Sunday, January 13, 2013

ಹಾಲಿವುಡ್ ನ "ಕಿಮ್’ ಎದೆಗಾರಿಕೆ

ಕಿಮ್ ಕದರ್ಶಿಯನ್ ಇದು ಪಕ್ಕಾ ಹಾಲಿವುಡ್ ಇಂಡಸ್ಟ್ರಿಯ ಹಾಟೇಸ್ಟ್ ಪ್ರಾಪರ್ಟಿ. ಕಿಮ್ ಎಂದರೆ ಹಾಗೇ ಚಳಿಗಾಲದಲ್ಲೂ ಪುರುಷ ಮೃಗಗಳ ದೇಹದಲ್ಲಿ ಬೆವರು ಹುಟ್ಟಿಕೊಳ್ಳುತ್ತದೆ. ಕಿಮ್ ಈಗ ತುಂಬು ಗರ್ಭಿಣಿ. ಆದರೆ ಮದುವೆಯಾಗುವ ಯೋಚನೆ ಇಟ್ಟುಕೊಂಡಿಲ್ಲ. * ಸ್ಟೀವನ್ ರೇಗೊ, ದಾರಂದಕುಕ್ಕು
ಕಿಮ್ ಕದರ್ಶಿಯನ್ ಇದು ಪಕ್ಕಾ ಹಾಲಿವುಡ್ ಇಂಡಸ್ಟ್ರಿಯ ಹಾಟೇಸ್ಟ್ ಪ್ರಾಪರ್ಟಿ. ಕಿಮ್ ಎಂದರೆ ಹಾಗೇ ಚಳಿಗಾಲದಲ್ಲೂ ಪುರುಷ ಮೃಗಗಳ ದೇಹದಲ್ಲಿ ಬೆವರು ಹುಟ್ಟಿಕೊಳ್ಳುತ್ತದೆ. ಕಿಮ್ ಕದರ್ಶಿಯನ್ ಎನ್ನುವ ಪುಟ್ಟ ಹೆಸರನ್ನು ಹಾಗೆನೇ ಗೂಗಲ್ ಎನ್ನುವ ಜಾಲಾಡುವ ಬಲೆಯಲ್ಲಿ ಹಾಕಿಬಿಡಿ. ಥಟ್ ಅಂತಾ ಕಿಮ್ ಜನ್ಮ ಕುಂಡಳಿ ನಿಮ್ಮ ಮುಂದೆ ಹಾಜರಾಗಿ ಹೋಗುತ್ತದೆ. ಕಿಮ್ ಎನ್ನುವ ಸುಂದರಿಯನ್ನು ಬಹಳ ಜನ ಲೈಕ್ ಮಾಡುವುದು ಒಂದೇ ವಿಚಾರಕ್ಕೆ ಜಗತ್ತಿನಲ್ಲಿ ಅತ್ಯಂತ ಸುಂದರ ನಿತಂಬವುಳ್ಳ ನಟಿ ಎನ್ನುವ ಟ್ಯಾಗ್ ಲೈನ್ ಅವಳ ಹೆಸರಿನಲ್ಲಿ ಜತೆಯಲ್ಲಿ ಅಂಟಿಕೊಂಡಿದೆ. ಸುಂದರ ನಿತಂಬಗಳ ಕುರಿತಾಗಿ ಹಾಲಿವುಡ್ ಅಂಗಳದಲ್ಲಿ ಸ್ಪರ್ಧೆಯೊಂದು ನಡೆದಿತ್ತು. ಅದರಲ್ಲಿ ಗೆಲ್ಲುವ ಕುದುರೆ ಯಾವುದು ಎನ್ನುವ ಕುತೂಹಲದ ಪ್ರಶ್ನೆಗೆ ಕಿಮ್ ಕರ್ದಶಿಯನ್ ಹಾಗೂ ಜೆನ್ನಿಫರ್ ಲೋಪೆಜ್ ಎಂಬ ಉತ್ತರ ಥಟ್ಟನೆ ಬಂದು ಬಿಟ್ಟಿತ್ತು. ಅದರಲ್ಲೂ ಕಿಮ್ ನಿತಂಬದ ನೈಜತೆ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸುಂದರ ಶೇಪ್ ನ ಈ ನಿತಂಬದಲ್ಲಿ ನೈಜತೆ ಇಲ್ಲ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದರೂ ಇರಬಹುದು ಎಂದು ಸುದ್ದಿ ಹಬ್ಬಿತ್ತು. ಕಿಮ್ ಸುಂದರ ನಿತಂಬಗಳ ರಹಸ್ಯ: ಇದಕ್ಕೆ ಉತ್ತರವಾಗಿ ೩೨ ವರ್ಷದ ನಟಿ ಕಿಮ್ ತಮ್ಮ ನಿತಂಬದ ಎಕ್ಸ್ ರೇ ತೆಗೆಸಿ ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಮುಗುಳು ನಕ್ಕಿದ್ದರು. ಈ ಮೂಲಕ ನನ್ನ ದೇಹದಲ್ಲಿ ಯಾವುದೇ ಭಾಗ ಸಿಲಿಕಾನ್ ಅಂಶ ಸೇರಿಸಿಲ್ಲ. ಪ್ಲಾಸ್ಟಿಕ್ ಸರ್ಜರಿ ಮೂಲಕ ನಿತಂಬದ ಗಾತ್ರ ಹಿಗ್ಗಿಸಿಲ್ಲ. ಬೇಕಾದರೆ ಎಕ್ಸ್ ರೇ ರಿಪೋರ್ಟ್ ಇದೆ ನೋಡಿ ಎಂದು ಅಭಿಮಾನಿಗಳಲ್ಲಿ ಕಳಕಳಿಯಿಂದ ಕೇಳಿಕೊಂಡಿದ್ದರು. ಜನಪ್ರಿಯ ಸರಣಿ ಕೀಪಿಂಗ್ ಅಪ್ ವಿಥ್ ಕದರ್ಶಿಯನ್ಸ್ ನಲ್ಲಿ ತನ್ನ ಕರ್ವ್ ನೈಸರ್ಗಿಕವಾದದ್ದು ಎಂದು ಸಾಬೀತು ಪಡಿಸಿದ್ದಳು. ಕಿಮ್ ತಂಗಿ ಕೊಹ್ಲೆ ತನ್ನ ಟ್ವೀಟ್ ನಲ್ಲಿ ಅಕ್ಕನ ನಿತಂಬ ೧೦೦% ನೈಜವಾದದ್ದು ಎಂದು ಘೋಷಿಸಿಕೊಂಡಿದ್ದಳು. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿಲ್ಲ ಬೊಟೆಕ್ಸ್ ಇಂಜೆಕ್ಷನ್ ಬಳಸಿದ್ದೆ. ಆಮೇಲೆ ಅಲರ್ಜಿ ಆದ ಮೇಲೆ ಬಿಟ್ಟು ಬಿಟ್ಟೆ ಎಂದು ಕಿಮ್ ಟ್ವಿಟ್ ಲೋಕದಲ್ಲಿ ಮಾತುಕತೆಯ ಮೂಲಕ ಅಭಿಮಾನಿಗಳ ಎದೆಗೂಡಿನಲ್ಲಿ ಹವಾ ಹುಟ್ಟುಹಾಕುತ್ತಿದ್ದಳು. ಕಿಮ್ ಮದುವೆಗೂ ಮುಂಚೆ ಗರ್ಭಿಣಿ: ಆ ವಿಚಾರದಲ್ಲಿ ಹಾಗೆನೇ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಪಾತ ಗ್ಯಾರಂಟಿ. ಎಲ್ಲರೂ ಹೇಳಿಕೊಳ್ಳುತ್ತಿರುವ ಮಾತು ಒಂದೇ ಆಕೆ ಒಂಚೂರು ಜಾಗ್ರತೆ ವಹಿಸಬೇಕಾಗಿತ್ತು. ಬೇಡದ ಗರ್ಭ ತಡೆಯಲು ಎಷ್ಟೆಲ್ಲಾ ಮಾರ್ಗೋಪಾಯಗಳಿವೆ. ಈಕೆಗೆ ಅಷ್ಟೂ ಗೊತ್ತಾಗಲಿಲ್ಲವೆ? ಎಂದು ಆಕೆಯ ಅಭಿಮಾನಿಗಳು, ಹಿತೈಷಿಗಳು ಅವಳನ್ನು ಹುಡುಕಿಕೊಂಡು ಪ್ರಶ್ನೆ ಕೇಳುತ್ತಿದ್ದರು. ಹಾಲಿವುಡ್ ನ ಜನಪ್ರಿಯ ತಾರೆ ಕಿಮ್ ಕರ್ದಾಶಿಯನ್ ತುಂಬಿದ ಗರ್ಭಿಣಿ. ಖ್ಯಾತ ಗಾಯಕ ಕೇನ್ ಸೆಟ್ ಜತೆ ಕೆಲ ತಿಂಗಳಿಂದ ಕಿಮ್ ಡೇಟಿಂಗ್ ಮಾಡುತ್ತಿದ್ದರು. ಆದರೆ ಇವರಿಬ್ಬರು ಅದ್ಯಾವ ಘಳಿಗೆಯಲ್ಲಿ ಮೈಮರೆತರೋ ಏನೋ, ತಪ್ಪು ನಡೆದುಹೋಗಿದೆ. ಈಕೆ ಈಗ ತುಂಬು ಗರ್ಭಿಣಿ. ಇತ್ತೀಚೆಗಿನ ಕಾರ್ಯಕ್ರಮವೊಂದರಲ್ಲಿ ಕಿಮ್ ಬಾಯ್ ಫ್ರೆಂಡ್ ಕೇನ್ ವೆಸ್ಟ್ ಮಾತನಾಡುತ್ತಾ ಆಕೆ ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ. ಮೂವತ್ತೆರಡರ ಹರೆಯದ ಕಿಮ್ ಹಾಗೂ ಕೇನ್ ವೆಸ್ಟ್ ಇಬ್ಬರ ನಡುವೆ ಹತ್ತು ವರ್ಷಗಳಷ್ಟು ಪರಿಚಯವಿದೆ. ಆದರೆ ಕಳೆದ ಕೆಲ ತಿಂಗಳಿಂದಷ್ಟೇ ಡೇಟಿಂಗ್ ಮಾಡುತ್ತಿದ್ದರು. ಇದಕ್ಕೂ ಮುನ್ನ ಫುಟ್ ಬಾಲ್ ಪಟು ಕ್ರಿಸ್ ಹಂಪ್ರೆಸ್ ಅವರನ್ನು ಮದುವೆಯಾಗಿದ್ದರು. ಆದರೆ ಅದೇನಾಯಿತೋ ಏನೋ ಕೇವಲ ೭೨ ದಿನಗಳಲ್ಲೇ ವಿವಾಹ ವಿಚ್ಛೇದನದ ಮೂಲಕ ಇಬ್ಬರೂ ಬೇರ್ಪಟ್ಟರು. ಕೇನ್ ಜೊತೆ ಹೊಸ ಸಂಬಂಧ ಬೆಳೆಸಿದ ಕಿಮ್, ನಮ್ಮಿಬ್ಬರ ದಾಂಪತ್ಯ ಹಾಗೂ ಪ್ರಣಯ ಜೀವನ ಸುಖಕರವಾಗಿರುತ್ತದೆ. ಇದಕ್ಕೆ ನಮ್ಮಿಬ್ಬರ ನಡುವಿನ ಸ್ನೇಹ ಸಂಬಂಧ ಇನ್ನಷ್ಟು ಸಹಕರಿಸುತ್ತದೆ. ನಮ್ಮಿಬ್ಬರ ಬಗ್ಗೆ ನಮಗೆ ಚೆನ್ನಾಗಿ ಗೊತ್ತು. ಶೀಘ್ರವೇ ನಮ್ಮ ಮದುವೆ ನಡೆಯುತ್ತದೆ ಎನ್ನುವ ಮೂಲಕ ತನ್ನ ಗರ್ಭಿಣಿತನಕ್ಕೆ ಉತ್ತರ ನೀಡಿದ್ದಳು. ಕಿಮ್ ಹಾಗೂ ಸರಸ: ೨೦೦೭ರ ಫೆಬ್ರವರಿ ತಿಂಗಳಲ್ಲಿ ಕಿಮ್ ಹಾಗೂ ಸಿಂಗರ್ ರೇ ಜೇ ಜತೆಗಿನ ಸರಸ ಸಲ್ಲಾಪದ ವಿಡಿಯೋ ತುಣುಕೊಂದು ಬಟಾ ಬಯಲಾಗಿ ಹೋಯಿತು. ಇದು ಇಡೀ ಹಾಲಿವುಡ್ ಲೋಕದಲ್ಲಿಯೇ ಸಂಚಲನ ಮೂಡಿಸಿದ ಪ್ರಕರಣವಾಗಿ ನಂತರದ ದಿನಗಳಲ್ಲಿ ಕಾಣಿಸಿಕೊಂಡಿದೆ. ಈ ವಿಡಿಯೋವನ್ನು ಬಯಲು ಮಾಡಿದ ಕಂಪನಿಗೆ ಕಿಮ್ ನ್ಯಾಯಾಂಗದ ಮೂಲಕ ಉತ್ತರ ಕೊಟ್ಟು ಕಂಪನಿಯಿಂದ ಬರೋಬರಿ ೫ ಮಿಲಿಯನ್ ಡಾಲರ್ ತನ್ನ ವ್ಯಾನಿಟಿ ಬ್ಯಾಗ್ ನಲ್ಲಿ ಇಳಿಸಿಕೊಂಡಳು. ೨೦೦೭ರ ಡಿಸೆಂಬರ್ ತಿಂಗಳ ಪ್ಲೇಬಾಯ್ ಪುರುಷರ ಮ್ಯಾಗಜೀನ್ ನ ಮುಖಪುಟದಲ್ಲಿ ತನ್ನ ಸಹಜ ಸೌಂದರ್ಯದ ಗಣಿಯನ್ನು ಬಿಚ್ಚಿ ಅಭಿಮಾನಿ ಸಮೂಹಕ್ಕೆ ಮತ್ತೆ ದಂಗು ಮೂಡಿಸಿ ಹೋದಳು. ಈ ಬಳಿಕ ಬಟ್ಟೆಯಂತೆ ಹುಡುಗರನ್ನು ಬದಲಾಯಿಸುತ್ತಾ ಹೋದ ಕಿಮ್ ನೆಚ್ಚಿನ ಗೆಳತಿ ಯಾರು ಗೊತ್ತಾ..? ಅವಳೇ ಸಕಲ ಕಲಾ ವಲ್ಲಭೆ ಪ್ಯಾರಿಸ್ ಹಿಲ್ಟನ್ ! ಚಳಿಗಾಲದಲ್ಲಿ ಹಾಟ್ ಮಾಲು: ಅತ್ಯಂತ ಸಹಜ ನಿತಂಬಗಳ ಸುಂದರಿ ಎಂದು ಬಿಂಬಿಸಿಕೊಂಡಿರುವ ಹಾಲಿವುಡ್ ಬೆಡಗಿ ಕಿಮ್ ಕರ್ದಶಿಯನ್ ಚಳಿಗಾಲದಲ್ಲಿ ತೀರಾ ಹತ್ತಿರವಾಗಿ ಹೋಗುತ್ತಾರೆ. ಯಾಕ್ ಅಂತೀರಾ..ಚಳಿಗಾಲದಲ್ಲಿಯೇ ಕಿಮ್ ತನ್ನ ಬಿಕಿನಿ ಕಲೆಕ್ಷನ್ ಗಳ ಮಾಲನ್ನು ಹೊರಹಾಕುತ್ತಾರೆ. ಪ್ರತಿ ವರ್ಷನೂ ತಮ್ಮ ಮಾದಕ ಮೈಮಾಟವನ್ನು ದಟ್ಟ ನೀಲಿ ಬಿಕಿನಿಯಲ್ಲಿ ಪ್ರದರ್ಶಿಸುತ್ತಾರೆ. ಕಳೆದ ವರ್ಷ ಕರ್ದಶಿಯನ್ ಕಲೆಕ್ಷನ್ ನ ಈ ಈಜುಡುಗೆ ತೊಡುಗೆಗಳಲ್ಲಿ ಕಿಮ್ ತಮ್ಮ ಮಾದಕ ಮೈಮಾಟವನ್ನು ಪ್ರದರ್ಶಿಸಿದ್ದರು. ಜೊತೆಗೆ ಈಕೆಯ ಸಹೋದರಿಯರಾದ ಕೌರ್ಟ್ನಿ ಹಾಗೂ ಖೋಲ್ ಕೂಡ ಸಾಥ್ ನೀಡಿದ್ದರು. ವರ್ಷ ಪೂರ್ತಿ ಕಿಮ್ ಅಭಿಮಾನಿಗಳಿಗಂತೂ ಈ ಬಿಕಿನಿ ಚಿತ್ರಗಳು ಚಳಿಗಾಲದಲ್ಲಿ ಮದಿರೆಯ ಜತೆಗೆ ನಾಲಗೆ ಸವರಿಕೊಳ್ಳಲು ಸಾಥ್ ನೀಡುವ ಉಪ್ಪಿನ ಕಾಯಿಯಂತೆ ಮಜಬೂತಾಗಿರುತ್ತದೆ ಎನ್ನುವುದು ಅಭಿಮಾನಿಗಳಿಂದ ಹೊರ ಬಂದ ಮಾತು. ... ( vk lvk published dis article on 8.01.2013)

ಮುಂಬಯಿಯಲ್ಲಿ ‘ರಿನೋ ’ ಮ್ಯಾಜಿಕ್ !

