Saturday, October 13, 2012
ಕಾಲಿವುಡ್ ಗಲ್ಲಿಯಲ್ಲಿ ಐಶ್ವರ್ಯಾ
* ಸ್ಟೀವನ್ ರೇಗೊ, ದಾರಂದಕುಕ್ಕು
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೀರೋಯಿನ್ ಆಗಿದ್ದಾಯ್ತು. ರಜನಿಕಾಂತ್ ಪುತ್ರಿಯರಾದ ಸೌಂದರ್ಯಾ ಮತ್ತು ಐಶ್ವರ್ಯಾ ಡೈರೆಕ್ಟರುಗಳಾದ್ರು. ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ನಾಯಕಿಯಾದ್ರು. ಈಗ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿಯ ಸರದಿಯಲ್ಲಿ ನಿಂತು ಕಾಯುತ್ತಿದ್ದಾರೆ. ಇತ್ತ ಕಡೆ ಬಲಗಾಲಿಟ್ಟು ಬಾ ಎನ್ನುತ್ತಿದೆ ಕಾಲಿವುಡ್.. ಟೋಟಲ್ ಫ್ರೆಶ್ ಫೇಸ್ ನ ಹುಡುಕಾಟದಲ್ಲಿರುವ ಪ್ರೇಕ್ಷಕನಿಗೆ ಭರ್ಜರಿ ಸುದ್ದಿ ಕಾದಿದೆ.
ಕಾಲಿವುಡ್ ರಂಗೀನ್ ಗಲ್ಲಿಯಲ್ಲಿ ಐಶ್ ಹೆಸರು ಕಾಣಿಸಿಕೊಂಡಿದೆ. ಅರೇ ಬಾಲಿವುಡ್ ಚಿತ್ರ ನಿರ್ದೇಶಕರೆಲ್ಲರೂ ಐಶ್ ಮುಂದೆ ಹಿಂದೆ ಜೋತು ಬೀಳುವಾಗ ಯಾಕಪ್ಪಾ ಐಶ್ ಕಾಲಿವುಡ್ ದುನಿಯಾಕ್ಕೆ ಬಂದಳು ಅಂತಾ ಕೇಳ್ತೀರಾ.. ಹಾಗಾದರೆ ನಿಮ್ಮ ಊಹೆ ಟೋಟಲಿ ತಪ್ಪು. ಇದು ಬಾಲಿವುಡ್ ಐಶ್ ಮಾತಲ್ಲ. ಕನ್ನಡ ಅದರಲ್ಲೂ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಕುರಿತಾದ ಮಾತು. ಅಂದಹಾಗೆ ಈ ಐಶ್ ಬೇರೆ ಯಾರು ಅಲ್ಲ... ಅರ್ಜುನ್ ಸರ್ಜಾ ಹಾಗೂ ಹ್ಯಾಟ್ರಿಕ್ ಹೀರೋ ಶಿವಣ್ಣ ಜತೆಯಲ್ಲಿ ರಥಸಪ್ತಮಿಯಲ್ಲಿ ಕಾಣಿಸಿಕೊಂಡ ನಿವೇದಿತಾ ಅವರ ಪುತ್ರಿ. ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಹೀರೋಯಿನ್ ಆಗಿದ್ದಾಯ್ತು. ರಜನಿಕಾಂತ್ ಪುತ್ರಿಯರಾದ ಸೌಂದರ್ಯಾ ಮತ್ತು ಐಶ್ವರ್ಯಾ ಡೈರೆಕ್ಟರುಗಳಾದ್ರು. ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ನಾಯಕಿಯಾದ್ರು. ಈಗ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿಯ ಸರದಿ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ತೇಲಿ ಬರುತ್ತಿರುವ ಸುದ್ದಿ.
ತಂದೆಯಂತೆ ಕಣ್ಣುಗಳು, ತಾಯಿಯಂತೆ ದೇಹಸಿರಿಯಲ್ಲಿ ಬಳುಕುತ್ತಿರುವ ಹುಡುಗಿ ಐಶ್ವರ್ಯಾ ತಂದೆಯ ಜತೆಯಲ್ಲಿ ಆಗಾಗ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ನೋಡಲು ಮುದ್ದಾಗಿರುವ ಐಶ್ವರ್ಯಾ ಅವರದು ಫೋಟೋಜನಿಕ್ ಫೇಸ್. ಚಿತ್ರರಂಗಕ್ಕೆ ಹೇಳಿ ಮಾಡಿಸಿದ ಮುಖ ಎಂಬ ಮಾತುಗಳು ಈ ಹಿಂದೆನೇ ಕೇಳಿಬರುತ್ತಿತ್ತು. ಸಿನಿಮಾ ನಿರ್ದೇಶಕರು ಕೂಡ ಅರ್ಜುನ್ ಮುಂದೆ ಬಹಳಷ್ಟು ಸಲ ಈ ವಿಚಾರವನ್ನೇ ಪ್ರಸ್ತಾಪ ಮಾಡಿದ್ದರು. ಆದರೆ ಅರ್ಜುನ್ ಮಾತ್ರ ಐಶ್ ಆಗಮನಕ್ಕೆ ಇನ್ನೂ ಕೂಡ ಸಮಯವಿದೆ ಎಂದು ಸುಮ್ಮನೆ ಇದ್ದು ಬಿಡುತ್ತಿದ್ದರು. ಆದರೆ ಕಲಾವಿದನ ಮನೆಯಲ್ಲಿ ಇರುವ ಮಂದಿನೂ ಕಲೆಗೆ ಮಾರು ಹೋಗುತ್ತಾರೆ ಎನ್ನುವ ವಿಚಾರ ಅರ್ಜುನ್ ಪಾಲಿಗೆ ಅರಿವಾಗಿದೆ. ಇದೇ ಕಾರಣದಿಂದ ಐಶ್ ಈಗ ಸಿನಿಮಾ ಕ್ಷೇತ್ರಕ್ಕೆ ಬರಲು ಪಕ್ಕಾ ಟೈಮ್ ಎಂದುಕೊಂಡು ಐಶ್ ಗೆ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ದೊಡ್ಡ ನಾಯಕನ ಜತೆಯಲ್ಲಿಯೇ ಮಗಳನ್ನು ನಾಯಕಿಯಾಗಿ ಇಳಿಸಬೇಕು ಎನ್ನೋದು ಕೂಡ ಅರ್ಜುನ್ ಗೆ ಇದ್ದ ಬಹು ದೊಡ್ಡ ಕನಸ್ಸು ಎಂದು ಮಾಧ್ಯಮವೊಂದರಲ್ಲಿ ಈ ಹಿಂದೆ ಅವರೇ ಹೇಳಿಕೊಂಡಿದ್ದರು.
ವಿಶಾಲ್ ಪಾಲಿಗೆ ಸಿಕ್ಕಿದ ಐಶ್:
ಕಾಲಿವುಡ್ ಸಿನಿಮಾ ನಗರಿಯಲ್ಲಿ ನಿರ್ದೇಶಕ ಭೂಪತಿ ಪಾಂಡ್ಯನ್ ಗೆ ತನ್ನದೇ ಆದ ಹೆಸರಿದೆ. ಕಾರಣ ಮಾಸ್ ಚಿತ್ರಗಳನ್ನು ಕೊಟ್ಟು ಪ್ರೇಕ್ಷಕರನ್ನು ತನ್ನ ಜೇಬಿನಲ್ಲಿ ತುಂಬಿಸಿಕೊಳ್ಳುವ ಸಾಮರ್ಥ್ಯ ಗೊತ್ತಿರುವ ನಿರ್ದೇಶಕ ಎಂದೇ ಕಾಲಿವುಡ್ ಪಡಸಾಲೆಯಲ್ಲಿ ಅವರ ಬಗ್ಗೆ ಕೇಳಿ ಬಂದ ಮಾತು. ಇದೇ ಭೂಪತಿ ಪಾಂಡ್ಯನ್ ವಿಶಾಲ್ ಜತೆಯಲ್ಲಿ "ವೇಲ್ ಕೋಟೈ" ಎನ್ನುವ ಚಿತ್ರ ಮಾಡಿ ಇಬ್ಬರಿಗೂ ಬೇಕಾಗುವಷ್ಟು ಹೆಸರು ಸಂಪಾದಿಸಿಕೊಂಡಿದ್ದರು. ಇದೇ ಭೂಪತಿ ಕಾಲಿವುಡ್ ನ ಚಿಯನ್ ವಿಕ್ರಂ ಅವರಿಗೆ ಚಿತ್ರದ ಕತೆಯನ್ನು ಹೇಳಿದ್ದರು. ಆದರೆ ಹಾಸ್ಯ ಜತೆಗೆ ಸಖತ್ ಸಾಹಸ ದೃಶ್ಯಗಳಿರುವ ಚಿತ್ರಗಳನ್ನೇ ಮಾಡುತ್ತಾ ಸುಸ್ತಾದ ಚಿಯನ್ ಈ ಕತೆಯನ್ನು ಮಾಡಲು ಒಲ್ಲೆ ಎಂದಿದ್ದರು.
ಭೂಪತಿ ಕಳೆದ ಎರಡು ವರ್ಷಗಳಿಂದ ಈ ಚಿತ್ರದ ಕತೆಯನ್ನು ಇಟ್ಟುಕೊಂಡು ಕಾಲಿವುಡ್ ಅಂಗಳದಲ್ಲಿ ಬಹಳಷ್ಟು ನಟರನ್ನು ಸಂಪರ್ಕಿಸಿದ್ದರು. ಆದರೆ ಭೂಪತಿ ಪಾಲಿಗೆ ಕಾಣ ಸಿಕ್ಕ ನಟ ವಿಶಾಲ್. ಅಂದಹಾಗೆ ಚಿತ್ರಕ್ಕೆ 'ಪಟ್ಟಾತು ಯಾನೈ' ಎಂದು ಹೆಸರಿಡಲಾಗಿದೆ. ಚಿತ್ರದ ನಿರ್ದೇಶಕ ಭೂಪತಿ ಪಾಂಡಿಯೇನ್ ಹೇಳುವಂತೆ: ಹೌದು. ನಾವು ನಮ್ಮ ಹೊಸ ಚಿತ್ರಕ್ಕೆ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಈಗಾಗಲೇ ಚಿತ್ರಕ್ಕೆ ಐಶ್ ಸಹಿ ಕೂಡ ಮಾಡಿದ್ದಾರೆ. ಬರುವ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರೀಕರಣವನ್ನು ಮಾಡಲು ಅಣಿಯಾಗುತ್ತಿದ್ದೇವೆ. ಐಶ್ ಕೂಡ ನಮ್ಮ ಜತೆ ಕೆಲಸ ಮಾಡಲು ತುಂಬಾ ಉತ್ಸಾಹ ತೋರಿಸಿದ್ದಾರೆ. ಚಿತ್ರದ ಕತೆ ಕುರಿತು ಐಶ್ ಗೆ ಬರೀ ನಿರೀಕ್ಷೆ ಇದೆ. ಚಿತ್ರ ಸಾಹಸದ ಜತೆಯಲ್ಲಿ ಕಾಮಿಡಿಯನ್ನು ಒಳಗೊಂಡಿದೆ ಎನ್ನುತ್ತಾರೆ ಅವರು.
ತಿರುನಲ್ ವೇಲಿ, ಕಾರಿಕಾಡು ಹಾಗೂ ತಿರುಚಿಯಲ್ಲಿ ಚಿತ್ರದ ಶೂಟಿಂಗ್ ಕೆಲಸ ನಡೆಯಲಿದೆ. ಚಿತ್ರದಲ್ಲಿ ಸಂತಾನಂ ಕೂಡ ಒಂದು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮನ್ ಚಿತ್ರದ ಸಂಗೀತ ಹೊಣೆ ಹೊತ್ತಿದ್ದಾರೆ. ಐಶ್ ಪಾಲಿಗೆ ಇದೊಂದು ಚೊಚ್ಚಲ ಚಿತ್ರವಾಗಲಿದೆ. ಕನ್ನಡದ ನಟ ಅರ್ಜುನ್ ಸರ್ಜಾ ಕನ್ನಡ ಚಿತ್ರಗಳ ಮೂಲಕ ತಮಿಳಿಗೆ ಹೋಗಿ ದೊಡ್ಡ ಹೆಸರು ಸಂಪಾದಿಸಿಕೊಂಡು ಬಂದಿದ್ದರು. ಆದರೆ ಐಶ್ ಕಾಲಿವುಡ್ ಚಿತ್ರಕ್ಕೆ ಎಂಟ್ರಿಯಾಗುವ ಮೂಲಕ ಕನ್ನಡಕ್ಕೆ ಬರುತ್ತಾರಾ ಕಾದು ನೋಡಬೇಕು ಎನ್ನುತ್ತಿದೆ ಮೂಲಗಳು.
