Sunday, October 7, 2012
ಬಾಲಿವುಡ್ ನಲ್ಲಿ ತೂಕದ ಸಮಸ್ಯೆ ಬೇಟೆಯಾಡದ ಶಾಹೀದ್ !
ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ. ಮತ್ತೊಂದೆಡೆ ತೂಕದ ಸಮಸ್ಯೆಯಿಂದ ಚಿತ್ರವೊಂದು ಕೈ ಬಿಟ್ಟು ಹೋಗಿದೆ. ಈ ಎಲ್ಲ ವಿಚಾರಗಳ ಪೂರ್ಣ ವಿರಾಮ. ಬಾಲಿವುಡ್ ನ ಶಾನ್ ಹುಡುಗ ಶಾಹೀದ್..
* ಸ್ಟೀವನ್ ರೇಗೊ, ದಾರಂದಕುಕ್ಕು
ಯಾಕೋ ಗೊತ್ತಿಲ್ಲ ಮಾರಾಯ್ರೆ. ಈ ಪಾಟಿನೂ ಅದೃಷ್ಟ ಕೈ ಕೊಡುತ್ತೆ ಎನ್ನೋದು ಖುದ್ದು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಗೊಂದಲ ಮೂಡಬಹುದು. ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ. ಮತ್ತೊಂದೆಡೆ ತೂಕದ ಸಮಸ್ಯೆಯಿಂದ ಚಿತ್ರವೊಂದು ಕೈ ಬಿಟ್ಟು ಹೋಗಿದೆ. ಕತೆ ಏನ್ ಅಂತಾ ಕೇಳ್ತೀರಾ..?
ಕಾಲಿವುಡ್ ನಲ್ಲಿ ಸೂಪರ್ ನೆಗೆತ ಕಂಡ ವೇಟೈ( ಬೇಟೆ) ಚಿತ್ರವನ್ನು ಅನಾಮತ್ತಾಗಿ ಎತ್ತಿಕೊಂಡು ಬಾಲಿವುಡ್ ನಿರ್ದೇಶಕ ಮನೀಶ್ ಶರ್ಮಾ ಹಿಂದಿಯಲ್ಲೊಂದು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದರು. ಅಲ್ಲಿನ ಪಾತ್ರಕ್ಕೆ ಯಾರು ಹೋಲಿಕೆಯಾಗುತ್ತಾರೆ ಎಂಬ ವಿಚಾರದಲ್ಲೂ ತೀರಾ ಚರ್ಚೆ ನಡೆದು ಫುಲ್ ಆಗಿ ನಾಯಕನ ಸ್ಥಾನಕ್ಕೆ ಬುಕ್ಕಿಂಗ್ ಮಾಡಿಸಿಕೊಂಡಿದ್ದು ಬಾಲಿವುಡ್ ನ ಶಾನ್ ಎಂದೇ ಕರೆಯಲಾಗುವ ಶಾಹೀದ್ ಕಪೂರ್ ನನ್ನು. ಆದರೆ ಈ ಚಿತ್ರಕ್ಕೆ ಶಾಹೀದ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಒಂದು ಪಾತ್ರದಲ್ಲಿ ಸ್ವಲ್ಪ ದಪ್ಪಗೆ ಕಾಣಿಸಿಕೊಂಡರೆ ಇನ್ನೊಂದು ಕಡೆ ಸ್ವಲ್ಪ ತೆಳ್ಳಗೆ ಕಾಣಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಚಿತ್ರದ ನಿರ್ದೇಶಕರು ಮಾಡಿದ್ದರು.
ಚಿತ್ರದ ಆರಂಭದಲ್ಲಿ ಕಾಲೇಜಿಗೆ ಹೋಗುವ ಹುಡುಗನ ಪಾತ್ರದಲ್ಲಿ ಶಾಹೀದ್ ಕಾಣಿಸಿಕೊಂಡರೆ ನಂತರ ಬೇರೆ ಪಾತ್ರಕ್ಕೆ ಶಾಹೀದ್ ಫಿಟ್ ಆಗಿರಬೇಕಾಗಿತ್ತು. ಇದೇ ವಿಚಾರವನ್ನು ಶಾಹೀದ್ ಗೂ ಕೂಡ ನಿರ್ದೇಶಕರು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಶಾಹೀದ್ ಕಪೂರ್ ಬಾಡಿ ಮಾತ್ರ ವೇಟೈಗೆ ತಕ್ಕಂತೆ ಬಗ್ಗುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಚಿತ್ರದಿಂದ ಶಾಹೀದ್ ಕಪೂರ್ ಔಟ್ ಮಾಡಲಾಗಿದೆ. ಈ ವಿಚಾರದಲ್ಲಿ ಶಾಹೀದ್ ಮಾತ್ರ ನಿರ್ಮಾಪಕ ಹಾಗೂ ತನ್ನ ನಡುವಿನ ಮಾತುಕತೆಯಿಂದಾಗಿ ಚಿತ್ರ ಬಿಟ್ಟಿದ್ದೇನೆ ಎಂದು ಹೇಳಿಕೊಂಡು ತಿರುಗಾಟ ಮಾಡುತ್ತಿದ್ದಾರೆ.
ಇತ್ತ ಕಡೆ ಶಾಹೀದ್ ಕಪೂರ್ ಅವರ ತರಬೇತುದಾರ ಅಬ್ಬಾಸ್ ಅಲಿ ಹೇಳುವಂತೆ : ವೇಟೈ ಚಿತ್ರಕ್ಕಾಗಿ ಶಾಹೀದ್ ನಾಲ್ಕು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ತನ್ನ ತೂಕ ಇಳಿಯುತ್ತಿದೆ ಎಂದು ಗೊತ್ತಾದ ತಕ್ಷಣ ಶಾಹೀದ್ ತರಬೇತಿ ನಿಲ್ಲಿಸಿದ್ದಾರೆ. ಈ ಕಾರಣದಿಂದ ಚಿತ್ರಕ್ಕೆ ತಕ್ಕದಾದ ಫಿಟ್ ಬಾಡಿ ಮಾಡಲು ಸಾಧ್ಯವಾಗಿಲ್ಲ. ಶಾಹೀದ್ ಸಸ್ಯಹಾರಿ ಇದ್ದ ಕಾರಣ ತನ್ನ ದೇಹ ತೂಕದಲ್ಲಿ ಹೆಚ್ಚು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇತ್ತ ಕಡೆ ಶಾಹೀದ್ ವೇಟೈ ಬಿಟ್ಟು ನಿರ್ದೇಶಕ ಪ್ರಭುದೇವ ಅವರ ಚಿತ್ರ ನಮಕ್ ಚಿತ್ರಕ್ಕೂ ಸಹಿ ಮಾಡಿಕೊಂಡಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿ ಚಿತ್ರ ಸಂಪೂರ್ಣವಾಗುವ ಸಾಧ್ಯತೆ ಇದೆ. ಪ್ರಭುದೇವ್ ಚಿತ್ರದ ಚಿತ್ರೀಕರಣಗಾಗಿ ತಯಾರಿ ನಡೆಸುತ್ತಿದ್ದಾರೆ. ಶಾಹೀದ್ ಗೂ ಬಾಲಿವುಡ್ ನಲ್ಲಿ ದೊಡ್ಡದಾದ ಬ್ರೇಕ್ ಸಿಗಲೇ ಬೇಕು. ಈ ಕಾರಣದಿಂದ ಪ್ರಭು ಪಾದಗಳಿಗೆ ಶಾಹೀದ್ ಶರಣು ಎಂದಿದ್ದಾರೆ ಎನ್ನುವ ಮಾತು ಕೂಡ ಬಾಲಿವುಡ್ ಅಂಗಳದಲ್ಲಿ ಕೇಳಿಸಿಕೊಂಡಿದೆ.
ಶಾಹೀದ್ ಅದೃಷ್ಟ ಉಲ್ಟಾಪಲ್ಟಾ:
ಬಾಲಿವುಡ್ ನಟ ಕಮ್ ನಿರ್ಮಾಪಕ, ನಿರ್ದೇಶಕ ಎನ್ನುವ ಹಣೆಪಟ್ಟಿಕಟ್ಟಿಕೊಂಡು ಸಿನ್ಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಪಂಕಜ್ ಕಪೂರ್ ಅವರ ಸನ್ ಶಾಹೀದ್ ಕಪೂರ್. ಬಾಲಿವುಡ್‌ನಲ್ಲಿ ಆರಂಭದ ಇನ್ನಿಂಗ್ಸ್ ಆಡಲು ಬಂದ ಶಾಹೀದ್‌ಗೆ ಬಹಳ ಬೇಡಿಕೆ ಇತ್ತು. ಮೊದಲ ಚಿತ್ರವೇ ಶಾಹೀದ್‌ನನ್ನು ಒಬ್ಬ "ಲವರ್‌ಬಾಯ್' ಆಗಿ ಫೋಕಸ್ ಮಾಡಿಬಿಟ್ಟಿತ್ತು.
ಬಾಲಿವುಡ್‌ನ ಸೈಜ್‌ಝೀರೋ ಹುಡುಗಿ ಕರೀನಾಳ ಜತೆ ಸುತ್ತಾಡುವುದಕ್ಕಾಗಿ ತಾನು ಪಕ್ಕಾ ವೆಜ್ ಹುಡುಗ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದ ಶಾಹೀದ್ ಹಾಗೂ ಕರೀನಾ ಜೋಡಿ ಬ್ರೇಕ್ ಆಫ್ ಆಯಿತು. ಇದು ಶಾಹೀದ್‌ನ ಮೊದಲ ಅನ್‌ಲಕ್ಕಿ ಸೀಸನ್ ಆರಂಭದ ಗಂಟೆ.
ಆದರೆ ಕರೀನಾಳನ್ನು ಕಳೆದುಕೊಂಡ ಶಾಹೀದ್ ಬಾಲಿವುಡ್‌ನಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ಕಂಗೋಳಿಸಿದ್ದು ಬಿಟ್ಟರೆ ಉಳಿದ ಚಿತ್ರಗಳು ತೋಪಾಗಿ ಬಿದ್ದು ಹೋಯಿತು. ಕರೀನಾ ವರ್ಸಸ್ ಶಾಹೀದ್ ಬ್ರೇಕ್ ಸೀಸನ್‌ನಲ್ಲಿ ಬಂದು ಹೋದ "ಜಬ್ ವೀ ಮೆಟ್' ಚಿತ್ರವೊಂದನ್ನು ಬಿಟ್ಟರೆ ಶಾಹೀದ್ ಬಾಲಿವುಡ್ ಕಡಿದುಕಟ್ಟಿ ಹಾಕಿದ ಯಾವುದೇ ಚಿತ್ರಗಳಿಲ್ಲ.
2013ರಲ್ಲಿ ಶಾಹೀದ್ ಬಳಿ ಮೂರು ಚಿತ್ರಗಳಿವೆ. ಅದರಲ್ಲಿ ಪ್ರಭುದೇವ ಅವರ ನಮಕ್, ಪಟ ಪೋಸ್ಟರ್ ನಿಕ್ಲಾ ಹೀರೋ, ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಆ ಬಳಿಕ ಶಾಹೀದ್‌ನ ನಿರುದ್ಯೋಗಿ ಪರ್ವ ಆರಂಭವಾಗುತ್ತದೆ. ಇದು ಅನ್‌ಲಕ್ಕಿ ಸೀಸನ್‌ನ ಎರಡನೇ ಗಂಟೆ. ಈ ವಿಚಾರವನ್ನು ಖುದ್ದು ಶಾಹೀದ್ ಒಪ್ಪಿಕೊಂಡು ಟ್ವಿಟ್ಟರ್‌ನಲ್ಲಿ ಹೇಳಿಕೊಂಡ ಮಾತು ಇಲ್ಲಿದೆ. "ಚಿತ್ರದ ನಿರ್ಮಾಪಕ ಬಂದು ಚಿತ್ರಕ್ಕೆ ನೀನು ಆಯ್ಕೆಯಾಗಿದ್ದಿ ಎಂದು ಪ್ರಕಟಿಸುವ ವರೆಗೂ ನನ್ನ ಕೈಯಲ್ಲಿ ಯಾವುದೇ ಚಿತ್ರಗಳಿರುವುದಿಲ್ಲ. ಅದಕ್ಕಾಗಿ ನನಗೆ ನಿರುದ್ಯೋಗಿ ಎನ್ನುವ ಟೈಟಲ್ ಸರಿಯಾಗಿದೆ ' ಎಂದಿದ್ದಾರೆ.
ಮದುವೆಯಿಂದ ಲಕ್ ಬರುತ್ತೆ:
2013ರ ಹೊತ್ತಿನಲ್ಲೇ ಶಾಹೀದ್ ಮದುವೆಯಾಗಬೇಕೆಂದುಕೊಂಡಿದ್ದಾರೆ.. ಈ ಮೂಲಕವಾದರೂ ಅದೃಷ್ಟ ನನ್ನ ಬಳಿಯಲ್ಲಿ ಇರುತ್ತದೆ ಎನ್ನೋದು ಶಾಹೀದ್ ಕಪೂರ್‌ನ ನಂಬಿಕೆ.
ಮದುವೆಯ ನಂತರ ಬಾಲಿವುಡ್‌ನಲ್ಲಿ ನೆಲೆ ನಿಂತವರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಬಾಲಿವುಡ್ ನಟ ಶಾರೂಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಅಜೇಯ್ ದೇವಗನ್, ಹೃತಿಕ್ ರೋಷನ್ ಬಹಳಷ್ಟು ಜನರು ತಮ್ಮ ಮದುವೆಯ ನಂತರ ಬಾಲಿವುಡ್‌ನಲ್ಲಿ ಕ್ಲಿಕ್ ಆಗಿದ್ದಾರೆ. ಅವರ ರೂಲ್‌ಗಳನ್ನೇ ಫಾಲೋ ಮಾಡೋಣ ಅಂತಾ ಯೋಚನೆ ಮಾಡುತ್ತಿದ್ದೇನೆ ಎನ್ನೋದು ಶಾಹೀದ್ ಕಪೂರ್‌ನ ಓಪನ್
"ಬರೀ ಮದುವೆಯಿಂದ ಲಕ್ ಬರುತ್ತೆ ಎನ್ನುವ ನನ್ನ ವಾದದಲ್ಲೂ ಬೇರೆ ವಿಚಾರಗಳು ಅಡಗಿದೆ. ಸಿಂಗಲ್ ಇದ್ದಾಗ ನಿಮ್ಮ ಬಗ್ಗೆ ಪ್ರೀತಿ ತೋರಿಸುವ ಕೈಗಳು ಇರೋದಿಲ್ಲ. ನಿಮ್ಮ ಸುಖ ದುಃಖಗಳಲ್ಲಿ ಎಂಟ್ರಿಯಾಗುವ ಬಂಧುಗಳು ಸಿಗೋದಿಲ್ಲ. ಅದಕ್ಕಾಗಿ ಫೈನಲ್ ಮದುವೆಯಲ್ಲಿ ಎಲ್ಲವೂ ಸಿಗುತ್ತದೆ" ಎನ್ನೋದು ಶಾಹೀದ್ ಕಪೂರ್‌ರ ವಾದ.