ರೊನಾಲ್ಡಿನೋ ಎಂದಾಕ್ಷಣ ಫುಟ್ಬಾಲ್ ಆಟಗಾರರ ಕಣ್ಣು, ಕಿವಿ ನೆಟ್ಟಗೆ ನಿಂತು ಬಿಡುತ್ತದೆ. ಅವರ ಕಾಲ ಬುಡಕ್ಕೆ ಫುಟ್ಬಾಲ್ ಚೆಂಡು ಬಂದು ಮುಟ್ಟಿದರೆ ಸಾಕು... ಗೋಲು ಆಗಿಯೇ ಹೋಗುತ್ತದೆ ಎನ್ನುವ ಮಾತುಗಳು ಈ ಹಿಂದೆ ಬ್ರೆಜಿಲ್ ಫುಟ್ಬಾಲ್ ತಂಡ ಫಾರ್ಮ್‌ನಲ್ಲಿದ್ದಾಗ ಕೇಳಿಸಿಕೊಳ್ಳಲು ಆರಂಭವಾಗಿತ್ತು. ಈ ಬಳಿಕ ಕೂಡ ನಾನಾ ಫುಟ್ಬಾಲ್ ಕ್ಲಬ್ ಗಳಲ್ಲಿ ಆಡಿರುವ ರಿನೋ ಗೆ ಈಗ ಬಣ್ಣದ ಲೋಕದ ನಂಟು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಬಹುತೇಕ ಫುಟ್ಬಾಲ್ ಪ್ರಿಯರಿಗೆ ಇದ್ದೇ ಇದೆ. * ಸ್ಟೀವನ್ ರೇಗೊ, ದಾರಂದಕುಕ್ಕು
ಫುಟ್ಬಾಲ್ ಎಂದಾಕ್ಷಣ ಬ್ರೆಜಿಲ್ ದೇಶದ ನಕಾಶೆ ಕಣ್ಣ ಮುಂದೆ ಸುಳಿದು ಬಿಡುತ್ತದೆ. ಬ್ರೆಜಿಲ್‌ನ ನರನಾಡಿಯಲ್ಲಿ ಫುಟ್ಬಾಲ್ ಆಟ ಮಿಲಿತಗೊಂಡಿದೆ. ಇಲ್ಲಿನ ಪ್ರತಿಯೊಬ್ಬರು ಫುಟ್ಬಾಲ್ ಆಟ ಎಂದಾಕ್ಷಣ ಕಾಲ ಬುಡದಲ್ಲಿ ಫುಟ್ಬಾಲ್ ಹುಡುಕಾಡಲು ಆರಂಭ ಮಾಡುತ್ತಾರೆ. ಇಂತಹ ನಾಡಿನಲ್ಲಿ ಬೆಳೆದವರು ರಿನೋ ಅರ್ಥಾತ್ ರೊನಾಲ್ಡಿನೋ ತೀರಾ ಇತ್ತೀಚೆಗೆ ಮುಂಬಯಿಗೆ ಬಂದು ಇಳಿದಿದ್ದರು. ಮುಂಬಯಿಯ ಗಲ್ಲಿ ಗಲ್ಲಿಯಲ್ಲೂ ಕಣ್ಣಾಡಿಸಿಕೊಂಡು ಹೋದ ರೊನಾಲ್ಡಿನೋಗೆ ಭಾರತದಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ ಎನ್ನೋದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಭಾರತಕ್ಕೆ ಈ ಹಿಂದೆ ರಿನೋ ಬಂದಿದ್ದಾಗ ವರ್ಷದಲ್ಲಿ ಒಂದೆರಡು ಬಾರಿಯಾದರೂ ಇಲ್ಲಿಗೆ ಬಂದು ನಿಲ್ಲಬೇಕು ಎನ್ನುವ ಕನಸ್ಸುಗಳಿತ್ತು. ತನ್ನ ನೆಚ್ಚಿನ ಫುಟ್ಬಾಲ್ ಆಟವನ್ನು ಭಾರತದಲ್ಲೂ ಭರ್ಜರಿಯಾಗಿ ನಿಲ್ಲುವಂತೆ ಮಾಡಬೇಕು ಎನ್ನುವ ಕಿಚ್ಚು ಮೊಳೆದಿತ್ತು. ಮುಂಬಯಿಯ ಗಲ್ಲಿಯಲ್ಲಿ ಎದ್ದು ನಿಂತ ಬೃಹತ್ ಗಾತ್ರದ ಸಿನಿಮಾ ಕಟೌಟ್‌ಗಳನ್ನು ನೋಡಿ ತಾನು ಕೂಡ ಇದೇ ಮಾದರಿಯಲ್ಲಿ ನಿಲ್ಲಬೇಕು ಎನ್ನುವ ಬಯಕೆ ಹುಟ್ಟಿಕೊಂಡಿತ್ತು ಎಂದು ಖುದ್ದು ರಿನೋ ಮಾಧ್ಯಮಗಳಲ್ಲಿ ಈ ಹಿಂದೆ ಬಂದಾಗ ಹೇಳಿಕೊಂಡಿದ್ದರು. ಈಗ ಇದೆಲ್ಲವೂ ದಿಟವಾಗಿದೆ. ಹೌದು.. ಈಗ ರಿನೋ ಬಾಲಿವುಡ್ ಅಂಗಳದಲ್ಲಿ ಹೀರೋ ಆಗುವ ಕನಸ್ಸಿನ ಮೇಲೆ ಇಲ್ಲಿಗೆ ಬಂದಿದ್ದಾರೆ. ಫುಟ್ಬಾಲ್ ಲೋಕದ ಧ್ರುವತಾರೆ ರಿನೋ ಬಾಲಿವುಡ್ ಬೇಸ್ಡ್ ಆನಿಮೇಷನ್ ಚಿತ್ರವೊಂದರಲ್ಲಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನೋದು ಹೊರ ಬಂದ ಮಾಹಿತಿ. ಅಂದಹಾಗೆ ರೊನಾಲ್ಡಿನೋ ಎಂದಾಕ್ಷಣ ಫುಟ್ಬಾಲ್ ಆಟಗಾರರ ಕಣ್ಣು, ಕಿವಿ ನೆಟ್ಟಗೆ ನಿಂತು ಬಿಡುತ್ತದೆ. ಅವರ ಕಾಲ ಬುಡಕ್ಕೆ ಫುಟ್ಬಾಲ್ ಚೆಂಡು ಬಂದು ಮುಟ್ಟಿದರೆ ಸಾಕು... ಗೋಲು ಆಗಿಯೇ ಹೋಗುತ್ತದೆ ಎನ್ನುವ ಮಾತುಗಳು ಈ ಹಿಂದೆ ಬ್ರೆಜಿಲ್ ಫುಟ್ಬಾಲ್ ತಂಡ ಫಾರ್ಮ್‌ನಲ್ಲಿದ್ದಾಗ ಕೇಳಿಸಿಕೊಳ್ಳಲು ಆರಂಭವಾಗಿತ್ತು. ಈ ಬಳಿಕ ಕೂಡ ನಾನಾ ಫುಟ್ಬಾಲ್ ಕ್ಲಬ್ ಗಳಲ್ಲಿ ಆಡಿರುವ ರಿನೋ ಗೆ ಬಣ್ಣದ ಲೋಕ ನಂಟು ಹುಟ್ಟಿಕೊಂಡಿದ್ದು ಹೇಗೆ ಎನ್ನುವ ಕುತೂಹಲ ಬಹುತೇಕ ಫುಟ್ಬಾಲ್ ಪ್ರಿಯರಿಗೆ ಇದ್ದೇ ಇದೆ. ಇದಕ್ಕೆ ಉತ್ತರ ಇಲ್ಲಿದೆ...ಭಾರತೀಯ ಮೂಲದ ಖ್ಯಾತ ಪೌಲ್ಡ್ರಿ ಕಂಪನಿ ವೆಂಕಿ ರಿನೋಗಾಗಿ ಆನಿಮೇಷನ್ ಚಿತ್ರವೊಂದನ್ನು ಸಿದ್ಧಪಡಿಸುತ್ತಿದ್ದಾರೆ. ವೆಂಕಿ ಈ ಹಿಂದೆ ಕೂಡ ರಿನೋನ ಫುಟ್ಬಾಲ್ ಆಟಕ್ಕೆ ಸಹಾಯ ಹಸ್ತ ನೀಡುತ್ತಾ ಬಂದಿದೆ. ಇದೇ ಸಲುಗೆಯಲ್ಲಿ ವೆಂಕಿ ಕಂಪನಿಗೆ ಕಟ್ಟಿಬಿದ್ದು ರಿನೋ ಆನಿಮೇಷನ್ ಚಿತ್ರಕ್ಕೆ ಒಪ್ಪಿಕೊಂಡಿದ್ದಾರೆ ಎನ್ನುವುದು ಹೊರ ಬಂದ ಮಾತು. ‘ರೊನಾಲ್ಡಿನೋ ವರ್ಸಸ್ ಏಲಿಯನ್ಸ್ ’ ಎಂದು ಚಿತ್ರಕ್ಕೆ ಹೆಸರಿಡಲಾಗಿದೆ. ಚಿತ್ರದ ಮೂಲ ಕತೆಯೇ ಬಾಹ್ಯಾಕಾಶದ ಟ್ರಾಫಿಕ್ ಸಮಸ್ಯೆಗಳ ಕುರಿತಾಗಿ ಅನ್ಯಗ್ರಹದ ಜೀವಿಗಳು ಹಾಗೂ ರಿನೋ ಜತೆ ನಡೆಯುವ ಕತೆಯೇ ಚಿತ್ರದ ಮುಖ್ಯ ಪಾಯಿಂಟ್. ಚಿತ್ರದಲ್ಲಿ ರಿನೋ ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆನಿಮೇಷನ್ ಚಿತ್ರವಾಗಿದ್ದರ ಪರಿಣಾಮ ರಿನೋ ನಟನೆಗಿಂತ ಹೆಚ್ಚಾಗಿ ಧ್ವನಿಗೆ ಜಾಸ್ತಿ ಮಹತ್ವ ಸಿಗಲಿದೆ. ಅದರಲ್ಲೂ ಮುಖ್ಯವಾಗಿ ಫುಟ್ಬಾಲ್ ರಂಗದಲ್ಲಿ ಎರಡು ಬಾರಿ ಫಿಫಾ ವರ್ಷದ ಆಟಗಾರನಾಗಿ ಹೊರಬಂದ ರಿನೋ ಮೊದಲ ಬಾರಿಗೆ ಆನಿಮೇಷನ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದರಿಂದ ನಿರೀಕ್ಷೆಯ ಮೂಟೆಯಂತೂ ಇದ್ದೇ ಇದೆ . ಮತ್ತೊಂದೆಡೆ ಫುಟ್ಬಾಲ್ ಆಟಗಾರ ರಿನೋ ಹೇಳುವಂತೆ ಬ್ರೆಜಿಲ್ ಈ ವರ್ಷ ವಿಶ್ವಕಪ್ ಗೆದ್ದೇ ಗೆಲ್ಲುತ್ತೇ..ಅದರಲ್ಲಿ ನಾನು ಕೂಡ ಆಡಬೇಕು ಎನ್ನುವ ಹಂಬಲವಿದೆ. ಅಂದಹಾಗೆ ಭಾರತ ನನಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ನನ್ನ ಹೊಸ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತೆ ಎನ್ನುವ ನಂಬಿಕೆ ಇದೆ ಎಂದು ಮಾಧ್ಯಮಗಳಿಗೆ ಮಾತು ಬಿಟ್ಟಿದ್ದಾರೆ. ಅಂದಹಾಗೆ ಹೊಸ ವರ್ಷದಲ್ಲಿ ರಿನೋ ಚಿತ್ರಕ್ಕೆ ಕಾದು ಕುಳಿತುಕೊಳ್ಳುವ ಸರದಿಯಂತೂ ರಿನೋ ಅಭಿಮಾನಿಗೆ ಬಂದು ಬಿಡಬಹುದು. ( vk lvk published dis article 0n 7.1.2013)

ಪ್ರಭುದೇವ ಧೂಳ್ ಟಕ್ಕರ್

* ಸ್ಟೀವನ್ ರೇಗೊ, ದಾರಂದಕುಕ್ಕು
