


ಮೂಲ್ಕಿ- ಹೆಜಮಾಡಿಯ ಹುಡುಗನೊಬ್ಬ ತಮಿಳು, ತೆಲುಗು, ಕನ್ನಡ, ಮಲಯಾಳಂ ಚಿತ್ರರಂಗದ ಘಟಾನುಘಟಿ ನಟರಿಗೆ ಪೈಪೋಟಿ ಕೊಟ್ಟು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಸುಮನ್ ಮಂಗಳೂರಿನ ವಿಕ ಕಚೇರಿಯಲ್ಲಿ ಬಂದು ಒಂದು ತಾಸುಗಳ ಕಾಲ ಹರಟಿದರು.
ಸ್ಟೀವನ್ ರೇಗೊ, ದಾರಂದಕುಕ್ಕು
ವಿಕ ಸುದ್ದಿಲೋಕ ಮಂಗಳೂರು
ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಅವಕಾಶ ನೀಡುವುದಿಲ್ಲ ಎನ್ನುವುದು ಸರಿ. ಆದರೆ ರಾಜ್ಯದೊಳಗಿರುವ ಪ್ರಾದೇಶಿಕ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿದರೆ ಪ್ರಾದೇಶಿಕ ಚಿತ್ರಗಳು ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದವರು ಪಂಚಭಾಷೆ ಸಿನಿಮಾ ತಾರೆ ಸುಮನ್ ತಲ್ವಾರ್ ಅವರು.
ವಿಜಯ ಕರ್ನಾಟಕದ ಲವಲವಿಕೆ ಪುರವಣಿಯಲ್ಲಿ ಪ್ರಕಟವಾದ ‘ಲವರ್ ಬಾಯ್ ಸುಮನ್ ಮತ್ತೆ ಟಾಲಿವುಡ್‌ಗೆ ಎಂಟ್ರಿ’ ಎನ್ನುವ ವಿಶೇಷ ವರದಿಯನ್ನು ಗಮನಿಸಿದ ಸುಮನ್ ನೂರಾರು ಕಿ.ಮೀ ದೂರದಲ್ಲಿರುವ ಹೈದರಾಬಾದ್‌ನಿಂದ ತಮ್ಮ ಬ್ಯುಸಿ ಶೆಡ್ಯುಲ್‌ಗಳ ನಡುವೆ ಮಂಗಳೂರಿನ ವಿಕ ಕಚೇರಿಗೆ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿದರು. ಪತ್ರಿಕೆ ಕಟ್ಟುವ ಕೆಲಸದಲ್ಲಿ ತಲ್ಲೀನರಾಗಿದ್ದ ಸಿಬ್ಬಂದಿಗಳ ಜತೆಯಲ್ಲಿ ಬರೋಬರಿ ಒಂದು ತಾಸಿನ ಕಾಲ ಸಿನಿಮಾ, ಭಾಷೆ, ಬದುಕು, ಕರಾವಳಿಯಂತಹ ನಾನಾ ಟಾಪಿಕ್‌ಗಳ ಮೇಲೆ ಸಮನ್ ಮಾತಿಗೆ ಕೂತಿದ್ದರು.
ಇಡೀ ಭಾರತದಲ್ಲಿ ಕರ್ನಾಟಕ ರಾಜ್ಯ ಸಂಪೂರ್ಣ ಭಿನ್ನ . ಇಲ್ಲಿ ಐದಾರು ಭಾಷೆಗಳಿದ್ದರೂ ನಾವೆಲ್ಲರೂ ಒಂದೇ ಎನ್ನುವ ಏಕತೆಯ ಮಂತ್ರವಿದೆ. ಆದರೆ ಉಳಿದ ರಾಜ್ಯಗಳಲ್ಲಿ ಒಂದೇ ಭಾಷೆ, ಭೂಮಿಗಾಗಿ ದಿನನಿತ್ಯ ಹೊಡೆದಾಟ ನಡೆಯುತ್ತದೆ. ಆಂಧ್ರ ಪ್ರದೇಶದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುವ ಹೋರಾಟ ದಿನಲೂ ಕಣ್ಣಾರೆ ನೋಡಿದ್ದೇನೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿರುವ ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ಡಬ್ ಮಾಡಿದರೆ ಇಲ್ಲಿನ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಬರುತ್ತದೆ ಎನ್ನುವುದು ಸುಮನ್ ಅವರ ಅಭಿಪ್ರಾಯ.
