Sunday, April 21, 2013
ಪೂಜಾ ಗುಪ್ತಾ ಹೊಸ ರಂಗು !
* ಸ್ಟೀವನ್ ರೇಗೊ, ದಾರಂದಕುಕ್ಕು
ಪಕ್ಕಾ ವೆಜ್ ಹುಡುಗಿ ಆದರೂ ಹಾಟ್‌ನೆಸ್ ಎನ್ನುವ ಮಂತ್ರ ಅವಳನ್ನು ನೋಡಿದಾಗ ಪಠಿಸಿ ಹೋಗುತ್ತದೆ. ತೆಳ್ಳಗೆ ಬೆಳ್ಳಗೆ ಇರುವ ಈ ಬಳುಕಿನ ಬಳ್ಳಿಯ ಹೆಸರೇ ಪೂಜಾ ಗುಪ್ತಾ. ಬಾಲಿವುಡ್ ಪಡಸಾಲೆಯಲ್ಲಿ ಹೊಸ ಎಂಟ್ರಿ ಎನ್ನುವುದಾದರೆ ಅದು ಟೋಟಲಿ ತಪ್ಪು. ಕೋರಿಯೋಗ್ರಾಫರ್ ರೆಮೋ ಡಿ ಸೋಜರ 'ಫಾಲ್ತೂ' ಸಿನಿಮಾದಲ್ಲಿ ಪೂಜಾ ಚಾನ್ಸ್ ಗಿಟ್ಟಿಸಿಕೊಂಡು ಗೆದ್ದು ಬಂದಿದ್ದಳು. ಇದೇ ಪೂಜಾ ನಾನ್ ವೆಜ್ ಎಂದಿಗೂ ಮುಟ್ಟುವುದೇ ಇಲ್ಲ ಎಂದುಕೊಂಡು ಪೇಟಾ ಇಂಡಿಯಾದ ಲೋಗೋ ಅಂಟಿಸಿಕೊಂಡಿದ್ದಳು.
ಅಂದಹಾಗೆ 2007ರಲ್ಲಿ ಪೂಜಾ ಎಕ್ಸ್ ಮಿಸ್ ಇಂಡಿಯಾ ಯೂನಿವರ್ಸ್ ಎನ್ನುವ ಕಿರೀಟ ಹೊತ್ತುಕೊಂಡು ಮೆರದಾಕೆ ಅದರಲ್ಲೂ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 9 ಸ್ಥಾನದಲ್ಲಿ ಕೂತು ಬೆರಗು ಮೂಡಿಸಿದ್ದಳು. ಪೂಜಾ ದಿಲ್ಲಿಯ ಗಲ್ಲಿಯಲ್ಲಿ ಓದಿದ್ದು, ಬೆಳೆದಿದ್ದು. ಆದರೆ ರ‌್ಯಾಂಪ್ ಮೇಲೆ ಓಡಿದ್ದು ಮಾತ್ರ ಮುಂಬಯಿ ಎನ್ನುವ ಬಣ್ಣದ ನಗರಿಯಲ್ಲಿ. ಜರ್ಮನಿಯಲ್ಲಿ ಭಾರತೀಯ ಪ್ರವಾಸೋದ್ಯಮ ರಾಯಬಾರಿ ಸೇರಿದಂತೆ ಏಡ್ಸ್ ಕುರಿತಾಗಿ ಜಾಗೃತಿ ಹುಟ್ಟುಹಾಕುವ ಕೆಲಸದಲ್ಲೂ ಪೂಜಾ ಸಿಕ್ಕಾಪಟ್ಟೆ ಕೆಲಸ ಮಾಡಿಕೊಂಡು ಬಂದಿದ್ದಾರೆ.
ಮಹಿಳೆಯರು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಂಡು ಸ್ವತಂತ್ರವಾಗಿ ಬದುಕಬೇಕು ಎನ್ನುವ ವಾದದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪೂಜಾ ಗುಪ್ತಾ, ಮಾರ್ಶಲ್ ಆರ್ಟ್ಸ್ ಕಲೆಯನ್ನು ಜಪಾನಿನಿಂದ ಕಲಿತುಕೊಂಡು ಬಂದಿದ್ದಾರೆ. ಮಾರ್ಶಲ್ ಆರ್ಟ್ಸ್ ಗೆ ಸಂಬಂಧಪಟ್ಟ ಬಹುತೇಕ ಪಂದ್ಯಾಟಗಳಲ್ಲಿ ಪ್ರಶಸ್ತಿ ಗೆದ್ದು ಬಂದಿರುವ ಪೂಜಾಳ ಮನೆಯ ತುಂಬಾ ಗೆದ್ದುಕೊಂಡಿರುವ ಪ್ರಶಸ್ತಿಗಳ ಸಾಲೇ ಕೂತಿದೆ. ಈಗ ಪೂಜಾ ಬಟ್ಟಲಿನಲ್ಲಿ ಎರಡು ಚಿತ್ರಗಳಿವೆ. ಒಂದು ಗೋ ಗೋ ಗೋವಾ ಹಾಗೂ ಸುಸೈ ಗಣೇಶನ್ ಅವರ ಶಾರ್ಟ್‌ಕಟ್ ರೋಮಿಯೋ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎರಡು ಚಿತ್ರಗಳು ಇದೇ ತಿಂಗಳಲ್ಲಿ ಥಿಯೇಟರ್‌ಗೆ ಬಡಿಯುವ ಸಾಧ್ಯತೆ ಇದೆ.
ಸೈಫ್, ನೀಲ್ ನಿತಿನ್ ಪೂಜಾರ ಬೆಸ್ಟ್ ಫ್ರೆಂಡ್ಸ್:
ಗೋ ಗೋ ಗೋವಾ ಸಿನಿಮಾದಲ್ಲಿ ಒಟ್ಟಾದ ಪೂಜಾ ಹಾಗೂ ಸೈಫ್ ತುಂಬಾನೇ ಕ್ಲೋಸ್ ಫ್ರೆಂಡ್ಸ್. ಸೈಫ್ ಕುರಿತು ಪೂಜಾ ಹೇಳುವುದಿಷ್ಟು: ತುಂಬಾನೇ ನೇರವಾಗಿ ಮಾತಿಗೆ ಇಳಿಯುವ ಸೈಫ್ ಪಾತ್ರದಲ್ಲೂ ಅಷ್ಟೇ ಆಳವಾಗಿ ನುಗ್ಗಿ ಬಿಡುತ್ತಾರೆ. ಗೋ ಗೋ ಗೋವಾದಲ್ಲಿ ನಮ್ಮಿಬ್ಬರ ಕೆಮೆಸ್ಟ್ರಿ ತುಂಬಾನೇ ಚೆನ್ನಾಗಿ ವರ್ಕ್ ಆಗಿದೆ ಎನ್ನೋದು ಚಿತ್ರದ ಪ್ರೋಮೋಗಳನ್ನು ನೋಡಿದ ಪ್ರೇಕ್ಷಕರು ಹೇಳುವ ಮಾತು ಎನ್ನುತ್ತಾರೆ ಪೂಜಾ.
ಶಾರ್ಟ್‌ಕಟ್ ನಲ್ಲೂ ನೀಲ್ ನಿತಿನ್ ಮುಕೇಶ್ ತುಂಬಾ ಒಳ್ಳೆಯ ಗೆಳೆಯ. ನಟನೆ ಕುರಿತು ನನಗೆ ಆಗಾಗ ಟಿಪ್ಸ್ ಕೊಡುತ್ತಾ ಇರುತ್ತಾರೆ. ಚಿತ್ರವನ್ನು ಕೀನ್ಯಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಮಾಸಾಮೀರಾದಲ್ಲಿ 45 ಡಿಗ್ರಿ ಉಷ್ಣಾಂಶ ಇತ್ತು. ಚಿತ್ರ ಕಾಡಿನ ನಡುವೆ ನಡೆಯುತ್ತಿತ್ತು. ಅಲ್ಲಿ ಯಾವುದೇ ಏರ್‌ಕಂಡೀಷನ್, ತಂಪು ನೀರು ಇರಲೇ ಇರಲಿಲ್ಲ. ನಾಲ್ಕು ದಿನಗಳ ಕಾಲ ಈ ಚಿತ್ರೀಕರಣದಲ್ಲಿ ನನಗೆ ಹಾಗೂ ನೀಲ್‌ಗೆ ಸನ್ ಬ್ರನ್ಸ್ ಉಂಟಾಗಿತ್ತು. ಇಲ್ಲಿ ನಾವಿಬ್ಬರೂ ಕಲಿತುಕೊಂಡ ಪಾಠ ಇಷ್ಟೇ: ನಾವು ಸಣ್ಣ ಪುಟ್ಟ ವಿಚಾರಗಳಿಗೆ ಸೋತು ಕೂರದೆ ಸವಾಲಿನ ರೀತಿಯಲ್ಲಿ ಸ್ವೀಕರಿಸಿಕೊಂಡು ಮುನ್ನಡೆಯಬೇಕು. ಆಗ ಮಾತ್ರ ನಾವು ಬಲಿಷ್ಠರಾಗಲು ಸಾಧ್ಯ ವಾಗುತ್ತದೆ.
ಪೂಜಾ ಇಷ್ಟ- ಕಷ್ಟ ಏನ್ ಗೊತ್ತಾ..?
ಪೂಜಾ ಗುಪ್ತಾಳಿಗೆ ಮೊಬೈಲ್ ಬಿಟ್ಟು ಬದುಕೋದು ತುಂಬಾನೇ ಕಷ್ಟವಂತೆ. ಯಾವ ಕಡೆ ಹೋದರೂ ಕೂಡ ಪೂಜಾಳ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಯಾವುದೇ ಕೆಲಸಗಳು ಇಲ್ಲದೇ ಇದ್ದಾಗ ಪೂಜಾ ಗುಪ್ತಾ ಪೈಟಿಂಗ್ ಮಾಡುತ್ತಾರೆ. ಅವರ ಪೇಂಟಿಂಗ್‌ಗಳ ಪ್ರದರ್ಶನ ಕೂಡ ದಿಲ್ಲಿಯಲ್ಲಿ ನಡೆದಿತ್ತು. ಟ್ರಾವೆಲಿಂಗ್, ಕುದರೆ ಸವಾರಿ, ಯೋಗ, ಕತೆ ಬರೆಯೋದು ಪೂಜಾಳಿಗೆ ಇಷ್ಟ. ಬಾಲಿವುಡ್ ನಲ್ಲಿ ಪೂಜಾ ಇಷ್ಟ ಪಡುವ ಹುಡುಗ ಅರ್ಜುನ್ ರಾಂಪಾಲ್. ಅರ್ಜುನ್ ಮೊಡೆಲಿಂಗ್ ದುನಿಯಾದಿಂದ ಬಂದವರು ಅವರನ್ನೇ ರೋಲ್ ಮಾಡೆಲ್ ರೀತಿಯಲ್ಲಿಯೇ ತೆಗೆದುಕೊಂಡು ಮುಂದೆ ಹೋಗುತ್ತಿದ್ದಾರೆ.
' ಪೂಜಾ ಗುಪ್ತಾ ತುಂಬಾ ಪ್ರತಿಭಾವಂತ ಹುಡುಗಿ. ಶಾರ್ಟ್‌ಕಟ್ ರೋಮಿಯೋನಲ್ಲಿ ಅವಳಿಗೆ ಹೇಳಿ ಮಾಡಿಸಿ ಪಾತ್ರವೊಂದಿದೆ. ಮೋಸ, ಅಪ್ರಾಮಾಣಿಕತೆಯ ನಡುವೆ ನಡೆಯುವ ಕತೆಯಲ್ಲಿ ಪೂಜಾ ಪಾತ್ರಕ್ಕೆ ತಕ್ಕ ಹುಡುಗಿಯಾಗಿದ್ದಾರೆ. ಗ್ಲಾಮರ್ ಜತೆಯಲ್ಲಿ ನಟನೆಗೂ ಪೂಜಾ ನ್ಯಾಯ ಒದಗಿಸಿದ್ದಾಳೆ. ಈ ಕಾರಣದಿಂದ ಶಾರ್ಟ್ ಕಟ್ ರೋಮಿಯೋ ತಮಿಳಿಗೂ ತಂದರೂ ಅಲ್ಲಿ ಅವಳೇ ನಾಯಕಿಯಾಗುತ್ತಾಳೆ.
