Monday, February 13, 2012

ಕಾಲಿವುಡ್‌ನಲ್ಲಿ ಕುಡ್ಲದ ಪೊಣ್ಣು ಕೊಲೈಕಾರನ್ ಹುಡುಗಿ



ಕಾಲಿವುಡ್‌ನಲ್ಲಿ ಕೊಲೈಕಾರನ್ ಸಿನ್ಮಾ ಸೂಪರ್ ಆಗಿ ಥಿಯೇಟರ್‌ನಲ್ಲಿ ಓಡಲು ಆರಂಭ ಮಾಡಿದೆ. ಈ ಚಿತ್ರದ ನಾಯಕ ಮೈನಾ ಖ್ಯಾತಿಯ ವಿದಾರ್ಥ್ ನಾಯಕ. ಕುಡ್ಲದ ಪೊಣ್ಣು(ಹೆಣ್ಣು) ಸಂಚಿತಾ ಶೆಟ್ಟಿ ನಾಯಕಿ. ಕನ್ನಡದಲ್ಲಿ ಅವಕಾಶ ವಂಚಿತೆ ಸಂಚಿತಾ ಕಾಲಿವುಡ್‌ನಲ್ಲಿ ಅದೃಷ್ಟ ಬಾಚಿದ್ದು ಮಜಬೂತ್ ಕತೆ.

ಗ್ಲ್ಯಾಮ್ ಲುಕ್ ಯಾವ ಕಡೆನೂ ನೋಡಿದರೂ ಮಿಂಚು ಹರಿಸುವ ಬ್ಯೂಟಿ. ಜಾಸ್ತಿ ಬಾಡಿ ವೈಟ್ ಇಲ್ಲದ ಈ ಹುಡುಗಿ ಕಾಲಿವುಡ್‌ನಲ್ಲಿ ಓಡಲು ರೆಡಿಯಾದ ಚಿಗರೆ. ಕನ್ನಡದ ನೀರು ಕುಡಿದು ಬೆಳೆದ ಹುಡುಗಿ ಈಗ ಕಾಲಿವುಡ್ ಸಿನ್ಮಾ ರಂಗದಲ್ಲಿ ಮೃಷ್ಟಾನ್ನ ಭೋಜನ ಸವಿಯುವ ಚಾನ್ಸ್ ಸಿಕ್ಕಿದೆ. ಆದರೆ ಕನ್ನಡದಲ್ಲಿ ಸಿಗಬೇಕಾದ ಮಣೆ ಈಗ ಕಾಲಿವುಡ್ ಸಿನ್ಮಾ ಇಂಡಸ್ಟ್ರಿ ಕೊಟ್ಟಿದೆ ಎನ್ನೋದು ಗಮನಿಸಬೇಕಾದ ವಿಷ್ಯಾ ಅಲ್ವಾ.. ಮಾರಾಯ್ರೆ..?
ಕನ್ನಡದ ಬಹುತೇಕ ಯುವ ನಟಿಯರು ಇದೀಗ ಪರಭಾಷೆ ಚಿತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ! ಅದಕ್ಕೆ ಕಾರಣ, ‘ಕನ್ನಡದಲ್ಲಿ ಸಿಗದ ಅವಕಾಶ’ ಎಂಬುದು ಅಲ್ಲಿಗೆ ಹೊರಟವರ ಮಾತು. ಈಗಾಗಲೇ ಕನ್ನಡದ ಬೆರಳೆಣಿಕೆಯಷ್ಟು ನಟಿಮಣಿಗಳು ತಮಿಳು, ತೆಲುಗು ಚಿತ್ರರಂಗದತ್ತ ಮುಖಮಾಡಿರುವುದುಂಟು. ಅಷ್ಟೇ ಅಲ್ಲ, ಅಲ್ಲಿತಕ್ಕಮಟ್ಟಿಗೆ ಒಂದಷ್ಟು ಸುದ್ದಿಯಾಗಿರುವುದೂ ದಿಟ.
ಈಗ ಕುಡ್ಲದ ಪೊಣ್ಣು( ಹೆಣ್ಣು) ಕನ್ನಡತಿ ಸಂಚಿತಾ ಶೆಟ್ಟಿ ಮೆಲ್ಲನೆ ಸುದ್ದಿಯಾಗುತ್ತಿರುವ ಬೆಡಗಿ. ಕನ್ನಡದಲ್ಲೇ ಒಳ್ಳೆಯ ಕಲಾವಿದೆಯಾಗಿ ಗುರುತಿಸಿಕೊಳ್ಳಬೇಕೆಂಬ ಮಹಾದಾಸೆಯಲ್ಲಿದ್ದ ಸಂಚಿತಾ ಶೆಟ್ಟಿಗೆ ಇಲ್ಲಿ, ಅಷ್ಟೇನೂ ಅದೃಷ್ಟ ಹುಡುಕಿ ಬರಲಿಲ್ಲ. ಹಾಗೊಮ್ಮೆ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದೇ ತಡ, ಅವಕಾಶಗಳು ಒಂದರ ಮೇಲೊಂದರಂತೆ ಹರಿದು ಬರುತ್ತಿವೆ ಎನ್ನೋದು ಅವರ ಮಾತು.
ಇಷ್ಟಕ್ಕೂ ಯಾರೂ ಈ ಸಂಚಿತಾ ಶೆಟ್ಟಿ ಎಂಬ ಪ್ರಶ್ನೆ ಮೂಡೋದು ಸಹಜ. ಸಂಚಿತಾ ಶೆಟ್ಟಿ ಅಪ್ಪಟ ಕನ್ನಡತಿ. ಈ ಹಿಂದೆ ಬಿಡುಗಡೆಯಾದ ‘ಉಡ’ ಮತ್ತು ‘ಭಯ ಡಾಟ್ ಕಾಮ್’ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನೂ ಬಿಡುಗಡೆಯಾಗದ ‘ಗಗನ ಚುಕ್ಕಿ’ ಎಂಬ ಚಿತ್ರದಲ್ಲೂ ಸಂಚಿತಾ ಶೆಟ್ಟಿ ನಾಯಕಿ. ಸಂಚಿತಾ ಶೆಟ್ಟಿ ಕಾಲಿವುಡ್‌ನ ‘ಕೊಲೈಕಾರನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಯಶಸ್ವಿ‘ಮೈನಾ’ ಚಿತ್ರದ ನಾಯಕ ವಿದಾರ್ಥ್ ನಾಯಕ. ಇನ್ನು ತಮಿಳ್ ಸೆಲ್ವನ್ ನಿರ್ದೇಶಕರು.
ಈ ಚಿತ್ರ ಸಂಕ್ರಾಂತಿ ದಿನದಂದು ತೆರೆಕಂಡು ತಮಿಳುನಾಡಿನಾದ್ಯಂತ ಸಿಕ್ಕಾಪಟ್ಟೆ ಸುದ್ದಿ ಮಾಡಿದೆ. ಈ ಮೂಲಕ ಸಂಚಿತಾ ಶೆಟ್ಟಿಗೆ ತಮಿಳು ಚಿತ್ರರಂಗದಲ್ಲಿ ಇನ್ನಿಲ್ಲದ ಹೊಗಳಿಕೆಗಳ ಮಹಾಪೂರವೇ ಹರಿದುಬಂದಿದೆ. ಅಷ್ಟೇ ಅಲ್ಲ, ಇದೀಗ ಒಂದಷ್ಟು ಅವಕಾಶಗಳು ಹುಡುಕಿ ಬರುತ್ತಿವೆಯಂತೆ.
‘ನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿಯಾಗಿದ್ದಕ್ಕೂ ಈಗ ಸಾರ್ಥಕವಾಗಿದೆ’ ಎಂದು ಖುಷಿಯಿಂದಲೇ ಹೇಳಿಕೊಳ್ಳುವ ಸಂಚಿತಾ ಶೆಟ್ಟಿ, ನನಗೆ, ಕನ್ನಡದಲ್ಲೇ ಕಲಾವಿದೆಯಾಗಿ ಗುರುತಿಸಿಕೊಳ್ಳುವ ಹಂಬಲವಿದೆ. ಆದರೆ, ಇಲ್ಲಿ ನನಗೆ ಸರಿಯಾದ ಅವಕಾಶಗಳೇ ಸಿಗಲಿಲ್ಲ. ಸಿಕ್ಕರೂ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ತಮಿಳು ಚಿತ್ರದಲ್ಲಿ ನಟಿಸುವ ಅವಕಾಶ ಒದಗಿ ಬಂತು. ಕಥೆಯೂ ಚೆನ್ನಾಗಿತ್ತು. ಅಲ್ಲಿಯೂ ಅದೃಷ್ಟ ಪರೀಕ್ಷೆಗಿಳಿಯೋಣ ಅಂದುಕೊಂಡು ಎಂಟ್ರಿಕೊಟ್ಟೆ. ಅದೃಷ್ಟ ನನ್ನ ಪಾಲಿಗಿತ್ತು. ಈಗ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ನನಗೂ ಹಲವು ನಿರ್ದೇಶಕರಿಂದ ಕರೆ ಬರುತ್ತಿದೆ. ಸದ್ಯಕ್ಕೆ, ಮತ್ತೊಂದು ಚಿತ್ರವನ್ನೂ ಒಪ್ಪಿಕೊಂಡಿದ್ದೇನೆ. ಕಥೆ ಮತ್ತು ಪಾತ್ರ ಚೆನ್ನಾಗಿದೆ. ಫೆಬ್ರವರಿಯಲ್ಲಿ ಶುರುವಾಗಲಿದೆ ಎಂದಷ್ಟೇ ಹೇಳುತ್ತಾರೆ ಸಂಚಿತಾ ಶೆಟ್ಟಿ.
ನಾನು ತಮಿಳು ಚಿತ್ರಗಳಲ್ಲಿ ನಟಿಸಿದ್ದರೂ, ಅಲ್ಲಿ ಎಷ್ಟೆ ಬ್ಯುಜಿಯಾದರೂ, ನನ್ನ ಮಾತೃಭಾಷೆ ಮರೆಯೋದಿಲ್ಲ. ಕನ್ನಡ ಚಿತ್ರದಲ್ಲಿ ನಟಿಸುವ ಅವಕಾಶಸಿಕ್ಕರೆ ಖಂಡಿತ ಬಿಡುವುದಿಲ್ಲ. ನಾನು ಮೊದಲು ನಟಿ ಆಗಿ ಗುರುತಿಸಿಕೊಂಡಿದ್ದು ಕನ್ನಡ ಚಿತ್ರದ ಮೂಲಕ. ನನಗೇ ಕನ್ನಡವೇ ಕಂಫರ್ಟ್. ತಮಿಳು ಗೊತ್ತಿರದ ಭಾಷೆ. ಕೊಂಚ ಕಷ್ಟವಾಗುತ್ತಿದೆ. ಆದರೂ, ನೆಲೆ ಕಂಡುಕೊಳ್ಳುವ ಉದ್ದೇಶದಿಂದ ತಮಿಳು ಭಾಷೆ ಕಲಿತುಕೊಂಡಿದ್ದೇನೆ. ಅದೇನೆ ಇದ್ದರೂ ಕನ್ನಡವೇ ನನಗೆ ಅಚ್ಚುಮೆಚ್ಚು ಎನ್ನುತ್ತಲೇ ಇಲ್ಲಿನ ಅವಕಾಶವನ್ನು ಎದುರು ನೋಡುತ್ತಾರೆ ಸಂಚಿತಾ. ಟೋಟಲಿ ಕನ್ನಡದ ಹುಡುಗಿ ಸಂಚಿತಾ ಪಕ್ಕದ ಕಾಲಿವುಡ್‌ನಲ್ಲಿ ಮಿಂಚುತ್ತಿರುವುದು ಮಾತ್ರ ಗ್ರೇಟ್ ವಿಷ್ಯಾ ಅಲ್ವಾ..?
.....
ಮಣಿರತ್ನಂ ಎಂದರೆ ಇಷ್ಟ
ದಕ್ಷಿಣ ಭಾರತದ ಖ್ಯಾತ ಚಿತ್ರ ನಿರ್ದೇಶಕ ಮಣಿರತ್ನಂ ಎಂದರೆ ಸಂಚಿತಾಳಿಗೆ ತುಂಬಾನೇ ಇಷ್ಟ. ಯಾವುದೇ ಚಿತ್ರದ ಶೂಟಿಂಗ್ ಇಲ್ಲದ ಸಮಯದಲ್ಲಿ ಮನೆಯಲ್ಲಿ ಕೂತಿ ಮಣಿ ನಿರ್ದೇಶನದ ಚಿತ್ರಗಳನ್ನು ನೋಡುವುದು ಎಂದರೆ ಸಂಚಿತಾಳಿಗೆ ಬರೀ ಖುಷಿ. ಅದರಲ್ಲೂ ಬಾಂಬೆ, ರೋಜಾ, ದಳಪತಿ ಚಿತ್ರಗಳನ್ನು ಹತ್ತು ಹತ್ತು ಬಾರಿ ನೋಡಿಕೊಂಡು ಆ ಚಿತ್ರಗಳ ಪಾತ್ರಗಳಂತೆ ನಟಿಸುವುದಿದೆ. ಸಿನ್ಮಾ ಬದುಕಿನಲ್ಲಿ ಮಣಿರತ್ನಂರ ಒಂದು ಚಿತ್ರದಲ್ಲಾದರೂ ಬಣ್ಣ ಹಾಕಬೇಕು ಎನ್ನುವ ಉದ್ದೇಶ ಇಟ್ಟುಕೊಮಡಿರುವ ಸಂಚಿತಾಳಿಗೆ ಇತ್ತೀಚೆಗಿನ ಚಿತ್ರ ನಿರ್ದೇಶಕರಾದ ಮುರುಗದಾಸ್, ಗೌತಮ್ ಮೆನನ್ ಚಿತ್ರಗಳಲ್ಲೂ ಪಾತ್ರ ಮಾಡಬೇಕು ಎನ್ನುವ ಕನಸ್ಸಿದೆ.
....