ತುಳು ಸಿನಿಮಾಕ್ಕೆ ರೆಡಿ:
ತುಳು ಸಿನಿಮಾಗಳು ಇತ್ತೀಚೆಗೆ ಹೆಚ್ಚಾಗಿ ಥಿಯೇಟರ್‌ಗಳಿಗೆ ಬರುತ್ತಿದೆ. ಆದರೆ ಗುಣಮಟ್ಟದ ಚಿತ್ರಗಳು ಇಲ್ಲಿ ಮೂಡಿ ಬರಬೇಕು. ಈಗ ನೆರೆಯ ರಾಜ್ಯಗಳ ಸಿನಿಮಾಗಳು ಇಲ್ಲಿನ ಥಿಯೇಟರ್‌ಗಳಿಗೆ ದಾಳಿ ಮಾಡುತ್ತಿರುವುದರಿಂದ ತುಳು ಚಿತ್ರಗಳ ಗುಣಮಟ್ಟ ಬಹಳಷ್ಟು ಸುಧಾರಣೆಯಾಗಬೇಕಾದ ಅವಶ್ಯಕತೆ ಇದೆ. ಸ್ಪರ್ಧೆ ಎನ್ನುವ ವಿಚಾರ ಬರೀ ತುಳು ಸಿನಿಮಾಗಳಿಗೆ ಮಾತ್ರವಲ್ಲ ಎಲ್ಲ ರಂಗಕ್ಕೂ ಮುಟ್ಟಿದೆ. ದೊಡ್ಡ ದೊಡ್ಡ ಬಜೆಟ್‌ಗಳ ಚಿತ್ರಗಳು ತುಳುವಿನಲ್ಲಿ ಬರದೇ ಹೋದರೂ ಚಿಂತಿಲ್ಲ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತುಳುವಿನ ಚಿತ್ರಗಳು ಸದ್ದು ಮಾಡಬೇಕು ಎನ್ನುವುದು ಸುಮನ್‌ರ ಮಾತು.
ತುಳು ಚಿತ್ರದಲ್ಲಿ ನಟಿಸಲು ನಾನು ರೆಡಿ. ಸಂಭಾವನೆ ಕೊಡದೇ ಇದ್ದ್ರೂ ಬೇಸರವಿಲ್ಲ. ಅವರು ಬರೀ ನನ್ನ ಸಿಬ್ಬಂದಿಗಳ ಖರ್ಚು ನೋಡಿದರೆ ಸಾಕು. ಆದರೆ ಚಿತ್ರದಲ್ಲಿ ಒಳ್ಳೆಯ ಸಂದೇಶ ಇರಬೇಕು. ಸಮಾಜದ ಕುರಿತು ಜಾಗೃತಿ ಮೂಡಿಸುವಂತಿರಬೇಕು. ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವಾಗಿದ್ದೂ, ಕಡಿಮೆ ಖರ್ಚಿನಲ್ಲಿ ರಾಷ್ಟ್ರಮಟ್ಟದ ಮನ್ನಣೆ ಸಿಗುವಂತಾಗಬೇಕು. ಅಂತಹ ಚಿತ್ರಗಳಿಗೆ ನಾನು ಖಂಡಿತವಾಗಿಯೂ ಡೇಟ್ಸ್ ಕೊಡುತ್ತೇನೆ ಎನ್ನುತ್ತಾರೆ ಸುಮನ್.