-ಸುಸೈ ಗಣೇಶನ್
ಖ್ಯಾತ ತಮಿಳು ಚಿತ್ರ ನಿರ್ದೇಶಕ ಹಾಗೂ ಶಾರ್ಟ್‌ಕಟ್ ರೋಮಿಯೋ ನಿರ್ದೇಶಕ
(vk lvk ublished dis aricle)
Friday, April 19, 2013
ಕಿನಾರೆ ಮನ: ಬಾರ್ನಾ ಇನ್ ಗೋವಾ
* ಸ್ಟೀವನ್ ರೇಗೊ, ದಾರಂದಕುಕ್ಕು
ಅಮಲಿನ ಕಡಲಿನಲ್ಲಿ ತೇಲಿಸಿ ಬಿಡುವ ಸೌಂದರ್ಯದ ಗಣಿ. ತುಟಿ ಅಂಚಿನಲ್ಲಿ ಮಿಂಚಿ ಮರೆಯಾಗುವ ನಗು. ದುಂಡುಮೊಗದಲ್ಲಿ ತುಂಬಿದ ಸೌಮ್ಯತೆ. ಯಾರನ್ನೋ ಹುಡುಕುತ್ತಿರುವ ದುಂಡು ಬಟ್ಟಲಿನ ನಯನಗಳು; ಎಲ್ಲವೂ ಜತೆಯಾಗಿ ಸೇರಿಕೊಂಡರೆ, ಆಕೆಯೇ ರಮ್ಯಾ ಬಾರ್ನಾ.
ಗ್ಲಾಮರ್ ಲೋಕದ ಬಳುಕಿನ ಜತೆಗೆ ಆ್ಯಕ್ಟಿಂಗ್‌ನ ಪಾಠಗಳನ್ನು ಸರಿಯಾಗಿ ಕಲಿತುಕೊಂಡು ನಟಿಸಲು ಬಂದ ರಮ್ಯಾ ಬಾರ್ನಾ ಬರೀ ಕನ್ನಡ ಸಿನಿಮಾಗಳಿಗೆ ಸೀಮಿತವಾದ ಹುಡುಗಿಯಲ್ಲ ಅನ್ನೋದು ಕರಾವಳಿಗರ ಮಾತು. ಕಾರಣ ತುಳುವಿನಲ್ಲಿ ಭರ್ಜರಿಯಾಗಿ ಓಡಿದ ಚಿತ್ರ 'ಒರಿಯರ್ದೊರಿ ಅಸಲ್'ನ ಪ್ರೀತಿಯ ರೋಲ್‌ನಲ್ಲಿ ರಮ್ಯಾ ಬಾರ್ನಾ ಕಾಣಿಸಿಕೊಂಡಿದ್ದು ತುಳುವರಿಗೆ ತುಂಬಾನೇ ಲೈಕ್ ಆಗಿದೆ. ಜತೆಗೆ ಚಿತ್ರದ ಪಾತ್ರ ಸಿಕ್ಕಾಪಟ್ಟೆ ಕ್ಲಿಕ್ ಆಗಿದೆ.
ಮದಿರೆ ಗ್ರಾಮದ ಅನುಭವ:
ಇಂತಹ ರಮ್ಯಾ ಬಾರ್ನಾಗೆ ಗೋವಾ ಇಷ್ಟದ ಟೂರಿಂಗ್ ಸ್ಪಾಟ್. ವರ್ಷದಲ್ಲಿ ಒಂದೆರಡು ಬಾರಿ ಗೋವಾದ ಬೀಚ್‌ನ ಮರಳಿನಲ್ಲಿ ಹೊರಳಾಡಿಕೊಂಡು ಬರಲೇ ಬೇಕು. ವರ್ಷದ ಆರಂಭದ ತಿಂಗಳಲ್ಲಿ ಒಂದ್ ಸಾರಿ ಹೋದರೆ ಮತ್ತೊಂದು ಸಲ ವರ್ಷದ ಕೊನೆಯ ಭಾಗದಲ್ಲಿ ಗೋವಾದ ಪ್ರಮುಖ ಬೀಚ್‌ಗಳಿಗೆ ರೌಂಡ್ ಹಾಕಿಕೊಂಡು ಬರುತ್ತಾರೆ.
ಈ ಬಾರಿ ಗೋವಾದ ಪಣಜಿಯಲ್ಲಿರುವ ಅಂಜುಮ್ ಬೀಚ್‌ನಲ್ಲಿ ರಮ್ಯಾ ಬಾರ್ನಾ ಠಿಕಾಣಿ ಹೂಡಿದ್ದರು. ಗದಗದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಬಂದಿದ್ದ ರಮ್ಯಾ ತಮ್ಮ ಸ್ನೇಹಿತೆಯ ಬರ್ತ್‌ಡೇ ಪಾರ್ಟಿಗೆ ಆಯ್ಕೆ ಮಾಡಿಕೊಂಡದ್ದು ಅಂಜುಮ್ ಬೀಚ್‌ನ್ನು. ಇಲ್ಲಿಯ ಸೂರ್ಯಾಸ್ತಮಾನದ ದೃಶ್ಯವನ್ನು ರಮ್ಯಾ ವರ್ಣನೆ ಮಾಡಿದ್ದು ಹೀಗೆ 'ಗೋವಾ ನನಗೆ ಸಿಕ್ಕಾಪಟ್ಟೆ ಇಷ್ಟ. ಅದರಲ್ಲೂ ಬೀಚ್‌ನಲ್ಲಿ ನಿಂತು ಸಂಜೆ ಸೂರ್ಯಾಸ್ತಮಾನದ ಆಟಗಳು ಇನ್ನೂ ಚೆನ್ನಾಗಿ ಇರುತ್ತೆ. ಸೂರ್ಯ ಬೀಚ್‌ನ ಕೊನೆಯಲ್ಲಿ ಎಲ್ಲೋ ಬಿದ್ದು ಹೋಗುತ್ತಿದ್ದಾನೆಂಬ ಭಾಸವಾಗುತ್ತದೆ ಎನ್ನುತ್ತಾರೆ.
'ಈ ಬಾರಿ ಎರಡ್ಮೂರು ದಿನ ಮಾತ್ರ ಗೋವಾದಲ್ಲಿ ಉಳಿಯುವ ಅವಕಾಶ ಬಂತು. ಉಳಿದಂತೆ ಯಾವಾಗಲೂ ಒಂದು ವಾರವಾದರೂ ನಿಂತು ಬರುತ್ತೇನೆ. ಇಲ್ಲಿನ ಸೀ ಫುಡ್ಡಂತೂ ರಿಯಲಿ ಸೂಪರ್ ಆಗಿರುತ್ತದೆ. ಮಂಗಳೂರು ಬಿಟ್ಟರೆ ನನಗೆ ಸೀ ಫುಡ್ ರುಚಿ ಹತ್ತಿಸಿದ ಊರು ಗೋವಾ. ಇಲ್ಲಿನ ಮಸಾಲೆಯಲ್ಲಿ ಹುರಿದ ಸಿಗಡಿ ಮೀನು ಬೊಂಬಾಟ್ ಟೇಸ್ಟ್. ಬೆಂಗಳೂರಿಗೆ ಬಂದ ನಂತರವೂ ಈ ಮೀನಿನ ಅಡುಗೆ ಮಾಡಲು ಪ್ರಯತ್ನಿಸಿ ಸೋತು ಹೋದೆ. ಗೋವಾದ ಸೀಫುಡ್ ಟೇಸ್ಟ್ ಅಲ್ಲಿಗೆ ಮಾತ್ರ ಮೀಸಲು' ಎನ್ನುತ್ತಾರೆ ರಮ್ಯಾ.
ಗೋವಾ ಬಿಟ್ಟರೆ ರಮ್ಯಾರಿಗೆ ರಾಜಸ್ತಾನ ಇಷ್ಟವಾದ ಟೂರಿಂಗ್ ಸ್ಪಾಟ್. ರಾಜ್ಯದಲ್ಲಿ ಕೂರ್ಗ್‌ನ ಕಾಫಿ ತೋಟಗಳ ನಡುವೆ ಇರೋದು ಕೂಡ ಬಹಳ ಇಷ್ಟ. ರಾಜಸ್ತಾನದಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ಆಗಾಗ ಭೇಟಿ ಕೊಟ್ಟು ಬರುವುದು ಇದೆ. ವಿದೇಶದಲ್ಲಿ ದುಬಾಯಿ, ಹಾಂಕಾಂಗ್ ಮೆಚ್ಚಿನ ತಾಣಗಳ ಲೀಸ್ಟ್‌ನಲ್ಲಿದೆ. ಸಿನಿಮಾ ಚಿತ್ರೀಕರಣ ಇಲ್ಲದೇ ಇದ್ದಾಗ ಟೂರಿಂಗ್ ಸ್ಪಾಟ್‌ಗಳನ್ನು ಹುಡುಕುವುದು ರಮ್ಯಾ ಖಯಾಲಿ. 'ಚಿತ್ರೀಕರಣದ ಒತ್ತಡಗಳ ನಡುವೆ ಕೊಂಚ ಸಮಯ ಫ್ಯಾಮಿಲಿ, ಫ್ರೆಂಡ್ಸ್‌ಗಳ ಜತೆಯಲ್ಲಿ ಕಳೆಯುವುದು ಒಳ್ಳೆಯದು' ಅಂತಾರೆ.
ಸಿನಿಮಾಗ್ರಫಿ
ರಮ್ಯಾ ಬಾರ್ನಾ ಸದ್ಯಕ್ಕೆ 'ನಟೋರಿಯಸ್' ಸಿನಿಮಾ ಮುಗಿಸಿದ್ದಾಗಿದೆ. ಇನ್ನೂ ರಾಜಕಾರಣಿ ಜಮೀರ್ ಆಹ್ಮದ್ ಪುತ್ರನ ಜತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕರಾವಳಿಯ ಕೋಸ್ಟಲ್‌ವುಡ್‌ನಲ್ಲಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್‌ರ ಹೊಸ ಚಿತ್ರ ಮದಿಮೆ ಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಈ ವರ್ಷ ಇನ್ನೆರಡು ಸಿನಿಮಾಗಳಿಗೆ ಬುಕ್ ಆಗಿದ್ದಾರೆ. ಟೋಟಲಿ ಬಿಝಿ ಸಿನಿಮಾ ಲೈಫ್‌ನಲ್ಲಿ ರಮ್ಯಾ ಬಾರ್ನಾ ಟೂರ್ ಸ್ಪಾಟ್‌ಗಳಿಗೂ ಸಮಯ ಮೀಸಲಿಡುತ್ತಾರೆ.
ಚಿಟ್ ಚಾಟ್
ಗ್ಲಾಮರ್ ಹಾಗೂ ಎಕ್ಸ್‌ಪೋಸಿಂಗ್ ಎರಡು ತುಂಬಾನೇ ಭಿನ್ನ ಸಬ್ಜೆಕ್ಟ್. ಗ್ಲಾಮರ್ ಎನ್ನೋದು ಪ್ರತಿಯೊಬ್ಬ ಸಿನಿಮಾ ನಟಿಗೆ ಇರಬೇಕಾದ ಆಭರಣ. ರಮ್ಯಾ ಬಾರ್ನಾ ಎರಡರಲ್ಲಿ ಯಾವ ಸೈಡ್ ನಿಲ್ಲುತ್ತಾರೆ ಎಂದರೆ ರಮ್ಯಾ ಹೀಗೇಳುತ್ತಾರೆ. ಪಾತ್ರಗಳೇ ಎಕ್ಸಪೋಸ್ ಬಯಸಿದಾಗ ಖಂಡಿತವಾಗಿಯೂ ಆ ನಿಟ್ಟಿನಲ್ಲಿ ಯೋಚನೆ ಮಾಡುತ್ತೇನೆ. ಆದರೆ ಅನಗತ್ಯ ಎಕ್ಸ್‌ಪೋಸಿಂಗ್ ನನಗೆ ಇಷ್ಟವಿಲ್ಲ. ಪಾತ್ರದ ಬೇಡಿಕೆಗೆ ತಕ್ಕಂತೆ ಎಕ್ಸ್‌ಪೋಸಿಂಗ್ ಇರಬೇಕು. ಐಟಂ ಸಾಂಗ್‌ನಲ್ಲಿ ಕುಣಿಯುವ ನಾಯಕಿ ಗ್ಲಾಮರಸ್ ಆಗಿ ಕಂಡರೆ ಸಾಲದು. ಎಕ್ಸ್‌ಪೋಸ್ ಮಾಡಬೇಕು ಎಂದು ಐಟಂ ಸಾಂಗ್ ಬಯಸುತ್ತದೆ.
