Tuesday, February 25, 2014

ಕುಡ್ಲದಲ್ಲಿ ಮತ್ತೆ ಬಂತು ಫ್ಯಾಶನ್ ಶೋ ಹವಾ !

* ಸ್ಟೀವನ್ ರೇಗೊ, ದಾರಂದಕುಕ್ಕು ಕುಡ್ಲದ ಫ್ಯಾಶನ್ ಮಾರುಕಟ್ಟೆ ಈಗ ಏಕ್ ದಂ ಚಿಗಿತುಕೊಂಡಿದೆ. ರಂಗೀನ್ ಬಟ್ಟೆ ಹಾಕಿಕೊಂಡು ರ‍್ಯಾಂಪ್ ಮೇಲೆ ನಡೆಯಲು ಮಂಗಳೂರಿನ ಯುವಜನತೆಗೆ ಮತ್ತೊಂದು ಅವಕಾಶ ಒದಗಿ ಬಂದಿದೆ. ಹೌದು. ರೂಪದರ್ಶಿಗಳಿಗೆ ತರಬೇತಿ ನೀಡುತ್ತಿರುವ ಮಂಗಳೂರಿನ ಏಕೈಕ ಸಂಸ್ಥೆ ಫ್ಯಾಶನ್ ಎಬಿಸಿಡಿ ತನ್ನ ಮೂರನೇ ಆವೃತ್ತಿಯ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸ್ಪರ್ಧೆಯನ್ನು ಮಾ.೨ರಂದು ಮೂಡುಬಿದಿರೆಯ ಪಂಡಿತ್ ಹೆಲ್ತ್ ರೆಸಾರ್ಟ್ ಆಂಡ್ ಸ್ಪಾದಲ್ಲಿ ನಡೆಯಲಿದೆ.
ಸದಾ ಕಾಲ ಹೊಸ ಹವಾ ಸೃಷ್ಟಿ ಮಾಡಿಕೊಂಡು ಮುನ್ನುಗ್ಗುತ್ತಿರುವ ಕುಡ್ಲದಲ್ಲಿ ಇಂತಹ ಫ್ಯಾಶನ್ ಪರೇಡ್‌ಗಳು ಯುವಜನತೆಯ ಟೇಸ್ಟ್‌ಗೆ ಲಿಂಕ್ ಆಗುತ್ತಿದೆ ಎನ್ನುವುದು ಕಳೆದ ಎರಡು ಬಾರಿ ಇಂತಹ ಸ್ಪರ್ಧೆಯನ್ನು ಆಯೋಜಿಸಿ ಗೆದ್ದು ಬಂದಿರುವ ಫ್ಯಾಶನ್ ಎಬಿಸಿಡಿಯ ಮುಖ್ಯಸ್ಥರಾದ ಅನುಪಮ ಸುವರ್ಣ ಅವರ ಮಾತು. ಅವರು ಹೇಳುವಂತೆ ಇಂತಹ ಸ್ಪರ್ಧೆಗಳಿಂದ ಮಂಗಳೂರಿನಲ್ಲಿ ಫ್ಯಾಶನ್ ಹಬ್‌ವೊಂದು ಸೃಷ್ಟಿಯಾಗುತ್ತದೆ. ಹೊಸ ಹೊಸ ರೂಪದರ್ಶಿಗಳು ಫ್ಯಾಶನ್ ಲೋಕಕ್ಕೆ ಎಂಟ್ರಿ ಪಡೆಯುವ ಅವಕಾಶ ಇಲ್ಲಿಂದ ಲಭ್ಯವಾಗುತ್ತದೆ. ಈಗಾಗಲೇ ಫ್ಯಾಶನ್ ಎಬಿಸಿಡಿಯಿಂದ ತರಬೇತಿ ಪಡೆದುಕೊಂಡು ಹೋದವರು ಈಗ ರೂಪದರ್ಶಿಗಳಾಗಿ ರ‍್ಯಾಂಪ್ ಮೇಲೆ ಮೂಡಿ ಮಾಡುತ್ತಿದ್ದಾರೆ ಎನ್ನೋದು ಅವರ ಮಾತು. ಫ್ಯಾಶನ್ ಏನಿದೆ ಹೊಸತು : ಫ್ಯಾಶನ್ ಎಬಿಸಿಡಿಯ ಆಯೋಜಿತ ಮಿಸ್ ಆಂಡ್ ಮಿಸ್ಟರ್ ಮಂಗಳೂರು ಸ್ಪರ್ಧೆಯೇ ಒಂದು ಡಿಫರೆಂಟ್ ಕಲ್ಪನೆ. ಮಂಗಳೂರು ಮೂಲದ ಅದರಲ್ಲೂ ತುಳುನಾಡಿನಲ್ಲಿ ಹುಟ್ಟಿ ನಂತರ ದೇಶ- ವಿದೇಶದಲ್ಲಿರುವ ನಾನಾ ಸುಂದರ ಯುವಕ-ಯುವತಿಯರನ್ನು ಫ್ಯಾಶನ್ ದುನಿಯಾಕ್ಕೆ ಕರೆ ತರುವುದು ಈ ಫ್ಯಾಶನ್ ಶೋನ ಮೂಲ ಉದ್ದೇಶ. ಈ ಸ್ಪರ್ಧೆಯ ಮೂಲಕ ಕರಾವಳಿಯ ಸಂಪ್ರದಾಯ, ಕಲಾಚಾರ ಜತೆಗೆ ಪ್ರವಾಸೋದ್ಯಮಕ್ಕೆ ವಿಶೇಷ ಮನ್ನಣೆ ಒದಗಿಸಿ ಕೊಡುವ ಪ್ರಯತ್ನ ಕೂಡ ಇಲ್ಲಿ ನಡೆಯುತ್ತದೆ. ಅದರಲ್ಲೂ ಇಲ್ಲಿ ವಿಜೇತರಾದವರಿಗೆ ದೇಶದ ಪ್ರತಿಷ್ಠಿತ ಮಿಸ್ ಸೌತ್ ಇಂಡಿಯಾ ಸ್ಪರ್ಧೆಗೆ ನೇರ ಪ್ರವೇಶಾತಿ ಕೂಡ ಸಿಗಲಿದೆ. ಮಿಸ್ಟರ್ ಮಂಗಳೂರಿನಲ್ಲಿ ವಿಜೇತರಾದವರಿಗೆ ಹೊಸದಿಲ್ಲಿಯಲ್ಲಿ ನಡೆಯುವ ಮಿಸ್ಟರ್ ಇಂಡಿಯಾ ಗ್ಲೋಬಲ್‌ನಲ್ಲಿ ನೇರ ಪ್ರವೇಶ ಪಡೆಯುತ್ತಾರೆ ಎನ್ನುವುದು ಫ್ಯಾಶನ್ ಎಬಿಸಿಡಿಯ ಮುಖ್ಯಸ್ಥರ ಮಾತು. ಮಾ.೨ರಂದು ನಡೆಯಲಿರುವ ಫ್ಯಾಶನ್ ಶೋನಲ್ಲಿ ಮೂರು ಹಂತಗಳ ಸ್ಪರ್ಧೆ ಕಾಣಸಿಗಲಿದೆ. ಫ್ಯಾಶನ್ ದುನಿಯಾಕ್ಕೆ ಲುಕ್ ತರುವ ಗೆಸ್ಟ್‌ಗಳು: ಈ ವಿಶೇಷ ಫ್ಯಾಶನ್ ಶೋನಲ್ಲಿ ಮುಂಬಯಿ ಖ್ಯಾತ ಫರ್‌ಸೆಪ್ಟ್ ಗ್ರೂಫ್‌ನ ಮುಖ್ಯಸ್ಥ ಹರೀಂದರ್ ಸಿಂಗ್, ಲ್ಯಾಕ್ಮೆ ಫ್ಯಾಶನ್ ವೀಕ್‌ನ ನಿಕಿತಾ ಪೂಂಜಾ, ಮಿಸ್ ಸೌತ್ ಇಂಡಿಯಾದ ರೂವಾರಿ ಅಜಿತ್ ರವಿ, ದೇಶದ ಖ್ಯಾತ ಫ್ಯಾಶನ್ ಡಿಸೈನರ್ ಆನಂದ್ ಜೀ ಅವರು ಭಾಗವಹಿಸಲಿದ್ದಾರೆ. ಮಿಸ್ ಸೌತ್ ಇಂಡಿಯಾ ಫೇಮ್ ಅಭಿಷಿಕ್ತಾ ಶೆಟ್ಟಿ, ಚಿತ್ರ ನಿರ್ಮಾಪಕ ರಾಜೇಶ್ ಭಟ್, ಮಿಸ್ ಇಂಡಿಯಾ ಫೈನಲಿಸ್ಟ್ ಪ್ರಥ್ವಿ ರಾವ್ ಸೇರಿದಂತೆ ನಾನಾ ಮಂದಿ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ. ಕೋಟ್ ಕಾರ್ನರ್: ‘ಈ ಸ್ಪರ್ಧೆಯ ಮೂಲಕ ಸೌಂದರ್ಯ ಲೋಕದ ಅನಾವರಣ ಮಾಡುವ ಕೆಲಸ ನಡೆಯುತ್ತಿದೆ. ಕರಾವಳಿ ಬರೀ ಆಚಾರ- ವಿಚಾರಗಳ ಜತೆಗೆ ಸೌಂದರ್ಯ ಸ್ಪರ್ಧೆಗಳಿಗೂ ಮನ್ನಣೆ ಸಿಗಬೇಕು’ -ಅನುಪಮ ಸುವರ್ಣ, ಮಿಸ್ ಆಂಡ್ ಮಿಸ್ಟರ್ ಮಂಗಳೂರು ಆಯೋಜಕರು . ಕೋಟ್ ಕಾರ್ನರ್: ಮಂಗಳೂರಿನಿಂದ ಐಶ್, ಶಿಲ್ಪಾರಂತಹ ಬೆಡಗಿಯರು ವಿಶ್ವ ಮಟ್ಟದಲ್ಲಿ ಮಿಂಚಿದ್ದಾರೆ. ಮಂಗಳೂರಿನ ಸೌಂದರ್ಯ, ಆಚಾರ- ವಿಚಾರ, ಕಲೆ ಎಲ್ಲವೂ ಇಂಟರ್‌ನ್ಯಾಷನಲ್ ಮಾರುಕಟ್ಟೆಯಲ್ಲಿ ಹೆಸರು ಮಾಡಬೇಕಾದರೆ ಇಂತಹ ಸೌಂದರ್ಯ ಸ್ಫರ್ಧೆಗಳು ನಿಜಕ್ಕೂ ಅನಿವಾರ್ಯ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. - ಸಂದೀಪ್ ಮಲಾನಿ, ಬಾಲಿವುಡ್ ಚಿತ್ರ ನಿರ್ದೇಶಕ.

