Thursday, November 17, 2011

ಪ್ರಾದೇಶಿಕ ಭಾಷೆಗಳ ಚಿತ್ರ ಕನ್ನಡಕ್ಕೆ ಡಬ್ ಆಗಬೇಕು: ಸುಮನ್





ಮೂಲ್ಕಿ- ಹೆಜಮಾಡಿಯ ಹುಡುಗನೊಬ್ಬ ತಮಿಳು, ತೆಲುಗು, ಕನ್ನಡ, ಮಲಯಾಳಂ ಚಿತ್ರರಂಗದ ಘಟಾನುಘಟಿ ನಟರಿಗೆ ಪೈಪೋಟಿ ಕೊಟ್ಟು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ಸುಮನ್ ಮಂಗಳೂರಿನ ವಿಕ ಕಚೇರಿಯಲ್ಲಿ ಬಂದು ಒಂದು ತಾಸುಗಳ ಕಾಲ ಹರಟಿದರು.


ಸ್ಟೀವನ್ ರೇಗೊ, ದಾರಂದಕುಕ್ಕು
ವಿಕ ಸುದ್ದಿಲೋಕ ಮಂಗಳೂರು
ಕನ್ನಡದಲ್ಲಿ ಡಬ್ಬಿಂಗ್ ಮಾಡಲು ಅವಕಾಶ ನೀಡುವುದಿಲ್ಲ ಎನ್ನುವುದು ಸರಿ. ಆದರೆ ರಾಜ್ಯದೊಳಗಿರುವ ಪ್ರಾದೇಶಿಕ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿದರೆ ಪ್ರಾದೇಶಿಕ ಚಿತ್ರಗಳು ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದವರು ಪಂಚಭಾಷೆ ಸಿನಿಮಾ ತಾರೆ ಸುಮನ್ ತಲ್ವಾರ್ ಅವರು.
ವಿಜಯ ಕರ್ನಾಟಕದ ಲವಲವಿಕೆ ಪುರವಣಿಯಲ್ಲಿ ಪ್ರಕಟವಾದ ‘ಲವರ್ ಬಾಯ್ ಸುಮನ್ ಮತ್ತೆ ಟಾಲಿವುಡ್‌ಗೆ ಎಂಟ್ರಿ’ ಎನ್ನುವ ವಿಶೇಷ ವರದಿಯನ್ನು ಗಮನಿಸಿದ ಸುಮನ್ ನೂರಾರು ಕಿ.ಮೀ ದೂರದಲ್ಲಿರುವ ಹೈದರಾಬಾದ್‌ನಿಂದ ತಮ್ಮ ಬ್ಯುಸಿ ಶೆಡ್ಯುಲ್‌ಗಳ ನಡುವೆ ಮಂಗಳೂರಿನ ವಿಕ ಕಚೇರಿಗೆ ಗುರುವಾರ ಸಂಜೆ ದಿಢೀರ್ ಭೇಟಿ ನೀಡಿದರು. ಪತ್ರಿಕೆ ಕಟ್ಟುವ ಕೆಲಸದಲ್ಲಿ ತಲ್ಲೀನರಾಗಿದ್ದ ಸಿಬ್ಬಂದಿಗಳ ಜತೆಯಲ್ಲಿ ಬರೋಬರಿ ಒಂದು ತಾಸಿನ ಕಾಲ ಸಿನಿಮಾ, ಭಾಷೆ, ಬದುಕು, ಕರಾವಳಿಯಂತಹ ನಾನಾ ಟಾಪಿಕ್‌ಗಳ ಮೇಲೆ ಸಮನ್ ಮಾತಿಗೆ ಕೂತಿದ್ದರು.
ಇಡೀ ಭಾರತದಲ್ಲಿ ಕರ್ನಾಟಕ ರಾಜ್ಯ ಸಂಪೂರ್ಣ ಭಿನ್ನ . ಇಲ್ಲಿ ಐದಾರು ಭಾಷೆಗಳಿದ್ದರೂ ನಾವೆಲ್ಲರೂ ಒಂದೇ ಎನ್ನುವ ಏಕತೆಯ ಮಂತ್ರವಿದೆ. ಆದರೆ ಉಳಿದ ರಾಜ್ಯಗಳಲ್ಲಿ ಒಂದೇ ಭಾಷೆ, ಭೂಮಿಗಾಗಿ ದಿನನಿತ್ಯ ಹೊಡೆದಾಟ ನಡೆಯುತ್ತದೆ. ಆಂಧ್ರ ಪ್ರದೇಶದಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ನಡೆಯುವ ಹೋರಾಟ ದಿನಲೂ ಕಣ್ಣಾರೆ ನೋಡಿದ್ದೇನೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿರುವ ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ಡಬ್ ಮಾಡಿದರೆ ಇಲ್ಲಿನ ಸಿನಿಮಾಗಳಿಗೆ ಒಳ್ಳೆಯ ಮಾರುಕಟ್ಟೆ ಬರುತ್ತದೆ ಎನ್ನುವುದು ಸುಮನ್ ಅವರ ಅಭಿಪ್ರಾಯ.