ಬಿಡುವಾದಾಗ ಫ್ರೆಂಡ್ಸ್‌ಗಳ ಜತೆಯಲ್ಲಿ ಶಾಪಿಂಗ್ ಮಾಡುತ್ತೇನೆ. ಗೆಳೆಯರ ಜತೆಗೆ ಸಿನಿಮಾ ನೋಡುತ್ತೇನೆ. ತುಂಬಾನೇ ಫ್ರೀ ಟೈಮ್ ಇತ್ತು ಅಂದ್ರೆ ಹೆತ್ತವರ, ಗೆಳೆಯರ ಜತೆಯಲ್ಲಿ ಲಾಂಗ್ ಟೂರ್‌ಗೆ ಹೋಗಿ ಬರುತ್ತೇನೆ. ಕಾಲೇಜ್‌ನಲ್ಲಿದ್ದಾಗ ಹೆಚ್ಚು ಕಾದಂಬರಿಗಳನ್ನು ಓದುತ್ತಿದ್ದೆ ಆದರೆ ಈಗ ಓದಲು ಟೈಮ್ ಸಿಕ್ತಿಲ್ಲ .
- ರಮ್ಯಾ ಬಾರ್ನಾ
(vk lvk pblished dis article on 20.04.2013)
Tuesday, April 9, 2013
ಮಣಿಕಂಠಿಹಾರದಲ್ಲಿ ಲಜ್ಜೋ
* ಸ್ಟೀವನ್ ರೇಗೊ, ದಾರಂದಕುಕ್ಕು
ಮಣಿರತ್ನಂ ಮತ್ತೆ ಎದ್ದು ನಿರ್ದೇಶಕನ ಕುರ್ಚಿಯ ಮೇಲೆ ಕೂತಿದ್ದಾರೆ. ಅವರ ಹಿಂದಿನ ಚಿತ್ರ 'ಕಡಲ್' ಹೊಸಬರ ಜತೆಯಲ್ಲಿ ಹಳೆ ಮುಖಗಳನ್ನು ಇಟ್ಟುಕೊಂಡು ಹೊಸ ಕ್ರಾಂತಿ ಮಾಡಲು ಹೋಗಿ ಸೋಲು- ಗೆಲುವಿನ ತಕ್ಕಡಿಯಲ್ಲಿ ಬರೋಬರಿ ತೂಗಿಕೊಂಡಿದ್ದರು. ಅದಕ್ಕೂ ಮಿಗಿಲಾಗಿ 'ರಾವಣ್' ಕಹಿ ಸೋಲಿನ ನಡುವೆ ಕೂಡ 'ಕಡಲ್'ನಲ್ಲಿ ಏನಾದರೂ ಗೆಲುವು ಸಿಗುತ್ತಾ ಎಂದು ಕಾದು ಕೂತಿದ್ದ ಮಣಿರತ್ನಂ, 'ಕಡಲ್'ನಲ್ಲೂ ನಿರಾಶೆಯನ್ನು ಕಟ್ಟಿಕೊಂಡು ಮುನ್ನಡೆಯಬೇಕಾಯಿತು.
ಆದರೂ ನಿರ್ದೇಶಕ ಮಣಿರತ್ನಂ ಸೋಲಿನಲ್ಲೂ ಎದ್ದು ನಿಲ್ಲುತ್ತಾರೆ. ಮತ್ತೆ ಓಡಿ ಗೆದ್ದು ಬರುತ್ತಾರೆ ಎನ್ನುವ ನಂಬಿಕೆಯ ಪೊಟ್ಟಣವನ್ನು ಹಿಡಿದುಕೊಂಡು ಸಿನಿಮಾ ನಿರ್ಮಾಪಕರು ಕಾದು ಕೂತಿದ್ದಾರೆ. ಅಂದಹಾಗೆ ನಿರ್ದೇಶಕ ಮಣಿರತ್ನಂಗಾಗಿ ಕಾದು ಕೂತವರಿಗೆ ಖುಷ್ ಖಬ್ರಿ.. ಮಣಿ ಮತ್ತೆ ಚಿತ್ರ ನಿರ್ದೇಶನಕ್ಕೆ ಇಳಿಯಲಿದ್ದಾರೆ. ಈ ಬಾರಿಯ ಸಿನಿಮಾ ಭಾರತ ಹಾಗೂ ಪಾಕಿಸ್ತಾನದ ನಡುವಿನ ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ಮಾಡುತ್ತಿದ್ದಾರೆ.
ಮಣಿರತ್ನಂ ಎಂದಾಕ್ಷಣ ಅವರ ಚಿತ್ರಗಳಲ್ಲಿ ಕೋಮು ಸೂಕ್ಷ್ಮ ಎಳೆಗಳಿಗೆ ಜಾಸ್ತಿ ಮಹತ್ವ. ಅದನ್ನೇ ಬಂಡವಾಳವಾಗಿಟ್ಟುಕೊಂಡು ಇಡೀ ಎರಡು ಗಂಟೆಯ ಸಿನಿಮಾವನ್ನು ಭರ್ಜರಿಯಾಗಿ ಮುನ್ನಡೆಸುತ್ತಾರೆ. ಈಗ 'ಲಜ್ಜೋ' ಸಿನಿಮಾ ಇವೆಲ್ಲ ವಿಚಾರಗಳನ್ನು ಇಟ್ಟುಕೊಂಡು ಮಣಿ ಪ್ರೇಕ್ಷಕರ ಮುಂದೆ ತರಲು ಪ್ರಯತ್ನ ಪಡುತ್ತಿದ್ದಾರೆ. ರಾಜಸ್ಥಾನದ ಪುಟ್ಟ ಗ್ರಾಮವೊಂದರಲ್ಲಿ ಮಣಿಯ ಕ್ಯಾಮೆರಾಗಳು ಓಡಾಡಲಿದೆ.
ಮಣಿಯ 'ಲಜ್ಜೋ'ದಲ್ಲಿ ಏನ್ ಉಂಟು:
ನಿರ್ದೇಶಕ ಮಣಿರತ್ನಂ ಹಾಗೂ ನಿರ್ಮಾಪಕ ಬಾಬಿ ಬೇಡಿ ಜತೆಯಾಗಿ ನಿರ್ಮಾಣ ಮಾಡುತ್ತಿರುವ ಚಿತ್ರ 'ಲಜ್ಜೋ'ದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಹಾಗೂ ಕರೀನಾ ಕಪೂರ್ ನಟಿಸುತ್ತಿದ್ದಾರೆ. ಅಂದಹಾಗೆ ಆಮೀರ್ 'ಧೂಮ್3' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕರೀನಾ ಸೈಫ್ ಮದುವೆಯಾದ ನಂತರ ಯಾವುದೇ ಚಿತ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ.
ಇಬ್ಬರು ಒಂದು ಚಿತ್ರದಲ್ಲಿ ಕಾಣಿಸಿಕೊಳ್ಳೋದು ಕೂಡ ಕಷ್ಟ ಎನ್ನುವ ಮಾತುಗಳೇ ಬಹಳ ವರ್ಷಗಳಿಂದ ಓಡಾಡುತ್ತಿತ್ತು. ಆದರೆ ಈ ಎಲ್ಲ ಮಾತುಗಳಿಗೆ ಕೊನೆಗೂ ಬ್ರೇಕ್ ಸಿಕ್ಕಿದೆ. ಆಮೀರ್ ಅವರು ಧೂಮ್ -3 ನಂತರ ಮಣಿ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಕರೀನಾ ಕೂಡ ಮದುವೆಯ ನಂತರ ದೊಡ್ಡ ಬ್ರೇಕ್‌ಗಾಗಿ ಮಣಿ ಚಿತ್ರಕ್ಕೆ ಓಕೆ ಎಂದಿದ್ದಾಳೆ. ಚಿತ್ರಕ್ಕೆ ಇಳಯರಾಜ ಸಂಗೀತ ನೀಡುತ್ತಾರೆ ಎನ್ನುವ ಮಾತುಗಳು ಕೂಡ ಕೇಳಿಸಿಕೊಂಡಿತ್ತು. ಆದರೆ ಸುಹಾಸಿನಿ ಮಣಿರತ್ನಂ ಅವರು ಮಾಧ್ಯಮಗಳ ಮುಂದೆ ಬಂದು ಮಣಿಯ ಮುಂದಿನ ಚಿತ್ರಕ್ಕೆ ಎ. ಆರ್. ರೆಹಮಾನ್ ಅವರೇ ಸಂಗೀತ ನೀಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಹಿರಿಯ ಚಿತ್ರ ಸಾಹಿತಿ ಗುಲ್ಜಾರ್ ಸಾಹಿತ್ಯ ಬರೆದಿದ್ದಾರೆ. ಪಿ.ಸಿ. ಶ್ರೀರಾಮ್ ಛಾಯಾಗ್ರಹಣ ಮಾಡಿದ್ದಾರೆ.
ಇಸ್ಮಾತ್ ಚುಗತೀ ಅವರ ಸಣ್ಣ ಕತೆಯನ್ನು ಆಧರಿಸಿಕೊಂಡು 'ಲಜ್ಜೋ' ಮೂಡಿಬರುತ್ತಿದೆ. ಕರೀನಾ ಕಪೂರ್ 'ಲಜ್ಜೋ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಚಿತ್ರದಲ್ಲಿ ಆಮೀರ್ ಜತೆಗೆ ಮತ್ತೊಂದು ನಟ ಕೂಡ ಸೇರ್ಪಡೆಯಾಗಲಿದ್ದಾರೆ. ಆದರೆ ಅವರನ್ನು ಚಿತ್ರ ಆರಂಭದ ನಂತರವೇ ಫೈನಲ್ ಮಾಡುವ ಕುರಿತು ಚಿತ್ರ ತಂಡ ಯೋಚನೆ ಮಾಡುತ್ತಿದೆ.
2005ರಿಂದ ಈ ಚಿತ್ರವನ್ನು ಮಾಡಬೇಕು ಎಂದುಕೊಂಡು ಮಣಿರತ್ನಂ ಸುತ್ತಾಡುತ್ತಿದ್ದರು. ಚಿತ್ರದ ಕತೆಯಲ್ಲಿ ಬದಲಾವಣೆ ಹಾಗೂ ನಾಯಕ, ನಾಯಕಿಯರ ಹುಡುಕಾಟ, ಆಮೀರ್, ಕರೀನಾ ಡೇಟ್ ಕ್ಲ್ಯಾಶ್ ಎಲ್ಲವೂ ಸೇರಿಕೊಂಡು ಚಿತ್ರವನ್ನು 2013ರ ಕಾಲ ಘಟ್ಟಕ್ಕೆ ತಂದು ನಿಲ್ಲಿಸಿದೆ. ಈ ಹಿಂದೆ ಷೇಕ್ಸ್ ಪಿಯರ್ ಕತೆಯನ್ನು ಆಧರಿಸಿಕೊಂಡು ಬಂದಿರುವ 'ಓಂಕಾರ' ನಂತರ ಉರ್ದು ಸಾಹಿತಿ ಇಸ್ಮಾತ್ ಚುಗತೀ ಅವರ ಸಣ್ಣ ಕತೆಯನ್ನು ಇಟ್ಟುಕೊಂಡು ಬರುತ್ತಿರುವ ಸಿನಿಮಾ 'ಲಜ್ಜೋ' ನಿರೀಕ್ಷೆ ಹುಟ್ಟಿಸಿದೆ. ಮಣಿರತ್ನಂ ಮೊದಲ ಬಾರಿಗೆ ಹಾಸ್ಯ ಕತೆಯನ್ನು ಚಿತ್ರವಾಗಿರುಸುತ್ತಿರೋದು ಇದೇ ಮೊದಲು ಅದರಲ್ಲೂ ಆಮೀರ್ ಜತೆ ಮಣಿಯ ಕಾಂಬೀನೇಷನ್ ವರ್ಕ್ ಔಟ್ ಆಗುತ್ತಾ ಎನ್ನುವ ಉತ್ತರಕ್ಕೆ ಚಿತ್ರ ಬಿಡುಗಡೆ ತನಕವೂ ಕಾಯಬೇಕು.
ಕೋಟ್ ಕೋರ್ನರ್
'ಯುವ ಸಿನಿಮಾ ನಂತರ ಮಣಿ ಜತೆ ಇದು ಎರಡನೇ ಸಿನಿಮಾ. ನನಗೆ ಕತೆ ತುಂಬಾ ಹಿಡಿಸಿದೆ. ಚಿತ್ರಕ್ಕೆ ನಾನು ಸಹಿ ಮಾಡಿದ್ದೇನೆ. ರಾಜಸ್ಥಾನದಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಮಣಿ ಒಳ್ಳೆಯ ಪ್ರತಿಭಾವಂತ ನಿರ್ದೇಶಕ ಎನ್ನುವುದರಲ್ಲಿ ನನಗೆ ಯಾವುದೇ ಸಂದೇಹ ಇಲ್ಲ.
