ಎಳೆವೆಯಲ್ಲೇ ಮಾದಕ ಲೋಕದೊಳಗೆ ಹೊಕ್ಕು, ಅಲ್ಲೇ ಸ್ವಚ್ಛಂದತೆಯನ್ನು ಬಯಸುವ ಮಕ್ಕಳಿಗೆ ಸರಿ ದಾರಿ ತೋರುವ, ಅರಿವು ಮೂಡಿಸುವ ಕೆಲಸ ಕಾರ್ಯ ಜರೂರಾಗಬೇಕಲ್ಲವೇ?. ಎಥನಾಲ್, ಕೋಡಿನ್, ಬೆನ್‌ಡ್ರಿಲ್ ಹೀಗೆ ನಾನಾ ಬ್ರಾಂಡ್‌ಗಳ ಹೆಸರು ೧೦ ವರ್ಷದ ಕೋಲ್ಕೊತಾ ಮೂಲದ ಬಾಬುಲ್‌ನಿಗೆ ಗೊತ್ತು. ಹಾಗೆಯೇ ಅವನ ಜತೆಯಲ್ಲಿ ಗುಜರಿ ಹೆಕ್ಕಿ ದಿನನಿತ್ಯ ಇಂತಹ ಬ್ರಾಂಡ್ ಐಟಂಗಳ ಹಿಂದೆ ಬೀಳುವ ಪಿಂಕಿ, ಟಾಕಿ, ಮೋನಿ, ಬಲ್ಲು ಎಲ್ಲರಿಗೂ ಗೊತ್ತು. ಎಲ್ಲರೂ ೧೦ ರಿಂದ ೧೫ರ ಆಸುಪಾಸಿನ ಎಳೆಯರು. ಗುಜರಿ ಹೆಕ್ಕಿ ಬಂದ ಆದಾಯದಲ್ಲಿ ಹೆತ್ತವರಿಗೆ ಸ್ವಲ್ಪ ಕೊಟ್ಟು ಉಳಿದ ಹಣವನ್ನು ತಿಂಡಿ-ತಿನಿಸುಗಳಿಗೆ ಸುರಿಯುತ್ತಾರೆ ಎನ್ನುವ ಭ್ರಮೆ ಇಟ್ಟುಕೊಂಡರೆ ಅದು ಸಂಪೂರ್ಣ ತಪ್ಪು. ಎಲ್ಲರೂ ತಂದು ಹಾಕುವುದು ಇದೇ ಐಟಂಗಳ ಮೇಲಂತೆ !
ಎಳೆಯ ವಯಸ್ಸಿನಲ್ಲಿ ಇಂತಹ ಬ್ರಾಂಡ್ ನೇಮ್‌ಗಳು ಯಾಕೆ ಬೇಕಾಗುತ್ತದೆ..? ಎನ್ನುವ ಪ್ರಶ್ನೆ ಎದುರಾದರೇ ಇದಕ್ಕೆ ಉತ್ತರ ಇಲ್ಲಿದೆ. ಪುಟ್ಟ ಪುಟ್ಟ ತೇವ ಕಣ್ಣುಗಳಲ್ಲಿ ಭರ್ತಿಯಾಗಿ ಕನಸು ಕಾಣುವ ಎಳೆಯ ಗೆಳೆಯರು ಈ ಐಟಂಗಳಲ್ಲಿ ಒಂದನ್ನಾದರೂ ತೆಗೆಯದೇ ಹೋದರೆ ರಾತ್ರಿ ನಿದ್ದೆ ಮಾಡೋದಿಲ್ಲ. ರಾತ್ರಿಯೆಲ್ಲ ಚಾಪೆ ತುಂಬಾ ಒದ್ದಾಡುತ್ತಾರೆ. ಅಂತೂ ಇಂತೂ ನಿದ್ರೆ ಬಂದರೂ ಕನವರಿಕೆಯಲ್ಲೂ ಚಡಪಡಿಸುತ್ತಾರೆ ಎನ್ನುವುದು ಬಾಬುಲ್, ಪಿಂಕಿಯ ತಂದೆ ಮೋಹನ್ ದಾಸ್‌ರ ಮಾತು. ವೃತ್ತಿಯಲ್ಲಿ ಡೋಲು ವಾದ್ಯ ತಯಾರಿಸಿಕೊಂಡು ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣ ಹತ್ತಿರದ ಬೀದಿಯಲ್ಲಿ ಕಾಣಸಿಗುತ್ತಾರೆ. ಹೆಚ್ಚು ಹೊತ್ತು ಬೀದಿಯಲ್ಲಿ ಕಂಡರೂ ಹಂಪನಕಟ್ಟೆಯ ಹತ್ತಿರ ಇರುವ ಬಾರ್‌ಗಳಲ್ಲಿ ಇವರಿಗೆ ಅಕೌಂಟ್ ಇದೆ.
