Monday, June 17, 2013

ಫ್ಯಾಶನ್ ಖಾನ್ ಸಮೀರ್ ಖಾನ್

* ಸ್ಟೀವನ್ ರೇಗೊ ಇದು ತೀರಾ ಹಳ್ಳಿ ಏರಿಯಾ..ಪುತ್ತೂರು ಸಿಟಿಯಿಂದ ಬರೋಬರಿ 9 ಕಿ.ಮೀ. ದೂರದಲ್ಲಿದ್ದರೂ ಇಲ್ಲಿಗೆ ಇಂದಿಗೂ ಏಳೆಂಟು ಖಾಸಗಿ ಬಸ್‌ಗಳಲ್ಲೇ ಮೈ ಮುರಿದುಕೊಂಡು ಬರುವ ಜನರಿದ್ದಾರೆ. ಮೊಬೈಲ್ ಎನ್ನುವ ಮಾಂತ್ರಿಕ ಕೂಡ ಇಲ್ಲಿಗೆ ಬಂದಾಗ ಮೌನವಾಗಿ ಬಿಡುತ್ತಾನೆ. ಎಲ್ಲಕ್ಕೂ ಮುಖ್ಯವಾಗಿ ಕೃಷಿ, ತೋಟಗಾರಿಕೆಯ ನಡುವೆ ದಿನ ಕಳೆದು ಬಿಡುವ ಕೃಷಿಕರೇ ಈ ಊರಿನ ಗತ್ತಿನ ವಿಷಯ. ಅಂದಹಾಗೆ ಇದು ಪುತ್ತೂರಿನಿಂದ ಪಾಣಾಜೆ ಕಡೆ ಸಾಗುವ ಬುಲೇರಿಕಟ್ಟೆ ಎನ್ನುವ ಹಳ್ಳಿಯ ಮಾತು. ಇದೇ ತೋಟ, ಗದ್ದೆಯಲ್ಲಿ ಓಡಾಡಿಕೊಂಡು ಸರಕಾರಿ ಶಾಲೆಯಲ್ಲಿ ಓದಿದ ಇದೇ ಊರಿನ ಹುಡುಗನೊಬ್ಬ ಫ್ಯಾಶನ್ ಲೋಕದಲ್ಲಿ ದೊಡ್ಡ ಬ್ರಾಂಡ್ ಎಂದರೆ ಯಾರಾದರೂ ನಂಬಲು ಸಾಧ್ಯವಿಲ್ಲ. ಹತ್ತನೇ ತರಗತಿ ನೇಮ್ ಪ್ಲೇಟ್ ನೋಡಿದಾಕ್ಷಣ ಶಿಕ್ಷಣಕ್ಕೆ ಗುಡ್‌ಬಾಯ್ ಹೇಳಿ ಬೆಂಗಳೂರಿಗೆ ಓಡಿಬಂದ ಹುಡುಗನೊಬ್ಬ ಈಗ ಫ್ಯಾಶನ್ ಲೋಕದಲ್ಲಿ ಗುರುವಾಗಿ ಹೊರಬಂದಿದ್ದಾನೆ. ಇದು ಸಮೀರ್ ಖಾನ್ ಎನ್ನುವ ಫ್ಯಾಶನ್ ಕೊರಿಯೋಗ್ರಾಫರ್ ಫ್ಲಾಶ್‌ಬ್ಯಾಕ್. ಬುಲೇರಿಕಟ್ಟೆ ಎನ್ನುವ ಹಳ್ಳಿ ಶಾಲೆಯ ಕೋಣೆಯ ಬೆಂಚಿನಲ್ಲಿ ಕೂತು ಫಸ್ಟ್ ಕ್ಲಾಸ್ ರಿಸಲ್ಟ್ ತರುತ್ತಿದ್ದ ಹುಡುಗನಿಗೆ ಫ್ಯಾಶನ್ ಲೋಕದಲ್ಲಿ ಏನೋ ಸಾಧಿಸಬೇಕೆನ್ನುವ ಕಿಚ್ಚಿತ್ತು. ಬೆಂಗಳೂರಿಗೆ ಬಂದವರೇ ಹೋಟೆಲೊಂದರಲ್ಲಿ ವೃತ್ತಿ ಹಿಡಿದರು. ಅಲ್ಲಿಗೆ ಬರುತ್ತಿದ್ದ ಫ್ಯಾಶನ್ ಲೋಕದವರ ಟಚ್‌ನಿಂದಾಗಿ ಆಗಾಗ ರ‌್ಯಾಂಪ್‌ವಾಕ್, ಪ್ರಾಡಕ್ಟ್‌ಗಾಗಿ ಮೊಡೆಲಿಂಗ್ ಮಾಡುತ್ತಾ ಫ್ಯಾಶನ್ ಲೋಕದ ಬಾಗಿಲುಬಡಿದರು. ಇದು ಫ್ಯಾಶನ್ ಲೋಕದಲ್ಲಿ ಸಮೀರ್ ಖಾನ್ ಎಂಟ್ರಿಯಾದ ಪುಟ್ಟ ಕತೆ. ಎರಡು ಮೂರು ವರ್ಷ ಫ್ಯಾಶನ್ ಲೋಕದಲ್ಲಿ ಮೊಡೆಲ್ ಆಗಿ ಗುರುತಿಸಿಕೊಂಡ ಸಮೀರ್ ಈ ನಂತರ ನಡೆದದ್ದೇ ಹಾದಿ ಎನ್ನುವ ಕತೆಯಾಯಿತು. 2004ರಲ್ಲಿ ಫ್ಯಾಶನ್ ಲೋಕದಲ್ಲಿ ರಾರಾಜಿಸುವ ಮೊಡೆಲ್‌ಗಳನ್ನು ಬೆಳೆಸುವ 'ಎಲೈಟ್ ಮೊಡೆಲ್ ಫ್ಲಾಟ್' ಎನ್ನುವ ಕಂಪನಿಯೊಂದನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಿದ ಸಮೀರ್ ಈ ಮೂಲಕ ಸರಿಸುಮಾರು 400ಕ್ಕೂ ಅಧಿಕ ಫ್ಯಾಶನ್ ಶೋಗಳಿಗೆ ಫ್ಯಾಶನ್ ಕೊರಿಯೋಗ್ರಾಫರ್, ಗ್ರೂಮರ್ ಆಗಿ ಕೆಲಸ ಮಾಡಿದರು. 1000ಕ್ಕೂ ಅಧಿಕ ಮೊಡೆಲ್‌ಗಳಿಗೆ ತರಬೇತಿ ಕೊಟ್ಟು ಫ್ಯಾಶನ್ ಲೋಕದಲ್ಲಿ ಬಿಂದಾಸ್ ರ‌್ಯಾಂಪ್‌ವಾಕ್‌ಗೆ ಇಳಿಸಿಬಿಟ್ಟರು. ಈ ಬಳಿಕ ದೇಶದ ಖ್ಯಾತ ಫ್ಯಾಶನ್ ಶೋಗಳಾದ ಮಿಸ್ ಕ್ವೀನ್ ಆಫ್ ಇಂಡಿಯಾ, ಮಿಸ್ ಸೌತ್ ಇಂಡಿಯಾ ಮೊದಲಾದವುಗಳಲ್ಲಿ ಸಮೀರ್ ಹೆಸರು ನಿಲುಕಾಡುತ್ತದೆ. ಹೊಸ ಮೊಡೆಲ್‌ಗಳಿಗೆ ರ‌್ಯಾಂಪ್ ಮೇಲೆ ನಡೆಯುವುದು, ಫೋಕಸಿಂಗ್, ಅವರ ವರ್ತನೆ, ಮಾತನಾಡುವ ಕಲೆ, ಕ್ಯಾಮಾರಾ ಎಕ್ಸ್‌ಪ್ರೆಶನ್, ಮೈಕ್ ಹಿಡಿಯುವ ರೀತಿ, ಪಾರ್ಟಿ ಬಿಹೇವಿಯರ್ ಹೀಗೆ ನಾನಾ ವಿಚಾರಗಳಲ್ಲಿ ಒಂದು ತಿಂಗಳ ತರಬೇತಿ ನೀಡಲಾಗುತ್ತದೆ. ಇದು ಮಾಡೆಲ್‌ಗಳಿಗೆ ಆ ಕಿಲ್ಲಿಂಗ್ ಇನ್‌ಸ್ಟಿಂಕ್ಟ್ ಕೊಡುವ ಬಗೆ. ಆದರೆ ಈ ಎಲ್ಲ ಕೆಲಸಗಳ ನಡುವೆ ಸಮೀರ್ ಎನ್ನುವ ಫ್ಯಾಶನ್ ಕಲಾವಿದ ಎಲ್ಲೋ ಮರೆಯಾಗುತ್ತಾರೆ. ಆತನ ಫ್ಯಾಶನ್ ಲೋಕದ ತರಬೇತಿಗಳು ಎಲ್ಲರ ಗಮನ ಸೆಳೆಯುತ್ತಾ ಹೋದರು ಸಮೀರ್ ಮಾತ್ರ ವೇದಿಕೆಯ ಹಿಂದೆ ಉಳಿದು ಬಿಡುತ್ತಾರೆ. 