Saturday, February 22, 2014

ಕುಡ್ಲದ ಹುಡುಗಿಗೆ ಟಾಲಿವುಡ್ ಕಾಲ್

* ಸ್ಟೀವನ್ ರೇಗೊ, ದಾರಂದಕುಕ್ಕು ಸಿನಿಮಾ ರಂಗನೇ ಹಾಗೇ ಅದೊಂದು ರಂಗೀನ್ ದುನಿಯಾ.ಇಲ್ಲಿಗೆ ಬಂದವರು ಕ್ಲಿಕ್ ಆಗೋದು ಅವರ ಅದೃಷ್ಟದಾಟಕ್ಕೆ ಬಿಟ್ಟದ್ದು. ಆದರೆ ಕುಡ್ಲದ ಪೊಣ್ಣು(ಹುಡುಗಿ) ಪೂಜಾ ಹೆಗ್ಡೆ ಮಾತ್ರ ಡಿಫರೆಂಟ್ ಕಾರಣ ಇಷ್ಟೇ ತಮ್ಮ ಕಾಲಿವುಡ್‌ನಲ್ಲಿ ಬಂದ ಮೊದಲ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ ಹುಡುಗಿ ಏಕ್‌ದಂ ಲಗ್ಗೆ ಹಾಕಿರೋದು ಮಾತ್ರ ಟಾಲಿವುಡ್ ರಂಗದಲ್ಲಿ ಎನ್ನೋದು ವಿಶೇಷ. ಟಾಲಿವುಡ್ ಸಿನಿಮಾ ಗಲ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಎರಡು ಬಿಗ್ ಬಜೆಟ್ ಚಿತ್ರಗಳಿಗೆ ಪೂಜಾ ಹೆಗ್ಡೆ ನಾಯಕಿ ರೋಲ್‌ಗೆ ಸೆಲೆಕ್ಟ್ ಆಗಿ ಬಿಟ್ಟಿದ್ದಾರೆ. ತೆಲುಗಿನ ವಿಜಯ ಕುಮಾರ್ ಕೊಂಡ ನಿರ್ದೇಶನ ಮಾಡುತ್ತಿರುವ ನಟ ನಾಗಚೈತನ್ಯ ಚಿತ್ರದಲ್ಲಿ ಪೂಜಾ ನಾಯಕಿ. ಅದೇ ರೀತಿಯಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಸೋದರ ಸಂಬಂಧಿ ವರುಣ್ ತೇಜಾ ನಾಯಕನಾಗಿರುವ ನಿರ್ದೇಶಕ ಶ್ರೀಕಾಂತ್ ಅಡಲಾ ಅವರ ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿ ರೋಲ್‌ಗೆ ಬುಕ್ ಆಗಿದ್ದಾರೆ. ಈ ಎರಡು ಚಿತ್ರಗಳು ಈ ವರ್ಷದ ಕೊನೆ ಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಇದರ ಜತೆಯಲ್ಲಿ ಬಾಲಿವುಡ್ ಚಿತ್ರನಗರಿಯಿಂದಲೂ ಪೂಜಾಳಿಗೆ ಕಾಲ್ ಬಂದಿದೆ ಎನ್ನೋದು ಆಪ್ತ ಮೂಲವೊಂದು ಹೇಳುತ್ತಿದೆ.
೨೦೧೦ರಲ್ಲಿ ಕಾಲಿವುಡ್ ಸಿನಿಮಾ ನಗರಿಯಲ್ಲಿ ಬಿಡುಗಡೆ ಕಂಡ ‘ಮೊಗಮೋಡಿ’ಯಲ್ಲಿ ನಟ ಜೀವಾರಿಗೆ ನಾಯಕಿಯಾಗಿ ಕಾಣಿಸಿಕೊಂಡ ಪೂಜಾ ರೂಪದರ್ಶಿಯಾಗಿ ಕೂಡ ಮಿಂಚಿದವರು. ಮೂಲತಃ ಕರಾವಳಿ ಮೂಲದ ಬಂಟರ ಕುಟುಂಬದ ಹುಡುಗಿ ಪೂಜಾ ಒಳ್ಳೆಯ ಭರತ ನಾಟ್ಯ ನೃತ್ಯಪಟು. ೨೦೧೦ರಲ್ಲಿ ಮಿಸ್ ಯೂನಿವರ್ಸ್ ಇಂಡಿಯಾದಲ್ಲಿ ಸೆಕೆಂಡ್ ರನ್ನರ್ ಆಫ್ ಆಗಿಯೂ ಗುರುತಿಸಿಕೊಂಡ ಪೂಜಾ ಎರಡು ಮೂರು ಸೌಂದರ್ಯ ಸ್ಪರ್ಧೆಯಲ್ಲೂ ಗೆದ್ದು ಬಂದವರು. ‘ಮೊಗಮೋಡಿ’ಯಲ್ಲಿ ಬಬ್ಲಿ ಪಾತ್ರದಲ್ಲಿ ಮಿಂಚಿದ ಪೂಜಾಳಿಗೆ ಕಾಲಿವುಡ್ ಚಿತ್ರನಗರಿಗಿಂತ ಹೆಚ್ಚಾಗಿ ಟಾಲಿವುಡ್ ಸಿನಿಮಾ ಜಗತ್ತೇ ಅವಕಾಶಗಳನ್ನು ಕೊಟ್ಟುಬಿಟ್ಟಿದೆ. ಆದರೆ ಮೊದಲ ಅವಕಾಶ ನೀಡಿದ ಕಾಲಿವುಡ್ ಚಿತ್ರರಂಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಮೊದಲ ಚಿತ್ರದಲ್ಲಿ ನಟ ಜೀವಾ ಹಾಗೂ ಚಿತ್ರದ ನಿರ್ದೇಶಕರು ನೀಡಿದ ಪ್ರೋತ್ಸಾಹವಂತೂ ನನಗೆ ಮರೆಯಲು ಸಾಧ್ಯವಿಲ್ಲ ಎನ್ನುವುದು ಪೂಜಾ ಹೆಗ್ಡೆ ಮಾತು. ಪೂಜಾ ತೆಲುಗು ಚಿತ್ರಗಳ ಕುರಿತು ಹೇಳುವ ಮಾತು ಹೀಗಿದೆ: ನನಗೆ ಬಾಲಿವುಡ್ ಸಿನಿಮಾ ಜಗತ್ತು ಕೂಡ ಬಹಳ ಇಷ್ಟ. ಆದರೆ ನಾನು ನಟಿಸುತ್ತಿರುವ ಟಾಲಿವುಡ್ ಚಿತ್ರಗಳಲ್ಲಿ ನನಗೊಂದು ಒಳ್ಳೆಯ ಪಾತ್ರಗಳಿವೆ. ಅದಕ್ಕೂ ಮುಖ್ಯವಾಗಿ ಈ ಪಾತ್ರಗಳು ನನ್ನ ನಟನೆಗೆ ಹೆಚ್ಚು ಒತ್ತು ಕೊಡುತ್ತದೆ. ಬರೀ ಗ್ಲ್ಯಾಮರ್‌ಕ್ಕಿಂತ ಹೆಚ್ಚಾಗಿ ನಟನೆಗೆ ಜಾಸ್ತಿ ಮಹತ್ವ ಕೊಡುವ ಚಿತ್ರಗಳಿದ್ದಾರೆ ಒಳ್ಳೆಯದು. ತೆಲುಗು ಚಿತ್ರಗಳಿಗಾಗಿ ತೆಲುಗು ಭಾಷೆಯನ್ನು ಕಲಿಯುತ್ತಿದ್ದೇನೆ. ಸ್ವಲ್ಪ ದಿನಗಳಲ್ಲಿ ಈ ಭಾಷೆಯನ್ನು ಕಲಿತುಕೊಂಡು ಇನ್ನಷ್ಟೂ ತೆಲುಗು ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎನ್ನುವ ಇರಾದೆ ನನ್ನದು. ಟೋಟಲಿ ಕುಡ್ಲದ ಹುಡುಗಿ ನಟಿ ಅನುಷ್ಕಾ ಶೆಟ್ಟಿಯ ಬಳಿಕ ಮತ್ತೊಬ್ಬರು ಟಾಲಿವುಡ್ ರಂಗದಲ್ಲಿ ಹೊಸ ಭರವಸೆ ಮೂಡಿಸುತ್ತಿರುವುದು ಖುಷಿಯ ವಿಷ್ಯಾ ಅಲ್ವಾ..?

