ಜೋರಾಗಿ ಗಾಳಿ ಬಂದರೆ ತರಗಲೆಯಂತೆ ಹಾರಿಬಿಡುವವ ಹೀರೋ ನಾ..? ಎನ್ನುವ ಡೌಟ್ ಅವನನ್ನು ನೋಡಿದ ಎಲ್ಲರಿಗೂ ಇತ್ತು. ಖುದ್ದು ಈ ಹುಡುಗನಿಗೂ ಅನ್ನಿಸಿದ್ದು ಇದೆ. ಆದರೆ ಆತನ ಅಣ್ಣ ಸೆಲ್ವ ಬಿಡಬೇಕಾಲ್ಲ ...ತೊಟ್ಟಿಯಲ್ಲಿ ಬಿದ್ದ ಕಸವನ್ನು ರಸ ಮಾಡುವವ ತನ್ನ ಸ್ವಂತ ತಮ್ಮನನ್ನು ಹೀರೋ ಮಾಡಲ್ವಾ..? ಇದು ಕಾಲಿ ಸ್ಟಾರ್ ಧನುಷ್ ಕತೆ ಮಾರಾಯ್ರೆ. ಜೋರಾಗಿ ಗಾಳಿ ಬಂದರೆ ತರಗಲೆಯಂತೆ ಹಾರಿಬಿಡುವವ ಹೀರೋ ನಾ..? ಎನ್ನುವ ಡೌಟ್ ಅವನನ್ನು ನೋಡಿದ ಎಲ್ಲರಿಗೂ ಇತ್ತು. ಖುದ್ದು ಈ ಹುಡುಗನಿಗೂ ಅನ್ನಿಸಿದ್ದು ಇದೆ. ಬಹಳಷ್ಟು ಸಲ ತಂದೆ- ಅಣ್ಣನಲ್ಲಿ ಈ ವಿಚಾರವನ್ನು ಹೇಳಿಕೊಂಡು ನಟನೆಯಿಂದ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡಿಇಟ್ಟುಕೊಂಡಿದ್ದ. ಆದರೆ ಕೊನೆಗೂ ಆತನ ಅಣ್ಣ ಸೆಲ್ವರಾಘವನ್ ಇದ್ದನಲ್ಲ ಮಹಾನ್ ಪ್ರತಿಭಾವಂತ. ಇಡೀ ಕಾಲಿವುಡ್ ಇಂಡಸ್ಟ್ರಿಯಲ್ಲಿಯೇ ಬೇಡ ಎಂದ ಕಲಾವಿದರನ್ನೇ ಹೆಕ್ಕಿಕೊಂಡು ಸಿನ್ಮಾ ಮಾಡಿ ಬ್ಲಾಕ್ ಬ್ಲಾಸ್ಟರ್ ಸಿನ್ಮಾವಾಗಿ ಪರಿವರ್ತನೆ ಮಾಡುವ ತಾಕತ್ತು ಅವನಲ್ಲಿ ಹುದುಗಿತ್ತು.
ಇಂತಹ ಪ್ರತಿಭಾವಂತನ ತಮ್ಮ ಎಂದಾಗ ಒಂಚೂರು ಧೈರ್ಯ ಸೆಲ್ವರಾಘವನ್‌ನಿಗೂ ಮೊದಲೇ ಇತ್ತು. ಸಿನ್ಮಾ ರಂಗನೇ ಬೇಡ ಎಂದು ಕೂತಿದ್ದ ಹುಡುಗ ಬೇರೆ ಯಾರು ಅಲ್ಲ ಮಾರಾಯ್ರೆ. ಈಗೀನ್ ‘ಕೊಲೆವರಿ ಡಿ’ ಫೇಮ್ ಧನುಷ್. ತಮಿಳಿನ ಖ್ಯಾತ ನಿರ್ದೇಶಕ ಸೆಲ್ವರಾಘವನ್ ಅವರ ಸಹೋದರ ಧನುಷ್ ಮೊದಲು ನಾಯಕನಾಗಿ ನಟಿಸಿದ್ದ ಖುದ್ದು ಅಣ್ಣನ ಚಿತ್ರ ‘ಕಾದಲ್ ಕೊಂಡೈನ್’ನಲ್ಲಿ. ಈ ಚಿತ್ರ ಹಲವು ಕಾರಣಗಳಿಂದ ಕಾಲಿವುಡ್‌ನಲ್ಲಿ ಭರ್ಜರಿ ಟಾಕ್ ಆಯಿತು. ಸೆಲ್ವರಾಘವನ್‌ರ ಮಾಜಿ ಪತ್ನಿ ಸೋನಿಯಾ ಅಗರ್‌ವಾಲ್ ಈ ಚಿತ್ರದ ನಾಯಕಿಯಾಗಿದ್ದರು. ಚಿತ್ರ ವಿಚಿತ್ರ ಕತೆಯಿಂದ ಕಾಲಿವುಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಜತೆಯಲ್ಲಿ ಅವಾರ್ಡ್‌ಗಳನ್ನು ದೋಚಿತು. ಇದೇ ಧನುಷ್ ಈ ಚಿತ್ರದ ಮೂಲಕ ಒಂದೇ ರಾತ್ರಿಯಲ್ಲಿ ಕಾಲಿವುಡ್‌ನ ಹೊಸ ನಾಯಕನ ಪಟ್ಟಕ್ಕೆ ಅರ್ಹ ವ್ಯಕ್ತಿ ಎನ್ನುವ ಮಾತು ಬಂತು.
