* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಪಡಸಾಲೆಯ ವಿಷ್ಯಾನೇ ಹಾಗೇ ಅಲ್ಲಿ ಬಣ್ಣದಾಟವಿದೆ ಅದಕ್ಕೂ ಮಿಗಿಲಾಗಿ ದುಡ್ಡು ಪ್ಲಸ್ ಗೌರವ ಜತೆಗೆ ಸಿಕ್ಕಿಕೊಂಡಿರುತ್ತದೆ. ಇವೆಲ್ಲಗಳನ್ನು ಜತೆಯಾಗಿ ನೋಡಿದಾಗ ಯಾರು ಕೂಡ ಬಣ್ಣದ ಲೋಕಕ್ಕೆ ಎಂಟ್ರಿಯಾಗಲು ಬಯಸುತ್ತಾರೆ. ಇಲ್ಲಿ ಬಂದ ನಂತರ ತಮ್ಮ ಫಿಲ್ಮೋಗ್ರಾಫಿಯ ಮೂಲಕ ಒಂದು ಹಂತಕ್ಕೆ ತಲುಪಿ ನಂತರ ಅಲ್ಲಿಂದ ಒಂದೊಂದು ಮೆಟ್ಟಿಲು ಕೆಳಗೆ ಜಾರುತ್ತಾರೆ. ಕೊನೆಗೆ ಅತ್ತ ಸಿನಿಮಾನೂ ಇಲ್ಲ ಇತ್ತ ಕಡೆಯಲ್ಲೂ ಗ್ಲಾಮರ್ ಕೂಡ ಉಳಿಯದೇ ಹೋದಾಗ ಬಣ್ಣದ ಬದುಕಿನ ನಂಟು ಬಿಡಲು ಸಾಧ್ಯವಾಗದೇ ಕೊನೆಗೆ ಬಾಲಿವುಡ್‌ನಲ್ಲಿ ಹೊಸ ರೋಲ್‌ನಲ್ಲಿ ಕಾಣಿಸಿಕೊಳ್ಳಲು ತಯಾರಿ ನಡೆಸುತ್ತಾರೆ. ಅದುವೇ ನಿರ್ಮಾಪಕಿಯರು. ಅಂದಹಾಗೆ ಈಗ ಬಾಲಿವುಡ್ ಅಂಗಳದಲ್ಲಿ ಸಿನಿಮಾ ನಟಿಯರು ಚಿತ್ರದ ನಿರ್ಮಾಣದ ನೊಗ ಹೊತ್ತ ಪ್ರಕರಣಗಳು ಒಂದೊಂದಾಗಿ ಹೊರಬೀಳುತ್ತಿದೆ. ಅದು ಯಾರು ಅಂತೀರಾ ಇಲ್ಲಿದೆ ನಟಿಯರು ಬದಲಾಗಿ ನಿರ್ಮಾಪಕಿಯಾದವರ ಕತೆ..
* ಗ್ಲಾಮರ್ ಗೊಂಬೆ ಶಿಲ್ಪಾ ಶೆಟ್ಟಿ :
ಶಿಲ್ಪಾ ಶೆಟ್ಟಿ ಮೂಲತಃ ಕರಾವಳಿಯ ಬಂಟರ ಹುಡುಗಿ. ಅದರಲ್ಲೂ ಬಾಲಿವುಡ್‌ನಲ್ಲಿ ನಟಿಯಾಗಿ ನಂತರ ಫಿಟ್ನೆಸ್ ಎಕ್ಸ್‌ಪರ್ಟ್ ಸೇರಿದಂತೆ ಉದ್ಯಮ ರಂಗದಲ್ಲೂ ಶಿಲ್ಪಾ ಕೆಲಸ ಮಾಡಿದ್ದಾರೆ. ಕ್ರಿಕೆಟ್ ಹೆಣ್ಣು ಮಕ್ಕಳಿಗೆ ತಕ್ಕದಲ್ಲ ಎನ್ನುವ ಮಾತಿಗೆ ವಿರುದ್ಧವಾಗಿ ತಾನೇ ಐಪಿಎಲ್ ತಂಡವೊಂದನ್ನು ಖರೀದಿ ಮಾಡಿ ಯಶಸ್ವಿಯಾಗಿ ತಂಡದ ಬಲ ಹೆಚ್ಚಿಸುತ್ತಿದ್ದಾರೆ. ಈಗ ಬಾಲಿವುಡ್‌ನಲ್ಲಿ ನಿರ್ಮಾಪಕರಾಗಿ ಸೌಂಡ್ ಮಾಡಲು ಹೊರಟಿದ್ದಾರೆ.ಆಂದಹಾಗೆ ಮಾ.೨೮ಕ್ಕೆ ತೆರೆಗೆ ಬರಲು ಹವಣಿಸುತ್ತಿರುವ ‘ಡಿಸ್ಕ್ಯೂನ್’ ನಿರ್ಮಾಪಕರಾಗಿ ಶಿಲ್ಪಾ ಶೆಟ್ಟಿ ಹಾಗೂ ಸುನೀಲ್ ಲೂಲು ಕಾರ‍್ಯ ನಿರ್ವಹಿಸಿದ್ದಾರೆ.
