Monday, December 10, 2012
ಮುಗಿಯುವ ಮುನ್ನ ನೇತ್ರಾವತಿ.....
* ಸ್ಟೀವನ್ ರೇಗೊ, ದಾರಂದಕುಕ್ಕು
ಕೋಟಿ ವರ್ಷಗಳಿಂದ ಕುಣಿದು ಕುಪ್ಪಳಿಸುತ್ತಿರುವ ಈ ನದಿಯ ಮೇಲೆ ಆಸೆ ಬುರುಕರ ಕಣ್ಣು ಬಿದ್ದುಬಿಟ್ಟಿದೆ. ಇಂಥ ನೇತ್ರಾವತಿಯನ್ನು ತಿರುಗಿಸುವ ಕಡೆ ರಾಜಕಾರಣಿಗಳು ಕಣ್ಣು ಹಾಕಿದ್ದಾರೆ. ನೇತ್ರಾವತಿ ತಿರುಗಿಸಿದರೆ ಇಡೀ ಜಿಲ್ಲೆ ಸೊರಗುತ್ತದೆ. ಈಗಾಗಲೇ ಇದಕ್ಕೆ ಪರಿವಿಡಿ ಬರೆಯಲಾಗಿದೆ.
ಕರ್ನಾಟಕ ಪಶ್ಚಿಮವಾಹಿನಿಯ ನದಿ ನಾಲ್ಕೇ ತಾಲ್ಲೂಕುಗಳಲ್ಲಿ ಹರಿದರೂ ದಕ್ಷಿಣ ಕನ್ನಡ ಮಟ್ಟಿಗೆ ನೇತ್ರಾವತಿ ಜೀವನದಿ. ಧರ್ಮಸ್ಥಳದ ಪವಿತ್ರ ಸ್ನಾನದಿಂದ ತೊಡಗಿ ಮಂಗಳೂರು ಮಹಾನಗರ ಜನರ ಜೀವಾಮೃತವಾಗುವ ತನಕ ಎಲ್ಲರಿಗೂ ಬೇಕಾದ ನದಿ. ತೊಂಬತ್ತಾರು ಕಿ.ಮೀ. ಉದ್ದದ ನೇತ್ರಾವತಿಗೆ ಮಳೆಗಾಲದಲ್ಲಿ ಮೈತುಂಬ ಸೊಕ್ಕು. ಬೇಸಗೆಯಲ್ಲಿ ಮಂದಗಮನೆ. ಆಷಾಢದಲ್ಲಿ ಅಹಂಕಾರಿ. ಶಿಶಿರದಲ್ಲಿ ನಾಚಿ ಮುದ್ದೆಯಾಗುವ ಮುಗುದೆಯಾಗುತ್ತಾಳೆ. ಕೋಟಿ ವರ್ಷಗಳಿಂದ ಕುಣಿದು ಕುಪ್ಪಳಿಸುತ್ತಿರುವ ಈ ನದಿಯ ಮೇಲೆ ಆಸೆ ಬುರುಕರ ಕಣ್ಣು ಬಿದ್ದುಬಿಟ್ಟಿದೆ. ಇಂಥ ನೇತ್ರಾವತಿಯನ್ನು ತಿರುಗಿಸುವ ಕಡೆ ರಾಜಕಾರಣಿಗಳು ಕಣ್ಣು ಹಾಕಿದ್ದಾರೆ. ನೇತ್ರಾವತಿ ತಿರುಗಿಸಿದರೆ ಇಡೀ ಜಿಲ್ಲೆ ಸೊರಗುತ್ತದೆ. ಈಗಾಗಲೇ ಇದಕ್ಕೆ ಪರಿವಿಡಿ ಬರೆಯಲಾಗಿದೆ.
ಉಪ್ಪಿನಂಗಡಿ ಎಂಬ ಸಂಗಮ ತಾಣದಲ್ಲಿ ಪದೇ ಪದೇ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡೂ ತುಂಬಿ ನೆರೆ ಬಾಧೆಯಾಗುತ್ತಿತ್ತು. ಬಂಟ್ವಾಳದ ಹಳೆಪೇಟೆಯಲ್ಲಿ ವರ್ತಕ ಮಂಡಿಗಳಿಗೆ ಪ್ರತಿ ವರ್ಷವೂ ನೀರು ನುಗ್ಗುತ್ತಿತ್ತು. ಬ್ರಹ್ಮರಕೂಟ್ಲುವಿನಲ್ಲಿ ನೀರು ಮೈಚಾಚಿ ವಾರಗಟ್ಟಲೆ ರಸ್ತೆ ಮುಳುಗುತ್ತಿತ್ತು. ಉಳ್ಳಾಲದ ಕಬ್ಬಿನ ಗದ್ದೆಗಳಿಗಂತೂ ಮಳೆಯ ನೀರಿನ ಆಕ್ರಮಣ ತಪ್ಪುತ್ತಿರಲಿಲ್ಲ. ಇದು ಮಳೆಗಾಲದ ನೇತ್ರಾವತಿಯ ಚಿತ್ರಣ.
ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ವಿಸ್ತಾರದ ಶೇ.೪೦ರಷ್ಟು ಪ್ರದೇಶ ನೇತ್ರಾವತಿಯದ್ದೇ. ಅಂದರೆ ೩೩೫೭ ಚದರ ಕಿಲೋ ಮೀಟರ್ ವಿಸ್ತಾರದ ಈ ನದಿಯ ಜಲಾನಯನ ಪ್ರದೇಶದಲ್ಲಿ ವರ್ಷಕ್ಕೆ ೪೩೦೬ ಮೀ.ಮೀ. ಮಳೆ ಬೀಳುತ್ತ ದೆ. ನದಿಯ ಹರಿವಿನ ವಾರ್ಷಿಕ ಪ್ರಮಾಣ ಸರಾಸರಿ ೧೨೪೩೪ ಮಿಲಿಯನ್ ಘನ ಮೀಟರ್ ಗಳು ನೀರಾವರಿ ತಜ್ಞರ ಲೆಕ್ಕಾಚಾರದ ಪ್ರಕಾರ ೪೪೬ ಟಿಎಂಸಿ ನೀರು ಈ ನದಿಯಲ್ಲಿ ಹರಿದು ಹೋಗುತ್ತಿದೆ.
ಜೀವನದಿ ಎಲ್ಲಕ್ಕೂ ಅಗತ್ಯ:
ಜೀವನದಿ ನೇತ್ರಾವತಿ ಎಲ್ಲಕ್ಕೂ ಬೇಕು. ಮಂಗಳೂರಿಗೆ ನೇತ್ರಾವತಿ ಏಕೈಕ ಮೂಲ ಮಂಗಳೂರಿಗೆ ಬೇಕಾಗುವ ನೀರಿನಲ್ಲಿ ಶೇ.೭೦ರಷ್ಟು ಪಾಲು ಈ ನದಿಯದ್ದು. ಮಂಗಳೂರಿಗೆ ನೇತ್ರಾವತಿ ನದಿಯಿಂದ ದಿನಕ್ಕೆ ೨೦ ಎಂಜಿಡಿ ಪೂರೈಕೆಯಾಗುತ್ತಿದೆ. ಇದು ಮಂಗಳೂರಿನ ಕನಿಷ್ಠ ಅಗತ್ಯ.
ಮಂಗಳೂರಿನ ವಿಶೇಷ ಆರ್ಥಿಕ ವಲಯಕ್ಕೆ ಅಂದಾಜಿನ ಪ್ರಕಾರ ದಿನಕ್ಕೆ ೫೦೦ ಎಂಜಿಡಿ ನೀರು ಅಗತ್ಯ. ವಿಶೇಷ ಆರ್ಥಿಕ ವಲಯದಿಂದ ಜನಸಂಖ್ಯೆಯೂ ಹೆಚ್ಚುತ್ತದೆ. ಆದ್ದರಿಂದ ನೀರಿನ ಬೇಡಿಕೆ ನಾವು ಊಹಿಸದೇ ಇರುವ ಮಟ್ಟದಲ್ಲಿ ಏರುತ್ತದೆ. ನೇತ್ರಾವತಿ ನದಿಯ ಮೇಲೆ ವಿದ್ಯುತ್ ಉತ್ಪಾದನೆಯ ಕಂಪನಿಗಳು ಕಣ್ಣಿಟ್ಟಿವೆ. ಸರಕಾರದ ಸಬ್ಸಿಡಿಯ ಮೇಲೆ ಉದ್ಯಮದ ಮಂದಿ ಹಾತೊರೆದಿದ್ದಾರೆ. ಪಶ್ಚಿಮ ಘಟ್ಟದ ನೆತ್ತಿಯಲ್ಲಿ ಇನ್ನೂ ನೇತ್ರಾವತಿ ಧುಮುಕಿಲ್ಲ, ಅಲ್ಲಿಗೆ ಒಡ್ಡು ಹಾಕಿ ನೀರೆತ್ತಿ ಅದನ್ನು ಧುಮುಕಿಸಿ ಕರೆಂಟು ತಯಾರಿಸುವ ಉತ್ಸಾಹ ಯೋಜನಾ ಕರ್ತಗಳದ್ದು.
ಬೆಟ್ಟದ ಬುಡದಿಂದ ತೊಡಗಿ ಬಂಟ್ವಾಳದ ತನಕ ನೇತ್ರಾವತಿಯಲ್ಲಿ ೪೨ ಸಣ್ಣಪುಟ್ಟ, ಮಧ್ಯಮ, ದೊಡ್ಡ ಎಂಬ ವೆರೈಟಿಯಲ್ಲಿ ವಿದ್ಯುತ್ ಯೋಜನೆಗಳನ್ನು ಯೋಜನಾ ಕರ್ತಗಳು ರೂಪಿಸಿದ್ದಾರೆ. ಕೇವಲ ಬೆಳ್ತಂಗಡಿ ಎಂಬ ಸಣ್ಣ ತಾಲೂಕೊಂದರಲ್ಲೇ ನೇತ್ರಾವತಿಗೆ ಹದಿನಾರು ಸ್ಥಳದಲ್ಲಿ ಸಣ್ಣ ಸಣ್ಣ ಅಣೆಕಟ್ಟು ಹಾಕಿ ವಿದ್ಯುತ್ ಉತ್ಪಾದಿಸುವ ಯೋಜನೆ ಇದೆ. ದೊಂಡೊಳೆ, ಪಾರ್ಪಿಕಲ್, ನೀರಕಟ್ಟೆ, ನಿಡ್ಲೆ, ಶಂಬೂರು ಹೀಗೆ ಅನೇಕ ಸ್ಥಳಗಳಲ್ಲಿ ವಿದ್ಯುತ್ ಯೋಜನೆಗಳು ಆರಂಭವಾಗಿವೆ. ಇನ್ನೂ ೧೩ ಮಿನಿ ಜಲ ವಿದ್ಯುತ್ ಯೋಜನೆಗಳು ನೇತ್ರಾವತಿಯ ಅಥವಾ ಅದರ ಉಪನದಿಯಲ್ಲೋ ಆರಂಭ ಗೊಳ್ಳಲು ಸಿದ್ಧತೆ ನಡೆದಿವೆ. ಹೆಚ್ಚು ಕಡಿಮೆ ೧೧೦ ಮೆಗಾವಾಟ್ ವಿದ್ಯುತ್ ಅನ್ನು ಈ ಅಣೆಕಟ್ಟುಗಳಿಂದ ಉತ್ಪಾದಿಸುವ ಲೆಕ್ಕ ಮಾಡಲಾಗಿದೆ.
