Monday, September 5, 2011

ಅಡುಗೆ ಮನೆಯಲ್ಲಿ ಆಶಾಜೀ


ಗಾನಕೋಗಿಲೆ ಆಶಾ ಬೊಂಸ್ಲೆ ಎಲ್ಲರಿಗೂ ಗೊತ್ತು. ಅವರ ಹಾಡುಗಳನ್ನು ಕೇಳದವರು ಈ ಭೂಮಿ ಮ್ಯಾಲೆ ಹುಟ್ಟಿರಲು ಸಾಧ್ಯವಿಲ್ಲ ಅನ್ನೋದು ಗೊತ್ತು. ಅಂದಹಾಗೆ ಸೆ.೮ರಂದು ಅವರು ಹುಟ್ಟಿದ ದಿನ. ಜತೆಯಲ್ಲಿಯೇ ಆಶಾಜೀ ಗಾಯಕಿ ಇಲ್ಲದೇ ಹೋಗಿದ್ದಾರೆ ಏನಾಗುತ್ತಿದ್ದರು ಎನ್ನುವ ಸಿಕ್ರೇಟ್ ಮಾತನ್ನು ರಿವೀಲ್ ಮಾಡುವ ದಿನ ಕೂಡ ಹೌದು.

ಗಾನ ಕೋಗಿಲೆ ಅಶಾಜೀಗೆ ಸೆಪ್ಟೆಂಬರ್ ೮ಕ್ಕೆ ಬರ್ತಿ ೭೮ರ ಹರೆಯ.
ಅರೇ...ಈ ಮಾತನ್ನು ಯಾರು ಕೂಡ ಒಪ್ಪಲು ಸಾಧ್ಯವಿಲ್ಲ. ಎಲ್ಲಾದರೂ ಸುಳ್ಳು ಹೇಳುತ್ತಿರಬಹುದು ಎಂದು ಕುಟುಕಿ ಕೇಳುವ ಅವರ ಸಾವಿರಾರು ಅಭಿಮಾನಿಗಳನ್ನು ಕಾಣಬಹುದು. ಅದೇ ಆಶಾ ಬೊಂಸ್ಲೆ ಅವರು ಬೆಳೆಸಿಕೊಂಡು ಬಂದಿರುವ ಇಮೇಜು. ಈಗಲೂ ಅವರಿಗೆ ಸಂಗೀತ ಎಂದರೆ ಪಂಚಪ್ರಾಣ. ಬಾಲಿವುಡ್ನ ಹತ್ತಾರು ದೈತ್ಯ ಸಂಗೀತ ನಿರ್ದೇಶಕರ ಗರಡಿಯಲ್ಲಿ ಪಳಗಿದ ಆಶಾಜೀ ಬರೀ ಹಾಡಿನ ಮೂಲಕವಷ್ಟೇ ಅಭಿಮಾನಿಗಳಿಗೆ ಹತ್ತಿರವಾಗಲಿಲ್ಲ. ಆಶಾ ತನ್ನ ಹಾಡಿನ ಮೂಲಕ ನಾಯಕಿಯರಿಗೂ ಜೀವದಾನ ಮಾಡಿದ್ದಾರೆ. ಬಾಲಿವುಡ್ನ ನಾಯಕಿಯರಾದ ರೇಖಾ, ಹೆಲೆನ್, ಆಶಾ ಪರೇಕ್, ಜೀನತ್ ಅಮಾನ್ನಂತಹ ಹತ್ತಾರು ನಟಿಮಣಿಗಳಿಗೆ ಹೊಸ ಲುಕ್ ಕೊಡುವಲ್ಲಿ ಆಶಾಜೀಯ ಹಾಡುಗಳಿವೆ ಎನ್ನೋದು ಬಹಳಷ್ಟು ಅಭಿಮಾನಿಗಳಿಗೆ ಗೊತ್ತಿರಲು ಸಾಧ್ಯವಿಲ್ಲ. ಆದರೆ ಎಲ್ಲ ಹೀರೋಯಿನ್ಗಳಿಗೆ ಆಶಾಜೀಯ ತಾಕತ್ತು ಗೊತ್ತುಂಟು.