ಪ್ರಭುದೇವ ಯಾರಿಗೊತ್ತಿಲ್ಲ ಹೇಳಿ.. ನಟ, ನಿರ್ದೇಶಕ ಕಮ್ ಡಾನ್ಸ್ ಮಾಸ್ಟರ್ ನಾನಾ ಕೆಟಗರಿಯಲ್ಲಿ ನಾನಾ ಆ್ಯಂಗಲ್ ಗಳಲ್ಲಿ ನಿಂತು ನೋಡಿದಾಗ ಪ್ರಭುದೇವ ಟೋಟಲಿ ಭಿನ್ನ ಮನುಷ್ಯ. ಸದಾ ಕಾಲ ಡಾನ್ಸ್ ಎಂದಾಗ ಪ್ರಭು ದೇಹದಲ್ಲಿ ವೈಬ್ರೇಶನ್ ಸ್ಟಾರ್ಟ್ ಆಗಿ ಹೋಗುತ್ತದೆ. ಪ್ರಭು ಪಾಲಿನ ಪ್ರತಿಯೊಂದು ಚಿತ್ರಗಳು ಕೂಡ ನೃತ್ಯಕ್ಕೆ ಹೆಚ್ಚಿನ ಮಹತ್ವ ಇರುತ್ತದೆ. ಸಿನಿಮಾ ರಂಗದಲ್ಲಿ ದುಡಿಯುವ ಬಹಳಷ್ಟು ನಟಿಯರು ಪ್ರಭುದೇವರ ಜತೆಯಲ್ಲಿ ನಟಿಸಲು ಹಿಂದೇಟು ಹಾಕುತ್ತಾರೆ. ತೀರಾ ಕಷ್ಟಕರವಾದ ಸ್ಟೆಪ್‌ಗಳನ್ನು ಬಾಳೆಹಣ್ಣಿನ ಸಿಪ್ಪೆ ತೆಗೆದು ತಿಂದಂತೆ ನೃತ್ಯ ಮಾಡುವ ಪ್ರಭುವನ್ನು ಕಂಡು ಬಹಳಷ್ಟು ನಟಿಯರು ಪ್ರಭು ಚಿತ್ರವೊಂದು ಬೇಡ ಎಂದು ಕೂತ ಕತೆಗಳಿವೆ. ಗಾಳಿಯಲ್ಲಿಯೇ ಗುದ್ದಾಟ ನಡೆಸುವ ಪ್ರಭುದೇವರದ ಸ್ಟೆಪ್ ಗೆ ಮನ ಸೋಲಾದ ವ್ಯಕ್ತಿಯೇ ಇಲ್ಲ ಎನ್ನುವುದು ಅವರಿಗೆ ಅಂಟಿಕೊಂಡ ಟ್ಯಾಗ್‌ಲೈನ್. ಕಾವೇರಿಯ ಹುಡುಗ ಪ್ರಭು: ಎಲ್ಲಕ್ಕೂ ಮುಖ್ಯವಾಗಿ ಪ್ರಭುದೇವ ಅಪ್ಪಟ ಕನ್ನಡಿಗರು. ಮೈಸೂರಿನಲ್ಲಿ ಹರಿಯುತ್ತಿರುವ ಕಾವೇರಿ ನೀರು ಕುಡಿದು ಬೆಳೆದ ಹುಡುಗ ಚೆನ್ನೈಗೆ ಹೋದ ನಂತರವೇ ಸಿನಿಮಾ ರಂಗದಲ್ಲಿ ಮಿಂಚಿದ್ದು ಎನ್ನುವುದು ಪ್ರಭುದೇವರ ಹಳೆಯ ಬದುಕಿನ ಪುಟಗಳಲ್ಲಿ ಕಾಣ ಸಿಕ್ಕ ಮಾಹಿತಿ. ಸಿನಿಮಾ ರಂಗದ ಖ್ಯಾತ ಡ್ಯಾನ್ಸ್ ಮಾಸ್ಟರ್ ಮುಗೂರು ಸುಂದರಂ ಅವರ ಮೂವರು ಪುತ್ರರಲ್ಲಿ ಪ್ರಭು ಮೊದಲಿಗರು ಉಳಿದಂತೆ ನಟರಾದ ರಾಜು ಸುಂದರಂ ಹಾಗೂ ನಾಗೇಂದ್ರ ಪ್ರಸಾದ್. ಮೂವರು ನೃತ್ಯವನ್ನು ಅರಿದು ಕುಡಿದವರು. ಮೂವರು ಈಗ ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಕಂಡುಕೊಂಡ ಕೋರಿಯೋಗ್ರಾಫರ್ಸ್‌ಗಳು. ಅಂದಹಾಗೆ ಬಹಳ ಮಂದಿಗೆ ಗೊತ್ತಿರದ ಸತ್ಯವೆಂದರೆ ಪ್ರಭುದೇವ ಭರತನಾಟ್ಯವನ್ನು ಕಲಿತದ್ದು ಕರಾವಳಿ ಮೂಲದ ಖ್ಯಾತ ಭರತನಾಟ್ಯ ಕಲಾವಿದ ಉಡುಪಿ ಮೂಲದ ಲಕ್ಷ್ಮಿ ನಾರಾಯಣನನ್ ಹಾಗೂ ಧರ್ಮರಾಜ್ ಅವರಿಂದ... ಇದೇ ಕಾರಣದಿಂದ ಆಗಾಗ ಸದ್ದಿಲ್ಲದೇ ಮೈಸೂರು ಹಾಗೂ ಉಡುಪಿಯಲ್ಲಿರುವ ನೃತ್ಯ ಗುರುವಿನ ಮನೆಗೆ ಪ್ರಭುದೇವ ಕದ್ದು ಮುಚ್ಚಿ ಬರುತ್ತಾ ಇರುತ್ತಾರೆ ಎನ್ನುವುದು ಅವರನ್ನು ನೋಡಿದ ಅಭಿಮಾನಿಗಳ ಮಾತು. ನಾಯಕಿಯರು ತೆರೆಗೆ ಸರಿದು ಹೋದರು: ನಟ ಪ್ರಭುದೇವ ಅವರಿಗೆ ನಟನೆ ಬರೋದಿಲ್ಲ.. ಜತೆಗೆ ಅವರ ಜತೆಯಲ್ಲಿ ನಟಿಸಿದ ನಾಯಕಿಯರು ಮತ್ತೆ ತೆರೆಯಿಂದ ಮರೆಯಾಗುತ್ತಾರೆ ಎನ್ನುವ ಅಪವಾದವೊಂದು ಅವರನ್ನು ಸದಾ ಕಾಲ ಕಾಡುತ್ತಾ ಇದೆ. ಪ್ರಭುದೇವ ಜತೆಯಲ್ಲಿ ಆರಂಭಿಕ ಚಿತ್ರಗಳಲ್ಲಿ ನಟಿಸಿದ ನಗ್ಮಾ, ಭೂಮಿಕಾ, ಜ್ಯೋತಿಕಾ ಹೀಗೆ ಐದಾರು ನಾಯಕಿಯರು ಪ್ರಭುದೇವ ಅವರ ಜತೆಯಲ್ಲಿ ನಟಿಸಿದ ನಂತರ ಏಕ್‌ದಂ ಮರೆಯಾಗಿ ಹೋದರು. ಪ್ರಭುದೇವ ಚಿತ್ರಗಳು ಬರೀ ಡ್ಯಾನ್ಸ್ ಮಾತ್ರ ಮೊದಲ ಅದ್ಯತೆ ನೀಡುತ್ತಾರೆ ಎನ್ನುವ ಕಾರಣಕ್ಕೆ ಪ್ರಭು ಅವರ ಚಿತ್ರಗಳು ಸಾಧಾರಣ ಓಟ ದಾಖಲಿಸಿಕೊಂಡಿದೆ. ಪ್ರಭುದೇವ ಅವರ ವೈವಾಹಿಕ ಬದುಕು ಕೂಡ ನೆಟ್ಟಗೆ ಉಳಿದಿಲ್ಲ. ಪ್ರಭು ಅವರ ಆರಂಭಿಕ ಪತ್ನಿ ರಮಾಲತಾ ಬಿಟ್ಟು ನಟಿ ನಯನಾತಾರಾ ಅವರ ಸೀರೆ ಹಿಡಿದುಕೊಂಡು ಪ್ರಭು ಮದುವೆ ಹಂತಕ್ಕೆ ತಲುಪಿದಾಗ ವಿವಾಹ ಮುರಿದುಬಿತ್ತು. ಕೊನೆಗೆ ಯಾವುದು ಬೇಡ ಎಂದುಕೊಂಡು ಪ್ರಭುದೇವ ವೈವಾಹಿಕ ಬದುಕಿನಲ್ಲಿ ಸುಮ್ಮನೆ ಕೂತು ಸಿನಿಮಾ ರಂಗದಲ್ಲಿ ಬಿರುಗಾಳಿ ಎಬ್ಬಿಸುತ್ತಿದ್ದಾರೆ. ಪ್ರಭುದೇವ ನಿರ್ದೇಶನದ ಬಹುತೇಕ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಹೊಸ ಹವಾವನ್ನೇ ಸೃಷ್ಟಿಸಿದೆ. 'ವಾಟೆಂಡ್', 'ರೌಡಿ ರಾಥೋಡ್' ಚಿತ್ರಗಳನ್ನು ಬಾಲಿವುಡ್ ಗೆ ಕೊಟ್ಟು ಬಾಲಿವುಡ್ ಪ್ರೇಕ್ಷಕ ವರ್ಗಕ್ಕೆ ಹೊಸ ಕ್ರೇಜ್ ಹುಟ್ಟುಹಾಕಿದರು. ಮತ್ತೊಂದೆಡೆ ತಮಿಳು, ತೆಲುಗಿನಲ್ಲೂ ವರ್ಷಕ್ಕೆ ಒಂದರೆಡು ಚಿತ್ರಗಳನ್ನು ಮಾಡಿ ನಿರ್ದೇಶಕರಾಗಿ ಒಳ್ಳೆಯ ಹೆಸರು ಸಂಪಾದನೆ ಮಾಡುತ್ತಿದ್ದಾರೆ. ಸಚಿನ್ ಅಭಿಮಾನಿ ಪ್ರಭು: ಪ್ರಭುದೇವ ಸಚಿನ್ ತೆಂಡುಲ್ಕರ್ ಅವರ ಅಪ್ಪಟ ಅಭಿಮಾನಿ. ಭಾರತ ಕ್ರಿಕೆಟ್ ತಂಡದಿಂದ ಸಚಿನ್ ನಿವೃತ್ತಿ ಘೋಷಣೆ ಮಾಡಿದಾಗ ಪುಟ್ಟ ಮಗುವಿನಂತೆ ಪ್ರಭು ಅತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಸಚಿನ್ ನಿವೃತ್ತಿಯಾಗಬಾರದಿತ್ತು ಎನ್ನುವ ನೋವಿನಲ್ಲೇ ಪ್ರಭು ಸಚಿನ್ ಅಭಿಮಾನಿಗಳಿಗೆ ಯೂಟ್ಯೂಬ್‌ನಲ್ಲಿ ಹಾಡೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ಹಾಡು ವಿಶೇಷವಾಗಿ ಸಚಿನ್‌ಗಾಗಿ ಹಾಗೂ ಅವರ ಅಭಿಮಾನಿಗಳಿಗೆ ಅದಕ್ಕಾಗಿ 'ಧೂಳ್ ಟಕ್ಕರ್' ಹೆಸರಿಟ್ಟಿದ್ದೇನೆ ಎಂದು ಟ್ವಿಟ್ಟರ್‌ನಲ್ಲಿ ಪ್ರಭು ಬರೆದುಹಾಕಿದ್ದರು. ಇದರಲ್ಲಿ ತೆಂಡುಲ್ಕರ್ ಕುರಿತ ಗೀತೆಯೊಂದಿದೆ. ಈ ವೀಡಿಯೋದಲ್ಲಿ ತೆಂಡುಲ್ಕರ್ ಡ್ರೈವ್‌ಗಳು, ವಿಶಿಷ್ಟ ಹೊಡೆತಗಳನ್ನು ತೋರಿಸಿದ್ದಾರೆ. ಪ್ರಭುದೇವ್ ಗೀತೆಗೆ ಎಲ್.ವಿ. ಗಣೇಶನ್ ಸಂಗೀತ ಸಂಯೋಜನೆ ಮಾಡಿದ್ದು, ರಾಮಲಿಂಗಮ್ ನಿರ್ದೇಶಿಸಿದ್ದಾರೆ. ಸ್ಫೋಟಕ ಆಟಗಾರ ವೀರೇಂದ್ರ ಸೆಹವಾಗ್ ಕುರಿತ ವೀಡಿಯೋಗಳನ್ನು ಕೂಡಾ ಪ್ರಭುದೇವ್ ಬಿಡುಗಡೆ ಮಾಡಿದ್ದಾರೆ. ಇವೀಗ ಯೂ-ಟ್ಯೂಬ್‌ನಲ್ಲಿ ಕ್ಲಿಕ್ ಆಗುತ್ತಿದೆ. ದಿನದಿಂದ ದಿನಕ್ಕೆ ಈ ಹಾಡನ್ನು ನೋಡುವವರ ಸಂಖ್ಯೆ ಜ್ವರದಂತೆ ಏರಿಕೆ ಕಂಡಿದೆ. ಟೋಟಲಿ ಪ್ರಭುದೇವ ಸಿನಿಮಾದ ಜತೆಯಲ್ಲಿ ಹಾಡಿನ ಮೂಲಕ ಮತ್ತೊಂದು ಸಲ ಹಿಟ್ ಆಗುತ್ತಿದ್ದಾರೆ ಎನ್ನೋದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರ. ( vk lvk published dis article on 9.1.2013)

ಕಡಲ್ ಮಣಿ ಕಟ್ಟಿದ ಕಡಲ್ !

