Tuesday, May 31, 2011

ಮಲೆಯಾಳಿ ಕುಟ್ಟಿಗೆ ದೇವರು ಕೈ ಕೊಟ್ಟಾಗ !



ಮುಖದಲ್ಲಿ ಫುಲ್ ತುಂಬಿರುವ ಸೌಮ್ಯತೆ, ಕಾಸಿನ ಅಗಲದ ಕುಂಕುಮ, ಕುಂಕುಮದ ಮೇಲ್ ಭಾಗದಲ್ಲಿ ಬಿಳಿನಾಮದ ಅಡ್ಡಗೆರೆ, ತಲೆ ತುಂಬಾ ಉದ್ದ ಕೂದಲು. ಇಡೀಯಾಗಿ ಬಿಡಿಯಾಗಿ ಹೇಳುವುದಾದರೂ ಮೋನಿಷಾ ಉನ್ನಿ ಪಕ್ಕಾ ಮಲೆಯಾಳಿ ಕುಟ್ಟಿ. ಇದೇ ಮೋನಿಷಾರಿಗೆ ದೇವರು ಕೈ ಕೊಟ್ಟ ಮಾತು ಕೇಳಿ....
ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಯಲ್ಲಿ ಅವರೊಬ್ಬರೇ ನ್ಯಾಚುರಲ್ ಬ್ಯೂಟಿ ಎನ್ನುವುದು ಬಹಳಷ್ಟು ಸಿನಿ ವಿಮರ್ಶಕರ ಗಟ್ಟಿ ಮಾತು. ಅದು ಖರೇನೆ ಇರಬಹುದು. ಸಿನಿಮಾ ನೋಡುವ ಪ್ರೇಕ್ಷಕನಲ್ಲಿ ಮೋನಿಷಾ ಉನ್ನಿ ಎಂದರೆ ತಮ್ಮ ಮನೆ ಮಗಳು, ಒಡಹುಟ್ಟಿದ ತಂಗಿ- ಅಕ್ಕ ಎನ್ನುವ ಕಲ್ಪನೆಗಳೇ ಜಾಸ್ತಿಯಾಗಿ ಬಂದು ಬಿಡುತ್ತದೆ.
ಮುಖದಲ್ಲಿ ಫುಲ್ ತುಂಬಿರುವ ಸೌಮ್ಯತೆ, ಕಾಸಿನ ಅಗಲದ ಕುಂಕುಮ, ಕುಂಕುಮದ ಮೇಲ್ ಭಾಗದಲ್ಲಿ ಬಿಳಿನಾಮದ ಅಡ್ಡಗೆರೆ, ತಲೆ ತುಂಬಾ ಉದ್ದ ಕೂದಲು. ಇಡೀಯಾಗಿ ಬಿಡಿಯಾಗಿ ಹೇಳುವುದಾದರೂ ಮೋನಿಷಾ ಉಣ್ಣಿ ಪಕ್ಕಾ ಮಲೆಯಾಳಿ ಕುಟ್ಟಿ. ಬರೀ ೧೫ರ ಹರೆಯದಲ್ಲಿ ಮಲಯಾಳಿ ಚಿತ್ರದಲ್ಲಿ ಕಾಣಿಸಿಕೊಂಡ ಮೋನಿಷಾ ತನ್ನ ಮೊದಲ ಚಿತ್ರ ‘ನಖಾಕ್ಷತಂಗಳ್’(೧೯೮೬)ನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡಿದ್ದಳು.
ಮಲಯಾಳಂನ ಖ್ಯಾತ ನಿರ್ದೇಶಕ ಹರಿಹರನ್ ಈ ಚಿತ್ರದ ನಿರ್ದೇಶಕರಾಗಿದ್ದರು. ಮಲಯಾಳಂನ ಖ್ಯಾತ ಕಾದಂಬರಿಗಾರ ಎಂ.ಟಿ. ವಾಸುದೇವನ್ ನಾಯರ್ ಅವರ ಕಾದಂಬರಿಯನ್ನು ಆಧರಿಸಿಕೊಂಡು ಈ ಚಿತ್ರ ಹೊರಬಂದಿತ್ತು. ೮೦-೯೦ರ ದಶಕದಲ್ಲಿ ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಈ ಚಿತ್ರ ಹೊಸ ಅಲೆಯನ್ನು ಸೃಷ್ಟಿಸಿಬಿಟ್ಟಿತು. ಸಂಗೀತಗಾರನ ಜತೆಯಲ್ಲಿ ಪ್ರೇಮಾಂಕುರವಾಗುವ ವಿಶಿಷ್ಟ ಸನ್ನಿವೇಶದಲ್ಲಿ ಖ್ಯಾತ ನಟ ವಿನೀತ್ ಜತೆಯಲ್ಲಿ ಮೋನಿಷಾ ನಟಿಸಿದ್ದರು.
