Monday, December 10, 2012

ಮುಗಿಯುವ ಮುನ್ನ ನೇತ್ರಾವತಿ.....

* ಸ್ಟೀವನ್ ರೇಗೊ, ದಾರಂದಕುಕ್ಕು ಕೋಟಿ ವರ್ಷಗಳಿಂದ ಕುಣಿದು ಕುಪ್ಪಳಿಸುತ್ತಿರುವ ಈ ನದಿಯ ಮೇಲೆ ಆಸೆ ಬುರುಕರ ಕಣ್ಣು ಬಿದ್ದುಬಿಟ್ಟಿದೆ. ಇಂಥ ನೇತ್ರಾವತಿಯನ್ನು ತಿರುಗಿಸುವ ಕಡೆ ರಾಜಕಾರಣಿಗಳು ಕಣ್ಣು ಹಾಕಿದ್ದಾರೆ. ನೇತ್ರಾವತಿ ತಿರುಗಿಸಿದರೆ ಇಡೀ ಜಿಲ್ಲೆ ಸೊರಗುತ್ತದೆ. ಈಗಾಗಲೇ ಇದಕ್ಕೆ ಪರಿವಿಡಿ ಬರೆಯಲಾಗಿದೆ. ಕರ್ನಾಟಕ ಪಶ್ಚಿಮವಾಹಿನಿಯ ನದಿ ನಾಲ್ಕೇ ತಾಲ್ಲೂಕುಗಳಲ್ಲಿ ಹರಿದರೂ ದಕ್ಷಿಣ ಕನ್ನಡ ಮಟ್ಟಿಗೆ ನೇತ್ರಾವತಿ ಜೀವನದಿ. ಧರ್ಮಸ್ಥಳದ ಪವಿತ್ರ ಸ್ನಾನದಿಂದ ತೊಡಗಿ ಮಂಗಳೂರು ಮಹಾನಗರ ಜನರ ಜೀವಾಮೃತವಾಗುವ ತನಕ ಎಲ್ಲರಿಗೂ ಬೇಕಾದ ನದಿ. ತೊಂಬತ್ತಾರು ಕಿ.ಮೀ. ಉದ್ದದ ನೇತ್ರಾವತಿಗೆ ಮಳೆಗಾಲದಲ್ಲಿ ಮೈತುಂಬ ಸೊಕ್ಕು. ಬೇಸಗೆಯಲ್ಲಿ ಮಂದಗಮನೆ. ಆಷಾಢದಲ್ಲಿ ಅಹಂಕಾರಿ. ಶಿಶಿರದಲ್ಲಿ ನಾಚಿ ಮುದ್ದೆಯಾಗುವ ಮುಗುದೆಯಾಗುತ್ತಾಳೆ. ಕೋಟಿ ವರ್ಷಗಳಿಂದ ಕುಣಿದು ಕುಪ್ಪಳಿಸುತ್ತಿರುವ ಈ ನದಿಯ ಮೇಲೆ ಆಸೆ ಬುರುಕರ ಕಣ್ಣು ಬಿದ್ದುಬಿಟ್ಟಿದೆ. ಇಂಥ ನೇತ್ರಾವತಿಯನ್ನು ತಿರುಗಿಸುವ ಕಡೆ ರಾಜಕಾರಣಿಗಳು ಕಣ್ಣು ಹಾಕಿದ್ದಾರೆ. ನೇತ್ರಾವತಿ ತಿರುಗಿಸಿದರೆ ಇಡೀ ಜಿಲ್ಲೆ ಸೊರಗುತ್ತದೆ. ಈಗಾಗಲೇ ಇದಕ್ಕೆ ಪರಿವಿಡಿ ಬರೆಯಲಾಗಿದೆ. ಉಪ್ಪಿನಂಗಡಿ ಎಂಬ ಸಂಗಮ ತಾಣದಲ್ಲಿ ಪದೇ ಪದೇ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡೂ ತುಂಬಿ ನೆರೆ ಬಾಧೆಯಾಗುತ್ತಿತ್ತು. ಬಂಟ್ವಾಳದ ಹಳೆಪೇಟೆಯಲ್ಲಿ ವರ್ತಕ ಮಂಡಿಗಳಿಗೆ ಪ್ರತಿ ವರ್ಷವೂ ನೀರು ನುಗ್ಗುತ್ತಿತ್ತು. ಬ್ರಹ್ಮರಕೂಟ್ಲುವಿನಲ್ಲಿ ನೀರು ಮೈಚಾಚಿ ವಾರಗಟ್ಟಲೆ ರಸ್ತೆ ಮುಳುಗುತ್ತಿತ್ತು. ಉಳ್ಳಾಲದ ಕಬ್ಬಿನ ಗದ್ದೆಗಳಿಗಂತೂ ಮಳೆಯ ನೀರಿನ ಆಕ್ರಮಣ ತಪ್ಪುತ್ತಿರಲಿಲ್ಲ. ಇದು ಮಳೆಗಾಲದ ನೇತ್ರಾವತಿಯ ಚಿತ್ರಣ. ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ವಿಸ್ತಾರದ ಶೇ.