Thursday, June 30, 2011

ಥರ್ಡ್ ಟೈಮ್ ಲಕ್ಕಿ ಬಾಯ್


ಬಾಲಿವುಡ್ನ ಹಿನ್ನೆಲೆ ಗಾಯಕ ಕಮ್ ನಟ ಲಕ್ಕಿ ಆಲಿ ಮದುವೆಯಾಗುವ ಯೋಚನೆಯಲ್ಲಿದ್ದಾರೆ. ಅರೇ ಲಕ್ಕಿ ಆಲಿಗೆ ಇಲ್ಲಿವರೆಗೂ ಮದುವೆ ಆಗಿಲ್ವಾ...? ಎಂದು ಕೇಳುವ ಮೊದಲೇ ಇದು ಲಕ್ಕಿಯ ಮೂರನೇ ಮದುವೆ ಎನ್ನೋದು ನೆನಪಿಡಬೇಕಾದ ವಿಷ್ಯಾ.

ಬಾಲಿವುಡ್ ಇರಲಿ ಯಾವುದೇ ವುಡ್ಗಳಿರಲಿ ಸಂಗೀತ ಪ್ರೇಮಿಗಳನ್ನು ಲಕ್ಕಿ ಎಂದಿಗೂ ಕೈ ಕೊಟ್ಟಿಲ್ಲ. ತನ್ನ ಆಲ್ಬಂಗಳಿರಲಿ, ನಟಿಸಿದ ಸಿನ್ಮಾಗಳಿರಲಿ ಯಾವುದರಲ್ಲೂ ವಿರಹದ ಜತೆಗೆ ರೊಮ್ಯಾಂಟೀಕ್ ಗೀತೆಗಳನ್ನು ಸುರಿಸಿ ತನ್ನ ಅಭಿಮಾನಿಗಳಿಗೆ ಹೊಸ ಚೇತನ ನೀಡುತ್ತಿದ್ದ ಲಕ್ಕಿ ಆಲಿ ಈಗ ಮದುವೆಯಾಗುವ ಯೋಚನೆಗೆ ಬಂದಿದ್ದಾರೆ.
ಅರೇ ಲಕ್ಕಿ ಆಲಿ ಅಲ್ಲಿವರೆಗೂ ಮದುವೆಯಾಗಿಲ್ವಾ..? ಎಂದು ಯಾರಾದರೂ ಕೇಳುವ ಮೊದಲು ಇದು ಲಕ್ಕಿ ಆಲಿ ಮೂರನೇ ಮದುವೆ ಎನ್ನೋದನ್ನು ನೆನಪಿಡಬೇಕಾದ ವಿಷ್ಯಾ. ಲಕ್ಕಿ ಆಲಿ ಬಾಲಿವುಡ್ನ ಖ್ಯಾತ ಕಾಮೆಡಿ ನಟ ಮೆಹಮೂದ್ ಅವರ ಪುತ್ರ. ಮೆಹಮೂದ್ ಇಡೀ ಬಾಲಿವುಡ್ ಇಂಡಸ್ಟ್ರಿಯನ್ನು ತನ್ನ ಹಾಸ್ಯದ ಮೂಲಕ ನಗಿಸುತ್ತಾ ಇದ್ರೂ, ಅವರಿಗೆ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರಿತ್ತು. ಮೆಹಮೂದ್ ಎಂದಾಗ ಪ್ರೀತಿಯಿಂದ ನೆನೆಯುವ ಅಭಿಮಾನಿಗಳಿದ್ದರು.
ಏನೇ ಆದರೂ ತಂದೆ ಮೆಹಮೂದ್ ಅವರ ಹೆಸರು ಹೇಳಿಕೊಂಡು ಲಕ್ಕಿ ಎಂದಿಗೂ ಬಾಲಿವುಡ್ ಪಡಸಾಲೆಯಲ್ಲಿ ಅವಕಾಶಗಳಿಗಾಗಿ ಅತ್ತು ಕೂತ್ತಿಲ್ಲ. ಹೆಸರಿನಲ್ಲಿಯೇ ‘ಲಕ್ಕಿ ’ ಇದೆ ಎನ್ನುವ ಮಾತ್ರಕ್ಕೆ ಅವಕಾಶಗಳು ಹಾಗೆನೇ ಬಂದಿಲ್ಲ. ನಿಜಕ್ಕೂ ಲಕ್ಕಿಯಲ್ಲಿ ಹಾಡುವ ಪ್ರತಿಭೆ ಇತ್ತು. ಬಾಲಿವುಡ್ನ ಹಿನ್ನೆಲೆ ಗಾಯಕರನ್ನು ಮೂಲೆಗೆ ಹಾಕಿ ಎದ್ದು ನಿಲ್ಲಬಲ್ಲ ವಿಶೇಷ ಕಂಠವಿತ್ತು. ಎಲ್ಲವೂ ಜತೆಯಾದಾಗ ಲಕ್ಕಿ ಆಲಿ ಬಾಲಿವುಡ್ನ ನಂಬರ್ ವನ್ ಹಿನ್ನೆಲೆ ಗಾಯಕರಾಗಿ ಮುಂದೆ ಬಂದಿದ್ದರು.
ಹಾಡಿನ ಜತೆಯಲ್ಲಿ ತಂದೆಯಂತೆ ನಟಿಸುವ ಹುಚ್ಚನ್ನು ಬೆಳೆಸಿಕೊಂಡಿದ್ದರು. ‘ಸುರ್’ ‘ಕಸಕ್’ ಎ ಮ್ಯೂಸಿಕಲ್ ಜರ್ನಿಯಂತಹ ಸಂಗೀತ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳುವುದರ ಜತೆಯಲ್ಲಿ ಬಹು ತಾರಾಗಡಣ ಇರುವ ‘ಕಾಂಟೇ’ಯಲ್ಲೂ ತನ್ನ ಛಾಪು ಮೂಡಿಸಿದ್ದರು. ನಟನೆ ಜತೆಯಲ್ಲಿ ಸಂಗೀತ ಎರಡರಲ್ಲೂ ಲಕ್ಕಿ ನಿಜಕ್ಕೂ ಲಕ್ಕಿ ಬಾಯ್ ಆಗಿ ಮಿಂಚಿದ್ದರು.
ಲಕ್ಕಿಯ ಮದುವೆ:ಲಕ್ಕಿ ಆಲಿ ಎರಡನೇ ಮದುವೆಯಾದಾಗ ಮಾಧ್ಯಮಗಳು ಲಕ್ಕಿ ಹಾಗೂ ಅವರ ಪತ್ನಿಯ ಕುರಿತು ಬಹಳಷ್ಟು ಬರೆದುಕೊಂಡು ಬಿಟ್ಟಿತ್ತು. ಆದರೆ ಈ ಬಾರಿ ಲಕ್ಕಿಯ ಮೂರನೇ ಮದುವೆಯ ವಿಚಾರ ಬಹಳಷ್ಟು ಸೀಕ್ರೇಟ್ ಆಗಿ ಉಳಿದಿತ್ತು. ಲಕ್ಕಿಯನ್ನು ಮದುವೆಯಾಗುವ ಬ್ರಿಟಿಷ್ ಮೊಡೆಲ್ ಹುಡುಗಿ ಮದುವೆಯ ಮೊದಲೇ ಗರ್ಭಿಣಿಯಾಗುವ ವಿಷ್ಯಾ ಹೇಗೋ ಮಾಧ್ಯಮಗಳ ಕಿವಿಗೆ ಬಿದ್ದಿದೆ. ಈ ವಿಷ್ಯಾ ತಿಳಿದ ಲಕ್ಕಿ ಬ್ರಿಟಿಷ್ ಮೊಡೆಲ್ನ್ನು ತಕ್ಷಣವೇ ಲಂಡನ್ನಲ್ಲಿ ಮದುವೆಯಾಗಿದ್ದಾರೆ ಎನ್ನೋದು ಈಗ ಬಹಿರಂಗವಾಗಿರುವ ಸುದ್ದಿ.
ಭಾರತಕ್ಕೆ ಬಂದು ಇಲ್ಲಿನ ಪದ್ಧತಿಯಂತೆ ಮದುವೆಯಾಗಬೇಕೆನ್ನುವುದು ಲಕ್ಕಿಯ ಬಯಕೆಯಂತೆ. ಹಾಗಾದರೆ ಉಳಿದ ಮೂವರು ಪತ್ನಿಗಳ ಕತೆ ಏನೂ ಅಂತಾ ಕೇಳಿದ್ರೆ..ಕುಟುಂಬದಲ್ಲಿ ಯಾವುದೇ ವಿಚಾರದಲ್ಲಿ ಬಿರುಕು ಮೂಡಿಲ್ಲ. ಇಬ್ಬರು ನನ್ನ ಪತ್ನಿಯರು, ಆರ್ಥಿಕ ವಿಚಾರದಲ್ಲಿ ಅವರನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನೋದು ಲಕ್ಕಿಯ ವಾದ. ಅಂದಹಾಗೆ ಲಕ್ಕಿಯ ಮೊದಲ ಪತ್ನಿ ಮೈಮುನಾರಿಗೆ ಎರಡು ಗಂಡು ಮಕ್ಕಳಿದ್ದಾರೆ. ಎರಡನೇ ಪತ್ನಿ ಈನ್ಯಾರಿಗೆ ಕೂಡ ಎರಡು ಮಕ್ಕಳಿವೆ. ಈಗ ಲಕ್ಕಿ ಮೂರನೇ ಮದುವೆಯಾಗುತ್ತಿದ್ದಾರೆ. ಈ ಮದುವೆ ಎಷ್ಟು ಕಾಲ ಬೆಳೆಬಾಳುತ್ತೆ ಎನ್ನೋದನ್ನು ಕಾದು ನೋಡಬೇಕು ಕಣ್ರಿ.

Wednesday, June 29, 2011

ಒಂಬತ್ತು ವರ್ಷಗಳ ನಂತರ...ಆರ್ಜಿವಿ ಕಂಪನಿಯಲ್ಲಿ ಚೌಟ !


ಒಂದಲ್ಲ ಎರಡಲ್ಲ ಬರೋಬರಿ ಒಂಬತ್ತು ವರ್ಷಗಳ ಕಾಲ ದೂರವಿದ್ದ ಎರಡು ವಿರುದ್ಧ ಧ್ರುವಗಳು ಈ ಮೂಲಕ ಹತ್ತಿರಕ್ಕೆ ಬರುತ್ತಿದೆ. ಬಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಕಮಾಲ್ ಮಾಡಲು ಹೊರಟ ಜೋಡಿಗಳ ಕತೆ ಏನ್ ಹೇಳ್ತೀನಿ ಕೇಳಿ.....

ಸ್ಯಾಂಡಲ್ವುಡ್ನ ಕ್ರೇಜಿಸ್ಟಾರ್ ರವಿಚಂದ್ರನ್ ವರ್ಸಸ್ ನಾದಬ್ರಹ್ಮ ಹಂಸಲೇಖ ಒಂದು ಕಾಲದಲ್ಲಿ ಜತೆಯಾಗಿ ಕೆಲಸ ಮಾಡಿ ತುಂಬಾ ದೊಡ್ಡ ಹಿಟ್ ಚಿತ್ರಗಳನ್ನು ಕೊಟ್ಟು ನಂತರ ಇಬ್ಬರು ಬೇರೆಯಾಗಿದ್ದರು. ಈಗ ಮೋಹನ್ ನಿರ್ದೇಶನದ ‘ನರಸಿಂಹ’ದ ಮೂಲಕ ಮತ್ತೆ ಒಂದಾಗುತ್ತಿರುವ ವಿಚಾರ ಇಡೀ ಸಿನ್ಮಾ ಇಂಡಸ್ಟ್ರಿಗೆ ಗೊತ್ತಿದೆ ಬಿಡಿ. ಈಗ ಇಂತಹ ಒಂದು ಕತೆ ಬಾಲಿವುಡ್ನಲ್ಲೂ ಮುಂದುವರಿಯುತ್ತಿದೆ ಎನ್ನುವ ಮಾಹಿತಿ ಮುಂಬಯಿ ಪಡಸಾಲೆಯಿಂದ ಹೊರ ಬಿದ್ದಿದೆ.
ಒಂದಲ್ಲ ಎರಡಲ್ಲ ಬರೋಬರಿ ಒಂಬತ್ತು ವರ್ಷಗಳ ಕಾಲ ದೂರವಿದ್ದ ಎರಡು ವಿರುದ್ಧ ಧ್ರುವಗಳು ಈ ಮೂಲಕ ಹತ್ತಿರಕ್ಕೆ ಬರುತ್ತಿದೆ. ಈಗಾಗಲೇ ಇವರಿಬ್ಬರು ಇದ್ದ ಸಿನ್ಮಾಗಳು ಸೂಪರ್ ಹಿಟ್ ಅನ್ನಿಸಿಕೊಂಡಿತ್ತು. ಹೌದು ಇದು ಬಾಲಿವುಡ್ನ ಭೂತ್ ನಿರ್ದೇಶಕ ಆರ್ಜಿವಿ( ರಾಮ್ ಗೋಪಾಲ್ ವರ್ಮ) ಹಾಗೂ ಸಂಗೀತ ನಿರ್ದೇಶಕ ಸಂದೀಪ್ ಚೌಟ ಜತೆಯಾಗಿ ಒಂದು ಸಿನ್ಮಾ ಮಾಡ್ತಾರೆ. ಈ ಹಿಂದೆ ಇಬ್ಬರು ತಮ್ಮದೇ ಭಿನ್ನಾಭಿಪ್ರಾಯಗಳಿಂದ ದೂರವಾದ ಜೋಡಿ ಈ ಸಿನ್ಮಾದ ಮೂಲಕ ಮತ್ತೆ ಒಂದಾಗುತ್ತಿರೋದು ಅವರ ಅಭಿಮಾನಿಗಳಿಗಂತೂ ಖುಷಿಯಾಗಿದೆ.
ಆರ್ಜಿವಿ ಬ್ಯಾನರ್ ಅಡಿಯಲ್ಲಿ ಹೊರ ಬರುತ್ತಿರುವ ಬಹಳ ವಿವಾದಗಳಿಂದ ಕೂಡಿದ ಮರಿಯಾ ಸುಸೈರಾಜ್ ಮರ್ಡರ್ ಮಿಸ್ಟರಿಯ ಕತೆ ಇರುವ ‘ನಾಟ್ ಎ ಲವ್ ಸ್ಟೋರಿ’ ಎನ್ನುವ ಚಿತ್ರ ಬಾಲಿವುಡ್ನಲ್ಲಿ ನಿರ್ಮಾಣವಾಗುತ್ತಿದೆ. ಈ ಚಿತ್ರದ ಸಂಗೀತ ಹೊಣೆಗಾರಿಕೆ ಚೌಟರ ಮೇಲೆ ಬಂದಿದೆ ಎನ್ನೋದು ಸಧ್ಯಕ್ಕೆ ದೊರೆತ ಮಾಹಿತಿ. ಇತ್ತೀಚೆಗೆ ಮಂಜೇಶ್ವರದಲ್ಲಿರುವ ತನ್ನ ಮನೆಗೆ ಬಂದಿದ್ದ ಸಂಗೀತ ನಿರ್ದೇಶಕ ಸಂದೀಪ್ ಚೌಟ ಈ ಕುರಿತು ಲವಲವಿಕೆಗೆ ಪುಟ್ಟ ಮಾಹಿತಿ ನೀಡಿದ್ದರು.
ಬಹಳ ವರ್ಷಗಳಿಂದ ದೂರವಾಗಿದ್ದ ಆರ್ಜಿವಿ ಹಾಗೂ ನಾನು ಜತೆಯಾಗಿ ಸಿನ್ಮಾವೊಂದನ್ನು ಮಾಡುತ್ತಿದ್ದೇನೆ. ಈ ಸಿನ್ಮಾ ಬಹಳಷ್ಟು ನೈಜತೆಯಿಂದ ಕೂಡಿದ ಕತೆಯಾಗಿದ್ದು, ಸಂಗೀತಕ್ಕೂ ಸಿನ್ಮಾದಲ್ಲಿ ಬಹಳಷ್ಟು ಮಹತ್ವ ನೀಡಿದ್ದಾರೆ. ಈ ಕುರಿತು ಒಂದು ಸುತ್ತಿನ ಮಾತುಕತೆಯೂ ನಡೆದಿದೆ ಎಂದಿದ್ದರು. ಈ ರೀತಿ ಒಂದಾದ ಜೋಡಿ ಆರ್ಜಿವಿಯ ಮುಂದಿನ ಪ್ರಾಜೆಕ್ಟ್ಗಳಲ್ಲಿಯೂ ಒಂದಾಗುವ ಸಾಧ್ಯತೆಗಳಿವೆ ಎನ್ನೋದು ಅವರ ಆಪ್ತ ವಲಯದ ಮಾತು.
ಬಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಅಂಡರ್ವರ್ಲ್ಡ್ ಕುರಿತು ಹೊಸ ಅಧ್ಯಾಯ ಬರೆದ ‘ಸತ್ಯ’(೧೯೯೮), ಕಂಪನಿ(೨೦೦೨)ಗಳಿಗೆ ಸಂದೀಪ್ ಚೌಟ ಹಾಗೂ ಆರ್ಜಿವಿ ಜತೆಯಾಗಿ ಕೆಲಸ ಮಾಡಿದ್ದರು. ಈ ಎರಡು ಚಿತ್ರಗಳು ೬ಕ್ಕಿಂತ ಹೆಚ್ಚಿನ ಫಿಲ್ಮ್ಪೇರ್ ಹಾಗೂ ಇತರ ಅವಾರ್ಡ್ಗಳನ್ನು ದೋಚಿತ್ತು. ಅದರಲ್ಲಿ ಬೆಸ್ಟ್ ಬ್ಯಾಕ್ಗ್ರೌಂಡ್ ಸ್ಕೋರರ್ನಲ್ಲಿ ಸಂದೀಪ್ ಚೌಟರಿಗೂ ಪ್ರಶಸ್ತಿ ದಕ್ಕಿತ್ತು. ಇಬ್ಬರ ಕ್ರಿಯಾಶೀಲತೆಯನ್ನು ಕಂಡು ಇಡೀ ಬಾಲಿವುಡ್ ಇಂಡಸ್ಟ್ರಿ ದಂಗುಬಡಿದು ಹೋಗಿತ್ತು. ಇವರಿಬ್ಬರ ಚಿತ್ರಗಳು ಹಿಟ್ ಆಗುತ್ತಿದಂತೆಯೇ ‘ಇಗೋ’ ಸಮಸ್ಯೆಗಳು ತಲೆದೂರಿ ಇಬ್ಬರು ಬೇರೆ ಬೇರೆಯಾಗಿ ಹೋದರು ಎನ್ನುತ್ತಾರೆ ಅವರ ಆಪ್ತರ ಗುಂಪು.
ಈ ಸಿನ್ಮಾದ ಮೂಲಕ ಅವರಿಬ್ಬರು ಸೇರುವ ಜತೆಯಲ್ಲಿ ಬಾಲಿವುಡ್ನಲ್ಲಿ ಈ ಸಿನ್ಮಾ ಹೊಸ ಕ್ರೇಜ್ ಹುಟ್ಟುಹಾಕುವುದು ಖಾತ್ರಿಯಾಗಿದೆ. ಸಂದೀಪ್ ಚೌಟ ಬಾಲಿವುಡ್ನಲ್ಲಿ ಹೊಸ ಸಂಗೀತ ಅಲೆಯನ್ನು ಎಬ್ಬಿಸಲು ರೆಡಿಯಾಗಿದ್ದಾರೆ. ಸಿನ್ಮಾ ಇಂಡಸ್ಟ್ರಿಯಲ್ಲಿ ಈ ಚಿತ್ರ ಕಮಾಲ್ ತೋರಿಸುತ್ತಾ..? ಎನ್ನೋದನ್ನು ಕಾದು ಕೂರೋಣ ಅಲ್ವಾ..?

Saturday, June 25, 2011

ಕುಡ್ಲಗೆ ಬಂತು ದುಬಾರಿ ಬೈಕ್ !


ಅಮೆರಿಕದ ಹಾರ್ಲೆ ಡೇವಿಡ್ ಸನ್ ಮೋಟಾರ್ ಕಂಪನಿ ಮಂಗಳೂರಿಗೆ ಬಂದಿದೆ. ೩೦-೪೦ಸಾವಿರ ರೂ. ತೂಗುವ ಬೈಕ್ಗಳನ್ನು ನೋಡುತ್ತಿದ್ದ ಕರಾವಳಿಯ ಮಂದಿ ಈಗ ೨೫ರಿಂದ ೩೫ ಲಕ್ಷ ರೂ. ತೂಗುವ ಬೈಕ್ಗಳನ್ನು ನೋಡಿ ಬರಬಹುದು.
ಸಾಮಾನ್ಯವಾಗಿ ಕುಡ್ಲದ ರೋಡಿನಲ್ಲಿ ಓಡಾಡಿಕೊಂಡಿರುವ ಒಂದು ಬೈಕ್ನ ರೇಟೆಷ್ಟು ಅಂತಾ ಕೇಳಿದ್ರೆ.. ಥಟ್ ಅಂತಾ ೩೦ ಸಾವಿರದಿಂದ ಹಿಡಿದು ೧ಲಕ್ಷ ರೂ. ಎನ್ನಬಹುದು. ಆದರೆ ಈಗ ಬಂದಿರುವ ಬೈಕ್ನ ರೇಟು ೨೫ರಿಂದ ೩೫ ಲಕ್ಷ ರೂ. ! ಹೌದು, ಈಗ ನಮ್ಮ ಕುಡ್ಲ ಹೈಟೆಕ್ ಸಿಟಿ. ಇಲ್ಲಿ ಲೋಕಲ್ ಮಾಲ್ಗಳಿಂದ ಹಿಡಿದು-ಫಾರಿನ್ ಮಾಲ್ಗಳ ತನಕ ಎಲ್ಲವೂ ಲಭ್ಯ.
ನಗರದ ಸಿಟಿ ಪಾಯಿಂಟ್ ಮಾಲ್ನಲ್ಲಿ ಕಳೆದರಡು ದಿನಗಳಿಂದ ಬೀಡುಬಿಟ್ಟಿರುವ ಅಮೆರಿಕ ಮೂಲದ ಹಾರ್ಲೆ ಡೇವಿಡ್ ಸನ್ ಮೋಟಾರ್ ಸೈಕಲ್ ಕಂಪನಿಯ ಹಾರ್ಲೆ ಡೇವಿಡ್ಸನ್ ೨೦೧೧ ಮಾದರಿಯ ೧೬೦೦ ಸಿಸಿ, ೧೨೫೦ ಸಿಸಿಯ ರೆಡ್, ಬ್ಲೂ ಹಾಗೂ ಬ್ಲ್ಯಾಕ್ ಕಲರ್ ಬೈಕ್ಗಳು ಲಭ್ಯ. ಉಳಿದಂತೆ ಹೆಚ್ಚುವರಿ ಸಿಸಿಯ ಬೇರೆ ಬಣ್ಣದ ಬೈಕ್ಗಳು ಬರಲಿದೆ ಎನ್ನೋದು ಕಂಪನಿಯ ಮಾರ್ಕೆಟಿಂಗ್ ಮ್ಯಾನೇಜರ್ ಶರಣ್ ಶೆಟ್ಟಿಯ ಮಾತು.
ಅಮೆರಿಕದಲ್ಲಿ ೧೯೦೩ರಲ್ಲಿ ಆರಂಭವಾದ ಈ ಕಂಪನಿಯ ೮೮೩ ಸಿಸಿಯ ೬.೭೦ ಲಕ್ಷ ರೂ. ಬೈಕ್ನಿಂದ ಹಿಡಿದು ೧೮೦೦ ಸಿಸಿಯ ೪೨ ಲಕ್ಷ ರೂ. ವರೆಗಿನ ೧೪ ಮಾದರಿಯ ಬೈಕ್ಗಳು ಈಗ ಭಾರತದಲ್ಲಿ ಸಿಗುತ್ತಿವೆ. ಬೆಂಗಳೂರು ಸೇರಿದಂತೆ ಹೈದ್ರಾಬಾದ್, ಮುಂಬಯಿ, ದಿಲ್ಲಿಯಲ್ಲಿ ಶೋ ರೂಂಗಳನ್ನು ಕಂಪನಿ ಹೊಂದಿದೆ. ಹರಿಯಾಣದಲ್ಲಿ ಇದರ ತಯಾರಿಕಾ ಘಟಕವಿದೆ. ಸ್ಪೋರ್ಟ್ಸ್ ಮಾದರಿಯ ಬೈಕ್ಗಳು ಯುವಪೀಳಿಗೆಯನ್ನು ಮೋಡಿ ಮಾಡಿದೆ. ಉಳಿದಂತೆ ೬೦ ವಯಸ್ಸಿನ ಅಸುಪಾಸಿನವರೂ ಈ ಬೈಕ್ನ ಕ್ರೇಜ್ನಲ್ಲಿ ಬಿದ್ದಿದ್ದಾರೆ.
ಮಂಗಳೂರಿನಲ್ಲಿ ಎರಡು ದಿನ ಬೈಕ್ಗಳ ಪ್ರದರ್ಶನ ಮಾಡಿ ನಂತರ ಉಡುಪಿ, ಮಣಿಪಾಲ, ಚಿಕ್ಕಮಗಳೂರು ಮೂಲಕ ಬೆಂಗಳೂರಿನ ಶೋ ರೂಂಗೆ ತಲುಪಿಸಲಾಗುತ್ತಿದೆ. ೧ ಲೀ ಪೆಟ್ರೋಲ್ಗೆ ೧೫ರಿಂದ ೨೨ ಕಿ.ಮೀ ಮೈಲೇಜ್ ನೀಡುವ ಸಾಮರ್ಥ್ಯವಿರುವ ಬೈಕ್ಗಳು ಸವಾರನಿಗೆ ಆರಾಮದಾಯಕ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಮತ್ತೊಬ್ಬ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀನಿವಾಸ್ ರೆಡ್ಡಿ.
ಅಮೆರಿಕ ಮೂಲದ ಹಾರ್ಲೆ ಮೋಟಾರ್ ಬೈಕ್ಗಳು ಕುಡ್ಲದ ರೋಡಿಗೆ ಒಗ್ಗಿಕೊಳ್ಳುತ್ತ್ತದೆಯೇ ಎನ್ನುವ ಪ್ರಶ್ನೆ ಮಾತ್ರ ಬೈಕ್ ನೋಡುವ ಶ್ರೀಸಾಮಾನ್ಯನಿಗೂ ಕಾಡದೇ ಬಿಡದು.