'ಫ್ಯಾಶನ್ ಎನ್ನೋದು ನನ್ನ ಆತ್ಮ. ಅಲ್ಲಿನ ಸಣ್ಣ ಪುಟ್ಟ ತಪ್ಪುಗಳು ನನ್ನನ್ನು ಕುಗ್ಗಿಸಿ ಬಿಡುತ್ತದೆ. ಎಲ್ಲವೂ ಪರ್‌ಫೆಕ್ಟ್ ಆಗಬೇಕೆಂದರೆ ತರಬೇತಿ ಪರ್‌ಫೆಕ್ಟ್ ಆಗಿರಬೇಕು. ಅದಕ್ಕೆ ತಕ್ಕಂತೆ ರ‌್ಯಾಂಪ್ ಮೇಲೆ ಕೂಡ ಅದನ್ನೇ ಬಯಸುತ್ತೇನೆ' - ಸಮೀರ್ ಖಾನ್, ಫ್ಯಾಶನ್ ಕೊರಿಯೋಗ್ರಾಫರ್ vk lvk published dis article on 18.06.2013)

Saturday, June 8, 2013

ತೆಪ್ಪದಲ್ಲಿ ‘ಮೌನ’ವಾದ ಬದುಕು !

ಇವರು ಮರಾಠಿ ಜನಾಂಗದವರು. ಕೂಳೂರಿನಲ್ಲಿ ಹರಿಯುತ್ತಿರುವ ಗುರುಪುರ ನದಿಯೇ ಇವರ ಪಾಲಿಗೆ ಮೂಲ ಬಂಡವಾಳ. ಈ ಹರಿಯುವ ನದಿಯಲ್ಲಿರುವ ಮೀನುಗಳೇ ಇವರಿಗೆ ಆದಾಯ. ತೆಪ್ಪವೇ ಇವರಿಗೆ ಬದುಕುವ ಊರು ಗೋಲು. * ಸ್ಟೀವನ್ ರೇಗೊ, ದಾರಂದಕುಕ್ಕು ತೆಪ್ಪ ಇವರ ಪಾಲಿಗೆ ನದಿ ದಾಟುವ ಸಾಧನವಲ್ಲ. ಅದೊಂದು ಬದುಕು ಕೊಡುವ ದೇವರು. ವರ್ಷವಿಡೀ ಈ ತೆಪ್ಪದಲ್ಲಿಯೇ ಕಾಲ ಕಳೆಯುತ್ತಾ ಇರುವ ಇವರಿಗೆ ತೆಪ್ಪ, ನೀರು, ಮೀನು ಈ ಮೂರು ವಿಚಾರಗಳಲ್ಲಿಯೇ ಬದುಕಿನ ಲೆಕ್ಕಚಾರಗಳು ನಡೆಯುತ್ತದೆ. ಇದರಲ್ಲಿ ಒಂದು ಕೂಡ ಕಡಿಮೆಯಾದರು ಬದುಕು ಮೂರಾಬಟ್ಟೆಯಾಗಿ ಹೋಗುತ್ತದೆ. ಇದೇ ಕಾರಣದಿಂದ ಕಳೆದ ೩೦-೪೦ ವರ್ಷಗಳಿಂದ ತೆಪ್ಪವನ್ನು ಬಿಟ್ಟು ಅವರು ಬದುಕೇ ಕಂಡಿಲ್ಲ. ಅಜ್ಜ, ಮಗ, ಮೊಮ್ಮಗ ಎನ್ನುವ ಸರಣಿಮಾಲಿಕೆಯೊಳಗೆ ಇವರದು ನದಿಯನ್ನು ನಂಬಿಕೊಂಡು ಕಾಲ ಕಳೆಯುವ ಪರಂಪರೆ. ಅಂದಹಾಗೆ ಇವರು ಮರಾಠಿ ಜನಾಂಗದವರು. ಕೂಳೂರಿನಲ್ಲಿ ಹರಿಯುತ್ತಿರುವ ಗುರುಪುರ ನದಿಯೇ ಇವರ ಪಾಲಿಗೆ ಮೂಲ ಬಂಡವಾಳ. ಈ ಹರಿಯುವ ನದಿಯಲ್ಲಿರುವ ಮೀನುಗಳೇ ಇವರಿಗೆ ಆದಾಯ. ತೆಪ್ಪವೇ ಇವರಿಗೆ ಬದುಕುವ ಊರು ಗೋಲು. ಇವರು ಮೂಲತಃ ಚಿಕ್ಕಮಗಳೂರಿನ ಕಡೂರಿನಿಂದ ಮಂಗಳೂರಿಗೆ ವಲಸೆ ಬಂದವರು. ಅಲ್ಲಿಯ ಸಣ್ಣಪುಟ್ಟ ಕೃಷಿ ಭೂಮಿಯನ್ನು ಬಿಟ್ಟು ಇವರು ಗುರುಪುರದ ನದಿ ನೀರನ್ನು ನೆಚ್ಚಿಕೊಂಡರು. ಇಲ್ಲಿಯ ನೀರು ಇವರ ಕೈ ಬಿಡಲಿಲ್ಲ. ಬದುಕು ರೂಪಿಸಿ ಹಾಕಿತು ಎನ್ನುವುದು ಮರಾಠಿ ಜನಾಂಗದವರ ಅನುಭವದ ಮಾತು. ಮರಾಠವಾಡದಲ್ಲಿ ಶಿವಾಜಿ ಆಳ್ವಿಕೆಯಲ್ಲಿ ನಮ್ಮ ಪೂರ್ವಿಕರು ಮಹಾರಾಷ್ಟ್ರದಿಂದ ಚಿಕ್ಕಮಗಳೂರು ಕಡೆಗೆ ಬಂದರು. ಮರಾಠವಾಡದ ಕಾರಣ ಮರಾಠಿ ನಮ್ಮ ಜನಾಂಗದ ಮಾತೃಭಾಷೆಯಾಗಿ ಉಳಿದು ಹೋಯಿತು. ೩೦-೪೦ ವರ್ಷಗಳಿಂದ ಮಂಗಳೂರಿನಲ್ಲೇ ಬದುಕುತ್ತಿದ್ದೇವೆ. ಆಗಾಗ ಚಿಕ್ಕಮಗಳೂರಿಗೆ ಹೋಗಿ ಬರುತ್ತಿದ್ದೇವು. ಆದರೆ ಕಳೆದ ೨೦ ವರ್ಷಗಳಿಂದ ನಾವು ಇಲ್ಲಿಯೇ ವಾಸವಾಗಿದ್ದೇವೆ ಎನ್ನುತ್ತಾರೆ ಮರಾಠಿ ಜನಾಂಗದ ಪಕೀರಪ್ಪ. ಭದ್ರಾವತಿಯ ತೆಪ್ಪ, ಕುಡ್ಲದ ಬಲೆ : ಮರಾಠಿ ಜನಾಂಗದ ಕರಿಸ್ವಾಮಿ ಹೇಳುವ ಮಾತು ಹೀಗೆ : ನಮಗೆ ಬೇಕಾದ ತೆಪ್ಪಗಳು ಇಲ್ಲಿ ಎಲ್ಲೂ ಸಿಗೋಲ್ಲ. ಕುಡ್ಲದಲ್ಲಿ ಬಹಳಷ್ಟು ಕಡೆ ಹುಡುಕಾಡಿದೇವು.. ಆದರೆ ತೆಪ್ಪ ಬದಲು ಬೋಟ್ ಮಾಡಿ ಕೋಡ್ತೀವಿ ಅಂತಾ ಹೇಳುತ್ತಾರೆ. ಇದು ನಮ್ಮ ವೃತ್ತಿಗೆ ಸರಿ ಆಗೋದಿಲ್ಲ. ಇದರಿಂದ ಭದ್ರಾವತಿಯಿಂದ ನಾಲ್ಕೈದು ಸಾವಿರ ರೂ. ಕೊಟ್ಟು ತೆಪ್ಪ ತರುತ್ತೇವೆ. ಮೂರು ಸಾವಿರ ರೂ ಕೊಟ್ಟು ಇಲ್ಲಿಯೇ ಬಲೆ ಸಿದ್ಧ ಪಡಿಸುತ್ತೇವೆ. ಜನಾಂಗದ ಅಣ್ಣಯ್ಯ ಹೇಳುವಂತೆ: ಈ ಮೀನು ವ್ಯಾಪಾರದಲ್ಲಿ ಕೆಲವೊಂದು ಸಲ ಲಾಭ ಬಂದರೆ ಬಹಳಷ್ಟು ಸಲ ನಷ್ಟವೇ ಬಂದು ಹೋಗುತ್ತದೆ. ನೀರಿನ ಹರಿವಿನ ಅಂದಾಜು ಲೆಕ್ಕಚಾರದಲ್ಲಿ ಮೀನುಗಾರಿಕೆಗೆ ಇಳಿಯಬೇಕು. ಒಂದೊಂದು ಬಾರಿ ಎರಡು- ಮೂರು ಸಾವಿರ ಬಂದರೆ ಇನ್ನು ಕೆಲವು ಸಲ ಐನೂರು ರೂ. ಮೀನುಗಳಲ್ಲಿ ತೃಪ್ತಿ ಕಾಣಬೇಕು. ಎಲ್ಲವೂ ಮಲ್ಲಮ್ಮ ದೇವಿಯನ್ನು ನಂಬಿಕೊಂಡು ಮೀನುಗಾರಿಕೆಗೆ ಇಳಿಯುತ್ತೇವೆ. ಹತ್ತಿರದ ಮಾರುಕಟ್ಟೆಯಲ್ಲಿ ನದಿ ಮೀನುಗಳಿಗೆ ಬಾರಿ ಡಿಮ್ಯಾಂಡ್ ಇರುತ್ತದೆ. ಹೆಚ್ಚಾಗಿ ತೇಡೆ ಮೀನು, ಬೆರಕ್ಕೆ ಮೀನುಗಳೇ ಜಾಸ್ತಿ ಬಂದು ಬೀಳುತ್ತದೆ. ತೆಪ್ಪದವರಿಗೆ ಸವಲತ್ತುಗಳು ಗಗನ ಕುಸುಮ : ಮಳೆ, ಬಿಸಿಲು, ಚಳಿ ಈ ಮೂರು ಕಾಲದಲ್ಲೂ ಮೀನುಗಾರಿಕೆಯಂತೂ ನಿಲ್ಲಿಸೋದೇ ಇಲ್ಲ. ಎಷ್ಟೇ ಜೋರಾಗಿ ಮಳೆ ಬಂದರೂ ತೆಪ್ಪ ನದಿಗೆ ಬಿಟ್ಟು ಮೀನು ಹಿಡಿಯುತ್ತೇವೆ. ಎಲ್ಲವೂ ದೇವರ ಮೇಲೆ ಭಾರ. ಬದುಕು ಕೊಡುವವನು ಅವನು... ಬದುಕು ಕಿತ್ತುಕೊಳ್ಳೋವವನು ಅವನು...ಎನ್ನುವ ಮಾತಿನಲ್ಲೇ ನಮಗೆ ನಂಬಿಕೆ ಎನ್ನುತ್ತಾರೆ ಪಕೀರಪ್ಪ. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಈ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಶಾಲೆಗೆ ಹೋದವರು ಬಹಳ ಕಡಿಮೆ. ಎಲ್ಲರೂ ಎರಡು- ಮೂರು ತರಗತಿಯಲ್ಲೇ ಶಾಲೆ ಬಿಟ್ಟು ಮೀನು ಹಿಡಿಯುವ ಕಸಬಿಗೆ ಅಂಟಿಕೊಂಡರು ಎನ್ನುವುದು ಕರಿಸ್ವಾಮಿಯ ಮಾತು. ರೇಷನ್ ಕಾರ್ಡ್, ಮತದಾನದ ಹಕ್ಕು ಹೀಗೆ ಸರಕಾರದಿಂದ ಸಿಗುವ ಯಾವುದೇ ಸವಲತ್ತುಗಳು ಇವರನ್ನು ಹರಸಿಕೊಂಡು ಬಂದಿಲ್ಲ. ನಾವು ಇದ್ದೇವೆ ಎನ್ನುವುದಕ್ಕೂ ನಮ್ಮ ಬಳಿಯಲ್ಲಿ ದಾಖಲೆಗಳೇ ಇಲ್ಲ. ಆದ್ರೂ ನಾವು ಬೇಡಿಕೊಂಡು ಎಲ್ಲಿಗೂ ಹೋಗೋದಿಲ್ಲ. ನಮಗೆ ದೇವರು ದುಡಿಯಲು ಶಕ್ತಿ ಕೊಟ್ಟಿದ್ದಾನೆ. ಇದೇ ನಮಗೆ ದೊಡ್ಡ ಕೊಡುಗೆ ಎಂದು ಬಿಡುತ್ತಾರೆ ಪಕೀರಪ್ಪ. ಟೋಟಲಿ ತೆಪ್ಪದಲ್ಲಿ ಅರಳುವ ಇವರ ಬದುಕು ಒಂದು ರೋಚಕತೆ ನಡುವೆ ನೋಡುಗರನ್ನು ಮೌನಕ್ಕೆ ಶರಣು ಹೊಡೆಯುವಂತೆ ಮಾಡಿ ಬಿಡುತ್ತದೆ. ಎಲ್ಲಕ್ಕೂ ಸರಕಾರವೇ ಮಾಡಬೇಕು ಎನ್ನುವ ಮಾತಿನಲ್ಲೇ ಬದುಕುವ ಸಮಾಜಕ್ಕೆ ಈ ಮೀನುಗಾರರು ಭಿನ್ನತೆಯ ಪಾಠ ಹೇಳಿಕೊಡುತ್ತಾರೆ. ಸಿನಿಮಾ ಅಂದ್ರೆ ಪಂಚಪ್ರಾಣ: ಕನ್ನಡ, ಹಿಂದಿ ಸಿನಿಮಾಗಳೆಂದರೆ ನಮ್ಮವರಿಗೆ ಪಂಚಪ್ರಾಣ. ಮನೆಯಲ್ಲಂತೂ ಟಿವಿ ಇಲ್ಲ ಎಲ್ಲವೂ ಎಫ್‌ಎಂಗಳಿಗೆ ಮೊರೆ ಹೋಗುತ್ತೇವೆ. ದಿನಕ್ಕೆರಡು ಬಾರಿ ನದಿಗೆ ಇಳಿದರೆ ಉಳಿದ ಸಮಯ ಎಲ್ಲವೂ ನಮಗೆ ಫ್ರಿಯಾಗಿ ಹಾಡು ಕೇಳುತ್ತಾ ಬದುಕು ದೂಡುತ್ತೇವೆ. ಪೋಸ್ಟರ್‌ಗಳನ್ನು ನೋಡುತ್ತಾ ಸಿನಿಮಾಗಳನ್ನು ಆಯ್ಕೆ ಮಾಡುವ ನಾವು ಶಿವರಾಜ್ ಕುಮಾರ್ ನಟಿಸಿದ ಗಡಿಬಿಡಿ ಅಳಿಯದಲ್ಲಿ ನಟಿಸಿದ್ದೇವೆ ಎನ್ನುತ್ತಾರೆ ಪಕೀರಪ್ಪ. (vk nammkaravali published dis story on 9.06.2013) ................

