ಗೋಪಾಲ ರತ್ನಂ ಸುಬ್ರಹ್ಮಣ್ಯ ಅಯ್ಯರ್ ಎಂದರೆ ಯಾರಿಗೂ ಗೊತ್ತಾಗಲ್ಲ ಸ್ವಾಮಿ. ಶಾರ್ಟ್ ಆಂಡ್ ಸ್ವೀಟಾಗಿ ಮಣಿರತ್ನಂ ಎಂದೇ ಕರೆಯಬೇಕು. ಮದ್ರಾಸಿನ ಹುಡುಗನೊಬ್ಬ ಸಿನ್ಮಾ ಲೋಕವನ್ನು ಶ್ರೀಮಂತ ಮಾಡಿದ ಕತೆ ಇಲ್ಲಿದೆ...
ಭಾರತೀಯ ಚಿತ್ರನಗರಿಯಲ್ಲಿ ಮಣಿ ಎಂದರೆ ಕೇರಾಫ್ ಕ್ರಿಯೇಟಿವಿಟಿ. ಕಳೆದ ೨೮ ವರ್ಷಗಳಿಂದ ಸಿನ್ಮಾ ಲ್ಯಾಂಡ್‌ನಲ್ಲಿ ಬಿದ್ದುಕೊಂಡಿದ್ದರೂ ಕೂಡಾ ಅವರ ಫಿಲ್ಮೋಗ್ರಾಫಿಯಲ್ಲಿರುವ ಸಿನ್ಮಾಗಳ ಸಂಖ್ಯೆ ಬರೀ ಮೂವತ್ತರ ಅಸುಪಾಸು. ಮಣಿಯ ಚಿತ್ರಗಳೆಂದರೆ ಬರೋಬರಿ ವರ್ಷಗಟ್ಟಲೆ ಕಾದು ನಿಲ್ಲಬೇಕಾದ ಅನಿವಾರ್ಯತೆ.
ಚಿತ್ರದ ಪ್ರತಿ ಸ್ಟೇಜ್‌ನಲ್ಲೂ ಮಣಿಯ ಕಾರುಬಾರು ಕಾಣ ಸಿಗೋದು ಗ್ಯಾರಂಟಿ. ಚಿತ್ರ ತೆರೆಗೆ ಬಂದಾಗ ಪ್ರತಿ ಪ್ರೇಮ್‌ನಲ್ಲೂ ಮಣಿಯ ಕೆಲಸ ಪ್ರೇಕ್ಷಕನಿಗೆ ದಂಗು ಮೂಡಿಸಿ ಬಿಡುತ್ತದೆ. ದಟ್ಸ್ ಕಾಲ್ಡ್ ಡೈರೆಕ್ಟರ್ ಮಣಿರತ್ನಂ. ಗೋಪಾಲ ರತ್ನಂ ಸುಬ್ರಹ್ಮಣ್ಯ ಅಯ್ಯರ್ ಇದು ಮಣಿರತ್ನಂರ ಪೂರ್ಣ ನಾಮಧೇಯ.
ಮಣಿಯ ಆರಂಭದ ಕನ್ನಡದ ‘ಪಲ್ಲವಿ ಅನುಪಲ್ಲವಿ’ಯಿಂದ ಹಿಡಿದು ತೀರಾ ಇತ್ತೀಚೆಗೆ ಬಂದು ಡಬ್ಬಾ ಸೇರಿಕೊಂಡ ‘ರಾವಣ್’ ವರೆಗೂ ಚಿತ್ರದಲ್ಲಿ ತಮ್ಮದೇ ಶೈಲಿಯನ್ನು ಆಳವಡಿಸಿಕೊಂಡು ಬಂದವರು.
‘ಮೌನ ರಾಗಂ’ ‘ಗೀತಾಂಜಲಿ’, ‘ಅಂಜಲಿ’, ‘ನಾಯಗನ್’, ‘ದಳಪತಿ’, ‘ರೋಜಾ’, ‘ಬಾಂಬೆ’, ‘ಇರುವರ್’, ‘ದಿಲ್ ಸೇ’, ‘ಕಣ್ಣತ್ತಿಲ್ ಮುತ್ತಂ ಇಟ್ಟಲ್’, ‘ಯುವ’, ‘ಗುರು’, ‘ರಾವಣ್’ ಚಿತ್ರಗಳು ತನ್ನ ವಿಶಿಷ್ಟ ಕತೆಯಿಂದ ಪ್ರೇಕ್ಷಕ ವರ್ಗವನ್ನು ಮಾತ್ರವಲ್ಲ ಪ್ರಶಸ್ತಿಗಳ ಖಜಾನೆಗೆ ಕಣ್ಣು ಹಾಕಿತ್ತು.
