Monday, October 31, 2011

ಟಾಲಿವುಡ್ಡಿನಲ್ಲಿ ಮತ್ತೆ ನಾಯಕ ಲವರ್ ಬಾಯ್ ಸುಮನ್ !


ಪಂಚಭಾಷೆ ತಾರೆ ಸುಮನ್ ಈ ವಯಸ್ಸಿನಲ್ಲೂ ಲವ್ ಮಾಡಲು ಹೊರಟ್ಟಿದ್ದಾರೆ. ಸುಮನ್‌ಗೆ ಮದುವೆಯಾಗಿದೆ.. ಮುದ್ದಾದ ಮಗಳಿದ್ದಾರೆ. ಆದರೂ ಲವ್ವಾ.. ಮಾರಾಯ್ರೆ ಅಂತೀರಾ..? ಬನ್ನಿ ಸುಮನ್ ಹಾಡು- ಪಾಡು ಇಲ್ಲಿ ಕೇಳಿಬಿಡಿ.

ಪ್ರೀತಿ ಚಿಗೋರೋದು ಗೊತ್ತಿಲ್ಲ. ಮುರುಟಿ ಬೀಳೋದು ಗೊತ್ತಿಲ್ಲ. ವಿಶೇಷ ಅಂದ್ರೆ ಪ್ರೀತಿಗೆ ಯಾವುದೇ ಆರ್ಹತೆ ಎನ್ನುವ ತಡೆಗೋಡೆಗಳಿಲ್ಲ. ಶ್ರೀಮಂತ-ಬಡವ, ವಯಸ್ಸು- ಜಾತಿ ಯಾವುದು ಕೂಡ ಪ್ರೀತಿ ಮಾಡುವವನ ಕಣ್ಣಿಗೆ ಬೀಳೋದಿಲ್ಲ. ಅಲ್ಲಿ ಕಾಣೋದು ಬರೀ ಪ್ರೀತಿ. ಈ ಪ್ರೀತಿಯ ಮಾತನ್ನು ಹೇಳಿದವರು ಬೇರೆ ಯಾರು ಅಲ್ಲ ಅವರೇ ಪಂಚಭಾಷೆ ತಾರೆ ಸುಮನ್ ತಲ್ವಾರ್.

ಅಂದಹಾಗೆ ಸುಮನ್ ಈಸ್ ಎ ಜೆಮ್ ಪರ್ಸನ್ ಎನ್ನುವ ವಿಚಾರ ಇಡೀ ಭಾರತೀಯ ಸಿನ್ಮಾ ಇಂಡಸ್ಟ್ರಿಗೇ ಗೊತ್ತಿದೆ. ಸುಮನ್ ಶ್ರೀಷಾ ಅವರನ್ನು ಮದುವೆಯಾಗಿ ಮುದ್ದಾದ ಮಗಳು ಅಖಿಲಾಚಾ ಪ್ರತ್ಯುಶಾ ಅವರೆತ್ತರಕ್ಕೆ ಬೆಳೆದು ನಿಂತಿದ್ದಾಳೆ. ಈ ಟೈಮ್‌ನಲ್ಲಿ ಲವ್ವಿ-ಡವ್ವಿನ ಅಂತಾ ಪ್ರಶ್ನೆ ಮಾತ್ರ ಎಸೆಯಲು ಹೋಗಬೇಡಿ. ಸುಮನ್ ತಲ್ವಾರ್ ಲವ್‌ನಲ್ಲಿ ಬೀಳುತ್ತಾರೆ ನಿಜ. ಆದರೆ ಅದು ರಿಯಲ್ ಬದುಕಿನಲ್ಲಿ ಅಲ್ಲ. ರೀಲ್ ಬದುಕಿನಲ್ಲಿ ಸುಮನ್ ಮತ್ತೆ ಫಿನಿಕ್ಸ್ ಹಕ್ಕಿಯಂತೆ ಎದ್ದು ಕೂತಿದ್ದಾರೆ. ೫೦ರ ಹರೆಯದಲ್ಲಿ ಸುಮನ್ ಸ್ಪುರದ್ರೂಪಿ ನಟ ಮತ್ತೆ ಹೀರೋವಾಗಿ ರೀಲಾಂಜ್ ಆಗುತ್ತಿದ್ದಾರೆ.

ತೆಲುಗಿನ ಇನ್ನೂ ಹೆಸರಿಟ್ಟಿಲ್ಲದ ಚಿತ್ರದಲ್ಲಿ ಸುಮನ್ ಪಕ್ಕಾ ಲವರ್‌ಬಾಯ್ ಆಗಲು ಹೊರಟ್ಟಿದ್ದಾರೆ. ಇದು ಸುಮನ್ ತಲ್ವಾರ್ ವಿಲನ್ ಗೆಟಪ್‌ನಿಂದ ಹೀರೋ ಗೆಟಪ್‌ಗೆ ಶಿಪ್ಟ್ ಆಗುತ್ತಿರುವ ಚಿತ್ರ. ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಚಿತ್ರ ಭಾರತೀಯ ಸಿನ್ಮಾ ಇಂಡಸ್ಟ್ರಿಯಲ್ಲಿ ಹೊಸ ರೆಕಾರ್ಡ್ ಬರೆಯಬಹುದಾದ ಚಿತ್ರವಂತೆ. ಇಲ್ಲಿ ಸುಮನ್ ಒಬ್ಬರೇ ಪುರುಷ. ಉಳಿದ ಎಲ್ಲ ಸ್ಟಾರ್ ಕಾಸ್ಟ್‌ಗಳು ಮಹಿಳಾ ಮಣಿಗಳು. ಅದು ನಿರ್ದೇಶಕರಿಂದ ಹಿಡಿದು ಕಟ್ಟಕಡೆಯ ಕಾಸ್ಟ್ಯೂಮ್ ಡಿಸೈನರ್ ವರೆಗೂ ಮಹಿಳೆಯರೇ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಮೊದಲು ತಮಿಳು ಸಿನ್ಮಾದಲ್ಲೊಂದು ನಿರ್ದೇಶಕಿ ರೇವತಿ ಇಂತಹ ಪ್ರಯತ್ನ ಮಾಡಿದ್ದರು. ಅಲ್ಲಿ ಯಾರು ಕೂಡ ಪುರುಷರು ಇರಲಿಲ್ಲ. ಆದರೆ ತೆಲುಗಿನ ಈ ಚಿತ್ರದಲ್ಲಿ ಸುಮನ್ ಇದ್ದಾರೆ. ಈಗ ಈ ಚಿತ್ರ ಕೂಡ ರೆಕಾರ್ಡ್ ಅಬೇಲ್ ಚಿತ್ರವಾಗಲಿದೆ ಎಂಬ ಮಾತು ಬಿಸಿಲು ನಾಡಿನ ಆಂಧ್ರದಿಂದ ಹೊರ ಬಂದ ಮಾಹಿತಿ.ಕಳೆದ ವಾರವಷ್ಟೇ ಚಿತ್ರಕ್ಕೆ ಹೈದರಾಬಾದ್‌ನ ಪ್ರಖ್ಯಾತ ರಾಮನಾಯ್ಡು ಸ್ಟುಡಿಯೋದಲ್ಲಿ ಮುಹೂರ್ತ ಮಾಡಲಾಗಿದೆ.

ಖುದ್ದು ರಾಮನಾಯ್ಡು ಬಂದು ಕ್ಯಾಮೆರಾ ಚಾಲು ಮಾಡಿದ್ದರು. ಆಂಧ್ರದ ನಾನಾ ಕಡೆ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಚಿತ್ರಕ್ಕೆ ತೆಲುಗು ಪ್ರೇಕ್ಷಕರೇ ಹೆಸರು ಸೂಚಿಸಿಬಿಡಿ ಎಂದು ಆಂಧ್ರದ ಬಹುತೇಕ ಮಾಧ್ಯಮಗಳಲ್ಲಿ ಚಿತ್ರ ತಂಡ ಜಾಹೀರಾತು ನೀಡುತ್ತಿದೆ. ವರ್ಷದ ಕೊನೆಯಲ್ಲಿ ಚಿತ್ರವಂತೂ ತೆರೆಗೆ ಬರೋದು ನೂರಕ್ಕೆ ನೂರರಷ್ಟು ಖಚಿತ ಎನ್ನೋದು ಚಿತ್ರ ತಂಡದ ಭರವಸೆಯ ಮಾತು.

ಸುಮನ್ ತಲ್ವಾರ್ ಹೇಳುವಂತೆ: ಚಿತ್ರದಲ್ಲಿ ಎರಡನೇ ಬಾರಿಗೆ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅದರಲ್ಲೂ ೫೦ರ ಹರೆಯದಲ್ಲಿ ಲವರ್ ಬಾಯ್ ಪಾತ್ರ. ಪ್ರೀತಿಗೆ ವಯಸ್ಸಿನ ಬ್ಯಾರಿಯರ್ ಇರೋದಿಲ್ಲ ಎಂದುಹೇಳಿಕೊಳ್ಳುವ ಈ ಚಿತ್ರ ಯುವಜನತೆಗೆ ಒಂದು ಹೊಸ ಸಂದೇಶ ಕೊಡುತ್ತದೆ. ನನ್ನ ಪಾಳಿಗೆ ಇದು ಸೆಕೆಂಡ್ ಚಾನ್ಸ್. ಮೊದಲು ತಮಿಳಿನ ‘ಶಿವಾಜಿ’ ಚಿತ್ರದಲ್ಲಿ ಸಿಕ್ಕಿದ ವಿಲನ್ ಪಾತ್ರ ಬಣ್ಣದ ಬದುಕಿಗೆ ಹೊಸ ಟರ್ನಿಂಗ್ ಪಾಯಿಂಟ್ ಕೊಟ್ಟಿತು. ಈ ಚಿತ್ರ ಮತ್ತೊಂದು ಟರ್ನಿಂಗ್ ಪಾಯಿಂಟ್ ಕೊಡುತ್ತದೆ ಎನ್ನೋದು ಅವರ ಭರವಸೆಯ ಮಾತು.

ಅಂದಹಾಗೆ ಸುಮನ್ ತಲ್ವಾರ್ ಈಗಾಗಲೇ ತೆಲುಗಿನಲ್ಲಿ ನೂರಕ್ಕೂ ಅಕ ಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು, ಮಲಯಾಳಂ, ಕನ್ನಡ, ಇಂಗ್ಲೀಷ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆರಂಭದಲ್ಲಿ ನಾಯಕನಾಗಿ ಪ್ರೇಕ್ಷಕರ ಮುಂದೆ ಬಂದ ಸುಮನ್ ತಮ್ಮ ವೃತ್ತಿ ಬದುಕಿನ ಸೆಕೆಂಡ್ ಹಾಫ್‌ನಲ್ಲಿ ವಿಲನ್ ಪಾತ್ರಕ್ಕೆ ಒಗ್ಗಿಕೊಂಡರು. ಈಗ ತಮ್ಮ ಮೂರನೇ ಅವತಾರದಲ್ಲಿ ನಾಯಕರಾಗುತ್ತಿದ್ದಾರೆ.

ತೆಲುಗಿನಲ್ಲಿ ಸೂಪರ್‌ಸ್ಟಾರ್ ಪಟ್ಟಕ್ಕೆ ಒಂದು ಕಾಲದಲ್ಲಿ ಚಿರಂಜೀವಿಯ ಜತೆಯಲ್ಲಿ ತೊಡೆತಟ್ಟಿ ಹೋರಾಡಿದ ಸುಮನ್ ಮಂಗಳೂರಿನ ಮೂಲ್ಕಿ-ಹೆಜಮಾಡಿನವರು. ವರ್ಷದಲ್ಲಿ ಒಂದರೆಡು ಬಾರಿ ತಮ್ಮ ಊರಿಗೆ ಬಂದು ನಾಗ ದೇವರಿಗೆ ಕೈ ಮುಗಿದು ಹೋಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಚಿತ್ರಗಳಲ್ಲಿ ಹೆಚ್ಚೆಚ್ಚು ನಟಿಸಬೇಕೆನ್ನುವ ಮಹಾದಾಸೆ ಹೊತ್ತುಕೊಂಡವರು. ಆದರೆ ಕನ್ನಡ ಸಿನ್ಮಾ ಇಂಡಸ್ಟ್ರಿಯವರು ಮಾತ್ರ ಅವರನ್ನು ಸರಿಯಾಗಿ ಬಳಸಿಕೊಳ್ಳಲೇ ಇಲ್ಲ. ಇದು ಮಹಾ ದುರಂತವೇ ಸರಿ ಅಲ್ವಾ..?

Sunday, October 30, 2011

ನನ್ನ ಪತ್ರಿಕೆ ನನ್ನ ಬರಹ-31



(vk daily nk main page lead story on 31.10.2011)

ಬಾಜಿ ಕಟ್ಟುವ ಬನ್ಸಾಲಿ


ಬಾಜಿರಾವ್ ಹಾಗೂ ಆತನ ಅರ್ಧ ಮುಸ್ಲಿಂ ಪತ್ನಿ ಮಸ್ತಾನಿಯ ಕಥೆಯನ್ನಿಟ್ಟುಕೊಂಡು ಬನ್ಸಾಲಿ ಕಥೆ ಸಿದ್ಧಪಡಿಸಿದ್ದಾರೆ. ಆದರೆ ಕಳೆದ ೭ ವರ್ಷಗಳಿಂದ ಈ ಚಿತ್ರ ತೆರೆಗೆ ತರುವ ಕೆಲಸ ನಡೆಯುತ್ತಿದೆ. ಆದರೂ ಚಿತ್ರವಂತೂ ಇನ್ನೂ ತೆರೆಗೆ ಬರುವ ಮಾತು ಕೇಳ್ತಿಲ್ಲಾವಂತೆ.. ಏನ್ ಕತೆ ಅಂತ್ತೀರಾ..?

ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಳೆದ ೭ ವರ್ಷಗಳಿಂದ ಚಿತ್ರದ ಹೆಸರೊಂದು ಬಹಳವಾಗಿ ಕಿವಿಗೆ ಬಡಿಯುತ್ತಿದೆ. ಆದರೆ ಚಿತ್ರವಂತೂ ಈಗಲೂ ತೆರೆಗೆ ಬಂದಿಲ್ಲ ಅನ್ನೋದು ಬೇರೆ ವಿಷ್ಯಾ. ಅಂದಹಾಗೆ ಚಿತ್ರ ‘ಬಾಜಿರಾವ್ ಮಸ್ತಾನಿ’ ಚಿತ್ರವನ್ನು ತೆರೆಗೆ ತರುತ್ತೇನೆ ಎಂದು ಓಡಾಡಿಕೊಂಡಿದ್ದ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸುತ್ತಾರೆ ಎಂಬ ಸುದ್ದಿ ಹರಡಿಕೊಂಡಿತ್ತು. ಆದರೆ ಈಗ ಸಲ್ಲುಗೆ ಕಾದು ಸುಸ್ತಾದ, ಬನ್ಸಾಲಿ, ಸಲ್ಮಾನ್‌ನ ಬದ್ಧ ವೈರಿ ಶಾರೂಖ್‌ಗೆ ಗಾಳ ಹಾಕಿದ್ದಾರಂತೆ !
ಬನ್ಸಾಲಿ ೨೦೦೩ರಲ್ಲಿ ಈ ಸಿನಿಮಾವನ್ನು ಘೋಷಿಸುವುದರೊಂದಿಗೆ ಅಂದಿನ ಹಾಟ್ ಜೋಡಿಯಾದ ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ನಟಿಸಲಿದ್ದಾರೆಂದೂ ಹೇಳಿದ್ದರು. ಆದರೆ ಯಾರ ಅದೃಷ್ಟ ಕೈ ಕೊಟ್ಟಿತೋ ಗೊತ್ತಿಲ್ಲ, ಸಲ್ಲು-ಐಶು ಜೋಡಿ ಬೇರೆಯಾಗಿ ಬಿಟ್ಟಿತು. ನಂತರ ೨೦೦೫ರಲ್ಲಿ ಕರೀನಾ ಕಪೂರ್ ಹಾಗೂ ಸಲ್ಮಾನ್ ನಟಿಸಲಿದ್ದಾರೆಂಬ ಸುದ್ದಿಯೂ ಬಂತು. ಆದರೆ ಕರೀನಾ ಆ ಆಫರ್‌ನ್ನು ತಿರಸ್ಕರಿಸಿದಳು. ನಂತರ ಮಸ್ತಾನಿ ಪಾತ್ರವನ್ನು ರಾಣಿ ಮುಖರ್ಜಿ ಮಾಡಲಿದ್ದಾಳೆ ಎನ್ನುವುದರೊಂದಿಗೆ ಆ ಸಿನಿಮಾ ಸುದ್ದಿ ತಣ್ಣ ಗಾಯಿತು.
ಆ ಮೇಲೆ ಬನ್ಸಾಲಿ ಸಾಹೇಬ್ರು ‘ಸಾವರಿಯಾ’ ಹಾಗೂ ‘ಗುಜಾರೀಶ್’ ಸಿನಿಮಾಗಳು ಬಂದು ಹೋಯಿತು. ಈಗ ಮತ್ತೆ ‘ಬಾಜಿರಾವ್ ಮಸ್ತಾನಿ’ಗೆ ಜೀವ ಕಳೆ ಬಂದಿದೆ. ಸಲ್ಲು ಕಡೆಯಿಂದ ಈ ಸಿನಿಮಾದ ಕುರಿತು ಯಾವುದೇ ಪ್ರತಿಕ್ರಿಯೆ ಇಲ್ಲದೇ ಬೇಸತ್ತ ಬನ್ಸಾಲಿ ಶಾರೂಖ್‌ಗೆ ಕಥೆ ಹೇಳಲು ಮುಂದಾಗಿದ್ದಾರೆ. ಈಗಾಗಲೇ ಶಾರೂಖ್‌ನನ್ನು ಸಂಪರ್ಕಿಸಿದ್ದಾರಂತೆ. ಅದಕ್ಕೆ ಶಾರುಖ್ ಕಡೆಯಿಂದ ಕೂಡ ಪಾಸಿಟಿವ್ ರೆಸ್ಪಾನ್ಸ್ ಬಂದಿದೆ ಎನ್ನೋದು ಆಪ್ತ ಮೂಲವೊಂದರಿಂದ ಬಂದ ಮಾತು.
ಹಾಗೆ ನೋಡಿದರೆ ಶಾರೂಖ್ ಖಾನ್‌ಗೂ, ಬನ್ಸಾಲಿಗೂ ೨೦೦೭ರಲ್ಲೊಮ್ಮೆ ಮನಸ್ತಾಪ ಉಂಟಾಗಿತ್ತು. ಏಕೆಂದರೆ ಬನ್ಸಾಲಿಯವರ ‘ಸಾವರಿಯಾ’ ಹಾಗೂ ಶಾರೂಖ್‌ನ ‘ಓಂ ಶಾಂತಿ ಓಂ’ ಒಂದೇ ದಿನ ಅಂದರೆ ೨೦೦೭ ನವೆಂಬರ್ ೯ರಂದೇ ತೆರೆಗೆ ಬಂದಿತ್ತು. ಆ ಸಮಯದಲ್ಲಿ ಚಿತ್ರವನ್ನು ಮುಂದಕ್ಕುವಂತೆ ಶಾರೂಖ್ ಬನ್ಸಾಲಿಗೆ ಹೇಳಿದರೂ ಅವರು ಕೇಳಲಿಲ್ಲ. ಆ ನಂತರ ಇತ್ತೀಚೆಗೆ ತೆರೆಕಂಡ ‘ಗುಜಾರೀಶ್’ ಸಿನಿಮಾ ಸಮಯದಲ್ಲಿ ಪ್ಯಾಚ್‌ಅಪ್ ಆಯಿತು.
‘ಗುಜಾರೀಶ್’ ಸಿನಿಮಾ ನೋಡಿದ ಶಾರೂಖ್, ಬನ್ಸಾಲಿಯವರನ್ನು ಮನೆಗೆ ಕರೆದು ಬೆನ್ನುತಟ್ಟುವ ಮೂಲಕ ಇಬ್ಬರು ರಾಜಿಯಾಗಿದ್ದರು. ಆ ರಾಜಿಯ ಫಲವೇ ಈ ಸಿನಿಮಾಕ್ಕೆ ನಾಂದಿ ಎನ್ನಲಾಗುತ್ತಿದೆ. ‘ಬಾಜಿರಾವ್ ಮಸ್ತಾನಿ’ ಮರಾಠ ರಾಜನೊಬ್ಬನ ಸ್ಟೋರಿ. ಬಾಜಿರಾವ್ ಹಾಗೂ ಆತನ ಅರ್ಧ ಮುಸ್ಲಿಂ ಪತ್ನಿ ಮಸ್ತಾನಿಯ ಕಥೆಯನ್ನಿಟ್ಟುಕೊಂಡು ಬನ್ಸಾಲಿ ಕಥೆ ಸಿದ್ಧಪಡಿಸಿದ್ದಾರೆ. ಆದರೆ ಈಗ ಚಿತ್ರ ಸರಿಯಾಗಿ ತೆರೆಗೆ ಬರುತ್ತಾ ಎನ್ನೋದು ಡಾಲರ್ ಪ್ರಶ್ನೆಯಾಗಿ ಮುಂದೆ ನಿಂತಿದೆ.

ಪೋಕಿರಿ ಮಹೇಶನ ಹುಡುಗಿ ನಮ್ರತಾ !


ಮಿರಿಮಿರಿ ಮಿನುಗುವ ರ‍್ಯಾಂಪ್ ಮೇಲೆ ಬದುಕು ಕಟ್ಟುವ ಗುರಿಯನ್ನು ಇಟ್ಟುಕೊಂಡು ಬಂದ ನಮ್ರತಾ ಆಕ್ಟಿಂಗ್ ಆಯ್ಕೆ ಮಾಡಿದ್ದೇ ವಿಚಿತ್ರ. ತೆಲುಗಿನ ಪೋಕಿರಿ, ದೂಕುಡು ಚಿತ್ರದ ಪ್ರಿನ್ಸ್ ಮಹೇಶ್ ಬಾಬುಗಾಗಿ ಚಿತ್ರರಂಗವನ್ನು ತೊರೆದು ಸತಿ ಸಾವಿತ್ರಿಯಾಗಲು ಹೊರಟ್ಟಿದ್ದಾರೆ. ಏನ್ ಕತೆ ಅಂತಾ ಕೇಳ್ತೀರಾ..?

ಕೋಲು ಮುಖ. ಯಾರನ್ನೋ ಹುಡುಕಾಟದಲ್ಲಿರುವ ಸುಂದರ ಕಣ್ಣುಗಳು. ತುಟಿ ತುಂಬಿ ಬಿಡದ ನಗು ಎಲ್ಲವೂ ಒಟ್ಟು ಸೇರಿಸಿ ಹೇಳುವುದಾದರೆ ನಮ್ರತಾ ಶಿರೋಡ್ಕರ್ ತಕ್ಕಮಟ್ಟಿಗೆ ಗ್ಲಾಮ್ ಜತೆಯಲ್ಲಿ ದೇಸಿ ತಡ್ಕಾ ಹುಡುಗಿ. ಅಂದಹಾಗೆ ನಮ್ರತಾ ಇಷ್ಟ ಪಟ್ಟುಕೊಂಡು ಸಿನ್ಮಾ ಲ್ಯಾಂಡ್‌ಗೆ ಬಂದವರು ಅಲ್ಲ. ಮಿರಿಮಿರಿ ಮಿನುಗುವ ರ‍್ಯಾಂಪ್ ಮೇಲೆ ಬದುಕು ಕಟ್ಟುವ ಗುರಿಯನ್ನು ಇಟ್ಟುಕೊಂಡು ಬಂದ ನಮ್ರತಾ ಆಕ್ಟಿಂಗ್ ಆಯ್ಕೆ ಮಾಡಿದ್ದೇ ವಿಚಿತ್ರ. ಅಂದಹಾಗೆ ನಮ್ರತಾ ಹೇಳಿಕೊಳ್ಳುವಂತೆ ಆಕ್ಟಿಂಗ್ ಘರಾಣಾದಲ್ಲಿ ಹುಟ್ಟಿ ಬೆಳೆದು ನಿಂತ ಬಾಲೆ.
ಖ್ಯಾತ ಮರಾಠಿ ನಟಿ ಮೀನಾಕ್ಷಿ ಶಿರೋಡ್ಕರ್ ನಾವು ಹೇಳ ಹೊರಟಿರುವ ನಮ್ರತಾರ ಅಜ್ಜಿ. ಮೀನಾಕ್ಷಿ ಬ್ರಹ್ಮಚಾರಿ ಚಿತ್ರದ ಮೂಲಕ ಬಾಲಿವುಡ್ ಅಂಗಳದಲ್ಲಿ ಬಂದು ಜೋರಾಗಿ ಹೆಸರು ಮಾಡಿಕೊಂಡಿದ್ದರು. ಜತೆಗೆ ಸ್ವಿಮ್ಮಿಂಗ್ ಸೂಟ್ ಧರಿಸಿ ಈಜು ಕೊಳದಲ್ಲಿ ಮಿಂದು ಬರುವ ತಾಕತ್ತು ತೋರಿಸಿದ ದಿಟ್ಟೆ ನಾಯಕಿಯ ಮೊಮ್ಮಗಳು ಎನ್ನುವ ಕಾರಣಕ್ಕೆ ಸಿನ್ಮಾ ಜಗತ್ತು ನಮ್ರತಾರನ್ನು ಒಂದು ನಾಯಕಿಯಾಗಿ ಕಂಡಿತ್ತು.
೧೯೯೮ರಲ್ಲಿ ಸನ್ಮಾನ್ ಖಾನ್ ಹಾಗೂ ಟ್ವಿಂಕಲ್ ಖನ್ನಾ ನಟಿಸಿದ ಚಿತ್ರ ‘ಜಬ್ ಪ್ಯಾರ್ ಕೈಸೇ ಹೋತಾ ಹೈ’ಯ ಮೂಲಕ ನಮ್ರತಾ ಬಣ್ಣದ ಜಗತ್ತಿಗೆ ಅಬ್ಬೆಕಾಲ್ಟಿಟಳು. ಸಂಜಯ್ ದತ್ ಜತೆಯಲ್ಲಿ ‘ವಾಸ್ತವ್’ ಚಿತ್ರದ ಮೂಲಕ ನಮ್ರತಾ ನಾಯಕಿಯ ಇಮೇಜ್ ಉಳಿಸಿಕೊಂಡರು ಎನ್ನುವುದು ಸಿನ್ಮಾ ವಿಮರ್ಶಕರು ಹೇಳಿಕೊಳ್ಳುವ ಮಾತು. ಯಾಕೋ ಗೊತ್ತಿಲ್ಲ ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ ಸಿನ್ಮಾ ನಗರಿಯ ಜನ ನಮ್ರತಾರನ್ನು ಬರೀ ಪೋಷಕ ಪಾತ್ರಕ್ಕೆ ಮಾತ್ರ ಸೀಮಿತ ಮಾಡಿಬಿಡುವ ಪರಂಪರೆ ಬೆಳೆಯಿತು. ನಮ್ರತಾ ಎಲ್ಲ ಪೋಷಕ ಪಾತ್ರಗಳಿಗೆ ಜೀವ ತುಂಬಿ ಮಾಡುತ್ತಿರುವುದರಿಂದ ಅಂತಹ ಪಾತ್ರಗಳಿಗೆ ಖಾಯಂ ಗಿರಾಕಿಯಾಗಿ ಹೋದರು.
ಒಂದು ವರ್ಷ ಬಾಲಿವುಡ್‌ನಲ್ಲಿ ಒಂದರ ಹಿಂದೆ ಒಂದು ಚಿತ್ರಗಳನ್ನು ಒಪ್ಪಿಕೊಂಡು ಬಾಲಿವುಡ್‌ನಲ್ಲೂ ಹೇಳಿಕೊಳ್ಳುವಂತಹ ಚಿತ್ರಗಳನ್ನು ಕೊಡದೇ ಅಲ್ಲಿಂದ ಹೊರಬಿದ್ದು ಮಲಯಾಳಂ, ತೆಲುಗು, ತಮಿಳು, ಕನ್ನಡ ಚಿತ್ರಗಳತ್ತ ನಮ್ರತಾ ಗಮನ ಹರಿಯಿತು. ಮಲಯಾಳಂನಲ್ಲಿ ಮಮ್ಮುಟ್ಟಿ, ತೆಲುಗಿನಲ್ಲಿ ಚಿರಂಜೀವಿ, ಕನ್ನಡದಲ್ಲಿ ರವಿಚಂದ್ರನ್, ತಮಿಳಿನಲ್ಲಿ ಕೆಲವೊಂದು ನಾಯಕರ ಜತೆ ಕಾಣಿಸಿಕೊಂಡು ಕೊನೆಗೆ ಬಂದು ಬಿದ್ದದ್ದು ನಟ ಮಹೇಶ್‌ಬಾಬು ಅವರ ತೆಕ್ಕೆಗೆ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರಲಿಕ್ಕಿಲ್ಲ.