Monday, June 3, 2013

ತುಳು ಫಿಲಂಗೆ ರಮೇಶ್‌

ಸ್ಟೀವನ್ ರೇಗೊ ವರ್ಷದಲ್ಲಿ ಒಂದೆರಡು ಚಿತ್ರಗಳಿಗೆ ಸುಮ್ಮನಾಗುತ್ತಿದ್ದ ಕೋಸ್ಟಲ್‌ವುಡ್‌ನಲ್ಲಿ ಈಗ ಭರ್ಜರಿ ಫಸಲಿನ ಕಾಲ ಬಂದಿದೆ. ಮತ್ತೊಂದೆಡೆ ತುಳು ಚಿತ್ರದಲ್ಲಿ ನಟಿಸಲು ಸ್ಯಾಂಡಲ್‌ವುಡ್ ನಟ, ನಟಿಯರು ಮುಂದೆ ಬರುತ್ತಿರುವುದು ಕೋಸ್ಟಲ್‌ವುಡ್ ಮಾರುಕಟ್ಟೆ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ 'ನಿರೆಲ್'( ನೆರಳು) ಚಿತ್ರದಲ್ಲಿ ಪಂಚಭಾಷೆ ನಟ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಚಿತ್ರಗಳಲ್ಲಿ ಪ್ರಬುದ್ಧ ನಟನೆ ಮೂಲಕ ಖ್ಯಾತಿಗಳಿಸಿರುವ ರಮೇಶ್ ಅರವಿಂದ್‌ಗೆ ಇದು ಮೊದಲ ತುಳು ಚಿತ್ರ. ತುಳು ಭಾಷೆಯಲ್ಲೂ ಇದೊಂದು ಉತ್ತಮ ಪ್ರಯೋಗ ಎನ್ನುತ್ತಿದೆ ಚಿತ್ರತಂಡ. ನಿರೆಲ್ ಚಿತ್ರದ ಬಹುಭಾಗ ಚಿತ್ರೀಕರಣಗೊಳ್ಳುತ್ತಿರುವುದು ವಿದೇಶದ ರಮಣೀಯ ತಾಣಗಳಲ್ಲಿ. ಈ ಕಾರಣದಿಂದ ತುಳುವಿನ ಮೊದಲ ಹಾಗೂ ಭರ್ಜರಿ ವೆಚ್ಚದ ಚಿತ್ರ ಎನ್ನುವ ಹಣೆಪಟ್ಟಿ ಈ ಚಿತ್ರಕ್ಕೆ ದೊರಕಿದೆ. ಬಹುತೇಕ ಚಿತ್ರೀಕರಣ ದುಬೈನಲ್ಲಿ ನಡೆಯಲಿದೆ. ಮಂಗಳೂರಿನ ಬಜಪೆಯ ರಂಜಿತ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ದುಬಾಯಿಯಲ್ಲಿ ಕೆಲಸ ಮಾಡುತ್ತಿರುವ ರಂಜಿತ್ ಪಾಲಿಗೆ ಇದು ಮೊದಲ ಚಿತ್ರ. ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ಶೋಧನ್ ಪ್ರಸಾದ್ ವಹಿಸಿಕೊಂಡಿದ್ದಾರೆ. ಸಂಗೀತ ನಿರ್ದೇಶನದ ಹೊಣೆಯನ್ನು ಅಭಿಷೇಕ್ ಹಾಗೂ ಚಿತ್ರದಲ್ಲಿ ಮಂಗಳೂರು ಮೂಲದ ರೂಪದರ್ಶಿ ರಿಯಾ ಡಿಸೋಜ, ದೀಪ್ತಿ, ಅನೂಪ್, ವರುಣ್ ಶೆಟ್ಟಿ ಅಭಿನಯಿಸಲಿದ್ದಾರೆ. ಚಿತ್ರ ಈ ವರ್ಷದ ಕೊನೆ ಭಾಗದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎನ್ನೋದು ಚಿತ್ರತಂಡದ ಮಾತು. 