ಜಾಕ್ಪಾಟ್ ಜಾಕ್ಲೀನ್ !


‘ಅಲ್ಲಾದ್ದೀನ್’ ಎಂಬ ಮಾಯಾ ದೀಪದಿಂದ ಹೊರಬಂದ ಹಾಟ್ ಹುಡುಗಿ ಜಾಕ್ಲೀನ್ ಫೆರ್ನಾಂಡೀಸ್ ಎಲ್ಲಿ ಹೋದರು ಎಂದು ಕೇಳಿದವರೆ ಜಾಸ್ತಿ. ಕೈಯಲ್ಲಿ ಸರಿಯಾದ ಚಿತ್ರಗಳಿಲ್ಲ ಎಂದು ತವರು ಮನೆ ಸೇರುತ್ತಿದ್ದ ಹುಡುಗಿ ಈಗ ಮತ್ತೆ ಮುಂಬಯಿ ನಗರಿಯ ಚಿತ್ರಗಳನ್ನು ದೋಚಿದ್ದಾಳೆ ಎನ್ನುವ ಸುದ್ದಿ ಇದೆಯಂತೆ...

ಬಾಲಿವುಡ್ನ ಗಲ್ಲಾ ಪೆಟ್ಟಿಗೆಯಲ್ಲಿ ಉದ್ದುದ್ದ ಮಲಗಿ ಹೋದ ‘ಅಲ್ಲಾದ್ದೀನ್’ ಚಿತ್ರ ನೋಡಿದವರಿಗೆ ಈ ಸುಂದರಿಯ ಪರಿಚಯ ಖಂಡಿತ ಇರಬಹುದು. ಅದೇ ಅಲ್ಲಾದ್ದೀನ್ ಎನ್ನುವ ಮಾಯ ದೀಪದಿಂದ ಹೊರಬಂದ ಶ್ರೀಲಂಕಾದ ಸುಂದರಿ ಜಾಕ್ಲೀನ್ ಫೆರ್ನಾಂಡೀಸ್ ‘ಜಾನೇ ಕಾಹ ಸೇ ಅಯಿ ಯೇ ಹೋ’ ಹಾಗೂ ‘ಹೌಸ್ಫುಲ್’ ಚಿತ್ರದ ನಂತರ ಎಲ್ಲೋ ಮರೆಯಾಗಿ ಹೋದಳು ಎನ್ನುವ ಸುದ್ದಿ ಹರಡಿಕೂತಿತ್ತು. ಶ್ರೀಲಂಕಾದ ಜಾಹೀರಾತು ಕಂಪನಿಗಳಿಗೆ ಆಗಾಗ ಮುಖ ತೋರಿಸಿ ಬರುತ್ತಿದ್ದಾಳೆ ಎಂಬ ಮಾತು ಹರಡಿತ್ತು. ಇನ್ನೂ ಮುಂದೆ ಮುಂಬಯಿ ಹಾಗೂ ಶ್ರೀಲಂಕಾ ನಡುವಿನ ಮಾತುಕತೆ ಇಲ್ಲಿಗೆ ಮುಗಿದು ಹೋಗುತ್ತದೆ ಎನ್ನುವ ಮಾತುಗಳು ಹರಿದಾಡಿ ತ್ತು.
ಆದರೆ ಜಾಕ್ಲೀನ್ ಮತ್ತೆ ಬಾಲಿವುಡ್ ಇಂಡಸ್ಟ್ರಿಗೆ ರೀ ಎಂಟ್ರಿ ಹೊಡೆದಿದ್ದಾರೆ. ಅದೂ ಕೂಡ ಜಾಕ್ಪಾಟ್ ಎಂಟ್ರಿ. ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ರ ಹೋಂ ಬ್ಯಾನರ್ ‘ವಿಶೇಷ್ ಫಿಲ್ಮ್ಂ’ ಅಡಿಯಲ್ಲಿ ಬರುತ್ತಿರುವ ‘ಮರ್ಡರ್-೨’ ಚಿತ್ರದಲ್ಲಿ ಜಾಕ್ಲೀನ್ ಕಿಸ್ಸಾರ್ ಬಾಯ್ ಇಮ್ರಾನ್ ಹಸ್ಮಿಗೆ ಸಾಥ್ ಕೊಟ್ಟಿದ್ದಾಳೆ. ಜುಲಾಯಿ ಮೊದಲ ವಾರ ಈ ಚಿತ್ರ ತೆರೆಗೆ ಅಪ್ಪಳಿಸುವ ಕುರಿತು ಈಗಾಗಲೇ ಪ್ರೇಕ್ಷಕರ ವರ್ಗ ಸೂಚನೆ ಬಂದಿದೆ. ಈ ಚಿತ್ರ ರಿಲೀಸ್ ನಂತರ ಜಾಕ್ಲೀನ್ ನಾಡಿಯವಾಲಾರ ‘ಹೌಸ್ಪುಲ್-೨’ ಚಿತ್ರದಲ್ಲಿ ಲೀಡ್ ರೋಲ್ನಲ್ಲಿ ಕಾಣಿಸುತ್ತಿದ್ದಾರೆ. ಅಂದಹಾಗೆ ಈ ಹಿಂದೆ ತೆರೆಗೆ ಬಂದ ‘ಹೌಸ್ಫುಲ್’ನಲ್ಲಿ ಜಾಕ್ಲೀನ್ ಬರೀ ಒಂದು ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದರು.
ಅಲ್ಲಿಗೆ ಅವರ ಸಿನಿಮಾ ಬದುಕು ನಿಂತು ಹೋಗಿತ್ತು ಎಂದು ಗಲ್ಲಿಯಲ್ಲಿ ಗಾಸಿಪ್ ಎಬ್ಬಿಸಿದ್ದರು. ಲಂಡನ್ನಲ್ಲಿ ಹೌಸ್ಫುಲ್-೨ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ಬರುವ ಚಾನ್ಸ್ ಇದೆ ಎನ್ನೋದು ನಿರ್ಮಾಣ ಸಂಸ್ಥೆಯ ಮಾತು. ಇದರ ಜತೆಯಲ್ಲಿ ಹೌಸ್ಫುಲ್ ಚಿತ್ರದ ಬ್ಯುಸಿ ಷೆಡ್ಯುಲ್ನಿಂದಾಗಿ ಮರ್ಡರ್-೨ ಚಿತ್ರದ ಪ್ರಚಾರಕ್ಕೆ ಜಾಕ್ಲೀನ್ ಬರುತ್ತಿಲ್ಲ ಎನ್ನುವ ಸುದ್ದಿಗಳು ನಿರ್ಮಾಪಕರ ಕಡೆಯಿಂದ ಬರುತ್ತಿದೆ. ಗಾಸಿಪ್ಗಳಿಂದ ದೂರನೇ ಉಳಿದು ಬಿಡುತ್ತಿದ್ದ ಜಾಕ್ಲೀನ್ ಫೆರ್ನಾಂಡೀಸ್ ಒಂದೆರಡು ಚಿತ್ರಗಳಿಂದ ನಿರ್ಮಾಪಕರಿಗೆ ಕಿರಿಕ್ ಕೊಡಲು ಆರಂಭ ಮಾಡಿದ್ದಾಳೆ ಎನ್ನುವ ಮಾತು ಪಡಸಾಲೆಗೆ ಬಿದ್ದು ಬಿಟ್ಟಿದೆ. ಜಾಕ್ಲೀನ್ ಫೆರ್ನಾಂಡೀಸ್ ಮಾತ್ರ ಈ ಎಲ್ಲ ವಿಚಾರಗಳಿಗೆ ಸೊಪ್ಪು ಹಾಕದೇ ಕೂತಿದ್ದಾಳೆ.
ಇತ್ತ ಕಡೆ ಮಹೇಶ್ ಭಟ್ ‘ಮರ್ಡರ್-೨’ ಮುಂಬಯಿಯ ಪ್ರಚಾರಕ್ಕೆ ಬರುವಂತೆ ಜಾಕ್ಲೀನ್ಗೆ ಕೇಳಿಕೊಂಡಿದ್ದಾರಂತೆ. ಮಹೇಶ್ರ ಮಾತು ಕೇಳಿದ ಜಾಕ್ಲೀನ್ ಎಲ್ಲಕ್ಕೂ ಯೆಸ್ ಎಂದಿದ್ದಾಳೆ . ಈ ವಿಚಾರದಿಂದ ತೃಪ್ತರಾದ ಭಟ್ಟರು ತನ್ನ ಮುಂದಿನ ಎರಡು ಚಿತ್ರಗಳಿಗೆ ಜಾಕ್ಲೀನ್ ಫೆರ್ನಾಂಡೀಸ್ರನ್ನು ಹಾಕುವ ಮನಸ್ಸು ಮಾಡಿದ್ದಾರಂತೆ ಎನ್ನುವ ಸುದ್ದಿ ಗಾಸಿಪ್ ಗಲ್ಲಿಯಿಂದ ಕೇಳಿಬರುತ್ತಿದೆ. ಈ ಮೂಲಕ ಮಹೇಶ್ ಭಟ್ಟರ ಕ್ಯಾಂಪ್ನಲ್ಲಿ ಇರುವ ಯಾವುದೇ ಸಿನಿಮಾ ತಾರೆಯಾದರೂ ಒಂದೆರಡು ಸಿನಿಮಾಗಳಲ್ಲಿ ನಟಿಸದೇ ವಾಪಾಸು ಹೋಗುವಂತಿಲ್ಲ ಎನ್ನುವ ಚಾಲ್ತಿಯಲ್ಲಿದ್ದ ಮಾತಿಗೆ ಈಗ ಪುಷ್ಠಿ ದೊರೆತಾಂಗಿದೆ.
ತನಗೆ ನಟಿಸಲು ಚಿತ್ರಗಳಿಲ್ಲ ಎಂದು ಪದೇ ಪದೇ ತವರು ಮನೆಗೆ ಓಡಾಡುತ್ತಿದ್ದ ಜಾಕ್ಲೀನ್ಗೂ ಈ ಮೂಲಕ ಮುಂಬಯಿಯಲ್ಲಿಯೇ ಒಂದೆರಡು ವರ್ಷಗಳ ಕಾಲ ಉಳಿಯುವಂತಾಗಿದೆ. ಜಾಕ್ಲೀನ್ರ ಆಕ್ಟಿಂಗ್ನಿಂದಲೋ, ಮೈಮಾಟದಿಂದಲೋ ‘ಮರ್ಡರ್-೨’ ಬಾಲಿವುಡ್ನಲ್ಲಿ ಕ್ಲಿಕ್ ಆಯಿತು ಎಂದಾದರೆ ಮತ್ತೆರಡು ಸಿನಿಮಾ ನಿರ್ಮಾಪಕರು ಜಾಕ್ಲೀನ್ರ ಮನೆ ಮುಂದೆ ಕಾದು ಕೂರಬಹುದು. ಒಟ್ಟಾರೆ ಚಿತ್ರದ ಪೋಸ್ಟರ್ಗಳು ಹಸಿಬಿಸಿಯಿಂದ ಸುದ್ದಿಯಾಗಿದೆ. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸುದ್ದಿ ಮಾಡುತ್ತಾ ಎನ್ನೋದು ಡಾಲರ್ ಪ್ರಶ್ನೆ.

