Thursday, October 20, 2011

ನನ್ನ ಪತ್ರಿಕೆ ನನ್ನ ಬರಹ-29



( vk daily nammakaravali published dis article on 18.10.2011)

ನೀರು ಕಂಡರೆ ಊರಿಗೆ ಭೀತಿ !


ಮನುಕುಲದ ಜೀವಜಲ ಎಂದೇ ಬಿಂಬಿತ ನೀರು ಕಂಡರೆ ಸಸಿಹಿತ್ಲುವಿನ ಒಂದು ಭಾಗವೇ ತಲ್ಲಣಗೊಳ್ಳುತ್ತದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಭತ್ತದ ಪೈರೇ ಈ ನೀರನ್ನು ಕಂಡು ಕೆಂಪು ಬಣ್ಣಕ್ಕೆ ತಿರುಗಿ ಬೀಳುತ್ತದೆ. ಇದೇನಪ್ಪಾ ನೀರಿನ ಕತೆ ಅಂತಾ ಕೇಳ್ತೀರಾ..?
ಒಂದಲ್ಲ ಎರಡಲ್ಲ ಬರೋಬರಿ ೮ ವರ್ಷಗಳಿಂದ ರೈತರು ನೀರಿಗೆ ಹೆದರಿಕೊಂಡು ಬದುಕು ಕಟ್ಟುತ್ತಿದ್ದಾರೆ. ಯಾಕೋ ಗೊತ್ತಿಲ್ಲ ಎಕರೆಗಟ್ಟಲೆ ಕೃಷಿ ಭೂಮಿ ಈ ನೀರಿನಿಂದ ಹೆದರಿ ಕೂತಿದೆ. ಅರೇ..ಮನುಕುಲದ ಜೀವಜಲ ಎಂದೇ ಬಿಂಬಿತ ನೀರು ಕಂಡರೆ ಸಸಿಹಿತ್ಲುವಿನ ಒಂದು ಭಾಗವೇ ತಲ್ಲಣಗೊಳ್ಳುತ್ತದೆ. ಎಕರೆಗಟ್ಟಲೆ ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಭತ್ತದ ಪೈರೇ ಈ ನೀರನ್ನು ಕಂಡು ಕೆಂಪು ಬಣ್ಣಕ್ಕೆ ತಿರುಗಿ ಬೀಳುತ್ತದೆ.
ಇದು ಕಾಸ್ಮೋಪಾಲಿಟನ್ ಸಿಟಿಯ ನಡುವೆ ಎದುರಿಸಿರು ಬಿಟ್ಟುಕೊಂಡು ಬದುಕು ದೂಡುತ್ತಿರುವ ಸಹಿಹಿತ್ಲು ಬಳಿಯ ಮೂಡುಕೊಪ್ಲ, ಕದಿಕೆ, ಮುಂಡ ಅಸುಪಾಸಿನ ಪ್ರದೇಶದಲ್ಲಿರುವ ರೈತರ ಪ್ರತಿ ವರ್ಷದ ಗೋಳು. ಇದೆಲ್ಲವೂ ಸರಾಗವಾಗಿ ಹರಿದುಹೋಗುತ್ತಿರುವ ನಂದಿನಿ ನದಿಯ ಉಪ್ಪು ನೀರಿನ ಕಾಟ. ಮೂಲ್ಕಿ- ಮೂಡುಬಿದರೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಹಳೆಯಂಗಡಿ ಗ್ರಾಮಪಂಚಾಯಿತಿಯೊಳಗೆ ಇರುವ ಈ ಊರಿಗೆ ಉಪ್ಪು ನೀರೇ ಭೂಲೋಕದಲ್ಲಿ ನರಕ ನಿರ್ಮಾಣ ಮಾಡಿಬಿಟ್ಟಿದೆ.
ವರ್ಷಕ್ಕೆ ಆರಾಮವಾಗಿ ನೂರು ಮುಡಿಯಷ್ಟು ಬೆಳೆ ತೆಗೆದು ಮೀಸೆ ತಿರುವುತ್ತಿದ್ದ ರೈತರು ಈ ನೀರಿನ ಶಾಪಕ್ಕೆ ತತ್ತರಗೊಂಡಿದ್ದಾರೆ. ಕುಡಿಯುವ ನೀರಿಗಾಗಿ ಮೈಲುಗಟ್ಟಲೆ ಏದುರಿಸಿರು ಬಿಡುತ್ತಾ ನಲ್ಲಿ ನೀರಿನ ಮುಂದೆ ನಿಲ್ಲಬೇಕಾದ ಅನಿವಾರ್ಯತೆಯೊಂದು ಈ ಪುಟ್ಟ ಊರಿನಲ್ಲಿ ಉದ್ಬವವಾಗಿ ಬಹಳ ವರ್ಷಗಳೇ ಸಂದಿದೆ. ನೂರು ಮುಡಿಗಿಂತ ಜಾಗದಲ್ಲಿ ಈಗ ಒಂದು ಮುಡಿ ತೆಗೆಯಲು ಕೂಡಾ ವಿಪಲರಾಗಿದ್ದಾರೆ.
ಉಪ್ಪು ನೀರಿಗೆ ನೂರಾರು ತೆಂಗಿನ ಮರಗಳು ಸದ್ದಿಲ್ಲದೇ ಮುದುಡಿ ಕೂತಿದೆ. ೨೦ಕ್ಕಿಂತ ಹೆಚ್ಚು ರೈತರು ಉಪ್ಪು ನೀರಿನ ಕಾಟದಿಂದ ದಿನಾಲೂ ಕಣ್ಣೀರು ಸುರಿಸುತ್ತಿದ್ದಾರೆ. ಅದರಲ್ಲೂ ಸಸಿಹಿತ್ಲುವಿನ ಅಗ್ಗಿದಕಳಿಯ, ಕದಿಕೆ ಮುಂತಾದ ಪ್ರದೇಶಗಳಲ್ಲಿ ಪ್ರತಿ ವರ್ಷ ಉಪ್ಪುನೀರು ಕಾರುಬಾರು ಮಾಡಿಕೊಂಡು ಬರುತ್ತಿದೆ.
ಬೆಳೆ ನಾಶವಾಯಿತು ಎಂದು ಕೊಂಡು ಇಲಾಖೆಗೆ ಕಡೆ ಮುಖ ಮಾಡಿದರೆ ಇಲಾಖೆಗಳು ರೈತರಿಗೆ ಎಕರೆಗೆ ೬೦೦ರಿಂದ ೮೦೦ ರೂ.ಗಳ ಪರಿಹಾರ ಮಾತ್ರ ನೀಡುತ್ತಿವೆ. ಅದೆಲ್ಲ ಪರಿಹಾರ ಪಡೆಯಲು ಇಲಾಖೆಗೆ ಹತ್ತು ಸಾರಿ ಸುತ್ತಾಡಿಕೊಂಡು ಬಂದರೆ ಮುಗಿದು ಹೋಗುತ್ತದೆ ಎನ್ನುವುದು ಸಸಿಹಿತ್ಲು ನಿವಾಸಿ ರಾಮದಾಸ್‌ರ ಅನುಭವದ ಮಾತು.