ಬಹಳ ದಿನಗಳ ನಂತರ ಹರ್ಮನ್ ಬೇವಾಜಾ ನಾಯಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಕೂಡ ಹರ್ಮನ್ ಜತೆಗೆ ಐಟಂ ಸಾಂಗ್‌ವೊಂದರಲ್ಲಿ ಕುಣಿದಿದ್ದಾರೆ. ನಾಯಕಿಯಾಗಿ ಹೊಸ ಹುಡುಗಿ ಅಯೇಷಾ ಖುರುನಾ ಚಿತ್ರದಲ್ಲಿ ನಟಿಸಿದ್ದಾರೆ. ಸನ್ನಿ ಡಿಯೋಲ್ ಅವರ ಆಕ್ಷನ್ ಕೂಡ ಚಿತ್ರದಲ್ಲಿ ಕಾಣಸಿಗಲಿದೆ. ಟೋಟಲಿ ಸಿನಿಮಾದ ಕುರಿತು ಶಿಲ್ಪಾ ಶೆಟ್ಟಿ ಹೇಳುವ ಮಾತು ಹೀಗಿದೆ: ಭೂಗತ ಜಗತ್ತಿನಲ್ಲಿ ಮಸಾಲೆ ಹಾಗೂ ಮನರಂಜನೆಯನ್ನು ನೀಡುವ ಪ್ರಯತ್ನ ಈ ಚಿತ್ರದಲ್ಲಿ ಸಾಗಿದೆ. ಚಿತ್ರ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸ ಇದೆ.
ಭಟ್ಟರ ಹುಡುಗಿ ಪೂಜಾ ಭಟ್:
ಬಾಲಿವುಡ್ ಅಂಗಳಲ್ಲಿ ‘ಡ್ಯಾಡಿ’, ‘ದಿಲ್ ಹೈ ಕೀ ಮಾನ್‌ತಾ ನಹೀಂ’, ‘ಝಕಂ’ ಚಿತ್ರದ ಮೂಲಕ ಹೊರ ಬಂದ ಪ್ರತಿಭೆ ಪೂಜಾ ಭಟ್. ಮೂಲತಃ ನಿರ್ದೇಶಕ ಹಾಗೂ ನಿರ್ಮಾಪಕರ ಮನೆತನದಿಂದ ಬಂದ ಪೂಜಾ ಭಟ್ ಆರಂಭದಲ್ಲಿ ಸಿನಿಮಾದಲ್ಲಿ ನಟಿಯಾಗಿಯೇ ಗುರುತಿಸಿಕೊಂಡವರು ಒಂದು ಹಂತದವರೆಗೂ ನಟಿಯಾಗಿ ನಂತರ ತಮ್ಮ ಕ್ಷೇತ್ರವನ್ನು ನಿರ್ಮಾಣ, ನಿರ್ದೇಶನದತ್ತ ಕಣ್ಣು ನೆಟ್ಟವರು. ೯೭ರಲ್ಲಿ ‘ತಾಮನ್ನಾ’ಕ್ಕೆ ನಿರ್ಮಾಪಕರಾಗಿ ಮಾತ್ರ ಕೆಲಸ ಮಾಡದೇ ಅದರಲ್ಲೂ ಬಣ್ಣ ಹಚ್ಚಿದರು. ಈ ನಂತರ ತಮ್ಮದೇ ಬ್ಯಾನರ್ ಫಿಶ್‌ಐ ನೆಟ್‌ವರ್ಕ್ ಮೂಲಕ ೧೦ಕ್ಕೂ ಅಧಿಕ ಸಿನಿಮಾಗಳನ್ನು ಬಾಲಿವುಡ್‌ನ ಅಂಗಳಕ್ಕೆ ತಂದರು. ಅದರಲ್ಲಿ ‘ದುಸ್ಮಾನ್’, ‘ಝಕಂ’ ಜಿಸ್ಮ್, ಜಿಸ್ಮ್-೨ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಕಂಡಿದೆ.
