿಕೊಂಡಿದೆ. ಕನ್ನಡದ ವರನಟ ರಾಜ್ ಕುಮಾರ್ ಕುಟುಂಬದ ಜತೆಯಲ್ಲಿ ಬಿಗ್ ಬಿ ಉತ್ತಮ ಬಾಂಧವ್ಯ ಹೊಂದಿದ್ದರು. ಕನ್ನಡದಲ್ಲಿ ಅಮೃತಧಾರೆಯ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ಬಿಗ್ ಬಿ ಅಮಿತಾಬ್ ಬಚ್ಚನ್ ಸಂತ. ಕಬೀರ್ ಅವರ ಜೀವನ ಕತೆಯನ್ನು ಆಧರಿಸಿಕೊಂಡು ಬರುತ್ತಿರುವ ಐತಿಹಾಸಿಕ ಚಿತ್ರವಾದ ‘ಮಹಾತ್ಮ ಕಬೀರ್’ನಲ್ಲಿ ಗುರುವಿನ ಪಾತ್ರದಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಮಾತ್ರ ಪ್ರೇಕ್ಷಕರು ತೆರೆಯ ಮೇಲೆ ನೋಡಿ ತಿಳಿಯಬೇಕು. ಟೋಟಲಿ ಪ್ರಾದೇಶಿಕ ಭಾಷೆಗಳ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಳ್ಳುತ್ತಿರುವ ಇಂತಹ ದಿಗ್ಗಜ ನಟರಿಂದ ಸಿನಿಮಾ ರಂಗ ಮತ್ತಷ್ಟೂ ಪ್ರಜ್ವಲಿಸುತ್ತದೆ ಎನ್ನುವ ಮಾತು ಮಾತ್ರ ದಿಟವಗುತ್ತಿದೆ.

Tuesday, March 4, 2014

ಡಿಪ್ಸ್ ಕೋಲಾಕ್ಕೆ ೬ ಕೋಟಿ !

* ಸ್ಟೀವನ್ ರೇಗೊ, ದಾರಂದಕುಕ್ಕು ಯೆಸ್. ದೀಪಿಕಾ ಪಡುಕೋಣೆ ಬಾಲಿವುಡ್ ಅಂಗಳದಲ್ಲಿ ಗೆಲ್ಲುವ ಕುದುರೆ ಎನ್ನುವ ವಿಚಾರದಲ್ಲಿ ಈಗ ಯಾವುದೇ ಸಂದೇಹ ಉಳಿದಿಲ್ಲ. ಯಾಕ್ ಅಂತೀರಾ.. ಕಳೆದ ವರ್ಷದ ಬಹು ದೊಡ್ಡ ಹಿಟ್ ಚಿತ್ರಗಳ ಸಕ್ಸಸ್ ರೇಟ್ ಹಿಂದೆ ದೀಪಿಕಾ ಪಡುಕೋಣೆಯ ಕರಾಮತ್ತು ನಡೆದಿದೆ. ಡಿಪ್ಸ್ ಕಾಣಿಸಿಕೊಂಡ ಎಲ್ಲ ಚಿತ್ರಗಳು ಬಾಕ್ಸಾಫೀಸ್‌ನ ಗಲ್ಲಾ ಪೆಟ್ಟಿಗೆಯಲ್ಲಿ ಹೆಸರು ಉಳಿಸಿಕೊಂಡಿತ್ತು.
ಅದಕ್ಕೂ ಮಿಗಿಲಾಗಿ ಈ ಚಿತ್ರಗಳ ಯಶಸ್ವಿನಿಂದಲೂ ಡಿಪ್ಸ್ ಈ ವರ್ಷದ ಬಹುತೇಕ ಚಿತ್ರಗಳಿಗೆ ಬುಕ್ ಆಗಿರುವ ವಿಷ್ಯಾ ಹೊರ ಬರುತ್ತಿದ್ದಂತೆ ಜಾಹೀರಾತು ಕಂಪನಿಗಳು ಡಿಪ್ಸ್ ಮೇಲೆ ಹಣ ಹೂಡಲು ಮುಂದೆ ಬಂದಿದೆ ಎನ್ನುವ ಸುದ್ದಿ ಹೊರ ಬಂದಿದೆ. ಕಳೆದ ವರ್ಷದ ಹಿಟ್ ಚಿತ್ರಗಳಾದ ‘ಯೇ ಜವಾನಿ ಯೇ ದಿವಾನಿ’ ರೇಸ್ -೨, ‘ಚೆನ್ನೈ ಎಕ್ಸ್‌ಪ್ರೆಸ್’ ಹಾಗೂ ‘ಗೋಲಿಯೋಂಕೀ ರಾಸ್ ಲೀಲಾ ರಾಮ್ ಲೀಲಾ’ ಡಿಪ್ಸ್ ಹಿಟ್ ಲೀಸ್ಟ್‌ನಲ್ಲಿ ಸೇರಿಕೊಂಡಿದೆ. ಈ ಕಾರಣದಿಂದ ಡಿಪ್ಸ್ ಕಳೆದ ವರ್ಷದ ೧೦೦ ಕೋಟಿ ಗಳಿಕೆಯ ಚಿತ್ರಗಳಿಂದ ಈ ವರ್ಷನೂ ತನ್ನ ಛಾಪು ಬಾಲಿವುಡ್ ಅಂಗಳದಲ್ಲಿ ಗಟ್ಟಿ ಮಾಡಿಕೊಂಡಿದ್ದಾರೆ. ಖ್ಯಾತ ಕೋಲಾ ಕಂಪನಿ ತನ್ನ ಜಾಹೀರಾತುಗಳಿಗಾಗಿ ಡಿಪ್ಸ್ ಬ್ರಾಂಡ್ ಅಂಬಾಸೀಡರ್ ಆಗಿ ಬುಕ್ ಮಾಡಿದೆ. ಅಂದಹಾಗೆ ಈ ಜಾಹೀರಾತುಗಳಿಗಾಗಿ ಡಿಪ್ಸ್ ಪಡೆಯುತ್ತಿರುವ ಸಂಭಾವನೆ ಬರೀ ೬ ಕೋಟಿ ರೂಪಾಯಿಗಳು ಎನ್ನುವುದು ಸ್ವಾರಸ್ಯಕರವಾದ ವಿಷ್ಯಾ. ಈಗಾಗಲೇ ಡಿಪ್ಸ್ ಸಿನಿಮಾಗಳ ಮೂಲಕ ಹಣ ಬಾಚುತ್ತಿರುವಂತೆ ಮತ್ತೊಂದು ಕಡೆಯಲ್ಲಿ ಡಿಪ್ಸ್ ಜಾಹೀರಾತಿನಿಂದಲೂ ಹಣ ಬಾಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಕಾರ್ಪೊರೇಟ್ ಪ್ರಾಡಕ್ಟ್‌ಗಳಾದ ಲಕ್ಸ್, ನೆಸ್‌ಕೆಫೇಗಳಲ್ಲಿ ಡಿಪ್ಸ್ ಕಾಣಿಸಿಕೊಂಡಿದ್ದರು. ಈಗ ಕೋಲಾ ಕಂಪನಿಗಳ ನಾನಾ ವೈರೆಟಿ ಬ್ರಾಂಡ್‌ಗಳಲ್ಲೂ ಡಿಪ್ಸ್ ರಾರಾಜಿಸಲಿದ್ದಾರೆ. ಕೋಲಾದ ಒಂದು ವರ್ಷದ ಅವಧಿಯಲ್ಲಿ ಸಿದ್ಧವಾಗುವ ಎಲ್ಲ ಕೋಲಾ ಬ್ರಾಂಡ್‌ಗಳಲ್ಲಿ ಡಿಪ್ಸ್ ಕಾಣಿಸಿಕೊಳ್ಳಬೇಕು ಎನ್ನುವುದು ಕಂಪನಿಯ ಷರತ್ತುಗಳಲ್ಲಿ ಒಂದಾಗಿದೆ. ಅಂದಹಾಗೆ ಕಳೆದ ಎಂಟು ವರ್ಷಗಳಿಂದ ಕೋಲಾ ಕಂಪನಿಗೆ ಐಶ್ವರ್ಯ ರೈ ನಂತರ ಯಾರು ಕೂಡ ಬ್ರಾಂಡ್ ಅಂಬಾಸೀಡರ್‌ಗಳಾಗಿ ಇರಲಿಲ್ಲ. ಈಗ ಕೋಲಾ ಕಂಪನಿ ಡಿಪ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಐಶ್‌ಗೂ ಟಾಂಗ್ ಕೊಟ್ಟಿದ್ದಾರೆ. ಟೋಟಲಿ ಡಿಪ್ಸ್ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿರುವ ಜತೆಗೆ ಜಾಹೀರಾತು ಕಂಪನಿಗಳಿಂದಲೂ ಬಾಚುತ್ತಿರುವ ಶುಭ ಘಳಿಗೆ ಎಷ್ಟು ದಿನಗಳವರೆಗೆ ಮುಂದುವರಿಯುತ್ತದೆ ಎನ್ನೋದು ಒಂದು ಯಕ್ಷ ಪ್ರಶ್ನೆಯಾದರೂ. ಸಧ್ಯಕ್ಕಂತೂ ಬಾಲಿವುಡ್ ಪಡಸಾಲೆಯಲ್ಲಿ ಡಿಪ್ಸ್ ಹಿಂದೆ ಹಾಕುವ ಧೈರ್ಯವಂತ ನಟಿಯರು ಸಿಗುತ್ತಿಲ್ಲ ಎನ್ನುವ ಕೊರಗು ಕೂಡ ಇದೆ. ಒಂದು ವರ್ಷದ ಮಟ್ಟಿಗೆ ಡಿಪ್ಸ್ ಬಾಲಿವುಡ್ ವಿದ್ ಜಾಹೀರಾತುಗಳಲ್ಲಿಯೇ ಬ್ಯುಸಿಯಾಗಿರುತ್ತಾರೆ ಎನ್ನುವ ಮಾತು ಮಾತ್ರ ದಿಟವಾಗಿದೆ.

ಸಿನಿಮಾದಲ್ಲಿ ಪುರುಷ ಮಣಿಗಳು

* ಸ್ಟೀವನ್ ರೇಗೊ, ದಾರಂದಕುಕ್ಕು ಇದು ಇಂದಿಗೂ ಅರ್ಥವಾಗದೇ ಉಳಿದ ಪ್ರಶ್ನೆ. ಆದರೆ ಸಿನಿಮಾ ಫೀಲ್ಡ್‌ವಂತೂ ಇದಕ್ಕೆ ಉತ್ತರ ದಕ್ಕಿಸಿಕೊಂಡಿದೆ. ಆದರೆ ಪ್ರೇಕ್ಷಕ ಮಹಾಪ್ರಭುವಂತೂ ಇಂದಿಗೂ ಗೊಂದಲದ ಗೂಡಿನಲ್ಲಿಯೇ ತೇಲುತ್ತಿದ್ದಾನೆ. ಹೌದು. ಇದು ಸಿನಿಮಾ ನಟರು ತಮ್ಮ ಸಿನಿಮಾಗಳಲ್ಲಿ ನಟಿಯರಂತೆ ವೇಷ ಹಾಕಿಕೊಂಡು ಪಾತ್ರ ಮಾಡುವ ಕ್ರೇಜ್ ಕುರಿತಾದ ಮಾತು. ಬಾಲಿವುಡ್ ಇರಲಿ ಕಾಲಿವುಡ್ ಇರಲಿ ಟಾಲಿವುಡ್, ಸ್ಯಾಂಡಲ್‌ವುಡ್ ಎಲ್ಲದರಲ್ಲೂ ನಟರು ನಟಿಯರಂತೆ ವೇಷ ಹಾಕಿಕೊಂಡು ಪಾತ್ರ ಮಾಡುವ ಖಯಾಲಿಯಂತೂ ಮಾಮೂಲಿಯಾಗಿದೆ.
ಈಗ ಸುದ್ದಿಯಾಗಿರೋದು ಮಲಯಾಳಂ ಸ್ಟಾರ್ ನಟ ಪ್ರಥ್ವಿರಾಜ್ . ಅಂದಹಾಗೆ ಪ್ರಥ್ವಿರಾಜ್ ಈ ಹಿಂದಿನ ಗೆಟಪ್‌ಗಿಂತ ಭಿನ್ನ ಹುಡುಗಿ ಯಾಗಿ ಬಣ್ಣ ಹಚ್ಚಿಕೊಂಡಿದ್ದಾರೆ. ತಮಿಳಿನಲ್ಲಿ ತೆರೆಗೆ ಬರಲಿರುವ ಬಿಗ್ ಬಜೆಟ್ ಚಿತ್ರ ‘ಕಾವಿಯಾ ತಲೈವಿವಾನ್’ ನ ಪ್ರಥ್ವಿರಾಜ್ ಟ್ರೈಲರ್ ಈಗಾಗಲೇ ಯೂ ಟ್ಯೂಬ್ ಸಾಮಾಜಿಕ ತಾಣದಲ್ಲಿ ಸಖತ್ ವರ್ಕ್ ಔಟ್ ಆಗಿದೆ. ಅದರಲ್ಲೂ ನಟ ಸಿದ್ಧಾರ್ಥ್ ಕೂಡ ರಾಧೆಯಾಗಿ ಸ್ತ್ರೀ ವೇಷಕ್ಕೆ ಜಾರಿದ್ದಾರೆ. ಇತಿಹಾಸದ ಕತೆಯೊಂದನ್ನು ಆಧರಿಸಿಕೊಂಡು ಬರಲಿರುವ ಈ ಚಿತ್ರವನ್ನು ರಂಗಭೂಮಿಯ ಖ್ಯಾತ ನಿರ್ದೇಶಕ ವಸಂತಬಾಲನ್ ನಿರ್ದೇಶನ ಮಾಡುತ್ತಿದ್ದಾರೆ. ಮಲಯಾಳಂ ನಟಿ ವೇದಿಕಾ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ೧೯೨೦ರಲ್ಲಿ ಮಧುರೈಯ ಖ್ಯಾತ ರಂಗಭೂಮಿ ಕಲಾವಿದ, ಹಾಡುಗಾರ, ನಟ ಕೆ.ಬಿ. ಸುಂದರಬಾಲಾ ಹಾಗೂ ಎಸ್.ಜಿ.ಕಿಟ್ಟಪ್ಪ ಅವರ ಆತ್ಮಕತೆಯನ್ನು ಈ ಚಿತ್ರದಲ್ಲಿ ತರಲಾಗಿದೆ ಎನ್ನೋದು ಚಿತ್ರ ತಂಡದ ಮಾತು. ಟೋಟಲಿ ಸಿನಿಮಾ ಈ ವರ್ಷದ ಅಂತ್ಯದೊಳಗೆ ತೆರೆಗೆ ಅಪ್ಪಳಿಸುವ ಸಾಧ್ಯತೆಯನ್ನು ಚಿತ್ರ ತಂಡ ಹೇಳಿಕೊಂಡು ತಿರುಗಾಡುತ್ತಿದೆ. ನಟರು ನಟಿಯಾರಾಗುವ ಕತೆ ಇಲ್ಲಿದೆ: ಅಂದಹಾಗೆ ನಟರು ಸಿನಿಮಾದಲ್ಲಿ ನಟಿಯರಂತೆ ವೇಷ ಹಾಕಿಕೊಂಡು ಪಾತ್ರ ಮಾಡುವ ಪದ್ಧತಿ ಬಹಳ ಹಳೆಯ ಕಾಲದಿಂದಲೂ ಚಾಲ್ತಿಯಲ್ಲಿತ್ತು. ಮುಖ್ಯವಾಗಿ ಬಾಲಿವುಡ್‌ನಲ್ಲಿ ಮಿಥುನ್ ಚಕ್ರವರ್ತಿ, ಗೋವಿಂದ, ಸಲ್ಮಾನ್ ಖಾನ್, ಸಂಜಯ್ ದತ್ ಸೇರಿದಂತೆ ಬಹುತೇಕ ನಟರು ನಟಿಯರಂತೆ ವೇಷ ಹಾಕಿಕೊಂಡು ಪಾತ್ರ ಮಾಡಿಕೊಂಡು ಸಿನಿಮಾವನ್ನು ಗೆಲ್ಲಿಸಿಬಿಟ್ಟಿದ್ದಾರೆ.
ಅದರಲ್ಲೂ ಮುಖ್ಯವಾಗಿ ಕಮಲ್ ಹಾಸನ್ ‘ಚಾಚಿ ೪೨೦’ಚಿತ್ರದಲ್ಲಿ ಪೂರ್ತಿ ಪ್ರಮಾಣದಲ್ಲಿ ಸ್ತ್ರೀ ವೇಷ ಧಾರಿಯಾಗಿ ಮಿಂಚಿ ಚಿತ್ರರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿಕೊಂಡಿದ್ದಾರೆ. ಕಾಲಿವುಡ್‌ನಲ್ಲೂ ನಟರಾದ ವಿಜಯ್, ವಿಕ್ರಂ, ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂಡ ಸ್ತ್ರೀ ಗೆಟಪ್‌ನಲ್ಲಿ ಕಾಣಿಸಿಕೊಂಡು ತಮ್ಮ ಪ್ರೇಕ್ಷಕ ಸಮೂಹಕ್ಕೆ ದಂಗು ಮೂಡಿಸಿದ್ದರು. ಅದೇ ರೀತಿಯಲ್ಲಿ ಸ್ಯಾಂಡಲ್‌ವುಡ್ ಚಿತ್ರನಗರಿಯಲ್ಲಿ ರಾಘವೇಂದ್ರ ರಾಜ್‌ಕುಮಾರ್, ರಾಮ್ ಕುಮಾರ್ ಶರಣ್, ಜಗ್ಗೇಶ್, ವಿಜಯ ರಾಘವೇಂದ್ರ ನಾನಾ ನಟರು ಸ್ತ್ರೀ ವೇಷಧಾರಿಗಳಾಗಿ ಮಿಂಚಿದ್ದಾರೆ. ನಟರು ನಟಿಯಾರಾಗಿ ಬಣ್ಣ ಬದಲಾಯಿಸುವ ಕಾನ್ಸೆಪ್ಟ್‌ಗಳಿಂದ ಕೆಲವೊಂದು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸಖತ್ ಕಲೆಕ್ಷನ್ ಕಂಡಿದೆ. ಅದಕ್ಕೂ ಮುಖ್ಯವಾಗಿ ಇಂತಹ ಯೋಜನೆಗಳನ್ನೇ ಹಾಕಿಕೊಂಡು ಮತ್ತೇ ಮತ್ತೇ ಸಿನಿಮಾ ಮಾಡುವ ಖಯಾಲಿ ಕೂಡ ನಿಧಾನವಾಗಿ ಸಿನಿಮಾ ರಂಗದಲ್ಲಿ ಬೆಳೆದುಕೊಂಡು ಬರುತ್ತಿದೆ. ಈ ಮೂಲಕ ಸಿನಿಮಾ ಗೆಲ್ಲಿಸಲು ಇದೊಂದು ವಿಶಿಷ್ಟ ಬಗೆಯ ಟೆಕ್ನಿಕ್ ಅನ್ನು ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗೂ ನಟರು ಕಂಡು ಕೊಳ್ಳುತ್ತಿದ್ದಾರೆ ಎನ್ನುವ ವಿಚಾರವಂತೂ ಪ್ರತಿ ಬಾರಿಯೂ ಬಯಲಾಗುತ್ತಿದೆ. ......

ಸಿನಿಮಾ ಇನ್ ಪಾಲಿಟಿಕಲ್ ವಾರ್

* ಸ್ಟೀವನ್ ರೇಗೊ, ದಾರಂದಕುಕ್ಕು ಬಣ್ಣದ ನಗರಿಗೂ ರಾಜಕೀಯಕ್ಕೂ ತೀರಾ ಹತ್ತಿರದ ನಂಟಿದೆ ಎನ್ನೋದು ಇತಿಹಾಸವೇ ಬಾಯಿಬಿಟ್ಟುಕೊಂಡು ಹೇಳುತ್ತಿದೆ. ಬಣ್ಣದ ನಗರಿಯಲ್ಲಿ ಸಲ್ಲುವ ಬಹುತೇಕ ಮಂದಿ ರಾಜಕೀಯಕ್ಕೂ ಸಲ್ಲುತ್ತಾರೆ ಎನ್ನುವ ಮಾತಿಗೆ ಈಗಾಗಲೇ ನೂರು ಶೇಕಡಾದಷ್ಟು ಮತ ಸಿಕ್ಕಿದೆ. ಈಗ ಇಂತಹ ಒಂದು ರಾಜಕೀಯ ಅಖಾಡಕ್ಕೆ ಇಳಿಯಲು ಸಿದ್ಧತೆಯೊಂದು ಬಾಲಿವುಡ್ ಅಂಗಳದಲ್ಲಿ ನಡೆಯುತ್ತಿದೆ ಎನ್ನುವ ಗುಸುಗುಸು ತೆರೆ ಮರೆಯಲ್ಲಿ ಕೇಳಿಸಿಕೊಳ್ಳುತ್ತಿದೆ. ಹೌದು. ಇದು ಬಾಲಿವುಡ್ ನಟಿ ಪ್ರೀತಿ ಝಿಂಟಾ ಮೇಡಂ ಅವರ ಮಾತು. ಬಾಲಿವುಡ್ ಅಂಗಳದಲ್ಲಿ ಸರಿಯಾಗಿ ನೆಲೆ ಸಿಕ್ಕಲು ಒದ್ದಾಟ ಮಾಡಿಕೊಂಡೇ ಬದುಕು ಕಟ್ಟಿದ ದಿಟ್ಟೆಯೊಬ್ಬರ ಕತೆ. ಪ್ರೀತಿ ಝಿಂಟಾ ಈಗ ಸಕ್ರೀಯ ರಾಜಕಾರಣದಲ್ಲಿ ಮುಳುಗಲಿದ್ದಾರೆ ಎನ್ನುವುದು ಸಿಕ್ಕಿರುವ ಬ್ರೇಕಿಂಗ್ ನ್ಯೂಸ್.
ಅಂದಹಾಗೆ ಸಿನಿಮಾ ಬಿಟ್ಟು ನಂತರ ಐಪಿಎಲ್ ಕ್ರಿಕೆಟ್‌ನಲ್ಲಿ ಸದ್ದು ಮಾಡಿರುವ ಹುಡುಗಿ ಪ್ರೀತಿ ಯಾಕೆ ಏಕ್‌ದಂ ರಾಜಕಾರಣಕ್ಕೆ ಇಳಿದು ಹೋದಳು ಎನ್ನುವ ಪ್ರಶ್ನೆಗೆ ಈಗಾಗಲೇ ಉತ್ತರ ಸಿಕ್ಕಿಲ್ಲ. ಆದರೆ ರಾಜಕಾರಣಕ್ಕೆ ಬರುವ ವಿಚಾರವಂತೂ ಗ್ಯಾರಂಟಿಯಾಗಿದೆ. ಬಿಜೆಪಿಯಿಂದ ಪ್ರೀತಿಗೆ ಟಿಕೇಟ್: ಬಾಲಿವುಡ್ ಚಿಗರೆ ಪ್ರೀತಿ ಝಿಂಟಾ ಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೇಟ್ ಪಡೆದುಕೊಂಡು ಅಖಾಡಕ್ಕೆ ಇಳಿಯುತ್ತಾರೆ. ಮುಂಬಯಿಯ ನಾರ್ತ್ ಸೆಂಟ್ರಲ್‌ನಿಂದ ಪ್ರೀತಿ ಇಳಿಯುವ ಸಾಧ್ಯತೆಗಳು ದಟ್ಟವಾಗಿದೆ. ಅಂದಹಾಗೆ ಈ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಇಳಿಯುವರು ಪ್ರಿಯಾ ದತ್.
ನಟ ಸಂಜಯ್ ದತ್ ಅವರ ಸಹೋದರಿ ಹಾಗೂ ಸುನೀತ್ ದತ್ ಅವರ ಪುತ್ರಿ ಪ್ರಿಯಾ ದತ್ ವಿರುದ್ಧ ಪ್ರೀತಿ ಝಿಂಟಾ ತೊಳ್ಬಲ ಪ್ರದರ್ಶನಕ್ಕೆ ಇಳಿಯುತ್ತಾರೆ. ಇದರ ಹಿಂದೆ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಕೆಲಸ ಮಾಡಿದ್ದಾರೆ. ಅಂದಹಾಗೆ ಪ್ರೀತಿಗೂ ರೂಡಿಗೂ ಎಲ್ಲಿಯ ಸಂಬಂಧ ಎಂದು ಕೇಳುವ ಮೊದಲು ಜಸ್ಟ್ ಒಂದ್ ಸಾರಿ ನಿಂತು ಬಿಡಿ. ಯಾಕ್ ಅಂದ್ರೆ ಇಬ್ಬರು ತೀರಾ ಹತ್ತಿರದ ಸಂಬಂಧಿಗಳು. ಅದಕ್ಕೂ ಮೊದಲು ಬಿಜೆಪಿ ಪಾಳೆಯದಲ್ಲಿ ಈ ಹಿಂದೆ ಕೂಡ ಪ್ರೀತಿಯ ಹೆಸರು ಕೇಳಿಸಿಕೊಂಡಿತ್ತು. ಆದರೆ ಸಿನಿಮಾ, ಕ್ರಿಕೆಟ್ ಎಂದೇ ಉಸಿರಾಡುತ್ತಿದ್ದ ಪ್ರೀತಿ ಝಿಂಟಾಳಿಗೆ ಈ ಹಿಂದಿನ ಆಫರ್ ಅಷ್ಟಾಗಿ ಹಿಡಿಸಲಿಲ್ಲ. ಈಗ ಸಿನಿಮಾನೂ ಇಲ್ಲ ಇತ್ತ ಕ್ರಿಕೆಟ್‌ನಲ್ಲೂ ಹೆಚ್ಚೇನೂ ಮಾಡಲಾಗುವುದಿಲ್ಲ ಎನ್ನುವ ಕಾರಣಕ್ಕೆ ಪ್ರೀತಿ ರಾಜಕಾರಣಕ್ಕೆ ಇಳಿಯಲು ಏಕ್‌ದಂ ತಯಾರಿ ನಡೆಸಿದ್ದಾರೆ ಎನ್ನುವ ಮಾತಿದೆ. ಆಂಧ್ರದಲ್ಲಿ ಹೊಸ ಪಕ್ಷ ಉದಯ: ತೆಲುಗು ಮೆಗಾ ಸ್ಟಾರ್ ಚಿರಂಜೀವಿ ಅವರ ಸಹೋದರ ಪವನ್ ಕಲ್ಯಾಣ ಸಿನಿಮಾಗಳಲ್ಲಿ ಬ್ಯುಸಿ ಇರುವ ಜತೆಗೆ ರಾಜಕಾರಣಕ್ಕೂ ಇಳಿಯುವ ಸೂಚನೆ ಕೊಟ್ಟಿದ್ದಾರೆ. ಈ ಹಿಂದೆ ತನ್ನ ಸಹೋದರನ ಪ್ರಜಾರಾಜ್ಯಂನಲ್ಲಿ ಸಕ್ರೀಯ ರಾಜಕಾರಣಕ್ಕೆ ಇಳಿದ ಪವನ್ ಕಲ್ಯಾಣ್ ತನ್ನದೇ ಸ್ವಂತ ರಾಜಕೀಯ ಪಕ್ಷ ಕಟ್ಟುವ ಯೋಚನೆ ಮಾಡುತ್ತಿದ್ದಾರೆ ಎನ್ನೋದು ಈಗ ಬಂದಿರುವ ಲೇಟೆಸ್ಟ್ ಸುದ್ದಿ. ಪಕ್ಷದ ಹೆಸರು ಹಾಗೂ ಚಿಹ್ನೆಯ ಕುರಿತು ಯಾವುದೇ ಮಾಹಿತಿ ಸಿಗದೇ ಹೋದರೂ ಕೂಡ ಪಕ್ಷ ಕಟ್ಟುವ ಕೆಲಸವಂತೂ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನೋದು ಹೊರ ಬಂದ ಮಾಹಿತಿ. ಬರುವ ಲೋಕಸಭೆ ಚುನಾವಣೆಯಲ್ಲಿ ಪವನ್ ಈ ಪಕ್ಷದಿಂದಲೇ ಕಣಕ್ಕೆ ಇಳಿಯುತ್ತಾರೆ ಎನ್ನೋದು ಅವರ ಆಪ್ತ ವಲಯ ಹೇಳಿಕೊಳ್ಳುತ್ತಿರುವ ಮಾತು. ಅದಕ್ಕಾಗಿ ಪವನ್ ಕಲ್ಯಾಣ್ ನಟಿಸುತ್ತಿರುವ ಎರಡು ಚಿತ್ರಗಳನ್ನು ಲೋಕಸಭೆ ಚುನಾವಣೆಯ ಬಳಿಕವಷ್ಟೇ ಚಿತ್ರೀಕರಣ ನಡೆಸಬೇಕು ಎನ್ನುವ ಪತ್ರವನ್ನು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಪವನ್ ಕಲ್ಯಾಣ್ ನೀಡಿದ್ದಾರೆ ಎನ್ನುವ ಮಾಹಿತಿ ಇದೆ. ಟೋಟಲಿ ಉತ್ತರ ಧ್ರುವ ಹಾಗೂ ದಕ್ಷಿಣ ಧ್ರುವ ಇಬ್ಬರು ನಟರು ಸಕ್ರೀಯ ರಾಜಕಾರಣಕ್ಕೆ ಇಳಿಯುವ ಸೂಚನೆಯನ್ನು ಚುನಾವಣೆ ಘೋಷಣೆಯಾಗುವ ಮೊದಲೇ ನೀಡಿದ್ದಾರೆ. ಈ ಮೂಲಕ ಬಣ್ಣದ ನಗರಿಯ ರಂಗು ರಾಜಕಾರಣದಲ್ಲೂ ಕಾಣಿಸಿಕೊಳ್ಳುವ ಮಾತು ಒಪ್ಪಲೇ ಬೇಕಾಗುತ್ತದೆ. ಅದಕ್ಕೂ ಮುಖ್ಯವಾಗಿ ದೇಶದಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಮೊದಲು ಅದೆಷ್ಟೋ ನಟ, ನಟಿಯರು ಈ ರಾಜಕಾರಣಕ್ಕೆ ಇಳಿಯುತ್ತಾರೋ ಎನ್ನುವುದು ಪ್ರೇಕ್ಷಕ ಮಹಾಪ್ರಭು ಕಾದು ಕೂರಬೇಕಾಗುತ್ತದೆ.

ಕುಡ್ಲದಲ್ಲಿ ಮಿಂಚು ಹರಿಸಿದ ಫ್ಯಾಶನ್ ದುನಿಯಾ

* ಸ್ಟೀವನ್ ರೇಗೊ, ದಾರಂದಕುಕ್ಕು ಮಿರಿಮಿರಿ ಮಿನುಗುವ ಬೆಳಕು. ಜತೆ ಜತೆಗೆ ಲೈಟ್ ಮ್ಯೂಸಿಕ್. ಟೋಟಲಿ ರ‍್ಯಾಂಪ್ ಮೇಲೆ ನಡೆಯುವ ಮಂದಿಗೆ ಒಂದು ಹುಮ್ಮಸ್ಸು ತಮಗೆ ಗೊತ್ತಿಲ್ಲದೇ ಬೆಳೆದು ಬರುತ್ತದೆ. ಹೌದು. ಇದು ಫ್ಯಾಶನ್ ಎಬಿಸಿಡಿಯ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಮೂರನೇ ಸರಣಿಯ ಅಂತಿಮ ಪಯಣದ ಜಸ್ಟ್ ಹೊಳಪಿನ ಮಾತು.
ಕುಡ್ಲದ ಮಂದಿಗೆ ಫ್ಯಾಶನ್ ಪರೇಡ್ ಎನ್ನುವ ಕಲ್ಪನೆಯೇ ತೀರಾ ಹೊಸತು. ಇಲ್ಲಿಯ ಸೌಂದರ್ಯವನ್ನು ವೇದಿಕೆಯ ಮೇಲೆ ತಂದು ಕೂರಿಸುವಲ್ಲಿ ಮಂಗಳೂರಿನ ಫ್ಯಾಶನ್ ಎಬಿಸಿಡಿ ಸಂಸ್ಥೆಯವರು ಪಡುವ ಪರಿಶ್ರಮದ ಫಲವೇ ಇಂದಿನ ಸೌಂದರ್ಯ ಸ್ಪರ್ಧೆಗಳೇ ಸಾಕ್ಷಿ. ದೂರ ದೂರದ ಊರುಗಳಲ್ಲಿ ನಡೆಯುವ ಫ್ಯಾಶನ್ ಪರೇಡ್‌ಗಳನ್ನು ನೋಡು ನೋಡುತ್ತಾ ಇರುವ ಕುಡ್ಲದ ಮಂದಿಗೆ ಇದೊಂದು ವಿಶೇಷ ಅನುಭವ. ಭಾನುವಾರ ಮೂಡುಬಿದಿರೆಯ ಪಂಡಿತ್ ಹೆಲ್ತ್ ರೆಸಾರ್ಟ್‌ನ ಭವ್ಯ ಸ್ಟೇಜ್ ಮೇಲೆ ೧೪ಯುವ ಮೊಡೆಲ್‌ಗಳು ಹಾಗೂ ೧೭ ರೂಪದರ್ಶಿಗಳು ರ‍್ಯಾಂಪ್ ಮೇಲೆ ನಡೆದು ಸೌಂದರ್ಯ ಲಹರಿಗೆ ಸಾಥ್ ಕೊಟ್ಟರು. ವೆಸ್ಟರ್ನ್ ಹಾಗೂ ಶಾಸ್ತ್ರೀಯ ಸಂಗೀತದ ಹದವಾದ ಮಿಶ್ರಣದಲ್ಲಿ ಮೂಡಿ ಬರುತ್ತಿದ್ದ ಹಾಡುಗಳ ತಾಳ ಮೊಡೆಲ್‌ಗಳ ಕ್ಯಾಟ್‌ವಾಕ್‌ಗೆ ಸಾಥ್ ಕೊಡುವಂತಿತ್ತು. ಮೂರು ಹಂತಗಳಲ್ಲಿ ನಡೆದ ಈ ಸೌಂದರ್ಯ ಸ್ಪರ್ಧೆಯಲ್ಲಿ ಎರಡನೇ ಹಂತದಲ್ಲಿ ೧೨ ಹಾಗೂ ಮೂರನೇ ಹಂತದಲ್ಲಿ ೬ರಂತೆ ಕೊನೆಗೆ ಮೂವರನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆ ಈ ಸೌಂದರ್ಯ ಸ್ಪರ್ಧೆಯ ಹೈಲೇಟ್‌ಗಳಲ್ಲಿ ಒಂದಾಗಿದೆ. ಈ ಬಾರಿ ಸಖತ್ ಡಿಫರೆಂಟ್: ಫ್ಯಾಶನ್ ಎಬಿಸಿಡಿಯ ಆಯೋಜಿತ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸ್ಪರ್ಧೆಯೇ ಒಂದು ಡಿಫರೆಂಟ್ ಕಲ್ಪನೆ. ಮಂಗಳೂರು ಮೂಲದ ಅದರಲ್ಲೂ ತುಳುನಾಡಿನಲ್ಲಿ ಹುಟ್ಟಿ ನಂತರ ದೇಶ- ವಿದೇಶದಲ್ಲಿರುವ ನಾನಾ ಸುಂದರ ಯುವಕ-ಯುವತಿಯರನ್ನು ಫ್ಯಾಶನ್ ದುನಿಯಾಕ್ಕೆ ಕರೆ ತರುವುದು ಈ ಫ್ಯಾಶನ್ ಶೋನ ಮೂಲ ಉದ್ದೇಶ. ಈ ಸ್ಪರ್ಧೆಯ ಮೂಲಕ ಕರಾವಳಿಯ ಸಂಪ್ರದಾಯ, ಕಲಾಚಾರ ಜತೆಗೆ ಪ್ರವಾಸೋದ್ಯಮಕ್ಕೆ ವಿಶೇಷ ಮನ್ನಣೆ ಒದಗಿಸಿ ಕೊಡುವ ಪ್ರಯತ್ನ ಕೂಡ ಇಲ್ಲಿ ನಡೆಯುತ್ತದೆ. ಅದರಲ್ಲೂ ಇಲ್ಲಿ ವಿಜೇತರಾದವರಿಗೆ ದೇಶದ ಪ್ರತಿಷ್ಠಿತ ಮಿಸ್ ಸೌತ್ ಇಂಡಿಯಾ ಸ್ಪರ್ಧೆಗೆ ನೇರ ಪ್ರವೇಶಾತಿ ಕೂಡ ಸಿಗಲಿದೆ.
ಮಿಸ್ಟರ್ ಮಂಗಳೂರಿನಲ್ಲಿ ವಿಜೇತರಾದವರಿಗೆ ಹೊಸದಿಲ್ಲಿಯಲ್ಲಿ ನಡೆಯುವ ಮಿಸ್ಟರ್ ಇಂಡಿಯಾ ಗ್ಲೋಬಲ್‌ನಲ್ಲಿ ನೇರ ಪ್ರವೇಶ ಪಡೆಯುತ್ತಾರೆ. ಮುಖ್ಯವಾಗಿ ಸಿನಿಮಾದಲ್ಲಿ ನಟನೆ, ನಾನಾ ಕಂಪನಿಗಳ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸೀಡರ್ ಆಗುವ ಯೋಗ ಕೂಡ ಲಭ್ಯವಾಗಲಿದೆ ಎನ್ನುವುದು ಫ್ಯಾಶನ್ ಎಬಿಸಿಡಿ ಸಂಸ್ಥೆಯವರು ಹೇಳುವ ಮಾತು. ಮಿಸ್ ಆಂಡ್ ಮಿಸ್ಟರ್ ಮಂಗಳೂರು ಗೆದ್ದವರು: ಮಂಗಳೂರಿನಲ್ಲಿ ನಡೆಯುತ್ತಿರುವ ಮೂರನೇ ಸರಣಿಯ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸರಣಿಯಲ್ಲಿ ಈ ಬಾರಿಯ ವಿಜೇತರಾದ ಮಿಸ್ ಮಂಗಳೂರು ಫಾಹಿಮ್ ಪಾತಿಮಾ ಅದೇ ರೀತಿಯಲ್ಲಿ ಮಿಸ್ ಮಂಗಳೂರು ಫಸ್ಟ್ ರನ್ನರ್ ಆಫ್ ಅವಿನ್ ದಿವ್ಯಾ ವಾಸ್, ಸೆಕೆಂಡ್ ರನ್ನರ್ ಆಫ್ ವರುಣಾ ಸಂಪತ್ ಆಯ್ಕೆಯಾದರು. ಮಿಸ್ಟರ್ ಮಂಗಳೂರಿನಲ್ಲಿ ಪುನೀತ್ ಜಯದೇವ್ ವಿನ್ನರ್ ಆಗಿ ಮೂಡಿಬಂದರು. ಉಳಿದಂತೆ ಫಸ್ಟ್ ರನ್ನರ್ ಆಫ್ ವಿಕಾಸ್ ಪುತ್ರನ್, ಸೆಕೆಂಡ್ ರನ್ನರ್ ಆಫ್ ಆಗಿ ಸನಾಂ ಅಮೀನ್ ಆಯ್ಕೆಯಾದರು. ಫ್ಯಾಶನ್ ದುನಿಯಾಕ್ಕೆ ಲುಕ್ ತಂದ ಗೆಸ್ಟ್‌ಗಳು: ಈ ವಿಶೇಷ ಫ್ಯಾಶನ್ ಶೋನಲ್ಲಿ ಮುಂಬಯಿ ಖ್ಯಾತ ಫರ್‌ಸೆಫ್ಟ್ ಗ್ರೂಫ್‌ನ ಮುಖ್ಯಸ್ಥ ಹರೀಂದರ್ ಸಿಂಗ್, ಲ್ಯಾಕ್ಮೆ ಫ್ಯಾಶನ್ ವೀಕ್‌ನ ನಿಕಿತಾ ಪೂಂಜಾ, ಮಿಸ್ ಸೌತ್ ಇಂಡಿಯಾದ ರೂವಾರಿ ಅಜಿತ್ ರವಿ, ಸಿನಿಮಾ ನಿರ್ಮಾಪಕ ರಾಜೇಶ್ ಭಟ್,ಮಹಾರಾಷ್ಟ್ರದ ಡಿಜಿಪಿ ಶ್ರೀದೇವಿ ಗೋಯಲ್, ಮಿಸ್ ಇಂಡಿಯಾ ಫೈನಲಿಸ್ಟ್ ಪ್ರಥ್ವಿ ರಾವ್, ಡಾ. ಶಿಲ್ಪಾ ಶೆಟ್ಟಿ ನಾಯಕ್, ಡಾ. ಸ್ವಪ್ನಾ ಧನಂಜಯ್, ಚಿತ್ರ ನಿರ್ದೇಶಕ ಸಂದೀಪ್ ಮಲಾನಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಹದಿನಾಲ್ಕು ವರ್ಷದ ನಂತ್ರ ಬಂದ್ರು

* ಸ್ಟೀವನ್ ರೇಗೊ, ದಾರಂದಕುಕ್ಕು ಒಂದಲ್ಲ ಎರಡಲ್ಲ ಹದಿನಾಲ್ಕು ವರ್ಷ ದೂರ ಇರೋದು ಅಂದ್ರೆ ಸುಮ್ಮನೆನಾ..? ನೋ ಚಾನ್ಸ್ ಇಷ್ಟು ದೊಡ್ಡ ಗ್ಯಾಪ್ ಎನ್ನೋದು ಬಾಯಿ ಮಾತಿನಲ್ಲಿ ವ್ಯಾಖ್ಯೆನಾ ನೀಡಲು ಸಾಧ್ಯವಿಲ್ಲ. ಆದರೆ ಇದು ಸತ್ಯ. ಹದಿನಾಲ್ಕು ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ ಎನ್ನೋದೇ ಬಹಳ ಖುಷಿ. ಹೌದು.