ಜಲಪಾತದ ಕೆಳಗೆ ನಿಲ್ಲಬೇಕು
ಸಂಚಿತಾ ಶೆಟ್ಟಿ ತುಂಬಾನೇ ಫ್ರಿ ಟೈಮ್ ಇದ್ದಾಗ ಸಂಗೀತ ಕೇಳುತ್ತಾರೆ. ಚಾಟಿಂಗ್, ವಿಡಿಯೋ ಗೇಮ್ಸ್ ಅಂತ ಹೇಳಿಕೊಂಡು ಬ್ಯುಸಿಯಾಗಿರಲು ಬಯಸುತ್ತಾರೆ. ಇನ್ನೂ ಟೈಮ್ ಉಳಿದರೆ ಡ್ಯಾನ್ಸ್ ಮಾಡಲು ರೆಡಿಯಾಗುತ್ತಾರೆ. ಥ್ರಿಲ್ಲರ್ ಕಾದಂಬರಿಗಳನ್ನು ಓದುವುದು ಎಂದರೆ ಸಂಚಿತಾಳಿಗೆ ಬರೀ ಖುಷಿ. ಚಿತ್ರರಂಗದಲ್ಲಿ ನಟ ಸೂರ್ಯ ಹಾಗೂ ನಟಿ ರೇವತಿ ಎಂದರೆ ಅಪಾರ ಇಷ್ಟ. ಶಾಲಾ ಪ್ರವಾಸದ ಟೈಮ್‌ನಲ್ಲಿ ಜಲಪಾತದ ಕೆಳಗೆ ನಿಂತು ಸ್ನಾನ ಮಾಡುತ್ತಿದ್ದರಂತೆ. ಆದರೆ ಈಗ ಅಂತಹ ಚಾನ್ಸ್ ಸಿಗುತ್ತಿಲ್ಲ ಎನ್ನುವುದು ಅವರ ಕೊರಗು.
(vk lvk puravani published dis article on 8.02.2012)

ಬಾಲಿವುಡ್‌ನಲ್ಲಿ ಓಡುವ ಇಲಿ


ಟಾಲಿವುಡ್ ಸ್ಟಾರ್ ಇಲಿಯಾನಾ ಈಗ ಬಾಲಿವುಡ್‌ನಲ್ಲಿ ಒಂದೆರಡು ಚಿತ್ರಗಳಿಗೆ ಬುಕ್ ಆಗಿಲ್ಲ ಬರೋಬರಿ ಐದು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಬಾಲಿವುಡ್ ನಾಯಕಿಯರ ರೇಟಿಂಗ್ ಪಟ್ಟಿಯಲ್ಲಿ ಇಲಿ ಕೂಡ ಓಡುವ ಸಾಧ್ಯತೆ ದಟ್ಟವಾಗಿದೆ.