Friday, February 21, 2014

ಬಾಹುಬಲಿ ಪ್ರಭಾಸ್ ಬಾಡಿ!

* ಸ್ಟೀವನ್ ರೇಗೊ, ದಾರಂದಕುಕ್ಕು ಟಾಲಿವುಡ್ ಸಿನಿಮಾ ಜಗತ್ತು ಈಗ ಒಂದೇ ಮಾತಿಗೆ ಇಳಿದಿದೆ. ಕಾರಣ ಇಷ್ಟೇ ‘ಬಾಹುಬಲಿ’ ಚಿತ್ರದ ಮೇಕಿಂಗ್ ಮಾತು ಒಂದೆಡೆ ಹರಿದಾಡುತ್ತಿದ್ದಾರೆ. ಮತ್ತೊಂದೆಡೆ ಈ ಚಿತ್ರದ ಬಿಡುಗಡೆ ಯಾವಾಗ ಎನ್ನುವ ನಿರೀಕ್ಷೆಗಳು ಮೂಡಿಬರುತ್ತಿದೆ. ಅಂದಹಾಗೆ ಟಾಲಿವುಡ್ ಸಿನಿಮಾ ಜಗತ್ತಿನಲ್ಲಿ ಇದೊಂದು ಬಹುಕೋಟಿ ವೆಚ್ಚದ ಪ್ರಾಜೆಕ್ಟ್ . ಬರೋಬರಿ ೧೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಬರುತ್ತಿರುವ ‘ಬಾಹುಬಲಿ’ಯಲ್ಲಿ ಈಗ ಪ್ರಭಾಸ್ ಬಾಡಿಯದ್ದೇ ಮಾತು.
ಅಂದಹಾಗೆ ೨೦ ಕೆ.ಜಿ. ಇದು ತೆಲುಗು ನಟ ಪ್ರಭಾಸ್ ‘ಬಾಹುಬಲಿ’ ಚಿತ್ರಕ್ಕಾಗಿ ಬೆಳೆಸಿಕೊಂಡ ದೇಹಸಿರಿ. ಬಾಹುಬಲಿಯ ಲೀಡ್ ರೋಲ್‌ನಲ್ಲಿರುವ ಪ್ರಭಾಸ್ ಚಿತ್ರದ ಆರಂಭದಿಂದಲೂ ದೇಹಸಿರಿಯ ಬೆಳವಣಿಗೆಯ ಕುರಿತು ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಇಂದಿನವರೆಗೂ ಟಾಲಿವುಡ್‌ನ ಯಾವುದೇ ನಾಯಕ ನಟರು ಈ ಪಾಟಿ ದೇಹಸಿರಿಯ ಕಡೆ ಗಮನಕೊಟ್ಟಿಲ್ಲ ಎನ್ನುವುದು ಹರಿದಾಡುತ್ತಿರುವ ಮಾತು. ‘ಬಾಹುಬಲಿ’ ಚಿತ್ರಕ್ಕಾಗಿ ಪ್ರಭಾಸ್ ಕಳೆದ ಆರು ತಿಂಗಳುಗಳಿಂದ ವರ್ಕ್ ಔಟ್ ಮಾಡುತ್ತಿದ್ದರು. ಅದರಲ್ಲೂ ವಿಶೇಷವಾಗಿ ಅಮೆರಿಕಕ್ಕೆ ನಟ ಪ್ರಭಾಸ್ ಭೇಟಿಕೊಟ್ಟಾಗ ಅಲ್ಲಿ ‘ಡಬ್ಲ್ಯೂಡಬ್ಲ್ಯೂಎಫ್’ನ ಕಾರ‍್ಯಕ್ರಮವೊಂದಕ್ಕೆ ಹೋಗಿದ್ದರು. ಯಾವ ರೀತಿಯಲ್ಲಿ ಈ ಪಟುಗಳು ಹೊಡೆದಾಡಿಕೊಳ್ಳುತ್ತಾರೆ. ಅದರಲ್ಲೂ ಈ ಪಟುಗಳು ಮಾಡುವ ವರ್ಕ್ ಔಟ್ ಎಲ್ಲವೂ ಕಲಿತುಕೊಂಡು ಪ್ರಭಾಸ್ ಭಾರತಕ್ಕೆ ಬಂದರು. ಅಲ್ಲಿಂದ ನಿರಂತರವಾಗಿ ಪ್ರಭಾಸ್ ಅವರ ವರ್ಕ್ ಔಟ್‌ಗಳನ್ನು ತಮ್ಮ ಜಿಮ್‌ನಲ್ಲಿ ಮಾಡಲು ಆರಂಭಿಸಿದರು ಎನ್ನುವುದು ನಟ ಪ್ರಭಾಸ್‌ನ ಆಪ್ತ ಮೂಲಗಳು ಹೇಳುತ್ತಿದೆ. ಬಾಡಿಗಾಗಿ ಮನೆ ಬದಲಾಯಿಸಿದ ಪ್ರಭಾಸ್: ನಟ ಪ್ರಭಾಸ್ ಈ ಹಿಂದೆ ಇದ್ದ ಮನೆಯನ್ನು ಈಗ ಬದಲಾಯಿಸಿಕೊಂಡಿದ್ದಾರೆ. ೧.೫ ಕೋಟಿ ರೂಪಾಯಿ ವೆಚ್ಚದ ನೂತನ ಮನೆಯೊಂದಕ್ಕೆ ಶಿಫ್ಟ್ ಆಗಿರುವ ಪ್ರಭಾಸ್ ಮನೆ ಬದಲಾವಣೆಯ ಹಿಂದೆ ಇರುವ ರಹಸ್ಯ ಇಷ್ಟೇ.. ತನ್ನ ಹಿಂದಿನ ಮನೆಯಲ್ಲಿ ಬೇಕಾದ ರೀತಿಯ ಜಿಮ್ ವ್ಯವಸ್ಥೆ ಇರಲಿಲ್ಲ. ಅದಕ್ಕಾಗಿ ಬರೀ ಜಿಮ್‌ನಲ್ಲಿ ವರ್ಕ್ ಔಟ್ ಮಾಡುವ ಕಾರಣಕ್ಕೆ ಮನೆ ಬದಲಾಯಿಸಿಕೊಂಡಿದ್ದಾರೆ. ಬರೀ ಮನೆ ಬದಲಾವಣೆಯ ಜತೆಗೆ ಹೊಸದಾದ ಜಿಮ್‌ವೊಂದನ್ನು ಕಟ್ಟಿ ಬೆಳೆಸಿದ್ದಾರೆ ಎನ್ನುವ ಮಾಹಿತಿ ಕೂಡ ಹೊರಬಂದಿದೆ. ಈಗಾಗಲೇ ಟಾಲಿವುಡ್‌ನ ನಟ ಮಹೇಶ್ ಬಾಬು ಹಾಗೂ ಬಾಲಿವುಡ್ ನಟ ಹೃತಿಕ್ ರೋಷನ್ ಭಾರತೀಯ ಫಿಟ್ನ್‌ನೆಸ್ ಟ್ರೈನರ್ ಅನ್ನು ನೇಮಕ ಮಾಡಿಕೊಂಡಿರುವ ವಿಷ್ಯಾ ಎಲ್ಲರಿಗೂ ಗೊತ್ತು. ಆದರೆ ಪ್ರಭಾಸ್ ಮಾತ್ರ ಭಾರತೀಯರ‍್ನನು ಬಿಟ್ಟು ವಿದೇಶಿ ಟ್ರೈನರ್ ಒಬ್ಬರನ್ನು ನೇಮಕ ಮಾಡಿಕೊಂಡಿದ್ದಾರೆ. ದಿನದ ಆರು ಗಂಟೆಗಳ ಕಾಲ ಜಿಮ್‌ನಲ್ಲಿರುವ ಪ್ರಭಾಸ್ ದಿನವೊಂದಕ್ಕೆ ೪೦ ಅರೆಬೆಂದ ಮೊಟ್ಟೆಗಳನ್ನು ತಿನ್ನುತ್ತಾ ವರ್ಕ್ ಔಟ್ ಮಾಡುತ್ತಿದ್ದಾರೆ. ಇದರ ಜತೆಗೆ ಊಟದಲ್ಲೂ ಸಾಕಷ್ಟು ಕಾಳಜಿ ಹೊತ್ತುಕೊಂಡಿರುವ ಪ್ರಭಾಸ್ ಬಾಹುಬಲಿ ಚಿತ್ರವೊಂದಕ್ಕೆ ಮಾಡುತ್ತಿರುವ ವರ್ಕ್ ಔಟ್‌ಗಳಂತೂ ನಿಜಕ್ಕೂ ಚಿತ್ರದ ಕುರಿತು ಪ್ರಭಾಸ್ ಹೊತ್ತುಕೊಂಡಿರುವ ಕಾಳಜಿ ಅವರಿಗೆ ಬರುತ್ತದೆ.