"ಮದುವೆಯಾಗುತ್ತಿದ್ದೇನೆ ಎಂದಾಗ ಹುಡುಗಿ ಎಲ್ಲಿ ಎಂದು ಕೇಳುವವರು ಜಾಸ್ತಿ. ಈ ಕುರಿತು ಯಾವುದೇ ಯೋಚನೆ ಮಾಡಿಲ್ಲ. ನನಗೆ ಯಾವುದಾದರೂ ಒಳ್ಳೆಯ ಹುಡುಗಿ ಇದ್ದಾರೆ ಹೇಳಿ ಬಿಡಿ. ನಾನು ಮದುವೆಯಾಗಲು ಸಿದ್ಧ" ಎಂದಿದ್ದಾರೆ ಶಾಹೀದ್ . ಮದುವೆಯ ಮೂಲಕವಾದರೂ ಶಾಹೀದ್ ಕಪೂರ್‌ನ ಲಕ್ ಚೇಂಜ್ ಕಾಣುತ್ತಾ ಅಂದೊಂದು ಗೊತ್ತಾಗುತ್ತಿಲ್ಲ ಮಾರಾಯ್ರೆ...
Saturday, October 6, 2012
ಬಾಲಿವುಡ್ ಗೊಬ್ಬಳೇ ಗೌರಮ್ಮ !
ಬಾಲಿವುಡ್ ಅಂಗಳದಲ್ಲಿ ಆರ್. ಬಾಲ್ಕಿ( ಆರ್. ಬಾಲಕೃಷ್ಣನ್) ಹೆಸರು ಬಹುತೇಕ ಮಂದಿಗೆ ಚಿರಪರಿಚಿತ. ಅಷ್ಟೇ ಗೌರಿಯ ಹೆಸರು ಕೂಡ ಚಿರಪರಿಚಿತವಾಗಿರಬೇಕಿತ್ತು. ಕಾರಣ ಪಾಲ್ಕಿಯ ಚಿತ್ರ ಜಗತ್ತಿನ ಅಧ್ಯಾಯ ಆರಂಭವಾಗೋದು ಗೌರಿಯ ಮೂಲಕ ಎಂಬ ವಿಚಾರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಇದೇ ಗೌರಿ ಇಂಗ್ಲೀಷ್- ವಿಂಗ್ಲೀಷ್ ಚಿತ್ರದ ಮೂಲಕ ಹೊಸ ದಿಶೆ ಬರೆಯುತ್ತಿದ್ದಾರೆ...
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ನಲ್ಲಿ ಸಿಂಪಲ್ ಕತೆ ಯನ್ನು ಇಟ್ಟುಕೊಂಡು ಕೂಡ ಸಿನಿಮಾ ಮಾಡಬಹುದು. ಅದಕ್ಕಾಗಿ ಕತೆ, ಸ್ಟಾರ್ ಗಿರಿಗಾಗಿ ಹಿಮಾಲಯ ಪರ್ವತ ಏರುವ ಅವಶ್ಯಕತೆಯಂತೂ ಇಲ್ಲ ಎನ್ನುವ ಉತ್ತರ ಕೊಟ್ಟವರು ಗೌರಿ ಶಿಂಧೆ. ಅಂದಹಾಗೆ ಗೌರಿ ಯಾರಪ್ಪ ಅಂದರೆ ಬಾಲಿವುಡ್ ನಲ್ಲಿ ಚೀನಿ ಕಮ್ ಹಾಗೂ ಪಾ ದಂತಹ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಬಹಳ ಹತ್ತಿರವಾದ ನಿರ್ದೇಶಕ ಆರ್. ಬಾಲ್ಕಿ ಅವರ ಮಿಸಸ್. ಬಾಲಿವುಡ್ ಅಂಗಳದಲ್ಲಿ ಆರ್. ಬಾಲ್ಕಿ( ಆರ್. ಬಾಲಕೃಷ್ಣನ್) ಹೆಸರು ಬಹುತೇಕ ಮಂದಿಗೆ ಚಿರಪರಿಚಿತ. ಅಷ್ಟೇ ಗೌರಿಯ ಹೆಸರು ಕೂಡ ಚಿರಪರಿಚಿತವಾಗಿರಬೇಕಿತ್ತು. ಕಾರಣ ಪಾಲ್ಕಿಯ ಚಿತ್ರ ಜಗತ್ತಿನ ಅಧ್ಯಾಯ ಆರಂಭವಾಗೋದು ಗೌರಿಯ ಮೂಲಕ ಎಂಬ ವಿಚಾರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಅವರ ಚೀನಿ ಕಮ್ ಚಿತ್ರವಾಗಲಿ ಅಥವಾ ಪಾ ಚಿತ್ರದಲ್ಲೂ ಪಾಲ್ಕಿಯ ನಿರ್ದೇಶನದಷ್ಟೇ ಗೌರಿಯ ಪಾತ್ರವಿತ್ತು.
ಇದೇ ಗೌರಿ ಬಾಲಿವುಡ್ ಅಂಗಳದಲ್ಲಿ ಸಿಂಪಲ್ ಕತೆಯ ಮೂಲಕ ಭರ್ಜರಿ ಓಟವನ್ನು ದಾಖಲಿಸುತ್ತಿರುವ ಇಂಗ್ಲೀಷ್ ವಿಂಗ್ಲೀಷ್ ಚಿತ್ರದ ನಿರ್ದೇಶಕಿ. ಬಾಲಿವುಡ್ ರಂಗದಲ್ಲಿ ಹದಿನೈದು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ನಟಿ ಶ್ರೀದೇವಿಗೆ ಭರ್ಜರಿ ಓಪನಿಂಗ್ ಕೊಟ್ಟು ಎಲ್ಲರ ಕೈಯಿಂದಲೂ ಗೌರಿ ಶಹಬ್ಬಾಸ್ ಗಿರಿ ಪಡೆಯುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಖ್ಯಾತ ನಿರ್ದೇಶಕಿಯರ ಸ್ಥಾನದಲ್ಲಿ ಗೌರಿ ಸಖತ್ ಬೇಡಿಕೆ ತನ್ನ ಚಿತ್ರದ ಮೂಲಕ ಪಡೆದುಕೊಂಡಿದ್ದಾರೆ. ಭಾರತೀಯ ಮಧ್ಯಮ ವರ್ಗದ ಮಹಿಳೆಯ ಪಾತ್ರದಲ್ಲಿ ಶ್ರೀದೇವಿಯನ್ನು ಇಟ್ಟುಕೊಂಡು ಈ ಮಹಿಳೆ ಅಮೆರಿಕಾದಲ್ಲಿ ಎದುರಿಸುವ ಸಂಕಷ್ಟಗಳನ್ನು ತೋರಿಸುವ ಪ್ರಯತ್ನ ಈ ಚಿತ್ರದ ಮೂಲಕ ಸಾಗಿದೆ. ಇಂಗ್ಲೀಷ್ ಬಾರದ ಭಾರತೀಯ ಮಹಿಳೆ ಎದುರಿಸುವ ಸಮಸ್ಯೆಯೇ ಚಿತ್ರದ ಕಥಾ ವಸ್ತುವಾಗಿ ರೂಪುಗೊಂಡಿದ್ದು ನೋಡಿದರೆ ಯಾಕಪ್ಪಾ ನಾವು ಇಂತಹ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಬಾರದಿತ್ತು ಎನ್ನುವ ಪ್ರಶ್ನೆ ಭಾರತೀಯ ಚಿತ್ರರಂಗದ ಬಹುತೇಕ ನಿರ್ದೇಶಕರ ಮನಸ್ಸನ್ನು ಕಾಡಿದೆ ಎಂಬುವುದಂತೂ ನಿಜ.
ಯಾರಮ್ಮ ಗೌರಮ್ಮ:
ಗೌರಿ ಶಿಂಧೆ ಬೇಸಿಕಲಿ ಪುಣಿಯ ಹುಡುಗಿ. ಮುಂಬಯಿಯಲ್ಲಿದ್ದ ಸಿದ್ದಾರ್ಥ್ ಕಾಕ್ ಎನ್ನುವ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಬೆಳೆದ ಗೌರಿ ಶಿಂಧೆ ಇಂಗ್ಲೀಷ್- ವಿಂಗ್ಲೀಷ್ ಚಿತ್ರ ಬರುವುದಕ್ಕೂ ಮೊದಲು 100 ಜಾಹೀರಾತು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಅಮೇರಿಕದಲ್ಲೂ ನಿಂತುಕೊಂಡು ಜಾಹೀರಾತು ಕಂಪನಿಗಳಿಗೆ ದುಡಿದಿದ್ದಾರೆ. ಇಲ್ಲಿನ ದುಡಿತ ಇಂದಿನ ಇಂಗ್ಲೀಷ್- ವಿಂಗ್ಲೀಷ್ ಚಿತ್ರವಾಯಿತು. ಮುಖ್ಯವಾಗಿ ಭಾರತೀಯ ಮಹಿಳೆಯರು ವಿದೇಶದಲ್ಲಿ ಇಂಗ್ಲೀಷ್ ಗಾಗಿ ನಡೆಸುವ ಒದ್ದಾಟವನ್ನು ತೀರಾ ನೈಜವಾಗಿ ಚಿತ್ರೀಸಿರುವ ಗೌರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರೋದು ಇದೇ ಕಾರಣಕ್ಕೆ.
ಗೌರಿ ಹಾಗೂ ಬಾಲ್ಕಿಯ ಲವ್ ಸ್ಟೋರಿ ಕೂಡ ತುಂಬಾನೇ ವಿಶೇಷ. ಮುಂಬಯಿಯ ಜಾಹೀರಾತು ಕಂಪನಿಯೊಂದರಲ್ಲಿ ದುಡಿಯುತ್ತಿದ್ದ ಗೌರಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಬಾಲ್ಕಿಯ ಲವ್ ಸ್ಟೋರಿ ಅಧ್ಯಾಯ ಆರಂಭವಾಗಿರೋದು ಕಂಪನಿಯ ಲಿಫ್ಟ್ ವೊಂದರಲ್ಲಿಯಂತೆ ! ಒಂದು ಬಾರಿ ಲಿಫ್ಟ್ ಕೆಟ್ಟುಹೋಗಿ ಇಬ್ಬರು ಜತೆಯಾಗಿ ಬಂಧಿಯಾದರು. ಕಾಲು ಗಂಟೆಯ ಈ ಪುಟ್ಟ ಪ್ರಯಾಣದಲ್ಲಿ ಇಬ್ಬರ ಜತೆ ಸ್ನೇಹ ಬೆಳೆಯಿತು. ನಂತರ ಕೆಲವು ತಿಂಗಳ ನಂತರ ಡೇಟಿಂಗ್ ಮೂಲಕ ಪ್ರೇಮದ ಅಧ್ಯಾಯಗಳು ಆರಂಭವಾಯಿತು ಎನ್ನೋದು ಗೌರಿ ಮಾತು. ಬಳಿಕ ಬಾಲಿವುಡ್ ನಲ್ಲಿ ಬಂದ ನಟಿ ಕಾಜೋಲ್ ಚಿತ್ರವೊಂದು ಇಬ್ಬರ ಮದುವೆಗೂ ಮೂಲ ಪ್ರೇರಣೆಯಾಯಿತು. ಇಬ್ಬರು ಕಾಜೋಲ್ ಅಭಿಮಾನಿಗಳು. ಇದೇ ಕಾರಣದಿಂದ ಇಬ್ಬರು ಸಿನಿಮಾದ ನೆಪ ಹೇಳಿಕೊಂಡು ಸುತ್ತಾಟ ಮಾಡುತ್ತಿದ್ದರಂತೆ. ಬಾಲ್ಕಿ ಬಾಲಿವುಡ್ ನಲ್ಲಿ ಚೀನಿ ಕಮ್ ಚಿತ್ರ ನಿರ್ದೇಶನ ಮೂಡುವ ಮೊದಲ ವರ್ಷದಲ್ಲಿ ಇಬ್ಬರಿಗೂ ವಿವಾಹವಾಯಿತು.
ಇಂಗ್ಲೀಷ್- ವಿಂಗ್ಲೀಷ್ ಕತೆಗೆ ಕಾರಣ ಯಾರು:
ಬಾಲಿವುಡ್ ನಿರ್ದೇಶಕಿ ಗೌರಿ ಶಿಂಧೆ ಹೇಳುವ ಪ್ರಕಾರ ಈ ಚಿತ್ರಕ್ಕೆ ಮೂಲಕ ಕಾರಣ ಗೌರಿಯ ತಾಯಿಯಂತೆ.. ಈ ಕಾರಣದಿಂದ ಚಿತ್ರವನ್ನು ಗೌರಿಯ ತಾಯಿಗೆ ಅರ್ಪಿಸಲಾಗಿದೆ. ಗೌರಿಯ ತಾಯಿ ಮರಾಠಿ ಭಾಷಿಕರು. ಪುಣೆಯಲ್ಲಿ ತಮ್ಮದೇ ಆದ ಉಪ್ಪಿನ ಕಾಯಿ ವ್ಯಾಪಾರ ಮಾಡಿಕೊಂಡಿದ್ದರು. ವ್ಯಾಪಾರ ಸಂಬಂಧಿಯಾಗಿ ಅವರು ಇಂಗ್ಲೀಷ್ ತರಬೇತಿ ಕ್ಲಾಸ್ ಗೆ ಹೋಗಲು ಅಣಿಯಾದ ಕತೆಯನ್ನೇ ನಾನು ಚಿತ್ರದಲ್ಲಿ ಬಳಸಿಕೊಂಡಿದ್ದೇನೆ ಎನ್ನುತ್ತಾರೆ ಗೌರಿ ಶಿಂಧೆ. ತಾಯಿ ಇಂಗ್ಲೀಷ್ ಕಲಿಯುತ್ತಿದ್ದಾಗ ಸಂಕಷ್ಟಗಳನ್ನು ಅಧ್ಯಯನ ಮಾಡಿಕೊಂಡು ಗೌರಿ ಚಿತ್ರದ ಕತೆಯನ್ನು ಬರೆಯಲು ಆರಂಭಿಸಿದರು. ಇಂಗ್ಲೀಷ್- ವಿಂಗ್ಲೀಷ್ ಚಿತ್ರದ ಕತೆ ಹಾಗೂ ಇಡೀ ಸಿನಿಮಾ ನನ್ನ ಹಾಗೂ ನನ್ನ ತಾಯಿಗೆ ಸಂಬಂಧಪಟ್ಟದ್ದು ಎನ್ನುವುದು ಗೌರಿಯ ಮಾತು. ಈ ಚಿತ್ರದಲ್ಲಿ ಬರುವ ಸಂಭಾಷಣೆಯೊಂದು ನನಗೆ ತೀರಾ ಹತ್ತಿರವಾಗಿದೆ ಅದೇನಪ್ಪಾ ಅಂದರೆ ಪಾಸ್ ಪೋರ್ಟ್ ಮಾಡಿಸಿಕೊಳ್ಳುತ್ತಿರುವಾಗ ಅಧಿಕಾರಿಯೊಬ್ಬ ಕೇಳುವ ಪ್ರಶ್ನೆ ಹಾಗೂ ಅದಕ್ಕೆ ಅವಳು ನೀಡುವ ಉತ್ತರ ಇಡೀ ಚಿತ್ರದ ಕತೆಯನ್ನು ಹೇಳಿಕೊಂಡು ಹೋಗುತ್ತದೆ ಎನ್ನುವುದು ಗೌರಿಯ ಮಾತು.