೪೦ರಷ್ಟು ಪ್ರದೇಶ ನೇತ್ರಾವತಿಯದ್ದೇ. ಅಂದರೆ ೩೩೫೭ ಚದರ ಕಿಲೋ ಮೀಟರ್ ವಿಸ್ತಾರದ ಈ ನದಿಯ ಜಲಾನಯನ ಪ್ರದೇಶದಲ್ಲಿ ವರ್ಷಕ್ಕೆ ೪೩೦೬ ಮೀ.ಮೀ. ಮಳೆ ಬೀಳುತ್ತ ದೆ. ನದಿಯ ಹರಿವಿನ ವಾರ್ಷಿಕ ಪ್ರಮಾಣ ಸರಾಸರಿ ೧೨೪೩೪ ಮಿಲಿಯನ್ ಘನ ಮೀಟರ್ ಗಳು ನೀರಾವರಿ ತಜ್ಞರ ಲೆಕ್ಕಾಚಾರದ ಪ್ರಕಾರ ೪೪೬ ಟಿಎಂಸಿ ನೀರು ಈ ನದಿಯಲ್ಲಿ ಹರಿದು ಹೋಗುತ್ತಿದೆ. ಜೀವನದಿ ಎಲ್ಲಕ್ಕೂ ಅಗತ್ಯ:
ಜೀವನದಿ ನೇತ್ರಾವತಿ ಎಲ್ಲಕ್ಕೂ ಬೇಕು. ಮಂಗಳೂರಿಗೆ ನೇತ್ರಾವತಿ ಏಕೈಕ ಮೂಲ ಮಂಗಳೂರಿಗೆ ಬೇಕಾಗುವ ನೀರಿನಲ್ಲಿ ಶೇ.೭೦ರಷ್ಟು ಪಾಲು ಈ ನದಿಯದ್ದು. ಮಂಗಳೂರಿಗೆ ನೇತ್ರಾವತಿ ನದಿಯಿಂದ ದಿನಕ್ಕೆ ೨೦ ಎಂಜಿಡಿ ಪೂರೈಕೆಯಾಗುತ್ತಿದೆ. ಇದು ಮಂಗಳೂರಿನ ಕನಿಷ್ಠ ಅಗತ್ಯ. ಮಂಗಳೂರಿನ ವಿಶೇಷ ಆರ್ಥಿಕ ವಲಯಕ್ಕೆ ಅಂದಾಜಿನ ಪ್ರಕಾರ ದಿನಕ್ಕೆ ೫೦೦ ಎಂಜಿಡಿ ನೀರು ಅಗತ್ಯ. ವಿಶೇಷ ಆರ್ಥಿಕ ವಲಯದಿಂದ ಜನಸಂಖ್ಯೆಯೂ ಹೆಚ್ಚುತ್ತದೆ. ಆದ್ದರಿಂದ ನೀರಿನ ಬೇಡಿಕೆ ನಾವು ಊಹಿಸದೇ ಇರುವ ಮಟ್ಟದಲ್ಲಿ ಏರುತ್ತದೆ. ನೇತ್ರಾವತಿ ನದಿಯ ಮೇಲೆ ವಿದ್ಯುತ್ ಉತ್ಪಾದನೆಯ ಕಂಪನಿಗಳು ಕಣ್ಣಿಟ್ಟಿವೆ. ಸರಕಾರದ ಸಬ್ಸಿಡಿಯ ಮೇಲೆ ಉದ್ಯಮದ ಮಂದಿ ಹಾತೊರೆದಿದ್ದಾರೆ. ಪಶ್ಚಿಮ ಘಟ್ಟದ ನೆತ್ತಿಯಲ್ಲಿ ಇನ್ನೂ ನೇತ್ರಾವತಿ ಧುಮುಕಿಲ್ಲ, ಅಲ್ಲಿಗೆ ಒಡ್ಡು ಹಾಕಿ ನೀರೆತ್ತಿ ಅದನ್ನು ಧುಮುಕಿಸಿ ಕರೆಂಟು ತಯಾರಿಸುವ ಉತ್ಸಾಹ ಯೋಜನಾ ಕರ್ತಗಳದ್ದು. ಬೆಟ್ಟದ ಬುಡದಿಂದ ತೊಡಗಿ ಬಂಟ್ವಾಳದ ತನಕ ನೇತ್ರಾವತಿಯಲ್ಲಿ ೪೨ ಸಣ್ಣಪುಟ್ಟ, ಮಧ್ಯಮ, ದೊಡ್ಡ ಎಂಬ ವೆರೈಟಿಯಲ್ಲಿ ವಿದ್ಯುತ್ ಯೋಜನೆಗಳನ್ನು ಯೋಜನಾ ಕರ್ತಗಳು ರೂಪಿಸಿದ್ದಾರೆ. ಕೇವಲ ಬೆಳ್ತಂಗಡಿ ಎಂಬ ಸಣ್ಣ ತಾಲೂಕೊಂದರಲ್ಲೇ ನೇತ್ರಾವತಿಗೆ ಹದಿನಾರು ಸ್ಥಳದಲ್ಲಿ ಸಣ್ಣ ಸಣ್ಣ ಅಣೆಕಟ್ಟು ಹಾಕಿ ವಿದ್ಯುತ್ ಉತ್ಪಾದಿಸುವ ಯೋಜನೆ ಇದೆ. ದೊಂಡೊಳೆ, ಪಾರ್ಪಿಕಲ್, ನೀರಕಟ್ಟೆ, ನಿಡ್ಲೆ, ಶಂಬೂರು ಹೀಗೆ ಅನೇಕ ಸ್ಥಳಗಳಲ್ಲಿ ವಿದ್ಯುತ್ ಯೋಜನೆಗಳು ಆರಂಭವಾಗಿವೆ. ಇನ್ನೂ ೧೩ ಮಿನಿ ಜಲ ವಿದ್ಯುತ್ ಯೋಜನೆಗಳು ನೇತ್ರಾವತಿಯ ಅಥವಾ ಅದರ ಉಪನದಿಯಲ್ಲೋ ಆರಂಭ ಗೊಳ್ಳಲು ಸಿದ್ಧತೆ ನಡೆದಿವೆ. ಹೆಚ್ಚು ಕಡಿಮೆ ೧೧೦ ಮೆಗಾವಾಟ್ ವಿದ್ಯುತ್ ಅನ್ನು ಈ ಅಣೆಕಟ್ಟುಗಳಿಂದ ಉತ್ಪಾದಿಸುವ ಲೆಕ್ಕ ಮಾಡಲಾಗಿದೆ. ಹರಿಯುವ ನೇತ್ರಾವತಿಯ ಲೆಕ್ಕಚಾರ: ನೇತ್ರಾವತಿ ಮತ್ತು ಅದರ ಮುಖ್ಯ ಉಪನದಿ ಕುಮಾರಧಾರಾ ಸಹಿತ ರಾಜ್ಯದ ೩೬ ನದಿಗಳಿಂದ ನೀರಾವರಿಗಾಗಿ ನೀರೆತ್ತಲು ಫೆಬ್ರವರಿಯಿಂದ ಜೂನ್ ತನಕ ಕೆಲವು ನಿರ್ಬಂಧಗಳಿವೆ. ಪೇಟೆ ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ ಎಂದು ಆಯಾ ಜಿಲ್ಲಾಡಳಿತಕ್ಕೆ ಕಂಡು ಬಂದರೆ ತಕ್ಷಣವೇ ನದಿ ನೀರಾವರಿ ನಿಷೇಧಿಸಿ ಆದೇಶ ನೀಡಬಹುದು. ಈ ಸಂಬಂಧ ನೀರಾವರಿ ಕಾಯ್ದೆಗಳಲ್ಲಿ ಸರಳ ಮಾರ್ಗದರ್ಶಿ ಸೂತ್ರಗಳಿವೆ. ನದಿ ಪಾತ್ರದ ರೈತರಿಗೆ ಫೆಬ್ರವರಿ ತನಕ ಮಾತ್ರ ನೀರೆತ್ತುವ ಪರವಾನಗಿ ನೀಡಲಾಗುತ್ತದೆ. ಪರವಾನಗಿ ನವೀಕರಣಗೊಳಿಸದಿದ್ದರೆ ನಿಷೇಧ ಜಾರಿಗೊಂಡಿದೆ ಎಂದೇ ಅರ್ಥ. ಅನಂತರ ನೀರೆತ್ತಿದ್ದರೆ ಅದು ಅಕ್ರಮ. ನೇತ್ರಾವತಿಯ ತಟದಲ್ಲಿ ಇಂಥ ಪರವಾನಗಿ ನೀಡಿರುವುದು ಭತ್ತದ ಕೃಷಿಗೆ ನೀರು ಹಾಯಿಸಲೆಂದು ಮಾತ್ರ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಯೇ ಬತ್ತಿ ಹೋಗಿದೆ. ಅಡಕೆ ತೋಟಗಳು ಮೈ ಎತ್ತಿವೆ. ಎಲ್ಲೆಂದರಲ್ಲಿ ತೋಟಗಳ ಸಾಮ್ರಾಜ್ಯ. ಭತ್ತದ ಗದ್ದೆಗಳು ಮಾತ್ರವಲ್ಲ, ಗುಡ್ಡಕಾಡುಗಳೂ ಅಡಕೆ ತೋಟಗಳಾಗಿವೆ. ಆದರೆ ನೀರಿನ ಪರವಾನಗಿ ಮಾತ್ರ ಭತ್ತದ ಹೆಸರಲ್ಲೇ ಇದೆ. ಒಂದು ಅಂದಾಜಿನ ಪ್ರಕಾರ ನೇತ್ರಾವತಿ-ಕುಮಾರಾಧಾರ ಪ್ರದೇಶದಲ್ಲಿ ಸಾವಿರಾರು ಪಂಪ್ ಸೆಟ್ ಗಳು ನೇತ್ರಾವತಿಯನ್ನು ಹೀರಿ ತೋಟಗಳಿಗೆ ಉಣಿಸುತ್ತಿವೆ. ತೆಂಗು-ಬಾಳೆ ಕೃಷಿಗಳಿಗೆ ನೀರು ಬೇಕಾಗಿರುವುದು ಫೆಬ್ರವರಿಯಿಂದ ಮೇ ತನಕ. ಈ ಹೊತ್ತಿನಲ್ಲಿ ನಿರ್ಬಂಧ ಹೇರಿದರೆ ಈ ಸಾವಿರಾರು ಎಕರೆ ತೋಟ ಕರಟಿ ನಾಶವಾಗುತ್ತದೆ. ಸಾವಿರಾರು ಕೃಷಿ ಕುಟುಂಬಗಳೂ ಬೆಂದು ಹೋಗುತ್ತವೆ. ನದಿಯ ವಾಣಿಜ್ಯದ ಮಗ್ಗಲು: ಕೈಗಾರಿಕೆ ಅಭಿವೃದ್ಧಿ, ಕೃಷಿಕ್ರಾಂತಿ, ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಯಾಗುತ್ತಿದ್ದಂತೆ ನಮ್ಮ ಸೌಂದರ್ಯ ಸಾಕ್ಷಿಯಾಗಿದ್ದ ಈ ಕರಾವಳಿ ಅರೆ ಮಲೆನಾಡು ಪ್ರದೇಶದ ಜೀವ ಲಹರಿಯಾಗಿದ್ದ ನೇತ್ರಾವತಿ ಕೂಡ ವಾಣಿಜ್ಯೀಕರಣಗೊಂಡಿತು. ನೇತ್ರಾವತಿ ನಿಧಾನವಾಗಿ ಸೊರಗುತ್ತಾ ಸೊರಗುತ್ತಾ ಕಣ್ಮುಚ್ಚಬಹುದೇ ಎಂಬ ಆತಂಕ ಯಾರೂ ಗಣಿಸಿದಂತಿಲ್ಲ. ಈಗಾಗಲೇ ಜೀವನದಿ ಕಾವೇರಿಯ ಬಗ್ಗೆ ಅಧ್ಯಯನಗಳು, ಚಿಂತನೆಗಳು ಆರಂಭವಾಗಿದೆ. ನಾವೆಲ್ಲಾ ಈ ತನಕ ಹರಿಯುವ ನದಿಯನ್ನು ಕಟ್ಟುವ ಕುರಿತು ಯೋಚಿಸಿದ್ದೇವೆಯೇ ವಿನಾ ನದಿಯ ಹರಿವು ಉಳಿಸುವ ಹೆಚ್ಚಿಸುವ ಕುರಿತು ಎಂದೂ ಯೋಚಿಸಿಲ್ಲ ಎಂದು ಹೇಳುತ್ತಾರೆ ಪರಿಸರವಾದಿ ಹಾಗೂ ಜಲ ಕೊಯ್ಲು ತಜ್ಞ ಶ್ರೀ ಪಡ್ರೆ. ಸಂಪತ್ತಿನ ಬಳಕೆ ಕುರಿತು ಮಾತನಾಡುವುದಕ್ಕೂ ಮುಖ್ಯವಾದದ್ದು ಸಂಪತ್ತಿನ ಉಳಿಕೆಯ ಚಿಂತನೆ ಎಂದು ನೇತ್ರಾವತಿ ಕುರಿತು ಅವರು ಮಾರ್ಮಿಕವಾಗಿ ಉತ್ತರಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿಯೊಂದು ಯೋಜನೆ ಮಂಜೂರಾದಾಗಲೂ ಪರಿಸರದ ಬಗ್ಗೆ ಕಾಳಜಿ ಇರುವವರು ದಕ್ಷಿಣ ಕನ್ನಡ ಜಿಲ್ಲೆಯ ಧಾರಣಾ ಶಕ್ತಿಯ ಅಧ್ಯಯನ ಆಗಬೇಕೆಂದು ಎದ್ದು ನಿಲ್ಲುತ್ತಾರೆ. ಇಷ್ಟರವರೆಗೆ ಸರಕಾರವಾಗಲಿ, ಸ್ಥಳೀಯಾಡಳಿತ ಸಂಸ್ಥೆಗಳಾಗಲಿ ಇತ್ತ ಆಸಕ್ತಿ ತೋರಿಲ್ಲ. ಗಂಗಾ ಕ್ರಿಯಾ ಯೋಜನೆ ಮಾದರಿಯಲ್ಲಿ ನೇತ್ರಾವತಿಗೂ ಕ್ರಿಯಾ ಯೋಜನೆಯ ಅಗತ್ಯವಿದೆ. ಇನ್ನು ಹತ್ತು ವರ್ಷಗಳಲ್ಲಿ ನೇತ್ರಾವತಿಯನ್ನು ನಾವು ಮುಂಚಿನಂತೆ ಆಗಿಸಲು ಸಾಧ್ಯವಾಗದಿದ್ದರೆ ಎಕರೆಗೆ ೧.೬೦ ಕೋಟಿ ಲೀಟರ್ ಮಳೆ ಬೀಳುವ ಈ ಪರಶುರಾಮನ ಸೃಷ್ಟಿಯ ಕರಾವಳಿಯಲ್ಲಿ ಬರಗಾಲದ ಸೆಖೆ ನಿಶ್ಚಿತ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯೋದಿಲ್ಲ. ಎರಡು ನದಿಗಳಿಗೆ ಎಂಟು ಉಪನದಿಗಳು: ಈ ಎಲ್ಲ ಉಪನದಿಗಳಿಗೆ ಅಲ್ಲಲ್ಲಿ ಕೆಲವು ಹಳ್ಳ, ತೊರೆಗಳು ಬಂದು ಸೇರುತ್ತವೆ. ಕೆಲವು ತೊರೆಗಳು ಪ್ರಪಾತಗಳಲ್ಲಿ ಧುಮುಕಿ ಜಲಪಾತಗಳಾಗಿ ಭೋರ್ಗರೆಯುತ್ತಿದ್ದರೆ ಮತ್ತೆ ಕೆಲವು ಕೇವಲ ಜುಳು ಜುಳು ನಿನಾದದೊಂದಿಗೆ ಪ್ರಾಕೃತಿಕ ಸೊಬಗನ್ನು ಅಭಿವ್ಯಕ್ತಗೊಳಿಸುತ್ತಿವೆ. ೧. ಕುದುರೆಮುಖದ ಎಳನೀರು ಘಾಟಿಯಿಂದ ಬರುವ ಎಳನೀರು ಹೊಳೆಯು ಕುದುರೆಮುಖ, ಹಿರಿಮರಿಗುಪ್ಪೆ ಮತ್ತು ಕೃಷ್ಣಗಿರಿಯ ಶೋಲಾ ಕಾಡುಗಳಿಂದ ಹರಿದುಬರುತ್ತಿದೆ. ೨. ನೇತ್ರಾವತಿಯ ಎರಡನೇ ಉಪನದಿಯಾದ ಬಂಡಾಜೆ ಹೊಳೆಯು ದುರ್ಗದಬೆಟ್ಟದಿಂದ ೩೬೨ ಅಡಿ ಎತ್ತರದಿಂದ ಜಲಪಾತವಾಗಿ ಧುಮುಕಿ ಮಲವಂತಿಗೆಯತ್ತ ಹರಿದುಬರುವುದು. ೩. ಮೂರನೇ ಉಪನದಿ ಕೊಟ್ಟಿಗೆಹಾರ ಸಮೀಪದ ಮಧುಗುಂಡಿಯಿಂದ ಹರಿದುಬರುವ ಮೃತ್ಯುಂಜಯ ಹೊಳೆಯು ಬಾರೆಕಲ್ಲು, ದೊಡ್ಡೇರಿಬೆಟ್ಟದ ಒಂದು ಮಗ್ಗುಲಿನಲ್ಲಿ ಸಾಗುತ್ತಾ ಚಾರ್ಮಾಡಿಯತ್ತ ಹರಿದುಬರುತ್ತದೆ. ೪. ನಾಲ್ಕನೇ ಉಪನದಿ ಅಣಿಯೂರು ಹೊಳೆಯು ಚಾರ್ಮಾಡಿ ಘಾಟಿಯ ಹೊರಟ್ಟಿಯಲ್ಲಿ ಉಗಮಿಸಿ ಬಾರಿಮಲೆ ಮತ್ತು ದೇವಗಿರಿ ಕಣಿವೆಗಳಲ್ಲಿ ಹರಿದುಬರುತ್ತದೆ. ೫. ಐದನೇ ಉಪನದಿ ಸುನಾಲ ಹೊಳೆಯು ಮಿಂಚುಕಲ್ಲು, ಅಂಬಟ್ಟಿಮಲೆಯಿಂದ ಉಗಮಿಸಿ ಸೋಮನಕಾಡು ಕಣಿವೆಯಲ್ಲಿ ಹರಿಯುತ್ತದೆ. ೬. ಆರನೇ ಉಪನದಿ ನೆರಿಯ ಹೊಳೆಯು ಬಾಂಜಾರು ಕಣಿವೆಯಲ್ಲಿ ಉಗಮಿಸುತ್ತದೆ. ೭. ಏಳನೇ ಉಪನದಿ ಕಪಿಲಾ ಹೊಳೆಯು ಭೈರಾಪುರ ಘಾಟಿಯಲ್ಲಿ ಉಗಮಿಸಿ ಎತ್ತಿನಭುಜ ಕಣಿವೆಯಲ್ಲಿ ಹರಿದುಬರುತ್ತದೆ. ೮. ಎಂಟನೇ ಉಪನದಿ ಕೆಂಪುಹೊಳೆಯು ಶಿರಾಡಿ ಘಾಟಿಯ ಓಂಗ್ರಾಲ ಕಣಿವೆಯಲ್ಲಿ ಉಗಮಿಸಿ ಕೊಂಬರಮಲೆ, ವೆಂಕಟಗಿರಿ ಕಣಿವೆಯಲ್ಲಿ ಹರಿಯುತ್ತದೆ. ೯. ಒಂಬತ್ತನೇ ಪ್ರಮುಖ ಉಪನದಿ ಕುಮಾರಧಾರ ಹೊಳೆಯು ಕುಮಾರಪರ್ವತದಲ್ಲಿ ಉಗಮವಾಗಿ ಏಣಿಕಲ್ಲು, ಪಟ್ಲಬೆಟ್ಟ ಕಣಿವೆಯಲ್ಲಿ ಹರಿದುಬರುತ್ತದೆ. ಈ ಒಂಬತ್ತು ಉಪನದಿಗಳಿಗೆ ಮತ್ತೊಂದಷ್ಟು ಕಿರುಹಳ್ಳ, ಝರಿತೊರೆಗಳು ಅಲ್ಲಲ್ಲಿ ಸೇರುತ್ತವೆ. ಶಿರ್ಲಾಲು ಹಳ್ಳ, ಶಿವನಾಳ ಹಳ್ಳ, ಮಾವಿನಸಸಿ ಹಳ್ಳ, ಬಡಮನೆ ಹಳ್ಳ, ಹಳೆಮನೆ ಹಳ್ಳ, ಬಟ್ಟಿ ಹಳ್ಳ, ಕಿಲ್ಲೂರು ಹಳ್ಳ, ಬಂಗ್ರಬಲಿಗೆ ಹಳ್ಳ, ಆನಡ್ಕ ಹಳ್ಳ, ನಂದಿತ್ತಾಟು ಹಳ್ಳ, ಮಲ್ಲ ಹಳ್ಳ, ಏಳೂವರೆ ಹಳ್ಳ, ಕೂಡುಬೆಟ್ಟು ಹಳ್ಳ, ಮುಂಡಾಜೆ ಹಳ್ಳ, ನೆಲ್ಲಿತ್ತಾಟು ಹಳ್ಳ, ಬಿರುಮಲೆ ಹಳ್ಳ, ಹಕ್ಕಿಕಲ್ಲು