ತುಳು ಸಿನಿಮಾಕ್ಕೆ ರೆಡಿ:
ತುಳು ಸಿನಿಮಾಗಳು ಇತ್ತೀಚೆಗೆ ಹೆಚ್ಚಾಗಿ ಥಿಯೇಟರ್‌ಗಳಿಗೆ ಬರುತ್ತಿದೆ. ಆದರೆ ಗುಣಮಟ್ಟದ ಚಿತ್ರಗಳು ಇಲ್ಲಿ ಮೂಡಿ ಬರಬೇಕು. ಈಗ ನೆರೆಯ ರಾಜ್ಯಗಳ ಸಿನಿಮಾಗಳು ಇಲ್ಲಿನ ಥಿಯೇಟರ್‌ಗಳಿಗೆ ದಾಳಿ ಮಾಡುತ್ತಿರುವುದರಿಂದ ತುಳು ಚಿತ್ರಗಳ ಗುಣಮಟ್ಟ ಬಹಳಷ್ಟು ಸುಧಾರಣೆಯಾಗಬೇಕಾದ ಅವಶ್ಯಕತೆ ಇದೆ. ಸ್ಪರ್ಧೆ ಎನ್ನುವ ವಿಚಾರ ಬರೀ ತುಳು ಸಿನಿಮಾಗಳಿಗೆ ಮಾತ್ರವಲ್ಲ ಎಲ್ಲ ರಂಗಕ್ಕೂ ಮುಟ್ಟಿದೆ. ದೊಡ್ಡ ದೊಡ್ಡ ಬಜೆಟ್‌ಗಳ ಚಿತ್ರಗಳು ತುಳುವಿನಲ್ಲಿ ಬರದೇ ಹೋದರೂ ಚಿಂತಿಲ್ಲ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಾರುಕಟ್ಟೆಯಲ್ಲಿ ತುಳುವಿನ ಚಿತ್ರಗಳು ಸದ್ದು ಮಾಡಬೇಕು ಎನ್ನುವುದು ಸುಮನ್‌ರ ಮಾತು.
ತುಳು ಚಿತ್ರದಲ್ಲಿ ನಟಿಸಲು ನಾನು ರೆಡಿ. ಸಂಭಾವನೆ ಕೊಡದೇ ಇದ್ದ್ರೂ ಬೇಸರವಿಲ್ಲ. ಅವರು ಬರೀ ನನ್ನ ಸಿಬ್ಬಂದಿಗಳ ಖರ್ಚು ನೋಡಿದರೆ ಸಾಕು. ಆದರೆ ಚಿತ್ರದಲ್ಲಿ ಒಳ್ಳೆಯ ಸಂದೇಶ ಇರಬೇಕು. ಸಮಾಜದ ಕುರಿತು ಜಾಗೃತಿ ಮೂಡಿಸುವಂತಿರಬೇಕು. ಕರಾವಳಿಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವಾಗಿದ್ದೂ, ಕಡಿಮೆ ಖರ್ಚಿನಲ್ಲಿ ರಾಷ್ಟ್ರಮಟ್ಟದ ಮನ್ನಣೆ ಸಿಗುವಂತಾಗಬೇಕು. ಅಂತಹ ಚಿತ್ರಗಳಿಗೆ ನಾನು ಖಂಡಿತವಾಗಿಯೂ ಡೇಟ್ಸ್ ಕೊಡುತ್ತೇನೆ ಎನ್ನುತ್ತಾರೆ ಸುಮನ್.
ಸಿನ್ಮಾ ಬದುಕು ಕೊಟ್ಟಿದೆ:
ಕಳೆದ ೩೫ ವರ್ಷಗಳಿಂದ ಸಿನ್ಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಹಾಗೂ ಇಂಗ್ಲೀಷ್‌ನಲ್ಲೂ ನಟಿಸಿ ಬಂದಿದ್ದೇನೆ. ಸಿನಿಮಾದಲ್ಲಿ ನಟಿಸುವುದು ಬಿಟ್ಟರೆ ನನಗೆ ಬೇರೆ ಕೆಲಸ ಗೊತ್ತಿಲ್ಲ. ಬಣ್ಣದ ಬದುಕು ನನಗೆ ಬಹಳಷ್ಟು ಕೊಟ್ಟಿದೆ ಹಾಗೂ ಬಹಳಷ್ಟು ಕಿತ್ತುಕೊಂಡಿದೆ. ಆದರೂ ಈ ಏರುಪೇರಿನ ಬದುಕಿನಲ್ಲೂ ನನಗೆ ಬಣ್ಣದ ಲೋಕ ಇಷ್ಟವಾಗಿದೆ ಎನ್ನುವ ಸುಮನ್ ಚಂದ್ರಬಾಬು ನಾಯ್ಡು ಅವರ ಪಕ್ಷದ ಸಿದ್ದಾಂತಗಳು ಬಹಳ ಇಷ್ಟವಾಯಿತು.ಅದಕ್ಕಾಗಿ ಅವರಿಗೆ ಬೆಂಬಲ ಸೂಚಿಸಿದೆ. ಆದರೆ ರಾಜಕಾರಣಕ್ಕಂತೂ ಇಳಿಯುವ ಮಾತು ಸಾಧ್ಯಕ್ಕೆ ಇಲ್ಲ ಎನ್ನುತ್ತಾರೆ.