- ಕರೀನಾ ಕಪೂರ್
(vk lvk published dis article on 10.04.2013)
Monday, April 8, 2013
ಪೂಜಾ ಸಾಲ್ವಿ ಸಿನಿಮಾ ಡ್ರೀಮ್
* ಸ್ಟೀವನ್ ರೇಗೊ
ಬಾಲಿವುಡ್ ಅಂಗಳದಲ್ಲಿ ಹೊಸ ಹುಡುಗಿಯರು ಕಣ್ಣು ಬಿಡುತ್ತಿದ್ದಾರೆ. ಅದರಲ್ಲೂ ಬಿ- ಟೌನ್‌ನಲ್ಲಿ 20 ಪ್ಲಸ್ ಹುಡುಗಿಯರನ್ನೇ ನಾಯಕರು ಚೂಸ್ ಮಾಡುತ್ತಿರೋದು ಈ ಹೊಸಬರ ಟ್ರೆಂಡಿಗೆ ಮೂಲ ಕಾರಣ. ಈಗ ಲೇಟೆಸ್ಟ್ ಬಾಲಿವುಡ್ ಎಂಟ್ರಿಯಲ್ಲಿ ಪೂಜಾ ಸಾಲ್ವಿ ಎನ್ನುವ ಮರಾಠಿ ಹುಡುಗಿ ರ‌್ಯಾಂಪ್‌ನಿಂದ ಇಳಿದು ಬಿ-ಟೌನ್‌ನಲ್ಲಿ ಚಮಕ್ ತೋರಿಸಲು ರೆಡಿಯಾಗಿದ್ದಾರೆ. 'ವಿಕ್ಕಿ ಡೋನರ್' ಖ್ಯಾತಿಯ ನಟ ಆಯುಷ್ಮಾನ್ ಹಾಗೂ ಕುನಾಲ್ ರಾಯ್ ಕಪೂರ್ ಜತೆಯಾಗಿ ನಟಿಸುತ್ತಿರುವ ರಮೇಶ್ ಸಿಪ್ಪಿಯ ನಿರ್ದೇಶನದ 'ನೌಟಂಕಿ ಸಾಲಾ'ದ ಲೀಡ್ ರೋಲ್‌ನಲ್ಲಿ ಬಳುಕುತ್ತಿರುವ ಹುಡುಗಿ ಪೂಜಾ ಸಾಲ್ವಿ ಫ್ಯಾಶನ್ ಲೋಕದ ಕೊಡುಗೆ ಎನ್ನುವುದು ಉಲ್ಲೇಖಿಸಲ್ಪಡುವ ವಿಷ್ಯಾ.
ಪೂಜಾ ಸಾಲ್ವಿ ಹುಟ್ಟಿದ್ದು ಓದಿದ್ದು ಎಲ್ಲವೂ ಗುಜರಾತಿನ ಪಠಾಣವಾಡಿಯಲ್ಲಿ. ಪೂಜಾ ಪಕ್ಕಾ ಸಂಪ್ರದಾಯಗಳ ಮಡುವಿನಲ್ಲಿ ಬಿದ್ದುಕೊಂಡಿರುವ ಮನೆತನದ ಹುಡುಗಿಯಾಗಿರುವುದರಿಂದ ಆರಂಭದಲ್ಲಿ ಪೂಜಾ ಗ್ರಹಗತಿ ಅಷ್ಟೊಂದು ಚೆನ್ನಾಗಿ ಇರಲಿಲ್ಲ ಎನ್ನೋದು ಅವರ ಆಪ್ತರ ನುಡಿ. ಮನೆಯ ಕಟ್ಟು ನಿಟ್ಟಿನ ನಿಯಮಗಳ ನಡುವೆಯಲ್ಲಿ ಪೂಜಾ ಇಷ್ಟಪಟ್ಟಿದ್ದು ಮಾತ್ರ ಫ್ಯಾಶನ್ ಲೋಕದ ಮಿರಿಮಿರಿ ಮಿನುಗುವ ಬೆಳಕು ಹಾಗೂ ರ‌್ಯಾಂಪ್. ಪೂಜಾ ಓದುತ್ತಿದ್ದಂತೆ ಲವಲವಿಕೆಯ ಓಡಾಟ, ನೋಡಲು ಕೂಡ ಸುಂದರವಾಗಿದ್ದರಿಂದ ಕಾಲೇಜಿನ ಆರಂಭದಲ್ಲಿಯೇ ರ‌್ಯಾಂಪ್ ಮೇಲೆ ಅದೃಷ್ಟದಾಟ ನೋಡಿ ಬಂದವಳು. ಇದೇ ಕಾರಣದಿಂದ ಮಾಡೆಲಿಂಗ್ ದುನಿಯಾ ಸುಲಭದಲ್ಲಿಯೇ ಪೂಜಾರ ಕೈ ತುತ್ತಾಯಿತು.
ಫ್ಯಾಷನ್ ದುನಿಯಾದ ಪೂಜಾ
ಪೂಜಾ ಸಾಲ್ವಿಗೆ ಈಗ ಭರ್ತಿ 25. ರ‌್ಯಾಂಪ್‌ನಲ್ಲಿ ಸದಾ ಓಡಾಡುವ ಈ ಚಿಗರೆ ಸಿನ್ಮಾ ಲೋಕದಲ್ಲಿ ಕಣ್ಣು ಬಿಡುವ ಮುಂಚೆ ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡವಳು. ಕ್ಯಾಡ್‌ಬರಿಯಂತಿರುವ ಪೂಜಾ ಆರಂಭದಲ್ಲಿ ಇದೇ ಕಂಪನಿಯ ಜಾಹೀರಾತಿನ ಮೂಲಕ ಕ್ಲಿಕ್ ಆಗಿ ನಂತರ ಜ್ಯುವೆಲ್ಲರಿ ಜಾಹೀರಾತಿನ ವರೆಗೂ ಮೈಮಾಟ ಪ್ರದರ್ಶನದಲ್ಲಿ ನಿಂತು ಹೋದಳು. ಇದೇ ಜಾಹೀರಾತಿನಿಂದ ಖುಷಿಗೊಂಡ ಖ್ಯಾತ ಬಾಲಿವುಡ್ ನಿರ್ದೇಶಕ ಕಮ್ ನಿರ್ಮಾಪಕ ರಮೇಶ್ ಸಿಪ್ಪಿ ಇವಳೇ ತನ್ನ ಮುಂದಿನ ಸಿನ್ಮಾ ಹೀರೋಯಿನ್ ಎಂದು ಬುಕ್ ಮಾಡಿದ್ದ ವಿಷ್ಯಾ ಈಗ ನೌಟಂಕಿ ಸಾಲಾ ಸಿನ್ಮಾ ಮೂಲಕ ಸುದ್ದಿ ಹೊರಬಂದಿದೆ.
ಆಂಗ್ಲ ಸಿನಿಮಾದ ಕತೆಯನ್ನು ಆಧರಿಸಿಕೊಂಡು ಬಂದಿರುವ 'ನೌಟಂಕಿ ಸಾಲಾ' ಸಿನ್ಮಾ ಪೂಜಾಳ ಪಾಲಿಗೆ ಭರ್ಜರಿ ಅವಕಾಶ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ. ಬಿಗ್ ಸಿಪ್ಪಿ ಪ್ರೊಡಕ್ಷನ್ ಹೌಸ್‌ನಡಿ ನಾಯಕಿಯಾಗಿ ಪೂಜಾ ಲಾಂಚ್ ಆಗುತ್ತಿರೋದು ಹೆಮ್ಮೆ ವಿಷ್ಯಾ ಎಂದು ಟ್ವಿಟ್ಟರ್ ಲೋಕದಲ್ಲಿ ಪೂಜಾ ಈಗಾಗಲೇ ಸಂದೇಶ ರವಾನಿಸಿಬಿಟ್ಟಿದ್ದಾಳೆ.
ಇದೇ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿ ಕೂತಿರುವ ಚಿತ್ರದ ಹಾಡುಗಳು, ಪ್ರೋಮೋಗಳು ಈಗಾಗಲೇ ಯುವ ಗಲ್ಲಿಯಲ್ಲಿ ಹೊಸ ಹವಾ ಕ್ರಿಯೇಟ್ ಮಾಡಿ ಹೋಗಿದೆ. ಪೂಜಾರ ಮುದ್ದಾದ ತುಟಿಯಂಚಿನಲ್ಲಿರುವ ರಾಣಿ ಜೇನಿನ ಸವಿಯುಂಡ ಆಯುಷ್ಮಾನ್‌ನ ದೃಶ್ಯಗಳು ಈಗಾಗಲೇ ಯುವಕರ ಮೊಬೈಲ್ ತುಂಬಾ ತುಂಬಿ ಹೋಗಿದೆ. ಟೋಟಲಿ ಸಿನ್ಮಾ ನಿರೀಕ್ಷೆ ಹುಟ್ಟಿಸಿದೆ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿದಿಲ್ಲ.
ಪೂಜಾ ಡಯಟ್ ಸೂತ್ರ
ರ‌್ಯಾಂಪ್ ಮೇಲೆ ಸದಾ ಕಾಲ ಬಳಕುವಂತಹ ದೇಹವನ್ನು ನಿಭಾಯಿಸುವ ಕಲೆ ಗೊತ್ತಿರುವ ಪೂಜಾ ಸಾಲ್ವಿಗೆ ಡಯಟ್ ಕುರಿತು ಹೆಚ್ಚಿನ ಒಲವು. ಬೆಳಗ್ಗೆ ಬೇಗ ಎದ್ದು ಜಾಗಿಂಗ್, ವರ್ಕೌಟ್‌ನ ಮೂಲಕವೇ ಪೂಜಾ ದೇಹದಂಡನೆಗೆ ಒಳಗಾಗುತ್ತಾರೆ. ತರಕಾರಿಯಲ್ಲಿಯೇ ಹೆಚ್ಚು ಆಸಕ್ತಿ ಇರುವ ಪೂಜಾ ಸಾಲ್ವಿಗೆ ಹಣ್ಣು ಹಾಗೂ ಸಲಾಡ್ ಕಂಡರೆ ಹೆಚ್ಚು ಇಷ್ಟ. ಇಂತಹ ಫುಡ್ ಲಿಸ್ಟ್‌ನಿಂದಾಗಿಯೇ ಸದಾ ಕಾಲ ಲವಲವಿಕೆಯ ಓಡಾಟ, ಫ್ರೆಶ್‌ನೆಸ್ ತುಂಬಿಸಿಕೊಳ್ಳಲು ಆಕ್ಸಿಜನ್‌ನಂತೆ ಕೆಲಸ ಮಾಡುತ್ತದೆ ಎನ್ನೋದು ಪೂಜಾರ ಸಾಲ್ವಿಯ ಮಾತು.
ವಾರ್ಡ್‌ರೋಬ್
ಕೆಂಪು ಬಣ್ಣದ ಬಟ್ಟೆಗಳನ್ನೇ ಹೆಚ್ಚು ಆಶ್ರಯಿಸಿರುವ ಪೂಜಾರ ವಾರ್ಡ್ ರೋಬ್‌ನಲ್ಲಿ ಸಮ್ಮರ್, ವಿಂಟರ್, ರೈನಿ ಸೀಸನ್‌ಗಾಗಿಯೇ ವಿಶಿಷ್ಟ ಬಗೆಯ ಸ್ಕರ್ಟ್ಸ್, ಫ್ರಾಕ್ಸ್, ಫಾರ್ಮಲ್ಸ್, ಐ ಪೋಸಸ್ ಇದ್ದೇ ಇರುತ್ತದೆ. ಜತೆಯಲ್ಲಿ ಆಕ್ಸೆಸರೀಸ್‌ನಲ್ಲೂ ಭಿನ್ನತೆ ಬಯಸುವ ಪೂಜಾ ಸಾಲ್ವಿಗೆ ಗೆಜೆಟ್ ಲೋಕದಲ್ಲಿ ವಿಶಿಷ್ಟ ಆಸಕ್ತಿ ಇದೆ. ಇದೇ ಕಾರಣದಿಂದ ಗೆಜೆಟ್ ಲೋಕದ ಎಲ್ಲ ಮಾಹಿತಿಗಳನ್ನು ಪಡೆದುಕೊಂಡು ಗೆಜೆಟ್ ದುಕಾನ್‌ಗಳಿಗೆ ಪದೇ ಪದೇ ಭೇಟಿ ಕೊಡುತ್ತಾ ದಿನ ಕಳೆಯುತ್ತಾರೆ.
***
ಪೂಜಾ ಲೈಫ್‌ಸ್ಟೈಲ್
* ಟ್ರಾವೆಲ್, ರೀಡಿಂಗ್ ನಲ್ಲೂ ಪೂಜಾ ಸಾಲ್ವಿಗೆ ಅಪಾರ ಆಸಕ್ತಿ.