ಹರಿಯುವ ನೇತ್ರಾವತಿಯ ಲೆಕ್ಕಚಾರ:
ನೇತ್ರಾವತಿ ಮತ್ತು ಅದರ ಮುಖ್ಯ ಉಪನದಿ ಕುಮಾರಧಾರಾ ಸಹಿತ ರಾಜ್ಯದ ೩೬ ನದಿಗಳಿಂದ ನೀರಾವರಿಗಾಗಿ ನೀರೆತ್ತಲು ಫೆಬ್ರವರಿಯಿಂದ ಜೂನ್ ತನಕ ಕೆಲವು ನಿರ್ಬಂಧಗಳಿವೆ. ಪೇಟೆ ಪಟ್ಟಣಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ ಎಂದು ಆಯಾ ಜಿಲ್ಲಾಡಳಿತಕ್ಕೆ ಕಂಡು ಬಂದರೆ ತಕ್ಷಣವೇ ನದಿ ನೀರಾವರಿ ನಿಷೇಧಿಸಿ ಆದೇಶ ನೀಡಬಹುದು. ಈ ಸಂಬಂಧ ನೀರಾವರಿ ಕಾಯ್ದೆಗಳಲ್ಲಿ ಸರಳ ಮಾರ್ಗದರ್ಶಿ ಸೂತ್ರಗಳಿವೆ. ನದಿ ಪಾತ್ರದ ರೈತರಿಗೆ ಫೆಬ್ರವರಿ ತನಕ ಮಾತ್ರ ನೀರೆತ್ತುವ ಪರವಾನಗಿ ನೀಡಲಾಗುತ್ತದೆ. ಪರವಾನಗಿ ನವೀಕರಣಗೊಳಿಸದಿದ್ದರೆ ನಿಷೇಧ ಜಾರಿಗೊಂಡಿದೆ ಎಂದೇ ಅರ್ಥ. ಅನಂತರ ನೀರೆತ್ತಿದ್ದರೆ ಅದು ಅಕ್ರಮ.
ನೇತ್ರಾವತಿಯ ತಟದಲ್ಲಿ ಇಂಥ ಪರವಾನಗಿ ನೀಡಿರುವುದು ಭತ್ತದ ಕೃಷಿಗೆ ನೀರು ಹಾಯಿಸಲೆಂದು ಮಾತ್ರ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭತ್ತದ ಕೃಷಿಯೇ ಬತ್ತಿ ಹೋಗಿದೆ. ಅಡಕೆ ತೋಟಗಳು ಮೈ ಎತ್ತಿವೆ. ಎಲ್ಲೆಂದರಲ್ಲಿ ತೋಟಗಳ ಸಾಮ್ರಾಜ್ಯ. ಭತ್ತದ ಗದ್ದೆಗಳು ಮಾತ್ರವಲ್ಲ, ಗುಡ್ಡಕಾಡುಗಳೂ ಅಡಕೆ ತೋಟಗಳಾಗಿವೆ. ಆದರೆ ನೀರಿನ ಪರವಾನಗಿ ಮಾತ್ರ ಭತ್ತದ ಹೆಸರಲ್ಲೇ ಇದೆ. ಒಂದು ಅಂದಾಜಿನ ಪ್ರಕಾರ ನೇತ್ರಾವತಿ-ಕುಮಾರಾಧಾರ ಪ್ರದೇಶದಲ್ಲಿ ಸಾವಿರಾರು ಪಂಪ್ ಸೆಟ್ ಗಳು ನೇತ್ರಾವತಿಯನ್ನು ಹೀರಿ ತೋಟಗಳಿಗೆ ಉಣಿಸುತ್ತಿವೆ. ತೆಂಗು-ಬಾಳೆ ಕೃಷಿಗಳಿಗೆ ನೀರು ಬೇಕಾಗಿರುವುದು ಫೆಬ್ರವರಿಯಿಂದ ಮೇ ತನಕ. ಈ ಹೊತ್ತಿನಲ್ಲಿ ನಿರ್ಬಂಧ ಹೇರಿದರೆ ಈ ಸಾವಿರಾರು ಎಕರೆ ತೋಟ ಕರಟಿ ನಾಶವಾಗುತ್ತದೆ. ಸಾವಿರಾರು ಕೃಷಿ ಕುಟುಂಬಗಳೂ ಬೆಂದು ಹೋಗುತ್ತವೆ.
ನದಿಯ ವಾಣಿಜ್ಯದ ಮಗ್ಗಲು:
ಕೈಗಾರಿಕೆ ಅಭಿವೃದ್ಧಿ, ಕೃಷಿಕ್ರಾಂತಿ, ವಾಣಿಜ್ಯ ಕ್ಷೇತ್ರಗಳ ಬೆಳವಣಿಗೆಯಾಗುತ್ತಿದ್ದಂತೆ ನಮ್ಮ ಸೌಂದರ್ಯ ಸಾಕ್ಷಿಯಾಗಿದ್ದ ಈ ಕರಾವಳಿ ಅರೆ ಮಲೆನಾಡು ಪ್ರದೇಶದ ಜೀವ ಲಹರಿಯಾಗಿದ್ದ ನೇತ್ರಾವತಿ ಕೂಡ ವಾಣಿಜ್ಯೀಕರಣಗೊಂಡಿತು. ನೇತ್ರಾವತಿ ನಿಧಾನವಾಗಿ ಸೊರಗುತ್ತಾ ಸೊರಗುತ್ತಾ ಕಣ್ಮುಚ್ಚಬಹುದೇ ಎಂಬ ಆತಂಕ ಯಾರೂ ಗಣಿಸಿದಂತಿಲ್ಲ. ಈಗಾಗಲೇ ಜೀವನದಿ ಕಾವೇರಿಯ ಬಗ್ಗೆ ಅಧ್ಯಯನಗಳು, ಚಿಂತನೆಗಳು ಆರಂಭವಾಗಿದೆ.
ನಾವೆಲ್ಲಾ ಈ ತನಕ ಹರಿಯುವ ನದಿಯನ್ನು ಕಟ್ಟುವ ಕುರಿತು ಯೋಚಿಸಿದ್ದೇವೆಯೇ ವಿನಾ ನದಿಯ ಹರಿವು ಉಳಿಸುವ ಹೆಚ್ಚಿಸುವ ಕುರಿತು ಎಂದೂ ಯೋಚಿಸಿಲ್ಲ ಎಂದು ಹೇಳುತ್ತಾರೆ ಪರಿಸರವಾದಿ ಹಾಗೂ ಜಲ ಕೊಯ್ಲು ತಜ್ಞ ಶ್ರೀ ಪಡ್ರೆ. ಸಂಪತ್ತಿನ ಬಳಕೆ ಕುರಿತು ಮಾತನಾಡುವುದಕ್ಕೂ ಮುಖ್ಯವಾದದ್ದು ಸಂಪತ್ತಿನ ಉಳಿಕೆಯ ಚಿಂತನೆ ಎಂದು ನೇತ್ರಾವತಿ ಕುರಿತು ಅವರು ಮಾರ್ಮಿಕವಾಗಿ ಉತ್ತರಿಸುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತಿಯೊಂದು ಯೋಜನೆ ಮಂಜೂರಾದಾಗಲೂ ಪರಿಸರದ ಬಗ್ಗೆ ಕಾಳಜಿ ಇರುವವರು ದಕ್ಷಿಣ ಕನ್ನಡ ಜಿಲ್ಲೆಯ ಧಾರಣಾ ಶಕ್ತಿಯ ಅಧ್ಯಯನ ಆಗಬೇಕೆಂದು ಎದ್ದು ನಿಲ್ಲುತ್ತಾರೆ. ಇಷ್ಟರವರೆಗೆ ಸರಕಾರವಾಗಲಿ, ಸ್ಥಳೀಯಾಡಳಿತ ಸಂಸ್ಥೆಗಳಾಗಲಿ ಇತ್ತ ಆಸಕ್ತಿ ತೋರಿಲ್ಲ. ಗಂಗಾ ಕ್ರಿಯಾ ಯೋಜನೆ ಮಾದರಿಯಲ್ಲಿ ನೇತ್ರಾವತಿಗೂ ಕ್ರಿಯಾ ಯೋಜನೆಯ ಅಗತ್ಯವಿದೆ. ಇನ್ನು ಹತ್ತು ವರ್ಷಗಳಲ್ಲಿ ನೇತ್ರಾವತಿಯನ್ನು ನಾವು ಮುಂಚಿನಂತೆ ಆಗಿಸಲು ಸಾಧ್ಯವಾಗದಿದ್ದರೆ ಎಕರೆಗೆ ೧.೬೦ ಕೋಟಿ ಲೀಟರ್ ಮಳೆ ಬೀಳುವ ಈ ಪರಶುರಾಮನ ಸೃಷ್ಟಿಯ ಕರಾವಳಿಯಲ್ಲಿ ಬರಗಾಲದ ಸೆಖೆ ನಿಶ್ಚಿತ ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯೋದಿಲ್ಲ.
ಎರಡು ನದಿಗಳಿಗೆ ಎಂಟು ಉಪನದಿಗಳು:
ಈ ಎಲ್ಲ ಉಪನದಿಗಳಿಗೆ ಅಲ್ಲಲ್ಲಿ ಕೆಲವು ಹಳ್ಳ, ತೊರೆಗಳು ಬಂದು ಸೇರುತ್ತವೆ. ಕೆಲವು ತೊರೆಗಳು ಪ್ರಪಾತಗಳಲ್ಲಿ ಧುಮುಕಿ ಜಲಪಾತಗಳಾಗಿ ಭೋರ್ಗರೆಯುತ್ತಿದ್ದರೆ ಮತ್ತೆ ಕೆಲವು ಕೇವಲ ಜುಳು ಜುಳು ನಿನಾದದೊಂದಿಗೆ ಪ್ರಾಕೃತಿಕ ಸೊಬಗನ್ನು ಅಭಿವ್ಯಕ್ತಗೊಳಿಸುತ್ತಿವೆ.
೧. ಕುದುರೆಮುಖದ ಎಳನೀರು ಘಾಟಿಯಿಂದ ಬರುವ ಎಳನೀರು ಹೊಳೆಯು ಕುದುರೆಮುಖ, ಹಿರಿಮರಿಗುಪ್ಪೆ ಮತ್ತು ಕೃಷ್ಣಗಿರಿಯ ಶೋಲಾ ಕಾಡುಗಳಿಂದ ಹರಿದುಬರುತ್ತಿದೆ.
