Tuesday, April 9, 2013

ಮಣಿಕಂಠಿಹಾರದಲ್ಲಿ ಲಜ್ಜೋ

* ಸ್ಟೀವನ್ ರೇಗೊ, ದಾರಂದಕುಕ್ಕು ಮಣಿರತ್ನಂ ಮತ್ತೆ ಎದ್ದು ನಿರ್ದೇಶಕನ ಕುರ್ಚಿಯ ಮೇಲೆ ಕೂತಿದ್ದಾರೆ. ಅವರ ಹಿಂದಿನ ಚಿತ್ರ 'ಕಡಲ್' ಹೊಸಬರ ಜತೆಯಲ್ಲಿ ಹಳೆ ಮುಖಗಳನ್ನು ಇಟ್ಟುಕೊಂಡು ಹೊಸ ಕ್ರಾಂತಿ ಮಾಡಲು ಹೋಗಿ ಸೋಲು- ಗೆಲುವಿನ ತಕ್ಕಡಿಯಲ್ಲಿ ಬರೋಬರಿ ತೂಗಿಕೊಂಡಿದ್ದರು. ಅದಕ್ಕೂ ಮಿಗಿಲಾಗಿ 'ರಾವಣ್' ಕಹಿ ಸೋಲಿನ ನಡುವೆ ಕೂಡ 'ಕಡಲ್'ನಲ್ಲಿ ಏನಾದರೂ ಗೆಲುವು ಸಿಗುತ್ತಾ ಎಂದು ಕಾದು ಕೂತಿದ್ದ ಮಣಿರತ್ನಂ, 'ಕಡಲ್'ನಲ್ಲೂ ನಿರಾಶೆಯನ್ನು ಕಟ್ಟಿಕೊಂಡು ಮುನ್ನಡೆಯಬೇಕಾಯಿತು. ಆದರೂ ನಿರ್ದೇಶಕ ಮಣಿರತ್ನಂ ಸೋಲಿನಲ್ಲೂ ಎದ್ದು ನಿಲ್ಲುತ್ತಾರೆ. ಮತ್ತೆ ಓಡಿ ಗೆದ್ದು ಬರುತ್ತಾರೆ ಎನ್ನುವ ನಂಬಿಕೆಯ ಪೊಟ್ಟಣವನ್ನು ಹಿಡಿದುಕೊಂಡು ಸಿನಿಮಾ ನಿರ್ಮಾಪಕರು ಕಾದು ಕೂತಿದ್ದಾರೆ. ಅಂದಹಾಗೆ ನಿರ್ದೇಶಕ ಮಣಿರತ್ನಂಗಾಗಿ ಕಾದು ಕೂತವರಿಗೆ ಖುಷ್ ಖಬ್ರಿ.. ಮಣಿ ಮತ್ತೆ ಚಿತ್ರ ನಿರ್ದೇಶನಕ್ಕೆ ಇಳಿಯಲಿದ್ದಾರೆ. ಈ ಬಾರಿಯ ಸಿನಿಮಾ ಭಾರತ ಹಾಗೂ ಪಾಕಿಸ್ತಾನದ ನಡುವಿನ ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ಮಾಡುತ್ತಿದ್ದಾರೆ. ಮಣಿರತ್ನಂ ಎಂದಾಕ್ಷಣ ಅವರ ಚಿತ್ರಗಳಲ್ಲಿ ಕೋಮು ಸೂಕ್ಷ್ಮ ಎಳೆಗಳಿಗೆ ಜಾಸ್ತಿ ಮಹತ್ವ. ಅದನ್ನೇ ಬಂಡವಾಳವಾಗಿಟ್ಟುಕೊಂಡು ಇಡೀ ಎರಡು ಗಂಟೆಯ ಸಿನಿಮಾವನ್ನು ಭರ್ಜರಿಯಾಗಿ ಮುನ್ನಡೆಸುತ್ತಾರೆ. ಈಗ 'ಲಜ್ಜೋ' ಸಿನಿಮಾ ಇವೆಲ್ಲ ವಿಚಾರಗಳನ್ನು ಇಟ್ಟುಕೊಂಡು ಮಣಿ ಪ್ರೇಕ್ಷಕರ ಮುಂದೆ ತರಲು ಪ್ರಯತ್ನ ಪಡುತ್ತಿದ್ದಾರೆ. ರಾಜಸ್ಥಾನದ ಪುಟ್ಟ ಗ್ರಾಮವೊಂದರಲ್ಲಿ ಮಣಿಯ ಕ್ಯಾಮೆರಾಗಳು