ಏನಪ್ಪಾ ಕತೆ ಅಂದ್ರೆ ೨೦೦೦ರಲ್ಲಿ ತೆಲುಗಿನಲ್ಲಿ ಬಂದ ‘ವಂಶಿ ’ಚಿತ್ರದಲ್ಲಿ ಪ್ರಿನ್ಸ್ ಮಹೇಶ್ ಬಾಬು ಜತೆಯಲ್ಲಿ ನಮ್ರತಾ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರದ ಮೂಲಕವೇ ಇಬ್ಬರ ನಡುವೆ ಪ್ರೇಮ ಹುಟ್ಟಿತು. ೨೦೦೫ರ ಪೆಬ್ರವರಿಯಲ್ಲಿ ಇಬ್ಬರ ವಿವಾಹ ಕೂಡ ನಡೆದು ಹೋಯಿತು. ಈಗ ನಮ್ರತಾ ಪ್ರಿನ್ಸ್ ಮಹೇಶ್‌ರ ಜತೆ ಪುತ್ರ ಗೌತಮ್ ಕೃಷ್ಣ ಲಾಲನೆ- ಪಾಲನೆ ನೋಡಿಕೊಂಡು ಚಿತ್ರ ನಗರಿಯಿಂದ ಅಡುಗೆ ಮನೆಯಲ್ಲಿ ಸೆಟ್ಲ್ ಆಗಿ ಹೋಗಿದ್ದಾರೆ. ಕಳೆದ ಆರು ವರ್ಷಗಳಿಂದ ನಮ್ರತಾ ಸಿನ್ಮಾ ಲ್ಯಾಂಡ್‌ಗೆ ಸರಿಯಾಗಿ ಮುಖ ಮಾಡಿಲ್ಲ. ಮಾಧ್ಯಮಗಳ ಜತೆಯಲ್ಲೂ ಕಣ್ಣು ಮುಚ್ಚಾಳೆಯಾಡುವ ನಮ್ರತಾ ಪತಿರಾಯ ಪ್ರಿನ್ಸ್ ಮಹೇಶ್ ಬಾಬುರ ಕುರಿತು ಸಿಕ್ರೇಟ್ಸ್ ಮಾತನ್ನು ಮಾಧ್ಯಮವೊಂದರ ಮುಂದೆ ಆಡಿದ್ದಾರೆ. ಓವರ್ ಟೂ ನಮ್ರತಾ ಮೇಡಂ..
ಪೋಕಿರಿ ಹುಡುಗ ಮಹೇಶ:
ತೆಲುಗು ಸಿನ್ಮಾದ ಸೂಪರ್‌ಸ್ಟಾರ್ ಮಹೇಶ್‌ಬಾಬು ತುಂಬಾ ಸಿಂಪಲ್ ಮನುಷ್ಯ ಎನ್ನೋದು ನಮ್ರತಾರ ಮಾತು. ಹೈದರಾಬಾದ್‌ನಲ್ಲಿ ನಡೆಯುವ ಪೇಜ್-೩ ಪಾರ್ಟಿಗಳಂತೂ ಅವರಿಬ್ಬರೂ ಕಾಣಿಸಿಕೊಳ್ಳುವುದು ಕಡಿಮೆ. ಮನೆಯಲ್ಲಿ ಗೌತಮ್ ಜತೆ ಇರೋದು ಇಬ್ಬರಿಗೂ ಬಹಳ ಖುಷಿಯಂತೆ. ಪುತ್ರ ಗೌತಮ್ ಎಂದರೆ ಮಹೇಶ್‌ಬಾಬುವಿಗೆ ಬಹಳ ಇಷ್ಟವಂತೆ. ಗೌತಮ್ ಹೇಳಿದ ಎಲ್ಲ ಮಾತುಗಳನ್ನು ಚಾಚು ತಪ್ಪದೇ ಮಹೇಶ್ ಪಾಲಿಸುತ್ತಾರೆ. ಗೌತಮ್ ಈಗಾಗಲೇ ತಂದೆಯ ಹತ್ತಿರ ಕಾರು ಕೇಳಿದ್ದ ಅದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದರು. ಆದರೆ ನಾನು ಬಂದು ಅಡ್ಡ ನಿಂತು ಬಿಟ್ಟೆ ಎನ್ನೋದು ನಮ್ರತಾರ ಮಾತು.
ಮಹೇಶ್ ಚಿತ್ರ ರಂಗವನ್ನು ಅತೀಯಾಗಿ ಪ್ರೀತಿಸುತ್ತಾರೆ. ಅವರಿಗೆ ಕುಟುಂಬಕ್ಕಿಂತ ಮೊದಲು ಚಿತ್ರರಂಗ. ಅದಕ್ಕಾಗಿ ಈಗಲೂ ತೆಲುಗು ಸಿನ್ಮಾದಲ್ಲಿ ಸೂಪರ್ ಸ್ಟಾರ್ ಆಗಿ ನಿಂತಿದ್ದಾರೆ. ವಿವಾಹಕ್ಕಿಂತ ಮೊದಲು ಮಹೇಶ್‌ರ ಬಣ್ಣದ ಬದುಕು ಏರಿಳಿತಗಳಿಂದ ಕೂಡಿತ್ತು. ಆದರೆ ವಿವಾಹದ ನಂತರ ಯಾವಾಗಲೂ ಹಿಟ್ ಸಿನ್ಮಾಗಳನ್ನೇ ಕೊಡುತ್ತಾ ಹೋದರು ಎನ್ನುವುದು ನಮ್ರತಾ ಮಹೇಶ್‌ರ ಬಾಕ್ಸಾಫೀಸ್ ಹಿಟ್‌ಗಳ ಕುರಿತು ಕೊಡುವ ಸಮಜಾಯಿಸಿ.
ನಮ್ರತಾ ಆಕ್ಟಿಂಗ್ ಫೀಲ್ಡ್‌ಗೆ ಮತ್ತೆ ಬರೋದಿಲ್ಲ ಕಾರಣ ಆಕ್ಟಿಂಗ್ ಹಾಗೂ ಕುಟುಂಬ ಎರಡನ್ನು ಒಟ್ಟಾಗಿ ಸಾಗಿಸುವುದು ತುಂಬಾ ಕಷ್ಟವಂತೆ. ಇತ್ತೀಚಿನ ಬಾಲಿವುಡ್ ನಾಯಕಿಯರ ಬಗ್ಗೆ ನಮ್ರತಾರಿಗೆ ಬಹಳ ಬೇಸರವಿದೆ. ಸರಿಯಾಗಿ ಹಿಂದಿ ಬಾರದ ಹುಡುಗಿಯರು ಬಾಲಿವುಡ್‌ನಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ. ಇದು ಸರಿಯಲ್ಲ ಎನ್ನೋದು ನಮ್ರತಾ ಮೇಡಂರ ವಾದ. ಟೋಟಲಿ ಮಹೇಶ್‌ಬಾಬು ಜತೆಯಲ್ಲಿ ಸುಖವಾಗಿ ಬದುಕು ಮಾಡುವುದು ಮಾತ್ರ ನನ್ನ ಬದುಕಿನ ಮುಂದಿರುವ ಕನಸ್ಸು ಎನ್ನುವ ನಮ್ರತಾ ಬಣ್ಣದ ನಗರಿಯಲ್ಲಿ ಮಿಂಚೊಂದನ್ನು ತರಲು ಸಾಧ್ಯವಾಗಿಲ್ಲ ಎನ್ನುವ ಕೊರಗು ಯಾವಾಗಲೂ ಜತೆಯಲ್ಲಿ ಇರುತ್ತದೆ ಎನ್ನುವುದನ್ನು ಹೇಳಲು ಮರೆಯುವುದಿಲ್ಲ.