ಐಶ್ ಎನ್ನುವ ಕಾಲಿವುಡ್ ಸ್ಟುಡೆಂಟ್:
ಅರ್ಜುನ್ ಸರ್ಜಾ ದಂಪತಿಗಳಿಗೆ ಇಬ್ಬರು ಪುತ್ರಿಯರು. ಹಿರಿಯ ಪುತ್ರಿಯೇ ಐಶ್ವರ್ಯಾ. ಕಿರಿಯ ಪುತ್ರಿಯ ಹೆಸರು ಅಂಜನಾ. ಅರ್ಜುನ್ ಸರ್ಜಾ ಅವರ ಕೈಹಿಡಿದ ಬಳಿಕ ನಿವೇದಿತಾ ಅವರು ಚಿತ್ರರಂಗದಿಂದ ದೂರ ಉಳಿದು ಹೋದರು. ವಿಶ್ಯುವಲ್ ಕಮ್ಯುನಿಕೇಶನ್ಸ್ ಓದುತ್ತಿರುವ ಐಶ್ವರ್ಯಾಳಿಗೆ ಚಿತ್ರದಲ್ಲಿ ದ್ವಿತೀಯ ಪಿಯು ಹುಡುಗಿಯ ಪಾತ್ರವಂತೆ. ಇತ್ತ ಕಡೆ ತನ್ನ ಸೋದರಳಿಯರಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾರನ್ನು ಅಂಕೆಯಿಂದ ಹೊರಗೆ ಹೋಗದಂತೆ ನೋಡಿಕೊಂಡವರು ಅರ್ಜುನ್ ಸರ್ಜಾ. ಹೀಗಿರುವಾಗ ತಂದೆಯಿಂದ ಈಗಾಗಲೇ ನಟನೆಯ ಪಾಠ ಕಲಿತಿರುವ ಐಶ್ವರ್ಯಾ, ಕ್ಯಾಮರಾ ಎದುರಿಸಲು ಸಾಕಷ್ಟು ತಯಾರಿ ಮಾಡಿರಬಹುದು. ಒಟ್ಟಿನಲ್ಲಿ ಸರ್ಜಾ ಕುಟುಂಬದ ಮತ್ತೊಂದು ಕುಡಿ ಬೆಳ್ಳಿತೆರೆ ಬೆಳಗಲು ಸಜ್ಜಾಗಿರುವುದು ಚಿತ್ರೋದ್ಯಮದ ಗಮನಸೆಳೆದಿದೆ. ಬಾಲಿವುಡ್‌ನಲ್ಲಿ ಖ್ಯಾತನಾಮರ ಪುತ್ರಿಯರು ದೊಡ್ಡ ಹೆಸರು ಮಾಡಿರುವಂತೆ ನಮ್ಮ ಕನ್ನಡ ಮೂಲದ ಹುಡುಗಿಯೂ ಸಿನಿಮಾ ಜಗತ್ತಿನಲ್ಲಿ ಮಿರಮಿರಮಿಂಚಲಿ ಎನ್ನೋದು ಪ್ರೇಕ್ಷಕ ಮಹಾಪ್ರಭುವಿನ ಆಶಯ.
Monday, October 8, 2012
ಬಾಲಿವುಡ್ ಸೆಲ್ಲಿಗಳ ಅಡ್ಡಾ ಹೆಸರು
ರಂಗು ರಂಗಿನ ಬಾಲಿವುಡ್ ಅಡ್ಡಾ ಅಂದರೆ ಹಾಗೆ ಇಲ್ಲಿ ಸೆಲೆಬಿಟ್ರಿಗಳು ಕಿಕ್ ಸ್ಟಾರ್ ಗಳು. ತಮ್ಮ ಅಭಿಮಾನಿಗಳ ಪಾಲಿಗಂತೂ ಇವರು ನಿಲುಕದ ನಕ್ಷತ್ರ ಜತೆಗೆ ಬರೀ ಸಿನಿಮಾ, ಯಾವುದಾದರೂ ಶೋ ಅದನ್ನು ಬಿಟ್ಟರೆ ಸಾಮಾಜಿಕ ತಾಣಗಳಲ್ಲಿ ಜೋತು ಬಿದ್ದವರಿಗೆ ಮಾತ್ರ ಅವರ ದರ್ಶನ ಭಾಗ್ಯ ಲಭ್ಯ. ಉಳಿದಂತೆ ತಮ್ಮ ನೆಚ್ಚಿನ ಸ್ಟಾರ್ ಗಳ ಗುಸುಗುಸು ಸುದ್ದಿ ಮಾಧ್ಯಮದಲ್ಲಿ ತಿಳಿದುಕೊಂಡರೆ ಸಾಕು ಅದೇ ಅಭಿಮಾನಿಗಳ ಪಾಲಿಗೆ ಒಂದು ಸಕ್ಕರೆ ಬೆಲ್ಲ. * ಸ್ಟೀವನ್ ರೇಗೊ, ದಾರಂದಕುಕ್ಕು
ರಂಗು ರಂಗಿನ ಬಾಲಿವುಡ್ ಅಡ್ಡಾ ಅಂದರೆ ಹಾಗೆ ಇಲ್ಲಿ ಸೆಲೆಬಿಟ್ರಿಗಳು ಕಿಕ್ ಸ್ಟಾರ್ ಗಳು. ತಮ್ಮ ಅಭಿಮಾನಿಗಳ ಪಾಲಿಗಂತೂ ಇವರು ನಿಲುಕದ
ನಕ್ಷತ್ರ ಜತೆಗೆ ಬರೀ ಸಿನಿಮಾ, ಯಾವುದಾದರೂ ಶೋ ಅದನ್ನು ಬಿಟ್ಟರೆ ಸಾಮಾಜಿಕ ತಾಣಗಳಲ್ಲಿ ಜೋತು ಬಿದ್ದವರಿಗೆ ಮಾತ್ರ ಅವರ ದರ್ಶನ ಭಾಗ್ಯ ಲಭ್ಯ. ಉಳಿದಂತೆ ತಮ್ಮ ನೆಚ್ಚಿನ ಸ್ಟಾರ್ ಗಳ ಗುಸುಗುಸು ಸುದ್ದಿ ಮಾಧ್ಯಮದಲ್ಲಿ ತಿಳಿದುಕೊಂಡರೆ ಸಾಕು ಅದೇ ಅಭಿಮಾನಿಗಳ ಪಾಲಿಗೆ ಒಂದು ಸಕ್ಕರೆ ಬೆಲ್ಲ.
ಆದರೆ ಬಾಲಿವುಡ್ ನ ಬಹಳಷ್ಟು ಸೆಲೆಬ್ರಿಟಿ ಗಳು ತಮ್ಮ ಒರಿಜಿನಾಲಿಟಿಯನ್ನು ಮುಚ್ಚಿಡುವ ಸಾಧ್ಯತೆಗಳೇ ಜಾಸ್ತಿ. ಅವರ ಸುಖ- ದುಃಖಗಳು, ಏನಾದರೂ ಮಾಡಬೇಕು ಎಂದುಕೊಂಡಾಗ ತಮ್ಮ ಅಭಿಮಾನಿಗಳಿಗೆ ಹೇಗೆ ಅನ್ನಿಸುತ್ತದೆ ಎನ್ನುವ ಅಭಿಪ್ರಾಯಗಳು ಅವರಿಗೂ ಬೇಕಾಗುತ್ತದೆ. ಇದೇ ಒಂದು ಕಾರಣದಿಂದ ಮಾಧ್ಯಮಗಳಿಗಿಂತ ಹೆಚ್ಚಾಗಿ ಸಾಮಾಜಿಕ ತಾಣಗಳಾದ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಬ್ಯುಸಿಯಾಗಿರುವ ಸ್ಟಾರ್ ಸೆಲೆಬ್ರಿಟಿಗಳು ತಮ್ಮ ವಾಸ್ತವ ವಿಚಾರಗಳನ್ನು ಅಭಿಮಾನಿಗಳ ಜತೆಯಲ್ಲಿ ಹಂಚಿಕೊಂಡ ಉದಾಹರಣೆಗಳು ಬಹಳಷ್ಟಿದೆ.
ಅದು ಕೂಡ ತಮ್ಮ ಒರಿಜಿನಾಲಿಟಿ ಬದಲಾಗಿ ತಮ್ಮ ಪೆಟ್ ನೇಮ್( ನಿಕ್ ನೇಮ್) ಗಳ ಮೂಲಕ ಅಭಿಮಾನಿಗಳ ಜತೆ ಕೂತು ಹರಟುತ್ತಾರೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರಲು ಸಾಧ್ಯವಿಲ್ಲ. ಇಂತಹ ನಿಕ್ ನೇಮ್ ಗಳು ನೋಡುವಾಗ ಕೆಲವೊಂದು ಸಲ ತಮಾಷೆಯಾಗಿ ಕಂಡರೂ ಇನ್ನೂ ಕೆಲವು ಸಲ ವಿಚಿತ್ರವಾಗಿ ಕಾಣುವ ಚಾನ್ಸ್ ಯೇ ಜಾಸ್ತಿ. ಆದರೆ ಸೆಲೆಬ್ರಿಟಿಗಳಿಗಂತೂ ಇದರ ಪರಿವೇ ಇಲ್ಲದೇ ತಮ್ಮಷ್ಟಕ್ಕೆ ಬಾಲಿವುಡ್ ಅಡ್ಡಾದಲ್ಲಿ ಮಸ್ತಾಗಿ ಬದುಕು ಕಟ್ಟುತ್ತಾರೆ. ಇದೇ ನಿಕ್ ನೇಮ್ ಗಳ ಮೂಲಕ ಮುಂಬಯಿ ಸಿನಿಮಾ ಅಂಗಳದಲ್ಲಿ ಒಬ್ಬರು ಮತ್ತೊಬ್ಬ ಸೆಲೆಬ್ರಿಟಿಗಳ ಕಾಲು ಎಳೆದು ಮಜಾ ಕೂಡ ನೋಡುತ್ತಾರೆ.
ಸೆಲೆಬ್ರಿಟಿಗಳ ಮಸ್ತ್ ನಿಕ್:
ಬಾಲಿವುಡ್ ಅಂಗಳದಲ್ಲಿರುವ ಎಲ್ಲ ನಾಯಕ - ನಾಯಕಿಯರು ತಮ್ಮನೈಜ ಹೆಸರಿನ ಬದಲಾಗಿ ತಮ್ಮ ನಿಕ್ ನೇಮ್ ಗಳ ಮೂಲಕವೇ ಗುರುತಿಸಿಕೊಳ್ಳುತ್ತಾರೆ. ಆದರೆ ಅವರ ನೈಜ ಹೆಸರು ಅಭಿಮಾನಿಗಳ ಪಾಲಿಗೆ ಪಠಿಸಲು ಲಭ್ಯ. ಅಂದಹಾಗೆ ಬಾಲಿವುಡ್ ನಟ ಗೋವಿಂದ ಅವರ ನಿಕ್ ನೇಮ್( ಅಡ್ಡಾ ಹೆಸರು) "ಚೀ ಚೀ 'ಎನ್ನೋದು ಬಹಳಷ್ಟು ಮಂದಿಗೆ ಗೊತ್ತೇ ಇಲ್ಲ. ಆದರೆ ಮುಂಬಯಿ ಸಿನಿಮಾ ಗಲ್ಲಿಯಲ್ಲಿ ಇದು ಕಾಮನ್ ಹೆಸರು. ಮತ್ತೊಬ್ಬ ನಟ ಸಲ್ಮಾನ್ ಖಾನ್ ಅವರನ್ನು ಕರೆಯವುದು "ಸಲ್ಲು ಭಾಯಿ '. ಇಂತಹ ನಿಕ್ ನೇಮ್ ಗಳು ಹೇಗೆ ಬಂತು ಅಂತಾ ಖುದ್ಧು ಸೆಲೆಬ್ರಿಟಿಗಳಿಗೂ ಗೊತ್ತಿಲ್ಲ. ಕಾರಣ ಯಾವುದೇ ಘಟನೆ ಅಥವಾ ಇತರ ಸಂಬಂಧದ ಆಧಾರದಲ್ಲಿ ಈ ಅಡ್ಡಾ ಹೆಸರು ಬಿದ್ದಿರುತ್ತದೆ. ಆದರೆ ಒಂದು ಮೂಲದ ಪ್ರಕಾರ ಗೋವಿಂದ ಅವರಿಗೆ ಈ ಹೆಸರು ಕೊಟ್ಟಿದ್ದು ಮಾತ್ರ ನಟ ಸಲ್ಮಾನ್ ಖಾನ್. ಬಾಲಿವುಡ್ ಚಿತ್ರ "ಪಾರ್ಟನರ್' ನಲ್ಲಿ ಗೋವಿಂದ ಅವರ ಸಂಬಂಧಿತ ದೃಶ್ಯವೊಂದರ ಆಧಾರದಲ್ಲಿ ಈ ಹೆಸರು ಬಿತ್ತು. ಅದೇ ಸಲ್ಮಾನ್ ಗೂ ಕೂಡ ಈ ಹೆಸರು ಕೊಟ್ಟದ್ದು ಗೋವಿಂದ ಇಬ್ಬರು ಒಳ್ಳೆಯ ಗೆಳೆಯರು.
ಅಂದಹಾಗೆ ಬಾಲಿವುಡ್ ನಟ ರಿಷಿ ಕಪೂರ್ ಅವರನ್ನು "ಚಿಂಟು' ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣ ಅವರ ಮನೆಯಲ್ಲಿದ್ದ ರಿಷಿಯ ಪ್ರೀತಿಯ ನಾಯಿ ಹೆಸರು "ಚಿಂಟು 'ಎಂದಾಗಿತ್ತು. ಅದೇ ರೀತಿ ರಿಷಿ ಕಪೂರ್ ತಮ್ಮ ಮಕ್ಕಳಾದ ರೀದಿಮಾ ಹಾಗೂ ರಣ್ ಬೀರ್ ಅವರನ್ನು ಕೂಡ ಒಂದು ನಾಯಿಯ ಹೆಸರನ್ನು ಕೊಡಲು ಪ್ರಯತ್ನ ಪಟ್ಟಿದ್ದಾರಂತೆ. ಆದರೆ ಮನೆಯಲ್ಲಿದ್ದವರ ವಿರೋಧದ ಆಧಾರದಲ್ಲಿ ಈಗೀನ ಹೆಸರು ಮಕ್ಕಳಿಗೆ ಬಂತು. ಅದೇ ಬಾಲಿವುಡ್ ನಟ ಹೃತಿಕ್ ರೋಷನ್ ಅಡ್ಡಾ ಹೆಸರು "ಡುಗ್ಗು'. ಈ ಹೆಸರು ಯಾಕೆ ಬಂತು ಅಂದರೆ ಹೃತಿಕ್ ಗೆ ನಾಯಿ ಮೇಲೆ ವಿಶೇಷ ಪ್ರೀತಿ. ಅವರ ಮನೆಯಲ್ಲಿ ಸಾಕಿಕೊಂಡಿದ್ದ ನಾಯಿಯೊಂದು ಮೃತಪಟ್ಟಿತ್ತು. ಅದರ ಹೆಸರು "ಡುಗ್ಗು' ಎಂದೇ ಮನೆಯವರು ಕರೆಯುತ್ತಿದ್ದರು. ಈ ನಾಯಿ ಹೋದ ನಂತರ ಅದರ ಹೆಸರನ್ನು ಹೃತಿಕ್ ರೋಷನ್ ಅವರ ಅಡ್ಡಾ ಹೆಸರಿನಿಂದ ಕರೆಯಲು ಮನೆಯವರು ಆರಂಭ ಮಾಡಿದ್ದರು.
ರಣ್ ಬೀರ್ ಕಪೂರ್ ಅವರನ್ನು ಅವರ ತಾಯಿ ನೀತೂ ಸಿಂಗ್ ಕಪೂರ್ ಕರೆಯುವುದು "ರೈಮಂಡ್' ಎಂದೇ ಯಾಕ್ ಹೀಗೆ ಅಂತಾ ಕೇಳ್ತೀರಾ..? ನೀತು ಹೇಳುವಂತೆ ರಣ್ ಬೀರ್ ಒಬ್ಬ ಪರ್ಫೆಕ್ಟ್ ಮ್ಯಾನ್. ದೇವರು ತನ್ನ ಶಕ್ತಿಯನ್ನು ಧಾರೆ ಎರೆದು ಕೊಟ್ಟ ಪುತ್ರನೇ ರಣ್ ಬೀರ್ ಎನ್ನೋದು ನೀತೂ ಸಿಂಗ್ ಕಪೂರ್ ಅವರ ಬಲವಾದ ನಂಬಿಕೆ. ಇತ್ತ ಕಡೆ ಸೋನಂ ಕಪೂರ್ ಕೂಡ ತನ್ನ ಅಡ್ಡಾ ಹೆಸರು "ಗ್ರೀಪ್ಪಿ' ಎಂದು ಕರೆಯಲು ಇಷ್ಟಪಡುತ್ತಾರೆ. ಯಾಕ್ ಅಂದರೆ ತಂದೆ ನಟ ಅನಿಲ್ ಕಪೂರ್ ಬಹಳ ಉದ್ದವಾಗಿರೋದು ಇದಕ್ಕೆ ಕಾರಣ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ನಿಕ್ ನೇಮ್ "ಮಾನ್ಯ' ಎನ್ನುತ್ತಾರೆ. ಆದರೆ ಶಿಲ್ಪಾ ತಾಯಿ ಅವರನ್ನು ಕರೆಯುವುದು "ಬಂಬೂಚಾ ಅರ್ಥಾತ್ ಹನೀಬಂಚ್'. ಕರೀಷ್ಮಾ ಕಪೂರ್ "ಗೀನಾ' ಎನ್ನುವ ನಿಕ್ ನೇಮ್ ಅವರ ತಂದೆಯಿಂದ ಬಂತು. ಇತ್ತ ಕಡೆ ಅಜೇಯ್ ದೇವಗನ್ ಅವರನ್ನು ಹೆತ್ತವರು ಕರೆಯುವುದು "ರಾಜು' ಎಂದು ಆದರೆ ಪ್ರೀತಿಯ ಮಡದಿ ಕಾಜೋಲ್ ಕರೆಯುವುದು "ಜೇ' ಎಂಬುದಾಗಿ ಇಂತಹ ಸಾಕಷ್ಟು ರೋಚಕ ನಿಕ್ ನೇಮ್ ಗಳ ಹುಡುಕಾಟ ಮಾಡುವಾಗ ಕಾಲ ಬುಡದಲ್ಲಿ ಸಿಕ್ಕಿ ಬೀಳುತ್ತದೆ. ತಮ್ಮ ಸ್ಟಾರ್ ಗಳ ಜತೆಗೆ ಅವರ ನಿಕ್ ನೇಮ್ ಗಳು ಕೂಡ ಬಹಳ ಮಸ್ತ್ ಆಗಿರುವುದು ಮಾತ್ರ ದಿಟಿ ಅಲ್ವಾ..?
ಬಿಪಾಷ ಬದಲು "ಬೊನ್ನಿ' ಆಗಬೇಕಿತ್ತು:
ಬಾಲಿವುಡ್ ಪಾಲಿನ ಕೃಷ್ಣ ಸುಂದರಿ ಎಂದೇ ಕರೆಯಲಾಗುವ ಬಿಪಾಷ ಬಸು ಅವರಿಗೆ ನಾಯಿಗಳ ಮೇಲೆ ವಿಶೇಷ ಆಸಕ್ತಿ. ತಮ್ಮ ಮುದ್ದಿನ ನಾಯಿ ಹೆಸರು ಬೊನ್ನಿ. ನಾನು ಯಾವಾಗಲೂ ಬೊನ್ನಿಯ ಪುತ್ರಿ ಎಂದೇ ಕರೆಯಲು ಇಷ್ಟಪಡುತ್ತೇನೆ. ಅದಕ್ಕೂ ಮುಖ್ಯವಾಗಿ "ಬೊನ್ನಿ' ಎಂದೇ ನನ್ನ ಹೆಸರು ಇರಬೇಕಿತ್ತು ಎಂದು ಬಿಪಾಷ ಒಂದು ಕಡೆ ಹೇಳಿಕೊಂಡಿದ್ದರು. ಆದರೆ ಮಾಧ್ಯಮದವರು ಮಾತ್ರ "ಬಿಪ್ಸ್' ಎಂದು ಕರೆಯಲು ಆರಂಭ ಮಾಡಿದರು ಎಂದು ಬಿಪಾಷ ಬಹಳಷ್ಟು ಸಲ ಹೇಳಿಕೊಳ್ಳುತ್ತಿದ್ದರು. ಒಂದು ಲೆಕ್ಕಚಾರದ ಪ್ರಕಾರ ಬಿಪಾಷ ಬಸು ಗೆ ಇರುವಷ್ಟು ನಿಕ್ ನೇಮ್ ಯಾರಿಗೂ ಇರಲು ಸಾಧ್ಯವಿಲ್ಲ. ಬಿಪ್ಪಿ, ಬಿಪ್ಸ್, ಬಿ, ಬೀಪಿ,ಬಿಬಿ, ಬಿಪ್ ಶೋ, ಬೋಪ್, ಬಸು, ಬೇಬಿ ಬಸು, ಬೋನಾ, ಬೀಪ್ಸ್ ಎಂದು ಬಾಲಿವುಡ್ ಅಂಗಳದಲ್ಲಿ ಅವರನ್ನು ಸಧ್ಯಕ್ಕೆ ಕರೆಯುವ ಅಡ್ಡಾ ಹೆಸರುಗಳು.
"ಮೀಮಿ' ಯಾದ ಪ್ರಿಯಾಂಕಾ ಚೋಪ್ರಾ:
ಬಾಲಿವುಡ್ ಹುಡುಗಿ ಪ್ರಿಯಾಂಕಾ ಚೋಪ್ರಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಆದರೆ ಪ್ರಿಯಾಂಕಾ ಅವರನ್ನು ಕರೆಯುವ ನಿಕ್ ನೇಮ್ ಮಾತ್ರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಅಂದಹಾಗೆಪ್ರಿಯಾಂಕಾ ಕೂಡ ಪೆಟ್ ಲವರ್. ಅವರನ್ನು ಮನೆಯಲ್ಲಿ ಕರೆಯುವುದು "ಮೀಮೀ' ಎಂದು ಅದಕ್ಕೆ ಬಹುಮುಖ್ಯ ಕಾರಣ ಹಾಲಿವುಡ್ ತಾರೆ ಮೀಮೀ ರೋಜರ್ ಅದೇ ರೀತಿ ಇದ್ದಾಳೆ ಎನ್ನುವ ಕಾರಣಕ್ಕೆ. ಆದರೆ ಪ್ರಿಯಾಂಕಾ ಅವರ ಒರಿಜಿನಲ್ ನಿಕ್ ನೇಮ್ "ಮೀತೂ' . ಆದರೆ ಶಾಲೆಯಲ್ಲಿ ಪ್ರಿಯಾಂಕಾ ಅವರನ್ನು ಕರೆಯುತ್ತಿದ್ದ ನಿಕ್ ನೇಮ್ "ಮೀಮೀ' ಯಂತೆ. ಬಾಲಿವುಡ್ ನಟಿ ಸುಶ್ಮಿತಾ ಸೇನ್ ಕೂಡ ಪ್ರಿಯಾಂಕಾ ಅವರನ್ನು ಕರೆಯುವುದು ಇದೇ ಹೆಸರಿನಿಂದ ಎನ್ನುವುದು ಗೊತ್ತಿರಲಿ. ಆದರೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಪ್ರಿಯಾಂಕಾ ಅವರಿಗೆ ಒಂದು ನಾಯಿ ಮರಿಯನ್ನು ಕೊಟ್ಟಿದ್ದರಂತೆ ಅದರ ಹೆಸರು "ಪಿಗ್ಗಿಚೋಪ್ಸ್ ' ಇದೇ ಬಾಲಿವುಡ್ ನಲ್ಲಿ ಪ್ರಿಯಾಂಕಾ ಚೋಪ್ರಾ ರಿಗೆ ಇರುವ ಅಡ್ಡಾ ಹೆಸರು.
Sunday, October 7, 2012
ಬಾಲಿವುಡ್ ನಲ್ಲಿ ತೂಕದ ಸಮಸ್ಯೆ ಬೇಟೆಯಾಡದ ಶಾಹೀದ್ !
ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ. ಮತ್ತೊಂದೆಡೆ ತೂಕದ ಸಮಸ್ಯೆಯಿಂದ ಚಿತ್ರವೊಂದು ಕೈ ಬಿಟ್ಟು ಹೋಗಿದೆ. ಈ ಎಲ್ಲ ವಿಚಾರಗಳ ಪೂರ್ಣ ವಿರಾಮ. ಬಾಲಿವುಡ್ ನ ಶಾನ್ ಹುಡುಗ ಶಾಹೀದ್..
* ಸ್ಟೀವನ್ ರೇಗೊ, ದಾರಂದಕುಕ್ಕು
ಯಾಕೋ ಗೊತ್ತಿಲ್ಲ ಮಾರಾಯ್ರೆ. ಈ ಪಾಟಿನೂ ಅದೃಷ್ಟ ಕೈ ಕೊಡುತ್ತೆ ಎನ್ನೋದು ಖುದ್ದು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಗೊಂದಲ ಮೂಡಬಹುದು. ಬಾಲಿವುಡ್ ಅಂಗಣದಲ್ಲಿ ರಾಜಾನಂತೆ ಮಿಂಚಬೇಕಾದ ಹುಡುಗ ವಿರಹ ಗೀತೆ ಹಾಡುವಷ್ಟು ಅವನ ಕಾಲ ಕೆಟ್ಟುಹೋಗಿ ಗ್ಯಾರೇಜ್ ಸೇರಿದೆ. ಅತ್ತ ಪ್ರೀತಿಸಿದ ಹುಡುಗಿ ಕೈಕೊಟ್ಟಳು. ಇತ್ತ ಖುದ್ದು ತಂದೆಯೇ ಬಂದು ಚಿತ್ರ ನಿರ್ಮಾಣ, ನಿರ್ದೇಶನ ಮಾಡಿದರೂ ಹುಡುಗ ಮೇಲೆ ಬೀಳಲೇ ಇಲ್ಲ. ಮತ್ತೊಂದೆಡೆ ತೂಕದ ಸಮಸ್ಯೆಯಿಂದ ಚಿತ್ರವೊಂದು ಕೈ ಬಿಟ್ಟು ಹೋಗಿದೆ. ಕತೆ ಏನ್ ಅಂತಾ ಕೇಳ್ತೀರಾ..?
ಕಾಲಿವುಡ್ ನಲ್ಲಿ ಸೂಪರ್ ನೆಗೆತ ಕಂಡ ವೇಟೈ( ಬೇಟೆ) ಚಿತ್ರವನ್ನು ಅನಾಮತ್ತಾಗಿ ಎತ್ತಿಕೊಂಡು ಬಾಲಿವುಡ್ ನಿರ್ದೇಶಕ ಮನೀಶ್ ಶರ್ಮಾ ಹಿಂದಿಯಲ್ಲೊಂದು ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದರು. ಅಲ್ಲಿನ ಪಾತ್ರಕ್ಕೆ ಯಾರು ಹೋಲಿಕೆಯಾಗುತ್ತಾರೆ ಎಂಬ ವಿಚಾರದಲ್ಲೂ ತೀರಾ ಚರ್ಚೆ ನಡೆದು ಫುಲ್ ಆಗಿ ನಾಯಕನ ಸ್ಥಾನಕ್ಕೆ ಬುಕ್ಕಿಂಗ್ ಮಾಡಿಸಿಕೊಂಡಿದ್ದು ಬಾಲಿವುಡ್ ನ ಶಾನ್ ಎಂದೇ ಕರೆಯಲಾಗುವ ಶಾಹೀದ್ ಕಪೂರ್ ನನ್ನು. ಆದರೆ ಈ ಚಿತ್ರಕ್ಕೆ ಶಾಹೀದ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು. ಒಂದು ಪಾತ್ರದಲ್ಲಿ ಸ್ವಲ್ಪ ದಪ್ಪಗೆ ಕಾಣಿಸಿಕೊಂಡರೆ ಇನ್ನೊಂದು ಕಡೆ ಸ್ವಲ್ಪ ತೆಳ್ಳಗೆ ಕಾಣಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಚಿತ್ರದ ನಿರ್ದೇಶಕರು ಮಾಡಿದ್ದರು.
