Friday, November 11, 2011

ಒಂಚೂರು ಬದಲಾಗಿಲ್ಲ ಕಣೋ...


ಡಿಯರ್ ದೇವಿ,
ಗೆಳೆಯ ಎಂದು ಕರೆದರೆ ನನಗೆ ಏನೋ ಒಂದು ಥರದ ಮುಜುಗರ. ಎಲ್ಲಿ ಹೇಳಬೇಕಾದ ವಿಚಾರಗಳು ಮನಸ್ಸಿನಿಂದ ಮರೆಯಾಗಿ ಹೋಗಿ ಬಿಡುತ್ತದೋ ಎನ್ನುವ ಪುಟ್ಟ ಭಯ ಬಂದು ಬಿಡುತ್ತದೆ. ಅದಕ್ಕಾಗಿಯೇ ನಿನ್ನನ್ನು ನಾನು ‘ಸಹೋದರ’ ಎಂದೇ ಕರೆದು ಬಿಡುತ್ತೇನೆ ಗೆಳೆಯ. ಸೈಂಟ್ ಮೆರೀಸ್‌ನಿಂದ ಹಿಡಿದು ಮಂಗಳೂರಿನ ಸಂತ.ಅಲೋಶಿಯಸ್ ಕಾಲೇಜಿನವರೆಗೂ ನಾವಿಬ್ಬರೂ ಜತೆಯಾಗಿ ವಿದ್ಯಾಭ್ಯಾಸ ಮಾಡಿಕೊಂಡು ಬಂದವರು.
ಅಂದಿನಿಂದ ಇಂದಿನವರೆಗೂ ನೀನು ಒಂಚೂರು ಬದಲಾಗಿಲ್ಲ. ಕಾಲವಂತೂ ಸಾಕಷ್ಟು ಬದಲಾವಣೆಯ ಗಾಳಿಗೆ ಒಗ್ಗಿಕೊಂಡಿದೆ. ಆದರೆ ನಮ್ಮ ಗೆಳೆತನ ಈ ಎಲ್ಲ ಬದಲಾವಣೆಗಳನ್ನು ಮೆಟ್ಟಿ ನಿಂತುಕೊಂಡಿದೆ. ಹಣ, ಗೌರವ ಬಂದ ಕೂಡಲೇ ಬದಲಾಗುವ ಈ ಜಮಾನದಲ್ಲಿ ನೀನು ನಿಜಕ್ಕೂ ಭಿನ್ನ ಅನ್ನೋದು ನನ್ನ ದೃಢ ವಿಶ್ವಾಸ, ಭರವಸೆಯ ಮಾತಿದು. ನೀನು ನಿನ್ನ ಊರು ಕಿನ್ನಿಗೋಳಿಯೇ ಇರಲಿ ದೂರದ ಬೆಂಗಳೂರೇ ಇರಲಿ ಎಲ್ಲೂ ಕಿನ್ನಿಗೋಳಿಯ ಜನರಿಗೆ ಕೊಡುವ ಮರ್ಯಾದೆ, ಸ್ನೇಹಿತರಿಗೆ ಕೊಡುವ ಗೌರವದ ವಿಚಾರದಲ್ಲಿ ಎಂದಿಗೂ ಚ್ಯುತಿ ಬಂದಿಲ್ಲ.
ನನಗೆ ಈಗಲೂ ನೆನಪಿದೆ ಸಹೋದರ. ೪೦ ವರ್ಷಗಳ ಹಿಂದೆ ಸಂತ. ಅಲೋಶಿಯಸ್ ಕಾಲೇಜಿನ ಪುಟ್ಬಾಲ್ ಗ್ರೌಂಡ್‌ನಲ್ಲಿ ನಾನು ಪುಟ್ಬಾಲ್ ಆಡುತ್ತಿದ್ದಾಗ ನೀನು ಗ್ಯಾಲರಿಯಲ್ಲಿ ಕೂತು ಆಟ ನೋಡುತ್ತಿದ್ದೆ. ಪುಟ್ಬಾಲ್‌ಗೆ ಹೆಡ್ ಕೊಡುವ ನೆಪದಲ್ಲಿ ನಾನು ಹೆಡ್ ಕೊಟ್ಟಾಗ ತಪ್ಪಿ ನಾನು ಬಿದ್ದು ಮೂರ್ಚೆ ಹೋದಾಗ ನೀನು ಬಂದು ನೀರು ಕೊಟ್ಟು ಎಚ್ಚರಿಸಿದೆ. ಈ ನೆನಪು ನನಗೆ ಮಾತ್ರ ಇತ್ತು. ಕಾರಣ ಈ ಪುಟ್ಬಾಲ್ ಹೆಡ್‌ನಿಂದಾಗಿ ತಲೆಯ ಹತ್ತಿರ ರಕ್ತ ಹೆಪ್ಪುಗಟ್ಟಿ ತೀವ್ರ ತೊಂದರೆ ನೀಡುತ್ತಿತ್ತು.