ಶಾಂಭವಿ, ನಂದಿನಿ ನದಿಗಳೆರಡು ಸಸಿಹಿತ್ಲುವಿನಲ್ಲಿ ಹರಿದು ಹೋಗುತ್ತಿದೆ. ಟೂರಿಸಂಗೆ ಹೇಳಿ ಮಾಡಿಸಿದ ಸ್ಥಳ. ಆದರೆ ಈ ಉಪ್ಪು ನೀರು ಮಾತ್ರ ಕೆಲವೊಂದು ಗದ್ದೆ, ಮನೆಗಳನ್ನು ಬಿಟ್ಟರೆ ಉಳಿದ ಕಡೆಗಳಲ್ಲಿ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕೆಲ್ಲ ಪರಿಹಾರ ಕೊಡುತ್ತೇವೆ ಎಂದು ಬಹಳಷ್ಟು ಜನಪ್ರತಿನಿದಿಗಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅನುದಾನನೂ ಸರಕಾರದಿಂದ ಬಂದಿದೆ. ಆದರೆ ಜನರ ಕಷ್ಟ ಮಾತ್ರ ಕೊನೆಯಾಗಿಲ್ಲ ಎನ್ನುತ್ತಾರೆ ಮೂಡುಕೊಪ್ಲ ನಿವಾಸಿ ಜಯಣ್ಣ.
ಯಾರಿಗೇಳೋಣ ನಮ್ ಪ್ರಾಬ್ಲಂ:
ಸುರತ್ಕಲ್- ಕುಂದಾಪುರ ಚತುಷ್ಪಥ ಕಾಮಗಾರಿ ಯೋಜನೆ ಸಂದರ್ಭ ನಂದಿನಿ ನದಿಗೆ ಸೇತುವೆ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿತ್ತು. ಇದು ಕೂಡಾ ಈ ಸಮಸ್ಯೆ ತೀವ್ರವಾಗಲು ಕಾರಣ ಎನ್ನುವುದು ಸಸಿಹಿತ್ಲುವಿನ ಸ್ಥಳೀಯರ ಅಭಿಪ್ರಾಯ.
ನಂದಿನಿ ನದಿಯ ಹೊಳೆತ್ತುವ ಕೆಲಸ ಬಹಳ ವರ್ಷಗಳಿಂದ ನಡೆದೇ ಇಲ್ಲ. ನಂದಿನಿ ನದಿಯೇ ಮುಂದೊಂದು ದಿನ ಮಾಯವಾಗಿ ಬಿಡುವ ಸಾಧ್ಯತೆ ಇದೆ. ಅದರಲ್ಲೂ ನದಿಯ ಬದಿಯಲ್ಲಿ ನೆಟ್ಟ ಖಾಂಡ್ಲಾವನಗಳಲ್ಲಿ ನದಿಗಳಿಗೆ ಎಸೆದ ತ್ಯಾಜ್ಯಗಳು ಸೇರಿಕೊಂಡು ಗುಡ್ಡವಾಗಿ ಬೆಳೆದು ನೀರೆಲ್ಲವೂ ಗದ್ದೆ, ಬಾವಿಗಳಿಗೆ ಹೋಗಿ ಬೀಳುತ್ತದೆ ಎನ್ನುತ್ತಾರೆ ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ ಮಹಾಬಲ ಸಾಲ್ಯಾನ್.
ಉಪ್ಪು ನೀರಿನ ಸಮಸ್ಯೆಯಿಂದ ಬಳಲುತ್ತಿರುವ ಪ್ರದೇಶಗಳ ಕುಡಿಯುವ ನೀರಿಗಾಗಿ ತುಂಬೆಯಿಂದ ಮುಕ್ಕಾದ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಕೆಲವೊಂದು ಭಾಗಗಳಿಗೆ ಉಪ್ಪು ನೀರಿನ ಸಮಸ್ಯೆ ತೀವ್ರವಾಗಿದೆ. ನದಿ ಭಾಗವನ್ನು ಬಹಳಷ್ಟು ಜನರು ಆಕ್ರಮಿಸಿಕೊಂಡು ಕೃಷಿ ಮಾಡಿದ್ದರಿಂದ ನಂದಿನಿ ನದಿಯ ವಿಸ್ತಾರ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಮಹಾಬಲರು.
ಪದೇ ಪದೇ ಈ ಸಮಸ್ಯೆ ಕಾಣಿಸಿಕೊಂಡಾಗ ಇಲ್ಲಿನ ರೈತರು ಜನಪ್ರತಿನಿದಿಗಳಿಗೆ ಮೊರೆ ಹೋಗುತ್ತಾರೆ. ಆದರೆ ಈ ಮೊರೆ ಆಳುವ ದೊರೆಗಳಿಗೆ ಕೇಳಿಸಿಕೊಳ್ಳುವುದೇ ಇಲ್ಲ. ಚುನಾವಣೆ ಬಂದಾಗ ಈ ಊರಿನ ಜನರ ಸಮಸ್ಯೆ ಕೇಳಲು ಮಾತ್ರ ಜನಪ್ರತಿನಿಽಗಳು ಹಾಜರಾಗುತ್ತಾರೆ ಎನ್ನುತ್ತಾರೆ ಮೂಡುಕೊಪ್ಲ ನಿವಾಸಿ ಗಣೇಶ್ ಸನಿಲ್‌ರ ಮಾತು.
ಇಲ್ಲಿನ ರಕ್ತೇಶ್ವರಿ ದೈವಸ್ಥಾನ ಬಳಿ ಸುಮಾರು ೨-೩ಫರ್ಲಾಂಗ್ ಉದ್ದಕ್ಕೆ ನಂದಿನಿ ನದಿಗೆ ತಡೆಗೋಡೆ ನಿರ್ಮಿಸಿದಲ್ಲಿ ಇಲ್ಲಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕೊಡಲು ಸಾಧ್ಯ ಎನ್ನುತ್ತಾರೆ ಮೂಡುಕೊಪ್ಲ ಕೃಷಿಕ ರಮೇಶ್ ಸನಿಲ್. ಪ್ರಕೃತಿ ಮಾನವನ ನಡುವಿನ ಹೊಡೆದಾಟದಲ್ಲಿ ಕೊನೆಗೂ ಪ್ರಕೃತಿ ಮೇಲುಗೈ ಸಾದಿಸಿಕೊಂಡು ತನ್ನ ಪರಾಕ್ರಮ ಮೆರೆದು ನಿಂತಿದೆ ಎನ್ನುವುದಕ್ಕೆ ಈ ಊಪ್ಪು ನೀರಿನ ಊರೇ ಸಾಕ್ಷಾತ್ ಉದಾಹರಣೆ ಅಲ್ವಾ..?

