Saturday, June 25, 2011

ಜಾಕ್ಪಾಟ್ ಜಾಕ್ಲೀನ್ !


‘ಅಲ್ಲಾದ್ದೀನ್’ ಎಂಬ ಮಾಯಾ ದೀಪದಿಂದ ಹೊರಬಂದ ಹಾಟ್ ಹುಡುಗಿ ಜಾಕ್ಲೀನ್ ಫೆರ್ನಾಂಡೀಸ್ ಎಲ್ಲಿ ಹೋದರು ಎಂದು ಕೇಳಿದವರೆ ಜಾಸ್ತಿ. ಕೈಯಲ್ಲಿ ಸರಿಯಾದ ಚಿತ್ರಗಳಿಲ್ಲ ಎಂದು ತವರು ಮನೆ ಸೇರುತ್ತಿದ್ದ ಹುಡುಗಿ ಈಗ ಮತ್ತೆ ಮುಂಬಯಿ ನಗರಿಯ ಚಿತ್ರಗಳನ್ನು ದೋಚಿದ್ದಾಳೆ ಎನ್ನುವ ಸುದ್ದಿ ಇದೆಯಂತೆ...

ಬಾಲಿವುಡ್ನ ಗಲ್ಲಾ ಪೆಟ್ಟಿಗೆಯಲ್ಲಿ ಉದ್ದುದ್ದ ಮಲಗಿ ಹೋದ ‘ಅಲ್ಲಾದ್ದೀನ್’ ಚಿತ್ರ ನೋಡಿದವರಿಗೆ ಈ ಸುಂದರಿಯ ಪರಿಚಯ ಖಂಡಿತ ಇರಬಹುದು. ಅದೇ ಅಲ್ಲಾದ್ದೀನ್ ಎನ್ನುವ ಮಾಯ ದೀಪದಿಂದ ಹೊರಬಂದ ಶ್ರೀಲಂಕಾದ ಸುಂದರಿ ಜಾಕ್ಲೀನ್ ಫೆರ್ನಾಂಡೀಸ್ ‘ಜಾನೇ ಕಾಹ ಸೇ ಅಯಿ ಯೇ ಹೋ’ ಹಾಗೂ ‘ಹೌಸ್ಫುಲ್’ ಚಿತ್ರದ ನಂತರ ಎಲ್ಲೋ ಮರೆಯಾಗಿ ಹೋದಳು ಎನ್ನುವ ಸುದ್ದಿ ಹರಡಿಕೂತಿತ್ತು. ಶ್ರೀಲಂಕಾದ ಜಾಹೀರಾತು ಕಂಪನಿಗಳಿಗೆ ಆಗಾಗ ಮುಖ ತೋರಿಸಿ ಬರುತ್ತಿದ್ದಾಳೆ ಎಂಬ ಮಾತು ಹರಡಿತ್ತು. ಇನ್ನೂ ಮುಂದೆ ಮುಂಬಯಿ ಹಾಗೂ ಶ್ರೀಲಂಕಾ ನಡುವಿನ ಮಾತುಕತೆ ಇಲ್ಲಿಗೆ ಮುಗಿದು ಹೋಗುತ್ತದೆ ಎನ್ನುವ ಮಾತುಗಳು ಹರಿದಾಡಿ ತ್ತು.
ಆದರೆ ಜಾಕ್ಲೀನ್ ಮತ್ತೆ ಬಾಲಿವುಡ್ ಇಂಡಸ್ಟ್ರಿಗೆ ರೀ ಎಂಟ್ರಿ ಹೊಡೆದಿದ್ದಾರೆ. ಅದೂ ಕೂಡ ಜಾಕ್ಪಾಟ್ ಎಂಟ್ರಿ. ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ರ ಹೋಂ ಬ್ಯಾನರ್ ‘ವಿಶೇಷ್ ಫಿಲ್ಮ್ಂ’ ಅಡಿಯಲ್ಲಿ ಬರುತ್ತಿರುವ ‘ಮರ್ಡರ್-೨’ ಚಿತ್ರದಲ್ಲಿ ಜಾಕ್ಲೀನ್ ಕಿಸ್ಸಾರ್ ಬಾಯ್ ಇಮ್ರಾನ್ ಹಸ್ಮಿಗೆ ಸಾಥ್ ಕೊಟ್ಟಿದ್ದಾಳೆ. ಜುಲಾಯಿ ಮೊದಲ ವಾರ ಈ ಚಿತ್ರ ತೆರೆಗೆ ಅಪ್ಪಳಿಸುವ ಕುರಿತು ಈಗಾಗಲೇ ಪ್ರೇಕ್ಷಕರ ವರ್ಗ ಸೂಚನೆ ಬಂದಿದೆ. ಈ ಚಿತ್ರ ರಿಲೀಸ್ ನಂತರ ಜಾಕ್ಲೀನ್ ನಾಡಿಯವಾಲಾರ ‘ಹೌಸ್ಪುಲ್-೨’ ಚಿತ್ರದಲ್ಲಿ ಲೀಡ್ ರೋಲ್ನಲ್ಲಿ ಕಾಣಿಸುತ್ತಿದ್ದಾರೆ. ಅಂದಹಾಗೆ ಈ ಹಿಂದೆ ತೆರೆಗೆ ಬಂದ ‘ಹೌಸ್ಫುಲ್’ನಲ್ಲಿ ಜಾಕ್ಲೀನ್ ಬರೀ ಒಂದು ಐಟಂ ಸಾಂಗ್ನಲ್ಲಿ ಕಾಣಿಸಿಕೊಂಡಿದ್ದರು.
ಅಲ್ಲಿಗೆ ಅವರ ಸಿನಿಮಾ ಬದುಕು ನಿಂತು ಹೋಗಿತ್ತು ಎಂದು ಗಲ್ಲಿಯಲ್ಲಿ ಗಾಸಿಪ್ ಎಬ್ಬಿಸಿದ್ದರು. ಲಂಡನ್ನಲ್ಲಿ ಹೌಸ್ಫುಲ್-೨ ಚಿತ್ರೀಕರಣ ನಡೆಯುತ್ತಿದ್ದು, ಈ ವರ್ಷದ ಕೊನೆ ಭಾಗದಲ್ಲಿ ತೆರೆಗೆ ಬರುವ ಚಾನ್ಸ್ ಇದೆ ಎನ್ನೋದು ನಿರ್ಮಾಣ ಸಂಸ್ಥೆಯ ಮಾತು. ಇದರ ಜತೆಯಲ್ಲಿ ಹೌಸ್ಫುಲ್ ಚಿತ್ರದ ಬ್ಯುಸಿ ಷೆಡ್ಯುಲ್ನಿಂದಾಗಿ ಮರ್ಡರ್-೨ ಚಿತ್ರದ ಪ್ರಚಾರಕ್ಕೆ ಜಾಕ್ಲೀನ್ ಬರುತ್ತಿಲ್ಲ ಎನ್ನುವ ಸುದ್ದಿಗಳು ನಿರ್ಮಾಪಕರ ಕಡೆಯಿಂದ ಬರುತ್ತಿದೆ. ಗಾಸಿಪ್ಗಳಿಂದ ದೂರನೇ ಉಳಿದು ಬಿಡುತ್ತಿದ್ದ ಜಾಕ್ಲೀನ್ ಫೆರ್ನಾಂಡೀಸ್ ಒಂದೆರಡು ಚಿತ್ರಗಳಿಂದ ನಿರ್ಮಾಪಕರಿಗೆ ಕಿರಿಕ್ ಕೊಡಲು ಆರಂಭ ಮಾಡಿದ್ದಾಳೆ ಎನ್ನುವ ಮಾತು ಪಡಸಾಲೆಗೆ ಬಿದ್ದು ಬಿಟ್ಟಿದೆ. ಜಾಕ್ಲೀನ್ ಫೆರ್ನಾಂಡೀಸ್ ಮಾತ್ರ ಈ ಎಲ್ಲ ವಿಚಾರಗಳಿಗೆ ಸೊಪ್ಪು ಹಾಕದೇ ಕೂತಿದ್ದಾಳೆ.
ಇತ್ತ ಕಡೆ ಮಹೇಶ್ ಭಟ್ ‘ಮರ್ಡರ್-೨’ ಮುಂಬಯಿಯ ಪ್ರಚಾರಕ್ಕೆ ಬರುವಂತೆ ಜಾಕ್ಲೀನ್ಗೆ ಕೇಳಿಕೊಂಡಿದ್ದಾರಂತೆ. ಮಹೇಶ್ರ ಮಾತು ಕೇಳಿದ ಜಾಕ್ಲೀನ್ ಎಲ್ಲಕ್ಕೂ ಯೆಸ್ ಎಂದಿದ್ದಾಳೆ . ಈ ವಿಚಾರದಿಂದ ತೃಪ್ತರಾದ ಭಟ್ಟರು ತನ್ನ ಮುಂದಿನ ಎರಡು ಚಿತ್ರಗಳಿಗೆ ಜಾಕ್ಲೀನ್ ಫೆರ್ನಾಂಡೀಸ್ರನ್ನು ಹಾಕುವ ಮನಸ್ಸು ಮಾಡಿದ್ದಾರಂತೆ ಎನ್ನುವ ಸುದ್ದಿ ಗಾಸಿಪ್ ಗಲ್ಲಿಯಿಂದ ಕೇಳಿಬರುತ್ತಿದೆ. ಈ ಮೂಲಕ ಮಹೇಶ್ ಭಟ್ಟರ ಕ್ಯಾಂಪ್ನಲ್ಲಿ ಇರುವ ಯಾವುದೇ ಸಿನಿಮಾ ತಾರೆಯಾದರೂ ಒಂದೆರಡು ಸಿನಿಮಾಗಳಲ್ಲಿ ನಟಿಸದೇ ವಾಪಾಸು ಹೋಗುವಂತಿಲ್ಲ ಎನ್ನುವ ಚಾಲ್ತಿಯಲ್ಲಿದ್ದ ಮಾತಿಗೆ ಈಗ ಪುಷ್ಠಿ ದೊರೆತಾಂಗಿದೆ.
ತನಗೆ ನಟಿಸಲು ಚಿತ್ರಗಳಿಲ್ಲ ಎಂದು ಪದೇ ಪದೇ ತವರು ಮನೆಗೆ ಓಡಾಡುತ್ತಿದ್ದ ಜಾಕ್ಲೀನ್ಗೂ ಈ ಮೂಲಕ ಮುಂಬಯಿಯಲ್ಲಿಯೇ ಒಂದೆರಡು ವರ್ಷಗಳ ಕಾಲ ಉಳಿಯುವಂತಾಗಿದೆ. ಜಾಕ್ಲೀನ್ರ ಆಕ್ಟಿಂಗ್ನಿಂದಲೋ, ಮೈಮಾಟದಿಂದಲೋ ‘ಮರ್ಡರ್-೨’ ಬಾಲಿವುಡ್ನಲ್ಲಿ ಕ್ಲಿಕ್ ಆಯಿತು ಎಂದಾದರೆ ಮತ್ತೆರಡು ಸಿನಿಮಾ ನಿರ್ಮಾಪಕರು ಜಾಕ್ಲೀನ್ರ ಮನೆ ಮುಂದೆ ಕಾದು ಕೂರಬಹುದು. ಒಟ್ಟಾರೆ ಚಿತ್ರದ ಪೋಸ್ಟರ್ಗಳು ಹಸಿಬಿಸಿಯಿಂದ ಸುದ್ದಿಯಾಗಿದೆ. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸುದ್ದಿ ಮಾಡುತ್ತಾ ಎನ್ನೋದು ಡಾಲರ್ ಪ್ರಶ್ನೆ.

