
ವಿಜಯ ಕರ್ನಾಟಕದ ಮತ್ತೊಬ್ಬ ಸಹೋದರಪತ್ರಿಕೆ ‘ವಿಜಯ ನೆಕ್ಸ್ಟ್’ ಗಾಗಿ ನಾನು ಈಗ ಬರೆಯಲು ಹೊರಟಿದ್ದೇನೆ. ವಿಜಯ ಕರ್ನಾಟಕದ ಲವಲವಿಕೆಯಲ್ಲಿ ನನಗೆ ಕೊಟ್ಟ ಪ್ರೋತ್ಸಾಹ ಹಾಗೂ ಗೌರವ ಈ ಪತ್ರಿಕೆಯಲ್ಲೂ ಸಿಗುತ್ತದೆ ಎನ್ನುವ ಗ್ಯಾರಂಟಿ ಸಿಕ್ಕಿದ ನಂತರ ಈ ವಾರದಿಂದ ಅದಕ್ಕಾಗಿ ಬರೆದುಕೊಡುತ್ತಿದ್ದೇನೆ.
ಅಂದಹಾಗೆ ಮೊದಲ ವಾರದಲ್ಲಿಯೇ ನನ್ನ ಮೂರು ಲೇಖನಗಳು ಈ ಪತ್ರಿಕೆಯಲ್ಲಿ ಬಂದಿದೆ. ಮಕ್ಕಳ ದಿನಾಚರಣೆಯ ವಿಶೇಷಸಂಚಿಕೆ ‘ವಿಜಯ ನೆಕ್ಸ್ಟ್’ ಒಂದ್ ಸಾರಿ ಓದಿ ನೋಡಿ. ಹೊಸ ವಿಷಯ, ಹೊಸ ಹುರುಪು ನಿಮ್ಮಲ್ಲಿ ಮೂಡುವ ಗ್ಯಾರಂಟಿ ನಾನು ಕೊಡುತ್ತೇನೆ. ಇನ್ನೂ ಮುಂದೆ ವಿಜಯ ಕರ್ನಾಟಕದ ಜತೆಯಲ್ಲಿ ‘ವಿಜಯ ನೆಕ್ಸ್ಟ್’ ವನ್ನು ಕೊಂಡು ಓದಿ.
ಗಾಯ ಮಾಡಿಕೊಂಡಿದ್ದು ನೆನಪಿದೆಯಾ..?
ಪ್ರೀತಿಯ ಪಕ್ಕು,
ಬಾಲ್ಯದ ನೆನಪುಗಳು ಈಗಲೂ ಕಚಗುಳಿ ಇಡುತ್ತದೆ. ಪದೇ ಪದೇ ನೆನಪಿಗೆ ಬಂದು ಕಣ್ಣು ತೇವ ಮಾಡಿ ಬಿಡುತ್ತದೆ. ನಾನು ನೀನು ಯಾವಾಗಲೂ ಅಣ್ಣ-ತಮ್ಮಂದಿರಂತೆ ಇರಲಿಲ್ಲ ಅಂತಾ ನಿನಗೂ ಗೊತ್ತು ಅಲ್ವಾ..? ನೀನು ನನ್ನನ್ನು ಯಾವ ರೀತಿಯಲ್ಲಿ ನೋಡಿದ್ದೀಯಾ ಅಂತಾ ಗೊತ್ತಿಲ್ಲ ಮಾರಾಯ. ಆದರೆ ನನಗೆ ನೀನು ಒಬ್ಬ ಒಳ್ಳೆಯ ಸ್ನೇಹಿತ. ಕಷ್ಟ- ಸುಖಗಳನ್ನು ಹಂಚಿಕೊಂಡು ಧೈರ್ಯ ತುಂಬಿ ಕಳುಹಿಸುವ ಒಬ್ಬ ಮಾರ್ಗದರ್ಶಕ. ನಿನ್ನ ಅಂದಿನ- ಇಂದಿನ ಬದುಕು ಎಲ್ಲವೂ ನನಗೆ ಬದುಕು ಕಟ್ಟಲು ಕಾರಣವಾಗಿದೆ.
ಈಗಲೂ ನೆನಪಿಗೆ ಬರುವ ಒಂದು ವಿಷ್ಯಾ ಅಂದ್ರೆ ಕಡೇ ಶಿವಾಲಯದ ಪಾಂಡಿಬೆಟ್ಟುವಿನಲ್ಲಿದ್ದ ನಮ್ಮ ದೊಡ್ಡಮ್ಮನ ಮನೆ. ರಜೆ ಬಂದಾಗ ನಾವಿಬ್ಬರೂ ಅಲ್ಲಿಗೆ ಹೋಗಿ ಪುಟ್ಟ ಕೆರೆಯಲ್ಲಿ ಈಜಾಡಿಕೊಂಡು ಬರುತ್ತಿದ್ದೇವು.. ಮರಕೋತಿ ಆಡಿ ಬಿದ್ದು ಮಾಡಿದ ಗಾಯ, ನೋವಿನಿಂದ ಅತ್ತುಕೊಂಡು ಹೋಗಿದ್ದು, ದೊಡ್ಡಮ್ಮ ಬಂದು ಔಷಧ ಹಚ್ಚಿ ಸಮಾಧಾನ ಮಾಡಿದ್ದು, ಎಲ್ಲವೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಅಂದಿನ ಮಕ್ಕಳಾಟಗಳನ್ನು ನೆನಪಿಸಿಕೊಂಡಾಗ ಈಗಲೂ ಜೋರಾದ ನಗು ಬರುತ್ತದೆ.