(vk daily nammakaravali front page article published on 18.10.2011)

Saturday, October 15, 2011

ನನ್ನ ಪತ್ರಿಕೆ ನನ್ನ ಬರಹ-28



(vk daily lvk puravani published dis article on 15.10.2011)

ಉಜ್ವಾಡಿನಲ್ಲಿ ಪ್ರೇಕ್ಷಕನಿಗೆ ಕತ್ತಲು


ಚಿತ್ರ ವಿಮರ್ಶೆ
ಚೌಕಟ್ಟಿನಲ್ಲಿ ನಿಲ್ಲದ ಕತೆ, ಪದೇ ಪದೇ ಕಾಣಿಸಿಕೊಳ್ಳುವ ಕ್ಲೋಸಫ್ ಶಾಟ್‌ಗಳು,ಅನಗತ್ಯವಾಗಿ ತುರುಕಿಸಲಾಗಿರುವ ಹಾಡು ಚಿತ್ರದ ಓಡಾಟಕ್ಕೆ ಅಲ್ಲಲ್ಲಿ ಬ್ರೇಕ್‌ಕೊಟ್ಟು ಪ್ರೇಕ್ಷಕನಿಗೆ ವಿಚಿತ್ರ ಸಂಕಟಕ್ಕೆ ದೂಡುವ ಉಜ್ವಾಡು ಕೊಂಕಣಿ ಪ್ರೇಕ್ಷಕರ ನಿರೀಕ್ಷಿತ ಮಟ್ಟವನ್ನು ತಲುಪಲೇ ಇಲ್ಲ. ಕಳೆದ ೩೫ ವರ್ಷಗಳಿಂದ ಜಿಎಸ್‌ಬಿ ಕೊಂಕಣಿ ಸಮುದಾಯದಲ್ಲಿ ಚಿತ್ರಗಳಿಲ್ಲದೇ ಬರದ ಪರಿಸ್ಥಿತಿಯಲ್ಲಿ ನೀರಿನ ಒರತೆಯಂತೆ ಬಂದು ನಿಂತ ಉಜ್ವಾಡು ಪ್ರೇಕ್ಷಕರ ಮುಂದೆ ಬರೀ ಡಾಕ್ಯುಮೆಂಟರಿ ಚಿತ್ರದಂತೆ ಭಾಸವಾಗುತ್ತಿದೆ.
ಉಜ್ವಾಡು(ಬೆಳಕು) ಎನ್ನುವ ಆಶ್ರಮದ ಕತೆಯ ಜತೆಯಲ್ಲಿ ಥಳಕು ಹಾಕುವ ಜಿಎಸ್‌ಬಿ ಸಮುದಾಯದ ಸಂಸ್ಕೃತಿ, ಆಚಾರ- ವಿಚಾರ, ಬಾಳಿಗರ ಹೋಟೆಲ್, ಹೋಳಿ ಹಬ್ಬವನ್ನು ಅಲ್ಲಲ್ಲಿ ತುರುಕಿಸಲಾದರೂ ಎಲ್ಲವನ್ನು ಸಮರ್ಥವಾಗಿ ಎಳೆದುಕೊಂಡು ಹೋಗಲು ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ಬಹುತೇಕವಾಗಿ ವಿಫಲವಾಗಿದ್ದಾರೆ. ಚಿತ್ರದಲ್ಲಿ ಘಟಾನುಘಟಿ ನಟ- ನಟಿಯರು, ತಂತ್ರಜ್ಞರು ಇದ್ದರೂ ಸಮರ್ಥವಾಗಿ ಚಿನ್ನಾ ಬಳಸಿಕೊಳ್ಳಲೇ ಇಲ್ಲ ಎನ್ನುತ್ತದೆ ಉಜ್ವಾಡು ಚಿತ್ರ.
ಮಲಯಾಳಂನ ಖ್ಯಾತ ಛಾಯಾಗ್ರಾಹಕ ಉತ್ಪಲ್ ನಾಯನಾರ್ ಅವರ ಕ್ಯಾಮೆರಾವರ್ಕ್ ಚಿತ್ರದಲ್ಲಿ ಸಾಕಷ್ಟು ವರ್ಕ್ ಔಟ್ ಆಗಿದೆ ಎಂದುಕೊಳ್ಳುವ ಮೊದಲೇ ಚಿತ್ರದಲ್ಲಿ ತುಂಬಾ ಕ್ಲೋಸಫ್ ಶಾಟ್‌ಗಳು ಓಡಾಡಿಕೊಂಡು ಛಾಯಾಗ್ರಾಹಕನ ಕೆಲಸವನ್ನು ಡಲ್ ಮಾಡುತ್ತದೆ. ಜಯಂತ್ ಕಾಯ್ಕಿಣಿಯ ‘ರಂಗ ಪಂಚಮಿ’ ಹಾಡು ಚಿತ್ರದಲ್ಲಿ ಕೇಳಲು ಕೊಂಚ ಇಂಪು ಅನ್ನಿಸುತ್ತದೆ. ಸಂಗೀತ ನಿರ್ದೇಶಕ ವಿ. ಮನೋಹರ್ ಕೆಲಸ ಮೆಚ್ಚುಗೆಗೆ ಪಾತ್ರವಾಗುತ್ತದೆ.
ಚಿತ್ರಕ್ಕೆ ಕತೆ ಜೀವಾಳ ಎಂದುಕೊಂಡು ಬಂದ ಪ್ರೇಕ್ಷಕರಿಗೆ ಏನೂ ಸಿಗದಿದ್ದರೂ ಗಜ್ಜು( ಗಜಾನನ) ಎನ್ನುವ ಬಾಲಪ್ರತಿಭೆ ಬಹಳ ಹತ್ತಿರವಾಗುತ್ತದೆ. ಹಿರಿಯ ಚಿತ್ರ ನಟ ಸದಾಶಿವ್ ಬ್ರಹ್ಮಾವರ್ , ಉಮಾಶ್ರೀ, ನೀತು ತಕ್ಕ ಮಟ್ಟಿಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಕಿರುತೆರೆ ನಟ ಶಿವಧ್ವಜ್ ನಟನೆಯನ್ನು ಮರೆತು ಕೂತವರಂತೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಕಾಸರಗೋಡು ಚಿನ್ನಾ ಚಿತ್ರವನ್ನು ಇನ್ನಷ್ಟೂ ಉತ್ತಮವಾಗಿ ತೆರೆಗೆ ತರಬಹುದಿತ್ತು ಎನ್ನುವ ಅಶಯ ಭಾವನೆ ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನಿಗೆ ಕಾಡದೇ ಇರದು. ಆದರೂ ಕೊಂಕಣಿ ಚಿತ್ರ ಬೆಳೆಯಬೇಕು ಎನ್ನುವ ಉದ್ದೇಶದಿಂದ ಮಾತ್ರ ಥಿಯೇಟರ್‌ಗೆ ಹೋದರೆ ಚಿತ್ರ ಸೂಪರ್ ಕ್ಲಾಸ್ ಎನ್ನುವುದರಲ್ಲಿ ಯಾವುದೇ ಡೌಟ್ ಉಳಿಯೋಲ್ಲ.