ಬೋಲ್ಡ್ ಬ್ಯೂಟಿ ಅಮೀಷಾ ಪಟೇಲ್:
ಹೃತಿಕ್ ರೋಷನ್ ಅಭಿನಯದ ‘ಕಹೋ ನಾ ಪ್ಯಾರ್ ಹೈ’ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ ನಂತರ ಗದ್ದರ್‌ನಲ್ಲಿ ಪಕ್ಕಾ ಗ್ರಾಮೀಣ ಭಾರತದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡ ಅಮೀಷಾ ಪಟೇಲ್ ನಂತರ ದಿನಗಳಲ್ಲಿ ಯಾವುದೇ ಮ್ಯಾಜಿಕ್ ಮಾಡಲು ವಿಫಲರಾದರು. ಅವರು ನಟಿಸಿದ ‘ಹಮ್ರಾಝ್’, ‘ಹನಿಮೂನ್ ಟ್ರಾವೆಲ್ಸ್’ ಚಿತ್ರಗಳು ತಕ್ಕಮಟ್ಟಿನ ಯಶಸ್ಸು ಕಟ್ಟಿಕೊಟ್ಟಿತ್ತು. ಈಗ ‘ದೇಸಿ ಮ್ಯಾಜಿಕ್’ ಚಿತ್ರವೊಂದನ್ನು ಅಮೀಷಾ ಪಟೇಲ್ ನಿರ್ಮಾಪಕರಾಗುತ್ತಿದ್ದಾರೆ. ಜಾಹೇದ್ ಖಾನ್, ಶಾಹಿಲ್ ಶ್ರಾಫ್, ಅಮೀಷಾ ಪಟೇಲ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ರೂಪದರ್ಶಿಯ ಅವತಾರ ದಿಯಾ ಮಿರ್ಜಾ:
ಬಾಲಿವುಡ್ ಅಂಗಳಕ್ಕೆ ಬರುವುದಕ್ಕೂ ಮೊದಲು ರೂಪದರ್ಶಿಯಾಗಿ ಮಿಂಚಿ ನಂತರ ನಟನಾ ಕ್ಷೇತ್ರಕ್ಕೆ ಬಂದು ಬಿದ್ದು ಹೋದ ಹುಡುಗಿ ದಿಯಾ ಮಿರ್ಜಾ. ‘ಹೇ ಬೇಬಿ’, ‘ಶೂಟೌಟ್ ಎಟ್ ಲೋಖನ್‌ವಾಲಾ’ ‘ಪರಿಣಿತಾ’ ಹಾಗೂ ‘ಹನಿಮೂನ್ ಟ್ರಾವೆಲ್ಸ್’ ಚಿತ್ರಗಳಲ್ಲಿ ಸೆಕೆಂಡ್ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ತೆರೆ ಮರೆಗೆ ಸರಿದ ದಿಯಾ ಮಿರ್ಜಾ ಈಗ ನಟ ಜಾಹೇದ್ ಖಾನ್ ಜತೆಗೂಡಿ ‘ಬೋರ್ನ್ ಫ್ರಿ’ ಎನ್ನುವ ಪ್ರಾಡಕ್ಷನ್ ಹೌಸ್‌ವೊಂದನ್ನು ತೆರೆದಿದ್ದಾರೆ. ೨೦೧೧ರಲ್ಲಿ ಈ ಬ್ಯಾನರ್‌ಯಡಿಯಲ್ಲಿ ಲವ್, ಬ್ರೇಕ್ ಆಫ್ಸ್, ಜೀಂದಿಗಿಯಲ್ಲಿ ಇಬ್ಬರು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು.ಚಿತ್ರ ಹೇಳಿಕೊಳ್ಳುವಂತೆ ಯಶಸ್ವಿಯಾಗಿಲ್ಲ. ಈ ಬಳಿಕ ವಿದ್ಯಾ ಬಾಲನ್ ನಟಿಸುತ್ತಿರುವ ‘ಬಾಬಿ ಜಾಸೂಸ್’ ಚಿತ್ರಕ್ಕೆ ಹಣ ಸುರಿದಿದ್ದಾರೆ.