ಚಿತ್ರದ ಆರಂಭದಲ್ಲಿ ಕಾಲೇಜಿಗೆ ಹೋಗುವ ಹುಡುಗನ ಪಾತ್ರದಲ್ಲಿ ಶಾಹೀದ್ ಕಾಣಿಸಿಕೊಂಡರೆ ನಂತರ ಬೇರೆ ಪಾತ್ರಕ್ಕೆ ಶಾಹೀದ್ ಫಿಟ್ ಆಗಿರಬೇಕಾಗಿತ್ತು. ಇದೇ ವಿಚಾರವನ್ನು ಶಾಹೀದ್ ಗೂ ಕೂಡ ನಿರ್ದೇಶಕರು ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಶಾಹೀದ್ ಕಪೂರ್ ಬಾಡಿ ಮಾತ್ರ ವೇಟೈಗೆ ತಕ್ಕಂತೆ ಬಗ್ಗುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಚಿತ್ರದಿಂದ ಶಾಹೀದ್ ಕಪೂರ್ ಔಟ್ ಮಾಡಲಾಗಿದೆ. ಈ ವಿಚಾರದಲ್ಲಿ ಶಾಹೀದ್ ಮಾತ್ರ ನಿರ್ಮಾಪಕ ಹಾಗೂ ತನ್ನ ನಡುವಿನ ಮಾತುಕತೆಯಿಂದಾಗಿ ಚಿತ್ರ ಬಿಟ್ಟಿದ್ದೇನೆ ಎಂದು ಹೇಳಿಕೊಂಡು ತಿರುಗಾಟ ಮಾಡುತ್ತಿದ್ದಾರೆ.
ಇತ್ತ ಕಡೆ ಶಾಹೀದ್ ಕಪೂರ್ ಅವರ ತರಬೇತುದಾರ ಅಬ್ಬಾಸ್ ಅಲಿ ಹೇಳುವಂತೆ : ವೇಟೈ ಚಿತ್ರಕ್ಕಾಗಿ ಶಾಹೀದ್ ನಾಲ್ಕು ಕೆಜಿ ತೂಕ ಇಳಿಸಿಕೊಂಡಿದ್ದಾರೆ. ತನ್ನ ತೂಕ ಇಳಿಯುತ್ತಿದೆ ಎಂದು ಗೊತ್ತಾದ ತಕ್ಷಣ ಶಾಹೀದ್ ತರಬೇತಿ ನಿಲ್ಲಿಸಿದ್ದಾರೆ. ಈ ಕಾರಣದಿಂದ ಚಿತ್ರಕ್ಕೆ ತಕ್ಕದಾದ ಫಿಟ್ ಬಾಡಿ ಮಾಡಲು ಸಾಧ್ಯವಾಗಿಲ್ಲ. ಶಾಹೀದ್ ಸಸ್ಯಹಾರಿ ಇದ್ದ ಕಾರಣ ತನ್ನ ದೇಹ ತೂಕದಲ್ಲಿ ಹೆಚ್ಚು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇತ್ತ ಕಡೆ ಶಾಹೀದ್ ವೇಟೈ ಬಿಟ್ಟು ನಿರ್ದೇಶಕ ಪ್ರಭುದೇವ ಅವರ ಚಿತ್ರ ನಮಕ್ ಚಿತ್ರಕ್ಕೂ ಸಹಿ ಮಾಡಿಕೊಂಡಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿ ಚಿತ್ರ ಸಂಪೂರ್ಣವಾಗುವ ಸಾಧ್ಯತೆ ಇದೆ. ಪ್ರಭುದೇವ್ ಚಿತ್ರದ ಚಿತ್ರೀಕರಣಗಾಗಿ ತಯಾರಿ ನಡೆಸುತ್ತಿದ್ದಾರೆ. ಶಾಹೀದ್ ಗೂ ಬಾಲಿವುಡ್ ನಲ್ಲಿ ದೊಡ್ಡದಾದ ಬ್ರೇಕ್ ಸಿಗಲೇ ಬೇಕು. ಈ ಕಾರಣದಿಂದ ಪ್ರಭು ಪಾದಗಳಿಗೆ ಶಾಹೀದ್ ಶರಣು ಎಂದಿದ್ದಾರೆ ಎನ್ನುವ ಮಾತು ಕೂಡ ಬಾಲಿವುಡ್ ಅಂಗಳದಲ್ಲಿ ಕೇಳಿಸಿಕೊಂಡಿದೆ.
ಶಾಹೀದ್ ಅದೃಷ್ಟ ಉಲ್ಟಾಪಲ್ಟಾ:
ಬಾಲಿವುಡ್ ನಟ ಕಮ್ ನಿರ್ಮಾಪಕ, ನಿರ್ದೇಶಕ ಎನ್ನುವ ಹಣೆಪಟ್ಟಿಕಟ್ಟಿಕೊಂಡು ಸಿನ್ಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿರುವ ಪಂಕಜ್ ಕಪೂರ್ ಅವರ ಸನ್ ಶಾಹೀದ್ ಕಪೂರ್. ಬಾಲಿವುಡ್‌ನಲ್ಲಿ ಆರಂಭದ ಇನ್ನಿಂಗ್ಸ್ ಆಡಲು ಬಂದ ಶಾಹೀದ್‌ಗೆ ಬಹಳ ಬೇಡಿಕೆ ಇತ್ತು. ಮೊದಲ ಚಿತ್ರವೇ ಶಾಹೀದ್‌ನನ್ನು ಒಬ್ಬ "ಲವರ್‌ಬಾಯ್' ಆಗಿ ಫೋಕಸ್ ಮಾಡಿಬಿಟ್ಟಿತ್ತು.
ಬಾಲಿವುಡ್‌ನ ಸೈಜ್‌ಝೀರೋ ಹುಡುಗಿ ಕರೀನಾಳ ಜತೆ ಸುತ್ತಾಡುವುದಕ್ಕಾಗಿ ತಾನು ಪಕ್ಕಾ ವೆಜ್ ಹುಡುಗ ಅಂತಾ ಹೇಳಿಕೊಂಡು ತಿರುಗಾಡುತ್ತಿದ್ದ ಶಾಹೀದ್ ಹಾಗೂ ಕರೀನಾ ಜೋಡಿ ಬ್ರೇಕ್ ಆಫ್ ಆಯಿತು. ಇದು ಶಾಹೀದ್‌ನ ಮೊದಲ ಅನ್‌ಲಕ್ಕಿ ಸೀಸನ್ ಆರಂಭದ ಗಂಟೆ.
ಆದರೆ ಕರೀನಾಳನ್ನು ಕಳೆದುಕೊಂಡ ಶಾಹೀದ್ ಬಾಲಿವುಡ್‌ನಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ಕಂಗೋಳಿಸಿದ್ದು ಬಿಟ್ಟರೆ ಉಳಿದ ಚಿತ್ರಗಳು ತೋಪಾಗಿ ಬಿದ್ದು ಹೋಯಿತು. ಕರೀನಾ ವರ್ಸಸ್ ಶಾಹೀದ್ ಬ್ರೇಕ್ ಸೀಸನ್‌ನಲ್ಲಿ ಬಂದು ಹೋದ "ಜಬ್ ವೀ ಮೆಟ್' ಚಿತ್ರವೊಂದನ್ನು ಬಿಟ್ಟರೆ ಶಾಹೀದ್ ಬಾಲಿವುಡ್ ಕಡಿದುಕಟ್ಟಿ ಹಾಕಿದ ಯಾವುದೇ ಚಿತ್ರಗಳಿಲ್ಲ.
2013ರಲ್ಲಿ ಶಾಹೀದ್ ಬಳಿ ಮೂರು ಚಿತ್ರಗಳಿವೆ. ಅದರಲ್ಲಿ ಪ್ರಭುದೇವ ಅವರ ನಮಕ್, ಪಟ ಪೋಸ್ಟರ್ ನಿಕ್ಲಾ ಹೀರೋ, ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಆ ಬಳಿಕ ಶಾಹೀದ್‌ನ ನಿರುದ್ಯೋಗಿ ಪರ್ವ ಆರಂಭವಾಗುತ್ತದೆ. ಇದು ಅನ್‌ಲಕ್ಕಿ ಸೀಸನ್‌ನ ಎರಡನೇ ಗಂಟೆ. ಈ ವಿಚಾರವನ್ನು ಖುದ್ದು ಶಾಹೀದ್ ಒಪ್ಪಿಕೊಂಡು ಟ್ವಿಟ್ಟರ್‌ನಲ್ಲಿ ಹೇಳಿಕೊಂಡ ಮಾತು ಇಲ್ಲಿದೆ. "ಚಿತ್ರದ ನಿರ್ಮಾಪಕ ಬಂದು ಚಿತ್ರಕ್ಕೆ ನೀನು ಆಯ್ಕೆಯಾಗಿದ್ದಿ ಎಂದು ಪ್ರಕಟಿಸುವ ವರೆಗೂ ನನ್ನ ಕೈಯಲ್ಲಿ ಯಾವುದೇ ಚಿತ್ರಗಳಿರುವುದಿಲ್ಲ. ಅದಕ್ಕಾಗಿ ನನಗೆ ನಿರುದ್ಯೋಗಿ ಎನ್ನುವ ಟೈಟಲ್ ಸರಿಯಾಗಿದೆ ' ಎಂದಿದ್ದಾರೆ.
ಮದುವೆಯಿಂದ ಲಕ್ ಬರುತ್ತೆ:
2013ರ ಹೊತ್ತಿನಲ್ಲೇ ಶಾಹೀದ್ ಮದುವೆಯಾಗಬೇಕೆಂದುಕೊಂಡಿದ್ದಾರೆ.. ಈ ಮೂಲಕವಾದರೂ ಅದೃಷ್ಟ ನನ್ನ ಬಳಿಯಲ್ಲಿ ಇರುತ್ತದೆ ಎನ್ನೋದು ಶಾಹೀದ್ ಕಪೂರ್‌ನ ನಂಬಿಕೆ.
ಮದುವೆಯ ನಂತರ ಬಾಲಿವುಡ್‌ನಲ್ಲಿ ನೆಲೆ ನಿಂತವರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಬಾಲಿವುಡ್ ನಟ ಶಾರೂಖ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಅಜೇಯ್ ದೇವಗನ್, ಹೃತಿಕ್ ರೋಷನ್ ಬಹಳಷ್ಟು ಜನರು ತಮ್ಮ ಮದುವೆಯ ನಂತರ ಬಾಲಿವುಡ್‌ನಲ್ಲಿ ಕ್ಲಿಕ್ ಆಗಿದ್ದಾರೆ. ಅವರ ರೂಲ್‌ಗಳನ್ನೇ ಫಾಲೋ ಮಾಡೋಣ ಅಂತಾ ಯೋಚನೆ ಮಾಡುತ್ತಿದ್ದೇನೆ ಎನ್ನೋದು ಶಾಹೀದ್ ಕಪೂರ್‌ನ ಓಪನ್
"ಬರೀ ಮದುವೆಯಿಂದ ಲಕ್ ಬರುತ್ತೆ ಎನ್ನುವ ನನ್ನ ವಾದದಲ್ಲೂ ಬೇರೆ ವಿಚಾರಗಳು ಅಡಗಿದೆ. ಸಿಂಗಲ್ ಇದ್ದಾಗ ನಿಮ್ಮ ಬಗ್ಗೆ ಪ್ರೀತಿ ತೋರಿಸುವ ಕೈಗಳು ಇರೋದಿಲ್ಲ. ನಿಮ್ಮ ಸುಖ ದುಃಖಗಳಲ್ಲಿ ಎಂಟ್ರಿಯಾಗುವ ಬಂಧುಗಳು ಸಿಗೋದಿಲ್ಲ. ಅದಕ್ಕಾಗಿ ಫೈನಲ್ ಮದುವೆಯಲ್ಲಿ ಎಲ್ಲವೂ ಸಿಗುತ್ತದೆ" ಎನ್ನೋದು ಶಾಹೀದ್ ಕಪೂರ್‌ರ ವಾದ.
"ಮದುವೆಯಾಗುತ್ತಿದ್ದೇನೆ ಎಂದಾಗ ಹುಡುಗಿ ಎಲ್ಲಿ ಎಂದು ಕೇಳುವವರು ಜಾಸ್ತಿ. ಈ ಕುರಿತು ಯಾವುದೇ ಯೋಚನೆ ಮಾಡಿಲ್ಲ. ನನಗೆ ಯಾವುದಾದರೂ ಒಳ್ಳೆಯ ಹುಡುಗಿ ಇದ್ದಾರೆ ಹೇಳಿ ಬಿಡಿ. ನಾನು ಮದುವೆಯಾಗಲು ಸಿದ್ಧ" ಎಂದಿದ್ದಾರೆ ಶಾಹೀದ್ . ಮದುವೆಯ ಮೂಲಕವಾದರೂ ಶಾಹೀದ್ ಕಪೂರ್‌ನ ಲಕ್ ಚೇಂಜ್ ಕಾಣುತ್ತಾ ಅಂದೊಂದು ಗೊತ್ತಾಗುತ್ತಿಲ್ಲ ಮಾರಾಯ್ರೆ...
Saturday, October 6, 2012
ಬಾಲಿವುಡ್ ಗೊಬ್ಬಳೇ ಗೌರಮ್ಮ !