ಬಾಲಿವುಡ್ ಚಿತ್ರ ‘ಘಾತ್’ ಹಾಗೂ ‘ದಿಲ್ ಪೇ ಮತ್ ಲೇ ಯಾರ್’ ಚಿತ್ರಗಳಲ್ಲಿ ಈ ಜೋಡಿ ಜತೆಯಾಗಿ ಕಾಣಿಸಿಕೊಂಡಿತ್ತು. ಈಗ ಮತ್ತೆ ಒಂದಾಗುವ ಸೂಚನೆ ನೀಡಿದ್ದಾರೆ. ಅಂದಹಾಗೆ ಅವರಿಬ್ಬರು ಯಾರು ಅಂತೀರಾ.. ಮನೋಜ್ ಬಾಜಪೇಯಿ ಹಾಗೂ ತಬು ವಿಕ್ರಂ ಮಲ್ಹೋತ್ರಾ ಹಾಗೂ ನೀರಜ್ ಪಾಂಡೆಯ ಜತೆಯಾಗಿ ತರಲಿರುವ ಚಿತ್ರವೊಂದಕ್ಕೆ ಇಬ್ಬರು ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ ರಂಗಭೂಮಿಯ ನೀರು ಕುಡಿದು ಬೆಳೆದ ಮನೋಜ್ ಬಾಜ್‌ಪೇಯಿ ಹಾಗೂ ತಬು ಕೆಮಿಸ್ಟ್ರಿ ಈ ಹಿಂದಿನ ಎರಡು ಚಿತ್ರಗಳಲ್ಲಿ ಸಖತ್ ಆಗಿ ವರ್ಕ್ ಔಟ್ ಆಗಿತ್ತು. ಅದರಲ್ಲೂ ಮುಖ್ಯವಾಗಿ ಈ ಹೊಸ ಚಿತ್ರ ‘ಸೈಕಲಾಜಿಕಲ್ ಥ್ರಿಲ್ಲರ್’ ಆಗಿದೆ. ಇಂತಹ ಚಿತ್ರಗಳಲ್ಲಿ ಪಾತ್ರ ಮಾಡೋದು ಎಂದರೆ ಮನೋಜ್‌ಗೆ ಎಲ್ಲಿಲ್ಲದ ಖುಷಿ. ಇದೇ ಖುಷಿಯಿಂದ ಈ ಪಾತ್ರವನ್ನು ಮಾಡುತ್ತಿದ್ದಾರೆ ಎನ್ನೋದು ನಿರ್ಮಾಪಕರ ಮಾತು. ಈ ಸೈಕಲಾಜಿಕಲ್ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಮನೋಜ್ ಅಭಯಂಕರ್. ಈಗಾಗಲೇ ಬಾಲಿವುಡ್‌ನ ಖ್ಯಾತ ನಾಮ ನಿರ್ದೇಶಕರ ಕೈ ಕೆಳಗೆ ದುಡಿದ ವ್ಯಕ್ತಿ. ಅದರಲ್ಲೂ ‘ಅಕ್ಸ್’ ನ ಓಂ ಪ್ರಕಾಶ್ ಮೆಹ್ರಾ, ಸ್ಪೆಶಲ್ ಚಬ್ಬೀಸ್‌ನ ನಿರಜ್ ಜತೆಯಲ್ಲಿ ಮನೋಜ್ ಕೆಲಸದ ಅನುಭವ ಪಡೆದುಕೊಂಡಿದ್ದವರು.
ಈಗಾಗಲೇ ‘ಸಾತ್ ಉಚ್ಚಾಯಿ’ ಚಿತ್ರವನ್ನು ಒಂದು ಹಂತಕ್ಕೆ ತಂದು ಮುಟ್ಟಿಸಿದ್ದಾರೆ. ಈಗ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಇದರ ಜತೆಗೆ ನಿರ್ಮಾಪಕ ಸಂಜಯ್ ಗುಪ್ತಾ ಅವರ ಮುಂಬಯಿ ಬೇಸ್ಡ್ ಅಪರಾಧ ಜಗತ್ತಿನ ಅರುಣ್ ಗಾವ್ಲಿಯ ಚಿತ್ರದ ಕತೆಯನ್ನು ಮನೋಜ್ ಸಿದ್ಧ ಪಡಿಸುತ್ತಿದ್ದಾರೆ ಎನ್ನುವ ಮಾತಿದೆ. ಟೋಟಲಿ ಎಲ್ಲಕ್ಕಿಂತಲೂ ಮುಖ್ಯವಾಗಿ ಮನೋಜ್ ಬಾಜಪೇಯಿ ಹಾಗೂ ತಬು ಮತ್ತೆ ಜತೆಗೂಡುತ್ತಿದ್ದಾರೆ ಎನ್ನೋದು ಪ್ರೇಕ್ಷಕರಿಗೆ ಖುಷಿ ಪಡುವ ವಿಷ್ಯಾ.

ಪಿಂಕಿ ಕೈಯಲ್ಲಿ ಹರ್ಲಿ ಡೇವಿಡ್‌ಸನ್ ಬೈಕ್ !

*ಸ್ಟೀವನ್ ರೇಗೊ, ದಾರಂದಕುಕ್ಕು ಬಾಲಿವುಡ್ ಸಿನಿಮಾ ರಂಗದಲ್ಲಿ ಗಟ್ಟಿತನದ ಮಾತು ಬರೀ ನಟರಿಂದ ಮಾತ್ರ ಬರೋದು ಎನ್ನುವ ಟಾಕ್ ಇತ್ತು. ಆದರೆ ಇವರ ಮುಂದೆ ಬಾಲಿವುಡ್ ನಟಿಯರು ಸುಮ್ಮನೆಯಾಗುತ್ತಿದ್ದರು. ಆದರೆ ಪ್ರಸೆಂಟ್ ಕಂಡೀಷನ್‌ನಲ್ಲಿ ಹೇಳುವುದಾದರೆ ಬಾಲಿವುಡ್ ನಟರ ಮುಂದೆ ನಟಿಯರು ತೊಡೆ ತಟ್ಟಿಕೊಂಡು ಮುಂದೆ ಬಂದಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಿಂದ ಕೇಳಿಸಿಕೊಂಡು ಬಂದಿದೆ.