ಅದೃಷ್ಟ ಅಂದರೆ ಇದೇ ಕಣ್ರಿ. ಟಾಲಿವುಡ್‌ನಲ್ಲಿ ಓಡುತ್ತಿದ್ದ ಇಲಿಯನ್ನು ತಂದು ಕಾಲಿವುಡ್‌ಗೆ ಬಿಡಲಾಯಿತು. ಅಲ್ಲಿಂದ ಈಗ ಬಾಲಿವುಡ್‌ನಲ್ಲಿ ಓಡುತ್ತಿದೆ ಎಂದು ಟಾಲಿವುಡ್ ಪಡಸಾಲೆಯಲ್ಲಿ ಕೂತು ಮಸಾಲೆ ಹರಿಯುವ ಮಂದಿ ಮಾತಿಗೆ ಇಳಿಯುತ್ತಾರೆ. ಅಂದಹಾಗೆ ಟಾಲಿವುಡ್ ಸ್ಟಾರ್ ಇಲಿಯಾನಾ ಈಗ ಬಾಲಿವುಡ್‌ನಲ್ಲಿ ಒಂದು ಎರಡು ಚಿತ್ರಗಳಿಗೆ ಬುಕ್ ಆಗಿಲ್ಲ ಬರೋಬರಿ ಐದು ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಈ ಮೂಲಕ ಬಾಲಿವುಡ್ ನಾಯಕಿಯರ ರೇಟಿಂಗ್ ಪಟ್ಟಿಯಲ್ಲಿ ಇಲಿ ಕೂಡ ಓಡುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾತು ದಿಟವಾಗುವ ದಿನಗಳು ದೂರವಿಲ್ಲ.
ಅಂದಹಾಗೆ ಟಾಲಿವುಡ್ ನಟಿ ಇಲಿಯಾನಾ ಡಿ ಕ್ರೂಸ್ ಬಾಲಿವುಡ್‌ನಲ್ಲಿ ಹೇಗೆ ಚಾನ್ಸ್ ಪಡೆದುಕೊಂಡರು ಅಂತಾ ಕೇಳ್ತೀರಾ..? ಎಲ್ಲವೂ ‘ನನ್ಬನ್’ ಚಿತ್ರದ ಮ್ಯಾಜಿಕ್ ವರ್ಕ್. ಹಿಂದಿಯಲ್ಲಿ ಮೂಡಿ ಬಂದ ತ್ರಿ ಇಡಿಯಟ್ಸ್ ಚಿತ್ರವನ್ನು ಕಾಲಿವುಡ್‌ನ ಖ್ಯಾತ ಚಿತ್ರ ನಿರ್ದೇಶಕ ಶಂಕರ್ ಎತ್ತಿಕೊಂಡು ‘ನನ್ಬನ್’ ಎನ್ನುವ ಚಿತ್ರ ಮಾಡಿ ಗಲ್ಲಾಪೆಟ್ಟಿಗೆಯನ್ನು ದೋಚಿದ ಕತೆಯಲ್ಲಿಯೇ ಇಲಿಯಾನಾ ಕತೆ ಕೂಡ ಅಡಗಿ ಕೂತಿದೆ. ಹಿಂದಿಯಲ್ಲಿ ಕರೀನಾ ಮಾಡಿದ ಪಾತ್ರವನ್ನು ಇಲ್ಲಿ ಇಲಿಯಾನಾ ಮಾಡಿ ಪ್ರೇಕ್ಷಕ ವರ್ಗದ ಮನ ಗೆದ್ದಿದ್ದಾರೆ. ಇದೇ ಒಂದು ಪ್ರೇಕ್ಷಕರ ಪ್ರೀತಿಯ ಕಾರ್ಡ್ ಹಿಂದಿಯ ನಿರ್ದೇಶಕರ ಕಣ್ಣಿಗೆ ಬಿದ್ದು ಬಿಟ್ಟಿದೆ.
ಈಗಾಗಲೇ ಅನುರಾಗ್ ಬಸು ನಿರ್ದೇಶನದ ರಣಬೀರ್ ಕಪೂರ್ ಅಭಿನಯದ ಮೋಸ್ಟ್ ವೈಟೇಟ್ ಚಿತ್ರ ‘ಬರ್ಫಿ’ಯಲ್ಲಿ ಪ್ರಿಯಾಂಕಾಳಿಗೆ ಸಮಾನವಾದ ಪಾತ್ರವನ್ನು ಇಲಿಯಾನಾಗೂ ಕೊಡಲಾಗಿದೆ. ಮಿಲಾನ್ ತೂತ್ರಿಯಾ ನಿರ್ದೇಶನದ ‘ವನ್ಸ್ ಆಫನ್ ಎ ಟೈಮ್ ಇನ್ ಮುಂಬಯಿ-೨’ಯಲ್ಲಿ ಇಲಿಯಾನಾ ಖ್ಯಾತ ನಟಿ ಮಂದಾಕಿನಿಯ ಪಾತ್ರದಲ್ಲಿ ಮಿಂಚಲಿದ್ದಾರೆ. ಆಶೀಶ್ ಆರ್. ಮೋಹನ್ ನಿರ್ದೇಶನದ ಕಿಲಾಡಿ೭೮೬ ಚಿತ್ರದಲ್ಲಿ ಅಕ್ಷಯ್ ಕುಮಾರ್‌ಗೆ ಲೀಡ್ ನಾಯಕಿಯಾಗಿ ಇಲಿ ಬಣ್ಣ ಹಚ್ಚಿಕೊಳ್ಳಲಿದ್ದಾರೆ.
ಇದರ ಜತೆಯಲ್ಲಿ ಇಮ್ರಾನ್ ಖಾನ್ ಹಾಗೂ ರಣಬೀರ್ ಕಪೂರ್‌ರ ಒಂದೊಂದು ಚಿತ್ರಗಳಿಗೆ ಈಗಾಗಲೇ ಇಲಿ ಬುಕ್ ಆಗಿದ್ದಾಳೆ. ಆದರೆ ಈ ಎರಡು ಚಿತ್ರಗಳಿಗೆ ಇನ್ನೂ ಕೂಡ ಚಿತ್ರೀಕರಣದ ಡೇಟ್ಸ್‌ಗಳು ಸ್ಪರ್ಧೆ ಕೊಡುತ್ತಿರುವುದರಿಂದ ೨೦೧೩ರಲ್ಲಿ ಚಿತ್ರದ ಚಿತ್ರೀಕರಣ ನಡೆಯುವ ಸಾಧ್ಯತೆಗಳು ಇವೆ ಎನ್ನೋದು ಇಲಿಯ ಆಪ್ತರ ಮಾತು. ಅದರಲ್ಲೂ ಇಲಿ ಟಾಲಿವುಡ್, ಕಾಲಿವುಡ್‌ಗಳಲ್ಲಿ ಒಪ್ಪಿಕೊಂಡ ಒಂದೆರಡು ಚಿತ್ರಗಳು ಬಾಕಿ ಉಳಿದಿದೆ. ಟೋಟಲಿ ಇಲಿ ಎಲ್ಲಕಡೆಗೂ ಸಲ್ಲುವ ನಟಿಮಣಿಯಾಗಿದ್ದಾರೆ ಎಂಬ ಮಾತು ಎಲ್ಲ ಕಡೆಯಿಂದಲೂ ಕಿವಿಗೆ ಬಡಿಯುವ ದಿನಗಳು ದೂರವಂತೂ ಉಳಿದಿಲ್ಲ.
ಈಗಾಗಲೇ ಕಾಲಿವುಡ್‌ನಲ್ಲಿ ನಟಿಸಿದ ‘ನನ್ಬನ್’ ಚಿತ್ರದ ಸಕ್ಸಸ್ ರೇಟ್ ದುಪ್ಪಟ್ಟು ವೇಗದಲ್ಲಿ ಹೋಗುತ್ತಿರುವುದರಿಂದ ಕಾಲಿವುಡ್‌ನಲ್ಲೂ ಇಲಿಗೆ ಬೇಡಿಕೆ ಹೆಚ್ಚಾಗಿದೆ. ವಿಕ್ರಂ, ಜೀವಾ, ಸೂರ್ಯರ ಚಿತ್ರಗಳಿಗೆ ಇಲಿಯೇ ಬೇಕು ಎಂದು ನಿರ್ದೇಶಕರು ತುದಿ ಕಾಲಿನಲ್ಲಿ ನಿಂತು ಬಿಟ್ಟಿದ್ದಾರೆ ಎನ್ನುವ ಮಾಹಿತಿ ಕಾಲಿವುಡ್ ಗಲ್ಲಿಯಿಂದ ಹೊರ ಬರುತ್ತಿದೆ. ಈ ಮೂಲಕ ಬಾಲಿವುಡ್‌ಗೆ ಸಮಾನವಾಗಿ ಪೈಪೋಟಿ ನೀಡಬಲ್ಲ ಕಾಲಿವುಡ್ ಸಿನ್ಮಾ ಇಂಡಸ್ಟ್ರಿಯಲ್ಲಿ ಇಲಿ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುವ ಜತೆಯಲ್ಲಿ ಬಾಲಿವುಡ್‌ನಲ್ಲೂ ತನ್ನ ಅದೃಷ್ಟ ಪರೀಕ್ಷೆಗೆ ನಿಂತು ಬಿಟ್ಟಿದ್ದಾಳೆ.
ಅನುರಾಗ್ ಬಸು ನಿರ್ದೇಶನದ ‘ಬರ್ಫಿ’ ಚಿತ್ರ ಒಂದೆರಡು ತಿಂಗಳಲ್ಲಿ ಥಿಯೇಟರ್‌ಗೆ ಬಂದು ಬೀಳಲಿದೆ. ಚಿತ್ರದಲ್ಲಿ ರಣ್‌ಬೀರ್ ಹಾಗೂ ಪ್ರಿಯಾಂಕಾ ಮಾನಸಿಕ ರೋಗಿಯ ಪಾತ್ರದಲ್ಲಿ ಕಾಣಿಸಿಕೊಂಡರೆ ಇಡೀ ಚಿತ್ರವನ್ನು ಓಡಿಸುವ ಕೀಲಿ ಕೈ ಇಲಿಯ ಪಾಲಿಗೆ ಬಂದಿದೆ. ಬಾಲಿವುಡ್‌ನಲ್ಲಿ ಇಲಿ ಅಭಿನಯಿಸುತ್ತಿರುವ ಮೊದಲ ಚಿತ್ರ ಇದಾಗಿದ್ದರಿಂದ ಇಲಿಯ ಅಭಿನಯ ಹಾಗೂ ಹಾಟ್‌ನೆಸ್‌ನ್ನು ಪ್ರೇಕ್ಷಕ ಮಹಾಪ್ರಭು ಯಾವ ರೀತಿಯಲ್ಲಿ ಸ್ವೀಕರಿಸುತ್ತಾನೆ ಎನ್ನುವ ಪ್ರಶ್ನೆ ಕೂಡ ಮಜಬೂತಾಗಿ ಎದುರುಗೊಳ್ಳಲಿದೆ. ಬರ್ಫಿಯಲ್ಲಿ ಇಲಿಯ ಅಭಿನಯ ವರ್ಕ್ ಆಯಿತು ಎಂದಾದರೆ ಎರಡು ವರ್ಷಕ್ಕಂತೂ ಇಲಿ ಸ್ಟಾರ್ ಪಟ್ಟದಿಂದ ಇಳಿಸಲು ಯಾರಿಗೂ ಸಾಧ್ಯವಿಲ್ಲ ಎನ್ನುವ ಮಾತು ಕೂಡ ಜತೆಯಲ್ಲಿ ಹರಡಿ ಕೂತಿದೆ.
(vk lvk puravani published dis article on 10.2.2012)

Thursday, January 26, 2012

ಗಾಯಕ ಅದ್ನಾನ್ ಈಗ ಲೇಖಕ


ಅದ್ನಾನ್ ಗಾಯನಕ್ಕೆ ಕೊಂಚ ಬ್ರೇಕ್ ಕೊಟ್ಟು ಯಾವ ರೀತಿ ‘ವೈಟ್ ಲೂಸ್’ ಮಾಡಬಹುದು ಎನ್ನುವ ಕುರಿತು ತನ್ನ ಆಪ್ತರಿಗೆ ಸಲಹೆ ಕೊಡುತ್ತಿದ್ದಾರೆ. ಅದರಲ್ಲೂ ತಾನು ಯಾವ ರೀತಿ ವೈಟ್ ಲೂಸ್ ಮಾಡಿದ್ದೇನೆ ಎನ್ನುವ ರಹಸ್ಯವನ್ನು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಸಿಕ್ರೇಟ್‌ವೊಂದನ್ನು ಬಿಚ್ಚಿಡಲು ಅದ್ನಾನ್ ರೆಡಿಯಾಗಿದ್ದಾರೆ.

ಬಾಲಿವುಡ್ ಇರಲಿ ಯಾವುದೇ ವುಡ್‌ಗಳಿರಲಿ ಅದ್ನಾನ್ ಸಾಮಿ ಸಂಗೀತ ಪ್ರೇಮಿಗಳನ್ನು ಎಂದಿಗೂ ಕೈಬಿಟ್ಟಿಲ್ಲ. ತನ್ನ ಆಲ್ಬಂಗಳಲ್ಲಿ ವಿರಹ ತುಂಬಿದ ಗೀತೆಗಳನ್ನು ಸುರಿಸಿ ಭಗ್ನ ಪ್ರೇಮಿಗಳಿಗೆ ಧೈರ್ಯ ತುಂಬಿದ್ದು ಇದೇ ಅದ್ನಾನ್ ಸಾಮಿ. ಲಿಫ್ಟ್ ಮಾಡಲು ಸಾಧ್ಯವಿಲ್ಲದೇ ಒದ್ದಾಡುವ ಟನ್‌ಗಟ್ಟಲೆ ತೂಗುವ ದೇಹ. ಮುದ್ದೆಯನ್ನು ಬೀಟ್ ಮಾಡಿ ಬಿಡುವ ಮುದ್ದು ಮುದ್ದಾದ ಮೊಗ. ಹುಡುಗಿಯರು ಫೀದಾ ಆಗುವ ನಗು. ಭಗ್ನ ಪ್ರೇಮಿಗಳನ್ನು ತಣ್ಣನೆ ಮಾಡಿಬಿಡುವಂತಹ ವಾಯ್ಸ್ ಇದು ಬಾಲಿವುಡ್ ಸಿಂಗರ್ ಅದ್ನಾನ್ ಸಾಮಿಯ ಈ ಹಿಂದಿನ ಜಸ್ಟ್ ಇಂಟರ್‌ಡಕ್ಷನ್.
ಆದರೆ ಅದ್ನಾನ್ ಗಾಯನಕ್ಕೆ ಕೊಂಚ ಬ್ರೇಕ್ ಕೊಟ್ಟು ಯಾವ ರೀತಿ ‘ವೈಟ್ ಲೂಸ್’ ಮಾಡಬಹುದು ಎನ್ನುವ ಕುರಿತು ತನ್ನ ಆಪ್ತರಿಗೆ ಸಲಹೆ ಕೊಡುತ್ತಿದ್ದಾರೆ. ಅದರಲ್ಲೂ ತಾನು ಯಾವ ರೀತಿ ವೈಟ್ ಲೂಸ್ ಮಾಡಿದ್ದೇನೆ ಎನ್ನುವ ರಹಸ್ಯವನ್ನು ಮೊದಲ ಬಾರಿಗೆ ಪುಸ್ತಕ ರೂಪದಲ್ಲಿ ಸಿಕ್ರೇಟ್‌ವೊಂದನ್ನು ಬಿಚ್ಚಿಡಲು ಅದ್ನಾನ್ ರೆಡಿಯಾಗಿದ್ದಾರೆ.
ಅದ್ನಾನ್ ನಿಜಕ್ಕೂ ಭಾರತದವನೇನಲ್ಲ. ಆದರೆ ಭಾರತದ ಸಂಗೀತ ಪ್ರೇಮಿಗಳು ಆತನಿಗೆ ಪ್ರೀತಿಯನ್ನು ತುಂಬಿ ತುಂಬಿಕೊಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಹುಟ್ಟಿದ ಭಾರತದಲ್ಲಿ ವಾಸಿಸುತ್ತಿದ್ದ ತಂದೆ ಮತ್ತು ಭಾರತೀಯ ಮುಸ್ಲಿಂ ತಾಯಿಗೆ ಲಂಡನ್‌ನಲ್ಲಿ ಹುಟ್ಟಿದ ಮಗ ಅದ್ನಾನ್ ಸಾಮಿ. ಯಾವಾಗಲೂ ಕೀಬೋರ್ಡ್ ಜತೆಯಲ್ಲಿ ಪ್ರೀತಿ ಇರುವ ಕಾರಣ ಬದುಕಿನಲ್ಲಿ ಗಾಯಕನಾಗಿ ಬಿಟ್ಟ ಎನ್ನುವುದು ಅದ್ನಾನ್‌ನ ಆಪ್ತ ಗೆಳೆಯರ ಮಾತು.
ಲೂಸ್ ವೈಟ್ ಕತೆ:
ಅದ್ನಾನ್ ಸಾಮಿ ತನ್ನ ದೇಹದ ತೂಕ ಇಳಿಸಲು ಮಾಡಿದ ಪ್ರಯತ್ನಗಳನ್ನು ಒಂದು ಕಡೆ ಜೋಪಾನವಾಗಿ ಜೋಡಿಸಿಕೊಂಡು ಪುಸ್ತಕಕ್ಕೆ ಇಳಿಸುತ್ತಿದ್ದಾರೆ. ಆರಂಭದಲ್ಲಿ ೨೩೦ ಕೆ.ಜಿ. ತೂಕ ಇದ್ದ ಅದ್ನಾನ್ ದೇಹದ ತೂಕ ಈಗ ತೂಕದ ಮುಳ್ಳು ನಿಂತಿರೋದು ಬರೀ ೮೫ ಕೆ.ಜಿಯಲ್ಲಿಯಂತೆ ! ಅದ್ನಾನ್ ಹೇಳುವಂತೆ ಯಾವಾಗಲೂ ದೇಹದ ತೂಕ ಇಳಿಸುವ ವಿಚಾರಗಳನ್ನು ಬೇರೆ ಯಾರಲ್ಲೂ ಹಂಚಿಕೊಳ್ಳಬಾರದು ಅಂದುಕೊಂಡಿದ್ದೆ. ಆದರೆ ನನ್ನಂತೆಯೇ ಬಹಳಷ್ಟು ಜನ ದೇಹದ ತೂಕದಿಂದ ಜರ್ಜರಿತವಾಗಿದ್ದಾರೆ. ಅವರಿಗೆ ನಾನು ಮಾಡಿದ ಉಪಾಯಗಳನ್ನು ಹೇಳಿಕೊಂಡರೆ ಕೊಂಚ ರಿಲ್ಯಾಕ್ಸ್ ಆಗಬಹುದು ಎಂದುಕೊಂಡಿದ್ದೇನೆ ಎನ್ನುತ್ತಾರೆ.
ಆರಂಭದಲ್ಲಿ ನನಗೆ ವೈದ್ಯರು ಭಾರ ಇಳಿಸಲು ಹೇಳುತ್ತಿದ್ದರು. ಭಾರ ಇಳಿಸದೇ ಹೋದರೆ ಆರು ತಿಂಗಳಲ್ಲಿ ಹೃದಯಕ್ಕೆ ಸಂಬಂತ ಕಾಯಿಲೆಗಳು ಮುತ್ತಿಕೊಳ್ಳುತ್ತದೆ ಎಂದು ಹೆದರಿಕೆ ಹುಟ್ಟಿಸಿದ್ದರು. ನನ್ನ ಮುಂದೆ ಬೇರೆ ಯಾವುದೇ ದಾರಿಗಳಿರಲಿಲ್ಲ. ನಾನು ದೇಹದ ತೂಕ ಇಳಿಸಲೇ ಬೇಕಿತ್ತು ಎನ್ನುವುದು ಅದ್ನಾನ್ ಮಾತು.
ದೇಹದ ತೂಕ ಇಳಿಸುವ ವಿಚಾರಗಳನ್ನು ಎರಡು ರೀತಿಯಲ್ಲಿ ನಾನು ಅಧ್ಯಯನ ಮಾಡಿದೆ. ಮೊದಲು ತೂಕ ಯಾವ ಕಾರಣಕ್ಕೆ ಹೆಚ್ಚಾಗುತ್ತಿದೆ. ನಂತರ ತೂಕ ಇಳಿಸಲು ಏನು ಮಾಡಬೇಕು ಎನ್ನುವ ಎರಡು ಪ್ರಶ್ನೆಗಳ ಉತ್ತರದಲ್ಲಿ ದೇಹದ ತೂಕದ ಲೆಕ್ಕಚಾರವಿದೆ ಎನ್ನುವುದು ಅದ್ನಾನ್ ಮಾತು. ನನ್ನ ದೇಹದ ತೂಕದಿಂದಾಗಿ ನಾನು ಏರ್‌ಕ್ರಾಫ್ಟ್‌ಗಳಲ್ಲಿ ಸರಿಯಾಗಿ ಕೂರುವಂತಿರಲಿಲ್ಲ.
ಒಂದೇ ಉಸಿರಿನಲ್ಲಿ ಹೆಚ್ಚು ಮಾತನಾಡುವಂತಿರಲಿಲ್ಲ. ಇಂತಹ ನಾನಾ ಸಮಸ್ಯೆಗಳನ್ನು ನಾನು ಬದುಕಿನಲ್ಲಿ ಕಂಡಿದ್ದೆ. ಈ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು ಎನ್ನುವುದಕ್ಕಾಗಿ ಭಾರ ಇಳಿಸುವ ನಿರ್ಧಾರಕ್ಕೆ ಬಂದೆ. ನಾನು ಬರೆಯಲು ಹೊರಟಿರುವ ಕೃತಿಯಲ್ಲಿ ಈ ಎಲ್ಲ ವಿಚಾರಗಳಿಗೆ ಮದ್ದು ಇದೆ. ಕೃತಿಯನ್ನು ಎರಡು ಭಾಗವಾಗಿ ವಿಂಗಡಿಸಿಕೊಂಡಿದ್ದೇನೆ. ಒಂದು ಭಾಗದಲ್ಲಿ ಭಾರ ಇಳಿಸಲು ಇರುವ ಆಹಾರ ಪಥ್ಯಗಳು ಹಾಗೂ ಮತ್ತೊಂದು ಭಾಗದಲ್ಲಿ ಯಾವ ರೀತಿ ತೂಕ ಇಳಿಸಬಹುದು ಎನ್ನುವ ವಿಚಾರಗಳಿಗೆ ಗಮನ ಕೊಡಲಾಗಿದೆ.
ಮೊದಲ ಭಾಗದಲ್ಲಿ ನಾನು ಭಾರ ಇಳಿಸಲು ಮಾಡಿದ ಎಲ್ಲ ಕಸರತ್ತುಗಳು ಇರಲಿವೆ. ಮತ್ತೊಂದು ಭಾಗದಲ್ಲಿ ಕುಕ್ ಬುಕ್ ರೀತಿಯಲ್ಲಿದೆ. ನಾನೊಬ್ಬ ತಿಂಡಿಪೋತ ಜತೆಯಲ್ಲಿ ಒಳ್ಳೆಯ ಕುಕ್ ಕೂಡ ಆಗಿದ್ದೇನೆ. ಅದಕ್ಕಾಗಿ ಹೊಸ ರೀತಿಯ ಅಡುಗೆ ರೆಸಿಪಿಗಳನ್ನು ಕೂಡ ಈ ಕೃತಿಯಲ್ಲಿ ನೀಡಲಿದ್ದೇನೆ. ಅಂದಹಾಗೆ ಈ ಕೃತಿ ಆರು ತಿಂಗಳೊಳಗಾಗಿ ದೇಶದ ಎಲ್ಲ ಪುಸ್ತಕ ಅಂಗಡಿಗಳಲ್ಲಿ ಸಿಗಲಿದೆ. ಅಲ್ಲಿವರೆಗೂ ಅದ್ನಾನ್ ಸಾಮಿಯ ಕೃತಿಗಾಗಿ ಕಾದು ಕೂರುವ ಕಾಯಕ ಮುಂದುವರಿಸಬೇಕು.
(vk daily lvk puravani published dis article on 27.1.2012)