Saturday, October 29, 2011

ಬಾಕ್ಸಾಫೀಸ್‌ನಲ್ಲಿ ಬಿದ್ದು ಹೋದ ರಾ.ವನ್


ಬಾಲಿವುಡ್‌ನ ಈ ವರ್ಷದ ಅತೀ ನಿರೀಕ್ಷಿತ ಚಿತ್ರ ರಾ.ವನ್‌ನಲ್ಲಿ ಪಾಪ್ ಗಾಯಕ್ ಎಕಾನ್ ‘ಚಮಕ್ ಚಲ್ಲೋ ’ ಎಂದು ಹಾಡಿ ಕುಣಿದಿದ್ದು ಎಲ್ಲರಿಗೂ ಗೊತ್ತು. ಆದರೆ ರಾ.ವನ್ ಬಾಕ್ಸಾಫೀಸ್‌ನಲ್ಲಿ ಪಲ್ಟಿ ಹೊಡೆದು ಬಿಡುವ ಭಯದಿಂದ ಶಾರೂಕ್ ಚಿತ್ರದ ಪೋಸ್ಟ್ ರಿಲೀಸ್‌ಗಾಗಿ ಪಾಪ್ ಗಾಯಕಿ ಲೇಡಿ ಗಾಗಾರನ್ನು ಕರೆದುತಂದಿದ್ದಾರೆ. ಏನ್ ಕತೆ ಅಂತಾ ಕೇಳ್ತೀರಾ..?

ಬಾಲಿವುಡ್‌ನಲ್ಲಿ ಅತೀ ಹೆಚ್ಚು ನಿರೀಕ್ಷೆ ಹುಟ್ಟಿಸಿದ ಚಿತ್ರ ‘ರಾ.ವನ್’ ಗಲ್ಲಾ ಪೆಟ್ಟಿಗೆಯಲ್ಲಿ ಪಲ್ಟಿ ಹೊಡೆಯುವ ಸೂಚನೆ ಕೊಡುವ ರಿಪೋರ್ಟ್ ಕಾರ್ಡ್‌ವೊಂದು ಮೊದಲ ವಾರದ ಆರಂಭದಲ್ಲಿಯೇ ಬಂದು ಬಿಟ್ಟಿದೆ. ರಾ.ವನ್ ಚಿತ್ರ ನೋಡಿ ಬಂದ ಪ್ರೇಕ್ಷಕರು ಚಿತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ವಿಷ್ಯಾವಿಲ್ಲ. ಚಿತ್ರದ ತುಂಬಾ ಓಡಾಡುವ ನವೀನ ತಂತ್ರಜ್ಞಾನದ ಮುಂದೆ ಕತೆ ಪೇಲವ ಅನ್ನಿಸಿದೆ. ಹಾಲಿವುಡ್ ಶೈಲಿಯಲ್ಲಿ ಮೂಡಿ ಬಂದ ಚಿತ್ರ ಬರೀ ಮಕ್ಕಳ ವಯಸ್ಸಿಗೆ ಓಕೆ ಅಂದುಬಿಟ್ಟಿದ್ದಾರೆ.
ಆದರೆ ಕೋಟಿ ಕೋಟಿಗೆ ಮಾರಾಟವಾಗಿರುವ ಚಿತ್ರದ ಸ್ಯಾಟಲೈಟ್ ರೈಟ್ಸ್‌ಗಳು, ಹಾಡುಗಳು, ಪ್ರಾಯೋಜಕತ್ವದಿಂದ ಬಂದ ಹಣವೆಲ್ಲ ಚಿತ್ರ ಬಾಕ್ಸಾಫೀಸ್‌ನಲ್ಲಿ ಬೀಳುವ ಮೊದಲೇ ಶಾರೂಖ್ ಬಾಚಿಕೊಂಡಿದ್ದಾರೆ. ಚಿತ್ರ ಬಿಡುಗಡೆ ಕಂಡ ನಂತರ ಚಿತ್ರದ ಪ್ರಮೋಶನ್‌ಗಾಗಿ ರಾ.ವನ್ ಚಿತ್ರದ ಸೂಪರ್ ಹೀರೋಗಳನ್ನು ಹೋಲಿಕೆಯಾಗುವ ಅಟಿಕೆ ಸಾಮಗ್ರಿಗಳನ್ನು ತಂದು ಮಾರುಕಟ್ಟೆಗೆ ಸುರಿದು ಬಿಟ್ಟಿರುವ ಶಾರೂಖ್‌ಗೆ ಈಗ ಚಿತ್ರ ಓಡುತ್ತದೋ ಎನ್ನುವ ಭಯ ಹುಟ್ಟಿದೆ.
ಚಿತ್ರದಲ್ಲಿ ಕರೀನಾ, ಅರ್ಜುನ್ ರಾಂಪಾಲ್ ನಟನೆಯ ವಿಚಾರದಲ್ಲಿ ಬಹಳಷ್ಟು ಸುಧಾರಣೆಯಾಗಿದೆ ಎನ್ನುವ ಅಂಶ ಬೆಳಕಿಗೆ ಬರುವ ಜತೆಯಲ್ಲಿ ಪಾಪ್ ಗಾಯಕ ಎಕಾನ್‌ರ ‘ಚಮಕ್ ಚಲ್ಲೋ’ ಹಾಡೊಂದು ಪದೇ ಪದೇ ಕೇಳುವಂತೆ ಮಾಡುತ್ತಿದೆ. ಶಾರೂಖ್‌ನ ಸೂಪರ್ ಹೀರೋ ಪಾತ್ರ ಮಕ್ಕಳ ವಲಯದಲ್ಲಿ ಬಹಳಷ್ಟು ಕ್ರೇಜ್ ಹುಟ್ಟಿಸಿದೆ. ಚಿತ್ರದಲ್ಲಿ ಒಂದು ಉತ್ತಮ ಕತೆ ಮಿಸ್ ಆಗಿರುವುದು ಕೇವಲ ವಿಡಿಯೋ ಗೇಮ್‌ನಿಂದ ಹೊರ ಬರುವ ಪಾತ್ರದಿಂದ ಚಿತ್ರ ನಡೆಯುವ ವಿಚಾರದಲ್ಲಿ ಪ್ರೇಕ್ಷಕರು ಚಿತ್ರದ ಮೇಲೆ ಮುನಿಸು ತೋರಿಸಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ಶಾರೂಖ್ ಖಾನ್‌ರ ಟೇಬಲ್‌ಗೆ ಬಂದು ಬಿಟ್ಟಿದೆ.
ರೆಡ್‌ಚಿಲ್ಲೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡ ಅತೀ ಹೆಚ್ಚು ೧೭೫ ಕೋಟಿ ರೂ. ಬಜೆಟ್‌ನ ರಾ.ವನ್ ಚಿತ್ರ ಬಿದ್ದು ಹೋಗುವ ಮುನ್ನ ಶಾರೂಖ್ ಬಾಕ್ಸಾಫೀಸ್‌ನಲ್ಲಿ ಚಿತ್ರವನ್ನು ಏನಾದರೂ ಮಾಡಿ ಗೆಲ್ಲಿಸಿ ಬಿಡಬೇಕೆನ್ನುವ ಹಟಕ್ಕೆ ಬಿದ್ದು ಬಿಟ್ಟಿದ್ದಾರೆ. ಅದಕ್ಕಾಗಿ ಚಿತ್ರದ ಪ್ರಮೋಶನ್‌ಗಾಗಿ ಮತ್ತೆ ಕೆಲವು ಕೋಟಿ ರೂ. ಸುರಿಯುವ ನಿರ್ಧಾರ ಕೈಗೊಂಡಿದ್ದಾರೆ ಎನ್ನುವುದು ಅವರ ಆಪ್ತ ವಲಯದಿಂದ ಬಂದ ಮಾಹಿತಿ. ಎಕಾನ್‌ರ ಹಾಡು ಯಾವ ರೀತಿಯಲ್ಲಿ ರಾ.ವನ್ ಚಿತ್ರದ ಓಟಕ್ಕೆ ನೆರವು ನೀಡುತ್ತಿದೆಯೋ ಅದರಂತೆ ಚಿತ್ರ ಬಿಡುಗಡೆಯ ನಂತರ ಅದರ ಓಡಾಟಕ್ಕೆ ನೆರವು ನೀಡಲು ಇನ್ನೊಬ್ಬ ಪಾಪ್ ಗಾಯಕಿ ಲೇಡಿ ಗಾಗಾರನ್ನು ಹೊತ್ತು ತರುವ ಯೋಜನೆಯೊಂದು ಬಾಲಿವುಡ್‌ನಲ್ಲಿ ನಡೆಯುತ್ತಿದೆ.
ಎಕಾನ್ ಹಾಡಿದ ‘ಚಮಕ್ ಚಲ್ಲೋ’ ಹಾಡನ್ನು ಲೇಡಿ ಗಾಗಾ ಚಿತ್ರ ಬಿಡುಗಡೆಯಾದ ನಂತರ ಹಾಡಲಿದ್ದಾರೆ. ಅದಕ್ಕಾಗಿ ಶಾರೂಖ್ ಹಾಗೂ ಲೇಡಿ ಗಾಗಾ ಒಂದು ಸುತ್ತಿನ ಮಾತುಕತೆಯನ್ನು ಮುಗಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಸಂಗೀತ ನಿರ್ದೇಶಕರಾದ ವಿಶಾಲ್ ಶೇಖರ್ ಲೇಡಿ ಗಾಗಾರಿಗೆ ಟ್ಯೂನ್‌ವೊಂದನ್ನು ರೆಡಿ ಮಾಡಿಕೊಂಡು ನಿಂತಿದ್ದಾರೆ ಎನ್ನುವ ಸುದ್ದಿ ಹರಡಿಕೊಂಡಿದೆ. ಚಿತ್ರದ ನಿರ್ದೇಶಕ ಅನುಭವ್ ಸಿನ್ಹಾ ಈ ಹಾಡನ್ನು ಚಿತ್ರದಲ್ಲಿ ಸೇರಿಸಿಕೊಳ್ಳುವ ನಿರ್ಧಾರಕ್ಕೂ ಬಂದು ನಿಂತಿದ್ದಾರೆ. ಅಂದಹಾಗೆ ಎರಡು- ಮೂರು ವಾರದಲ್ಲಿ ರಾ.ವನ್ ಚಿತ್ರದ ಪ್ರಮೋಶನಲ್ ಹಾಡಿನಲ್ಲಿ ಲೇಡಿ ಗಾಗಾ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿ ಬೆಳೆದು ನಿಂತಿದೆ. ಆದರೆ ಇಬ್ಬರ ಡೇಟ್ಸ್‌ಗಳು ಹೊಂದಾಣಿಕೆಯಾಗದ ಕಾರಣ ಈ ಹಾಡು ಚಿತ್ರದಲ್ಲಿ ಬರಲು ಕೊಂಚ ಟೈಮ್ ಹಿಡಿಯುವ ಚಾನ್ಸು ಇದೆ ಎನ್ನುವುದು ಅನುಭವ್‌ರ ಮಾತು. ರಾ.ವನ್ ಚಿತ್ರ ಲೇಡಿ ಗಾಗಾರ ಹಾಡಿನ ಮೂಲಕವೇ ಹಿಟ್ ಆಗುತ್ತೋ ಕಾದು ನೋಡಬೇಕು ಅಲ್ವಾ..?