Thursday, October 13, 2011

ಚಿನ್ನಾ ಕ್ಯಾಂಪ್‌ನಲ್ಲಿ ಉಜ್ವಾಡು !


ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಚಿತ್ರ ಅ.೧೪ ರಂದು ಬಿಡುಗಡೆಯಾಗುತ್ತಿದೆ. ೩೨ ವರ್ಷಗಳ ನಂತರ ಕೋಸ್ಟಲ್‌ವುಡ್‌ನಲ್ಲಿ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಬರುತ್ತಿರುವ ಚಿತ್ರ ಇದಾಗಲಿದೆ. ಕರಾವಳಿಯಲ್ಲಿ ‘ಅಸಲ್’ ಚಿತ್ರದ ಸೂಪರ್ ಓಟ.. ಉಜ್ವಾಡು ಚಿತ್ರದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿ ಈಗ ಮತ್ತೆ ಚೇತರಿಕೆ ಕಾಣಿಸಿಕೊಂಡಿದೆ. ವಿಜಯ ಕುಮಾರ್ ಕೋಡಿಯಾಲ್‌ಬೈಲ್ ನಿರ್ದೇಶನದ ‘ಒರಿಯರ್ದೊರಿ ಅಸಲ್’ನ ಸೂಪರ್ ಕಲೆಕ್ಷನ್ ಇಂಡಸ್ಟ್ರಿಗೆ ಬೂಸ್ಟ್ ಕೊಟ್ಟಿದೆ. ಕರಾವಳಿಯ ರಂಗಭೂಮಿ ಕಲಾವಿದ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಸಿನ್ಮಾ ಅ.೧೪ರಂದು ಕರಾವಳಿಯ ಥಿಯೇಟರ್‌ಗಳಲ್ಲಿ ಬಿಡುಗಡೆಯ ಭಾಗ್ಯ ಕಾಣುತ್ತಿದೆ. ಬಹಳ ಕಡಿಮೆ ಟೈಮ್‌ನಲ್ಲಿ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿಕೊಂಡು ಭರ್ಜರಿಯಾಗಿ ತೆರೆಗೆ ತರುವ ಪ್ರಯತ್ನ ಮಾಡಲಾಗುತ್ತಿದೆ ಎನ್ನೋದು ರಂಗಭೂಮಿ ನಿರ್ದೇಶಕ ಕಾಸರಗೋಡು ಚಿನ್ನಾರ ಮಾತು.
ಅಂದಹಾಗೆ ‘ಉಜ್ವಾಡು’ ಎಂದರೆ ಕೊಂಕಣಿ ಭಾಷೆಯಲ್ಲಿ ‘ಬೆಳಕು’ ಎಂದರ್ಥ. ಕೊಂಕಣಿಯಲ್ಲಿ ಅದರಲ್ಲೂ ಜಿಎಸ್‌ಬಿ ಕೊಂಕಣಿ ಭಾಷೆಯಲ್ಲಿ ಚಿನ್ನಾ ನಿರ್ದೇಶನದ ‘ಉಜ್ವಾಡು ’ ಮೂರನೇ ಚಿತ್ರ. ಅದು ಕೂಡ ೩೨ ವರ್ಷಗಳ ನಂತರ ಈ ಭಾಷೆಯಲ್ಲಿ ಚಿತ್ರ ನಿರ್ಮಾಣವಾಗುತ್ತಿರೋದು ಎನ್ನೋದು ಗಮನಿಸಬೇಕಾದ ವಿಷ್ಯಾ. ಕಾಸರಗೋಡು ಚಿನ್ನಾ ನಿರ್ದೇಶನದಲ್ಲಿ ‘ಉಜ್ವಾಡು’ ಮೂಡಿ ಬರುತ್ತಿರುವುದರಿಂದ ನಿರೀಕ್ಷೆಗಳ ಮೂಟೆ ಜಾಸ್ತಿಯಾಗಿದೆ ಎನ್ನೋದು ಕರಾವಳಿಯಲ್ಲಿ ಓಡಾಡಿಕೊಂಡಿರುವ ಮಾತು.
ಚಿನ್ನಾ ಟಾಕಿಂಗ್:
‘ಉಜ್ವಾಡು’ ಚಿತ್ರದಲ್ಲಿ ಕತೆಯಿಲ್ಲ. ಅರೇ.. ಕತೆ ಇಲ್ಲದ ಚಿತ್ರ ಉಂಟಾ ಮಾರಾಯ್ರೆ ಎಂದರೆ ಚಿನ್ನಾ ಚಿತ್ರದ ಕುರಿತು ಹೇಳುವುದಿಷ್ಟು : ಚಿತ್ರದಲ್ಲಿ ಕತೆ ಇಲ್ಲ ನಿಜ. ಆದರೆ ಅಲ್ಲಿ ಜಿಎಸ್‌ಬಿ ಕೊಂಕಣಿ ಸಮುದಾಯದ ಹೋಳಿ ಹಬ್ಬ, ಜಾತ್ರೋತ್ಸವ, ಚೂಡಿ ಪೂಜೆ, ಜತೆಗೆ ಇಡೀ ಸಮುದಾಯದ ಸಂಸ್ಕೃತಿ, ಸಾಹಿತ್ಯ, ಭಜನ್ , ಬಾಳಿಗರ ಹೋಟೆಲ್, ವೃದ್ಧಾಶ್ರಮ, ಕೂಡು ಕುಟುಂಬ ಎಲ್ಲವೂ ಈ ಚಿತ್ರದಲ್ಲಿ ಅಡಕವಾಗಲಿದೆ. ‘ಚಿತ್ರ ಸಂಪೂರ್ಣವಾಗಿ ಕೊಂಕಣಿ ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡಿರುವುದರಿಂದ ಚಿತ್ರದ ಬಜೆಟ್ ಅಸುಪಾಸು ೪೦ ಲಕ್ಷ ರೂ. ತಲುಪಿದೆ. ‘ಉಜ್ವಾಡು’ ಚಿತ್ರ ಅಸಲ್ ಚಿತ್ರದಂತೆ ಸೂಪರ್ ಹಿಟ್ ಆಗುತ್ತದೆ ಎನ್ನುವುದಕ್ಕೂ ಮುಖ್ಯವಾಗಿ ಇಲ್ಲಿ ಬರೀ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ’ ಎನ್ನೋದು ಕಾಸರಗೋಡು ಚಿನ್ನಾರ ಮಾತು.