* ವಿದೇಶ ಪ್ರವಾಸ ಹೆಚ್ಚು. ಆಸೀಸ್, ಸ್ವಿಜ್‌ಲ್ಯಾಂಡ್‌ನಲ್ಲಿ ಬಹಳ ಹೊತ್ತು ಕಾಲ ಕಳೆಯಬೇಕು ಎಂಬ ಕನಸಿದೆ.
* ಸಮಯ ಸಿಕ್ಕಾಗ ಆಂಗ್ಲ ಭಾಷೆಯ ಕಾದಂಬರಿ ಓದುವ ಹವ್ಯಾಸ.
***
ಬಾಲಿವುಡ್‌ನಲ್ಲಿ ಬಿಗ್ ಸಿಪ್ಪಿ ಪ್ರೊಡಕ್ಷನ್ ಹೌಸ್‌ನಡಿ ನಾಯಕಿಯಾಗಿ ನಾನು ಲಾಂಚ್ ಆಗುತ್ತಿರೋದು ಹೆಮ್ಮೆಯ ವಿಷಯ
-ಪೂಜಾ ಸಾಲ್ವಿ
( dis article was published on 9.04.2013 in vk lvk magzine)

Saturday, April 6, 2013
ಕ್ಲಾಸ್-ಮಾಸ್‌ಗಳ ಕೊಂಡಿ ‘ಪರದೇಶಿ’
ಸ್ಟೀವನ್ ರೇಗೊ, ದಾರಂದಕುಕ್ಕು
ಕಾಲಿವುಡ್ ಸಿನಿಮಾ ಕ್ಷೇತ್ರವೇ ಹಾಗೆ, ಪ್ರಯೋಗಗಳ ಮೇಲೆ ಪ್ರಯೋಗ ನಡೆಯುತ್ತಾ ಇರುತ್ತದೆ. ಇಲ್ಲಿನ ಪ್ರೇಕ್ಷಕ ವರ್ಗ ಸಿನಿಮಾವನ್ನು ಕ್ಲಾಸ್ ಹಾಗೂ ಮಾಸ್ ಎಂದುಕೊಳ್ಳದೆ, ಎರಡನ್ನೂ ಜತೆಯಾಗಿ ನೋಡಿ ಸಕ್ಸಸ್ ಎನ್ನುವ ಟ್ಯಾಗ್‌ಲೈನ್ ಜೋಡಿಸಿಕೊಟ್ಟವರು. ಇದೇ ಕಾರಣದಿಂದ 'ಮೈ ಅಟೋಗ್ರಾಫ್'ನ ನಿರ್ದೇಶಕ ಚೇರನ್ ಇರಬಹುದು, 'ಸುಬ್ರಹ್ಮಣ್ಯಪುರಂ' ಕೊಟ್ಟ ಶಶಿಕುಮಾರ್ ಇರಬಹುದು, ಭಿನ್ನವಾಗಿ ಸಿನಿಮಾ ಮಾಡುವ ನಿರ್ದೇಶಕ ಬಾಲಾ ಇರಬಹುದು- ಎಲ್ಲರನ್ನೂ ಕಾಲಿವುಡ್ ಸಿನಿಮಾ ಕ್ಷೇತ್ರ ಬೆಳೆಸಿಕೊಂಡು ಬಂದಿದೆ. ಇತ್ತೀಚೆಗೆ ತೆರೆಕಂಡ ಬಾಲಾ ಅವರ 'ಪರದೇಶಿ' ಚಿತ್ರವಂತೂ ಕ್ಲಾಸ್ ಮತ್ತು ಮಾಸ್ ಜತೆಯಾಗಿ ಕೂತು ನೋಡಬಹುದಾದ ಚಿತ್ರ. ಬಾಲಾ ಅವರ ನಿರ್ದೇಶನ ಇದಕ್ಕೆ ಒಂದು ಕಾರಣವಾದರೆ, ಮತ್ತೊಂದು ಕಡೆ ಚಿತ್ರದ ಕತೆಯೇ ಸಂಪೂರ್ಣ ಭಿನ್ನವಾಗಿರುವುದು.
ಬಾಲಾ ಅವರ ಚಿತ್ರಗಳೇ ಹಾಗೆ, ಯಾರೂ ತುಳಿಯದ ಹಾದಿಯಲ್ಲಿ ನಡೆಯುವುದೇ ಅವರ ಶೈಲಿ. ಹೆಚ್ಚು ಕಮರ್ಷಿಯಲ್ ಅಂಶಗಳಿಲ್ಲದಿದ್ದರೂ ಪ್ರಬುದ್ಧ ಚಿತ್ರಗಳನ್ನು ನೀಡಿ ಛಾಪು ಮೂಡಿಸಿರುವ ಅವರ ಇತ್ತೀಚಿನ ಚಿತ್ರ 'ಪರದೇಶಿ'ಯೂ ಇದೇ ಸಾಲಿಗೆ ಸೇರುತ್ತದೆ. ಕನ್ನಡದ ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯ ಅವರ ಮೊಮ್ಮಗ ಅಥರ್ವ ಈ ಚಿತ್ರದ ನಾಯಕ. ಅಪ್ಪ ಮುರಳಿಯಂತೆಯೇ ತಮಿಳು ತನ್ನ ವೃತ್ತಿ ಜೀವನ ರೂಪಿಸಿಕೊಳ್ಳಲು ಅಥರ್ವನಿಗೆ ಒಳ್ಳೆಯ ವೇದಿಕೆ ಸಿಕ್ಕಿದೆ. ಧನ್ಸಿಕಾ ನಾಯಕಿಯಾಗಿದ್ದರೆ, ಜನಪ್ರಿಯ ನಟಿ ವೇದಿಕಾ ಕೂಡ ತಾರಾಗಣದಲ್ಲಿದ್ದಾರೆ. ಹೊಸಬರನ್ನು ಹಾಕಿಕೊಂಡು ಚಾರಿತ್ರಿಕ ಚಿತ್ರ ನಿರ್ದೇಶಿಸಿರುವ ಬಾಲಾ ಅವರ ಧೈರ್ಯವನ್ನು ಮೆಚ್ಚಲೇಬೇಕು.
1969ರಲ್ಲಿ ಪಾಲ್ ಹ್ಯಾರಿಸ್ ಡೇನಿಯಲ್ ಬರೆದ ಕಾದಂಬರಿ 'ರೆಡ್ ಟೀ'ಯ ತಮಿಳು ಅನುವಾದ 'ಎರಿಯುಂ ಪನಿಕಾಡು'ವನ್ನು ಆಧರಿಸಿ ಬಂದಿರುವ ಚಿತ್ರವಿದು. ಬ್ರಿಟೀಷರ ಕಾಲದಲ್ಲಿ ಟೀ ಎಸ್ಟೇಟುಗಳಲ್ಲಿ ಜೀತದಾಳುಗಳಾಗಿ ಬದುಕುತ್ತಿದ್ದವರನ್ನು ಕುರಿತ ಸಿನಿಮಾ ಇದು.
ಸಿನಿಮಾದಲ್ಲಿರುವ 200ಕ್ಕೂ ಅಧಿಕ ನಟರಿಗೆ ಕೂದಲು ಕತ್ತರಿಸಲು ಬಿಡದೆ, ಮತ್ತೊಂದೆಡೆ ಅಥರ್ವನ ಹತ್ತು ಕಿಲೋ ತೂಕವಿಳಿಸಿ, ಬೋಳು ಮಂಡೆಯನ್ನೇ ಇಟ್ಟುಕೊಳ್ಳಬೇಕೆಂದು ತಾಕೀತು ಮಾಡಿ, ಕ್ಲೈಮ್ಯಾಕ್ಸ್ ಸೀನಿಗಾಗಿ ಪ್ರಮುಖ ಸ್ತ್ರೀ ಪಾತ್ರ ಧನ್ಸಿಕಾಳನ್ನು ಆರು ದಿನಗಳಷ್ಟು ಕಾಲ ಉಪವಾಸವಿರಿಸಿದಂತಹವರು ಬಾಲಾ. ಚಿತ್ರಗಳೆಂದರೆ ಬಣ್ಣದ ಮಿಶ್ರಣಗಳ ಜತೆಯಲ್ಲಿ ರಂಜನೆಯ ಕಂಪು ಎನ್ನುವುದು ಸಾಮಾನ್ಯ ಗ್ರಹಿಕೆ. ಆದರೆ 'ಪರದೇಶಿ' ಹೀಗಿಲ್ಲ. ಸಿನಿಮಾ ಒಂದು ವಿಚಿತ್ರ ಬಣ್ಣದೊಂದಿಗೆ ತೆರೆದುಕೊಳ್ಳುವುದಲ್ಲದೆ, ಇಡೀ ಸಿನಿಮಾದಲ್ಲಿ ಅದೇ ರೀತಿಯನ್ನು ಉಳಿಸಿಕೊಂಡು, ಹೇಳುತ್ತಿರುವುದು ಮನರಂಜನೆಯ ಕತೆಯಲ್ಲ ಎಂಬ ಎಚ್ಚರವನ್ನು ನಮ್ಮಲ್ಲಿ ಉಳಿಸುತ್ತದೆ.
***
ಅವನೊಬ್ಬ ಅಂಡಲೆಯುವ ಆಸಾಮಿ. ಅವನಿಗೂ ಅಮ್ಮ ಹಾಗೂ ಇಷ್ಟಪಡುವ ಹೆಣ್ಣೊಬ್ಬಳು ಇರುತ್ತಾಳೆ, ಬಡತನವಾದರೂ ದುಃಖವಿಲ್ಲದ ಜೀವನ. ಹೆಣ್ಣು ಬಂದಮೇಲೆ ದುಡಿಮೆಯು ಬೇಕೇಬೇಕಲ್ಲ, ದುಡಿದರೂ ಅವನ ಊರಿನ ಜನ ಇವನು ಕೂಲಿ ಕೊಡಲು ಅರ್ಹನಲ್ಲ ಎಂದು ತಿಳಿಯುತ್ತಾರೆ. ಹೀಗಿರುವಾಗ ಅಲ್ಲೊಬ್ಬ ಟೀ ತೋಟದ ಯಜಮಾನನ ಆಗಮನವಾಗುತ್ತದೆ, ಎಲ್ಲರಿಗೂ ಮುಂಗಡ ಹಣ ಕೊಡುತ್ತೇನೆ, ಇರಲು ಮನೆ ಕೊಡುತ್ತೇನೆ, ವರ್ಷ ಕಳೆದಂತೆ ಮನೆಗೆ ವಾಪಾಸ್ಸಾಗಬಹುದು ಎಂದೆಲ್ಲ ನಂಬಿಸುತ್ತಾನೆ. ಕಿಂದರಿ ಜೋಗಿಯ ಸೆಳೆತಕ್ಕೆ ಸಿಲುಕಿದವರಂತೆ ಊರಿಗೆ ಊರೇ ಅವನ ಹಿಂದೆ ಹೊರಡುತ್ತದೆ. ನಲವತ್ತೆಂಟು ದಿನಗಳ ಕಾಲ್ನಡಿಗೆಯ ದಾರಿಯಲ್ಲಿ ಕೈಲಾಗದವರನ್ನು ಅಲ್ಲೇ ಸಾಯಲು ಬಿಟ್ಟು, ಬಸವಳಿದ ಉಳಿದ ಜನರನ್ನು ತಂದು ತನ್ನ ಟೀ ತೋಟದಲ್ಲಿ ಕೆಲಸಕ್ಕಿಟ್ಟುಕೊಂಡ ಯಜಮಾನ ಅವರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಾನೆ. ಮದುವೆಯಾಗದೇ ಬಸಿರಾದ ತನ್ನ ಗೆಳತಿಯನ್ನೇ ನೆನೆಸುತ್ತಾ ತಪ್ಪಿಸಿಕೊಳ್ಳಲು ಯತ್ನಿಸುವ ನಾಯಕನ ಕಾಲಿನ ನರ ಕತ್ತರಿಸಿ ಊನಗೊಳಿಸಲಾಗುತ್ತದೆ, ಹೊಸದಾಗಿ ಮದುವೆಯಾದ ಗಂಡನನ್ನು ಬಿಟ್ಟಿರಲಾರೆ ಎಂದು ಅವನ ಜೊತೆಯೇ ಹೊರಡುವ ಪುಟ್ಟ ಹೆಂಡತಿ, ಬ್ರಿಟೀಷ್ ಅಧಿಕಾರಿಯೊಬ್ಬನ ಕಾಮದಾಸೆ ತೀರಿಸಬೇಕಾಗುತ್ತದೆ. ಅಲ್ಲಾಗಲೇ ಉಳಿದುಕೊಂಡಿರುವವರ, ಅಮಾಯಕ ಜನರನ್ನು ಮತಾಂತರ ಮಾಡಬಂದವರ ಕತೆಯೂ ಸೇರಿ ಸಿನಿಮಾ ಮುಂದೆ ದಾರುಣ ಅಂತ್ಯವನ್ನೇ ಹೊಂದಿದೆ.
