
ಈ ಕೆಳಗಿನ ಲೇಖನಗಳು ವಿಜಯನೆಕ್ಸ್ಟ್ ಪತ್ರಿಕೆಯಲ್ಲಿ ೧೧.೧೧.೨೦೧೧ ರಂದು ಪ್ರಕಟವಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಮೂರು ವಿಶೇಷ ವ್ಯಕ್ತಿಗಳ ಬಾಲ್ಯದ ಗೆಖೆಯರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ಪತ್ರ ಬರೆದುಕೊಂಡಿದ್ದಾರೆ.
ಪ್ರೀತಿಯ ಸದಾ,
ರಾಜ್ಯದ ಮುಖ್ಯ ಮಂತ್ರಿಯಾಗಿ ಗೆದ್ದುಗೆ ಹಿಡಿದುಕೂತಾಗ ನನಗೆ ಆದ ಸಂತಸಕ್ಕೆ ಪಾರವೇ ಇಲ್ಲ. ಪುತ್ತೂರಿನಲ್ಲಿದ್ದ ಬಹುತೇಕ ನಮ್ಮಿಬ್ಬರ ಸ್ನೇಹಿತ ವಲಯಕ್ಕೆ ಪೋನ್ ಮಾಡಿ ವಿಚಾರ ತಿಳಿಸಿದೆ. ಪುತ್ತೂರಿನಲ್ಲಿರುವ ನಮ್ಮಿಬ್ಬರ ಆರಾಧ್ಯ ದೇವರಾದ ಶ್ರೀಮಹಾಲಿಂಗೇಶ್ವರನಿಗೊಂದು ಧನ್ಯವಾದ ಮನದಲ್ಲಿಯೇ ಸಲ್ಲಿಸಿ ಸಂಭ್ರಮ ಪಟ್ಟೆ. ನೀನು ಮುಖ್ಯಮಂತ್ರಿಯಾಗುವ ವಿಚಾರ ಒಂದು ಮಿರಾಕಲ್ ಎನ್ನುವವರು ಇರಬಹುದು. ಆದರೆ ನಾನು ನಿನ್ನನ್ನು ನೂರಕ್ಕೆ ನೂರರಷ್ಟು ನಂಬುತ್ತೇನೆ.
ನಿನ್ನ ಆರ್ಹತೆ, ಪ್ರಾಮಾಣಿಕತೆ, ಕೆಲಸದ ಮೇಲಿರುವ ನಿಷ್ಠೆ, ಎಲ್ಲಕ್ಕೂ ಮುಖ್ಯವಾಗಿ ಜನರ ಕುರಿತಾಗಿ ನಿನ್ನ ಕಾಳಜಿ ಎಲ್ಲವೂ ನನಗೆ ಬಾಲ್ಯದಿಂದಲೇ ಗೊತ್ತಿತ್ತು ಅಲ್ವಾ..? ಒಂದಲ್ಲ ಒಂದು ದಿನ ನೀನು ಮುಂದೆ ಬಂದು ನಿಲ್ಲುತ್ತೀಯಾ ಎನ್ನುವ ಆತ್ಮವಿಶ್ವಾಸ ನಿನ್ನ ಮೇಲೆ ನನಗಿತ್ತು. ಈ ವಿಶ್ವಾಸದ ಮಾತುಗಳು ನಿನಗೊಬ್ಬನಿಗೆ ಹೇಳಿ ಬಿಟ್ಟರೆ ಎಲ್ಲಿ ವಿನಯನಿಗೆ( ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ) ಬೇಸರವಾಗುತ್ತದೋ ಎಂದು ನಾನು ಸುಮ್ಮನಿದ್ದೆ. ವಿನಯ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ನೀನು ಬಿಜೆಪಿ ಇಬ್ಬರು ನನಗೆ ಚಡ್ಡಿ ದೋಸ್ತ್‌ಗಳು. ಅದರಲ್ಲೂ ಒಬ್ಬನಿಗೆ ಮಾತ್ರ ನಾನು ಬೆಂಬಲ ಕೊಟ್ಟರೆ ಮತ್ತೊಬ್ಬನಿಗೆ ಅನ್ಯಾಯವಾಗಿ ಬಿಡುತ್ತದೆ ಎನ್ನುವ ಮಾತು ನನ್ನೊಳಗೆ ಬಚ್ಚಿಡುವಂತೆ ಮಾಡಿತು.
