
Monday, June 17, 2013
ಫ್ಯಾಶನ್ ಖಾನ್ ಸಮೀರ್ ಖಾನ್
* ಸ್ಟೀವನ್ ರೇಗೊ
ಇದು ತೀರಾ ಹಳ್ಳಿ ಏರಿಯಾ..ಪುತ್ತೂರು ಸಿಟಿಯಿಂದ ಬರೋಬರಿ 9 ಕಿ.ಮೀ. ದೂರದಲ್ಲಿದ್ದರೂ ಇಲ್ಲಿಗೆ ಇಂದಿಗೂ ಏಳೆಂಟು ಖಾಸಗಿ ಬಸ್‌ಗಳಲ್ಲೇ ಮೈ ಮುರಿದುಕೊಂಡು ಬರುವ ಜನರಿದ್ದಾರೆ. ಮೊಬೈಲ್ ಎನ್ನುವ ಮಾಂತ್ರಿಕ ಕೂಡ ಇಲ್ಲಿಗೆ ಬಂದಾಗ ಮೌನವಾಗಿ ಬಿಡುತ್ತಾನೆ. ಎಲ್ಲಕ್ಕೂ ಮುಖ್ಯವಾಗಿ ಕೃಷಿ, ತೋಟಗಾರಿಕೆಯ ನಡುವೆ ದಿನ ಕಳೆದು ಬಿಡುವ ಕೃಷಿಕರೇ ಈ ಊರಿನ ಗತ್ತಿನ ವಿಷಯ.
ಅಂದಹಾಗೆ ಇದು ಪುತ್ತೂರಿನಿಂದ ಪಾಣಾಜೆ ಕಡೆ ಸಾಗುವ ಬುಲೇರಿಕಟ್ಟೆ ಎನ್ನುವ ಹಳ್ಳಿಯ ಮಾತು. ಇದೇ ತೋಟ, ಗದ್ದೆಯಲ್ಲಿ ಓಡಾಡಿಕೊಂಡು ಸರಕಾರಿ ಶಾಲೆಯಲ್ಲಿ ಓದಿದ ಇದೇ ಊರಿನ ಹುಡುಗನೊಬ್ಬ ಫ್ಯಾಶನ್ ಲೋಕದಲ್ಲಿ ದೊಡ್ಡ ಬ್ರಾಂಡ್ ಎಂದರೆ ಯಾರಾದರೂ ನಂಬಲು ಸಾಧ್ಯವಿಲ್ಲ. ಹತ್ತನೇ ತರಗತಿ ನೇಮ್ ಪ್ಲೇಟ್ ನೋಡಿದಾಕ್ಷಣ ಶಿಕ್ಷಣಕ್ಕೆ ಗುಡ್‌ಬಾಯ್ ಹೇಳಿ ಬೆಂಗಳೂರಿಗೆ ಓಡಿಬಂದ ಹುಡುಗನೊಬ್ಬ ಈಗ ಫ್ಯಾಶನ್ ಲೋಕದಲ್ಲಿ ಗುರುವಾಗಿ ಹೊರಬಂದಿದ್ದಾನೆ. ಇದು ಸಮೀರ್ ಖಾನ್ ಎನ್ನುವ ಫ್ಯಾಶನ್ ಕೊರಿಯೋಗ್ರಾಫರ್ ಫ್ಲಾಶ್‌ಬ್ಯಾಕ್.
ಬುಲೇರಿಕಟ್ಟೆ ಎನ್ನುವ ಹಳ್ಳಿ ಶಾಲೆಯ ಕೋಣೆಯ ಬೆಂಚಿನಲ್ಲಿ ಕೂತು ಫಸ್ಟ್ ಕ್ಲಾಸ್ ರಿಸಲ್ಟ್ ತರುತ್ತಿದ್ದ ಹುಡುಗನಿಗೆ ಫ್ಯಾಶನ್ ಲೋಕದಲ್ಲಿ ಏನೋ ಸಾಧಿಸಬೇಕೆನ್ನುವ ಕಿಚ್ಚಿತ್ತು. ಬೆಂಗಳೂರಿಗೆ ಬಂದವರೇ ಹೋಟೆಲೊಂದರಲ್ಲಿ ವೃತ್ತಿ ಹಿಡಿದರು. ಅಲ್ಲಿಗೆ ಬರುತ್ತಿದ್ದ ಫ್ಯಾಶನ್ ಲೋಕದವರ ಟಚ್‌ನಿಂದಾಗಿ ಆಗಾಗ ರ‌್ಯಾಂಪ್‌ವಾಕ್, ಪ್ರಾಡಕ್ಟ್‌ಗಾಗಿ ಮೊಡೆಲಿಂಗ್ ಮಾಡುತ್ತಾ ಫ್ಯಾಶನ್ ಲೋಕದ ಬಾಗಿಲುಬಡಿದರು. ಇದು ಫ್ಯಾಶನ್ ಲೋಕದಲ್ಲಿ ಸಮೀರ್ ಖಾನ್ ಎಂಟ್ರಿಯಾದ ಪುಟ್ಟ ಕತೆ. ಎರಡು ಮೂರು ವರ್ಷ ಫ್ಯಾಶನ್ ಲೋಕದಲ್ಲಿ ಮೊಡೆಲ್ ಆಗಿ ಗುರುತಿಸಿಕೊಂಡ ಸಮೀರ್ ಈ ನಂತರ ನಡೆದದ್ದೇ ಹಾದಿ ಎನ್ನುವ ಕತೆಯಾಯಿತು.