ತೀರಾ ಇತ್ತೀಚೆಗೆ ಖಾಸಗಿ ಟಿವಿಯಲ್ಲಿ ನಿರ್ದೇಶಕ ನಾಗತಿಹಳ್ಳಿಯ ‘ಬಾನಲ್ಲೆ ಮಧುಚಂದ್ರಕೆ’ ಚಿತ್ರ ನೋಡುತ್ತಿದ್ದೆ. ಆಗ ನೆನಪಿಗೆ ಬಂದದ್ದು ನಿನ್ನ ಮುಖ. ಕಾರಣ ಗೊತ್ತಲ್ಲ ಪಕ್ಕು.. ನಟ ಶಿವರಾಂ ರುದ್ರಭೂಮಿಯಲ್ಲಿ ಕೂತು ಕವನ ಬರೆಯುವ ರೀತಿಯಲ್ಲಿ ನೀನು ಮರದ ಮೇಲೆ ಕೂತು ಕತೆ, ಕವನ ಬರೆದುಕೊಂಡಿದ್ದಿ. ನನಗೆ ಕರಾವಳಿಯ ಗಂಡು ಕಲೆ ಯಕ್ಷಗಾನ ಇಷ್ಟವಾದರೆ ನಿನಗೆ ರಂಗಭೂಮಿಯೇ ಬಹಳ ಇಷ್ಟವಾಗಿತ್ತು.
ನೀನು ಆಯ್ಕೆ ಮಾಡಿಕೊಂಡಿದ್ದ ರಂಗಭೂಮಿ ನಿನಗೆ ಒಂದು ಹೊಸ ವೇದಿಕೆ ಕೊಟ್ಟಿದೆ. ಅದಕ್ಕಿಂತಲೂ ಮುಖ್ಯವಾಗಿ ನೀನು ಪಟ್ಟ ಕಷ್ಟಗಳಿಗೆ ಈಗಲಾದರೂ ಸರಿಯಾದ ಬೆಲೆ ಬಂತಲ್ಲ ಎನ್ನುವ ಖುಷಿ, ಸಂತೃಪ್ತಿ ನಿನಗಿಂತ ಜಾಸ್ತಿ ನನಗಿದೆ. ಈಗಲೂ ಸಿನ್ಮಾ ಥಿಯೇಟರ್‌ಗಳಿಗೆ ಹೋಗಿ ಸಿನ್ಮಾ ನೋಡುವಾಗ ನಿನ್ನ ನೆನಪು ಕಾಡುತ್ತದೆ. ಯಾಕ್ ಅಂತೀಯಾ.. ಮಾರಾಯ..ಲಾಲ್‌ಭಾಗ್‌ನ ಪಕ್ಕದಲ್ಲಿದ್ದ ಉರ್ವಶಿ ಥಿಯೇಟರ್‌ನಲ್ಲಿ ನಾವು ಜತೆಯಾಗಿ ನೋಡುತ್ತಿದ್ದ ಸಿನ್ಮಾಗಳಂತೂ ಲೆಕ್ಕಕ್ಕೆ ಸಿಗಲು ಸಾಧ್ಯವಿಲ್ಲ.
ಒಂದು ಸಾರಿ ಉರ್ವಶಿ ಥಿಯೇಟರ್‌ನಲ್ಲಿ ಡಾ.ರಾಜ್ ಕುಮಾರ್ ಅವರ ‘ಶಂಕರಗುರು’ ಸಿನ್ಮಾ ನೋಡಲು ಟಿಕೆಟ್‌ಗಾಗಿ ಕೌಂಟರ್‌ನಲ್ಲಿ ಮೈಲು ಉದ್ದದ ಸರತಿಯಲ್ಲಿ ನಿಂತು ಸುಸ್ತಾಗಿ ವಾಪಸು ಬಂದು ನಂತರ ಮರುದಿನ ಬೇಗನೆ ಹೋಗಿ ಟಿಕೆಟ್‌ಗಾಗಿ ಕ್ಯೂ ನಿಂತು ‘ಶಂಕರ್‌ಗುರು’ ಸಿನ್ಮಾ ನೋಡಿ ಖುಷಿಪಟ್ಟುಕೊಂಡದ್ದು ಎಲ್ಲವೂ ಕಣ್ಣ ಮುಂದೆ ನಡೆಯುತ್ತಿದೆ ಅಂತಾ ಭಾಸವಾಗುತ್ತಿದೆ. ಲಾಲ್‌ಭಾಗ್‌ನ ಪಕ್ಕದಲ್ಲಿರುವ ನಿನ್ನ ಮನೆಯಲ್ಲಿ ಗೆಳೆಯ ಕಿರಣ್ ಜತೆಯಲ್ಲಿ ನಾವು ಆಡುತ್ತಿದ್ದ ಕೇರಂ ಆಟ. ಈಗ ನನ್ನ ಮಕ್ಕಳ ಜತೆಯಲ್ಲಿ ಆಡುವಾಗ ನೆನಪಿಗೆ ಗೊತ್ತಿಲ್ಲದೇ ಬಂದು ಬಿಡುತ್ತದೆ.