Tuesday, June 14, 2011

ಪ್ರಕಾಶ್ ಶೆಟ್ಟರ ಪಂಚ್ ಕಜ್ಜಾಯ !

ಬ್ರಿಟ್ನಿ ಥರ್ಡ್ ಇನ್ನಿಂಗ್ಸ್ಆಹಾ... ನನ್ನ ಮದುವೆಯಂತೆ !


ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಈಗ ಮದುವೆಯ ಸಂಭ್ರಮದಲ್ಲಿದ್ದಾರೆ. ಅಂದಹಾಗೆ ಬ್ರಿಟ್ನಿ ಸ್ಪಿಯರ್ಸ್ಗೆ ಇದು ಮೊದಲ ಮದುವೆಯ ಸಂಭ್ರಮ ಅಲ್ಲವೇ ಅಲ್ಲ. ಬ್ರಿಟ್ನಿಯ ಲೆಕ್ಕಚಾರದ ಪ್ರಕಾರ ಇದು ಮೂರನೇ ಮದುವೆ ಎನ್ನೋದು ಈ ಬರಹದ ವಿಷ್ಯಾ...
ಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಈಗ ಮತ್ತೆ ಸುದ್ದಿಯ ಅಂಗಣದಲ್ಲಿ ಬಂದು ಪಟ್ ಅಂತಾ ಕೂತು ಬಿಟ್ಟಿದ್ದಾಳೆ. ಅಂದಹಾಗೆ ಬ್ರಿಟ್ನಿ ಯಾರಿಗೆ ತಾನೇ ಗೊತ್ತಿಲ್ಲ. ಅಮೆರಿಕದ ಪಾಪ್ ಹಾಡುಗಾರ್ತಿ, ಡ್ಯಾನ್ಸರ್, ನಟಿ, ಫ್ಯಶನ್ ಡಿಸೈನರ್, ವಿಡಿಯೋ ಡೈರೆಕ್ಟರ್, ಬರಹಗಾರ್ತಿ ಹೀಗೆ ಬ್ರಿಟ್ನಿ ಮುಟ್ಟಾದ ಕ್ಷೇತ್ರಗಳು ಸಧ್ಯಕ್ಕಂತೂ ಯಾವುದು ಇಲ್ಲ ಬಿಡಿ. ಅದಕ್ಕಿಂತ ಮುಖ್ಯವಾಗಿ ಬ್ರಿಟ್ನಿ ಮಾಡುವ ಅವಾಂತರಗಳು ಸದಾ ಸುದ್ದಿಯಲ್ಲಿರುತ್ತದೆ.
ಬ್ರಿಟ್ನಿಯ ಯಾವುದೇ ಒಂದು ಆಲ್ಬಂ ಮಾರುಕಟ್ಟೆಯಲ್ಲಿ ಬಿದ್ದು ಹೋಗುತ್ತಿದೆ ಎಂದಾಗ ಅಮೆರಿಕದ ಪಬ್ನಲ್ಲೋ... ಬಿಯರ್ ಬಾರ್ನಲ್ಲೋ.... ಪಾರ್ಟಿಯಲ್ಲೋ.... ಡ್ರಗ್ಸ್ ಸೇವಿಸುತ್ತಾ ಚೂರುಪಾರು ಬಟ್ಟೆಯಲ್ಲಿ ದೇಹ ಸೌಂದರ್ಯವನ್ನು ಬಿಟ್ಟಿಯಾಗಿ ಪ್ರದರ್ಶನ ಮಾಡುತ್ತಾ ಸುದ್ದಿ ಮಾಡುತ್ತಿದ್ದ ಬ್ರಿಟ್ನಿ ಈಗ ಮದುವೆಯಾಗುವ ಯೋಚನೆಗೆ ಬಂದಿದ್ದಾರೆ. ಅಂದಹಾಗೆ ಬ್ರಿಟ್ನಿಗೆ ಇದು ಮೊದಲ ಮದುವೆಯಲ್ಲ.. ಲೆಕ್ಕಚಾರದ ಪ್ರಕಾರ ಇದು ಮೂರನೇ ಮದುವೆ ಎನ್ನೋದು ಬ್ರಿಟ್ನಿಯ ಮಾತು.
ಬಹಳ ಹಳೆಯ ಪಾಪ್ಸ್ಟಾರ್ ಹಾಗೂ ತನ್ನ ಬಾಲ್ಯ ಗೆಳೆಯ ಜೇಸಾನ್ ಅಲೆಕ್ಸಾಂಡರ್ ಜತೆಯಲ್ಲಿ ಮದುವೆಯಾಗಿದ್ದರು. ೫೫ ಗಂಟೆಗಳ ಕಾಲ ಜೀವಂತ ಇದ್ದ ಇವರಿಬ್ಬರ ಮದುವೆ ನಂತರ ಮುರಿದುಬಿತ್ತು. ಆ ಬಳಿಕ ಬ್ರಿಟ್ನಿ ಲೈಪ್ನಲ್ಲಿ ಎಂಟ್ರಿ ಕೊಟ್ಟವರು ಕೇವಿನ್ ಪೆಡರ್ಲೈನ್. ಈ ಮದುವೆ ಬಹಳ ಟೈಮ್ ಬಾಳ್ವಿಕೆ ಬಂತು. ಕೇವಿನ್ನಿಂದ ಬ್ರಿಟ್ನಿ ಎರಡು ಮಕ್ಕಳ ತಾಯಿ ಕೂಡ ಆದಳು. ಈಗಲೂ ಐದು ವರ್ಷದ ಸೀನ್ ಹಾಗೂ ನಾಲ್ಕು ವರ್ಷದ ಜೇಡನ್ ಎನ್ನುವ ಮುದ್ದಾದ ಮಕ್ಕಳು ಬ್ರಿಟ್ನಿಯ ಜತೆಯಲ್ಲಿಯೇ ಬದುಕು ಕಟ್ಟುತ್ತಿವೆ.
ಈಗ ಬಹಳ ಕಾಲದಿಂದ ಬ್ರಿಟ್ನಿಯ ಜತೆಯಲ್ಲಿ ಅನದಿಕೃತವಾಗಿ ಸುತ್ತಾಡುತ್ತಿದ್ದ ಗೆಳೆಯ ಜೇಸಾನ್ ಟ್ರಾವಿಕ್ ಜತೆಯಲ್ಲಿ ಬ್ರಿಟ್ನಿ ಮೂರನೇ ಬಾರಿಗೆ ಮದುವೆಯಾಗುತ್ತಿದ್ದಾರೆ. ೩೯ರ ಹರೆಯದ ಜೇಸಾನ್ ಅಮೆರಿಕದಲ್ಲಿ ಟ್ಯಾಲೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ರಿಟ್ನಿ ಹಾಗೂ ಜೇಸಾನ್ ಮದುವೆ ಯಾವಾಗ, ಎಲ್ಲಿ ಎನ್ನುವ ವಿಚಾರಗಳು ಬಹಿರಂಗವಾಗಿಲ್ಲ. ಹೊಸ ಆಲ್ಬಂ ಬಿಡುಗಡೆಯ ಜತೆಗೆ ವರ್ಲ್ಡ್ ಟೂರ್ಗೆ ಬ್ರಿಟ್ನಿ ರೆಡಿಯಾಗುತ್ತಿರುವುದರಿಂದ ಮದುವೆ ಕೊಂಚ ಡಿಲೇ ಆಗುವ ಲಕ್ಷಣಗಳು ಗೋಚರಿಸಿದೆ.
ಈಗಾಗಲೇ ಇವರಿಬ್ಬರು ಲಾಸ್ ವೇಗಸ್ನ ಮನ್ಶನ್ ಹೊಂದರಲ್ಲಿ ರಿಂಗ್(ಉಂಗುರ)ಬದಲಾಯಿಸುವ ಕಾರ್ಯಕ್ರಮ ನಡೆದಿದೆ ಎಂದು ಬ್ರಿಟ್ನಿಯ ಆಪ್ತ ಮೂಲಗಳು ತಿಳಿಸಿದೆ. ಬ್ರಿಟ್ನಿ ಸ್ಪಿಯರ್ಸ್ರ ಚದುರಿದ ಬದುಕು ಮೂರನೇ ಮದುವೆ ಮೂಲಕವಾದರೂ ಗಟ್ಟಿಯಾಗುತ್ತಾ..? ಇಲ್ಲವೇ ಬ್ರಿಟ್ನಿ ನಾಲ್ಕನೇ ಮದುವೆಗೆ ಈ ಮದುವೆ ಅಡಿಗಲ್ಲು ಆಗುತ್ತಾ ಎನ್ನೋದು ಬ್ರಿಟ್ನಿ ಸ್ಪಿಯರ್ಸ್ರ ಸಂಗೀತ ಅಭಿಮಾನಿಗಳ ಡಾಲರ್ ಪ್ರಶ್ನೆಯಾಗಿ ಮುಂದೆ ನಿಂತಿದೆ. ದೊಡ್ಡವರ ಬದುಕು ಯಾವಾಗಲೂ ದೊಡ್ಡದಾಗಿರುತ್ತದೆ ಎನ್ನೋದಕ್ಕೆ ಬ್ರಿಟ್ನಿ ಕರೆಕ್ಟ್ ಸ್ಯಾಂಪಲ್ ಅಲ್ವಾ...?

