Monday, December 3, 2012

ಮಂಗಳಮುಖಿಯರ ಮಂಗಳವಾಗದ ಬದುಕು !

ಮಂಗಳಮುಖಿಯರು ತಮ್ಮ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ಗಾಯದ ಗುರುತು ಹೊರ ಜಗತ್ತಿಗೆ ಗೊತ್ತಾ ಗುವುದಿಲ್ಲ. ಇತರರಿಗೆ ಕಾಣಿಸುವುದು ಅವರು ಧರಿಸುವ ಸೀರೆ, ರವಿಕೆ ಮತ್ತು ತುಟಿಗೆ ಹಚ್ಚಿಕೊಳ್ಳುವ ಲಿಪ್‌ಸ್ಟಿಕ್ ಮಾತ್ರ. ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ.
ಸೀರೆಯುಟ್ಟುಕೊಂಡು ನಮ್ಮ ಸುತ್ತಮುತ್ತ ಓಡಾಡುವ ಅವರನ್ನು ನೋಡಿದ್ದೇವೆ. ಅಂಗಡಿ ಮಳಿಗೆಗಳಲ್ಲಿ ಕಾದು ಬೇಡುತ್ತಾರೆ. ದುಡ್ಡು ಕೊಡದಿದ್ದರೆ ಕೆಲವರು ವಿಲಕ್ಷಣ ವರ್ತನೆಯಿಂದ ಕಾಡುತ್ತಾರೆ. ಏನಪ್ಪಾ ಹುಚ್ಚು ಹಿಡಿದಿದೆಯಾ..? ಎನ್ನುವ ಪ್ರಶ್ನೆ ಎದುರುಗೊಳ್ಳುತ್ತದೆ. ವ್ಯಕ್ತಿಯೊಬ್ಬ ಅಂಧನಾಗಿದ್ದರೆ ಗೊತ್ತಾಗುತ್ತದೆ. ಕುಂಟನಾಗಿದ್ದರೆ ಕೂಡ ಸುಲಭವಾಗಿ ಗುರುತಿಸಬಹುದು. ಅವರಿಗೆ ಕೈಲಾದ ನೆರವು ನೀಡುತ್ತಾರೆ. ಆದರೆ ಒಬ್ಬ ಮಂಗಳಮುಖಿ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ಗಾಯದ ಗುರುತು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಇತರರಿಗೆ ಕಾಣಿಸುವುದು ಧರಿಸಿರುವ ಸೀರೆ, ರವಿಕೆ ಮತ್ತು ತುಟಿಗೆ ಹಚ್ಚಿಕೊಳ್ಳುವ ಲಿಪ್‌ಸ್ಟಿಕ್ ಮಾತ್ರ . ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ. ನಮ್ಮಲ್ಲಿ ಹಾವು, ಬೆಕ್ಕು, ನಾಯಿಗಳು ಎಷ್ಟಿವೆ ಎಂದು ಗಣತಿ ಮಾಡಲಾಗುತ್ತದೆ. ಆದರೆ ಮಂಗಳಮುಖಿಯರಿಗೆ ಇಂತಹ ಲೆಕ್ಕವೇ ಇಲ್ಲ. ಭಾರತದಲ್ಲಿ ೫೦ ಸಾವಿರದಿಂದ ೫ ಲಕ್ಷ ಮಂಗಳಮುಖಿಯರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ೫ ಸಾವಿರಕ್ಕೂ ಅಧಿಕ ಮಂಗಳಮುಖಿಯರನ್ನು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಈಗ ಇರುವ ಮಂಗಳಮುಖಿಯರ ಸಂಖ್ಯೆ ೫೦೦ಕ್ಕಿಂತ ಜಾಸ್ತಿ. ಮಂಗಳಮುಖಿಯರಾಗಲು ಕಾರಣ ಏನೂ? ಮಂಗಳಮುಖಿಗಳು ಹುಟ್ಟಿದಾಗ ಪುರುಷ ಎಂದೇ ಗುರುತಿಸಿಕೊಳ್ಳುತ್ತಾರೆ. ದೈಹಿಕ ಸ್ವರೂಪ ಕೂಡ ಹಾಗಿರುತ್ತದೆ. ಆದರೆ ಅಂದಾಜು ಹನ್ನೆರಡು-ಹದಿಮೂರರ ಹರೆಯದ ನಂತರ ಭಾವನೆಗಳಲ್ಲಿ ಪಲ್ಲಟ ಆರಂಭವಾಗಿ ಬಿಡುತ್ತದೆ. ಶಾಲೆಯಲ್ಲಿ ಬಾಲಕ ಸಹಪಾಠಿಯತ್ತ ಲೈಂಗಿಕ ಆಕರ್ಷಣೆಗೆ ಒಳಗಾಗಬಹುದು. ಶಾಲಾ ವಾರ್ಷಿಕೋತ್ಸವದ ನಾಟಕಗಳಲ್ಲಿ ಸ್ತ್ರೀ ಪಾತ್ರವೇ ಬೇಕು ಎಂದು ರಚ್ಚೆ ಹಿಡಿಯಬಹುದು. ತನ್ನಲ್ಲೇಕೆ ಇಂಥ ಭಾವನೆಗಳು ಬರುತ್ತಿವೆ ? ಅಥವಾ ಇತರ ಬಾಲಕರಲ್ಲಿ ಕೂಡ ಇಂತಹುದೇ ಸ್ವಭಾವ ಇದೆಯಾ ಅಂತ ಆತ ಹುಡುಕಬಹುದು. ಉತ್ತರ ಸಿಗದೆ ತಲ್ಲಣಗೊಳ್ಳಬಹುದು. ಹದಿನೆಂಟು-ಇಪ್ಪತ್ತರ ಹೊತ್ತಿಗೆ ತಾನು ದೈಹಿಕವಾಗಿ ಪುರುಷನಾಗಿದ್ದರೂ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಹೆಣ್ಣು ಎಂಬುದು ಖಚಿತವಾಗುತ್ತದೆ. ಸಮಸ್ಯೆಗಳ ಪರಂಪರೆಯ ಮುಂದಿನ ಘಟ್ಟ ಅಮಾನುಷ. ಪೋಷಕರು, ಸೋದರ, ಸೋದರಿಯರಿಂದ ಅಪಹಾಸ್ಯ, ನಿಂದನೆ ಗುರಿಯಾಗಿ ಮನೆಯಲ್ಲಿ ನಿಲ್ಲಲಾಗದೆ ಹೊರಬೀಳುತ್ತಾರೆ. ತಮ್ಮ ಸಮುದಾಯವೇ ವಾಸಿ ಎಂದು ಮಂಗಳಮುಖಿಗಳ ಗುಂಪಿಗೆ ಸೇರುತ್ತಾರೆ. ಅಲ್ಲಿ ಅವರಿಗೆ ಬೇಕಾದ ಸಕಲ ಸ್ವಾತಂತ್ರ್ಯ ಸಿಗುತ್ತದೆ. ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕರಿರುತ್ತಾರೆ. ಆದರೆ ಸಮಸ್ಯೆಗಳ ಸರಪಳಿ ಬದುಕನ್ನು ಕೊನೆಯತನಕ ಕಟ್ಟಿ ಹಾಕುತ್ತದೆ ಎನ್ನುವುದು ಮಂಗಳಮುಖಿಯರ ಕುರಿತು ಅಧ್ಯಯನ ಮಾಡುತ್ತಿರುವ ಮುಂಬಯಿಯ ಮೇರಿ ವೇಲು ಅವರ ಅಭಿಪ್ರಾಯ. ಮಂಗಳಮುಖಿಯರು ಅಂಗಡಿ, ಮಳಿಗೆಗಳಿಗೆ ಹೋಗಿ ಬೇಡುತ್ತಾರೆ. ಎಷ್ಟೋ ಮಂದಿ ಹಣ ಕೊಡದಿದ್ದರೆ ಗದರಿಸುತ್ತಾರೆ. ವಿಚಿತ್ರ ವರ್ತನೆಗಳಿಂದ ಪೀಡಿಸುತ್ತಾರೆ ಎಂಬ ಆಪಾದನೆ ಇದೆ. ಈ ಪ್ರಶ್ನೆಗೆ ಮಂಗಳೂರಿನಲ್ಲಿರುವ ಬಳ್ಳಾರಿಯ ಮೂಲದ ಯಶೋಧಾ ಈ ರೀತಿ ಉತ್ತರಿಸುತ್ತಾರೆ. ‘ನನ್ನಲ್ಲೂ ಬಹಳಷ್ಟು ಜನ ಇದೇ ಪ್ರಶ್ನೆ ಕೇಳುತ್ತಾರೆ. ಅಂಗಡಿಗಳಲ್ಲಿ ಹಣ ಕೇಳುವ ಪದ್ಧತಿ ಮುಂಬಯಿನಲ್ಲಿ ಆರಂಭ ವಾಯಿತು. ಈಗ ಮುಂಬಯಿನಿಂದ ಕರ್ನಾಟಕಕ್ಕೆ ಅನೇಕ ಮಂದಿ ವಲಸೆ ಬಂದಿದ್ದಾರೆ. ಇಲ್ಲಿ ಕೂಡ ಅದೇ ಪದ್ಧತಿ ಹರಡಿದೆ. ಹಣಕ್ಕಾಗಿ ಒತ್ತಾಯಪಡಿಸುವುದು ಸರಿಯಲ್ಲ. ಮಂಗಳಮುಖಿ ಪರ ಸಂಘಟನೆಗಳು ಕೂಡ ಭಿಕ್ಷಾಟನೆಯನ್ನು ಒಪ್ಪುವುದಿಲ್ಲ’ ಎನ್ನುವುದು ಅವರ ಮಾತು. ಕರಾವಳಿಯಲ್ಲಿ ಮಂಗಳಮುಖಿರ ಆಗಮನ: ಮೂರು ವರ್ಷಗಳ ಹಿಂದೆ ಮಂಗಳೂರು ಪೇಟೆಯಲ್ಲಿ ಹತ್ತಾರು ಮಂಗಳಮುಖಿಯರು ಕಾಣ ಸಿಗುತ್ತಿದ್ದ ಪ್ರಸಂಗ ಇತ್ತು. ಆದರೆ ಈಗೀನ ಪರಿಸ್ಥಿತಿಯೇ ಸಂಪೂರ್ಣ ಭಿನ್ನ. ಮಂಗಳೂರು ನಗರ ಮಾತ್ರವಲ್ಲ ಕರಾವಳಿಯ ತಾಲೂಕು ಕೇಂದ್ರಗಳಲ್ಲಿಯೂ ಇವರ ಸಂಖ್ಯೆ ಏರಿಕೆ ಕಾಣಿಸಿಕೊಂಡಿದೆ. ಮಂಗಳೂರಿನ ಪಣಂಬೂರು ಬಂದರು ಪ್ರದೇಶವೊಂದರಲ್ಲಿಯೇ ಸರಿಸುಮಾರು ೩೦೦ಕ್ಕಿಂತ ಜಾಸ್ತಿ ಸಂಖ್ಯೆಯ ಮಂಗಳಮುಖಿಯರನ್ನು ವೀಕೆಂಡ್ ದಿನಗಳಲ್ಲಿ ಕಾಣಬಹುದು. ಪಣಂಬೂರು ಬಂದರು ಪ್ರದೇಶಕ್ಕೆ ನಾನಾ ಕಡೆಯಿಂದ ಬರುವ ಲಾರಿಗಳ ಚಾಲಕರು ಇವರನ್ನು ಇಲ್ಲಿಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ. ಅದಕ್ಕೂ ಮುಖ್ಯವಾಗಿ ಮುಂಬಯಿಯಿಂದಲೂ ಇಲ್ಲಿಗೆ ಬಂದು ನೆಲೆ ನಿಂತ ಮಂಗಳಮುಖಿಯರು ಇದ್ದಾರೆ. ನಗರದ ಹೊರವಲಯದಲ್ಲಿ ಠಿಕಾಣಿ ಹೂಡುವ ಮಂಗಳಮುಖಿಯರು ತಮ್ಮದೇ ತಂಡ ರಚಿಸಿಕೊಂಡು ಬೇಡುವ ಕೆಲಸದ ಜತೆಯಲ್ಲಿ ಲೈಂಗಿಕ ಕ್ರಿಯೆಯಲ್ಲೂ ತೊಡಗಿಕೊಂಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಮಾತ್ರ ಹೆಚ್ಚು ಗಳಿಕೆ ಮಾಡುವ ಇವರು ಉಳಿದ ದಿನಗಳಲ್ಲಿ ಪೇಟೆ ಪಟ್ಟಣಗಳಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುವುದಿಲ್ಲ. ಮಂಗಳಮುಖಿಯರಲ್ಲೂ ನಕಲಿತನ: ಒರಿಜಿನಾಲಿಟಿ ಎನ್ನುವ ಪದಗಳ ಜತೆಗೆ ಹುಟ್ಟಿಕೊಂಡ ನಕಲಿತನ ಎನ್ನುವ ಪದ ಪ್ರಯೋಗ ಈಗ ಮಂಗಳಮುಖಿಯರಲ್ಲೂ ಕಾಣಿಸಿಕೊಂಡಿದೆ. ಮೈಮುರಿದುಕೊಂಡು ದುಡಿಯಲು ಬಯಸದ ಸೋಮಾರಿ ಯುವಕರು ಮಂಗಳಮುಖಿರಾಗುತ್ತಿದ್ದಾರೆ. ಅದರಲ್ಲೂ ಹಣ ಸುಳಿಗೆ ಮಾಡುವ ಕಾಯಕದಲ್ಲಿ ಭರ್ಜರಿಯಾಗಿ ನಿರತರಾಗಿದ್ದಾರೆ. ಮಹಿಳೆಯರಂತೆ ವೇಷಭೂಷಣ ಮಾಡಿಕೊಂಡು ಅವರ ಹಾವಭಾವಗಳನ್ನೇ ಕಾಫಿ ಮಾಡುವ ಈ ಯುವಕರು ಮಂಗಳಮುಖಿಯರಿಗೆ ಪೈಪೋಟಿ ನೀಡುವಂತೆ ಬೆಳೆದಿರುತ್ತಾರೆ. ಇದು ಬರೀ ಕರಾವಳಿಯ ಮಾತಲ್ಲ. ಇಡೀ ದೇಶದಲ್ಲಿ ಮಂಗಳಮುಖಿಯರು ಎಲ್ಲಿದ್ದರೋ ಅಲ್ಲಿ ಎಲ್ಲ ಈ ನಕಲಿ ಮಂಗಳಮುಖಿಯ ಕೆಲಸ ಕೂಡ ನಡೆಯುತ್ತದೆ. ಇಂತಹ ನಕಲಿ ಮಂಗಳಮುಖಿಯರನ್ನು ಹಿಡಿಯಲು ಪೊಲೀಸ್ ಇಲಾಖೆ ಕೂಡ ಸೋತು ಬಿಟ್ಟಿದೆ. ಮತ್ತೊಂದು ಕಡೆ ನಕಲಿ ಮಂಗಳಮುಖಿಯರ ಪತ್ತೆಗಾಗಿ ಮಂಗಳಮುಖಿಯರು ತಮ್ಮದೇ ತಂಡ ಕಟ್ಟಿಕೊಂಡು ಹುಡುಕಾಟ ಆರಂಭಿಸಿದ್ದಾರೆ ಎನ್ನುತ್ತಾರೆ ಮಂಗಳೂರಿನ ಮಂಗಳಮುಖಿಯರ ಮುಖ್ಯಸ್ಥೆ ರಾಣಿ ಅವರ ಮಾತು. ಕುಡ್ಲಕ್ಕೆ ಜಿಂದಾಲ್ ರಾಣಿ: ಎಲ್ಲರಂತೆ ನಾವು ಕೂಡ ಮನುಷ್ಯರು. ನಿಮ್ಮಲ್ಲಿ ಓಡುವ ರಕ್ತವೇ ನಮ್ಮಲ್ಲೂ ಓಡುತ್ತಿದೆ. ಇದೇ ಗಾಳಿ, ಬೆಳಕಿನ ಜತೆಯಲ್ಲಿಯೇ ಬದುಕು ಕಟ್ಟುತ್ತೇವೆ. ನಮ್ಮನ್ನು ಕೂಡ ನಿಮ್ಮಂತೆ ಕಾಣಿ ಎಂದು ಕಣ್ಣಲ್ಲಿ ನೀರು ತಂದುಕೊಂಡರು ಮಂಗಳಮುಖಿ ರಾಣಿ. ಇವರು ಮೂಲತಃ ಆಂಧ್ರ ಪ್ರದೇಶದವರು. ಜಿಂದಾಲ್ ರಾಣಿ ಎಂದೇ ಅಡ್ಡಾ ಹೆಸರು ಇದೆ. ಅಂದಹಾಗೆ ಇವರ ಮೂಲ ಹೆಸರು ರಾಘವೇಂದ್ರ. ರಾಘು ಎಂದೇ ಅಕ್ಕರೆಯಿಂದ ಕರೆಯುತ್ತಿದ್ದರು. ಐದನೇ ತರಗತಿ ತನಕ ಓದಿದ್ದಾರೆ. ಶಾಲೆಗೆ ಹೋಗುತ್ತಿದ್ದಂತೆಯೇ ರಾಘು ರಾಣಿಯಾಗಿ ಬದಲಾವಣೆಗೊಳ್ಳಲು ಆರಂಭವಾದರು. ಶಾಲೆಯಲ್ಲಿ ಎಲ್ಲರಿಂದಲೂ ತಿರಸ್ಕಾರ. ಮನೆಯಲ್ಲೂ ಅಸಡ್ಡೆ. ಮನೆ ಬಿಡುವುದು ಅನಿವಾರ್ಯ ಎಂಬಂತಹ ಸ್ಥಿತಿ. ನಂತರ ಮುಂಬಯಿಗೆ ಪಯಣ. ಅಲ್ಲಿ ಮಂಗಳ ಮುಖಿಯರೊಂದಿಗೆ ಜೀವನ. ಮಂಗಳ ಮುಖಿಯರ ವಿಧಿ ವಿಧಾನಗಳಿಗೆ ಹೊಂದಿಕೊಂಡು ಜೀವನ ನಡೆಸತೊಡಗಿದರು. ಸಮಾಜವನ್ನು ನೋಡುತ್ತಿದ್ದಂತೆಯೇ ತನಗೂ ಮನೆಗೆ ಹೋಗಬೇಕು ಎನ್ನುವ ಹಂಬಲ. ಈಗಿನ ಸ್ಥಿತಿಯಲ್ಲಿ ನೋಡಿದರೆ ಅದು ಅವರಿಗೆ ಅಸಾಧ್ಯದ ಮಾತು. ಮನೆಯವರಿಗೆ ತಾನು ಗಂಡಾಗಿ ಬಂದರೆ ಬೇಕು. ಈ ಮಂಗಳ ಮುಖಿಯಾಗಿರುವುದಕ್ಕೆ ವಿರೋಧ. ಒಟ್ಟಿನಲ್ಲಿ ಈ ಸ್ಥಿತಿ ಯಾರಿಗೂ ಬರಬಾರದು ಎಂಬ ವೇದನೆಯ ಮಾತು. ಇದು ಬರೀ ರಾಣಿ ಎನ್ನುವ ಮಂಗಳ ಮುಖಿಯ ಕತೆಯಲ್ಲ. ದೇಶದಲ್ಲಿ ಲಕ್ಷ ಗಟ್ಟಳೆ ಮಂಗಳಮುಖಿಯರ ಕತೆ ಕೂಡ ಇಲ್ಲಿಂದಲೇ ಅರಂಭವಾಗಿ ಬಿಡುತ್ತದೆ. ಮನೆಯವರಿಗೂ ಬೇಡ, ಸಮಾಜಕ್ಕೂ ತಾತ್ಸಾರ, ಸರಕಾರಕ್ಕೂ ಮತ ಇಲ್ಲ ಎನ್ನುವ ಕಾರಣಕ್ಕೆ ಅವರಿಂದಲೂ ತಿರಸ್ಕಾರ. ಟೋಟಲಿ ಮಂಗಳವಾಗದ ಮಂಗಳಮುಖಿಯರ ಜೀವನ ದೇವರಿಗೆಯೇ ಪ್ರೀತಿ ಎನ್ನಲು ಯಾವುದೇ ಅಡ್ಡಿಪಡಿಸುವ ಮಾತುಗಳಿಲ್ಲ. ಕೊನೆಯಲ್ಲಿ ಉತ್ತರ ಇಲ್ಲದ ಪ್ರಶ್ನೆಯೊಂದು ಕಾಡುತ್ತದೆ. ಅದೇ ಮಂಗಳಮುಖಿಯರು ಜೀವ ಇರುವ ಪ್ರಾಣಿ- ಪಕ್ಷಿಗಳಿಗಿಂತ ಕೀಳಾಗಿ ಹೋದ್ರಾ....

No comments:

Post a Comment