ಆದರೆ ನಿನಗೂ ಈ ವಿಚಾರ ಗೊತ್ತಿದೆ ಎನ್ನೋದು ನೀನು ತೀರಾ ಇತ್ತೀಚೆಗೆ ಕಳುಹಿಸಿದ ಇಮೇಲ್ ಮೂಲಕ ಗೊತ್ತಾಯಿತು. ಇಮೇಲ್ ಈಗಲೂ ನನ್ನ ಇನ್‌ಬಾಕ್ಸ್‌ನಲ್ಲಿ ಭದ್ರವಾಗಿ ಕೂತಿದೆ. ನಿನ್ನ ನೆನಪು ಕಾಡಿದಾಗ ಮತ್ತೊಮ್ಮೆ ಅದನ್ನು ಓದಿ ತೃಪ್ತಿ ಪಟ್ಟುಕೊಳ್ಳುತ್ತಿದ್ದೇನೆ. ಆಗಾಗ ನಿನ್ನ ಊರಿನ ಮನೆಗೂ ಹೋಗಿ ಶಾರದಾಕ್ಕನ ಪ್ರೇಮಕ್ಕೆ ನಾಲ್ಕು ಮಾತುಗಳನ್ನು ಆಡಿಕೊಂಡು ಬರುತ್ತೇನೆ. ನಿನ್ನ ಸಹೋದರರೆಲ್ಲರೂ ಊರಿನಲ್ಲಿ ಸಿಗುತ್ತಾರೆ. ನೀನು ಮಾತ್ರ ಮೊದಲಿನ ಹಾಗೆ ಸಿಗುತ್ತಿಲ್ಲ. ನನಗೂ ಗೊತ್ತು ಸಹೋದರ ನಿನ್ನ ಕೆಲಸ, ನಿನ್ನನ್ನು ನಂಬಿಕೊಂಡು ಬರುವ ಲಕ್ಷಾಂತರ ಮಂದಿಗೆ ನೀನೊಂದು ದೇವರದೂತ. ಅದೇ ಸಂತೃಪ್ತಿಯಿಂದ ನನಗೆ ನಿನ್ನ ಮೇಲೆ ಗೌರವ, ಹೆಮ್ಮೆ ಬೆಳೆದಿದೆ.
ಬಡವರ ಬಗ್ಗೆ ನಿನಗಿರುವ ಕಾಳಜಿ, ಪ್ರೀತಿ, ಸೇವೆ ಮಾಡುವ ಮನೋಭಾವ ಇನ್ನಷ್ಟೂ ಬೆಳೆಯಲಿ. ಭಾರತದ ಹಳ್ಳಿ ಹಳ್ಳಿಯಲ್ಲಿರುವ ದೀನದಲಿತರ ಸೇವೆಗೆ ನಿಂತ ದೇವರ ದೂತ ನೀನು.. ಇದೆ ಕೆಲಸ ಮುಂದುವರಿಸಿಕೊಂಡು ಹೋಗು. ಮತ್ತೊಂದು ಬದುಕು ಇದೆ ಎನ್ನುವ ಮಾತು ಸತ್ಯವಾದರೆ ನಾನು ಮತ್ತೊಮ್ಮೆ ನಿನ್ನ ಪ್ರೀತಿಯ ಗೆಳೆಯನಾಗಬೇಕು. ಅದು ಕೂಡ ಸಾಧ್ಯವಿಲ್ಲ ಎಂದಾದರೆ ಸಹೋದರನಾಗೋ ಹುಟ್ಟಿ ಬರಬೇಕು ಎನ್ನುವುದು ನನ್ನ ಹೆಬ್ಬಯಕೆ. ಅಂದಹಾಗೆ ಬರೆಯಲು ನಿನ್ನ ಬಗ್ಗೆ ಸ್ನೇಹದ ವಿಚಾರಗಳಿವೆ. ಆದರೆ ಎಲ್ಲವೂ ಬರೆಯಲು ಆಗುತ್ತಿಲ್ಲ. ಎಲ್ಲವೂ ಹೇಳಿಕೊಳ್ಳಲು ಆಗುತ್ತಿಲ್ಲ. ಇರಲಿ ಬಿಡು ಸಹೋದರ ನಿನ್ನ ಸಾಧನೆಯ ಬಗ್ಗೆ ನನಗೆ, ಊರಿಗೆ, ಕಲಿತ ಶಾಲೆಗೆ ಸದಾ ನೆನಪಿರುತ್ತದೆ.