'ಎರಿಯುಂ ಪನಿಕಾಡು' ಕಾದಂಬರಿ ಓದಿದವರಿಗೆ ಈ ಚಿತ್ರ ಪ್ರೇಕ್ಷಕರನ್ನು ಹಿಡಿದಿಡಲು ವಿಫಲ ಅನ್ನಿಸಬಿಡಬಹುದು. ಆದರೆ ಬಾಲರ ನಿರ್ದೇಶನ ಚಿತ್ರದಲ್ಲಿ ಸರಿಯಾಗಿ ಕೆಲಸ ಮಾಡಿದೆ. ಸಿನಿಮಾದ ಮೊದಲ ಭಾಗದಲ್ಲಿ ಒಂದು ಊರಿನ ಕತೆಯನ್ನು ಹೇಳುತ್ತಾ, ಉತ್ತರಾರ್ಧದಲ್ಲಿ ಎಲ್ಲವನ್ನೂ ಅವಸರದಲ್ಲಿ ಮುಗಿಸಿದಂತೆ ಕಾಣುತ್ತದೆ, ನಿಜ. ಆದರೆ ಬಡತನವಿದ್ದರೂ ಖುಷಿಯಾಗಿದ್ದ ಜನರ ಸ್ಥಿತಿ ಹಣದಾಸೆಗೆ ಬಲಿಯಾದ ಮೇಲೆ ಹೇಗೆ ದಾರುಣವಾಗುತ್ತದೆ, ಸ್ಥಳೀಯರ ಸಂಕುಚಿತ ಮನೋಭಾವ ಹೇಗೆ ಪರಕೀಯರನ್ನು ಉತ್ತಮವೆನಿಸುವಂತೆ ಮಾಡುತ್ತದೆ, ಜೀವನ ಮಟ್ಟ ಸುಧಾರಿಸಿಕೊಳ್ಳುವ ಹಂಬಲ ಹೇಗೆ ಇಡೀ ಊರಿನ ಸಂಪ್ರದಾಯಕ್ಕೆ ಅದರ ಪರಿವರ್ತನೆಗೆ ಕಾರಣವಾಗುತ್ತದೆ ಎಂಬುದನ್ನು ಅನಾವರಣಗೊಳಿಸಲಾಗಿದೆ.
ಹಾಡೊಂದರಲ್ಲಿ ಬರುವ ವಸಾಹತುಶಾಹಿಯ ವಿಡಂಬನೆ, ದಿವ್ಯ ವಿಷಾದದ ನಡುವೆಯೂ ನಗೆಯುಕ್ಕಿಸುವ ಸಂಭಾಷಣೆ ಮನ ಕಲಕುತ್ತವೆ. ಕಥಾನಾಯಕ ಎಲ್ಲವನ್ನೂ ಮೆಟ್ಟಿ ಊರಿಗೆ ತೆರಳುತ್ತಾನೆ, ಕುಟುಂಬವನ್ನು ಸೇರುತ್ತಾನೆ ಎಂದುಕೊಳ್ಳುವಾಗಲೇ, ಯಾತನಾ ಶಿಬಿರಕ್ಕೆ ಆತನ ಹೆಂಡತಿ ಕಾಲಿಡುತ್ತಾಳೆ. ಇದರೊಂದಿಗೆ ಚಿತ್ರ ಮುಗಿಯುತ್ತದೆ. ಜೊತೆಗೆ ಗಾಂಧಿ ಎಂಬ ಶಕ್ತಿ ದೇಶಕ್ಕೆ ಏಕೆ ಬೇಕಿತ್ತು ಎಂಬುದನ್ನು ಪರೋಕ್ಷವಾಗಿ ಈ ಸಿನಿಮಾ ಸೂಚಿಸುತ್ತದೆ. ಈ ಕಾರಣಕ್ಕಾದರೂ ಪರದೇಶಿಯನ್ನು ನೋಡಬೇಕು.
Friday, April 5, 2013
ಕ್ರೈಸ್ತರಲ್ಲಿ ಹಿಂದುಳಿದ ರಾಜಕೀಯ ಪ್ರಜ್ಞೆ
* ಸ್ಟೀವನ್ ರೇಗೊ, ದಾರಂದಕುಕ್ಕು
ಕ್ರೈಸ್ತ ಸಮುದಾಯ ರಾಜ್ಯದಲ್ಲಿರುವ ಇತರ ಸಮುದಾಯಗಳಿಗೆ ಹೋಲಿಕೆ ಮಾಡಿ ನೋಡಿದರೆ ಆಧುನಿಕತೆಗೆ ಮುಖ ಮಾಡಿ ರುವ ಸಮುದಾಯ. ಶಿಕ್ಷಣ, ಸಮಾಜ ಸೇವೆ, ಉದ್ಯಮ, ಬ್ಯಾಕಿಂಗ್, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರ ದಲ್ಲೂ ಕ್ರೈಸ್ತರು ನೇರ ವಾಗಿ ತೊಡಗಿಸಿ ಕೊಂಡಿದ್ದಾರೆ.
ಸ್ವ ಸಾಮರ್ಥ್ಯದ ಮೂಲಕವೇ ಏನಾದರೂ ಸಾಧಿಸಬೇಕೇನ್ನುವ ಕಿಚ್ಚು ಇರುವುದರಿಂದಲೇ ಕ್ರೈಸ್ತ ಸಮುದಾಯದ ಬಹುತೇಕ ಮಂದಿ ವಿದೇಶದಲ್ಲಿ ನಾನಾ ವೃತ್ತಿಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಕಂಪನಿಗಳನ್ನು ಸ್ಥಾಪಿಸಿ ಕೊಂಡಿರುವ ಉದಾಹರಣೆಗಳು ಸಾಕಷ್ಟು ಇವೆ. ರಾಜ್ಯದಲ್ಲಿ ರುವ ಮತದಾರರಲ್ಲಿ ಶೇ. 4.5ರಷ್ಟು ಕ್ರೈಸ್ತ ಸಮುದಾಯದ ಮತದಾ ರರಿ ದ್ದಾರೆ. ಕ್ರೈಸ್ತ ಸಮುದಾಯದಲ್ಲಿ ಆರ್‌ಸಿ(ರೋಮನ್ ಕ್ಯಾಥೋ ಲಿಕ್)ರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ಪ್ರೊಟೆಸ್ಟೆಂಟ್, ಫೆಲೋಶಿಪ್ ಗ್ರೂಪ್ಸ್ , ಪೆಂತೆಕೋಸ್ತ್, ಇವೆಂಜಿಕಲ್ಸ್, ಮಲಯಂಕರ, ನ್ಯೂ ಲೈಫ್, ಸಿರಿಯನ್ ಕ್ರೈಸ್ತ ಸಮುದಾಯ ಗಳನ್ನು ಹೊಂದಿದ್ದಾರೆ.
ಕರಾವಳಿ ಕ್ರೈಸ್ತ ಸಮುದಾಯ ಪೋರ್ಚ್‌ಗೀ ಸರ ಮೂಲಗಳಿಂದ ಬಂದವರು ಎನ್ನಲಾಗುತ್ತದೆ. ಇದರ ಜತೆಯಲ್ಲಿ ತಮಿಳು ಕ್ರೈಸ್ತರು ಬೆಂಗಳೂರು, ಮೈಸೂರು ಕಡೆಗಳಲ್ಲಿ ಜಾಸ್ತಿ ಸಂಖ್ಯೆಯಲ್ಲಿದ್ದಾರೆ. ಇವರ ಮೂಲ ಮದ್ರಾಸ್ ಪ್ರಾಂತ್ಯ. ಇನ್ನುಳಿದಂತೆ ಕೇರಳದಿಂದ ಬಂದ ಕ್ರೈಸ್ತರು ಮಲಯಂಕರ, ಸಿರಿಯನ್ ಕ್ರೈಸ್ತರು ಮುಖ್ಯವಾಗಿ ಮಲಯಾಳಂ ಭಾಷೆಯೇ ಅವರಲ್ಲಿ ಪ್ರಮುಖವಾಗಿರುತ್ತದೆ.
ಅದರಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರ ಗೋಡು, ಕಾರವಾರ ಪ್ರದೇಶಗಳಲ್ಲಿ ಜಾಸ್ತಿ ಸಂಖ್ಯೆ ಯಲ್ಲಿರುವ ಕ್ರೈಸ್ತ ಸಮುದಾಯ ರಾಜ್ಯದ ಎಲ್ಲ ಜಿಲ್ಲೆ ಗಳಲ್ಲೂ ಅಲ್ಪ ಪ್ರಮಾಣದಲ್ಲಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 4 ಲಕ್ಷದಷ್ಟೂ ಕ್ರೈಸ್ತ ಮತದಾರರಿದ್ದಾರೆ. ಮಂಗಳೂರು ದಕ್ಷಿಣ ಹಾಗೂ ಮೂಲ್ಕಿ- ಮೂಡು ಬಿದರೆ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ದ್ದಾರೆ. ಬೆಂಗಳೂರಿನ ಸರ್ವಜ್ಞ ನಗರ, ಸಿ.ವಿ.ರಾಮನ್ ನಗರದಲ್ಲಿ ಅತಿ ಹೆಚ್ಚು ಕ್ರೈಸ್ತ ಸಮುದಾಯದ ಮತದಾರರಿದ್ದಾರೆ. ಇವುಗಳ ಜತೆ ಯಲ್ಲಿ ಯಶವಂತಪುರ, ಶಿವಾಜಿ ನಗರ ದಲ್ಲೂ ಅವರ ಸಂಖ್ಯೆ ಹೆಚ್ಚಿದೆ. ಕ್ರೈಸ್ತ ಧರ್ಮ ಗುರುಗಳಿಂದ ಧರ್ಮ ಜಾಗೃತಿಗಾಗಿ ಆರಂಭ ಮಾಡಿದ ಪತ್ರಿಕೆ 'ಮಂಗ ಳೂರು ಸಮಾಚಾರ'ದ ಮೂಲಕ ಇಡೀ ಕನ್ನಡ ಪತ್ರಿಕೋದ್ಯಮ ಬೆಳೆಯಲು ಸಾಧ್ಯವಾಗಿದೆ.
ರಾಜ್ಯದ ನಾನಾ ಕಡೆಗಳಲ್ಲಿ ನೂರಾರು ವರ್ಷಗಳಿಂದ ಈ ಸಮು ದಾಯದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಕಾಣಸಿಗುತ್ತದೆ. ಇನ್ನುಳಿ ದಂತೆ ಬ್ಯಾಕಿಂಗ್, ಕೃಷಿ, ಕೈಗಾರಿಕೆಯಲ್ಲೂ ಕ್ರೈಸ್ತ ಸಮುದಾಯ ಭದ್ರ ಛಾಪು ಹಾಕಿದೆ. ಕ್ರೈಸ್ತ ಸಮುದಾಯದಲ್ಲಿ ಶಿಕ್ಷಣದ ಮಟ್ಟ ಹೆಚ್ಚಿನ ಪ್ರಮಾಣದಲ್ಲಿದ್ದರೂ ರಾಜಕಾರಣದಲ್ಲಿ ತೀರಾ ಹೆಚ್ಚಿನ ಆಸಕ್ತಿ ಕಾಣಿಸುವುದಿಲ್ಲ. ಆದರೂ ದೇಶದ ರಾಜಕಾರಣದಲ್ಲಿ ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡುವಲ್ಲಿ ಈ ಸಮುದಾಯ ಶಕ್ತವಾಗಿದೆ.
ಒರಿಸ್ಸಾ ಎಂಪಿ ಆಗಿದ್ದವರು ಈಗ ಜಾರ್ಖಂಡ್‌ನಿಂದ ಎಂಪಿಯಾ ಗಿರುವ ಮೇಬಲ್ ಫರ್ನಾಂಡಿಸ್, ಜಾರ್ಖಂಡ್ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಕ್ರೈಸ್ತ ಸಮುದಾಯಕ್ಕೆ ಸೇರಿದವರು. ಕೇಂದ್ರ ಸರಕಾರದಲ್ಲಿ ಮಂತ್ರಿಯಾಗಿ ನಂತರ ರಾಜ್ಯ ಸಭೆಯ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡಿಸ್, ಕೇಂದ್ರದಲ್ಲಿ ರೈಲ್ವೆ ಸಚಿವರಾಗಿ ನಂತರ ಗೃಹ ಸಚಿವರಾಗಿ ದುಡಿದ ಜಾರ್ಜ್ ಫರ್ನಾಂಡಿಸ್ ಕೂಡ ಕ್ರೈಸ್ತ ಸಮುದಾಯದಲ್ಲಿ ಗುರುತಿಸಿಕೊಂಡವರು.