Wednesday, February 19, 2014

ಆಮೀರ್ ಹೇಳ ಹೊರಟ ಸತ್ಯ

* ಸ್ಟೀವನ್ ರೇಗೊ, ದಾರಂದಕುಕ್ಕು ಅದೊಂದು ಬೆಟ್ಟದಷ್ಟು ನಿರೀಕ್ಷೆ. ಯಾವುದೋ ಒಂದು ಸಮಸ್ಯೆಗೆ ಆತನಿಂದಲೇ ಪರಿಹಾರ ಸಿಗುತ್ತದೆ ಎನ್ನುವ ಭಾವನೆ. ಎಲ್ಲದರ ಜತೆಗೆ ಬೇಗನೆ ನಿಮ್ಮ ಮುಂದೆ ಹಾಜರಾಗಿ ಬಿಡುತ್ತೇನೆ ಎನ್ನುವ ಧೈರ್ಯದ ಮಾತುಗಳು. ಅಂದಹಾಗೆ ಬಾಲಿವುಡ್ ನಟ ಆಮೀರ್ ಖಾನ್ ಮತ್ತೆ ಬರುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ತೀರಾ ಇತ್ತೀಚೆಗೆ ಧೂಮ್-೩ಯ ಮೂಲಕ ಹಿರಿತೆರೆಯಲ್ಲಿ ಮಿಂಚಿದ ಪರಿಯಲ್ಲೇ ಕಿರಿತೆರೆಯಲ್ಲೂ ಕಮಾಲ್ ಮಾಡುತ್ತಾರೆ ಎನ್ನುವ ಸತ್ಯ ಈಗ ಹೊರ ಬರುತ್ತಿದೆ. ಹೌದು. ಇದು ಆಮೀರ್ ಖಾನ್ ಖಾಸಗಿ ವಾಹಿನಿಯಲ್ಲಿ ನಡೆಸಿಕೊಡಲಿರುವ ‘ಸತ್ಯಮೇವ ಜಯತೇ’ ಕಾರ‍್ಯಕ್ರಮದ ಮಾತು.
ಆಮೀರ್ ಖಾನ್ ಈ ಮೊದಲು ಖಾಸಗಿ ವಾಹಿನಿಯಲ್ಲಿ ನಡೆಸಿಕೊಟ್ಟ ‘ಸತ್ಯಮೇವ ಜಯತೇ’ ಕಿರಿ ತೆರೆಯಲ್ಲಿ ಹೊಸ ಸಂಚಲನ ಮಾಡಿತ್ತು. ಅದಕ್ಕೂ ಮುಖ್ಯವಾಗಿ ನಮ್ಮ- ನಿಮ್ಮ ನಡುವಿನಲ್ಲೇ ಇದ್ದ ಸಮಸ್ಯೆಗಳನ್ನು ಮನಮುಟ್ಟುವಂತೆ ಆಮೀರ್ ನಿರೂಪಣೆ ಮಾಡಿ ಸಮಸ್ಯೆಗಳನ್ನು ಪರಿಹಾರದ ಹಂತಕ್ಕೆ ತಂದು ನಿಲ್ಲಿಸುತ್ತಿದ್ದ ಪರಿಯನ್ನು ನೋಡಿದ ಪ್ರೇಕ್ಷಕ ಮಹಾಶಯ ಕೂಡ ಬೆರಗಾಗಿ ಹೋಗಿದ್ದ ಎನ್ನುವುದು ಬಟಬಯಲಾದ ಸತ್ಯ. ಸಮಾಜದಲ್ಲಿ ನಡೆಯುತ್ತಿದ್ದ ಭ್ರೂಣಹತ್ಯೆ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಮಕ್ಕಳ ಮೇಲಿನ ಹಿಂ, ಆತ್ಯಾಚಾರ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಹೊತ್ತು ತಂದ ಆಮೀರ್ ಈ ಬಾರಿ ಏನೂ ತರುತ್ತಿದ್ದಾರೆ ಎನ್ನುವ ಕುತುಹೂಲ ಪ್ರತಿಯೊಬ್ಬ ಪ್ರೇಕ್ಷಕನ ಮನದಲ್ಲಿ ಮೂಡಿದೆ. ಮಾರ್ಚ್ ೨ರಿಂದ ಖಾಸಗಿ ವಾಹಿನಿಯಲ್ಲಿ ಮೂಡಿಬರಲಿರುವ ‘ಸತ್ಯಮೇವ ಜಯತೇ’ ಬರೀ ಐದು ಎಪಿಸೋಡುಗಳಲ್ಲಿಯೇ ತನ್ನ ಅಂತಿಮ ಗೀತೆಯನ್ನು ಹಾಡಲಾಗುತ್ತದೆ ಎನ್ನುವುದು ಈಗ ಹೊರಬರುತ್ತಿರುವ ಸತ್ಯ.ಅಂದರೆ ಒಂದು ತಿಂಗಳ ಮಟ್ಟಿಗೆ ಆಮೀರ್ ಖಾನ್ ತನ್ನ ಕಾರ‍್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ಅಂದಹಾಗೆ ೧೩ ಎಪಿಸೋಡುಗಳನ್ನು ಈಗಾಗಲೇ ಸತ್ಯಮೇವ ಜಯತೇ ತಂಡ ಪ್ಲ್ಯಾನ್ ಮಾಡಿಕೊಂಡಿದೆ. ಮೊದಲ ಸರಣಿಯಲ್ಲಿ ೫ ಎಪಿಸೋಡುಗಳು ಪ್ರಸಾರವಾಗಲಿದೆ. ಉಳಿದ ೮ ಎಪಿಸೋಡುಗಳನ್ನು ನಂತರ ಪ್ರಸಾರ ಮಾಡುವ ಯೋಜನೆ ಇದೆ . ದೇಶದ ಕಾಳಜಿ ಹೊತ್ತ ಆಮೀರ್: ಆಮೀರ್ ಖಾನ್ ಈ ಬಾರಿ ಬರೀ ಐದು ಎಪಿಸೋಡು(ಸಂಚಿಕೆ)ಗಳಲ್ಲಿ ಕೊನೆಗೊಳಿಸಲಿರುವ ‘ಸತ್ಯಮೇವ ಜಯತೇ’ಯಲ್ಲಿ ಏನಿದೆ ಎನ್ನುವುದು ಖುದ್ದು ಆಮೀರ್ ‘ಸತ್ಯಮೇವ ಜಯತೇ’ಯ ಜಾಹೀರಾತುಗಳಲ್ಲಿಯೇ ಬಿಚ್ಚಿಟ್ಟಿದ್ದಾರೆ. ಹೌದು. ‘ಜೀನೇ ದೇಶ್ ಕೀ ಫಿಕರ್ ಹೈ’(ಯಾರಿಗೆ ದೇಶದ ಕುರಿತು ಕಾಳಜಿ ಇದೆ) ಎನ್ನುವ ಮೂಲಕ ದೇಶದ ಕುರಿತು ಕಾಳಜಿ ಪಡುವಂತಹ ಸರಣಿಗಳನ್ನೇ ಕೊಡುತ್ತಾರೆ ಎನ್ನೋದು ಕಾರ‍್ಯಕ್ರಮದ ಸಿಕ್ರೇಟ್. ಒಂದೆರಡು ತಿಂಗಳಲ್ಲಿ ಬರುವ ಮಹಾ ಚುನಾವಣೆ, ಭ್ರಷ್ಟಾಚಾರ, ಮತದಾನ, ದೇಶದ ಪ್ರಗತಿ ಹೀಗೆ ಎರಡು ಮೂರು ಕಾನ್ಸೆಪ್ಟ್‌ಗಳನ್ನು ಹೊತ್ತುಕೊಂಡು ಆಮೀರ್ ಸತ್ಯಮೇವ ಜಯತೇಯ ಕಣಕ್ಕೆ ಇಳಿಯಲಿದ್ದಾರೆ ಎನ್ನೋದು ಹೊರಬಂದ ಮಾತು. ಟೋಟಲಿ ಆಮೀರ್ ಖಾನ್ ನಡೆಸುವ ‘ಸತ್ಯಮೇವ ಜಯತೇ’ ನಿಜಕ್ಕೂ ನೋಡಲು ಪ್ರೇಕ್ಷಕ ವರ್ಗವಂತೂ ತುದಿಕಾಲಲ್ಲಿ ನಿಂತಿರೋದು ಗ್ಯಾರಂಟಿಯಾಗಿದೆ. ....

Tuesday, February 18, 2014

ಕನ್ನಡಕ್ಕೊಬ್ಬ ಬಂದ ಹೊಸ ಹುಡ್ಗ

* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಯಾಂಡಲ್‌ವುಡ್ ಸಿನ್ಮಾ ಫೀಲ್ಡ್‌ನಲ್ಲಿ ಬೌಲಿಂಗ್, ಬ್ಯಾಟಿಂಗ್ ಮಾಡಲು ಹೊಸ ಹುಡ್ಗನೊಬ್ಬ ಎಂಟ್ರಿಯಾಗಿದ್ದಾನೆ. ಹೊಸತನ ಬಯಸುವ ಈ ಸಿನಿಮಾ ಬದುಕಿನಲ್ಲಿ ಹುಡುಗ ಬದಲಾವಣೆಯನ್ನು ಹೊತ್ತು ತರುತ್ತಾನೆ ಎನ್ನೋದು ಅವನ ಸುತ್ತಮುತ್ತ ಇರುವವರ ಮಾತು. ಕಾರಣ ಇಷ್ಟೇ ಸ್ಪುರದ್ರೂಪಿ ಹುಡುಗ ಬರೀ ನೋಡಲು ಮಾತ್ರ ಸಖತ್ ಆಗಿಲ್ಲ. ಬದಲಾಗಿ ಸಿಕ್ಸ್ ಪ್ಯಾಕ್ ಎನ್ನುವ ಕಾನ್ಸೆಪ್ಟ್‌ನಲ್ಲೂ ಹುಡುಗ ಮಿಂಚಿದ್ದಾನೆ. ಅಂದಹಾಗೆ ವಿಜೇಶ್ ಶೆಟ್ಟಿ. ಕಡಲ ತಡಿಯ ಊರು ಪುತ್ತೂರಿನಿಂದ ಹೊರ ಬಂದ ಪ್ರತಿಭೆ. ರಂಗಭೂಮಿಯ ಜತೆಗೆ ವಿಶೇಷ ವ್ಯಾಮೋಹ ಇಟ್ಟುಕೊಂಡಿರುವ ಹುಡುಗ ಅವಕಾಶಕ್ಕಾಗಿ ಬಾಗಿಲು ಬಡಿಯಲು ಆರಂಭಿಸಿದ್ದು ಸ್ಯಾಂಡಲ್‌ವುಡ್ ಸಿನಿಮಾ ಇಂಡಸ್ಟ್ರಿಯನ್ನು ಎನ್ನುವುದು ವಿಶೇಷ. ತುಳುನಾಡಿನಲ್ಲಿ ಅಬ್ಬರದಲ್ಲಿ ಬೆಳೆಯುತ್ತಿರುವ ಕೋಸ್ಟಲ್‌ವುಡ್ ಸಿನಿಮಾಗಳನ್ನು ಬಿಟ್ಟು ಏಕ್‌ದಂ ಸ್ಯಾಂಡಲ್‌ವುಡ್ ಕಡೆ ದೃಷ್ಟಿ ಹಾಕಿದಾಗಲೇ ಹುಡುಗ ಬೆಳೆಯುವ ಲಕ್ಷಣಗಳು ಗೋಚರವಾಗುತ್ತಿದೆ. ಕೋಸ್ಟಲ್‌ವುಡ್‌ನಲ್ಲಿ ಎರಡು- ಮೂರು ಸಿನಿಮಾಗಳಿಗೆ ನಾಯಕನಾಗಿ ಬುಕ್ ಆಗಿದ್ದ ಹುಡುಗ ವಿಜೇಶ್ ಶೆಟ್ಟಿ ಈಗ ಕನ್ನಡದಲ್ಲಿ ಬರುತ್ತಿರುವ ತ್ರಿಕೋನ ಪ್ರೇಮಕತೆಯ ಹಂದರವಿರುವ ‘ನಾನು ಹೇಮಂತ್ ಅವಳು ಸೇವಂತಿ’ ಚಿತ್ರದ ಲೀಡ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ೯೦ ಭಾಗ ಚಿತ್ರೀಕರಣ ಮುಗಿಸಿಕೊಂಡು ಚಿತ್ರಗಳ ಹಾಡುಗಳ ಚಿತ್ರೀಕರಣಕ್ಕಾಗಿ ಕಾಯುತ್ತಿದೆ. ನಿರ್ದೇಶಕ ಸುಧಾಕರ ಬನ್ನಂಜೆಯ ಜತೆಯಲ್ಲಿ ಇತರ ಗೆಳೆಯರು ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಈ ಚಿತ್ರ ಹೊಸ ಮಾದರಿಯಲ್ಲಿ ಪ್ರೇಮ ಕತೆಯನ್ನು ಹೆಣೆಯಲಾಗಿದೆ ಎನ್ನುವುದು ವಿಜೇಶ್ ಮಾತು. ತನ್ನ ಪಾತ್ರಕ್ಕೆ ಈ ಚಿತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಅದರಲ್ಲೂ ಇಡೀ ಕತೆಯೇ ನನ್ನ ಪಾತ್ರದ ಮೂಲಕ ಆರಂಭವಾಗುವುದರಿಂದ ಈ ಚಿತ್ರದಿಂದ ಹೆಚ್ಚಿನ ನಿರೀಕ್ಷೆ ಇದೆ. ಮುಖ್ಯವಾಗಿ ಹೊಸಬರ ತಂಡ ಇರುವ ಕಾರಣ ಚಿತ್ರದಲ್ಲಿ ಹೆಚ್ಚಿನ ಲವಲವಿಕೆ ಹಾಗೂ ಕತೆಯಲ್ಲೂ ವಿಭಿನ್ನತೆಯನ್ನು ಹೆಣೆಯಲಾಗಿದೆ ಎನ್ನುವುದು ವಿಜೇಶ್ ಶೆಟ್ಟಿಯ ಮಾತು. ಫಿಟ್ನೇಸ್ ಟ್ರೈನರ್ ನಟನೆಗೆ ಇಳಿದ ಕತೆ: ಪುತ್ತೂರಿನಲ್ಲಿ ತನ್ನದೇ ಫಿಟ್ನೇಸ್ ಸೆಂಟರ್ ಇಟ್ಟುಕೊಂಡಿರುವ ವಿಜೇಶ್ ಶೆಟ್ಟಿಗೆ ಬಾಡಿ ಫಿಟ್ನೇಸ್‌ನಲ್ಲಿಯೇ ಆಸಕ್ತಿ ಹೆಚ್ಚು. ಹೆಚ್ಚು ಸಮಯ ಜಿಮ್‌ನಲ್ಲಿಯೇ ಕಳೆಯುವ ವಿಜೇಶ್‌ಗೆ ನಟನೆ ಗೀಳು ಬಂದದ್ದು ಮಾತ್ರ ವಿಶೇಷ. ಫಿಟ್ನೇಸ್ ತನ್ನದೇ ವೃತ್ತಿ ಎಂದುಕೊಂಡು ಬೆಳೆಯುತ್ತಿದ್ದಾಗ ನಟನೆ ಒಂದು -ಶನ್ ರೀತಿಯಲ್ಲಿ ಕಾಣಿಸಿಕೊಂಡಿತು ಎನ್ನುವುದು ವಿಜೇಶ್ ಮಾತು. ಬೆಂಗಳೂರಿನಲ್ಲಿದ್ದಾಗ ಅಭಿನಯ ತರಂಗದಲ್ಲಿ ನಟನೆಯ ಕುರಿತು ಕೋರ್ಸ್ ಮಾಡಿಕೊಂಡು ಹೊರಬಂದ ಹುಡುಗ ನಂತರ ಮೊಡೆಲಿಂಗ್, ಡ್ರಾಮಾ, ಶಾರ್ಟ್ ಮೂವಿಗಳಲ್ಲಿಯೇ ಕಾಣಿಸಿಕೊಂಡಿದ್ದು ಹೆಚ್ಚು. ನಟನೆಯ ಜತೆಗೆ ಫಿಟ್ನೇಸ್ ಸೆಂಟರ್‌ಗಳನ್ನು ರಾಜ್ಯದ ತುಂಬಾ ತೆರೆಯಬೇಕು ಎನ್ನುವ ಕನಸ್ಸು ಹೊತ್ತುಕೊಂಡಿರುವ ವಿಜೇಶ್ ಶೆಟ್ಟಿಗೆ ನಟನೆಯಲ್ಲೂ ಮುಂದುವರಿಯಬೇಕು ಎನ್ನುವ ಹಂಬಲವಿದೆ. ಟೋಟಲಿ ಬಹಳ ವರ್ಷಗಳ ನಂತರ ಕರಾವಳಿಯ ಹುಡುಗನೊಬ್ಬ ನಾಯಕನಾಗಿ ಸ್ಯಾಂಡಲ್‌ವುಡ್ ಸಿನ್ಮಾ ಫೀಲ್ಡ್‌ಗೆ ಇಳಿದುಬಿಟ್ಟಿದ್ದಾರೆ. ಅವರ ಮುಂದಿನ ಆಟ ಸಿನಿಮಾ ಥಿಯೇಟರ್‌ಗೆ ಬಂದ ನಂತರವೇ ತಿಳಿಯಬೇಕು.