ಧೋನಿಯಲ್ಲಿ ‘ರೈ’ಸ್ ಬಾತ್


ಕ್ರಿಕೆಟರ್ ಧೋನಿ ಕುರಿತು ಹರಿದಾಡುವ ಎಲ್ಲ ವಿಚಾರಗಳಿಗೂ ಬ್ರೇಕ್ ಕೊಟ್ಟು ಬಿಡಿ. ಧೋನಿ ಈಗ ಹಿರಿ ತೆರೆಯ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಕನ್ನಡದ ನಟ ಕಮ್ ನಿರ್ದೇಶಕ ಪ್ರಕಾಶ್ ರೈ ಧೋನಿಯನ್ನು ಬಗಲಿಲ್ಲಿ ಇಟ್ಟುಕೊಂಡು ಬ್ಯಾಟಿಂಗ್ ಮಾಡಲು ಬಂದಿದ್ದಾರೆ.

ನೂರು ಶೇಕಡಾದಷ್ಟು ಟೋಟಲ್ ನಿರೀಕ್ಷೆ. ಜತೆಗೆ ಧೋನಿ ಹೇಗೆ ಬರುತ್ತಾನಪ್ಪ ..ಎನ್ನುವ ಪುಟ್ಟ ಕುತೂಹಲ. ಹೊಸ ವರ್ಷದ ಆರಂಭದಲ್ಲಿಯೇ ಧೋನಿ ಸಾರಥ್ಯದ ಟೀಂ ಇಂಡಿಯಾ ಮುಗ್ಗರಿಸಿಕೊಂಡು ಬೀಳುತ್ತಿರುವುದು ಧೋನಿ ಫ್ಯಾನ್‌ಗಳಿಗಂತೂ ಕೆಟ್ಟ ವಿಚಾರ ಇರಬಹುದು. ಧೋನಿ ಫೀಲ್ಡ್‌ನಲ್ಲಿ ಎರ್ರಾಬಿರ್ರಿ ಎಡವಟ್ಟು ಮಾಡಿಕೊಂಡು ಸುದ್ದಿ ಅಂಕಣದಲ್ಲಿ ಬಂದು ಬೀಳುತ್ತಿರುವುದು ದಿನ ನಿತ್ಯದ ಕಾಮನ್ ಪಿನೋಮಿನಾ ಅಲ್ವಾ..? ಆದರೆ ಈ ಎಲ್ಲ ಬ್ಯಾಡ್ ನ್ಯೂಸ್‌ಗಳ ನಡುವೆ ಧೋನಿ ಮತ್ತೊಂದು ಏರಿಯಾದಲ್ಲಿ ವರ್ಕ್‌ಔಟ್ ಆಗುತ್ತಿದ್ದಾರೆ. ೧೧ ಮಂದಿಯ ಇರುವ ಟೀಂ ಇಂಡಿಯಾವನ್ನು ಬಿಟ್ಟು ಧೋನಿ ಬೇರೊಂದು ಫೀಲ್ಡ್‌ನಲ್ಲಿ ಚಮಕ್ ತೋರಿಸಲಿದ್ದಾರೆ.
ಹೌದು. ಫೆಬ್ರವರಿ ಫಸ್ಟ್ ವೀಕ್‌ನಲ್ಲಿ ಧೋನಿ ಏಕ್‌ದಂ ಸಿನ್ಮಾ ಥಿಯೇಟರ್‌ಗೆ ನುಗ್ಗಿಕೊಂಡು ಬರಲಿದ್ದಾರೆ. ಬ್ಯಾಟ್‌ನ ಜಾಗದಲ್ಲಿ ಈ ಬಾರಿ ಧೋನಿ ಬರಿಗೈ ದಾಸನಾಗಿ ಪ್ರೇಕ್ಷಕರನ್ನು ಮೋಡಿ ಮಾಡುತ್ತಾರೆ. ‘ಧೋನಿ’ ಪ್ರಕಾಶ್ ರೈ ಅವರ ನಿರ್ದೇಶನದ ಹೊಸ ಚಿತ್ರ. ಧೋನಿ ಎನ್ನುವ ಟೈಟಲ್ ಕಾರ್ಡ್‌ನಿಂದಾಗಿ ಚಿತ್ರದ ಕಥೆ ಎಲ್ಲವೂ ಓಪನ್ ಸಿಕ್ರೇಟ್ ಆಗಿ ಹೋಗಿದೆ. ಚಿತ್ರದಲ್ಲಿರುವ ಕೆಲವೊಂದು ದೃಶ್ಯಗಳನ್ನು ನೋಡಿದಾಗ ಪ್ರೇಕ್ಷಕ ಟೋಟಲಿ ಬೋಲ್ಡ್ ಆಗಿ ಬಿಡುವ ಸನ್ನಿವೇಶಗಳು ಕ್ರಿಯೇಟ್ ಮಾಡಲಾಗಿದೆ ಎನ್ನೋದು ಚಿತ್ರದ ಫಸ್ಟ್ ಶೋ ನೋಡಿಕೊಂಡು ಹೊರಬಂದ ಚಿತ್ರ ವಿಮರ್ಶಕರ ಮಾತು.
ಅಂದಹಾಗೆ ಕನ್ನಡದ ಅಪ್ಪಟ ಪ್ರತಿಭಾವಂತ ನಟ ಕಮ್ ನಿರ್ಮಾಪಕ, ನಿರ್ದೇಶಕ ಪ್ರಕಾಶ್ ರಾಜ್( ರೈ) ಅವರ ಚಿತ್ರಗಳು ಎಂದರೆ ನಿರೀಕ್ಷೆಯ ಮೂಟೆಯೊಂದನ್ನು ಪ್ರೇಕ್ಷಕನ ತಲೆ ಮೇಲೆ ಏರಿಸಿ ಬಿಡುತ್ತಾರೆ. ಅದರಲ್ಲೂ ತಮಿಳಿನಲ್ಲಿ ಬಂದ ‘ಅಬಿಯುಂನಾನ್’ ಚಿತ್ರದ ಆವತರಣಿಕೆ ಕನ್ನಡದ ‘ನಾನು ನನ್ನ ಕನಸ್ಸು’ ಚಿತ್ರದ ನಂತರ ರೈ ಸಾಹೇಬ್ರ ಚಿತ್ರಗಳು ಪ್ರೇಕ್ಷಕನಿಗೆ ಮನರಂಜನೆ ಜತೆಯಲ್ಲಿ ಸಂದೇಶಗಳು ಕೊಟ್ಟು ಹೋಗುತ್ತದೆ ಎಂಬ ಅರಿವು ಪ್ರೇಕ್ಷಕನಿಗೆ ಖಾಯಂ ಆಗಿದೆ. ‘ಧೋನಿ’ಯಲ್ಲೂ ಇದೇ ರೀತಿಯ ಅಂಶಗಳಿರುವುದು ಗ್ಯಾರಂಟಿಯಾಗಿದೆ.
ಧೋನಿಯಲ್ಲಿ ಏನಿದೆ:
‘ಧೋನಿ’ ಪ್ರಕಾಶ್ ರೈ ತಮಿಳಿನಲ್ಲಿ ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರ. ಈಗಾಗಲೇ ಬೇರೆ ಭಾಷೆಯಲ್ಲಿ ರೈ ಸಾಹೇಬ್ರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡು ಗೆದ್ದು ಬಿಟ್ಟಿದ್ದಾರೆ. ಧೋನಿ ಚಿತ್ರ ತಮಿಳಿನ ಜತೆ ತೆಲುಗುನಲ್ಲೂ ಮೂಡಿಬರಲಿದೆ. ಚಿತ್ರದಲ್ಲಿ ಎಮೋಶನ್ ಹಾಗೂ ಸೆಂಟಿಮೆಂಟ್ ದೃಶ್ಯಗಳಿಗಂತೂ ಬರವಿಲ್ಲ. ಧೋನಿ ಚಿತ್ರವನ್ನು ಮಾಡಲು ಪ್ರಕಾಶ್ ರೈಗೆ ಮೂಲ ಪ್ರೇರಣೆ ತಮ್ಮ ಮಕ್ಕಳಾದ ಮೇಘನಾ, ಪೂಜಾ, ಸಿಂಧುವಂತೆ. ಅವರು ಬೋರ್ಡ್ ಎಕ್ಸಾಮ್‌ಗಾಗಿ ಪಡುತ್ತಿದ್ದ ಪಾಡುಗಳನ್ನು ಖುದ್ದು ‘ರೈ’ ಪಕ್ಕದಲ್ಲಿಯೇ ಕೂತು ನೋಡಿದ್ದರಂತೆ ! ಹೆಚ್ಚು ಮಾರ್ಕ್‌ಗಳನ್ನು ಪಡೆಯಲು ಒದ್ದಾಡುವ ಮಕ್ಕಳು, ಅವರು ತಮ್ಮ ಮಾನಸಿಕವಾಗಿ ಮಾಡಿಕೊಳ್ಳುವ ರಾಜಿತನ ಎಲ್ಲವೂ ಈ ಚಿತ್ರದಲ್ಲಿ ಕಾಣಿಸಿಕೊಡುವ ಪ್ರಯತ್ನ ನಡೆದಿದೆ ಎನ್ನುವುದು ಖುದ್ದು ರೈ ಅವರ ಮಾತು.
ಹೆತ್ತವರು ತಮ್ಮ ಮಕ್ಕಳ ಕನಸ್ಸು ಹಾಗೂ ನಿರ್ದಿಷ್ಟ ಗುರಿಯ ಕುರಿತು ಒಂಚೂರು ಅಲೋಚನೆಗೆ ಇಳಿಯದೇ ಅವರ ತಲೆ ತುಂಬಾ ತಮ್ಮ ವಿಚಾರಗಳನ್ನು ತುಂಬಿಸಿಬಿಟ್ಟು ಗೊಂದಲ ಸೃಷ್ಟಿಮಾಡುತ್ತಾರೆ. ಇಂತಹ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಕುರಿತು ನನಗೆ ಯಾವುದೇ ವಿರೋಧವಿಲ್ಲ. ಆದರೆ ಮಕ್ಕಳಿಗಂತೂ ಒಳ್ಳೆಯ ವಾತಾವರಣ ಸಿಗಲೇ ಬೇಕು. ಇದೇ ಧೋನಿ ಚಿತ್ರದ ಹೈಲೇಟ್ ಎನ್ನುವುದು ಪ್ರಕಾಶ್ ರಾಜ್‌ರ ಓಪನ್ ಸಿಕ್ರೇಟ್ ಮಾತು.
ಚಿತ್ರದಲ್ಲಿ ಖ್ಯಾತ ಚಿತ್ರನಿರ್ದೇಶಕ ಪುರಿ ಜಗನ್ನಾಥ್ ಅವರ ಪುತ್ರ ಆಕಾಶ್, ರಂಗಭೂಮಿ ಕಲಾವಿದೆ ರಾಥಿಕಾ ಆಪ್ಟೆ, ವಿಜಯ್, ಬಾಲಿವುಡ್ ನಟಿ ಮುಗ್ದಾ ಗೋಡ್ಸೆ, ನಾಜಾರ್, ಬ್ರಹ್ಮಾನಂದ ಜತೆಯಲ್ಲಿ ಅತಿಥಿ ಪಾತ್ರದಲ್ಲಿ ನಟ ಪ್ರಭುದೇವ್ ಕಾಡ ಕಾಣಿಸಿಕೊಂಡಿದ್ದಾರೆ. ಕೆ.ವಿ ಗುಣಾ ಚಿತ್ರಕ್ಕೆ ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಸಂಗೀತ ಮಾಂತ್ರಿಕ ಇಳೆಯರಾಜಾ ಅವರ ಸಂಗೀತ ಚಿತ್ರಕ್ಕಿದೆ.
ಚಿತ್ರದ ಕತೆಯಲ್ಲಿ ಪ್ರಕಾಶ್ ರಾಜ್ ಸರಕಾರಿ ನೌಕರಿಯಲ್ಲಿ ಇದ್ದುಕೊಂಡು ಮಧ್ಯಮ ವರ್ಗದ ಕನಸ್ಸುಗಳನ್ನು ಹೊತ್ತುಕೊಂಡಿರುವ ವ್ಯಕ್ತಿ. ತಮ್ಮ ಮಗನನ್ನು ಒಬ್ಬ ಸಕ್ಸಸ್‌ಫುಲ್ ವ್ಯಕ್ತಿಯಾನ್ನಾಗಿ ಮಾಡುವ ಛಲದಲ್ಲಿ ಪ್ರಕಾಶ್ ರಾಜ್ ಹಾಗೂ ಪುತ್ರ ನಡುವಿನ ಕೋಲ್ಡ್ ವಾರ್ ಇತರ ಹೈಲೇಟ್. ಪ್ರಕಾಶ್ ರಾಜ್ ಶಿಕ್ಷಣದಿಂದ ಗುರಿ ಮುಟ್ಟಲು ಸಾಧ್ಯವಿದೆ ಎಂಬ ವಾದದಲ್ಲಿ ಗಟ್ಟಿಯಾಗಿದ್ದರೆ ಇತ್ತ ಕಡೆ ಪುತ್ರ ಧೋನಿಯಂತೆ ಕ್ರಿಕೆಟರ್ ಆಗಬೇಕು ಎಂದುಕೊಂಡು ನಡೆಯುವ ಹುಡುಗ. ಅಂದಹಾಗೆ ಚಿತ್ರದ ಕುರಿತು ಇನ್ನಷ್ಟೂ ಮಾಹಿತಿಗಳನ್ನು ಧೋನಿ ಚಿತ್ರ ನೋಡಿಯೇ ಪಡೆಯಬೇಕು. ಟೋಟಲಿ ಧೋನಿ ಮೂಲಕ ಪ್ರಕಾಶ್ ‘ರೈ’ಸ್ ತಾರಾ ಎಂದು ಕಾದು ನೋಡಬೇಕು.
(vk lvk puravni published dis article on 27.1.2012)

