* ಸ್ಟೀವನ್ ರೇಗೊ, ದಾರಂದಕುಕ್ಕು
ನೇತ್ರಾವತಿ ಇದು ಕರಾವಳಿಯ ಜೀವನದಿ. ಈ ನದಿಯನ್ನು ನಂಬಿಕೊಂಡು ಅದೆಷ್ಟೋ ಮಂದಿ ಬದುಕು ಕಟ್ಟುತ್ತಿದ್ದಾರೆ ಎನ್ನುವುದು ನೇತ್ರಾವತಿ ನೀರು ಕುಡಿದ ಮಂದಿಗಂತೂ ಗೊತ್ತೇ ಇದೆ. ಎತ್ತಿನಹೊಳೆ ಸೇರಿದಂತೆ ನದಿ ತಿರುಗಿಸುವ ಯೋಜನೆಗಳ ಮೂಲಕ ಇಂತಹ ನೇತ್ರಾವತಿಯನ್ನು ಕಟ್ಟಿ ಹಾಕುವಂತಹ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ. ನೇತ್ರಾವತಿ ನದಿಯ ಹರಿವು ಜತೆಗೆ ಅದರ ಉಳಿವು ಎಷ್ಟು ಅಗತ್ಯ ಎನ್ನುವ ಕುರಿತು ಜಿಲ್ಲೆಯ ನಾನಾ ವ್ಯಂಗ್ಯ ಚಿತ್ರಕಾರರಿಂದ ನೇತ್ರಾವತಿ ಉಳಿಸಿ ವ್ಯಂಗ್ಯಚಿತ್ರ ಪ್ರದರ್ಶನದ ಮೂಲಕ ಶ್ರೀಸಾಮಾನ್ಯನಿಗೆ ಜಾಗೃತಿ ಬೀಜ ಬಿತ್ತುವ ವಿನೂತನ ಜಾಗೃತಿಯಾಟ ಮಂಗಳೂರಿನ ಆರ್ಕಿಡ್ ಗ್ಯಾಲರಿಯಲ್ಲಿ ಡಿ.೨ ರಿಂದ ೪ರ ವರೆಗೆ ನಡೆಯಲಿದೆ.
ಕರಾವಳಿ ಯುವ ಸಿಂಚನ, ವನ್ಯ ಚಾರಣ ಬಳಗ ಹಾಗೂ ಆರ್ಕಿಡ್ ಗ್ಯಾಲರಿ ಜತೆ ಸೇರಿಕೊಂಡು ಅಪರೂಪದ ನದಿ ಉಳಿಸುವ ಜಾಗೃತಿಯಾಟಕ್ಕೆ ಮುನ್ನುಡಿ ಬರೆಯಲಾಗುತ್ತಿದೆ. ಈ ಹಿಂದೆ ಕದ್ರಿ ಪಾರ್ಕ್ ಸೇರಿದಂತೆ ಪಣಂಬೂರು ಬೀಚ್ ನಲ್ಲಿ ಅಂಚೆ ಕಾರ್ಡ್‌ಗಳಲ್ಲಿ ನೇತ್ರಾವದಿ ನದಿ ತಿರುವಿನ ವಿರುದ್ಧ ವಿನೂತನ ಸಹಿ ಚಳವಳಿಯ ಮೂಲಕ ಜಾಗೃತಿ ಅಭಿಯಾನ ಮಾಡಿತ್ತು. ಇವುಗಳ ಜತೆಗೆ ಉಜಿರೆ, ಚಾರ್ಮಾಡಿ, ಕಕ್ಕಿಂಜೆ, ಬೆಳ್ತಂಗಡಿ, ಮಡಂತ್ಯಾರ್‌ಗಳಲ್ಲಿ ನಡೆಸಿದ ಜನಜಾಗೃತಿ, ಮಂಗಳೂರಿನಲ್ಲಿ ನಡೆಸಿದ ಜಾಥಾ, ಜಿಲ್ಲೆಯ ನಾನಾ ಶಾಲಾ- ಕಾಲೇಜುಗಳಲ್ಲಿ ನಡೆಸಿದ ನದಿ ತಿರುವಿನ ಕುರಿತಾದ ಉಪನ್ಯಾಸ ಕಾರ‍್ಯಕ್ರಮದ ಮೂಲಕ ಜಿಲ್ಲೆಯ ಜೀವನದಿ ನೇತ್ರಾವತಿಯ ಉಳಿವಿಗಾಗಿ ಮಾಡಿದ ಸಾಹಸಗಳು ಅಪಾರ ಜಾಗೃತಿಗೆ ಪ್ರೇರಣೆಯಾಗಿತ್ತು.