* ಸ್ಟೀವನ್ ರೇಗೊ, ದಾರಂದಕುಕ್ಕು ಮಣಿರತ್ನಂ ನಿರೀಕ್ಷಿತ ಚಿತ್ರ ಕಡಲ್ ಫೆಬ್ರವರಿಯ ಮೊದಲ ವಾರದಲ್ಲಿ ಬಿಡುಗಡೆ ಕಾಣುವ ಭವಿಷ್ಯ ಹೇಳಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕಡಲ್ ಹತ್ತು ಹಲವು ಕಾರಣಗಳಿಂದ ನಿರೀಕ್ಷೆ ಖುದ್ದು ಮಣಿಗಿಂತ ಜಾಸ್ತಿ ಅವರನ್ನು ನೆಚ್ಚಿಕೊಂಡಿರುವ ಅಭಿಮಾನಿಗಳಿಗೆ ಇದ್ದೆ ಇದೆ. ಕಡಲ್ ನಲ್ಲಿ ತೇಲುತ್ತಾರಾ ಮಣಿ..?
ತಮಿಳಿನ ಖ್ಯಾತ ನಟ ಕಾರ್ತಿಕ್ ಪುತ್ರ ಗೌತಮ್ ಕಾರ್ತಿಕ್ ನನ್ನು ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಡುವಂತೆ ಮಾಡುವ ಪ್ರಯತ್ನ ಕಡಲ್ ನಲ್ಲಿ ನಡೆಯುತ್ತಿದೆ. ಇದರ ಜತೆಯಲ್ಲಿ ಖ್ಯಾತ ನಟಿ ರಾಧಾ ಅವರ ಪುತ್ರಿ ತುಳಸಿ ಕೂಡ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಮೀನುಗಾರನೊಬ್ಬನ ನಂಬಿಕೆ ಹಾಗೂ ಮಾನವೀಯತೆಯ ನುಡುವಿನ ಒಂದು ಸೂಕ್ಷ್ಮವಾದ ಎಳೆಯನ್ನು ಇಟ್ಟುಕೊಂಡು ಮಣಿ ಕಡಲ್ ಚಿತ್ರವನ್ನು ಸುಂದರವಾಗಿ ಪೋಣಿಸಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಸಂಗೀತದಿಂದ ಹೊರ ಬಂದ ಕಡಲ್ ಈಗಾಗಲೇ ಯೂಟ್ಯೂಬ್ ರೌಂಡ್ ಟೇಬಲ್ ಮೇಲೆ ಹಿಟ್ ಮ್ಯಾಲೆ ಹಿಟ್ ಆಗುತ್ತಿದೆ. ಚಿತ್ರದಲ್ಲಿ ಅರ್ಜುನ್ ಸರ್ಜಾ ಜತೆಯಲ್ಲಿ ಮಣಿಯ ನೆಚ್ಚಿನ ಶಿಷ್ಯ ಅರವಿಂದ ಸ್ವಾಮಿ ಮತ್ತೆ ನಟನೆಗೆ ಇಳಿದುಬಿಟ್ಟಿದ್ದಾರೆ. ಈಗಾಗಲೇ ಅರವಿಂದ ಸ್ವಾಮಿ ತನ್ನ ಸಿನಿಮಾ ಬದುಕಿನಿಂದ ದೂರ ಉಳಿದುಬಿಟ್ಟಿದ್ದರು. ಕಡಲ್‌ಗೆ ನಾಯಕಿಯರದ್ದೇ ಕಾಟ : ಮಣಿರತ್ನಂ ಚಿತ್ರಗಳೆಂದರೆ ಅಲ್ಲಿ ನಾಯಕಿಯರಿಗೂ ಸಾಕಷ್ಟು ಅವಕಾಶಗಳಿರುತ್ತದೆ ಎನ್ನುವುದಕ್ಕೆ ಅವರ ನಿರ್ದೇಶನದ ಚಿತ್ರಗಳೇ ಸಾಕ್ಷಿ ನೀಡುತ್ತದೆ. ಈ ಮಾತು ಕಡಲ್‌ಗೂ ಅನ್ವಯಿಸುತ್ತದೆ. ಕಡಲ್ ಚಿತ್ರಕ್ಕೆ ನಟ ಕಮಲ್ ಹಾಸನ್ ಅವರ ಪುತ್ರಿ ಅಕ್ಷರಾ ಹಾಸನ್ ಕಾಣಿಸಿಕೊಳ್ಳುತ್ತಾರೆ ಎನ್ನುವ ಮಾತುಗಳು ಹೊರಬಂದಿತ್ತು. ಆದರೆ ಅಕ್ಷರಾ ನಟಿಸುವುದಿಲ್ಲ ಎಂದು ಮಾಧ್ಯಮಗಳಲ್ಲಿ ಬಾಯಿಬಿಟ್ಟರು. ಈ ಬಳಿಕ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ಹೆಸರು ಕೂಡ ಓಡಾಡಿಕೊಂಡಿತ್ತು. ಆದರೆ ನಂತರ ಸೋನಮ್ ತಂದೆ ಅನಿಲ್ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವುದರಿಂದ ಮಣಿ ಸೋನಮ್ ಕೈ ಬಿಡಬೇಕಾಯಿತು. ಈ ಬಳಿಕ ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿಯ ಪುತ್ರಿ ಜಾನ್ವಿ ಹೆಸರು ಕೇಳಿ ಬಂದಿತ್ತು. ಆದರೆ ನಂತರ ತೆಲುಗು ನಟಿ ಸಮಂತಾ ನಾಯಕಿ ಎನ್ನುವ ಘೋಷಣೆ ಹೊರಬಂತು. ಇತ್ತಕಡೆ ಸಮಂತಾ ಇತರ ಚಿತ್ರಗಳ ಡೇಟ್ ಗಳು ಒಂದಕ್ಕೊಂದು ತಾಳೆ ಹಾಕುವುದಿಲ್ಲ ಎಂದು ಗೊತ್ತಾದ ತಕ್ಷಣ ಸಮಂತಾ ಕೂಡ ಮಣಿಯ ಕೈ ಯಿಂದ ಜಾರಿ ಹೋದಳು. ಈ ಬಳಿಕವೇ ನಟಿ ರಾಧಾ ಪುತ್ರಿ ತುಳಸಿ ನಾಯರ್ ಎ್ನವ ಬೆಡಗಿ ಕಡಲ್ ಚಿತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಂಡರು. ಕಡಲ್ ಫಸ್ಟ್ ಲುಕ್‌ನಲ್ಲಿ ಪ್ರೇಕ್ಷಕ ಫಿದಾ ! ಡಿಸೆಂಬರ್ ತಿಂಗಳ ನಡು ಭಾಗದಲ್ಲಿ ಕಡಲ್ ಚಿತ್ರಕ್ಕೆ ಸಂಬಂಧಿಸಿದ ಚಿತ್ರಗಳು ಮಾಧ್ಯಮಗಳಲ್ಲಿ ಹೊರಬಂದಿತ್ತು. ಇದೇ ಚಿತ್ರಗಳು ಗೂಗಲ್ ಹಾಗೂ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸರ್ಚ್ ಮಾಡುವ ಗೀಳು ಪ್ರೇಕ್ಷಕ ವಲಯದಲ್ಲಿ ಮೂಡಿತ್ತು ಎನ್ನುವ ಮಾತು ಹರಿದಾಡುತ್ತಿದೆ. ಈ ಚಿತ್ರದಲ್ಲಿನ ತುಳಸಿಗೆ ನಾಯರ್ ಗೆ ಸಂಬಂಧಿಸಿದ ಫಸ್ಟ್ ಲುಕ್ ಪೋಸ್ಟರನ್ನು ಬಿಡುಗಡೆ ಮಾಡಿದ ನಂತರ ಪ್ರೇಕ್ಷಕರು ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ಫಸ್ಟ್ ಲುಕ್ ಬಿಡುಗಡೆ ಸಂದರ್ಭದಲ್ಲಿ ತುಳಸಿ ಮಾತನಾಡುತ್ತಾ, ನನ್ನ ಫೋಟೋಗಳನ್ನು ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ನೋಡಿಕೊಳ್ಳಬೇಕು ಎಂದು ಅದೆಷ್ಟೋ ದಿನಗಳಿಂದ ಕನಸು ಕಾಣುತ್ತಿದ್ದೆ. ಈಗದು ನನಸಾಗಿದೆ ಎಂದಿದ್ದರು. ನಟನೆ ಎಂದರೆ ತುಂಬಾ ಇಷ್ಟ. ನನ್ನ ಸಂಭಾಷಣೆಯನ್ನು ನಾನೇ ಹೇಳಿಕೊಳ್ಳಬೇಕು. ಮನೆಪಾಠಕ್ಕೆ ಹೋಗಿ ತಮಿಳು, ತೆಲುಗು ಭಾಷೆಗಳನ್ನು ಕಲಿತೆ. ಮಣಿರತ್ನಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವುದು ನಿಜಕ್ಕೂ ನನ್ನ ಪಾಲಿನ ಅತಿದೊಡ್ಡ ಅದಷ್ಟ ಎಂದು ತುಳಸಿ ಮಣಿರತ್ನಂರನ್ನು ಸಿಕ್ಕಾಪಟ್ಟೆ ಹೊಗಳಿದ್ದರು. ( lvk published dis article on 8.1.2013)

Monday, December 10, 2012

ಮುಗಿಯುವ ಮುನ್ನ ನೇತ್ರಾವತಿ.....

* ಸ್ಟೀವನ್ ರೇಗೊ, ದಾರಂದಕುಕ್ಕು ಕೋಟಿ ವರ್ಷಗಳಿಂದ ಕುಣಿದು ಕುಪ್ಪಳಿಸುತ್ತಿರುವ ಈ ನದಿಯ ಮೇಲೆ ಆಸೆ ಬುರುಕರ ಕಣ್ಣು ಬಿದ್ದುಬಿಟ್ಟಿದೆ. ಇಂಥ ನೇತ್ರಾವತಿಯನ್ನು ತಿರುಗಿಸುವ ಕಡೆ ರಾಜಕಾರಣಿಗಳು ಕಣ್ಣು ಹಾಕಿದ್ದಾರೆ. ನೇತ್ರಾವತಿ ತಿರುಗಿಸಿದರೆ ಇಡೀ ಜಿಲ್ಲೆ ಸೊರಗುತ್ತದೆ. ಈಗಾಗಲೇ ಇದಕ್ಕೆ ಪರಿವಿಡಿ ಬರೆಯಲಾಗಿದೆ. ಕರ್ನಾಟಕ ಪಶ್ಚಿಮವಾಹಿನಿಯ ನದಿ ನಾಲ್ಕೇ ತಾಲ್ಲೂಕುಗಳಲ್ಲಿ ಹರಿದರೂ ದಕ್ಷಿಣ ಕನ್ನಡ ಮಟ್ಟಿಗೆ ನೇತ್ರಾವತಿ ಜೀವನದಿ. ಧರ್ಮಸ್ಥಳದ ಪವಿತ್ರ ಸ್ನಾನದಿಂದ ತೊಡಗಿ ಮಂಗಳೂರು ಮಹಾನಗರ ಜನರ ಜೀವಾಮೃತವಾಗುವ ತನಕ ಎಲ್ಲರಿಗೂ ಬೇಕಾದ ನದಿ. ತೊಂಬತ್ತಾರು ಕಿ.ಮೀ. ಉದ್ದದ ನೇತ್ರಾವತಿಗೆ ಮಳೆಗಾಲದಲ್ಲಿ ಮೈತುಂಬ ಸೊಕ್ಕು. ಬೇಸಗೆಯಲ್ಲಿ ಮಂದಗಮನೆ. ಆಷಾಢದಲ್ಲಿ ಅಹಂಕಾರಿ. ಶಿಶಿರದಲ್ಲಿ ನಾಚಿ ಮುದ್ದೆಯಾಗುವ ಮುಗುದೆಯಾಗುತ್ತಾಳೆ. ಕೋಟಿ ವರ್ಷಗಳಿಂದ ಕುಣಿದು ಕುಪ್ಪಳಿಸುತ್ತಿರುವ ಈ ನದಿಯ ಮೇಲೆ ಆಸೆ ಬುರುಕರ ಕಣ್ಣು ಬಿದ್ದುಬಿಟ್ಟಿದೆ. ಇಂಥ ನೇತ್ರಾವತಿಯನ್ನು ತಿರುಗಿಸುವ ಕಡೆ ರಾಜಕಾರಣಿಗಳು ಕಣ್ಣು ಹಾಕಿದ್ದಾರೆ. ನೇತ್ರಾವತಿ ತಿರುಗಿಸಿದರೆ ಇಡೀ ಜಿಲ್ಲೆ ಸೊರಗುತ್ತದೆ. ಈಗಾಗಲೇ ಇದಕ್ಕೆ ಪರಿವಿಡಿ ಬರೆಯಲಾಗಿದೆ. ಉಪ್ಪಿನಂಗಡಿ ಎಂಬ ಸಂಗಮ ತಾಣದಲ್ಲಿ ಪದೇ ಪದೇ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡೂ ತುಂಬಿ ನೆರೆ ಬಾಧೆಯಾಗುತ್ತಿತ್ತು. ಬಂಟ್ವಾಳದ ಹಳೆಪೇಟೆಯಲ್ಲಿ ವರ್ತಕ ಮಂಡಿಗಳಿಗೆ ಪ್ರತಿ ವರ್ಷವೂ ನೀರು ನುಗ್ಗುತ್ತಿತ್ತು. ಬ್ರಹ್ಮರಕೂಟ್ಲುವಿನಲ್ಲಿ ನೀರು ಮೈಚಾಚಿ ವಾರಗಟ್ಟಲೆ ರಸ್ತೆ ಮುಳುಗುತ್ತಿತ್ತು. ಉಳ್ಳಾಲದ ಕಬ್ಬಿನ ಗದ್ದೆಗಳಿಗಂತೂ ಮಳೆಯ ನೀರಿನ ಆಕ್ರಮಣ ತಪ್ಪುತ್ತಿರಲಿಲ್ಲ. ಇದು ಮಳೆಗಾಲದ ನೇತ್ರಾವತಿಯ ಚಿತ್ರಣ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ವಿಸ್ತಾರದ ಶೇ.