‘ಕಳೆದ ೪೦ ವರ್ಷಗಳ ಸುದೀರ್ಘ ರಂಗಭೂಮಿಯ ಅನುಭವ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಮೊದಲು ಮಾತೃಭಾಷೆಯಲ್ಲಿ ಚಿತ್ರ ನಿರ್ಮಾಣ ಮಾಡಬೇಕು ಎನ್ನೋದು ನನ್ನ ಕನಸ್ಸಾಗಿತ್ತು. ಅದಕ್ಕಾಗಿ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದೇನೆ. ಕೊಂಕಣಿಗೆ ಸೀಮಿತ ಮಾರುಕಟ್ಟೆ ಇದೆ ಎಂಬ ವಿಚಾರ ಗೊತ್ತಿದೆ. ಆದರೂ ಈ ಸೀಮಿತ ಮಾರುಕಟ್ಟೆಯಲ್ಲಿ ಚಿತ್ರ ಓಡಿಸುತ್ತೇನೆ’ ಎನ್ನೋದು ಕಾಸರಗೋಡು ಚಿನ್ನಾ ಅವರ ಮಾತು.
ಚಿತ್ರವನ್ನು ಆರಂಭದಲ್ಲಿ ಕರಾವಳಿಯಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ನಂತರ ಉಳಿದ ಭಾಗಗಳಲ್ಲೂ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ. ‘ಉಜ್ವಾಡು’ ಚಿತ್ರ ಬರೀ ಒಂದು ಸಮುದಾಯವನ್ನು ಕೇಂದ್ರೀಕೃತವಾಗಿ ಮಾಡಿಲ್ಲ. ಎಲ್ಲ ಸಮುದಾಯದ ಜನರು ಬಂದು ಸಿನ್ಮಾ ನೋಡಬೇಕು. ಅದಕ್ಕಾಗಿ ಎಲ್ಲರಿಗೂ ಸಂದೇಶ ತಲುಪುವಂತೆ ಚಿತ್ರ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಚಿತ್ರದ ಆಡಿಯೋ ಭರ್ಜರಿಯಾಗಿ ಮಾರಾಟವಾಗಿದೆ. ಇನ್ನೂ ಕೂಡ ಆಡಿಯೋಗಾಗಿ ಬೇಡಿಕೆ ಬಂದಿದೆ ಎನ್ನುವುದು ಕಾಸರಗೋಡು ಚಿನ್ನಾರ ಮಾತು.
ಉಜ್ವಾಡು ಹುಡುಕಾಟದಲ್ಲಿ:
ಚಿತ್ರದ ಮುಖ್ಯ ಭೂಮಿಕೆಯಲ್ಲಿ ಖ್ಯಾತ ಹಿರಿಯ ನಟಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ೮೪ರ ಹರೆಯದ ಕನ್ನಡದ ಹಿರಿಯ ನಟ ಸದಾಶಿವ ಬ್ರಹ್ಮಾವರ, ಗ್ಲಾಮರ್ ನಟಿ ನೀತು ಸೇರಿದಂತೆ ಶಶಿಭೂಷಣ್ ಕಿಣಿ, ಓಂ ಗಣೇಶ್, ಪ್ರಕಾಶ್ ಶೆಣೈ, ಪೂರ್ಣಿಮಾ ಹಾಗೂ ಕರಾವಳಿಯ ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಾಕಿದ್ದಾರೆ. ಚಿತ್ರ ಕಾರ್ಕಳ, ಮಂಗಳೂರಿನ ಅಸುಪಾಸು ಚಿತ್ರೀಕರಣವಾಗಿದೆ. ಅತಿಥಿ ಪಾತ್ರದಲ್ಲಿ ಪತ್ರಕರ್ತೆ ಸಂಧ್ಯಾ ಪೈ ಹಾಗೂ ಪ್ರಮೀಳಾ ನೇಸರ್ಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಇದಕ್ಕೆ ಕತೆ ಹಾಗೂ ಚಿತ್ರಕತೆಯನ್ನು ಕಾಸರಗೋಡು ಚಿನ್ನಾ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಬರಹಗಾರ ಗೋಪಾಲಕೃಷ್ಣ ಪೈ ಬರೆದಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿವೆ. ಹಾಡುಗಳನ್ನು ಭದ್ರಗಿರಿ ಅಚ್ಚುತದಾಸ್ ಹಾಗೂ ಸಾಹಿತಿ ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ವಿ. ಮನೋಹರ್ ಸಂಗೀತ ನೀಡಿದ್ದಾರೆ. ಅದರಲ್ಲೂ ಕಾಯ್ಕಿಣಿ ಬರೆದ ಹಾಡು ‘ರಂಗ ರಂಗ ರಂಗ ಪಂಚಮಿ’ ಕೊಂಕಣಿ ಭಾಷೆಯಲ್ಲಿ ಬರೆದ ಆರಂಭದ ಕವನವಂತೆ, ಕಲಾ ನಿರ್ದೇಶಕರಾಗಿ ಶಶಿಧರ ಅಡಪ, ಛಾಯಾಗ್ರಹಣದಲ್ಲಿ ಉತ್ಪಲ್ ನಾಯನಾರ್, ಸಂಕಲನದಲ್ಲಿ ಸುರೇಶ್ ಅರಸ್ ಕೆಲಸ ಮಾಡಿದ್ದಾರೆ. ನಿರ್ಮಾಪಕರಾಗಿ ಬೆಂಗಳೂರು ಉದ್ಯಮಿ ಕೆ.ಜೆ. ಧನಂಜಯ ಹಾಗೂ ಚಿನ್ನಾರ ಸಹೋದರಿ ಅನುರಾಧ ಪಡಿಯಾರ್ ಹಣ ಹಾಕಿದ್ದಾರೆ. ಮಿತ್ರ ಮಿಡಿಯಾ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ . ಅಂದಹಾಗೆ ಇಷ್ಟರವರೆಗೆ ಸಿನ್ಮಾದಲ್ಲಿದ್ದ ಕಮರ್ಷಿಯಲ್, ಕಲಾಆಧರಿತ ಚಿತ್ರಗಳೆನ್ನುವ ಪರಿಕಲ್ಪನೆಯನ್ನು ಬದಿಗೊತ್ತಿ ಭಿನ್ನವಾದ ಸಂಸ್ಕೃತಿ ಆಧರಿತ ಚಿತ್ರವಾಗಿ ‘ಉಜ್ವಾಡು’ ಬರುತ್ತಿರೋದು ಗಮನಿಸಿಕೊಳ್ಳಬೇಕಾದ ವಿಚಾರ.