ಚೆಲ್ಲು ಹುಡುಗಿ ಪ್ರೀತಿ ಝಿಂಟಾ:
ಬಾಲಿವುಡ್ ನಟಿಯಾಗಿ ಕಮ್ ರೂಪದರ್ಶಿಯಾಗಿ ಕೂಡ ಪ್ರೀತಿ ಸಕ್ಸಸ್ ಕಂಡಿದ್ದಾರೆ. ಅದರಲ್ಲೂ ‘ಸೋಲ್ಜರ್’, ‘ಕಲ್ ಹೋ ನಾ ಹೋ’ ಚಿತ್ರಗಳು ಪ್ರೀತಿಗೆ ಹೆಸರು ಹಾಗೂ ಹಣ ಎಲ್ಲವೂ ಕೊಟ್ಟಿತ್ತು. ಇದರ ಜತೆಗೆ ಮಾಜಿ ಪ್ರಿಯಕರ ನೆಸ್ ವಾಡಿಯಾ ಜತೆಗೂಡಿ ಐಪಿಎಲ್ ಕ್ರಿಕೆಟ್ ತಂಡವೊಂದನ್ನು ಖರೀದಿ ಮಾಡಿ ನಡೆಸುತ್ತಿದ್ದಾರೆ. ೨೦೧೩ರಲ್ಲಿ ತೆರೆಗೆ ಬಂದ ‘ಈಷ್ಕ್ ಇನ್ ಫ್ಯಾರಿಸ್’ನಲ್ಲಿ ನಟಿಸುವ ಜತೆಗೆ ಚಿತ್ರಕ್ಕೆ ಬಂಡವಾಳ ತಂದು ಸುರಿದವರು ಕೂಡ ಪ್ರೀತಿ ಝಿಂಟಾ ಎನ್ನುವುದು ಗಮನಿಸಬೇಕಾದ ವಿಷ್ಯಾ.
ವಿಶ್ವ ಸುಂದರಿ ಲಾರಾದತ್ತ:
ವಿಶ್ವ ಸುಂದರಿ ಕಿರೀಟಧಾರೀಣಿ ಲಾರಾದತ್ತ ಸೌಂದರ್ಯದ ಮೂಲಕವೇ ಬಾಲಿವುಡ್ ಅಂಗಳಕ್ಕೆ ಜಿಗಿದ ನಟಿ. ಟೆನಿಸ್ ತಾರೆ ಮಹೇಶ್ ಭೂಪತಿಯನ್ನು ಒಲಿಸಿಕೊಂಡಿರುವ ಲಾರಾದತ್ತ ‘ನೋ ಎಂಟ್ರಿ’ ಹಾಗೂ ‘ಪಾರ್ಟನರ್’ ಚಿತ್ರದಿಂದ ಸಾಕಷ್ಟು ಹೆಸರು ಬೆಳೆಸಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ ನಿರ್ಮಾಣವಾದ ‘ಚಲೋ ದಿಲ್ಲಿ’ಯಲ್ಲಿ ಪೂರ್ಣ ಪ್ರಮಾಣದ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ.
ಮನೀಷಾ ಕೊಯಿರಾಲಾ:
‘ಸೌದಾಗಾರ್’ ಹಾಗೂ ‘ಬಾಂಬೇ’ ಚಿತ್ರದ ಮೂಲಕ ಮನೀಷಾ ಕೊಯಿರಾಲಾ ಎನ್ನುವ ನೇಪಾಳಿ ಬೆಡಗಿ ಬಾಲಿವುಡ್ ಅಂಗಳದಲ್ಲಿ ಸುದ್ದಿ ಮಾಡಿದಳು. ೨೦೦೪ರಲ್ಲಿ ತೆರೆಗೆ ಬಂದ ‘ಪೈಸಾ ವಸೂಲ್’ ಚಿತ್ರಕ್ಕೆ ಮನೀಷಾ ಕೊಯಿರಾಲಾ ಹಣ ಸುರಿದಿದ್ದಾರೆ. ಆದರೆ ಚಿತ್ರ ಮಾತ್ರ ಯಶಸ್ಸು ಕಾಣಲೇ ಇಲ್ಲ.