ನಂತರ ನಡೆದದ್ದು ಮಾತ್ರ ಊಹಿಸಲು ಅಸಾಧ್ಯ. ಧನುಷ್ ಒಪ್ಪಿಕೊಂಡ ಚಿತ್ರಗಳೆಲ್ಲವೂ ಕಾಲಿವುಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಜತೆಯಲ್ಲಿ ಹೆಸರನ್ನು ತಂದುಕೊಟ್ಟಿತ್ತು. ‘ತಿರುಡಾ-ತಿರುಡಿ’, ‘ಪೊಲ್ಲಧವನ್’, ‘ಅಡುಕಲಂ’, ‘ಮಾಯಕ್ಕಂ ಎನ್ನಾ’ ಈಗ ಮೂನ್ ಚಿತ್ರನೂ ‘ಕೊಲೆವರಿ ಡಿ’ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿಕೊಂಡು ಪ್ರಚಾರ ಪಡೆದುಕೊಂಡು ಹಿಂದಿಗೂ ಡಬ್ ಆಗುವ ಸೂಚನೆನೂ ಕೊಟ್ಟಿದೆ.
ಐಶ್ ಕೈ ಹಿಡಿದ ರಾಜಾ:ವೆಂಕಟೇಶ್ ಪ್ರಭು ಕಸ್ತೂರಿ ರಾಜಾ ಎನ್ನುವುದು ಧನುಷ್‌ರ ಮೂಲ ಹೆಸರು. ಧನುಷ್ ಕಸ್ತೂರಿ ರಾಜಾ ಎನ್ನುವ ಹೆಸರಿನಲ್ಲಿ ಸಾಮಾಜಿಕ ತಾಣವಾದ ಫೇಸ್‌ಬುಕ್‌ನಲ್ಲಿ ಅಕೌಂಟ್ ಹೊಂದಿದ್ದಾರೆ. ಆರಂಭದ ಚಿತ್ರದಲ್ಲಿ ಸೆಲ್ವರಾಘವನ್ ಅವರ ಸೂಚನೆ ಮೇರೆಗೆ ಬಹಳ ಉದ್ದ ಇದ್ದ ಹೆಸರನ್ನು ಕಟ್ ಮಾಡಿ ಧನುಷ್ ಎಂದು ಇಡಲಾಯಿತು. ಕಸ್ತೂರಿ ರಾಜಾ ಎನ್ನುವುದು ಅವರ ತಂದೆಯ ಹೆಸರು. ಕಾಲಿವುಡ್ ಚಿತ್ರನಗರಿಯಲ್ಲಿ ಕಸ್ತೂರಿ ರಾಜಾ ದೊಡ್ಡ ಚಿತ್ರ ನಿರ್ದೇಶಕರಾಗಿದ್ದವರು.