ತೆಲುಗಿನಲ್ಲಿ ನಾಯಕನಾಗಿ ಇತ್ತೀಚೆಗೆ ಸಿನ್ಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ಮರುಜನ್ಮ ಕೊಟ್ಟ ಸಿನಿಮಾ. ಇಡೀ ಸಿನ್ಮಾ ಹಿಸ್ಟರಿಯಲ್ಲಿ ನಾಯಕನಾಗಿ ಅಭಿನಯಿಸಿ ಮತ್ತೆ ವಿಲನ್ ಗೆಟಪ್‌ಗೆ ತಿರುಗಿ ಈಗ ಮತ್ತೆ ನಾಯಕನ ಸ್ಥಾನಕ್ಕೆ ಬರುವುದು ಸುಲಭವಲ್ಲ. ಅದರಲ್ಲೂ ಕರಾವಳಿಯ ಹುಡುಗನೊಬ್ಬ ಬೇರೆ ಸಿನ್ಮಾ ಇಂಡಸ್ಟ್ರಿಯಲ್ಲಿ ಈ ರೀತಿ ಸಾಧನೆಯ ಮಾಡಲು ಸಾಧ್ಯವಿಲ್ಲ. ಆದರೆ ನನ್ನ ಬಣ್ಣದ ಜೀವನದಲ್ಲಿ ಇದೆಲ್ಲವೂ ಸಾಧ್ಯವಾಗಿದೆ. ಇದೆಲ್ಲವೂ ಅಭಿಮಾನಿಗಳ ದಯೆ ಹಾಗೂ ದೇವರ ಮೇಲೆ ನಾನಿಟ್ಟ ನಂಬಿಕೆ ಎನ್ನುವುದು ಸುಮನ್‌ರ ಅಂತಾರಾಳದ ಮಾತು.
ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಹತ್ತಾರು ಚಿತ್ರಗಳು ಕೈಯಲ್ಲಿರುವುದರಿಂದ ನನಗೆ ಟೈಮ್ ಸಿಕ್ಕೋದು ಬಹಳ ಕಡಿಮೆ. ನಟನೆ ಜತೆಯಲ್ಲಿ ದೂರ ದೂರದ ಊರುಗಳಿಗೆ ಪ್ರವಾಸ ಮಾಡುವುದರಲ್ಲಿಯೇ ಹೆಚ್ಚಿನ ಸಮಯ ವ್ಯರ್ಥವಾಗುತ್ತದೆ. ಆದರೂ ಕರಾವಳಿಗೆ ವರ್ಷದಲ್ಲಿ ಒಂದೆರಡು ಬಾರಿ ಭೇಟಿ ಕೊಡುತ್ತೇನೆ. ಇಲ್ಲಿನ ದೇವಸ್ಥಾನ, ನಾಗಬನಗಳಿಗೆ ಭೇಟಿ ಕೊಡದೇ ಹೋದರೆ ಮನಸ್ಸಿನಲ್ಲಿ ಏನೋ ಕಳೆದುಕೊಂಡ ಅನುಭವವಾಗುತ್ತದೆ ಎನ್ನುವ ಮಾತಿನ ಮೂಲಕ ಸುಮನ್ ಚಿಟ್‌ಚಾಟ್‌ಗೆ ಮುಕ್ತಾಯ ಗೀತೆ ಹಾಡಿದರು.

Sunday, November 13, 2011

ಊ..ಲಾ...ಲಾ ‘ಲಹರಿ’


ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಚಿತ್ರದಲ್ಲಿ ಬಪ್ಪಿ ಲಹರಿಯ ‘ಊ..ಲಾ..ಲಾ’ ಹಾಡು ಈ ವರ್ಷದ ಮೋಸ್ಟ್ ಪಾಪ್ಯುಲರ್ ಹಾಡುಗಳ ಸಾಲಿನಲ್ಲಿ ಸೇರಿಕೊಂಡಿರೋದು ಬಪ್ಪಿಯ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಒಂದು ಜೀವಂತ ಪುರಾವೆ.

ಬಪ್ಪಿ ಲಹರಿ ಎಂದರೆ ಥಟ್ ಅಂತಾ.. ಚಿನ್ನದ ಅಂಗಡಿಯ ನೆನಪು ಬಂದು ಬಿಡುತ್ತದೆ. ‘ವಿದ್ ಔಟ್ ಗೋಲ್ಡ್ ಬಪ್ಪಿ ನೋ ಮೋರ್’ ಎನ್ನುವ ಮಾತು ಇಡೀ ಸಿನ್ಮಾ ನಗರಿಗೆ ಗೊತ್ತಿದೆ. ಬಪ್ಪಿಯ ಕೈಯಲ್ಲಿರುವ ಹತ್ತು ಬೆರಳಿಗೂ ಚಿನ್ನದ ಉಂಗುರ, ಕುತ್ತಿಗೆ ತುಂಬಾ ಹಾರದಂತೆ ನೇತಾಡುತ್ತಿರುವ ಚಿನ್ನದ ಸರಗಳು ಎಲ್ಲರನ್ನು ಕೂಲ್ ಮಾಡಲು ಸನ್ ಗ್ಲಾಸ್, ತಲೆ ತುಂಬಾ ಉದ್ದ ಕೂದಲು, ೩೨ ಹಲ್ಲುಗಳು ಈಗಲೂ ಇದೆ ಎನ್ನುವಂತಹ ಒಂದು ಸುಂದರ ನಗು. ಕುರ್ತಾ, ಶೇರ್‌ವಾನಿಯೊಳಗೆ ದಡೂತಿ ದೇಹ ಎಲ್ಲವೂ ಬಪ್ಪಿ ಲಹರಿಯ ಶಾರ್ಟ್ ಇಂಟರ್‌ಡಕ್ಷನ್ ಮಾರ್ಕ್‌ಗಳು.