ಎಳೆಯರ ಕಾರುಬಾರು:ಬಾಬುಲ್, ಪಿಂಕಿ, ಟಾಕಿ, ಮೋನಿ, ಬಲ್ಲು ಎಲ್ಲರೂ ಗೆಳೆಯರು. ಬೆಳಗ್ಗೆ ೮ ಗಂಟೆಗೆ ಗುಜರಿ ಹೆಕ್ಕಲು ಹೊರಡುವ ಮೂಲಕ ಇವರ ದಿನಚರಿ ಆರಂಭವಾಗುತ್ತದೆ. ಮನಪಾದ ಕಸದ ತೊಟ್ಟಿಯಿಂದ ಹಿಡಿದು ಬೀದಿ ಬದಿಯಲ್ಲಿ ಬಿದ್ದುಕೊಂಡಿರುವ ಪ್ಲಾಸ್ಟಿಕ್ ಲಕೋಟೆ, ಕಬ್ಬಿಣ ವಸ್ತುಗಳನ್ನು ಹೆಕ್ಕಿಕೊಂಡು ಸಂಜೆ ನಾಲ್ಕರ ಹೊತ್ತಿಗೆ ಬಂದರಿನಲ್ಲಿರುವ ಗುಜರಿ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.
ವಾರದಲ್ಲಿ ಮೂರು ದಿನ ಇವರು ಗುಜರಿ ಹೆಕ್ಕಲು ಹೋದರೆ ಉಳಿದ ನಾಲ್ಕು ದಿನ ಇವರು ಡೋಲು, ಕೊಳಲು, ಬಲೂನ್‌ಗಳನ್ನು ಮಾರಾಟ ಮಾಡುವ ದಂಧೆಗೆ ಇಳಿಯುತ್ತಾರೆ. ಸಂಜೆ ಹೊತ್ತಿಗೆ ತಮ್ಮ ಹೆತ್ತವರಿಗೆ ಸ್ವಲ್ಪ ಹಣ ಕೊಟ್ಟರೆ ಸಾಕು. ಉಳಿದ ಹಣವನ್ನು ಈ ಮಾರಕ ಮಾದಕ ವ್ಯಸನಗಳಿಗೆ ತಂದು ಸುರಿಯುತ್ತಾರೆ. ಮಂಗಳೂರಿನ ನೆಹರೂ ಮೈದಾನದ ಅಕ್ಕಪಕ್ಕದಲ್ಲಿರುವ ಮರದಡಿಯಲ್ಲಿ, ಇನ್ನೂ ಕೆಲವು ಸಮಯ ಕಾರ್ಪೊರೇಶನ್ ಪಾರ್ಕ್‌ನ ಹಾಸು ಬೆಂಚು, ಪಿವಿಎಸ್ ಹತ್ತಿರದ ಪಾಳುಬಿದ್ದ ಕಟ್ಟಡದಲ್ಲಿ ಇವರ ಮಾದಕ ವ್ಯಸ್ಯನ ಪ್ರತಿನಿತ್ಯ ನಡೆಯುತ್ತಿರುತ್ತದೆ.
ಇಂತಹ ಮಕ್ಕಳು ಅಲೆಮಾರಿ ಸಮುದಾಯಕ್ಕೆ ಸೇರಿರುವ ಕಾರಣ ಒಂದೇ ಕಡೆ ನೆಲೆ ನಿಲ್ಲುವ ಪ್ರಶ್ನೆಯೇ ಇರುವುದಿಲ್ಲ. ಅವರನ್ನು ಹುಡುಕಾಡಿಕೊಂಡು ಸರಿ ದಾರಿಗೆ ತರುವ ಕೆಲಸವನ್ನು ಸ್ವಲ್ಪ ಮಟ್ಟಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಬಹುದು. ಆದರೆ ಅವರಿಗೆ ಈ ಮಕ್ಕಳ ಕುರಿತು ಸ್ವಷ್ಟವಾದ ಮಾಹಿತಿ ಇರುವುದಿಲ್ಲ ಎನ್ನುತ್ತಾರೆ ಮಂಗಳೂರಿನ ಸಾಮಾಜಿಕ ಕಾರ‍್ಯಕರ್ತ ನರೇಶ್.