ಆಶಾಜೀಯ ಸರಿಸುಮಾರು ಆರು ದಶಕಗಳಿಂದ ಬಾಲಿವುಡ್ ಜಗತ್ತಿನಲ್ಲಿ ಮರೆಯಲಾಗದ ಗಾಯಕಿ. ಬರೀ ಬಾಲಿವುಡ್ ಒಂದರಲ್ಲಿಯೇ ೧೦೦೦ಕ್ಕಿಂತ ಹೆಚ್ಚು ಹಾಡುಗಳು ಹಾಡಿರೋದು ಕೂಡ ಹೆಮ್ಮೆಯ ವಿಷ್ಯಾ. ದೇಶ- ವಿದೇಶದ ನಾನಾ ಭಾಷೆಗಳಲ್ಲಿ ಆಶಾಜೀಯ ಹಾಡುಗಳು ಅಭಿಮಾನಿಗಳನ್ನು ಮೆಚ್ಚಿಸಿದೆ. ಪಾಪ್, ರಾಕ್, ಕ್ಲಾಸಿಕಲ್ ಹೀಗೆ ಎಲ್ಲ ಸಂಗೀತದ ವಿಭಾಗದಲ್ಲೂ ಆಶಾಜೀ ಎತ್ತಿದ ಕೈ. ಈಗಲೂ ಹಳೆಯ ರೆಟ್ರೋ ಸಾಂಗ್ಗಳ ಟಾಪ್ ಟೆನ್ ಪಟ್ಟಿಯಲ್ಲಿ ಆಶಾಜೀ ಹಾಡುಗಳ ಸಂಖ್ಯೆನೇ ಬರೋಬರಿ ಆರು. ಜುವೆಲ್ ಥಿಪ್ ಚಿತ್ರದ ‘ರಾತ್ ಅಖೇಲಿ ಹೈ’, ಮೇರಾ ಸಾಯಾ ಚಿತ್ರದ ‘ ಜುಮ್ಕಾ ಗಿರಾ ರೇ’, ದೇವಾನಂದ್ ಸಾಹೇಬರ ‘ಧಮ್ ಮಾರೋ ಧಮ್’ ಹಾಡಿನಿಂದ ಹಿಡಿದು ಇತ್ತೀಚೆಗೆ ಬಂದ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ರಂಗೀಲಾದ ಹಾಡು, ಲಕ್ಕಿ ಚಿತ್ರದ ‘ಲಕ್ಕಿ ಲಿಪ್ಸ್’ ಮೊಹಬ್ಬತೇ ಚಿತ್ರದ ಹಾಡುಗಳು ಅದರಲ್ಲೂ ಕನ್ನಡದಲ್ಲಿ ತೀರಾ ಇತ್ತೀಚೆಗೆ ಬಂದ ದ್ವಾರ್ಕಿ ನಿರ್ದೇಶನದ ‘ಮತ್ತೆ ಮುಂಗಾರು’ ಹಾಡು ಎಲ್ಲವೂ ಆಶಾಜೀ ಕಂಠ ಧಾರೆಯಿಂದ ಹರಿದು ಬಂದಿದೆ. ಈಗಲೂ ಅಪರೂಪಕ್ಕೊಮ್ಮೆ ಆಲ್ಬಂ, ಸ್ಟೇಜ್ ಶೋಗಳ ಮೂಲಕ ಆಶಾ ಬೊಂಸ್ಲೆ ಸುದ್ದಿಯಾಗುತ್ತಾರೆ.
ಆದರೆ ಅಶಾ ತನ್ನ ಸಹೋದರಿ ಕಮ್ ಗಾಯಕಿ ಲತಾ ಮಂಗೇಶ್ಕರ್ಕ್ಕಿಂತ ಯಾವ ರೀತಿಯಲ್ಲಿ ಭಿನ್ನವಾಗಿ ನಿಲ್ಲುತ್ತಾರೆ ಎಂಬ ಪ್ರಶ್ನೆ ಪದೇ ಪದೇ ಅವರ ಅಭಿಮಾನಿಗಳನ್ನು ಕಾಡುವುದಿದೆ. ಈಗಲೂ ಅಶಾಜೀಯ ಹಾಡುಗಳನ್ನು ಕೇಳಿ ‘ಆಶಾ ಎವರ್ಗ್ರೀನ್ ಗಾಯಕಿ’ ಎಂದು ತಮ್ಮ ಆಪ್ತ ವಲಯದಲ್ಲಿ ಮಾತನಾಡುವವರು ಕಾಣಸಿಗುತ್ತಾರೆ. ಆದರೂ ಆಶಾ ಬೊಂಸ್ಲೆ ಸಂಗೀತದ ಹೊರತಾಗಿ ಏನೂ ಮಾಡುತ್ತಾರೆ ಎನ್ನುವ ಕುತೂಹಲ ಬಹಳಷ್ಟು ಮಂದಿ ಅಭಿಮಾನಿಗಳಿಗೆ ಕಾಡುವುದಿದೆ. ಆಶಾಜೀ ಗಾಯಕಿ ಇಲ್ಲದೇ ಹೋಗಿದ್ದಾರೆ ಏನೂ ಮಾಡುತ್ತಿದ್ದರು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಹಾಡುಗಳ ಜತೆಯಲ್ಲಿ ಕುಟುಕುವುದಿದೆ. ಅಂದಹಾಗೆ ಆಶಾಜೀಯ ಪುತ್ರಿ ವರ್ಷಾ ಬೊಂಸ್ಲೆ ತಮ್ಮ ಬ್ಲಾಗ್ನಲ್ಲಿ ಅಮ್ಮನ ಕುರಿತು ವಿಶಿಷ್ಟವಾದ ಬರಹವೊಂದನ್ನು ಬರೆದಿದ್ದರು. ಆಶಾಜೀಯ ಮಗಳು ವರ್ಷಾ ಪತ್ರಕರ್ತೆ. ಮುಂಬಯಿಯ ‘ಸಂಡೇ ಅಬ್ಸರ್ವರ್’ ಪತ್ರಿಕೆಯಲ್ಲಿ ಪ್ರತಿ ವಾರ ಅಂಕಣ ಬರೆಯುತ್ತಾರೆ.
ಅಮ್ಮನ ಸಿಕ್ರೇಟ್ಸ್ ಮಾತನ್ನು ಬರೆದು ಬರೆದು ಈಗ ಅದನ್ನೇ ಬ್ಲಾಗ್ನಲ್ಲಿ ತುಂಬಿಸಿದ್ದಾರೆ. ಆಶಾಜೀ ತಮ್ಮಲ್ಲಿಯೇ ಬಚ್ಚಿಟ್ಟ ಬಹಳಷ್ಟು ರಹಸ್ಯಗಳನ್ನು ಮಗಳು ವರ್ಷಾ ಬೊಂಸ್ಲೆ ಎಲ್ಲರ ಮುಂದೆ ಇಟ್ಟಿದ್ದಾರೆ. ಅಂದಹಾಗೆ ಆಶಾಜೀ ಗಾಯಕಿ ಅಲ್ಲದೇ ಹೋಗಿದ್ದಾರೆ ಅವರು ಹೋಟೆಲ್ ಉದ್ಯಮಿಯಾಗುತ್ತಿದ್ದರು ಎನ್ನುತ್ತಾರೆ ವರ್ಷಾ. ಆಶಾಜೀ ರೆಕಾರ್ಡಿಂಗ್ ಇಲ್ಲದೇ ಇದ್ದಾಗ ಮನೆಯಲ್ಲಿಯೇ ಇರುತ್ತಿದ್ದರು. ಸಂಗೀತದಷ್ಟೇ ಅವರಿಗೆ ಹೊಸ ರುಚಿಗಳನ್ನು ಹುಡುಕಾಡುವುದರಲ್ಲಿ ಆಸಕ್ತಿಯಂತೆ. ಶಾಮಿ ಕಬಾಬ್, ಸ್ಪೆಶಲ್ ಬಿರಿಯಾನಿ, ಹೈದರಾಬಾದ್ ಬಿರಿಯಾನಿ, ನಾಲ್ಕೈದು ಬಗೆಯ ಪಲಾವ್ ಹಾಗೂ ಬಿರಿಯಾನಿಗಳನ್ನು ತಯಾರಿಸಿ ಮಕ್ಕಳಿಗೆ ಕೊಡುವುದು ಎಂದರೆ ಆಶಾಜೀಗೆ ಬಹಳ ಇಷ್ಟವಾದ ವಿಷಯವಂತೆ ! ಅಪರೂಪಕ್ಕೊಮ್ಮೆ ವೆಜ್ನಲ್ಲೂ ಹೊಸ ರುಚಿಗಳನ್ನು ಹುಡುಕಾಡುತ್ತಾರೆ ಆದರೆ ಕೊನೆಗೆ ನಾನ್ವೆಜ್ ಐಟಂಗಳಲ್ಲಿ ಹೊಸ ರುಚಿಗಳನ್ನು ತೋರಿಸಿ ಮನೆ ಮಂದಿ ಎಲ್ಲರನ್ನು ನಗಿಸಿಬಿಡುತ್ತಾರಂತೆ !!