೨. ನೇತ್ರಾವತಿಯ ಎರಡನೇ ಉಪನದಿಯಾದ ಬಂಡಾಜೆ ಹೊಳೆಯು ದುರ್ಗದಬೆಟ್ಟದಿಂದ ೩೬೨ ಅಡಿ ಎತ್ತರದಿಂದ ಜಲಪಾತವಾಗಿ ಧುಮುಕಿ ಮಲವಂತಿಗೆಯತ್ತ ಹರಿದುಬರುವುದು.
೩. ಮೂರನೇ ಉಪನದಿ ಕೊಟ್ಟಿಗೆಹಾರ ಸಮೀಪದ ಮಧುಗುಂಡಿಯಿಂದ ಹರಿದುಬರುವ ಮೃತ್ಯುಂಜಯ ಹೊಳೆಯು ಬಾರೆಕಲ್ಲು, ದೊಡ್ಡೇರಿಬೆಟ್ಟದ ಒಂದು ಮಗ್ಗುಲಿನಲ್ಲಿ ಸಾಗುತ್ತಾ ಚಾರ್ಮಾಡಿಯತ್ತ ಹರಿದುಬರುತ್ತದೆ.
೪. ನಾಲ್ಕನೇ ಉಪನದಿ ಅಣಿಯೂರು ಹೊಳೆಯು ಚಾರ್ಮಾಡಿ ಘಾಟಿಯ ಹೊರಟ್ಟಿಯಲ್ಲಿ ಉಗಮಿಸಿ ಬಾರಿಮಲೆ ಮತ್ತು ದೇವಗಿರಿ ಕಣಿವೆಗಳಲ್ಲಿ ಹರಿದುಬರುತ್ತದೆ.
೫. ಐದನೇ ಉಪನದಿ ಸುನಾಲ ಹೊಳೆಯು ಮಿಂಚುಕಲ್ಲು, ಅಂಬಟ್ಟಿಮಲೆಯಿಂದ ಉಗಮಿಸಿ ಸೋಮನಕಾಡು ಕಣಿವೆಯಲ್ಲಿ ಹರಿಯುತ್ತದೆ.
೬. ಆರನೇ ಉಪನದಿ ನೆರಿಯ ಹೊಳೆಯು ಬಾಂಜಾರು ಕಣಿವೆಯಲ್ಲಿ ಉಗಮಿಸುತ್ತದೆ.
೭. ಏಳನೇ ಉಪನದಿ ಕಪಿಲಾ ಹೊಳೆಯು ಭೈರಾಪುರ ಘಾಟಿಯಲ್ಲಿ ಉಗಮಿಸಿ ಎತ್ತಿನಭುಜ ಕಣಿವೆಯಲ್ಲಿ ಹರಿದುಬರುತ್ತದೆ.
೮. ಎಂಟನೇ ಉಪನದಿ ಕೆಂಪುಹೊಳೆಯು ಶಿರಾಡಿ ಘಾಟಿಯ ಓಂಗ್ರಾಲ ಕಣಿವೆಯಲ್ಲಿ ಉಗಮಿಸಿ ಕೊಂಬರಮಲೆ, ವೆಂಕಟಗಿರಿ ಕಣಿವೆಯಲ್ಲಿ ಹರಿಯುತ್ತದೆ.
೯. ಒಂಬತ್ತನೇ ಪ್ರಮುಖ ಉಪನದಿ ಕುಮಾರಧಾರ ಹೊಳೆಯು ಕುಮಾರಪರ್ವತದಲ್ಲಿ ಉಗಮವಾಗಿ ಏಣಿಕಲ್ಲು, ಪಟ್ಲಬೆಟ್ಟ ಕಣಿವೆಯಲ್ಲಿ ಹರಿದುಬರುತ್ತದೆ.
ಈ ಒಂಬತ್ತು ಉಪನದಿಗಳಿಗೆ ಮತ್ತೊಂದಷ್ಟು ಕಿರುಹಳ್ಳ, ಝರಿತೊರೆಗಳು ಅಲ್ಲಲ್ಲಿ ಸೇರುತ್ತವೆ. ಶಿರ್ಲಾಲು ಹಳ್ಳ, ಶಿವನಾಳ ಹಳ್ಳ, ಮಾವಿನಸಸಿ ಹಳ್ಳ, ಬಡಮನೆ ಹಳ್ಳ, ಹಳೆಮನೆ ಹಳ್ಳ, ಬಟ್ಟಿ ಹಳ್ಳ, ಕಿಲ್ಲೂರು ಹಳ್ಳ, ಬಂಗ್ರಬಲಿಗೆ ಹಳ್ಳ, ಆನಡ್ಕ ಹಳ್ಳ, ನಂದಿತ್ತಾಟು ಹಳ್ಳ, ಮಲ್ಲ ಹಳ್ಳ, ಏಳೂವರೆ ಹಳ್ಳ, ಕೂಡುಬೆಟ್ಟು ಹಳ್ಳ, ಮುಂಡಾಜೆ ಹಳ್ಳ, ನೆಲ್ಲಿತ್ತಾಟು ಹಳ್ಳ, ಬಿರುಮಲೆ ಹಳ್ಳ, ಹಕ್ಕಿಕಲ್ಲು ಹಳ್ಳ, ನಾಗರ ಹಳ್ಳ, ಕಬ್ಬಿನ್ಸಂಕ ಹಳ್ಳ, ಕಲ್ಲರ್ಬಿ ಹಳ್ಳ, ದೊಂಡೋಲೆ ಹಳ್ಳ, ಕಲ್ಲಗುಂಡಿ ಹಳ್ಳ, ಏಮೆಪಾರೆ ಹಳ್ಳ, ಕನ್ನಿಕಾಯ ಗುಂಡಿ, ಕಬ್ಬಿನಾಲೆ, ಅಡ್ಡ ಹೊಳೆ, ಕೇರಿ ಹೊಳೆ, ಹೊಂಗದ ಹೊಳೆ, ಮಾರುತಿ ಹೊಳೆ, ಅಬ್ಲುಬುಡಿ ಹಳ್ಳ, ಕಾಗೆನೀರು, ಅವಂತಿಗೆ ಹೊಳೆ, ಸಿಂಗ್ಸಾರ್ ಹೊಳೆ, ಗಿರಿಹೊಳೆ, ಪೇರಿಕೆ, ಮೀನಗಂಡಿ, ಅಜ್ಜಿಗುಂಡಿ, ಬಣಾಲ್ ಹೊಳೆ, ಜೇಡಿಗುಲು, ಮತ್ತಿಕೋಲು ಮುಂತಾದ ಅನೇಕ ಹಳ್ಳಗಳು ಉಪನದಿಗಳಿಗೆ ಸೇರುತ್ತವೆ.
ಈ ಉಪನದಿಗಳು, ಹಳ್ಳಗಳು ಹರಿದು ಬರುವಲ್ಲೆಲ್ಲಾ ಗಿರಿ, ಕಂದರ, ಕಣಿವೆ, ಪ್ರಪಾತ, ಜಲಪಾತಗಳಿವೆ. ಮಳೆಯನ್ನು ಹೀರಿ ಹೊಳೆಯನ್ನು ಜೀವಂತವಾಗಿಟ್ಟುಕೊಳ್ಳುವ ಹುಲ್ಲುಗಾವಲುಗಳಿವೆ. ಆಕಾಶದೆತ್ತರಕ್ಕೆ ನಿಂತಿರುವ ಮರಗಳಿವೆ. ಔಷಧೀಯ ಸಸ್ಯ ಪ್ರಬೇಧಗಳಿವೆ. ಕಾಡನ್ನೇ ಆಶ್ರಯಿಸಿದ ವನ್ಯ ಮೃಗ ಪಕ್ಷಿ ಸಂಕುಲಗಳಿವೆ. ಕಗ್ಗತ್ತಲ ಮಲೆಗಳಿವೆ. ಮಲೆಗಳನ್ನೇ ನಂಬಿ ಬದುಕು ಸಾಗಿಸುವ ಮಲೆಕುಡಿಯರಿದ್ದಾರೆ. ಪರ್ವತಗಳ ಕಣಿವೆಗಳಲ್ಲಿ ಮಳೆಗೆ ಮೂಲಾಧಾರವಾದ ಶೋಲಾ ಕಾಡುಗಳಿವೆ.
ನದಿ ತಿರುವು ಮೂರ್ಖತನದ ಹೆಜ್ಜೆ:
ರೈಲ್ವೆ ರಸ್ತೆ, ರಾಷ್ಟ್ರೀಯ ಹೆದ್ದಾರಿ, ಗಣಿಗಾರಿಕೆ, ವಿದ್ಯುತ್ ಲೈನ್, ಪೈಪ್ ಲೈನ್, ಜಲಾಶಯ ನಿರ್ಮಾಣಗಳಂತಹ ವನವಿನಾಶಕ ಯೋಜನೆಗಳಿಂದ ಈಗಾಗಲೇ ಪಶ್ಚಿಮ ಘಟ್ಟದ ಪರ್ವತ ಮತ್ತು ಅಡವಿ ಭಾಗಕ್ಕೆ ಅಗಾಧ ಹಾನಿಯಾಗಿದೆ. ಈ ನದಿ ತಿರುವು ಯೋಜನೆಯಿಂದಂತೂ ಪಶ್ಚಿಮ ಘಟ್ಟದ ಗಿರಿ, ವನ, ಝರಿ, ಜಲದೊಡಲಿಗೆ ಮಾರಣಾಂತಿಕ ಏಟು ಬೀಳುವುದರಲ್ಲಿ ಸಂಶಯವೇ ಇಲ್ಲ. ಕಾಳಿ, ಶರಾವತಿ, ಚಕ್ರಾ, ವಾರಾಹಿ, ಭದ್ರಾ, ಕಾವೇರಿ ನದಿಗಳಿಗೂ ಮತ್ತು ನದಿ ಸಮೀಪದ ಅಡವಿಗಳಿಗೂ ದುರ್ಗತಿ ಒದಗಿಸಿದ್ದಾಗಿದೆ. ವಿಧಾನಸೌಧ ಬಿದ್ದರೆ ಅಂತಹ ೧೦೦ ವಿಧಾನಸೌಧಗಳನ್ನು ಕಟ್ಟಬಹುದು. ನದಿಯನ್ನು ಕಳೆದುಕೊಂಡರೆ ಮತ್ತೆ ಅಂತಹ ನದಿಯನ್ನು ಸೃಷ್ಟಿಸಲು ನಮ್ಮಿಂದ ಸಾಧ್ಯವೇ ಇಲ್ಲ.