ಓಡಾಡಲಿದೆ. ಮಣಿಯ 'ಲಜ್ಜೋ'ದಲ್ಲಿ ಏನ್ ಉಂಟು: ನಿರ್ದೇಶಕ ಮಣಿರತ್ನಂ ಹಾಗೂ ನಿರ್ಮಾಪಕ ಬಾಬಿ ಬೇಡಿ ಜತೆಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರ 'ಲಜ್ಜೋ'ದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಕರೀನಾ ಕಪೂರ್ ನಟಿಸುತ್ತಿದ್ದಾರೆ. ಅಂದಹಾಗೆ ಆಮೀರ್ 'ಧೂಮ್3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕರೀನಾ ಸೈಫ್ ಮದುವೆಯಾದ ನಂತರ ಯಾವುದೇ ಚಿತ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ. ಇಬ್ಬರು ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳೋದು ಕೂಡ ಕಷ್ಟ ಎನ್ನುವ ಮಾತುಗಳೇ ಬಹಳ ವರ್ಷಗಳಿಂದ ಓಡಾಡುತ್ತಿತ್ತು. ಆದರೆ ಈ ಎಲ್ಲ ಮಾತುಗಳಿಗೆ ಕೊನೆಗೂ ಬ್ರೇಕ್ ಸಿಕ್ಕಿದೆ. ಆಮೀರ್ ಅವರು ಧೂಮ್ -3 ನಂತರ ಮಣಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕರೀನಾ ಕೂಡ ಮದುವೆಯ ನಂತರ ದೊಡ್ಡ ಬ್ರೇಕ್‌ಗಾಗಿ ಮಣಿ ಚಿತ್ರಕ್ಕೆ ಓಕೆ ಎಂದಿದ್ದಾಳೆ. ಚಿತ್ರಕ್ಕೆ ಇಳಯರಾಜ ಸಂಗೀತ ನೀಡುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿಸಿಕೊಂಡಿತ್ತು. ಆದರೆ ಸುಹಾಸಿನಿ ಮಣಿರತ್ನಂ ಅವರು ಮಾಧ್ಯಮಗಳ ಮುಂದೆ ಬಂದು ಮಣಿಯ ಮುಂದಿನ ಚಿತ್ರಕ್ಕೆ ಎ. ಆರ್. ರೆಹಮಾನ್ ಅವರೇ ಸಂಗೀತ ನೀಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಹಿರಿಯ ಚಿತ್ರ ಸಾಹಿತಿ ಗುಲ್ಜಾರ್ ಸಾಹಿತ್ಯ ಬರೆದಿದ್ದಾರೆ. ಪಿ.