ಬಪ್ಪಿ ಲಹರಿ ಬಹಳ ಜನರಿಗೆ ಗೊತ್ತಿರುವಂತೆ ಸಿಂಗರ್, ಕಂಪೋಸರ್ ಆಂಡ್ ಆಕ್ಟರ್. ಮೂರರ ಹರೆಯದಲ್ಲಿ ತಬ್ಲಾದ ಜತೆ ಗುದ್ದಾಡಿಕೊಂಡು ಒಳ್ಳೆಯ ಹೆಸರು ಪಡೆದ ಬಪ್ಪಿಯ ಹೆತ್ತವರು ಕೂಡ ಸಂಗೀತದ ಆರಾಧಕರು. ಬರೀ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಳ್ಳೆಯ ಹೆಸರು ಗಳಿಸಬೇಕೆನ್ನುವುದು ಬಪ್ಪಿ ಬಾಲ್ಯದಿಂದಲೂ ಬೆಳೆಸಿಕೊಂಡು ಬಂದ ಕನಸ್ಸಾಗಿತ್ತು. ಬಪ್ಪಿಯ ತಂದೆಗೆ ಸಿನಿಮಾ ನಗರಿಯಲ್ಲಿ ಒಳ್ಳೆಯ ಹೆಸರಿತ್ತು. ಅದೇ ಬಪ್ಪಿಯ ಸಿನ್ಮಾ ಎಂಟ್ರಿಗೆ ಗ್ರೀನ್ ಕಾರ್ಡ್ ಆಯಿತು.
ಬಪ್ಪಿಯ ಸಂಗೀತವೇ ವಿಚಿತ್ರ ಮಾರಾಯ್ರೆ. ಪಶ್ವಿಮ, ಪೂರ್ವ ದೇಶಗಳ ಸಂಗೀತದ ಪ್ರಭಾವದ ಜತೆಯಲ್ಲಿ ದೇಸಿಯ ಬೀಟ್‌ಗಳನ್ನು ಕೊಟ್ಟು ಕೇಳುಗರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗುವ ಸಾಮರ್ಥ್ಯ ಬಪ್ಪಿಯ ಸಂಗೀತ ಹೊಂದಿದೆ. ೧೯ರ ಹರೆಯದಲ್ಲಿ ಬಾಲಿವುಡ್ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟ ಬಪ್ಪಿಯ ಮೊದಲ ಚಿತ್ರ ಬಂಗಾಳಿ ಎರಡನೇ ಚಿತ್ರ ಹಿಂದಿಯಲ್ಲಿ ಬಂತು. ಆದರೆ ೧೯೭೫ರಲ್ಲಿ ಹಿಂದಿಯಲ್ಲಿ ಬಂದ ತಹೀರ್ ಹುಸೇನ್‌ರ ‘ಝಕ್ಮಿ’ಯಲ್ಲಿ ಬಪ್ಪಿ ಯ ಕಂಪೋಸಿಂಗ್ ಹಾಗೂ ಹಿನ್ನೆಲೆ ಗಾಯನ ಏಕ್‌ದಂ ಅವರಿಗೆ ಸ್ಟಾರ್ ಗಿರಿ ಕಿರೀಟ ಕೊಟ್ಟಿತ್ತು.
ಕ್ರಾಂತಿಕಾರ ಬಪ್ಪಿ:
ಬಪ್ಪಿ ಸಿನ್ಮಾ ಸಂಗೀತದಲ್ಲೊಂದು ಹೊಸ ಕ್ರಾಂತಿಗೆ ನಾಂದಿ ಹಾಡಿದರು. ‘ಚಲ್ತೇ ಚಲ್ತೇ’ ಹಾಗೂ ‘ಸುರಕ್ಷಾ’ ಚಿತ್ರಗಳು ಬಪ್ಪಿ ಸಂಗೀತದಿಂದ ಸೂಪರ್ ಹಿಟ್ಟ ಅನ್ನಿಸಿಕೊಂಡಿತು. ಮತ್ತೇ ಬಪ್ಪಿ ತಿರುಗಿ ನೋಡುವ ತಪ್ಪು ಮಾಡಲಿಲ್ಲ. ಅತೀ ಕಡಿಮೆ ಟೈಮ್‌ನಲ್ಲಿ ಬಪ್ಪಿ ಯುವಜನರ ಆರಾಧಕರಾಗಿ ಒಪ್ಪಿಕೊಂಡರು. ೧೯೮೦ರಲ್ಲಿ ಹಿಂದಿಯಲ್ಲಿ ಬಂದ ‘ಡಿಸ್ಕೋ ಡ್ಯಾನ್ಸರ್’ ಚಿತ್ರದ ‘ಐ ಯ್ಯಾಮ್ ಎ ಡಿಸ್ಕೋ ಡ್ಯಾನ್ಸರ್’ ಬಪ್ಪಿಯ ಮೋಸ್ಟ್ ಡಿಮ್ಯಾಂಡ್ ಹಾಡಾಗಿ ಹೋಯಿತು. ಈ ಬಳಿಕ ಬಪ್ಪಿಯನ್ನು ‘ಡಿಸ್ಕೋ ಕಿಂಗ್’ ಎಂದೇ ಬಾಲಿವುಡ್ ಮಂದಿಗಳು ಕರೆಯಲು ಆರಂಭ ಮಾಡಿದರು.
ಮಹಮ್ಮದ್ ರಫಿ ಹಾಗೂ ಕಿಶೋರ್ ಕುಮಾರ್‌ಗಳ ಜತೆಯಲ್ಲಿ ಬಪ್ಪಿ ಡ್ಯುಯೆಟ್ ಸಾಂಗ್‌ಗಳನ್ನು ಹಾಡಿಸಿದರು. ಆಶಾ ಬೊಂಸ್ಲೆಂ, ಲತಾ ಮಂಗೇಶ್ಕರ್ ಸೇರಿದಂತೆ ಬಪ್ಪಿ ಕೆಲಸ ಮಾಡಿದರು. ಅಲೀಶಾ ಚಿನೋಯ್, ಉಷಾ ಉತ್ತುಪ್‌ರಂತಹ ಗಾಯಕರನ್ನು ಬಪ್ಪಿ ತಮ್ಮ ಗರಡಿಯಲ್ಲಿ ತಯಾರಿಸಿ ಬಾಲಿವುಡ್‌ಗೆ ಬಿಟ್ಟರು. ೧೯೯೦ರಲ್ಲಿ ಪ್ರಕಾಶ್ ಮೆಹ್ರಾ ನಿರ್ದೇಶನದ ‘ದಲಾಲ್’ಚಿತ್ರದ ‘ಗುಟುರ್ ಗುಟುರ್’ ಮಾಸ್ ಹಿಟ್ ಆಗಿ ಬಪ್ಪಿಗೆ ಹೊಸ ಇಮೇಜ್ ಕೊಟ್ಟಿತು.‘ಬಪ್ಪಿ ಮ್ಯಾಜಿಕ್- ದೀ ಅಸಲಿ ಬಾಪ್ ಮಿಕ್ಸ್’ ಬಪ್ಪಿಯ ಆಲ್ಬಂ ಮಸಾಲೆ ದೋಸೆಯಂತೆ ಖರ್ಚಾಗಿ ಹೋಯಿತು.