Tuesday, June 14, 2011

ಪ್ರಕಾಶ್ ಶೆಟ್ಟರ ಪಂಚ್ ಕಜ್ಜಾಯ !

ಬ್ರಿಟ್ನಿ ಥರ್ಡ್ ಇನ್ನಿಂಗ್ಸ್ಆಹಾ... ನನ್ನ ಮದುವೆಯಂತೆ !


ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಈಗ ಮದುವೆಯ ಸಂಭ್ರಮದಲ್ಲಿದ್ದಾರೆ. ಅಂದಹಾಗೆ ಬ್ರಿಟ್ನಿ ಸ್ಪಿಯರ್ಸ್ಗೆ ಇದು ಮೊದಲ ಮದುವೆಯ ಸಂಭ್ರಮ ಅಲ್ಲವೇ ಅಲ್ಲ. ಬ್ರಿಟ್ನಿಯ ಲೆಕ್ಕಚಾರದ ಪ್ರಕಾರ ಇದು ಮೂರನೇ ಮದುವೆ ಎನ್ನೋದು ಈ ಬರಹದ ವಿಷ್ಯಾ...
ಖ್ಯಾತ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ ಈಗ ಮತ್ತೆ ಸುದ್ದಿಯ ಅಂಗಣದಲ್ಲಿ ಬಂದು ಪಟ್ ಅಂತಾ ಕೂತು ಬಿಟ್ಟಿದ್ದಾಳೆ. ಅಂದಹಾಗೆ ಬ್ರಿಟ್ನಿ ಯಾರಿಗೆ ತಾನೇ ಗೊತ್ತಿಲ್ಲ. ಅಮೆರಿಕದ ಪಾಪ್ ಹಾಡುಗಾರ್ತಿ, ಡ್ಯಾನ್ಸರ್, ನಟಿ, ಫ್ಯಶನ್ ಡಿಸೈನರ್, ವಿಡಿಯೋ ಡೈರೆಕ್ಟರ್, ಬರಹಗಾರ್ತಿ ಹೀಗೆ ಬ್ರಿಟ್ನಿ ಮುಟ್ಟಾದ ಕ್ಷೇತ್ರಗಳು ಸಧ್ಯಕ್ಕಂತೂ ಯಾವುದು ಇಲ್ಲ ಬಿಡಿ. ಅದಕ್ಕಿಂತ ಮುಖ್ಯವಾಗಿ ಬ್ರಿಟ್ನಿ ಮಾಡುವ ಅವಾಂತರಗಳು ಸದಾ ಸುದ್ದಿಯಲ್ಲಿರುತ್ತದೆ.
ಬ್ರಿಟ್ನಿಯ ಯಾವುದೇ ಒಂದು ಆಲ್ಬಂ ಮಾರುಕಟ್ಟೆಯಲ್ಲಿ ಬಿದ್ದು ಹೋಗುತ್ತಿದೆ ಎಂದಾಗ ಅಮೆರಿಕದ ಪಬ್ನಲ್ಲೋ... ಬಿಯರ್ ಬಾರ್ನಲ್ಲೋ.... ಪಾರ್ಟಿಯಲ್ಲೋ.... ಡ್ರಗ್ಸ್ ಸೇವಿಸುತ್ತಾ ಚೂರುಪಾರು ಬಟ್ಟೆಯಲ್ಲಿ ದೇಹ ಸೌಂದರ್ಯವನ್ನು ಬಿಟ್ಟಿಯಾಗಿ ಪ್ರದರ್ಶನ ಮಾಡುತ್ತಾ ಸುದ್ದಿ ಮಾಡುತ್ತಿದ್ದ ಬ್ರಿಟ್ನಿ ಈಗ ಮದುವೆಯಾಗುವ ಯೋಚನೆಗೆ ಬಂದಿದ್ದಾರೆ. ಅಂದಹಾಗೆ ಬ್ರಿಟ್ನಿಗೆ ಇದು ಮೊದಲ ಮದುವೆಯಲ್ಲ.. ಲೆಕ್ಕಚಾರದ ಪ್ರಕಾರ ಇದು ಮೂರನೇ ಮದುವೆ ಎನ್ನೋದು ಬ್ರಿಟ್ನಿಯ ಮಾತು.
ಬಹಳ ಹಳೆಯ ಪಾಪ್ಸ್ಟಾರ್ ಹಾಗೂ ತನ್ನ ಬಾಲ್ಯ ಗೆಳೆಯ ಜೇಸಾನ್ ಅಲೆಕ್ಸಾಂಡರ್ ಜತೆಯಲ್ಲಿ ಮದುವೆಯಾಗಿದ್ದರು. ೫೫ ಗಂಟೆಗಳ ಕಾಲ ಜೀವಂತ ಇದ್ದ ಇವರಿಬ್ಬರ ಮದುವೆ ನಂತರ ಮುರಿದುಬಿತ್ತು. ಆ ಬಳಿಕ ಬ್ರಿಟ್ನಿ ಲೈಪ್ನಲ್ಲಿ ಎಂಟ್ರಿ ಕೊಟ್ಟವರು ಕೇವಿನ್ ಪೆಡರ್ಲೈನ್. ಈ ಮದುವೆ ಬಹಳ ಟೈಮ್ ಬಾಳ್ವಿಕೆ ಬಂತು. ಕೇವಿನ್ನಿಂದ ಬ್ರಿಟ್ನಿ ಎರಡು ಮಕ್ಕಳ ತಾಯಿ ಕೂಡ ಆದಳು. ಈಗಲೂ ಐದು ವರ್ಷದ ಸೀನ್ ಹಾಗೂ ನಾಲ್ಕು ವರ್ಷದ ಜೇಡನ್ ಎನ್ನುವ ಮುದ್ದಾದ ಮಕ್ಕಳು ಬ್ರಿಟ್ನಿಯ ಜತೆಯಲ್ಲಿಯೇ ಬದುಕು ಕಟ್ಟುತ್ತಿವೆ.
ಈಗ ಬಹಳ ಕಾಲದಿಂದ ಬ್ರಿಟ್ನಿಯ ಜತೆಯಲ್ಲಿ ಅನದಿಕೃತವಾಗಿ ಸುತ್ತಾಡುತ್ತಿದ್ದ ಗೆಳೆಯ ಜೇಸಾನ್ ಟ್ರಾವಿಕ್ ಜತೆಯಲ್ಲಿ ಬ್ರಿಟ್ನಿ ಮೂರನೇ ಬಾರಿಗೆ ಮದುವೆಯಾಗುತ್ತಿದ್ದಾರೆ. ೩೯ರ ಹರೆಯದ ಜೇಸಾನ್ ಅಮೆರಿಕದಲ್ಲಿ ಟ್ಯಾಲೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬ್ರಿಟ್ನಿ ಹಾಗೂ ಜೇಸಾನ್ ಮದುವೆ ಯಾವಾಗ, ಎಲ್ಲಿ ಎನ್ನುವ ವಿಚಾರಗಳು ಬಹಿರಂಗವಾಗಿಲ್ಲ. ಹೊಸ ಆಲ್ಬಂ ಬಿಡುಗಡೆಯ ಜತೆಗೆ ವರ್ಲ್ಡ್ ಟೂರ್ಗೆ ಬ್ರಿಟ್ನಿ ರೆಡಿಯಾಗುತ್ತಿರುವುದರಿಂದ ಮದುವೆ ಕೊಂಚ ಡಿಲೇ ಆಗುವ ಲಕ್ಷಣಗಳು ಗೋಚರಿಸಿದೆ.
ಈಗಾಗಲೇ ಇವರಿಬ್ಬರು ಲಾಸ್ ವೇಗಸ್ನ ಮನ್ಶನ್ ಹೊಂದರಲ್ಲಿ ರಿಂಗ್(ಉಂಗುರ)ಬದಲಾಯಿಸುವ ಕಾರ್ಯಕ್ರಮ ನಡೆದಿದೆ ಎಂದು ಬ್ರಿಟ್ನಿಯ ಆಪ್ತ ಮೂಲಗಳು ತಿಳಿಸಿದೆ. ಬ್ರಿಟ್ನಿ ಸ್ಪಿಯರ್ಸ್ರ ಚದುರಿದ ಬದುಕು ಮೂರನೇ ಮದುವೆ ಮೂಲಕವಾದರೂ ಗಟ್ಟಿಯಾಗುತ್ತಾ..? ಇಲ್ಲವೇ ಬ್ರಿಟ್ನಿ ನಾಲ್ಕನೇ ಮದುವೆಗೆ ಈ ಮದುವೆ ಅಡಿಗಲ್ಲು ಆಗುತ್ತಾ ಎನ್ನೋದು ಬ್ರಿಟ್ನಿ ಸ್ಪಿಯರ್ಸ್ರ ಸಂಗೀತ ಅಭಿಮಾನಿಗಳ ಡಾಲರ್ ಪ್ರಶ್ನೆಯಾಗಿ ಮುಂದೆ ನಿಂತಿದೆ. ದೊಡ್ಡವರ ಬದುಕು ಯಾವಾಗಲೂ ದೊಡ್ಡದಾಗಿರುತ್ತದೆ ಎನ್ನೋದಕ್ಕೆ ಬ್ರಿಟ್ನಿ ಕರೆಕ್ಟ್ ಸ್ಯಾಂಪಲ್ ಅಲ್ವಾ...?

Friday, June 10, 2011

೨೪ ಗಂಟೆಯಲ್ಲಿ ಮತ್ತೊಂದು ದಾಖಲೆ !