ನದಿ ತಿರುವು ಯೋಜನೆಯ ರೂವಾರಿ ಪರಮಶಿವಯ್ಯನವರ ಪ್ರಕಾರ ನೇತ್ರಾವತಿ ನದಿಯಲ್ಲಿ ಪ್ರತಿ ವರ್ಷ ೪೬೪.೬೨ ಟಿ.ಎಂ.ಸಿ ನೀರು ಸಮುದ್ರದ ಪಾಲಾಗುತ್ತಿದೆ. ಇದರಲ್ಲಿ ೧೪೨.೪೬ ಟಿ.ಎಂ.ಸಿ ನೀರನ್ನು ಕಾಲುವೆ ಮುಖಾಂತರ ಬಯಲುಸೀಮೆಯ ೫೭ ತಾಲೂಕುಗಳಿಗೆ ಸರಬರಾಜು ಮಾಡಬಹುದೆಂದು ಲೆಕ್ಕಾಚಾರ. ಉಪನದಿಗಳ ಉಗಮಸ್ಥಾನದ ಸಮೀಪ ಅಲ್ಲಲ್ಲಿ ನೀರನ್ನು ತಡೆದು ಜಲಾಶಯಗಳನ್ನು ನಿರ್ಮಿಸಿ ಕಾಲುವೆ ಮುಖಾಂತರ ಸಾಗಿಸುವುದೆಂದು ಅಂದಾಜು. ಈ ಯೋಜನೆಗೆ ಎರಡು ಪ್ರಮುಖ ಕಾಲುವೆಗಳ ಮೂಲಕ ಹರಿವು ಸಾಗಲಿದೆ.
ಈ ಎರಡೂ ಕಾಲುವೆಗಳಿಗೆ ಬೇಕಾದಲ್ಲಿ ಜಲಾಶಯ ನಿರ್ಮಿಸುವಲ್ಲಿ ರಕ್ಷಿತಾರಣ್ಯವಿದೆ. ಕುದುರೆಮುಖ, ಕೃಷ್ಣಗಿರಿ, ಹಿರಿಮರಿಗುಪ್ಪೆ, ಬಲ್ಲಾಳರಾಯನ ದುರ್ಗ, ಬಂಡಾಜೆ ಜಲಪಾತ, ಹೊಸ್ಮನೆ ಗುಡ್ಡ, ಬಾಳೆಗುಡ್ಡ, ದೊಡ್ಡೇರಿ ಬೆಟ್ಟ, ಏರಿಕಲ್ಲು, ಕುಂಭಕಲ್ಲು, ಮಿಂಚುಕಲ್ಲು, ಸೋಮನಕಾಡು, ಬಾರಿಮಲೆ, ಬಾಂಜಾರುಮಲೆ, ಇಳಿಮಲೆ, ಅಂಬಟಿಮಲೆ, ಅಮೇದಿಕಲ್ಲು, ಎತ್ತಿನಭುಜ, ದೇವರಮಲೆ, ಉಳಿಯಮಲೆ, ಮುಗಿಲಗಿರಿ, ಅರಮನೆ ಬೆಟ್ಟ, ಬೆಂಗಲಾರ್ ಬೆಟ್ಟ, ವೆಂಕಟಗಿರಿ, ಅರೆಬೆಟ್ಟ, ಕನ್ನಡಿಕಲ್ಲು, ಏಣಿಕಲ್ಲು ಬೆಟ್ಟ, ಪಟ್ಲ ಬೆಟ್ಟ, ಕುಮಾರಪರ್ವತ ಇಂತಹ ಪಶ್ಚಿಮ ಘಟ್ಟದ ಪ್ರಮುಖ ಬೆಟ್ಟಗಳೆಲ್ಲ ಹಾನಿಗೊಳಗಾಗುವ ಸಂಭವಗಳಿವೆ.
ಘಾಟಿಗಳುದ್ದಕ್ಕೂ ಪರ್ವತಗಳನ್ನು ಕೊರೆದು ಅರಣ್ಯ ಪ್ರದೇಶವನ್ನು ಸಿಗಿದು ನೀರನ್ನು ಸಂಗ್ರಹಿಸುವುದೆಂದರೆ ಚಾರ್ಮಾಡಿ ಘಾಟಿಯಲ್ಲಿ ಮಂಗಳೂರು ಚಿಕ್ಕಮಗಳೂರು ರಾಜ್ಯ ಹೆದ್ದಾರಿಗೂ, ಶಿರಾಡಿ ಘಾಟಿಯಲ್ಲಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೂ, ರೈಲ್ವೇ ರಸ್ತೆಗೂ ಹಾನಿಯಾಗಬಹುದು. ಈ ಯೋಜನೆಯಿಂದ ೫,೫೫೦ ಹೆಕ್ಟೇರ್ ಅರಣ್ಯ ಪ್ರದೇಶ ಮುಳುಗಡೆಯಾಗುತ್ತದೆ.
ಈ ಕಾಲುವೆ, ಜಲಾಶಯ ನಿರ್ಮಾಣ, ಪೈಪ್ ಲೈನ್ ಗಳಿಗೆ ಪರ್ವತಗಳನ್ನು ಸೀಳಲು ಬೃಹತ್ ಯಂತ್ರಗಳು ಕಾಡಿನೊಳಗೆ ಹೋಗಬೇಕಾದರೆ ಅರಣ್ಯದುದ್ದಕ್ಕೂ ರಸ್ತೆ ನಿರ್ಮಾಣವಾಗಬೇಕು. ಯಾವುದೇ ಅರಣ್ಯ ಪರ್ವತಗಳಿಗೆ ರಸ್ತೆ ನಿರ್ಮಾಣವಾಯಿತೆಂದರೆ ಅಲ್ಲಿನ ಜೀವವೈವಿಧ್ಯಗಳು, ವನ್ಯಜೀವಿಗಳು, ಮರಗಿಡಗಳು ನಾಶವಾದವೆಂದೇ ಅರ್ಥ. ಕಾಮಗಾರಿ ನಡೆಯುತ್ತಿರುವಾಗ ಪರ್ವತಗಳ ಕಲ್ಲು, ಮಣ್ಣನ್ನು ರಾಶಿ ಹಾಕಿದಾಗ ಅಗಾಧ ಪ್ರಮಾಣದ ಮಳೆಕಾಡು ನಾಶವಾಗುತ್ತದೆ. ಈ ಮಣ್ಣಿನ ರಾಶಿ ಕೆಲವು ಚಿಕ್ಕ ತೊರೆ ಹಳ್ಳಗಳ ಮೇಲೆ ಬಿದ್ದು ಆ ಹಳ್ಳಗಳು ಶಾಶ್ವತವಾಗಿ ಮುಚ್ಚಿಹೋಗುತ್ತವೆ. ಮಣ್ಣಿನ ರಾಶಿ ನದಿಯನ್ನು ಸೇರಿ ಹೂಳು ತುಂಬಿ ನದಿಯ ಆಳ ಕಡಿಮೆಯಾಗಬಹುದು. ಕಾಡಿನೊಳಗೆ ಇರುವ ಚಿಕ್ಕ ಚಿಕ್ಕ ಹಳ್ಳಗಳು ನದಿಯ ಮಟ್ಟಿಗೆ ತುಂಬಾ ಮಹತ್ವದಾಗಿದೆ. ಮಳೆನೀರನ್ನು ನೆಲದಲ್ಲಿ ಇಂಗಿಸಿಕೊಂಡಿರುವಂತಹ ಶೋಲಾಕಾಡುಗಳ ಈ ಹಳ್ಳಗಳು ಮಳೆಗೆ ಮೂಲಾಧಾರವಾಗಿರುತ್ತದೆ.
ನದಿಯನ್ನು ತಡೆದಾಗ ನದಿನೀರಿನ ಖನಿಜಾಂಶಗಳು, ಲವಣಾಂಶಗಳು ಸಮುದ್ರವನ್ನು ಸೇರದಿದ್ದರೆ ಜಲಚರ ಜೀವಿಗಳಿಗೆ ಬೇಕಾದ ಪೋಷಕಾಂಶಗಳು ಕಡಿಮೆಯಾಗಿ ಅಸಂಖ್ಯಾತ ಮೀನುಗಳ ನಾಶವಾದರೆ ಬೆಸ್ತರ ಬದುಕು ದುಸ ರವಾದೀತು. ಕಾಡೊಳಗೆ ಹಾಯಾಗಿ ಓಡಾಡುತ್ತಿರುವ ವನ್ಯ ಜೀವಿಗಳು ಬದುಕಲು ನೆಲೆಯಿಲ್ಲದೆ ಕಾಡಿನಿಂದ ನಾಡಿಗೆ ದಾಳಿ ಇಡಬಲ್ಲವು. ಪರ್ವತಗಳ ಅಂಚುಗಳಲ್ಲಿ ನೀರಿನ ಕಾಲುವೆಗಳನ್ನು ನಿರ್ಮಿಸಿದಾಗ ಭೂಕುಸಿತ ಸಂಭ ವಿಸಲೂಬಹುದು. ಈ ಭೂಕುಸಿತದಿಂದ ಕಾಲುವೆಯ ನೀರು ರಭಸವಾಗಿ ಹರಿದು ಹತ್ತಿರದ ಹಳ್ಳಿಗಳ ಗದ್ದೆ, ತೋಟ, ಮನೆಗಳಿಗೆ ಹಾನಿಯಾಗಬಹುದು.
ಕರಾವಳಿಯ ಬದುಕಿಗೊಂದು ರೂಪುರೇಷೆ ಕೊಟ್ಟಂತಹ ನೇತ್ರಾವತಿಯ ದಿಕ್ಕನ್ನೇ ಬದಲಿಸಿ ಅಡವಿಯನ್ನು ಕೆಡವಿ ಬಲಿ ಕೊಡುವುದರಿಂದ ಬರವಿಲ್ಲದ ಕರಾವಳಿ ಜಿಲ್ಲೆಗೆ ಬರಗಾಲದ ಆಮಂತ್ರಣ ನೀಡಲಾಗುತ್ತಿದೆ. ಅದರಲ್ಲೂ ಈ ಬಾರಿ ಕರಾವಳಿಯಲ್ಲಿ ಮಳೆಯ ಪ್ರಮಾಣ ಕೂಡ ಕಡಿಮೆ ಇವುಗಳ ನಡುವೆ ನೇತ್ರಾವತಿಯ ಒಡಲು ಬರಿದಾಗುತ್ತಿದೆ. ಒಂದು ಲೆಕ್ಕಚಾರದ ಪ್ರಕಾರ ನೇತ್ರಾವತಿ ಅಧ್ಯಾಯ ಮುಕ್ತಾಯ ಹಂತಕ್ಕೆ ತಲುಪುತ್ತಿದೆಯಾ ಎನ್ನುವ ಗುಮಾನಿ ನೇತ್ರಾವತಿಯನ್ನು ನೋಡುವ ಪ್ರತಿಯೊಬ್ಬನ ಕಣ್ಣಿಗೆ ಅನ್ನಿಸದೇ ಇರಲಾರದು.
....
ಚಿತ್ರ: ಕಿಶೋರ್ ಪೆರಾಜೆ
.............
Sunday, December 9, 2012
Monday, December 3, 2012
ಮಂಗಳಮುಖಿಯರ ಮಂಗಳವಾಗದ ಬದುಕು !