Friday, June 10, 2011

೨೪ ಗಂಟೆಯಲ್ಲಿ ಮತ್ತೊಂದು ದಾಖಲೆ !


ಗಣೇಶ್ ಕಾಸರಗೋಡು ಅವರ ಪುಸ್ತಕ ಬಿಡುಗಡೆಯಾಗಿ ಬರೀ ೨೪ ಗಂಟೆಯಲ್ಲಿ ಮರುಮುದ್ರಣ ಕಂಡಿದೆ. ಇದು ಪುಸ್ತಕ ಉದ್ಯಮದಲ್ಲಿ ಒಂದು ದಾಖಲೆ ಜತೆಗೆ ಅಂಕಿತ ಪ್ರಕಾಶನದ ಟಾಪ್ರೇಟಿಂಗ್ ಪುಸ್ತಕಗಳಲ್ಲಿ ಈ ವಾರ ಗಣೇಶ್ರ ಕೃತಿ ಒಂದನೇ ಸ್ಥಾನ ಪಡೆದುಕೊಂಡಿದೆ. ಕೃತಿಯ ಕುರಿತು ಹೆಚ್ಚಿನ ಮಾಹಿತಿಗೆ ಮಂಗಳೂರಿನ ವಿಜಯ ಕರ್ನಾಟಕದ ನಮ್ಮ ಕರಾವಳಿಯಲ್ಲಿ ಜೂನ್ ೧೧, ೨೦೧೧ ರಂದು ಲೇಖನವೊಂದನ್ನು ಪ್ರಕಟಿಸಿದ್ದೇನೆ. ನೋಡಿ.. ಜತಗೆ ಗಣೇಶ್ರ ಸಾಹಸಕ್ಕೆ ಬೆಂಬಲ ನೀಡಿ...ಅಂದಹಾಗೆ ಗಣೇಶ್ ಕೃತಿಗಾಗಿ ಕಾಲ್ ಮಾಡಿ ೯೪೪೮೨೪೩೧೨೭
* ಸ್ಟೀವನ್ ರೇಗೊ, ದಾರಂದಕುಕ್ಕು

Wednesday, June 8, 2011

ಪ್ರಕಾಶ್ ಪಂಚ್ನಾಮ !


ಇದು ಬಾಬಾ ಕತೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರ ಸಲ್ವಾರ್ ಕಮೀಜ್ ಧರಿಸಿಕೊಂಡು ಬಾಬಾ ಓಡುತ್ತಿದ್ದಾಗ ದಿಲ್ಲಿಯ ಪೊಲೀಸರು ಬಾಬಾರನ್ನು ಬಂಧನ ಮಾಡಿದ್ದಾರೆ ಎಂದು ಕೆಲವು ದಿನಗಳ ಹಿಂದೆ ದೇಶದ ಪ್ರಮುಖ ಪತ್ರಿಕೆಗಳು, ಮಾಧ್ಯಮಗಳು ವರದಿ ಮಾಡಿತ್ತು. ಇದೇ ಬಾಬಾರನ್ನು ಒಂದು ಐಟಂ ಎಂದು ಪರಿಗಣಿಸಿಕೊಂಡು ದೇಶದ ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ಕಾರ್ಟೂನ್ ಕಳುಹಿಸಿಕೊಟ್ಟಿದ್ದಾರೆ. ಕಾರ್ಟೂನ್ ಬಹಳ ಬೊಂಬಾಟ್ ಆಗಿದೆ ಅಲ್ವಾ..?

ಫ್ಯಾಷನ್ ಲೋಕದ ನ್ಯೂ ಡಿಸೈನರ್ ಲೀ


ಕ್ರಿಕೆಟ್ ವಿಷಯಕ್ಕೆ ಬಂದರೆ ಆತ ವಿಶ್ವದ ಅತೀ ವೇಗದ ಬೌಲರ್. ರ್ಯಾಂಪ್ ಲೋಕಕ್ಕೆ ಬಂತು ನಿಂತರೆ ಈ ವಾಸ್ ಎ ಪ್ಯಾಶನ್ ಡಿಸೈನರ್. ಸೋ ಯಾರಾತಾ ಎಂದು ಕೇಳಿದ್ರೆ... ಆಸೀಸ್ ತಂಡದ ವೇಗದ ಬೌಲರ್ ಬ್ರೆಟ್ ಲೀ ಮಾರಾಯ್ರೆ....

