Tuesday, March 26, 2013

ಕನ್ನಡಿಗನ ಅಂಗೈಯಲ್ಲಿ ಬಾಲಿವುಡ್‌ನ 'ಥೀಮ್' ಪಾರ್ಕ್

* ಸ್ಟೀವನ್ ರೇಗೊ, ದಾರಂದಕುಕ್ಕು ಸಿನಿಮಾ ಜಗತ್ತಿನಲ್ಲಿ ಮನರಂಜನಾ ಥೀಮ್ ಪಾರ್ಕ್ ಎನ್ನುವ ಕಲ್ಪನೆಯೇ ತೀರಾ ಹೊಸತು. ಮುಂಬಯಿ ಎನ್ನುವ ಮಹಾನಗರಿಯಲ್ಲಿ ಥೀಮ್ ಪಾರ್ಕ್ ಮಾಡುವ ಕನಸು ಕಾಣುವುದು ಅಷ್ಟೊಂದು ಸುಲಭದ ಮಾತೇ ಅಲ್ಲ. ಅದರಲ್ಲೂ ಕನ್ನಡಿಗನಂತೂ ಇಂತಹ ಕನಸು ಕಾಣಲು ಸಾಧ್ಯನಾ ಎನ್ನುವ ಪ್ರಶ್ನೆಯ ಜತೆಯಲ್ಲಿಯೇ ಉತ್ತರ ಕೂಡ ಹುಟ್ಟಿಕೊಂಡಿದೆ. ಅದೇನಪ್ಪ ಎಂದರೆ ಕರ್ನಾಟಕದ ಕರಾವಳಿಯ ಮೂಲ್ಕಿಯಿಂದ ಬಂದಿರುವ ಮನಮೋಹನ್ ಶೆಟ್ಟಿ ಈಗ ಮನರಂಜನಾ ಥೀಮ್ ಪಾರ್ಕ್ ಕಟ್ಟುವ ಕನಸು ನನಸು ಮಾಡಲು ಯತ್ನಿಸುತ್ತಿದ್ದಾರೆ. ಇದು ಬಾಲಿವುಡ್ ಮಾತ್ರವಲ್ಲ ಇಡೀ ಚಿತ್ರರಂಗದಲ್ಲಿಯೇ ಹೊಸ ಪ್ರಯತ್ನವಾಗಲಿದೆ ಅನ್ನೋದು ಮುಂಬಯಿ ಗಲ್ಲಿಯಿಂದ ಹೊರಕ್ಕೆ ಬಿದ್ದಿರುವ ಬಿಸಿಬಿಸಿ ನ್ಯೂಸ್. ಇಮೇಜಿಕಾ -ಇದು ಮನಮೋಹನ್ ಶೆಟ್ಟಿ ಕಟ್ಟುವ ಥೀಮ್ ಪಾರ್ಕ್‌ನ ಹೆಸರು. ಈ ಥೀಮ್ ಪಾರ್ಕ್‌ಗೆ ತಗಲುವ ಖರ್ಚು 1650 ಕೋಟಿ ರೂಪಾಯಿಗಳು. ಇದರ ವಿಸ್ತಾರ 300 ಎಕರೆ. ಮುಂಬಯಿ ಟು ಪುಣೆ ಎಕ್ಸ್‌ಪ್ರೆಸ್ ಹೈವೇಯ ನಡುವೆ ಸಿಗುವ ಕೋಪೋಲಿಯ ಥಾಲ್‌ಕಲ್ಪೂರಾ ಎನ್ನುವ ಪ್ರದೇಶದಲ್ಲಿ 'ಆ್ಯಡ್‌ಲ್ಯಾಬ್ಸ್ ಇಮೇಜಿಕಾ' ಎನ್ನುವ ಮನರಂಜನೆಯುಕ್ತ ಥೀಮ್ ಪಾರ್ಕ್ ಸಿದ್ಧಗೊಳ್ಳಲಿದೆ. ಒಂದು ಲೆಕ್ಕಚಾರದ ಪ್ರಕಾರ ಇದು ಚಿತ್ರನಗರಿಯಲ್ಲಿಯೇ ಅತೀ ದೊಡ್ಡ ಬಂಡವಾಳಯುಕ್ತ ಪ್ರಾಜೆಕ್ಟ್. ಐದು ವರ್ಷಗಳ ಹಿಂದೆ ಆ್ಯಡ್‌ಲ್ಯಾಬ್ಸ್ ಎನ್ನುವ ಸಂಸ್ಥೆಯನ್ನು ಮಾರಾಟ ಮಾಡಿದ ನಂತರ ಮನಮೋಹನ್ ಶೆಟ್ಟಿ ಇಷ್ಟು ಮಟ್ಟದಲ್ಲಿ ರೀ ಎಂಟ್ರಿ ಕೊಡುತ್ತಿರುವುದು ಇದು ದೊಡ್ಡ ಸವಾಲಿನ ಹಾದಿಯೇ ಸರಿ ಎನ್ನುತ್ತಾರೆ ಅವರ ಆಪ್ತರು. ಏನೇನಿರುತ್ತದೆ ? ಈ ಥೀಮ್ ಪಾರ್ಕ್‌ನ ಮೊದಲ ಹಂತ 110 ಎಕರೆಯಲ್ಲಿ ನಡೆಯಲಿದೆ. ಇದರಲ್ಲಿ 21 ಯೂನಿಕ್ ಅಟ್ರ್ಯಾಕ್ಷನ್ ಸೆಂಟರ್‌ಗಳು, 6 ರೆಸ್ಟೋರೆಂಟ್‌ಗಳು, ಲೈವ್ ಕಾರ‌್ಯಕ್ರಮಗಳಿಗೆ ವೇದಿಕೆಗಳು, 300 ಕ್ಕೂ ಅಧಿಕ ರೂಮ್‌ಗಳಿರುವ ಭರ್ಜರಿ ಹೋಟೆಲ್, ವಾಟರ್ ಪಾರ್ಕ್ ಸಿದ್ಧಗೊಳ್ಳಲಿದೆ. ಇದರಲ್ಲಿ ಹೊಸ ಮಾದರಿಯ ಸಿನಿಮಾ ಥಿಯೇಟರ್, 3ಡಿ ಚಿತ್ರಗಳಿಗೆ ಪ್ರತ್ಯೇಕ ಥಿಯೇಟರ್, 360 ಡಿಗ್ರಿಯಲ್ಲಿರುವ ಡೋಮ್ ಮಾದರಿಯ ಭಾರತದ ಮೊದಲ ಥಿಯೇಟರ್ ಇಲ್ಲಿ ಕಾಣಸಿಗಲಿದೆ. ಇಂತಹ ಥಿಯೇಟರ್‌ನಲ್ಲಿ ಸಿನಿ ಪ್ರೇಕ್ಷಕ ಕೂತರೆ ಆಗಸದಲ್ಲಿ ಹಾರುವಂತೆ ಭಾಸವಾಗುತ್ತದೆಯಂತೆ ! ಈ ಮೊದಲು ಬಾಲಿವುಡ್‌ನ ಕೆಲವೊಂದು ಚಿತ್ರಗಳಿಗೆ ಹಣ ಸುರಿದಿರುವ ಶೆಟ್ಟಿಯವರು ಇದೀಗ ಆ ಬಣ್ಣದ ಜಗತ್ತಿಗೆ ಮರಳಿ ಬಂದಿದ್ದಾರೆ. ಅದರಲ್ಲೂ ದೊಡ್ಡ ಪ್ರಾಜೆಕ್ಟ್‌ನ್ನು ಎತ್ತಿ ತಂದಿದ್ದಾರೆ. ಈ ಥೀಮ್ ಪಾರ್ಕ್‌ನ ಜತೆಗೆ ಮನಮೋಹನ್ ಶೆಟ್ಟಿ ಹಲವು ಚಿತ್ರಗಳನ್ನು ನಿರ್ಮಾಣ ಮಾಡುತ್ತಾರೆ. ಆ್ಯನಿಮೇಷನ್, ಸಾಹಸ ಪ್ರಧಾನ ಚಿತ್ರಗಳನ್ನು ಮಾಡಲು ಶೆಟ್ಟರು ಸಿದ್ಧವಾಗಿದ್ದಾರೆ. ಇವರ ದೊಡ್ಡ ಪ್ರಾಜೆಕ್ಟ್‌ಗೆ ಅವರ ಪುತ್ರಿಯರಾದ ಪೂಜಾ ಶೆಟ್ಟಿ ದೆವೋರಾ ಹಾಗೂ ಆರತಿ ಶೆಟ್ಟಿ ಸಾಥ್ ನೀಡಲಿದ್ದಾರೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಈ ಥೀಮ್ ಪಾರ್ಕ್‌ಗೆ ಚಾಲನೆ ದೊರೆಯಲಿದೆ. ಮನಮೋಹನ್ ಶೆಟ್ಟಿಯವರ ಸಹೋದರ ಮನೋಹರ್ ಶೆಟ್ಟಿ ಕೂಡ ಮನರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಮುಂಬಯಿಯಲ್ಲಿ ಕ್ಯೂ ಲ್ಯಾಬ್ಸ್ ಎನ್ನುವ ಸಂಸ್ಥೆಯನ್ನು ಕಟ್ಟಿಕೊಂಡು ಸಿನಿಮಾ ಜಗತ್ತಿಗೆ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೊಂದು ಕಡೆ ಮನೋಹರ್ ಶೆಟ್ಟಿ ಕರಾವಳಿಯಲ್ಲೂ ಕ್ಯೂ ಲ್ಯಾಬ್ ತೆರೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿ ವಿಶಿಷ್ಟ ಮಾದರಿಯ ಕ್ಯಾಮೆರಾಗಳು, ಸಂಕಲನ, ಲ್ಯಾಬ್ ಸೇರಿದಂತೆ ಸಿನಿಮಾವೊಂದಕ್ಕೆ ಬೇಕಾದ ಎಲ್ಲ ರೀತಿಯ ಸಾಮಗ್ರಿಗಳು ಲಭ್ಯವಾಗಲಿದೆ. ಈ ಮೂಲಕ ಕರಾವಳಿ ಸೇರಿದಂತೆ ಕೇರಳದ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಕಡಿಮೆ ಖರ್ಚಿನಲ್ಲಿ ಸಿನಿಮಾ ಹೊರ ತರಲು ಸಾಧ್ಯವಾಗುತ್ತದೆ. ಟೋಟಲಿ ಇಬ್ಬರೂ ಶೆಟ್ಟರು ತಮ್ಮ ಹೊಸ ಪ್ರಯತ್ನಗಳಿಂದಾಗಿ ಸಿನಿಮಾ ಲೋಕದಲ್ಲಿ ವಿಶಿಷ್ಟ ಸ್ಥಾನ ಪಡೆಯುತ್ತಿದ್ದಾರೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ. (vk lvk published my exclusive report on 27.03.2012)

Monday, March 25, 2013

ವಿಕದ ಬಲು ಅಪರೂಪದ ಎಡಿಟರ್ ರಾಘವನ್ !

