Sunday, November 24, 2013

ಕೂದಲು ಇಲ್ಲದ ಮಂದಿಗೆ ಟ್ಯಾಟೋ ಹೇರ್

ಸ್ಟೀವನ್ ರೇಗೊ, ದಾರಂದಕುಕ್ಕು
ತಲೆ ಮೇಲೆ ಕೂದಲೇ ಇಲ್ಲದೇ ಬೋಳು ತಲೆಯ ಸಮಸ್ಯೆಯಿಂದ ಬಳಲುವವರ ದುಗುಡ ಆ ದೇವರಿಗೆ ಪ್ರೀತಿ. ಬೋಳು ತಲೆಯಿಂದ ಮುಕ್ತಿ ಪಡೆಯಬೇಕಾ..? ಎನ್ನುವ ಹತ್ತಾರು ಜಾಹೀರಾತುಗಳು ದಿನನಿತ್ಯ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಆದರೆ ಮಂಗಳೂರಿನ ಯುವಕರ ಟ್ಯಾಟೋ ತಂಡವೊಂದು ಯಾವುದೇ ಶಸ್ತ್ರ ಚಿಕಿತ್ಸೆ ಇಲ್ಲದೇ ತಲೆ ಮೇಲೆ ಕೂದಲು ಬೆಳೆಸುವ ಕೆಲಸದಲ್ಲಿ ತಲ್ಲೀನವಾಗಿದೆ. ಇದು ಯಾವುದೇ ಔಷಧಿ ಅಥವಾ ಇತರ ತಂತ್ರಗಾರಿಕೆಯ ಬದಲಾಗಿ ಬರೀ ಟ್ಯಾಟೋ ಸಾಧನಗಳನ್ನು ಆಯ್ಕೆ ಮಾಡಿಕೊಂಡು ಬೋಳು ತಲೆಯಲ್ಲಿ ಕೂದಲು ಬೆಳೆಸಲಾಗುತ್ತದೆ. ಹೇರ್ ಟ್ಯಾಟೂ ಟ್ರೀಟ್‌ಮೆಂಟ್: ಟ್ಯಾಟೂ ಲೋಕದಲ್ಲಿ ಇದೊಂದು ವಿಭಿನ್ನ ಹಾಗೂ ವಿಶಿಷ್ಟ ಪ್ರಯತ್ನ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಕಾರಣ ಅತೀ ಸೂಕ್ಷ್ಮಾತೀತ ಕೆಲಸ ಹಾಗೂ ಹೆಚ್ಚು ಸಮಯ, ತಾಳ್ಮೆಯ ಅಗತ್ಯತೆ ಬೇಕಾಗುತ್ತದೆ. ತಲೆಯ ಭಾಗವಾಗಿರುವುದರಿಂದ ಇಲ್ಲಿ ಕುಶಲ ಟ್ಯಾಟೂ ಕಲಾವಿದರಿಗೆ ಮಾತ್ರ ಅವಕಾಶ ನೀಡಬೇಕಾಗುತ್ತದೆ. ದೇಹದ ಕೈ, ಕಾಲು ಅಥವಾ ಇತರ ಭಾಗಗಳಲ್ಲಿ ಟ್ಯಾಟೂ ರಚನೆಗೆ ಹೆಚ್ಚಿನ ಕಾಳಜಿಯ ಅಗತ್ಯತೆ ಇರೋದಿಲ್ಲ. ಉಳಿದ ಭಾಗಕ್ಕಿಂತ ತಲೆಯ ಭಾಗದಲ್ಲಿ ಸೂಕ್ಷ್ಮ( ತೆಳು)ವಾದ ಚರ್ಮ ಇರುವುದರಿಂದ ಅಲ್ಲಿ ಹೆಚ್ಚು ಬಲ ಪ್ರಯೋಗಕ್ಕೆ ಅವಕಾಶವೇ ಇಲ್ಲ. ಎಲ್ಲಕ್ಕೂ ಮುಖ್ಯವಾಗಿ ಲಕ್ಷಾಂತರ ಚುಕ್ಕಿಗಳನ್ನು ಕೂದಲಿನಂತೆ ಬೆಳೆಸುವುದರಿಂದ ಹೆಚ್ಚು ಸಮಯ ಹಾಗೂ ಎರಡರಿಂದ ಮೂರು ಮಂದಿಯ ಟ್ಯಾಟೂ ಕೆಲಸಗಾರರ ಅಗತ್ಯತೆ ಇರುತ್ತದೆ ಎನ್ನುವುದು ಮಂಗಳೂರಿನ ಟ್ರೈಬಲ್ ಟ್ಯಾಟೂವಿನ ಮುಖ್ಯಸ್ಥ ನಾಗೇಶ್ ಪುತ್ತೂರು