ಬಹಳಷ್ಟು ಗೆಳೆಯರು ಮನೆಗೆ ಬಂದಾಗ ಮರಾಠಿ ಭಾಷಿಕರಾದ ತಾಯಿ ಜತೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಒಳ್ಳೆಯ ಕುಕ್ ಎನ್ನುವ ಕಾರಣಕ್ಕೆ ಗೆಳೆಯರು ಮತ್ತೇ ಮತ್ತೇ ಮನೆಗೆ ಬರುತ್ತಾರೆ. ಒಂದು ಸಲ ಇಂಗ್ಲೀಷ್ ಕುರಿತಾದ ಪ್ರಶ್ನೆಯೇ ಎದುರಿಗೆ ನಿಂತಿತ್ತು. ಇದೇ ಪ್ರಶ್ನೆಯನ್ನು ನಾನು ಪರದೆಯ ಮೇಲೆ ತೋರಿಸಿದ್ದೇನೆ ಎನ್ನುತ್ತಾರೆ ಗೌರಿ. ಈ ಚಿತ್ರದಲ್ಲಿ ಮಹಿಳೆ ಹಾಗೂ ಪುರುಷರು ಎಲ್ಲ ರೀತಿಯಿಂದಲೂ ಸಮಾನರು ಹಾಗೂ ಇಂಗ್ಲೀಷ್ ಕಲಿಯಲು ಬರೀ ಪುರುಷರೇ ಬೇಕಾಗಿಲ್ಲ. ಗೃಹಿಣಿಯರು ಕೂಡ ಕಲಿತು ಸಮಾಜದಲ್ಲಿ ಉನ್ನತವಾಗಿ ಬದುಕು ಸಾಗಿಸಬಹುದು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರ ನೋಡಿದ ನಂತರವಂತೂ ಶ್ರೀದೇವಿಯ ಪತಿ ಬೋನಿ ಕಪೂರ್ ಕೂಡ ಕಣ್ಣೀರು ತಂದುಕೊಂಡರು. ಅವರು ಕೂಡ ತನ್ನ ತಾಯಿ ಜತೆಯಲ್ಲಿ ಇದೇ ರೀತಿ ವರ್ತಿಸುತ್ತಿದ್ದರು ಎಂದು ನನ್ನ ಬಳಿ ಹೇಳಿಕೊಂಡರು. ಅದರಲ್ಲೂ ಬೋನಿ ಶ್ರೀದೇವಿಯ ಜತೆಯಲ್ಲೂ ಇದೇ ರೀತಿ ನಡೆದುಕೊಂಡಿದ್ದೇನೆ ಎಂದು ಬಿಟ್ಟರಂತೆ ಗೌರಿ ಶಿಂಧೆ ಬಳಿ.. ಟೋಟಲಿ ಇಂಗ್ಲೀಷ್- ವಿಂಗ್ಲೀಷ್ ಚಿತ್ರದ ಮೂಲಕ ಬೆಳಕಿಗೆ ಬಂದ ಗೌರಿ ಶಿಂಧೆ ಬಾಲಿವುಡ್ ಪಾಲಿಗೆ ನಿಜಕ್ಕೂ ಒಳ್ಳೆಯ ನಿರ್ದೇಶಕಿಯರಲ್ಲಿ ಒಬ್ಬಳು ಎನ್ನುವ ಮಾತಿಗೆ ಗ್ಯಾರಂಟಿ ಇದೆ.
Friday, October 5, 2012
<ಸತ್ಯ ಮೇವಾ ಜಯತೇ ಎಡವಟ್ಟು ಆಮೀರ್ ತಲಾಶ್ ಶುರು !
ಇಂಟ್ರೋ:
ಭಾರತೀಯ ಸಿನಿಮಾ ಇಂಡಸ್ಟ್ರಿಯ ಇತ್ತೀಚಿನ ಸಿನಿಮಾಗಳ ಬೆಳವಣಿಗೆಯಲ್ಲಿ ಒಂದು ಚಿತ್ರದ ಕಥೆಯನ್ನು ಮೂರು ಬಾರಿ ಬದಲಾವಣೆ ಮಾಡಿದ ಖ್ಯಾತಿಗೆ "ತಲಾಶ್' ಭಾಜನವಾಗಿದೆ. ಅದರಲ್ಲೂ ಆಮೀರ್ ಖಾನ್ ಒಂದು ಬಾರಿ ನಟಿಸಿದ ನಾಯಕಿಯರ ಜತೆಯಲ್ಲಿ ಮತ್ತೊಂದು ಸಲ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ಅವರ ಹಿಂದಿನ ಚಿತ್ರಗಳ ನಾಯಕಿಯ ಬದಲಾವಣೆಯನ್ನೇ ಗಮನಿಸಿದರೆ ತಿಳಿದು ಬರುತ್ತದೆ. ಆದರೆ ತಲಾಶ್ ನಲ್ಲಿ ಎಲ್ಲವೂ ಉಲ್ಟಾ- ಪಲ್ಟಾ .. ಏನ್ ಅಂತಾ ಕೇಳ್ತೀರಾ..?
ಇಂಟ್ರೋ:
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಇರಲಿ ಇತರ ಯಾವುದೇ ಭಾರತೀಯ ಸಿನಿಮಾ ಇಂಡಸ್ಟ್ರಿ ಇರಲಿ ಆಮೀರ್ ಖಾನ್ ಅಂದಾಕ್ಷಣ ಕುತೂಹಲದ ಕರಿ ನೆರಳು ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ಇದು ಈ ಹೆಸರಿಗೆ ಇರುವ ಕಿಮ್ಮತ್ತು ಎಂದುಕೊಂಡರೂ ಅದು ತಪ್ಪಿಲ್ಲ. ಯಾಕೆಂದರೆ ಬಾಲಿವುಡ್ ಸಿನಿಮಾ ರಂಗದಲ್ಲಿ ಆಮೀರ್ ಎಂದರೆ ನೂರಕ್ಕೆ ನೂರು ಪರ್ಫೆಕ್ಟ್ ಕಾಂಬೀನೇಶನ್. ಅದು ಚಿತ್ರ ಇರಲಿ ಅಥವಾ ಆಮೀರ್ ಬದುಕಿನ ಯಾವುದೇ ಸಾಮಾಜಿಕ ವಿಚಾರಗಳಿರಲಿ ಎಲ್ಲ ವಿಚಾರದಲ್ಲೂ ಎತ್ತಿದ ಕೈ. ಅಂದಹಾಗೆ ಆಮೀರ್ ಖಾನ್ 2000 ಇಸವಿಯ ಮೊದಲು ಹೇಗಿದ್ದರೋ ಆ ವಿಚಾರವನ್ನು ಸೈಡ್ ಗೆ ಇಟ್ಟುಕೊಂಡು ನೋಡಿ 2000 ಇಸವಿಯ ನಂತರ ಆಮೀರ್ ನಟಿಸಿದ ಹಾಗೂ ನಿರ್ಮಾಪಕನಾಗಿ ಮಾಡಿದ ಎಲ್ಲ ಚಿತ್ರಗಳು ಸಾಮಾಜಿಕ ವಿಚಾರಗಳನ್ನೇ ಎತ್ತಿಕೊಂಡು ಮಾಡಿದ್ದು ಚಿತ್ರದ ಮೂಲಕ ಜನರಲ್ಲಿ ಜಾಗೃತಿ ಹುಟ್ಟು ಹಾಕುವ ಸಿನಿಮಾಗಳಿಗೆ ಆಮೀರ್ ಮೊದಲ ಆದ್ಯತೆ ನೀಡುತ್ತ ಬಂದ ಕಲಾವಿದ.
ಆಮೀರ್ ಖಾನ್ ನಟಿಸಿದ "ಲಗಾನ್', "ಮಂಗಲ್ ಪಾಂಡೆ', "ರಂಗ್ ದೇ ಬಸಂತಿ', "ತಾರೆ ಜಮೀನ್ ಪರ್', "ಗಜನಿ", "ತ್ರಿ ಇಡಿಯಡ್ಸ್', "ಧೋಬಿ ಘಾಟ್' ಈಗ "ತಲಾಶ್" ಚಿತ್ರದ ಸರಣಿಯನ್ನೇ ತೆಗೆದುಕೊಂಡರೂ ಎಲ್ಲವೂ ಸಾಮಾಜಿಕ ವಿಚಾರಗಳಿಂದ ಸಿಡಿದು ಎದ್ದ ಕತೆ ಹಾಗೂ ಚಿತ್ರದ ಮೂಲಕ ಸಂದೇಶ ಕೊಡುವ ಪ್ರಯತ್ನ ಆಮೀರ್ ಮಾಡುತ್ತಾ ಬರುತ್ತಿದ್ದಾರೆ. ಈ ಎಲ್ಲ ಚಿತ್ರ ಗಳು ಕೂಡ ಒಂದೊಂದು ವರ್ಷದ ಅಂತರ ಕಾಯ್ದುಕೊಂಡು ಬಂದಿದೆ. ಈ ಮೂಲಕ ಆಮೀರ್ ಚಿತ್ರ ಆಯ್ಕೆ ಮೊದಲು ಕೂಡ ಬಹಳಷ್ಟು ಅಧ್ಯಯನ ಮಾಡಿಕೊಂಡು ಇಳಿಯುತ್ತಾರೆ ಎಂಬ ವಿಚಾರವನ್ನು ಈ ಘಟನೆಗಳು ಸಾಕ್ಷಿ ನೀಡುತ್ತದೆ.
ತಲಾಶ್ ಹುಟ್ಟು ಹಾಕಿದ ಕ್ರೇಜ್ :
ಬಾಲಿವುಡ್ ನ ಇತ್ತೀಚಿನ ಸಿನಿಮಾ ಗಳನ್ನು ಟೋಟಲಿ ಅಧ್ಯಯನ ಮಾಡಿದರೂ ಚಿತ್ರದ ಮುಹೂರ್ತ ಹಾಗೂ ಬಿಡುಗಡೆ ಅವಧಿ ಅಬ್ಬಾಬ್ಬ ಅಂದರೂ 6 ತಿಂಗಳಿನಿಂದ ಒಂದೂವರೆ ವರ್ಷ ಹಿಡಿದು ಬಿಡುತ್ತದೆ. ಆದರೆ "ತಲಾಶ್ ' ಚಿತ್ರದ ಕತೆನೇ ಬೇರೆ ಯಾಕ್ ಅಂತೀರಾ ಈ ಚಿತ್ರ ಅಧಿಕೃತವಾಗಿ ಆರಂಭವಾಗಿದ್ದು 2010ರ ಕೊನೆ ಭಾಗದಲ್ಲಿ ಈ ಬಳಿಕ 2011 ನವೆಂಬರ್ ಹೊತ್ತಿಗೆ ಆಮೀರ್ ಖಾನ್ ಖುದ್ದಾಗಿ ಈ ಚಿತ್ರಕ್ಕೆ ಟೈಟಲ್ ಸೂಟ್ ಮಾಡಿದ್ದರು. ಚಿತ್ರದ ನಿರ್ದೇಶಕಿ ರೀಮಾ ಕಾಡ್ಗಿ ಚಿತ್ರದ ಚಿತ್ರೀಕರಣ ಮುಕ್ಕಾಲು ಭಾಗ ಕೊನೆಗೊಂಡಾಗ ಇಡೀ ಚಿತ್ರದ ಕತೆಯನ್ನೇ ಬದಲಾವಣೆ ಮಾಡಲು ಯೋಚನೆಗೆ ಇಳಿದರು. ಇದೇ ಸಮಯದಲ್ಲಿ ಬಂದ ವಿದ್ಯಾ ಬಾಲನ್ ಚಿತ್ರ ಕಹಾನಿ ಹಾಗೂ ತಲಾಶ್ ಚಿತ್ರ ಕತೆಗೂ ಹೋಲಿಕೆ ಇದೆ ಎನ್ನುವ ಮಾತುಗಳು ಹೊರಗಡೆ ಬರುತ್ತಿದ್ದಾಗಲೇ ರೀಮಾ ಹಾಗೂ ಆಮೀರ್ ಜತೆ ಸೇರಿ ತಲಾಶ್ ಚಿತ್ರದ ಕತೆಗೆ ಮತ್ತೆ ಟ್ವೀಸ್ಟ್ ತಂದರು.
ಈ ಮೂಲಕ ಭಾರತೀಯ ಸಿನಿಮಾ ಇಂಡಸ್ಟ್ರಿಯ ಇತ್ತೀಚಿನ ಸಿನಿಮಾಗಳ ಬೆಳವಣಿಗೆಯಲ್ಲಿ ಒಂದು ಚಿತ್ರದ ಕಥೆಯನ್ನು ಮೂರು ಬಾರಿ ಬದಲಾವಣೆ ಮಾಡಿದ ಖ್ಯಾತಿಗೆ "ತಲಾಶ್' ಭಾಜನವಾಗಿದೆ. ಅದರಲ್ಲೂ ಆಮೀರ್ ಖಾನ್ ಒಂದು ಬಾರಿ ನಟಿಸಿದ ನಾಯಕಿಯರ ಜತೆಯಲ್ಲಿ ಮತ್ತೊಂದು ಸಲ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ಅವರ ಹಿಂದಿನ ಚಿತ್ರಗಳ ನಾಯಕಿಯ ಬದಲಾವಣೆಯನ್ನೇ ಗಮನಿಸಿದರೆ ತಿಳಿದು ಬರುತ್ತದೆ. ಆದರೆ ತಲಾಶ್ ವಿಚಾರದಲ್ಲಿ ಇದೆಲ್ಲವೂ ಉಲ್ಟಾ-ಪಲ್ಟಾ. ಕಾರಣ ಬಾಲಿವುಡ್ ನ 90ರ ದಶಕದಲ್ಲಿ ಬಂದ ಹಿಂದಿ ಚಿತ್ರ ಗುಲಾಮ್ ನಾಯಕಿ ರಾಣಿ ಮುಖರ್ಜಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ತ್ರಿ ಇಡಿಯಟ್ಸ್ ಖ್ಯಾತಿ ಕರೀನಾ ಕಪೂರ್ ಕೂಡ ಆಮೀರ್ ಖಾನ್ ರ ತಲಾಶ್ ಗೆ ಸಾಥ್ ನೀಡಲಿದ್ದಾರೆ. ಇದು ಚಿತ್ರ ಮತ್ತೊಂದು ಮಗ್ಗಲು.
ತಲಾಶ್ ಗೆ ಹೊಡೆದ ನೀಡಿದ ಆಮೀರ್ ಸತ್ಯ:
ಚಿತ್ರದ ಆರಂಭದ ಬಹುತೇಕ ದೃಶ್ಯಗಳು ಮುಂಬಯಿಯ ರೆಡ್ ಲೈಟ್ ಏರಿಯಾದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಕರೀನಾ ಕಪೂರ್ ಈ ಚಿತ್ರದಲ್ಲಿ ರೋಸಿ ಎನ್ನುವ ವೇಶ್ಯೆಯೊಬ್ಬರ ಪಾತ್ರದಲ್ಲಿ ಕಾಣಿಇಸಕೊಳ್ಳಲಿದ್ದಾರೆ ಎಂದು ಚಿತ್ರದ ಮುಹೂರ್ತ ಸಂದರ್ಭ ನಿರ್ದೇಶಕಿ ರೀಮಾ ಮಾಧ್ಯಮಗಳಿಗೆ ಹೇಳಿದ್ದರು. ಈ ಬಳಿಕ ಚಿತ್ರದ ಕತೆ ಹಾಗೂ ಉಳಿದ ಮಾಹಿತಿಗಳನ್ನು ಮುಚ್ಚಿಟ್ಟುಕೊಂಡಿದ್ದರು. ಚಿತ್ರದ ಎರಡನೇ ಹಂತವನ್ನು ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆಸಿ ಉಳಿದಂತೆ ರಾಯಘಡದ ಕಪೋಲಿ ಪ್ರದೇಶದಲ್ಲಿ ಚಿತ್ರೀಕರಣ ನಡೆಯಿತು.