ಎರಡು ವರ್ಷದ ಹಿಂದಿನ ಮಾತು. ಈ.ರಾಘವನ್ ಎನ್ನುವ ಹಿರಿಯ ಪತ್ರಕರ್ತ ಕನ್ನಡದ ನಂಬರ್ ವನ್ ಪತ್ರಿಕೆ ವಿಜಯ ಕರ್ನಾಟಕದ ಸಂಪಾದಕರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ ಎನ್ನುವ ಮಾಹಿತಿ ಹೊತ್ತ ಕಂಪನಿಯ ಇಮೇಲ್ ನನ್ನ ಇನ್ ಬಾಕ್ಸ್ ನಲ್ಲಿ ಕೂತಿದ್ದಾಗ ನನಗೆ ಮಾತ್ರವಲ್ಲ ಲಕ್ಷಾಂತರ ಓದುಗ ಬಂಧುಗಳಿಗೂ ರಾಘವನ್ ಸರ್ ಪರಿಚಯವೇ ಇಲ್ಲ. ಟೈಮ್ಸ್ ಕಂಪನಿಯ ಇಟಿ( ಎಕಾನಮಿಕ್ಸ್ ಟೈಮ್ಸ್) ನಲ್ಲಿ ದುಡಿದು ಬಂದ ಹಿರಿಯ ಪತ್ರಕರ್ತ ಎನ್ನುವ ಪುಟ್ಟ ಮಾಹಿತಿ ಬಿಟ್ಟರೆ ಬೇರೆನೂ ಇರಲಿಲ್ಲ. ಅವರು ಬರುವ ಕಾಲದಲ್ಲಿ ವಿಕದಲ್ಲಿ ಬದಲಾವಣೆಯ ಪರ್ವ ಕಾಣಿಸಿಕೊಂಡಿತ್ತು. ಈ ಪರಿಸ್ಥಿತಿಯಲ್ಲಿ ರಾಘವನ್ ಸರ್ ಮುಂದೆ ಬೆಟ್ಟದಷ್ಟೂ ಸವಾಲುಗಳು ಎದುರಿಗಿತ್ತು. ಆದರೆ ಅವರು ನಂಬಿದ್ದು ವಿಕದಲ್ಲಿರುವ ಯುವಕರ ಪಡೆಯನ್ನು ಬರುವಾಗಲೇ ಯುವಘರ್ಜನೆ ಎನ್ನುವ ಯುವ ಸಾಧಕರ ಸಾಧನೆಯ ಆಂದೋಲನವನ್ನು ಪತ್ರಿಕೆಯಲ್ಲಿ ತಂದರು. ನೆನಪಿನ ಬುಟ್ಟಿಯಲ್ಲಿ ತೆಗೆದು ನೋಡಿದರೆ ಕರಾವಳಿ ಭಾಗದಿಂದ ನನ್ನ ೧೫ಕ್ಕೂ ಹೆಚ್ಚು ಯುವಕರ ಸಾಧನೆಯ ಮಾಲಿಕೆಯನ್ನು ವಿಕದಲ್ಲಿ ಪ್ರಕಟಿಸುವ ಮೂಲಕ ನನಗೆ ರಾಜ್ಯಮಟ್ಟದಲ್ಲಿ ಒಳ್ಳೆಯ ಹೆಸರು ತಂದು ಕೊಟ್ಟಿದ್ದರು. ಪದೇ ಪದೇ ಅವರಿಂದ ಬರುತ್ತಿದ್ದ ಸ್ಪೂರ್ತಿಯ ಮಾತುಗಳು ನನ್ನ ವಿಕದ ಬೆಳವಣಿಗೆಯಲ್ಲಿ ಒಂದು ಅದ್ಬುತವಾದ ಮೈಲಿಗಲ್ಲು ಎಂದೇ ನಾನು ವೃತ್ತಿ ಪತ್ರಕರ್ತನಾಗಿ ಭಾವಿಸಿದ್ದೇನೆ. ಎರಡು ವರ್ಷದ ಇಂದಿನ ಮಾತು.. ವಿಜಯಕರ್ನಾಟಕ ದಿನಪತ್ರಿಕೆಯ ಈ ಹಿಂದಿನ ಸಂಪಾದಕರಾಗಿದ್ದ ಈ. ರಾಘವನ್ ಅವರು ತೀರಿಕೊಂಡು ಇಂದಿಗೆ ಒಂದು ವರ್ಷ. ಈ.ರಾಘವನ್ ನಾನು ಪ್ರತಿ ದಿನ ನೆನಪಿಸುವ ಒಳ್ಳೆಯ ಸಂಪಾದಕರಲ್ಲಿ ಒಬ್ಬರು. ಅವರು ನಿಧನರಾಗುವ ಒಂದು ದಿನ ಮೊದಲು ನನಗೆ ಪ್ರಶಸ್ತಿ ಬಂದ ಕುರಿತು ದೂರವಾಣಿಯಲ್ಲಿ ಮಾತನಾಡಿದ್ದೆ. ೨೦೧೨ರಲ್ಲಿ ದಕ್ಷಿಣ ಕನ್ನಡ ಪತ್ರಕರ್ತರ ಸಂಘ ನೀಡುವ ಪ. ಗೋ ಪ್ರಶಸ್ತಿ ಕುರಿತು ಅವರು ಹೇಳಿದಿಷ್ಟು: ಪ.ಗೋ ಹಾಗೂ ನಾನು ಬಹಳ ಒಳ್ಳೆಯ ಗೆಳೆಯರಾಗಿದ್ದೇವು.. ಚಹಾ ಕುಡಿಯಲು ರಾಘವನ್ ಅವರು ಪ. ಗೋ ಮನೆಗೆ ಹೋಗುತ್ತಿದ್ದ ಕತೆ, ಜತೆಗೆ ಅವರ ಪ್ರಾಮಾಣಿಕತೆಯ ಕುರಿತು ನನ್ನ ಜತೆ ಮಾತನಾಡಿದ್ದರು. ಬೆಂಗಳೂರಿನಂತಹ ವಿಕ ಮಾಧ್ಯಮ ಸಮುದ್ರದಲ್ಲಿ ಸ್ವಾತಂತ್ರ್ಯವಾಗಿ ನನಗೆ ಈಜಾಲು ಬಿಟ್ಟ ರಾಘವನ್ ಸರ್... ನನಗೆ ಯಾವಾಗಲೂ ಸ್ಪೂರ್ತಿಯ ಚಿಲುಮೆ. ಇಂತಹ ರಾಘವನ್ ಮತ್ತೆ ಹುಟ್ಟಿ ಮಾಧ್ಯಮಕ್ಕೆ ಬರಬೇಕು ಎನ್ನೋದು ನನ್ನ ಆಶಯ.

Wednesday, March 20, 2013

ಕೊಚ್ಚಿಯ ಹುಡುಗರು ಕಟ್ಟಿದ ‘ಕ್ರಾಸ್ ಟಾಕ್’ !

ಕೊಚ್ಚಿಯ ಹುಡುಗರು ಕ್ರಾಸ್ ಟಾಕ್ ಎನ್ನುವ ಬ್ಯಾಂಡ್‌ವೊಂದನ್ನು ಕಟ್ಟಿಕೊಂಡು ಊರೂರು ಸುತ್ತಾಡಿ ಧರ್ಮ, ಸಂಸ್ಕೃತಿ, ಆಚಾರ- ವಿಚಾರ ಮೊದಲಾದ ವಿಚಾರಗಳಲ್ಲಿ ಹಾಡುಗಳನ್ನು ಹಾಡುತ್ತಾ ಜಾಗೃತಿಯ ಕಿಚ್ಚು ಹತ್ತಿಸುತ್ತಿದ್ದಾರೆ. * ಸ್ಟೀವನ್ ರೇಗೊ, ದಾರಂದಕುಕ್ಕು ಇಂದಿನ ಯುವಜನತೆ ದಾರಿ ತಪ್ಪುತ್ತಿದೆ ಎನ್ನುವ ಮಾತುಗಳು ನಾಮಪಲಕದಂತೆ ಕಣ್ಣ ಮುಂದೆ ಬಂದು ಕುಣಿಯುತ್ತದೆ. ಆಧುನಿಕ ತಂತ್ರಜ್ಞಾನದ ಒಡಲಿನಲ್ಲಿ ಸಿಕ್ಕಿಕೊಂಡಿರುವ ಯುವನಜತೆ ಫೇಸ್ ಬುಕ್, ಇಂಟರ್‌ನೆಟ್ ಅದರಲ್ಲೂ ಸಮಯ ಉಳಿದುಬಿಟ್ಟರೆ ಕ್ಲಬ್, ಪಾರ್ಟಿಯಲ್ಲಿ ರಂಗೇರಿಸುವ ಪರಿಯಂತೂ ಸಾಮಾನ್ಯವಾಗಿ ಕಣ್ಣಿಗೆ ಕಾಣುತ್ತಾ ಸಾಗುತ್ತಿದೆ. ಆದರೆ ಇದಕ್ಕೆಲ್ಲ ಅಪವಾದ ಎನ್ನುವಂತೆ ಕೊಚ್ಚಿಯ ಯುವಕರು ಹೊಸ ಹಾದಿಯಲ್ಲಿ ಸಾಗಿದ್ದಾರೆ. ತಮ್ಮದೇ ಕ್ರಾಸ್ ಟಾಕ್ ಎನ್ನುವ ಬ್ಯಾಂಡ್‌ವೊಂದನ್ನು ಕಟ್ಟಿಕೊಂಡು ಊರೂರು ಸುತ್ತಾಡಿ ಧರ್ಮ, ಸಂಸ್ಕೃತಿ, ಆಚಾರ- ವಿಚಾರ ಮೊದಲಾದ ವಿಚಾರಗಳಲ್ಲಿ ಹಾಡುಗಳನ್ನು ಹಾಡುತ್ತಾ ಜಾಗೃತಿಯ ಕಿಚ್ಚು ಹತ್ತಿಸುತ್ತಿದ್ದಾರೆ. ಅಂದಹಾಗೆ ‘ಕ್ರಾಸ್ ಟಾಕ್’ ಇದು ಕೊಚ್ಚಿಯ ಹುಡುಗರು ಕಟ್ಟಿದ ವಿನೂತನ ಬ್ಯಾಂಡ್. ಇಲ್ಲಿ ನಾನಾ ವೃತ್ತಿಯಲ್ಲಿರುವ ೨೦ಕ್ಕೂ ಹೆಚ್ಚಿನ ಯುವಕ- ಯುವತಿಯರು ತಂಡದ ಸದಸ್ಯರು. ಅಮೆರಿಕ ಸೇರಿದಂತೆ ವಿಶ್ವದಲ್ಲಿರುವ ಕೆಲವೊಂದು ಕ್ರೈಸ್ತ ಧರ್ಮ ಪಾಲಿಸುತ್ತಿರುವ ರಾಷ್ಟ್ರಗಳಲ್ಲಿ ಇಂತಹ ಬ್ಯಾಂಡ್‌ಗಳು ಸಾಮಾನ್ಯವಾಗಿ ಕಾಣ ಸಿಗುತ್ತದೆ. ಆದರೆ ಭಾರತ ಹಲವು ಧರ್ಮಗಳ ತಾಣ. ಇಲ್ಲಿ ಇಂತಹ ಬ್ಯಾಂಡ್‌ಗಳು ಕಾಣ ಸಿಗುವುದು ತೀರಾ ವಿರಳ. ಅದರಲ್ಲೂ ಯುವಜನತೆಯೇ ಬ್ಯಾಂಡ್ ಕಟ್ಟಿಕೊಂಡು ಮುನ್ನಡೆಯುವುದು ಬಹಳ ಅಪರೂಪ. ಇದಕ್ಕೆ ಜೀವಂತ ಉದಾಹರಣೆ ಕ್ರಾಸ್ ಟಾಕ್. ಕ್ರಾಸ್ ಟಾಕ್ ನಲ್ಲಿ ಏನಿದೆ ?: ಕೊಚ್ಚಿಯಲ್ಲಿ ಹುಟ್ಟಿರುವ ಈ ಕ್ರಾಸ್ ಟಾಕ್‌ನಲ್ಲಿ ಬೈಬಲ್ ಆಧಾರಿತ ಉಪದೇಶ, ಸಂದೇಶಗಳನ್ನು ಯುವಜನತೆಗೆ ಪಾಶ್ಚಿಮಾತ್ಯ ಸಂಗೀತದ ಮೂಲಕ ಹರಡುವ ಕೆಲಸ ನಡೆಯುತ್ತಿದೆ. ಭಾರತೀಯ ಸಂಗೀತ ಹಾಗೂ ಪಾಶ್ಚಿಮಾತ್ಯದ ಸಂಗೀತದ ಮಿಳಿತದಿಂದ ಕೂಡಿದ ಬೈಬಲ್ ಗೆ ಸಂಬಂಧಪಟ್ಟ ಹಾಡುಗಳು ಈ ಯುವಕರ ತಂಡ ಹಾಡುತ್ತಿದೆ. ಅಂದಹಾಗೆ ಕ್ರಾಸ್ ಟಾಕ್ ಎನ್ನುವ ಪದ ಬೈಬಲ್‌ಗೆ ಸಂಬಂಧಪಟ್ಟದ್ದು ಕ್ರಾಸ್ ಎಂದರೆ ಶಿಲುಬೆ. ಟಾಕ್ ಎಂದರೆ ಕ್ರೈಸ್ತನ ಸಿದ್ಧಾಂತ ಎನ್ನುವುದು ಈ ಬ್ಯಾಂಡ್‌ನ ನಿಜಾರ್ಥ ಎನ್ನುತ್ತಾರೆ ತಂಡದ ಸಂಚಾಲಕ ಸೀಜೀನ್ ಥಾಮಸ್. ಆಧ್ಯಾತ್ಮಿಕ ಜಗತ್ತಿನಲ್ಲಿ ವಿಶೇಷ ಅನುಭವ ಹಾಗೂ ಕ್ರೈಸ್ತನ ಕುರಿತು ಜಾಗೃತಿ ನೀಡುವಂತಹ ಹಾಡುಗಳನ್ನು ಯುವಜನತೆಗೆ ಕೇಳಿಸುವ ಮೂಲಕ ಅವರಲ್ಲಿರುವ ಧರ್ಮದ ಕುರಿತಾಗಿ ಇರುವ ಗೊಂದಲಗಳನ್ನು ನಿವಾರಿಸಿ, ಹೊಸ ಬೆಳಕು ನೀಡುವಂತಹ ಕೆಲಸ ಈ ಬ್ಯಾಂಡ್ ನಿಂದ ನಡೆಯುತ್ತಿದೆ ಎನ್ನೋದು ಸೀಜೀನ್ ಥಾಮಸ್ ಮಾತು. ೨೦೦೭ರಲ್ಲಿ ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್‌ನಿಂದ ಪ್ರೇರಿತಗೊಂಡ ಕೊಚ್ಚಿಯ ಹುಡುಗರು ತಮ್ಮ ನಾನಾ ವೃತ್ತಿಗಳ ಜತೆಯಲ್ಲಿ ತಮ್ಮ ಉಳಿಕೆಯ ಅವಧಿಗಳಲ್ಲಿ ಇಂತಹ ತಂಡ ಕಟ್ಟಲು ಕಾರಣವಾಯಿತು ಎನ್ನುತ್ತದೆ ಕ್ರಾಸ್ ಟಾಕ್‌ನ ಇತಿಹಾಸ. ಅಲ್ಲಿಂದ ಈ ಯುವಕರ ಕ್ರಾಸ್ ಟಾಕ್ ಚೆನ್ನೈ, ಬೆಂಗಳೂರು, ಹೈದರಾಬಾದ್, ಕೊಚ್ಚಿನ್ ಸೇರಿದಂತೆ ದೇಶ- ವಿದೇಶದಲ್ಲಿ ಸಂಗೀತ ಕಾರ‍್ಯಕ್ರಮಗಳನ್ನು ನೀಡುತ್ತಿದೆ. ಟೋಟಲಿ ಆಧ್ಯಾತ್ಮಿಕದ ಒಲುವು ಹೆಚ್ಚಿಸುವ ಇಂತಹ ತಂಡದ ಕಾರ‍್ಯಕ್ರಮವೊಂದನ್ನು ಮಿಸ್ ಮಾಡದೇ ನೋಡಬೇಕು ಎನ್ನೋದು ಕ್ರಾಸ್ ಟಾಕ್‌ನ ಸೆಳೆತಕ್ಕೆ ಸಿಕ್ಕಿರುವ ಅಭಿಮಾನಿಗಳ ಗಟ್ಟಿ ಮಾತು. ... ಚಿತ್ರ : ಸುಧಾಕರ ಎರ್ಮಾಳ್ ......