ನೀನು ಈಗ ಸಿನ್ಮಾ ರಂಗದಲ್ಲಿ ಬಹಳಷ್ಟು ಬೆಳೆದು ಬಂದಿದ್ದೀಯಾ.. ಈಗಲೂ ನಿನ್ನ ಊರಿನ ಮೂಲ ಮನೆಗೆ ಬಂದಾಗ ಅದೇ ಮೊದಲಿನ ಪಕ್ಕುವಿನ ರೀತಿಯಲ್ಲಿ ನನಗೆ ನೀನು ಕಾಣಿಸುತ್ತೀಯಾ..! ಅಂದಿಗೂ-ಇಂದಿಗೂ ಬಹಳ ವರ್ಷಗಳು ಉರುಳಿದೆ. ಆದರೆ ಮಾನವೀಯತೆ, ವಿಶ್ವಾಸ, ಪ್ರೀತಿ, ಗೆಳೆಯರ ಜತೆಯಲ್ಲಿ ನಡೆದುಕೊಳ್ಳುವ ನಿನ್ನ ವರ್ತನೆಯಲ್ಲಿ ಎಳ್ಳಷ್ಟೂ ಬದಲಾವಣೆಗಳು ಕಂಡಿಲ್ಲ ಮಾರಾಯ. ಅಂದಹಾಗೆ ಭೇಟಿಯಾಗದೆ ತುಂಬಾ ದಿನಗಳಾಯಿತು ಬಿಡು. ಅಮ್ಮ, ಪ್ರಸಾದ,ಆಶಾ ಎಲ್ಲರೂ ನೆನಪಿಗೆ ಬರುತ್ತಾರೆ. ಈ ಬಾರಿಯ ಕ್ರಿಸ್‌ಮಸ್ ಹಬ್ಬಕ್ಕಂತೂ ನಾನು ನಿಮ್ಮ ಜತೆ ಸೇರುತ್ತೇನೆ. ಎಲ್ಲರೂ ಕೂತು ಹರಟೋಣ..
ಇಂತೀ ನಿನ್ನ
ಉದಯ್
...................
ಅಗರಿ ಉದಯ ಕುಮಾರ್
ದಕ್ಷಿಣ ಭಾರತದ ಖ್ಯಾತ ನಟ ಅಗರಿ ಪ್ರಕಾಶ್ ರೈ(ಪ್ರಕಾಶ್ ರಾಜ್)ಅವರ ದಾಯಾದಿ ಸಹೋದರ. ಜತೆಗೆ ಆಪ್ತ ಗೆಳೆಯ. ಪ್ರಕಾಶ್ ರೈ ನಟನೆಯ ಗೀಳು ಹಿಡಿದುಕೊಂಡು ಚೆನ್ನೈ, ಹೈದರಾಬಾದ್, ಮುಂಬಯಿಯನ್ನು ಸುತ್ತಾಡಿಕೊಂಡು ನಟರಾಗಿದ್ದಾರೆ. ಉದಯ್ ಯಕ್ಷಗಾನವನ್ನು ಹವ್ಯಾಸವಾಗಿ ಇಟ್ಟುಕೊಂಡು ತಮ್ಮದೇ ಹವ್ಯಾಸಿ ಯಕ್ಷಗಾನ ತಂಡ, ಹವ್ಯಾಸಿ ಮಕ್ಕಳ ತಂಡ ಕಟ್ಟಿಕೊಂಡು ಯಕ್ಷಗಾನ ಕಲೆಯನ್ನು ಬೆಳೆಸುತ್ತಿದ್ದಾರೆ. ಬಿ.ಸಿ.ರೋಡ್‌ನಲ್ಲಿ ತಮ್ಮದೇ ಪುಟ್ಟ ಶ್ರೀನಿದಿ ರೋಲಿಂಗ್ ಶೆಟರ್ ಕಂಪನಿ ಇಟ್ಟುಕೊಂಡು ಬದುಕು ಕಟ್ಟುತ್ತಿದ್ದಾರೆ.
.....
No comments:
Post a Comment