೪೦ರಷ್ಟು ಪ್ರದೇಶ ನೇತ್ರಾವತಿಯದ್ದೇ. ಅಂದರೆ ೩೩೫೭ ಚದರ ಕಿಲೋ ಮೀಟರ್ ವಿಸ್ತಾರದ ಈ ನದಿಯ ಜಲಾನಯನ ಪ್ರದೇಶದಲ್ಲಿ ವರ್ಷಕ್ಕೆ ೪೩೦೬ ಮೀ.ಮೀ. ಮಳೆ ಬೀಳುತ್ತ ದೆ. ನದಿಯ ಹರಿವಿನ ವಾರ್ಷಿಕ ಪ್ರಮಾಣ ಸರಾಸರಿ ೧೨೪೩೪ ಮಿಲಿಯನ್ ಘನ ಮೀಟರ್ ಗಳು ನೀರಾವರಿ ತಜ್ಞರ ಲೆಕ್ಕಾಚಾರದ ಪ್ರಕಾರ ೪೪೬ ಟಿಎಂಸಿ ನೀರು ಈ ನದಿಯಲ್ಲಿ ಹರಿದು ಹೋಗುತ್ತಿದೆ. ಜೀವನದಿ ಎಲ್ಲಕ್ಕೂ ಅಗತ್ಯ:
ಜೀವನದಿ ನೇತ್ರಾವತಿ ಎಲ್ಲಕ್ಕೂ ಬೇಕು. ಮಂಗಳೂರಿಗೆ ನೇತ್ರಾವತಿ ಏಕೈಕ ಮೂಲ ಮಂಗಳೂರಿಗೆ ಬೇಕಾಗುವ ನೀರಿನಲ್ಲಿ ಶೇ.೭೦ರಷ್ಟು ಪಾಲು ಈ ನದಿಯದ್ದು. ಮಂಗಳೂರಿಗೆ ನೇತ್ರಾವತಿ ನದಿಯಿಂದ ದಿನಕ್ಕೆ ೨೦ ಎಂಜಿಡಿ ಪೂರೈಕೆಯಾಗುತ್ತಿದೆ. ಇದು ಮಂಗಳೂರಿನ ಕನಿಷ್ಠ ಅಗತ್ಯ. ಮಂಗಳೂರಿನ ವಿಶೇಷ ಆರ್ಥಿಕ ವಲಯಕ್ಕೆ ಅಂದಾಜಿನ ಪ್ರಕಾರ ದಿನಕ್ಕೆ ೫೦೦ ಎಂಜಿಡಿ ನೀರು ಅಗತ್ಯ. ವಿಶೇಷ ಆರ್ಥಿಕ ವಲಯದಿಂದ ಜನಸಂಖ್ಯೆಯೂ ಹೆಚ್ಚುತ್ತದೆ. ಆದ್ದರಿಂದ ನೀರಿನ ಬೇಡಿಕೆ ನಾವು ಊಹಿಸದೇ ಇರುವ ಮಟ್ಟದಲ್ಲಿ ಏರುತ್ತದೆ. ನೇತ್ರಾವತಿ ನದಿಯ ಮೇಲೆ ವಿದ್ಯುತ್ ಉತ್ಪಾದನೆಯ ಕಂಪನಿಗಳು ಕಣ್ಣಿಟ್ಟಿವೆ. ಸರಕಾರದ ಸಬ್ಸಿಡಿಯ ಮೇಲೆ ಉದ್ಯಮದ ಮಂದಿ ಹಾತೊರೆದಿದ್ದಾರೆ. ಪಶ್ಚಿಮ ಘಟ್ಟದ ನೆತ್ತಿಯಲ್ಲಿ ಇನ್ನೂ ನೇತ್ರಾವತಿ ಧುಮುಕಿಲ್ಲ, ಅಲ್ಲಿಗೆ ಒಡ್ಡು ಹಾಕಿ ನೀರೆತ್ತಿ ಅದನ್ನು ಧುಮುಕಿಸಿ ಕರೆಂಟು ತಯಾರಿಸುವ ಉತ್ಸಾಹ ಯೋಜನಾ ಕರ್ತಗಳದ್ದು. ಬೆಟ್ಟದ ಬುಡದಿಂದ ತೊಡಗಿ ಬಂಟ್ವಾಳದ ತನಕ ನೇತ್ರಾವತಿಯಲ್ಲಿ ೪೨ ಸಣ್ಣಪುಟ್ಟ, ಮಧ್ಯಮ, ದೊಡ್ಡ ಎಂಬ ವೆರೈಟಿಯಲ್ಲಿ ವಿದ್ಯುತ್ ಯೋಜನೆಗಳನ್ನು ಯೋಜನಾ ಕರ್ತಗಳು ರೂಪಿಸಿದ್ದಾರೆ. ಕೇವಲ ಬೆಳ್ತಂಗಡಿ ಎಂಬ ಸಣ್ಣ ತಾಲೂಕೊಂದರಲ್ಲೇ ನೇತ್ರಾವತಿಗೆ ಹದಿನಾರು ಸ್ಥಳದಲ್ಲಿ ಸಣ್ಣ ಸಣ್ಣ ಅಣೆಕಟ್ಟು ಹಾಕಿ ವಿದ್ಯುತ್ ಉತ್ಪಾದಿಸುವ ಯೋಜನೆ ಇದೆ. ದೊಂಡೊಳೆ, ಪಾರ್ಪಿಕಲ್, ನೀರಕಟ್ಟೆ, ನಿಡ್ಲೆ, ಶಂಬೂರು ಹೀಗೆ ಅನೇಕ ಸ್ಥಳಗಳಲ್ಲಿ ವಿದ್ಯುತ್ ಯೋಜನೆಗಳು ಆರಂಭವಾಗಿವೆ. ಇನ್ನೂ ೧೩ ಮಿನಿ ಜಲ ವಿದ್ಯುತ್ ಯೋಜನೆಗಳು ನೇತ್ರಾವತಿಯ ಅಥವಾ ಅದರ ಉಪನದಿಯಲ್ಲೋ ಆರಂಭ ಗೊಳ್ಳಲು ಸಿದ್ಧತೆ ನಡೆದಿವೆ. ಹೆಚ್ಚು ಕಡಿಮೆ ೧೧೦ ಮೆಗಾವಾಟ್ ವಿದ್ಯುತ್ ಅನ್ನು ಈ ಅಣೆಕಟ್ಟುಗಳಿಂದ ಉತ್ಪಾದಿಸುವ ಲೆಕ್ಕ ಮಾಡಲಾಗಿದೆ. ಹರಿಯುವ ನೇತ್ರಾವತಿಯ ಲೆಕ್ಕಚಾರ: ನೇತ್ರಾವತಿ ಮತ್ತು ಅದರ ಮುಖ್ಯ ಉಪನದಿ ಕುಮಾರಧಾರಾ ಸಹಿತ ರಾಜ್ಯದ ೩೬ ನದಿಗಳಿಂದ ನೀರಾವರಿಗಾಗಿ ನೀರೆತ್ತಲು ಫೆಬ್ರವರಿಯಿಂದ ಜೂನ್ ತನಕ ಕೆಲವು ನಿರ್ಬಂಧಗಳಿವೆ. ಪೇಟೆ ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ ಎಂದು ಆಯಾ ಜಿಲ್ಲಾಡಳಿತಕ್ಕೆ ಕಂಡು ಬಂದರೆ ತಕ್ಷಣವೇ ನದಿ ನೀರಾವರಿ ನಿಷೇಧಿಸಿ ಆದೇಶ ನೀಡಬಹುದು. ಈ ಸಂಬಂಧ ನೀರಾವರಿ ಕಾಯ್ದೆಗಳಲ್ಲಿ ಸರಳ ಮಾರ್ಗದರ್ಶಿ ಸೂತ್ರಗಳಿವೆ. ನದಿ ಪಾತ್ರದ ರೈತರಿಗೆ ಫೆಬ್ರವರಿ ತನಕ ಮಾತ್ರ ನೀರೆತ್ತುವ ಪರವಾನಗಿ ನೀಡಲಾಗುತ್ತದೆ. ಪರವಾನಗಿ ನವೀಕರಣಗೊಳಿಸದಿದ್ದರೆ ನಿಷೇಧ ಜಾರಿಗೊಂಡಿದೆ ಎಂದೇ ಅರ್ಥ. ಅನಂತರ ನೀರೆತ್ತಿದ್ದರೆ ಅದು ಅಕ್ರಮ. ನೇತ್ರಾವತಿಯ ತಟದಲ್ಲಿ ಇಂಥ ಪರವಾನಗಿ ನೀಡಿರುವುದು ಭತ್ತದ ಕೃಷಿಗೆ ನೀರು ಹಾಯಿಸಲೆಂದು ಮಾತ್ರ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಯೇ ಬತ್ತಿ ಹೋಗಿದೆ. ಅಡಕೆ ತೋಟಗಳು ಮೈ ಎತ್ತಿವೆ. ಎಲ್ಲೆಂದರಲ್ಲಿ ತೋಟಗಳ ಸಾಮ್ರಾಜ್ಯ. ಭತ್ತದ ಗದ್ದೆಗಳು ಮಾತ್ರವಲ್ಲ, ಗುಡ್ಡಕಾಡುಗಳೂ ಅಡಕೆ ತೋಟಗಳಾಗಿವೆ. ಆದರೆ ನೀರಿನ ಪರವಾನಗಿ ಮಾತ್ರ ಭತ್ತದ ಹೆಸರಲ್ಲೇ ಇದೆ. ಒಂದು ಅಂದಾಜಿನ ಪ್ರಕಾರ ನೇತ್ರಾವತಿ-ಕುಮಾರಾಧಾರ ಪ್ರದೇಶದಲ್ಲಿ ಸಾವಿರಾರು ಪಂಪ್ ಸೆಟ್ ಗಳು ನೇತ್ರಾವತಿಯನ್ನು ಹೀರಿ ತೋಟಗಳಿಗೆ ಉಣಿಸುತ್ತಿವೆ. ತೆಂಗು-ಬಾಳೆ ಕೃಷಿಗಳಿಗೆ ನೀರು ಬೇಕಾಗಿರುವುದು ಫೆಬ್ರವರಿಯಿಂದ ಮೇ ತನಕ. ಈ ಹೊತ್ತಿನಲ್ಲಿ ನಿರ್ಬಂಧ ಹೇರಿದರೆ ಈ ಸಾವಿರಾರು ಎಕರೆ ತೋಟ ಕರಟಿ ನಾಶವಾಗುತ್ತದೆ. ಸಾವಿರಾರು ಕೃಷಿ ಕುಟುಂಬಗಳೂ ಬೆಂದು ಹೋಗುತ್ತವೆ. ನದಿಯ ವಾಣಿಜ್ಯದ ಮಗ್ಗಲು: ಕೈಗಾರಿಕೆ ಅಭಿವೃದ್ಧಿ, ಕೃಷಿಕ್ರಾಂತಿ, ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಯಾಗುತ್ತಿದ್ದಂತೆ ನಮ್ಮ ಸೌಂದರ್ಯ ಸಾಕ್ಷಿಯಾಗಿದ್ದ ಈ ಕರಾವಳಿ ಅರೆ ಮಲೆನಾಡು ಪ್ರದೇಶದ ಜೀವ ಲಹರಿಯಾಗಿದ್ದ ನೇತ್ರಾವತಿ ಕೂಡ ವಾಣಿಜ್ಯೀಕರಣಗೊಂಡಿತು. ನೇತ್ರಾವತಿ ನಿಧಾನವಾಗಿ ಸೊರಗುತ್ತಾ ಸೊರಗುತ್ತಾ ಕಣ್ಮುಚ್ಚಬಹುದೇ ಎಂಬ ಆತಂಕ ಯಾರೂ ಗಣಿಸಿದಂತಿಲ್ಲ. ಈಗಾಗಲೇ ಜೀವನದಿ ಕಾವೇರಿಯ ಬಗ್ಗೆ ಅಧ್ಯಯನಗಳು, ಚಿಂತನೆಗಳು ಆರಂಭವಾಗಿದೆ. ನಾವೆಲ್ಲಾ ಈ ತನಕ ಹರಿಯುವ ನದಿಯನ್ನು ಕಟ್ಟುವ ಕುರಿತು ಯೋಚಿಸಿದ್ದೇವೆಯೇ ವಿನಾ ನದಿಯ ಹರಿವು ಉಳಿಸುವ ಹೆಚ್ಚಿಸುವ ಕುರಿತು ಎಂದೂ ಯೋಚಿಸಿಲ್ಲ ಎಂದು ಹೇಳುತ್ತಾರೆ ಪರಿಸರವಾದಿ ಹಾಗೂ ಜಲ ಕೊಯ್ಲು ತಜ್ಞ ಶ್ರೀ ಪಡ್ರೆ. ಸಂಪತ್ತಿನ ಬಳಕೆ ಕುರಿತು ಮಾತನಾಡುವುದಕ್ಕೂ ಮುಖ್ಯವಾದದ್ದು ಸಂಪತ್ತಿನ ಉಳಿಕೆಯ ಚಿಂತನೆ ಎಂದು ನೇತ್ರಾವತಿ ಕುರಿತು ಅವರು ಮಾರ್ಮಿಕವಾಗಿ ಉತ್ತರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿಯೊಂದು ಯೋಜನೆ ಮಂಜೂರಾದಾಗಲೂ ಪರಿಸರದ ಬಗ್ಗೆ ಕಾಳಜಿ ಇರುವವರು ದಕ್ಷಿಣ ಕನ್ನಡ ಜಿಲ್ಲೆಯ ಧಾರಣಾ ಶಕ್ತಿಯ ಅಧ್ಯಯನ ಆಗಬೇಕೆಂದು ಎದ್ದು ನಿಲ್ಲುತ್ತಾರೆ. ಇಷ್ಟರವರೆಗೆ ಸರಕಾರವಾಗಲಿ, ಸ್ಥಳೀಯಾಡಳಿತ ಸಂಸ್ಥೆಗಳಾಗಲಿ ಇತ್ತ ಆಸಕ್ತಿ ತೋರಿಲ್ಲ. ಗಂಗಾ ಕ್ರಿಯಾ ಯೋಜನೆ ಮಾದರಿಯಲ್ಲಿ ನೇತ್ರಾವತಿಗೂ ಕ್ರಿಯಾ ಯೋಜನೆಯ ಅಗತ್ಯವಿದೆ. ಇನ್ನು ಹತ್ತು ವರ್ಷಗಳಲ್ಲಿ ನೇತ್ರಾವತಿಯನ್ನು ನಾವು ಮುಂಚಿನಂತೆ ಆಗಿಸಲು ಸಾಧ್ಯವಾಗದಿದ್ದರೆ ಎಕರೆಗೆ ೧.