Sunday, March 17, 2013

ಯುವಕರು ತಯಾರಿಸಿದ ತಂತ್ರಜ್ಞಾನ: ಆಂಡ್ರಾಯ್ಡ್ ಮೊಬೈಲ್‌ನಲ್ಲಿ ಬೈಬಲ್!

ಮಂಗಳೂರು: ಬದಲಾವಣೆ ಎನ್ನುವುದು ಕೆಥೋಲಿಕ್ ಕ್ರೈಸ್ತ ಸಮುದಾಯಕ್ಕೆ ತೀರಾ ಹತ್ತಿರಕ್ಕೆ ಮುಟ್ಟುವ ಪದವಾಗಿ ಸೇರಿಕೊಳ್ಳುತ್ತದೆ. ಇದಕ್ಕೊಂದು ತಾಜಾ ಉದಾಹರಣೆ ಎನ್ನುವಂತೆ ಕೆಥೋಲಿಕ್ ಚರ್ಚ್‌ಗಳು ತಂತ್ರಜ್ಞಾನದ ಜತೆಯಲ್ಲಿ ಕೈ ಜೋಡಿಸಿಕೊಂಡು ಮುನ್ನಡೆಯಲು ನಿರ್ಧಾರ ಮಾಡಿದೆ. | ಮೊಬೈಲ್‌ನಲ್ಲಿ ಆಂಡ್ರಾಯ್ಡಾ ತಂತ್ರಜ್ಞಾನ ಹೊಂದಿದ ಕೆಥೋಲಿಕ್ ಬಂಧುಗಳು ಕೊಂಕಣಿ ಭಾಷೆಯ ಬೈಬಲ್‌ನ್ನು ಸರಾಗವಾಗಿ ಓದುವಂತೆ ಯುವಕರ ತಂಡವೊಂದು ತಂತ್ರಜ್ಞಾನವನ್ನು ರೂಪಿಸಿದ್ದಾರೆ. ಅಂದ ಹಾಗೆ ಸದ್ಯಕ್ಕೆ ಉಚಿತವಾಗಿ ಈ ತಂತ್ರಜ್ಞಾನವನ್ನು ಗೂಗಲ್‌ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು. ತಂತ್ರಜ್ಞಾನ ಶೋಧಿಸಿದ ತಂಡದಲ್ಲಿರುವ ಜೀಸಸ್ ಯೂತ್ ಸದಸ್ಯ ಆನಿಲ್ ಡಿ ಸೋಜ ಹೇಳುವಂತೆ : ಈ ತಂತ್ರಜ್ಞಾನದಿಂದಾಗಿ ದೇಶ- ವಿದೇಶದಲ್ಲಿರುವ ಕೆಥೋಲಿಕ್ ಕೊಂಕಣಿ ಭಾಷಿಗರು ತಮ್ಮ ಭಾಷೆಯ ಬೈಬಲನ್ನು ಸುಲಭದಲ್ಲಿಯೇ ಅರಿತುಕೊಂಡು ಓದಬಹುದು. ಈ ಮೂಲಕ ಕೊಂಕಣಿ ಭಾಷೆಯಲ್ಲಿ ಇನ್ನಷ್ಟೂ ತಂತ್ರಜ್ಞಾನಗಳ ಆವಿಷ್ಕಾರಕ್ಕೆ ಕೂಡ ಇದು ದಾರಿ ಮಾಡಿಕೊಡುತ್ತದೆ ಎನ್ನುತ್ತಾರೆ ಅವರು. ಇಂತಹ ತಂತ್ರಜ್ಞಾನದ ಶೋಧನಾ ಕಾರ್ಯದಲ್ಲಿ ಮಂಗಳೂರು ಕೆಥೋಲಿಕ್ ಧರ್ಮಪ್ರಾಂತ್ಯದ ಮಂಗಳೂರು ಕೆನರಾ ಕಮ್ಯೂನಿಕೇಶನ್ ಸೆಂಟರ್‌ನ ಮುಖ್ಯಸ್ಥ ಫಾ. ವಿಜಯ್ ವಿಕ್ಟರ್ ಲೋಬೋ, ಜೀಸಸ್ ಯೂತ್ ಮಂಗಳೂರಿನ ಸೂರಜ್ ನೊರನ್ಹೋ, ತಂತ್ರಜ್ಞಾನದಲ್ಲಿ ಕೋಡ್ ಗಳ ಬೆಳವಣಿಗೆ ಕಾರಣಕರ್ತರಾದ ಹೈದರಾಬಾದ್‌ನ ಕೆನ್. ಎಂ. ರಾಜು, ಜೋಸಫ್ ಥಾಮಸ್, ಶಿಬು ದೇವ್‌ಶೀಯಾ ಎಲ್ಲರ ಶ್ರಮದಿಂದ ಈ ತಂತ್ರಜ್ಞಾನ ರೂಪುಗೊಂಡಿದೆ. ಐಪೋನ್,ಐಪ್ಯಾಡ್ ಹಾಗೂ ವಿಂಡೋಸ್‌ಗಳಲ್ಲಿ ಈ ತಂತ್ರಜ್ಞಾನದಲ್ಲಿ ಬರುವ ತಿಂಗಳಿನಿಂದ ಲಭ್ಯವಾಗುತ್ತದೆ. ಕೆಥೋಲಿಕ್‌ರ ಪವಿತ್ರ ತಿಂಗಳಲ್ಲಿ ಈ ತಂತ್ರಜ್ಞಾನವನ್ನು ಬಿಡುಗಡೆ ಮಾಡುವ ಕುರಿತು ಯೋಚನೆ ಮಾಡಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈಗ ಸದ್ಯಕ್ಕೆ ಆ್ಯಂಡ್ರಾಯ್ಡಾ ಮೊಬೈಲ್‌ಗಳಲ್ಲಿ ಮಾತ್ರ ಈ ತಂತ್ರಜ್ಞಾನ ಬಳಸಿಕೊಂಡು ಕೊಂಕಣಿ ಬೈಬಲ್ ಓದಬಹುದು ಎನ್ನುವುದು ಅನಿಲ್ ಡಿಸೋಜ ಅವರ ಮಾತು. ಕೆನರಾ ಕಮ್ಯೂನಿಕೇಶನ್ ಸೆಂಟರ್‌ನ ಫಾ. ವಿಜಯ್ ವಿಕ್ಟರ್ ಲೋಬೋ ಅವರು ಹೇಳುವಂತೆ : ಈ ತಂತ್ರಜ್ಞಾನದಲ್ಲಿ ಬರೀ ಬೈಬಲ್ ಓದುವ ಜತೆಯಲ್ಲಿ ಹಿನ್ನೆಲೆ ಸಂಗೀತ, ಕೊಂಕಣಿ ಕೀ- ಬೋರ್ಡ್, ಬುಕ್ ಮಾರ್ಕ್, ಕೊಂಕಣಿ ಸರ್ಚ್ ಎಂಜಿನ್‌ಗಳನ್ನು ಕೂಡ ಜೋಡಿಸಲಾಗಿದೆ. ಕೊಂಕಣಿಯ ಅಪರೂಪದ ಪದಗಳನ್ನು ಈ ಸರ್ಚ್ ಎಂಜಿನ್‌ಗಳಲ್ಲಿ ಹಾಕಿ ಹುಡುಕಾಟ ಮಾಡಬಹುದು. ಇದೊಂದು ಬೈಬಲ್ ಸ್ಟಡಿ ಟೂಲ್‌ನಂತೆ ಕೆಲಸ ಮಾಡಲಿದೆ ಎನ್ನುವುದು ಅವರು ಮಾತು. ಕೆಥೋಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರ ಬಳಿಯಲ್ಲಿ ಈ ತಂತ್ರಜ್ಞಾನದ ಕುರಿತು ಹೇಳಿದಾಗ ಅವರು ಬಹಳ ಸಂತಸದಿಂದ ಇಂತಹ ಕೆಲಸ ನಡೆಯಲಿ ಎಂದು ಯುವಕರ ಬೆನ್ನು ತಟ್ಟಿ ಹುರಿದುಂಬಿಸಿದರು. ಯುವಜನತೆಯಲ್ಲಿ ದೇವರ ಕುರಿತು ಪ್ರೀತಿ ಹೆಚ್ಚಿಸುವಲ್ಲಿ ಬಿಷಪ್‌ರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಆಂಗ್ಲ ಭಾಷೆಯಲ್ಲಿರುವ ಬೈಬಲನ್ನು ಕೊಂಕಣಿಗೆ ಅನುವಾದ ಮಾಡಿರುವ ಫಾ. ವಿಲಿಯಂ ಬಾರ್ಬೋಜಾ ಅವರ ಕೊಂಕಣಿ ಬೈಬಲ್ ಈಗ ಮೊಬೈಲ್ ಆಂಡ್ರಾಯ್ಡಾ ನಲ್ಲಿ ನಿರರ್ಗಳವಾಗಿ ಓದಬಹುದು ಎನ್ನುತ್ತಾರೆ ಫಾ. ವಿಜಯ್ ಲೋಬೋ. ಕೊಂಕಣಿ ಬೈಬಲ್‌ನಲ್ಲಿ ಈಗ ಹೊಸ ಹಾಗೂ ಹಳೆಯ ಒಡಂಬಡಿಕೆ ಎರಡು ಕೂಡ ಲಭ್ಯವಾಗಲಿದೆ. ಅದರ ಜತೆಯಲ್ಲಿ ತಂತ್ರಜ್ಞಾನದಲ್ಲಿ ಇನ್ನಷ್ಟೂ ಬದಲಾವಣೆಗಳನ್ನು ದಾಖಲಿಸುವ ಕೆಲಸ ಕೂಡ ನಡೆಯುತ್ತಿದೆ. ಈಗಾಗಲೇ ಮಲಯಾಳಂ, ಹಿಂದಿ, ತೆಲುಗು, ಕೊಂಕಣಿಯಲ್ಲಿ ಇಂತಹ ತಂತ್ರಜ್ಞಾನವನ್ನು ರೂಪಿಸಿದ್ದೇವೆ. ಅದಕ್ಕಾಗಿ ಪ್ರತ್ಯೇಕ ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದೇವೆ ಎನ್ನುವುದು ಹೈದರ್‌ಬಾದ್‌ನ ಶಿಬು ಅವರ ಮಾತು. ಟೋಟಲಿ ಯುವಕರ ಪುಟ್ಟ ಕೆಲಸ ಆಂಡ್ರಾಯ್ಡಾ ಮೊಬೈಲ್ ಹೊಂದಿರುವ ಕೊಂಕಣಿ ಕ್ರೈಸ್ತ ಬಂಧುಗಳಿಗಂತೂ ವರದಾನವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Saturday, March 16, 2013