ತ್ರಿಶೂರ್ನಿಂದ ಐಟಿ ಸಿಟಿಗೆ:ನಾರಾಯಣಿ ಉನ್ನಿ ಹಾಗೂ ಶ್ರೀದೇವಿ ಅಮ್ಮರಿಗೆ ಮೋನಿಷಾ ಬಿಟ್ಟರೆ ಮತ್ತೊಬ್ಬ ಪುತ್ರನಿದ್ದ ಸಾಜಿತ್ ಅಂತಾ ಅವನ ಹೆಸರು. ಅವನು ಮೋನಿಷಾಕ್ಕಿಂತ ಒಂದೆರಡು ವರ್ಷ ಚಿಕ್ಕವನು. ನಾರಾಯಣಿ ಉನ್ನಿ ತ್ರಿಶೂರ್ನಲ್ಲಿ ಚರ್ಮದ ಉದ್ಯಮ ನಡೆಸುತ್ತಿದ್ದರು. ಆದರೆ ಯಾಕೋ ಅಲ್ಲಿ ವ್ಯಾಪಾರ ಕೈಗೂಡಿಲ್ಲ. ಎಲ್ಲವನ್ನು ತೊರೆದು ಬೆಂಗಳೂರು ಬಂದು ಬಿಟ್ಟರು. ಮೋನಿಷಾರಿಗೆ ತಾಯಿ ಶ್ರೀದೇವಿ ಎಂದರೆ ಬಹಳ ಅಚ್ಚುಮೆಚ್ಚು.
ಶ್ರೀದೇವಿ ಒಬ್ಬ ಒಳ್ಳೆಯ ಭರತನಾಟ್ಯ ಕಲಾವಿದೆ. ಅವರನ್ನು ನೋಡಿ ನೋಡಿ ಮೋನಿಷಾನೂ ಭರತನಾಟ್ಯ ಕಲಿತುಕೊಂಡರು. ೧೯೮೫ರಲ್ಲಿ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ‘ಕೌಶಿಕ’ ಪ್ರಶಸ್ತಿಯನ್ನು ಬಾಚಿಕೊಂಡರು. ಬೆಂಗಳೂರಿನ ಸೈಂಟ್. ಚಾಲ್ಸ್, ಬಿಷಪ್ ಕಾಟನ್ ಸ್ಕೂಲ್, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ತನ್ನ ಪದವಿಯನ್ನು ಪಡೆದುಕೊಂಡಿದ್ದರು.
ಇದೇ ಸಮಯದಲ್ಲಿ ಮೋನಿಷಾರ ಹತ್ತಿರದ ಸಂಬಂಽಯಾದ ಮಲಯಾಳಂ ನಿರ್ದೇಶಕ ಹರಿಹರನ್ ತನ್ನ ಚಿತ್ರ‘ನಖಾಕ್ಷತಂಗಳ್’(೧೯೮೬)ನಲ್ಲಿ ಅವಕಾಶ ಕೊಟ್ಟರು. ನಂತರ ಇಡೀ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಮೋನಿಷಾ ಯಾರು ಎನ್ನುವುದು ಸಾಭೀತಾಯಿತು. ಅಲ್ಲಿಂದ ಬರೀ ೧೦ ವರ್ಷಗಳಲ್ಲಿ ಸಿನಿಮಾ ಕ್ಷೇತ್ರದಲ್ಲಿ ಮೋನಿಷಾ ಮಿಂಚಾಗಿ ಮೆರೆದಳು.
ಪೂಖಲಾ ವೈದಂ ಇಲಾತ್ತಲ್ ಎನ್ನುವ ತಮಿಳು ಚಿತ್ರದಲ್ಲಿ ಕೂಡ ಮೋನಿಷಾ ಕಾಣಿಸಿಕೊಂಡಿದ್ದಳು. ಈ ಚಿತ್ರ ಮೋನಿಷಾ ನಟಿಸಿದ್ದ ‘ನಖಾಕ್ಷತಂಗಳ್’ನ ರಿಮೇಕ್ ಚಿತ್ರವಾಗಿತ್ತು. ರಾಘವೇಂದ್ರ ರಾಜ್ಕುಮಾರ್ ಜತೆಯಲ್ಲಿ ನಟಿಸಿದ ‘ಚಿರಂಜೀವಿ ಸುಧಾಕರ’ ಮಲಯಾಳಂನ ಖ್ಯಾತ ಮೋಹನ್ಲಾಲ್ ಜತೆಯಲ್ಲಿ ನಟಿಸಿದ ‘ಕಮಲದಳಂ’ ಸೇರಿದಂತೆ ಸರಿಸುಮಾರು ೨೦ಕ್ಕಿಂತ ಅಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಚಪ್ಪಡಿ ವಿದ್ಯೆ ಮತ್ತು ಅಪಘಾತ:೧೯೯೨ರ ಡಿಸೆಂಬರ್೫ ರಂದು ತನ್ನ ಮುಂದಿನ ಮಲಯಾಳಂ ಚಿತ್ರ ‘ಚಪ್ಪಡಿವಿದ್ಯೆ’ಯ ಚಿತ್ರೀಕರಣಕ್ಕಾಗಿ ಅಲಪ್ಪುರಂನ ಸಮೀಪದ ಚೆರ್ತಲಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ ಕೇರಳ ಸರಕಾರದ ಬಸ್ವೊಂದು ಎದುರು ಬದಿಯಿಂದ ಬಂತು. ಕಾರು ಚಾಲಕ ಬಸ್ಗೆ ಸೈಡ್ಕೊಡುವ ನೆಪದಲ್ಲಿ ರಸ್ತೆಯಿಂದ ಕಾರನ್ನು ಬದಿಗೆ ತಂದ ಆದರೆ ರಸ್ತೆಯಿಂದ ಬದಿಗೆ ಬಂದ ಕಾರು ನಾಲ್ಕು ಪಲ್ಟಿಯಾಗಿ ಬಿದ್ದುಕೊಂಡಿತು. ಚಾಲಕ ಸ್ಥಳದಲ್ಲಿಯೇ ಔಟ್. ರಕ್ತದ ಮಡುವಿನಲ್ಲಿ ಮೋನಿಷಾ ರಸ್ತೆಯಲ್ಲಿ ಬಿದ್ದುಕೊಂಡಿದ್ದಳು. ಶ್ರೀದೇವಿಯಮ್ಮ ಕಾಲು, ಮೂಗು ಮೂರಿದು ಪ್ರಞೆ ತಪ್ಪಿ ಬಿದ್ದುಕೊಂಡಿದ್ದರು. ಯಾರೋ ಪುಣ್ಯಾತ್ಮರು ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದರು.
ಆದರೆ ಸಾಗಿಸುವ ದಾರಿ ಮಧ್ಯೆನೇ ಮೋನಿಷಾ ಎಲ್ಲರನ್ನು ಬಿಟ್ಟು ಹೊರಟು ಹೋದರು. ಶ್ರೀದೇವಿಯಮ್ಮ ಮಾತ್ರ ಉಳಿದುಬಿಟ್ಟರು. ಅಗ ಮೋನಿಷಾರಿಗೆ ಬರೀ ೨೧ರ ಹರೆಯ. ಅದು ಖಂಡಿತವಾಗಿಯೂ ಸಾಯುವ ವಯಸ್ಸಲ್ಲ ಎನ್ನುವುದು ಸಿನಿ ಪ್ರೇಕ್ಷಕರ ಮಾತು. ಒಂದು ವೇಳೆ ಸಿನಿಮಾ ಜಗತ್ತಿನಲ್ಲಿ ಮೋನಿಷಾ ಇದ್ದು ಬಿಟ್ಟಿದ್ದರೆ ಇನ್ನಷ್ಟೂ ಒಳ್ಳೆಯ ಚಿತ್ರಗಳು ಮೂಡಿಬರುತ್ತಿದ್ದವು, ಆದರೆ ವಿಯಾಟದ ಮುಂದೆ ಮೋನಿಷಾ ಇಲ್ಲದೇ ಹೋದಳು. ಇತ್ತಕಡೆ ಶ್ರೀದೇವಿಯಮ್ಮ ಈಗಲೂ ಸಿನಿಮಾಗಳಲ್ಲಿ ತಾಯಿ ಪಾತ್ರ ಮಾಡುತ್ತಿದ್ದಾರೆ. ಭರತನಾಟ್ಯ ಕಲಾವಿದೆಯಾದ ಶ್ರೀದೇವಿಯಮ್ಮ ಮಗಳು ಮೋನಿಷಾರ ಹೆಸರಿನಲ್ಲಿ ‘ಮೋನಿಷಾ ನಾಟ್ಯಾಲಯ’ವನ್ನು ತೆರೆದುಕೊಂಡಿದ್ದಾರೆ. ಎಳೆಯ ವಯಸ್ಸಿನ ಪುಟಾಣಿಗಳಿಗೆ ಭರತನಾಟ್ಯ ಹಾಗೂ ಮೋಹಿನಿಯಾಟ್ಟಂ ನೃತ್ಯಗಳನ್ನು ಬಿಡುವಿನ ವೇಳೆಯಲ್ಲಿ ಕಲಿಸುತ್ತಿದ್ದಾರೆ. ಜತೆಗೆ ಮಗಳ ಹೆಸರಿನಲ್ಲಿ ಬಹಳಷ್ಟು ದಾನಧರ್ಮಗಳನ್ನು ಮಾಡುತ್ತಿದ್ದಾರೆ. ಉಳಿದಂತೆ ಮೋನಿಷಾರನ್ನು ಬಲಿ ತೆಗೆದುಕೊಂಡ ಚೆರ್ತಲ ಸರ್ಕಲ್ ಈಗ ‘ಮೋನಿಷಾ ಸರ್ಕಲ್’ ಆಗಿ ಬದಲಾಗಿದೆ. ಪುಟ್ಟ ನಾಮಪಲಕದಲ್ಲಿ ಮೋನಿಷಾರ ಮುದ್ದು ಮೊಗದ ಚಿತ್ರ ಹೋಗಿ ಬರುವವರನ್ನು ನೋಡುತ್ತಿದೆ. ಯಾಕೋ ಗೊತ್ತಿಲ್ಲ. ಮೋನಿಷಾರ ಭವಿಷ್ಯ ರೇಖೆ ಬಹಳಷ್ಟು ಸಣ್ಣದಿತ್ತು ಅಂತಾ ವರ ಚಿತ್ರಗಳನ್ನು ನೋಡುತ್ತಿದ್ದಾಗ ಪ್ರೇಕ್ಷಕರಿಗೆ ಅನ್ನಿಸದೇ ಇರೋದಿಲ್ಲ.
....
ವಿಜಯ ಕರ್ನಾಟಕದಲವಲವಿಕೆಯಲ್ಲಿ ಮೇ ೨೦,2011ರಂದು ಪ್ರಕಟವಾಗಿದೆ)

ಒಂದ್ ಮಾತು..... ಅದೇನೂ ಅಂದ್ರೆ...


ಅಬ್ಬಾ.... ಒಂದು ಪುಟ್ಟ ವೈರಲ್ ಜ್ವರ ಈ ರೀತಿ ಕಂಗಾಲು ಮಾಡುತ್ತದೆ ಎಂದು ನಾನು ಖಂಡಿತವಾಗಿಯೂ ಅಂದುಕೊಂಡಿರಲಿಲ್ಲ ಮಾರಾಯ್ರೆ... ಬರೋಬರಿ ೧೦ರಿಂದ ೧೨ ದಿನಗಳ ಕಾಲ ನಾನು ವಿಜಯ ಕರ್ನಾಟಕ ಕಚೇರಿಗೆ ತಲೆ ಹಾಕಿ ಮಲಗದಂತೆ ಮಾಡಿ ಹಾಕಿತು. ಸುಮಾರು ಆರು ತಿಂಗಳುಗಳಿಂದ ನಾನು ನನ್ನ ವೃತ್ತಿಗೆ ರಜೆ ಹಾಕಿರಲಿಲ್ಲ. ಒಂದು ಪುಟ್ಟ ಜ್ವರ ನನ್ನನ್ನು ಬಹಳಷ್ಟು ಕಾಡಿಸಿದೆ.. ಪೀಡಿಸಿದೆ... ಜತೆಗಿಷ್ಟು ಕಾಸನ್ನು ಪೀಕಿಸಿದೆ. ಅದೆಲ್ಲ ಬಿಟ್ಟುಬಿಡಿ ಬಹಳ ದಿನಗಳ ನಂತರ ಬ್ಲಾಗ್ ಆಪ್ಡೇಟ್ ಮಾಡಿಲ್ಲ ಯಾಕೆ ಅಂತಾ ನನ್ನ ಗೆಳೆಯರು ಕೇಳಿದ್ದರು. ಅದಕ್ಕೆ ಕಾರಣ ಈ ಜ್ವರ ಎಂದುಬಿಡಬಹುದು. ಈಗ ನಾನು ಚೇತರಿಸಿಕೊಳ್ಳುತ್ತಿದ್ದೇನೆ...ಜತೆಗೆ ಬ್ಲಾಗ್ ಮತ್ತೆ ತುಂಬಿಸಲು ಹೊರಟಿದ್ದೇನೆ. ಸದ್ಯಕ್ಕೆ ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯ ‘ಪಂಚ್’ ಕೊಡುತ್ತಿದ್ದೇನೆ.. ಸ್ವೀಕರಿಸಿ.
* ಸ್ಟೀವನ್ ರೇಗೊ, ದಾರಂದಕುಕ್ಕು

Saturday, May 14, 2011

ಪ್ರಕಾಶ್ ಶೆಟ್ಟಿ ಪಂಚ್-೨


ಭ್ರಷ್ಟಚಾರದ ವಿರುದ್ಧ ಹೋರಾಟ ಮತ್ತೆ ಮುಂದುವರಿದಿದೆ. ಭ್ರಷ್ಟಚಾರದಕುರಿತು ಮಕ್ಕಳಲ್ಲಿ ಜಾಗೃತಿ ಹಚ್ಚುವಕೆಲಸವನ್ನು ಪ್ರಕಾಶ್ ಶೆಟ್ಟಿ ಕಾರ್ಟೂನ್ ಮೂಲಕ ಮಾಡುತ್ತಿದ್ದಾರೆ. ಭ್ರಷ್ಟಚಾರದ ಕುರಿತು ಮಕ್ಕಳು ಹೇಗೆ ವರ್ತಿಸಿದ್ದಾರೆ ಎನ್ನುವ ವಿಚಾರವನ್ನು ಪ್ರಕಾಶ್ ವ್ಯಂಗ್ಯದ ಮೂಲಕ ತೆರೆದಿಟ್ಟಿದ್ದಾರೆ. ಬನ್ನಿ ಈ ವಾರದ ಪಂಚ್ ನೋಡೋಣ...
*ಸ್ಟೀವನ್ ರೇಗೊ

ಬಿ ಟೌನ್ ಬ್ಯೂಟಿ ನಯನಾ




ಚಿತ್ರತಾರೆ ಪ್ರಭುದೇವ- ನಯನಾತಾರಾರ ಸಿಕ್ರೇಟ್ ಮಾತು ಹೊರಬಂದಿದೆ. ಇಷ್ಟರವರೆಗೆ ಪ್ರಭು ಹಾಗೂ ನಯನಾ ಜತೆಯಾಗಿ ಸುತಾಡುತ್ತಿದ್ದರು. ಇನ್ನು ಮುಂದೆ ಜತೆಯಾಗಿ ಚಿತ್ರ ಮಾಡ್ತಾರೆ ಅಂತೆ ! ಏನ್ ಕತೆ ಅಂತೀರಾ..?