ದೇವರಾಜ ಅರಸ್ ಸರಕಾರದಲ್ಲಿ ಚಿಕ್ಕಮಗಳೂರಿನ ಈವಾ ವಾಸ್ ಮಂತ್ರಿಯಾಗಿದ್ದರು. ಎಸ್.ಎಂ. ಕೃಷ್ಣ ಮಂತ್ರಿಮಂಡಲದಲ್ಲಿ ಟಿ. ಜಾನ್ ಅಬಕಾರಿ ಸಚಿವರಾಗಿದ್ದರು. ಸ್ವತಂತ್ರ ಪಾರ್ಟಿಯಿಂದ ಜೆ.ಎಂ. ಲೋಬೋ ಪ್ರಭು ಎಂಪಿಯಾಗಿದ್ದರು. ಮಂಗಳೂರಿನ ಬ್ಲೇಸಿ ಯಸ್ ಡಿಸೋಜ ಅವರು ವೀರೇಂದ್ರ ಪಾಟೀಲ್ ಮಂತ್ರಿಮಂಡಲ ದಲ್ಲಿ ಕಾನೂನು ಸಚಿವರಾಗಿದ್ದರು. ಈ ಬಳಿಕ ಎಸ್.ಎಂ. ಕೃಷ್ಣ ಸರಕಾ ರ ದಲ್ಲಿ ಕಾರ್ಮಿಕ ಸಚಿವರಾಗಿ ಕಾರ‌್ಯನಿರ್ವಹಿಸಿದ್ದರು. ಮಂಗಳೂ ರಿ ನಿಂದ 1972ರಲ್ಲಿ ಅಡ್ಡಿ ಸಲ್ಡಾನಾ ಮೊದಲ ಬಾರಿಗೆ ಕ್ರೈಸ್ತ ಸಮುದಾಯದಿಂದ ಗೆದ್ದು ಬಂದ ಮೊದಲ ಮಹಿಳೆಯಾಗಿದ್ದರು. ಕುಂದಾಪುರದಲ್ಲಿ ವಿನ್ನಿಫ್ರೆಡ್ ಫರ್ನಾಂಡಿಸ್ ಎರಡು ಬಾರಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಹಿಳೆಯೊಬ್ಬರು ದಾಖಲೆ ಬರೆದರು. ಮಂಗಳೂರು ಕ್ಷೇತ್ರದಿಂದ ಗೆದ್ದು ಬಂದಿದ್ದ ಪಿ.ಎಫ್. ರಾಡ್ರಿಗಸ್ ದೇವರಾಜ ಅರಸ್ ಮಂತ್ರಿಮಂಡಲದಲ್ಲಿ ಸಚಿವರಾಗಿ ದ್ದರು. ಮೈಕಲ್ ಫರ್ನಾಂಡೀಸ್ ಚುನಾವಣೆಯಲ್ಲಿ ನಿಂತು ಎಂಎಲ್‌ಎ ಆಗಿದ್ದರು. 1983 ಇವರಲ್ಲಿ ಮೈಕಲ್ ಅವರ ಸಹೋದರ ಬೆಂಗಳೂರು ನಗರ ಪಾಲಿಕೆಯಲ್ಲಿ ಮೇಯರ್ ಲಾರೆನ್ಸ್ ಫರ್ನಾಂಡಿಸ್ ಮೇಯರ್ ಆಗಿದ್ದರು.
ರಾಜ್ಯದಲ್ಲಿರುವ ನಾನಾ ನಗರಸಭೆ, ಪಂಚಾಯಿತಿಗಳಲ್ಲೂ ಕ್ರೈಸ್ತ ಸಮುದಾಯದವರು ಗೆಲ್ಲುವ ಮೂಲಕ ತಾವೂ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ ಎಂದು ತೋರಿಸುವ ಪ್ರಯತ್ನಗಳು ಕೆಲವೊಮ್ಮೆ ನಡೆದಿದೆ.
-----
ಕ್ರೈಸ್ತ ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಒಂದು ಹಂತದ ವರೆಗೆ ಬೆಳೆದಿದೆ. ಅವರಲ್ಲಿ ನಿರ್ದಿಷ್ಟ ರಾಜಕೀಯ ಗುರಿಯ ಕುರಿತಾಗಿ ಸಾಕಷ್ಟು ಗೊಂದಲವಿದೆ. ಚರ್ಚ್ ಮಟ್ಟದಲ್ಲಿರುವ ಯುವ ಸಂಘಟನೆಯಾದ ಐವೈಸಿಎಂಗಳಲ್ಲಿ ರಾಜಕೀಯ ಪ್ರಜ್ಞೆ, ನಾಯಕತ್ವ ಬೆಳೆಸುವ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಕ್ರೈಸ್ತ ಸಮುದಾಯದ ಅಭ್ಯರ್ಥಿಗಳಲ್ಲೂ ಏಕತೆಯ ಮಂತ್ರವಿಲ್ಲ. ಆರ್ಥಿಕವಾಗಿ ಬಲಿಷ್ಟರಾಗುತ್ತಾ ಹೋಗಿ ರಾಜಕೀಯವಾಗಿ ಹಿಂದುಳಿಯುವ ಪರಂಪರೆ ಈಗ ಕ್ರೈಸ್ತ ಸಮುದಾಯದಲ್ಲಿ ಕಾಣಿಸಿಕೊಂಡಿದೆ.
* ಹೆನ್ರಿ ಮೆಂಡೋನ್ಸಾ, ಉಪನ್ಯಾಸಕ
(vk daily published dis article on 6.04.2013)
more if need info
http://vijaykarnataka.indiatimes.com/articleshow/19403100.cms
ಟೂರ್ ಟು ಥಾಯ್ಲೆಂಡ್: ಟಾಲಿವುಡ್‌ನಲ್ಲಿ ‘ಚರಣ’ ಗೀತೆ
* ಸ್ಟೀವನ್ ರೇಗೊ, ದಾರಂದಕುಕ್ಕು
ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಯ ಮನೆಯಲ್ಲಿ ಈಗ ಜಾಕ್ ರೂಸೆಲ್ ಸ್ವಾತಂತ್ರ್ಯವಾಗಿ ಮನೆ ತುಂಬಾ ಓಡಾಡುತ್ತಿದ್ದಾನೆ. ಚಿರಂಜೀವಿಯ ಸೊಸೆ ಉಪಾಸನಾ ಜತೆಯಲ್ಲಂತೂ ಜಾಕ್ ರೂಸೆಲ್‌ಗೆ ಒಂಚೂರು ಪ್ರೀತಿ ಜಾಸ್ತಿ. ಕಾರಣ ಇಷ್ಟೇ ...ಥಾಯ್ಲೆಂಡ್‌ನಿಂದ ಜಾಕ್ ರೂಸೆಲ್‌ನನ್ನು ಹೊತ್ತು ತಂದದ್ದು ಕೂಡ ಉಪಾಸನಾ ಎನ್ನುವ ವಿಚಾರ ಬಹುತೇಕ ಮಂದಿಗೆ ಗೊತ್ತಿಲ್ಲ. ಉಪಾಸನಾ ಪತಿ ನಟ ರಾಮ್‌ಚರಣ್ ತೇಜಾರ ಹುಟ್ಟು ಹಬ್ಬಕ್ಕೆ ಈ ವಿಶೇಷ ನಾಯಿ ಜಾಕ್ ರೂಸೆಲ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ.
ರಾಮ್‌ಚರಣ್ ತೇಜಾ ಹಾಗೂ ಉಪಾಸನಾ ಜತೆಯಾಗಿ ವಿದೇಶದ ಯಾವುದೇ ಟೂರ್ ಹೋದರೂ ಕೂಡ ಅಲ್ಲಿಂದ ಯಾವುದಾದರೂ ನಾಯಿ ಮರಿಯನ್ನು ತರುವುದು ವಾಡಿಕೆ. ಒಂದು ಬಾರಿ ರಾಮ್‌ಚರಣ್ ತೇಜಾ ಉಪಾಸನಾಕ್ಕೆ ನಾಯಿ ಮರಿಯನ್ನು ಉಡುಗೊರೆಯಾಗಿ ನೀಡಿದರೆ ಮತ್ತೊಂದು ಸಲ ರಾಮ್‌ಚರಣ್ ನೀಡುವುದು ಮಾಮೂಲಿ ವಿಷ್ಯಾ. ಇದೇ ಕಾರಣದಿಂದ ಚಿರಂಜೀವಿ ಮನೆಯಲ್ಲಿ ಐದಕ್ಕೂ ಅಧಿಕ ವಿಶೇಷ ವಿದೇಶಿ ತಳಿಯ ನಾಯಿ ಮರಿಗಳಿಗೆ ಜಾಗವಿದೆ. ಅದರಲ್ಲೂ ರಾಮ್‌ಗೆ ಇತ್ತೀಚೆಗೆ ನೀಡಿದ ವಿದೇಶಿ ತಳಿಯ ಜಾಕ್ ರೂಸೆಲ್ ಈಗ ಚಿರು ಮನೆಯಲ್ಲಿ ವಿಶೇಷ ಅತಿಥಿ ಸ್ಥಾನದಲ್ಲಿ ಬಂದು ಕೂತಿದ್ದಾನೆ.
ಕಳೆದ ಬಾರಿ ಕುದುರೆ ಬಂತು
ಕಳೆದ ಬಾರಿ ರಾಮ್‌ಚರಣ್ ತೇಜಾ ಉಪಸನಾ ಬರ್ತ್‌ಡೇಗೆ ಬಿಳಿ ಬಣ್ಣದ ಕುದುರೆಯನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನು ಹಾಲೆಂಡ್‌ನಿಂದ ತರಿಸಲಾಗಿತ್ತು. ರಾಮ್ ಚರಣ್ ಚಿತ್ರವೊಂದರ ಚಿತ್ರೀಕರಣಕ್ಕೆ ಹಾಲೆಂಡ್‌ಗೆ ಹೋಗಿದ್ದಾಗ ಅಲ್ಲಿ ಬಿಳಿ ಬಣ್ಣದ ಕುದುರೆ ಚರಣ್‌ರಿಗೆ ಬಹಳ ಇಷ್ಟವಾಯಿತು. ಚಿತ್ರದ ಚಿತ್ರೀಕರಣ ಮುಗಿದ ನಂತರ ಚಿತ್ರತಂಡದ ಜತೆಗೆ ಈ ಬಿಳಿ ಕುದುರೆಯನ್ನು ಕೂಡ ತರಿಸಿಕೊಳ್ಳಲಾಯಿತು. ರಾಮ್‌ಚರಣ್ ತೇಜಾ ಚಿತ್ರಗಳ ಶೂಟಿಂಗ್ ಕಾರ‌್ಯದಲ್ಲಿ ಬ್ಯುಸಿಯಾಗಿದ್ದಾಗ ಪತ್ನಿ ಉಪಾಸನಾ ವಿದೇಶಿ ದೇಶಗಳಲ್ಲಿರುವ ವಿಶಿಷ್ಟ ತಾಣಗಳನ್ನು ಗುರುತು ಹಾಕುತ್ತಾರೆ. ತೇಜಾ ಚಿತ್ರದ ಚಿತ್ರೀಕರಣ ಮುಗಿಸಿದ ನಂತರ ಈ ವಿಶಿಷ್ಟ ಪ್ರವಾಸಿ ಸ್ಥಳಗಳಿಗೆ ಪತ್ನಿ ಜತೆಯಲ್ಲಿ ಸುತ್ತಾಟ ಮಾಡುತ್ತಾರೆ. ಅಲ್ಲಿ ಸಿಗುವ ವಿಶಿಷ್ಟ ವಸ್ತುಗಳ ಜತೆಯಲ್ಲಿ ಪ್ರಾಣಿಗಳನ್ನು ಕೂಡ ಮನೆಗೆ ತರುವ ಸಂಪ್ರದಾಯವನ್ನು ಇಬ್ಬರು ಬೆಳೆಸಿಕೊಂಡಿದ್ದಾರೆ.