ಸರಳತೆಯ ಪಡಿಯಚ್ಚು ಪೋಪ್ ಫ್ರಾನ್ಸಿಸ್

* ಸ್ಟೀವನ್ ರೇಗೊ, ದಾರಂದಕುಕ್ಕು ಜಗತ್ತಿನ ಹೊಸ ಭಾಗದಿಂದ ಪೋಪ್‌ರನ್ನು ಆಯ್ಕೆ ಮಾಡುವ ಮೂಲಕ ರೋಮನ್ ಕೆಥೋಲಿಕ್ ಚರ್ಚ್‌ನ ಕಾರ್ಡಿನಲ್‌ಗಳು ಬದಲಾವಣೆಯ ಬಲವಾದ ಸಂದೇಶವನ್ನು ರವಾನಿಸಿದ್ದಾರೆ. ಚರ್ಚ್‌ನ ಭವಿಷ್ಯ ಭೂಮಂಡಲದ ದಕ್ಷಿಣ ಭಾಗದಲ್ಲಿದೆ ಹಾಗೂ ಜನ ಸಾಮಾನ್ಯರೊಂದಿಗೆ ಸಂಪರ್ಕ ಹೊಂದಿರುವ ವಿದ್ವಾಂಸರೊಬ್ಬರು ಧರ್ಮದ ಅನುಯಾಯಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದು ನೂತನ ಪೋಪ್ ಫ್ರಾನ್ಸಿಸ್ ಅವರ ಆಯ್ಕೆಯೇ ಹೇಳ ಹೊರಟಿದೆ. ಪದೇ ಪದೇ ಬದಲಾವಣೆಯ ಜತೆಯಲ್ಲಿ ರಾಜಿ ಮಾಡಿಕೊಳ್ಳುವಿಕೆ ಕ್ರೈಸ್ತ ಸಮುದಾಯದಲ್ಲಿ ಸಾಮಾನ್ಯವಾದ ಮಾತು. ಹೊಸ ವರ್ಷದ ಆರಂಭದಲ್ಲಿಯೇ ಕ್ರೈಸ್ತ ಧರ್ಮದ ಪರಮೋಚ್ಚ ಗುರು ಪೋಪ್ ಬೆನೆಡಿಕ್ಟ್ ೧೬ ಅವರು ತಾನು ಪೋಪ್ ಪದವಿಗೆ ರಾಜೀನಾಮೆ ನೀಡುತ್ತೇನೆ ಎನ್ನುವ ನಿರ್ಧಾರದಿಂದ ಆರಂಭಗೊಂಡ ಬದಲಾವಣೆಯ ಪರ್ವ ಈಗ ಹೊಸ ಪೋಪ್‌ಗಳ ಆಗಮನದ ವರೆಗೂ ಮುಂದುವರಿದಿದೆ. ಅದರಲ್ಲೂ ಪೋಪ್ ಬೆನೆಡಿಕ್ಟ್ ೧೬ ತಮ್ಮ ಪೋಪ್ ಪದವಿಗೆ ರಾಜೀನಾಮೆ ನೀಡಿದ ಘಟನೆ ಬರೀ ಕ್ರಿಶ್ಚಿಯನ್ ಸಮುದಾಯಕ್ಕೆ ಮಾತ್ರವಲ್ಲ ವಿಶ್ವದ ಪ್ರಮುಖ ಧರ್ಮಗಳ ಮುಖಂಡರಿಗೂ ಶಾಕಿಂಗ್ ಸುದ್ದಿ. ವಿಶ್ವದಲ್ಲಿರುವ ೧.೫ ಬಿಲಿಯನ್ ರೋಮನ್ ಕೆಥೋಲಿಕರಿಗೆ ಪೋಪ್ ರಾಜೀನಾಮೆಯಿಂದ ಉಂಟಾದ ಕಸಿವಿಸಿಗೆ ನೂತನ ಪೋಪ್‌ಗಳ ಆಯ್ಕೆಯ ಮೂಲಕ ಮದ್ದು ಸಿಕ್ಕಿದೆ. ರೋಮನ್ ಕೆಥೋಲಿಕ್( ಆರ್‌ಸಿ)ಯ ಕೋಡ್ ಆಫ್ ಕ್ಯಾನೋನ್ ಲಾ ಕುರಿತಾಗಿ ಚರ್ಚ್‌ಗಳ ಧರ್ಮಗುರುಗಳಿಗೆ ಮಾತ್ರ ಗೊತ್ತಿರುವ ಸತ್ಯ ಈಗ ಜಗತ್ತು ಅರಿತು ಬಿಟ್ಟಿದೆ. ವಿಶ್ವದ ಕೆಥೋಲಿಕ್ ಕ್ರಿಶ್ಚಿಯನ್ ಸಮುದಾಯದ ನೂತನ ಪೋಪ್ ಆಗಿ ಅರ್ಜೆಂಟೀನಾದ ಜಾರ್ಜ್ ಮಾರಿಯೋ ಬರ್ಗೋಗ್ಲಿಯೊ ಅವರ ಆಯ್ಕೆ ನಿಜಕ್ಕೂ ಅಚ್ಚರಿಯ ಬೆಳವಣಿಗೆ. ಬರ್ಗೋಗ್ಲಿಯೊ ಅವರು ಲ್ಯಾಟಿನ್ ಅಮೆರಿಕ ಪ್ರದೇಶದಿಂದ ಆಯ್ಕೆಯಾದ ಮೊದಲ ಪೋಪ್. ಅದರಲ್ಲೂ ಸೊಸೈಟಿ ಆಫ್ ಜೀಸಸ್( ಎಸ್‌ಜೆ) ಎನ್ನುವ ಮೇಳದಿಂದ ಬಂದ ಧರ್ಮಗುರು. ಅಷ್ಟೇ ಅಲ್ಲ ಕಳೆದ ಒಂದು ಶತಮಾನದಲ್ಲಿ ಯೂರೋಪಿನ ಹೊರಗಿನವರೊಬ್ಬರನ್ನು ಪೋಪ್ ಆಗಿ ಆಯ್ಕೆ ಮಾಡುತ್ತಿರುವುದು ಕೂಡಾ ಇದೇ ಮೊದಲು. ಕಳೆದ ಬಾರಿ ಪೋಪ್ ಸ್ಥಾನಕ್ಕೆ ಆಯ್ಕೆ ನಡೆದ ಸಂದರ್ಭದಲ್ಲಿ ಪೋಪ್ ಬೆನೆಡಿಕ್ಟ್ ೧೬ ಅವರ ಜತೆಯಲ್ಲಿ ಜಾರ್ಜ್ ಅವರ ಹೆಸರು ಜೋರಾಗಿ ಕೇಳಿ ಬಂದಿತ್ತು. ಆದರೆ ೨ನೇ ಪೋಪ್ ಜಾನ್ ಪೌಲ್ ಅವರ ಜತೆಯಲ್ಲಿ ತೀರಾ ಹತ್ತಿರದ ಒಡನಾಟ ಇರುವ ಬೆನೆಡಿಕ್ಟ್ ೧೬ ಅವರಿಗೆ ಪೋಪ್ ಪದವಿ ಒಲಿದಿತ್ತು. ಪೋಪ್ ಬೆನೆಡಿಕ್ಟ್ ೧೬ ಪೋಪ್ ಪದವಿಗೆ ತಕ್ಕ ವ್ಯಕ್ತಿ ಎಂದು ಕಾರ್ಡಿನಲ್‌ಗಳು ಮತ ಚಲಾಯಿಸಿದ್ದರು. ಜತೆಗೆ ಜಾರ್ಜ್ ಮಾರಿಯೋ ತುಂಬಾನೇ ಮೃದು ಸ್ವಭಾವದ ವ್ಯಕ್ತಿ ಎನ್ನುವ ಕಾರಣಕ್ಕೆ ಅವರನ್ನು ಪೋಪ್ ಹುದ್ದೆಯಿಂದ ಕಾರ್ಡಿನಲ್‌ಗಳು ದೂರ ಇಟ್ಟಿದ್ದರು. ಆದರೆ ವಿಚಿತ್ರ ಎಂದರೆ ಅಮೆರಿಕದ ಪ್ರಮುಖ ಇಬ್ಬರು ಕಾರ್ಡಿನಲ್ ಈ ಬಾರಿ ಪೋಪ್ ಪದವಿಗೆ ಪೈಪೋಟಿ ನೀಡುತ್ತಾರೆ ಎಂದು ವ್ಯಾಟಿಕನ್ ನ ಮೂಲಗಳು ತಿಳಿಸಿತ್ತು. ಆದರೆ ಜಾರ್ಜ್ ಮಾರಿಯೋ ಹೆಸರು ಮಾತ್ರ ಎಲ್ಲಿಯೂ ಕೇಳಿ ಬಂದಿರಲಿಲ್ಲ. ಅವರಿಗೆ ಹೆಚ್ಚು ವಯಸ್ಸಾಗಿರುವುದರಿಂದ ಅವರ ಹೆಸರನ್ನು ಆ ಸ್ಥಾನಕ್ಕೆ ಕಾರ್ಡಿನಲ್‌ಗಳ ಸಭೆ ಪರಿಗಣಿಸುವುದಿಲ್ಲ ಎಂದು ನಂಬಲಾಗಿತ್ತು. ಹಾಗೆಯೇ ಯೂರೋಪಿನ ಹೊರಗಿನವರೊಬ್ಬರನ್ನು ಪೋಪ್ ಸ್ಥಾನಕ್ಕೆ ಕಾರ್ಡಿನಲ್‌ಗಳ ಸಭೆ ಆಯ್ಕೆ ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಚರ್ಚಿನ ಬಗ್ಗೆ ಆಕರ್ಷಣೆ ಕಡಿಮೆಯಾಗುತ್ತಿರುವ ಯೂರೋಪಿನ ಬದಲಾಗಿ ಧಾರ್ಮಿಕ ಬದ್ಧತೆ ಹೆಚ್ಚು ಇರುವ ಲ್ಯಾಟಿನ್ ಅಮೆರಿಕದ ದೇಶವೊಂದರಿಂದ ಹೊಸ ಪೋಪ್ ಆಯ್ಕೆ ಮಾಡಿರುವುದು ಒಂದು ರೀತಿಯಲ್ಲಿ ಧರ್ಮದ ಪ್ರಭಾವವನ್ನು ಜನರಲ್ಲಿ ಪುನರ್ ಸ್ಥಾಪಿಸುವ ತಂತ್ರವೆಂದೇ ಗುರುತಿಸಲಾಗಿದೆ. ಪೋಪ್ ಒಂದು ಧರ್ಮದ ಗುರುವಾದರೂ ಆ ಧರ್ಮದ ಜನರು ಆಡಳಿತ ನಡೆಸುವ ದೇಶಗಳ ಆಡಳಿತಗಾರರ ಮೇಲೆ ಇರುವ ಅವರ ಪ್ರಭಾವ ಮತ್ತು ಸರಕಾರಗಳು ಅನುಸರಿಸುವ ನೀತಿಗಳ ಮೇಲೆ ಇರುವ ಪ್ರಬಲ ಹಿಡಿತದಿಂದಾಗಿ ಪೋಪ್ ಸ್ಥಾನಕ್ಕೆ ನಡೆಯುವ ಆಯ್ಕೆ ಮುಖ್ಯವಾಗಿದೆ. ಪಾಶ್ಚಿಮಾತ್ಯ ಮತ್ತು ಯೂರೋಪಿನ ಅಭಿವೃದ್ಧಿ ದೇಶಗಳು ಕ್ರಿಶ್ಚಿಯನ್ ಸಮುದಾಯದ ಆಡಳಿತದಲ್ಲಿ ಇರುವುದರಿಂದ ಮತ್ತು ಅಲ್ಲಿನ ಆಡಳಿತಗಾರರು ತೆಗೆದುಕೊಳ್ಳುವ ನಿರ್ಧಾರಗಳು ವಿಶ್ವದ ಇತರ ಬಡ ಹಾಗೂ ಅಭಿವೃದ್ಧಿ ದೇಶಗಳ ಮೇಲೆ ಪರಿಣಾಮ ಬೀರುವುದರಿಂದಾಗಿ ಈ ಬದಲಾವಣೆಗಳು ಮುಖ್ಯ. ಅರ್ಜೆಂಟೀನಾದ ಬ್ಯೂನಸ್ ಐರೀಸ್ ನ ೭೬ರ ಹರೆಯದ ಕಾರ್ಡಿನಲ್ ಜಾರ್ಜ್ ಮಾರಿಯೋ ಬರ್ಗೋಗ್ಲಿಯೊ ೨೬೬ನೇ ಪೋಪ್ ಆಗುವ ಮೂಲಕ ತಮ್ಮ ನಾಮಧೇಯವನ್ನು ಫ್ರಾನ್ಸಿಸ್ ಎಂದು ಬದಲಾಯಿಸಿಕೊಂಡಿದ್ದಾರೆ. ಪೋಪ್ ಪದವಿಗೆ ಬಂದ ನಂತರ ತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳುವ ಪರಿಪಾಟ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿತ್ತು. ಅದಕ್ಕೂ ಮುಖ್ಯವಾಗಿ ೧೩ನೇ ಶತಮಾನದಲ್ಲಿದ್ದ ಇಟಲಿಯ ಸಂತ. ಫ್ರಾನ್ಸಿಸ್ ಆಸ್ಸಿಸಿಯ ನೆನಪಿಗಾಗಿ ಫ್ರಾನ್ಸಿಸ್ ಎನ್ನುವ ಹೆಸರನ್ನು ಪೋಪ್ ಗೆ ಇಡಲಾಗಿದೆ. ಬರ್ಗೋಗ್ಲಿಯೊ ಅಜೆಂಟೀನಾದ ಮಾರಿಯೋ ಜೋಸ್ ಹಾಗೂ ರೇಜಿನಾ ಮಾರಿಯೋ ಅವರ ಐದು ಪುತ್ರದಲ್ಲಿ ಒಬ್ಬರು. ಮಾರಿಯೋ ಜೋಸ್ ಸಾಮಾನ್ಯ ರೈಲ್ವೆ ಉದ್ಯೋಗಿ ಪುತ್ರ. ಇಟಲಿಯಿಂದ ಅರ್ಜೆಂಟೀನಾಕ್ಕೆ ವಲಸೆ ಬಂದ ಮಧ್ಯಮ ವರ್ಗದ ಕುಟುಂಬದಿಂದ ಬಂದ ಬರ್ಗೊಗ್ಲಿಯೊ ವೈಭವೋಪೇತ ಜೀವನವನ್ನು ನಿರಾಕರಿಸಿದ ಸರಳ ಜೀವಿ. ಹೀಗಾಗಿ ಇಂದಿಗೂ ಅವರು ಶ್ರಮ ಜೀವಿಗಳ ಪ್ರತಿನಿಧಿಯಂತೆಯೇ ಕಾಣುತ್ತಾರೆ. ಬಾಲ್ಯದಲ್ಲಿ ಪೋಪ್ ಫ್ರಾನಿಸ್ಸ್ ಸನ್ ಲೋರೇನ್ಸೋ ಡೀ ಅಲ್ ಮಾಗ್ರೋ ಎನ್ನುವ ಫುಟ್ಬಾಲ್ ಕ್ಲಬ್ ನ ದೊಡ್ಡ ಅಭಿಮಾನಿಯಾಗಿದ್ದರು. ಕೆಮಿಕಲ್ ಟೆಕ್ನಿಷಿಯನ್ ನಲ್ಲಿ ಪದವಿ ಪಡೆದುಕೊಂಡಿದ್ದರು. ಇದರ ಜತೆಯಲ್ಲಿ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಬ್ಯೂನಸ್ ಐರೀಸ್ ವಿವಿಯಿಂದ ಪಡೆದುಕೊಂಡಿದ್ದಾರೆ. ೨೧ರ ಹರೆಯದಲ್ಲಿ ತಾನೊಬ್ಬ ಕ್ರೈಸ್ತ ಧರ್ಮಗುರುವಾಗಬೇಕೆಂದುಕೊಂಡು ಎಸ್‌ಜೆ ಮೇಳದಲ್ಲಿ ಸೇರಿಕೊಂಡು ನಂತರ ೧೯೬೯ರಲ್ಲಿ ಧರ್ಮಗುರುಗಳಾಗಿ ದೀಕ್ಷೆ ಪಡೆದುಕೊಂಡರು. ಬ್ಯೂನಸ್ ಐರೀಸ್ ನ ನಾನಾ ಕಡೆ ಕ್ರೈಸ್ತ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ ನಂತರ ೧೯೯೨ರಲ್ಲಿ ಬ್ಯೂನಸ್ ಐರೀಸ್ ನ ಬಿಷಪ್ ರಾಗಿ ನಿಯುಕ್ತಿಗೊಂಡರು. ೧೯೯೮ರಲ್ಲಿ ಆಚ್ ಬಿಷಪ್‌ರಾಗಿ ನಂತರ ೨೦೦೧ರಲ್ಲಿ ಬ್ಯೂನಸ್ ಐರೀಸ್ ನ ಕಾರ್ಡಿನಲ್ ಆಗಿ ಸೇವೆ ಸಲ್ಲಿಸಿದ ಪೋಪ್ ಫ್ರಾನ್ಸಿಸ್ ರೋಮನ್ ಕೆಥೋಲಿಕ್ ಚರ್ಚ್‌ನ ಧರ್ಮಗುರುಗಳ ನಾನಾ ಸಮಿತಿಗಳಿಗೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ೨ನೇ ಪೋಪ್ ಜಾನ್ ಪೌಲ್ ಅವರ ನಿಧನದ ಸಮಯದಲ್ಲಿ ಮುಖ್ಯ ಪೋಪಲ್ ಕಾರ್ಡಿನಲ್ ಗಳ ಸಾಲಿನಲ್ಲಿ ಪೋಪ್ ಫ್ರಾನ್ಸಿಸ್ ಕೂಡ ಇದ್ದರು. ಪೋಪ್ ಫ್ರಾನ್ಸಿಸ್ ಬಹುಭಾಷೆಗಳ ಮೇಲೆ ಹಿಡಿತ ಇಟ್ಟುಕೊಂಡಿದ್ದಾರೆ. ಸ್ಪ್ಯಾನಿಷ್, ಲ್ಯಾಟಿನ್, ಜರ್ಮನ್, ಫ್ರೆಂಚ್, ಇಂಗ್ಲೀಷ್ ನಲ್ಲೂ ಪಾಂಡಿತ್ಯವನ್ನು ಮೆರೆದಿದ್ದಾರೆ. ಇದೇ ಕಾರಣದಿಂದ ಲ್ಯಾಟಿನ್ ಅಮೆರಿಕದಲ್ಲಿ ಅತ್ಯಂತ ಸಂಪ್ರದಾಯವಾದಿ ಎನಿಸಿದ್ದ ಅರ್ಜೆಂಟೀನಾ ಚರ್ಚ್ ಸಮುದಾಯವನ್ನು ಆಧುನೀಕರಣಗೊಳಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಪೋಪ್ ಫ್ರಾನ್ಸಿಸ್ ಬ್ಯೂನಸ್ ಐರಿಸ್‌ನ ಸಾದಾ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದ ಅವರು, ಪ್ರತಿನಿತ್ಯ ಬಸ್‌ನಲ್ಲಿಯೇ ಓಡಾಡುತ್ತಿದ್ದರು. ತಪ್ಪದೆ ಕೊಳೆಗೇರಿಗಳಿಗೆ ತೆರಳಿ ಬಡವರ ಸೇವೆಯಲ್ಲಿ ತೊಡಗುತ್ತಿದ್ದರು. ಸದಾ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತಾರೆ. ಬಡವರು, ಶ್ರಮಿಕರು ಮತ್ತು ಅನಾಥರು ಎಂದರೆ ಎಲ್ಲಿಲ್ಲದ ಅಕ್ಕರೆ. ಪೋಪ್ ಫ್ರಾನ್ಸಿಸ್ ಈ ಹಿಂದೆ ಕೆಲಸಕ್ಕೆ ಬಸ್‌ನಲ್ಲಿ ಹೋಗುತ್ತಾರೆ ಎನ್ನುವುದು ಜನರ ಮಾತುಗಳಲ್ಲಿ ಎದ್ದು ಕಾಣುವ ಅಂಶ. ಬಸ್ ಪ್ರಯಾಣದ ವೇಳೆ ಅವರೊಂದಿಗೆ ಮಾತನಾಡಿದ್ದೇವೆ ಎಂದು ಹೇಳುವ ಜನರು ಸಾಕಷ್ಟು ಇದ್ದಾರೆ. ಹೀಗೆ ಬಸ್‌ನಲ್ಲಿ ಪ್ರಯಾಣಿಸುವ ಅವರು ಸಹ ಪ್ರಯಾಣಿಕರೊಂದಿಗೆ ಚರ್ಚ್ ವ್ಯವಹಾರಗಳ ಬಗ್ಗೆ ಕೆಲವು ಸಲ ಚರ್ಚಿಸುತ್ತಾರೆ. ತಾನು ರಾತ್ರಿ ಊಟಕ್ಕೆ ಏನು ಅಡುಗೆ ಮಾಡಲಿದ್ದೇನೆ ಎಂಬ ಬಗ್ಗೆ ಇತರ ಸಂದರ್ಭಗಳಲ್ಲಿ ಅವರು ಇತರ ಪ್ರಯಾಣಿಕರೊಡನೆ ಚರ್ಚಿಸುತ್ತಾರೆ. ಕೆಲವು ಸಲ ಅವರು ತನ್ನ ‘ಟಾಂಗಾ’ ಪ್ರಯಾಣದ ಬಗ್ಗೆ ಜನರೊಡನೆ ಅನುಭವ ಹಂಚಿಕೊಳ್ಳುತ್ತಾರೆ. ಸೋಂಕಿನಿಂದಾಗಿ ಒಂದು ಶ್ವಾಸಕೋಶವನ್ನು ಕಳೆದುಕೊಂಡ ಹೊರತಾಗಿಯೂ ಯುವಕನಾಗಿದ್ದಾಗ ತಾನು ಟಾಂಗ ಪ್ರಯಾಣವನ್ನು ಪ್ರೀತಿಸುತ್ತಿದ್ದೆ ಎಂಬುದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಪೋಪ್ ಫ್ರಾನ್ಸಿಸ್ ವ್ಯಾಟಿಕನ್‌ನಲ್ಲಿ ತನ್ನನ್ನು ತಾನು ಪ್ರಬಲವಾಗಿ ಸ್ಥಾಪಿಸಿಕೊಂಡು ಚರ್ಚ್‌ನ ಬದಲಾವಣೆಯ ಹರಿಕಾರರಾಗುತ್ತಾರೆಯೇ ಎಂಬುದನ್ನು ಕಾಲವೇ ನಿರ್ಧರಿಸುತ್ತದೆ. “ಡಾಕ್ಟರ್‌ಗಳ ಆಡಳಿತ ಮುಗಿದಿದೆ, ಇದು ಪಾಸ್ಟರ್‌ಗಳ ಸಾಮ್ರಾಜ್ಯದ ಕಾಲ" ಎಂದು ವ್ಯಾಟಿಕನ್ ಮತ್ತು ಸೆಕಂಡ್ ವ್ಯಾಟಿಕನ್ ಕೌನ್ಸಿಲ್ ಕುರಿತು