Monday, October 24, 2011

ಕರಾವಳಿಯಲ್ಲಿ ನಂದಿನಿ ಮಾಯ !


ನಂದಿನಿ ಅವಳು ನಮ್ಮವಳು ಎನ್ನದ ಕರಾವಳಿಗರಿಲ್ಲ. ಕನಕಗಿರಿಯಿಂದ ಹಿಡಿದು ಸಸಿಹಿತ್ಲುವಿನ ತನಕ ಅಂಕುಡೊಂಕು ವೈಯಾರದಿಂದ ಓಡಾಡಿಕೊಂಡಿರುವ ನಂದಿನಿ ಭವಿಷ್ಯದ ಪುಟದಲ್ಲಿ ಮರೆಯಾಗಿ ಹೋಗುತ್ತಾಳಾ..? ನಂದಿನಿಯ ಓಡಾಟಕ್ಕೆ ಧಕ್ಕೆ ಮಾಡಿದವರಾರು..? ಈ ಪ್ರಶ್ನೆಗೆ ಉತ್ತರದ ಹುಡುಕಾಟ ಇಲ್ಲಿ ನಡೆದಿದೆ.

ಸರಾಗವಾಗಿ ಹರಿದಾಡುವ ಒಂದು ನದಿ ಹಲವು ನಾಗರಿಕತೆಯ ಉಗಮಕ್ಕೆ ಕಾರಣ ಎನ್ನುವ ಮಾತನ್ನು ಇತಿಹಾಸದ ನೂರಾರು ಪುಟಗಳು ಬಾಯಿ ಬಡಿದುಕೊಂಡು ಹೇಳುತ್ತಿದೆ. ದೇಶದ ಬಹುತೇಕ ನಾಗರಿಕತೆಗಳು ನದಿ ತಟದಲ್ಲಿ ಬೆಳೆದು, ವಿನಾಶ ಹಾದಿಯನ್ನು ಹಿಡಿದುಕೊಂಡ ಉದಾಹರಣೆಗಳಿವೆ. ಇಂತಹವುಗಳ ನಡುವೆ ಕರಾವಳಿಯ ನಂದಿನಿ ಬಂದು ನಿಂತುಬಿಟ್ಟಿದ್ದಾಳೆ. ಕರಾವಳಿಯ ಪುಟ್ಟ ನದಿ ನಂದಿನಿಯ ಅಧ್ಯಾಯ ಕೊನೆಗೊಳ್ಳುತ್ತದೆ ಎನ್ನುವ ಭಯ ಈಗ ದಟ್ಟವಾಗಿ ಹುಟ್ಟಿಕೊಂಡಿದೆ.
ಅಂದಹಾಗೆ ಇಲ್ಲಿ ಒಂದು ಭವ್ಯವಾದ ನಾಗರಿಕತೆ ಎದ್ದು ನಿಂತಿಲ್ಲ. ಆದರೂ ಪ್ರತಿನಿತ್ಯ ಸಾವಿರಾರು ಮಂದಿ ನಂದಿನಿಯ ಕೃಪಾಕಟಾಕ್ಷದಿಂದ ಬದುಕು ಕಟ್ಟುತ್ತಿದ್ದಾರೆ. ನಂದಿನಿ ನದಿ ಕಟೀಲು ದೇವಸ್ಥಾನದ ಉಗಮಕ್ಕೆ ಕಾರಣವಾದರಿಂದ ಅವಳಿಗೊಂದು ಪ್ರತ್ಯೇಕವಾದ ಗೌರವ ಭಾವನೆ ಕರಾವಳಿಗರ ಮನಸ್ಸಿನಲ್ಲಿದೆ.
೪೦ ಕಿ.ಮೀ.. ಈಗಿನ ಮಿಜಾರುವಿನ ಕನಕಬೆಟ್ಟುವಿನ ನಾಗಬನವೊಂದರ ಸಮೀಪ ಪುಟ್ಟ ಕಾಡಮಧ್ಯೆ ನೀರ ಒಸರು ಕಾಣುತ್ತದೆ. ಇಲ್ಲೇ ನಂದಿನಿ ನದಿ ಉಗಮವಾಯಿತು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಅಲ್ಲಿಂದ ದೊಡ್ಡದಾಗುತ್ತಾ ಮೂಚ್ಚುರು, ಕಟೀಲು, ಎಕ್ಕಾರು, ಶಿಬರೂರು, ಚೇಳಾರು, ಪಾವಂಜೆಗಳ ಮೂಲಕ ಹಾದು ಸಸಿಹಿತ್ಲು, ಚಿತ್ರಾಪಿನಲ್ಲಿ ಶಾಂಭವಿ ನದಿಯೊಂದಿಗೆ ಹರಿಯುವ ನಂದಿನಿ ಕಡಲಿಗೆ ಸೇರಿ ಮುಕ್ತಿ ಕಾಣುತ್ತಾಳೆ.
ನಂದಿನಿ ಎಂಬ ಜೀವ ಜಲ:
ಒಂದು ಲೆಕ್ಕಚಾರದ ಪ್ರಕಾರ ಕಟೀಲಿನಿಂದ ಹದಿನಾರು ಮೈಲು ದೂರದಲ್ಲಿ ಹುಟ್ಟಿ ಹದಿನಾರು ಮೈಲುಗಳ ಬಳಿಕ ಸಮುದ್ರ ಸೇರುತ್ತದೆ. ಅಂದರೆ ನದಿಯ ಉದ್ದ ಬರೋಬರಿ ಮೂವತ್ತೆರಡು ಮೈಲುಗಳು. ಸಣ್ಣ ನೀರಾವರಿ ಇಲಾಖೆಯ ಮಾಹಿತಿಯಂತೆ ನಂದಿನಿ ಉದ್ದ ೪೦ ಕಿ.ಮೀ. ಜಲಾನಯನ ಇಲಾಖೆಯ ಪ್ರಕಾರ ನದಿಯ ಜಲಾಯನದ ವ್ಯಾಪ್ತಿ ೯೧೧೨ ಹೆಕ್ಟೇರ್ ಪ್ರದೇಶ. ಮುಚ್ಚೂರು, ಮೂಡುಪೆರಾರ, ಬಡಗ ಎಡಪದವು, ಪೆರ್ಮುದೆ, ಎಕ್ಕಾರು, ಮೆನ್ನಬೆಟ್ಟು, ಬಜಪೆ, ಸೂರಿಂಜೆ, ಚೇಳಾಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ನದಿ ಹರಿದು ಹೋಗುತ್ತದೆ.
ನದಿಗೆ ಕನಕಬೆಟ್ಟು, ಪಿಜಿನಬೆಟ್ಟು, ಒಂಟಿಮಾರು,ಗುಂಡಾವು,ನೀರ್‌ಕೆರೆ, ಮುಚ್ಚೂರು ಕಾನ, ಕಾಯರ್‌ಮುಗೇರ್, ಮುಚ್ಚೂರು ಕೊಂಠಿಕಟ್ಟ, ಮಚ್ಚಾರು, ನಿಡ್ಡೋಡಿ, ಅಜಾರು ಜಲಕದ ಕಟ್ಟೆ, ಕಟೀಲು,ಪರಕಟ್ಟ, ಎಕ್ಕಾರು ಕಂಬಳಪದವು, ಶಿಬರೂರು, ಪುಚ್ಚಾಡಿ, ಸೂರಿಂಜೆ, ಚೇಳಾಯರುಗಳಲ್ಲಿ ರೈತರು ಕಟ್ಟಿದ ಕಟ್ಟಗಳು, ಇಲಾಖೆಗಳು ಕಟ್ಟಿದ ಕಿಂಡಿ ಅಣೆಕಟ್ಟು, ಉಪ್ಪು ನೀರಿನ ತಡೆಗೆ ಅಣೆಕಟ್ಟುಗಳಿವೆ. ಒಂದೂವರೆ ಸಾವಿರ ಎಕರೆಗಳಿಗಿಂತಲೂ ಹೆಚ್ಚು ಕೃಷಿ ಭೂಮಿಗಳಿಗೆ ಈ ಕಟ್ಟಗಳು ನೀರಾಶ್ರಯ ನೀಡುತ್ತದೆ.