ಸಿನ್ಮಾ ಬದುಕು ಕೊಟ್ಟಿದೆ:
ಕಳೆದ ೩೫ ವರ್ಷಗಳಿಂದ ಸಿನ್ಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲೀಷ್‌ನಲ್ಲೂ ನಟಿಸಿ ಬಂದಿದ್ದೇನೆ. ಸಿನಿಮಾದಲ್ಲಿ ನಟಿಸುವುದು ಬಿಟ್ಟರೆ ನನಗೆ ಬೇರೆ ಕೆಲಸ ಗೊತ್ತಿಲ್ಲ. ಬಣ್ಣದ ಬದುಕು ನನಗೆ ಬಹಳಷ್ಟು ಕೊಟ್ಟಿದೆ ಹಾಗೂ ಬಹಳಷ್ಟು ಕಿತ್ತುಕೊಂಡಿದೆ. ಆದರೂ ಈ ಏರುಪೇರಿನ ಬದುಕಿನಲ್ಲೂ ನನಗೆ ಬಣ್ಣದ ಲೋಕ ಇಷ್ಟವಾಗಿದೆ ಎನ್ನುವ ಸುಮನ್ ಚಂದ್ರಬಾಬು ನಾಯ್ಡು ಅವರ ಪಕ್ಷದ ಸಿದ್ದಾಂತಗಳು ಬಹಳ ಇಷ್ಟವಾಯಿತು.ಅದಕ್ಕಾಗಿ ಅವರಿಗೆ ಬೆಂಬಲ ಸೂಚಿಸಿದೆ. ಆದರೆ ರಾಜಕಾರಣಕ್ಕಂತೂ ಇಳಿಯುವ ಮಾತು ಸಾಧ್ಯಕ್ಕೆ ಇಲ್ಲ ಎನ್ನುತ್ತಾರೆ.
ತೆಲುಗಿನಲ್ಲಿ ನಾಯಕನಾಗಿ ಇತ್ತೀಚೆಗೆ ಸಿನ್ಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ಮರುಜನ್ಮ ಕೊಟ್ಟ ಸಿನಿಮಾ. ಇಡೀ ಸಿನ್ಮಾ ಹಿಸ್ಟರಿಯಲ್ಲಿ ನಾಯಕನಾಗಿ ಅಭಿನಯಿಸಿ ಮತ್ತೆ ವಿಲನ್ ಗೆಟಪ್‌ಗೆ ತಿರುಗಿ ಈಗ ಮತ್ತೆ ನಾಯಕನ ಸ್ಥಾನಕ್ಕೆ ಬರುವುದು ಸುಲಭವಲ್ಲ. ಅದರಲ್ಲೂ ಕರಾವಳಿಯ ಹುಡುಗನೊಬ್ಬ ಬೇರೆ ಸಿನ್ಮಾ ಇಂಡಸ್ಟ್ರಿಯಲ್ಲಿ ಈ ರೀತಿ ಸಾಧನೆಯ ಮಾಡಲು ಸಾಧ್ಯವಿಲ್ಲ. ಆದರೆ ನನ್ನ ಬಣ್ಣದ ಜೀವನದಲ್ಲಿ ಇದೆಲ್ಲವೂ ಸಾಧ್ಯವಾಗಿದೆ. ಇದೆಲ್ಲವೂ ಅಭಿಮಾನಿಗಳ ದಯೆ ಹಾಗೂ ದೇವರ ಮೇಲೆ ನಾನಿಟ್ಟ ನಂಬಿಕೆ ಎನ್ನುವುದು ಸುಮನ್‌ರ ಅಂತಾರಾಳದ ಮಾತು.
ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಹತ್ತಾರು ಚಿತ್ರಗಳು ಕೈಯಲ್ಲಿರುವುದರಿಂದ ನನಗೆ ಟೈಮ್ ಸಿಕ್ಕೋದು ಬಹಳ ಕಡಿಮೆ. ನಟನೆ ಜತೆಯಲ್ಲಿ ದೂರ ದೂರದ ಊರುಗಳಿಗೆ ಪ್ರವಾಸ ಮಾಡುವುದರಲ್ಲಿಯೇ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ. ಆದರೂ ಕರಾವಳಿಗೆ ವರ್ಷದಲ್ಲಿ ಒಂದೆರಡು ಬಾರಿ ಭೇಟಿ ಕೊಡುತ್ತೇನೆ. ಇಲ್ಲಿನ ದೇವಸ್ಥಾನ, ನಾಗಬನಗಳಿಗೆ ಭೇಟಿ ಕೊಡದೇ ಹೋದರೆ ಮನಸ್ಸಿನಲ್ಲಿ ಏನೋ ಕಳೆದುಕೊಂಡ ಅನುಭವವಾಗುತ್ತದೆ ಎನ್ನುವ ಮಾತಿನ ಮೂಲಕ ಸುಮನ್ ಚಿಟ್‌ಚಾಟ್‌ಗೆ ಮುಕ್ತಾಯ ಗೀತೆ ಹಾಡಿದರು.
No comments:
Post a Comment