೬೦ ಕೋಟಿ ಲೀಟರ್ ಮಳೆ ಬೀಳುವ ಈ ಪರಶುರಾಮನ ಸೃಷ್ಟಿಯ ಕರಾವಳಿಯಲ್ಲಿ ಬರಗಾಲದ ಸೆಖೆ ನಿಶ್ಚಿತ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯೋದಿಲ್ಲ. ಎರಡು ನದಿಗಳಿಗೆ ಎಂಟು ಉಪನದಿಗಳು: ಈ ಎಲ್ಲ ಉಪನದಿಗಳಿಗೆ ಅಲ್ಲಲ್ಲಿ ಕೆಲವು ಹಳ್ಳ, ತೊರೆಗಳು ಬಂದು ಸೇರುತ್ತವೆ. ಕೆಲವು ತೊರೆಗಳು ಪ್ರಪಾತಗಳಲ್ಲಿ ಧುಮುಕಿ ಜಲಪಾತಗಳಾಗಿ ಭೋರ್ಗರೆಯುತ್ತಿದ್ದರೆ ಮತ್ತೆ ಕೆಲವು ಕೇವಲ ಜುಳು ಜುಳು ನಿನಾದದೊಂದಿಗೆ ಪ್ರಾಕೃತಿಕ ಸೊಬಗನ್ನು ಅಭಿವ್ಯಕ್ತಗೊಳಿಸುತ್ತಿವೆ. ೧. ಕುದುರೆಮುಖದ ಎಳನೀರು ಘಾಟಿಯಿಂದ ಬರುವ ಎಳನೀರು ಹೊಳೆಯು ಕುದುರೆಮುಖ, ಹಿರಿಮರಿಗುಪ್ಪೆ ಮತ್ತು ಕೃಷ್ಣಗಿರಿಯ ಶೋಲಾ ಕಾಡುಗಳಿಂದ ಹರಿದುಬರುತ್ತಿದೆ. ೨. ನೇತ್ರಾವತಿಯ ಎರಡನೇ ಉಪನದಿಯಾದ ಬಂಡಾಜೆ ಹೊಳೆಯು ದುರ್ಗದಬೆಟ್ಟದಿಂದ ೩೬೨ ಅಡಿ ಎತ್ತರದಿಂದ ಜಲಪಾತವಾಗಿ ಧುಮುಕಿ ಮಲವಂತಿಗೆಯತ್ತ ಹರಿದುಬರುವುದು. ೩. ಮೂರನೇ ಉಪನದಿ ಕೊಟ್ಟಿಗೆಹಾರ ಸಮೀಪದ ಮಧುಗುಂಡಿಯಿಂದ ಹರಿದುಬರುವ ಮೃತ್ಯುಂಜಯ ಹೊಳೆಯು ಬಾರೆಕಲ್ಲು, ದೊಡ್ಡೇರಿಬೆಟ್ಟದ ಒಂದು ಮಗ್ಗುಲಿನಲ್ಲಿ ಸಾಗುತ್ತಾ ಚಾರ್ಮಾಡಿಯತ್ತ ಹರಿದುಬರುತ್ತದೆ. ೪. ನಾಲ್ಕನೇ ಉಪನದಿ ಅಣಿಯೂರು ಹೊಳೆಯು ಚಾರ್ಮಾಡಿ ಘಾಟಿಯ ಹೊರಟ್ಟಿಯಲ್ಲಿ ಉಗಮಿಸಿ ಬಾರಿಮಲೆ ಮತ್ತು ದೇವಗಿರಿ ಕಣಿವೆಗಳಲ್ಲಿ ಹರಿದುಬರುತ್ತದೆ. ೫. ಐದನೇ ಉಪನದಿ ಸುನಾಲ ಹೊಳೆಯು ಮಿಂಚುಕಲ್ಲು, ಅಂಬಟ್ಟಿಮಲೆಯಿಂದ ಉಗಮಿಸಿ ಸೋಮನಕಾಡು ಕಣಿವೆಯಲ್ಲಿ ಹರಿಯುತ್ತದೆ. ೬. ಆರನೇ ಉಪನದಿ ನೆರಿಯ ಹೊಳೆಯು ಬಾಂಜಾರು ಕಣಿವೆಯಲ್ಲಿ ಉಗಮಿಸುತ್ತದೆ. ೭. ಏಳನೇ ಉಪನದಿ ಕಪಿಲಾ ಹೊಳೆಯು ಭೈರಾಪುರ ಘಾಟಿಯಲ್ಲಿ ಉಗಮಿಸಿ ಎತ್ತಿನಭುಜ ಕಣಿವೆಯಲ್ಲಿ ಹರಿದುಬರುತ್ತದೆ. ೮. ಎಂಟನೇ ಉಪನದಿ ಕೆಂಪುಹೊಳೆಯು ಶಿರಾಡಿ ಘಾಟಿಯ ಓಂಗ್ರಾಲ ಕಣಿವೆಯಲ್ಲಿ ಉಗಮಿಸಿ ಕೊಂಬರಮಲೆ, ವೆಂಕಟಗಿರಿ ಕಣಿವೆಯಲ್ಲಿ ಹರಿಯುತ್ತದೆ. ೯. ಒಂಬತ್ತನೇ ಪ್ರಮುಖ ಉಪನದಿ ಕುಮಾರಧಾರ ಹೊಳೆಯು ಕುಮಾರಪರ್ವತದಲ್ಲಿ ಉಗಮವಾಗಿ ಏಣಿಕಲ್ಲು, ಪಟ್ಲಬೆಟ್ಟ ಕಣಿವೆಯಲ್ಲಿ ಹರಿದುಬರುತ್ತದೆ. ಈ ಒಂಬತ್ತು ಉಪನದಿಗಳಿಗೆ ಮತ್ತೊಂದಷ್ಟು ಕಿರುಹಳ್ಳ, ಝರಿತೊರೆಗಳು ಅಲ್ಲಲ್ಲಿ ಸೇರುತ್ತವೆ. ಶಿರ್ಲಾಲು ಹಳ್ಳ, ಶಿವನಾಳ ಹಳ್ಳ, ಮಾವಿನಸಸಿ ಹಳ್ಳ, ಬಡಮನೆ ಹಳ್ಳ, ಹಳೆಮನೆ ಹಳ್ಳ, ಬಟ್ಟಿ ಹಳ್ಳ, ಕಿಲ್ಲೂರು ಹಳ್ಳ, ಬಂಗ್ರಬಲಿಗೆ ಹಳ್ಳ, ಆನಡ್ಕ ಹಳ್ಳ, ನಂದಿತ್ತಾಟು ಹಳ್ಳ, ಮಲ್ಲ ಹಳ್ಳ, ಏಳೂವರೆ ಹಳ್ಳ, ಕೂಡುಬೆಟ್ಟು ಹಳ್ಳ, ಮುಂಡಾಜೆ ಹಳ್ಳ, ನೆಲ್ಲಿತ್ತಾಟು ಹಳ್ಳ, ಬಿರುಮಲೆ ಹಳ್ಳ, ಹಕ್ಕಿಕಲ್ಲು ಹಳ್ಳ, ನಾಗರ ಹಳ್ಳ, ಕಬ್ಬಿನ್ಸಂಕ ಹಳ್ಳ, ಕಲ್ಲರ್ಬಿ ಹಳ್ಳ, ದೊಂಡೋಲೆ ಹಳ್ಳ, ಕಲ್ಲಗುಂಡಿ ಹಳ್ಳ, ಏಮೆಪಾರೆ ಹಳ್ಳ, ಕನ್ನಿಕಾಯ ಗುಂಡಿ, ಕಬ್ಬಿನಾಲೆ, ಅಡ್ಡ ಹೊಳೆ, ಕೇರಿ ಹೊಳೆ, ಹೊಂಗದ ಹೊಳೆ, ಮಾರುತಿ ಹೊಳೆ, ಅಬ್ಲುಬುಡಿ ಹಳ್ಳ, ಕಾಗೆನೀರು, ಅವಂತಿಗೆ ಹೊಳೆ, ಸಿಂಗ್ಸಾರ್ ಹೊಳೆ, ಗಿರಿಹೊಳೆ, ಪೇರಿಕೆ, ಮೀನಗಂಡಿ, ಅಜ್ಜಿಗುಂಡಿ, ಬಣಾಲ್ ಹೊಳೆ, ಜೇಡಿಗುಲು, ಮತ್ತಿಕೋಲು ಮುಂತಾದ ಅನೇಕ ಹಳ್ಳಗಳು ಉಪನದಿಗಳಿಗೆ ಸೇರುತ್ತವೆ. ಈ ಉಪನದಿಗಳು, ಹಳ್ಳಗಳು ಹರಿದು ಬರುವಲ್ಲೆಲ್ಲಾ ಗಿರಿ, ಕಂದರ, ಕಣಿವೆ, ಪ್ರಪಾತ, ಜಲಪಾತಗಳಿವೆ. ಮಳೆಯನ್ನು ಹೀರಿ ಹೊಳೆಯನ್ನು ಜೀವಂತವಾಗಿಟ್ಟುಕೊಳ್ಳುವ ಹುಲ್ಲುಗಾವಲುಗಳಿವೆ. ಆಕಾಶದೆತ್ತರಕ್ಕೆ ನಿಂತಿರುವ ಮರಗಳಿವೆ. ಔಷಧೀಯ ಸಸ್ಯ ಪ್ರಬೇಧಗಳಿವೆ. ಕಾಡನ್ನೇ ಆಶ್ರಯಿಸಿದ ವನ್ಯ ಮೃಗ ಪಕ್ಷಿ ಸಂಕುಲಗಳಿವೆ. ಕಗ್ಗತ್ತಲ ಮಲೆಗಳಿವೆ. ಮಲೆಗಳನ್ನೇ ನಂಬಿ ಬದುಕು ಸಾಗಿಸುವ ಮಲೆಕುಡಿಯರಿದ್ದಾರೆ. ಪರ್ವತಗಳ ಕಣಿವೆಗಳಲ್ಲಿ ಮಳೆಗೆ ಮೂಲಾಧಾರವಾದ ಶೋಲಾ ಕಾಡುಗಳಿವೆ. ನದಿ ತಿರುವು ಮೂರ್ಖತನದ ಹೆಜ್ಜೆ: ರೈಲ್ವೆ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಗಣಿಗಾರಿಕೆ, ವಿದ್ಯುತ್ ಲೈನ್, ಪೈಪ್ ಲೈನ್, ಜಲಾಶಯ ನಿರ್ಮಾಣಗಳಂತಹ ವನವಿನಾಶಕ ಯೋಜನೆಗಳಿಂದ ಈಗಾಗಲೇ ಪಶ್ಚಿಮ ಘಟ್ಟದ ಪರ್ವತ ಮತ್ತು ಅಡವಿ ಭಾಗಕ್ಕೆ ಅಗಾಧ ಹಾನಿಯಾಗಿದೆ. ಈ ನದಿ ತಿರುವು ಯೋಜನೆಯಿಂದಂತೂ ಪಶ್ಚಿಮ ಘಟ್ಟದ ಗಿರಿ, ವನ, ಝರಿ, ಜಲದೊಡಲಿಗೆ ಮಾರಣಾಂತಿಕ ಏಟು ಬೀಳುವುದರಲ್ಲಿ ಸಂಶಯವೇ ಇಲ್ಲ. ಕಾಳಿ, ಶರಾವತಿ, ಚಕ್ರಾ, ವಾರಾಹಿ, ಭದ್ರಾ, ಕಾವೇರಿ ನದಿಗಳಿಗೂ ಮತ್ತು ನದಿ ಸಮೀಪದ ಅಡವಿಗಳಿಗೂ ದುರ್ಗತಿ ಒದಗಿಸಿದ್ದಾಗಿದೆ. ವಿಧಾನಸೌಧ ಬಿದ್ದರೆ ಅಂತಹ ೧೦೦ ವಿಧಾನಸೌಧಗಳನ್ನು ಕಟ್ಟಬಹುದು. ನದಿಯನ್ನು ಕಳೆದುಕೊಂಡರೆ ಮತ್ತೆ ಅಂತಹ ನದಿಯನ್ನು ಸೃಷ್ಟಿಸಲು ನಮ್ಮಿಂದ ಸಾಧ್ಯವೇ ಇಲ್ಲ. ನದಿ ತಿರುವು ಯೋಜನೆಯ ರೂವಾರಿ ಪರಮಶಿವಯ್ಯನವರ ಪ್ರಕಾರ ನೇತ್ರಾವತಿ ನದಿಯಲ್ಲಿ ಪ್ರತಿ ವರ್ಷ ೪೬೪.೬೨ ಟಿ.ಎಂ.ಸಿ ನೀರು ಸಮುದ್ರದ ಪಾಲಾಗುತ್ತಿದೆ. ಇದರಲ್ಲಿ ೧೪೨.೪೬ ಟಿ.ಎಂ.