ಬಾಲಿವುಡ್ ಅಂಗಳದಲ್ಲಿ ಆರ್. ಬಾಲ್ಕಿ( ಆರ್. ಬಾಲಕೃಷ್ಣನ್) ಹೆಸರು ಬಹುತೇಕ ಮಂದಿಗೆ ಚಿರಪರಿಚಿತ. ಅಷ್ಟೇ ಗೌರಿಯ ಹೆಸರು ಕೂಡ ಚಿರಪರಿಚಿತವಾಗಿರಬೇಕಿತ್ತು. ಕಾರಣ ಪಾಲ್ಕಿಯ ಚಿತ್ರ ಜಗತ್ತಿನ ಅಧ್ಯಾಯ ಆರಂಭವಾಗೋದು ಗೌರಿಯ ಮೂಲಕ ಎಂಬ ವಿಚಾರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಇದೇ ಗೌರಿ ಇಂಗ್ಲೀಷ್- ವಿಂಗ್ಲೀಷ್ ಚಿತ್ರದ ಮೂಲಕ ಹೊಸ ದಿಶೆ ಬರೆಯುತ್ತಿದ್ದಾರೆ...
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ನಲ್ಲಿ ಸಿಂಪಲ್ ಕತೆ ಯನ್ನು ಇಟ್ಟುಕೊಂಡು ಕೂಡ ಸಿನಿಮಾ ಮಾಡಬಹುದು. ಅದಕ್ಕಾಗಿ ಕತೆ, ಸ್ಟಾರ್ ಗಿರಿಗಾಗಿ ಹಿಮಾಲಯ ಪರ್ವತ ಏರುವ ಅವಶ್ಯಕತೆಯಂತೂ ಇಲ್ಲ ಎನ್ನುವ ಉತ್ತರ ಕೊಟ್ಟವರು ಗೌರಿ ಶಿಂಧೆ. ಅಂದಹಾಗೆ ಗೌರಿ ಯಾರಪ್ಪ ಅಂದರೆ ಬಾಲಿವುಡ್ ನಲ್ಲಿ ಚೀನಿ ಕಮ್ ಹಾಗೂ ಪಾ ದಂತಹ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಬಹಳ ಹತ್ತಿರವಾದ ನಿರ್ದೇಶಕ ಆರ್. ಬಾಲ್ಕಿ ಅವರ ಮಿಸಸ್. ಬಾಲಿವುಡ್ ಅಂಗಳದಲ್ಲಿ ಆರ್. ಬಾಲ್ಕಿ( ಆರ್. ಬಾಲಕೃಷ್ಣನ್) ಹೆಸರು ಬಹುತೇಕ ಮಂದಿಗೆ ಚಿರಪರಿಚಿತ. ಅಷ್ಟೇ ಗೌರಿಯ ಹೆಸರು ಕೂಡ ಚಿರಪರಿಚಿತವಾಗಿರಬೇಕಿತ್ತು. ಕಾರಣ ಪಾಲ್ಕಿಯ ಚಿತ್ರ ಜಗತ್ತಿನ ಅಧ್ಯಾಯ ಆರಂಭವಾಗೋದು ಗೌರಿಯ ಮೂಲಕ ಎಂಬ ವಿಚಾರ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಅವರ ಚೀನಿ ಕಮ್ ಚಿತ್ರವಾಗಲಿ ಅಥವಾ ಪಾ ಚಿತ್ರದಲ್ಲೂ ಪಾಲ್ಕಿಯ ನಿರ್ದೇಶನದಷ್ಟೇ ಗೌರಿಯ ಪಾತ್ರವಿತ್ತು.
ಇದೇ ಗೌರಿ ಬಾಲಿವುಡ್ ಅಂಗಳದಲ್ಲಿ ಸಿಂಪಲ್ ಕತೆಯ ಮೂಲಕ ಭರ್ಜರಿ ಓಟವನ್ನು ದಾಖಲಿಸುತ್ತಿರುವ ಇಂಗ್ಲೀಷ್ ವಿಂಗ್ಲೀಷ್ ಚಿತ್ರದ ನಿರ್ದೇಶಕಿ. ಬಾಲಿವುಡ್ ರಂಗದಲ್ಲಿ ಹದಿನೈದು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ ನಟಿ ಶ್ರೀದೇವಿಗೆ ಭರ್ಜರಿ ಓಪನಿಂಗ್ ಕೊಟ್ಟು ಎಲ್ಲರ ಕೈಯಿಂದಲೂ ಗೌರಿ ಶಹಬ್ಬಾಸ್ ಗಿರಿ ಪಡೆಯುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಖ್ಯಾತ ನಿರ್ದೇಶಕಿಯರ ಸ್ಥಾನದಲ್ಲಿ ಗೌರಿ ಸಖತ್ ಬೇಡಿಕೆ ತನ್ನ ಚಿತ್ರದ ಮೂಲಕ ಪಡೆದುಕೊಂಡಿದ್ದಾರೆ. ಭಾರತೀಯ ಮಧ್ಯಮ ವರ್ಗದ ಮಹಿಳೆಯ ಪಾತ್ರದಲ್ಲಿ ಶ್ರೀದೇವಿಯನ್ನು ಇಟ್ಟುಕೊಂಡು ಈ ಮಹಿಳೆ ಅಮೆರಿಕಾದಲ್ಲಿ ಎದುರಿಸುವ ಸಂಕಷ್ಟಗಳನ್ನು ತೋರಿಸುವ ಪ್ರಯತ್ನ ಈ ಚಿತ್ರದ ಮೂಲಕ ಸಾಗಿದೆ. ಇಂಗ್ಲೀಷ್ ಬಾರದ ಭಾರತೀಯ ಮಹಿಳೆ ಎದುರಿಸುವ ಸಮಸ್ಯೆಯೇ ಚಿತ್ರದ ಕಥಾ ವಸ್ತುವಾಗಿ ರೂಪುಗೊಂಡಿದ್ದು ನೋಡಿದರೆ ಯಾಕಪ್ಪಾ ನಾವು ಇಂತಹ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಬಾರದಿತ್ತು ಎನ್ನುವ ಪ್ರಶ್ನೆ ಭಾರತೀಯ ಚಿತ್ರರಂಗದ ಬಹುತೇಕ ನಿರ್ದೇಶಕರ ಮನಸ್ಸನ್ನು ಕಾಡಿದೆ ಎಂಬುವುದಂತೂ ನಿಜ.
ಯಾರಮ್ಮ ಗೌರಮ್ಮ:
ಗೌರಿ ಶಿಂಧೆ ಬೇಸಿಕಲಿ ಪುಣಿಯ ಹುಡುಗಿ. ಮುಂಬಯಿಯಲ್ಲಿದ್ದ ಸಿದ್ದಾರ್ಥ್ ಕಾಕ್ ಎನ್ನುವ ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಬೆಳೆದ ಗೌರಿ ಶಿಂಧೆ ಇಂಗ್ಲೀಷ್- ವಿಂಗ್ಲೀಷ್ ಚಿತ್ರ ಬರುವುದಕ್ಕೂ ಮೊದಲು 100 ಜಾಹೀರಾತು ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಅಮೇರಿಕದಲ್ಲೂ ನಿಂತುಕೊಂಡು ಜಾಹೀರಾತು ಕಂಪನಿಗಳಿಗೆ ದುಡಿದಿದ್ದಾರೆ. ಇಲ್ಲಿನ ದುಡಿತ ಇಂದಿನ ಇಂಗ್ಲೀಷ್- ವಿಂಗ್ಲೀಷ್ ಚಿತ್ರವಾಯಿತು. ಮುಖ್ಯವಾಗಿ ಭಾರತೀಯ ಮಹಿಳೆಯರು ವಿದೇಶದಲ್ಲಿ ಇಂಗ್ಲೀಷ್ ಗಾಗಿ ನಡೆಸುವ ಒದ್ದಾಟವನ್ನು ತೀರಾ ನೈಜವಾಗಿ ಚಿತ್ರೀಸಿರುವ ಗೌರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರೋದು ಇದೇ ಕಾರಣಕ್ಕೆ.
ಗೌರಿ ಹಾಗೂ ಬಾಲ್ಕಿಯ ಲವ್ ಸ್ಟೋರಿ ಕೂಡ ತುಂಬಾನೇ ವಿಶೇಷ. ಮುಂಬಯಿಯ ಜಾಹೀರಾತು ಕಂಪನಿಯೊಂದರಲ್ಲಿ ದುಡಿಯುತ್ತಿದ್ದ ಗೌರಿ ಅಲ್ಲಿಯೇ ಕೆಲಸ ಮಾಡುತ್ತಿದ್ದ ಬಾಲ್ಕಿಯ ಲವ್ ಸ್ಟೋರಿ ಅಧ್ಯಾಯ ಆರಂಭವಾಗಿರೋದು ಕಂಪನಿಯ ಲಿಫ್ಟ್ ವೊಂದರಲ್ಲಿಯಂತೆ ! ಒಂದು ಬಾರಿ ಲಿಫ್ಟ್ ಕೆಟ್ಟುಹೋಗಿ ಇಬ್ಬರು ಜತೆಯಾಗಿ ಬಂಧಿಯಾದರು. ಕಾಲು ಗಂಟೆಯ ಈ ಪುಟ್ಟ ಪ್ರಯಾಣದಲ್ಲಿ ಇಬ್ಬರ ಜತೆ ಸ್ನೇಹ ಬೆಳೆಯಿತು. ನಂತರ ಕೆಲವು ತಿಂಗಳ ನಂತರ ಡೇಟಿಂಗ್ ಮೂಲಕ ಪ್ರೇಮದ ಅಧ್ಯಾಯಗಳು ಆರಂಭವಾಯಿತು ಎನ್ನೋದು ಗೌರಿ ಮಾತು. ಬಳಿಕ ಬಾಲಿವುಡ್ ನಲ್ಲಿ ಬಂದ ನಟಿ ಕಾಜೋಲ್ ಚಿತ್ರವೊಂದು ಇಬ್ಬರ ಮದುವೆಗೂ ಮೂಲ ಪ್ರೇರಣೆಯಾಯಿತು. ಇಬ್ಬರು ಕಾಜೋಲ್ ಅಭಿಮಾನಿಗಳು. ಇದೇ ಕಾರಣದಿಂದ ಇಬ್ಬರು ಸಿನಿಮಾದ ನೆಪ ಹೇಳಿಕೊಂಡು ಸುತ್ತಾಟ ಮಾಡುತ್ತಿದ್ದರಂತೆ. ಬಾಲ್ಕಿ ಬಾಲಿವುಡ್ ನಲ್ಲಿ ಚೀನಿ ಕಮ್ ಚಿತ್ರ ನಿರ್ದೇಶನ ಮೂಡುವ ಮೊದಲ ವರ್ಷದಲ್ಲಿ ಇಬ್ಬರಿಗೂ ವಿವಾಹವಾಯಿತು.
ಇಂಗ್ಲೀಷ್- ವಿಂಗ್ಲೀಷ್ ಕತೆಗೆ ಕಾರಣ ಯಾರು:
ಬಾಲಿವುಡ್ ನಿರ್ದೇಶಕಿ ಗೌರಿ ಶಿಂಧೆ ಹೇಳುವ ಪ್ರಕಾರ ಈ ಚಿತ್ರಕ್ಕೆ ಮೂಲಕ ಕಾರಣ ಗೌರಿಯ ತಾಯಿಯಂತೆ.. ಈ ಕಾರಣದಿಂದ ಚಿತ್ರವನ್ನು ಗೌರಿಯ ತಾಯಿಗೆ ಅರ್ಪಿಸಲಾಗಿದೆ. ಗೌರಿಯ ತಾಯಿ ಮರಾಠಿ ಭಾಷಿಕರು. ಪುಣೆಯಲ್ಲಿ ತಮ್ಮದೇ ಆದ ಉಪ್ಪಿನ ಕಾಯಿ ವ್ಯಾಪಾರ ಮಾಡಿಕೊಂಡಿದ್ದರು. ವ್ಯಾಪಾರ ಸಂಬಂಧಿಯಾಗಿ ಅವರು ಇಂಗ್ಲೀಷ್ ತರಬೇತಿ ಕ್ಲಾಸ್ ಗೆ ಹೋಗಲು ಅಣಿಯಾದ ಕತೆಯನ್ನೇ ನಾನು ಚಿತ್ರದಲ್ಲಿ ಬಳಸಿಕೊಂಡಿದ್ದೇನೆ ಎನ್ನುತ್ತಾರೆ ಗೌರಿ ಶಿಂಧೆ. ತಾಯಿ ಇಂಗ್ಲೀಷ್ ಕಲಿಯುತ್ತಿದ್ದಾಗ ಸಂಕಷ್ಟಗಳನ್ನು ಅಧ್ಯಯನ ಮಾಡಿಕೊಂಡು ಗೌರಿ ಚಿತ್ರದ ಕತೆಯನ್ನು ಬರೆಯಲು ಆರಂಭಿಸಿದರು. ಇಂಗ್ಲೀಷ್- ವಿಂಗ್ಲೀಷ್ ಚಿತ್ರದ ಕತೆ ಹಾಗೂ ಇಡೀ ಸಿನಿಮಾ ನನ್ನ ಹಾಗೂ ನನ್ನ ತಾಯಿಗೆ ಸಂಬಂಧಪಟ್ಟದ್ದು ಎನ್ನುವುದು ಗೌರಿಯ ಮಾತು. ಈ ಚಿತ್ರದಲ್ಲಿ ಬರುವ ಸಂಭಾಷಣೆಯೊಂದು ನನಗೆ ತೀರಾ ಹತ್ತಿರವಾಗಿದೆ ಅದೇನಪ್ಪಾ ಅಂದರೆ ಪಾಸ್ ಪೋರ್ಟ್ ಮಾಡಿಸಿಕೊಳ್ಳುತ್ತಿರುವಾಗ ಅಧಿಕಾರಿಯೊಬ್ಬ ಕೇಳುವ ಪ್ರಶ್ನೆ ಹಾಗೂ ಅದಕ್ಕೆ ಅವಳು ನೀಡುವ ಉತ್ತರ ಇಡೀ ಚಿತ್ರದ ಕತೆಯನ್ನು ಹೇಳಿಕೊಂಡು ಹೋಗುತ್ತದೆ ಎನ್ನುವುದು ಗೌರಿಯ ಮಾತು.