2004ರಲ್ಲಿ ಫ್ಯಾಶನ್ ಲೋಕದಲ್ಲಿ ರಾರಾಜಿಸುವ ಮೊಡೆಲ್‌ಗಳನ್ನು ಬೆಳೆಸುವ 'ಎಲೈಟ್ ಮೊಡೆಲ್ ಫ್ಲಾಟ್' ಎನ್ನುವ ಕಂಪನಿಯೊಂದನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಿದ ಸಮೀರ್ ಈ ಮೂಲಕ ಸರಿಸುಮಾರು 400ಕ್ಕೂ ಅಧಿಕ ಫ್ಯಾಶನ್ ಶೋಗಳಿಗೆ ಫ್ಯಾಶನ್ ಕೊರಿಯೋಗ್ರಾಫರ್, ಗ್ರೂಮರ್ ಆಗಿ ಕೆಲಸ ಮಾಡಿದರು. 1000ಕ್ಕೂ ಅಧಿಕ ಮೊಡೆಲ್‌ಗಳಿಗೆ ತರಬೇತಿ ಕೊಟ್ಟು ಫ್ಯಾಶನ್ ಲೋಕದಲ್ಲಿ ಬಿಂದಾಸ್ ರ‌್ಯಾಂಪ್‌ವಾಕ್‌ಗೆ ಇಳಿಸಿಬಿಟ್ಟರು.
ಈ ಬಳಿಕ ದೇಶದ ಖ್ಯಾತ ಫ್ಯಾಶನ್ ಶೋಗಳಾದ ಮಿಸ್ ಕ್ವೀನ್ ಆಫ್ ಇಂಡಿಯಾ, ಮಿಸ್ ಸೌತ್ ಇಂಡಿಯಾ ಮೊದಲಾದವುಗಳಲ್ಲಿ ಸಮೀರ್ ಹೆಸರು ನಿಲುಕಾಡುತ್ತದೆ.
ಹೊಸ ಮೊಡೆಲ್‌ಗಳಿಗೆ ರ‌್ಯಾಂಪ್ ಮೇಲೆ ನಡೆಯುವುದು, ಫೋಕಸಿಂಗ್, ಅವರ ವರ್ತನೆ, ಮಾತನಾಡುವ ಕಲೆ, ಕ್ಯಾಮಾರಾ ಎಕ್ಸ್‌ಪ್ರೆಶನ್, ಮೈಕ್ ಹಿಡಿಯುವ ರೀತಿ, ಪಾರ್ಟಿ ಬಿಹೇವಿಯರ್ ಹೀಗೆ ನಾನಾ ವಿಚಾರಗಳಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುತ್ತದೆ. ಇದು ಮಾಡೆಲ್‌ಗಳಿಗೆ ಆ ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಕೊಡುವ ಬಗೆ. ಆದರೆ ಈ ಎಲ್ಲ ಕೆಲಸಗಳ ನಡುವೆ ಸಮೀರ್ ಎನ್ನುವ ಫ್ಯಾಶನ್ ಕಲಾವಿದ ಎಲ್ಲೋ ಮರೆಯಾಗುತ್ತಾರೆ. ಆತನ ಫ್ಯಾಶನ್ ಲೋಕದ ತರಬೇತಿಗಳು ಎಲ್ಲರ ಗಮನ ಸೆಳೆಯುತ್ತಾ ಹೋದರು ಸಮೀರ್ ಮಾತ್ರ ವೇದಿಕೆಯ ಹಿಂದೆ ಉಳಿದು ಬಿಡುತ್ತಾರೆ.
'ಫ್ಯಾಶನ್ ಎನ್ನೋದು ನನ್ನ ಆತ್ಮ. ಅಲ್ಲಿನ ಸಣ್ಣ ಪುಟ್ಟ ತಪ್ಪುಗಳು ನನ್ನನ್ನು ಕುಗ್ಗಿಸಿ ಬಿಡುತ್ತದೆ. ಎಲ್ಲವೂ ಪರ್‌ಫೆಕ್ಟ್ ಆಗಬೇಕೆಂದರೆ ತರಬೇತಿ ಪರ್‌ಫೆಕ್ಟ್ ಆಗಿರಬೇಕು. ಅದಕ್ಕೆ ತಕ್ಕಂತೆ ರ‌್ಯಾಂಪ್ ಮೇಲೆ ಕೂಡ ಅದನ್ನೇ ಬಯಸುತ್ತೇನೆ'
- ಸಮೀರ್ ಖಾನ್, ಫ್ಯಾಶನ್ ಕೊರಿಯೋಗ್ರಾಫರ್
vk lvk published dis article on 18.06.2013)

Subscribe to:
Post Comments (Atom)
No comments:
Post a Comment