ಅಂದಹಾಗೆ ಬಪ್ಪಿಯ ಸಂಗೀತದ ಪಯಣ ಈಗಲೂ ಮುಂದುವರಿದೆ. ಇಂದಿಗೂ ಬಪ್ಪಿಯ ಸಂಗೀತ ಎಂದರೆ ಪ್ರೀತಿಸುವ, ಕುಣಿಯುವ, ಆರಾದಿಸುವ ಅಭಿಮಾನಿಗಳಿದ್ದಾರೆ. ಬಪ್ಪಿ ಕೂಡ ಇಂದಿನ ಯುವ ಪೀಳಿಗೆಯ ನಾಡಿಮಿಡಿತವನ್ನು ಹಿಡಿದುಕೊಂಡೇ ಹಾಡುತ್ತಿದ್ದಾರೆ ಎನ್ನೋದೇ ಖುಷಿಯ ವಿಷ್ಯಾ. ದಕ್ಷಿಣ ಭಾರತದ ಖ್ಯಾತ ಐಟಂ ಡ್ಯಾನ್ಸರ್ ಸಿಲ್ಕ್‌ಸ್ಮಿತಾ ಅವರ ಕತೆಯನ್ನು ಇಟ್ಟುಕೊಂಡು ಹೊರಬರುತ್ತಿರುವ ವಿದ್ಯಾ ಬಾಲನ್ ಅಭಿನಯದ ‘ದಿ ಡರ್ಟಿ ಪಿಕ್ಚರ್’ ಚಿತ್ರದಲ್ಲಿ ಬಪ್ಪಿಯ ‘ಊ ..ಲಾ..ಲಾ’ ಹಾಡು ಈ ವರ್ಷದ ಮೋಸ್ಟ್ ಪಾಪ್ಯುಲರ್ ಹಾಡುಗಳ ಸಾಲಿನಲ್ಲಿ ಸೇರಿಕೊಂಡಿರೋದು ಬಪ್ಪಿಯ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಒಂದು ಜೀವಂತ ಪುರಾವೆ ಅಲ್ವಾ..?

ಬಪ್ಪಿಯ ಚಿನ್ನದ ಮೋಹ
ಬಪ್ಪಿ ಲಹರಿಯ ಬಾಲ್ಯದ ಬದುಕು ಅಷ್ಟೊಂದು ಸುಂದರವಾಗಿರಲಿಲ್ಲ. ಕಡುಬಡತನದ ನಡುವೆ ಬಪ್ಪಿಯ ಬಾಲ್ಯ ಅರಳಿತ್ತು. ಒಂದು ಹೊತ್ತಿನ ಊಟಕ್ಕೂ ಬಪ್ಪಿ ಪರದಾಡಿದ್ದಾರೆ ಎನ್ನುವ ಮಾತನ್ನು ಬಪ್ಪಿ ತನ್ನ ಸ್ನೇಹಿತರ ವಲಯದಲ್ಲಿ ಹೇಳಿಕೊಳ್ಳುತ್ತಿದ್ದರಂತೆ. ಆದರೆ ಬಪ್ಪಿ ಸಂಗೀತ ಕ್ಷೇತ್ರದಲ್ಲಿ ನಿಧಾನವಾಗಿ ಬೆಳೆಯುತ್ತಾ ಹೋದಾಗ ಮನೆಯ ಪರಿಸ್ಥಿತಿ ಚೇತರಿಕೆ ಕಂಡಿತ್ತು. ಬದುಕಿನ ಮಟ್ಟ ಒಂದು ಹಂತಕ್ಕೆ ನಿಲ್ಲುವ ಹೊತ್ತಿಗೆ ಚಿನ್ನದ ಆಭರಣಗಳ ಮೇಲೆ ವಿಶೇಷ ಮೋಹ ಇಟ್ಟುಕೊಂಡಿದ್ದ ಅವರ ತಾಯಿ ಬಪ್ಪಿಯನ್ನು ಬಿಟ್ಟು ಹೋದರಂತೆ..! ತಾಯಿ ನೆನಪಿಗಾಗಿ ಬಪ್ಪಿ ಮೈ ತುಂಬಾ ಚಿನ್ನದ ಆಭರಣಗಳನ್ನು ಇಟ್ಟುಕೊಂಡು ಈಗಲೂ ಓಡಾಡುತ್ತಿದ್ದಾರೆ. ಇದೇ ಚಿನ್ನದ ಗಣಿ ಬಪ್ಪಿಯ ಚಿನ್ನದ ಸ್ಟೋರಿ.