ಇದೆಲ್ಲವೂ ನಡೆಯುತ್ತಿದ್ದಾಗ ಚಿತ್ರದ ಕತೆಯೇ ಬದಲಾವಣೆ ಕಂಡಿತ್ತು. ನವೆಂಬರ್ 2011ರ ಹೊತ್ತಿನಲ್ಲಿ ಚಿತ್ರದ ಬಹುತೇಕ ಭಾಗ ಮರು ಚಿತ್ರೀಕರಣ ನಡೆಸಿ ಕೆಲವೊಂದು ಬಾಕಿ ದೃಶ್ಯಗಳ ಚಿತ್ರೀಕರಣಕ್ಕಾಗಿ ಆಮೀರ್ ಖಾನ್ ಗೆ ಕಾದು ಕೂರಲಾಯಿತು. ಇದೇ ಸಮಯದಲ್ಲಿ ಆಮೀರ್ ತನ್ನ ರಿಯಾಲಿಟಿ ಶೋ ಸತ್ಯ ಮೇವ ಜಯತೇ ಯಲ್ಲಿ ಬ್ಯುಸಿಯಾಗಿದ್ದರು. ಈಗ ಚಿತ್ರದ ಚಿತ್ರೀಕರಣ ನಡೆದು ಮಾಧ್ಯಮಗಳಿಗೆ ಪ್ರೋಮೊಗಳನ್ನು ಬಿಡುಗಡೆ ಮಾಡಲಾಗಿದೆ. ನವೆಂಬರ್ ಕೊನೆಯ ಹೊತ್ತಿನಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಚಿತ್ರದ ನಿರ್ಮಾಪಕರದ್ದು ಕಾರಣ ಆಮೀರ್ ಖಾನ್ ಚಿತ್ರಗಳು ವರ್ಷದ ಕೊನೆ ಭಾಗದಲ್ಲಿ ಸಿನಿಮಾ ಥಿಯೇಟರ್ ಗೆ ಬಂದರೆ ಅದು ಆಮೀರ್ ಪಾಲಿಗೆ ಅದೃಷ್ಟ ವಾಗಿರುತ್ತದೆ ಎನ್ನುವ ನಂಬಿಕೆಯ ಮಾತು ಬಾಲಿವುಡ್ ಅಂಗಳದಲ್ಲಿ ಚಾಲ್ತಿಯಲ್ಲಿದೆ. ಖುದ್ದು ಆಮೀರ್ ಸೇರಿದಂತೆ ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್, ಶರಣ್ ವಾಲ್ಕರ್ ಚಿತ್ರದ ನಿರ್ಮಾಪಕರ ಸ್ಥಾನದಲ್ಲಿದ್ದಾರೆ.
ಆರುಷಿ ಕೊಲೆ ಪ್ರಕರಣವೇ ತಲಾಶ್ ಕತೆನಾ?
ಸಮಾಜದಲ್ಲಿರುವ ನೈಜ ಘಟನೆಗಳನ್ನೇ ತನ್ನ ಚಿತ್ರಕ್ಕೆ ಬಂಡವಾಳ ಮಾಡಿಕೊಂಡು ಬರುತ್ತಿರುವ ಆಮೀರ್ ತ್ನ ಹೊಸ ಚಿತ್ರ ತಲಾಶ್ ನಲ್ಲೂ ಇದೇ ಪ್ರಯೋಗ ಮಾಡಿದ್ದಾರೆ ಎನ್ನುವ ಮಾತಿದೆ. ತೀರಾ ಇತ್ತೀಚೆಗೆ ಬಹಳ ಸುದ್ದಿಯಾದ ಾರುಷಿ ಕೊಲೆ ಪ್ರಕರಣವನ್ನೇ ಚಿತ್ರದ ಕತೆಯಾಗಿ ಸೇರಿಸಿಕೊಂಡಿದ್ದಾರೆ ಎಂಬ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ. ದಿಲ್ಲಿಯ ನೊಯಿಡಾ ಪ್ರದೇಶದಲ್ಲಿ ನಡೆದ ಆರುಷಿ ಕೊಲೆ ಪ್ರಕರಣವನ್ನು ಆರಂಭದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಅದು ಸಿಬಿಐ ಕೈ ಸೇರಿದ ಕತೆಯನ್ನೇ "ತಲಾಶ್' ಹೊಂದಿದೆ ಎನ್ನಲಾಗುತ್ತಿದೆ.
14ರ ಬಾಲೆ ಆರುಷಿಯನ್ನು 16 ಮೇ 2008ರಲ್ಲಿ ತನ್ನ ನೋಯಿಡಾ ನಿವಾಸದಲ್ಲಿ ಕೊಲೆ ಮಾಡಲಾಗಿತ್ತು. ಪೊಲೀಸರ ತನಿಖೆಯ ಸಂದರ್ಭ ಆರುಷಿ ಹೆತ್ತವರೇ ಅದನ್ನು ಮುಚ್ಚಿ ಹಾಕಲು ಪ್ರಯತ್ನ ಪಟ್ಟು ಸೆರೆ ಸಿಕ್ಕಿದ್ದು ಇದೇ ಮೂಲ ಎಳೆಯಿಂದ ತಲಾಶ್ ಚಿತ್ರ ಓಡಲಿದೆ . ಈಗಾಗಲೇ ಬಾಲಿವುಡ್ ನಲ್ಲಿ ಬಂದ "ನೋ ವನ್ ಕಿಲ್ಡ್ ಜೇಸಿಕಾ' ಚಿತ್ರ ಕೂಡ ಸಮಾಜದಲ್ಲಿ ನಡೆದ ನೈಜ ಅಪರಾಧ ಕತೆಯನ್ನೇ ಹೊಂದಿತ್ತು. ತಲಾಶ್ ಚಿತ್ರದ ನಿರ್ದೇಶಕಿ ರೀಮಾ ಕೂಡ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಹಾಗೂ ಪೊಲೀಸರ ಜತೆಯಲ್ಲಿ ಮಾತುಕತೆ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ಕಾಣಿಇಸಕೊಂಡ ತಿರುವು ಎಲ್ಲವೂ ರಿಮಾ ತನ್ನ ತಲಾಶ್ ನಲ್ಲಿ ಆಳವಡಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಮಾತು ಮಾಧ್ಯಮಗಳು ಬಾಯಿ ಬಿಟ್ಟಿದೆ. ಟೋಟಲಿ ಬಾಲಿವುಡ್ ನ ದೊಡ್ಡ ಪರದೆಯ ಮೇಲೆ ತಲಾಶ್ ಬಿಡುಗಡೆಯಾಗುವ ಮೊದಲು ಏನೂ ಹೇಳುವಂತಿಲ್ಲ. ಕಾರಣ ಬಾಲಿವುಡ್ ನ ಪರ್ಫೆಕ್ಟ್ ಮ್ಯಾನ್ ಎಂದು ಕರೆಯುವ ಆಮೀರ್ ಚಿತ್ರದ ಮೂಲ ಕತೆಯಲ್ಲಿ ಬದಲಾವಣೆ ಮಾಡದೇ ಇರುತ್ತಾರಾ..? ಎನ್ನುವ ಪ್ರಶ್ನೆ ಚಿತ್ರ ಪ್ರೇಮಿಗಳಲ್ಲಿ ಎದುರಾಗಿದೆ.
Tuesday, October 2, 2012
ಮಣಿ ಕೈಯಲ್ಲಿ ಈಗ ಐಶ್ವರ್ಯಾ !
* ಸ್ಟೀವನ್ ರೇಗೊ, ದಾರಂದಕುಕ್ಕು
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಅವರ ಮಾತಿಗೆ ಜಗದೇಕ ಸುಂದರಿ ಐಶ್ವರ್ಯಾ ರೈ ತಕ್ಷಣ ಒಪ್ಪಿಕೊಳ್ಳಲು ಇರುವ ಕಾರಣ ಏನೂ ಎಂಬ ಪ್ರಶ್ನೆ ಬಹಳ ಮಂದಿಯನ್ನು ಕಾಡುತ್ತಿರಬಹುದು. ಬಾಲಿವುಡ್ ಬಿಗ್ ಬಿ ಸೊಸೆಯ ರೀ ಎಂಟ್ರಿ ಭರ್ಜರಿಯಾಗಿರಬೇಕು ಎಂದುಕೊಂಡು ಹತ್ತಾರು ಬಾಲಿವುಡ್ ನ ಚಿತ್ರ ನಿರ್ಮಾಣ ಬ್ಯಾನರ್ ಗಳು ಜತೆಗೆ ನಿರ್ದೇಶಕರು ತುದಿ ಕಾಲಿನಲ್ಲಿ ನಿಂತಿದ್ದರೂ ಕೂಡ ಐಶ್ ಬೇಬಿಯ ಕಾಲ್ ಶೀಟ್ ಮಣಿರತ್ನಂ ಎನ್ನುವ ನಿರ್ದೇಶಕನ ಪಾಲಿಗೆ ಸಿಗಲು ಕಾರಣ ಏನೂ ಎಂಬುದಕ್ಕೆ 1997ರಲ್ಲಿ ಬಿಡುಗಡೆ ಕಂಡ ಇರುವರ್ ಚಿತ್ರ ಹೇಳುತ್ತದೆ.
ಒಂದಲ್ಲ ಎರಡಲ್ಲ ಬರೋಬರಿ 10 ತಿಂಗಳ ಕಾಲ ಯಾವುದೇ ಬಣ್ಣದ ಲೋಕದ ಟಚ್ ಬಿಟ್ಟುಕೊಂಡು ಬದುಕು ಕಟ್ಟೋದು ಅಂದರೆ ಹೇಳುವಂತೆ ಸುಲಭದ ಮಾತಲ್ಲ. ಪ್ರತಿದಿನ ಶೂಟಿಂಗ್ ಬ್ಯುಸಿಯ ಓಡಾಟ, ಹತ್ತಾರು ಜಾಹೀರಾತು ಕಂಪನಿಗಳ ನಿರಂತರ ಶೂಟಿಂಗ್ ಅಲ್ಲೊಂದು ಇಲ್ಲೊಂದು ಅಂತಹ ಹೇಳಿಕೊಂಡು ಸಮಾಜ ಸೇವೆಯ ಕೆಲಸಗಳು ಎಲ್ಲವೂ ಬಿಟ್ಟು ಬದುಕಿನ ಶಕ್ತಿ ನಟಿಗೆ ಬಂದು ಬಿಟ್ಟರೆ ಆಕೆ ಮತ್ತೆ ಸಿನಿಮಾ ಫೀಲ್ಡ್ ಗೆ ಎಂಟ್ರಿ ಕೊಡುವುದು ಬಾಲಿವುಡ್ ಲೆಕ್ಕಚಾರದ ಪ್ರಕಾರ ತೀರಾನೇ ಕಡಿಮೆ. ಈ ಪಟ್ಟಿಯಲ್ಲಿ ಕುಡ್ಲದ ಕುವರಿ ಐಶ್ವರ್ಯಾ ರೈ ಬಂದಿದ್ದಾರೆ. ತೀರಾ ಇತ್ತೀಚೆಗೆ ವಿಶ್ವ ಸಂಸ್ಥೆಯ ಪರವಾಗಿ ಆಂದೋಲನವೊಂದಕ್ಕೆ ಐಶ್ ರಾಯಭಾರಿ ಆಗುವುದರ ಜತೆಗೆ ಚಿನ್ನಾಭರಣ ಕಂಪನಿಯೊಂದಕ್ಕೆ ಬ್ರಾಂಡ್ ಅಂಬಾಸೀಡರ್ ಆಗಿದ್ದು ಕೂಡ ಈಗ ಬಹಳ ಹಳಸಲು ಸುದ್ದಿ.
ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ಐಶ್ವರ್ಯಾ ರೈ ಆರಾಧ್ಯಳ ತಾಯಿಯಾಗಿ, ಜಾಹೀರಾತು ಕಂಪನಿಗೆ ರೂಪದರ್ಶಿಯಾಗುವುದರ ಬೆನ್ನಿಗೆ ಮತ್ತೆ ಬಣ್ಗದ ಲೋಕಕ್ಕೆ ರೀ ಎಂಟ್ರಿ ಕೊಡುತ್ತಿರುವ ವಿಚಾರ ಇಡೀ ಬಾಲಿವುಡ್ ಚಿತ್ರರಂಗಕ್ಕೆ ಬಹಳ ದೊಡ್ಡ ಸುದ್ದಿ ಅಲ್ವಾ..? ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗುಜಾರಿಶ್' ನಂತರ ಐಶ್ ಗೆ ಮಧುರ್ ಭಂಡಾರ್ ಕರ್ ಅವರ ಹೀರೋಯಿನ್ ನಲ್ಲೂ ಅವಕಾಶ ಬಂದಿತ್ತು. ಇದೇ ಸಮಯದಲ್ಲಿ ಐಶ್ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಈ ಜಾಗದಲ್ಲಿ ಕರೀನಾ ಕಪೂರ್ ಬಂದು ನಿಂತಿದ್ದರು. ಅಲ್ಲಿಗೆ ಐಶ್ ಪತಿ, ಮಗು ಹಾಗೂ ಮಾವ- ಮತ್ತೆ ಎನ್ನುವ ಸಂಬಂಧಗಳ ನಡುವೆ ಕಾಲ ಕಳೆಯುತ್ತಾರೆ ಎಂದೇ ಅವರ ಅಭಿಮಾನಿಗಳು ಎಂದುಕೊಂಡು ಬಿಟ್ಟಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಐಶ್ ಮರಳಿ ಸಿನಿಮಾಕ್ಕೆ ಬರುವ ಮಾತು ಆಡಿದ್ದಾರೆ.