ಬಹಳಷ್ಟು ಗೆಳೆಯರು ಮನೆಗೆ ಬಂದಾಗ ಮರಾಠಿ ಭಾಷಿಕರಾದ ತಾಯಿ ಜತೆ ಮಾತನಾಡಲು ಹಿಂಜರಿಯುತ್ತಾರೆ. ಆದರೆ ಒಳ್ಳೆಯ ಕುಕ್ ಎನ್ನುವ ಕಾರಣಕ್ಕೆ ಗೆಳೆಯರು ಮತ್ತೇ ಮತ್ತೇ ಮನೆಗೆ ಬರುತ್ತಾರೆ. ಒಂದು ಸಲ ಇಂಗ್ಲೀಷ್ ಕುರಿತಾದ ಪ್ರಶ್ನೆಯೇ ಎದುರಿಗೆ ನಿಂತಿತ್ತು. ಇದೇ ಪ್ರಶ್ನೆಯನ್ನು ನಾನು ಪರದೆಯ ಮೇಲೆ ತೋರಿಸಿದ್ದೇನೆ ಎನ್ನುತ್ತಾರೆ ಗೌರಿ. ಈ ಚಿತ್ರದಲ್ಲಿ ಮಹಿಳೆ ಹಾಗೂ ಪುರುಷರು ಎಲ್ಲ ರೀತಿಯಿಂದಲೂ ಸಮಾನರು ಹಾಗೂ ಇಂಗ್ಲೀಷ್ ಕಲಿಯಲು ಬರೀ ಪುರುಷರೇ ಬೇಕಾಗಿಲ್ಲ. ಗೃಹಿಣಿಯರು ಕೂಡ ಕಲಿತು ಸಮಾಜದಲ್ಲಿ ಉನ್ನತವಾಗಿ ಬದುಕು ಸಾಗಿಸಬಹುದು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರ ನೋಡಿದ ನಂತರವಂತೂ ಶ್ರೀದೇವಿಯ ಪತಿ ಬೋನಿ ಕಪೂರ್ ಕೂಡ ಕಣ್ಣೀರು ತಂದುಕೊಂಡರು. ಅವರು ಕೂಡ ತನ್ನ ತಾಯಿ ಜತೆಯಲ್ಲಿ ಇದೇ ರೀತಿ ವರ್ತಿಸುತ್ತಿದ್ದರು ಎಂದು ನನ್ನ ಬಳಿ ಹೇಳಿಕೊಂಡರು. ಅದರಲ್ಲೂ ಬೋನಿ ಶ್ರೀದೇವಿಯ ಜತೆಯಲ್ಲೂ ಇದೇ ರೀತಿ ನಡೆದುಕೊಂಡಿದ್ದೇನೆ ಎಂದು ಬಿಟ್ಟರಂತೆ ಗೌರಿ ಶಿಂಧೆ ಬಳಿ.. ಟೋಟಲಿ ಇಂಗ್ಲೀಷ್- ವಿಂಗ್ಲೀಷ್ ಚಿತ್ರದ ಮೂಲಕ ಬೆಳಕಿಗೆ ಬಂದ ಗೌರಿ ಶಿಂಧೆ ಬಾಲಿವುಡ್ ಪಾಲಿಗೆ ನಿಜಕ್ಕೂ ಒಳ್ಳೆಯ ನಿರ್ದೇಶಕಿಯರಲ್ಲಿ ಒಬ್ಬಳು ಎನ್ನುವ ಮಾತಿಗೆ ಗ್ಯಾರಂಟಿ ಇದೆ.
Friday, October 5, 2012
<ಸತ್ಯ ಮೇವಾ ಜಯತೇ ಎಡವಟ್ಟು ಆಮೀರ್ ತಲಾಶ್ ಶುರು !
ಇಂಟ್ರೋ:
ಭಾರತೀಯ ಸಿನಿಮಾ ಇಂಡಸ್ಟ್ರಿಯ ಇತ್ತೀಚಿನ ಸಿನಿಮಾಗಳ ಬೆಳವಣಿಗೆಯಲ್ಲಿ ಒಂದು ಚಿತ್ರದ ಕಥೆಯನ್ನು ಮೂರು ಬಾರಿ ಬದಲಾವಣೆ ಮಾಡಿದ ಖ್ಯಾತಿಗೆ "ತಲಾಶ್' ಭಾಜನವಾಗಿದೆ. ಅದರಲ್ಲೂ ಆಮೀರ್ ಖಾನ್ ಒಂದು ಬಾರಿ ನಟಿಸಿದ ನಾಯಕಿಯರ ಜತೆಯಲ್ಲಿ ಮತ್ತೊಂದು ಸಲ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ಅವರ ಹಿಂದಿನ ಚಿತ್ರಗಳ ನಾಯಕಿಯ ಬದಲಾವಣೆಯನ್ನೇ ಗಮನಿಸಿದರೆ ತಿಳಿದು ಬರುತ್ತದೆ. ಆದರೆ ತಲಾಶ್ ನಲ್ಲಿ ಎಲ್ಲವೂ ಉಲ್ಟಾ- ಪಲ್ಟಾ .. ಏನ್ ಅಂತಾ ಕೇಳ್ತೀರಾ..?
ಇಂಟ್ರೋ:
* ಸ್ಟೀವನ್ ರೇಗೊ, ದಾರಂದಕುಕ್ಕು
ಬಾಲಿವುಡ್ ಇರಲಿ ಇತರ ಯಾವುದೇ ಭಾರತೀಯ ಸಿನಿಮಾ ಇಂಡಸ್ಟ್ರಿ ಇರಲಿ ಆಮೀರ್ ಖಾನ್ ಅಂದಾಕ್ಷಣ ಕುತೂಹಲದ ಕರಿ ನೆರಳು ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ಇದು ಈ ಹೆಸರಿಗೆ ಇರುವ ಕಿಮ್ಮತ್ತು ಎಂದುಕೊಂಡರೂ ಅದು ತಪ್ಪಿಲ್ಲ. ಯಾಕೆಂದರೆ ಬಾಲಿವುಡ್ ಸಿನಿಮಾ ರಂಗದಲ್ಲಿ ಆಮೀರ್ ಎಂದರೆ ನೂರಕ್ಕೆ ನೂರು ಪರ್ಫೆಕ್ಟ್ ಕಾಂಬೀನೇಶನ್. ಅದು ಚಿತ್ರ ಇರಲಿ ಅಥವಾ ಆಮೀರ್ ಬದುಕಿನ ಯಾವುದೇ ಸಾಮಾಜಿಕ ವಿಚಾರಗಳಿರಲಿ ಎಲ್ಲ ವಿಚಾರದಲ್ಲೂ ಎತ್ತಿದ ಕೈ. ಅಂದಹಾಗೆ ಆಮೀರ್ ಖಾನ್ 2000 ಇಸವಿಯ ಮೊದಲು ಹೇಗಿದ್ದರೋ ಆ ವಿಚಾರವನ್ನು ಸೈಡ್ ಗೆ ಇಟ್ಟುಕೊಂಡು ನೋಡಿ 2000 ಇಸವಿಯ ನಂತರ ಆಮೀರ್ ನಟಿಸಿದ ಹಾಗೂ ನಿರ್ಮಾಪಕನಾಗಿ ಮಾಡಿದ ಎಲ್ಲ ಚಿತ್ರಗಳು ಸಾಮಾಜಿಕ ವಿಚಾರಗಳನ್ನೇ ಎತ್ತಿಕೊಂಡು ಮಾಡಿದ್ದು ಚಿತ್ರದ ಮೂಲಕ ಜನರಲ್ಲಿ ಜಾಗೃತಿ ಹುಟ್ಟು ಹಾಕುವ ಸಿನಿಮಾಗಳಿಗೆ ಆಮೀರ್ ಮೊದಲ ಆದ್ಯತೆ ನೀಡುತ್ತ ಬಂದ ಕಲಾವಿದ.
ಆಮೀರ್ ಖಾನ್ ನಟಿಸಿದ "ಲಗಾನ್', "ಮಂಗಲ್ ಪಾಂಡೆ', "ರಂಗ್ ದೇ ಬಸಂತಿ', "ತಾರೆ ಜಮೀನ್ ಪರ್', "ಗಜನಿ", "ತ್ರಿ ಇಡಿಯಡ್ಸ್', "ಧೋಬಿ ಘಾಟ್' ಈಗ "ತಲಾಶ್" ಚಿತ್ರದ ಸರಣಿಯನ್ನೇ ತೆಗೆದುಕೊಂಡರೂ ಎಲ್ಲವೂ ಸಾಮಾಜಿಕ ವಿಚಾರಗಳಿಂದ ಸಿಡಿದು ಎದ್ದ ಕತೆ ಹಾಗೂ ಚಿತ್ರದ ಮೂಲಕ ಸಂದೇಶ ಕೊಡುವ ಪ್ರಯತ್ನ ಆಮೀರ್ ಮಾಡುತ್ತಾ ಬರುತ್ತಿದ್ದಾರೆ. ಈ ಎಲ್ಲ ಚಿತ್ರ ಗಳು ಕೂಡ ಒಂದೊಂದು ವರ್ಷದ ಅಂತರ ಕಾಯ್ದುಕೊಂಡು ಬಂದಿದೆ. ಈ ಮೂಲಕ ಆಮೀರ್ ಚಿತ್ರ ಆಯ್ಕೆ ಮೊದಲು ಕೂಡ ಬಹಳಷ್ಟು ಅಧ್ಯಯನ ಮಾಡಿಕೊಂಡು ಇಳಿಯುತ್ತಾರೆ ಎಂಬ ವಿಚಾರವನ್ನು ಈ ಘಟನೆಗಳು ಸಾಕ್ಷಿ ನೀಡುತ್ತದೆ.
ತಲಾಶ್ ಹುಟ್ಟು ಹಾಕಿದ ಕ್ರೇಜ್ :
ಬಾಲಿವುಡ್ ನ ಇತ್ತೀಚಿನ ಸಿನಿಮಾ ಗಳನ್ನು ಟೋಟಲಿ ಅಧ್ಯಯನ ಮಾಡಿದರೂ ಚಿತ್ರದ ಮುಹೂರ್ತ ಹಾಗೂ ಬಿಡುಗಡೆ ಅವಧಿ ಅಬ್ಬಾಬ್ಬ ಅಂದರೂ 6 ತಿಂಗಳಿನಿಂದ ಒಂದೂವರೆ ವರ್ಷ ಹಿಡಿದು ಬಿಡುತ್ತದೆ. ಆದರೆ "ತಲಾಶ್ ' ಚಿತ್ರದ ಕತೆನೇ ಬೇರೆ ಯಾಕ್ ಅಂತೀರಾ ಈ ಚಿತ್ರ ಅಧಿಕೃತವಾಗಿ ಆರಂಭವಾಗಿದ್ದು 2010ರ ಕೊನೆ ಭಾಗದಲ್ಲಿ ಈ ಬಳಿಕ 2011 ನವೆಂಬರ್ ಹೊತ್ತಿಗೆ ಆಮೀರ್ ಖಾನ್ ಖುದ್ದಾಗಿ ಈ ಚಿತ್ರಕ್ಕೆ ಟೈಟಲ್ ಸೂಟ್ ಮಾಡಿದ್ದರು. ಚಿತ್ರದ ನಿರ್ದೇಶಕಿ ರೀಮಾ ಕಾಡ್ಗಿ ಚಿತ್ರದ ಚಿತ್ರೀಕರಣ ಮುಕ್ಕಾಲು ಭಾಗ ಕೊನೆಗೊಂಡಾಗ ಇಡೀ ಚಿತ್ರದ ಕತೆಯನ್ನೇ ಬದಲಾವಣೆ ಮಾಡಲು ಯೋಚನೆಗೆ ಇಳಿದರು. ಇದೇ ಸಮಯದಲ್ಲಿ ಬಂದ ವಿದ್ಯಾ ಬಾಲನ್ ಚಿತ್ರ ಕಹಾನಿ ಹಾಗೂ ತಲಾಶ್ ಚಿತ್ರ ಕತೆಗೂ ಹೋಲಿಕೆ ಇದೆ ಎನ್ನುವ ಮಾತುಗಳು ಹೊರಗಡೆ ಬರುತ್ತಿದ್ದಾಗಲೇ ರೀಮಾ ಹಾಗೂ ಆಮೀರ್ ಜತೆ ಸೇರಿ ತಲಾಶ್ ಚಿತ್ರದ ಕತೆಗೆ ಮತ್ತೆ ಟ್ವೀಸ್ಟ್ ತಂದರು.