ತರಗಲೆ ಹುಡುಗನ ಸಕ್ಸಸ್ ಸ್ಟೋರಿ ಬಾಲಿವುಡ್‌ಗೆ ಧನುಷ್ ಲಗ್ಗೆ


ಜೋರಾಗಿ ಗಾಳಿ ಬಂದರೆ ತರಗಲೆಯಂತೆ ಹಾರಿಬಿಡುವವ ಹೀರೋ ನಾ..? ಎನ್ನುವ ಡೌಟ್ ಅವನನ್ನು ನೋಡಿದ ಎಲ್ಲರಿಗೂ ಇತ್ತು. ಖುದ್ದು ಈ ಹುಡುಗನಿಗೂ ಅನ್ನಿಸಿದ್ದು ಇದೆ. ಆದರೆ ಆತನ ಅಣ್ಣ ಸೆಲ್ವ ಬಿಡಬೇಕಾಲ್ಲ ...ತೊಟ್ಟಿಯಲ್ಲಿ ಬಿದ್ದ ಕಸವನ್ನು ರಸ ಮಾಡುವವ ತನ್ನ ಸ್ವಂತ ತಮ್ಮನನ್ನು ಹೀರೋ ಮಾಡಲ್ವಾ..? ಇದು ಕಾಲಿ ಸ್ಟಾರ್ ಧನುಷ್ ಕತೆ ಮಾರಾಯ್ರೆ.