Monday, February 17, 2014

ಬಾಲಿವುಡ್ ನೋ ಮ್ಯಾರೇಜ್ ನಟಿಯರು

* ಸ್ಟೀವನ್ ರೇಗೊ, ದಾರಂದಕುಕ್ಕು ಹೆಸರು, ಹಣ ಹೀಗೆ ಸೂಪರ್ ಬದುಕಿಗೆ ಲಯಾಕ್ ಎನ್ನುವಂತಹ ಎಲ್ಲ ಐಟಂಗಳು ಇದ್ದರೂ ಕೂಡ ಅವರಿಗೆ ಮದುವೆಯೊಂದು ಬೇಡ. ಯಾಕೋ ಗೊತ್ತಿಲ್ಲ. ಬಾಲಿವುಡ್ ಪಡಸಾಲೆಯಲ್ಲಿ ಮಿಂಚಿದ ಕೆಲವೊಂದು ನಟಿಯರು ಮದುವೆಯ ಬಗ್ಗೆ ಎಂದಿಗೂ ಯೋಚನೆಯೇ ಮಾಡಿಕೊಂಡಿಲ್ಲ ಎನ್ನುವುದೇ ಸ್ವಾರಸ್ಯ ಮಾತು. ಅಷ್ಟಕ್ಕೂ ಬಾಲಿವುಡ್ ಅಂಗಳದ ಏಣಿ ಏರಿದ ಹುಡುಗಿಯರು ಯಾಕೆ ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎನ್ನುವುದಕ್ಕೆ ಯಾವುದೇ ಉತ್ತರವಿಲ್ಲ. ನೋ ಮ್ಯಾರೇಜ್ ಕಾರ್ಡ್ ಎನ್ನುವುದೇ ಅವರ ಬದುಕಿನ ಮಂತ್ರ.
ಅಂದಹಾಗೆ ಬಾಲಿವುಡ್ ಪಡಸಾಲೆಯಲ್ಲಿರುವ ಇಂತಹ ನಾಯಕಿಯರು ಯಾರು ಅಂತೀರಾ..?ನಟಿ ತಬು, ಸುಶ್ಮಿತಾ ಸೇನ್, ರಾಣಿ ಮುಖರ್ಜಿ, ಪ್ರೀತಿ ಝಿಂಟಾ, ಬಿಪಾಸ ಬಸು, ಪ್ರಿಯಾಂಕಾ ಚೋಪ್ರಾ. ಇದೇ ಕೆಲವು ಹೆಸರುಗಳಲ್ಲ.. ಇನ್ನಷ್ಟೂ ಹೆಸರುಗಳು ಬಾಲಿವುಡ್ ಅಂಗಳದಲ್ಲಿ ಕಾಣ ಸಿಗುತ್ತದೆ. ಆದರೆ ಇವರು ಮಾತ್ರ ಬಾಲಿವುಡ್ ಅಂಗಳದಲ್ಲಿ ಬೆಳೆದವರು ಹಾಗೂ ಉಳಿದವರ ಸಾಲಿನಲ್ಲಿ ಸಿಗುವವರು. ತಬು: ಬಾಲಿವುಡ್ ಶಾಲೆಯಲ್ಲಿ ಇವರ ಹೆಸರು ಆಗಾಗ ಕೇಳಿಸಿಕೊಳ್ಳುತ್ತಿದೆ. ಅವರು ತಮ್ಮ ನಟನೆಗಾಗಿ ಎರಡು ಬಾರಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಬಾಚಿಕೊಂಡಿದ್ದರು. ಆಪ್- ಬೀಟ್ ಪಾತ್ರಗಳಿಂದಾಗಲೇ ಗುರುತಿಸಿಕೊಂಡ ತಬು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಾಣೆ ಒಳ್ಳೆಯ ಹೆಸರುಗಳಿಸಿಕೊಂಡಿದ್ದಾರೆ. ೪೨ರ ಹರೆಯದ ತಬು ಈಗಲೂ ವಿವಾಹದ ಬಗ್ಗೆ ತಲೆಕೆಡಿಸಿಕೊಂಡೇ ಇಲ್ಲ. ಸುಶ್ಮಿತಾ ಸೇನ್: ೯೪ರಲ್ಲಿ ಮಿಸ್ ಯೂನಿವರ್ಸ್ ಕಿರೀಟ ತಲೆ ಮೇಲೆ ಮೂಡಿಸಿಕೊಂಡಾಗ ಸುಶ್ಮಿತಾ ಸೇನ್ ಹಲವು ಯುವಕರು ಫಿದಾ ಆಗಿದ್ದರು. ರಣದೀಪ್ ಹೂಡಾ ಜತೆಯಲ್ಲಿ ಒಂದು ಬ್ರೇಕ್ ಆಪ್ ಮ್ಯಾಟರ್ ಬಿಟ್ಟರೆ ಸೇನ್ ಗಾಸಿಪ್ ಲೋಕದಲ್ಲಿ ಕಾಣಿಸಿಕೊಂಡಿದ್ದು ಬಹಳ ವಿರಳ. ಕೆಲವೊಮ್ಮೆ ನಿರ್ದೇಶಕ ವಿಕ್ರಂ ಭಟ್ಟರ ಹೆಸರಿನ ಜತೆಯಲ್ಲಿ ತಾಳೆ ಹಾಕಿಕೊಂಡ ಸೇನ್ ಎರಡು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಬಿಪಾಸ ಬಸು: ಬಾಲಿವುಡ್ ಅಂಗಳದ ಕೃಷ್ಣ ಸುಂದರಿ ಬಿಪಾಸ ಬಸು ನಟ ಜಾನ್ ಅಬ್ರಾಹಂ ಜತೆಗಿನ ಒಂದು ಬ್ರೇಕ್ ಆಪ್‌ನಿಂದಾಗಿ ಮದುವೆಯ ಮೇಲಿನ ವ್ಯಾಮೋಹವನ್ನೇ ಬಿಟ್ಟು ಬಿಟ್ಟಿದ್ದಾರೆ. ೩೩ರ ಹರೆಯದ ಬಸು ತಮ್ಮದೇ ಪ್ರಾಡಕ್ಟ್ ಎಂಡೋರೇಸ್‌ಮೆಂಟ್, -ಶನ್ ವೀಕ್, ಬ್ರಾಂಡ್ -ಕಸ್ ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಆದರೆ ಈಗ ನಟ ಹರ್ಮನ್ ಬೇವಾಜಾ ಜತೆಗೆ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಗಟ್ಟಿಯಾಗಿ ಕೇಳಿಸಿಕೊಳ್ಳುತ್ತಿದೆ. ಪ್ರಿಯಾಂಕಾ ಚೋಪ್ರಾ: ಮಿಸ್ ವರ್ಲ್ಡ್ ಹಾಗೂ ಮಿಸ್ ಇಂಡಿಯಾ ಎರಡು ಕಿರೀಟಗಳನ್ನು ಬಾಚಿಕೊಂಡ ಗ್ಲ್ಯಾಮ್ ಡೀವಾ ಪ್ರಿಯಾಂಕಾ ಚೋಪ್ರಾ ನಟನೆ ಜತೆಯಲ್ಲಿ ಹಾಡುಗಾರಿಕೆಯಲ್ಲೂ ಸಖತ್ ಮಿಂಚಿದ್ದಾರೆ. ತಮ್ಮ ಪಾತ್ರಗಳಿಗೆ ಜೀವ ತುಂಬುವ ಜತೆಗೆ ಪ್ರೇಕ್ಷಕರನ್ನು ಮೋಡಿ ಮಾಡುವ ತಾಕತ್ತು ಪ್ರಿಯಾಂಕಾಳಿಗೆ ಇದೆ ಎನ್ನೋದು ಬಾಲಿವುಡ್ ಅಂಗಳದಲ್ಲಿರುವ ಮಾತು. ‘ಇನ್ ಮೈ ಸಿಟಿ’ ಮ್ಯೂಸಿಕಲ್ ಆಲ್ಬಂನ ಪಾಸಿಟಿವ್ ವೇವ್‌ನಿಂದಾಗಿ ಚೋಪ್ರಾ ಬತ್ತಳಿಕೆಯಿಂದ ಇನ್ನಷ್ಟೂ ಮ್ಯೂಸಿಕಲ್ ಆಲ್ಬಂ ಹೊರ ಬರುವ ಸಾಧ್ಯತೆ ದಟ್ಟವಾಗಿದೆ. ೩೧ರ ಹರೆಯ ಚೋಪ್ರಾ ಮೇರಿ ಕೋಮ್ ಅವರ ಆತ್ಮಕತೆಯಲ್ಲಿ ನಟಿಸುತ್ತಿದ್ದಾರೆ. ಆದರೆ ಮದುವೆ ಎನ್ನುವ ಸಂಬಂಧದಿಂದ ದೂರಕ್ಕೆ ಉಳಿದುಬಿಟ್ಟಿದ್ದಾರೆ. ಪ್ರೀತಿ ಝಿಂಟಾ: ಬಾಲಿವುಡ್ ಅಂಗಳದ ಚಿಗರೆ ಪ್ರೀತಿ ಝಿಂಟಾ ಚಿತ್ರಗಳ ನಟನೆಯ ಜತೆಯಲ್ಲಿ ಐಪಿಎಲ್ ತಂಡದ ಉಸ್ತುವಾರಿಯಲ್ಲೂ ಕೈಯಾಡಿಸಿದ್ದಾರೆ. ತಮ್ಮ ಪ್ರೊಡಕ್ಷನ್ ಹೌಸ್‌ನ ಮೂಲಕ ಬಾಲಿವುಡ್ ನಲ್ಲಿ ಹೊಸ ಹೊಸ ಚಿತ್ರಗಳ ನಿರ್ಮಾಣದಲ್ಲಿ ಬ್ಯುಸಿಯಾಗಿರುವ ಝಿಂಟಾ ಉದ್ಯಮಿ ನೆಸ್ ವಾಡಿಯಾ ಜತೆ ಲೀವಿಂಗ್ ಲೈ-ನಲ್ಲಿ ಕಾಲದೂಡುತ್ತಿದ್ದಾರೆ. ೩೮ ಹರೆಯದ ಪ್ರೀತಿ ಝಿಂಟಾ ಮದುವೆ ಬೇಡವೇ ಬೇಡ ಎನ್ನುವುದು ಅವರ ಮಾತು. ರಾಣಿ ಮುಖರ್ಜಿ: ತನ್ನ ಪ್ರಬುದ್ಧ ನಟನೆಯ ಮೂಲಕವೇ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುವ ತಾಕತ್ತು ಇರುವ ನಟಿಯರ ಸಾಲಿನಲ್ಲಿ ರಾಣಿ ಮುಖರ್ಜಿಯ ಹೆಸರು ನಿಲುಕಾಡುತ್ತದೆ. ಬಾಲಿವುಡ್ ಖ್ಯಾತ ನಿರ್ಮಾಪಕ ಆದಿತ್ಯ ಚೋಪ್ರಾ ಜತೆಗಿನ ಆ-ರ್‌ಗಳು ರಾಣಿಯನ್ನು ಪದೇ ಪದೇ ಮಾಧ್ಯಮಗಳು ಕೆಣಕುತ್ತಿದ್ದವು. ೩೦ ದಾಟಿದರೂ ಮದುವೆಯ ಬಗ್ಗೆ ರಾಣಿ ನೋ ಎನ್ನೋದು ಜಾಸ್ತಿ.