ಮಣಿಯಲ್ಲಿ ಅರಳಿದ ಐಶ್ವರ್ಯಾ:
ಅಂದಹಾಗೆ ಐಶ್ ಬೇಬಿ ಮತ್ತೆ ಸಿನಿಮಾ ರಂಗಕ್ಕೆ ಕಾಲಿಡಲು ಕಾರಣ ಮಣಿರತ್ಣಂ. ಹೌದು. ಆಂಗ್ಲ ಕಾದಂಬರಿಗಾರ ಡ್ಯಾಫ್ನೇ ಡೂ ಮೂರಿಯರ್ ಅವರ ಖ್ಯಾತ ಕಾದಂಬರಿ "ರೆಬೇಕಾ' ಈಗ ಮಣಿರತ್ನಂ ಅವರ ಕೈಯಲ್ಲಿ ಅರಳಲಿರುವ ಚಿತ್ರ. ಈಗಾಗಲೇ ಐಶ್ ಜತೆಯಲ್ಲಿ ಚಿತ್ರದ ಕುರಿತಾಗಿ ಮಾತುಕತೆಗಳು ಮುಗಿದಿದೆ. ಚಿತ್ರಕ್ಕೆ ತಕ್ಕಂತೆ ಶೂಟಿಂಗ್ ಸ್ಪಾಟ್ ಗಳನ್ನು ಗುರುತಿಸುವ ಕೆಲಸ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಇನ್ನೂಳಿದಂತೆ ರೆಬೇಕಾ ಚಿತ್ರಕ್ಕೆ ನಾಯಕ ಯಾರು ಎನ್ನೋದು..? ಈ ಪ್ರಶ್ನೆಗೆ ಉತ್ತರ ನೀಡಲು ಮಣಿ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ವಿಚಾರ ಕೂಡ ಹೊರಬಂದಿದೆ. ಮಣಿರತ್ನಂ ಅವರ ಕಳೆದ ಎರಡು ಚಿತ್ರಗಳಲ್ಲಿ ಐಶ್ವರ್ಯಾ ರೈ ಗೆ ನಾಯಕನಾಗಿ ಅಭಿಷೇಕ್ ಅವರನ್ನು ಬಳಸಿಕೊಂಡಿದ್ದರು. ಈ ಚಿತ್ರದಲ್ಲೂ ಇದೇ ನಾಯಕ- ನಾಯಕಿ ಮುಂದವರಿಸುವ ಕುರಿತು ಚಿಂತನೆ ನಡೆದಿದೆ ಎನ್ನುವ ಮಾತುಗಳು ಮುಂಬಯಿ ಗಲ್ಲಿಯಲ್ಲಿ ಕೇಳಿಸಿಕೊಂಡಿದೆ.
ಐಶ್ ಯಾಕೆ ಮಣಿ ಚಿತ್ರಕ್ಕೆ ಒಪ್ಪಿಕೊಂಡಳು:
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಅವರ ಮಾತಿಗೆ ಜಗದೇಕ ಸುಂದರಿ ಐಶ್ವರ್ಯಾ ರೈ ತಕ್ಷಣ ಒಪ್ಪಿಕೊಳ್ಳಲು ಇರುವ ಕಾರಣ ಏನೂ ಎಂಬ ಪ್ರಶ್ನೆ ಬಹಳ ಮಂದಿಯನ್ನು ಕಾಡುತ್ತಿರಬಹುದು. ಬಾಲಿವುಡ್ ಬಿಗ್ ಬಿ ಸೊಸೆಯ ರೀ ಎಂಟ್ರಿ ಭರ್ಜರಿಯಾಗಿರಬೇಕು ಎಂದುಕೊಂಡು ಹತ್ತಾರು ಬಾಲಿವುಡ್ ನ ಚಿತ್ರ ನಿರ್ಮಾಣ ಬ್ಯಾನರ್ ಗಳು ಜತೆಗೆ ನಿರ್ದೇಶಕರು ತುದಿ ಕಾಲಿನಲ್ಲಿ ನಿಂತಿದ್ದರೂ ಕೂಡ ಐಶ್ ಬೇಬಿಯ ಕಾಲ್ ಶೀಟ್ ಮಣಿರತ್ನಂ ಎನ್ನುವ ನಿರ್ದೇಶಕನ ಪಾಲಿಗೆ ಸಿಗಲು ಕಾರಣ ಏನೂ ಎಂಬುದಕ್ಕೆ 1997ರಲ್ಲಿ ಬಿಡುಗಡೆ ಕಂಡ ಇರುವರ್ ಚಿತ್ರ ಹೇಳುತ್ತದೆ.
1994ರಲ್ಲಿ ಜಗದೇಕ ಸುಂದರಿ ಕಿರೀಟ ಹೊತ್ತ ಐಶ್ವರ್ಯಾ ರೈ ನಂತರ ನಾನಾ ಸಿನಿಮಾಗಳಿಗೆ ನಾಯಕಿ ಸ್ದಾನಕ್ಕೆ ಅವಕಾಶ ಕೇಳಿಕೊಂಡಿದ್ದಳು. ಆದರೆ ನಿರ್ದೇಶರು ಐಶ್ ಅವರನ್ನು ಬರೀ ಸುಂದರ ಗೊಂಬೆಯಾಗಿ ಮಾತ್ರ ನೋಡಲು ಬಯಸಿದ್ದರು. ಇದೇ ಸಮಯದಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ತನ್ನ ಇರುವರ್ ಚಿತ್ರದಲ್ಲಿ ನಟಿಸಲು ಐಶ್ ಗೆ ಅವಕಾಶ ಮಾಡಿಕೊಟ್ಟರು. ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಐಶ್ ಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಐಶ್ ಈ ಚಿತ್ರದಲ್ಲಿ ಕಲ್ಪನಾ, ಕನಕವಳ್ಳಿಯ ಪಾತ್ರದಲ್ಲಿ ಎಲ್ಲ ಪ್ರೇಕ್ಷಕರಿಗೂ ಇಷ್ಟವಾದಳು. ಇತ್ತ ಕಡೆ ಐಶ್ ಗೆ ಎಲ್ಲ ಚಿತ್ರರಂಗದಿಂದಲೂ ಅವಕಾಶಗಳು ಬರಲು ಆರಂಭವಾಯಿತು. ನಂತರ ಮಣಿರತ್ನಂ ತನ್ನ ಚಿತ್ರಗಳಿಗೆ ಹೊಸ ನಾಯಕ- ನಾಯಕಿರನ್ನು ಬಳಸಿಕೊಂಡು ಸಕ್ಸಸ್ ಕಾಣುತ್ತಿದ್ದಾರೆ. ಇತ್ತ ಕಡೆ ಐಶ್ ತಮ್ಮದೇ ಸಿನಿಮಾ ಗುಂಗಿನಲ್ಲಿ ಕಾಲಕಳೆಯುತ್ತಿದ್ದರು.
ಐಶ್- ಅಭಿಯನ್ನು ಒಂದು ಮಾಡಿದ ಮಣಿ:
ನಿರ್ದೇಶಕ ಮಣಿರತ್ನಂ ಐಶ್ ಬದುಕಿನಲ್ಲಿ ಬಹಳ ದೊಡ್ಡದಾದ ಪಾತ್ರದಲ್ಲಿದ್ದಾರೆ. ಐಶ್ ನ ಆರಂಭದ ಚಿತ್ರದಿಂದ ಹಿಡಿದು ಕೊನೆಗೆ ಮದುವೆಯ ವರೆಗೂ ಮಣಿ ಐಶ್ ಗೆ ಸಾಥ್ ನೀಡಿದ್ದರು. ಇರುವರ್ ಚಿತ್ರದ ಮೂಲಕ ಮಣಿರತ್ನಂ ಐಶ್ವರ್ಯಾ ರೈ ಸಿನಿಮಾ ಬದುಕಿನ ಮೊದಲ ಅಧ್ಯಾಯ ತೆರೆದರು. 2007ರಲ್ಲಿ ಗುರು ಸಿನಿಮಾದಲ್ಲಿ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ ಅವರನ್ನು ತನ್ನ ಚಿತ್ರ ಗುರು ಗೆ ಜತೆ ಸೇರಿಸಿಕೊಳ್ಳುವ ಮೂಲಕ ಇಬ್ಬರ ನಡುವೆ ಪ್ರೀತಿಯ ಬೆಸುಗೆ ಹಾಕಿದ್ದರು. ಇದೇ ಸಮಯದಲ್ಲಿ ಅಭಿ ಹಾಗೂ ಐಶ್ ಅವರ ಮದುವೆಯಾಗಿತ್ತು. ಈ ಬಳಿಕ 2010ರಲ್ಲಿ ರಾವಣ್ ಚಿತ್ರದಲ್ಲಿ ಮತ್ತೆ ಇಬ್ಬರನ್ನು ಒಟ್ಟು ಸೇರಿಸುವ ಮೂಲಕ ಅರಾಧ್ಯ ಬಚ್ಚನ್ ಬಿಗ್ ಬಿ ಕುಟುಂಬಕ್ಕೆ ಮೊಮ್ಮಗಳನ್ನು ಪಡೆಯುವಂತೆ ಆಯಿತು. ಈ ಎಲ್ಲ ವಿಚಾರಗಳ ಹಿಂದೆ ಮಣಿರತ್ನಂ ಇದ್ದರು. ಈಗ ಚಿತ್ರರಂಗಕ್ಕೆ ಐಶ್ ಅವರನ್ನು ರೀ ಎಂಟ್ರಿ ಕೊಡಿಸುವ ಮೂಲಕ ಮತ್ತೆ ಗುರುವಾಗಿ ಮೆರೆದಿದ್ದಾರೆ. ಮೂರನೇ ಚಿತ್ರ ರೆಬೇಕಾದ ಮೂಲಕ ಐಶ್- ಮಣಿ ಕೆಮೆಸ್ಟ್ರಿ ಒಳ್ಳೆಯ ರೀತಿಯಲ್ಲಿ ವರ್ಕ್ ಔಟ್ ಆಗಲಿ ಎನ್ನೋದು ಪ್ರೇಕ್ಷಕ ಪ್ರಭು ಮಾಡಿಕೊಳ್ಳುವ ಮನವಿ.
Tuesday, September 25, 2012
ಬಾಲಿವುಡ್ ಹೀರೋಯಿನ್ ಸೂಪರ್ ಲಾಸ್ !
ಬಾಲಿವುಡ್ ಅಂಗಳದಲ್ಲಿ ತೀರಾ ನಿರೀಕ್ಷೆ ಇಟ್ಟುಕೊಂಡು ಬಂದ ಹೀರೋಯಿನ್ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ನ ನಾಡಿ ಮಿಡಿತದ ಅಧ್ಯಯನದಿಂದ ಹೊರ ಬಂದ ವರದಿ ಏನಪ್ಪಾ ಅಂದರೆ ಮಧುರ್ ಪಾಲಿಗೆ ಹೀರೋಯಿನ್ ನಿಜಕ್ಕೂ ಕೈ ಕೊಟ್ಟಿದೆ.
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ ಕರ್ ಚಿತ್ರ ಎಂದಾಕ್ಷಣ ಬಾಲಿವುಡ್ ಅಂಗಳದಲ್ಲಿರುವ ಇತರ ಸಿನಿಮಾಗಳ ಪಾಲಿಗೊಂದು ಹಕಿ ಸುದ್ದಿಯೇ ಆಗಿ ಬಿಡುತ್ತದೆ ಎನ್ನುವ ಮಾತು ಪ್ರಚಲಿತದಲ್ಲಿತ್ತು. ಆದರೆ ಈ ಎಲ್ಲ ಮಾತುಗಳು ಸುಳ್ಳಾಗುತ್ತಿರುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಕಾರಣ ಇಷ್ಟೇ.. ಬಾಲಿವುಡ್ ಅಂಗಳದಲ್ಲಿ ತೀರಾ ನಿರೀಕ್ಷೆ ಇಟ್ಟುಕೊಂಡು ಬಂದ ಹೀರೋಯಿನ್ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ನ ನಾಡಿ ಮಿಡಿತದ ಅಧ್ಯಯನದಿಂದ ಹೊರ ಬಂದ ವರದಿ ಏನಪ್ಪಾ ಅಂದರೆ ಮಧುರ್ ಪಾಲಿಗೆ ಹೀರೋಯಿನ್ ನಿಜಕ್ಕೂ ಕೈ ಕೊಟ್ಟಿದೆ.
ವಿಶ್ವದ ಹಿರಿತೆರೆಯ ಮೇಲೆ ಹೀರೋಯಿನ್ ಹೇಳುವಷ್ಟರ ಮಟ್ಟಿಗೆ ತನ್ನ ಚಮಕ್ ತೋರಿಸಿಲ್ಲ. ಬಿಡುಗಡೆಯಾಗಿ ಒಂದು ವಾರದ ಕಲೆಕ್ಷನ್ ತೀರಾ ಕುಸಿತ ಕಂಡಿದೆ. ಜತೆಯಲ್ಲಿ ಆಡಿಯನ್ಸ್ ಲೇವೆಲ್ ಫೋಲ್ ನಲ್ಲೂ ಹೀರೋಯಿನ್ ಟೋಟಲಿ ಉಲ್ಟಾಪಲ್ಟಾ ಆಗಿದೆ. 32 ಕೋಟಿ ರೂಪಾಯಿಗಳಲ್ಲಿ ಸಿದ್ಧಗೊಂಡ ಹೀರೋಯಿನ್ ವಾರದ ಕಲೆಕ್ಷನ್ ಗ್ಲೋಬಲ್ ಮಾರುಕಟ್ಟೆಯಲ್ಲಿ ಬರೀ 25 ಕೋಟಿ ರೂಪಾಯಿ ಮಾತ್ರ ! ಆದರೆ ಚಿತ್ರದ ನಿಜವಾದ ಓಟ ಆರಂಭವಾಗೋದೆ ಚಿತ್ರ ಬಿಡುಗಡೆ ಕಂಡ ಮೊದಲ ವಾರದಲ್ಲಿ ಚಿತ್ರಕ್ಕೆ ಹಾಕಿದ ಬಜೆಟ್ ಮತ್ತೆ ನಿರ್ಮಾಪಕನ ಕೈ ಸೇರುತ್ತದೆ. ಹೀರೋಯಿನ್ ಮಾತ್ರ ಈ ಕೆಲಸವನ್ನು ನೆಟ್ಟಗೆ ಮಾಡಿಲ್ಲ.
ಹೀರೋಯಿನ್ ಹುಟ್ಟುವ ಮೊದಲು ಸುದ್ದಿ:
ರಿಯಾಲಿಟಿ ವಸ್ತು ವಿಚಾರಗಳ ಮೇಲೆ ಪಡಿಯಚ್ಚು ತೆಗೆಯುವುದರಲ್ಲಿ ಸದಾ ಸಿದ್ಧ ಹಸ್ತರೆಂದೇ ಗುರುತಿಸಿಕೊಳ್ಳುವ ನಿರ್ದೇಶಕ ಮಧುರ್ ಈ ಚಿತ್ರದಲ್ಲಿ ಹಾಲಿವುಡ್ ನಾಯಕಿಯೊಬ್ಬರನ್ನು ಬಾಲಿವುಡ್ ರಂಗದ ನಾಯಕಿಯ ಜತೆಗೆ ತುಲನೆ ಮಾಡಿಕೊಂಡು ಮಾಡಿದ ಸಿನಿಮಾ ಎನ್ನುವ ಕಾರಣಕ್ಕೆ ಚಿತ್ರ ಬಿಡುಗಡೆ ಕಾಣುವ ಮೊದಲೇ ಸುದ್ದಿಯಾಗಿತ್ತು. ಚಿತ್ರದ ಆರಂಭದಲ್ಲಿ ಹೀರೋಯಿನ್ ಪಟ್ಟಕ್ಕೆ ಸಿದ್ಧಗೊಂಡವರು ಬಿಗ್ ಬಿ ಸೊಸೆ ಐಶ್ವರ್ಯಾ ರೈ ಬಚ್ಚನ್. ಚಿತ್ರದ ಕತೆಗೂ ಐಶ್ ಬದುಕಿಗೂ ಒಂದು ಲಿಂಕ್ ಇತ್ತು ಎನ್ನುವ ಕಾರಣಕ್ಕೆ ನಿರ್ದೇಶಕ ಮಧುರ್ ಐಶ್ ರನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ದುರಾದೃಷ್ಟವೆಂದರೆ ಹೀರೋಯಿನ್ ನಾಯಕಿ ಐಶ್ವರ್ಯಾ ರೈ ಎಂದು ಘೋಷಣೆ ಮಾಡುತ್ತಿದ್ದಾಗಲೇ ಐಶ್ ಗರ್ಭಿಣಿ ಎನ್ನುವ ಸುದ್ದಿ ಬಂತು.