ಹಾಡು ಮಿಜಾರು ವಿಷ್ಣು ಮೂರ್ತಿ, ಕಾಂಬೆಟ್ಟು ಸೋಮನಾಥೇಶ್ವರ, ಮುಚ್ಚೂರು ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ನಂದಬೆಟ್ಟು ಆಲಡೆ, ಸುರಗಿರಿ ಮಹಾಲಿಂಗೇಶ್ವರ, ಅತ್ತೂರು ಬೈಲು ಮಹಾಗಣಪತಿ ಮಂದಿರ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನ, ಪಾವಂಜೆ ಮಹಾಲಿಂಗೇಶ್ವರ, ಸಸಿಹಿತ್ಲು ಸಾರಂತಾಯ ಗರಡಿ, ಹೊಯಿಗೆಗುಡ್ಡೆ ಉಮಾಮಹೇಶ್ವರ ದೇವಸ್ಥಾನಗಳು ಸೇರಿದಂತೆ ಅನೇಕ ನಾಗಬನಗಳು, ದೈವ, ದೇವಸ್ಥಾನಗಳು ಈ ನದಿಯ ತಟದಲ್ಲಿದೆ.
ಯಾರಿಗೆ ಹೇಳೋದು ಪ್ರಾಬ್ಲಂ:
ಅಂದಹಾಗೆ ನಂದಿನಿಯಲ್ಲಿ ಈಗ ಸಮಸ್ಯೆಗಳು ಕಾಣಲು ಆರಂಭವಾಗಿದೆ. ಪಾವಂಜೆ,ಚಿತ್ರಾಪು, ಕೊಳವೈಲು, ಸಸಿಹಿತ್ಲು, ಮುಂಡ ಸೇರಿದಂತೆ ಕೆಲವು ಭಾಗಗಳಲ್ಲಿ ಅರಣ್ಯ ಇಲಾಖೆಯವರು ನೆಟ್ಟ ಖಾಂಡ್ಲಾ ಗಿಡಗಳು ನದಿಯ ಹರಿವನ್ನು ಬದಲಾಯಿಸಲು ಹೊರಟಿದೆ.
ನದಿಯಲ್ಲಿ ತುಂಬಿಕೊಂಡಿರುವ ಹೂಳು ನದಿಯ ಆಳವನ್ನು ಕಡಿಮೆ ಮಾಡುತ್ತಾ ಬಂದಿದೆ. ನದಿ ಭೂಮಿ ಅತ್ರಿಕ್ರಮಣ ಸಮಸ್ಯೆಯಿಂದ ನಂದಿನಿ ತನ್ನ ಹರಿವಿಕೆಯ ಪಥವನ್ನು ಮುಂಡದಲ್ಲಿ ಬದಲಾಯಿಸಿಕೊಂಡಿದೆ. ನಂದಿನಿಯ ಓಡಾಟದ ಪ್ರದೇಶಗಳಲ್ಲಿ ನದಿಯನ್ನು ಕಟ್ಟಿಹಾಕುವ ಪ್ರಯತ್ನಗಳು ನಿರಂತರವಾಗಿ ಮುಂದುವರಿದರ ಪಲವಾಗಿ ನಂದಿನಿಯ ಭವಿಷ್ಯ ಕತ್ತಲಿನಲ್ಲಿ ಮುಳುಗಿದೆ.
ನದಿ ಭೂಮಿ ಅತಿಕ್ರಮಣ, ಖಾಂಡ್ಲಾ ಗಿಡಗಳ ತೊಂದರೆ, ನದಿಯ ಹೂಳೆತ್ತಲು ಇರುವ ಸಮಸ್ಯೆಗಳು ನಂದಿನಿಯ ಭವಿಷ್ಯ ಮುಂದಿನ ಕೆಲವು ವರ್ಷಗಳಲ್ಲಿ ಮುಗಿದು ಹೋಗುತ್ತದೆ ಎನ್ನುವುದು ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷ ಮಹಾಬಲ ಸಾಲ್ಯಾನ್ ಅವರ ಮಾತು. ಅವರು ಹೇಳುವಂತೆ ‘ ನದಿ ಭೂಮಿ ಅತಿಕ್ರಮಣ ಮಾಡುವ ಕುರಿತು ಈಗಾಗಲೇ ಸಂಬಂಧಪಟ್ಟ ಇಲಾಖೆಯ ಮುಂದೆ ದೂರು ಕೊಟ್ಟಿದ್ದೇವೆ. ಖಾಂಡ್ಲಾ ಗಿಡಗಳನ್ನು ತೆಗೆಯುವಂತೆ ಈ ಮೊದಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಆದರೂ ಅರಣ್ಯ ಇಲಾಖೆ ಅದನ್ನು ಗಮನಕ್ಕೆ ತಂದುಕೊಂಡಂತೆ ಇಲ್ಲ. ಈ ಖಾಂಡ್ಲಾದಿಂದ ಅಲ್ಲಿಯೇ ಕಸಕಡ್ಡಿ, ಮಣ್ಣು ಸೇರಿ ಪ್ರತ್ಯೇಕವಾದ ಗುಡ್ಡೆಗಳು ನದಿಯಲ್ಲಿ ನಿರ್ಮಾಣಗೊಂಡಿದೆ. ಇದು ನಂದಿನಿ ನಿರಂತರ ಓಡಾಟಕ್ಕೆ ಬ್ರೇಕ್ ಕೊಟ್ಟಿದೆ ಅನ್ನೋ ದು ಅವರ ಮಾತು.
ಹೂಳು ನಂದಿನಿಯಲ್ಲಿ ಸಧ್ಯಕ್ಕೆ ಉದ್ಭವಿಸಿರುವ ಸಮಸ್ಯೆ. ಈ ಹೂಳಿನಿಂದ ನಂದಿನಿಯ ಆಳ ಕಡಿಮೆಯಾಗುತ್ತಿದ್ದಂತೆ ನದಿಯಲ್ಲಿ ಓಡುವ ನೀರು ಅಕ್ಕಪಕ್ಕದ ಕೃಷಿ ಭೂಮಿಯಲ್ಲಿ ಓಡುತ್ತಿದೆ. ಬೇಸಿಗೆಯಲ್ಲಿ ನಂದಿನಿ ಬರ ಪೀಡಿತಳಂತೆ ಕಂಡರೆ ಮಳೆಗಾಲದಲ್ಲಿ ಉಕ್ಕಿಬಿಕ್ಕಿ ಹರಿಯುತ್ತಾಳೆ. ನಂದಿನಿ ಉಕ್ಕಿ ಹರಿಯುವುದರಿಂದ ಅಕ್ಕಪಕ್ಕದ ಕೃಷಿ ಭೂಮಿಯಲ್ಲಿ ನೀರು ತುಂಬಿಕೊಳ್ಳುತ್ತದೆ.