ಏನಿಲ್ಲ...ನನ್ನ ನಿನ್ನ ನಡುವೆ ಏನಿಲ್ಲ...
ರಿಯಾಲಿ ನಮ್ಮ ನಡುವೆ ಏನಿಲ್ಲ ಅಂದುಕೊಂಡು ಬೀದಿ ಬೀದಿ ಸುತ್ತಾಡಿದ ಜೋಡಿಗಳಿಬ್ಬರ ಮಾತು. ನಮ್ಮ ಮದುವೆ ಆಗಿಯೇ ಹೋಗಿದೆ ಈ ಕುರಿತು ಚರ್ಚೆನೇ ಬೇಡ ಕಣ್ರಿ ಎಂದು ಮಾಧ್ಯಮಗಳ ಮುಂದೆ ಮುಖಗಂಟಿಕ್ಕಿದ ತಾರೆಗಳ ರಂಗೀನ್ ಕತೆ. ಈಗ ಈ ಕತೆ ಮತ್ತೆ ಮುಂದುವರಿದಿದೆ. ಹೌದು. ಚಿತ್ರತಾರೆ ಪ್ರಭುದೇವ- ನಯನಾತಾರಾರ ಸಿಕ್ರೇಟ್ ಮಾತು ಹೊರಬಂದಿದೆ.ಇಷ್ಟರವರೆಗೆ ಪ್ರಭು ಹಾಗೂ ನಯನಾ ಜತೆಯಾಗಿ ಸುತ್ತಾಡುತ್ತಿದ್ದರು. ಇನ್ನು ಮುಂದೆ ಜತೆಯಾಗಿ ಚಿತ್ರ ಮಾಡ್ತಾರೆ ಅಂತೆ !
ಹೌದು. ಬಿ-ಟೌನ್ನಲ್ಲಿ ದಕ್ಷಿಣ ಭಾರತದ ಮತ್ತೊಂದು ಸೂಪರ್ ಹುಡುಗಿ ಕಾಲಿಡುವ ಸೂಚನೆ ಹೊರಬಂದಿದೆ. ವಿದ್ಯಾಬಾಲನ್,ಆಸೀನ್, ತ್ರಿಶಾರ ನಂತರ ಈಗ ಹಿಟ್ ಲೀಸ್ಟ್ನಲ್ಲಿ ಇರೋದು ಸುಂದರ ಕಣ್ಣುಗಳ, ಮುದ್ದು ಮೊಗದ , ಗಟ್ಟಿಮುಟ್ಟಾದ ಹಾಟ್ ಹುಡುಗಿ ನಯನಾ ತಾರಾ. ಬಿ-ಟೌನ್ ನಿರ್ಮಾಪಕ ಬೋನಿ ಕಪೂರ್ ಬ್ಯಾನರ್ನಲ್ಲಿ ಮೂಡಿಬಂದ ಸೂಪರ್ಹಿಟ್ ಹಿಂದಿ ಚಿತ್ರ ‘ವಾಂಟೆಡ್’ ನಂತರ ಅದರ ಪಾರ್ಟ್ ಟೂ ಸಿನ್ಮಾ ಮಾಡುವ ಯೋಜನೆ ಬೋನಿಗೆ ಬಂದು ಬಿಟ್ಟಿದೆ. ಇದಕ್ಕಾಗಿ ಮುಂಬಯಿ ನಗರಿಯಲ್ಲಿ ಕೂತು ಬೋನಿ ‘ವಾಂಟೆಡ್-೨’ಗಾಗಿ ತಲೆ ಓಡಿಸುತ್ತಿದ್ದಾರೆ.
ತಮಿಳಿನ ‘ಪೋಕಿರಿ’ ಚಿತ್ರವನ್ನು ಮಕ್ಕಿಕಾ ಮಕ್ಕಿ ಕಾಪಿ ಹೊಡೆದು ‘ವಾಂಟೆಡ್’ ಚಿತ್ರ ಮಾಡಿದ ನಿರ್ದೇಶಕ ಪ್ರಭುದೇವ ಪಾರ್ಟ್ ಟೂ ಗೂ ನಿರ್ದೇಶಕರಾಗಿ ಜಾಗ ಪಡೆದುಕೊಂಡಿದ್ದಾರೆ. ಚಿತ್ರದ ಲೀಡ್ ರೋಲ್ನಲ್ಲಿ ಮಸಲ್ಮ್ಯಾನ್ ಸಲ್ಮಾನ್ ಖಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ನಾಯಕಿಯಾಗಿ ಆಯೀಷಾ ತಾಕಿಯಾ ಬದಲು ಈ ಬಾರಿ ಹೊಸ ಹುಡುಗಿ ನಯನಾ ತಾರಾ ಸೆಲೆಕ್ಟ್ ಆಗಿದ್ದಾರೆ. ಈ ಹಿಂದೆ ಸಲ್ಲು ಪ್ರಿಯ ಹುಡುಗಿ ಆಸೀನ್ ನಟಿಸುವ ಸಾಧ್ಯತೆಗಳು ಇವೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಆದರೆ ನಟನಟಿಯರ ಆಯ್ಕೆ ಸಮಿತಿಯಲ್ಲಿ ಯಾವಾಗ ನಿರ್ದೇಶಕ ಪ್ರಭುದೇವ ಬಂದು ಕೂತರೋ ಗೊತ್ತಿಲ್ಲ. ಪ್ರಭು ಹೇಳಿದ ಮಾತಿಗೆ ಎಲ್ಲರೂ ಒಪ್ಪಲೇಬೇಕಾಯಿತು. ‘ವಾಂಟೆಡ್-೨’ ನಿರ್ದೇಶನ ಮಾಡಬೇಕಾದರೆ ನಯನಾ ನಾಯಕಿಯಾಗಿ ಬರಬೇಕು ಎನ್ನೋದು ಪ್ರಭುದೇವರ ಮೊದಲ ಷರತ್ತು ಆಗಿತ್ತು ಎಂಬ ಮಾತು ಈಗ ಹೊರಬಿದ್ದಿದೆ.
ತಮಿಳಿನಲ್ಲಿ ಒಳ್ಳೆಯ ಓಪನಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿರುವ ‘ಎಂಗೆಯುಂ ಎನ್ ಕಾದಲ್’ ಯಶಸ್ಸಿನಿಂದ ಬೀಗುತ್ತಿರುವ ನಿರ್ದೇಶಕ ಪ್ರಭುದೇವ ‘ವಾಂಟೆಡ್-೨’ನ ಕತೆ, ಉಳಿದ ಪಾತ್ರ ವರ್ಗಗಳ ಕುರಿತು ಸಿರೀಯಸ್ ಆಗಿ ಹೋಂ ವರ್ಕ್ ಆರಂಭ ಮಾಡಿದ್ದಾರೆ. ಹಿಂದಿಯಲ್ಲಿ ಮತ್ತೊಂದು ಸೂಪರ್ಹಿಟ್ ಹಾಗೂ ದೊಡ್ಡ ಬಜೆಟ್ ಚಿತ್ರಕ್ಕಾಗಿ ನಿರ್ಮಾಪಕ ಬೋನಿ ಕಪೂರ್ ಹೆಚ್ಚು ಹಣ ಸುರಿಯುವ ಧೈರ್ಯ ಮಾಡಿದ್ದಾರೆ. ಈ ಮೂಲಕ ಬಾಲಿವುಡ್ನಲ್ಲಿ ಮತ್ತೊಂದು ದಕ್ಷಿಣ ಭಾರತ ಅಲೆ ಎದ್ದು ಬರಲಿದೆ. ಪ್ರಭುದೇವರ ಕೈಚಳಕದಲ್ಲಿ ನಯನಾ ನಿಜಕ್ಕೂ ಬಿ ಟೌನ್ನಲ್ಲಿ ಹಿಟ್ ಆಗುತ್ತಾರಾ ಎನ್ನೋದು ಈಗಲೂ ಎಲ್ಲರಲ್ಲೂ ಸುತ್ತಾಡುತ್ತಿರುವಪ್ರಶ್ನೆ ಅದಕ್ಕೆ ಉತ್ತರ ಮಾತ್ರ ಸಾಧ್ಯದಲ್ಲಿಯೇ ದೊರೆಯಲಿದೆ.
...
(ವಿಜಯ ಕರ್ನಾಟಕದ ಲವಲವಿಕೆ ಪುರವಣಿಯಲ್ಲಿ ೧೩.೦೫.೨೦೧೧ರಂದು ಪ್ರಕಟವಾಗಿದೆ)