ರಾಮ್‌ಚರಣ್‌ತೇಜಾ ಉಪಾಸನಾ ಅವರನ್ನು ಮದುವೆಯಾಗುವ ಮುಂಚೆನೇ ಇಬ್ಬರು ಒಳ್ಳೆಯ ಗೆಳೆಯರು ಸುತ್ತಾಡುವುದರಲ್ಲಿಯೇ ಅವರಿಬ್ಬರು ಜತೆಯಾದರು ಎನ್ನುತ್ತಾರೆ ಅವರ ಕುಟುಂಬದ ಮೂಲ. ಆದರೆ ಮದುವೆಯಾದ ನಂತರವಂತೂ ತಿಂಗಳಲ್ಲಿ ಒಂದು ವಾರ ಬರೀ ಕುಟುಂಬ, ಪತ್ನಿಯ ಜತೆಯಲ್ಲಿ ಸುತ್ತಾಟಕ್ಕೆ ಮೀಸಲಿಡುತ್ತಾರೆ. ಇತರ ನಟರ ಪತ್ನಿಯಂತೆ ಪತಿಯ ಜತೆಯಲ್ಲಿ ವಿದೇಶ ಚಿತ್ರೀಕರಣದಲ್ಲಿ ಉಪಾಸನಾ ಹೋಗುವುದು ತೀರಾ ಕಡಿಮೆ. ಹೈದರಾಬಾದ್‌ನಲ್ಲಿಯೇ ಉಳಿದುಕೊಂಡು ಟೂರಿಂಗ್ ಸ್ಪಾಟ್‌ಗಳ ಹುಡುಕಾಟದಲ್ಲಿ ತಲ್ಲೀನರಾಗಿರುತ್ತಾರೆ.
ಸುರೇಖಾ ಉಪಾಸನಾಳಿಗೆ ಗೈಡ್
ಮೆಗಾಸ್ಟಾರ್ ಚಿರಂಜೀವಿ ಅವರ ಪತ್ನಿ ಸುರೇಖಾ ಉಪಾಸನಾಳ ಗೈಡ್ ಎನ್ನುತ್ತಾರೆ ರಾಮ್ ಚರಣ್‌ತೇಜಾ. ನಟ ಎಂದಾಕ್ಷಣ ಮನೆಯಲ್ಲಿ ಪತ್ನಿಯ ಜತೆಯಲ್ಲಿ ಕಾಲ ಕಳೆಯುವುದಕ್ಕಿಂತ ಹೆಚ್ಚಾಗಿ ಚಿತ್ರಗಳ ಚಿತ್ರೀಕರಣದಲ್ಲಿ ತುಂಬಾನೇ ಬ್ಯುಸಿ ಇರುತ್ತಾರೆ. ಇದು ನನ್ನ ಅಪ್ಪ ಚಿರಂಜೀವಿಯನ್ನು ಕಟ್ಟಿಕೊಂಡು ಬದುಕುತ್ತಿರುವ ತಾಯಿ ಸುರೇಖಾ ಆವರಿಗೆ ಚೆನ್ನಾಗಿ ಗೊತ್ತು. ಅವರೇ ಉಪಾಸನಾಳಿಗೆ ಗೈಡ್ ಆಗಿ ನೋಡಿಕೊಳ್ಳುತ್ತಿದ್ದಾರೆ. ಅವರಿಂದಲೇ ಟೂರಿಂಗ್ ಪ್ಲೇಸ್‌ಗಳ ಬಗ್ಗೆ ತಿಳಿ ಹೇಳುತ್ತಾರೆ. ವಿದೇಶದಲ್ಲಿ ಯಾವ ಕಡೆ ಯಾವುದಿದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು ಎನ್ನುತ್ತಾರೆ ರಾಮ್ ಚರಣ್. ಟೋಟಲಿ ರಾಮ್‌ಚರಣ್ ತೇಜಾ ಹಾಗೂ ಉಪಾಸನಾಳ ಟೂರಿಂಗ್ ಅನುಭವಗಳಿಗಿಂತ ಹೆಚ್ಚಾಗಿ ಅವರ ಪ್ರಾಣಿಗಳ ಕುರಿತು ಬೆಳೆಸುವ ಪ್ರೀತಿಯೇ ಜಾಸ್ತಿ ಚರ್ಚೆಗೆ ಬರುತ್ತದೆ ಎನ್ನೋದು ವಿಶೇಷ.
(vk lvk published dis article on 6.04.2013)
Monday, April 1, 2013
ಕುಡ್ಲದ ಹುಡುಗಿಗೆ ಸಿದ್ದಾರ್ಥ ಕ್ಲೀನ್ ಬೋಲ್ಡ್ !
* ಸ್ಟೀವನ್ ರೇಗೊ ದಾರಂದಕುಕ್ಕು
ಆದರೆ ಹರ್ಷಿತಾ ಶೆಟ್ಟಿಯಂತೂ ಸಿನ್ಮಾ ಲ್ಯಾಂಡ್ ಪಕ್ಕಾ ನ್ಯೂ ಕಮರ್ ಎನ್ನುವುದರಲ್ಲಿ ಯಾವುದೇ ಡೌಟ್ ಇಲ್ಲ. ಅಂದಹಾಗೆ ಹರ್ಷಿತಾ ಶೆಟ್ಟಿ , ಬೇಸಿಕಲಿ ಮಂಗಳೂರಿನ ಹುಡುಗಿ. ಕೋಸ್ಟಲ್ ವುಡ್‌ನಲ್ಲಿ ಭರ್ಜರಿ ವೆಚ್ಚದಲ್ಲಿ ತಯಾರಾಗಿ ಈ ವರ್ಷ ಸಕ್ಸಸ್ ರೇಟ್ ದಾಖಲಿಸಿಕೊಂಡಿರುವ ನಾಟಕಕಾರ ದೇವದಾಸ್ ಕಾಪಿಕಾಡ್ ಅವರ ನಾಟಕ ಆಧರಿತ ಚಿತ್ರ 'ತೆಲಿಕೆದ ಬೊಳ್ಳಿ'ಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡ ಹುಡುಗಿಯೇ ಈ ಹರ್ಷಿತಾ ಶೆಟ್ಟಿ.
ಮಂಗಳೂರು ಮೂಲದ ಮುಂಬಯಿಯಲ್ಲಿಯೇ ಜಾಸ್ತಿ ಹೊತ್ತು ಕಳೆಯುತ್ತಿರುವ ಹರ್ಷಿತಾ ಶೆಟ್ಟಿ, ಕಾರ್ಪೊರೇಟ್ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡವರು. ಅದರಲ್ಲೂ ಮುಖ್ಯವಾಗಿ ಮೊದಲ ಚಿತ್ರ ತೆಲಿಕೆದ ಬೊಳ್ಳಿಯಲ್ಲಿ ತೀರಾ ಸಾಮಾನ್ಯ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡು ನಂತರ ಇಡೀ ಚಿತ್ರದ ಮೂಲ ಬಂಡವಾಳ ಎನ್ನುವಂತೆ ಓಡಾಡಿಕೊಂಡು ತುಳು ಸಿನಿಮಾ ಪ್ರಿಯರಿಗೆ ಹತ್ತಿರವಾದ ಹರ್ಷಿತಾ ಶೆಟ್ಟಿಯು ಈಗ ಕೋಲಿವುಡ್ ಚಿತ್ರದ ನಾಯಕಿಯಾಗಿ ಮಿಂಚಲು ರೆಡಿಯಾಗಿದ್ದಾರೆ.
ಸಿದ್ದಾರ್ಥ್ ಕೇಳಿದ ಹುಡುಗಿ:
ಟಾಲಿವುಡ್ ನಟ ಸಿದ್ದಾರ್ಥ್‌ಗೆ ಇದು ದೊಡ್ಡ ಚಿತ್ರವೇ ಸರಿ. ಕಾರಣ ಸಿದ್ದಾರ್ಥ್‌ಗೆ ಈ ಹಿಂದಿನ ಎರಡು ಚಿತ್ರಗಳು ನಿರೀಕ್ಷಿತ ಮಟ್ಟದ ಯಶಸ್ಸು ಸಿಕ್ಕಿರಲಿಲ್ಲ. ಅದರಲ್ಲೂ ಚಿತ್ರದ ನಾಯಕಿರ ಕುರಿತು ಸದಾ ಗಾಸಿಪ್‌ಗಳಲ್ಲಿ ಮುಳುಗಿ ಬರುತ್ತಿರುವ ಸಿದ್ದಾರ್ಥ್ ಈ ಬಾರಿ ಹೊಸ ನಾಯಕಿಯನ್ನು ಪರಿಚಯ ಮಾಡಬೇಕು ಎಂದು ನಿರ್ದೇಶಕ ಮಣಿಮಾರನ್ ಅವರಲ್ಲಿ ಹೇಳಿದ್ದರು. ಇದೇ ಕಾರಣದಿಂದ ಹರ್ಷಿತಾ ಶೆಟ್ಟಿ ಆಯ್ಕೆಯಾದರು ಎನ್ನುತ್ತದೆ ಚಿತ್ರದ ತಂಡ. ಅದರಲ್ಲೂ ಹರ್ಷಿತಾರ ಸ್ಕ್ರೀನ್ ಟೆಸ್ಟ್‌ನಲ್ಲಿ ಮಾಡಿದ ಸಾಧನೆ ಈ ಚಿತ್ರದ ಕತೆಗೆ ಅವರೇ ಸರಿಯಾದ ಆಯ್ಕೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಮಣಿಮಾರನ್.
ತಮಿಳಿನ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾದ ವೆಟ್ರಿ ಮಾರನ್ ಅವರ ಸಹಾಯಕರಾಗಿ ದುಡಿದ ಮಣಿಮಾರನ್‌ಗೆ ಇದು ಹೊಸ ಪ್ರಯತ್ನ. ತನ್ನ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವುದರಿಂದ ವೆಟ್ರಿ ಮಾರನ್ ಚಿತ್ರಕ್ಕೆ ಅದ್ಭುತವಾದ ಕತೆ ಹೆಣೆದುಕೊಟ್ಟಿದ್ದಾರೆ. ಜತೆಯಲ್ಲಿ ಎ.ಆರ್. ರೆಹಮಾನ್ ಅವರ ಅಳಿಯ ಜಿ.ವಿ. ಪ್ರಕಾಶ್ ಚಿತ್ರಕ್ಕೆ ಒಳ್ಳೆಯ ಸಂಗೀತ ನೀಡಿದ್ದಾರೆ.
ಉದಯಂ ಉದಯಿಸಿದ ಪರಿ:
2004ರಲ್ಲಿ ಬಾಲು ಮಹೇಂದ್ರ ಅವರ ಸಿನಿಮಾಕ್ಕೆ ವೆಟ್ರಿ ಮಾರನ್ ಕತೆ ಹೆಣೆದುಕೊಟ್ಟಿದ್ದರು. ಈ ಚಿತ್ರದಲ್ಲಿ ಧನುಷ್ ನಾಯಕನಾಗಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರ ನಿರ್ಮಾಣವಾಗಲಿಲ್ಲ. ಆ ಬಳಿಕ ಈ ಚಿತ್ರ ಎರಡು ಬಾರಿ ನಿರ್ಮಾಣ ಮಾಡಲು ಕೋಲಿವುಡ್ ಸಿನ್ಮಾ ಇಂಡಸ್ಟ್ರಿ ಎದ್ದು ನಿಂತು ಮತ್ತೆ ಅಲ್ಲಿಯೇ ಮಲಗಿ ಹೋಯಿತು.
ಆನಂತರ 2012ರಲ್ಲಿ ವೆಟ್ರಿ ಮಾರನ್ ಮತ್ತೆ ಸಿನ್ಮಾ ಮಾಡಲು ಅಣಿಯಾದರು. ಈ ಚಿತ್ರವನ್ನು ಉದಂಯಂ ಎನ್‌ಎಚ್ 4 ಎಂದು ಹೆಸರಿಡಲಾಗಿದೆ. ಕಿಶೋರ್, ಕೆ.ಕೆ. ಮೆನನ್ ಪ್ರಮುಖ ಭೂಮಿಕೆಯಲ್ಲಿದ್ದಾರೆ. ಕನ್ನಡದ ರಮ್ಯಾ ಕೂಡ ಇದರ ಒಂದು ಪಾತ್ರದಲ್ಲಿ ಕಾಣಸಿಗಲಿದ್ದಾರೆ. ತಮಿಳಿನ ದೊಡ್ಡ ನಿರ್ಮಾಪಕರಲ್ಲಿ ಒಬ್ಬರಾದ ದಯಾನಿಧಿ ಹಾಗೂ ವೆಟ್ರಿ ಮಾರನ್ ಜತೆಯಾಗಿ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಉಳಿದಂತೆ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿಯೇ ಚಿತ್ರ ಬಿಡುಗಡೆಯ ಕನಸು ಕಾಣುತ್ತಿದೆ ಚಿತ್ರ ತಂಡ.
(vk lvk published dis article on: 2.04.2013)
Subscribe to:
Posts (Atom)