ಗಣೇಶ್ ಕಾಸರಗೋಡು ಅವರ ಪುಸ್ತಕ ಬಿಡುಗಡೆಯಾಗಿ ಬರೀ ೨೪ ಗಂಟೆಯಲ್ಲಿ ಮರುಮುದ್ರಣ ಕಂಡಿದೆ. ಇದು ಪುಸ್ತಕ ಉದ್ಯಮದಲ್ಲಿ ಒಂದು ದಾಖಲೆ ಜತೆಗೆ ಅಂಕಿತ ಪ್ರಕಾಶನದ ಟಾಪ್ರೇಟಿಂಗ್ ಪುಸ್ತಕಗಳಲ್ಲಿ ಈ ವಾರ ಗಣೇಶ್ರ ಕೃತಿ ಒಂದನೇ ಸ್ಥಾನ ಪಡೆದುಕೊಂಡಿದೆ. ಕೃತಿಯ ಕುರಿತು ಹೆಚ್ಚಿನ ಮಾಹಿತಿಗೆ ಮಂಗಳೂರಿನ ವಿಜಯ ಕರ್ನಾಟಕದ ನಮ್ಮ ಕರಾವಳಿಯಲ್ಲಿ ಜೂನ್ ೧೧, ೨೦೧೧ ರಂದು ಲೇಖನವೊಂದನ್ನು ಪ್ರಕಟಿಸಿದ್ದೇನೆ. ನೋಡಿ.. ಜತಗೆ ಗಣೇಶ್ರ ಸಾಹಸಕ್ಕೆ ಬೆಂಬಲ ನೀಡಿ...ಅಂದಹಾಗೆ ಗಣೇಶ್ ಕೃತಿಗಾಗಿ ಕಾಲ್ ಮಾಡಿ ೯೪೪೮೨೪೩೧೨೭
* ಸ್ಟೀವನ್ ರೇಗೊ, ದಾರಂದಕುಕ್ಕು

Wednesday, June 8, 2011

ಪ್ರಕಾಶ್ ಪಂಚ್ನಾಮ !


ಇದು ಬಾಬಾ ಕತೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಮಹಿಳೆಯೊಬ್ಬರ ಸಲ್ವಾರ್ ಕಮೀಜ್ ಧರಿಸಿಕೊಂಡು ಬಾಬಾ ಓಡುತ್ತಿದ್ದಾಗ ದಿಲ್ಲಿಯ ಪೊಲೀಸರು ಬಾಬಾರನ್ನು ಬಂಧನ ಮಾಡಿದ್ದಾರೆ ಎಂದು ಕೆಲವು ದಿನಗಳ ಹಿಂದೆ ದೇಶದ ಪ್ರಮುಖ ಪತ್ರಿಕೆಗಳು, ಮಾಧ್ಯಮಗಳು ವರದಿ ಮಾಡಿತ್ತು. ಇದೇ ಬಾಬಾರನ್ನು ಒಂದು ಐಟಂ ಎಂದು ಪರಿಗಣಿಸಿಕೊಂಡು ದೇಶದ ಖ್ಯಾತ ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿ ಕಾರ್ಟೂನ್ ಕಳುಹಿಸಿಕೊಟ್ಟಿದ್ದಾರೆ. ಕಾರ್ಟೂನ್ ಬಹಳ ಬೊಂಬಾಟ್ ಆಗಿದೆ ಅಲ್ವಾ..?

ಫ್ಯಾಷನ್ ಲೋಕದ ನ್ಯೂ ಡಿಸೈನರ್ ಲೀ


ಕ್ರಿಕೆಟ್ ವಿಷಯಕ್ಕೆ ಬಂದರೆ ಆತ ವಿಶ್ವದ ಅತೀ ವೇಗದ ಬೌಲರ್. ರ್ಯಾಂಪ್ ಲೋಕಕ್ಕೆ ಬಂತು ನಿಂತರೆ ಈ ವಾಸ್ ಎ ಪ್ಯಾಶನ್ ಡಿಸೈನರ್. ಸೋ ಯಾರಾತಾ ಎಂದು ಕೇಳಿದ್ರೆ... ಆಸೀಸ್ ತಂಡದ ವೇಗದ ಬೌಲರ್ ಬ್ರೆಟ್ ಲೀ ಮಾರಾಯ್ರೆ....