ಕಲಿಯುಗದ ಕರ್ಣ
ದಾನ ಧರ್ಮದಲ್ಲೂ ಬಪ್ಪಿ ಎತ್ತಿದ ಕೈ ಖಾಸಗಿ ಚಾನೆಲ್‌ವೊಂದು ಸಂಗೀತ ರಿಯಾಲಿಟಿ ಶೋವನ್ನು ನಡೆಸುತ್ತಿದ್ದಾಗ ಬಪ್ಪಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಯಾವ ವಿದ್ಯಾರ್ಥಿ ಉತ್ತಮವಾಗಿ ಹಾಡಿದನೋ ಅವರಿಗೆ ಬಪ್ಪಿ ಬರೀ ಶಹಬ್ಬಾಸ್ ಹೇಳುವ ಬದಲಾಗಿ ತನ್ನ ಕುತ್ತಿಗೆಯಲ್ಲಿರುವ ಚಿನ್ನದ ಸರಗಳನ್ನೇ ಕಿತ್ತು ಕೊಡುತ್ತಿದ್ದರು. ಹೀಗೆ ಕೊಡುತ್ತಾ ಚಿನ್ನದ ಸರಗಳು ಮುಗಿದು ಹೋಯಿತೋ.. ಅಲ್ಲಿಂದ ಕೈಯಲ್ಲಿದ್ದ ಉಂಗುರಗಳನ್ನು ಕೊಡಲು ಆರಂಭ ಮಾಡಿದರು. ಇದು ಬಪ್ಪಿಯ ದಾನ ಧರ್ಮಗಳಿಗೆ ಒಂದು ಸ್ಯಾಂಪಲ್ ಅಷ್ಟೇ..

Friday, November 11, 2011

ಬದಲಾವಣೆ ನಿಮ್ಮಿಂದ ಸಾಧ್ಯ


ಈ ಕೆಳಗಿನ ಲೇಖನಗಳು ವಿಜಯನೆಕ್ಸ್ಟ್ ಪತ್ರಿಕೆಯಲ್ಲಿ ೧೧.೧೧.೨೦೧೧ ರಂದು ಪ್ರಕಟವಾಗಿದೆ. ಮಕ್ಕಳ ದಿನಾಚರಣೆ ಪ್ರಯುಕ್ತ ಮೂರು ವಿಶೇಷ ವ್ಯಕ್ತಿಗಳ ಬಾಲ್ಯದ ಗೆಖೆಯರು ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಾ ಪತ್ರ ಬರೆದುಕೊಂಡಿದ್ದಾರೆ.


ಪ್ರೀತಿಯ ಸದಾ,
ರಾಜ್ಯದ ಮುಖ್ಯ ಮಂತ್ರಿಯಾಗಿ ಗೆದ್ದುಗೆ ಹಿಡಿದುಕೂತಾಗ ನನಗೆ ಆದ ಸಂತಸಕ್ಕೆ ಪಾರವೇ ಇಲ್ಲ. ಪುತ್ತೂರಿನಲ್ಲಿದ್ದ ಬಹುತೇಕ ನಮ್ಮಿಬ್ಬರ ಸ್ನೇಹಿತ ವಲಯಕ್ಕೆ ಪೋನ್ ಮಾಡಿ ವಿಚಾರ ತಿಳಿಸಿದೆ. ಪುತ್ತೂರಿನಲ್ಲಿರುವ ನಮ್ಮಿಬ್ಬರ ಆರಾಧ್ಯ ದೇವರಾದ ಶ್ರೀಮಹಾಲಿಂಗೇಶ್ವರನಿಗೊಂದು ಧನ್ಯವಾದ ಮನದಲ್ಲಿಯೇ ಸಲ್ಲಿಸಿ ಸಂಭ್ರಮ ಪಟ್ಟೆ. ನೀನು ಮುಖ್ಯಮಂತ್ರಿಯಾಗುವ ವಿಚಾರ ಒಂದು ಮಿರಾಕಲ್ ಎನ್ನುವವರು ಇರಬಹುದು. ಆದರೆ ನಾನು ನಿನ್ನನ್ನು ನೂರಕ್ಕೆ ನೂರರಷ್ಟು ನಂಬುತ್ತೇನೆ.
ನಿನ್ನ ಆರ್ಹತೆ, ಪ್ರಾಮಾಣಿಕತೆ, ಕೆಲಸದ ಮೇಲಿರುವ ನಿಷ್ಠೆ, ಎಲ್ಲಕ್ಕೂ ಮುಖ್ಯವಾಗಿ ಜನರ ಕುರಿತಾಗಿ ನಿನ್ನ ಕಾಳಜಿ ಎಲ್ಲವೂ ನನಗೆ ಬಾಲ್ಯದಿಂದಲೇ ಗೊತ್ತಿತ್ತು ಅಲ್ವಾ..? ಒಂದಲ್ಲ ಒಂದು ದಿನ ನೀನು ಮುಂದೆ ಬಂದು ನಿಲ್ಲುತ್ತೀಯಾ ಎನ್ನುವ ಆತ್ಮವಿಶ್ವಾಸ ನಿನ್ನ ಮೇಲೆ ನನಗಿತ್ತು. ಈ ವಿಶ್ವಾಸದ ಮಾತುಗಳು ನಿನಗೊಬ್ಬನಿಗೆ ಹೇಳಿ ಬಿಟ್ಟರೆ ಎಲ್ಲಿ ವಿನಯನಿಗೆ( ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ) ಬೇಸರವಾಗುತ್ತದೋ ಎಂದು ನಾನು ಸುಮ್ಮನಿದ್ದೆ. ವಿನಯ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ನೀನು ಬಿಜೆಪಿ ಇಬ್ಬರು ನನಗೆ ಚಡ್ಡಿ ದೋಸ್ತ್‌ಗಳು. ಅದರಲ್ಲೂ ಒಬ್ಬನಿಗೆ ಮಾತ್ರ ನಾನು ಬೆಂಬಲ ಕೊಟ್ಟರೆ ಮತ್ತೊಬ್ಬನಿಗೆ ಅನ್ಯಾಯವಾಗಿ ಬಿಡುತ್ತದೆ ಎನ್ನುವ ಮಾತು ನನ್ನೊಳಗೆ ಬಚ್ಚಿಡುವಂತೆ ಮಾಡಿತು.