Saturday, May 7, 2011

ಇದು ಪ್ರಕಾಶ್ ಶೆಟ್ಟಿಯ ಪಂಚ್-೧


ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ಅಮೆರಿಕದ ರಕ್ಷಣಾ ಪಡೆಗಳು ಲಾಡೆನ್ ಕತೆ ಮುಗಿಸಿದ ನಂತರ ಪಾಕಿಸ್ತಾನದ ಅಲ್- ಖೈದಾ ಉಗ್ರಗಾಮಿ ಸಂಘಟನೆ ಅಮೆರಿಕ ಹಾಗೂ ಭಾರತಕ್ಕೆ ಎಚ್ಚರಿಕೆ ನೀಡಿರುವ ವಿಚಾರದಿಂದ ಪ್ರಭಾವಿತರಾಗಿ ಶೆಟ್ಟರು ಕಾರ್ಟೂನ್ ಕಳುಹಿಸಿಕೊಟ್ಟಿದ್ದಾರೆ. ಅದೇ ಈ ವಾರದ ಪ್ರಕಾಶ್ ಶೆಟ್ಟಿಯ ಪಂಚ್ ಸರಣಿಯಲ್ಲಿ ಇಲ್ಲಿ ನೀಡುತ್ತಿದ್ದೇನೆ.
* ಸ್ಟೀವನ್ ರೇಗೊ, ದಾರಂದಕುಕ್ಕು

ಸೆಕ್ಸ್ ಪವರ್ ಜಾಸ್ತಿ ಮಾಡೋಕೆ ಶ್ವೇತಾ !


ಕೊನೆಗೂ ಮಲಯಾಲಂ ನಟಿ ಶ್ವೇತಾ ಮೆನನ್ ಗೆ ನ್ಯಾಯ ಸಿಕ್ಕಿದೆ. ಲೈಂಗಿಕಾಸಕ್ತಿ ಹೆಚ್ಚಿಸುವ ಹರ್ಬಲ್ ಉತ್ಪನ್ನದ ಜಾಹೀರಾತಿಗೆ ಶ್ವೇತಾಳ ಒಪ್ಪಿಗೆ ಪಡೆಯದೇ ಆಕೆಯ ಫೋಟೊ ಬಳಸಿದ ಆರೋಪದಡಿ ಮುಸ್ಲಿ ಪವರ್ ಕಂಪನಿಯ ನಿರ್ದೇಶಕನನ್ನು ಕಂಬಿಯ ಹಿಂದೆ ಕೂರಿಸಿದ್ದಾರೆ. ಅವಳ ಫೋಟೊ ಹಾಕಿದ್ದು ನಾನಲ್ಲ ಜಾಹೀರಾತು ಪ್ರೊಡ್ಯುಸರ್ ಅಂತ ಆತ ಅವಲತ್ತುಕೊಂಡಿದ್ದಾನೆ.
ಮಲಯಾಲಂ ಚಿತ್ರ ನಟಿ ಶ್ವೇತಾ ಮೆನನ್ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟಿ. ನೋಡಲು ಒಂದಿಷ್ಟು ಹಾಟ್ ಆಗಿಯು ಇದ್ದಾಳೆ. ಹಾಗಂತ ಅವಳ ಫೋಟೊವೊಂದನ್ನು ಸೆಕ್ಸ್ ಪವರ್ ಹೆಚ್ಚಿಸೋ ಉತ್ಪನ್ನದ ಜಾಹೀರಾತಿಗೆ ಬಳಸಿದರೆ ಸುಮ್ಮನಿರುತ್ತಾಳ? ಅದು ಕೂಡ ಆಕೆಯ ಅನುಮತಿಯಿಲ್ಲದೇ! ಕಯಾಮ್ ಎಂಬ ಮಲಯಾಲ ಚಿತ್ರದಲ್ಲಿ ನಟಿಸಿದ್ದ ಶ್ವೇತಾಳ ಫೋಟೊವನ್ನು ಮುಸ್ಲಿ ಪವರ್ ಜಾಹೀರಾತಿಗೆ ಬಳಸಿಕೊಳ್ಳಲಾಗಿತ್ತು. ಈ ಜಾಹೀರಾತು ಅವಳಿಗೆ ಗೊತ್ತಾಗದು ಅಥವಾ ಗೊತ್ತಾದರೂ ತೆಪ್ಪಗಿರುತ್ತಾಳೆ ಅಂತ ಕಂಪನಿ ಅಂದುಕೊಂಡಿತ್ತೋ ಏನೋ ಹಿಂದೆ ಮುಂದೆ ಯೋಚಿಸದೇ ಪ್ರಕಟಿಸಿತ್ತು.
ಕೆಲವೇ ದಿನಗಳಲ್ಲಿ ಎಲ್ಲೆಲ್ಲೋ ಆಕೆಯ ಚಿತ್ರವಿರುವ "ಮುಸ್ಲಿ ಪವರ್ ಎಕ್ಸ್ ಟ್ರಾ" ಜಾಹೀರಾತು ಕಾಣಲಾರಂಬಿಸಿತು. ಇದು ಶ್ವೇತಾ ಮೆನನ್ ಗಮನಕ್ಕೂ ಬಿದ್ದಿದ್ದೆ. ಸಹಜವಾಗಿಯೇ ಶ್ವೇತಾ ಕುಪಿತಗೊಂಡಿದ್ದಾಳೆ. ಬೆಂಗಳೂರಿನ ಬಿಎಂಟಿಸಿ ಬಸ್ ನೊಳಗೂ ಮುಸ್ಲಿ ಪವರ್ ಜಾಹೀರಾತು ನೀವು ನೋಡಿರಬಹುದು. ಅಷ್ಟೊಂದು ಜಾಹೀರಾತುಗಳನ್ನು ಪ್ರಕಟಿಸಲಾಗಿದೆ. ಈ ಕುರಿತು ಶ್ವೇತಾ ಪ್ರಕರಣ ದಾಖಲಿಸಿದಾಗ ಪೋಲಿಸರು ಮುಸ್ಲಿ ಪವರ್ ಎಕ್ಸ್ ಟ್ರಾ ಎಂಬ ಉತ್ಪನ್ನದ ತಯಾರಿಕಾ ಕಂಪನಿ ಕುನತ್ ಫಾರ್ಮಾದ ನಿರ್ದೇಶಕ ಕೆ. ಸಿ ಅಬ್ರಾಹಂ ಎಂಬಾತನನ್ನು ಬಂದಿಸಿದ್ದಾರೆ.