ಕ್ರಿಕೆಟ್ ವಿಷಯಕ್ಕೆ ಬಂದರೆ ಆತ ವಿಶ್ವದ ಅತೀ ವೇಗದ ಬೌಲರ್. ವೇದಿಕೆಯ ಮೇಲೆ ನಿಂತು ಗಿಟಾರ್ ವಿದ್ ಮೈಕ್ ಕೈಯಲ್ಲಿ ಹಿಡಿದು ನಿಂತರೆ ಆತ ಪಕ್ಕಾ ಒಬ್ಬ ರಾಕ್ ತಾರೆ. ರ್ಯಾಂಪ್ ಲೋಕಕ್ಕೆ ಬಂತು ನಿಂತರೆ ಈ ವಾಸ್ ಎ ಪ್ಯಾಶನ್ ಡಿಸೈನರ್. ಸೋ ಯಾರಾತಾ ಎಂದು ಕೇಳಿದ್ರೆ... ಆಸೀಸ್ ತಂಡದ ವೇಗದ ಬೌಲರ್ ಬ್ರೆಟ್ ಲೀ.
ಕ್ರಿಕೆಟ್ ಜಗತ್ತಿನ ಎನ್ಸೈಕ್ಲೋಪಿಡಿಯಾದಲ್ಲಿ ಬ್ರೆಟ್ಲೀ ಹೆಸರು ಕಂಗೊಳಿಸುತ್ತಿರೋದು ಕ್ರಿಕೆಟ್ ಪ್ರಿಯರಿಗೆ ಗೊತ್ತೇ ಇರೋ ವಿಚಾರ. ಆದರೆ ಬ್ರೆಟ್ ಲೀ ಕ್ರಿಕೆಟ್ ಹೊರತು ಏನೂ ಮಾಡುತ್ತಾರೆ ಎನ್ನುವ ಕೌತುಕದ ಪ್ರಶ್ನೆ ಸದಾ ಕಾಲ ಅವರ ಅಭಿಮಾನಿಗಳಿಗೆ ಕಾಡುತ್ತಾ ಇರುತ್ತದೆ. ಅದರಲ್ಲೂ ಬ್ರೆಟ್ ಲೀ ದೇಶದ ಮಹಾನ್ ಹಿನ್ನೆಲೆ ಗಾಯಕಿ ಆಶಾಜೀ ಜತೆಯಲ್ಲಿ ಹಾಡುವ ಆಲ್ಬಂಗಳಿರಲಿ...ಕೊಲ್ಕತ್ತಾದ ಚಾರಿಟಿ ಶೋಗಳಲ್ಲಿ ನಿಂತು ಕುಣಿಯುವ ದೃಶ್ಯಗಳಿರಲಿ ಎಲ್ಲವೂ ಎಲ್ಲರಿಗೂ ಗೊತ್ತಿರುವಂತದ್ದೇ ಮಾರಾಯ್ರೆ.
ಆದರೆ ಬ್ರೆಟ್ ಲೀ ಒಳಗೊಬ್ಬ ಪ್ಯಾಶನ್ ಡಿಸೈನರ್ ಇದ್ದಾನೆ ಎನ್ನುವ ವಿಚಾರ ಎಷ್ಟು ಮಂದಿಗೆ ತಾನೇ ಗೊತ್ತು. ೨೦೦೧ ಮೇ ೧ರಂದು ಬ್ರೆಟ್ ಲೀ ತನ್ನ ವಿನ್ಯಾಸದ ‘ಬ್ರೆಟ್ ಲೀ ಕಲೆಕ್ಷನ್’ ಎನ್ನುವ ಲೆಬೆಲ್ ಇರುವ ವರೈಟಿ ಬಟ್ಟೆಗಳನ್ನು ಮಾರುಕಟ್ಟೆಗೆ ಇಳಿಯಬಿಟ್ಟಿದ್ದರು. ಈ ಬಟ್ಟೆಗಳು ಸ್ಟೈಲಿಶ್, ಮೊಡರ್ನ್ ಹಾಗೂ ಕಂಪಾರ್ಟ್ಟೇಬಲ್ ಝೋನ್ಗಳಲ್ಲಿ ಇರುವಂತೆ ಬ್ರೆಟ್ ಲೀ ನಿಗಾ ವಹಿಸಿಕೊಳ್ಳುತ್ತಾರೆ. ಅದರ ಜತೆಯಲ್ಲಿ ಈ ಬಟ್ಟೆಗಳಲ್ಲಿ ಬ್ರೆಟ್ ಲೀಯ ಸಹಿ ಕೂಡ ಒಳಗೊಂಡಿದೆ.
ಅಂದಹಾಗೆ ಆಸೀಸ್ ತಂಡಕ್ಕೆ ಸೇರುವ ಮುಂಚೆನೇ ಬ್ರೆಟ್ ಲೀ ಒಬ್ಬ ಪ್ಯಾಶನ್ ಡಿಸೈನರ್. ಸಿಡ್ನಿಯ ಬರ್ಕ್ಲೇ ಮೆನ್ಸ್ ವೇರ್ ಎನ್ನುವ ಕಂಪನಿಯಲ್ಲಿ ಬ್ರೆಟ್ ಲೀ ದುಡಿಯುತ್ತಿದ್ದರು. ಅಲ್ಲಿಯ ಜ್ಞಾನ ಅವರ ಪ್ಯಾಶನ್ ಪೀಲ್ಡ್ನಲ್ಲಿ ವರ್ಕ್ ಔಟ್ ಆಯಿತು. ಆದರೆ ಅವರು ಕ್ರಿಕೆಟ್ನಲ್ಲಿ ಬೆಳೆಸಿಕೊಂಡಿದ್ದ ಆಸಕ್ತಿ ವಿಶ್ವದ ವೇಗದ ಬೌಲರ್ನ್ನಾಗಿ ಮಾಡಿತು. ಬ್ರೆಟ್ ಲೀ ವಿನ್ಯಾಸದ ಬಟ್ಟೆಗಳು ಬರೀ ಆಸೀಸ್ನ ಮಾರುಕಟ್ಟೆಯಲ್ಲಿ ಮಾತ್ರ ಆರಂಭದಲ್ಲಿ ಸಿಗುತ್ತಿತ್ತು. ಆದರೆ ಈಗ ವಿಶ್ವದ ಬಹುತೇಕ ಭಾಗಗಳಲ್ಲಿ ‘ಬ್ರೆಟ್ ಲೀ ಕಲೆಕ್ಷನ್’ ಎನ್ನುವ ರಿಟೈಲ್ ಶಾಪ್ಗಳಿವೆ. ಇದರ ಉಸ್ತುವಾರಿಯನ್ನು ಬ್ರೆಟ್ ಲೀ ಸಹೋದರ ಶೇನ್ ಲೀ ನೋಡಿಕೊಳ್ಳುತ್ತಿದ್ದಾರೆ.
ಬ್ರೆಟ್ ಲೀ ಕಲೆಕ್ಷನ್ನಲ್ಲಿ ಬಣ್ಣಗಳದ್ದು ವಿಶೇಷ ಪಾತ್ರವಿದೆ. ಅದಷ್ಟೂ ತಾಜಾ ಬಣ್ಣಗಳಂದರೆ ಲೀಗೆ ಎಲ್ಲಿಲ್ಲದ ಪ್ರೀತಿ. ಕಡು ಆಕಾಶ ನೀಲಿ, ಶುದ್ದ ಬಿಳಿ, ನೇರಳೆ, ಲೈಟ್ ಆರೆಂಜ್, ಕಪ್ಪು, ಹಸಿರು ಹೀಗೆ ಬಣ್ಣಗಳ ಆಯ್ಕೆಯಲ್ಲಿ ಬ್ರೆಟ್ ಲೀ ಬಹಳ ಹುಷಾರು. ಈ ಬಣ್ಣಗಳಿಗೆ ತಕ್ಕಂತೆ ಇಟಲಿಯನ್ ಕೋಟನ್, ನೈಲಾನ್, ಸಾಪ್ಟ್ ಕೋಟನ್ಗಳ ಜತೆಯಲ್ಲಿ ಇತರ ಬಟ್ಟೆಗಳನ್ನು ಬಳಸಿಕೊಂಡು ಡಿಸೈನಿಂಗ್ ಬಟ್ಟೆಗಳನ್ನು ತಯಾರಿಸುತ್ತಾರೆ. ಅಂದಹಾಗೆ ಬ್ರೆಟ್ ಲೀ ಒಂದು ಅವತಾರ ಈಗ ಎಲ್ಲರಿಗೂ ಗೊತ್ತಾಯಿತು ಅಲ್ವಾ...?
(ವಿಜಯ ಕರ್ನಾಟಕದ ಲವಲವಿಕೆಯಲ್ಲಿ ಮೇ ೨೩,೨೦೧೧ರಂದು ಪ್ರಕಟವಾದ ಲೇಖನ.)