ಈ ವಿಚಾರದಿಂದ ನಿರ್ದೇಶಕ ಮಧುರ್ ಗೆ ಮೊದಲು ಹೊಡೆತ ಬಿದ್ದ ಬಳಿಕ ಹೀರೋಯಿನ್ ಜಾಗಕ್ಕೆ ಬಂದವರು ಕರೀನಾ ಕಪೂರ್. ಈ ಚಿತ್ರದ ಸಂಭಾವನೆ ಮೂಲಕ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಕರೀನಾ ಮೊದಲ ಸ್ಥಾನಕ್ಕೆ ಸಲ್ಲಿಕೆಯಾದರು. ಚಿತ್ರದಲ್ಲಿರುವ ಹಲ್ಕಟ್ ಜವಾನಿ ಹಾಡಿನ ಮೂಲಕ ಯುಟ್ಯೂಬ್ ನಲ್ಲಿ ಕರೀನಾ ಕಪೂರ್ ಮತ್ತೊಬ್ಬ ನಟಿ ಕತ್ರಿನಾ ಕೈಫ್ ಹಿಂದಿನ ಹಾಡು ಶೀಲಾಕೀ ಜವಾನಿಗೆ ಟಾಂಗ್ ಕೊಟ್ಟಳು. ಈ ಬಳಿಕ ಚಿತ್ರದ ಆರಂಭದಿಂದ ಕೊನೆಯವರೆಗೂ ಒಂದಲ್ಲ ಒಂದು ಸುದ್ದಿಯ ಮೂಲಕ ಹೀರೋಯಿನ್ ಪ್ರಚಾರದ ಅಂಗಳದಲ್ಲಿಯೇ ವರ್ಷ ಪೂರ್ತಿ ನಿಂತು ಹೋದಳು.
ಹೀರೋಯಿನ್ ಸೋತದದ್ದು ಯಾಕೆ?
ಮಧುರ್ ಚಿತ್ರಗಳ ವಿಶೇಷತೆಯಲ್ಲಿ ಕತೆಗೆ ಮೊದಲ ಸ್ಥಾನ ಇದ್ದೆ ಇರುತ್ತದೆ. ಈ ಕತೆಯನ್ನು ಮಧುರ್ ತಮ್ಮ ಶೈಲಿಗೆ ಅನ್ವಯಿಸಿಕೊಂಡು ಪ್ರೇಕ್ಷಕರ ಮುಂದೆ ಭಿನ್ನ ರೀತಿಯಲ್ಲಿ ಇಟ್ಟಾಗ ಪ್ರೇಕ್ಷಕನಿಗಂತೂ ವಿಶಿಷ್ಟ ರೀತಿಯ ಅನುಭವ ಚಿತ್ರದ ಮೂಲಕ ಲಭ್ಯವಾಗುತ್ತಿರುವುದು ಈ ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ವಿಚಾರ. ಆದರೆ ನಾಯಕಿಯೊಬ್ಬಳ ಬದುಕಿನ ಚಿತ್ರಣವನ್ನು ಈ ಬಾರಿ ಮಧುರ್ ತನ್ನ ಚಿತ್ರದಲ್ಲಿ ಸರಿಯಾಗಿ ಇಟ್ಟಿಲ್ಲ. ಚಿತ್ರ ವಿಮರ್ಶಕರ ಪ್ರಕಾರ ಇದು ಮಧುರ್ ಚಿತ್ರವಲ್ಲ ಕರೀನಾ ಚಿತ್ರ ಎಂದು ಹೇಳಿಕೊಂಡಿದ್ದರು.
ಚಿತ್ರ ಬಿಡುಗಡೆಯ ಮೊದಲು ವಿಶೇಷವಾದ ಪ್ರಚಾರ ತಂತ್ರಗಳು ಕೂಡ ಚಿತ್ರದ ಸೋಲಿಗೆ ಕಾರಣವಾಗಿದೆ. ಪ್ರೇಕ್ಷಕ ಸಮೂಹ ವಿಶೇಷವಾದ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್ ಗಳಿಗೆ ಹೋಗಿದ್ದರು. ಆದರೆ ಚಿತ್ರದ ಸಪ್ಪೆಯಾದ ಕತೆ ಪ್ರೇಕ್ಷಕರಿಗೆ ನಿರಾಶೆ ಮೂಡಿಸಿತ್ತು. ಇತ್ತ ಕಡೆ ಬಾಲಿವುಡ್ ನಲ್ಲಿ ಭರ್ಜರಿ ಕಲೆಕ್ಷನ್ ಕಾಣುತ್ತಿರುವ ಬರ್ಫಿಯ ರಾಕೆಟ್ ವೇಗದ ಮುಂದೆ ಹೀರೋಯಿನ್ ಮಲಗಿಯೇ ಹೋದಳು. ಬಾಲಿವುಡ್ ಲೆಕ್ಕಚಾರದ ಪ್ರಕಾರ ಬಿಡುಗಡೆ ಕಂಡ ಚಿತ್ರವೊಂದು ಸಕ್ಸಸ್ ಫುಲ್ ಆಗಿ ಓಡುತ್ತಿರುವಾಗ ಮತ್ತೊಂದು ಚಿತ್ರ ಬಿಡುಗಡೆ ಮಾಡಿದರೆ ಗೆಲುವು ಸಾಧಿಸುವ ಸಾಧ್ಯತೆಗಳು ಬಹಳ ಕಡಿಮೆ ಎನ್ನುವ ಮಾತಿದೆ. ಇದು ಬರ್ಫಿ ಹಾಗೂ ಹೀರೋಯಿನ್ ಪಾಲಿನ ವಿಚಾರದಲ್ಲಿ ಸರಿಯಾಗಿದೆ.
ಚಿತ್ರದ ನಾಯಕಿ ಕರೀನಾ ಕಪೂರ್ ಚಿತ್ರ ಬಿಡುಗಡೆ ಕಾಣುವ ಮೊದಲೇ ಸೈಫ್ ಅಲಿಖಾನ್ ಅವರನ್ನು ಮದುವೆಯಾಗುವ ಕುರಿತು ಮಾಧ್ಯಮಗಳಲ್ಲಿ ಹೇಳಿದ ನೀಡಿಕೆ ಕೂಡ ಕರೀನಾ ವೃತ್ತಿ ಬದುಕಿಗೆ ಉಲ್ಟಾ ಆಗಿದೆ. ಮದುವೆಯಾಗುತ್ತಿರುವ ನಾಯಕಿಯನ್ನು ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವೀಕಾರ ಮಾಡುವ ಪ್ರಮೇಯಗಳು ಬಾಲಿವುಡ್ ನಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣ ಸಿಕ್ಕಿದೆ. ಕರೀನಾ ಮದುವೆ ಹೀರೋಯಿನ್ ಗೆ ಮೈನಸ್ ಪಾಯಿಂಟ್. ಯೂ ಟಿವಿ ಮೋಶನ್ ಪಿಕ್ಟರ್ ಆಡಿಯಲ್ಲಿ ಬಂದ ಹೀರೋಯಿನ್ ಚಿತ್ರದ ಪ್ರಚಾರದಲ್ಲಿ ಮಾಡಿದ ಎಡವಟ್ಟು. ಆರಂಭದ ಹೀರೋಯಿನ್ ಚಿತ್ರಕ್ಕೆ ಐಶ್ ರನ್ನು ಇಳಿಸುವ ಇರಾದೆಯಿಂದ ಯುಟಿವಿ ಚಿತ್ರ ನಿರ್ಮಾಣ ಸಂಸ್ಥೆ ಐಶ್ ರನ್ನೇ ಬಂಡವಾಳ ಇಟ್ಟುಕೊಂಡು ಪ್ರಚಾರಕ್ಕೆ ಇಳಿಯಿತು. ಆದರೆ ಚಿತ್ರದ ನಾಯಕಿ ಬದಲಾದ ನಂತರ ಚಿತ್ರದ ಪ್ರಚಾರದಲ್ಲಿ ಕರೀನಾ ಅವರನ್ನು ಬಳಸಿಕೊಂಡು ಯಾವುದೇ ಗಿಮಿಕ್ ಮಾಡಲು ಯುಟಿವಿ ಮುಂದೆ ಬರಲಿಲ್ಲ. ಇತ್ತ ಕಡೆ ಬಾಲಿವುಡ್ ನಲ್ಲಿ ಬಂದ ಏಜೆಂಟ್ ವಿನೋದ್ ಚಿತ್ರದಲ್ಲೂ ಕರೀನಾ ಪ್ಲಾಪ್ ನಾಯಕಿಯಾಗಿಯೇ ಗುರುತಿಸಿಕೊಂಡಳು. ಅದು ಹೀರೋಯಿನ್ ಪಾಲಿಗೆ ಶಾಪವಾಯಿತು. ಟೋಟಲಿ ಹೀರೋಯಿನ್ ಪಾಲಿನ ಸೋಲು ನಿಜಕ್ಕೂ ಕರೀನಾಗೆ ತಟ್ಟುತ್ತಾ ಅಥವಾ ನಿರ್ದೇಶಕ ಮಧುರ್ ಬದುಕಿಗೆ ಮುಳ್ಳಾಗುತ್ತಾ ಎನ್ನೋದು ಚಿತ್ರ ನೋಡಿ ಹೊರ ಬಂದ ಪ್ರೇಕ್ಷರನ್ನು ಕಾಡಿದ ಪ್ರಶ್ನೆ.
Monday, September 24, 2012
ಪ್ರೇಕ್ಷಕರ ಮನಕರಗಿಸಿದ ಬರ್ಫಿ !
ಬರ್ಫಿ ಬಾಲಿವುಡ್ ನ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ಎರಡರಲ್ಲೂ ಗೆದ್ದುಕೊಂಡು ಬಂದಿದೆ. ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ-ಇಲಿಯಾನ ಡಿ ಕ್ರೂಝ್ ನಟನೆಯಿಂದ ಬರ್ಫಿ ಪ್ರೇಕ್ಷಕನ ಭರವಸೆಯನ್ನು ಹುಸಿ ಮಾಡಿಲ್ಲ ಎನ್ನುವುದು ಚಿತ್ರ ಬಿಡುಗಡೆಯ ನಂತರ ಕೇಳಿ ಬರುತ್ತಿರುವ ಒಳ್ಳೆಯ ಮಾತು.
* ಸ್ಟೀವನ್ ರೇಗೊ
ಆಸ್ಕರ್ ಪ್ರಶಸ್ತಿ ಪ್ರತಿಯೊಬ್ಬ ನಿರ್ದೇಶಕನ ಕನಸ್ಸಿನ ಕೂಸು. ತಾನು ನಿರ್ದೇಶನ ಮಾಡಿದ ಎಲ್ಲ ಚಿತ್ರಗಳು ಕೂಡ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ನಾಮಕಿಂತಗೊಳ್ಳಬೇಕು ಎನ್ನೋದು ನಿರ್ದೇಶಕನ ಬದುಕಿನ ತುಂಬಾ ಚಡಪಡಿಕೆ. ಆದರೆ ದುರಾದೃಷ್ಟವೆಂದರೆ ಎಲ್ಲ ಚಿತ್ರಗಳು ಈ ಪಾಟಿಗೆ ಸಕ್ಸಸ್ ಕಾಣೋದಿಲ್ಲ. ಅದಕ್ಕೂ ಮುಖ್ಯವಾಗಿ ಆಸ್ಕರ್ ಪಟ್ಟಿಯೊಳಗೆ ಸೇರಿಕೊಳ್ಳುವ ಮಾತು ಕೂಡ ಬಹಳ ಕಷ್ಟ.
ಅದರಲ್ಲೂ ಭಾರತೀಯ ಚಿತ್ರರಂಗದಲ್ಲಂತೂ ಎಲ್ಲರೂ ಒಪ್ಪಿಕೊಳ್ಳಬೇಕಾದ ಒರಿಜಿನಾಲಿಟಿ ಮಾತು. ಇದೇ ಆಸ್ಕರ್ ಪಟ್ಟಿಯಲ್ಲಿ ಬಾಲಿವುಡ್ ನ ಬರ್ಫಿ ಚಿತ್ರ ಸೇರಿಕೊಂಡಿದೆ. ಭಾರತೀಯ ಚಿತ್ರರಂಗದ ಹತ್ತಾರು ಚಿತ್ರಗಳು ಬಾಲಿವುಡ್ ನ ವಿದ್ಯಾ ಬಾಲನ್ ನಟಿಸಿದ ‘ಕಹಾನಿ’, ‘ಡರ್ಟಿ ಪಿಕ್ಚರ್’ ಜತೆಗೆ ಸುದೀಪ್ ನಟನೆಯ ‘ಈಗ’, ತಮಿಳಿನ ‘ಏಳಾಂ ಅರಿವು’ ಮತ್ತು ‘ವಳಕ್ಕು ಎನ್ನ’ ಚಿತ್ರಗಳು ಆಸ್ಕರ್ ಪಟ್ಟಿಯಲ್ಲಿ ನಾಮಕಿಂತಗೊಂಡಿದೆ. ಆದರೆ ತಂತ್ರಜ್ಞಾನ, ಕತೆ, ನಟನೆ ಎಲ್ಲವೂ ಲೆಕ್ಕಚಾರ ಮಾಡಿಕೊಂಡು ಫಿಲ್ಮಾ ಫೆಡರೇಶನ್ ಆಫ್ ಇಂಡಿಯಾ (ಎಫ್‌ಎಫ್ ಐ) ಆಸ್ಕರ್ ಗಾಗಿ ಚಿತ್ರಗಳನ್ನು ಆಯ್ಕೆ ಮಾಡುತ್ತದೆ.
ಈ ಎಲ್ಲ ವಿಚಾರಗಳನ್ನು ಸೈಡ್‌ಗೆ ಇಟ್ಟುಕೊಂಡರೂ ಕೂಡ ಬರ್ಫಿ ಬಾಲಿವುಡ್ ನ ಕಲೆಕ್ಷನ್ ವಿದ್ ಆಡಿಯನ್ಸ್ ರೆಸ್ಪಾನ್ಸ್ ಎರಡರಲ್ಲೂ ಗೆದ್ದುಕೊಂಡು ಬಂದಿದೆ. ರಣಬೀರ್ ಕಪೂರ್-ಪ್ರಿಯಾಂಕಾ ಚೋಪ್ರಾ-ಇಲಿಯಾನ ಡಿ ಕ್ರೂಝ್ ನಟನೆಯಿಂದ ಬರ್ಫಿ ಪ್ರೇಕ್ಷಕನ ಭರವಸೆಯನ್ನು ಹುಸಿ ಮಾಡಿಲ್ಲ ಎನ್ನುವುದು ಚಿತ್ರ ಬಿಡುಗಡೆಯ ನಂತರ ಕೇಳಿ ಬರುತ್ತಿರುವ ಒಳ್ಳೆಯ ಮಾತು.