ಇಂದಿಗೂ ಮಣಿಯ ಚಿತ್ರಗಳು ಟಿವಿ ತೆರೆಯ ಮೇಲೆ ಮೂಡಿದಾಗ ಚಾನೆಲ್‌ಗಳ ಟಿಆರ್‌ಪಿ ರೇಟ್ ಕೂಡ ರೈಸ್ ಆಗುತ್ತದೆ ಎನ್ನುವ ಮಾತಿದೆ. ದೇಶಭಕ್ತಿಯ ಕಿಚ್ಚು ಹಚ್ಚಲು ಬಂದ ‘ರೋಜಾ’ ಸಿನ್ಮಾ ಪ್ರತಿ ಸ್ವಾತಂತ್ರ್ಯ,ಗಣರಾಜ್ಯ ದಿನ ಟಿವಿಯಲ್ಲಿ ಖಾಯಂ ಆಗಿ ಬಂದು ಬಿಡುತ್ತದೆ. ಹಿಂದೂ-ಮುಸ್ಲಿಂ ಕೋಮು ಸೌಹಾರ್ಧತೆ ಬಗ್ಗೆ ಸಂದೇಶ ಸಾರುವ ‘ಬಾಂಬೆ’ ಸಿನ್ಮಾವನ್ನು ಯಾರು ತಾನೇ ಮರೆಯಲು ಸಾಧ್ಯ. ಅಂದಹಾಗೆ ಮಣಿಯ ಎಲ್ಲ ಚಿತ್ರಗಳು ಸೂಪರ್ ಹಿಟ್ ಆಗಿಲ್ಲ ಅನ್ನೋದು ಕೂಡಾ ಅಷ್ಟೇ ನಿಜ. ಕಾಲಕ್ಕೆ ತಕ್ಕಂತೆ ಮಣಿ ಬದಲಾದರೂ ಕೆಲವೊಂದು ಇನ್ನರ್ ಕಾರಣಗಳಿಂದ ಚಿತ್ರ ಥಿಯೇಟರ್‌ನಲ್ಲಿ ಬಹಳಷ್ಟು ಸದ್ದು ಮಾಡದೇ ಮಣಿಯನ್ನು ಮೂಲೆ ಗುಂಪು ಮಾಡಿ ಹಾಕಿದ್ದು ಕೂಡಾ ಇದೆ.
ಮಣಿಯ ಚಿತ್ರಗಳು ಥಿಯೇಟರ್‌ನಲ್ಲಿ ಸರಿಯಾಗಿ ಕಲೆಕ್ಷನ್ ಆಗದೇ ಇದ್ದಾರೆ ಎಲ್ಲ ತಪ್ಪುಗಳನ್ನು ತಾನೇ ಹೊತ್ತುಕೊಂಡು ಅಜ್ಞಾತ ವಾಸಕ್ಕೆ ತೆರಳಿ ಚಿತ್ರದಲ್ಲಿ ನಡೆದ ತಪ್ಪುಗಳನ್ನು ಅಧ್ಯಯನ ಮಾಡಿ ನಂತರ ಮತ್ತೊಂದು ಚಿತ್ರಕ್ಕೆ ಸ್ಕೆಚ್ ರೆಡಿ ಮಾಡುತ್ತಾರೆ. ಇದು ಮಣಿರತ್ನಂಗೆ ಚಿತ್ರದಿಂದ ಚಿತ್ರಕ್ಕೆ ಇರುವ ಪ್ರೀತಿ.
ಹುಡುಕಾಟದ ಮಣಿ:ಮಣಿರತ್ನಂ ಚಿತ್ರಗಳಲ್ಲಿ ಕ್ಯಾಮರಾ ವರ್ಕ್‌ಗೆ ಬಹಳಷ್ಟು ಮಹತ್ವ ಇದೆ. ಚಿತ್ರದ ಕತೆ, ಸಂಗೀತ, ಸಂಕಲನ ಹೀಗೆ ಪ್ರತಿಯೊಂದು ಹಂತದಲ್ಲಿ ಮಣಿ ಖುದ್ದಾಗಿ ಫೀಲ್ಡ್‌ಗೆ ಬಂದುಬಿಡುತ್ತಾರೆ. ಮಣಿರತ್ನಂರ ಖಾಸಾ ಚಿತ್ರ ಎಡಿಟರ್ ಸುರೇಶ್ ಅರಸ್ ಹೇಳುವ ಮಾತು ಹೀಗಿದೆ: ಮಣಿ ಸರ್ ಅವರ ಚಿತ್ರಗಳು ಎಡಿಟಿಂಗ್ ಮಾಡಲು ಕೊಂಚ ಕಷ್ಟ. ತಮಗೆ ತೃಪ್ತಿಯಾಗುವ ವರೆಗೂ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಪಕ್ಕದಲ್ಲಿ ಕೂತು ಹೇಳುತ್ತಾರೆ. ಅವರು ಚಿತ್ರವನ್ನು ಬೇಗನೆ ಮುಗಿಸುತ್ತಾರೆ. ಆದರೆ ಎಡಿಟಿಂಗ್ ವಿಚಾರದಲ್ಲಿ ಮಾತ್ರ ಆರು ತಿಂಗಳಿನಿಂದ ವರ್ಷಗಟ್ಟಲೆ ಎಡಿಟರ್ ಡೆಸ್ಕ್‌ನಲ್ಲಿ ಕೂತು ಚಿತ್ರದ ಕಾಪಿಯನ್ನು ತಿದ್ದುತ್ತಾರೆ. ಯಾವುದೇ ನಿರ್ದೇಶಕ ಈ ರೀತಿಯ ಕೆಲಸ ಮಾಡುವುದಿಲ್ಲ. ನಿರ್ದೇಶಕರು ಮಾಡದೇ ಇರುವ ಕೆಲಸವನ್ನು ಮಣಿರತ್ನಂ ಮಾಡುತ್ತಾರೆ. ಈ ಕಾರಣದಿಂದ ಮಣಿರತ್ನಂಗೆ ಚಿತ್ರನಗರಿಯಲ್ಲಿ ಒಳ್ಳೆಯ ಹೆಸರಿದೆ.
ಮಣಿರತ್ನಂ ತಮ್ಮ ಚಿತ್ರದಲ್ಲಿ ಪ್ರತಿಭಾವಂತರಿಗಂತೂ ಬಹಳಷ್ಟು ಅವಕಾಶ ಕೊಟ್ಟೆ ಕೊಡುತ್ತಾರೆ. ಖ್ಯಾತ ಛಾಯಾಗ್ರಾಹಕ ಸಂತೋಷ್ ಶಿವನ್ ಇವರ ಚಿತ್ರಗಳಿಂದಲೇ ಹೊರ ಬಂದ ಪ್ರತಿಭೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕೂಡ ಮಣಿಯ ಗರಡಿಯಲ್ಲಿ ಪಳಗಿಕೊಂಡು ಬಂದವರು. ನಟ ಅರವಿಂದ್ ಸ್ವಾಮಿ, ಕಾರ್ತಿಕ್, ಪ್ರಭು, ನಟಿ ರೇವತಿ ಹೀಗೆ ಪ್ರತಿಭಾವಂತರನ್ನು ಹುಡುಕಿ ಅವರಿಗೊಂದು ಅವಕಾಶ ಕೊಡುವುದರಲ್ಲಿ ಮಣಿರತ್ನಂ ಎತ್ತಿದ ಕೈ. ಈಗಲೂ ಹೊಸ ಪ್ರತಿಭೆಗಳನ್ನು ಇಟ್ಟುಕೊಂಡೇ ಬಿಗ್ ಬಜೆಟ್ ಚಿತ್ರವನ್ನು ಮಾಡಿ ಸಕ್ಸಸ್ ಪಾಯಿಂಟ್‌ಗೆ ಸಾಗಿಸುವ ಸಾಮರ್ಥ್ಯ ಮಣಿಗೆ ಸಿದ್ಧಿಸಿದೆ.
ಕನಸು ನುಚ್ಚು ನೂರಾಗುತ್ತಿತ್ತು !‘ಮದ್ರಾಸ್ ಟಾಕೀಸ್’ ಇದು ಮಣಿರತ್ನಂ ತನ್ನ ಚಿತ್ರಗಳನ್ನು ನಿರ್ಮಾಣ ಮಾಡಲು ಇಟ್ಟುಕೊಂಡ ಪ್ರಾಡಕ್ಷನ್ ಕಂಪನಿ ಹೆಸರು. ೧೯೯೫ರಲ್ಲಿ ಈ ಪ್ರಾಡಕ್ಷನ್ ಕಂಪನಿಯನ್ನು ಮಣಿರತ್ನಂರ ಸಹೋದರರಾದ ಜಿ. ಶ್ರೀನಿವಾಸನ್, ಜಿ. ವೆಂಕಟ್ ನಾರಾಯಣ್ ಹಾಗೂ ಪತ್ನಿ ಸುಹಾಸಿನಿ ಮಣಿರತ್ನಂರ ಜತೆಗೂಡಿ ಕಟ್ಟಿ ಬೆಳೆಸಿದವರು.
ಆದರೆ ಹಿರಿಯ ಸಹೋದರ ಜಿ. ವೆಂಕಟ್ ನಾರಾಯಣ್ ೨೦೦೩ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ೨೦೦೭ರಲ್ಲಿ ಮತ್ತೊಬ್ಬ ಸಹೋದರ ಜಿ. ಶ್ರೀನಿವಾಸನ್ ಕಾರು ಅಪಘಾತದಲ್ಲಿ ಮೃತಪಟ್ಟರು. ಈ ಸಮಯದಲ್ಲಿ ‘ಮದ್ರಾಸ್ ಟಾಕೀಸ್’ ಮುರಿದು ಬೀಳುವುದರಲ್ಲಿ ಇತ್ತು. ಆದರೆ ಮಣಿರತ್ನಂರ ಸಮಯಪ್ರಜ್ಞೆಯಿಂದ ಕಂಪನಿ ಸೇಫ್ ಝೋನ್‌ನಿಗೆ ಬಂದು ನಿಂತಿತ್ತು. ಪತ್ನಿ ಸುಹಾಸಿನಿ ಮಣಿಯ ಎಲ್ಲ ಕೆಲಸದಲ್ಲಿ ಜತೆಗೂಡಿದರು. ಕಂಪನಿ ಮತ್ತೇ ಚೇತರಿಕೆ ಕಂಡುಬಂತು. ಸಹೋದರರನ್ನು ಕಳೆದುಕೊಂಡ ಮಣಿ ಚಿತ್ರ ಮಾಡುವುದಕ್ಕೆ ರೆಡಿಯಾದರು.
ಸಹೋದರರು ಹೋದ ನಂತರ ಉದ್ಯಮಿ ರೂಭಾಯಿ ಅಂಬಾನಿಯ ಬದುಕಿನ ಕತೆಯನ್ನು ಆಧರಿಸಿಕೊಂಡ ‘ಗುರು’ ಚಿತ್ರ ಇದೇ ಪ್ರಾಡಕ್ಷನ್ ಕಂಪನಿಯಲ್ಲಿ ತಯಾರಾಯಿತು. ಚಿತ್ರ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿತು. ಇದೇ ಜೋಶ್‌ನಿಂದ ‘ರಾವಣ್’ ಚಿತ್ರ ರೆಡಿಯಾಯಿತು. ಆದರೆ ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಇಲ್ಲದೇ ರಾವಣ್ ಮುರಿದು ಬಿದ್ದು ಬಿಟ್ಟಿತು.
ಮಣಿರತ್ನಂ ಈಗ ಸಿನ್ಮಾ ಮಾಡಲು ರೆಡಿಯಾಗಿದ್ದಾರೆ. ನವೀರಾದ ಲವ್ ಸ್ಟೋರಿ ಜತೆಗೆ ಪ್ರಸ್ತುತ ಘಟನೆಯೊಂದನ್ನು ತೋರಿಸಲು ಹೊರಟಿದ್ದಾರೆ. ಶ್ರೀಲಂಕಾದ ನೌಕಾದಳಕ್ಕೆ ಸಿಕ್ಕ ರಾಮೇಶ್ವರದ ಮೀನುಗಾರರ ಸ್ಥಿತಿ-ಗತಿಯ ಮೇಲೆ ಬೆಳಕು ಚೆಲ್ಲುವ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಕಾರ್ತಿಕ್ ಪುತ್ರ ಗೌತಮ್ ನಾಯಕನಾದರೆ ನಾಯಕಿ ಪಟ್ಟ ಖಾಲಿ ಉಳಿದಿದೆ ಅನ್ನೋದು ಚೆನ್ನೈ ಕಡೆಯಿಂದ ಬಂದ ಸುದ್ದಿ. ಅಂದಹಾಗೆ ಮಣಿರತ್ನಂ ಸೋಲನ್ನು ಗೆಲುವಿನ ರಹದಾರಿ ಎಂದು ಸ್ವೀಕರಿಸಿಕೊಂಡು ಬಂದ ನಿರ್ದೇಶಕ. ಮತ್ತೆ ಸಿನ್ಮಾ ಅಖಾಡಕ್ಕೆ ಇಳಿದು ಗೆದ್ದು ಬರುತ್ತಾರೆ ಎನ್ನುವ ಖಾತರಿಯಂತೂ ಮಣಿಯ ಜತೆಯಲ್ಲಿ ಪ್ರೇಕ್ಷಕನಿಗೂ ಇದೆ.