ಮಂಗಳಮುಖಿಯರು ತಮ್ಮ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ಗಾಯದ ಗುರುತು ಹೊರ ಜಗತ್ತಿಗೆ ಗೊತ್ತಾ ಗುವುದಿಲ್ಲ. ಇತರರಿಗೆ ಕಾಣಿಸುವುದು ಅವರು ಧರಿಸುವ ಸೀರೆ, ರವಿಕೆ ಮತ್ತು ತುಟಿಗೆ ಹಚ್ಚಿಕೊಳ್ಳುವ ಲಿಪ್‌ಸ್ಟಿಕ್ ಮಾತ್ರ. ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ.
ಸೀರೆಯುಟ್ಟುಕೊಂಡು ನಮ್ಮ ಸುತ್ತಮುತ್ತ ಓಡಾಡುವ ಅವರನ್ನು ನೋಡಿದ್ದೇವೆ. ಅಂಗಡಿ ಮಳಿಗೆಗಳಲ್ಲಿ ಕಾದು ಬೇಡುತ್ತಾರೆ. ದುಡ್ಡು ಕೊಡದಿದ್ದರೆ ಕೆಲವರು ವಿಲಕ್ಷಣ ವರ್ತನೆಯಿಂದ ಕಾಡುತ್ತಾರೆ. ಏನಪ್ಪಾ ಹುಚ್ಚು ಹಿಡಿದಿದೆಯಾ..? ಎನ್ನುವ ಪ್ರಶ್ನೆ ಎದುರುಗೊಳ್ಳುತ್ತದೆ.
ವ್ಯಕ್ತಿಯೊಬ್ಬ ಅಂಧನಾಗಿದ್ದರೆ ಗೊತ್ತಾಗುತ್ತದೆ. ಕುಂಟನಾಗಿದ್ದರೆ ಕೂಡ ಸುಲಭವಾಗಿ ಗುರುತಿಸಬಹುದು. ಅವರಿಗೆ ಕೈಲಾದ ನೆರವು ನೀಡುತ್ತಾರೆ. ಆದರೆ ಒಬ್ಬ ಮಂಗಳಮುಖಿ ಎದೆಯೊಳಗೆ ಬಚ್ಚಿಟ್ಟುಕೊಂಡಿರುವ ಗಾಯದ ಗುರುತು ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಇತರರಿಗೆ ಕಾಣಿಸುವುದು ಧರಿಸಿರುವ ಸೀರೆ, ರವಿಕೆ ಮತ್ತು ತುಟಿಗೆ ಹಚ್ಚಿಕೊಳ್ಳುವ ಲಿಪ್‌ಸ್ಟಿಕ್ ಮಾತ್ರ . ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ. ಆದರೆ ಅವರ ಮನದಾಳದ ಬೇಗುದಿ ಯಾರಿಗೂ ಅರ್ಥವಾಗುವುದಿಲ್ಲ.
ನಮ್ಮಲ್ಲಿ ಹಾವು, ಬೆಕ್ಕು, ನಾಯಿಗಳು ಎಷ್ಟಿವೆ ಎಂದು ಗಣತಿ ಮಾಡಲಾಗುತ್ತದೆ. ಆದರೆ ಮಂಗಳಮುಖಿಯರಿಗೆ ಇಂತಹ ಲೆಕ್ಕವೇ ಇಲ್ಲ. ಭಾರತದಲ್ಲಿ ೫೦ ಸಾವಿರದಿಂದ ೫ ಲಕ್ಷ ಮಂಗಳಮುಖಿಯರಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ೫ ಸಾವಿರಕ್ಕೂ ಅಧಿಕ ಮಂಗಳಮುಖಿಯರನ್ನು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಈಗ ಇರುವ ಮಂಗಳಮುಖಿಯರ ಸಂಖ್ಯೆ ೫೦೦ಕ್ಕಿಂತ ಜಾಸ್ತಿ.
ಮಂಗಳಮುಖಿಯರಾಗಲು ಕಾರಣ ಏನೂ?
ಮಂಗಳಮುಖಿಗಳು ಹುಟ್ಟಿದಾಗ ಪುರುಷ ಎಂದೇ ಗುರುತಿಸಿಕೊಳ್ಳುತ್ತಾರೆ. ದೈಹಿಕ ಸ್ವರೂಪ ಕೂಡ ಹಾಗಿರುತ್ತದೆ. ಆದರೆ ಅಂದಾಜು ಹನ್ನೆರಡು-ಹದಿಮೂರರ ಹರೆಯದ ನಂತರ ಭಾವನೆಗಳಲ್ಲಿ ಪಲ್ಲಟ ಆರಂಭವಾಗಿ ಬಿಡುತ್ತದೆ. ಶಾಲೆಯಲ್ಲಿ ಬಾಲಕ ಸಹಪಾಠಿಯತ್ತ ಲೈಂಗಿಕ ಆಕರ್ಷಣೆಗೆ ಒಳಗಾಗಬಹುದು. ಶಾಲಾ ವಾರ್ಷಿಕೋತ್ಸವದ ನಾಟಕಗಳಲ್ಲಿ ಸ್ತ್ರೀ ಪಾತ್ರವೇ ಬೇಕು ಎಂದು ರಚ್ಚೆ ಹಿಡಿಯಬಹುದು. ತನ್ನಲ್ಲೇಕೆ ಇಂಥ ಭಾವನೆಗಳು ಬರುತ್ತಿವೆ ? ಅಥವಾ ಇತರ ಬಾಲಕರಲ್ಲಿ ಕೂಡ ಇಂತಹುದೇ ಸ್ವಭಾವ ಇದೆಯಾ ಅಂತ ಆತ ಹುಡುಕಬಹುದು. ಉತ್ತರ ಸಿಗದೆ ತಲ್ಲಣಗೊಳ್ಳಬಹುದು.
ಹದಿನೆಂಟು-ಇಪ್ಪತ್ತರ ಹೊತ್ತಿಗೆ ತಾನು ದೈಹಿಕವಾಗಿ ಪುರುಷನಾಗಿದ್ದರೂ, ಮಾನಸಿಕ ಹಾಗೂ ಭಾವನಾತ್ಮಕವಾಗಿ ಹೆಣ್ಣು ಎಂಬುದು ಖಚಿತವಾಗುತ್ತದೆ. ಸಮಸ್ಯೆಗಳ ಪರಂಪರೆಯ ಮುಂದಿನ ಘಟ್ಟ ಅಮಾನುಷ. ಪೋಷಕರು, ಸೋದರ, ಸೋದರಿಯರಿಂದ ಅಪಹಾಸ್ಯ, ನಿಂದನೆ ಗುರಿಯಾಗಿ ಮನೆಯಲ್ಲಿ ನಿಲ್ಲಲಾಗದೆ ಹೊರಬೀಳುತ್ತಾರೆ. ತಮ್ಮ ಸಮುದಾಯವೇ ವಾಸಿ ಎಂದು ಮಂಗಳಮುಖಿಗಳ ಗುಂಪಿಗೆ ಸೇರುತ್ತಾರೆ. ಅಲ್ಲಿ ಅವರಿಗೆ ಬೇಕಾದ ಸಕಲ ಸ್ವಾತಂತ್ರ್ಯ ಸಿಗುತ್ತದೆ. ಭಾವನೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕರಿರುತ್ತಾರೆ. ಆದರೆ ಸಮಸ್ಯೆಗಳ ಸರಪಳಿ ಬದುಕನ್ನು ಕೊನೆಯತನಕ ಕಟ್ಟಿ ಹಾಕುತ್ತದೆ ಎನ್ನುವುದು ಮಂಗಳಮುಖಿಯರ ಕುರಿತು ಅಧ್ಯಯನ ಮಾಡುತ್ತಿರುವ ಮುಂಬಯಿಯ ಮೇರಿ ವೇಲು ಅವರ ಅಭಿಪ್ರಾಯ.
ಮಂಗಳಮುಖಿಯರು ಅಂಗಡಿ, ಮಳಿಗೆಗಳಿಗೆ ಹೋಗಿ ಬೇಡುತ್ತಾರೆ. ಎಷ್ಟೋ ಮಂದಿ ಹಣ ಕೊಡದಿದ್ದರೆ ಗದರಿಸುತ್ತಾರೆ. ವಿಚಿತ್ರ ವರ್ತನೆಗಳಿಂದ ಪೀಡಿಸುತ್ತಾರೆ ಎಂಬ ಆಪಾದನೆ ಇದೆ. ಈ ಪ್ರಶ್ನೆಗೆ ಮಂಗಳೂರಿನಲ್ಲಿರುವ ಬಳ್ಳಾರಿಯ ಮೂಲದ ಯಶೋಧಾ ಈ ರೀತಿ ಉತ್ತರಿಸುತ್ತಾರೆ.
‘ನನ್ನಲ್ಲೂ ಬಹಳಷ್ಟು ಜನ ಇದೇ ಪ್ರಶ್ನೆ ಕೇಳುತ್ತಾರೆ. ಅಂಗಡಿಗಳಲ್ಲಿ ಹಣ ಕೇಳುವ ಪದ್ಧತಿ ಮುಂಬಯಿನಲ್ಲಿ ಆರಂಭ ವಾಯಿತು. ಈಗ ಮುಂಬಯಿನಿಂದ ಕರ್ನಾಟಕಕ್ಕೆ ಅನೇಕ ಮಂದಿ ವಲಸೆ ಬಂದಿದ್ದಾರೆ. ಇಲ್ಲಿ ಕೂಡ ಅದೇ ಪದ್ಧತಿ ಹರಡಿದೆ. ಹಣಕ್ಕಾಗಿ ಒತ್ತಾಯಪಡಿಸುವುದು ಸರಿಯಲ್ಲ. ಮಂಗಳಮುಖಿ ಪರ ಸಂಘಟನೆಗಳು ಕೂಡ ಭಿಕ್ಷಾಟನೆಯನ್ನು ಒಪ್ಪುವುದಿಲ್ಲ’ ಎನ್ನುವುದು ಅವರ ಮಾತು.
ಕರಾವಳಿಯಲ್ಲಿ ಮಂಗಳಮುಖಿರ ಆಗಮನ:
ಮೂರು ವರ್ಷಗಳ ಹಿಂದೆ ಮಂಗಳೂರು ಪೇಟೆಯಲ್ಲಿ ಹತ್ತಾರು ಮಂಗಳಮುಖಿಯರು ಕಾಣ ಸಿಗುತ್ತಿದ್ದ ಪ್ರಸಂಗ ಇತ್ತು. ಆದರೆ ಈಗೀನ ಪರಿಸ್ಥಿತಿಯೇ ಸಂಪೂರ್ಣ ಭಿನ್ನ. ಮಂಗಳೂರು ನಗರ ಮಾತ್ರವಲ್ಲ ಕರಾವಳಿಯ ತಾಲೂಕು ಕೇಂದ್ರಗಳಲ್ಲಿಯೂ ಇವರ ಸಂಖ್ಯೆ ಏರಿಕೆ ಕಾಣಿಸಿಕೊಂಡಿದೆ.