ಅಂದಹಾಗೆ ಆಶಾಜೀ ವೆಜ್ ಐಟಂಗಳನ್ನು ಯಾಕ್ ಮಾಡ್ತಿಲ್ಲ ಗೊತ್ತಾ..? ಆಶಾಜೀಯ ಮಕ್ಕಳು ತರಕಾರಿಗಳನ್ನು ನೋಡಿದ ಕೂಡಲೇ ಓಡಿ ಹೋಗುತ್ತಾರಂತೆ ! ಮಕ್ಕಳಿಗೆ ಏನೂ ಇಷ್ಟವೋ ಅದನ್ನೇ ಮಾಡಿ ಕೊಡುವುದು ತಾಯಿಯಾದ ನನ್ನ ಕರ್ತವ್ಯ ಎನ್ನುತ್ತಾರೆ ಆಶಾ ಬೊಂಸ್ಲೆ. ‘ದಾಲ್- ಚವಾಲ್’ ಐಟಂಗಳನ್ನು ಕೂಡ ಆಶಾಜೀಯ ಮಕ್ಕಳು ಅಷ್ಟೊಂದು ಇಷ್ಟ ಪಡುವುದಿಲ್ಲವಂತೆ !! ಮಕ್ಕಳಿಗಾಗಿ ಹೊಸ ರುಚಿಯನ್ನು ತೋರಿಸುತ್ತಾ ಆಶಾಜೀ ಸಂಗೀತದಷ್ಟೇ ಅಡುಗೆಯಲ್ಲೂ ಪ್ರಾವೀಣ್ಯತೆಯನ್ನು ಸಂಪಾದಿಸಿಕೊಂಡಿದ್ದಾರಂತೆ. ಅಂದಹಾಗೆ ಆಶಾಜೀ ಬರೀ ಅಡುಗೆ ಮಾಡುತ್ತಾ ಮಕ್ಕಳ ಜತೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಈಗ ಬರೀ ಹೋಟೆಲ್ ಉದ್ಯಮಿಯಾಗುತ್ತಿದ್ದರು ಅಲ್ವಾ..? ಈ ಮೂಲಕ ಭಾರತೀಯ ಸಂಗೀತ ಲೋಕದಲ್ಲೊಂದು ಅಮೂಲ್ಯ ವಜ್ರ ಕಳೆದು ಹೋಗುತ್ತಿತ್ತು. ಅದು ಆಗಲಿಲ್ಲ ಎನ್ನೋದೇ ಗ್ರೇಟ್ ವಿಷ್ಯಾ.

ತಿರುಓಣಂನಲ್ಲಿ ‘ಭಾಮಾ’ಕುಟ್ಟಿ


ಮಲಯಾಳಿಗಳು ವಿಶ್ವದ ಯಾವುದೇ ಮೂಲೆಯಲ್ಲಿ ಇರಲಿ ಅವರಿಗೆ ಓಣಂ ವಿಶೇಷ ಹಬ್ಬ . ಸಿನ್ಮಾಕ್ಕೆ ಬರುವ ಮೊದಲು ಓಣಂಗಾಗಿ ಮನೆಯಲ್ಲಿ ಬಹಳಷ್ಟು ಸಿದ್ಧತೆ ನಡೆಯುತ್ತಿತ್ತು. ಈಗ ಸಿನ್ಮಾದಲ್ಲಿ ಬ್ಯುಸಿ ಇದ್ದರೂ ಕೂಡ ಹಬ್ಬದ ಟೈಮ್ನಲ್ಲಿ ಚಿತ್ರದ ಶೆಡ್ಯುಲ್ಗಳನ್ನು ಚೇಂಜ್ ಮಾಡಿ ಮನೆಯಲ್ಲಿಯೇ ಇದ್ದು ಬಿಡುತ್ತೇನೆ ಎನ್ನುತ್ತಾರೆ ಭಾಮಾ. ಅಂದಹಾಗೆ ತಿರುಓಣಂಗಾಗಿ ಭಾಮಾ ಜತೆಯಲ್ಲಿ ವಿಶೇಷ ಚಾಟ್ ಇಲ್ಲಿದೆ.