ಎಚ್ಚರಿಕೆಯ ಕರೆಗಂಟೆ:
ನೇತ್ರಾವತಿ ನದಿ ತಿರುವು ಯೋಜನೆ ಅಥವಾ ಎತ್ತಿನ ಹೊಳೆ ಯೋಜನೆಯಿಂದ


ನೇತ್ರಾವತಿ ನದಿಗೆ ಯಾವ ರೀತಿಯಲ್ಲಿ ಪೆಟ್ಟು ಬೀಳಲಿದೆ. ಜಿಲ್ಲೆಯ ರಾಜಕೀಯ ಪಟುಗಳು ಯಾವ ರೀತಿಯಲ್ಲಿ ನೇತ್ರಾವತಿ ನದಿಯನ್ನು ಬಣ್ಣಿಸುತ್ತಿದ್ದಾರೆ. ಶ್ರೀಸಾಮಾನ್ಯ ನದಿಯನ್ನು ನೋಡುವ ರೀತಿ, ನದಿ ತಿರುಗಿಸುವ ಕೆಲಸದಿಂದ ಜಿಲ್ಲೆಯ ಜನರಿಗೆ ಬೀಳುವ ಪೆಟ್ಟು ಇತ್ಯಾದಿಗಳನ್ನು ವ್ಯಂಗ್ಯ ಚಿತ್ರಗಳಲ್ಲಿ ಜೋಡಿಸಲಾಗಿದೆ. ಈ ವ್ಯಂಗ್ಯ ಚಿತ್ರಗಳಲ್ಲಿ ಹಾಸ್ಯದ ಜತೆಗೆಯಲ್ಲಿಯೇ ವಿಡಂಬನೆ ಇದ್ದರೂ ಗಂಭೀರವಾದ ಯೋಚನೆಗಳಿವೆ, ಎಚ್ಚರಿಕೆಯಿದೆ, ಜಾಗೃತಿ ಹಾಗೂ ಪ್ರಜ್ಞೆ ಮೂಡಿಸುವಂತಹ ಚಿಂತನೆಗಳಿಂದ ತುಂಬಿ ಹೋಗಿದೆ. ಶ್ರೀಸಾಮಾನ್ಯನಿಗೆ ಅರ್ಥವಾಗದ ವಿಚಾರಗಳನ್ನು ಇಂದಿನ ವ್ಯವಸ್ಥೆ ಯಾವ ರೀತಿಯಲ್ಲಿ ತೂಗು ಹಾಕುತ್ತಿದೆ ಎನ್ನುವ ವಿಚಾರಗಳಿಗೆ ವ್ಯಂಗ್ಯದ ಮೂಲಕ ಉತ್ತರ ನೀಡಲಾಗಿದೆ.
ನದಿ ಉಳಿಸಲು ಕಾರ್ಟೂನ್ ಟಚ್
ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ವ್ಯಂಗ್ಯ ಚಿತ್ರ ಕಲಾವಿದರಾದ ಜಾನ್ ಚಂದ್ರನ್, ಯತಿ ಸಿದ್ಧಕಟ್ಟೆ, ಜೀವನ್, ಹರಿಣಿ, ಅಮೃತ್ ವಿಟ್ಲ, ಸತೀಶ್ ಆಚಾರ್ಯ, ದಿನೇಶ್ ಕುಕ್ಕುಜಡ್ಕ ಮೊದಲಾದವರು ಸೇರಿಕೊಂಡು ನೇತ್ರಾವತಿ ನದಿ ಉಳಿವು, ಎತ್ತಿನ ಹೊಳೆ ಹಾಗೂ ನದಿ ತಿರುಗಿಸುವ ಯತ್ನ ದ ವಿರುದ್ಧ ಜಾಗೃತಿ ಹುಟ್ಟು ಹಾಕುವ ವಿನೂತನ ಮಾದರಿ ಕಾರ್ಟೂನ್‌ಗಳನ್ನು ತಮ್ಮ ಬತ್ತಲಿಕೆಯಿಂದ ಹರಿಯಬಿಟ್ಟಿದ್ದಾರೆ. ಡಿ. ೨ರಂದು ಈ ವ್ಯಂಗ್ಯ ಚಿತ್ರ ಪ್ರದರ್ಶನದ ಜತೆಯಲ್ಲಿ ಉಪನ್ಯಾಸ ಕಾರ‍್ಯಕ್ರಮಗಳು ನಡೆಯಲಿದೆ. ನೇತ್ರಾವತಿ ನದಿ ತಿರುವು ಹೋರಾಟ ಸಮಿತಿಯ ಡಾ. ನಿರಂಜನ್ ರೈ ವಿಶೇಷ ಉಪನ್ಯಾಸ ನೀಡಲಿದ್ದಾರೆ.
.....
(mangalore vijyakarnakta daily supliment namma karvali my article published on dec 1, 2013)
No comments:
Post a Comment