ಈ ಫೋಟೊವನ್ನು ಬಳಸಿದ್ದು ನಾನಲ್ಲ, ಇದರಲ್ಲಿ ನನ್ನದೇನೂ ತಪ್ಪಿಲ್ಲ ಅಂತ ಅಬ್ರಾಹಂ ಅವಲತ್ತುಕೊಂಡುಬಿಟ್ಟ. ಈ ಫೋಟೊ ಬಳಸಿರುವುದು ಜಾಹೀರಾತು ಪ್ರೊಡ್ಯುಸರ್ ಅಂತ ತಿಳಿಸಿದ್ದಾನಂತೆ. ಪೋಲಿಸರು ಹೆಚ್ಚಿನ ವಿಚಾರಣೆ ನಡೆಸಿ ಆತನನ್ನು ಬಿಡುಗಡೆ ಮಾಡಿದ್ದಾರೆ. ಈಗ ಆ ಜಾಹೀರಾತು ಪ್ರೊಡ್ಯುಸರ್ ಹುಡುಕಾಟದಲ್ಲಿರುವುದಾಗಿ ಪೋಲಿಸರು ತಿಳಿಸಿದ್ದಾರೆ.

Thursday, May 5, 2011

ಸೌಂದರ್ಯದ ಗಣಿ


ಕನ್ನಡದಲ್ಲಿ ಒಂದೊಳ್ಳೆಯ ಲಾಂಚ್ಗಾಗಿ ಕಾಯುತ್ತಿದ್ದ ಡಾ. ಜಯಮಾಲ ಮಗಳು ಸೌಂದರ್ಯಗೆ ಕೊನೆಗೂ ಅಂಥದ್ದೊಂದು ಸುವರ್ಣಾವಕಾಶ ಕನ್ನಡದಲ್ಲಿ ಬಂದಿದೆ. ಅಂದಹಾಗೆ ಸೌಂದರ್ಯ ಪಾಲಿನ ಗಾಡ್ಫಾದರ್ ಯಾರು ಅಂತೀರಾ.. ಬನ್ನಿ ಮಾತು ಕೇಳಿ..