ಹಲವು ಪುಸ್ತಕಗಳನ್ನು ಬರೆದ ಆಲ್ಬರ್ಟೊ ಮೆಲೋನಿ ಹೇಳುತ್ತಾರೆ. ಅವರ ಆಯ್ಕೆ ಲ್ಯಾಟಿನ್ ಅಮೆರಿಕದಲ್ಲಿ ಸೃಷ್ಟಿಸಿರುವ ಸಂಚಲನವನ್ನು ಗಮನಿಸಿದರೆ, ಹಿಂದಿನ ಪೋಪ್ ಬೆನೆಡಿಕ್ಟ್‌ಗೆ ಹೋಲಿಸಿದರೆ ಧರ್ಮವನ್ನು ಹರಡುವ ನಿಟ್ಟಿನಲ್ಲಿ ಬೃಹತ್ ಹೆಜ್ಜೆಗಳನ್ನು ಇಡುವುದು ನಿಶ್ಚಿತವಾಗಿದೆ. ನೂತನ ಪೋಪ್ ಫ್ರಾನ್ಸಿಸ್ ನಿಲುವು ಏನೇ ಇದ್ದರೂ ತನ್ನ ಪೂರ್ವಾಧಿಕಾರಿ ಬಿಟ್ಟು ಹೋದ ಸವಾಲುಗಳ ಸರಮಾಲೆಯನ್ನೇ ಅವರು ಎದುರಿಸಲಿದ್ದಾರೆ. ಪಾದ್ರಿಗಳ ಕೊರತೆ, ಚರ್ಚನ್ನು ಪರಕೀಯ ಭಾವನೆಯಿಂದ ನೋಡುವ ಪಶ್ಚಿಮದಲ್ಲಿ ಹೆಚ್ಚುತ್ತಿರುವ ಜಾತ್ಯತೀತ ಮನೋಭಾವ, ದಕ್ಷಿಣ ಗೋಳಾರ್ಧದಲ್ಲಿ ಇವ್ಯಾಂಜಲಿಕಲ್ ಚರ್ಚ್ ಗಳು ನೀಡುತ್ತಿರುವ ಪ್ರಬಲ ಪ್ರತಿಸ್ಪರ್ಧೆ ಹಾಗೂ ಚರ್ಚ್‌ನ ನೈತಿಕತೆಯ ಮೇಲೆ ಪ್ರಭಾವ ಬೀರುವ ಲೈಂಗಿಕ ದೌರ್ಜನ್ಯ ಆರೋಪಗಳು. ‘ಹೊರಗಿನ ವ್ಯಕ್ತಿ’ ಎಂಬ ಫ್ರಾನ್ಸಿಸ್‌ರ ಸ್ಥಾನಮಾನ ವ್ಯಾಟಿಕನ್‌ನಲ್ಲಿ ಅವರಿಗೆ ಅನುಕೂಲವೇ ಆಗಬಹುದು ಎಂಬುದಾಗಿ ಕೆಲವು ಪರಿಣತರು ಭಾವಿಸಿದ್ದಾರೆ. ಇಡೀ ವ್ಯಾಟಿಕನ್‌ನ ಆಡಳಿತ ವ್ಯವಸ್ಥೆಯನ್ನು ಅವರು ಹೊಸ ದೃಷ್ಟಿಯಿಂದ ನೋಡಬಹುದು ಹಾಗೂ ಸಮಸ್ಯೆಗಳನ್ನೂ ನೂತನ ಕೋನಗಳಿಂದ ನೋಡುವ ಅವಕಾಶ ಹಾಗೂ ಭಿನ್ನ ರೀತಿಯ ಪರಿಹಾರಗಳನ್ನು ಕಂಡುಕೊಳ್ಳುವ ಅವಕಾಶ ಲಭಿಸುವ ಸಾಧ್ಯತೆಗಳು ದಟ್ಟವಾಗಿದೆ. ಮಾನವೀಯತೆ ಎಡೆಗೆ ನಡೆ ಹಾಗೂ ಸರಳತನವನ್ನು ಪಾಲಿಸು ಎಂದು ಪೋಪ್ ಆಗಿ ಆಯ್ಕೆಯಾದ ಬಳಿಕ ತನ್ನ ಮೊದಲ ಭಾಷಣದಲ್ಲಿ ಅವರು ವಿಶ್ವದ ಚರ್ಚ್‌ಗಳಿಗೆ ಹಾಗೂ ವ್ಯಕ್ತಿಗಳಿಗೆ ಸಂದೇಶ ಸಾರಿದ್ದಾರೆ. ಅನಿರೀಕ್ಷಿತವಾಗಿ ನೂತನ ಪೋಪ್ ಆಗಿ ಆಯ್ಕೆಯಾದ ಕಾರಣ ವಿಶ್ವದಾದ್ಯಂತ ಇರುವ ಚರ್ಚ್‌ಗಳು ಮುಂದೆ ಯಾವ ರೀತಿ ತನ್ನ ದಿಸೆಯನ್ನು ಬದಲಾಯಿಸಬಹುದು ಎನ್ನುವ ಮೂಲಭೂತ ಪ್ರಶ್ನೆ ಇಂದು ಕಾಡತೊಡಗಿದೆ. ಬಹುಪಾಲು ಯುರೋಪಿಯನ್ನರೇ ಇರುವ ಕಾರ್ಡಿನಲ್‌ಗಳ ಪೈಕಿ ಲ್ಯಾಟಿನ್ ಅಮೆರಿಕದ ಈ ಕಾರ್ಡಿನಲ್ ಹೇಗೆ ಪೋಪ್ ಆಗಿ ಆಯ್ಕೆಯಾದರು ಎಂದು ಕೆಲವರು ಚಿಂತಿತರಾಗಿದ್ದಾರೆ. ಇತ್ತೀಚೆಗೆ ಯಥೇಚ್ಛವಾಗಿ ಜಗತ್ತಿನಾದ್ಯಂತ ನಡೆಯುವ ಸಲಿಂಗಕಾಮದ ಕುರಿತು ಕಡ್ಡಿ ಮುರಿದಂತೆ ಹೇಳಿಕೆ ನೀಡಿದ ಪೋಪ್ ಇದು ಅನೈತಿಕ ಎಂದು ಬಣ್ಣಿಸಿದ್ದಾರೆ. ಸೈಂಟ್ ಪೀಟರ್ಸ್ ಬ್ಯಾಸಿಲಿಕಾದಲ್ಲಿ ಮಾರ್ಚ್ ೧೩ ರಂದು ನಡೆಸಿದ ತನ್ನ ಮೊದಲ ಭಾಷಣದಲ್ಲಿ ಅವರು ಮಂಗಳಮುಖಿಯರ ವಿವಾಹ ಬಂಧವನ್ನು ದೇವರ ತೀರ್ಮಾನದ ಉಲ್ಲಂಘನೆ ಎಂದು ಜರಿದಿದ್ದಾರೆ. ಈ ಮೂಲಕ ನೂತನ ಪೋಪ್ ಫ್ರಾನ್ಸಿಸ್ ಆರಂಭದಲ್ಲಿಯೇ ವಿವಾದಗಳ ಜತೆಯಲ್ಲಿ ಗುದ್ದಾಟ ಮಾಡುವ ಪರಂಪರೆ ಬೆಳೆಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಸರಳ ಜೀವನದಲ್ಲಿ ನಂಬಿಕೆ ಮತ್ತು ಬಡವರ ಬಗ್ಗೆ ಕಳಕಳಿ ಇರುವ ಪೋಪ್ ಫ್ರಾನ್ಸಿಸ್ ಅವರಿಂದ ಕೆಥೋಲಿಕ್ ಕ್ರಿಶ್ಚಿಯನ್ನರು ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಮೊದಲನೆಯದಾಗಿ ಭ್ರಷ್ಟಾಚಾರ, ಸೆಕ್ಸ್ ಹಗರಣಗಳಿಂದಾಗಿ ಕಳಂಕಿತವಾಗಿರುವ ಚರ್ಚ್ ವ್ಯವಸ್ಥೆಯನ್ನು ಅವರು ಶುದ್ಧಗೊಳಿಸಬೇಕಿದೆ. ಇದಕ್ಕಾಗಿ ಅವರು ಚರ್ಚ್‌ಗಳ ಆಡಳಿತ ವ್ಯವಸ್ಥೆಯನ್ನು ಸುಧಾರಿಸಬೇಕಿದೆ. ಸಲಿಂಗಿಗಳ ನಡುವೆ ವಿವಾಹ, ಸಂತಾನ ನಿಯಂತ್ರಣ, ಭ್ರೂಣ ಹತ್ಯೆ, ಧರ್ಮಗುರು ಸ್ಥಾನಕ್ಕೆ ಮಹಿಳೆಯರ ನೇಮಕ ಮುಂತಾದ ವಿಚಾರಗಳಲ್ಲಿ ಉಂಟಾಗಿರುವ ಭಿನ್ನಾಭಿಪ್ರಾಯ ಗಳನ್ನು ನಿವಾರಿಸಬೇಕಿದೆ. ಇದು ದೊಡ್ಡ ಸವಾಲೇ ಸರಿ. ಆದರೆ ಈ ವಿಚಾರಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಸಂಪ್ರದಾಯ ವಾದಿಯಾಗಿರುವುದರಿಂದ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು. ಹಾಗೆ ನೋಡಿದರೆ ಅವರು ಲ್ಯಾಟಿನ್ ಅಮೆರಿಕದಲ್ಲಿನ ಕ್ರಾಂತಿಕಾರಿ ಹೋರಾಟದ ವಾತಾವರಣದಲ್ಲಿ ಬೆಳೆದಿದ್ದರೂ ವ್ಯವಸ್ಥೆಯ ವಿರುದ್ಧವಾಗಿ ಎಂದೂ ಹೋದವರಲ್ಲ. ಅರ್ಜೆಂಟೀನಾದಲ್ಲಿ ೭೦ರ ದಶಕದಲ್ಲಿ ದೇಶದ ಮಿಲಿಟರಿ ಸರ್ವಾಧಿಕಾರಿ ಆಡಳಿತದ ವಿರುದ್ಧ ಕ್ರಾಂತಿಕಾರಿಗಳು ಮತ್ತು ಚರ್ಚ್‌ಗಳ ಕೆಲವು ಧರ್ಮಗುರುಗಳು ಹೋರಾಟದ ದಾರಿ ತುಳಿದಾಗ ಅವರ ಜತೆ ಬರ್ಗೋಗ್ಲಿಯೊ ಅವರು ಕೈಜೋಡಿಸಲಿಲ್ಲ ಎಂಬ ಟೀಕೆ ಅವರ ವಿರುದ್ಧ ಇದೆ. ಧರ್ಮವನ್ನು ಸಾಮಾನ್ಯರ ಬಳಿಗೆ ಕೊಂಡೊಯ್ದು ಬಡವರ ಪರವಾಗಿ ಹೆಚ್ಚು ಸೇವಾ ಕಾರ್ಯಗಳನ್ನು ಅವರು ಮಾಡಬಹುದಷ್ಟೇ ಎನ್ನುವ ಮಾತುಗಳು ವ್ಯಾಟಿಕನ್ ಸಿಟಿಯ ಮೂಲಗಳಿಂದ ಜೋರಾಗಿ ಕೇಳಿ ಬರುತ್ತಿದೆ. (vk main eddition vakthigata colum put my story on 17.03.2013) more detile: http://vijaykarnataka.indiatimes.com/articleshow/19009132.cms