ಅಂದಹಾಗೆ ಏನಪ್ಪಾ ವಿಷ್ಯಾ ಅಂದ್ರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಮೇರಿಕ ಮೂಲದ ಹರ್ಲಿ ಡೇವಿಡ್‌ಸನ್ ಬೈಕ್ ಖರೀದಿ ಮಾಡಿದ್ದಾರೆ. ಅರೇ ಅಮೆರಿಕದ ಈ ದುಬಾರಿ ಬೈಕ್ ಖರೀದಿ ಮಾಡುವಲ್ಲಿ ಪಿಂಕಿ ಯಾಕೆ ಇಷ್ಟೊಂದು ಆಸಕ್ತಿ ಬೆಳೆಸಿಕೊಂಡರು ಎನ್ನುವ ಕುತೂಹಲದಿಂದ ಕಣ್ಣು ಮಿಟುಕಿಸಿದಾಗ ಎದುರಿಗೆ ಬಂದ ಸತ್ಯ ಏನಪ್ಪಾ ಅಂದ್ರೆ...ಖಾಸಗಿ ವಾಹಿನಿಯಲ್ಲಿ ಈ ಹಿಂದೆ ಬಂದ ‘ಕತ್ರೋ ಕೇ ಕಿಲಾಡಿ-೩’ಯ ಚಿತ್ರೀಕರಣದ ಸಮಯದಲ್ಲಿ ಪಿಂಕಿ ಹರ್ಲಿ ಡೇವಿಡ್‌ಸನ್ ಬೈಕ್ ಮೇಲೆ ಬರುವ ಸನ್ನಿವೇಶವನ್ನು ಚಿತ್ರೀಕರಿಸಲಾಗಿತ್ತು. ಆದರೆ ಪಿಂಕಿ ಈ ಸಮಯದಲ್ಲಿ ಬರೀ ಹೆದರಿಕೊಂಡಿದ್ದರು. ಆದರೂ ಧೈರ್ಯವಾಗಿ ಈ ಬೈಕ್ ಮೇಲೆ ಕೂತು ಹರ್ಲಿ ಡೇವಿಡ್‌ಸನ್ ಬಿಡುವಾಗ ಎಲ್ಲರೂ ಚಪ್ಪಾಳೆ ತಟ್ಟಿದರಂತೆ. ಈ ಬಳಿಕ ಪಿಂಕಿ ಪ್ರತಿ ಬಾರಿಯೂ ಇಂತಹ ಬೈಕ್ ಖರೀದಿ ಮಾಡಿಕೊಂಡು ಬಿಡಬೇಕು ಎನ್ನುವುದು ಬಯಕೆಯಾಗಿತ್ತು ಎನ್ನುವುದು ಪಿಂಕಿ ತನ್ನ ಆಪ್ತ ಮೂಲಗಳಲ್ಲಿ ಹೇಳಿಕೊಂಡು ತಿರುಗಾಡುತ್ತಿದ್ದರಂತೆ. ಈಗ ಇಂತಹ ಹರ್ಲಿ ಡೇವಿಡ್‌ಸನ್ ಬೈಕ್ ಮೂಲಕ ಚಿತ್ರೀಕರಣಕ್ಕೆ ಬರಬೇಕು ಎನ್ನುವ ಆಸೆ ಕೂಡ ಪಿಂಕಿಗೆ ಬಂದಿದೆ. ಮುಂಬಯಿಯ ಬ್ಯುಸಿ ಟ್ರಾಫಿಕ್‌ನಲ್ಲಿ ಪಿಂಕಿ ಹೇಗೆ ಹರ್ಲಿ ಡೇವಿಡ್‌ಸನ್ ಬೈಕ್ ಬಿಡುತ್ತಾರೆ ಎನ್ನುವ ಕುತೂಹಲ ಬಹಳ ಮಂದಿಗೆ ಬಂದಿದೆ. ಅದಕ್ಕೆ ಪಿಂಕಿಯೇ ಉತ್ತರ ನೀಡಬೇಕು ಅಲ್ವಾ...
ಅಂದಹಾಗೆ ಹರ್ಲಿ ಡೇವಿಡ್‌ಸನ್ ಬೈಕ್ ಕುರಿತ ಮಾತು ಹೀಗಿದೆ: ಅಮೆರಿಕದ ದೈತ್ಯಬೈಕುಗಳ ಸಂಸ್ಥೆ ಹರ್ಲೆ ಡೇವಿಡ್ ಸನ್ ಬೈಕ್ ಪ್ರಪಂಚದಲ್ಲಿ ಒಂದು ಶತಮಾನಕ್ಕೂ ಅಧಿಕ ಅನುಭವವುಳ್ಳ ಸಂಸ್ಥೆ . ಇದರಡಿಯಲ್ಲಿ ಒಟ್ಟು ೧೨ ಮಾದರಿ ಬೈಕುಗಳು ಸದ್ಯ ಭಾರತದ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೊಸದಿಲ್ಲಿ, ಮುಂಬಯಿ, ಚಂಡೀಗಢ, ಬೆಂಗಳೂರು ಹಾಗೂ ಹೈದರಾಬಾದ್ ನಗರಗಳಲ್ಲಿ ಅಧಿಕೃತ ಡೀಲರ್ ಷೋರೂಂಗಳನ್ನು ಸಂಸ್ಥೆ ಆರಂಭಿಸಿದೆ. ಹರ್ಲೆ ಡೇವಿಡ್ ಸನ್ ಮೋಟರ್ ಸೈಕಲ್ ಕುಟುಂಬದ ಹೊಸ ಮಾದರಿಗಳಾದ ಸ್ಫೋರ್ಟ್ ಸ್ಟರ್, ಡೈನಾ, ವಿಆರ್ ಎಸ್ಸಿ, ಸಾಫ್ಟ್ ಟೈಲ್ ಮತ್ತು ಟೂರಿಂಗ್ ಭಾರತದಲ್ಲಿ ಹೆಚ್ಚಿನ ಬೇಡಿಕೆಯಿದೆ. ಬೆಲೆ ಸುಮಾರು ರೂ.೬,೯೫,೦೦೦ ರಿಂದ ರೂ. ೩೪,೯೫,೦೦೦ ಇದೆ. ಸುಮಾರು ೮೮೩ ಸಿಸಿ ಇಂದ ೧೮೦೩ ಸಿಸಿ ಸಾಮರ್ಥ್ಯದ ಬೈಕುಗಳನ್ನು ಭಾರತಕ್ಕೆ ಪರಿಚಯಿಸಲಾಗಿದೆ ಎನ್ನುವುದು ಹರ್ಲೆ ಡೇವಿಡ್‌ಸನ್ ಸಂಸ್ಥೆಯ ಮೂಲದ ಮಾಹಿತಿ.