ಜೋರಾಗಿ ಗಾಳಿ ಬಂದರೆ ತರಗಲೆಯಂತೆ ಹಾರಿಬಿಡುವವ ಹೀರೋ ನಾ..? ಎನ್ನುವ ಡೌಟ್ ಅವನನ್ನು ನೋಡಿದ ಎಲ್ಲರಿಗೂ ಇತ್ತು. ಖುದ್ದು ಈ ಹುಡುಗನಿಗೂ ಅನ್ನಿಸಿದ್ದು ಇದೆ. ಬಹಳಷ್ಟು ಸಲ ತಂದೆ- ಅಣ್ಣನಲ್ಲಿ ಈ ವಿಚಾರವನ್ನು ಹೇಳಿಕೊಂಡು ನಟನೆಯಿಂದ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನವನ್ನು ಮಾಡಿಇಟ್ಟುಕೊಂಡಿದ್ದ. ಆದರೆ ಕೊನೆಗೂ ಆತನ ಅಣ್ಣ ಸೆಲ್ವರಾಘವನ್ ಇದ್ದನಲ್ಲ ಮಹಾನ್ ಪ್ರತಿಭಾವಂತ. ಇಡೀ ಕಾಲಿವುಡ್ ಇಂಡಸ್ಟ್ರಿಯಲ್ಲಿಯೇ ಬೇಡ ಎಂದ ಕಲಾವಿದರನ್ನೇ ಹೆಕ್ಕಿಕೊಂಡು ಸಿನ್ಮಾ ಮಾಡಿ ಬ್ಲಾಕ್ ಬ್ಲಾಸ್ಟರ್ ಸಿನ್ಮಾವಾಗಿ ಪರಿವರ್ತನೆ ಮಾಡುವ ತಾಕತ್ತು ಅವನಲ್ಲಿ ಹುದುಗಿತ್ತು.
ಇಂತಹ ಪ್ರತಿಭಾವಂತನ ತಮ್ಮ ಎಂದಾಗ ಒಂಚೂರು ಧೈರ್ಯ ಸೆಲ್ವರಾಘವನ್‌ನಿಗೂ ಮೊದಲೇ ಇತ್ತು. ಸಿನ್ಮಾ ರಂಗನೇ ಬೇಡ ಎಂದು ಕೂತಿದ್ದ ಹುಡುಗ ಬೇರೆ ಯಾರು ಅಲ್ಲ ಮಾರಾಯ್ರೆ. ಈಗೀನ್ ‘ಕೊಲೆವರಿ ಡಿ’ ಫೇಮ್ ಧನುಷ್. ತಮಿಳಿನ ಖ್ಯಾತ ನಿರ್ದೇಶಕ ಸೆಲ್ವರಾಘವನ್ ಅವರ ಸಹೋದರ ಧನುಷ್ ಮೊದಲು ನಾಯಕನಾಗಿ ನಟಿಸಿದ್ದ ಖುದ್ದು ಅಣ್ಣನ ಚಿತ್ರ ‘ಕಾದಲ್ ಕೊಂಡೈನ್’ನಲ್ಲಿ. ಈ ಚಿತ್ರ ಹಲವು ಕಾರಣಗಳಿಂದ ಕಾಲಿವುಡ್‌ನಲ್ಲಿ ಭರ್ಜರಿ ಟಾಕ್ ಆಯಿತು. ಸೆಲ್ವರಾಘವನ್‌ರ ಮಾಜಿ ಪತ್ನಿ ಸೋನಿಯಾ ಅಗರ್‌ವಾಲ್ ಈ ಚಿತ್ರದ ನಾಯಕಿಯಾಗಿದ್ದರು. ಚಿತ್ರ ವಿಚಿತ್ರ ಕತೆಯಿಂದ ಕಾಲಿವುಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಜತೆಯಲ್ಲಿ ಅವಾರ್ಡ್‌ಗಳನ್ನು ದೋಚಿತು. ಇದೇ ಧನುಷ್ ಈ ಚಿತ್ರದ ಮೂಲಕ ಒಂದೇ ರಾತ್ರಿಯಲ್ಲಿ ಕಾಲಿವುಡ್‌ನ ಹೊಸ ನಾಯಕನ ಪಟ್ಟಕ್ಕೆ ಅರ್ಹ ವ್ಯಕ್ತಿ ಎನ್ನುವ ಮಾತು ಬಂತು.
ನಂತರ ನಡೆದದ್ದು ಮಾತ್ರ ಊಹಿಸಲು ಅಸಾಧ್ಯ. ಧನುಷ್ ಒಪ್ಪಿಕೊಂಡ ಚಿತ್ರಗಳೆಲ್ಲವೂ ಕಾಲಿವುಡ್‌ನಲ್ಲಿ ಒಳ್ಳೆಯ ಕಲೆಕ್ಷನ್ ಜತೆಯಲ್ಲಿ ಹೆಸರನ್ನು ತಂದುಕೊಟ್ಟಿತ್ತು. ‘ತಿರುಡಾ-ತಿರುಡಿ’, ‘ಪೊಲ್ಲಧವನ್’, ‘ಅಡುಕಲಂ’, ‘ಮಾಯಕ್ಕಂ ಎನ್ನಾ’ ಈಗ ಮೂನ್ ಚಿತ್ರನೂ ‘ಕೊಲೆವರಿ ಡಿ’ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿಕೊಂಡು ಪ್ರಚಾರ ಪಡೆದುಕೊಂಡು ಹಿಂದಿಗೂ ಡಬ್ ಆಗುವ ಸೂಚನೆನೂ ಕೊಟ್ಟಿದೆ.
ಐಶ್ ಕೈ ಹಿಡಿದ ರಾಜಾ:
ವೆಂಕಟೇಶ್ ಪ್ರಭು ಕಸ್ತೂರಿ ರಾಜಾ ಎನ್ನುವುದು ಧನುಷ್‌ರ ಮೂಲ ಹೆಸರು. ಧನುಷ್ ಕಸ್ತೂರಿ ರಾಜಾ ಎನ್ನುವ ಹೆಸರಿನಲ್ಲಿ ಸಾಮಾಜಿಕ ತಾಣವಾದ ಫೇಸ್‌ಬುಕ್‌ನಲ್ಲಿ ಅಕೌಂಟ್ ಹೊಂದಿದ್ದಾರೆ. ಆರಂಭದ ಚಿತ್ರದಲ್ಲಿ ಸೆಲ್ವರಾಘವನ್ ಅವರ ಸೂಚನೆ ಮೇರೆಗೆ ಬಹಳ ಉದ್ದ ಇದ್ದ ಹೆಸರನ್ನು ಕಟ್ ಮಾಡಿ ಧನುಷ್ ಎಂದು ಇಡಲಾಯಿತು. ಕಸ್ತೂರಿ ರಾಜಾ ಎನ್ನುವುದು ಅವರ ತಂದೆಯ ಹೆಸರು. ಕಾಲಿವುಡ್ ಚಿತ್ರನಗರಿಯಲ್ಲಿ ಕಸ್ತೂರಿ ರಾಜಾ ದೊಡ್ಡ ಚಿತ್ರ ನಿರ್ದೇಶಕರಾಗಿದ್ದವರು.
ಧನುಷ್ ನಿಜಕ್ಕೂ ಸ್ಟಾರ್ ಬದಲಾಗಿ ಹೋಗಿದ್ದು, ಐಶ್‌ರನ್ನು ಮದುವೆಯಾದ ನಂತರ ಎನ್ನುವುದು ಕಾಲಿವುಡ್ ಪಂಡಿತರ ಮಾತು. ಐಶ್ ಬೇರೆ ಯಾರು ಅಲ್ಲ. ಕಾಲಿವುಡ್‌ನ ಸೂಪರ್‌ಸ್ಟಾರ್ ರಜನೀಕಾಂತ್ ಅವರ ಮಗಳು ಐಶ್ವರ್ಯಾ ರಜನೀಕಾಂತ್. ೨೦೦೪ರಲ್ಲಿ ಧನುಷ್ ಹಾಗೂ ಐಶ್ ಇಬ್ಬರು ಮದುವೆಯಾದರು ಈಗ ಯಾತ್ರಾ ಹಾಗೂ ಲಿಂಗ ಎನ್ನುವ ಪುಟ್ಟ ಎರಡು ಮಕ್ಕಳು ಧನುಷ್‌ನನ್ನು ತಂದೆ ಎನ್ನುತ್ತಿದೆ. ಐಶ್ ಖುದ್ದು ನಿರ್ಮಾಣ ಮಾಡುತ್ತಿರುವ ‘ಮೂನ್’ ಚಿತ್ರದಲ್ಲಿ ಧನುಷ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೂನ್ ಚಿತ್ರದ ಕೊಲೆವರಿ ಹಾಡು ಈಗಾಗಲೇ ಸಖತ್ ಕಿಕ್ ಕೊಟ್ಟಿದೆ.