ಅಸಲ್ ಮಾತು ಅಸಲಿ ಟಾಕ್ ವಿದ್ ಕೊಡಿಯಾಲ್‌ಬೈಲ್


ಕರಾವಳಿಯ ಮನೆ- ಮನಗಳಲ್ಲಿ ಈಗ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್‌ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ಅಸಲ್ ಚಿತ್ರಕ್ಕೆ ನೀಡಿದೆ. ನೂರು ದಿನಗಳನ್ನು ಪೂರೈಸಿಕೊಂಡು ನೂರವೈತ್ತು ದಿನಗಳತ್ತ ಮೈಗೆದರಿಕೊಂಡು ಓಡಲಾರಂಭಿಸಿದೆ.

ಅಸಲ್ ಸೂಪರ್ರೋ ಸೂಪರ್.. ಮಾರಾಯ್ರೆ. ಇದು ಥಿಯೇಟರ್‌ನಲ್ಲಿ ಒರಿಯರ್ದೊರಿ ಅಸಲ್ ಸಿನ್ಮಾವನ್ನು ೧೪ ಬಾರಿ ನೋಡಿಕೊಂಡು ಹೊರಬಂದ ವಿಠಲ ಸಾಹೇಬ್ರ ಗಟ್ಟಿ ಮಾತು. ಅಸಲ್ ಚಿತ್ರವಿರುವ ನಗರದ ಥಿಯೇಟರ್‌ಗಳಲ್ಲಿ ಈಗಲೂ ಹೌಸ್‌ಪುಲ್ ನೇಮ್‌ಪ್ಲೇಟ್ ತೂಕಾಡಿಸಿದ್ದು ಕಾಣಬಹುದು. ಅಸಲ್ ನೂರು ದಿನ ಓಟ ಮುಗಿಸಿಕೊಂಡು ನೂರೈವತ್ತು ದಿನಗಳತ್ತ ಕಣ್ಣು ಹಾಕಿದರೂ, ಪ್ರೇಕ್ಷಕ ಮಾತ್ರ ಅಸಲ್ ಚಿತ್ರವನ್ನು ಆರಂಭದಲ್ಲಿ ನೋಡಿದ ಜೋಶ್‌ನಂತೆ ನೋಡುತ್ತಿದ್ದಾನೆ ಎನ್ನುತ್ತಾರೆ ನಗರದ ಜ್ಯೋತಿ ಥಿಯೇಟರ್‌ನ ಕೌಂಟರ್‌ನಲ್ಲಿ ಕೂತು ಟಿಕೇಟ್ ಹರಿದುಕೊಡುತ್ತಿರುವ ರಂಜಿತ್.
ಇದು ಕೋಸ್ಟಲ್‌ವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿಯೇ ಅತೀ ದೊಡ್ಡ ರೆಕಾರ್ಡ್. ನಲವತ್ತು ವರ್ಷಗಳ ತುಳು ಸಿನ್ಮಾ ಲ್ಯಾಂಡ್‌ನಲ್ಲಿ ಈಗ ‘ಒರಿಯರ್ದೊರಿ ಅಸಲ್’ ಹೊಸ ಮೈಲ್ ಸ್ಟೋನ್ ನೆಟ್ಟಿದೆ. ೨೫ ವರ್ಷಗಳ ಹಿಂದೆ ಕರಾವಳಿಯಲ್ಲಿ ಬಿರುಗಾಳಿ ಎಬ್ಬಿಸಿದ ತುಳು ನಾಟಕ ‘ಒರಿಯರ್ದೊರಿ ಅಸಲ್’ ಈಗ ಹಿರಿತೆರೆಯ ಮೇಲೆ ರಾಕೆಟ್ ವೇಗದಲ್ಲಿ ಓಡುತ್ತಿದೆ. ಕರಾವಳಿಯ ಪ್ರತಿಭಾವಂತ ರಂಗಭೂಮಿ ನಿರ್ದೇಶಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ಈ ತುಳು ಸಿನ್ಮಾದ ಮೂಲಕ ಹೊಸ ಮಾರ್ಕೆಟ್ ಕ್ರಿಯೇಟ್ ಮಾಡಿದ್ದಾರೆ.