ಧನುಷ್ ನಿಜಕ್ಕೂ ಸ್ಟಾರ್ ಬದಲಾಗಿ ಹೋಗಿದ್ದು, ಐಶ್‌ರನ್ನು ಮದುವೆಯಾದ ನಂತರ ಎನ್ನುವುದು ಕಾಲಿವುಡ್ ಪಂಡಿತರ ಮಾತು. ಐಶ್ ಬೇರೆ ಯಾರು ಅಲ್ಲ. ಕಾಲಿವುಡ್‌ನ ಸೂಪರ್‌ಸ್ಟಾರ್ ರಜನೀಕಾಂತ್ ಅವರ ಮಗಳು ಐಶ್ವರ್ಯಾ ರಜನೀಕಾಂತ್. ೨೦೦೪ರಲ್ಲಿ ಧನುಷ್ ಹಾಗೂ ಐಶ್ ಇಬ್ಬರು ಮದುವೆಯಾದರು ಈಗ ಯಾತ್ರಾ ಹಾಗೂ ಲಿಂಗ ಎನ್ನುವ ಪುಟ್ಟ ಎರಡು ಮಕ್ಕಳು ಧನುಷ್‌ನನ್ನು ತಂದೆ ಎನ್ನುತ್ತಿದೆ. ಐಶ್ ಖುದ್ದು ನಿರ್ಮಾಣ ಮಾಡುತ್ತಿರುವ ‘ಮೂನ್’ ಚಿತ್ರದಲ್ಲಿ ಧನುಷ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂನ್ ಚಿತ್ರದ ಕೊಲೆವರಿ ಹಾಡು ಈಗಾಗಲೇ ಸಖತ್ ಕಿಕ್ ಕೊಟ್ಟಿದೆ.
ಕಾಲಿನಿಂದ ಬಾಲಿ:ಧನುಷ್ ‘ಮೂನ್’ಚಿತ್ರದ ಮೂಲಕ ಬಾಲಿವುಡ್‌ಗೂ ಕಾಲಿಡಲಿದ್ದಾರೆ ಎನ್ನುವ ಸೂಚನೆ ಬಹಳ ಹಿಂದೆನೇ ಮಾತಾಗಿತ್ತು. ಆದರೆ ‘ಮೂನ್’ ಚಿತ್ರ ನಿಜಕ್ಕೂ ತಮಿಳಿನಲ್ಲಿ ಬಂದು ಹಿಂದಿಗೆ ಡಬ್ ಆಗುತ್ತಿರುವುದರಿಂದ ಈ ಚಿತ್ರ ಧನುಷ್‌ನ ಮೊದಲ ಬಾಲಿವುಡ್ ಚಿತ್ರವಲ್ಲ ಎನ್ನುವುದು ಬಹುತೇಕ ಅಭಿಪ್ರಾಯ. ಅದಕ್ಕಾಗಿ ಧನುಷ್ ಬಾಲಿವುಡ್ ಚಿತ್ರ‘ ರಾನ್‌ಜಾ’ದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಬಾಲಿವುಡ್ ನಿರ್ದೇಶಕ ಆನಂದ್ ಎಲ್. ರಾಯ್ ನಿರ್ದೇಶನ ಮಾಡುತ್ತಿದ್ದಾರೆ.
ಆನಂದ್ ಎಲ್. ರಾಯ್ ಈ ಮೊದಲು ‘ತನು ವೆಡ್ಸ್ ಮನು’ ಚಿತ್ರವನ್ನು ಮಾಡಿ ಬಾಲಿವುಡ್‌ನಲ್ಲಿ ತಮ್ಮ ಹೆಸರನ್ನು ಚಾಲ್ತಿಗೆ ತಂದಿದ್ದರು. ಈಗಾಗಲೇ ಬನರಾಸ್, ಚೆನ್ನೈ ಹಾಗೂ ಮುಂಬಯಿ, ಹೈದರಾಬಾದ್ ಸುತ್ತಮುತ್ತ ಚಿತ್ರ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಧನುಷ್‌ಗೆ ಸರಿಯಾಗಿ ಹಿಂದಿ ಗೊತ್ತಿಲ್ಲದ ಕಾರಣ ಹಿಂದಿ ಗೈಡ್ ಒಬ್ಬರನ್ನು ಇಟ್ಟುಕೊಂಡು ಚಿತ್ರೀಕರಣಕ್ಕೆ ತಯಾರಿ ಮಾಡಲಾಗುತ್ತಿದೆ.