ಸರಕಾರಿ ಲೆಕ್ಕಚಾರದ ಪ್ರಕಾರ ನದಿಯ ಹೂಳೆತ್ತಲು ಯಾವುದೇ ಅನುದಾನವಿಲ್ಲ. ಆದರೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನದಿಯ ಹೂಳೆತ್ತಲು ಅವಕಾಶವಿದೆ. ಆದರೆ ಸಂಬಳದ ಆಧಾರದಲ್ಲಿ ಯೋಜನೆ ನಡೆಯುವುದರಿಂದ ಯಾರು ಕೂಡ ಮುಂದೆ ಬರಲು ಒಪ್ಪುತ್ತಿಲ್ಲ. ಜಿಲ್ಲೆಯ ನದಿಗಳಲ್ಲಿರುವ ಹೂಳನ್ನು ತೆಗೆಯಲು ಪ್ರತ್ಯೇಕವಾದ ಅನುದಾನವೊಂದನ್ನು ಸರಕಾರ ಇಟ್ಟಿರಬೇಕು ಎನ್ನೋದು ಮಹಾಬಲ ಸಾಲ್ಯಾನ್‌ರ ಅಭಿಮತ.
ಇದು ಬರೀ ನಂದಿನಿಯ ಎಂಡ್ ಪಾಯಿಂಟ್ ಮಾತು. ಆದರೆ ನದಿಯ ಆರಂಭದಲ್ಲೂ ಸಮಸ್ಯೆಗಳಿವೆ. ಕಟೀಲಿನ ಮೂಲಕ ಹರಿಯುವ ನಂದಿನಿಯಲ್ಲಿ ಅಪಾರ ಪ್ರಮಾಣದಲ್ಲಿ ಹೋಟೆಲ್ ತ್ಯಾಜ್ಯಗಳನ್ನು ಬಿಡಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಳೆಯ ದೇವರ ಪೋಟೋಗಳ ಸಮೇತ, ಪ್ಲಾಸ್ಟಿಕ್ ಲಕೋಟೆಗಳನ್ನು ತಂದು ನೀರಿನಲ್ಲಿ ಬಿಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಕಟೀಲಿನಲ್ಲಿ ನಂದಿನಿಯ ಹೂಳೆತ್ತುವ ಸಂದರ್ಭ ಈ ತ್ಯಾಜ್ಯಗಳು ಕಾಣಿಸಿಕೊಂಡಿತ್ತು !
ಕೇಳ್ರೋಪ್ಪೋ ನದಿ ಪುರಾಣ
ಭೂಮಿಯಲ್ಲಿ ಹನ್ನೆರಡು ವರ್ಷಗಳ ಕಾಲ ಭೀಕರ ಬರಗಾಲ. ಎಲ್ಲೆಲ್ಲೂ ಜನರ ಹಾಹಾಕಾರ. ಇದರಿಂದ ನೊಂದ ಮುನಿ ಜಾಬಾಲಿ ಯಜ್ಞ ಮಾಡಬೇಕೆಂದು ಯೋಚಿಸಿಕೊಂಡು ಕಾಮಧೇನುವನ್ನು ತರಲು ದೇವಲೋಕಕ್ಕೆ ಪ್ರಯಾಣ ಬೆಳೆಸಿದ. ಮುನಿ ಜಾಬಾಲಿಯ ವಿನಂತಿಗೆ ಸ್ಪಂದಿಸಿದ ಸುರಪಾಲ, ಕಾಮಧೇನು ವರುಣಲೋಕಕ್ಕೆ ಹೋಗಿರುವಳೆಂದೂ, ಆಕೆಯ ಮಗಳಾದ ನಂದಿನಿಯನ್ನು ಕಳುಹಿಸಿಕೊಡುವುದಾಗಿ ಹೇಳಿಕೊಂಡನು. ಅದರಂತೆ ನಂದಿನಿಯನ್ನು ಕರೆದು, ‘ಭೂಲೋಕಕ್ಕೆ ಹೋಗಿ ಜನರ ಕಷ್ಟವನ್ನು ಹೋಗಲಾಡಿಸು’ ಎಂದನು.
ನಂದಿನಿಯಾದರೋ ಅಜ್ಞಾನಕ್ಕೊಳಗಾಗಿ ಸ್ವಾರ್ಥ ಪ್ರಪಂಚಕ್ಕೆ ಬರಲಾರೆನೆಂದು ಹೇಳಿ ಮಾನವಲೋಕವನ್ನು ನಿಂದಿಸಿದಳು. ಒಡನೆ ಕೋಪಗೊಂಡ ಮುನಿ ಜಾಬಾಲಿ ಭೂಮಿಯಲ್ಲಿ ನದಿಯಾಗಿ ಜನ್ಮ ತಾಳು ಎಂದು ಶಪಿಸಿದನು. ಮಾಘ ಶುದ್ಧ ಪೂರ್ಣಿಮಾ ದಿನದಂದು ಕಾಂಚನಗಿರಿಯಲ್ಲಿ(ಕನಕಗಿರಿ) ನದಿಯಾಗಿ ಹುಟ್ಟಿ ಹರಿದು ಪಡುಗಡಲನ್ನು ಸೇರುವಳು ಎನ್ನುವ ಕತೆಯೊಂದು ಪುರಾಣದಲ್ಲಿ ಓಡಾಡಿಕೊಂಡಿದೆ.
ನಂದಿನಿಯಿಂದ ಕರೆಂಟು !
ಕಟೀಲು ಶ್ರೀದುರ್ಗಾಪರಮೇಶ್ವರಿ ದೇಗುಲದ ಸುತ್ತಲೂ ಹರಿಯುವ ನಂದಿನಿ ನದಿಯಲ್ಲಿ ೨೫ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯೊಂದು ಸುದ್ದಿಯಲ್ಲಿದೆ. ನಂದಿನಿ ಹತ್ತು ತಿಂಗಳ ಮಟ್ಟಿಗೆ ಸರಾಗವಾಗಿ ಹರಿಯುವ ಕಾರಣ ಕಟೀಲು ದೇವಸ್ಥಾನಕ್ಕೆ ವಿದ್ಯುತ್ ಪೂರೈಕೆ ಮಾಡಬಹುದು ಎನ್ನೋದು ಜಿ.ಕೆ. ರತ್ನಾಕರ್ ಅವರ ಹೇಳಿಕೆ. ಈಗಾಗಲೇ ೨೭೭ ಕಡೆಗಳಲ್ಲಿ ಜಲ ವಿದ್ಯುತ್ ಘಟಕಗಳನ್ನು ಸ್ಥಾಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಹೇಳುವಂತೆ ಸುಮಾರು ನೂರು ಮೀಟರ್ ದೂರದಲ್ಲಿರುವ ಕುದ್ರು ಸಮೀಪ ಮತ್ತೊಂದು ಕಿಂಡಿ ಅಣೆಕಟ್ಟು ಕಟ್ಟಿ ಅಲ್ಲಿಂದ ನೀರನ್ನು ಪೈಪ್ ಮೂಲಕ ವೇಗವಾಗಿ ಹರಿಸಿದರೆ ೪ತಿಂಗಳ ಕಾಲ ಒಂದು ಮೆಗಾವ್ಯಾಟ್‌ನಷ್ಟೂ ವಿದ್ಯುತ್ ಉತ್ಪಾದನೆ ಮಾಡಬಹುದು. ಅಣೆಕಟ್ಟಿನ ೩-೪ ಕಿಂಡಿಗಳಲ್ಲಿ ಟರ್ಬನೈರ್‌ನಿಂದ ನೂರು ಕೆವಿಯಷ್ಟು ವಿದ್ಯುತ್‌ನ್ನು ಆರು ತಿಂಗಳ ಕಾಲ ನಿರಂತರವಾಗಿ ಪಡೆಯಬಹುದು.