ವಿಜಯಣ್ಣ ಮುಟ್ಟಿದ್ದು ಎಲ್ಲವೂ ಸಕ್ಸಸ್ ಕಂಡಿದೆ ಎನ್ನೋದು ಅವರ ಆಪ್ತ ವಲಯದ ಮಾತು. ಅವರ ಕಂಪನಿಯಿಂದ ಹೊರಬಂದ ಎಲ್ಲ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿದೆ. ಸಾಮಾಜಿಕ ಕಾಳಜಿ ಜತೆಯಲ್ಲಿ ಹಾಸ್ಯದ ಲೇಪವನ್ನು ಸೇರಿಸಿಕೊಂಡು ನಾಟಕಗಳನ್ನು ಪ್ರದರ್ಶನ ಮಾಡುವ ವಿಚಾರದಲ್ಲಿ ಕರಾವಳಿಯ ನಾಟಕ ಪ್ರಿಯರಿಗೆ ವಿಜಯ್ ಕುಮಾರ್ ಎ ವನ್ ಬ್ರ್ಯಾಂಡ್. ಅದರಲ್ಲೂ ‘ಅಸಲ್’ ಇಡೀ ತುಳು ರಂಗಭೂಮಿಯಲ್ಲಿಯೇ ಒಂದು ಮೈಲಿಗಲ್ಲು ಹಾಕಿದ ನಾಟಕ. ಈ ಯಶಸ್ವಿನಿಂದ ಕರಾವಳಿಯಲ್ಲಿ ತುಳು ನಾಟಕ ಮಾಡುವ ಉಮೇದು ಹುಟ್ಟಿಕೊಂಡಿತು.
ಒಮ್ಮೆ ಕುಟುಂಬದ ಜತೆಯಲ್ಲಿ ಸಿನ್ಮಾ ಥಿಯೇಟರ್‌ಗಳಿಗೆ ಹೋಗಿ ಬಂದವರು ಗೆಳೆಯರ, ಸ್ನೇಹಿತೆಯರ, ಅಕ್ಕಪಕ್ಕದವರ ಒತ್ತಾಯಕ್ಕೆ ಮಣಿದು ಸಿನ್ಮಾ ನೋಡಿಕೊಂಡು ಬಂದು ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ಕೈಗೆ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್. ಅಂದಹಾಗೆ ಅಕ್ಟೋಬರ್ ೨೧ರಂದು ಮುಂಬಯಿ, ಪುಣೆಯಲ್ಲೂ ಸಿನ್ಮಾವನ್ನು ಬಿಡುಗಡೆ ಮಾಡಲಾಗುತ್ತದೆ. ನಂತರ ಮಧ್ಯ ಪ್ರಾಚ್ಯದೇಶಗಳಲ್ಲಿಯೂ ಚಿತ್ರವನ್ನು ಥಿಯೇಟರ್‌ಗೆ ಇಳಿಸಬೇಕು ಎನ್ನೋದು ವಿಜಯ್‌ಕುಮಾರ್ ಕೊಡಿಯಾಲ್ ಬೈಲ್‌ರ ತಲೆಯಲ್ಲಿ ಓಡುತ್ತಿರುವ ಮಾಸ್ಟರ್ ಪ್ಲಾನ್.
ಅಸಲ್ ಮೋಲಿವುಡ್ ಎಂಟ್ರಿ:
‘ಒರಿಯರ್ದೊರಿ ಅಸಲ್’ ಚಿತ್ರವನ್ನು ಮಲಯಾಳಂನ ನಿರ್ದೇಶಕರೊಬ್ಬರು ರಿಮೇಕ್ ಮಾಡಲು ಕೇಳಿದ್ದರು. ಆದರೆ ಕೋಸ್ಟಲ್‌ವುಡ್‌ನಲ್ಲಿ ಅಸಲ್ ಕಂಡ ಸಕ್ಸಸ್ ಹಾಗೂ ಬೇರೆ ಸಿನ್ಮಾ ಉದ್ದಿಮೆಯಲ್ಲಿ ಸಕ್ಸಸ್ ಪಾಯಿಂಟ್‌ಗಳು ಬೇರೆ ಬೇರೆಯಾಗಿರುತ್ತದೆ. ಅದರಲ್ಲೂ ಬೇರೆ ಭಾಷೆಯಲ್ಲೂ ನಾನೇ ಅಸಲ್ ಚಿತ್ರವನ್ನು ನಿರ್ದೇಶನ ಮಾಡಬೇಕು ಎನ್ನೋದು ನನ್ನ ಕನಸ್ಸು ಎನ್ನುತ್ತಾರೆ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್.
