Monday, June 3, 2013
ತುಳು ಫಿಲಂಗೆ ರಮೇಶ್
ಸ್ಟೀವನ್ ರೇಗೊ
ವರ್ಷದಲ್ಲಿ ಒಂದೆರಡು ಚಿತ್ರಗಳಿಗೆ ಸುಮ್ಮನಾಗುತ್ತಿದ್ದ ಕೋಸ್ಟಲ್‌ವುಡ್‌ನಲ್ಲಿ ಈಗ ಭರ್ಜರಿ ಫಸಲಿನ ಕಾಲ ಬಂದಿದೆ. ಮತ್ತೊಂದೆಡೆ ತುಳು ಚಿತ್ರದಲ್ಲಿ ನಟಿಸಲು ಸ್ಯಾಂಡಲ್‌ವುಡ್ ನಟ, ನಟಿಯರು ಮುಂದೆ ಬರುತ್ತಿರುವುದು ಕೋಸ್ಟಲ್‌ವುಡ್ ಮಾರುಕಟ್ಟೆ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.
ಇಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ 'ನಿರೆಲ್'( ನೆರಳು) ಚಿತ್ರದಲ್ಲಿ ಪಂಚಭಾಷೆ ನಟ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ಪ್ರಬುದ್ಧ ನಟನೆ ಮೂಲಕ ಖ್ಯಾತಿಗಳಿಸಿರುವ ರಮೇಶ್ ಅರವಿಂದ್‌ಗೆ ಇದು ಮೊದಲ ತುಳು ಚಿತ್ರ. ತುಳು ಭಾಷೆಯಲ್ಲೂ ಇದೊಂದು ಉತ್ತಮ ಪ್ರಯೋಗ ಎನ್ನುತ್ತಿದೆ ಚಿತ್ರತಂಡ. ನಿರೆಲ್ ಚಿತ್ರದ ಬಹುಭಾಗ ಚಿತ್ರೀಕರಣಗೊಳ್ಳುತ್ತಿರುವುದು ವಿದೇಶದ ರಮಣೀಯ ತಾಣಗಳಲ್ಲಿ. ಈ ಕಾರಣದಿಂದ ತುಳುವಿನ ಮೊದಲ ಹಾಗೂ ಭರ್ಜರಿ ವೆಚ್ಚದ ಚಿತ್ರ ಎನ್ನುವ ಹಣೆಪಟ್ಟಿ ಈ ಚಿತ್ರಕ್ಕೆ ದೊರಕಿದೆ. ಬಹುತೇಕ ಚಿತ್ರೀಕರಣ ದುಬೈನಲ್ಲಿ ನಡೆಯಲಿದೆ.
ಮಂಗಳೂರಿನ ಬಜಪೆಯ ರಂಜಿತ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ದುಬಾಯಿಯಲ್ಲಿ ಕೆಲಸ ಮಾಡುತ್ತಿರುವ ರಂಜಿತ್ ಪಾಲಿಗೆ ಇದು ಮೊದಲ ಚಿತ್ರ. ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಶೋಧನ್ ಪ್ರಸಾದ್ ವಹಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶನದ ಹೊಣೆಯನ್ನು ಅಭಿಷೇಕ್ ಹಾಗೂ ಚಿತ್ರದಲ್ಲಿ ಮಂಗಳೂರು ಮೂಲದ ರೂಪದರ್ಶಿ ರಿಯಾ ಡಿಸೋಜ, ದೀಪ್ತಿ, ಅನೂಪ್, ವರುಣ್ ಶೆಟ್ಟಿ ಅಭಿನಯಿಸಲಿದ್ದಾರೆ. ಚಿತ್ರ ಈ ವರ್ಷದ ಕೊನೆ ಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎನ್ನೋದು ಚಿತ್ರತಂಡದ ಮಾತು.
'ನಿರೆಲ್ ಚಿತ್ರದಲ್ಲಿ ನನ್ನ ಪಾತ್ರ ಕುರಿತು ಹೇಳುವುದಕ್ಕಿಂತ ಹೆಚ್ಚಾಗಿ ಚಿತ್ರತಂಡದ ಕುರಿತು ಹೇಳುವುದು ಬಹಳಷ್ಟಿದೆ. ಎಲ್ಲರೂ ಯುವಕರು ಅದಕ್ಕೂ ಹೆಚ್ಚಾಗಿ ವಾರವಿಡೀ ವಿದೇಶದಲ್ಲಿ ದುಡಿದು ರಜೆಯ ದಿನ ಚಿತ್ರೀಕರಣಕ್ಕೆ ಇಳಿಯುತ್ತಾರೆ. ಚಿತ್ರದಲ್ಲಿ ನಾನು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ತುಳು ಭಾಷೆ ಬರೋದಿಲ್ಲ. ಆದ್ರೂ ಡೈಲಾಗ್‌ಗಳನ್ನು ಕೊಟ್ಟಿದ್ದಾರೆ. ಚಿತ್ರದ ನಾಯಕನಿಗೆ ನೆರವಾಗುವ ಪಾತ್ರ ನನಗೆ ಬಹಳ ಇಷ್ಟವಾಯಿತು. ಈ ಕಾರಣದಿಂದ ಚಿತ್ರ ಮಾಡಲು ಒಪ್ಪಿಕೊಂಡೆ' ಎನ್ನುತ್ತಾರೆ ರಮೇಶ್ ಅರವಿಂದ್.
ರಮೇಶ್ ಅರವಿಂದ್ ಇನ್ನಷ್ಟೂ ತುಳು ಚಿತ್ರಗಳಲ್ಲಿ ನಟಿಸಲು ಇಷ್ಟಪಟ್ಟಿದ್ದಾರಂತೆ. ಆದರೆ ಅವರಿಗೆ ಒಪ್ಪುವಂತಹ ಸಬ್ಜೆಕ್ಟ್ ಇರಲೇಬೇಕು. ಅದಕ್ಕೂ ಮುಖ್ಯವಾಗಿ ಚಿತ್ರದಲ್ಲಿ ಅವರಿಗೆ ಲಾಯಕ್ಕಾದ ಪಾತ್ರ ಬೇಕು. ಅದೇ ಅವರ ಕರಾರು. ಸದ್ಯಕ್ಕೆ 'ಮಂಗನ ಕೈಯಲ್ಲಿ ಮಾಣಿಕ್ಯ' ಹಾಗೂ ತಮಿಳಿನಲ್ಲಿ 'ಮಚ್ಚಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲೂ ಇನ್ನೆರಡು ಚಿತ್ರಗಳು ಇವೆಯಂತೆ.
'ಇದು ನನಗೆ ಹೊಸ ಅನುಭವ. ಹೊಸ ಭಾಷೆ, ಸಂಸ್ಕೃತಿಯನ್ನು ಅರಿಯುವುದು ನನಗೆ ಇಷ್ಟವಾಗಿರುವುದರಿಂದ ನಿರೆಲ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಚಿತ್ರದಲ್ಲಿ ಸಣ್ಣ ಪಾತ್ರ. ಅದಕ್ಕೂ ಮುಖ್ಯವಾಗಿ ಇಷ್ಟವಾಗುವ ಪಾತ್ರ'
-ರಮೇಶ್ ಅರವಿಂದ್
vk lvk published dis ariticle on 4.05.2013
Subscribe to:
Post Comments (Atom)
No comments:
Post a Comment