ಈ ಎಲ್ಲ ಮಾತುಗಳು ಈಗ ಸರಿಯಲ್ಲ ಅನ್ನಿಸಿ ಬಿಡುತ್ತದೆ. ಆದರೆ ನನಗೆ ಈಗಲೂ ನೆನಪಿದೆ ಸದಾ.. ಕೆಯ್ಯೂರಿನ ಸರಕಾರಿ ಶಾಲೆ, ಐದನೇ ಕ್ಲಾಸಿನಲ್ಲಿ ನಾವಿಬ್ಬರೂ ಕೂರುತ್ತಿದ್ದ ಬೆಂಚು, ನನ್ನ ಎಸ್ಜಿಡಿ ಬೈಕ್‌ನಲ್ಲಿ ಮೈಸೂರಿಗೆ ಪ್ರಯಾಣ ಎಲ್ಲವೂ ನಿನ್ನನ್ನು ನೋಡಿದಾಗ ನನ್ನ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಕೆಯ್ಯೂರಿನಲ್ಲಿ ನಿನ್ನ ಚಿಕ್ಕಪ್ಪ ಚೆನ್ನಪ್ಪ ಮಾಸ್ಟ್ರು ಮನೆಯಿಂದ ಬರುತ್ತಿದ್ದಾಗ ನಿನ್ನ ಸಹಪಾಟಿಗಳಿಗೆ ನಿನ್ನ ಮೇಲೆ ಸೌಜನ್ಯದ ಭಾವನೆ ಇತ್ತು.
ಆದರೆ ಐದನೇ ಕ್ಲಾಸಿನಲ್ಲಿದ್ದಾಗ ನಿನ್ನ ಚುರುಕುಬುದ್ಧಿ, ಪ್ರಾಮಾಣಿಕತೆ, ವಿನಯವಂತಿಕೆ, ಸದಾ ನಗುವ ನಿನ್ನ ಗುಣ ಎಲ್ಲವೂ ನನಗೆ ಬಹಳವಾಗಿ ಹಿಡಿಸಿತ್ತು. ಯಾರ ಮೇಲೂ ಬೇಸರಪಟ್ಟುಕೊಂಡದ್ದು, ಕೂಗಾಡಿದ್ದು ನಾನು ನೋಡಿಯೇ ಇರಲಿಲ್ಲ ಅಲ್ವಾ..? ಈ ಎಲ್ಲ ವಿಚಾರಗಳಿಂದ ನೀನು ತುಂಬಾನೇ ಭಿನ್ನವಾಗಿ ನಿಲ್ಲುತ್ತಿದ್ದಿ ನಿನ್ನ ಸ್ನೇಹಕ್ಕಾಗಿ ನಾನು ನೀನು ಕೂರುತ್ತಿದ್ದ ಬೆಂಚಿಗೆ ಬಡ್ತಿ ಪಡೆದುಕೊಂಡು ಬಂದಿದ್ದು ನಿನಗೆ ನೆನಪಿರಬಹುದು ಅಲ್ವಾ..? ಶಾಲೆಗೆ ಬರುತ್ತಿದ್ದಾಗ ನೀನು ಹಾಕಿಕೊಂಡು ಬರುತ್ತಿದ್ದ ಶಾಸಿಟೋಪಿ ಕಂಡು ಬಹಳಷ್ಟು ಗೆಳೆಯರು ನಿನ್ನನ್ನು ಶಾಸಿಎಂದು ಕೂಗುತ್ತಿದ್ದಾಗ ನನಗೆ ಬಹಳ ಬೇಸರವಾಗುತ್ತಿತ್ತು. ಆದರೆ ಅವರ ಟೀಕೆಗಳಲ್ಲಿ ನಿನ್ನ ನಗು ಎಲ್ಲವನ್ನು ಮಡಚಿ ಹಾಕುತ್ತಿತ್ತು.