ಕಾಲಿನಿಂದ ಬಾಲಿ:
ಧನುಷ್ ‘ಮೂನ್’ಚಿತ್ರದ ಮೂಲಕ ಬಾಲಿವುಡ್‌ಗೂ ಕಾಲಿಡಲಿದ್ದಾರೆ ಎನ್ನುವ ಸೂಚನೆ ಬಹಳ ಹಿಂದೆನೇ ಮಾತಾಗಿತ್ತು. ಆದರೆ ‘ಮೂನ್’ ಚಿತ್ರ ನಿಜಕ್ಕೂ ತಮಿಳಿನಲ್ಲಿ ಬಂದು ಹಿಂದಿಗೆ ಡಬ್ ಆಗುತ್ತಿರುವುದರಿಂದ ಈ ಚಿತ್ರ ಧನುಷ್‌ನ ಮೊದಲ ಬಾಲಿವುಡ್ ಚಿತ್ರವಲ್ಲ ಎನ್ನುವುದು ಬಹುತೇಕ ಅಭಿಪ್ರಾಯ. ಅದಕ್ಕಾಗಿ ಧನುಷ್ ಬಾಲಿವುಡ್ ಚಿತ್ರ‘ ರಾನ್‌ಜಾ’ದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಬಾಲಿವುಡ್ ನಿರ್ದೇಶಕ ಆನಂದ್ ಎಲ್. ರಾಯ್ ನಿರ್ದೇಶನ ಮಾಡುತ್ತಿದ್ದಾರೆ.
ಆನಂದ್ ಎಲ್. ರಾಯ್ ಈ ಮೊದಲು ‘ತನು ವೆಡ್ಸ್ ಮನು’ ಚಿತ್ರವನ್ನು ಮಾಡಿ ಬಾಲಿವುಡ್‌ನಲ್ಲಿ ತಮ್ಮ ಹೆಸರನ್ನು ಚಾಲ್ತಿಗೆ ತಂದಿದ್ದರು. ಈಗಾಗಲೇ ಬನರಾಸ್, ಚೆನ್ನೈ ಹಾಗೂ ಮುಂಬಯಿ, ಹೈದರಾಬಾದ್ ಸುತ್ತಮುತ್ತ ಚಿತ್ರ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಧನುಷ್‌ಗೆ ಸರಿಯಾಗಿ ಹಿಂದಿ ಗೊತ್ತಿಲ್ಲದ ಕಾರಣ ಹಿಂದಿ ಗೈಡ್ ಒಬ್ಬರನ್ನು ಇಟ್ಟುಕೊಂಡು ಚಿತ್ರೀಕರಣಕ್ಕೆ ತಯಾರಿ ಮಾಡಲಾಗುತ್ತಿದೆ.
ಧನುಷ್ ಈ ಚಿತ್ರಕ್ಕೆ ಖುದ್ದು ಡಬ್ ಮಾಡುತ್ತಾರೆ ಎಂದು ಒಪ್ಪಿಕೊಂಡ ಕಾರಣ ಹಿಂದಿ ಭಾಷೆಯನ್ನು ಸೀರಿಯಸ್ ಆಗಿ ಧನುಷ್ ಸ್ಟಡಿ ಮಾಡುತ್ತಿದ್ದಾರೆ. ಧನುಷ್ ಹೇಳುವಂತೆ ‘ ಹಿಂದಿ ಕಲಿಯಲು ನನಗೇನೂ ಕಷ್ಟವಿಲ್ಲ. ಆದರೆ ಇಲ್ಲಿ ಬರೀ ಭಾಷೆ ಮಾತ್ರವಲ್ಲ ಒಂದು ಸಂಸ್ಕೃತಿಯ ಅಧ್ಯಯನ ಮುಖ್ಯವಾಗಿದೆ. ಅದಕ್ಕಾಗಿ ಎರಡನ್ನು ಜತೆಯಾಗಿ ಕಲಿಯಬೇಕು ಎಂದುಕೊಂಡಿದ್ದೇನೆ’ ಎಂದು ಟ್ವಟ್ಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಚಿತ್ರದ ನಿರ್ದೇಶಕ ಆನಂದ್ ಹೇಳುವಂತೆ ‘ ತನು ವೆಡ್ಸ್ ಮನು ಮುಗಿದ ನಂತರ ಆರು ತಿಂಗಳ ಕಾಲ ನನ್ನ ಹೊಸ ಕತೆಗೆ ನಾಯಕನ ಹುಡುಕಾಟ ನಡೆಸಿದೆ. ತಮಿಳಿನಲ್ಲಿ ಬಂದ ‘ಆಡುಕಲಂ’ ಚಿತ್ರವನ್ನು ನೋಡಿದ ನಂತರ ಧನುಷ್ ಈ ಚಿತ್ರಕ್ಕೆ ಸರಿಯಾದ ಪಾತ್ರಧಾರಿ ಎಂದುಕೊಂಡೆ. ತಕ್ಷಣವೇ ಧನುಷ್ ಬಳಿ ಚಿತ್ರದ ಕತೆ ಕುರಿತು ಮಾತುಕತೆ ನಡೆಸಿದೆ. ಕತೆ ಧನುಷ್‌ಗೆ ತುಂಬಾ ಇಷ್ಟವಾಯಿತು. ಇನ್ನೇನೂ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮಾಡಲು ನಿರ್ಧಾರವಾಗಿದೆ’ ಎಂದಿದ್ದಾರೆ.
ಪ್ರೇಮ ಕತೆಯನ್ನು ಹೊಂದಿರುವ ಈ ಚಿತ್ರ ‘ತನು ವೆಡ್ಸ್ ಮನು’ನಂತೆ ಕಂಡರೂ ಪಾತ್ರವರ್ಗದಲ್ಲಿ ಬಹಳಷ್ಟು ವಿಭಿನ್ನತೆಯನ್ನು ತರಲು ಯೋಚನೆ ಮಾಡಲಾಗಿದೆ. ಚಿತ್ರದ ಆರಂಭ ಬನರಾಸಿನಿಂದ ಸ್ಟಾರ್ಟ್ ಆಗುತ್ತದೆ. ಈಗಾಗಲೇ ಬನರಾಸಿನಲ್ಲಿ ಚಿತ್ರೀಕರಣಕ್ಕೆ ಮುಹೂರ್ತ ಇಡಲಾಗಿದೆ. ಈ ವರ್ಷದ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರುವ ಕುರಿತು ಮಾತುಕತೆ ನಡೆದಿದೆ. ಈ ಮೂಲಕ ಕಾಲಿವುಡ್‌ನ ಯಂಗ್ ಸ್ಟಾರ್ ಧನುಷ್ ಬಾಲಿವುಡ್‌ನಲ್ಲೂ ಮಿಂಚುಹರಿಸಲಿದ್ದಾರೆ ಎನ್ನುವ ಮಾತನ್ನು ಒಪ್ಪಬೇಕಾದರೆ ಚಿತ್ರ ಬಿಡುಗಡೆಯವರೆಗೂ ಕಾದು ನಿಲ್ಲಬೇಕು ಅಲ್ವಾ..?
( vk lvk daily published dis article on 27.1.2012)