ಮಂಗಳೂರಿನ ಪಣಂಬೂರು ಬಂದರು ಪ್ರದೇಶವೊಂದರಲ್ಲಿಯೇ ಸರಿಸುಮಾರು ೩೦೦ಕ್ಕಿಂತ ಜಾಸ್ತಿ ಸಂಖ್ಯೆಯ ಮಂಗಳಮುಖಿಯರನ್ನು ವೀಕೆಂಡ್ ದಿನಗಳಲ್ಲಿ ಕಾಣಬಹುದು. ಪಣಂಬೂರು ಬಂದರು ಪ್ರದೇಶಕ್ಕೆ ನಾನಾ ಕಡೆಯಿಂದ ಬರುವ ಲಾರಿಗಳ ಚಾಲಕರು ಇವರನ್ನು ಇಲ್ಲಿಗೆ ಕರೆತರುವ ಕೆಲಸ ಮಾಡುತ್ತಿದ್ದಾರೆ.
ಅದಕ್ಕೂ ಮುಖ್ಯವಾಗಿ ಮುಂಬಯಿಯಿಂದಲೂ ಇಲ್ಲಿಗೆ ಬಂದು ನೆಲೆ ನಿಂತ ಮಂಗಳಮುಖಿಯರು ಇದ್ದಾರೆ. ನಗರದ ಹೊರವಲಯದಲ್ಲಿ ಠಿಕಾಣಿ ಹೂಡುವ ಮಂಗಳಮುಖಿಯರು ತಮ್ಮದೇ ತಂಡ ರಚಿಸಿಕೊಂಡು ಬೇಡುವ ಕೆಲಸದ ಜತೆಯಲ್ಲಿ ಲೈಂಗಿಕ ಕ್ರಿಯೆಯಲ್ಲೂ ತೊಡಗಿಕೊಂಡಿದ್ದಾರೆ. ವೀಕೆಂಡ್ ದಿನಗಳಲ್ಲಿ ಮಾತ್ರ ಹೆಚ್ಚು ಗಳಿಕೆ ಮಾಡುವ ಇವರು ಉಳಿದ ದಿನಗಳಲ್ಲಿ ಪೇಟೆ ಪಟ್ಟಣಗಳಲ್ಲಿ ಜಾಸ್ತಿಯಾಗಿ ಕಾಣಿಸಿಕೊಳ್ಳುವುದಿಲ್ಲ.
ಮಂಗಳಮುಖಿಯರಲ್ಲೂ ನಕಲಿತನ:
ಒರಿಜಿನಾಲಿಟಿ ಎನ್ನುವ ಪದಗಳ ಜತೆಗೆ ಹುಟ್ಟಿಕೊಂಡ ನಕಲಿತನ ಎನ್ನುವ ಪದ ಪ್ರಯೋಗ ಈಗ ಮಂಗಳಮುಖಿಯರಲ್ಲೂ ಕಾಣಿಸಿಕೊಂಡಿದೆ. ಮೈಮುರಿದುಕೊಂಡು ದುಡಿಯಲು ಬಯಸದ ಸೋಮಾರಿ ಯುವಕರು ಮಂಗಳಮುಖಿರಾಗುತ್ತಿದ್ದಾರೆ. ಅದರಲ್ಲೂ ಹಣ ಸುಳಿಗೆ ಮಾಡುವ ಕಾಯಕದಲ್ಲಿ ಭರ್ಜರಿಯಾಗಿ ನಿರತರಾಗಿದ್ದಾರೆ. ಮಹಿಳೆಯರಂತೆ ವೇಷಭೂಷಣ ಮಾಡಿಕೊಂಡು ಅವರ ಹಾವಭಾವಗಳನ್ನೇ ಕಾಫಿ ಮಾಡುವ ಈ ಯುವಕರು ಮಂಗಳಮುಖಿಯರಿಗೆ ಪೈಪೋಟಿ ನೀಡುವಂತೆ ಬೆಳೆದಿರುತ್ತಾರೆ.
ಇದು ಬರೀ ಕರಾವಳಿಯ ಮಾತಲ್ಲ. ಇಡೀ ದೇಶದಲ್ಲಿ ಮಂಗಳಮುಖಿಯರು ಎಲ್ಲಿದ್ದರೋ ಅಲ್ಲಿ ಎಲ್ಲ ಈ ನಕಲಿ ಮಂಗಳಮುಖಿಯ ಕೆಲಸ ಕೂಡ ನಡೆಯುತ್ತದೆ. ಇಂತಹ ನಕಲಿ ಮಂಗಳಮುಖಿಯರನ್ನು ಹಿಡಿಯಲು ಪೊಲೀಸ್ ಇಲಾಖೆ ಕೂಡ ಸೋತು ಬಿಟ್ಟಿದೆ. ಮತ್ತೊಂದು ಕಡೆ ನಕಲಿ ಮಂಗಳಮುಖಿಯರ ಪತ್ತೆಗಾಗಿ ಮಂಗಳಮುಖಿಯರು ತಮ್ಮದೇ ತಂಡ ಕಟ್ಟಿಕೊಂಡು ಹುಡುಕಾಟ ಆರಂಭಿಸಿದ್ದಾರೆ ಎನ್ನುತ್ತಾರೆ ಮಂಗಳೂರಿನ ಮಂಗಳಮುಖಿಯರ ಮುಖ್ಯಸ್ಥೆ ರಾಣಿ ಅವರ ಮಾತು.
ಕುಡ್ಲಕ್ಕೆ ಜಿಂದಾಲ್ ರಾಣಿ:
ಎಲ್ಲರಂತೆ ನಾವು ಕೂಡ ಮನುಷ್ಯರು. ನಿಮ್ಮಲ್ಲಿ ಓಡುವ ರಕ್ತವೇ ನಮ್ಮಲ್ಲೂ ಓಡುತ್ತಿದೆ. ಇದೇ ಗಾಳಿ, ಬೆಳಕಿನ ಜತೆಯಲ್ಲಿಯೇ ಬದುಕು ಕಟ್ಟುತ್ತೇವೆ. ನಮ್ಮನ್ನು ಕೂಡ ನಿಮ್ಮಂತೆ ಕಾಣಿ ಎಂದು ಕಣ್ಣಲ್ಲಿ ನೀರು ತಂದುಕೊಂಡರು ಮಂಗಳಮುಖಿ ರಾಣಿ.
ಇವರು ಮೂಲತಃ ಆಂಧ್ರ ಪ್ರದೇಶದವರು. ಜಿಂದಾಲ್ ರಾಣಿ ಎಂದೇ ಅಡ್ಡಾ ಹೆಸರು ಇದೆ. ಅಂದಹಾಗೆ ಇವರ ಮೂಲ ಹೆಸರು ರಾಘವೇಂದ್ರ. ರಾಘು ಎಂದೇ ಅಕ್ಕರೆಯಿಂದ ಕರೆಯುತ್ತಿದ್ದರು. ಐದನೇ ತರಗತಿ ತನಕ ಓದಿದ್ದಾರೆ. ಶಾಲೆಗೆ ಹೋಗುತ್ತಿದ್ದಂತೆಯೇ ರಾಘು ರಾಣಿಯಾಗಿ ಬದಲಾವಣೆಗೊಳ್ಳಲು ಆರಂಭವಾದರು. ಶಾಲೆಯಲ್ಲಿ ಎಲ್ಲರಿಂದಲೂ ತಿರಸ್ಕಾರ. ಮನೆಯಲ್ಲೂ ಅಸಡ್ಡೆ. ಮನೆ ಬಿಡುವುದು ಅನಿವಾರ್ಯ ಎಂಬಂತಹ ಸ್ಥಿತಿ. ನಂತರ ಮುಂಬಯಿಗೆ ಪಯಣ.
ಅಲ್ಲಿ ಮಂಗಳ ಮುಖಿಯರೊಂದಿಗೆ ಜೀವನ. ಮಂಗಳ ಮುಖಿಯರ ವಿಧಿ ವಿಧಾನಗಳಿಗೆ ಹೊಂದಿಕೊಂಡು ಜೀವನ ನಡೆಸತೊಡಗಿದರು. ಸಮಾಜವನ್ನು ನೋಡುತ್ತಿದ್ದಂತೆಯೇ ತನಗೂ ಮನೆಗೆ ಹೋಗಬೇಕು ಎನ್ನುವ ಹಂಬಲ. ಈಗಿನ ಸ್ಥಿತಿಯಲ್ಲಿ ನೋಡಿದರೆ ಅದು ಅವರಿಗೆ ಅಸಾಧ್ಯದ ಮಾತು. ಮನೆಯವರಿಗೆ ತಾನು ಗಂಡಾಗಿ ಬಂದರೆ ಬೇಕು. ಈ ಮಂಗಳ ಮುಖಿಯಾಗಿರುವುದಕ್ಕೆ ವಿರೋಧ. ಒಟ್ಟಿನಲ್ಲಿ ಈ ಸ್ಥಿತಿ ಯಾರಿಗೂ ಬರಬಾರದು ಎಂಬ ವೇದನೆಯ ಮಾತು.
ಇದು ಬರೀ ರಾಣಿ ಎನ್ನುವ ಮಂಗಳ ಮುಖಿಯ ಕತೆಯಲ್ಲ. ದೇಶದಲ್ಲಿ ಲಕ್ಷ ಗಟ್ಟಳೆ ಮಂಗಳಮುಖಿಯರ ಕತೆ ಕೂಡ ಇಲ್ಲಿಂದಲೇ ಅರಂಭವಾಗಿ ಬಿಡುತ್ತದೆ. ಮನೆಯವರಿಗೂ ಬೇಡ, ಸಮಾಜಕ್ಕೂ ತಾತ್ಸಾರ, ಸರಕಾರಕ್ಕೂ ಮತ ಇಲ್ಲ ಎನ್ನುವ ಕಾರಣಕ್ಕೆ ಅವರಿಂದಲೂ ತಿರಸ್ಕಾರ. ಟೋಟಲಿ ಮಂಗಳವಾಗದ ಮಂಗಳಮುಖಿಯರ ಜೀವನ ದೇವರಿಗೆಯೇ ಪ್ರೀತಿ ಎನ್ನಲು ಯಾವುದೇ ಅಡ್ಡಿಪಡಿಸುವ ಮಾತುಗಳಿಲ್ಲ. ಕೊನೆಯಲ್ಲಿ ಉತ್ತರ ಇಲ್ಲದ ಪ್ರಶ್ನೆಯೊಂದು ಕಾಡುತ್ತದೆ. ಅದೇ ಮಂಗಳಮುಖಿಯರು ಜೀವ ಇರುವ ಪ್ರಾಣಿ- ಪಕ್ಷಿಗಳಿಗಿಂತ ಕೀಳಾಗಿ ಹೋದ್ರಾ....
ತುಂಬಿದ ಕೊಡ ತುಳುಕಿದೆ ಗೋವಾದಲ್ಲಿ ಡಿಜೆ ಪ್ಯಾರೀಸ್ ರಾಕ್ಸ್ !