Friday, June 3, 2011

ನೀತು ಮನದ ಮಾತು


ನಿರ್ಮಾಪಕ ಸರಿಯಾಗಿ ಹಣ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿ ಚಿತ್ರದ ಅರ್ಧ ಹಕ್ಕುಗಳನ್ನು ಕೊಂಡು ಮೆರೆದಾಡಿದವರು ಗಾಂಽನಗರದಲ್ಲಿ ಕಾಣಸಿಗಬಹುದು. ಆದರೆ ಒಂಚೂರು ಸಂಭಾವನೆ ಪಡೆಯದೇ ನಟಿಸಿದ ನಾಯಕಿಯೊಬ್ಬಳ ಕತೆ ಕೇಳಿ...
ನಿರ್ಮಾಪಕ ಸರಿಯಾಗಿ ಹಣ ಕೊಟ್ಟಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿ ಚಿತ್ರದ ಅರ್ಧ ಹಕ್ಕುಗಳನ್ನು ಕೊಂಡು ಮೆರೆದಾಡಿದವರು ಗಾಂಽನಗರದಲ್ಲಿ ಕಾಣಸಿಗಬಹುದು. ನಿರ್ಮಾಪಕ ಚಿತ್ರೀಕರಣದ ಸೆಟ್ನಲ್ಲಿ ಕಿರಿಕಿರಿ ಮಾಡ್ತಾರೆ... ಎಂದು ಪ್ರೆಸ್ ಮುಂದೆ ನಿಂತು ಕಣ್ಣೀರು ಹಾಕುವ ಸಿಸ್ಟಂಗಳು ಗಾಂಽನಗರದಲ್ಲೆ ಬೇಜಾನ್ ಆಗಿದೆ.
ಆದರೆ ಇದು ನನ್ನ ಚಿತ್ರ, ನಿರ್ಮಾಪಕ ನನ್ನ ಪಾಲಿನ ದೇವರು ಎಂದುಕೊಂಡು ಚಿತ್ರ ಮಾಡುವವರು ಗಾಂಽನಗರದ ಗಲ್ಲಿಯಲ್ಲಿ ಸಿಗುತ್ತಾರಾ ಎನ್ನುವ ಪ್ರಶ್ನೆಗೆ ಇಲ್ಲೊಂದು ಅನ್ಸರ್ ಸಿಕ್ಕಿದೆ.
ಚಿತ್ರ ಕಾಸರಗೋಡು ಚಿನ್ನಾ ನಿರ್ದೇಶನದ ‘ಉಜ್ವಾಡು’ ಕನ್ನಡದಲ್ಲಿ ಹೇಳುವುದಾದರೆ ‘ಬೆಳಕು’ ಈ ರೀತಿ ಉದಾರತೆ ತೋರಿ ನಟಿಸಿದ ನಾಯಕಿ ಗ್ಲಾಮರ್ ಡಾಲ್ ನೀತು.
ಗಾಳಿಪಟ, ಪೂಜಾರಿ ಸೇರಿದಂತೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿದ ನೀತು ‘ಉಜ್ವಾಡು’ ಚಿತ್ರದಲ್ಲಿ ಯಾಕೇ ಸಂಭಾವನೆ ಪಡೆದುಕೊಂಡಿಲ್ಲ ಎಂದು ಕೇಳಿದ್ರೆ ‘ಅದು ನನ್ನ ಮಾತೃಭಾಷೆಯ ಚಿತ್ರ. ಇಲ್ಲಿ ಸಂಭಾವನೆ ಬೇಕಾಗಿಲ್ಲ. ಭಾಷೆಯ ಮೇಲಿನ ಕಾಳಜಿ ಇರಬೇಕು. ಚಿತ್ರ ನನ್ನದು ಎನ್ನುವ ಭಾವನೆ ಇದ್ದಾರೆ ಸಾಕು ಎನ್ನುತ್ತಾರೆ ನೀತು.
‘ಉಜ್ವಾಡು’ ಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ಚಿತ್ರೀಕರಣದ ಸಮಯದಲ್ಲಿ ನಡೆದ ಒಂದು ಸನ್ನಿವೇಶವನ್ನು ಲವಲವಿಕೆಯ ಮುಂದೆ ಹೇಳುತ್ತಿದ್ದರು.