Sunday, March 3, 2013

ನನ್ನ ಲೇಖನ ನನ್ನ ಪತ್ರಿಕೆ- 6

(vk main eddtion lead anchoor story-3.3.2013)

ಒಂದು ಭಾಷೆ ಜತೆಗೆ ಐದು ಲಿಪಿ ಮತ್ತು ಗೊಂದಲ !

ಸಂಡೇ ಸಮಾಚಾರ್ ಸ್ಟೀವನ್ ರೇಗೊ, ದಾರಂದಕುಕ್ಕು ಮಂಗಳೂರು: ಭಾರತದಲ್ಲಿರುವ ನೂರಾರು ಭಾಷೆಗಳ ನಡುವೆ ಕೊಂಕಣಿ ಭಾಷೆ ಕೂಡ ಒಂದು. ಕರ್ನಾಟಕದ ಕರಾವಳಿಯಿಂದ ಹಿಡಿದು ಗೋವಾದ ವರೆಗೂ ಈ ಕೊಂಕಣಿಯನ್ನು ಮಾತನಾಡುವವರು ಜಾಸ್ತಿ ಸಂಖ್ಯೆಯಲ್ಲಿ ಕಾಣ ಸಿಗುತ್ತಾರೆ. ಒಂದು ಲೆಕ್ಕಚಾರದ ಪ್ರಕಾರ ಇವರ ಸಂಖ್ಯೆ ಬರೋಬರಿ... ಇದೆ ಎನ್ನೋದು ಸಮೀಕ್ಷೆಗಳಿಂದ ದೃಢಪಟ್ಟ ಮಾಹಿತಿ. ದೇಶದ ಮುಕುಟ ಮಣಿಯಂತೆ ಹೊಳೆಯುತ್ತಿರುವ ಕಾಶ್ಮೀರಿ ಭಾಷೆಗೆ ಮೂರು ಲಿಪಿಗಳಿರುವಂತೆ ಕೊಂಕಣಿ ಭಾಷೆಗೆ ಐದು ಲಿಪಿಗಳಿವೆ. ಆದರೆ ಈ ಎಲ್ಲ ಲಿಪಿಗಳು ಕೊಂಕಣಿ ಸಾಹಿತ್ಯವನ್ನು ಸಮೃದ್ಧವಾಗಿಡಲು ಸಹಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕೊಂಕಣಿಯನ್ನು ಕರ್ನಾಟಕದಲ್ಲಿ ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತಿದೆ. ಗೋವಾದಲ್ಲಿ ಇದೇ ಕೊಂಕಣಿಯನ್ನು ದೇವನಾಗರಿ ಹಾಗೂ ರೋಮಿ ಲಿಪಿಯಲ್ಲಿ ಅಲೆಯಲಾಗುತ್ತಿದೆ. ಕೇರಳದಲ್ಲಿರುವ ಕೊಂಕಣಿ ಬರಹಗಾರರು ಮಲಯಾಳಂ ಲಿಪಿಯಲ್ಲಿ, ಭಟ್ಕಳ ಹಾಗೂ ಕಾರಾವಾರದಂತಹ ಪ್ರದೇಶಗಳಲ್ಲಿರುವ ಕೊಂಕಣಿ ಬರಹಗಾರರು ಪರ್ಶಿಯನ್( ಅರೇಬಿಕ್) ಲಿಪಿಯನ್ನು ಬಳಸುತ್ತಿದ್ದಾರೆ. ಈ ಪುಟ್ಟ ಭಾಷೆ ಕೊಂಕಣಿ ಭರ್ಜರಿ ಐದು ಲಿಪಿಗಳ ಮೂಲಕ ವಿಭಿನ್ನತೆಯಲ್ಲಿ ಏಕತೆ ಸಾಧಿಸಲು ಹೊರಟಿದೆ. ಕನ್ನಡ ಲಿಪಿ: ಕರ್ನಾಟಕದಲ್ಲಿರುವ ಕೊಂಕಣಿ ಭಾಷಿಗರಿಗೆ ಕನ್ನಡ ಆಡು ಭಾಷೆಯಾಗಿರುವುದರಿಂದ ತಮ್ಮ ಕೊಂಕಣಿ ಕೃತಿಗಳನ್ನು ಕನ್ನಡ ಲಿಪಿಯ ಮೂಲಕವೇ ಓದುಗರಿಗೆ ನೀಡುತ್ತಾರೆ. ಒಂದು ಲೆಕ್ಕಚಾರದ ಪ್ರಕಾರ ಕನ್ನಡ ಲಿಪಿಯನ್ನು ಇಟ್ಟುಕೊಂಡು ಬಂದ ಕೊಂಕಣಿ ಸಾಹಿತ್ಯದಲ್ಲಿ ಶೇ.೮೦ರಷ್ಟು ಕೊಂಕಣಿ ಕೃತಿಗಳು ಇದೇ ಕನ್ನಡ ಲಿಪಿಯನ್ನು ಬಳಸಿಕೊಂಡಿದೆ. ಇದೇ ಕನ್ನಡ ಲಿಪಿಯನ್ನು ಇಟ್ಟುಕೊಂಡು ಕೊಂಕಣಿಯ ಹಿರಿಯ ವಾರ ಪತ್ರಿಕೆ ರಾಕ್ಣೋ, ಮಾಸಿಕಗಳಾದ ಕುಟಾಮ್, ನಮಾನ್ ಬಾಳೊಕ್, ದಿರ್ವೆ ಮೊದಲಾದ ಪಾಕ್ಷಿಕ, ಮಾಸಿಕಗಳು ಕೊಂಕಣಿ ಸಾಹಿತ್ಯವನ್ನು ಬೆಳೆಸಿಕೊಂಡು ಬರುತ್ತಿದೆ. ಕನ್ನಡ ಲಿಪಿಯಲ್ಲಿಯೇ ಬರೆಯುತ್ತಿರುವ ಮೆಲ್ವಿನ್ ರೊಡ್ರಿಗಸ್, ಎಡ್ವರ್ಡ್ ನಜರೇತ್, ಸ್ಟೇನ್ ಅಗೇರಾ, ಸ್ಟೀವನ್ ಕ್ವಾಡರ್ಸ್, ಸಿಜ್ಯೇಸ್ ತಾಕೊಡೆ ಮೊದಲಾದವರು ಕೊಂಕಣಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ದೇವನಾಗರಿ ಲಿಪಿ: ಕೊಂಕಣಿ ಭಾಷೆಯನ್ನು ಇಂಡೋ -ದ್ರಾವಿಡಿಯನ್ ಭಾಷೆಗಳ ಪಂಗಡಕ್ಕೆ ಸೇರಿದೆ ಎನ್ನುವ ವಾದವೊಂದನ್ನು ದೇವನಾಗರಿ ಲಿಪಿ ಬಳಸುವ ಕೊಂಕಣಿ ಭಾಷಿಗರು ನಡೆಸುತ್ತಾ ಬಂದಿದ್ದಾರೆ. ಈ ದೇವನಾಗರಿ ಲಿಪಿಯನ್ನು ಹೆಚ್ಚಾಗಿ ಗೋವಾದಕೊಂಕಣಿ ಭಾಷಿಗರು ಬಳಕೆ ಮಾಡುತ್ತಿದ್ದಾರೆ. ಕೊಂಕಣಿ ಸಾಹಿತ್ಯದ ಶೇ.೨೦ರಷ್ಟು ಭಾಗವನ್ನು ದೇವನಾಗರಿ ಹಾಗೂ ರೋಮಿ ಲಿಪಿಗಳು ಕಸಿದುಕೊಂಡಿದೆ. ಇದೇ ಲಿಪಿಯ ಆಧಾರದಲ್ಲಿ ಗೋವಾದಲ್ಲಿರುವ ಕೊಂಕಣಿ ಭಾಷಿಗರು ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಪಾಲು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೊಂಕಣಿ ಸಾಹಿತ್ಯವನ್ನು ಯಾವುದೇ ಲಿಪಿಯಲ್ಲೂ ಬರೆದರೂ ನಂತರ ಅದನ್ನು ದೇವನಾಗರಿ ಲಿಪಿಯಲ್ಲಿ ಸಾದರ ಪಡಿಸಬೇಕು ಎನ್ನುವ ಮಾತೊಂದು ಅಕಾಡೆಮಿ ವಲಯದಲ್ಲಿ ಬಹಿರಂಗವಾಗಿ ಕಾಣಸಿಗುತ್ತದೆ. ಇದೇ ಲಿಪಿಯಲ್ಲಿ ಗೋವಾದಲ್ಲಿ ದಿನಪತ್ರಿಕೆ ಸೋನಾಅಪ್ರಾಂತ್(ಗೋಲ್ಡನ್ ಗೋವಾ) ಪ್ರಕಟವಾಗುತ್ತಿದೆ. ತ್ರೈಮಾಸಿಕ ‘ಜಾಗ್’( ದೇವನಾಗರಿ) ‘ಗುಲಾಬ್( ರೋಮಿ ಲಿಪಿ) ಬಿಂಬ್(ದೇವನಾಗರಿ) ಮಾಸಿಕ. ದೇವನಾಗರಿಯಲ್ಲಿ ಬರೆಯುತ್ತಿರುವ ಪುಂಡಳೀಕ್ ನಾರಾಯಣ್ ನಾಯಕ್, ನಾಗೇಶ್ ಕರ್ಮಲಿ, ಕೊಂಕಣಿಯ ಏಕಮಾತ್ರ ಜ್ಞಾನಪೀಠ ಪ್ರಶಸ್ತಿ ವಿಜೇತ ರವೀಂದ್ರ ಖಳೇಕ್ಕರ್, ಕೊಂಕಣಿ ಕವಿತೆಗಳಲ್ಲಿ ಮೊದಲ ಡಾಕ್ಟರೇಟ್ ಪಡೆದ ರಾಜೇಯ್ ಪವಾರ್, ಕಾಶೀನಾಥ್ ಸಾಂಬಾ ಲುಳೇಂಕರ್ ದೇವನಾಗರಿಯ ಮೂಲಕ ಕೊಂಕಣಿ ಸಾಹಿತ್ಯವನ್ನು ಬಲಪಡಿಸಿದ್ದಾರೆ. ರೋಮಿ, ಮಲಯಾಳಂ, ಉರ್ದು: ರೋಮಿ ಲಿಪಿಯನ್ನು ಗೋವಾದಲ್ಲಿ ಬಳಕೆ ಮಾಡಲಾಗುತ್ತಿದೆ. ದೇವನಾಗರಿ ಹಾಗೂ ರೋಮಿ ಲಿಪಿಗಳ ನಡುವೆ ಏರ್ಪಡುವ ವಿವಾದಗಳು ಕೊಂಕಣಿ ಸಾಹಿತ್ಯ ವಲಯದಲ್ಲಿ ಹೊಸ ಸಂಚಲನಗಳನ್ನೇ ಸೃಷ್ಟಿ ಮಾಡಿದೆ. ಆಂಗ್ಲ ಭಾಷೆಯನ್ನು ಪ್ರಧಾನವಾಗಿಟ್ಟುಕೊಂಡ ರೋಮಿ ಲಿಪಿಯಲ್ಲೂ ಕೊಂಕಣಿ ಸಾಹಿತ್ಯಗಳು ಮೂಡಿಬಂದಿದೆ. ಕೇರಳದಲ್ಲಿರುವ ಕೊಂಕಣಿ ಭಾಷಿಗರು ಮಲಯಾಳಂ ಲಿಪಿಯನ್ನು ಹಾಗೂ ಭಟ್ಕಳದಲ್ಲಿ ಕೊಂಕಣಿಯನ್ನು ಉರ್ದು ಲಿಪಿಯಲ್ಲಿ ತೂಗಲಾಗುತ್ತದೆ. ಇದು ಅರೇಬಿಕ್- ಪರ್ಶಿಯನ್ ಲಿಪಿಯಾಗಿದೆ. ಕೊಂಕಣಿ ಮಾತನಾಡುವ ನಾನಾ ಪ್ರದೇಶದಲ್ಲಿರುವವರು ತಮ್ಮ ಆಡು ಭಾಷೆಗಳ ಲಿಪಿಯನ್ನೇ ಅಪ್ಪಿಕೊಂಡಿರುವುದರಿಂದ ಕೊಂಕಣಿ ಭಾಷೆಯನ್ನು ಒಂದೇ ಲಿಪಿಗಳ ಕಡೆ ಕೇಂದ್ರೀಕರಿಸಲು ವಿಫಲವಾಗಿದೆ. ಆದರೆ ಕೊಂಕಣಿ ಸಾಹಿತ್ಯವಂತೂ ನಾನಾ ಲಿಪಿಗಳ ಜತೆಯಲ್ಲಿ ಸೇರಿಕೊಂಡು ಹೊಸ ಹೊಸ ಪ್ರಯೋಗಗಳು ನಿಧಾನವಾಗಿ ನಡೆಯುತ್ತಿದೆ ಎನ್ನುವ ಮಾತು ಮಾತ್ರ ಸುಳ್ಳಲ್ಲ. ಎಲ್ಲ ಲಿಪಿಗೂ ಮಾನ್ಯತೆಗೆ ರಿಟ್: ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ಸಾಹಿತ್ಯ ಪ್ರಶಸ್ತಿಯಲ್ಲಿ ಬರೀ ದೇವನಾಗರಿ ಲಿಪಿಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಾರೆ. ಇತರ ಲಿಪಿಗಳಿಗೂ ಸಮಾನ ಮಾನ್ಯತೆ ನೀಡಿ ಅದರಲ್ಲಿ ರುವ ಉತ್ತಮ ಕೃತಿಗೆ ಪ್ರಶಸ್ತಿ ಕೊಡಬೇಕು ಎನ್ನುವ ರಿಟ್ ಅರ್ಜಿಯೊಂದು ಹೈಕೋರ್ಟ್ ಮೆಟ್ಟಿಲಿನಲ್ಲಿದೆ. ಮಂಗಳೂರಿನ ಎರಿಕ್ ಒಝೋರಿಯೋ, ಮಾರ್ಶಲ್ ಡಿಸೋಜ( ಮಾಚ್ಚಾ ಮಿಲಾರ್), ವಲ್ಲಿ ವಗ್ಗ ಮೈಸೂರು ಇವರೆಲ್ಲರೂ ಸೇರಿಕೊಂಡು ಈ ರಿಟ್ ಅರ್ಜಿಯನ್ನು ನವೆಂಬರ್ ೨೦೧೧ರಲ್ಲಿ ಹೈಕೋರ್ಟ್‌ನಲ್ಲಿ ದಾಖಲಿಸಿದ್ದರು. ಕರಾವಳಿಯಲ್ಲೂ ಮೂಡಿದ ದೇವನಾಗರಿ: ಕೊಂಕಣಿ ಭಾಷೆಯಲ್ಲಿ ದೇವನಾಗರಿ ಲಿಪಿಯ ಮಹತ್ವ ಅರಿವಿಗೆ ಬರಬೇಕಾದರೆ ಕೇಂದ್ರದ ಕೊಂಕಣಿ ಅಕಾಡೆಮಿಯ ಪ್ರಶಸ್ತಿಗಳ ಪಟ್ಟಿಯಲ್ಲಿ ಕಾಣಬಹುದು. ೧೯೮೯ರಲ್ಲಿ ಕರಾವಳಿಯ ಖ್ಯಾತ ಕೊಂಕಣಿ ಸಾಹಿತಿ ದಿ. ಚಾಪ್ರಾ ಡಿಕೋಸ್ತಾ ಅವರ ‘ಸೊಂಸ್ಯಾಚೆಂ ಕಾನ್’( ಮೊಲದ ಕಿವಿ) ಕೃತಿಯನ್ನು ಆರಂಭದಲ್ಲಿ ಕನ್ನಡ ಲಿಪಿಯಲ್ಲಿ ಬರೆದು ನಂತರ ದೇವನಾಗರಿ ಲಿಪಿಯಲ್ಲಿ ಮುದ್ರಿಸಿದ ನಂತರ ಪ್ರಶಸ್ತಿ ಬಂತು. ಅದೇ ರೀತಿ ಜೋನ್ ಬ್ಯಾಪ್ತಿಸ್ಟ್ ಮೊರಾಯಿಸ್( ಬಿರ್ತಲೆಂ ತೂಫಾನ್- ಒಳಗಿನ ಬಿರುಗಾಳಿ),೧೯೯೮ ಜೆ.ಬಿ.ಸಿಕ್ವೇರಾ, ೧೯೯೪ ಗೋಕುಲ್‌ದಾಸ್ ಪ್ರಭು, ೨೦೧೦ರಲ್ಲಿ ಕವಿ ಮೆಲ್ವಿನ್ ರೊಡ್ರಿಗಸ್ ಇವರ ಕೃತಿಗಳು ಕನ್ನಡ ಲಿಪಿಯಲ್ಲಿ ಮುದ್ರಣ ಕಂಡು ನಂತರ ದೇವನಾಗರಿಗೆ ಬದಲಾಯಿತು. ಕೋಟ್ ಕಾರ್ನರ್: ಕೊಂಕಣಿ ಭಾಷೆಯಲ್ಲಿ ಸಾಹಿತ್ಯ ಬೆಳೆಯಬೇಕಾದರೆ ಐದು ಲಿಪಿಗಳು ಅಗತ್ಯ. ನಾನಾ ಪ್ರದೇಶದಲ್ಲಿರುವ ಕೊಂಕಣಿ ಭಾಷಿಗರು ತಮ್ಮ ತಮ್ಮ ಲಿಪಿಯಲ್ಲೇ ಕೊಂಕಣಿಗೆ ಪ್ರೋತ್ಸಾಹ ನೀಡಬಹುದು. ಕೊಂಕಣಿಗೆ ಒಂದೇ ಲಿಪಿ ಎನ್ನುವ ಮಾತು ತೀರಾ ಅಪ್ರಸ್ತುತ. ವಿತೋರಿ ಕಾರ್ಕಳ್, ಕೊಂಕಣಿ ಪ್ರಚಾರ ಸಂಚಾಲನ್ ಕಾರ‍್ಯಕಾರಿ ಕಾರ್ಯದರ್ಶಿ. ....... ಕೊಂಕಣಿಯಲ್ಲಿ ಲಿಪಿಗಿಂತ ಭಾಷೆ, ಸಾಹಿತ್ಯದ ಕುರಿತು ಚಿಂತನೆ ನಡೆಸುವ ಅಗತ್ಯವಿದೆ. ಲಿಪಿ ಎನ್ನುವ ಕಲ್ಪನೆಯನ್ನು ಬಿಟ್ಟು ಕೊಂಕಣಿ ಭಾಷೆಗಾಗಿ ದುಡಿಯುವ ಕೆಲಸ ನಡೆಯಬೇಕು. ಇದು ಸಮೃದ್ಧ ಕೊಂಕಣಿ ಸಾಹಿತ್ಯದ ಬೆಳವಣಿಗೆಗೆ ಪೂರಕ. ಗುರು ಬಾಳಿಗ ವಿಶ್ವ ಕೊಂಕಣಿ ಕೇಂದ್ರದ ಸಹಾಯಕ ನಿರ್ದೇಶಕ. .... ಕರ್ನಾಟಕದಲ್ಲಿ ಕೊಂಕಣಿ ಭಾಷೆಯ ಕೃತಿಯನ್ನು ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ರಚಿಸಬಹುದು ಎನ್ನೋದು ರಾಜ್ಯದಲ್ಲಿರುವ ಸರಕಾರದ ಆದೇಶ. ಅದೇ ರೀತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬೈಲಾದಲ್ಲಿ ರುವ ನಿಯಮದಂತೆ ದೇವನಾಗರಿ ಲಿಪಿಯಲ್ಲಿ ಬರೆದ ಕೃತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯದಲ್ಲೂ ಕರಾವಳಿಯಲ್ಲಿ ಕನ್ನಡ ಲಿಪಿಯ ಕೃತಿಗಳಿಗೆ ಮೊದಲ ಆದ್ಯತೆ ನೀಡಿದರೆ ಕುಮಟ, ಅಂಕೋಲ ಕಡೆಗಳಲ್ಲಿ ದೇವನಾಗರಿ ಲಿಪಿಗೆ ಒತ್ತು ನೀಡಲಾಗುತ್ತದೆ. ಕೊಂಕಣಿಯಲ್ಲಿರುವ ಲಿಪಿಯ ವೈವಿಧ್ಯತೆಯೇ ಅದರ ಬೆಳವಣಿಗೆಗೆ ಸಾಕ್ಷಿಯಾಗಿದೆ. - ಕಾಸರಗೋಡು ಚಿನ್ನಾ ಅಧ್ಯಕ್ಷರು, ಕರ್ನಾಟಕ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ .... (vk main edition anchor news- 3.3.2013)