ಯಾರನ್ನೋ ಹುಡುಕಾಟದಲ್ಲಿರುವ ಸುಂದರ ನಯನಗಳು, ತುಟಿಯಂಚಿನಲ್ಲಿ ಮಿಂಚಿ ಥಟ್ ಅಂತಾ ಮರೆಯಾಗುವ ನಗು, ವೊದಲ ನೋಟದಲ್ಲೇ ಹೋಮ್ಲಿ ಲುಕ್ಕು ಕೊಡುವ ಮೈಮಾಟ, ಈ ಮೈಮಾಟದ ನಡುವೆಯೇ ಆಗಾಗ ಇಣುಕುವ ಗ್ಲಾಮರ್ ಲುಕ್. ಇವೆಲ್ಲವೂ ಒಟ್ಟಾದಾಗ ಕಾಣುವ ಸುಂದರ ಬೆಡಗಿಯೇ ಭಾಮಾ. ಯಾರು ಈ ಭಾಮಾ? ಎಂದು ನಿಮಗೆ ಗೊತ್ತಾಗದಿದ್ದರೆ ಕನ್ನಡದ ‘ವೊದಲಾ ಸಲ’ ಸಿನಿಮಾವನ್ನು ಒಂದ್ ಸಾರಿ ನೆನಪಿಸಿಕೊಳ್ಳಿ. ಆ ಚಿತ್ರದಲ್ಲಿ ಕ್ಯೂಟ್ ಬೆಡಗಿಯಾಗಿ ಕಾಣಿಸಿಕೊಂಡು ಅದೆಷ್ಟೋ ಮಂದಿ ಕನಸು ಕಾಣುವಂತೆ ಮಾಡಿದ್ದು ಇದೇ ಭಾಮಾ ಮಣಿ. ಈಗ ‘ಒಂದು ಕ್ಷಣದಲಿ’ ಹಾಗೂ ಗಣೇಶ್ ನಾಯಕರಾಗಿರುವ ‘ಶೈಲೂ’ ಸೇರಿದಂತೆ ಮಲಯಾಳಂನ ಎರಡು ಸಿನಿಮಾ. ತಮಿಳು, ತೆಲುಗಿನ ಒಂದೊಂದು ಸಿನ್ಮಾಗಳಲ್ಲಿ ಲೀಡ್ ರೋಲ್ನಲ್ಲಿ ಭಾಮಾ ಮಣಿ ಕಾಣಿಸಿಕೊಳ್ಳಲಿದ್ದಾರೆ. ಕೇರಳದ ಕೋಯಿಕೋಡ್ನ ಸುಂದರ ತಾಣದಲ್ಲಿ ಚಿತ್ರೀಕರಣವಾಗುತ್ತಿರುವ ಮಲಯಾಳಂನ ‘ಸೆವೆನ್ಸ್’ನ ಸೆಟ್ನಲ್ಲಿ ಭಾಮಾ ಲವಲವಿಕೆಯ ಕರೆಗೆ ಸಿಕ್ಕಿ ಬಿದ್ದರು. ಸೆವೆನ್ಸ್ನ ಬ್ಯುಸಿ ಶೆಡ್ಯುಲ್ ನಡುವೆನೂ ಭಾಮಾ ತನ್ನ ಚಿತ್ರ ಬದುಕು ಹಾಗೂ ಕೇರಳದ ದೊಡ್ಡ ಹಬ್ಬ ಓಣಂ ಕುರಿತು ಮುಕ್ತವಾಗಿ ಮಾತಿಗೆ ಇಳಿದು ಹೋದರು.
ಭಾಮಾ ಅಂತಾ ಕರೆದರೆ ಬರೀ ಸಿನ್ಮಾ ಇಂಡಸ್ಟ್ರಿಗೆ ಮಾತ್ರ ಗೊತ್ತಾಗುತ್ತದೆ. ಆದರೆ ಭಾಮಾರನ್ನು ಬಹಳಷ್ಟು ಜನ ಕರೆಯುವ ಹೆಸರು ರೇಖಿತಾ. ಸಿನಿಮಾಕ್ಕೆ ಬಂದ ನಂತರ ಭಾಮಾ ಎಂಬ ಹೆಸರು ಬಂದಿದೆ. ಭಾಮಾ ಮಲಯಾಳಂನಲ್ಲಿ ಬಹುಬೇಡಿಕೆಯ ಸಾಲಿನಲ್ಲಿರುವ ನಟಿ. ವೊದಲ ಚಿತ್ರ ‘ನೈವೇದ್ಯಂ’ನಿಂದ ಹಿಡಿದು ವೊನ್ನೆ ವೊನ್ನೆ ತೆರೆಕಂಡ ‘ಕಾಲೇಜ್ ಡೇಸ್’ ಚಿತ್ರಗಳವರೆಗೂ ಭಾಮಾ ಬೇರೆ ಬೇರೆ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಹೌದು, ಭಾಮಾ ಸಿನಿಮಾರಂಗ ಪ್ರವೇಶಿಸಿದ್ದು ಹೇಗೆ? ಎಂಬ ಪ್ರಶ್ನೆಗೆ ಭಾಮಾಮಣಿ ಒಂದು ಕಥೆ ಹೇಳುತ್ತಾಳೆ. ‘ನಾನು ಟಿವಿಯಲ್ಲಿ ಕಾರ್ಯಕ್ರಮವೊಂದನ್ನು ನಡೆಸಿಕೊಡುತ್ತಿದ್ದೆ. ಆ ಕಾರ್ಯಕ್ರಮ ಕೂಡ ತುಂಬಾ ಜನಪ್ರಿಯವಾಗಿತ್ತು. ಅದೊಂದು ದಿನ ಕಾರ್ಯಕ್ರಮ ನೋಡಿದ ನಿರ್ದೇಶಕ ಲೋಹಿತ್ದಾಸ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದರು. ಅಲ್ಲಿಂದ ನನ್ನ ಫಿಲ್ಮಿಜರ್ನಿ ಆರಂಭವಾಯಿತು’ ಎನ್ನುತ್ತಾಳೆ ಈ ಮಲಯಾಲಿ ಬೆಡಗಿ. ಅಂದಹಾಗೆ, ಭಾಮಾಗೆ ಆ ಲೋಹಿತ್ದಾಸ್ ಅವರೇ ಗಾಡ್ಫಾದರ್.
ಈಗಾಗಲೇ ಭಾಮಾ ನಾಲ್ಕು ಭಾಷೆಗಳಲ್ಲಿ ನಟಿಸಿದಂತಾಗಿದೆ. ಇನ್ನೊಂದು ಭಾಷೆಯಲ್ಲಿ ನಟಿಸಿದರೆ ಭಾಮಾ ಪಂಚಭಾಷಾ ನಟಿ. ತಮಿಳು, ತೆಲುಗಿನಲ್ಲೂ ಭಾಮಾಗೆ ಒಳ್ಳೆಯ ಬೇಡಿಕೆ ಇದೆಯಂತೆ. ಹಾಗಂತ ತನ್ನ ವೊದಲ ಆದ್ಯತೆ ಮಲಯಾಳಂ ಹಾಗೂ ಕನ್ನಡಕ್ಕೆ ಎನ್ನುವುದು ಈಕೆಯ ಮಾತು. ಶ್ರೀದೇವಿ, ಜಯಪ್ರದಾ ಹಾಗೂ ಕಮಲಹಾಸನ್ ಎಂದರೆ ಭಾಮಾಗೆ ಸಖತ್ ಇಷ್ಟವಂತೆ. ಇವರ ಸಿನಿಮಾಗಳನ್ನು ನೋಡಿ, ತನ್ನ ನಟನೆಯಲ್ಲಿ ಏನೆಲ್ಲಾ ಸುಧಾರಿಸಬಹುದೋ ಅದನ್ನು ಮಾಡುತ್ತಾಳಂತೆ.
‘ಸಿನಿಮಾ ಅನ್ನೋದು ನನ್ನ ಉಸಿರು. ಈ ಫೀಲ್ಡ್ನಲ್ಲಿ ತುಂಬಾ ವರ್ಷ ಇರಬೇಕೆಂಬ ಆಸೆಯೊಂದಿಗೆ ಪ್ರತಿ ಸಿನಿಮಾವನ್ನು ಒಪ್ಪಿಕೊಳ್ಳುತ್ತೇನೆ. ಹೀಗಿರುವಾಗ ನನಗೆ ಇಷ್ಟವಾಗದ ಸಿನಿಮಾವನ್ನು ಯಾಕೆ ಒಪ್ಪಿಕೊಳ್ಳಬೇಕು. ಒಂದು ಸಿನಿಮಾದಲ್ಲಿ ನನ್ನ ಪಾತ್ರ ಕೆಟ್ಟದಾಗಿದ್ದರೂ ಅದು ತನ್ನ ಕೆರಿಯರ್ಗೆ ಪೆಟ್ಟು ಕೊಡುತ್ತದೆ. ಅದಕ್ಕಾಗಿ ನಾನು ಆಯ್ಕೆ ವಿಷಯದಲ್ಲಿ ತುಂಬಾ ಚೂಸಿ. ನನಗೆ ನಾನು ಎಷ್ಟು ಸಿನಿಮಾ ಮಾಡಿದ್ದೇನೆ ಅನ್ನೋದು ಮುಖ್ಯವಲ್ಲ. ಮಾಡಿದ ಸಿನಿಮಾಗಳು ಎಂಥವು ಅನ್ನೋದು ಮುಖ್ಯ. ನನಗೆ ಪ್ರೊಫೆಶನಲ್ ನಟಿಯಾಗಿರಲು ಇಷ್ಟ’ ಎಂಬ ಪ್ರಬುದ್ಧ ಉತ್ತರ ಭಾಮಾರಿಂದ ಹೊರ ಬರುತ್ತದೆ.
ಅದು ತವರುಮನೆ:
ಇದು ಪಕ್ಕದ್ಮನೆ ಕನ್ನಡದಲ್ಲಿ ವೊದಲ ಅವಕಾಶ ಸಿಕ್ಕಾಗ ಭಾಮಾ ಸಿಕ್ಕಾಪಟ್ಟೆ ಥ್ರಿಲ್ ಆದರಂತೆ. ಏಕೆಂದರೆ ಮಲಯಾಳಂನಿಂದ ಅದೆಷ್ಟೋ ನಟಿಯರು ಕನ್ನಡಕ್ಕೆ ಬಂದು ಮಿಂಚಿದ್ದಾರೆ, ಒಳ್ಳೊಳ್ಳೆ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗ ತನಗೂ ಕನ್ನಡದಿಂದ ಅವಕಾಶ ಬಂದಾಗ ಭಾಮಾಗೆ ಖುಷಿಯೋ ಖುಷಿಯಂತೆ. ಇದೇ ಕಾರಣದಿಂದ ಕಥೆ ಕೇಳಿದಾಕ್ಷಣ ಭಾಮಾ ನಟಿಸಲು ಒಪ್ಪಿಕೊಂಡರಂತೆ. ‘ಮಲಯಾಳಂ ನನಗೆ ತವರು ಮನೆಯಾದರೆ, ಕನ್ನಡ ಪಕ್ಕದ್ಮನೆ ಇದ್ದಂತೆ. ನಮಗೆ ಪಕ್ಕದ್ಮನೆಯಲ್ಲಿ ತುಂಬಾ ಪ್ರೀತಿ, ಸಲುಗೆ ಇರುತ್ತದೆ. ಅಲ್ಲಿ ಯಾವುದೇ ಭಯವಿರುವುದಿಲ್ಲ. ಅದೇ ರೀತಿ ಕನ್ನಡ ಚಿತ್ರರಂಗ ಕೂಡ ನನಗೆ ತುಂಬಾ ಇಷ್ಟವಾದ ಚಿತ್ರರಂಗ. ಇಲ್ಲಿ ನನಗೆ ಎಲ್ಲವೂ ಕಂಫರ್ಟ್. ಅದೇ ಕಾರಣದಿಂದ ನನಗೆ ಕನ್ನಡವೆಂದರೆ ತುಂಬಾ ಪ್ರೀತಿ. ಮುಂದಿನ ದಿನಗಳಲ್ಲಿ ಕನ್ನಡ ಕಲಿತು ಮಾತನಾಡುತ್ತೇನೆ ನೋಡ್ತಾ ಇರಿ’ ಎಂದು ನಕ್ಕು ಬಿಡುತ್ತಾರೆ ಭಾಮಾ.