ತಣ್ಣನೆಯ ಗಾಳಿಗೆ ಮೈಯೊಡ್ಡಿಕೊಂಡು ಪ್ಯಾರಿಸ್ ಹಿಲ್ಟನ್ ಡಿಜೆಯಾಗಿ ಕುಣಿಯುವ ಸಖತ್ ದೃಶ್ಯಗಳನ್ನು ಅವಳ ಅಭಿಮಾನಿಗಳು ಕಣ್ಣು ತುಂಬಿಸಿಕೊಳ್ಳಲಿ ಎಂದು ಹಿಲ್ಟನ್ ಪ್ರಿಯಕರ ರಿವರ್ ವೀಪಿರಿ ಟ್ಟಿಟ್ಟರ್‌ನಲ್ಲಿ ಹಾಕಿ ಮಜಾ ನೋಡಿದ್ದಾನೆ. ಅದರಲ್ಲೂ ಹಿಲ್ಟನ್ ಗೋವಾವನ್ನು ತುಂಬಾ ಪ್ರೀತಿಯಿಂದ ‘ಬ್ಲೇಸ್ಡ್ ಆಂಡ್ ಮ್ಯಾಜಿಕಲ್’ ಸ್ಟೇಟ್ ಎಂದು ಕರೆದು ಭಾರತವನ್ನು ಸಿಕ್ಕಾಪಟ್ಟೆ ಹೊಗಳಿದ್ದಾಳೆ.
ಅಗಾಧ ಪ್ರತಿಭೆಯ ಮತ್ತು ಅದರಷ್ಟೇ ವಿವಾದಗಳನ್ನು ಮೈಮೇಲೆ ಹೊದ್ದುಕೊಂಡಿರುವ ಸೂಪರ್ ಹಾಟ್ ನಟಿ, ಹಾಡುಗಾರ್ತಿ, ಮಾಡೆಲ್, ಲೇಖಕಿ, ಫ್ಯಾಶನ್ ಡಿಸೈನರ್, ಉದ್ಯಮಿ, ಕೋಟ್ಯಾನುಕೋಟಿ ಆಸ್ತಿಯ ಒಡತಿ, ದಾನಿ, ಬಾರ್ಬಿ ಡಾಲ್ ಈ ಎಲ್ಲ ಟ್ಯಾಗ್‌ಲೈನ್ ನಲ್ಲಿರುವ ಪ್ಯಾರಿಸ್ ಹಿಲ್ಟನ್ ಈಗ ಗೋವಾದಲ್ಲಿ ಕಾಣಿಸಿಕೊಂಡಿದ್ದಾರೆ. ಮದಿರೆಯ ನಾಡು ಗೋವಾದಲ್ಲಿ ಪ್ಯಾರಿಸ್ ಹಿಲ್ಟನ್‌ಗೆ ಏನೂ ಕೆಲಸ ಅಂತಾ ತಲೆ ಕೆಡಿಸಿಕೊಂಡಿದ್ದಾರಾ..? ಹಾಗಾದರೆ ಪ್ಯಾರಿಸ್ ಗೋವಾದ ಕ್ಯಾಂಡೋಲಿಮ್ ಬೀಚ್ ನಲ್ಲಿ ನಡೆದ ಇಂಡಿಯನ್ ರೆಸಾರ್ಟ್ -ಶನ್ ವೀಕ್‌ವೊಂದರ ಕಾರ‍್ಯಕ್ರಮದಲ್ಲಿ ಡಿಜೆಯಾಗಿ ಕಾಣಿಸಿಕೊಂಡಿದ್ದಾರೆ.
ತಣ್ಣನೆಯ ಗಾಳಿಗೆ ಮೈಯೊಡ್ಡಿಕೊಂಡು ಪ್ಯಾರಿಸ್ ಹಿಲ್ಟನ್ ಡಿಜೆಯಾಗಿ ಕುಣಿಯುವ ಸಖತ್ ದೃಶ್ಯಗಳನ್ನು ಅವಳ ಅಭಿಮಾನಿಗಳು ಕಣ್ಣು ತುಂಬಿಸಿಕೊಳ್ಳಲಿ ಎಂದು ಹಿಲ್ಟನ್ ಪ್ರಿಯಕರ ರಿವರ್ ವೀಪಿರಿ ಟ್ಟಿಟ್ಟರ್‌ನಲ್ಲಿ ಹಾಕಿ ಮಜಾ ನೋಡಿದ್ದಾನೆ. ಅದರಲ್ಲೂ ಹಿಲ್ಟನ್ ಗೋವಾವನ್ನು ತುಂಬಾ ಪ್ರೀತಿಯಿಂದ ‘ಬ್ಲೇಸ್ಡ್ ಆಂಡ್ ಮ್ಯಾಜಿಕಲ್’ ಸ್ಟೇಟ್ ಎಂದು ಕರೆದು ಭಾರತವನ್ನು ಸಿಕ್ಕಾಪಟ್ಟೆ ಹೊಗಳಿದ್ದಾಳೆ.
‘ನಾನು ಬಹಳ ಸಂತೋಷವಾಗಿದ್ದೇನೆ. ನೀರಿನ ಮೇಲೆ ತೂಗುವ ಮನೆಯಲ್ಲಿ ನಾನು ಹಾಗೂ ರಿವರ್ ವೀಪಿರಿ ಬಹಳ ಖುಷಿಪಟ್ಟೆವು. ನಿಜಕ್ಕೂ ಬದುಕಿನ ಶಾಂತಿಯ ದಿನಗಳು ನಾನು ಇಲ್ಲಿ ಕಳೆದಿದ್ದೇನೆ. ಒಂದು ರೀತಿಯ ಮ್ಯಾಜಿಕ್ ಹಾಗೂ ಇದು ನನಗೆ ದೇವರು ಕೊಟ್ಟ ಆಶೀರ್ವಾದ ಎಂದು ಕೊಂಡಿದ್ದೇನೆ ’ ಎಂದು ಪ್ರಿಯಕರನ ಜತೆಯಲ್ಲಿ ಹಿಲ್ಟನ್ ಟ್ವಿಟ್ಟ್ ಮಾಡಿದ್ದಾಳೆ.
ರೆಸಾರ್ಟ್ -ಶನ್ ವೀಕ್
ಪ್ರತಿ ವರ್ಷನೂ ಗೋವಾದ ಬೀಚ್‌ನಲ್ಲಿ ನಡೆಯುವ ರೆಸಾರ್ಟ್ -ಶನ್‌ವೀಕ್‌ನಲ್ಲಿ ಹಾಲಿವುಡ್-ಬಾಲಿವುಡ್ ನಟ, ನಟಿಯರು ಇಲ್ಲಿ ಅತಿಥಿಯಾಗಿ ಬಂದು ಡಿಜೆಯಾಗಿ ಬದಲಾವಣೆಗೊಳ್ಳುತ್ತಾರೆ. ಈ ಬಾರಿ ಪ್ಯಾರಿಸ್ ಹಿಲ್ಟನ್ ಸರದಿ ಬಂದಿತ್ತು. ನೀಲಿ ಬಣ್ಣ ದ ಬಿಕಿನಿ ತೊಟ್ಟು ಕಪ್ಪುಕನ್ನಡ ಹಾಕಿಕೊಂಡು ಪ್ಯಾರಿಸ್ ಕೈಬೀಸುತ್ತಿದ್ದರೆ ನೆರೆದವರು ನಾಚಿನೀರಾಗಿದ್ದರು.
ಈ ಬಾರಿಯ ರೆಸಾರ್ಟ್ -ಶನ್ ವೀಕ್‌ನಲ್ಲಿ ಖ್ಯಾತ ಡಿಸೈನರ್‌ಗಳಾದ ಡ್ಯೂ ಶ್ಯಾನೇ ಹಾಗೂ ಪಲ್ಗುಣಿ ಪಿಕಾಕ್ ಅವರಿಂದ ಡಿಸೈನ್ ಮಾಡಲಾದ ಡಿಸೈನ್ ಬಟ್ಟೆಗಳನ್ನು ರೂಪದರ್ಶಿಗಳು ತೊಟ್ಟು ರ‍್ಯಾಂಪ್‌ನಲ್ಲಿ ನಡೆದು ಪ್ರದರ್ಶನ ನೀಡಿದರು. ಡಿಜೆಯಾಗಿ ಹಿಲ್ಟನ್ ಕೊರಿಯಾ ಮೂಲದ ಖ್ಯಾತ ಹಾಡು ಗಂಗ್ನಮ್‌ಗೆ ಡಿಜೆ ಮಿಕ್ಸಿಂಗ್‌ನಲ್ಲಿ ಅರೆದು ಕೊಟ್ಟ ಹಾಡು ಅಭಿಮಾನಿಗಳನ್ನು ಮೋಡಿ ಮಾಡಿತ್ತು. ಮುಂಬಯಿ, ದಿಲ್ಲಿ, ಹೈದರಾಬಾದ್ , ಚೆನ್ನೈ ಹಾಗೂ ಐರ್‌ಲ್ಯಾಂಡ್, ನ್ಯೂಯಾರ್ಕ್, ಲಂಡನ್‌ನಿಂದ ಬಂದ ಪ್ರೇಕ್ಷಕರು ರೆಸಾರ್ಟ್ -ಶನ್ ವೀಕ್‌ನಲ್ಲಿ ಭಾಗವಹಿಸಿದ್ದರು.
ಹಿಲ್ಟನ್ ಭಾರತಕ್ಕೆ ಸೆಕೆಂಡ್ ಶಿಪ್ಟ್:
ಅಂದಹಾಗೆ ಬಹಳಷ್ಟು ಮಂದಿಗೆ ಪ್ಯಾರಿಸ್ ಹಿಲ್ಟನ್ ಭಾರತಕ್ಕೆ ಇದು ಎರಡನೇಯ ಭೇಟಿ ಎನ್ನುವ ವಿಚಾರ ಗೊತ್ತಿರಲು ಸಾಧ್ಯವಿಲ್ಲ. ಕಳೆದ ವರ್ಷ ಹಿಲ್ಟನ್ ಮುಂಬಯಿಗೆ ಬಂದಿದ್ದರು. ತಮ್ಮದೇ ಬ್ರ್ಯಾಂಡ್‌ನ ಚಪ್ಪಲಿ, ಹ್ಯಾಂಡ್ ಬ್ಯಾಗ್, ಟಿ-ಶರ್ಟ್, ಸ್ಯಾನಿಟಿ ಬಬಲ್ ಟಾಪ್ ಗಳನ್ನು ಮಾರಾಟ ಮಾಡಲು ಪ್ಯಾರಿಸ್ ಭಾರತಕ್ಕೆ ಬಂದಿದ್ದರು. ಈಗಾಗಲೇ ಈಕೆಯ ಉತ್ಪನ್ನಗಳು ೩೫ ದೇಶಗಳಲ್ಲಿ ಭರ್ಜರಿ ಮಾರಾಟ ಕಾಣುತ್ತಿವೆ. ಈಗ ಭಾರತವೂ ಈ ಪಟ್ಟಿಗೆ ಸೇರಿದೆ. ಭಾರತದ ಬ್ರ್ಯಾಂಡ್ ಕಾನ್ಸೆಪ್ಟ್ಸ್ ಎಂಬ ಕಂಪನಿ ಜತೆಗೆ ಕೈಜೋಡಿಸಿ ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲು ಪ್ಯಾರಿಸ್ ಒಪ್ಪಂದ ಮಾಡಿಕೊಂಡಿದ್ದರು.