ಹರ್ಷಿತಾ ಭಟ್:
ಶಾರೂಕ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ‘ಅಶೋಕ’ದಲ್ಲಿ ಕಾಣಿಸಿಕೊಂಡ ಹರ್ಷಿತಾ ಭಟ್ ೨೦೧೧ರಲ್ಲಿ ‘ಶಕಲ್ ಪೇ ಮತ್ ಜಾ’ವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನು ನಿರ್ದೇಶನ ಮಾಡಿದ್ದು ಖ್ಯಾತ ನಿರ್ದೇಶಕ ಶುಭಾ ಮುಖರ್ಜಿ. ಟೋಟಲಿ ಹಾಸ್ಯ ಚಿತ್ರವಾದರೂ ಬಾಕ್ಸಾಫೀಸ್‌ನಲ್ಲಿ ಕಮಾಲ್ ತೋರಿಸಲು ವಿಫಲವಾಯಿತು.
ಸುಶ್ಮಿತಾ ಸೇನ್:
೨೦೦೭ರಲ್ಲಿ ಮಿಸ್ ಯೂನಿವರ್ಸ್ ಆಗಿ ಆಯ್ಕೆಯಾದ ಸುಶ್ಮಿತಾ ಸೇನ್ ಇಂಗ್ಲೀಷ್ ಚಿತ್ರ ‘ಝಾನ್ಸಿ ಕೀ ರಾಣಿ’ಗೆ ಹಣ ಸುರಿದು ನಿರ್ಮಾಪಕರಾದರು. ಆದರೆ ಚಿತ್ರವಂತೂ ಬಾಕ್ಸಾಫೀಸ್‌ನಲ್ಲಿ ಸೋತು ಹೋಯಿತು. ಈ ಬಳಿಕ ಸುಶ್ಮಿತಾ ಸೇನ್ ನಿರ್ಮಾಣ ಕ್ಷೇತ್ರಕ್ಕೆ ಕಾಲೇ ಇಟ್ಟಿಲ್ಲ.
ಗೆದ್ದು ಬಂದ ಜೂಹೀ ಚಾವ್ಲಾ:
ಬಾಲಿವುಡ್ ನಟಿ ಜೂಹೀ ಚಾವ್ಲಾ ತಮ್ಮ ನಟನೆಯ ಮೂಲಕ ಸಾಕಷ್ಟು ಹೆಸರುಗಳಿಸಿಕೊಳ್ಳುವುದರ ಜತೆಗೆ ನಿರ್ಮಾಣ ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಉಳಿಸಿಕೊಂಡಿದ್ದಾರೆ. ಬಾಲಿವುಡ್ ನಟ ಶಾರೂಕ್ ಖಾನ್, ನಿರ್ದೇಶಕ ಅಜೀಜ್ ಮಿರ್ಜಾ ಅವರನ್ನು ಒಳಗೊಂಡ ‘ಡ್ರೀಮ್ಸ್ ಅಲ್‌ಮಿಟೇಟ್’ ಎನ್ನುವ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು. ಈ ಸಂಸ್ಥೆಯ ಅಡಿಯಲ್ಲಿ ಬಂದ ‘ಪಿರ್ ಬೀ ದಿಲ್ ಹಿಂದೂಸ್ತಾನಿ’ ಚಿತ್ರವನ್ನು ತೆರೆಗೆ ತಂದರು. ಈ ಚಿತ್ರದಲ್ಲಿ ಶಾರೂಕ್ ಹಾಗೂ ಜೂಹೀ ಇಬ್ಬರು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಜತೆಯಲ್ಲಿ ಶಾರೂಕ್ ಜತೆಗೂಡಿ ಐಪಿಎಲ್ ತಂಡವೊಂದನ್ನು ಖರೀದಿ ಮಾಡಿದ್ದಾರೆ.