ಧನುಷ್ ಈ ಚಿತ್ರಕ್ಕೆ ಖುದ್ದು ಡಬ್ ಮಾಡುತ್ತಾರೆ ಎಂದು ಒಪ್ಪಿಕೊಂಡ ಕಾರಣ ಹಿಂದಿ ಭಾಷೆಯನ್ನು ಸೀರಿಯಸ್ ಆಗಿ ಧನುಷ್ ಸ್ಟಡಿ ಮಾಡುತ್ತಿದ್ದಾರೆ. ಧನುಷ್ ಹೇಳುವಂತೆ ‘ ಹಿಂದಿ ಕಲಿಯಲು ನನಗೇನೂ ಕಷ್ಟವಿಲ್ಲ. ಆದರೆ ಇಲ್ಲಿ ಬರೀ ಭಾಷೆ ಮಾತ್ರವಲ್ಲ ಒಂದು ಸಂಸ್ಕೃತಿಯ ಅಧ್ಯಯನ ಮುಖ್ಯವಾಗಿದೆ. ಅದಕ್ಕಾಗಿ ಎರಡನ್ನು ಜತೆಯಾಗಿ ಕಲಿಯಬೇಕು ಎಂದುಕೊಂಡಿದ್ದೇನೆ’ ಎಂದು ಟ್ವಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕ ಆನಂದ್ ಹೇಳುವಂತೆ ‘ ತನು ವೆಡ್ಸ್ ಮನು ಮುಗಿದ ನಂತರ ಆರು ತಿಂಗಳ ಕಾಲ ನನ್ನ ಹೊಸ ಕತೆಗೆ ನಾಯಕನ ಹುಡುಕಾಟ ನಡೆಸಿದೆ. ತಮಿಳಿನಲ್ಲಿ ಬಂದ ‘ಆಡುಕಲಂ’ ಚಿತ್ರವನ್ನು ನೋಡಿದ ನಂತರ ಧನುಷ್ ಈ ಚಿತ್ರಕ್ಕೆ ಸರಿಯಾದ ಪಾತ್ರಧಾರಿ ಎಂದುಕೊಂಡೆ. ತಕ್ಷಣವೇ ಧನುಷ್ ಬಳಿ ಚಿತ್ರದ ಕತೆ ಕುರಿತು ಮಾತುಕತೆ ನಡೆಸಿದೆ. ಕತೆ ಧನುಷ್‌ಗೆ ತುಂಬಾ ಇಷ್ಟವಾಯಿತು. ಇನ್ನೇನೂ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮಾಡಲು ನಿರ್ಧಾರವಾಗಿದೆ’ ಎಂದಿದ್ದಾರೆ.
ಪ್ರೇಮ ಕತೆಯನ್ನು ಹೊಂದಿರುವ ಈ ಚಿತ್ರ ‘ತನು ವೆಡ್ಸ್ ಮನು’ನಂತೆ ಕಂಡರೂ ಪಾತ್ರವರ್ಗದಲ್ಲಿ ಬಹಳಷ್ಟು ವಿಭಿನ್ನತೆಯನ್ನು ತರಲು ಯೋಚನೆ ಮಾಡಲಾಗಿದೆ. ಚಿತ್ರದ ಆರಂಭ ಬನರಾಸಿನಿಂದ ಸ್ಟಾರ್ಟ್ ಆಗುತ್ತದೆ. ಈಗಾಗಲೇ ಬನರಾಸಿನಲ್ಲಿ ಚಿತ್ರೀಕರಣಕ್ಕೆ ಮುಹೂರ್ತ ಇಡಲಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರುವ ಕುರಿತು ಮಾತುಕತೆ ನಡೆದಿದೆ. ಈ ಮೂಲಕ ಕಾಲಿವುಡ್‌ನ ಯಂಗ್ ಸ್ಟಾರ್ ಧನುಷ್ ಬಾಲಿವುಡ್‌ನಲ್ಲೂ ಮಿಂಚುಹರಿಸಲಿದ್ದಾರೆ ಎನ್ನುವ ಮಾತನ್ನು ಒಪ್ಪಬೇಕಾದರೆ ಚಿತ್ರ ಬಿಡುಗಡೆಯವರೆಗೂ ಕಾದು ನಿಲ್ಲಬೇಕು ಅಲ್ವಾ..?
( vk lvk daily published dis article on 27.1.2012)