ಚಿತ್ರ ಯಾಕೆ ನೋಡಬೇಕು:
ಬಾಲಿವುಡ್ ಪ್ರತಿಭಾವಂತ ನಿರ್ದೇಶಕ ಅನುರಾಗ್ ಬಸು ಬರ್ಫಿ ಚಿತ್ರ ತಯಾರಿಸುವ ಹೊತ್ತಿನಲ್ಲೇ ವಿಚಿತ್ರ ಪ್ರೋಮೋಗಳ ಮೂಲಕ ಸುದ್ದಿಯಾಗಿತ್ತು. ಚಿತ್ರದಲ್ಲಿರುವ ವಿಶಿಷ್ಟ ಕತೆ, ನಟನೆ ಜತೆಗೆ ಮುದನೀಡುವ ಹಾಡುಗಳಿಂದ ಬರ್ಫಿ ಚಿತ್ರ ಓಡಿದೆ ಎನ್ನೋದು ಎಲ್ಲರೂ ಹೇಳಿಕೊಂಡು ತಿರುಗಾಡುವ ಮಾತು.
ಆದರೆ ಒರಿಜಿನಾಲಿಟಿಯಾಗಿ ಹೇಳುವುದಾದರೆ ಬರ್ಫಿ ಸೂಪರ್ ಚಿತ್ರ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿರುವ ಕಿವುಡ, ಮೂಗ ಹುಡುಗನ ಕತೆಯೇ ಚಿತ್ರದ ತುಂಬಾ ಓಡಾಡುತ್ತದೆ. ಈ ಪಾತ್ರವನ್ನು ರಣಬೀರ್ ಕಪೂರ್ ಮಾಡಿದ್ದಾರೆ. ಇಬ್ಬರು ನಾಯಕಿಯಲ್ಲಿ ಪ್ರಿಯಾಂಕಾ ಹಾಗೂ ಇಲಿಯಾನಾ ಪಾತ್ರ ವರ್ಗಕ್ಕೆ ಪ್ರಾಣ ತುಂಬಿದ್ದಾರೆ. ಸಮಾಜದಲ್ಲಿರುವ ಭಿನ್ನರ ಬದುಕಿನಲ್ಲಿ ಪಾಸಿಟಿವ್ ಆಶಾಕಿರಣ ಮೂಡಿಸುವ ಚಿತ್ರವಾಗಿರುವುದರಿಂದ ಬಿಡುಗಡೆಯ ಮೊದಲೇ ಗೆಲ್ಲುವ ಸೂಚನೆ ಬರ್ಫಿಯಲ್ಲಿತ್ತು.
ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ರಣಬೀರ್ ನಂತರ ಇಬ್ಬರು ಹುಡುಗಿಯರನ್ನು ಭೇಟಿಯಾಗುವ ಸನ್ನಿವೇಶದಿಂದಲೇ ಚಿತ್ರ ಆರಂಭ ಸಾಗುತ್ತದೆ. ಎರಡು ಹಂತದಲ್ಲಿ ಸಾಗುವ ಬರ್ಫಿ ಇಂಗ್ಲೀಷ್ ಚಿತ್ರದಿಂದ ಪ್ರೇರಿತವಾಗಿದೆ ಎನ್ನೋದು ಸುಳ್ಳಲ್ಲ. ಮಸಾಲೆ, ಪ್ರೇಮ ಸಲ್ಲಾಪಗಳ ಚಿತ್ರಗಳಿಂದ ರೋಸಿ ಹೋದ ಚಿತ್ರ ಪ್ರೇಕ್ಷಕರಂತೂ ಬರ್ಫಿಯಲ್ಲಿ ಭಿನ್ನ ಶೈಲಿಯ ಕತೆ, ನಟರ ನಟನೆಯಿಂದ ಕಡ್ಡಾಯವಾಗಿ ಚಿತ್ರ ನೋಡಬೇಕು ಎನ್ನಿಸಿಬಿಡುತ್ತದೆ. ವಿಚಿತ್ರ ಪರಿಸ್ಥಿತಿಯಲ್ಲಿ ಬೆಳಯುವ ಪ್ರಿಯಾಂಕಾ ಚೋಪ್ರಾರನ್ನು ತನ್ನ ಮಗಳೆಂದು ಒಪ್ಪಿಕೊಳ್ಳಲು ರೆಡಿ ಇಲ್ಲದ ಹೆತ್ತವರು, ರಣಬೀರ್‌ನ ಮುದ್ದು ಮುದ್ದು ನಟನೆ, ಇಲಿಯಾನಾರ ಮತ್ತೇ ಮತ್ತೇ ನೋಡುವಂತೆ ಮಾಡುವ ಪಾತ್ರ ಎಲ್ಲವೂ ಚಿತ್ರದ ಪ್ಲಸ್ ಪಾಯಿಂಟ್‌ಗಳು. ಮಾತಿಲ್ಲದ ಕತೆಯಿಲ್ಲದ ಬರೀ ಆಂಗಿಕ ಭಾಷೆಯಿಂದಲೇ ಓಡುವ ಬರ್ಫಿ ಚಿತ್ರಕ್ಕಂತೂ ಸಧ್ಯದ ಮಾರುಕಟ್ಟೆಯಲ್ಲಿ ಸಖತ್ ಭವಿಷ್ಯವಂತೂ ಇದ್ದೇ ಇದೆ ಎನ್ನುವುದು ಪ್ರೇಕ್ಷಕ ವರ್ಗದ ಮಾತು.
ಯೂಟಿವಿ ಮೋಶನ್ ಪಿಕ್ಚರ್ ಬ್ಯಾನರ್ ನಲ್ಲಿ ಸಿದ್ಧಾರ್ಥ ರಾಯ್ ಕಪೂರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸೋತು ನಂತರ ಮತ್ತೇ ಬದ್ದು ಬರಲು ಪ್ರಯತ್ನ ಪಟ್ಟ ಅನುರಾಗ್ ಬಸು ಹೊಸ ಪ್ರಯತ್ನ ಎಲ್ಲರಿಗೂ ಹಿಡಿಸಿದೆ ಎನ್ನುವುದರ ಪುರಾವೆ ಬರ್ಫಿ ಚಿತ್ರ ಓಡುತ್ತಿರುವ ಓಟವೇ ಸಾಕ್ಷಿ ನೀಡುತ್ತದೆ.
ಬರ್ಫಿ ಕಲೆಕ್ಷನ್‌ನಲ್ಲೂ ಸೂಪರ್:
ರೊಮ್ಯಾಂಟಿಕ್, ಕಾಮಿಡಿ ಬೇಸ್ಡ್ ಮೇಲೆ ನಿರೂಪಿತರಾದ ಬರ್ಫಿ ಚಿತ್ರ ಬಿಡುಗಡೆಯಾದ ಪ್ರಥಮ ವಾರಾಂತ್ಯಕ್ಕೆ ೩೪.೬ ಕೋಟಿ ರೂ. ಬಾಚಿಕೊಂಡಿದೆ. ಚಿತ್ರವನ್ನು ೩೦ ಕೋಟಿ ರೂ. ಬಜೆಟ್ ನಲ್ಲಿ ತಯಾರಿಸಲಾಗಿತ್ತು. ಚಿತ್ರ ಬಿಡುಗಡೆಯ ಮೊದಲ ದಿನವೇ ೯.೨೦ ಕೋಟಿ ರೂ., ಎರಡನೇ ದಿನ ೧೧.೫೦ ಕೋಟಿ ರೂ., ೩ನೇ ದಿನ ೧೩.೫ ಕೋಟಿ ರೂ. ಸಂಪಾದಿಸಿದೆ.
ಚಿತ್ರ ಭಾರತದಲ್ಲಿನ ಸುಮಾರು ೧೩೦೦ ಸಿನೆಮಾ ಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ದೊಡ್ಡ ಚಿತ್ರಗಳಿಗೆ ಹೋಲಿಸಿದರೆ ಇದು ಕಡಿಮೆ ಸಂಖ್ಯೆಯ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬರ್ಫಿಗೆ ದೊರಕಿರುವ ಪ್ರತಿಕ್ರಿಯೆ ಅದ್ಭುತವಾಗಿದೆ ಎನ್ನುವುದು ನಿರ್ಮಾಪಕ ಸಿದ್ಧಾರ್ಥ ರಾಯ್ ಕಪೂರ್ ಹೇಳುತ್ತಾರೆ. ಚಿತ್ರವನ್ನು ಇತರ ಚಿತ್ರಗಳಿಗಿಂತ ಭಿನ್ನವಾಗಿ ರೂಪಿಸಲು ಸಂಗೀತ ನಿರ್ದೇಶಕ ಪ್ರೀತಮ್ ಸಾಕಷ್ಟು ಕೆಲಸ ಮಾಡಿದ್ದಾರೆ. ಖುದ್ದು ಹಾಡಲು ಬರೋದಿಲ್ಲ ಎಂದು ಕೂರುವ ರಣಬೀರ್‌ನನ್ನು ಹಾಡಿಸಿದ ಪಾಟಿಪಟಿ ಹಾಡು ಈಗಾಗಲೇ ಯೂಟ್ಯೂಬ್ ಪ್ರೇಕ್ಷಕರನ್ನು ಮೋಡಿ ಮಾಡಿದೆ.
Sunday, September 23, 2012
ಮೋನಿಕಾ ಓ ಮೈ ಡಾರ್ಲಿಂಗ್ !
ಎಸ್.. ಅವಳು ಮತ್ತೆ ಫೀಲ್ಡ್ ಗೆ ಬಂದಿದ್ದಾಳೆ. ಇಡೀ ಅಮೇರಿಕದ ಮಂದಿಯೇ ಅವಳು ಏನೂ ಹೇಳುತ್ತಾಳೆ ಎನ್ನುವ ವಿಚಾರಕ್ಕೆ ಕಿವಿ ನೆಟ್ಟಗೆ ಮಾಡಿಕೊಂಡು ಕೂತಿದ್ದಾರೆ. ಇತ್ತ ಕಡೆ ಅಮೇರಿಕದ ಅಧ್ಯಕ್ಷರುಗಳೇ ಮತ್ತೊಂದು ಇಂತಹ ತಪ್ಪುಗಳು ನಡೆಯಕೂಡದು ಎಂದು ಪಣ ತೊಟ್ಟು ಬಿಟ್ಟಿದ್ದಾರೆ. ಅಮೇರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬದುಕಿನಲ್ಲಂತೂ ಇವಳ ಮಾತಿನಿಂದ ಮತ್ತೊಂದು ಸುನಾಮಿ ಎದ್ದು ಬಿಡುವ ಸಾಧ್ಯತೆಗಳೇ ಜಾಸ್ತಿಯಾಗಿದೆ. ಇವಳೇ ಮೋನಿಕಾ ಸ್ಯಾಮ್ಲಿ ಲೆವೆನ್ಸ್ಕೀ.
ಎಸ್.. ಅವಳು ಮತ್ತೆ ಫೀಲ್ಡ್ ಗೆ ಬಂದಿದ್ದಾಳೆ. ಇಡೀ ಅಮೇರಿಕದ ಮಂದಿಯೇ ಅವಳು ಏನೂ ಹೇಳುತ್ತಾಳೆ ಎನ್ನುವ ವಿಚಾರಕ್ಕೆ ಕಿವಿ ನೆಟ್ಟಗೆ ಮಾಡಿಕೊಂಡು ಕೂತಿದ್ದಾರೆ. ಇತ್ತ ಕಡೆ ಅಮೇರಿಕದ ಅಧ್ಯಕ್ಷರುಗಳೇ ಮತ್ತೊಂದು ಇಂತಹ ತಪ್ಪುಗಳು ನಡೆಯಕೂಡದು ಎಂದು ಪಣ ತೊಟ್ಟು ಬಿಟ್ಟಿದ್ದಾರೆ. ಅಮೇರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಬದುಕಿನಲ್ಲಂತೂ ಇವಳ ಮಾತಿನಿಂದ ಮತ್ತೊಂದು ಸುನಾಮಿ ಎದ್ದು ಬಿಡುವ ಸಾಧ್ಯತೆಗಳೇ ಜಾಸ್ತಿಯಾಗಿದೆ. ಇವಳೇ ಮೋನಿಕಾ ಸ್ಯಾಮ್ಲಿ ಲೆವೆನ್ಸ್ಕೀ. ಶಾರ್ಟ್ ನಲ್ಲಿ ಹೇಳಿ ಬಿಡೋದಾದರೆ ಮೋನಿಕಾ ಲೆವೆನ್ಸ್ಕೀ. ಇಡೀ ಜಗತ್ತಿಗೆ ಅಮೇರಿಕದ ದೇಶದ ಹೆಸರಿನ ಜತೆಯಲ್ಲಿ ಮೋನಿಕಾ ಹೆಸರು ಕೂಡ ಅಷ್ಟೇ ಫೇಮಸ್ಸ್. ಕ್ಲಿಂಟನ್- ಮೋನಿಕಾ ರಸಲೀಲೆ ಎನ್ನುವ ಪುಟ್ಟ ನಾಲ್ಕು ಅಕ್ಷರಗಳನ್ನು ಜತೆಯಾಗಿ ಕಂಪೋಸ್ ಮಾಡಿ ಗೂಗಲ್ ಬ್ರಡ್ಮಾಂಡದಲ್ಲಿ ಹರಿಯಬಿಟ್ಟರೆ ಸಾಕು. ನೂರಾರು ಪುಟಗಳು ತೆರೆದು ಕೂರತ್ತೆ. ಹತ್ತಾರು ವಿಚಾರಗಳು ಕೂಲ್ ಆಗಿ ಓಪನ್ ಆಗಿ ನೋಡುವ ವಲಯವನ್ನೇ ದಂಗು ಮೂಡಿಸಿಬಿಡುತ್ತದೆ. ಅದೇ ಈ ಹೆಸರಿಗೆ ಇರುವ ಕಿಮ್ಮತ್ತು.
ಅಂದಹಾಗೆ ಮೋನಿಕಾ ಯಾರು ಎನ್ನುವ ಕುತೂಹಲ ಕೆರಳುತ್ತಿದ್ದಾರೆ ಕೇಳಿ ಇಲ್ಲಿ. ಅಮೇರಿಕ ವೈಟ್ ಹೌಸ್ ನ ಹತ್ತಾರು ಗೋಡೆಗಳು ಅವಳ ಕುರಿತು ಬಾಯಿ ಬಡಿದುಕೊಳ್ಳುತ್ತದೆ. ೧೯೯೫ ನವೆಂಬರ್ ನಿಂದ ೧೯೯೭ ಮಾರ್ಚ್ ಅವಧಿಯಲ್ಲಿ ಅಮೇರಿಕದ ಅಧ್ಯಕ್ಷ ಪಟ್ಟಗೆ ಬಂದ ಬಿಲ್ ಕ್ಲಿಂಟನ್ ಅವರ ಆಪ್ತ ಸಹಾಯಕಿಯಾಗಿ ಸೇರಿಕೊಂಡ ಮಹಿಳೆಯೇ ಈ ಮೋನಿಕಾ . ಈ ಅವಧಿಯಲ್ಲಿಯೇ ಬಿಲ್ ಕ್ಲಿಂಟನ್ ರ ಅಕ್ರಮ ಸಂಬಂಧಗಳನ್ನು ಮೊತ್ತ ಮೊದಲ ಬಾರಿಗೆ ಇಡೀ ವಿಶ್ವದ ಮುಂದೆ ಬಾಯಿಬಡಿದುಕೊಂಡವಳು ಕೂಡ ಇದೇ ಮೋನಿಕಾ. ಜಾಗತಿಕ ವಲಯದಲ್ಲಿ ದೊಡ್ಡಣ್ಣ ಎಂದು ಬೀಗುತ್ತಿದ್ದ ಅಮೇರಿಕದ ನಾಯಕನನ್ನು ಮುಖ ತೋರಿಸಿಕೊಂಡು ಓಡಾಡದಂತೆ ಮಾಡಿದ ದಿಟ್ಟ ಮಹಿಳೆ ಮೋನಿಕಾ ಎಂದು ಎಲ್ಲರಿಗೂ ಗೊತ್ತಿದೆ.