ಹೆತ್ತವರಿಗೂ ಮಕ್ಕಳ ಚಟುವಟಿಕೆ ಮೇಲೆ ತೀವ್ರ ನಿಗಾ ಇಡಲು ಸಮಯವಿಲ್ಲ. ಜತೆಗೆ ಬೇಕಾಗೂ ಇಲ್ಲ. ಇಂತಹ ವ್ಯವಸ್ಥೆಯಲ್ಲಿ ಮಕ್ಕಳು ತಮಗೆ ಅರಿವಿಲ್ಲದ ಚಟಗಳಿಗೆ ಬಿದ್ದು ತಮ್ಮ ಭವಿಷ್ಯವನ್ನು ಕತ್ತಲೆಗೆ ದೂಡುವ ಸಾಧ್ಯತೆಗಳೇ ಹೆಚ್ಚು. ಮಕ್ಕಳು ಈ ವಿಚಾರಗಳನ್ನು ನೇರವಾಗಿ ಯಾರಲ್ಲೂ ಚರ್ಚಿಸಲು ಹೋಗುವುದಿಲ್ಲ. ತಮ್ಮ ಪಾಲಿಗೆ ತಾವೇ ಇಂತಹ ತಪ್ಪು ದಾರಿಯನ್ನು ಹಾದುಕೊಂಡು ಹೋಗುವಾಗ ಎಚ್ಚರಿಸುವ ಹೊಣೆಗಾರಿಕೆ ಹೆತ್ತವರಿಗೆ ಇದ್ದೇ ಇದೆ ಎನ್ನುತ್ತಾರೆ ಮಂಗಳೂರಿನ ಮಕ್ಕಳ ವೈದ್ಯ ಡಾ. ಸತೀಶ್ ಕುಮಾರ್.
ಮಾದಕ ಮೋಹಕ: ಎಥನಾಲ್ ಸ್ಪಿರಿಟ್, ಕೋಡಿನ್, ಬೆನ್‌ಡ್ರೀಲ್, ಪ್ರಿಂಟ್ ಸಲ್ಯೂಷನ್, ನೈಟ್ರೋಪೆಟ್, ಒಪಿಯೋಡೋಸ್, ಡೇಝೀಪಾಮ್, ಅಲ್‌ಪ್ರೋಜೋಲಮ್ ಎಲ್ಲವೂ ವೈದ್ಯರ ಶಿಪಾರಸು ಇಲ್ಲದೆ ಔಷಧ ಅಂಗಡಿಯಲ್ಲಿ ಲಭ್ಯವಾಗುವ ಔಷಧಗಳು. ೨ ರೂಪಾಯಿಯಿಂದ ಹಿಡಿದು ೪೦ ರೂ.ವರೆಗೆ ಮಾರುಕಟ್ಟೆಯಲ್ಲಿ ಸುಲಭದಲ್ಲಿ ಸಿಗುತ್ತದೆ. ಮಾದಕತೆಯನ್ನು ಜಾಗೃತ ಮಾಡಲು ಇವು ಬಲು ಪರಿಣಾಮಕಾರಿ ಔಷಧಗಳು.
ಎಥನಾಲ್ ಸ್ಪಿರಿಟ್ ಉಗುರು ಸ್ವಚ್ಪ ಮಾಡಲು ಬಳಸುವ ವಸ್ತು. ಔಷಧದ ಮಾರುಕಟ್ಟೆಯಲ್ಲಿ ೧೦೦ ಎಂಎಲ್‌ನಿಂದ ಹಿಡಿದು ೪೦೦ ಎಂಎಲ್‌ವರೆಗೆ ಬಾಟಲ್‌ನಲ್ಲಿ ಸಿಗುತ್ತದೆ. ಇದನ್ನು ಹೆಚ್ಚಾಗಿ ಆಘ್ರಾಣಿಸುವ ಮೂಲಕ ಮಾದಕತೆಯನ್ನು ಮಕ್ಕಳು ಬೆಳೆಸುತ್ತಾರೆ. ಕೆಲವೊಂದು ಸಲ ಕಿಕ್ ಕಡಿಮೆಯಾಗುತ್ತದೆ ಎಂದಾದರೆ ಅದನ್ನು ಕುಡಿಯುವ ದುಸ್ಸಾಹಸಕ್ಕೂ ಕೈ ಹಾಕುತ್ತಾರೆ.