ಸಿ. ಶ್ರೀರಾಮ್ ಛಾಯಾಗ್ರಹಣ ಮಾಡಿದ್ದಾರೆ. ಇಸ್ಮಾತ್ ಚುಗತೀ ಅವರ ಸಣ್ಣ ಕತೆಯನ್ನು ಆಧರಿಸಿಕೊಂಡು 'ಲಜ್ಜೋ' ಮೂಡಿಬರುತ್ತಿದೆ. ಕರೀನಾ ಕಪೂರ್ 'ಲಜ್ಜೋ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಆಮೀರ್ ಜತೆಗೆ ಮತ್ತೊಂದು ನಟ ಕೂಡ ಸೇರ್ಪಡೆಯಾಗಲಿದ್ದಾರೆ. ಆದರೆ ಅವರನ್ನು ಚಿತ್ರ ಆರಂಭದ ನಂತರವೇ ಫೈನಲ್ ಮಾಡುವ ಕುರಿತು ಚಿತ್ರ ತಂಡ ಯೋಚನೆ ಮಾಡುತ್ತಿದೆ. 2005ರಿಂದ ಈ ಚಿತ್ರವನ್ನು ಮಾಡಬೇಕು ಎಂದುಕೊಂಡು ಮಣಿರತ್ನಂ ಸುತ್ತಾಡುತ್ತಿದ್ದರು. ಚಿತ್ರದ ಕತೆಯಲ್ಲಿ ಬದಲಾವಣೆ ಹಾಗೂ ನಾಯಕ, ನಾಯಕಿಯರ ಹುಡುಕಾಟ, ಆಮೀರ್, ಕರೀನಾ ಡೇಟ್ ಕ್ಲ್ಯಾಶ್ ಎಲ್ಲವೂ ಸೇರಿಕೊಂಡು ಚಿತ್ರವನ್ನು 2013ರ ಕಾಲ ಘಟ್ಟಕ್ಕೆ ತಂದು ನಿಲ್ಲಿಸಿದೆ. ಈ ಹಿಂದೆ ಷೇಕ್ಸ್ ಪಿಯರ್ ಕತೆಯನ್ನು ಆಧರಿಸಿಕೊಂಡು ಬಂದಿರುವ 'ಓಂಕಾರ' ನಂತರ ಉರ್ದು ಸಾಹಿತಿ ಇಸ್ಮಾತ್ ಚುಗತೀ ಅವರ ಸಣ್ಣ ಕತೆಯನ್ನು ಇಟ್ಟುಕೊಂಡು ಬರುತ್ತಿರುವ ಸಿನಿಮಾ 'ಲಜ್ಜೋ' ನಿರೀಕ್ಷೆ ಹುಟ್ಟಿಸಿದೆ. ಮಣಿರತ್ನಂ ಮೊದಲ ಬಾರಿಗೆ ಹಾಸ್ಯ ಕತೆಯನ್ನು ಚಿತ್ರವಾಗಿರುಸುತ್ತಿರೋದು ಇದೇ ಮೊದಲು ಅದರಲ್ಲೂ ಆಮೀರ್ ಜತೆ ಮಣಿಯ ಕಾಂಬೀನೇಷನ್ ವರ್ಕ್ ಔಟ್ ಆಗುತ್ತಾ ಎನ್ನುವ ಉತ್ತರಕ್ಕೆ ಚಿತ್ರ ಬಿಡುಗಡೆ ತನಕವೂ ಕಾಯಬೇಕು. ಕೋಟ್ ಕೋರ್ನರ್ 'ಯುವ ಸಿನಿಮಾ ನಂತರ ಮಣಿ ಜತೆ ಇದು ಎರಡನೇ ಸಿನಿಮಾ. ನನಗೆ ಕತೆ ತುಂಬಾ ಹಿಡಿಸಿದೆ. ಚಿತ್ರಕ್ಕೆ ನಾನು ಸಹಿ ಮಾಡಿದ್ದೇನೆ. ರಾಜಸ್ಥಾನದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಮಣಿ ಒಳ್ಳೆಯ ಪ್ರತಿಭಾವಂತ ನಿರ್ದೇಶಕ ಎನ್ನುವುದರಲ್ಲಿ ನನಗೆ ಯಾವುದೇ ಸಂದೇಹ ಇಲ್ಲ. - ಕರೀನಾ ಕಪೂರ್ (vk lvk published dis article on 10.04.2013)

No comments:

Post a Comment