ಈ ಎಲ್ಲ ಮಾತುಗಳು ಈಗ ಸರಿಯಲ್ಲ ಅನ್ನಿಸಿ ಬಿಡುತ್ತದೆ. ಆದರೆ ನನಗೆ ಈಗಲೂ ನೆನಪಿದೆ ಸದಾ.. ಕೆಯ್ಯೂರಿನ ಸರಕಾರಿ ಶಾಲೆ, ಐದನೇ ಕ್ಲಾಸಿನಲ್ಲಿ ನಾವಿಬ್ಬರೂ ಕೂರುತ್ತಿದ್ದ ಬೆಂಚು, ನನ್ನ ಎಸ್ಜಿಡಿ ಬೈಕ್‌ನಲ್ಲಿ ಮೈಸೂರಿಗೆ ಪ್ರಯಾಣ ಎಲ್ಲವೂ ನಿನ್ನನ್ನು ನೋಡಿದಾಗ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಕೆಯ್ಯೂರಿನಲ್ಲಿ ನಿನ್ನ ಚಿಕ್ಕಪ್ಪ ಚೆನ್ನಪ್ಪ ಮಾಸ್ಟ್ರು ಮನೆಯಿಂದ ಬರುತ್ತಿದ್ದಾಗ ನಿನ್ನ ಸಹಪಾಟಿಗಳಿಗೆ ನಿನ್ನ ಮೇಲೆ ಸೌಜನ್ಯದ ಭಾವನೆ ಇತ್ತು.
ಆದರೆ ಐದನೇ ಕ್ಲಾಸಿನಲ್ಲಿದ್ದಾಗ ನಿನ್ನ ಚುರುಕುಬುದ್ಧಿ, ಪ್ರಾಮಾಣಿಕತೆ, ವಿನಯವಂತಿಕೆ, ಸದಾ ನಗುವ ನಿನ್ನ ಗುಣ ಎಲ್ಲವೂ ನನಗೆ ಬಹಳವಾಗಿ ಹಿಡಿಸಿತ್ತು. ಯಾರ ಮೇಲೂ ಬೇಸರಪಟ್ಟುಕೊಂಡದ್ದು, ಕೂಗಾಡಿದ್ದು ನಾನು ನೋಡಿಯೇ ಇರಲಿಲ್ಲ ಅಲ್ವಾ..? ಈ ಎಲ್ಲ ವಿಚಾರಗಳಿಂದ ನೀನು ತುಂಬಾನೇ ಭಿನ್ನವಾಗಿ ನಿಲ್ಲುತ್ತಿದ್ದಿ ನಿನ್ನ ಸ್ನೇಹಕ್ಕಾಗಿ ನಾನು ನೀನು ಕೂರುತ್ತಿದ್ದ ಬೆಂಚಿಗೆ ಬಡ್ತಿ ಪಡೆದುಕೊಂಡು ಬಂದಿದ್ದು ನಿನಗೆ ನೆನಪಿರಬಹುದು ಅಲ್ವಾ..? ಶಾಲೆಗೆ ಬರುತ್ತಿದ್ದಾಗ ನೀನು ಹಾಕಿಕೊಂಡು ಬರುತ್ತಿದ್ದ ಶಾಸಿಟೋಪಿ ಕಂಡು ಬಹಳಷ್ಟು ಗೆಳೆಯರು ನಿನ್ನನ್ನು ಶಾಸಿಎಂದು ಕೂಗುತ್ತಿದ್ದಾಗ ನನಗೆ ಬಹಳ ಬೇಸರವಾಗುತ್ತಿತ್ತು. ಆದರೆ ಅವರ ಟೀಕೆಗಳಲ್ಲಿ ನಿನ್ನ ನಗು ಎಲ್ಲವನ್ನು ಮಡಚಿ ಹಾಕುತ್ತಿತ್ತು.
ಸದಾ ನೀನು ಉದ್ದಕ್ಕೆ ಬೆಳೆಯಲು ನನ್ನಲ್ಲಿ ಕೇಳಿದ ಐಡಿಯಾ. ನಾನು ಕೊಟ್ಟ ಸಲಹೆ ಈಗಲೂ ನನಗೆ ಯೋಚಿಸಿದಾಗ ನಗು ಉಕ್ಕಿ ಬರುತ್ತದೆ. ಯಾರೋ ನನಗೆ ಹೇಳಿದ್ರು ಬಾವಿಯಿಂದ ಬಿಂದಿಗೆಯಲ್ಲಿ ನೀರು ಎಳೆದರೆ ಉದ್ದಕ್ಕೆ ಬೆಳೆಯುತ್ತಾರಂತೆ ಅದನ್ನೇ ನಾನು ನಿಗೆ ಹೇಳಿದ್ದೆ. ಅಂದು ನೀನು ಉದ್ದಕ್ಕೆ ಬೆಳೆಯದೇ ಹೋಗಿರಬಹುದು. ಆದರೆ ಈಗ ನೀನು ಬಹಳ ಎತ್ತರಕ್ಕೆ ಬೆಳೆದು ಬಂದಿದ್ದೀಯಾ.. ಒಂದು ಬೇಸರ ನಾನು ಒಂದು ತರಗತಿಯಲ್ಲಿ ಪೇಲ್ ಆಗಿ ನೀನು ಪಾಸಾಗಿ ಮುಂದೆ ಹೋದ ನಂತರ ಮಾತ್ರ ನಾನು ಏಕಾಂಗಿಯಾಗಿ ಉಳಿದೆ. ನೀನು ತರಗತಿಯಿಂದ ತರಗತಿಗೆ ಜಂಪ್ ಆಗುತ್ತಾ ಹೋದೆ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮಾಡುತ್ತಿದ್ದಾಗ ನಾವಿಬ್ಬರೂ ನನ್ನ ಎಸ್ಜಿಡಿ ಬೈಕ್‌ನಲ್ಲಿ ನಾಲ್ಕಾರು ಸಲ ಮೈಸೂರಿಗೆ ಹೋದ ಟೂರ್ ಈಗಲೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಸುತ್ತಾಟ ಎಂದರೆ ಇಬ್ಬರಿಗೂ ಖುಷಿ. ಪುತ್ತೂರಿನ ಎಲ್ಲ ಮೂಲೆ ಮೂಲೆಗಳಿಗೂ ನನ್ನ ಎಸ್‌ಜ್ಡಿ ಬೈಕ್‌ನಲ್ಲಿ ಸುತ್ತಾಟ ಮಾಡಿಕೊಂಡಿದ್ದ ಆ ದಿನಗಳು ಈಗಲೂ ನೆನಪಿಗೆ ಬರುವುದಿದೆ. ಈಗಲೂ ನೆನಪುಗಳು ತೀವ್ರವಾಗಿ ಕಾಡಿದಾಗ ನಿನಗೆ ಪೋನ್ ಮಾಡಿ ಹೇಳುವುದಿದೆ. ಪುತ್ತೂರಿನಲ್ಲಿ ಕಾಂಗ್ರೆಸ್‌ನಿಂದ ವಿನಯ್ ಕುಮಾರ್ ಸೊರಕೆ ಚುನಾವಣೆಗೆ ನಿಂತಾಗ ನಾನು ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಈ ಕಡೆ ಬಂದು ವಿನಯ್ ಕುಮಾರ್‌ಗೆ ಬೆಂಬಲ ನೀಡಿದ್ದೆ. ಕಾರಣ ನಿನ್ನಂತೆ ಅವನು ಕೂಡ ನನ್ನ ಸ್ನೇಹಿತ.
ಆದರೆ ಪುತ್ತೂರಿನಿಂದ ಬಿಜೆಪಿಯಲ್ಲಿ ನೀನು ಚುನಾವಣೆಗೆ ನಿಂತಾಗ ಇತ್ತ ಕಡೆ ಕಾಂಗ್ರೆಸ್‌ನಿಂದ ವಿನಯ್ ಕುಮಾರ್ ಚುನಾವಣೆಗೆ ನಿಂತುಬಿಟ್ಟಿದ್ದ. ಆಗ ನೀನೇ ಬಂದು ‘ಇಬ್ಬರು ನಿನ್ನ ಸ್ನೇಹಿತರು. ಯಾರಿಗೂ ನೀನು ಚುನಾವಣೆಯಲ್ಲಿ ಬೆಂಬಲ ನೀಡ ಕೂಡದು’ ಎಂದಿದ್ದಿ. ಅಲ್ಲಿಂದ ನಾನು ನೀನು ಹೇಳಿದ ರೀತಿಯಲ್ಲಿಯೇ ನಡೆದುಕೊಳ್ಳುತ್ತಿದ್ದೇನೆ. ಗೆಳೆಯ ಸದಾ ನೀನು ಇನ್ನಷ್ಟೂ ಬೆಳೆಯಬೇಕು. ಜತೆಗೆ ರಾಜ್ಯಕ್ಕೂ ನಿನ್ನ ಊರಿಗೆ ಬಹಳ ಕೆಲಸ ಮಾಡಬೇಕು ಅನ್ನೋದು ಗೆಳೆಯನ ಆಶಯ.
ನಿನ್ನ ದೋಸ್ತಿ
ಮುತ್ತಣ್ಣ( ಎನ್. ಮುತ್ತಪ್ಪ ರೈ)
............
ಎನ್. ಮುತ್ತಪ್ಪ ರೈ
ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿರುವ ಎನ್. ಮುತ್ತಪ್ಪ ರೈ ಮೂಲತಃ ಪುತ್ತೂರಿನ ಕೆಯ್ಯೂರಿನವರು. ರಿಯಲ್ ಎಸ್ಟೇಟ್, ಕ್ರೀಡೆ, ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ಸದಾ ಕಾಲ ಬ್ಯುಸಿಯಾಗಿ ಇಟ್ಟುಕೊಂಡವರು. ಮುತ್ತಪ್ಪ ರೈ ಕೆಯ್ಯೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸುತ್ತಿದ್ದಾಗ ಡಿ.ವಿ. ಸದಾನಂದ ಗೌಡರು ಒಂದೇ ತರಗತಿಯ ಒಂದೇ ಬೆಂಚಿನಲ್ಲಿ ಇದ್ದವರು. ಮುತ್ತಪ್ಪ ರೈ ಒಂದು ಕ್ಲಾಸಿನಲ್ಲಿ ಪೇಲ್ ಆದ ನಂತರ ಡಿವಿ ರೈ ಅವರನ್ನು ಬಿಟ್ಟು ಮುಂದೆ ಹೋದರು. ಆದರೆ ಅವರ ಸ್ನೇಹ ಈಗಲೂ ಗಟ್ಟಿ ಇದೆ.
No comments:
Post a Comment