ಅವರ ಮಾತು. ಮಂಗಳೂರಿನ ವ್ಯಕ್ತಿಯೊಬ್ಬರಿಗೆ ತೀರಾ ಇತ್ತೀಚೆಗೆ ಹೇರ್ ಟ್ಯಾಟೂ ರಚನೆ ಮಾಡಿದ್ದೇವೆ. ಇಡೀ ಒಂದು ದಿನ ಬೇಕಾಗಿತ್ತು. ಮೂರು ಮಂದಿಯ ತಂಡ ರಚನೆ ಮಾಡಿದ್ದೇವು. ಅದರಲ್ಲೂ ಮುಖ್ಯವಾಗಿ ತಲೆಯ ಭಾಗವಾಗಿರುವುದರಿಂದ ಸೂಕ್ಷ್ಮ ಕೆಲಸ ಇತ್ತು. ಟ್ಯಾಟೂ ಸೂಜಿಗಳಿಂದ ಬಹಳ ಜೋಪಾನವಾಗಿ ಅಂತರಗಳನ್ನು ಇಟ್ಟುಕೊಂಡು ಚುಕ್ಕಿ ರಚನೆ ಮಾಡಿದೇವು. ಮೂರು ದಿನಗಳ ನಂತರ ಹೇರ್ ಟ್ಯಾಟೂ ಮಾಡಿಸಿಕೊಂಡವರು ನಮ್ಮ ಮುಂದೆ ಬಂದು ನಿಂತಾಗ ನಮಗೆ ಆಶ್ಚರ್ಯ ಎದುರಾಗಿತ್ತು ಎನ್ನುತ್ತಾರೆ ಟ್ಯಾಟೂ ರಚನೆಗಾರ ಮೋನಿಶ್ ಶೆಟ್ಟಿ. ಹೊಸ ಟ್ಯಾಟೂಗೆ ಹೊಸ ತಂತ್ರಜ್ಞಾನ ಪ್ಲಸ್: ಈಗಾಗಲೇ ಹುಡುಗಿಯರ ಕಣ್ಣಿನ ಹುಬ್ಬುಗಳನ್ನು ಟ್ಯಾಟೂ ಮೂಲಕ ಮಾಡಿದ್ದೇವೆ. ಅದು ಯಶಸ್ವಿ ಕೂಡ ಆಗಿತ್ತು. ಈ ಬಳಿಕ ಟ್ಯಾಟೂಗಳಲ್ಲಿ ೩ ಡಿ ಎಫೆಕ್ಟ್ ಗಳನ್ನು ಕೊಡಲು ಶುರು ಮಾಡಿದೇವು ಎಲ್ಲವೂ ಸಕ್ಸಸ್. ಈಗ ತಲೆಯಲ್ಲಿ ಕೂದಲು ಬೆಳೆಸುವ ಕೆಲಸದಲ್ಲಿ ಗೆದ್ದು ಬಂದಿದ್ದೇವೆ ಎನ್ನುತ್ತಾರೆ ಮತ್ತೊಬ್ಬ ಟ್ಯಾಟೂ ರಚನೆಗಾರ ಪ್ರದೀಪ್. ಕಳೆದ ಐದಾರು ವರ್ಷಗಳಿಂದ ಟ್ರೈಬಲ್ ಟ್ಯಾಟೂ ಮೂಲಕ ಮಂಗಳೂರಿನಲ್ಲಿ ಈ ಯುವಕರು ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದ್ದಾರೆ. ಅದರಲ್ಲೂ ಮುಖ್ಯವಾಗಿ ಆನಿಮೇಷನ್ ವರ್ಲ್ಡ್ ಹಾಗೂ ೩ ಡಿಗಳಲ್ಲಿ ಹೆಚ್ಚು ಪಳಗಿರುವ ಈ ಯುವಕರು ತಮ್ಮ ಟ್ಯಾಟೂಗಳಲ್ಲಿ ವಿಭ್ನಿನತೆ ಮೂಡಿಸುವಲ್ಲಿ ಗೆಲುವು ಸಾಧಿಸುತ್ತಿದ್ದಾರೆ. ಟೋಟಲಿ ಟ್ಯಾಟೂ ರಚನೆಯ ಯುವಕರ ತಂಡವೊಂದು ಕೂದಲು ಬೆಳೆಸುವ ಕೆಲಸ ಮೂಲಕ ಬಹಳಷ್ಟು ಮಂದಿಗೆ ನೆರವಾಗುತ್ತಿದ್ದಾರೆ ಎನ್ನುವ ಮಾತು ಮಾತ್ರ ಖುಷಿ ಕೊಡುತ್ತದೆ. ( vk main front page article published on 24.11.2013)

No comments:

Post a Comment