Saturday, October 13, 2012

ಕಾಲಿವುಡ್ ಗಲ್ಲಿಯಲ್ಲಿ ಐಶ್ವರ್ಯಾ

* ಸ್ಟೀವನ್ ರೇಗೊ, ದಾರಂದಕುಕ್ಕು ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೀರೋಯಿನ್ ಆಗಿದ್ದಾಯ್ತು. ರಜನಿಕಾಂತ್ ಪುತ್ರಿಯರಾದ ಸೌಂದರ್ಯಾ ಮತ್ತು ಐಶ್ವರ್ಯಾ ಡೈರೆಕ್ಟರುಗಳಾದ್ರು. ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ನಾಯಕಿಯಾದ್ರು. ಈಗ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿಯ ಸರದಿಯಲ್ಲಿ ನಿಂತು ಕಾಯುತ್ತಿದ್ದಾರೆ. ಇತ್ತ ಕಡೆ ಬಲಗಾಲಿಟ್ಟು ಬಾ ಎನ್ನುತ್ತಿದೆ ಕಾಲಿವುಡ್.. ಟೋಟಲ್ ಫ್ರೆಶ್ ಫೇಸ್ ನ ಹುಡುಕಾಟದಲ್ಲಿರುವ ಪ್ರೇಕ್ಷಕನಿಗೆ ಭರ್ಜರಿ ಸುದ್ದಿ ಕಾದಿದೆ.
ಕಾಲಿವುಡ್ ರಂಗೀನ್ ಗಲ್ಲಿಯಲ್ಲಿ ಐಶ್ ಹೆಸರು ಕಾಣಿಸಿಕೊಂಡಿದೆ. ಅರೇ ಬಾಲಿವುಡ್ ಚಿತ್ರ ನಿರ್ದೇಶಕರೆಲ್ಲರೂ ಐಶ್ ಮುಂದೆ ಹಿಂದೆ ಜೋತು ಬೀಳುವಾಗ ಯಾಕಪ್ಪಾ ಐಶ್ ಕಾಲಿವುಡ್ ದುನಿಯಾಕ್ಕೆ ಬಂದಳು ಅಂತಾ ಕೇಳ್ತೀರಾ.. ಹಾಗಾದರೆ ನಿಮ್ಮ ಊಹೆ ಟೋಟಲಿ ತಪ್ಪು. ಇದು ಬಾಲಿವುಡ್ ಐಶ್ ಮಾತಲ್ಲ. ಕನ್ನಡ ಅದರಲ್ಲೂ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಕುರಿತಾದ ಮಾತು. ಅಂದಹಾಗೆ ಈ ಐಶ್ ಬೇರೆ ಯಾರು ಅಲ್ಲ... ಅರ್ಜುನ್ ಸರ್ಜಾ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಜತೆಯಲ್ಲಿ ರಥಸಪ್ತಮಿಯಲ್ಲಿ ಕಾಣಿಸಿಕೊಂಡ ನಿವೇದಿತಾ ಅವರ ಪುತ್ರಿ. ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೀರೋಯಿನ್ ಆಗಿದ್ದಾಯ್ತು. ರಜನಿಕಾಂತ್ ಪುತ್ರಿಯರಾದ ಸೌಂದರ್ಯಾ ಮತ್ತು ಐಶ್ವರ್ಯಾ ಡೈರೆಕ್ಟರುಗಳಾದ್ರು. ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ನಾಯಕಿಯಾದ್ರು. ಈಗ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿಯ ಸರದಿ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ತೇಲಿ ಬರುತ್ತಿರುವ ಸುದ್ದಿ. ತಂದೆಯಂತೆ ಕಣ್ಣುಗಳು, ತಾಯಿಯಂತೆ ದೇಹಸಿರಿಯಲ್ಲಿ ಬಳುಕುತ್ತಿರುವ ಹುಡುಗಿ ಐಶ್ವರ್ಯಾ ತಂದೆಯ ಜತೆಯಲ್ಲಿ ಆಗಾಗ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನೋಡಲು ಮುದ್ದಾಗಿರುವ ಐಶ್ವರ್ಯಾ ಅವರದು ಫೋಟೋಜನಿಕ್ ಫೇಸ್. ಚಿತ್ರರಂಗಕ್ಕೆ ಹೇಳಿ ಮಾಡಿಸಿದ ಮುಖ ಎಂಬ ಮಾತುಗಳು ಈ ಹಿಂದೆನೇ ಕೇಳಿಬರುತ್ತಿತ್ತು. ಸಿನಿಮಾ ನಿರ್ದೇಶಕರು ಕೂಡ ಅರ್ಜುನ್ ಮುಂದೆ ಬಹಳಷ್ಟು ಸಲ ಈ ವಿಚಾರವನ್ನೇ ಪ್ರಸ್ತಾಪ ಮಾಡಿದ್ದರು. ಆದರೆ ಅರ್ಜುನ್ ಮಾತ್ರ ಐಶ್ ಆಗಮನಕ್ಕೆ ಇನ್ನೂ ಕೂಡ ಸಮಯವಿದೆ ಎಂದು ಸುಮ್ಮನೆ ಇದ್ದು ಬಿಡುತ್ತಿದ್ದರು. ಆದರೆ ಕಲಾವಿದನ ಮನೆಯಲ್ಲಿ ಇರುವ ಮಂದಿನೂ ಕಲೆಗೆ ಮಾರು ಹೋಗುತ್ತಾರೆ ಎನ್ನುವ ವಿಚಾರ ಅರ್ಜುನ್ ಪಾಲಿಗೆ ಅರಿವಾಗಿದೆ. ಇದೇ ಕಾರಣದಿಂದ ಐಶ್ ಈಗ ಸಿನಿಮಾ ಕ್ಷೇತ್ರಕ್ಕೆ ಬರಲು ಪಕ್ಕಾ ಟೈಮ್ ಎಂದುಕೊಂಡು ಐಶ್ ಗೆ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ದೊಡ್ಡ ನಾಯಕನ ಜತೆಯಲ್ಲಿಯೇ ಮಗಳನ್ನು ನಾಯಕಿಯಾಗಿ ಇಳಿಸಬೇಕು ಎನ್ನೋದು ಕೂಡ ಅರ್ಜುನ್ ಗೆ ಇದ್ದ ಬಹು ದೊಡ್ಡ ಕನಸ್ಸು ಎಂದು ಮಾಧ್ಯಮವೊಂದರಲ್ಲಿ ಈ ಹಿಂದೆ ಅವರೇ ಹೇಳಿಕೊಂಡಿದ್ದರು. ವಿಶಾಲ್ ಪಾಲಿಗೆ ಸಿಕ್ಕಿದ ಐಶ್: ಕಾಲಿವುಡ್ ಸಿನಿಮಾ ನಗರಿಯಲ್ಲಿ ನಿರ್ದೇಶಕ ಭೂಪತಿ ಪಾಂಡ್ಯನ್ ಗೆ ತನ್ನದೇ ಆದ ಹೆಸರಿದೆ. ಕಾರಣ ಮಾಸ್ ಚಿತ್ರಗಳನ್ನು ಕೊಟ್ಟು ಪ್ರೇಕ್ಷಕರನ್ನು ತನ್ನ ಜೇಬಿನಲ್ಲಿ ತುಂಬಿಸಿಕೊಳ್ಳುವ ಸಾಮರ್ಥ್ಯ ಗೊತ್ತಿರುವ ನಿರ್ದೇಶಕ ಎಂದೇ ಕಾಲಿವುಡ್ ಪಡಸಾಲೆಯಲ್ಲಿ ಅವರ ಬಗ್ಗೆ ಕೇಳಿ ಬಂದ ಮಾತು. ಇದೇ ಭೂಪತಿ ಪಾಂಡ್ಯನ್ ವಿಶಾಲ್ ಜತೆಯಲ್ಲಿ "ವೇಲ್ ಕೋಟೈ" ಎನ್ನುವ ಚಿತ್ರ ಮಾಡಿ ಇಬ್ಬರಿಗೂ ಬೇಕಾಗುವಷ್ಟು ಹೆಸರು ಸಂಪಾದಿಸಿಕೊಂಡಿದ್ದರು. ಇದೇ ಭೂಪತಿ ಕಾಲಿವುಡ್ ನ ಚಿಯನ್ ವಿಕ್ರಂ ಅವರಿಗೆ ಚಿತ್ರದ ಕತೆಯನ್ನು ಹೇಳಿದ್ದರು. ಆದರೆ ಹಾಸ್ಯ ಜತೆಗೆ ಸಖತ್ ಸಾಹಸ ದೃಶ್ಯಗಳಿರುವ ಚಿತ್ರಗಳನ್ನೇ ಮಾಡುತ್ತಾ ಸುಸ್ತಾದ ಚಿಯನ್ ಈ ಕತೆಯನ್ನು ಮಾಡಲು ಒಲ್ಲೆ ಎಂದಿದ್ದರು. ಭೂಪತಿ ಕಳೆದ ಎರಡು ವರ್ಷಗಳಿಂದ ಈ ಚಿತ್ರದ ಕತೆಯನ್ನು ಇಟ್ಟುಕೊಂಡು ಕಾಲಿವುಡ್ ಅಂಗಳದಲ್ಲಿ ಬಹಳಷ್ಟು ನಟರನ್ನು ಸಂಪರ್ಕಿಸಿದ್ದರು. ಆದರೆ ಭೂಪತಿ ಪಾಲಿಗೆ ಕಾಣ ಸಿಕ್ಕ ನಟ ವಿಶಾಲ್. ಅಂದಹಾಗೆ ಚಿತ್ರಕ್ಕೆ 'ಪಟ್ಟಾತು ಯಾನೈ' ಎಂದು ಹೆಸರಿಡಲಾಗಿದೆ. ಚಿತ್ರದ ನಿರ್ದೇಶಕ ಭೂಪತಿ ಪಾಂಡಿಯೇನ್ ಹೇಳುವಂತೆ: ಹೌದು. ನಾವು ನಮ್ಮ ಹೊಸ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗಾಗಲೇ ಚಿತ್ರಕ್ಕೆ ಐಶ್ ಸಹಿ ಕೂಡ ಮಾಡಿದ್ದಾರೆ. ಬರುವ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರೀಕರಣವನ್ನು ಮಾಡಲು ಅಣಿಯಾಗುತ್ತಿದ್ದೇವೆ. ಐಶ್ ಕೂಡ ನಮ್ಮ ಜತೆ ಕೆಲಸ ಮಾಡಲು ತುಂಬಾ ಉತ್ಸಾಹ ತೋರಿಸಿದ್ದಾರೆ. ಚಿತ್ರದ ಕತೆ ಕುರಿತು ಐಶ್ ಗೆ ಬರೀ ನಿರೀಕ್ಷೆ ಇದೆ. ಚಿತ್ರ ಸಾಹಸದ ಜತೆಯಲ್ಲಿ ಕಾಮಿಡಿಯನ್ನು ಒಳಗೊಂಡಿದೆ ಎನ್ನುತ್ತಾರೆ ಅವರು. ತಿರುನಲ್ ವೇಲಿ, ಕಾರಿಕಾಡು ಹಾಗೂ ತಿರುಚಿಯಲ್ಲಿ ಚಿತ್ರದ ಶೂಟಿಂಗ್ ಕೆಲಸ ನಡೆಯಲಿದೆ. ಚಿತ್ರದಲ್ಲಿ ಸಂತಾನಂ ಕೂಡ ಒಂದು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮನ್ ಚಿತ್ರದ ಸಂಗೀತ ಹೊಣೆ ಹೊತ್ತಿದ್ದಾರೆ. ಐಶ್ ಪಾಲಿಗೆ ಇದೊಂದು ಚೊಚ್ಚಲ ಚಿತ್ರವಾಗಲಿದೆ. ಕನ್ನಡದ ನಟ ಅರ್ಜುನ್ ಸರ್ಜಾ ಕನ್ನಡ ಚಿತ್ರಗಳ ಮೂಲಕ ತಮಿಳಿಗೆ ಹೋಗಿ ದೊಡ್ಡ ಹೆಸರು ಸಂಪಾದಿಸಿಕೊಂಡು ಬಂದಿದ್ದರು. ಆದರೆ ಐಶ್ ಕಾಲಿವುಡ್ ಚಿತ್ರಕ್ಕೆ ಎಂಟ್ರಿಯಾಗುವ ಮೂಲಕ ಕನ್ನಡಕ್ಕೆ ಬರುತ್ತಾರಾ ಕಾದು ನೋಡಬೇಕು ಎನ್ನುತ್ತಿದೆ ಮೂಲಗಳು. ಐಶ್ ಎನ್ನುವ ಕಾಲಿವುಡ್ ಸ್ಟುಡೆಂಟ್: ಅರ್ಜುನ್ ಸರ್ಜಾ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿಯೇ ಐಶ್ವರ್ಯಾ. ಕಿರಿಯ ಪುತ್ರಿಯ ಹೆಸರು ಅಂಜನಾ. ಅರ್ಜುನ್ ಸರ್ಜಾ ಅವರ ಕೈಹಿಡಿದ ಬಳಿಕ ನಿವೇದಿತಾ ಅವರು ಚಿತ್ರರಂಗದಿಂದ ದೂರ ಉಳಿದು ಹೋದರು. ವಿಶ್ಯುವಲ್ ಕಮ್ಯುನಿಕೇಶನ್ಸ್‌ ಓದುತ್ತಿರುವ ಐಶ್ವರ್ಯಾಳಿಗೆ ಚಿತ್ರದಲ್ಲಿ ದ್ವಿತೀಯ ಪಿಯು ಹುಡುಗಿಯ ಪಾತ್ರವಂತೆ. ಇತ್ತ ಕಡೆ ತನ್ನ ಸೋದರಳಿಯರಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾರನ್ನು ಅಂಕೆಯಿಂದ ಹೊರಗೆ ಹೋಗದಂತೆ ನೋಡಿಕೊಂಡವರು ಅರ್ಜುನ್ ಸರ್ಜಾ. ಹೀಗಿರುವಾಗ ತಂದೆಯಿಂದ ಈಗಾಗಲೇ ನಟನೆಯ ಪಾಠ ಕಲಿತಿರುವ ಐಶ್ವರ್ಯಾ, ಕ್ಯಾಮರಾ ಎದುರಿಸಲು ಸಾಕಷ್ಟು ತಯಾರಿ ಮಾಡಿರಬಹುದು. ಒಟ್ಟಿನಲ್ಲಿ ಸರ್ಜಾ ಕುಟುಂಬದ ಮತ್ತೊಂದು ಕುಡಿ ಬೆಳ್ಳಿತೆರೆ ಬೆಳಗಲು ಸಜ್ಜಾಗಿರುವುದು ಚಿತ್ರೋದ್ಯಮದ ಗಮನಸೆಳೆದಿದೆ. ಬಾಲಿವುಡ್‌ನಲ್ಲಿ ಖ್ಯಾತನಾಮರ ಪುತ್ರಿಯರು ದೊಡ್ಡ ಹೆಸರು ಮಾಡಿರುವಂತೆ ನಮ್ಮ ಕನ್ನಡ ಮೂಲದ ಹುಡುಗಿಯೂ ಸಿನಿಮಾ ಜಗತ್ತಿನಲ್ಲಿ ಮಿರಮಿರಮಿಂಚಲಿ ಎನ್ನೋದು ಪ್ರೇಕ್ಷಕ ಮಹಾಪ್ರಭುವಿನ ಆಶಯ.

No comments:

Post a Comment