ಕ್ರಿಕೆಟ್ ವಿಷಯಕ್ಕೆ ಬಂದರೆ ಆತ ವಿಶ್ವದ ಅತೀ ವೇಗದ ಬೌಲರ್. ವೇದಿಕೆಯ ಮೇಲೆ ನಿಂತು ಗಿಟಾರ್ ವಿದ್ ಮೈಕ್ ಕೈಯಲ್ಲಿ ಹಿಡಿದು ನಿಂತರೆ ಆತ ಪಕ್ಕಾ ಒಬ್ಬ ರಾಕ್ ತಾರೆ. ರ್ಯಾಂಪ್ ಲೋಕಕ್ಕೆ ಬಂತು ನಿಂತರೆ ಈ ವಾಸ್ ಎ ಪ್ಯಾಶನ್ ಡಿಸೈನರ್. ಸೋ ಯಾರಾತಾ ಎಂದು ಕೇಳಿದ್ರೆ... ಆಸೀಸ್ ತಂಡದ ವೇಗದ ಬೌಲರ್ ಬ್ರೆಟ್ ಲೀ.
ಕ್ರಿಕೆಟ್ ಜಗತ್ತಿನ ಎನ್ಸೈಕ್ಲೋಪಿಡಿಯಾದಲ್ಲಿ ಬ್ರೆಟ್ಲೀ ಹೆಸರು ಕಂಗೊಳಿಸುತ್ತಿರೋದು ಕ್ರಿಕೆಟ್ ಪ್ರಿಯರಿಗೆ ಗೊತ್ತೇ ಇರೋ ವಿಚಾರ. ಆದರೆ ಬ್ರೆಟ್ ಲೀ ಕ್ರಿಕೆಟ್ ಹೊರತು ಏನೂ ಮಾಡುತ್ತಾರೆ ಎನ್ನುವ ಕೌತುಕದ ಪ್ರಶ್ನೆ ಸದಾ ಕಾಲ ಅವರ ಅಭಿಮಾನಿಗಳಿಗೆ ಕಾಡುತ್ತಾ ಇರುತ್ತದೆ. ಅದರಲ್ಲೂ ಬ್ರೆಟ್ ಲೀ ದೇಶದ ಮಹಾನ್ ಹಿನ್ನೆಲೆ ಗಾಯಕಿ ಆಶಾಜೀ ಜತೆಯಲ್ಲಿ ಹಾಡುವ ಆಲ್ಬಂಗಳಿರಲಿ...ಕೊಲ್ಕತ್ತಾದ ಚಾರಿಟಿ ಶೋಗಳಲ್ಲಿ ನಿಂತು ಕುಣಿಯುವ ದೃಶ್ಯಗಳಿರಲಿ ಎಲ್ಲವೂ ಎಲ್ಲರಿಗೂ ಗೊತ್ತಿರುವಂತದ್ದೇ ಮಾರಾಯ್ರೆ.
ಆದರೆ ಬ್ರೆಟ್ ಲೀ ಒಳಗೊಬ್ಬ ಪ್ಯಾಶನ್ ಡಿಸೈನರ್ ಇದ್ದಾನೆ ಎನ್ನುವ ವಿಚಾರ ಎಷ್ಟು ಮಂದಿಗೆ ತಾನೇ ಗೊತ್ತು. ೨೦೦೧ ಮೇ ೧ರಂದು ಬ್ರೆಟ್ ಲೀ ತನ್ನ ವಿನ್ಯಾಸದ ‘ಬ್ರೆಟ್ ಲೀ ಕಲೆಕ್ಷನ್’ ಎನ್ನುವ ಲೆಬೆಲ್ ಇರುವ ವರೈಟಿ ಬಟ್ಟೆಗಳನ್ನು ಮಾರುಕಟ್ಟೆಗೆ ಇಳಿಯಬಿಟ್ಟಿದ್ದರು. ಈ ಬಟ್ಟೆಗಳು ಸ್ಟೈಲಿಶ್, ಮೊಡರ್ನ್ ಹಾಗೂ ಕಂಪಾರ್ಟ್ಟೇಬಲ್ ಝೋನ್ಗಳಲ್ಲಿ ಇರುವಂತೆ ಬ್ರೆಟ್ ಲೀ ನಿಗಾ ವಹಿಸಿಕೊಳ್ಳುತ್ತಾರೆ. ಅದರ ಜತೆಯಲ್ಲಿ ಈ ಬಟ್ಟೆಗಳಲ್ಲಿ ಬ್ರೆಟ್ ಲೀಯ ಸಹಿ ಕೂಡ ಒಳಗೊಂಡಿದೆ.
ಅಂದಹಾಗೆ ಆಸೀಸ್ ತಂಡಕ್ಕೆ ಸೇರುವ ಮುಂಚೆನೇ ಬ್ರೆಟ್ ಲೀ ಒಬ್ಬ ಪ್ಯಾಶನ್ ಡಿಸೈನರ್. ಸಿಡ್ನಿಯ ಬರ್ಕ್ಲೇ ಮೆನ್ಸ್ ವೇರ್ ಎನ್ನುವ ಕಂಪನಿಯಲ್ಲಿ ಬ್ರೆಟ್ ಲೀ ದುಡಿಯುತ್ತಿದ್ದರು. ಅಲ್ಲಿಯ ಜ್ಞಾನ ಅವರ ಪ್ಯಾಶನ್ ಪೀಲ್ಡ್ನಲ್ಲಿ ವರ್ಕ್ ಔಟ್ ಆಯಿತು. ಆದರೆ ಅವರು ಕ್ರಿಕೆಟ್ನಲ್ಲಿ ಬೆಳೆಸಿಕೊಂಡಿದ್ದ ಆಸಕ್ತಿ ವಿಶ್ವದ ವೇಗದ ಬೌಲರ್ನ್ನಾಗಿ ಮಾಡಿತು. ಬ್ರೆಟ್ ಲೀ ವಿನ್ಯಾಸದ ಬಟ್ಟೆಗಳು ಬರೀ ಆಸೀಸ್ನ ಮಾರುಕಟ್ಟೆಯಲ್ಲಿ ಮಾತ್ರ ಆರಂಭದಲ್ಲಿ ಸಿಗುತ್ತಿತ್ತು. ಆದರೆ ಈಗ ವಿಶ್ವದ ಬಹುತೇಕ ಭಾಗಗಳಲ್ಲಿ ‘ಬ್ರೆಟ್ ಲೀ ಕಲೆಕ್ಷನ್’ ಎನ್ನುವ ರಿಟೈಲ್ ಶಾಪ್ಗಳಿವೆ. ಇದರ ಉಸ್ತುವಾರಿಯನ್ನು ಬ್ರೆಟ್ ಲೀ ಸಹೋದರ ಶೇನ್ ಲೀ ನೋಡಿಕೊಳ್ಳುತ್ತಿದ್ದಾರೆ.
ಬ್ರೆಟ್ ಲೀ ಕಲೆಕ್ಷನ್ನಲ್ಲಿ ಬಣ್ಣಗಳದ್ದು ವಿಶೇಷ ಪಾತ್ರವಿದೆ. ಅದಷ್ಟೂ ತಾಜಾ ಬಣ್ಣಗಳಂದರೆ ಲೀಗೆ ಎಲ್ಲಿಲ್ಲದ ಪ್ರೀತಿ. ಕಡು ಆಕಾಶ ನೀಲಿ, ಶುದ್ದ ಬಿಳಿ, ನೇರಳೆ, ಲೈಟ್ ಆರೆಂಜ್, ಕಪ್ಪು, ಹಸಿರು ಹೀಗೆ ಬಣ್ಣಗಳ ಆಯ್ಕೆಯಲ್ಲಿ ಬ್ರೆಟ್ ಲೀ ಬಹಳ ಹುಷಾರು. ಈ ಬಣ್ಣಗಳಿಗೆ ತಕ್ಕಂತೆ ಇಟಲಿಯನ್ ಕೋಟನ್, ನೈಲಾನ್, ಸಾಪ್ಟ್ ಕೋಟನ್ಗಳ ಜತೆಯಲ್ಲಿ ಇತರ ಬಟ್ಟೆಗಳನ್ನು ಬಳಸಿಕೊಂಡು ಡಿಸೈನಿಂಗ್ ಬಟ್ಟೆಗಳನ್ನು ತಯಾರಿಸುತ್ತಾರೆ. ಅಂದಹಾಗೆ ಬ್ರೆಟ್ ಲೀ ಒಂದು ಅವತಾರ ಈಗ ಎಲ್ಲರಿಗೂ ಗೊತ್ತಾಯಿತು ಅಲ್ವಾ...?
(ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಮೇ ೨೩,೨೦೧೧ರಂದು ಪ್ರಕಟವಾದ ಲೇಖನ.)