ಮೋನಿಕಾ ಕುಟುಕು ಕ್ಲಿಂಟನ್ ಟೆಲ್ ಆಲ್:
ಅಮೆರಿಕದ ಮಾಜಿ ಅಧ್ಯಕ್ಷರನ್ನು ಸಾಕಷ್ಟು ಮುಜುಗರಕ್ಕೀಡಾಗುವಂತೆ ಮಾಡಿದ್ದ ಮೋನಿಕಾ, ಸದ್ಯಕ್ಕೆ ಹೊಸ ಬಾಂಬ್ ಹಾಕಲಿದ್ದಾಳೆ. ತನ್ನ ಮತ್ತು ಕ್ಲಿಂಟನ್ ನಡುವಿನ ಸಂಬಂಧದ ಇನ್ನಷ್ಟು ಗುಟ್ಟಿನ ವಿಚಾರಗಳನ್ನು ಯಥಾವತ್ತಾಗಿ ಪುಸ್ತಕದ ರೂಪದಲ್ಲಿ ಜಗತ್ತಿನ ಮುಂದೆ ಇಡಲಿದ್ದಾಳೆ. ಅದಕ್ಕಾಗಿ ಅವಳು ಈ ಕೃತಿಗೆ ಇಟ್ಟ ಹೆಸರೇ ಕ್ಲಿಂಟನ್ ಟೆಲ್-ಆಲ್ ಎನ್ನುವುದು. ಈ ಕೃತಿಯ ಮೂಲಕ ತನ್ನ ಮತ್ತು ಕ್ಲಿಂಟನ್ ನಡುವಿನ ಪ್ರೇಮ ವ್ಯವಹಾರಗಳನ್ನು ಬಿಚ್ಚಿಡಲು ಮೋನಿಕಾ ನಿರ್ಧರಿಸಿದ್ದಾಳೆ. ಈ ಕೃತಿ ಕ್ಲಿಂಟನ್ ನ ವಿವಾಹ ಬಾಂಧವ್ಯವನ್ನು ಮುರಿದು ಹಾಕುವ ನಿಟ್ಸಿನಲ್ಲಿದೆ ಮತ್ತು ೨೦೧೬ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸಲಿರುವ ಹಿಲರಿಯ ಯೋಜನೆಗಳ ಮೇಲೂ ಪರಿಣಾಮ ಬೀರುವ ಎಲ್ಲ ಸೂಚನೆಗಳು ಕಾಣಿಸಿಕೊಂಡಿದೆ.
ಈಗಾಗಲೇ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಕ್ಲಿಂಟನ್ ಗೆ ಈ ಕೃತಿ ಇನ್ನಷ್ಟು ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕಬಹುದು ಎನ್ನುವ ಮಾತುಗಳು ಅಮೇರಿಕದ ತುಂಬಾ ಕೇಳಲು ಆರಂಭವಾಗಿದೆ. ಕೆಲವು ಮಾಧ್ಯಮಗಳು ಆಕೆಯ ಪುಸ್ತಕ ಕೇವಲ ಪ್ರತೀಕಾರದಂತಿಲ್ಲ. ಅದು ಅವರನ್ನು ಸಾಯಿಸಲು ಸಾಕು! ಎನ್ನುವಂತೆ ಅಮೇರಿಕದ ಮಾಧ್ಯಮಗಳು ಬರೆದುಕೊಳ್ಳುತ್ತಿದೆ. ಈ ತಿಂಗಳ ಆರಂಭದಲ್ಲಿ ಕ್ಲಿಂಟನ್ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಯಶಸ್ವೀ ಭಾಷಣ ಮಾಡಿದ ಬಳಿಕ ಈ ಪುಸ್ತಕ ಹೊರಬರುತ್ತಿರುವ ಸುದ್ದಿ ಹೊರ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ. ತನ್ನ ಹಳೆಯ ನೆನಪುಗಳನ್ನು ಮರುಕಳಿಸುತ್ತಿರುವುದಕ್ಕಾಗಿ ಆಕೆಗೆ ೧೨ ಮಿಲಿಯನ್ ಡಾಲರ್ ಸಂಪಾದನೆಯಾಗುವ ಸಾಧ್ಯತೆಗಳಿವೆ ಎಂದು ಈ ಕೃತಿಯನ್ನು ಹೊರ ತರುವ ಪ್ರಕಾಶಕರು ಹೇಳಿಕೊಂಡಿದ್ದಾರೆ.
ಮುಖ್ಯವಾಗಿ ತನ್ನ ಮತ್ತು ಕ್ಲಿಂಟನ್ ನಡುವಿನ ಪ್ರೇಮ ಪತ್ರಗಳನ್ನು ಬಹಿರಂಗ ಪಡಿಸುವುದಾಗಿ ಮೋನಿಕಾ ಹೇಳಿಕೊಂಡಿರುವುದರ ಜತೆಯಲ್ಲಿ ಕ್ಲಿಂಟನ್ ಗೆ ತನ್ನ ಪತ್ನಿ ಹಿಲರಿ ಬಗ್ಗೆ ಇದ್ದ ತಾತ್ಸಾರದ ಕುರಿತೂ ಬಹಿರಂಗ ಪಡಿಸಲಿದ್ದಾಳೆ. ಹಿಲರಿಗೂ ಅಕ್ರಮ ಸಂಬಂಧ ಹೊಂದುವ ಬಗ್ಗೆ ಆಸಕ್ತಿಯಿದೆ ಎಂದು ತಾನು ಭಾವಿಸುವುದಾಗಿ ಬಿಲ್ ಕ್ಲಿಂಟನ್ ತನ್ನ ಬಳಿ ಹೇಳಿಕೊಂಡಿದ್ದುದಾಗಿ ಮೋನಿಕಾ ಈ ಪುಸ್ತಕದಲ್ಲಿ ಬಹಿರಂಗ ಪಡಿಸಲಿದ್ದಾಳೆ ಎನ್ನುವ ಮಾತುಗಳು ಹೊರಬಂದಿದೆ.
ಕ್ಲಿಂಟನ್ ಗೆ ಇತ್ತು ಕಾಮತೃಷೆ:
ಅಮೇರಿಕದ ಡೆಮಾಕ್ರಟಿಕ್ ಪಕ್ಷದ ಮೂಲಕ ಆಯ್ಕೆಯಾದ ಬಿಲ್ ಕ್ಲಿಂಟನ್ಗೆ ಲೈಂಗಿಕ ವಿಚಾರಗಳ ಮೇಲೆ ಅತೀಯಾದ ಮೋಹವಿತ್ತು ಎನ್ನುವುದು ಮೋನಿಕಾ ಕೃತಿಯಲ್ಲಿ ಅಡಕವಾಗಿರುವ ಪ್ರಧಾನ ವಿಚಾರ. ಲೈಂಗಿಕ ಚಟುವಟಿಕೆಗಳಿಗೆ ಬರೀ ಹೆಣ್ಣುಗಳು ಇದ್ದರೆ ಮಾತ್ರ ಸಾಧ್ಯವಿಲ್ಲ ಎನ್ನುವ ಮನೋಭಾವನೆಯಲ್ಲಿ ಕ್ಲಿಂಟನ್ ಇದ್ದರೂ ಎನ್ನುತ್ತಾಳೆ ಮೋನಿಕಾ. ಆದರೆ ಮೈ ಲೈಫ್ ತ್ರೀ ಇಯರ್ ಲೇಟರ್ ಮೋನಿಕಾ ಎನ್ನುವ ಕೃತಿಯಲ್ಲಿ ಬಿಲ್ ಕ್ಲಿಂಟನ್ ತನ್ನ ಆತ್ಮಕತೆಯಲ್ಲಿ ಸುಳ್ಳು ಹೇಳಿಕೊಂಡಿದ್ದಾರೆ ಅದಕ್ಕಾಗಿ ಈ ಕೃತಿಯಲ್ಲಿ ಎಲ್ಲ ಸಾಕ್ಷ್ಯಾಗಳನ್ನು ನೀಡಿದ್ದೇನೆ ಎನ್ನುವುದು ಮೋನಿಕಾ ಮಾತು. ಕ್ಲಿಂಟನ್ ಸೆಕ್ಸ್ ಹಗರಣಗಳ ನಂತರ ಮೋನಿಕಾ ೨೦೦೫ರಲ್ಲಿ ಇಂಗ್ಲೆಂಡ್ ಗೆ ಬಂದು ಖಾಸಗಿ ಚಾನೆಲ್ ವೊಂದರಲ್ಲಿ ವರದಿಗಾರ್ತಿಯಾಗಿ ಸೇರಿಕೊಂಡಿದ್ದರು. ಅಲ್ಲಿಯೇ ಈ ಕೃತಿ ಬರೆಯುವ ಹುಮ್ಮಸ್ಸು ಸಿಕ್ಕಿತ್ತು ಎಂದು ಮೋನಿಕಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕ್ಲಿಂಟನ್ ಅವರ ೯ ಪತ್ರಗಳ ಜತೆಯಲ್ಲಿ ಬಹಳಷ್ಟು ರಹಸ್ಯ ವಿಚಾರ ಈ ಕೃತಿಯ ಮೂಲಕ ಸ್ಫೋಟಗೊಳ್ಳುವ ಸಾಧ್ಯತೆ ಇದೆಯಂತೆ.
ಮೋನಿಕಾ ಎನ್ನುವ ಬಾಂಬ್:
ಮೋನಿಕಾ ಹುಟ್ಟಿ ಬೆಳೆದದ್ದು ಅಮೇರಿಕದ ಸ್ಯಾನ್ ಪ್ರಾನ್ಸಿಸ್ಕೋ ಎನ್ನುವ ನಗರದಲ್ಲಿ ತಂದೆ ತಾಯಿ ಇಬ್ಬರು ಯೆಹೂದಿಗಳಾಗಿದ್ದರು. ಮೋನಿಕಾ ಹುಟ್ಟುವ ಸಂದರ್ಭ ಯೆಹೂದಿ ಕೃತಿಯೊಂದು ತುಂಬಾನೇ ಫೇಮಸ್ ಆಗಿತ್ತು. ಇದೇ ಕಾರಣಕ್ಕೆ ಈ ಕೃತಿಯ ಹೆಸರನ್ನು ಹುಟ್ಟಿದ ಹುಡುಗಿಗೆ ಇಟ್ಟುಕೊಂಡರು. ಆದರೆ ಕೆಲವೇ ಸಮಯದಲ್ಲಿ ಹೆತ್ತವರು ಬೇರೆ ಬೇರೆಯಾಗಿ ಉಳಿದುಬಿಟ್ಟರು. ತಂದೆ ಮತ್ತೊಂದು ತಾಯಿಯನ್ನು ಕರೆದುಕೊಂಡು ಮನೆಗೆ ಬಂದರು. ಈ ಸಮಯದಲ್ಲಿ ಮೋನಿಕಾಳಿಗೆ ಮಲತಾಯಿ ಕಿರುಕುಳ ನೀಡಲು ಆರಂಭಿಸಿದಳು. ಮೋನಿಕಾಳ ಬೆಳವಣಿಗೆಯಲ್ಲಿ ಈ ವಿಚಾರ ತೀರನೇ ಘಾಸಿಗೊಳಿಸಿತು.
ಇತ್ತ ಕಡೆ ತಾಯಿ ಕೂಡ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಉಳಿದುಕೊಂಡರು. ಇಬ್ಬರ ಪ್ರೀತಿಯಿಂದ ವಂಚಿತಳಾದ ಮೋನಿಕಾ ಬದುಕಿನಲ್ಲಿ ಆರಂಭದ ಅಧ್ಯಾಯಗಳೇ ಕಿರಿಕಿರಿ ಎನ್ನಿಸುವಂತೆ ಇತ್ತು. ನಾನಾ ಕಡೆ ಶಿಕ್ಷಣ ಪಡೆದುಕೊಂಡು ಕೆಲಸ ಮಾಡುತ್ತಾ ೧೯೯೫ರ ಹೊತ್ತಿಗೆ ಅಮೇರಿಕದ ವೈಟ್ ಹೌಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡಳು. ಇದೇ ಸಮಯದಲ್ಲಿ ಬಿಲ್ ಕ್ಲಿಂಟನ್ ನ ಸೆಕ್ಸ್ ಹಗರಣವನ್ನು ಮೀನಿಕಾ ಹೊರತಂದಳು. ಇದು ಈಗ ವಿಶ್ವದ ತುಂಬಾ ಲೆವೆನ್ಸ್ಕೀ ಹಗರಣ ಎಂದೇ ಕರೆಸಿಕೊಂಡಿದೆ. ಈ ಹಗರಣದ ನಂತರ ಮೋನಿಕಾ ರಾಜಕೀಯ, ಮಾಧ್ಯಮಗಳ ವಲಯದಲ್ಲಿ ಸಿಕ್ಕಾಪಟ್ಟೆ ಗುರುತಿಸಿಕೊಂಡರು. ಖಾಸಗಿ ವಾಹಿನಿಯೊಂದು ಇವರ ಸಂದರ್ಶನ ಪ್ರಸಾರ ಮಾಡಿದಾಗ ವಿಶ್ವದ ೭೦ ಮಿಲಯ ಮಂದಿ ವಾಹಿನಿ ಕಡೆ ಮುಖ ಮಾಡಿ ಕೂತಿದ್ದರು. ಮೋನಿಕಾ ಹೇಳಿದ ವಿಚಾರಗಳನ್ನು ಬಂಡವಾಳವಾಗಿಟ್ಟುಕೊಂಡು ಮಾರ್ಟನ್ ಎನ್ನುವ ಕೃತಿಕಾರ ತಯಾರಿಸಿದ ಕ್ಲಿಂಟನ್ ಆಫೇರ್ ಇನ್ ಮೋನಿಕಾ ಸ್ಟೋರಿ ಇಡೀ ವಿಶ್ವದ ಪುಸ್ತಕ ಮಾರುಕಟ್ಟೆಯಲ್ಲಿ ಕೋಲಾಹಲ ಎಬ್ಬಿಸಿತ್ತು. ಈ ಬಳಿಕ ಮೋನಿಕಾ ರನ್ನು ಮಾಧ್ಯಮ, ಕೃತಿಕಾರರು, ರಾಜಕೀಯ ರಂಗ ಎಲ್ಲರೂ ಬಳಿಸಿಕೊಂಡು ತಮ್ಮ ಸಂಪಾದನೆಯಲ್ಲಿ ತೊಡಗಿಕೊಂರುವ ಎನ್ನುವುದೇ ಮಹಾನ್ ದುರಂತಗಳಲ್ಲಿ ಒಂದು ಎಂದು ವಿಮರ್ಶಕರು ಹೇಳುತ್ತಾರೆ.
Subscribe to:
Posts (Atom)






