Tuesday, November 26, 2013

ಬರಲಿದೆ ತ್ರಿ ಭಾಷಾ ಕೊಂಕಣಿ ಶಬ್ದಕೋಶ

ಸ್ಟೀವನ್ ರೇಗೊ, ದಾರಂದಕುಕ್ಕು ಕೊಂಕಣಿ ಭಾಷಾ ಲೋಕದಲ್ಲಿ ಇದೊಂದು ವಿಶಿಷ್ಟ ಪ್ರಯತ್ನ. ಇಂಗ್ಲೀಷ್-ಕನ್ನಡ-ಕೊಂಕಣಿ ಭಾಷಾ ಸಂವಹನ ಸಂಪರ್ಕದಲ್ಲಿ ದೂರಗಾಮಿ ಕ್ರಾಂತಿಯ ನಿರೀಕ್ಷೆ. ಮೂರು ಭಾಷೆಗಳ ಶಬ್ದಕೋಶ ತಯಾರಿಸುವ ಹೆಜ್ಜೆ. ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಆಧುನಿಕ ಸ್ವರೂಪದ ಅರ್ಥಕೋಶಗಳು ಬೆಳೆಯುವಲ್ಲಿ ಕ್ರೈಸ್ತ ಮಿಷನರಿಗಳು ತಮ್ಮದೇ ಉದ್ದೇಶಕ್ಕಾಗಿ ಪ್ರಥಮ ಹೆಜ್ಜೆ ಇಟ್ಟಿದ್ದು, ಇಂದು ಆ ಭಾಷೆಗಳ ಅಭಿವೃದ್ಧಿಯಾಗುವಲ್ಲಿ ಅಂತಹ ಅರ್ಥಕೋಶಗಳು ಪ್ರಮುಖ ಪಾತ್ರ ವಹಿಸಿವೆ. ಕರಾವಳಿ ಕರ್ನಾಟಕದಲ್ಲಿ ತುಳು, ಕನ್ನಡ, ಕೊಂಕಣಿ, ಕುಂದಗನ್ನಡ ಹಾಗೂ ಬ್ಯಾರಿ ಭಾಷೆಗಳು ಪ್ರಚಲಿತದಲ್ಲಿವೆ. ಈ ಪೈಕಿ ಕನ್ನಡ ಹಾಗೂ ಕೊಂಕಣಿ ಸಂವಿಧಾನದ ೮ನೇ ಪರಿಚ್ಛೇದದಲ್ಲಿರುವ ರಾಷ್ಟ್ರೀಯ ಭಾಷೆಗಳಾಗಿವೆ. ಇವೆರಡೂ ಭಾಷೆಗಳಲ್ಲಿ ಹಲವಾರು ಅರ್ಥಕೋಶಗಳು ಬೆಳೆದು ಬಂದಿವೆ. ಅದಾಗ್ಯೂ ದೊಡ್ಡ ಮಟ್ಟಿನಲ್ಲಿ ಕನ್ನಡ-ಕೊಂಕಣಿ ಕೊಡುಕೊಳು ನಡೆದು ಬಂದಿಲ್ಲ. ಇದಕ್ಕೆ ಕೊಂಕಣಿ ಹಾಗೂ ಕನ್ನಡ ಭಾಷೆಗಳೆರಡನ್ನು ಏಕ ಕಾಲದಲ್ಲಿ ತಿಳಿಯಲು ಪೂರಕವಾಗುವ ಅರ್ಥಕೋಶ ಇನ್ನೂ ಬಾರದಿರುವುದು ಒಂದು ಕಾರಣವಾಗಿರಬಹುದು ಎನ್ನುವುದು ಶಬ್ದಕೋಶದ ತಯಾರಿಯಲ್ಲಿರುವ ಪ್ರೊ. ಸ್ಟೀವನ್ ಕ್ವಾಡ್ರಸ್ ಅವರ ಮಾತು. ಭರದ ಸಿದ್ಧತೆ: ಮಂಗಳೂರಿನ ಪಥದರ್ಶಿನಿ ಸೇವಾ ಟ್ರಸ್ಟ್ ಒಂದು ನೋಂದಾಯಿತ ಸಾರ್ವಜನಿಕ ಸೇವಾ ಸಂಘಟನೆಯಾಗಿದ್ದು , ಭಾರತ ಸರಕಾರದಿಂದ ಮಾನ್ಯತೆ ಹೊಂದಿದೆ. ಬಡ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಹಾಗೂ ವೃತ್ತಿ ಮಾರ್ಗದರ್ಶನದ ವ್ಯವಸ್ಥೆ ಮಾಡುವುದು ಇದರ ಮೂಲ ಉದ್ದೇಶವಾಗಿದ್ದು ಈಗಾಗಲೇ ‘ಮಾರ್ಗ’ ಹಾಗೂ ‘ಯಶಸ್ಸ್’ ಎಂಬ ಎರಡು ವೃತ್ತಿ ಮಾರ್ಗದರ್ಶನ ಪುಸ್ತಕಗಳನ್ನು ಈ ಟ್ರಸ್ಟ್‌ನ ವತಿಯಿಂದ ಹೊರಡಿಸಲಾಗುತ್ತಿದೆ. ಇದರ ಅಡಿಯಲ್ಲಿ ಈ ಕೊಂಕಣಿ ತ್ರಿ ಭಾಷಾ ಶಬ್ದಕೋಶವೊಂದು ಸಿದ್ಧವಾಗುತ್ತಿದೆ. ನಾಡಿನ ಖ್ಯಾತ ಭಾಷಾ ವಿದ್ವಾಂಸರಗಳಲ್ಲಿ ಒಬ್ಬರಾದ ಫಾ.ಬೇಸಿಲ್ ವಾಸ್ ಹಾಗೂ ಪ್ರಾಧ್ಯಾಪಕ ಸ್ಟೀವನ್ ಕ್ವಾಡ್ರಸ್ ಪೆರ್ಮುದೆ ಅವರು ಕಳೆದ ಹಲವು ವರ್ಷಗಳಿಂದ ಸಿದ್ದಪಡಿಸುತ್ತಿದ್ದ ಈ ಇಂಗ್ಲೀಷ್-ಕನ್ನಡ-ಕೊಂಕಣಿ ಅರ್ಥಕೋಶ ಈಗ ಅಂತಿಮ ಹಂತ ತಲುಪಿದ್ದು ಫೆಬ್ರವರಿ ೨೦೧೪ರ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ. ೫೦ ಸಾವಿರ ಪದಗಳು ಕೊಂಕಣಿ ಭಾಷಾ ಲೋಕದಲ್ಲಿ ವಿಶಿಷ್ಟ ಪ್ರಯತ್ನವಾದ ಈ ತ್ರಿಭಾಷಾ ಕೊಂಕಣಿ ಶಬ್ದಕೋಶದಲ್ಲಿ ಸುಮಾರು ೫೦,೦೦೦ ಇಂಗ್ಲೀಷ್ ಶಬ್ದಗಳಿಗೆ ಕನ್ನಡ ಹಾಗೂ ಕೊಂಕಣಿಯಲ್ಲಿ ಅರ್ಥ ಸಾಮ್ಯ ಪದಗಳು ಸಿಗಲಿವೆ. ಸುಮಾರು ೧೫೦೦ ಪುಟಗಳಲ್ಲಿ ಈ ಪುಸ್ತಕ ಬರಲಿದೆ. ಮುಖ್ಯವಾಗಿ ಇಂಗ್ಲೀಷ್- ಕೊಂಕಣಿ- ಕನ್ನಡ ಮೂರು ಭಾಷೆಗಳಲ್ಲಿ ಇರುವ ಕಾರಣ ಮೂರು ಭಾಷೆಗಳ ಶಬ್ದ ಭಂಡಾರಕ್ಕೆ ದೊಡ್ಡ ಕೊಡುಗೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯುವುದಿಲ್ಲ. ತ್ರಿ ಭಾಷೆಯಲ್ಲಿ ಇಂತಹ ಒಂದು ದೊಡ್ಡ ಪ್ರಯತ್ನ ಮಾಡಬೇಕು ಅಂದುಕೊಂಡಿದ್ದೆ. ಈಗ ಇದು ನನಸ್ಸಾಗುತ್ತಿದೆ. ಶಬ್ದಕೋಶದ ಬಹುತೇಕ ಕೆಲಸಗಳು ಕೊನೆಗೊಂಡಿದೆ. ಮುಖಪುಟ ಹಾಗೂ ಇನ್ನೂ ಕೆಲವು ಪುಟಗಳು ಬಾಕಿ ಉಳಿದಿದೆ. ಇದೊಂದು ಭಾಷಾ ಲೋಕಕ್ಕೆ ಅಪೂರ್ವ ಕೊಡುಗೆಯಾಗಲಿದೆ. -ಪ್ರೊ.ಸ್ಟೀವನ್ ಕ್ವಾಡ್ರಸ್, ಪೆರ್ಮುದೆ

No comments:

Post a Comment