'ನಿರೆಲ್ ಚಿತ್ರದಲ್ಲಿ ನನ್ನ ಪಾತ್ರ ಕುರಿತು ಹೇಳುವುದಕ್ಕಿಂತ ಹೆಚ್ಚಾಗಿ ಚಿತ್ರತಂಡದ ಕುರಿತು ಹೇಳುವುದು ಬಹಳಷ್ಟಿದೆ. ಎಲ್ಲರೂ ಯುವಕರು ಅದಕ್ಕೂ ಹೆಚ್ಚಾಗಿ ವಾರವಿಡೀ ವಿದೇಶದಲ್ಲಿ ದುಡಿದು ರಜೆಯ ದಿನ ಚಿತ್ರೀಕರಣಕ್ಕೆ ಇಳಿಯುತ್ತಾರೆ. ಚಿತ್ರದಲ್ಲಿ ನಾನು ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನಗೆ ತುಳು ಭಾಷೆ ಬರೋದಿಲ್ಲ. ಆದ್ರೂ ಡೈಲಾಗ್‌ಗಳನ್ನು ಕೊಟ್ಟಿದ್ದಾರೆ. ಚಿತ್ರದ ನಾಯಕನಿಗೆ ನೆರವಾಗುವ ಪಾತ್ರ ನನಗೆ ಬಹಳ ಇಷ್ಟವಾಯಿತು. ಈ ಕಾರಣದಿಂದ ಚಿತ್ರ ಮಾಡಲು ಒಪ್ಪಿಕೊಂಡೆ' ಎನ್ನುತ್ತಾರೆ ರಮೇಶ್ ಅರವಿಂದ್. ರಮೇಶ್ ಅರವಿಂದ್ ಇನ್ನಷ್ಟೂ ತುಳು ಚಿತ್ರಗಳಲ್ಲಿ ನಟಿಸಲು ಇಷ್ಟಪಟ್ಟಿದ್ದಾರಂತೆ. ಆದರೆ ಅವರಿಗೆ ಒಪ್ಪುವಂತಹ ಸಬ್ಜೆಕ್ಟ್ ಇರಲೇಬೇಕು. ಅದಕ್ಕೂ ಮುಖ್ಯವಾಗಿ ಚಿತ್ರದಲ್ಲಿ ಅವರಿಗೆ ಲಾಯಕ್ಕಾದ ಪಾತ್ರ ಬೇಕು. ಅದೇ ಅವರ ಕರಾರು. ಸದ್ಯಕ್ಕೆ 'ಮಂಗನ ಕೈಯಲ್ಲಿ ಮಾಣಿಕ್ಯ' ಹಾಗೂ ತಮಿಳಿನಲ್ಲಿ 'ಮಚ್ಚಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲೂ ಇನ್ನೆರಡು ಚಿತ್ರಗಳು ಇವೆಯಂತೆ. 'ಇದು ನನಗೆ ಹೊಸ ಅನುಭವ. ಹೊಸ ಭಾಷೆ, ಸಂಸ್ಕೃತಿಯನ್ನು ಅರಿಯುವುದು ನನಗೆ ಇಷ್ಟವಾಗಿರುವುದರಿಂದ ನಿರೆಲ್ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಚಿತ್ರದಲ್ಲಿ ಸಣ್ಣ ಪಾತ್ರ. ಅದಕ್ಕೂ ಮುಖ್ಯವಾಗಿ ಇಷ್ಟವಾಗುವ ಪಾತ್ರ' -ರಮೇಶ್ ಅರವಿಂದ್ vk lvk published dis ariticle on 4.05.2013