‘ಚಿತ್ರದ ಬಹುತೇಕ ಭಾಗಗಳು ಶೂಟ್ ಆಗಿತ್ತು. ನೀತು ಅವರ ಒಂದು ಕ್ಲೈಮಾಕ್ಸ್ ಸೀನ್ ಬಾಕಿ ಉಳಿದಿತ್ತು. ಅಷ್ಟರಲ್ಲಿ ನನ್ನ ಮೊಬೈಲ್ಗೆ ‘ನೀತು ತಂದೆ ಹೋಗಿಬಿಟ್ಟರು ’ಎನ್ನುವ ಮೆಸೇಜ್ ಬಂದು ಬಿದ್ದಿತ್ತು. ಆದರೆ ನೇರವಾಗಿ ನೀತು ಬಳಿಯಲ್ಲಿ ಹೇಳಲಾಗದ ಪರಿಸ್ಥಿತಿ. ಬೇರೊಬ್ಬರ ಮೂಲಕ ಹೇಳಿ ಮಾಡಿಸಿದೆ. ನೀತು ಅಲ್ಲಿಂದ ಹೊರಟು ನಿಂತರು. ನೀತು ಹತ್ತು ದಿನಗಳ ಮಟ್ಟಿಗೆ ಕೈಗೆ ಸಿಗೋಲ್ಲ ಎಂದು ಚಿತ್ರತಂಡದ ಸದಸ್ಯರು ಹೇಳಿಕೊಳ್ಳುತ್ತಿದ್ದರು. ಆದರೆ ಮರುದಿನ ತಂದೆಯ ಕ್ರಿಯಾವಿದಿಗಳನ್ನು ಮುಗಿಸಿಕೊಂಡು ನೀತು ಶೂಟಿಂಗ್ ಸ್ಪಾಟ್ಗೆ ಹಾಜರಾಗಿದ್ದರು. ಎಲ್ಲರಿಗೂ ಅಚ್ಚರಿಯಾಗಿತ್ತು. ತಂದೆಯ ಮರಣದ ನಂತರ ನೀತು ಯಾವ ರೀತಿಯಲ್ಲಿ ಚಿತ್ರೀಕರಣದಲ್ಲಿ ಸ್ಪಂದಿಸುತ್ತಾರೆ ಎನ್ನುವ ಹೆದರಿಕೆ ಇತ್ತು. ನೀತು ಎಂದಿನ ಲವಲವಿಕೆಯಲ್ಲಿ ಚಿತ್ರೀಕರಣ ಮುಗಿಸಿ ತಾನು ಎಲ್ಲ ನಾಯಕಿ, ನಾಯಕರಂತೆ ಅಲ್ಲ ಎನ್ನುವುದನ್ನು ಸಾಭೀತು ಮಾಡಿ ಬಿಟ್ಟ್ರು ಎಂದು ಚಿನ್ನಾ ನೀತು ಕುರಿತು ಹೇಳುತ್ತಿದ್ದರು.
ತುಂಬಾ ಬೇಸರದ ಟೈಮ್ನಲ್ಲಿ ಈ ರೀತಿಯಲ್ಲಿ ವರ್ತಿಸಲು ನೀತುಗೆ ಹೇಗೆ ಸಾಧ್ಯವಾಯಿತು ಎಂದು ಚಿನ್ನಾ ಕೇಳಿದ್ದರಂತೆ, ಅದಕ್ಕೆ ನೀತು ಹೇಳಿದಿಷ್ಟು ‘ ನೋಡಿ ಸಾರ್... ನಿರ್ಮಾಪಕ ನಮ್ಮನ್ನು ನಂಬಿ ಚಿತ್ರಕ್ಕೆ ಬಹಳಷ್ಟು ಹಣ ಸುರಿಯುತ್ತಾರೆ. ನಮ್ಮಿಂದ ಅಂತಹ ನಿರ್ಮಾಪಕನಿಗೆ ಅನ್ಯಾಯವಾಗಕೂಡದು. ಬದುಕಿನಲ್ಲಿ ಏಳುಬೀಳುಗಳು ಇದ್ದೇ ಇರುತ್ತದೆ. ಎಲ್ಲವನ್ನು ಹೊಂದಿಕೊಂಡು ಮುನ್ನಡೆಯಬೇಕು’ ಎಂದರಂತೆ !
ನಿಜಕ್ಕೂ ಒಬ್ಬ ಚಿತ್ರ ಕಲಾವಿದ ಈ ರೀತಿಯಲ್ಲಿ ವರ್ತಿಸಲು ಆರಂಭಿಸಿದರೆ ಗಾಂಽನಗರದ ಬಹಳಷ್ಟು ನಿರ್ಮಾಪಕರು ಬೀದಿಗೆ ಬೀಳೋದು ತಪ್ಪುತ್ತದೆ ಅಲ್ವಾ...?
ವಿಜಯ ಕರ್ನಾಟಕದ ಲವಲವಿಕೆಯ ಪುರವಣಿಯಲ್ಲಿ ಮೇ ೨೧,2011ರಂದು ಪ್ರಕಟವಾಗಿದೆ.