ಕೋಡಿನ್, ಬೆನ್‌ಡ್ರೀಲ್ ಎಲ್ಲವೂ ಕಾಫ್ ಸಿರಪ್‌ಗಳ ಸಾಲಿನಲ್ಲಿ ಸೇರುವ ಔಷಧದ ಹೆಸರುಗಳು. ಇದರಲ್ಲೂ ಮಾದಕತೆ ಅಡಕವಾಗಿರುತ್ತದೆ. ೫೦-೧೦೦ ಎಂಎಲ್ ಮಾದರಿಯಲ್ಲಿ ದೊರೆಯುವ ಈ ಔಷಧ ೩೦ ರೂ.ನಿಂದ ೫೦ ರೂ. ರೇಜ್‌ನಲ್ಲಿ ಮೆಡಿಕಲ್‌ನಲ್ಲಿ ಲಭ್ಯವಾಗುತ್ತದೆ. ಈ ಔಷಧಗಳನ್ನು ಮಿತಿಮೀರಿ ಸೇವಿಸಿದರೆ ಮಕ್ಕಳಲ್ಲಿ ನರಕ್ಕೆ ಸಂಬಂಸಿದ ಕಾಯಿಲೆಗಳು, ನಿದ್ರಾಹೀನತೆ, ಕರುಳು ಸಂಬಂತ ಕಾಯಿಲೆಗಳು, ಬೆಳವಣಿಗೆ ಕುಂಠಿತವಾಗುವ ಸಾಧ್ಯತೆಗಳು ದಟ್ಟವಾಗಿರುತ್ತದೆ.
ಪ್ರಿಂಟ್ ಸಲ್ಯೂಷನ್, ನೈಟ್ರೋಪೆಟ್, ಒಪಿಯೋಡೋಸ್, ಡೇಝೀಪಾಮ್, ಅಲ್‌ಪ್ರೋಜೋಲಮ್ ಔಷಧಗಳನ್ನು ನೋವು ನಿವಾರಕ, ಒತ್ತಡ ನಿವಾರಣೆ, ಫಿಟ್ಸ್ ಸಂಬಂದಿತ ಕಾಯಿಲೆಗಳಿಗೆ ವೈದ್ಯರು ನೀಡುವ ಔಷಧಗಳು. ಆದರೆ ಇದನ್ನು ಕಾಯಿಲೆ ಇಲ್ಲದ ಮಕ್ಕಳು ಸೇವಿಸಲು ಆರಂಭ ಮಾಡಿದರೆ ಅವರ ದೇಹದ ಕಾರ‍್ಯಾಚರಣೆಯಲ್ಲಿ ತೊಡಕು ಕಾಣಿಸಿಕೊಳ್ಳುತ್ತದೆ. ಕೆಲವೊಂದು ಸಲ ಬೇಗನೆ ಪ್ರಾಯಪ್ರಬುದ್ಧತೆಯಾಗು ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವೈದ್ಯ ನಿರಂಜನ್.
ವಲಸೆ ಸಮುದಾಯದ ಈ ಮಕ್ಕಳಂತೆ ಎಷ್ಟೋ ಮಂದಿ ಮಕ್ಕಳು ಯಾರಿಗೂ ಗೊತ್ತಿಲ್ಲದೆ ಇಂತಹ ವ್ಯಸನಗಳಿಗೆ ಗುರಿಯಾಗಿರುವ ಸಾಧ್ಯತೆಗಳಂತೂ ನಗರದಲ್ಲಿ ಇದ್ದೇ ಇದೆ. ಸಮಾಜದ ಒಳಿತು-ಕೆಡುಕಿನ ಕಲ್ಪನೆಯೂ ಇಲ್ಲದೆ ಬೆಳೆವ ಈ ಎಳೆಯರಿಗೆ ತಮ್ಮ ತಪ್ಪು ದಾರಿಯನ್ನು ಸರಿಪಡಿಸಿಕೊಳ್ಳುವ ಅವಕಾಶವೊಂದನ್ನು ಕಲ್ಪಿಸಲು ನೆರವಾಗುವುದು ಎಲ್ಲರ ಕರ್ತವ್ಯ. ಇಂತಹ ಮಕ್ಕಳ ಹೆತ್ತವರು, ಮಕ್ಕಳ ಕಲ್ಯಾಣ ಇಲಾಖೆ, ಮಕ್ಕಳ ಸಹಾಯವಾಣಿ ಜಾಗೃತವಾಗುವ ಅಗತ್ಯವಂತೂ ಇದೆ.