‘ಸೌಂದರ್ಯ’ ಇದು ಕನ್ನಡದ ಹೊಸ ನಾಯಕಿಯ ಹೆಸರು. ಅಂದಹಾಗೆ ಸೌಂದರ್ಯ ಹಿರಿಯ ಸಿನಿಮಾ ತಾರೆ ಡಾ.ಜಯಮಾಲ ಅವರ ಪುತ್ರಿ. ನೂಲಿನಂತೆ ಸೀರೆ ತಾಯಿಯಂತೆ ಮಗಳು ಎಂಬ ಮಾತು ಇಲ್ಲಿ ಬಲಗೊಂಡಿದೆ. ಸೌಂದರ್ಯ ಹೇಳುವ ಜತೆಯಲ್ಲಿ ನೋಡುವುದರಲ್ಲೂ ಸಖತ್ ಬ್ಯೂಟಿಫುಲ್ ಹುಡುಗಿ. ನಯನ ಮನೋಹರವಾದ ಕಣ್ಣುಗಳು, ಅಗಲವಾದ ಮೊಗ, ತುಟಿ ಅಂಚಿನಲ್ಲಿ ಮುದ್ದು ನಗು ಎಲ್ಲವೂ ನಾಯಕಿಯ ಪಟ್ಟಕ್ಕೆ ಹೇಳಿ ಮಾಡಿಸಿದ ಪ್ರಾಡಕ್ಟ್ಗಳು. ಕನ್ನಡದಲ್ಲಿ ಒಂದೊಳ್ಳೆಯ ಲಾಂಚ್ಗಾಗಿ ಕಾಯುತ್ತಿದ್ದ ಡಾ.ಜಯಮಾಲ ಪುತ್ರಿ ಸೌಂದರ್ಯಗೆ ಕೊನೆಗೂ ಅಂಥದ್ದೊಂದು ಸುವರ್ಣಾವಕಾಶ ಕನ್ನಡದಲ್ಲಿ ಬಂದಿದೆ. ಸೌಂದರ್ಯ ಪಾಲಿಗೆ ಗಾಡ್ ಫಾದರ್ ಆಗಿರೋರು ಕನ್ನಡದ ನಿರ್ಮಾಪಕ ಕೆ. ಮಂಜು.
ನಟ ಅಜಿತ್ ಹಾಗೂ ಅಸೀನ್ ನಟಿಸಿರುವ ತಮಿಳಿನ ಚಿತ್ರ ‘ವರಲಾರು ದಿ ಗಾಡ್ಫಾದರ್’ ಕನ್ನಡದಲ್ಲಿ ‘ಗಾಡ್ಫಾದರ್’ ಆಗಿ ನಿರ್ಮಾಣವಾಗಲಿದೆ. ಚಿತ್ರದಲ್ಲಿ ಉಪೇಂದ್ರಗೆ ನಾಯಕಿಯಾಗಿ ಸೌಂದರ್ಯಗೆ ಮಂಜು ಅವಕಾಶ ಕೊಟ್ಟಿದ್ದಾರೆ. ಈ ಮೂಲಕ ಸೌಂದರ್ಯ ಕೊನೆಗೂ ಬಣ್ಣಹಚ್ಚುವಂತಾಗಿದೆ. ಸೌಂದರ್ಯ ಬಣ್ಣ ಹಚ್ಚುತ್ತಿರುವ ಸುದ್ದಿ ಕೇಳಿ ಬರುತ್ತಿರುವುದು ಇದು ಮೊದಲೇನಲ್ಲ. ಯೋಗರಾಜ್ ಭಟ್ ನಿರ್ದೇಶಿಸಬೇಕಿದ್ದ, ಪುನೀತ್ ರಾಜ್ಕುಮಾರ್ ಅಭಿನಯಿಸಬೇಕಿದ್ದ ‘ಲಗೋರಿ’ ಚಿತ್ರಕ್ಕೆ ಸೌಂದರ್ಯ ನಾಯಕಿಯಾಗಿದ್ದಾರೆ ಎಂದು ಸುದ್ದಿ ಗಾಂನಗರದಲ್ಲಿ ಹಬ್ಬಿತ್ತು. ಆದರೆ ಚಿತ್ರ ಶುರುವಾಗಲೇ ಇಲ್ಲ. ಇನ್ನು ಸೌಂದರ್ಯ, ನಟ ಯಶೋ ಸಾಗರ್ ಅಭಿನಯದ ‘ಮಿಸ್ಟರ್ ಪ್ರೇಮಿಕುಡು’ ಎಂಬ ತೆಲುಗು ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಬೇಕಿತ್ತು.
ಚಿತ್ರದ ಮುಹೂರ್ತವೂ ಆಗಿತ್ತು. ಆದರೆ, ಚಿತ್ರ ಮುಂದುವರೆಯಲಿಲ್ಲವಂತೆ. ಹೀಗಿರುವಾಗ ನಿರ್ಮಾಪಕ ಮಂಜು, ಡಾ. ಜಯಮಾಲ ಅವರಿಗೆ ಒಮ್ಮೆ ಫೋನ್ ಮಾಡಿ, ಉಪೇಂದ್ರ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಕಳುಹಿಸಿಕೊಡುತ್ತೀರಾ ಎಂದು ಕೇಳಿ ಕೊಂಡಿದ್ದರಂತೆ..ಒಳ್ಳೆಯ ಬ್ಯಾನರ್, ಚಿತ್ರ, ನಾಯಕ ... ಇಷ್ಟೆಲ್ಲಾ ಒಳ್ಳೆಯದುಗಳಿರುವಾಗ, ಮಗಳಿಗೂ ಒಳ್ಳೆಯದಾಗಬಹುದು ಎಂದು ಜಯಮಾಲ ಮಗಳು ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಮಾತು ಹೊರಬಂದಿದೆ. ಅಲ್ಲಿಗೆ ಚಿತ್ರದ ನಾಯಕಿಯರು ಯಾರು ಎಂಬ ಪ್ರಶ್ನೆಗೆ ಅರ್ಧ ಉತ್ತರ ಸಿಕ್ಕಿದೆ. ಇನ್ನೊಬ್ಬ ನಾಯಕಿ ಪಾತ್ರಕ್ಕೆ ಸಿಮ್ರಾನ್, ಭೂಮಿಕಾ ಹೆಸರು ಕೇಳಿ ಬರುತ್ತಿದೆ. ಅದರಲ್ಲಿ ಯಾರು ನಾಯಕಿಯರು ಎಂದು ಚಿತ್ರ ಆರಂಭವಾಗುವಾಗಲೇ ಗೊತ್ತಾಗಬೇಕು ಮಾರಾಯ್ರೆ.