ಸದಾ ನೀನು ಉದ್ದಕ್ಕೆ ಬೆಳೆಯಲು ನನ್ನಲ್ಲಿ ಕೇಳಿದ ಐಡಿಯಾ. ನಾನು ಕೊಟ್ಟ ಸಲಹೆ ಈಗಲೂ ನನಗೆ ಯೋಚಿಸಿದಾಗ ನಗು ಉಕ್ಕಿ ಬರುತ್ತದೆ. ಯಾರೋ ನನಗೆ ಹೇಳಿದ್ರು ಬಾವಿಯಿಂದ ಬಿಂದಿಗೆಯಲ್ಲಿ ನೀರು ಎಳೆದರೆ ಉದ್ದಕ್ಕೆ ಬೆಳೆಯುತ್ತಾರಂತೆ ಅದನ್ನೇ ನಾನು ನಿಗೆ ಹೇಳಿದ್ದೆ. ಅಂದು ನೀನು ಉದ್ದಕ್ಕೆ ಬೆಳೆಯದೇ ಹೋಗಿರಬಹುದು. ಆದರೆ ಈಗ ನೀನು ಬಹಳ ಎತ್ತರಕ್ಕೆ ಬೆಳೆದು ಬಂದಿದ್ದೀಯಾ.. ಒಂದು ಬೇಸರ ನಾನು ಒಂದು ತರಗತಿಯಲ್ಲಿ ಪೇಲ್ ಆಗಿ ನೀನು ಪಾಸಾಗಿ ಮುಂದೆ ಹೋದ ನಂತರ ಮಾತ್ರ ನಾನು ಏಕಾಂಗಿಯಾಗಿ ಉಳಿದೆ. ನೀನು ತರಗತಿಯಿಂದ ತರಗತಿಗೆ ಜಂಪ್ ಆಗುತ್ತಾ ಹೋದೆ. ಪುತ್ತೂರಿನ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮಾಡುತ್ತಿದ್ದಾಗ ನಾವಿಬ್ಬರೂ ನನ್ನ ಎಸ್ಜಿಡಿ ಬೈಕ್‌ನಲ್ಲಿ ನಾಲ್ಕಾರು ಸಲ ಮೈಸೂರಿಗೆ ಹೋದ ಟೂರ್ ಈಗಲೂ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಸುತ್ತಾಟ ಎಂದರೆ ಇಬ್ಬರಿಗೂ ಖುಷಿ. ಪುತ್ತೂರಿನ ಎಲ್ಲ ಮೂಲೆ ಮೂಲೆಗಳಿಗೂ ನನ್ನ ಎಸ್‌ಜ್ಡಿ ಬೈಕ್‌ನಲ್ಲಿ ಸುತ್ತಾಟ ಮಾಡಿಕೊಂಡಿದ್ದ ಆ ದಿನಗಳು ಈಗಲೂ ನೆನಪಿಗೆ ಬರುವುದಿದೆ. ಈಗಲೂ ನೆನಪುಗಳು ತೀವ್ರವಾಗಿ ಕಾಡಿದಾಗ ನಿನಗೆ ಪೋನ್ ಮಾಡಿ ಹೇಳುವುದಿದೆ. ಪುತ್ತೂರಿನಲ್ಲಿ ಕಾಂಗ್ರೆಸ್‌ನಿಂದ ವಿನಯ್ ಕುಮಾರ್ ಸೊರಕೆ ಚುನಾವಣೆಗೆ ನಿಂತಾಗ ನಾನು ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಈ ಕಡೆ ಬಂದು ವಿನಯ್ ಕುಮಾರ್‌ಗೆ ಬೆಂಬಲ ನೀಡಿದ್ದೆ. ಕಾರಣ ನಿನ್ನಂತೆ ಅವನು ಕೂಡ ನನ್ನ ಸ್ನೇಹಿತ.
ಆದರೆ ಪುತ್ತೂರಿನಿಂದ ಬಿಜೆಪಿಯಲ್ಲಿ ನೀನು ಚುನಾವಣೆಗೆ ನಿಂತಾಗ ಇತ್ತ ಕಡೆ ಕಾಂಗ್ರೆಸ್‌ನಿಂದ ವಿನಯ್ ಕುಮಾರ್ ಚುನಾವಣೆಗೆ ನಿಂತುಬಿಟ್ಟಿದ್ದ. ಆಗ ನೀನೇ ಬಂದು ‘ಇಬ್ಬರು ನಿನ್ನ ಸ್ನೇಹಿತರು. ಯಾರಿಗೂ ನೀನು ಚುನಾವಣೆಯಲ್ಲಿ ಬೆಂಬಲ ನೀಡ ಕೂಡದು’ ಎಂದಿದ್ದಿ. ಅಲ್ಲಿಂದ ನಾನು ನೀನು ಹೇಳಿದ ರೀತಿಯಲ್ಲಿಯೇ ನಡೆದುಕೊಳ್ಳುತ್ತಿದ್ದೇನೆ. ಗೆಳೆಯ ಸದಾ ನೀನು ಇನ್ನಷ್ಟೂ ಬೆಳೆಯಬೇಕು. ಜತೆಗೆ ರಾಜ್ಯಕ್ಕೂ ನಿನ್ನ ಊರಿಗೆ ಬಹಳ ಕೆಲಸ ಮಾಡಬೇಕು ಅನ್ನೋದು ಗೆಳೆಯನ ಆಶಯ.

ನಿನ್ನ ದೋಸ್ತಿ
ಮುತ್ತಣ್ಣ( ಎನ್. ಮುತ್ತಪ್ಪ ರೈ)
............
ಎನ್. ಮುತ್ತಪ್ಪ ರೈ
ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿರುವ ಎನ್. ಮುತ್ತಪ್ಪ ರೈ ಮೂಲತಃ ಪುತ್ತೂರಿನ ಕೆಯ್ಯೂರಿನವರು. ರಿಯಲ್ ಎಸ್ಟೇಟ್, ಕ್ರೀಡೆ, ಕೃಷಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ಸದಾ ಕಾಲ ಬ್ಯುಸಿಯಾಗಿ ಇಟ್ಟುಕೊಂಡವರು. ಮುತ್ತಪ್ಪ ರೈ ಕೆಯ್ಯೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸುತ್ತಿದ್ದಾಗ ಡಿ.ವಿ. ಸದಾನಂದ ಗೌಡರು ಒಂದೇ ತರಗತಿಯ ಒಂದೇ ಬೆಂಚಿನಲ್ಲಿ ಇದ್ದವರು. ಮುತ್ತಪ್ಪ ರೈ ಒಂದು ಕ್ಲಾಸಿನಲ್ಲಿ ಪೇಲ್ ಆದ ನಂತರ ಡಿವಿ ರೈ ಅವರನ್ನು ಬಿಟ್ಟು ಮುಂದೆ ಹೋದರು. ಆದರೆ ಅವರ ಸ್ನೇಹ ಈಗಲೂ ಗಟ್ಟಿ ಇದೆ.