ನಿನ್ನ ಪ್ರೀತಿಯ ಗೆಳೆಯ
ಎಡ್ಡಿ( ಎಡ್ವಿನ್)
..............
ಎಡ್ವಿನ್ ಎನ್. ಡಿ’ಮೆಲ್ಲೊ-
ಮಧ್ಯಪ್ರಾಚ್ಯ ದೇಶದ ಸುಲ್ತಾನ್ ಬೆನ್ ಎಕ್ಸಾ ಗೂಪ್‌ನ ಕಂಪನಿಯೊಂದರಲ್ಲಿ ೩೫ ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡಿ ಈಗ ಪ್ರಸ್ತುತ ಕಿನ್ನಿಗೋಳಿಯಲ್ಲಿ ನಿವೃತ್ತ ಬದುಕು ಕಟ್ಟುತ್ತಿದ್ದಾರೆ. ಮಂಗಳೂರಿನ ಗ್ರಾಹಕ ಮಾಹಿತಿ ಕೇಂದ್ರದಲ್ಲಿ ಹಿರಿಯ ಉಪಾಧ್ಯಕ್ಷರಾಗಿ, ಗ್ರಾಹಕ ಹಕ್ಕುಗಳ ಅನುಷ್ಠಾನ ಹಾಗೂ ಜಾರಿ ನಿರ್ದೇಶನಾಲಯದಲ್ಲಿ ಮುಖ್ಯಸ್ಥರಾಗಿ ದುಡಿಯುತ್ತಿದ್ದಾರೆ. ಎಡ್ವಿನ್ ಡಿ’ಮೆಲ್ಲೊ ದೇಶದ ಖ್ಯಾತ ಹೃದಯ ತಜ್ಞ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ತುಂಬಾ ಹತ್ತಿರದ ಹಾಗೂ ಕುಟುಂಬದ ಸ್ನೇಹಿತ. ಜತೆಗೆ ಸಂತ. ಅಲೋಶಿಯಸ್ ಕಾಲೇಜಿನಲ್ಲಿದ್ದಾಗ ಹಾಸ್ಟೆಲ್‌ನಲ್ಲಿ ರೂಮ್ ಮೇಟ್ ಆಗಿದ್ದವರು.

No comments:

Post a Comment