Friday, April 25, 2014

ಒಂದು ಹಾಡು ಚಂದ್ರಲೇಖಾರ ಬದುಕು ಬದಲಾಯಿಸಿತು

*ಸ್ಟೀವನ್ ರೇಗೊ, ದಾರಂದಕುಕ್ಕು ಚಂದ್ರಲೇಖಾ ಎನ್ನುವ ಅಮ್ಮನ ಪರಿಚಯ ಕೇರಳದಲ್ಲಿ ಮಲಯಾಳಂ ಮಾತನಾಡುವ ಪ್ರತಿಯೊಬ್ಬರಿಗೂ ಗೊತ್ತಿರಲೇಬೇಕು.ಈ ಹಿಂದೆ ಚಂದ್ರಲೇಖಾರ ಪರಿಚಯ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಈ ಬಳಿಕ ಒಂದು ಹಾಡು ಚಂದ್ರಲೇಖಾ ಬದುಕಿನಲ್ಲಿ ಹೊಸ ಆಯಾಮವನ್ನೇ ತೆರೆದುಬಿಟ್ಟಿತು. ದಿನ ಬೆಳಗಾಗುವುದರೊಳಗೆ ಚಂದ್ರಲೇಖಾ ಹಾಡಿದ ಒಂದು ಹಾಡು ಇಡೀ ವಿಶ್ವವೇ ಕೇಳಿಕೊಂಡು ‘ಶಹಬ್ಬಾಸ್’ಎಂದು ಬೆನ್ನು ತಟ್ಟುವವರೆಗೂ ಹೋಗಿತ್ತು. ಅಂದಹಾಗೆ ಚಂದ್ರಲೇಖಾ ಮಹಾನ್ ಗಾಯಕಿ ಏನೂ ಅಲ್ಲ. ತನ್ನ ಬದುಕಿನ ಉದ್ದಕ್ಕೆ ಅತೀ ಹೆಚ್ಚು ