Monday, August 1, 2011

ನೀವಿನ್ನೂ ಈ ‘ಬಾಲ್ಕನಿ’ ಗೆ ಬಂದಿಲ್ಲವೇ?


ಬಾಲ್ಕನಿ ಅಂದರೆ ಯಾರಿಗಿಷ್ಟ ಇಲ್ಲ ಹೇಳಿ? ಕನ್ನಡ ಬ್ಲಾಗ್
ಲೋಕದಲ್ಲೊಂದು ಅಂತಹ ಒಂದು ಬಾಲ್ಕನಿ ಇದೆ.
ಅದಕ್ಕೆ ‘ರೇಗೊ ಬಾಲ್ಕನಿ’ ಎಂಬ ಹೆಸರಿದೆ. ಇಲ್ಲಿ ನಿಂತುಕೊಂಡರೆ
ನಮಗೆ ಕಾಣುವುದು ಓಹ್!....ಅಬ್ಬ!.... ಅಹುದೇನೋ!....
ಅನ್ನುವಂತಹ ಕುತೂಹಲಕಾರಿ ವಿಷಯಗಳೇ. ನಿಜ, ಈ ಬ್ಲಾಗ್ನಲ್ಲಿ
ಕಣ್ಣರಳಿಸಿ ಓದಿಸಿಕೊಂಡು ಹೋಗುವ ಬರಹಗಳಿವೆ.
‘ರೇಗೊ ಬಾಲ್ಕನಿ’ ಯ ವಾರಸುದಾರರು ಬೇರಾರೂ ಅಲ್ಲ. ‘ವಿಜಯ
ಕರ್ನಾಟಕ’ ದಿನಪತ್ರಿಕೆಯಲ್ಲಿ ಆಗಾಗ ‘ಸ್ಟೈಲಿಶ್’ ಆಗಿ ಬರೆಯುವ
ಸ್ಟೀವನ್ ರೇಗೊ. ವಿ.ಕ. ದ ಓದುಗರಲ್ಲದವರು, ವಿ.ಕ.ದ
ಓದುಗರಾಗಿದ್ದು ಓದಲು ಮರೆತವರು, ವಿದೇಶಿ ಕನ್ನಡಿಗರು,
ಎಲ್ಲರೂ ಈ ‘ಬಾಲ್ಕನಿ’ಯಲ್ಲಿ ಬಂದು ನಿಂತರೆ ಸಾಕು.
ಸ್ಟೀವನ್ ರ ವಿಶೇಷ ಏನೆಂದರೆ ಮಂಗಳೂರಿನಲ್ಲಿದ್ದುಕೊಂಡೇ
ಮಂಗಳೂರು ಮೂಲದ, ಹೊರನಾಡಲ್ಲಿ ಖ್ಯಾತರಾದವರನ್ನು
ಹೆಕ್ಕಿ ಅವರ ಬಗ್ಗೆ ಸಮಸ್ತ ಕನ್ನಡಿಗರಿಗೂ ಇಷ್ಟವಾಗುವಂತೆ
ಬರೆಯುತ್ತಾರೆ. ಹಾಗೇ ಅವರ ಬರಹಗಳು ‘ಲೋಕಲೈಸ್ಡ್
ಐಟಂ’ ಅಂತ ತಪ್ಪಿಸಿಕೊಂಡು ಭಲೇ ಅನ್ನಿಸಿ ಬಿಡುತ್ತವೆ.
ಅಂದ ಹಾಗೇ ‘ರೇಗೋ ಬಾಲ್ಕನಿ’ ಬಗ್ಗೆ ಬರೆಯಲು ಇವಷ್ಟೇ
ಕಾರಣವಲ್ಲ. ಹುಟ್ಟಿದ ಐದೇ ತಿಂಗಳಲ್ಲಿ
ಭರ್ಜರಿ ಜನಪ್ರಿಯತೆ ಪಡೆದಿದೆ. ಅಂದರೆ ಬರೋಬ್ಬರಿ ೫೦೦೦
ನೋಡುಗರ ಸಂಖ್ಯೆಗೆ ಮುಟ್ಟಿದೆ! ಕನ್ನಡದ ಮಟ್ಟಿಗೆ ಇದು
ಸಾಧಾರಣ ಸಾಧನೆಯೇನಲ್ಲ. ನಮ್ಮ ಬಾಕಿ ಪತ್ರಕರ್ತತಲೆಗಳ ನಡುವೆ ಭಿನ್ನವಾಗಿ
ನಿಲ್ಲುವ ಸ್ಟೀವನ್ ರೇಗೋರ ಬಾಲ್ಕನಿಗೆ ಬರುವವರು
ಜಾಸ್ತಿಯಾಗುತ್ತಲೇ ಹೋಗಬಹುದು. ಸ್ಟೀವನ್ ಅವರ
ಉತ್ಸುಕತೆಯೂ ಹಾಗೇ ಏರುತ್ತಲೇ ಹೋಗಬೇಕು.

*ಪ್ರಕಾಶ್ ಶೆಟ್ಟಿ, ವ್ಯಂಗ್ಯಚಿತ್ರಕಾರರು.
( ಇದು ‘ರೇಗೊ ಬಾಲ್ಕನಿಯ’ ಕುರಿತು ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್ ಶೆಟ್ಟಿ ತಮ್ಮ ಬ್ಲಾಗ್ ‘ಪ್ರಕಾಶ್ ಶೆಟ್ಟಿ ಪಂಚ್’ನಲ್ಲಿ ಹೇಳಿಕೊಂಡಿದ್ದಾರೆ. ಜತೆಯಲ್ಲಿ ನನ್ನ ಕ್ಯಾರಿಕೇಚರ್ ಕೂಡ ಕಳುಹಿಸಿದ್ದಾರೆ.)

Sunday, July 31, 2011

ಬಾಲಿವುಡ್ಗೆ ಕುಡ್ಲದ ವಾಯ್ಸ್ ಓವರ್


ಕರಾವಳಿಯಲ್ಲಿ ವೈಷ್ಣು ಬೇಬಿಯ ಕಾರ್ಯಕ್ರಮ ಇದೆ ಎಂದು ಹೇಳಿದ್ರೆ ಸಾಕು. ಮೂರು ಸಾವಿರ ಆಡಿಯನ್ಸ್ ರೆಡಿಯಾಗಿರುತ್ತಾರೆ. ತುಳುವಿನಲ್ಲಿ ಮಾತನಾಡುವ ಶೈಲಿಗೆ ಇಡೀ ಆಡಿಯೆನ್ಸ್ಗಳು ಶರಣು ಹೊಡೆದ ಬಹಳಷ್ಟು ಉದಾಹರಣೆಗಳು ಕುಡ್ಲದಲ್ಲಿ ಹುಡುಕಾಡಿದರೆ ಸಿಗುತ್ತದೆ.

ಅವಳು ಈಗಷ್ಟೇ ಮುಂಬಯಿಯ ಅಂಧೇರಿಯಲ್ಲಿರುವ ಡಿವೈನ್ ಚೆಲ್ಡ್ ಸ್ಕೂಲ್ನ ಸೆವೆನ್ತ್ ಕ್ಲಾಸ್ನಲ್ಲಿ ಸ್ಟಡಿ ಮಾಡುವ ಪುಟ್ಟ ಪೋರಿ. ಆದರೆ ಬಾಲಿವುಡ್ನ ಬಹುತೇಕ ಮಂದಿಗೆ ಅವಳು ಚಿರಪರಿಚಿತಳು. ಎಲ್ಲಕ್ಕಿಂತಲೂ ಮುಖ್ಯವಾಗಿ ಬಾಲಿವುಡ್ನ ಘಟಾನುಘಟಿ ಸ್ಟಾರ್ ನಟ- ನಟಿಯರ ಜತೆಯಲ್ಲಿ ವೈಷ್ಣು ಬೇಬಿಗೆ ತುಂಬಾ ಸಲುಗೆ ಇದೆ. ಸಲುಗೆ ಯಾಕಿರಬಾರದು ಹೇಳಿ. ವೈಷ್ಣು ಒಂದ್ ಸಲ ‘ಅಂಕಲ್- ಆಂಟಿ ’ಎನ್ನುವ ಒಂದು ಉಚ್ಛಾರ ತೆಗೆದರೆ ಸಾಕು ಬಿಡಿ. ಯಾರು ಬೇಕಾದರೂ ಟೋಟಲಿ ಬೌಲ್ಡ್ .
ಇಂಗ್ಲೀಷ್, ಹಿಂದಿ, ಮರಾಠಿ, ಕನ್ನಡ, ತುಳು ಹೀಗೆ ಏಕಕಾಲದಲ್ಲಿ ನಿರರ್ಗಳವಾಗಿ ಮಾತನಾಡುವ ಹುಡುಗಿ ನೋಡಲು ಕೂಡ ಅಷ್ಟೇ ಮುದ್ದು ಮುದ್ದು . ಮಾತು ಕೂಡ ಗಂಟಳ ಪೆಟ್ಟಿಗೆಯಲ್ಲಿ ಇಳಿದು ಸ್ಕ್ಯಾನಿಂಗ್ ಆಗಿ ಹೊರ ಬರುತ್ತಿದೆಯೇ ಎನ್ನುವ ಸಂದೇಹ ಬಹುತೇಕ ಮಂದಿಗೆ ಕಾಡುವುದಿದೆ. ಅಂದಹಾಗೆ ಪುಟ್ಟ ಪೋರಿ ವೈಷ್ಣವಿ ಶೆಟ್ಟಿ ಈ ಎಲ್ಲ ಹೊಗಳಿಕೆ ಮಾತುಗಳಿಂದ ಮೇಲೆ ಇದ್ದಾಳೆ ಎನ್ನೋದು ಮಾತ್ರ ಗ್ಯಾರಂಟಿಯಾಗಿ ಹೇಳಿಬಿಡಬಹುದು. ಅಂದಹಾಗೆ ಬಾಲಿವುಡ್ನ ಪಡಸಾಲೆಗೆ ನುಗ್ಗಿ ಬನ್ನಿ. ಅಲ್ಲಿ ನಿಜವಾಗಿಯೂ ವೈಷ್ಣವಿ ಶೆಟ್ಟಿಯ ಪರಿಚಯವಾಗಿ ಬಿಡುತ್ತದೆ. ಆಸ್ಕರ್ ವಿಜೇತ ಭಾರತೀಯ ಚಿತ್ರ ‘ಸ್ಲಂ ಡಾಗ್ ಮಿಲೇನಿಯರ್’ ಚಿತ್ರ ಆರಂಭವಾಗುವುದಕ್ಕಿಂತ ಮೊದಲು ಇವಳ ವಾಯ್ಸ್ ಬಂದು ಬಿಡುತ್ತದೆ. ಯೆಸ್. ಕರಾವಳಿಯ ಪುಟ್ಟ ಪೋರಿ ವೈಷ್ಣು ಬಾಲಿವುಡ್ನ ಚಿತ್ರಗಳಿಗೆ ವಾಯ್ಸ್ ಕೊಡುತ್ತಿದ್ದಾರೆ. ಅವರೊಬ್ಬ ಕಂಠದಾನ ಕಲಾವಿದೆ.
ಆಮೀರ್ ಖಾನ್ ನಟಿಸಿದ ‘ಘಜನಿ’ ಶಾಹೀದ್ ನಟಿಸಿದ ‘ಕಿಸ್ಮತ್ ಕನೆಕ್ಷನ್’ ಅಕ್ಷಯ್ ಕುಮಾರ್ ನಟಿಸಿದ ‘ಜಂಬೋ’ ಚಿತ್ರಗಳು ಸೇರಿದಂತೆ ಮರಾಠಿ ಹಾಗೂ ಹಿಂದಿಯ ಭಾಷೆಯ ಸರಿಸುಮಾರು ೨೦ಕ್ಕಿಂತ ಹೆಚ್ಚು ಚಿತ್ರಗಳಿಗೆ ಕಂಠದಾನ ಕಲಾವಿದೆಯಾಗಿ ದುಡಿದಿದ್ದಾರೆ. ಇಷ್ಟು ಚೆನ್ನಾಗಿದ್ದೀಯಾ .. ವೈಷ್ಣುಆಕ್ಟಿಂಗ್ಗೆ ಯಾಕೆ ಬಂದಿಲ್ಲ ಅಂತಾ ಕೇಳಿದ್ರೆ ‘ ಇಲ್ಲ. ಅಂಕಲ್ ನನಗೆ ಆಫರ್ಗಳು ಸಾಲಾಗಿ ಬಂದವು. ಆದರೆ ಆಫರ್ಗಳು ನನ್ನ ಶಿಕ್ಷಣಕ್ಕೆ ಬಹಳ ತೊಂದರೆ ಕೊಡುತ್ತಿತ್ತು. ವಾಯ್ಸ್ ಕೊಡೋದು ನನಗೆ ಹಾಬಿ ಇದ್ದ ಹಾಗೆ. ಅಲ್ಲಿ ನನಗೆ ಸಿಕ್ಕ ಫ್ರಿ ಟೈಮ್ನಲ್ಲಿ ಕೆಲಸ ಮಾಡುವ ಅವಕಾಶ ಇದೆ. ಅದಕ್ಕಾಗಿ ಚಿತ್ರಗಳಿಗೆ ವಾಯ್ಸ್ ಕೊಡುತ್ತಿದ್ದೇನೆ’ ಎಂದು ಬಿಟ್ಟಳು.
ವೈಷ್ಣುವಿನ ಮೆಮೋರಿ ಕಾರ್ಡ್ನಿಂದ ಒಂದ್ ಸಲ ರಿಕಾಲ್ ಮಾಡಿದಾಗ ಅವಳು ಹೇಳಿದಿಷ್ಟು: ಅಕ್ಕಿ ಮಾಮ ಅಭಿನಯದ ‘ಜಂಬೋ’ ನನಗೆ ಬಹಳ ಖುಷಿ ಕೊಟ್ಟ ಚಿತ್ರ ನನ್ನ ಮೊದಲ ಡೈಲಾಗ್ ನನಗೆ ಈಗಲೂ ನೆನಪಿದೆ.ಲಾಂಗ್ಡಾ ಕೇ ಕ್ಯೂ ಚಲ್ ರಹೇ ಹೋ... ಎಂದು ಸೋನಿಯಾ ಎನ್ನುವ ಪುಟ್ಟ ಆನೆ ಮರಿಗೆ ವಾಯ್ಸ್ ಕೊಟ್ಟಿದ್ದು ನಂತರ ನಟಿ ಲಾರಾ ನನ್ನ ವಾಯ್ಸ್ಗೆ ಮೆಚ್ಚಿ ತಂಬಿಕೊಂಡು ಮುದ್ದಾಡಿದ್ದು ಎಲ್ಲವೂ ಖುಷಿಯಾಗುತ್ತೆ ಅಂಕಲ್.. ’ಅಂದ್ಲು ಬಿಟ್ಳು. ವೈಷ್ಣು ಬರೀ ಬಾಲಿವುಡ್ ಚಿತ್ರಗಳಿಗೆ ವಾಯ್ಸ್ ಕೊಡುತ್ತಾಳೆ ಎನ್ನುವುದಕ್ಕಿಂತ ಹೆಚ್ಚಾಗಿ ಅವಳು ಪ್ರತಿಭಾವಂತ ಹುಡುಗಿ. ಇಡೀ ಮರಾಠವಾಡಿ ಸಾರಿ ಕಣ್ರಿ ಮಹಾರಾಷ್ಟ್ರದಲ್ಲಿ ಇವಳಷ್ಟೂ ನಿರರ್ಗಳವಾಗಿ ಹರಿಕಥೆ ಮಾಡುವ ಹುಡುಗಿ ಎಲ್ಲೂ ಸಿಗಲು ಸಾಧ್ಯವಿಲ್ಲ. ಮುಂಬಯಿಯಲ್ಲಿ ಈಗಾಗಲೇ ಹರಿಕಥೆಯ ಎರಡು- ಮೂರು ಕಾರ್ಯಕ್ರಮಗಳು ನಡೆದಿದೆ.
ಅದಕ್ಕಿಂತಲೂ ಕರಾವಳಿಯಲ್ಲಿ ವೈಷ್ಣು ಬೇಬಿಯ ಕಾರ್ಯಕ್ರಮ ಇದೆ ಎಂದು ಹೇಳಿದ್ರೆ ಸಾಕು. ಮೂರು ಸಾವಿರ ಆಡಿಯನ್ಸ್ ರೆಡಿಯಾಗಿರುತ್ತಾರೆ. ತುಳುವಿನಲ್ಲಿ ಮಾತನಾಡುವ ಶೈಲಿಗೆ ಇಡೀ ಆಡಿಯೆನ್ಸ್ಗಳು ಶರಣು ಹೊಡೆದ ಬಹಳಷ್ಟು ಉದಾಹರಣೆಗಳು ಕುಡ್ಲದಲ್ಲಿ ಹುಡುಕಾಡಿದರೆ ಸಿಗುತ್ತದೆ. ೨೦೦೬ರಲ್ಲಿ ಸಹರಾ ಟಿವಿಯವರು ನಡೆಸಿದ ರಿಯಾಲಿಟಿ ಶೋನಲ್ಲಿ ಎರಡು ಬಾರಿ ವಿಜೇತರಾಗಿ ಹೊರ ಬಂದಿದ್ದಾರೆ. ಕಲಿಯುವುದರಲ್ಲೂ ತುಂಬಾ ಮುಂದೆ ಆದರೂ ಮ್ಯಾಕ್ಸ್ ಕೊಂಚ ತಲೆ ಕಡೆಸಿಬಿಡುತ್ತದೆ ಎನ್ನುತ್ತಾಳೆ ವೈಷ್ಣು. ಎಲ್ಲಕ್ಕೂ ಎಲ್ಲಿಂದ ಬಂತು ಪ್ರೇರಣೆ ಎಂದಾಗ ತನ್ನ ಪಕ್ಕದಲ್ಲಿ ನಿಂತಿದ್ದ ತಂದೆ ದಾಮೋದರ್, ತಾಯಿ ಕೇಸರಿ ಹಾಗೂ ಅಕ್ಕ ತೃಪ್ತಿಯನ್ನು ಬೊಟ್ಟು ಮಾಡಿ ತೋರಿಸಿ ಬಿಟ್ಟಳು ವೈಷ್ಣವಿ.
ಅಂದಹಾಗೆ ಶಬನಾ ಆಜ್ಮಿ ನಟಿಸಿದ ಇನ್ನೂ ರಿಲೀಸ್ ಆಗದ ಚಿತ್ರವೊಂದರಲ್ಲಿ ವೈಷ್ಣು ಲೀಡ್ ರೋಲ್ವೊಂದಕ್ಕೆ ವಾಯ್ಸ್ ಕೊಟ್ಟಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಈ ಚಿತ್ರ ಆರ್ಟ್ ವಿದ್ ಕಮರ್ಷಿಯಲ್ ಟಚ್ ಇದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ವೈಷ್ಣುವಿನ ಸೊಲೋ ವಾಯ್ಸ್ ಇಡೀ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರೇಕ್ಷಕರ ಹೃದಯ ಬಡಿತವನ್ನು ಸರಿಯಾಗಿ ಅಧ್ಯಯನ ಮಾಡಿದ ವೈಷ್ಣವಿಗೆ ಮುಂದೆ ಓದಿ ಹಾರ್ಟ್ ಸ್ಪೆಶಾಲಿಸ್ಟ್ ಆಗಬೇಕೆನ್ನುವುದು ಮಹಾದಾಸೆ. ಒಳ್ಳೆಯದಾಗಲಿ ಪುಟ್ಟಿ ಎಂದು ಬೆನ್ನು ತಟ್ಟಿ ಹೊರ ಬಂದಾಗ ವೈಷ್ಣು ಮೊಗದಲ್ಲಿ ನಗುವಿತ್ತು. ಭವಿಷ್ಯದಲ್ಲಿ ಮಿಂಚುವ ಹೊಳಪಿತ್ತು.

Saturday, July 30, 2011

ಇದು ‘ರಮ್ಯಾ’ ಕಾಲ


ಗ್ಲಾಮರ್ ಹಾಗೂ ಎಕ್ಸ್ಫೋಸಿಂಗ್ ಎರಡು ತುಂಬಾನೇ ಭಿನ್ನ ಸಬ್ಜೆಕ್ಟ್. ಗ್ಲಾಮರ್ ಎನ್ನೋದು ಪ್ರತಿಯೊಂದು ಸಿನಿಮಾ ನಟಿಯರಿಗೆ ಇರಬೇಕಾದ ಆಭರಣ. ಆದರೆ ಎಕ್ಸ್ಫೋಸಿಂಗ್ ಎನ್ನೋದು ಆಗಲ್ಲ ಎನ್ನೋದು ರಮ್ಯಾ ಬಾರ್ನಾರ ಬಿಂದಾಸ್ ಮಾತು.

ಅಮಲು ಕಡಲಿನಲ್ಲಿ ತೇಲಿಸಿ ಬಿಡುವ ಸೌಂದರ್ಯದ ಗಣಿ. ತುಟಿ ಅಂಚಿನಲ್ಲಿ ಮಿಂಚಿ ಮರೆಯಾಗುವ ನಗು. ದುಂಡುಮುಖದ ತುಂಬಾ ಎದ್ದು ಕಾಣುವ ಸೌಮ್ಯತೆ. ಯಾರನ್ನೋ ಹುಡುಕಾಟದಲ್ಲಿರುವ ಅಗಲವಾದ ನಯನಗಳು ಎಲ್ಲವೂ ಜತೆಯಾಗಿ ಸೇರಿಕೊಂಡರೆ ಅವಳೇ ರಮ್ಯಾ ಬಾರ್ನಾ.
ಗ್ಲಾಮರ್ ಲೋಕದ ಬಳುಕಿನ ಜತೆಗೆ ಆಕ್ಟಿಂಗ್ನ ಪಾಠಗಳನ್ನು ಸರಿಯಾಗಿ ಕಲಿತಕೊಂಡು ನಟಿಸಲು ಬಂದ ರಮ್ಯಾ ಬಾರ್ನಾ ಈಗ ಕರಾವಳಿಯ ಪಾಲಿಗೆ ‘ಪ್ರೀತಿ’ಯ ಹುಡುಗಿ. ಕರಾವಳಿಯಲ್ಲಿ ಸೆಂಚುರಿಯತ್ತ ಓಡುತ್ತಿರುವ ತುಳು ಸಿನ್ಮಾ ‘ಒರಿಯರ್ದೊರಿ ಅಸಲ್’ನ ಪ್ರೀತಿಯ ರೋಲ್ನಲ್ಲಿ ರಮ್ಯಾ ಬಾರ್ನಾ ಕಾಣಿಸಿಕೊಂಡಿದ್ದು ತುಳುವರಿಗೆ ತುಂಬಾನೇ ಲೈಕ್ ಆಗಿದೆ.
‘ರಮ್ಯಾ ಬಾರ್ನಾ ನಮ್ಮೂರ ಹುಡುಗಿ. ನಮ್ಮ ಪಕ್ಕದ ಮನೆಯಲ್ಲಿ ಹುಟ್ಟಿದ ಪ್ರೀತಿ’ ಎಂದು ಹೇಳಿಕೊಂಡು ಸುತ್ತಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆಯಂತೆ ಎನ್ನುವ ಮೆಸೇಜ್ ರಮ್ಯಾ ಬಾರ್ನಾರ ಸೆಲ್ಗೂ ಬಡಿದಿದೆ. ಇತ್ತ ಕಡೆ ‘ಒರಿಯರ್ದೊರಿ ಅಸಲ್’ ತುಳು ಚಿತ್ರ ಬೆಂಗಳೂರಿನ ಥಿಯೇಟರ್ನಲ್ಲಿ ಇಳಿದು ಸಖತ್ ಆಗಿ ಓಡುತ್ತಿದೆ. ಕರಾವಳಿಯಲ್ಲೂ ಅರ್ಧ ಸೆಂಚುರಿ ಬಾರಿಸಿರುವ ‘ಅಸಲ್’ ಚಿತ್ರದ ಕಾರ್ಯಕ್ರಮವೊಂದರಲ್ಲಿ ರಮ್ಯಾ ಬಾರ್ನಾ ಲವಲವಿಕೆಯ ಜತೆ ಕೂತು ಬಹಳ ಹೊತ್ತು ಹರಟಿದರು. ‘ಅಸಲ್’ ಸಿನ್ಮಾದ ಜತೆಯಲ್ಲಿ ರಮ್ಯಾ ಬಾರ್ನಾ ತನ್ನ ಟಾಪ್ ಸಿಕ್ರೇಟ್ಗಳನ್ನು ಕೂಡ ಬಿಚ್ಚಿಟ್ಟರು.
‘ನನಗೆ ತುಳು ಭಾಷೆ ಸರಿಯಾಗಿ ಗೊತ್ತಿಲ್ಲ. ಆದರೆ ಅದು ಎಲ್ಲೂ ಸಮಸ್ಯೆ ಆಗಿಲ್ಲ. ಅಸಲ್ ನಾಟಕ ಕರಾವಳಿಯಲ್ಲಿ ಕ್ಲಿಕ್ ಆಗಿತ್ತು ಎನ್ನುವ ವಿಚಾರ ನನಗೆ ಮೊದಲೇ ತಿಳಿದಿತ್ತು. ಅಸಲ್ನ ಸ್ಟೋರಿ, ಕಾಮೆಡಿ, ಟೀಮ್ ವರ್ಕ್ ಕುರಿತು ಬಹಳ ಇಷ್ಟವಾಯಿತು. ತುಳುವಿನಲ್ಲಿ ನಟಿಸುವಾಗ ಅದೊಂದು ಸವಾಲು ಎಂದು ಸ್ವೀಕರಿಸಿ ನಟಿಸಿದೆ. ಚಿತ್ರ ಎಲ್ಲ ಕಡೆ ಗೆಲುತ್ತಿದೆ ಎನ್ನೋದು ಖುಷಿ ಎಂದು ಬಿಟ್ಟ್ರು ರಮ್ಯಾ ಬಾರ್ನಾ.
ಚಿತ್ರಗಳ ಸೋಲೋ ಪಾತ್ರದಲ್ಲಿ ಕಾಣಿಸುತ್ತಿರೋದು ಕಡಿಮೆಯಾಗುತ್ತಿದೆಯಲ್ಲ ಮೇಡಂ ಎಂದು ಕೇಳಿದರೆ ರಮ್ಯಾ ಹೇಳುವುದಿಷ್ಟು: ಆರಂಭದ ವೃತ್ತಿ ಬದುಕಿನಲ್ಲಿ ಸೋಲೋ ಪಾತ್ರಗಳಿಗೆ ಜಾಸ್ತಿ ಮಹತ್ವ ನೀಡಿದೆ. ಯಾಕೋ ಏನೋ ಅದು ಪ್ರೇಕ್ಷಕ ವರ್ಗವನ್ನು ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ. ಆದರೆ ನಾನು ‘ಪಂಚರಂಗಿ’ ‘ಹುಡುಗರು’ ಚಿತ್ರದಲ್ಲಿ ಸೋಲೋಕ್ಕಿಂತ ಬೇರೆ ಪಾತ್ರದಲ್ಲಿ ನಟಿಸಿದೆ. ಅದು ಪ್ರೇಕ್ಷಕರಿಗೆ ಹಿಡಿಸಿದೆ. ಮುಂದಿನ ‘ಅರ್ನಾಕಲಿ’ ಹಾಗೂ ‘ಪಂಚಾಮೃತ’ದಲ್ಲೂ ಇಂತಹ ಪಾತ್ರಗಳೇ ಮುಂದುವರಿದಿದೆ. ನನಗೆ ಪಾತ್ರ ಬೇಡುವ ಅವಕಾಶ, ಸ್ಟೋರಿಲೈನ್ ಮಾತ್ರ ಮುಖ್ಯವಾಗುತ್ತದೆ ಎನ್ನುತ್ತಾರೆ ಅವರು.
ಗ್ಲಾಮರ್ ಹಾಗೂ ಎಕ್ಸ್ಫೋಸಿಂಗ್ ಎರಡು ತುಂಬಾನೇ ಭಿನ್ನ ಸಬ್ಜೆಕ್ಟ್. ಗ್ಲಾಮರ್ ಎನ್ನೋದು ಪ್ರತಿಯೊಂದು ಸಿನಿಮಾ ನಟಿಯರಿಗೆ ಇರಬೇಕಾದ ಆಭರಣ. ಆದರೆ ಎಕ್ಸ್ಫೋಸಿಂಗ್ ಎನ್ನೋದು ಆಗಲ್ಲ. ರಮ್ಯಾ ಬಾರ್ನಾ ಎರಡರಲ್ಲಿ ಯಾವ ಸೈಡ್ ನಿಲ್ಲುತ್ತಾರೆ ಎಂದರೆ ರಮ್ಯಾ ಹೀಗೆಳುತ್ತಾರೆ : ಪಾತ್ರಗಳು ಅಂತಹ ಎಕ್ಸ್ಫೋಸಿಂಗ್ ವಿಚಾರವನ್ನು ಬಯಸಿದಾಗ ಖಂಡಿತವಾಗಿಯೂ ಯೋಚನೆ ಮಾಡುತ್ತೇನೆ. ಆದರೆ ಅನಗತ್ಯ ಎಕ್ಸ್ಫೋಸಿಂಗ್ ನನಗೆ ಇಷ್ಟವಿಲ್ಲ. ಪಾತ್ರದ ಬೇಡಿಕೆಗೆ ತಕ್ಕಂತೆ ಎಕ್ಸ್ಫೋಸಿಂಗ್ ಇರಬೇಕು. ಐಟಂ ಸಾಂಗ್ನಲ್ಲಿ ಕುಣಿಯುವ ನಾಯಕಿ ಗ್ಲಾಮರ್ನಲ್ಲಿ ಕಂಡರೆ ಸಾಲದು ಎಕ್ಸ್ಫೋಸಿಂಗ್ ಮಾಡಬೇಕು ಎಂದು ಐಟಂ ಸಾಂಗ್ ಬಯಸುತ್ತದೆ.
ಅಸಲ್ನಲ್ಲಿ ಕಾಲೇಜು ಹುಡುಗಿಯ ಗ್ಲಾಮರ್ ಲುಕ್ ಇತ್ತು. ಆದರೆ ಎಕ್ಸ್ಫೋಸಿಂಗ್ ಮ್ಯಾಟರ್ ಇರಲಿಲ್ಲ. ಸಾಮಾನ್ಯವಾಗಿ ಕಾಲೇಜು ಹುಡುಗಿ ಯಾವ ರೀತಿ ಡ್ರೆಸ್ ಕೋಡ್ ಬಯಸುತ್ತಾಳೆ. ಅದೇ ಡ್ರೆಸ್ ಕೋಡ್ ‘ಅಸಲ್’ನಲ್ಲಿ ಇತ್ತು. ಸೆಕೆಂಡ್ ಪಾರ್ಟ್ನಲ್ಲಿ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಸೀರೆಗೆ ಜಾಸ್ತಿ ಮಹತ್ವ ಕೊಟ್ಟಿದ್ದರು. ಇದು ನನಗೆ ಬಹಳ ಹಿಡಿಸಿದೆ.
ರಮ್ಯಾ ಬಾರ್ನಾಗೆ ಫ್ರೀ ಟೈಮ್ ಇದ್ದಾಗ ಏನ್ ಮಾಡ್ತಾರೆ? ಫ್ರೆಂಡ್ಸ್ಗಳ ಜತೆಯಲ್ಲಿ ಶಾಫಿಂಗ್ ಮಾಡುತ್ತೇನೆ. ಗೆಳೆಯರ ಜತೆಗೆ ಹೋಗಿ ಸಿನಿಮಾ ನೋಡುತ್ತೇನೆ. ತುಂಬಾನೇ ಫ್ರೀ ಟೈಮ್ ಇತ್ತು ಅಂದ್ರೆ ಹೆತ್ತವರ, ಗೆಳೆಯರ ಜತೆಯಲ್ಲಿ ಲಾಂಗ್ ಟೂರ್ಗೆ ಹೋಗಿ ಬರುತ್ತೇನೆ. ಕಾಲೇಜಿನಲ್ಲಿದ್ದಾಗ ಜಾಸ್ತಿ ಕಾದಂಬರಿಗಳನ್ನು ಓದುತ್ತಿದ್ದೆ ಆದರೆ ಈಗ ಓದಲು ಟೈಮ್ ಸಿಕ್ತಿಲ್ಲ . ಕಾದಂಬರಿ ಒಂದ್ ಸಾರಿ ಓದಲು ಕುಳಿತರೆ ಅದನ್ನು ಮುಗಿಸಿಯೇ ಹೇಳಬೇಕು ಅನ್ನೋದು ನನ್ನ ನಿಯಮ ಎನ್ನುತ್ತಾರೆ ರಮ್ಯಾ. ಮದುವೆ ವಿಚಾರ ಎತ್ತಿದರೆ ಸಾಕು. ಈಗ ಬೇಡ ಸಧ್ಯಕ್ಕೆ ಅಂತಾ ಯೋಚನೆಯಲ್ಲಿ ಇಲ್ಲ ಅಂತಾ ನಗುವಿನ ಮೂಲಕ ಪ್ರಶ್ನೆಯನ್ನು ಗುಡಿಸಿ ತೆಗೆಯುತ್ತಾರೆ. ಟೋಟಲಿ ರಮ್ಯಾ ಸಿನ್ಮಾ ಲ್ಯಾಂಡ್ನ್ನು ಸಿರೀಯಸ್ ಆಗಿ ಪರಿಗಣಿಸಿದ್ದಾರೆ ಅಂದಾಯಿತು ಮಾರಾಯ್ರೆ.

ಭಾರದ ಹುಡುಗಿ ‘ಸೋನಿ’


ಬಾಲಿವುಡ್ ಬಾಕ್ಸಾಫೀಸ್ನ ಗಲ್ಲಾ ಪೆಟ್ಟಿಗೆಯನ್ನು ಸೂರೆ ಮಾಡಿದ ‘ದಭಾಂಗ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸೋನಾಕ್ಷಿಯ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಬಾಲಿವುಡ್ನ ಘಟಾನುಘಟಿ ನಿರ್ದೇಶಕರು ಸೋನಾಕ್ಷಿ ಮನೆಯ ಮುಂದೆ ಕುರ್ಚಿ ಹಾಕಿ ಕೂತಿದ್ದಾರೆ. ಆದರೆ ಸೋನಾಕ್ಷಿ ಬೆಳೆಸಿಕೊಳ್ಳುವ ‘ದೇಹ ಭಾರ’ ಬಹಳಷ್ಟು ಸುದ್ದಿಗೆ ಗ್ರಾಸವಾಗುತ್ತಿದೆ.

ಪ್ರೇಕ್ಷಕನನ್ನು ಅಮಲು ಕಡಲಿನಲ್ಲಿ ತೇಲಿಸಿ ಬೀಡುವ ಮಾದಕ ಕಣ್ಣುಗಳು. ಬಿಟ್ಟು ಬಿಡದೇ ಪ್ರೇಕ್ಷಕನನ್ನು ಕಾಡಿಸಿ ಪೀಡಿಸುವ ಮೊಗ ಜತೆಯಲ್ಲಿ ವಯಸ್ಸಿಗೂ ಮೀರಿದ ದೇಹ ಸಿರಿ. ಒಂದ್ ಕಾಲದಲ್ಲಿ ತೆಳ್ಳಗೆ ಬೆಳ್ಳಗೆ ಇದ್ದೆ ಎಂದು ಖುದ್ದು ಅವಳೇ ಹೇಳಿಕೊಂಡರೂ ಒಪ್ಪಿಕೊಳ್ಳಲು ಒಳ್ಳದ ಮನಸ್ಥಿತಿ ಇದ್ರೆ ಅವಳೇ ದಭಾಂಗ್ ಹುಡುಗಿ ಸೋನಾಕ್ಷಿ ಸಿನ್ಹಾ. ತಂದೆ ಶತ್ರುಘ್ನ ಸಿನ್ಹಾ ಬಾಲಿವುಡ್ನಲ್ಲಿ ಬಹಳ ದೊಡ್ಡ ಹೆಸರು ಎಂದು ಕೊಂಡು ಬಾಲಿವುಡ್ ಅಂಗಳದಲ್ಲಿ ತನ್ನ ಮಾಕು ತೋರಿಸದೇ ಪ್ರತಿಭೆಯ ಮೂಲಕವೇ ಎಲ್ಲರ ಗಮನ ಸೆಳೆದ ಸೋನಾಕ್ಷಿ ಸಿನ್ಹಾ ಬಾಲಿವುಡ್ ಸಿನ್ಮಾ ನಗರಿಗೆ ಹೊಸ ಹುಡುಗಿ.
ಬಾಲಿವುಡ್ ಬಾಕ್ಸಾಫೀಸ್ನ ಗಲ್ಲಾ ಪೆಟ್ಟಿಗೆಯನ್ನು ಸೂರೆ ಮಾಡಿದ ‘ದಭಾಂಗ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸೋನಾಕ್ಷಿಯ ಕೈಯಲ್ಲಿ ಈಗ ಸಾಲು ಸಾಲು ಸಿನಿಮಾಗಳಿವೆ. ಬಾಲಿವುಡ್ನ ಘಟಾನುಘಟಿ ನಿರ್ದೇಶಕರು ಸೋನಾಕ್ಷಿ ಮನೆಯ ಮುಂದೆ ಕುರ್ಚಿ ಹಾಕಿ ಕೂತಿದ್ದಾರೆ. ಆದರೂ ಒಂಚೂರು ಮಾಕು ತೋರಿಸದೇ ವರ್ಕ್ ಮಾಡುವ ಹುಡುಗಿ ಎಂದೇ ಬಾಲಿವುಡ್ ಮಂದಿ ಹೇಳುತ್ತಿದ್ದಾರೆ. ‘ದಭಾಂಗ್’ ನಂತರ ಸೋನಾಕ್ಷಿ ಕಾಣಿಸಿಕೊಳ್ಳುವ ನಿರ್ದೇಶಕ ಶಿರೀಸ್ ಕುಂದರ್ರ ‘ಜೋಕರ್’ ಚಿತ್ರ ಈಗಾಗಲೇ ದೊಡ್ಡ ಹೈಫ್ ಬೆಳೆಸಿಕೊಂಡಿದೆ. ಶಿರೀಸ್ ಕುಂದರ್ ಎರಡನೇ ಚಿತ್ರದಲ್ಲಾದರೂ ಗೆಲ್ಲಬೇಕು ಎಂಬ ಹಟದಲ್ಲಿದ್ದಾರೆ. ಇತ್ತ ಕಡೆ ಸೋನಾಕ್ಷಿಗೂ ಮೊದಲ ಹಿಟ್ ನಂತರ ಮತ್ತೊಂದು ಹಿಟ್ ಕೊಡಬೇಕು ಎನ್ನುವ ಕಾತರನೂ ಇದೆ.
‘ಜೋಕರ್’ ಸಿನ್ಮಾ ಥಿಯೇಟರ್ಗೆ ಲಗ್ಗೆ ಇಟ್ಟ ನಂತರ ಸೋನಾಕ್ಷಿ ನಟಿಸುವ ‘ರೇಸ್-೨’, ತೆಲುಗಿನ ಕಿಕ್ ರಿಮೇಕ್ ಚಿತ್ರ ಹಿಂದಿಯ ‘ಕಿಕ್’, ತೆಲುಗಿನ ‘ವಿಕ್ರಮಾಕ್ರುಡು’ನ ಅವತರಣಿಕೆ ‘ರೌಡಿ ರಾಥೋಡ್’ ಹಾಗೂ ‘ಸನ್ ಆಫ್ ಸರ್ದಾರ್’ ಚಿತ್ರಗಳ ಚಿತ್ರೀಕರಣ ನಡೆಯಲಿದೆ. ಸೋನಾಕ್ಷಿಯ ಜೋಕರ್ನ ಸಕ್ಸಸ್ ಪಾಯಿಂಟ್ ಈ ಎಲ್ಲ ಚಿತ್ರಗಳಿಗೂ ಆನ್ವಯಿಸಲಿದೆ. ಅದರ ಗೆಲುವು ಮುಂದಿನ ಚಿತ್ರಗಳಿಗೂ ಮುಂದುವರಿಯುವ ಕುರಿತು ಮಾತುಕತೆ ನಡೆಯುತ್ತಿದೆ. ಅಂದಹಾಗೆ ಎರಡು ವರ್ಷಗಳ ಕಾಲ ಸೋನಾಕ್ಷಿ ಯಾರ ಕೈಗೂ ಸಿಗೋದಿಲ್ಲ ಎನ್ನೋದು ಮುಂಬಯಿ ಮಾಯಾನಗರಿಯ ಪಡಸಾಲೆಯಲ್ಲಿ ಕೂತಿರುವ ಬಾಲಿವುಡ್ ಪಂಡಿತರ ಭವಿಷ್ಯದ ಮಾತು.
ಆದರೆ ಸೋನಾಕ್ಷಿ ಸಿನ್ಹಾ ‘ದಭಾಂಗ್’ ಚಿತ್ರದ ಸಕ್ಸಸ್ ನಂತರ ಒಂಚೂರು ಮೈ ‘ಸಿರಿ’ ಬೆಳೆಸಿದ್ದಾರೆ ಎನ್ನೋದು ‘ಜೋಕರ್’ ಚಿತ್ರ ನಿರ್ದೇಶಕ ಶಿರೀಸ್ ಕುಂದರ್ರ ಸಿರೀಯಸ್ ಮಾತು. ಇದೇ ಮಾತನ್ನು ‘ದಭಾಂಗ್ ನಿರ್ಮಾಪಕರಾದ ಅರ್ಬಜ್ಖಾನ್ ಹಾಗೂ ಮಲೈಕಾ ಆರೋರಾ ಕೂಡ ಹೇಳಿದ್ದರು. ‘ದಭಾಂಗ್’ ಚಿತ್ರ ತಯಾರಿ ಹಂತದಲ್ಲಿದ್ದಾಗ ಸೋನಾಕ್ಷಿಯ ಮೈ‘ಭಾರ’ ಜಾಸ್ತಿಯಾಗಿತ್ತು. ದೇಹ ಭಾರ ಕಡಿಮೆಯಾದರೆ ಮಾತ್ರ ನಾಯಕಿ ಪಟ್ಟ ಕೊಡಲಾಗುವುದು ಎಂದು ಅಂದು ಅರ್ಬಜ್ ಖಾನ್ ಹೇಳಿದ್ದರು. ಅವರ ಮಾತಿನಂತೆ ಸೋನಾಕ್ಷಿ ಬಹಳಷ್ಟು ದೇಹ ಭಾರವನ್ನು ಇಳಿಸಿಕೊಂಡಿದ್ದರು.
‘ಜೋಕರ್’ ಸಿನ್ಮಾ ಈಗಾಗಲೇ ಬಹಳಷ್ಟು ಭಾಗದ ಚಿತ್ರೀಕರಣ ಮುಗಿಸಿದೆ. ಇನ್ನೂಳಿದ ಭಾಗದ ಚಿತ್ರೀಕರಣದಲ್ಲಿ ಕೊಂಚ ಮೈ ಭಾರ ಇಳಿಸಿಕೊಳ್ಳಿ ಎಂದು ಸೋನಾಕ್ಷಿ ಸಿನ್ಹಾರಿಗೆ ಶಿರೀಸ್ ಕುಂದರ್ ಸಲಹೆ ಕೊಟ್ಟಿದ್ದಾರೆ. ಚಿತ್ರದ ಆರಂಭದಲ್ಲಿ ಸೋನಾಕ್ಷಿಯ ಮೈ ಭಾರ ೬೦ರ ಅಸುಪಾಸಿತ್ತು. ಚಿತ್ರೀಕರಣ ಮಧ್ಯಭಾಗದಲ್ಲಿ ನಿಂತಾಗ ೯೦ ಕೆ.ಜಿಯಾಗಿದೆ ಇದನ್ನು ನೋಡಿ ಶಿರೀಸ್ ಕುಂದರ್ ಬಿಪಿ ರೈಸ್ ಮಾಡಿಕೊಂಡಿದ್ದಾರೆ. ಸೋನಾಕ್ಷಿಯನ್ನು ತೆಳ್ಳಗೆ ನೋಡಲು ಪ್ರೇಕ್ಷಕ ಬಯಸುತ್ತಾನೆ ಹೊರತು ದಢೂತಿ ಸೋನಾಕ್ಷಿಯಲ್ಲ ಎಂದು ಶಿರೀಸ್ ಸುಮ್ಮನೆ ಸೆಟ್ನಲ್ಲಿ ರೇಗಾಡಿದ್ದಾರೆ. ಮೈ ಭಾರ ಇಳಿಸಲು ಸರಳ ಟಿಪ್ಸ್ಗಳನ್ನು ಕೊಟ್ಟು ಅದಷ್ಟೂ ಚಾಕಲೇಟ್, ಜಂಕ್ಫುಡ್ಗಳಿಂದ ದೂರ ಇರುವಂತೆ ಸೋನಾಕ್ಷಿ ಸಿನ್ಹಾರಿಗೆ ಎಚ್ಚರಿಕೆ ನೀಡಿದ್ದಾರೆ.
‘ಜೋಕರ್’ನ ಒಂದು ಐಟಂ ಸಾಂಗ್ಗೆ ಸೋನಾಕ್ಷಿ ಸಿನ್ಹಾ ಬಹಳಷ್ಟು ತೆಳ್ಳಗೆ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಮೈಭಾರ ಏರಿಸಿಕೊಂಡಿರುವ ಸೋನಾಕ್ಷಿಯಿಂದ ಈ ಐಟಂ ಸಾಂಗ್ಗೆ ಪೆಟ್ಟು ಬೀಳಲಿದೆ. ಈ ವಿಚಾರದಲ್ಲಿ ಚಿತ್ರದ ಕೊರಿಯೋಗ್ರಾಫರ್ ಫ್ಹರಾ ಖಾನ್ ಕೂಡ ಉಪಯುಕ್ತವಾದ ಟಿಪ್ಸ್ಗಳನ್ನು ಕೊಟ್ಟು ಸೋನಾಕ್ಷಿಯ ಮೈಭಾರ ಕಡಿಮೆ ಮಾಡಲು ಪರದಾಟ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಮುಂಬಯಿ ನಗರಿಯಿಂದ ಬಂದು ಬಿದ್ದಿದೆ. ಫ್ಹರಾ ಖಾನ್ರ ‘ಶೀಲಾ ಕೀ ಜವಾನಿ’ಯ ಮ್ಯಾಜಿಕ್ ವರ್ಕ್ ಈ ಚಿತ್ರದ ಐಟಂ ಸಾಂಗ್ನಲ್ಲಿ ಮುಂದುವರಿಸುವ ಸಾಧ್ಯತೆ ಕೂಡ ದಟ್ಟವಾಗಿದೆ. ಈ ಎಲ್ಲದರ ನಡುವೆ ಸೋನಾಕ್ಷಿಯ ಮೈ ಭಾರ ಬಹಳಷ್ಟು ಸುದ್ದಿಗೆ ಇಂಬು ಕೊಡುತ್ತಿದೆ ಎನ್ನೋದು ಮಾತ್ರ ನಿಜ. ಸೋನಾಕ್ಷಿಯ ಮೈ ಭಾರ ಇಳಿದರೆ ಮತ್ತೊಂದು ಶೀಲಾ ಬಾಲಿವುಡ್ನಲ್ಲಿ ಸೊಂಟ ಬಳುಕಿಸಲಿದ್ದಾರೆ ಎಂಬೋದು ಗ್ಯಾರಂಟಿ ಮಾತು.

೫ ಸಾವಿರ ಆದರೂ ನಿಂತಿಲ್ಲ ಓಟ !


ಪತ್ರಕರ್ತನಾಗಿ ‘ವಿಜಯ ಕರ್ನಾಟಕ’ಕ್ಕೆ ಬಂದ ನಂತರ ಬ್ಲಾಗ್ ಬರೆಯಬೇಕು ಎನ್ನುವ ಕನಸ್ಸಿತ್ತು. ನಾನು ಬರೆದ ನೂರಾರು ಬರಹಗಳನ್ನು ಬ್ಲಾಗ್ನಲ್ಲಿ ತುಂಬಿಸಿಡಬೇಕು ಎಂಬ ಹೆಬ್ಬಯಕೆ ಕೂಡ ಆಲದ ಮರದಂತೆ ಬೆಳೆದಿತ್ತು. ಯಾಕೋ ಗೊತ್ತಿಲ್ಲ ಸಾವಿರಾರು ಬ್ಲಾಗ್ಗಳ ನಡುವೆ ಪುಟ್ಟ ಹುಡುಗನ ಹೆಜ್ಜೆ ಗುರುತುಗಳು ಕಾಣಿಸೋದಿಲ್ಲ ಎಂಬ ಮಾತಿದೆ ಅಲ್ವಾ...? ಹಾಗೆಯೇ ವರ್ಷಗಳು ಉರುಳಿ ಹೋಯಿತು. ಕಡೇ ಆಟವಾಗಿ ಈ ವರ್ಷ ಬ್ಲಾಗ್ ಆರಂಭ ಮಾಡಿಕೊಂಡು ಬಿಟ್ಟೆ. ಈಗ ‘ರೇಗೊ ಬಾಲ್ಕನಿ’ ಎನ್ನುವ ಪುಟ್ಟ ೫ ತಿಂಗಳ ಬ್ಲಾಗ್ಗೆ ೫ ಸಾವಿರ ಮಂದಿ ಭೇಟಿ ನೀಡಿ ಹೋಗಿದ್ದಾರೆ. ಇದು ಬ್ಲಾಗ್ ಬರಹಗಾರನಿಗೆ ಖುಷಿ ಕೊಡುವ ವಿಚಾರ.
ವಿಜಯ ಕರ್ನಾಟಕ ಹಾಗೂ ಅದರ ಲವಲವಿಕೆಯ ಪುರವಣಿಯಲ್ಲಿ ಬಂದ ಲೇಖನಗಳನ್ನೇ ಇಲ್ಲಿ ತುಂಬಿಸಿ ಕೊಟ್ಟಿದ್ದೆ ಅದನ್ನು ಪ್ರೀತಿಯಿಂದ ಬಹಳಷ್ಟು ಜನ ಸ್ವಾಗತಿಸಿದರು. ನನಗೂ ಈ ಎಲ್ಲ ಲೇಖನಗಳನ್ನು ಜೋಪಾನವಾಗಿ ಇಡುವ ಕೆಲಸ ಕೂಡ ಈ ಬ್ಲಾಗ್ನಿಂದಾಗಿ ತಪ್ಪಿದೆ. ನಾನು ಯಾರು..? ಎಂದು ಪ್ರಶ್ನೆ ಹಾಕಿದವರಿಗೆ ಈ ಬ್ಲಾಗ್ ತೋರಿಸಿಬಿಡಬಹುದು ಎಂಬ ಧೈರ್ಯ ನನಗೆ ಈಗ ಬಂದು ಬಿಟ್ಟಿದೆ. ಬ್ಲಾಗ್ನ ವೀಕ್ಷಕರ ಸಂಖ್ಯೆ ೫ ಸಾವಿರ ದಾಟಿದೆ. ಈ ವೇಗದಲ್ಲಿ ವೀಕ್ಷಕರು ಇನ್ನೂ ಬ್ಲಾಗ್ಗೆ ಬರಲಿ ಎಂದು ಶುಭ ಹಾರೈಸಿದವರು ಬಹಳಷ್ಟು ಮಂದಿ. ಅದರಲ್ಲೂ ರಾಜ್ಯದ ಹಿರಿಯ ಪತ್ರಕರ್ತರು, ಪರಿಸರವಾದಿಗಳು, ಹಿರಿಯ ಸಾಹಿತಿಗಳು, ಸಮಾಜ ಸೇವಕರು, ಕ್ರೀಡಾಪಟುಗಳು, ಸಿನಿಮಾ ತಾರೆಯರು, ಖ್ಯಾತ ನಾಮ ವೈದ್ಯರು,ನನ್ನ ನೆಚ್ಚಿನ ಗೆಳೆಯರ ವರ್ಗ ಶುಭಾಶಯ ತಿಳಿಸಿದ್ದಾರೆ. ಎಲ್ಲರಿಗೂ ಥ್ಯಾಂಕ್ಸ್..

ಇಂತೀ ನಿಮ್ಮವ
ರೇಗೊ ಬಾಲ್ಕನಿಯಿಂದ
ಸ್ಟೀವನ್ ರೇಗೊ, ದಾರಂದಕುಕ್ಕು

Thursday, July 28, 2011

ಅಸಲ್ ಸುನಾಮಿ


ಈಗ ದಕ್ಷಿಣ ಕನ್ನಡದ ಮನೆ- ಮನೆಗಳಲ್ಲಿ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ನೀಡಿದೆ. ಅದರಲ್ಲೂ ಗಾಂನಗರದಲ್ಲೂ ಚಿತ್ರ ಈ ವಾರ ತೆರೆ ಕಾಣುತ್ತಿದೆ. ‘ಅಸಲ್’ನ ಜತೆಯಲ್ಲಿ ಎಂಜಾಯ್ ಮಾಡಿಕೊಂಡು ಬನ್ನಿ.

ಕರಾವಳಿಯ ಕೋಸ್ಟಲ್ವುಡ್ ಸಿನ್ಮಾ ಇಂಡಸ್ಟ್ರಿಗೆ ಏಕ್ ದಂ ಹೈ ಡೋಸ್ ಗ್ಲುಕೋಸ್ ಸಿಕ್ಕಿದೆ. ತುಳು ಸಿನ್ಮಾ ಲ್ಯಾಂಡ್ನಲ್ಲಿ ಈಗ ‘ಒರಿಯರ್ದೊರಿ ಅಸಲ್’ ಹೊಸ ಮೈಲ್ ಸ್ಟೋನ್ ನೆಟ್ಟಿದೆ. ೨೫ ವರ್ಷಗಳ ಹಿಂದಿನ ಕರಾವಳಿಯಲ್ಲಿ ಬಿರುಗಾಳಿ ಎಬ್ಬಿಸಿದ ತುಳು ನಾಟಕ ‘ಒರಿಯರ್ದೊರಿ ಅಸಲ್ ’ಈಗ ಹಿರಿತೆರೆಯ ಮೇಲೆ ರಾಕೆಟ್ ವೇಗದಲ್ಲಿ ಓಡುತ್ತಿದೆ ಎನ್ನೋದು ರೆಕಾರ್ಡ್ ಬುಕ್ನಲ್ಲಿ ಬರೆದಿಟ್ಟುಕೊಳ್ಳಬೇಕಾದ ವಿಷ್ಯಾಯಾಗುತ್ತಿದೆ. ಕರಾವಳಿಯ ಪ್ರತಿಭಾವಂತ ರಂಗಭೂಮಿ ಕಲಾವಿದ ವಿಜಯ್ಕುಮಾರ್ ಕೊಡಿಯಾಲ್ಬೈಲ್ ಈಗ ಸಿನ್ಮಾದ ಮೂಲಕ ಗೆಲುವಿನ ನಗೆ ಬೀರಿ ನಿಂತಿದ್ದಾರೆ.
ಇದು ‘ಒರಿಯರ್ದೊರಿ ಅಸಲ್’ ಮಾತು . ಕರಾವಳಿಯ ಹತ್ತಾರು ಥಿಯೇಟರ್ಗಳಿಗೆ ಒಂದೇ ವೇಳೆ ದಾಳಿ ಇಟ್ಟ ‘ಅಸಲ್’ ಭರ್ಜರಿಯಾಗಿ ಶತ ದಿನಗಳತ್ತ ಮುನ್ನುಗ್ಗುತ್ತಿದೆ. ಅಸಲ್ ಇದ್ದ ಚಿತ್ರ ಮಂದಿರಗಳು ದಿನದಿಂದ ದಿನಕ್ಕೆ ಪ್ರೇಕ್ಷಕ ವರ್ಗದಿಂದ ತುಂಬಿ ತುಳುಕುತ್ತಿದೆ ಎನ್ನೋದು ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ರ ಆನ್ ದಿ ರೆಕಾರ್ಡ್ ಮಾತು. ತುಳು ನಾಟಕ ರಂಗದಲ್ಲಿ ತನ್ನದೇ ಆದ ಅಭಿಮಾನಿ ವರ್ಗವನ್ನು ಕ್ರಿಯೇಟ್ ಮಾಡಿಕೊಂಡ ವಿಜಯ್ ಕುಮಾರ್ ಅವರ ಗೆಲುವು ಒಂದು ಲೆಕ್ಕಚಾರದ ಪ್ರಕಾರ ನಿರೀಕ್ಷಿತ ಗೆಲುವು.
ವಿಜಯಣ್ಣ ಮುಟ್ಟಿದ್ದು ಎಲ್ಲವೂ ಸಕ್ಸಸ್ ಕಂಡಿದೆ ಎನ್ನೋದು ಅವರ ಆಪ್ತ ವಲಯದ ಮಾತಿದೆ. ಅವರ ಕ್ಯಾಂಪ್ನಿಂದ ಬಂದ ಎಲ್ಲ ನಾಟಕಗಳು ಸಾವಿರಾರು ಪ್ರದರ್ಶನ ಕಂಡಿದೆ. ಸಾಮಾಜಿಕ ಕಾಳಜಿ ಜತೆಯಲ್ಲಿ ಹಾಸ್ಯದ ಲೇಪವನ್ನು ಸೇರಿಸಿಕೊಂಡು ನಾಟಕಗಳನ್ನು ಪ್ರದರ್ಶನ ಮಾಡುವ ವಿಚಾರದಲ್ಲಿ ಕರಾವಳಿಯ ನಾಟಕ ಪ್ರಿಯರಿಗೆ ವಿಜಯ್ ಕುಮಾರ್ ಎ ವನ್ ಬ್ರ್ಯಾಂಡ್ ಎಂದೇ ಹೇಳಲಾಗುತ್ತಿದೆ. ಅದರಲ್ಲೂ ‘ಅಸಲ್’ ಇಡೀ ತುಳು ನಾಟಕ ರಂಗಭೂಮಿಯಲ್ಲಿಯೇ ಒಂದು ಮೈಲಿಗಲ್ಲು ಹಾಕಿದ ನಾಟಕ. ಈ ನಾಟಕದ ಯಶಸ್ವಿನಿಂದ ಹಲವಾರು ನಾಟಕ ಸಂಘಗಳು ಹುಟ್ಟಿಕೊಂಡಿತು.
ಕರಾವಳಿಯಲ್ಲಿ ವಿಶ್ವದ ಎಲ್ಲ ಸಿನ್ಮಾಗಳು ಬಂದು ಸಕ್ಸಸ್ ಆದರೂ ಕೂಡಾ ತುಳು ನಾಟಕಕ್ಕಂತೂ ಪ್ರೇಕ್ಷಕ ವರ್ಗದ ಕೊರತೆ ಬಿದ್ದಿಲ್ಲ. ವಿಜಯ್ ಕುಮಾರ್ ಅವರ ನಾಟಕಗಳು ಪ್ರದರ್ಶನವಾಗುತ್ತಿದೆ ಎಂದಾದರೆ ಅಲ್ಲಿ ಸಿನ್ಮಾ ಥಿಯೇಟರ್ಗಳೇ ಬರಿದಾಗಿ ಬಿಡುತ್ತಿತ್ತು ಎನ್ನುವ ಮಾತು ಕೂಡ ಕರಾವಳಿಯ ಸಿನ್ಮಾ ವಠಾರದಲ್ಲಿ ಚಾಲ್ತಿಯಲ್ಲಿದೆ. ಅಂದಹಾಗೆ ಈಗ ದಕ್ಷಿಣ ಕನ್ನಡದ ಮನೆ- ಮನೆಗಳಲ್ಲಿ ‘ಒರಿಯರ್ದೊರಿ ಅಸಲ್’ನದ್ದೇ ಮಾತು. ಇಡೀ ಕುಟುಂಬ ಸಮೇತರಾಗಿ ಹೋಗಿ ಹೊಟ್ಟೆ ತುಂಬಾ ನಕ್ಕು ಬರಬಹುದು ಎನ್ನುವ ಖಾತರಿಯ ಸರ್ಟಿ ಫಿಕೇಟ್ನ್ನು ತುಳು ಪ್ರೇಕ್ಷಕ ವರ್ಗ ಈಗಾಗಲೇ ನೀಡಿದೆ.
ಒಮ್ಮೆ ಕುಟುಂಬದ ಜತೆಯಲ್ಲಿ ಸಿನ್ಮಾ ಥಿಯೇಟರ್ಗಳಿಗೆ ಹೋಗಿ ಬಂದವರು ಗೆಳೆಯರ, ಸ್ನೇಹಿತೆಯರ, ಅಕ್ಕಪಕ್ಕದವರ ಒತ್ತಾಯಕ್ಕೆ ಮಣಿದು ಸಿನ್ಮಾ ನೋಡಿಕೊಂಡು ಬಂದು ಎಂಜಾಯ್ ಮಾಡುತ್ತಿದ್ದಾರೆ ಎನ್ನುವ ರಿಪೋರ್ಟ್ ಕಾರ್ಡ್ ನಿರ್ದೇಶಕರ ಕೈಗೆ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್. ಇದೇ ತುಳುನಾಡಿನ ಪ್ರೇಕ್ಷಕ ವರ್ಗದ ಕ್ರೇಜ್ ಕರಾವಳಿಯ ಉದ್ದಕ್ಕೂ ಸಿನ್ಮಾ ಶತದಿನಗಳತ್ತ ಓಡುವಂತೆ ಮಾಡುತ್ತಿದೆ.
ಅಂದಹಾಗೆ ತುಳು ಸಿನ್ಮಾದ ಇತಿಹಾಸದಲ್ಲಿಯೇ ‘ಅಸಲ್’ನದ್ದು ದೊಡ್ಡ ಗಳಿಕೆ. ಕನ್ನಡ ಸಿನ್ಮಾ ರೇಂಜ್ನಲ್ಲಿ ಈ ಚಿತ್ರ ಕರಾವಳಿಯಲ್ಲಿ ಬ್ಯುಸಿನೆಸ್ ಕುದುರಿಸಿದೆ. ದೊಡ್ಡ ದೊಡ್ಡ ಮಲ್ಟಿಫ್ಲೆಕ್ಸ್ ಥಿಯೇಟರ್ನಲ್ಲೂ ಬಿಂದಾಸ್ ಕಲೆಕ್ಷನ್ ಮಾಡಿದೆ. ತುಳುವರಿಗೆ ಭಾಷಾಭಿಮಾನವಿಲ್ಲ, ತುಳು ಸಿನ್ಮಾಗಳು ಬರೀ ಅವಾರ್ಡ್ಗೆ ಮಾತ್ರ ಮಾಡಿಕೊಂಡು ಬರುತ್ತಾರೆ ಎನ್ನುವ ಆರೋಪದ ಖಜಾನೆಗೆ ‘ಒರಿಯರ್ದೊರಿ ಅಸಲ್’ ನೇರವಾಗಿ ಬ್ಯುಸಿನೆಸ್ ಮೂಲಕ ಉತ್ತರ ನೀಡಿದೆ.
ಅದರಲ್ಲೂ ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ಗೆ ಮಾತ್ರ ಮೊರೆ ಹೋಗುತ್ತಿದ್ದ ಸೋಕಾಲ್ಡ್ ಹೈಫೈ ಮಂದಿ ಕೂಡ ‘ಅಸಲ್’ಗೆ ತಲೆತೂಗಿ ಬಂದಿದ್ದಾರೆ. ಚಿತ್ರ ಇರುವ ಪ್ರತಿ ಥಿಯೇಟರ್ ಮುಂದೆ ಪ್ರೇಕ್ಷಕ ವರ್ಗ ಕ್ಯೂ ನಿಂತುಕೊಂಡು ಟಿಕೇಟ್ ಸಿಗದೇ ಬ್ಲಾಕ್ ಮಾರ್ಕೆಟ್ ಟಿಕೇಟ್ಗೆ ಮೊರೆ ಹೋಗುವ ಸ್ಥಿತಿ ಉದ್ಭವವಾಗಿರೋದು ಸಧ್ಯಕ್ಕಂತೂ ‘ಅಸಲ್’ಗೆ ಮಾತ್ರ ಅನ್ನೋದು ವಿಷ್ಯಾ. ಇನ್ನೂ ರಂಗಭೂಮಿಯಲ್ಲಿ ಮಾತ್ರ ತನ್ನ ಸಾಮರ್ಥ್ಯ ತೋರಿಸುತ್ತಿದ್ದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇಲ್ಲಿ ತನ್ನ ಕ್ರಿಯೇಟಿವಿಟಿಗೆ ಧಕ್ಕೆಯಾಗದ ರೀತಿಯಲ್ಲಿ ಮ್ಯಾನೇಜ್ ಮಾಡಿಕೊಂಡು ಬಂದಿರೋದು ಚಿತ್ರದ ಯಶಸ್ವಿಯ ಕಾರಣದಲ್ಲೊಂದು ಎನ್ನಲಾಗುತ್ತಿದೆ.
ಕರಾವಳಿಯ ಮಾಧ್ಯಮಗಳ ಉದ್ದಕ್ಕೂ ವಿಭಿನ್ನ ರೀತಿಯ ಅಸಲ್ನ ಪ್ರಚಾರ ತಂತ್ರ. ಜಾಹೀರಾತುಗಳಲ್ಲಿ ಕಂಡು ಬರುತ್ತಿದ್ದ ಡಿಫರೆಂಟ್ ವರ್ಕ್ ಔಟ್ಗಳೆಲ್ಲವೂ ಚಿತ್ರದ ಯಶಸ್ವಿಯಲ್ಲಿ ಭಾಗಿಯಾಗಿದೆ. ಚಿತ್ರ ಕರಾವಳಿಯ ತುಳು ಪ್ರೇಕ್ಷಕ ವರ್ಗವನ್ನು ಬಹಳಷ್ಟು ಮೋಡಿ ಮಾಡಿದೆ. ಅದಕ್ಕಾಗಿ ತುಳುವರು ದೇಶ- ವಿದೇಶದ ಯಾವುದೇ ಮೂಲೆಯಲ್ಲಿರಲಿ ಅಲ್ಲಿ ಹೋಗಿ ಸಿನ್ಮಾ ತೋರಿಸಿಬರಬೇಕು ಎನ್ನೋದು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ರ ಮಾತು.
ಅದಕ್ಕಾಗಿ ಈ ವಾರ ಬೆಂಗಳೂರಿನಲ್ಲಿ ಚಿತ್ರ ತೆರೆ ಕಾಣಲಿದೆ. ಇಲ್ಲಿನ ಯಶಸ್ಸಿನ ನಂತರ ಮಧ್ಯಪ್ರಾಚ್ಯ ದೇಶಗಳಲ್ಲಿ ಹಾಗೂ ಬಾಲಿವುಡ್ ನಗರಿ ಮುಂಬಯಿಯಲ್ಲೂ ಚಿತ್ರವನ್ನು ದೊಡ್ಡ ಪ್ರಮಾಣದಲ್ಲಿ ತೆರೆಗೆ ತರುವ ಕುರಿತು ಮಾತುಕತೆ ನಡೆಯುತ್ತಿದೆ ಎನ್ನುತ್ತಾರೆ ವಿಜಯ್ ಕುಮಾರ್ ಕೊಡಿಯಾಲ್ಬೈಲ್. ತುಳು ಚಿತ್ರವನ್ನು ಸಾಟಲೈಟ್ ಚಾನೆಲ್ನವರು ಖರೀದಿ ಮಾಡೋದು ಬಹಳ ಕಡಿಮೆ. ಅಂತೂ ಇಂತೂ ಅವಾರ್ಡ್ ಬಂದರಂತೂ ಸರಕಾರದ ಅನದಲ್ಲಿರುವ ಚಾನೆಲ್ಗಳು ತುಳು ಚಿತ್ರವನ್ನು ಖರೀದಿ ಮಾಡುತ್ತಾರೆ. ಆದರೆ ‘ಅಸಲ್’ನ ಟಿವಿ ಹಕ್ಕುಗಳನ್ನು ಪಡೆಯಲು ಕೆಲವು ಖಾಸಗಿ ಚಾನೆಲ್ಗಳು ಮುಂದೆ ಬಂದಿದೆಯಂತೆ. ಆದರೆ, ಒಳ್ಳೆಯ ಬೆಲೆಗಾಗಿ ಕೊಡಿಯಾಲ್ಬೈಲ್ ಎದುರು ನೋಡುತ್ತಿದ್ದಾರೆ. ವಾರದೊಳಗೆ ಎತ್ತಂಗಡಿಯಾಗುವ ಸಿನಿಮಾಗಳ ಹಕ್ಕು ಒಳ್ಳೆಯ ಬೆಲೆಗೆ ಮಾರಾಟವಾಗುವಾಗ ‘ಅಸಲ್’ ಜನ ಮೆಚ್ಚಿದ ಚಿತ್ರ. ಸೋ. ವಿಜಯ್ ಕುಮಾರ್ ಅವರ ಕಾಯುವಿಕೆಗೆ ಅರ್ಥವಿದೆ ಅನ್ನಿಸೋಲ್ವ..?
(vk daily lvk puravani published dis article 29.07.2011)

Wednesday, July 27, 2011

‘ರಿಪ್ಪಡ್ ಜೀನ್ಸ್’ ಜಮಾನಾ !


‘ರಿಪ್ಪಡ್ ಜೀನ್ಸ್’ ಪ್ಯಾಂಟ್ ಇದು ಬರೀ ಜಂಟ್ಸ್ ಸೆಕ್ಷನ್ಗೆ ಮಾತ್ರ ಸೀಮಿತವಾಗಿಲ್ಲ. ಪಕ್ಕ ಗ್ಲಾಮರ್ ತುಂಬಿತುಳುಕಲು ನಟಿ ಮಣಿಯರು ರಿಪ್ಪಡ್ ಜೀನ್ಸ್ಗಳಿಗೆ ಮೊರೆ ಹೋಗುತ್ತಿದ್ದಾರೆ. ಟಾಲಿವುಡ್ ಬ್ಯೂಟಿ ಇಲಿಯಾನಾಗೂ ರಿಪ್ಪಡ್ ಜೀನ್ಸ್ ಮ್ಯಾಲೆ ಶಾಣೆ ಮೋಹ. ಇಲಿಯಾನಾ ರಿಪ್ಪಡ್ ಜೀನ್ಸ್ ಧರಿಸಿಕೊಂಡು ಬೀದಿಗೆ ಇಳಿದು ಬಿಟ್ಟರೆ ನೂರು ಕಣ್ಣುಗಳು ಬಂದು ಮುತ್ತಿಕೊಳ್ಳುತ್ತೆ ಎಂದು ಟ್ವಿಟ್ಟರ್ನಲ್ಲಿ ಖುದ್ದು ಇಲಿಯಾನಾ ಬಹಳ ಹಿಂದೆ ಹೇಳಿಕೊಂಡಿದ್ದರು.

ಜೀನ್ಸ್ ಪ್ಯಾಂಟ್ ಅದರಲ್ಲೂ ‘ರಿಪ್ಪಡ್ ಜೀನ್ಸ್ ’ ಪ್ಯಾಂಟ್ ಅಂದ್ರೆ ಯೂತ್ ಜನರೇಶನ್ನಲ್ಲಿ ಒಂಚೂರು ಕ್ರೇಜ್ ಜಾಸ್ತಿ ಮಗಾ ಎಂದು ಬಿಟ್ಟ್ರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಶಿವಣ್ಣ ಗಾಂನಗರದ ಯಾವುದೇ ಕಾರ್ಯಕ್ರಮಗಳಿಗೆ ಹೋಗಲಿ ಅವರು ಹಾಕಿಕೊಳ್ಳುವುದು ‘ರಿಪ್ಪಡ್ ಜೀನ್ಸ್’ ಪ್ಯಾಂಟ್ ಎನ್ನುವ ವಿಚಾರ ಬಹಳಷ್ಟು ಮಂದಿಗೆ ಗೊತ್ತಿದೆ. ಇದು ಒಬ್ಬ ಶಿವಣ್ಣರ ಕತೆಯಲ್ಲ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಜತೆಯಲ್ಲಿ ಸ್ಯಾಂಡಲ್ವುಡ್ನಲ್ಲಿ ಈಗ ರಿಪ್ಪಡ್ ಜೀನ್ಸ್ ಪ್ಯಾಂಟ್ ಧರಿಸುವ ಪರಂಪರೆ ಆರಂಭವಾಗಿದೆ.
ಇದು ಬರೀ ಜಂಟ್ಸ್ ಸೆಕ್ಷನ್ಗೆ ಮಾತ್ರ ಸೀಮಿತವಾಗಿಲ್ಲ. ಪಕ್ಕ ಗ್ಲಾಮರ್ ತುಂಬಿತುಳುಕಲು ನಟಿ ಮಣಿಯರು ಇಂತಹ ‘ರಿಪ್ಪಡ್ ಜೀನ್ಸ್’ ಪ್ಯಾಂಟ್ಗಳಿಗೆ ಮೊರೆ ಹೋಗುತ್ತಿದ್ದಾರೆ. ಟಾಲಿವುಡ್ ಬ್ಯೂಟಿ ಇಲಿಯಾನಾಗೂ ರಿಪ್ಪಡ್ ಜೀನ್ಸ್ ಮ್ಯಾಲೆ ಶಾಣೆ ಮೋಹ. ಇಲಿಯಾನಾ ರಿಪ್ಪಡ್ ಜೀನ್ಸ್ ಧರಿಸಿಕೊಂಡು ಬೀದಿಗೆ ಇಳಿದು ಬಿಟ್ಟರೆ ನೂರು ಕಣ್ಣುಗಳು ಬಂದು ಮುತ್ತಿಕೊಳ್ಳುತ್ತೆ ಎಂದು ಟ್ವಿಟ್ಟರ್ನಲ್ಲಿ ಖುದ್ದು ಇಲಿಯಾನಾ ಬಹಳ ಹಿಂದೆ ಹೇಳಿಕೊಂಡಿದ್ದರು. ಅದಕ್ಕಾಗಿ ಬಹಳಷ್ಟು ತೆಲುಗು ಸಿನ್ಮಾಗಳಲ್ಲಿ ಇಲಿಯಾನಾ ‘ರಿಪ್ಪಡ್ ಜೀನ್ಸ್’ ಬೇಕೇ ಬೇಕು ಎಂದು ಕಾಸ್ಟ್ಯೂಮ್ ಡಿಸೈನರ್ಗಳಿಗೆ ದೊಂಬಾಲು ಬಿದ್ದಿದ್ದಳು ಎಂದು ಅವರ ಆಪ್ತ ವಲಯದಿಂದ ಹೊರ ಬಂದ ಮಾತು.
ಇದು ಬರೀ ಸಿನ್ಮಾ ಲ್ಯಾಂಡ್ಗೆ ಸೀಮಿತವಾದ ಡ್ರೆಸ್ಕೋಡ್ ಅಲ್ಲ ಮಾರಾಯ್ರೆ. ರಿಪ್ಪಡ್ ಜೀನ್ಸ್ ಪ್ಯಾಂಟ್ ಜಮಾನಾ ಫ್ಯಾಶನ್ ಲೋಕದಲ್ಲೊಂದು ಡ್ರೆಂಟ್ ಸೆಟ್ಟರ್ ಕಾಸ್ಟ್ಯೂಮ್ ಅಂತಾ ಯೂತ್ ಜನರೇಶನ್ ಸೆಲ್ಟೆಕ್ಟ್ ಮಾಡಿದೆ. ಯೂತ್ ವರ್ಲ್ಡ್ಗೆ ಅಂತಹದ್ದೇ ಸೆಕ್ಸಿ ವಿದ್ ರಫ್ ಆಂಡ್ ಟಫ್ ಜೀನ್ಸ್ ಪ್ಯಾಂಟ್ ಮ್ಯಾಲೆ ಆಸಕ್ತಿ ಜಾಸ್ತಿಯಂತೆ. ರಿಪ್ಪಡ್ ಜೀನ್ಸ್ ಹಾಕಿಕೊಂಡು ಬೀದಿಗೆ ಇಳಿದಾಗ ನಾಲ್ಕಾರು ಮಂದಿ ತಾನು ಧರಿಸಿದ ಬಟ್ಟೆಯ ಬಗ್ಗೆ ಕುತೂಹಲದಿಂದ ನೋಡಬೇಕು. ಜತೆಗೆ ಡ್ರೆಸ್ಸೆನ್ಸ್ ಕುರಿತು ಮಾತನಾಡಬೇಕು ಎನ್ನುವ ಹಂಬಲ ಹೊಂದಿರುತ್ತದೆ ಎನ್ನುವ ಮಾತು ಎಲ್ಲರಿಗೂ ಗೊತ್ತು.
ಬಾಲಿವುಡ್ ನ್ಯೂ ಚಾಕಲೇಟ್ ಬಾಯ್ ರಣಬೀರ್ ಕಪೂರ್ರ ‘ಚಿಲ್ಲರ್ ಪಾರ್ಟಿ’ಯ ಹೊಸ ಐಟಂ ಸಾಂಗ್ ‘ಟಾಯ್ ಟಾಯ್ ಪಿಸ್ಸ್.. ’ನಲ್ಲಿ ಹಾಕಿಕೊಂಡ ಡ್ರೆಸ್ ಕೋಡ್ ಮೆಚ್ಚಿಕೊಂಡು ಮುಂಬಯಿ ಗಲ್ಲಿಯಲ್ಲಿರುವ ಠಪೋರಿ ಯೂತ್ ವರ್ಲ್ಡ್ ಶಾಣೆ ಇಷ್ಟಪಟ್ಟಿತ್ತು. ಸ್ಯಾಂಡಲ್ವುಡ್ನ ಸೂಪರ್ ಹಿಟ್ ಚಿತ್ರ ‘ಸೂಪರ್ನ ಉಪೇಂದ್ರರ ಸ್ಟೈಲ್ ಫ್ಯಾಶನ್ ಒಂದೇ ಸಲ ಯೂತ್ ಜನರೇಶನ್ನ್ನು ಟಾರ್ಗೆಟ್ ಮಾಡಿಕೊಂಡಿತ್ತು. ಇಂತಹ ಸ್ಟೈಲ್ ಸ್ಟೇಟ್ಮೆಂಟ್ಗಳನ್ನು ಫಾಲೋ ಮಾಡಿಕೊಂಡು ಯುವಜನತೆ ಈಗ ಬೆಳೆಯುತ್ತಿದೆ. ಆದರೆ ರಿಪ್ಪಡ್ ಜೀನ್ಸ್ ಪ್ಯಾಂಟ್ಗಳ ಜಮಾನಾ ಆರಂಭವಾಗಿ ಬಹಳ ವರ್ಷಗಳೇ ಆಗಿದೆ. ೧೯೬೦-೭೦ರ ದಶಕಗಳಲ್ಲಿ ವಿದೇಶದಲ್ಲಿ ಇಂತಹ ಜೀನ್ಸ್ ಪ್ಯಾಂಟ್ಗಳಿಗೆ ಬೇಡಿಕೆ ಕುದುರಿತ್ತು.
ಖ್ಯಾತ ಹಾಲಿವುಡ್ ನಟ ರಾಮೋನೋಸ್ ಇಂತಹ ರಿಪ್ಪಡ್ ಜೀನ್ಸ್ಗಳನ್ನು ಧರಿಸಿಕೊಂಡು ಸಿನ್ಮಾ ಮಾಡುತ್ತಿದ್ದರು. ಅವರನ್ನು ಫಾಲೋ ಮಾಡುತ್ತಿದ್ದ ಮಕ್ಕಳು ಇಂತಹ ಜೀನ್ಸ್ ಪ್ಯಾಂಟ್ಗಳಿಗೆ ಮೊರೆ ಹೋಗುತ್ತಿದ್ದರು. ಯಾಕೋ ಏನೋ ಈ ನಟ ಸಿನ್ಮಾ ಲ್ಯಾಂಡ್ ಬಿಟ್ಟು ಹೋದ ನಂತ್ರ ರಿಪ್ಪಡ್ ಜೀನ್ಸ್ಗೂ ಬ್ರೇಕ್ ಬಿತ್ತು. ೧೯೯೦ರ ನಂತರ ಹಾಲಿವುಡ್ ಸ್ಟಾರ್ ನಟ-ನಟಿಯರು ಮತ್ತೆ ರಿಪ್ಪಡ್ ಜೀನ್ಸ್ ಕಡೆ ಮುಖ ಮಾಡಿಬಿಟ್ಟರು. ಮತ್ತೆ ರಿಪ್ಪಡ್ ಜೀನ್ಸ್ ಪ್ಯಾಂಟ್ ಜಮಾನಾ ಚಿಗುರಿ ನಿಂತಿತು. ನಟಿ ಮಣಿಯರಾದ ಜೂಲಿಯಾ ರಾಬರ್ಟ್ಸ್, ಮೆಗ್ ರೇಯಾನ್, ಡ್ಯಾರೆಲ್ ಅನಾನ್, ಮಿಚೆಲ್ ಪಿಫೇರ್ ರಿಪ್ಪಡ್ ಜೀನ್ಸ್ನ ಬ್ರಾಂಡ್ ಅಂಬಾಸೀಡರ್ಗಳಂತೆ ಪ್ರಚಾರಕ್ಕೆ ಇಳಿದರು.
ರಿಪ್ಪಡ್ ಜೀನ್ಸ್ ಜತೆಯಲ್ಲಿ ಅದಕ್ಕೆ ತಕ್ಕಂತೆ ಟೀ- ಶರ್ಟ್, ಉದ್ದ ಕಾಲಿನ ಬೂಟು, ಬಿಚ್ಚಿ ಕಟ್ಟಿದ ಉದ್ದ ಕೂದಲು, ಮೇಕಪ್ ಸಹಿತ ಸ್ಕ್ರೀನ್ ಮೇಲೆ ಅವರು ಕಾಣಿಸಿಕೊಂಡರೆ ಪ್ರೇಕ್ಷಕರು ಎದ್ದು ನಿಂತು ಚಿತ್ರ ನೋಡುತ್ತಿದ್ದರು. ಅಲ್ಲಿಂದ ಬಾಲಿವುಡ್ ಸಿನ್ಮಾ ರಂಗಕ್ಕೆ ಎಂಟ್ರಿಯಾಗಲು ಈ ರಿಪ್ಪಡ್ ಜೀನ್ಸ್ ಬಹಳಷ್ಟು ಟೈಮ್ ತೆಗೆದುಕೊಂಡಿತ್ತು. ೨೦೦೦ರ ನಂತರ ಬಾಲಿವುಡ್ನಲ್ಲಿ ಅಕ್ಷಯ್ ಕುಮಾರ್ ರಿಪ್ಪಡ್ ಜೀನ್ಸ್ ಪ್ಯಾಂಟ್ ಪರವಾಗಿ ಪ್ರಚಾರಕ್ಕೆ ನಿಂತರು. ಅಲ್ಲಿಂದ ಶಾರೂಕ್ ಖಾನ್ ಹೀಗೆಯೇ ರಿಪ್ಪಡ್ ಜೀನ್ಸ್ ಧರಿಸುವ ನಟರ ಪಟ್ಟಿ ಬೆಳೆಯುತ್ತಾ ಸಾಗಿತು. ಬರೀ ನಟರಿಗೆ ಸೀಮಿತವಾಗಿದ್ದ ಈ ರಿಪ್ಪಡ್ ಜೀನ್ಸ್ ನಂತರದ ದಿನಗಳಲ್ಲಿ ನಟಿಮಣಿಯರನ್ನು ಆಕರ್ಷಿಸಲು ಆರಂಭ ಮಾಡಿತು.
ಮಂಗಳೂರು ಮೂಲದ ಫ್ಯಾಶನ್ ಡಿಸೈನರ್ ರಾಜೇಶ್ ಬಡ್ಡೂರು ಹೇಳುವಂತೆ ‘ಪಾಶ್ಚಿಮಾತ್ಯ ದೇಶಗಳಲ್ಲಿ ಈ ರಿಪ್ಪಡ್ ಜೀನ್ಸ್ಗೆ ಬಹಳ ಬೇಡಿಕೆ ಇತ್ತು. ಅಲ್ಲಿನ ಮಾರುಕಟ್ಟೆ ಅಧ್ಯಯನ ಮಾಡಿದ ಇತರ ದೇಶಗಳು ಈ ರಿಪ್ಪಡ್ ಜೀನ್ಸ್ಗೆ ಬೇಡಿಕೆ ಇಟ್ಟರು. ನಟ-ನಟಿಯರು ಈ ಪ್ಯಾಂಟ್ ಹಾಕಿಕೊಳ್ಳುವುದನ್ನು ನೋಡಿದ ಯೂತ್ ವರ್ಲ್ಡ್ ರಿಪ್ಪಡ್ ಜೀನ್ಸ್ ಪ್ಯಾಂಟ್ ಕುರಿತು ಕ್ರೇಜ್ ಬೆಳೆಸಿತು. ಇತ್ತೀಚೆಗೆ ಈ ಜೀನ್ಸ್ ಪ್ಯಾಂಟ್ಗಳಲ್ಲಿ ಬಹಳಷ್ಟು ಬದಲಾವಣೆಗಳು ಬಂದಿದೆ. ಪ್ಯಾಂಟ್ನ ಕೆಲವು ಭಾಗಗಳಲ್ಲಿ ಹರಿದು ಹೋಗುವಂತೆ ಡಿಸೈನರ್ಗಳು ಕತ್ತರಿ ಪ್ರಯೋಗ ಮಾಡುತ್ತಾರೆ. ಇನ್ನೂ ಕೆಲವು ಕಡೆ ನಾನಾ ರೀತಿಯ ಬಣ್ಣಗಳನ್ನು ಪ್ರಯೋಗ ಮಾಡುತ್ತಾರೆ. ಇಂತಹ ಜೀನ್ಸ್ ಪ್ಯಾಂಟ್ಗಳಿಗೆ ತಮ್ಮ ಲೇಬಲ್ಗಳನ್ನು ಹಾಕಿಕೊಂಡು ಮಾರುಕಟ್ಟೆಯೊಳಗೆ ಪ್ರಾಡಕ್ಟ್ಗಳನ್ನು ಇಳಿಸಿಬಿಡುತ್ತಾರೆ. ರಿಪ್ಪಡ್ ಜೀನ್ಸ್ ಬದಲಾಗಿ ಹೊಸ ಲೇಬಲ್ ಹಾಕಿದ ಡಿಸೈನರ್ ಅಲ್ಲಿ ಕ್ಲಿಕ್ ಆಗಿ ಬಿಡುತ್ತಾನೆ’ ಎನ್ನುತ್ತಾರೆ ಅವರು.
ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ರಿಪ್ಪಡ್ ಜೀನ್ಸ್ ಪ್ಯಾಂಟ್ ಕುರಿತು ಹೇಳುವುದಿಷ್ಟು: ಈ ಜೀನ್ಸ್ ಪ್ಯಾಂಟ್ಗಳು ಬಹಳಷ್ಟು ಕಂಪಾರ್ಟ್ ಅನ್ನಿಸಿಬಿಡುತ್ತದೆ. ಹಾಕಿಕೊಳ್ಳಲು ಕೂಡ ಬಹಳ ಖುಷಿ ಕೊಡುತ್ತದೆ. ಜೀನ್ಸ್ ಪ್ಯಾಂಟ್ ಯಾವಾಗಲೂ ಸಿಂಪಲ್ ಆಗಿ ಬಿಡುತ್ತದೆ. ಆದರೆ ರಿಪ್ಪಡ್ ಜೀನ್ಸ್ ಪ್ಯಾಂಟ್ಗಳಂತೂ ಸಿಂಪಲ್ನಲ್ಲಿ ಎಕ್ಸಾಟ್ರಾ ಅರ್ಡಿನರಿ. ನೋಡುವವರಿಗೂ ಜೀನ್ಸ್ ಪ್ಯಾಂಟ್ ಲೈಕ್ ಆಗಿಬಿಡುತ್ತದೆ ಎನ್ನುತ್ತಾರೆ ಅವರು. ಟೋಟಲಿ ರಿಪ್ಪಡ್ ಜೀನ್ಸ್ ಪ್ಯಾಂಟ್ಗಳಂತೂ ನಿಧಾನವಾಗಿ ವಿದೇಶದಿಂದ ನಮ್ಮ ಲೋಕಲ್ ಮಾರುಕಟ್ಟೆಗೆ ದಾಳಿ ಮಾಡುತ್ತಿದೆ. ಜತೆಯಲ್ಲಿ ಅಷ್ಟೇ ವೇಗವಾಗಿ ಯುವಜನತೆಯನ್ನು ಮೋಡಿ ಮಾಡಿಕೊಂಡು ಹೊಸ ಕ್ರೇಜ್ ಹುಟ್ಟುಹಾಕುತ್ತಿದೆ ಎನ್ನೋದು ಗ್ಯಾರಂಟಿ ಮಾತು. ಒಂದ್ ಸಾರಿ ಈ ರಿಪ್ಪಡ್ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹಾಗೆನೇ ಬೀದಿ ಸುತ್ತಿಕೊಂಡು ಬನ್ನಿ ನೋಡೋಣ ಹೆಂಗ್ ಕಾಣ್ತೀರಿ ಅಂತಾ.