‘ಅಸಲ್’ ಚಿತ್ರದ ನಂತರ ಕೋಸ್ಟಲ್‌ವುಡ್‌ನಲ್ಲಿ ಹನ್ನೆರಡು ಚಿತ್ರಗಳು ಮುಹೂರ್ತ ಮಾಡಿಕೊಂಡಿದೆ. ಅದು ಅಸಲ್ ಹಿಟ್ ಆಗಿದೆ ಎನ್ನುವುದಕ್ಕೆ ತುಳು ಸಿನ್ಮಾ ಇಂಡಸ್ಟ್ರಿ ಕೊಟ್ಟ ಉದಾಹರಣೆ. ಅಸಲ್ ಬರೀ ಓಡಿದ್ದಲ್ಲ ..ಅದು ತಟಸ್ಥವಾಗಿ ನಿಂತು ಹೋದ ತುಳು ಸಿನ್ಮಾ ಇಂಡಸ್ಟ್ರಿಯನ್ನು ಓಡಿಸಿದೆ ಎನ್ನುವುದು ವಿಜಯಣ್ಣನ ಅಸಲಿ ಮಾತು.
ಅಸಲ್ ವಾಟ್ ನೆಕ್ಸ್ಟ್:
ಬಹುತೇಕ ಮಂದಿ ‘ಅಸಲ್’ ನಂತರ ಮತ್ತೊಂದು ತುಳು ಸಿನ್ಮಾ ಮಾಡುತ್ತೇನೆ ಎನ್ನುವ ಸುದ್ಧಿ ಹಬ್ಬಿದೆ. ನಿಜಕ್ಕೂ ಅಸಲ್ ಚಿತ್ರವನ್ನು ಇಡೀ ವರ್ಷ ಕರಾವಳಿ ಸೇರಿದಂತೆ ಮುಂಬಯಿ, ಮಧ್ಯಪ್ರಾಚ್ಯ ದೇಶಗಳ ಉದ್ದಗಲಕ್ಕೂ ಓಡಿಸಿದ ನಂತರವೇ ಮತ್ತೊಂದು ಚಿತ್ರವನ್ನು ಮಾಡಬೇಕು ಎನ್ನೋದು ನನ್ನ ಅಲೋಚನೆ. ಸಧ್ಯಕ್ಕೆ ಅಸಲ್‌ನ ಓಡಾಟದಲ್ಲಿ ಬ್ಯುಸಿ. ಇನ್ನೂಳಿದ ಟೈಮ್‌ನಲ್ಲಿ ತುಳು ರಂಗಭೂಮಿಗೆ ಹೊಸ ನಾಟಕ ‘ಅಜ್ಜೇರ್’ ತರಬೇಕು.
ಅಜ್ಜೇರ್’ ಕತೆ ಪಾತ್ರವರ್ಗ ಎಲ್ಲವೂ ಸಿದ್ಧವಾಗಿದೆ. ಸಧ್ಯಕ್ಕೆ ಅದನ್ನು ಬಿಡುಗಡೆ ಮಾಡುವ ಯೋಚನೆ ಮಾಡುತ್ತಿದ್ದೇನೆ. ನಂತರ ನನ್ನ ಹಳೆಯ ನಾಟಕವೊಂದನ್ನು ಮತ್ತೊಂದು ತುಳು ಚಿತ್ರರಂಗಕ್ಕೆ ಸಿದ್ಧ ಮಾಡುತ್ತಿದ್ದೇನೆ. ಎಲ್ಲವೂ ಸರಿಯಾಗಿದ್ದಾರೆ ಬರುವ ವರ್ಷದಲ್ಲಿಯೇ ಮತ್ತೊಂದು ಚಿತ್ರವನ್ನು ಪ್ರೇಕ್ಷಕರಿಗೆ ಕೊಡುತ್ತೇನೆ ಎನ್ನುತ್ತಾರೆ ವಿಜಯ್ ಕುಮಾರ್.
ತುಳು ಚಿತ್ರವನ್ನು ಸಾಟಲೈಟ್ ಚಾನೆಲ್‌ನವರು ಖರೀದಿ ಮಾಡೋದು ಬಹಳ ಕಡಿಮೆ. ಅಂತೂ ಇಂತೂ ಅವಾರ್ಡ್ ಬಂದರಂತೂ ಸರಕಾರದ ಅನದಲ್ಲಿರುವ ಚಾನೆಲ್‌ಗಳು ತುಳು ಚಿತ್ರವನ್ನು ಖರೀದಿ ಮಾಡುತ್ತಾರೆ. ಆದರೆ ‘ಅಸಲ್’ನ ಟಿವಿ ಹಕ್ಕುಗಳನ್ನು ಪಡೆಯಲು ಕೆಲವು ಖಾಸಗಿ ಚಾನೆಲ್‌ಗಳು ಮುಂದೆ ಬಂದಿದೆಯಂತೆ. ಆದರೆ, ಒಳ್ಳೆಯ ಬೆಲೆಗಾಗಿ ಕೊಡಿಯಾಲ್‌ಬೈಲ್ ಎದುರು ನೋಡುತ್ತಿದ್ದಾರೆ. ವಾರದೊಳಗೆ ಎತ್ತಂಗಡಿಯಾಗುವ ಸಿನಿಮಾಗಳ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗುವಾಗ ‘ಅಸಲ್’ ಜನ ಮೆಚ್ಚಿದ ಚಿತ್ರ. ಅದರಲ್ಲೂ ನೂರು ದಿನ ಭರ್ಜರಿಯಾಗಿ ಓಡಿದ ಚಿತ್ರ. ಸೋ. ವಿಜಯ್ ಕುಮಾರ್ ಅವರ ಕಾಯುವಿಕೆಗೆ ಅರ್ಥವಿದೆ ಅನ್ನಿಸೋಲ್ವ..?