Saturday, February 15, 2014

ಪ್ರಿಯಾದರ್ಶನ್ ಬದುಕಿನಲ್ಲಿ ಬಿರುಗಾಳಿ !

* ಸ್ಟೀವನ್ ರೇಗೊ, ದಾರಂದಕುಕ್ಕು ಇದು ಪಕ್ಕಾ ಪ್ರೇಮಿಗಳಿಬ್ಬರ ಮಾತು. ಯಾಕೋ ಗೊತ್ತಿಲ್ಲ ೨೪ ವರ್ಷದ ಸುಮಧುರ ದಾಂಪತ್ಯ ಗೀತೆಯೇ ಈಗ ಮುಗಿದು ಹೋಗುವ ಹಂತಕ್ಕೆ ಬಂದು ತಲುಪಿದೆಯಾ ಎನ್ನುವ ಸಂದೇಹ ಮೂಡಿಬಂದಿದೆ. ಹೌದು ಇದು ಖ್ಯಾತ ನಿರ್ದೇಶಕ ಪ್ರಿಯಾದರ್ಶನ್ ಹಾಗೂ ಅವರ ಪತ್ನಿ ನಟಿ ಲಿಜಿ ಅವರ ಖಾಸ್‌ಬಾತ್. ಆದರೆ ಮನೆಯೊಳಗೆ ಇದ್ದ ಈ ಮಾತು ಈಗ ಹೊರ ಪ್ರಪಂಚದಲ್ಲಿ ತೇಲಾಡುತ್ತಿದೆ. ಇಬ್ಬರು ಬೇರೆಯಾಗುವ ನಿರ್ಧಾರಕ್ಕೆ ಬಂದು ಮುಟ್ಟಿದ್ದಾರೆ ಎನ್ನುವ ಮಾತು ಮಲಯಾಳಂ ಚಿತ್ರರಂಗದ ಗಲ್ಲಿಯಿಂದ ಹರಿದುಬಂದಿದೆ. ಪ್ರೇಮಿಗಳ ದಿನದಂದು ಈ ಇಬ್ಬರು ಜತೆಯಾಗಿದ್ದರು.
ಆದರೆ ಇದೇ ಪ್ರೇಮಿಗಳ ದಿನದಂದು ಈ ಇಬ್ಬರು ಬೇರೆಯಾಗುವ ವಿಚಾರಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನುವ ಮಾತು ಬಂದಿದೆ. ಈಗಾಗಲೇ ನಟಿ ಲಿಜಿ ಕಾನೂನು ಮೆಟ್ಟಿಲು ಏರಿಕೊಂಡು ಡೈವೋರ್ಸ್‌ಗೆ ಅರ್ಜಿ ಗುಜರಾಯಿಸಿದ್ದಾರೆ. ಮತ್ತೊಂದೆಡೆ ಪ್ರಿಯಾದರ್ಶನ್ ಕೂಡ ಮಾಧ್ಯಮಗಳಿಂದ ಕಣ್ಣು ತಪ್ಪಿಸಿಕೊಂಡು ಓಡಾಟ ಆರಂಭಿಸಿದ್ದಾರೆ. ನಟಿ ಲಿಜಿ ಕೂಡ ಮಾಧ್ಯಮದ ಮುಂದೆ ಬಂದು ‘ದಯವಿಟ್ಟು ಇದೊಂದು ಕೌಟುಂಬಿಕ ವಿಚಾರ ಈ ಕುರಿತು ಹೆಚ್ಚು ಮಾತನಾಡಲು ಬಯಸುವುದಿಲ್ಲ’ ಎಂದು ಹೇಳಿಕೊಂಡು ಮರೆಯಾಗಿದ್ದಾರೆ. ಮತ್ತೊಂದೆಡೆ ಕೋರ್ಟ್ ಕಟ್ಟಳೆಯಲ್ಲಿ ಇಬ್ಬರಿಗೂ ಬುಲಾವ್ ಬಂದಿದೆ. ಈ ಮೂಲಕ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೆಳೆದ ಇಬ್ಬರು ಪ್ರೇಮಿಗಳು ದೂರವಾಗುವ ಕಾಲ ಬಂದಿದೆ ಎನ್ನಲಾಗುತ್ತಿದೆ. ಪ್ರಿಯಾ ಬದುಕಿನಲ್ಲಿ ಲಿಜಿಯಾಟ: ೧೯೮೪ರಲ್ಲಿ ಮಲಯಾಳಂನ ‘ಅಲಾರಿಯಂ’ ಚಿತ್ರವೊಂದರಿಂದ ಹೊರ ಬಂದ ನಟಿ ಲಿಜಿ ತಿರುವನಂತಪುರದಲ್ಲಿ ಚಿತ್ರವೊಂದರ ಸೆಟ್‌ನಲ್ಲಿ ಪ್ರಿಯಾದರ್ಶನ್‌ಗೆ ಭೇಟಿಯಾಗುತ್ತಾರೆ. ಈ ಬಳಿಕ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಳ್ಳುತ್ತದೆ. ಇಲ್ಲಿಂದ ಇಬ್ಬರ ಸಿನಿ ಬದುಕು ಕೂಡ ಆರಂಭವಾಗುತ್ತದೆ. ನಿರ್ದೇಶಕ ಪ್ರಿಯಾದರ್ಶನ್ ನಿರ್ದೇಶನ ಮಾಡಿದ ೨೨ ಚಿತ್ರಗಳಲ್ಲಿ ಲಿಜಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ೧೯೯೦ರಲ್ಲಿ ಇಬ್ಬರು ವಿವಾಹ ಬಂಧನದಲ್ಲಿ ಬಂಽಯಾಗುತ್ತಾರೆ. ಈ ಬಳಿಕ ಲಿಜಿ ತನ್ನ ಸಿನಿಮಾ ಬದುಕಿನ ಹೆಸರನ್ನು ಲಕ್ಷ್ಮಿ ಎಂದು ಬದಲಾಯಿಸಿಕೊಂಡರು. ಇಬ್ಬರಿಗೆ ಕಲ್ಯಾಣಿ ಹಾಗೂ ಸಿದ್ದಾರ್ಥ್ ಎನ್ನುವ ಮಕ್ಕಳಿದ್ದಾರೆ. ಇಬ್ಬರು ಉನ್ನತ ವ್ಯಾಸಂಗಕ್ಕಾಗಿ ವಿದೇಶದಲ್ಲಿಯೇ ನೆಲೆ ನಿಂತಿದ್ದಾರೆ. ಪ್ರಿಯಾ ಬದುಕಿನಲ್ಲಿ ಲಿಜಿ ಬಹಳ ಮುಖ್ಯವಾದ ಪಾತ್ರವಹಿಸಿದ್ದಾರೆ. ಎರಡು ಕಂಪನಿಗಳ ಮಾಲೀಕರಾಗಿರುವ ಲಿಜಿ ಸಿಸಿಎಲ್‌ನಲ್ಲೂ ತಮ್ಮ ಆಸ್ತಿತ್ವವನ್ನು ಇಟ್ಟುಕೊಂಡಿದ್ದರು. ಈ ಎಲ್ಲವೂಗಳ ನಡುವೆ ಇಬ್ಬರು ಬೇರೆಯಾಗಲು ಇರುವ ಕಾರಣ ಏನೂ ಎನ್ನೋದು ಇಬ್ಬರು ಎಲ್ಲಿಯೂ ಹೇಳಿಕೊಂಡಿಲ್ಲ. ಕೆಲವು ಮೂಲಗಳ ಪ್ರಕಾರ ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಆದರೆ ಚಿತ್ರರಂಗದ ಮಾಹಿತಿಯ ಪ್ರಕಾರ ನಾಯಕಿ ನಟಿಯೊಬ್ಬಳು ಇಬ್ಬರ ನಡುವೆ ವಿರಸ ಮೂಡಲು ಕಾರಣ ಎನ್ನಲಾಗುತ್ತಿದೆ. ನಿಜಕ್ಕೂ ಇಬ್ಬರ ನಡುವೆ ನಡೆದದ್ದು ಏನೂ ಎನ್ನೋದು ಮುಂಬರುವ ದಿನಗಳೇ ಹೇಳಬೇಕು.