ಸಿನಿಮಾ ಎಂದ ಮೇಲೆ ಅಲ್ಲಿ ಗ್ಲಾಮರ್ ಬೇಕೇ ಬೇಕು. ಜತೆ ಜತೆಗೆ ಎಕ್ಸ್ಪೋಸ್ ಕೂಡ. ಕೆಲವು ನಟಿಮಣಿಯರು ಬಣ್ಣದ ಲೋಕದ ಈ ಎರಡಕ್ಕೂ ಸಿದ್ಧರಾಗಿಯೇ ಎಂಟ್ರಿಕೊಟ್ಟಿರುತ್ತಾರೆ. ಇನ್ನು ಕೆಲವರು ಬರೀ ಗ್ಲಾಮರ್ಷ್ಟೇ ಓಕೆ ಅನ್ನುತ್ತಾರೆ. ಭಾಮಾ ಇದರಲ್ಲಿ ಎರಡನೇ ಕೆಟಗರಿಗೆ ಸೇರಿದವಳು. ಈಗಾಗಲೇ ಹೋಮ್ಲಿ ಲುಕ್ಕು ಎಂಬ ಹೆಸರು ಪಡೆದಿರುವ ಭಾಮಾ ಎಕ್ಸ್ಪೋಸ್ ಮಾಡುವುದಿಲ್ಲವಂತೆ. ಅಂತಹ ಚಿತ್ರಗಳು ನನಗೆ ಬೇಕಾಗಿಲ್ಲ ಅನ್ನುತ್ತಾಳೆ. ಹಾಗಂತ ಅಸಹ್ಯವೆನಿಸಿದ ಗ್ಲಾಮರ್ಗೆ ಆಕೆಯ ಅಭ್ಯಂತರವಿಲ್ಲ. ‘ಎಕ್ಸ್ಪೋಸ್ ಮಾಡಲು ನನಗೆ ಇಷ್ಟವಿಲ್ಲ. ಅಸಹ್ಯವೆನಿಸುವಂತೆ ಎಕ್ಸ್ಪೋಸ್ ಮಾಡಿದರೆ ಒಂದಷ್ಟು ಮಂದಿ ಮಾಸ್ ಪ್ರೇಕ್ಷಕರಿಗಷ್ಟೇ ಖುಷಿ ಸಿಗಬಹುದು. ಆದರೆ ಫ್ಯಾಮಿಲಿ ಪ್ರೇಕ್ಷಕರಿಗೆ ಅದು ಇಷ್ಟವಾಗುವುದಿಲ್ಲ. ಹೀಗಿರುವಾಗ ನನಗೆ ಎಕ್ಸ್ಪೋಸ್ ಮಾಡಿ ಹೆಸರು ಮಾಡುವ ಅಗತ್ಯವಿಲ್ಲ. ಆದರೆ ಸಿನಿಮಾಕ್ಕೆ ಬೇಕಾದ ಹಾಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ನಾನು ರೆಡಿ’ ಎನ್ನುವುದು ಭಾಮಾ ಮಾತು.
ಅಂದಹಾಗೆ ಓಣಂ ಕುರಿತು ಮಾತಿಗೆ ಇಳಿದಾಗ ಭಾಮಾ ಹೇಳುವುದಿಷ್ಟು: ನಾವು ಮಲಯಾಳಿಗಳು ವಿಶ್ವದ ಯಾವುದೇ ಮೂಲೆಯಲ್ಲಿ ಇರಲಿ ನಮಗೆ ಓಣಂ ವಿಶೇಷ ಹಬ್ಬ . ಸಿನ್ಮಾಕ್ಕೆ ಬರುವ ಮೊದಲು ಓಣಂಗಾಗಿ ಮನೆಯಲ್ಲಿ ಬಹಳಷ್ಟು ಸಿದ್ಧತೆ ನಡೆಯುತ್ತಿತ್ತು. ಈಗ ಸಿನ್ಮಾದಲ್ಲಿ ಬ್ಯುಸಿ ಇದ್ದರೂ ಕೂಡ ಹಬ್ಬದ ಟೈಮ್ನಲ್ಲಿ ಚಿತ್ರದ ಶೆಡ್ಯುಲ್ಗಳನ್ನು ಚೇಂಜ್ ಮಾಡಿ ಮನೆಯಲ್ಲಿಯೇ ಇರುತ್ತೇನೆ. ಕುಟುಂಬಿಕರು ಸೇರಿದಂತೆ ಸ್ನೇಹಿತರ ಜತೆ ಸೇರಿ ಹಬ್ಬ ಜೋರಾಗಿ ಆಚರಿಸುತ್ತೇವೆ. ಒಟ್ಟಾಗಿ ಸೇರುವುದರಿಂದ ಓಣಂ ನನಗೆ ವಿಶಿಷ್ಟ ಹಬ್ಬ ಎನ್ನುವುದು ಭಾಮಾರ ಓಣಂ ಹಬ್ಬದ ಮಾತು.