ಈ ಮೂಲಕ ಭಾರತೀಯ ಸಿನಿಮಾ ಇಂಡಸ್ಟ್ರಿಯ ಇತ್ತೀಚಿನ ಸಿನಿಮಾಗಳ ಬೆಳವಣಿಗೆಯಲ್ಲಿ ಒಂದು ಚಿತ್ರದ ಕಥೆಯನ್ನು ಮೂರು ಬಾರಿ ಬದಲಾವಣೆ ಮಾಡಿದ ಖ್ಯಾತಿಗೆ "ತಲಾಶ್' ಭಾಜನವಾಗಿದೆ. ಅದರಲ್ಲೂ ಆಮೀರ್ ಖಾನ್ ಒಂದು ಬಾರಿ ನಟಿಸಿದ ನಾಯಕಿಯರ ಜತೆಯಲ್ಲಿ ಮತ್ತೊಂದು ಸಲ ಕೆಲಸ ಮಾಡಲು ಇಷ್ಟ ಪಡುವುದಿಲ್ಲ ಎನ್ನುವುದಕ್ಕೆ ಅವರ ಹಿಂದಿನ ಚಿತ್ರಗಳ ನಾಯಕಿಯ ಬದಲಾವಣೆಯನ್ನೇ ಗಮನಿಸಿದರೆ ತಿಳಿದು ಬರುತ್ತದೆ. ಆದರೆ ತಲಾಶ್ ವಿಚಾರದಲ್ಲಿ ಇದೆಲ್ಲವೂ ಉಲ್ಟಾ-ಪಲ್ಟಾ. ಕಾರಣ ಬಾಲಿವುಡ್ ನ 90ರ ದಶಕದಲ್ಲಿ ಬಂದ ಹಿಂದಿ ಚಿತ್ರ ಗುಲಾಮ್ ನಾಯಕಿ ರಾಣಿ ಮುಖರ್ಜಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಉಳಿದಂತೆ ತ್ರಿ ಇಡಿಯಟ್ಸ್ ಖ್ಯಾತಿ ಕರೀನಾ ಕಪೂರ್ ಕೂಡ ಆಮೀರ್ ಖಾನ್ ರ ತಲಾಶ್ ಗೆ ಸಾಥ್ ನೀಡಲಿದ್ದಾರೆ. ಇದು ಚಿತ್ರ ಮತ್ತೊಂದು ಮಗ್ಗಲು.
ತಲಾಶ್ ಗೆ ಹೊಡೆದ ನೀಡಿದ ಆಮೀರ್ ಸತ್ಯ:
ಚಿತ್ರದ ಆರಂಭದ ಬಹುತೇಕ ದೃಶ್ಯಗಳು ಮುಂಬಯಿಯ ರೆಡ್ ಲೈಟ್ ಏರಿಯಾದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಕರೀನಾ ಕಪೂರ್ ಈ ಚಿತ್ರದಲ್ಲಿ ರೋಸಿ ಎನ್ನುವ ವೇಶ್ಯೆಯೊಬ್ಬರ ಪಾತ್ರದಲ್ಲಿ ಕಾಣಿಇಸಕೊಳ್ಳಲಿದ್ದಾರೆ ಎಂದು ಚಿತ್ರದ ಮುಹೂರ್ತ ಸಂದರ್ಭ ನಿರ್ದೇಶಕಿ ರೀಮಾ ಮಾಧ್ಯಮಗಳಿಗೆ ಹೇಳಿದ್ದರು. ಈ ಬಳಿಕ ಚಿತ್ರದ ಕತೆ ಹಾಗೂ ಉಳಿದ ಮಾಹಿತಿಗಳನ್ನು ಮುಚ್ಚಿಟ್ಟುಕೊಂಡಿದ್ದರು. ಚಿತ್ರದ ಎರಡನೇ ಹಂತವನ್ನು ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆಸಿ ಉಳಿದಂತೆ ರಾಯಘಡದ ಕಪೋಲಿ ಪ್ರದೇಶದಲ್ಲಿ ಚಿತ್ರೀಕರಣ ನಡೆಯಿತು.
ಇದೆಲ್ಲವೂ ನಡೆಯುತ್ತಿದ್ದಾಗ ಚಿತ್ರದ ಕತೆಯೇ ಬದಲಾವಣೆ ಕಂಡಿತ್ತು. ನವೆಂಬರ್ 2011ರ ಹೊತ್ತಿನಲ್ಲಿ ಚಿತ್ರದ ಬಹುತೇಕ ಭಾಗ ಮರು ಚಿತ್ರೀಕರಣ ನಡೆಸಿ ಕೆಲವೊಂದು ಬಾಕಿ ದೃಶ್ಯಗಳ ಚಿತ್ರೀಕರಣಕ್ಕಾಗಿ ಆಮೀರ್ ಖಾನ್ ಗೆ ಕಾದು ಕೂರಲಾಯಿತು. ಇದೇ ಸಮಯದಲ್ಲಿ ಆಮೀರ್ ತನ್ನ ರಿಯಾಲಿಟಿ ಶೋ ಸತ್ಯ ಮೇವ ಜಯತೇ ಯಲ್ಲಿ ಬ್ಯುಸಿಯಾಗಿದ್ದರು. ಈಗ ಚಿತ್ರದ ಚಿತ್ರೀಕರಣ ನಡೆದು ಮಾಧ್ಯಮಗಳಿಗೆ ಪ್ರೋಮೊಗಳನ್ನು ಬಿಡುಗಡೆ ಮಾಡಲಾಗಿದೆ. ನವೆಂಬರ್ ಕೊನೆಯ ಹೊತ್ತಿನಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶ ಚಿತ್ರದ ನಿರ್ಮಾಪಕರದ್ದು ಕಾರಣ ಆಮೀರ್ ಖಾನ್ ಚಿತ್ರಗಳು ವರ್ಷದ ಕೊನೆ ಭಾಗದಲ್ಲಿ ಸಿನಿಮಾ ಥಿಯೇಟರ್ ಗೆ ಬಂದರೆ ಅದು ಆಮೀರ್ ಪಾಲಿಗೆ ಅದೃಷ್ಟ ವಾಗಿರುತ್ತದೆ ಎನ್ನುವ ನಂಬಿಕೆಯ ಮಾತು ಬಾಲಿವುಡ್ ಅಂಗಳದಲ್ಲಿ ಚಾಲ್ತಿಯಲ್ಲಿದೆ. ಖುದ್ದು ಆಮೀರ್ ಸೇರಿದಂತೆ ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್, ಶರಣ್ ವಾಲ್ಕರ್ ಚಿತ್ರದ ನಿರ್ಮಾಪಕರ ಸ್ಥಾನದಲ್ಲಿದ್ದಾರೆ.
ಆರುಷಿ ಕೊಲೆ ಪ್ರಕರಣವೇ ತಲಾಶ್ ಕತೆನಾ?
ಸಮಾಜದಲ್ಲಿರುವ ನೈಜ ಘಟನೆಗಳನ್ನೇ ತನ್ನ ಚಿತ್ರಕ್ಕೆ ಬಂಡವಾಳ ಮಾಡಿಕೊಂಡು ಬರುತ್ತಿರುವ ಆಮೀರ್ ತ್ನ ಹೊಸ ಚಿತ್ರ ತಲಾಶ್ ನಲ್ಲೂ ಇದೇ ಪ್ರಯೋಗ ಮಾಡಿದ್ದಾರೆ ಎನ್ನುವ ಮಾತಿದೆ. ತೀರಾ ಇತ್ತೀಚೆಗೆ ಬಹಳ ಸುದ್ದಿಯಾದ ಾರುಷಿ ಕೊಲೆ ಪ್ರಕರಣವನ್ನೇ ಚಿತ್ರದ ಕತೆಯಾಗಿ ಸೇರಿಸಿಕೊಂಡಿದ್ದಾರೆ ಎಂಬ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಓಡಾಡುತ್ತಿದೆ. ದಿಲ್ಲಿಯ ನೊಯಿಡಾ ಪ್ರದೇಶದಲ್ಲಿ ನಡೆದ ಆರುಷಿ ಕೊಲೆ ಪ್ರಕರಣವನ್ನು ಆರಂಭದಲ್ಲಿ ಸ್ಥಳೀಯ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಅದು ಸಿಬಿಐ ಕೈ ಸೇರಿದ ಕತೆಯನ್ನೇ "ತಲಾಶ್' ಹೊಂದಿದೆ ಎನ್ನಲಾಗುತ್ತಿದೆ.
14ರ ಬಾಲೆ ಆರುಷಿಯನ್ನು 16 ಮೇ 2008ರಲ್ಲಿ ತನ್ನ ನೋಯಿಡಾ ನಿವಾಸದಲ್ಲಿ ಕೊಲೆ ಮಾಡಲಾಗಿತ್ತು. ಪೊಲೀಸರ ತನಿಖೆಯ ಸಂದರ್ಭ ಆರುಷಿ ಹೆತ್ತವರೇ ಅದನ್ನು ಮುಚ್ಚಿ ಹಾಕಲು ಪ್ರಯತ್ನ ಪಟ್ಟು ಸೆರೆ ಸಿಕ್ಕಿದ್ದು ಇದೇ ಮೂಲ ಎಳೆಯಿಂದ ತಲಾಶ್ ಚಿತ್ರ ಓಡಲಿದೆ . ಈಗಾಗಲೇ ಬಾಲಿವುಡ್ ನಲ್ಲಿ ಬಂದ "ನೋ ವನ್ ಕಿಲ್ಡ್ ಜೇಸಿಕಾ' ಚಿತ್ರ ಕೂಡ ಸಮಾಜದಲ್ಲಿ ನಡೆದ ನೈಜ ಅಪರಾಧ ಕತೆಯನ್ನೇ ಹೊಂದಿತ್ತು. ತಲಾಶ್ ಚಿತ್ರದ ನಿರ್ದೇಶಕಿ ರೀಮಾ ಕೂಡ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಹಾಗೂ ಪೊಲೀಸರ ಜತೆಯಲ್ಲಿ ಮಾತುಕತೆ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ಕಾಣಿಇಸಕೊಂಡ ತಿರುವು ಎಲ್ಲವೂ ರಿಮಾ ತನ್ನ ತಲಾಶ್ ನಲ್ಲಿ ಆಳವಡಿಸಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಮಾತು ಮಾಧ್ಯಮಗಳು ಬಾಯಿ ಬಿಟ್ಟಿದೆ. ಟೋಟಲಿ ಬಾಲಿವುಡ್ ನ ದೊಡ್ಡ ಪರದೆಯ ಮೇಲೆ ತಲಾಶ್ ಬಿಡುಗಡೆಯಾಗುವ ಮೊದಲು ಏನೂ ಹೇಳುವಂತಿಲ್ಲ. ಕಾರಣ ಬಾಲಿವುಡ್ ನ ಪರ್ಫೆಕ್ಟ್ ಮ್ಯಾನ್ ಎಂದು ಕರೆಯುವ ಆಮೀರ್ ಚಿತ್ರದ ಮೂಲ ಕತೆಯಲ್ಲಿ ಬದಲಾವಣೆ ಮಾಡದೇ ಇರುತ್ತಾರಾ..? ಎನ್ನುವ ಪ್ರಶ್ನೆ ಚಿತ್ರ ಪ್ರೇಮಿಗಳಲ್ಲಿ ಎದುರಾಗಿದೆ.
Tuesday, October 2, 2012
ಮಣಿ ಕೈಯಲ್ಲಿ ಈಗ ಐಶ್ವರ್ಯಾ !
* ಸ್ಟೀವನ್ ರೇಗೊ, ದಾರಂದಕುಕ್ಕು
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಅವರ ಮಾತಿಗೆ ಜಗದೇಕ ಸುಂದರಿ ಐಶ್ವರ್ಯಾ ರೈ ತಕ್ಷಣ ಒಪ್ಪಿಕೊಳ್ಳಲು ಇರುವ ಕಾರಣ ಏನೂ ಎಂಬ ಪ್ರಶ್ನೆ ಬಹಳ ಮಂದಿಯನ್ನು ಕಾಡುತ್ತಿರಬಹುದು. ಬಾಲಿವುಡ್ ಬಿಗ್ ಬಿ ಸೊಸೆಯ ರೀ ಎಂಟ್ರಿ ಭರ್ಜರಿಯಾಗಿರಬೇಕು ಎಂದುಕೊಂಡು ಹತ್ತಾರು ಬಾಲಿವುಡ್ ನ ಚಿತ್ರ ನಿರ್ಮಾಣ ಬ್ಯಾನರ್ ಗಳು ಜತೆಗೆ ನಿರ್ದೇಶಕರು ತುದಿ ಕಾಲಿನಲ್ಲಿ ನಿಂತಿದ್ದರೂ ಕೂಡ ಐಶ್ ಬೇಬಿಯ ಕಾಲ್ ಶೀಟ್ ಮಣಿರತ್ನಂ ಎನ್ನುವ ನಿರ್ದೇಶಕನ ಪಾಲಿಗೆ ಸಿಗಲು ಕಾರಣ ಏನೂ ಎಂಬುದಕ್ಕೆ 1997ರಲ್ಲಿ ಬಿಡುಗಡೆ ಕಂಡ ಇರುವರ್ ಚಿತ್ರ ಹೇಳುತ್ತದೆ.
ಒಂದಲ್ಲ ಎರಡಲ್ಲ ಬರೋಬರಿ 10 ತಿಂಗಳ ಕಾಲ ಯಾವುದೇ ಬಣ್ಣದ ಲೋಕದ ಟಚ್ ಬಿಟ್ಟುಕೊಂಡು ಬದುಕು ಕಟ್ಟೋದು ಅಂದರೆ ಹೇಳುವಂತೆ ಸುಲಭದ ಮಾತಲ್ಲ. ಪ್ರತಿದಿನ ಶೂಟಿಂಗ್ ಬ್ಯುಸಿಯ ಓಡಾಟ, ಹತ್ತಾರು ಜಾಹೀರಾತು ಕಂಪನಿಗಳ ನಿರಂತರ ಶೂಟಿಂಗ್ ಅಲ್ಲೊಂದು ಇಲ್ಲೊಂದು ಅಂತಹ ಹೇಳಿಕೊಂಡು ಸಮಾಜ ಸೇವೆಯ ಕೆಲಸಗಳು ಎಲ್ಲವೂ ಬಿಟ್ಟು ಬದುಕಿನ ಶಕ್ತಿ ನಟಿಗೆ ಬಂದು ಬಿಟ್ಟರೆ ಆಕೆ ಮತ್ತೆ ಸಿನಿಮಾ ಫೀಲ್ಡ್ ಗೆ ಎಂಟ್ರಿ ಕೊಡುವುದು ಬಾಲಿವುಡ್ ಲೆಕ್ಕಚಾರದ ಪ್ರಕಾರ ತೀರಾನೇ ಕಡಿಮೆ. ಈ ಪಟ್ಟಿಯಲ್ಲಿ ಕುಡ್ಲದ ಕುವರಿ ಐಶ್ವರ್ಯಾ ರೈ ಬಂದಿದ್ದಾರೆ. ತೀರಾ ಇತ್ತೀಚೆಗೆ ವಿಶ್ವ ಸಂಸ್ಥೆಯ ಪರವಾಗಿ ಆಂದೋಲನವೊಂದಕ್ಕೆ ಐಶ್ ರಾಯಭಾರಿ ಆಗುವುದರ ಜತೆಗೆ ಚಿನ್ನಾಭರಣ ಕಂಪನಿಯೊಂದಕ್ಕೆ ಬ್ರಾಂಡ್ ಅಂಬಾಸೀಡರ್ ಆಗಿದ್ದು ಕೂಡ ಈಗ ಬಹಳ ಹಳಸಲು ಸುದ್ದಿ.
ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ಐಶ್ವರ್ಯಾ ರೈ ಆರಾಧ್ಯಳ ತಾಯಿಯಾಗಿ, ಜಾಹೀರಾತು ಕಂಪನಿಗೆ ರೂಪದರ್ಶಿಯಾಗುವುದರ ಬೆನ್ನಿಗೆ ಮತ್ತೆ ಬಣ್ಗದ ಲೋಕಕ್ಕೆ ರೀ ಎಂಟ್ರಿ ಕೊಡುತ್ತಿರುವ ವಿಚಾರ ಇಡೀ ಬಾಲಿವುಡ್ ಚಿತ್ರರಂಗಕ್ಕೆ ಬಹಳ ದೊಡ್ಡ ಸುದ್ದಿ ಅಲ್ವಾ..? ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಗುಜಾರಿಶ್' ನಂತರ ಐಶ್ ಗೆ ಮಧುರ್ ಭಂಡಾರ್ ಕರ್ ಅವರ ಹೀರೋಯಿನ್ ನಲ್ಲೂ ಅವಕಾಶ ಬಂದಿತ್ತು. ಇದೇ ಸಮಯದಲ್ಲಿ ಐಶ್ ಗರ್ಭಿಣಿ ಎಂದು ಗೊತ್ತಾಗುತ್ತಿದ್ದಂತೆ ಈ ಜಾಗದಲ್ಲಿ ಕರೀನಾ ಕಪೂರ್ ಬಂದು ನಿಂತಿದ್ದರು. ಅಲ್ಲಿಗೆ ಐಶ್ ಪತಿ, ಮಗು ಹಾಗೂ ಮಾವ- ಮತ್ತೆ ಎನ್ನುವ ಸಂಬಂಧಗಳ ನಡುವೆ ಕಾಲ ಕಳೆಯುತ್ತಾರೆ ಎಂದೇ ಅವರ ಅಭಿಮಾನಿಗಳು ಎಂದುಕೊಂಡು ಬಿಟ್ಟಿದ್ದರು. ಆದರೆ ಈಗ ಎಲ್ಲವೂ ಬದಲಾಗಿದೆ. ಐಶ್ ಮರಳಿ ಸಿನಿಮಾಕ್ಕೆ ಬರುವ ಮಾತು ಆಡಿದ್ದಾರೆ.
ಮಣಿಯಲ್ಲಿ ಅರಳಿದ ಐಶ್ವರ್ಯಾ:
ಅಂದಹಾಗೆ ಐಶ್ ಬೇಬಿ ಮತ್ತೆ ಸಿನಿಮಾ ರಂಗಕ್ಕೆ ಕಾಲಿಡಲು ಕಾರಣ ಮಣಿರತ್ಣಂ. ಹೌದು. ಆಂಗ್ಲ ಕಾದಂಬರಿಗಾರ ಡ್ಯಾಫ್ನೇ ಡೂ ಮೂರಿಯರ್ ಅವರ ಖ್ಯಾತ ಕಾದಂಬರಿ "ರೆಬೇಕಾ' ಈಗ ಮಣಿರತ್ನಂ ಅವರ ಕೈಯಲ್ಲಿ ಅರಳಲಿರುವ ಚಿತ್ರ. ಈಗಾಗಲೇ ಐಶ್ ಜತೆಯಲ್ಲಿ ಚಿತ್ರದ ಕುರಿತಾಗಿ ಮಾತುಕತೆಗಳು ಮುಗಿದಿದೆ. ಚಿತ್ರಕ್ಕೆ ತಕ್ಕಂತೆ ಶೂಟಿಂಗ್ ಸ್ಪಾಟ್ ಗಳನ್ನು ಗುರುತಿಸುವ ಕೆಲಸ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ. ಇನ್ನೂಳಿದಂತೆ ರೆಬೇಕಾ ಚಿತ್ರಕ್ಕೆ ನಾಯಕ ಯಾರು ಎನ್ನೋದು..? ಈ ಪ್ರಶ್ನೆಗೆ ಉತ್ತರ ನೀಡಲು ಮಣಿ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ವಿಚಾರ ಕೂಡ ಹೊರಬಂದಿದೆ. ಮಣಿರತ್ನಂ ಅವರ ಕಳೆದ ಎರಡು ಚಿತ್ರಗಳಲ್ಲಿ ಐಶ್ವರ್ಯಾ ರೈ ಗೆ ನಾಯಕನಾಗಿ ಅಭಿಷೇಕ್ ಅವರನ್ನು ಬಳಸಿಕೊಂಡಿದ್ದರು. ಈ ಚಿತ್ರದಲ್ಲೂ ಇದೇ ನಾಯಕ- ನಾಯಕಿ ಮುಂದವರಿಸುವ ಕುರಿತು ಚಿಂತನೆ ನಡೆದಿದೆ ಎನ್ನುವ ಮಾತುಗಳು ಮುಂಬಯಿ ಗಲ್ಲಿಯಲ್ಲಿ ಕೇಳಿಸಿಕೊಂಡಿದೆ.
ಐಶ್ ಯಾಕೆ ಮಣಿ ಚಿತ್ರಕ್ಕೆ ಒಪ್ಪಿಕೊಂಡಳು:
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿರುವ ಮಣಿರತ್ನಂ ಅವರ ಮಾತಿಗೆ ಜಗದೇಕ ಸುಂದರಿ ಐಶ್ವರ್ಯಾ ರೈ ತಕ್ಷಣ ಒಪ್ಪಿಕೊಳ್ಳಲು ಇರುವ ಕಾರಣ ಏನೂ ಎಂಬ ಪ್ರಶ್ನೆ ಬಹಳ ಮಂದಿಯನ್ನು ಕಾಡುತ್ತಿರಬಹುದು. ಬಾಲಿವುಡ್ ಬಿಗ್ ಬಿ ಸೊಸೆಯ ರೀ ಎಂಟ್ರಿ ಭರ್ಜರಿಯಾಗಿರಬೇಕು ಎಂದುಕೊಂಡು ಹತ್ತಾರು ಬಾಲಿವುಡ್ ನ ಚಿತ್ರ ನಿರ್ಮಾಣ ಬ್ಯಾನರ್ ಗಳು ಜತೆಗೆ ನಿರ್ದೇಶಕರು ತುದಿ ಕಾಲಿನಲ್ಲಿ ನಿಂತಿದ್ದರೂ ಕೂಡ ಐಶ್ ಬೇಬಿಯ ಕಾಲ್ ಶೀಟ್ ಮಣಿರತ್ನಂ ಎನ್ನುವ ನಿರ್ದೇಶಕನ ಪಾಲಿಗೆ ಸಿಗಲು ಕಾರಣ ಏನೂ ಎಂಬುದಕ್ಕೆ 1997ರಲ್ಲಿ ಬಿಡುಗಡೆ ಕಂಡ ಇರುವರ್ ಚಿತ್ರ ಹೇಳುತ್ತದೆ.
1994ರಲ್ಲಿ ಜಗದೇಕ ಸುಂದರಿ ಕಿರೀಟ ಹೊತ್ತ ಐಶ್ವರ್ಯಾ ರೈ ನಂತರ ನಾನಾ ಸಿನಿಮಾಗಳಿಗೆ ನಾಯಕಿ ಸ್ದಾನಕ್ಕೆ ಅವಕಾಶ ಕೇಳಿಕೊಂಡಿದ್ದಳು. ಆದರೆ ನಿರ್ದೇಶರು ಐಶ್ ಅವರನ್ನು ಬರೀ ಸುಂದರ ಗೊಂಬೆಯಾಗಿ ಮಾತ್ರ ನೋಡಲು ಬಯಸಿದ್ದರು. ಇದೇ ಸಮಯದಲ್ಲಿ ತಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ತನ್ನ ಇರುವರ್ ಚಿತ್ರದಲ್ಲಿ ನಟಿಸಲು ಐಶ್ ಗೆ ಅವಕಾಶ ಮಾಡಿಕೊಟ್ಟರು. ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಐಶ್ ಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಐಶ್ ಈ ಚಿತ್ರದಲ್ಲಿ ಕಲ್ಪನಾ, ಕನಕವಳ್ಳಿಯ ಪಾತ್ರದಲ್ಲಿ ಎಲ್ಲ ಪ್ರೇಕ್ಷಕರಿಗೂ ಇಷ್ಟವಾದಳು. ಇತ್ತ ಕಡೆ ಐಶ್ ಗೆ ಎಲ್ಲ ಚಿತ್ರರಂಗದಿಂದಲೂ ಅವಕಾಶಗಳು ಬರಲು ಆರಂಭವಾಯಿತು. ನಂತರ ಮಣಿರತ್ನಂ ತನ್ನ ಚಿತ್ರಗಳಿಗೆ ಹೊಸ ನಾಯಕ- ನಾಯಕಿರನ್ನು ಬಳಸಿಕೊಂಡು ಸಕ್ಸಸ್ ಕಾಣುತ್ತಿದ್ದಾರೆ. ಇತ್ತ ಕಡೆ ಐಶ್ ತಮ್ಮದೇ ಸಿನಿಮಾ ಗುಂಗಿನಲ್ಲಿ ಕಾಲಕಳೆಯುತ್ತಿದ್ದರು.
ಐಶ್- ಅಭಿಯನ್ನು ಒಂದು ಮಾಡಿದ ಮಣಿ:
ನಿರ್ದೇಶಕ ಮಣಿರತ್ನಂ ಐಶ್ ಬದುಕಿನಲ್ಲಿ ಬಹಳ ದೊಡ್ಡದಾದ ಪಾತ್ರದಲ್ಲಿದ್ದಾರೆ. ಐಶ್ ನ ಆರಂಭದ ಚಿತ್ರದಿಂದ ಹಿಡಿದು ಕೊನೆಗೆ ಮದುವೆಯ ವರೆಗೂ ಮಣಿ ಐಶ್ ಗೆ ಸಾಥ್ ನೀಡಿದ್ದರು. ಇರುವರ್ ಚಿತ್ರದ ಮೂಲಕ ಮಣಿರತ್ನಂ ಐಶ್ವರ್ಯಾ ರೈ ಸಿನಿಮಾ ಬದುಕಿನ ಮೊದಲ ಅಧ್ಯಾಯ ತೆರೆದರು. 2007ರಲ್ಲಿ ಗುರು ಸಿನಿಮಾದಲ್ಲಿ ನಟ ಅಭಿಷೇಕ್ ಬಚ್ಚನ್ ಹಾಗೂ ಐಶ್ ಅವರನ್ನು ತನ್ನ ಚಿತ್ರ ಗುರು ಗೆ ಜತೆ ಸೇರಿಸಿಕೊಳ್ಳುವ ಮೂಲಕ ಇಬ್ಬರ ನಡುವೆ ಪ್ರೀತಿಯ ಬೆಸುಗೆ ಹಾಕಿದ್ದರು. ಇದೇ ಸಮಯದಲ್ಲಿ ಅಭಿ ಹಾಗೂ ಐಶ್ ಅವರ ಮದುವೆಯಾಗಿತ್ತು. ಈ ಬಳಿಕ 2010ರಲ್ಲಿ ರಾವಣ್ ಚಿತ್ರದಲ್ಲಿ ಮತ್ತೆ ಇಬ್ಬರನ್ನು ಒಟ್ಟು ಸೇರಿಸುವ ಮೂಲಕ ಅರಾಧ್ಯ ಬಚ್ಚನ್ ಬಿಗ್ ಬಿ ಕುಟುಂಬಕ್ಕೆ ಮೊಮ್ಮಗಳನ್ನು ಪಡೆಯುವಂತೆ ಆಯಿತು. ಈ ಎಲ್ಲ ವಿಚಾರಗಳ ಹಿಂದೆ ಮಣಿರತ್ನಂ ಇದ್ದರು. ಈಗ ಚಿತ್ರರಂಗಕ್ಕೆ ಐಶ್ ಅವರನ್ನು ರೀ ಎಂಟ್ರಿ ಕೊಡಿಸುವ ಮೂಲಕ ಮತ್ತೆ ಗುರುವಾಗಿ ಮೆರೆದಿದ್ದಾರೆ. ಮೂರನೇ ಚಿತ್ರ ರೆಬೇಕಾದ ಮೂಲಕ ಐಶ್- ಮಣಿ ಕೆಮೆಸ್ಟ್ರಿ ಒಳ್ಳೆಯ ರೀತಿಯಲ್ಲಿ ವರ್ಕ್ ಔಟ್ ಆಗಲಿ ಎನ್ನೋದು ಪ್ರೇಕ್ಷಕ ಪ್ರಭು ಮಾಡಿಕೊಳ್ಳುವ ಮನವಿ.
Subscribe to:
Posts (Atom)