ಹಳ್ಳ, ನಾಗರ ಹಳ್ಳ, ಕಬ್ಬಿನ್ಸಂಕ ಹಳ್ಳ, ಕಲ್ಲರ್ಬಿ ಹಳ್ಳ, ದೊಂಡೋಲೆ ಹಳ್ಳ, ಕಲ್ಲಗುಂಡಿ ಹಳ್ಳ, ಏಮೆಪಾರೆ ಹಳ್ಳ, ಕನ್ನಿಕಾಯ ಗುಂಡಿ, ಕಬ್ಬಿನಾಲೆ, ಅಡ್ಡ ಹೊಳೆ, ಕೇರಿ ಹೊಳೆ, ಹೊಂಗದ ಹೊಳೆ, ಮಾರುತಿ ಹೊಳೆ, ಅಬ್ಲುಬುಡಿ ಹಳ್ಳ, ಕಾಗೆನೀರು, ಅವಂತಿಗೆ ಹೊಳೆ, ಸಿಂಗ್ಸಾರ್ ಹೊಳೆ, ಗಿರಿಹೊಳೆ, ಪೇರಿಕೆ, ಮೀನಗಂಡಿ, ಅಜ್ಜಿಗುಂಡಿ, ಬಣಾಲ್ ಹೊಳೆ, ಜೇಡಿಗುಲು, ಮತ್ತಿಕೋಲು ಮುಂತಾದ ಅನೇಕ ಹಳ್ಳಗಳು ಉಪನದಿಗಳಿಗೆ ಸೇರುತ್ತವೆ. ಈ ಉಪನದಿಗಳು, ಹಳ್ಳಗಳು ಹರಿದು ಬರುವಲ್ಲೆಲ್ಲಾ ಗಿರಿ, ಕಂದರ, ಕಣಿವೆ, ಪ್ರಪಾತ, ಜಲಪಾತಗಳಿವೆ. ಮಳೆಯನ್ನು ಹೀರಿ ಹೊಳೆಯನ್ನು ಜೀವಂತವಾಗಿಟ್ಟುಕೊಳ್ಳುವ ಹುಲ್ಲುಗಾವಲುಗಳಿವೆ. ಆಕಾಶದೆತ್ತರಕ್ಕೆ ನಿಂತಿರುವ ಮರಗಳಿವೆ. ಔಷಧೀಯ ಸಸ್ಯ ಪ್ರಬೇಧಗಳಿವೆ. ಕಾಡನ್ನೇ ಆಶ್ರಯಿಸಿದ ವನ್ಯ ಮೃಗ ಪಕ್ಷಿ ಸಂಕುಲಗಳಿವೆ. ಕಗ್ಗತ್ತಲ ಮಲೆಗಳಿವೆ. ಮಲೆಗಳನ್ನೇ ನಂಬಿ ಬದುಕು ಸಾಗಿಸುವ ಮಲೆಕುಡಿಯರಿದ್ದಾರೆ. ಪರ್ವತಗಳ ಕಣಿವೆಗಳಲ್ಲಿ ಮಳೆಗೆ ಮೂಲಾಧಾರವಾದ ಶೋಲಾ ಕಾಡುಗಳಿವೆ. ನದಿ ತಿರುವು ಮೂರ್ಖತನದ ಹೆಜ್ಜೆ: ರೈಲ್ವೆ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಗಣಿಗಾರಿಕೆ, ವಿದ್ಯುತ್ ಲೈನ್, ಪೈಪ್ ಲೈನ್, ಜಲಾಶಯ ನಿರ್ಮಾಣಗಳಂತಹ ವನವಿನಾಶಕ ಯೋಜನೆಗಳಿಂದ ಈಗಾಗಲೇ ಪಶ್ಚಿಮ ಘಟ್ಟದ ಪರ್ವತ ಮತ್ತು ಅಡವಿ ಭಾಗಕ್ಕೆ ಅಗಾಧ ಹಾನಿಯಾಗಿದೆ. ಈ ನದಿ ತಿರುವು ಯೋಜನೆಯಿಂದಂತೂ ಪಶ್ಚಿಮ ಘಟ್ಟದ ಗಿರಿ, ವನ, ಝರಿ, ಜಲದೊಡಲಿಗೆ ಮಾರಣಾಂತಿಕ ಏಟು ಬೀಳುವುದರಲ್ಲಿ ಸಂಶಯವೇ ಇಲ್ಲ. ಕಾಳಿ, ಶರಾವತಿ, ಚಕ್ರಾ, ವಾರಾಹಿ, ಭದ್ರಾ, ಕಾವೇರಿ ನದಿಗಳಿಗೂ ಮತ್ತು ನದಿ ಸಮೀಪದ ಅಡವಿಗಳಿಗೂ ದುರ್ಗತಿ ಒದಗಿಸಿದ್ದಾಗಿದೆ. ವಿಧಾನಸೌಧ ಬಿದ್ದರೆ ಅಂತಹ ೧೦೦ ವಿಧಾನಸೌಧಗಳನ್ನು ಕಟ್ಟಬಹುದು. ನದಿಯನ್ನು ಕಳೆದುಕೊಂಡರೆ ಮತ್ತೆ ಅಂತಹ ನದಿಯನ್ನು ಸೃಷ್ಟಿಸಲು ನಮ್ಮಿಂದ ಸಾಧ್ಯವೇ ಇಲ್ಲ. ನದಿ ತಿರುವು ಯೋಜನೆಯ ರೂವಾರಿ ಪರಮಶಿವಯ್ಯನವರ ಪ್ರಕಾರ ನೇತ್ರಾವತಿ ನದಿಯಲ್ಲಿ ಪ್ರತಿ ವರ್ಷ ೪೬೪.೬೨ ಟಿ.ಎಂ.ಸಿ ನೀರು ಸಮುದ್ರದ ಪಾಲಾಗುತ್ತಿದೆ. ಇದರಲ್ಲಿ ೧೪೨.೪೬ ಟಿ.ಎಂ.ಸಿ ನೀರನ್ನು ಕಾಲುವೆ ಮುಖಾಂತರ ಬಯಲುಸೀಮೆಯ ೫೭ ತಾಲೂಕುಗಳಿಗೆ ಸರಬರಾಜು ಮಾಡಬಹುದೆಂದು ಲೆಕ್ಕಾಚಾರ. ಉಪನದಿಗಳ ಉಗಮಸ್ಥಾನದ ಸಮೀಪ ಅಲ್ಲಲ್ಲಿ ನೀರನ್ನು ತಡೆದು ಜಲಾಶಯಗಳನ್ನು ನಿರ್ಮಿಸಿ ಕಾಲುವೆ ಮುಖಾಂತರ ಸಾಗಿಸುವುದೆಂದು ಅಂದಾಜು. ಈ ಯೋಜನೆಗೆ ಎರಡು ಪ್ರಮುಖ ಕಾಲುವೆಗಳ ಮೂಲಕ ಹರಿವು ಸಾಗಲಿದೆ. ಈ ಎರಡೂ ಕಾಲುವೆಗಳಿಗೆ ಬೇಕಾದಲ್ಲಿ ಜಲಾಶಯ ನಿರ್ಮಿಸುವಲ್ಲಿ ರಕ್ಷಿತಾರಣ್ಯವಿದೆ. ಕುದುರೆಮುಖ, ಕೃಷ್ಣಗಿರಿ, ಹಿರಿಮರಿಗುಪ್ಪೆ, ಬಲ್ಲಾಳರಾಯನ ದುರ್ಗ, ಬಂಡಾಜೆ ಜಲಪಾತ, ಹೊಸ್ಮನೆ ಗುಡ್ಡ, ಬಾಳೆಗುಡ್ಡ, ದೊಡ್ಡೇರಿ ಬೆಟ್ಟ, ಏರಿಕಲ್ಲು, ಕುಂಭಕಲ್ಲು, ಮಿಂಚುಕಲ್ಲು, ಸೋಮನಕಾಡು, ಬಾರಿಮಲೆ, ಬಾಂಜಾರುಮಲೆ, ಇಳಿಮಲೆ, ಅಂಬಟಿಮಲೆ, ಅಮೇದಿಕಲ್ಲು, ಎತ್ತಿನಭುಜ, ದೇವರಮಲೆ, ಉಳಿಯಮಲೆ, ಮುಗಿಲಗಿರಿ, ಅರಮನೆ ಬೆಟ್ಟ, ಬೆಂಗಲಾರ್ ಬೆಟ್ಟ, ವೆಂಕಟಗಿರಿ, ಅರೆಬೆಟ್ಟ, ಕನ್ನಡಿಕಲ್ಲು, ಏಣಿಕಲ್ಲು ಬೆಟ್ಟ, ಪಟ್ಲ ಬೆಟ್ಟ, ಕುಮಾರಪರ್ವತ ಇಂತಹ ಪಶ್ಚಿಮ ಘಟ್ಟದ ಪ್ರಮುಖ ಬೆಟ್ಟಗಳೆಲ್ಲ ಹಾನಿಗೊಳಗಾಗುವ ಸಂಭವಗಳಿವೆ. ಘಾಟಿಗಳುದ್ದಕ್ಕೂ ಪರ್ವತಗಳನ್ನು ಕೊರೆದು ಅರಣ್ಯ ಪ್ರದೇಶವನ್ನು ಸಿಗಿದು ನೀರನ್ನು ಸಂಗ್ರಹಿಸುವುದೆಂದರೆ ಚಾರ್ಮಾಡಿ ಘಾಟಿಯಲ್ಲಿ ಮಂಗಳೂರು ಚಿಕ್ಕಮಗಳೂರು ರಾಜ್ಯ ಹೆದ್ದಾರಿಗೂ, ಶಿರಾಡಿ ಘಾಟಿಯಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೂ, ರೈಲ್ವೇ ರಸ್ತೆಗೂ ಹಾನಿಯಾಗಬಹುದು. ಈ ಯೋಜನೆಯಿಂದ ೫,೫೫೦ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ. ಈ ಕಾಲುವೆ, ಜಲಾಶಯ ನಿರ್ಮಾಣ, ಪೈಪ್ ಲೈನ್ ಗಳಿಗೆ ಪರ್ವತಗಳನ್ನು ಸೀಳಲು ಬೃಹತ್ ಯಂತ್ರಗಳು ಕಾಡಿನೊಳಗೆ ಹೋಗಬೇಕಾದರೆ ಅರಣ್ಯದುದ್ದಕ್ಕೂ ರಸ್ತೆ ನಿರ್ಮಾಣವಾಗಬೇಕು. ಯಾವುದೇ ಅರಣ್ಯ ಪರ್ವತಗಳಿಗೆ ರಸ್ತೆ ನಿರ್ಮಾಣವಾಯಿತೆಂದರೆ ಅಲ್ಲಿನ ಜೀವವೈವಿಧ್ಯಗಳು, ವನ್ಯಜೀವಿಗಳು, ಮರಗಿಡಗಳು ನಾಶವಾದವೆಂದೇ ಅರ್ಥ. ಕಾಮಗಾರಿ ನಡೆಯುತ್ತಿರುವಾಗ ಪರ್ವತಗಳ ಕಲ್ಲು, ಮಣ್ಣನ್ನು ರಾಶಿ ಹಾಕಿದಾಗ ಅಗಾಧ ಪ್ರಮಾಣದ ಮಳೆಕಾಡು ನಾಶವಾಗುತ್ತದೆ. ಈ ಮಣ್ಣಿನ ರಾಶಿ ಕೆಲವು ಚಿಕ್ಕ ತೊರೆ ಹಳ್ಳಗಳ ಮೇಲೆ ಬಿದ್ದು ಆ ಹಳ್ಳಗಳು ಶಾಶ್ವತವಾಗಿ ಮುಚ್ಚಿಹೋಗುತ್ತವೆ. ಮಣ್ಣಿನ ರಾಶಿ ನದಿಯನ್ನು ಸೇರಿ ಹೂಳು ತುಂಬಿ ನದಿಯ ಆಳ ಕಡಿಮೆಯಾಗಬಹುದು. ಕಾಡಿನೊಳಗೆ ಇರುವ ಚಿಕ್ಕ ಚಿಕ್ಕ ಹಳ್ಳಗಳು ನದಿಯ ಮಟ್ಟಿಗೆ ತುಂಬಾ ಮಹತ್ವದಾಗಿದೆ. ಮಳೆನೀರನ್ನು ನೆಲದಲ್ಲಿ ಇಂಗಿಸಿಕೊಂಡಿರುವಂತಹ ಶೋಲಾಕಾಡುಗಳ ಈ ಹಳ್ಳಗಳು ಮಳೆಗೆ ಮೂಲಾಧಾರವಾಗಿರುತ್ತದೆ. ನದಿಯನ್ನು ತಡೆದಾಗ ನದಿನೀರಿನ ಖನಿಜಾಂಶಗಳು, ಲವಣಾಂಶಗಳು ಸಮುದ್ರವನ್ನು ಸೇರದಿದ್ದರೆ ಜಲಚರ ಜೀವಿಗಳಿಗೆ ಬೇಕಾದ ಪೋಷಕಾಂಶಗಳು ಕಡಿಮೆಯಾಗಿ ಅಸಂಖ್ಯಾತ ಮೀನುಗಳ ನಾಶವಾದರೆ ಬೆಸ್ತರ ಬದುಕು ದುಸ ರವಾದೀತು. ಕಾಡೊಳಗೆ ಹಾಯಾಗಿ ಓಡಾಡುತ್ತಿರುವ ವನ್ಯ ಜೀವಿಗಳು ಬದುಕಲು ನೆಲೆಯಿಲ್ಲದೆ ಕಾಡಿನಿಂದ ನಾಡಿಗೆ ದಾಳಿ ಇಡಬಲ್ಲವು. ಪರ್ವತಗಳ ಅಂಚುಗಳಲ್ಲಿ ನೀರಿನ ಕಾಲುವೆಗಳನ್ನು ನಿರ್ಮಿಸಿದಾಗ ಭೂಕುಸಿತ ಸಂಭ ವಿಸಲೂಬಹುದು. ಈ ಭೂಕುಸಿತದಿಂದ ಕಾಲುವೆಯ ನೀರು ರಭಸವಾಗಿ ಹರಿದು ಹತ್ತಿರದ ಹಳ್ಳಿಗಳ ಗದ್ದೆ, ತೋಟ, ಮನೆಗಳಿಗೆ ಹಾನಿಯಾಗಬಹುದು. ಕರಾವಳಿಯ ಬದುಕಿಗೊಂದು ರೂಪುರೇಷೆ ಕೊಟ್ಟಂತಹ ನೇತ್ರಾವತಿಯ ದಿಕ್ಕನ್ನೇ ಬದಲಿಸಿ ಅಡವಿಯನ್ನು ಕೆಡವಿ ಬಲಿ ಕೊಡುವುದರಿಂದ ಬರವಿಲ್ಲದ ಕರಾವಳಿ ಜಿಲ್ಲೆಗೆ ಬರಗಾಲದ ಆಮಂತ್ರಣ ನೀಡಲಾಗುತ್ತಿದೆ. ಅದರಲ್ಲೂ ಈ ಬಾರಿ ಕರಾವಳಿಯಲ್ಲಿ ಮಳೆಯ ಪ್ರಮಾಣ ಕೂಡ ಕಡಿಮೆ ಇವುಗಳ ನಡುವೆ ನೇತ್ರಾವತಿಯ ಒಡಲು ಬರಿದಾಗುತ್ತಿದೆ. ಒಂದು ಲೆಕ್ಕಚಾರದ ಪ್ರಕಾರ ನೇತ್ರಾವತಿ ಅಧ್ಯಾಯ ಮುಕ್ತಾಯ ಹಂತಕ್ಕೆ ತಲುಪುತ್ತಿದೆಯಾ ಎನ್ನುವ ಗುಮಾನಿ ನೇತ್ರಾವತಿಯನ್ನು ನೋಡುವ ಪ್ರತಿಯೊಬ್ಬನ ಕಣ್ಣಿಗೆ ಅನ್ನಿಸದೇ ಇರಲಾರದು. .... ಚಿತ್ರ: ಕಿಶೋರ್ ಪೆರಾಜೆ .............

No comments:

Post a Comment