ಸಿ ನೀರನ್ನು ಕಾಲುವೆ ಮುಖಾಂತರ ಬಯಲುಸೀಮೆಯ ೫೭ ತಾಲೂಕುಗಳಿಗೆ ಸರಬರಾಜು ಮಾಡಬಹುದೆಂದು ಲೆಕ್ಕಾಚಾರ. ಉಪನದಿಗಳ ಉಗಮಸ್ಥಾನದ ಸಮೀಪ ಅಲ್ಲಲ್ಲಿ ನೀರನ್ನು ತಡೆದು ಜಲಾಶಯಗಳನ್ನು ನಿರ್ಮಿಸಿ ಕಾಲುವೆ ಮುಖಾಂತರ ಸಾಗಿಸುವುದೆಂದು ಅಂದಾಜು. ಈ ಯೋಜನೆಗೆ ಎರಡು ಪ್ರಮುಖ ಕಾಲುವೆಗಳ ಮೂಲಕ ಹರಿವು ಸಾಗಲಿದೆ. ಈ ಎರಡೂ ಕಾಲುವೆಗಳಿಗೆ ಬೇಕಾದಲ್ಲಿ ಜಲಾಶಯ ನಿರ್ಮಿಸುವಲ್ಲಿ ರಕ್ಷಿತಾರಣ್ಯವಿದೆ. ಕುದುರೆಮುಖ, ಕೃಷ್ಣಗಿರಿ, ಹಿರಿಮರಿಗುಪ್ಪೆ, ಬಲ್ಲಾಳರಾಯನ ದುರ್ಗ, ಬಂಡಾಜೆ ಜಲಪಾತ, ಹೊಸ್ಮನೆ ಗುಡ್ಡ, ಬಾಳೆಗುಡ್ಡ, ದೊಡ್ಡೇರಿ ಬೆಟ್ಟ, ಏರಿಕಲ್ಲು, ಕುಂಭಕಲ್ಲು, ಮಿಂಚುಕಲ್ಲು, ಸೋಮನಕಾಡು, ಬಾರಿಮಲೆ, ಬಾಂಜಾರುಮಲೆ, ಇಳಿಮಲೆ, ಅಂಬಟಿಮಲೆ, ಅಮೇದಿಕಲ್ಲು, ಎತ್ತಿನಭುಜ, ದೇವರಮಲೆ, ಉಳಿಯಮಲೆ, ಮುಗಿಲಗಿರಿ, ಅರಮನೆ ಬೆಟ್ಟ, ಬೆಂಗಲಾರ್ ಬೆಟ್ಟ, ವೆಂಕಟಗಿರಿ, ಅರೆಬೆಟ್ಟ, ಕನ್ನಡಿಕಲ್ಲು, ಏಣಿಕಲ್ಲು ಬೆಟ್ಟ, ಪಟ್ಲ ಬೆಟ್ಟ, ಕುಮಾರಪರ್ವತ ಇಂತಹ ಪಶ್ಚಿಮ ಘಟ್ಟದ ಪ್ರಮುಖ ಬೆಟ್ಟಗಳೆಲ್ಲ ಹಾನಿಗೊಳಗಾಗುವ ಸಂಭವಗಳಿವೆ. ಘಾಟಿಗಳುದ್ದಕ್ಕೂ ಪರ್ವತಗಳನ್ನು ಕೊರೆದು ಅರಣ್ಯ ಪ್ರದೇಶವನ್ನು ಸಿಗಿದು ನೀರನ್ನು ಸಂಗ್ರಹಿಸುವುದೆಂದರೆ ಚಾರ್ಮಾಡಿ ಘಾಟಿಯಲ್ಲಿ ಮಂಗಳೂರು ಚಿಕ್ಕಮಗಳೂರು ರಾಜ್ಯ ಹೆದ್ದಾರಿಗೂ, ಶಿರಾಡಿ ಘಾಟಿಯಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೂ, ರೈಲ್ವೇ ರಸ್ತೆಗೂ ಹಾನಿಯಾಗಬಹುದು. ಈ ಯೋಜನೆಯಿಂದ ೫,೫೫೦ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಈ ಕಾಲುವೆ, ಜಲಾಶಯ ನಿರ್ಮಾಣ, ಪೈಪ್ ಲೈನ್ ಗಳಿಗೆ ಪರ್ವತಗಳನ್ನು ಸೀಳಲು ಬೃಹತ್ ಯಂತ್ರಗಳು ಕಾಡಿನೊಳಗೆ ಹೋಗಬೇಕಾದರೆ ಅರಣ್ಯದುದ್ದಕ್ಕೂ ರಸ್ತೆ ನಿರ್ಮಾಣವಾಗಬೇಕು. ಯಾವುದೇ ಅರಣ್ಯ ಪರ್ವತಗಳಿಗೆ ರಸ್ತೆ ನಿರ್ಮಾಣವಾಯಿತೆಂದರೆ ಅಲ್ಲಿನ ಜೀವವೈವಿಧ್ಯಗಳು, ವನ್ಯಜೀವಿಗಳು, ಮರಗಿಡಗಳು ನಾಶವಾದವೆಂದೇ ಅರ್ಥ. ಕಾಮಗಾರಿ ನಡೆಯುತ್ತಿರುವಾಗ ಪರ್ವತಗಳ ಕಲ್ಲು, ಮಣ್ಣನ್ನು ರಾಶಿ ಹಾಕಿದಾಗ ಅಗಾಧ ಪ್ರಮಾಣದ ಮಳೆಕಾಡು ನಾಶವಾಗುತ್ತದೆ. ಈ ಮಣ್ಣಿನ ರಾಶಿ ಕೆಲವು ಚಿಕ್ಕ ತೊರೆ ಹಳ್ಳಗಳ ಮೇಲೆ ಬಿದ್ದು ಆ ಹಳ್ಳಗಳು ಶಾಶ್ವತವಾಗಿ ಮುಚ್ಚಿಹೋಗುತ್ತವೆ. ಮಣ್ಣಿನ ರಾಶಿ ನದಿಯನ್ನು ಸೇರಿ ಹೂಳು ತುಂಬಿ ನದಿಯ ಆಳ ಕಡಿಮೆಯಾಗಬಹುದು. ಕಾಡಿನೊಳಗೆ ಇರುವ ಚಿಕ್ಕ ಚಿಕ್ಕ ಹಳ್ಳಗಳು ನದಿಯ ಮಟ್ಟಿಗೆ ತುಂಬಾ ಮಹತ್ವದಾಗಿದೆ. ಮಳೆನೀರನ್ನು ನೆಲದಲ್ಲಿ ಇಂಗಿಸಿಕೊಂಡಿರುವಂತಹ ಶೋಲಾಕಾಡುಗಳ ಈ ಹಳ್ಳಗಳು ಮಳೆಗೆ ಮೂಲಾಧಾರವಾಗಿರುತ್ತದೆ. ನದಿಯನ್ನು ತಡೆದಾಗ ನದಿನೀರಿನ ಖನಿಜಾಂಶಗಳು, ಲವಣಾಂಶಗಳು ಸಮುದ್ರವನ್ನು ಸೇರದಿದ್ದರೆ ಜಲಚರ ಜೀವಿಗಳಿಗೆ ಬೇಕಾದ ಪೋಷಕಾಂಶಗಳು ಕಡಿಮೆಯಾಗಿ ಅಸಂಖ್ಯಾತ ಮೀನುಗಳ ನಾಶವಾದರೆ ಬೆಸ್ತರ ಬದುಕು ದುಸ ರವಾದೀತು. ಕಾಡೊಳಗೆ ಹಾಯಾಗಿ ಓಡಾಡುತ್ತಿರುವ ವನ್ಯ ಜೀವಿಗಳು ಬದುಕಲು ನೆಲೆಯಿಲ್ಲದೆ ಕಾಡಿನಿಂದ ನಾಡಿಗೆ ದಾಳಿ ಇಡಬಲ್ಲವು. ಪರ್ವತಗಳ ಅಂಚುಗಳಲ್ಲಿ ನೀರಿನ ಕಾಲುವೆಗಳನ್ನು ನಿರ್ಮಿಸಿದಾಗ ಭೂಕುಸಿತ ಸಂಭ ವಿಸಲೂಬಹುದು. ಈ ಭೂಕುಸಿತದಿಂದ ಕಾಲುವೆಯ ನೀರು ರಭಸವಾಗಿ ಹರಿದು ಹತ್ತಿರದ ಹಳ್ಳಿಗಳ ಗದ್ದೆ, ತೋಟ, ಮನೆಗಳಿಗೆ ಹಾನಿಯಾಗಬಹುದು. ಕರಾವಳಿಯ ಬದುಕಿಗೊಂದು ರೂಪುರೇಷೆ ಕೊಟ್ಟಂತಹ ನೇತ್ರಾವತಿಯ ದಿಕ್ಕನ್ನೇ ಬದಲಿಸಿ ಅಡವಿಯನ್ನು ಕೆಡವಿ ಬಲಿ ಕೊಡುವುದರಿಂದ ಬರವಿಲ್ಲದ ಕರಾವಳಿ ಜಿಲ್ಲೆಗೆ ಬರಗಾಲದ ಆಮಂತ್ರಣ ನೀಡಲಾಗುತ್ತಿದೆ. ಅದರಲ್ಲೂ ಈ ಬಾರಿ ಕರಾವಳಿಯಲ್ಲಿ ಮಳೆಯ ಪ್ರಮಾಣ ಕೂಡ ಕಡಿಮೆ ಇವುಗಳ ನಡುವೆ ನೇತ್ರಾವತಿಯ ಒಡಲು ಬರಿದಾಗುತ್ತಿದೆ. ಒಂದು ಲೆಕ್ಕಚಾರದ ಪ್ರಕಾರ ನೇತ್ರಾವತಿ ಅಧ್ಯಾಯ ಮುಕ್ತಾಯ ಹಂತಕ್ಕೆ ತಲುಪುತ್ತಿದೆಯಾ ಎನ್ನುವ ಗುಮಾನಿ ನೇತ್ರಾವತಿಯನ್ನು ನೋಡುವ ಪ್ರತಿಯೊಬ್ಬನ ಕಣ್ಣಿಗೆ ಅನ್ನಿಸದೇ ಇರಲಾರದು. .... ಚಿತ್ರ: ಕಿಶೋರ್ ಪೆರಾಜೆ .............

Monday, December 3, 2012

ಮಂಗಳಮುಖಿಯರ ಮಂಗಳವಾಗದ ಬದುಕು !

ಮಂಗಳಮುಖಿಯರು ತಮ್ಮ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ಗಾಯದ ಗುರುತು ಹೊರ ಜಗತ್ತಿಗೆ ಗೊತ್ತಾ ಗುವುದಿಲ್ಲ. ಇತರರಿಗೆ ಕಾಣಿಸುವುದು ಅವರು ಧರಿಸುವ ಸೀರೆ, ರವಿಕೆ ಮತ್ತು ತುಟಿಗೆ ಹಚ್ಚಿಕೊಳ್ಳುವ ಲಿಪ್‌ಸ್ಟಿಕ್ ಮಾತ್ರ. ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ.
ಸೀರೆಯುಟ್ಟುಕೊಂಡು ನಮ್ಮ ಸುತ್ತಮುತ್ತ ಓಡಾಡುವ ಅವರನ್ನು ನೋಡಿದ್ದೇವೆ. ಅಂಗಡಿ ಮಳಿಗೆಗಳಲ್ಲಿ ಕಾದು ಬೇಡುತ್ತಾರೆ. ದುಡ್ಡು ಕೊಡದಿದ್ದರೆ ಕೆಲವರು ವಿಲಕ್ಷಣ ವರ್ತನೆಯಿಂದ ಕಾಡುತ್ತಾರೆ. ಏನಪ್ಪಾ ಹುಚ್ಚು ಹಿಡಿದಿದೆಯಾ..? ಎನ್ನುವ ಪ್ರಶ್ನೆ ಎದುರುಗೊಳ್ಳುತ್ತದೆ. ವ್ಯಕ್ತಿಯೊಬ್ಬ ಅಂಧನಾಗಿದ್ದರೆ ಗೊತ್ತಾಗುತ್ತದೆ. ಕುಂಟನಾಗಿದ್ದರೆ ಕೂಡ ಸುಲಭವಾಗಿ ಗುರುತಿಸಬಹುದು. ಅವರಿಗೆ ಕೈಲಾದ ನೆರವು ನೀಡುತ್ತಾರೆ. ಆದರೆ ಒಬ್ಬ ಮಂಗಳಮುಖಿ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ಗಾಯದ ಗುರುತು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಇತರರಿಗೆ ಕಾಣಿಸುವುದು ಧರಿಸಿರುವ ಸೀರೆ, ರವಿಕೆ ಮತ್ತು ತುಟಿಗೆ ಹಚ್ಚಿಕೊಳ್ಳುವ ಲಿಪ್‌ಸ್ಟಿಕ್ ಮಾತ್ರ . ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ. ನಮ್ಮಲ್ಲಿ ಹಾವು, ಬೆಕ್ಕು, ನಾಯಿಗಳು ಎಷ್ಟಿವೆ ಎಂದು ಗಣತಿ ಮಾಡಲಾಗುತ್ತದೆ. ಆದರೆ ಮಂಗಳಮುಖಿಯರಿಗೆ ಇಂತಹ ಲೆಕ್ಕವೇ ಇಲ್ಲ. ಭಾರತದಲ್ಲಿ ೫೦ ಸಾವಿರದಿಂದ ೫ ಲಕ್ಷ ಮಂಗಳಮುಖಿಯರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ೫ ಸಾವಿರಕ್ಕೂ ಅಧಿಕ ಮಂಗಳಮುಖಿಯರನ್ನು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಈಗ ಇರುವ ಮಂಗಳಮುಖಿಯರ ಸಂಖ್ಯೆ ೫೦೦ಕ್ಕಿಂತ ಜಾಸ್ತಿ. ಮಂಗಳಮುಖಿಯರಾಗಲು ಕಾರಣ ಏನೂ? ಮಂಗಳಮುಖಿಗಳು ಹುಟ್ಟಿದಾಗ ಪುರುಷ ಎಂದೇ ಗುರುತಿಸಿಕೊಳ್ಳುತ್ತಾರೆ. ದೈಹಿಕ ಸ್ವರೂಪ ಕೂಡ ಹಾಗಿರುತ್ತದೆ. ಆದರೆ ಅಂದಾಜು ಹನ್ನೆರಡು-ಹದಿಮೂರರ ಹರೆಯದ ನಂತರ ಭಾವನೆಗಳಲ್ಲಿ ಪಲ್ಲಟ ಆರಂಭವಾಗಿ ಬಿಡುತ್ತದೆ. ಶಾಲೆಯಲ್ಲಿ ಬಾಲಕ ಸಹಪಾಠಿಯತ್ತ ಲೈಂಗಿಕ ಆಕರ್ಷಣೆಗೆ ಒಳಗಾಗಬಹುದು. ಶಾಲಾ ವಾರ್ಷಿಕೋತ್ಸವದ ನಾಟಕಗಳಲ್ಲಿ ಸ್ತ್ರೀ ಪಾತ್ರವೇ ಬೇಕು ಎಂದು ರಚ್ಚೆ ಹಿಡಿಯಬಹುದು. ತನ್ನಲ್ಲೇಕೆ ಇಂಥ ಭಾವನೆಗಳು ಬರುತ್ತಿವೆ ? ಅಥವಾ ಇತರ ಬಾಲಕರಲ್ಲಿ ಕೂಡ ಇಂತಹುದೇ ಸ್ವಭಾವ ಇದೆಯಾ ಅಂತ ಆತ ಹುಡುಕಬಹುದು. ಉತ್ತರ ಸಿಗದೆ ತಲ್ಲಣಗೊಳ್ಳಬಹುದು. ಹದಿನೆಂಟು-ಇಪ್ಪತ್ತರ ಹೊತ್ತಿಗೆ ತಾನು ದೈಹಿಕವಾಗಿ ಪುರುಷನಾಗಿದ್ದರೂ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಹೆಣ್ಣು ಎಂಬುದು ಖಚಿತವಾಗುತ್ತದೆ. ಸಮಸ್ಯೆಗಳ ಪರಂಪರೆಯ ಮುಂದಿನ ಘಟ್ಟ ಅಮಾನುಷ. ಪೋಷಕರು, ಸೋದರ, ಸೋದರಿಯರಿಂದ ಅಪಹಾಸ್ಯ, ನಿಂದನೆ ಗುರಿಯಾಗಿ ಮನೆಯಲ್ಲಿ ನಿಲ್ಲಲಾಗದೆ ಹೊರಬೀಳುತ್ತಾರೆ. ತಮ್ಮ ಸಮುದಾಯವೇ ವಾಸಿ ಎಂದು ಮಂಗಳಮುಖಿಗಳ ಗುಂಪಿಗೆ ಸೇರುತ್ತಾರೆ. ಅಲ್ಲಿ ಅವರಿಗೆ ಬೇಕಾದ ಸಕಲ ಸ್ವಾತಂತ್ರ್ಯ ಸಿಗುತ್ತದೆ. ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕರಿರುತ್ತಾರೆ. ಆದರೆ ಸಮಸ್ಯೆಗಳ ಸರಪಳಿ ಬದುಕನ್ನು ಕೊನೆಯತನಕ ಕಟ್ಟಿ ಹಾಕುತ್ತದೆ ಎನ್ನುವುದು ಮಂಗಳಮುಖಿಯರ ಕುರಿತು ಅಧ್ಯಯನ ಮಾಡುತ್ತಿರುವ ಮುಂಬಯಿಯ ಮೇರಿ ವೇಲು ಅವರ ಅಭಿಪ್ರಾಯ. ಮಂಗಳಮುಖಿಯರು ಅಂಗಡಿ, ಮಳಿಗೆಗಳಿಗೆ ಹೋಗಿ ಬೇಡುತ್ತಾರೆ. ಎಷ್ಟೋ ಮಂದಿ ಹಣ ಕೊಡದಿದ್ದರೆ ಗದರಿಸುತ್ತಾರೆ. ವಿಚಿತ್ರ ವರ್ತನೆಗಳಿಂದ ಪೀಡಿಸುತ್ತಾರೆ ಎಂಬ ಆಪಾದನೆ ಇದೆ. ಈ ಪ್ರಶ್ನೆಗೆ ಮಂಗಳೂರಿನಲ್ಲಿರುವ ಬಳ್ಳಾರಿಯ ಮೂಲದ ಯಶೋಧಾ ಈ ರೀತಿ ಉತ್ತರಿಸುತ್ತಾರೆ. ‘ನನ್ನಲ್ಲೂ ಬಹಳಷ್ಟು ಜನ ಇದೇ ಪ್ರಶ್ನೆ ಕೇಳುತ್ತಾರೆ. ಅಂಗಡಿಗಳಲ್ಲಿ ಹಣ ಕೇಳುವ ಪದ್ಧತಿ ಮುಂಬಯಿನಲ್ಲಿ ಆರಂಭ ವಾಯಿತು. ಈಗ ಮುಂಬಯಿನಿಂದ ಕರ್ನಾಟಕಕ್ಕೆ ಅನೇಕ ಮಂದಿ ವಲಸೆ ಬಂದಿದ್ದಾರೆ. ಇಲ್ಲಿ ಕೂಡ ಅದೇ ಪದ್ಧತಿ ಹರಡಿದೆ. ಹಣಕ್ಕಾಗಿ ಒತ್ತಾಯಪಡಿಸುವುದು ಸರಿಯಲ್ಲ. ಮಂಗಳಮುಖಿ ಪರ ಸಂಘಟನೆಗಳು ಕೂಡ ಭಿಕ್ಷಾಟನೆಯನ್ನು ಒಪ್ಪುವುದಿಲ್ಲ’ ಎನ್ನುವುದು ಅವರ ಮಾತು. ಕರಾವಳಿಯಲ್ಲಿ ಮಂಗಳಮುಖಿರ ಆಗಮನ: ಮೂರು ವರ್ಷಗಳ ಹಿಂದೆ ಮಂಗಳೂರು ಪೇಟೆಯಲ್ಲಿ ಹತ್ತಾರು ಮಂಗಳಮುಖಿಯರು ಕಾಣ ಸಿಗುತ್ತಿದ್ದ ಪ್ರಸಂಗ ಇತ್ತು. ಆದರೆ ಈಗೀನ ಪರಿಸ್ಥಿತಿಯೇ ಸಂಪೂರ್ಣ ಭಿನ್ನ. ಮಂಗಳೂರು ನಗರ ಮಾತ್ರವಲ್ಲ ಕರಾವಳಿಯ ತಾಲೂಕು ಕೇಂದ್ರಗಳಲ್ಲಿಯೂ ಇವರ ಸಂಖ್ಯೆ ಏರಿಕೆ ಕಾಣಿಸಿಕೊಂಡಿದೆ. ಮಂಗಳೂರಿನ ಪಣಂಬೂರು ಬಂದರು ಪ್ರದೇಶವೊಂದರಲ್ಲಿಯೇ ಸರಿಸುಮಾರು ೩೦೦ಕ್ಕಿಂತ ಜಾಸ್ತಿ ಸಂಖ್ಯೆಯ ಮಂಗಳಮುಖಿಯರನ್ನು ವೀಕೆಂಡ್ ದಿನಗಳಲ್ಲಿ ಕಾಣಬಹುದು. ಪಣಂಬೂರು ಬಂದರು ಪ್ರದೇಶಕ್ಕೆ ನಾನಾ ಕಡೆಯಿಂದ ಬರುವ ಲಾರಿಗಳ ಚಾಲಕರು ಇವರನ್ನು ಇಲ್ಲಿಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುಖ್ಯವಾಗಿ ಮುಂಬಯಿಯಿಂದಲೂ ಇಲ್ಲಿಗೆ ಬಂದು ನೆಲೆ ನಿಂತ ಮಂಗಳಮುಖಿಯರು ಇದ್ದಾರೆ. ನಗರದ ಹೊರವಲಯದಲ್ಲಿ ಠಿಕಾಣಿ ಹೂಡುವ ಮಂಗಳಮುಖಿಯರು ತಮ್ಮದೇ ತಂಡ ರಚಿಸಿಕೊಂಡು ಬೇಡುವ ಕೆಲಸದ ಜತೆಯಲ್ಲಿ ಲೈಂಗಿಕ ಕ್ರಿಯೆಯಲ್ಲೂ ತೊಡಗಿಕೊಂಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಮಾತ್ರ ಹೆಚ್ಚು ಗಳಿಕೆ ಮಾಡುವ ಇವರು ಉಳಿದ ದಿನಗಳಲ್ಲಿ ಪೇಟೆ ಪಟ್ಟಣಗಳಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುವುದಿಲ್ಲ. ಮಂಗಳಮುಖಿಯರಲ್ಲೂ ನಕಲಿತನ: ಒರಿಜಿನಾಲಿಟಿ ಎನ್ನುವ ಪದಗಳ ಜತೆಗೆ ಹುಟ್ಟಿಕೊಂಡ ನಕಲಿತನ ಎನ್ನುವ ಪದ ಪ್ರಯೋಗ ಈಗ ಮಂಗಳಮುಖಿಯರಲ್ಲೂ ಕಾಣಿಸಿಕೊಂಡಿದೆ. ಮೈಮುರಿದುಕೊಂಡು ದುಡಿಯಲು ಬಯಸದ ಸೋಮಾರಿ ಯುವಕರು ಮಂಗಳಮುಖಿರಾಗುತ್ತಿದ್ದಾರೆ. ಅದರಲ್ಲೂ ಹಣ ಸುಳಿಗೆ ಮಾಡುವ ಕಾಯಕದಲ್ಲಿ ಭರ್ಜರಿಯಾಗಿ ನಿರತರಾಗಿದ್ದಾರೆ. ಮಹಿಳೆಯರಂತೆ ವೇಷಭೂಷಣ ಮಾಡಿಕೊಂಡು ಅವರ ಹಾವಭಾವಗಳನ್ನೇ ಕಾಫಿ ಮಾಡುವ ಈ ಯುವಕರು ಮಂಗಳಮುಖಿಯರಿಗೆ ಪೈಪೋಟಿ ನೀಡುವಂತೆ ಬೆಳೆದಿರುತ್ತಾರೆ. ಇದು ಬರೀ ಕರಾವಳಿಯ ಮಾತಲ್ಲ. ಇಡೀ ದೇಶದಲ್ಲಿ ಮಂಗಳಮುಖಿಯರು ಎಲ್ಲಿದ್ದರೋ ಅಲ್ಲಿ ಎಲ್ಲ ಈ ನಕಲಿ ಮಂಗಳಮುಖಿಯ ಕೆಲಸ ಕೂಡ ನಡೆಯುತ್ತದೆ. ಇಂತಹ ನಕಲಿ ಮಂಗಳಮುಖಿಯರನ್ನು ಹಿಡಿಯಲು ಪೊಲೀಸ್ ಇಲಾಖೆ ಕೂಡ ಸೋತು ಬಿಟ್ಟಿದೆ. ಮತ್ತೊಂದು ಕಡೆ ನಕಲಿ ಮಂಗಳಮುಖಿಯರ ಪತ್ತೆಗಾಗಿ ಮಂಗಳಮುಖಿಯರು ತಮ್ಮದೇ ತಂಡ ಕಟ್ಟಿಕೊಂಡು ಹುಡುಕಾಟ ಆರಂಭಿಸಿದ್ದಾರೆ ಎನ್ನುತ್ತಾರೆ ಮಂಗಳೂರಿನ ಮಂಗಳಮುಖಿಯರ ಮುಖ್ಯಸ್ಥೆ ರಾಣಿ ಅವರ ಮಾತು. ಕುಡ್ಲಕ್ಕೆ ಜಿಂದಾಲ್ ರಾಣಿ: ಎಲ್ಲರಂತೆ ನಾವು ಕೂಡ ಮನುಷ್ಯರು. ನಿಮ್ಮಲ್ಲಿ ಓಡುವ ರಕ್ತವೇ ನಮ್ಮಲ್ಲೂ ಓಡುತ್ತಿದೆ. ಇದೇ ಗಾಳಿ, ಬೆಳಕಿನ ಜತೆಯಲ್ಲಿಯೇ ಬದುಕು ಕಟ್ಟುತ್ತೇವೆ. ನಮ್ಮನ್ನು ಕೂಡ ನಿಮ್ಮಂತೆ ಕಾಣಿ ಎಂದು ಕಣ್ಣಲ್ಲಿ ನೀರು ತಂದುಕೊಂಡರು ಮಂಗಳಮುಖಿ ರಾಣಿ. ಇವರು ಮೂಲತಃ ಆಂಧ್ರ ಪ್ರದೇಶದವರು. ಜಿಂದಾಲ್ ರಾಣಿ ಎಂದೇ ಅಡ್ಡಾ ಹೆಸರು ಇದೆ. ಅಂದಹಾಗೆ ಇವರ ಮೂಲ ಹೆಸರು ರಾಘವೇಂದ್ರ. ರಾಘು ಎಂದೇ ಅಕ್ಕರೆಯಿಂದ ಕರೆಯುತ್ತಿದ್ದರು. ಐದನೇ ತರಗತಿ ತನಕ ಓದಿದ್ದಾರೆ. ಶಾಲೆಗೆ ಹೋಗುತ್ತಿದ್ದಂತೆಯೇ ರಾಘು ರಾಣಿಯಾಗಿ ಬದಲಾವಣೆಗೊಳ್ಳಲು ಆರಂಭವಾದರು. ಶಾಲೆಯಲ್ಲಿ ಎಲ್ಲರಿಂದಲೂ ತಿರಸ್ಕಾರ. ಮನೆಯಲ್ಲೂ ಅಸಡ್ಡೆ. ಮನೆ ಬಿಡುವುದು ಅನಿವಾರ್ಯ ಎಂಬಂತಹ ಸ್ಥಿತಿ. ನಂತರ ಮುಂಬಯಿಗೆ ಪಯಣ. ಅಲ್ಲಿ ಮಂಗಳ ಮುಖಿಯರೊಂದಿಗೆ ಜೀವನ. ಮಂಗಳ ಮುಖಿಯರ ವಿಧಿ ವಿಧಾನಗಳಿಗೆ ಹೊಂದಿಕೊಂಡು ಜೀವನ ನಡೆಸತೊಡಗಿದರು. ಸಮಾಜವನ್ನು ನೋಡುತ್ತಿದ್ದಂತೆಯೇ ತನಗೂ ಮನೆಗೆ ಹೋಗಬೇಕು ಎನ್ನುವ ಹಂಬಲ. ಈಗಿನ ಸ್ಥಿತಿಯಲ್ಲಿ ನೋಡಿದರೆ ಅದು ಅವರಿಗೆ ಅಸಾಧ್ಯದ ಮಾತು. ಮನೆಯವರಿಗೆ ತಾನು ಗಂಡಾಗಿ ಬಂದರೆ ಬೇಕು. ಈ ಮಂಗಳ ಮುಖಿಯಾಗಿರುವುದಕ್ಕೆ ವಿರೋಧ. ಒಟ್ಟಿನಲ್ಲಿ ಈ ಸ್ಥಿತಿ ಯಾರಿಗೂ ಬರಬಾರದು ಎಂಬ ವೇದನೆಯ ಮಾತು. ಇದು ಬರೀ ರಾಣಿ ಎನ್ನುವ ಮಂಗಳ ಮುಖಿಯ ಕತೆಯಲ್ಲ. ದೇಶದಲ್ಲಿ ಲಕ್ಷ ಗಟ್ಟಳೆ ಮಂಗಳಮುಖಿಯರ ಕತೆ ಕೂಡ ಇಲ್ಲಿಂದಲೇ ಅರಂಭವಾಗಿ ಬಿಡುತ್ತದೆ. ಮನೆಯವರಿಗೂ ಬೇಡ, ಸಮಾಜಕ್ಕೂ ತಾತ್ಸಾರ, ಸರಕಾರಕ್ಕೂ ಮತ ಇಲ್ಲ ಎನ್ನುವ ಕಾರಣಕ್ಕೆ ಅವರಿಂದಲೂ ತಿರಸ್ಕಾರ. ಟೋಟಲಿ ಮಂಗಳವಾಗದ ಮಂಗಳಮುಖಿಯರ ಜೀವನ ದೇವರಿಗೆಯೇ ಪ್ರೀತಿ ಎನ್ನಲು ಯಾವುದೇ ಅಡ್ಡಿಪಡಿಸುವ ಮಾತುಗಳಿಲ್ಲ. ಕೊನೆಯಲ್ಲಿ ಉತ್ತರ ಇಲ್ಲದ ಪ್ರಶ್ನೆಯೊಂದು ಕಾಡುತ್ತದೆ. ಅದೇ ಮಂಗಳಮುಖಿಯರು ಜೀವ ಇರುವ ಪ್ರಾಣಿ- ಪಕ್ಷಿಗಳಿಗಿಂತ ಕೀಳಾಗಿ ಹೋದ್ರಾ....