Friday, June 3, 2011

ನೀತು ಮನದ ಮಾತು


ನಿರ್ಮಾಪಕ ಸರಿಯಾಗಿ ಹಣ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿ ಚಿತ್ರದ ಅರ್ಧ ಹಕ್ಕುಗಳನ್ನು ಕೊಂಡು ಮೆರೆದಾಡಿದವರು ಗಾಂಽನಗರದಲ್ಲಿ ಕಾಣಸಿಗಬಹುದು. ಆದರೆ ಒಂಚೂರು ಸಂಭಾವನೆ ಪಡೆಯದೇ ನಟಿಸಿದ ನಾಯಕಿಯೊಬ್ಬಳ ಕತೆ ಕೇಳಿ...
ನಿರ್ಮಾಪಕ ಸರಿಯಾಗಿ ಹಣ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿ ಚಿತ್ರದ ಅರ್ಧ ಹಕ್ಕುಗಳನ್ನು ಕೊಂಡು ಮೆರೆದಾಡಿದವರು ಗಾಂಽನಗರದಲ್ಲಿ ಕಾಣಸಿಗಬಹುದು. ನಿರ್ಮಾಪಕ ಚಿತ್ರೀಕರಣದ ಸೆಟ್ನಲ್ಲಿ ಕಿರಿಕಿರಿ ಮಾಡ್ತಾರೆ... ಎಂದು ಪ್ರೆಸ್ ಮುಂದೆ ನಿಂತು ಕಣ್ಣೀರು ಹಾಕುವ ಸಿಸ್ಟಂಗಳು ಗಾಂಽನಗರದಲ್ಲೆ ಬೇಜಾನ್ ಆಗಿದೆ.
ಆದರೆ ಇದು ನನ್ನ ಚಿತ್ರ, ನಿರ್ಮಾಪಕ ನನ್ನ ಪಾಲಿನ ದೇವರು ಎಂದುಕೊಂಡು ಚಿತ್ರ ಮಾಡುವವರು ಗಾಂಽನಗರದ ಗಲ್ಲಿಯಲ್ಲಿ ಸಿಗುತ್ತಾರಾ ಎನ್ನುವ ಪ್ರಶ್ನೆಗೆ ಇಲ್ಲೊಂದು ಅನ್ಸರ್ ಸಿಕ್ಕಿದೆ.
ಚಿತ್ರ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಕನ್ನಡದಲ್ಲಿ ಹೇಳುವುದಾದರೆ ‘ಬೆಳಕು’ ಈ ರೀತಿ ಉದಾರತೆ ತೋರಿ ನಟಿಸಿದ ನಾಯಕಿ ಗ್ಲಾಮರ್ ಡಾಲ್ ನೀತು.
ಗಾಳಿಪಟ, ಪೂಜಾರಿ ಸೇರಿದಂತೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿದ ನೀತು ‘ಉಜ್ವಾಡು’ ಚಿತ್ರದಲ್ಲಿ ಯಾಕೇ ಸಂಭಾವನೆ ಪಡೆದುಕೊಂಡಿಲ್ಲ ಎಂದು ಕೇಳಿದ್ರೆ ‘ಅದು ನನ್ನ ಮಾತೃಭಾಷೆಯ ಚಿತ್ರ. ಇಲ್ಲಿ ಸಂಭಾವನೆ ಬೇಕಾಗಿಲ್ಲ. ಭಾಷೆಯ ಮೇಲಿನ ಕಾಳಜಿ ಇರಬೇಕು. ಚಿತ್ರ ನನ್ನದು ಎನ್ನುವ ಭಾವನೆ ಇದ್ದಾರೆ ಸಾಕು ಎನ್ನುತ್ತಾರೆ ನೀತು.
‘ಉಜ್ವಾಡು’ ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ಚಿತ್ರೀಕರಣದ ಸಮಯದಲ್ಲಿ ನಡೆದ ಒಂದು ಸನ್ನಿವೇಶವನ್ನು ಲವಲವಿಕೆಯ ಮುಂದೆ ಹೇಳುತ್ತಿದ್ದರು.
‘ಚಿತ್ರದ ಬಹುತೇಕ ಭಾಗಗಳು ಶೂಟ್ ಆಗಿತ್ತು. ನೀತು ಅವರ ಒಂದು ಕ್ಲೈಮಾಕ್ಸ್ ಸೀನ್ ಬಾಕಿ ಉಳಿದಿತ್ತು. ಅಷ್ಟರಲ್ಲಿ ನನ್ನ ಮೊಬೈಲ್ಗೆ ‘ನೀತು ತಂದೆ ಹೋಗಿಬಿಟ್ಟರು ’ಎನ್ನುವ ಮೆಸೇಜ್ ಬಂದು ಬಿದ್ದಿತ್ತು. ಆದರೆ ನೇರವಾಗಿ ನೀತು ಬಳಿಯಲ್ಲಿ ಹೇಳಲಾಗದ ಪರಿಸ್ಥಿತಿ. ಬೇರೊಬ್ಬರ ಮೂಲಕ ಹೇಳಿ ಮಾಡಿಸಿದೆ. ನೀತು ಅಲ್ಲಿಂದ ಹೊರಟು ನಿಂತರು. ನೀತು ಹತ್ತು ದಿನಗಳ ಮಟ್ಟಿಗೆ ಕೈಗೆ ಸಿಗೋಲ್ಲ ಎಂದು ಚಿತ್ರತಂಡದ ಸದಸ್ಯರು ಹೇಳಿಕೊಳ್ಳುತ್ತಿದ್ದರು. ಆದರೆ ಮರುದಿನ ತಂದೆಯ ಕ್ರಿಯಾವಿದಿಗಳನ್ನು ಮುಗಿಸಿಕೊಂಡು ನೀತು ಶೂಟಿಂಗ್ ಸ್ಪಾಟ್ಗೆ ಹಾಜರಾಗಿದ್ದರು. ಎಲ್ಲರಿಗೂ ಅಚ್ಚರಿಯಾಗಿತ್ತು. ತಂದೆಯ ಮರಣದ ನಂತರ ನೀತು ಯಾವ ರೀತಿಯಲ್ಲಿ ಚಿತ್ರೀಕರಣದಲ್ಲಿ ಸ್ಪಂದಿಸುತ್ತಾರೆ ಎನ್ನುವ ಹೆದರಿಕೆ ಇತ್ತು. ನೀತು ಎಂದಿನ ಲವಲವಿಕೆಯಲ್ಲಿ ಚಿತ್ರೀಕರಣ ಮುಗಿಸಿ ತಾನು ಎಲ್ಲ ನಾಯಕಿ, ನಾಯಕರಂತೆ ಅಲ್ಲ ಎನ್ನುವುದನ್ನು ಸಾಭೀತು ಮಾಡಿ ಬಿಟ್ಟ್ರು ಎಂದು ಚಿನ್ನಾ ನೀತು ಕುರಿತು ಹೇಳುತ್ತಿದ್ದರು.
ತುಂಬಾ ಬೇಸರದ ಟೈಮ್ನಲ್ಲಿ ಈ ರೀತಿಯಲ್ಲಿ ವರ್ತಿಸಲು ನೀತುಗೆ ಹೇಗೆ ಸಾಧ್ಯವಾಯಿತು ಎಂದು ಚಿನ್ನಾ ಕೇಳಿದ್ದರಂತೆ, ಅದಕ್ಕೆ ನೀತು ಹೇಳಿದಿಷ್ಟು ‘ ನೋಡಿ ಸಾರ್... ನಿರ್ಮಾಪಕ ನಮ್ಮನ್ನು ನಂಬಿ ಚಿತ್ರಕ್ಕೆ ಬಹಳಷ್ಟು ಹಣ ಸುರಿಯುತ್ತಾರೆ. ನಮ್ಮಿಂದ ಅಂತಹ ನಿರ್ಮಾಪಕನಿಗೆ ಅನ್ಯಾಯವಾಗಕೂಡದು. ಬದುಕಿನಲ್ಲಿ ಏಳುಬೀಳುಗಳು ಇದ್ದೇ ಇರುತ್ತದೆ. ಎಲ್ಲವನ್ನು ಹೊಂದಿಕೊಂಡು ಮುನ್ನಡೆಯಬೇಕು’ ಎಂದರಂತೆ !
ನಿಜಕ್ಕೂ ಒಬ್ಬ ಚಿತ್ರ ಕಲಾವಿದ ಈ ರೀತಿಯಲ್ಲಿ ವರ್ತಿಸಲು ಆರಂಭಿಸಿದರೆ ಗಾಂಽನಗರದ ಬಹಳಷ್ಟು ನಿರ್ಮಾಪಕರು ಬೀದಿಗೆ ಬೀಳೋದು ತಪ್ಪುತ್ತದೆ ಅಲ್ವಾ...?
ವಿಜಯ ಕರ್ನಾಟಕದ ಲವಲವಿಕೆಯ ಪುರವಣಿಯಲ್ಲಿ ಮೇ ೨೧,2011ರಂದು ಪ್ರಕಟವಾಗಿದೆ.