ತುಂಬಿದ ಕೊಡ ತುಳುಕಿತ್ತು:
ತಮ್ಮದೇ ಹೆಸರಿನ ರಿಯಾಲಿಟಿ ಶೋಗಳಿಂದ ಮತ್ತು ಸಣ್ಣಪುಟ್ಟ ಪಾತ್ರಗಳಿಂದ ದೊಡ್ಡ ಹೆಸರು ಗಿಟ್ಟಿಸಿಕೊಂಡಿರುವ ಹಿಲ್ಟನ್ ಮರಿವಾನಾ ಮಾದಕ ದ್ರವ್ಯದೊಂದಿಗೆ ಫ್ರಾನ್ಸ್ ನಲ್ಲಿ ಸಿಕ್ಕಿಬಿದ್ದದ್ದು ತೀರಾ ಹಳೆಯ ಸುದ್ದಿ . ನಂತರ ಯೂರೋಪ್ ಪ್ರವಾಸದಲ್ಲಿದ್ದಾಗ ಈಜಾಟದಲ್ಲಿ ಮೈಮರೆತ ಆಕೆ ಪರಿವೆ ಇಲ್ಲದಂತೆ ಅರಿವೆ ಕಳಚಿಕೊಂಡಿದ್ದರು. ಆ ರೋಮಾಂಚಕ ದೃಶ್ಯಗಳು ಕ್ಯಾಮೆರಾದಲ್ಲಿ ಬಂಧಿಯಾಗಿತ್ತು.
ಪ್ಯಾರಿಸ್ ಹಿಲ್ಟನ್ ಕುಂಭ ದರ್ಶನದ ಚಿತ್ರಗಳನ್ನು ಯಥಾವತ್ತಾಗಿ ಆಂಗ್ಲ ಪತ್ರಿಕೆಯೊಂದು ಪ್ರಕಟಿಸಿತ್ತು. ಸನ್ ಗ್ಲಾಸ್ ತೊಟ್ಟು ಬಿಕಿನಿಯೊಂದಿಗೆ ಹಾಯಿ ದೋಣಿಯಲ್ಲಿ ವಿಹರಿಸುತ್ತಾ ಕೆಲವು ಫೋಟೋಗಳು, ಬಳಿಕ ಟಾಪ್ ಲೆಸ್ ನಲ್ಲಿ ತಂಗಾಳಿಗೆ ಎದೆಯೊಡ್ಡಿದ ಕೆಲವು ಫೋಟೋಗಳನ್ನು ಸ್ವತಃ ಆಕೆಯ ತಂಗಿ ನಿಕಿ ಹಿಲ್ಟನ್ ಸೆರೆಹಿಡಿದಿದ್ದರು.
ಎಲ್ಲವೂ ಕೊಟ್ಟರೆ ಮತ್ತೆ ಬರೋದಿಲ್ಲ:
ನಾನು ಕೆಲವೇ ಕೆಲವು ವ್ಯಕ್ತಿಗಳ ಜತೆ ಮಾತ್ರ ಹಾಸಿಗೆ ಹಂಚಿಕೊಂಡಿದ್ದೇನೆ. ಜನ ಏನು ಬೇಕಾದರೂ ಮಾತಾಡಿಕೊಳ್ಳಬಹುದು. ಆದರೆ ನಾನು ಹೆಚ್ಚಿನ ಸಂದರ್ಭಗಳಲ್ಲಿ ಕಿಸ್ ಮಾತ್ರ ಕೊಡುತ್ತಿದ್ದೆ. ನಮಗೆ ಬೇಕಾದುದನ್ನು ಪಡೆದುಕೊಳ್ಳಲು ಸಿದ್ಧರಾಗಿರಬೇಕಾಗುತ್ತದೆ ಎಂಬುದು ನನ್ನ ಅನಿಸಿಕೆ ಎಂದು ನಟಿ ಪ್ಯಾರಿಸ್ ಹಿಲ್ಟನ್ ಸೆಕ್ಸ್ ಜೀವನದ ಬಗ್ಗೆ ಹೇಳಿಕೊಂಡಿದ್ದರು.
ನೀವು ಒಮ್ಮೆಲೇ ಎಲ್ಲವನ್ನೂ ಗೆಳೆಯನಿಗೆ ಕೊಟ್ಟು ಬಿಟ್ಟರೆ ನಿಮ್ಮನ್ನು ಗೌರವಿಸುವುದೇ ಇಲ್ಲ. ಹಾಗಾಗಿ ನಿಧಾನಗತಿಯಿಂದ ಮುಂದುವರಿಯಬೇಕು. ನಾನು ಯಾವ ಪುರುಷನನ್ನೂ ಅವಲಂಭಿಸಿಲ್ಲ. ನಾನೊಬ್ಬ ಶಕ್ತಿಯುತ ಮಹಿಳೆಯಾಗಿದ್ದು ಬೇಕಾದದ್ದನ್ನು ಪಡೆದುಕೊಳ್ಳಲು ಅರ್ಹಳಿದ್ದೇನೆ ಎನ್ನುವುದು ಆಕೆಯ ಅಭಿಮತ. ಯಾರಿಗೂ ಹರಿದು ಹೋದ ಬ್ಯಾಗ್‌ಗಳು ಬೇಕಾಗಿರುವುದಿಲ್ಲ. ಎಲ್ಲರೂ ಹೊಸತು ಮತ್ತು ಯಾರಿಗೂ ಸಿಕ್ಕಿರದ ಬ್ಯಾಗ್‌ಗಳ ಹುಡುಕಾಟದಲ್ಲಿರುತ್ತಾರೆ. ಹಾಗಾಗಿ ಅದು ಅಮೂಲ್ಯವೆನಿಸುತ್ತದೆ ಎನ್ನುವ ಮಾತುಗಳ ಮೂಕ ಹಿಲ್ಟನ್ ದಂಗು ಮೂಡಿಸಿದ್ದಳು.
ನಾಯಿಮರಿಗಳೆಂದರೆ ಬಲು ಇಷ್ಟ:
ಹಿಲ್ಟನ್ ಸಣ್ಣ ನಾಯಿ ಮರಿಗಳನ್ನು ಬಹಳ ಪ್ರೀತಿಸುತ್ತಿದ್ದರು. ಪೊದೆಗೂದಲಿನ ಸಣ್ಣ ನಾಯಿ ಮತ್ತು ನುಣುಪು ಕೂದಲಿನ ಜಾತಿಯ ಹೆಣ್ಣು ನಾಯಿಯನ್ನು ಸಾಕಿದ್ದರು. ಇದಕ್ಕೆ ‘ಟಿಂಕರ್ ಬೆಲ್’ ಎಂದು ಹೆಸರಿಟ್ಟಿದ್ದರು. ಪ್ಯಾರೀಸ್ ಹಿಲ್ಟನ್ ಸತತವಾಗಿ ‘ಟಿಂಕರ್‌ಬೇಲ್’ ತಮ್ಮೊಂದಿಗೆ ಎಲ್ಲ ಸಾಮಾಜಿಕ ಸಭೆಗಳಿಗೆ ಮತ್ತು ಸಮಾರಂಭಗಳಿಗೆ ಹಾಗೂ ಸಿಂಪಲ್ ಲೈಫ್ ಎನ್ನುವ ಜನಪ್ರಿಯ ಟಿ.ವಿ ರಿಯಾಲಿಟಿ ಶೋನಲ್ಲಿ ಕರೆತರುತ್ತಿದ್ದರು.
೨೦೦೪ರಲ್ಲಿ ‘ಟಿಂಕರ್‌ಬೆಲ್ ನಾಯಿ’ಯೊಂದಿಗೆ ಘಟನಾವಳಿಗಳ ಕುರಿತು ‘ದಿ ಟಿಂಕರ್‌ಬೆಲ್ ಹಿಲ್ಟನ್ ಡೈರೀಸ್’ ಎಂಬ ಪುಸ್ತಕವನ್ನು ಬರೆಯಲಾಗಿತ್ತು. ಹಿಲ್ಟನ್‌ರವರ ಮನೆಯಲ್ಲಿ ಕಳ್ಳತನವಾದ ನಂತರ ‘ಟಿಂಕರ್‌ಬೆಲ್’ ನಾಪತ್ತೆ ಆಗಿತ್ತು. ಅದನ್ನು ಸುರಕ್ಷಿತವಾಗಿ ಹುಡುಕಿ ತಂದುಕೊಟ್ಟವರಿಗೆ ೫ ಸಾವಿರ ಡಾಲರ್ ನಷ್ಟು ಹಣವನ್ನು ಬಹುಮಾನವಾಗಿ ನೀಡಲಾಗುವುದೆಂದು ಹೇಳಿದ್ದರು. ಆರು ದಿನಗಳ ನಂತರ ಅವರ ಮುದ್ದಿನ ‘ಟಿಂಕರ್‌ಬೆಲ್’ ನಾಯಿ ಅವರಿಗೆ ಸಿಕ್ಕಿತ್ತು. ಮತ್ತೆ ಹಿಲ್ಟನ್‌ರೊಂದಿಗೆ ನಾನಾ ಸಮಾರಂಭಗಳಲ್ಲಿ ಕಾಣಿಸಿಕೊಂಡಿತ್ತು.
ಮಾನವರ ಉತ್ತಮ ಸ್ನೇಹಿತನಾದ ನಾಯಿ ಮೇಲಿರುವ ಪ್ರೀತಿಯಿಂದ ಹಿಲ್ಟನ್‌ರವರು ನಾಯಿಗಳಿಗಾಗಿ ಲಿಟಿಲ್ ಲಿಲ್ಲಿ ಎನ್ನುವ ನಾಯಿ ವಸ್ತ್ರಗಳನ್ನು ಸಜ್ಜುಗೊಳಿಸಿದರು. ಇಂತಹ ಕೆಲಸಗಳಿಂದ ಪ್ರಾಣಿಗಳನ್ನು ಅಪಾಯದಿಂದ ಪಾರುಮಾಡಬಹುದು ಎಂಬ ಆಶಯ ಅವರದು. ಹಿಲ್ಟನ್ ಸುಪರ್ ಬೌಲ್ ಉತ್ಸವಗಳ ಸಂದರ್ಭದಲ್ಲಿ ನೀಡಿದ ಸಂದರ್ಶನದಲ್ಲಿ ನನ್ನ ಬಳಿ ಹದಿನೇಳು ನಾಯಿಗಳಿವೆ ಮತ್ತು ನಾನು ಅವುಗಳಿಗೆ ಉಡುಗೆ ತೊಡಿಸಲು ಇಷ್ಟಪಡುತ್ತೆ ನೆ ಎಂದಿದ್ದರು.
.....
Subscribe to:
Posts (Atom)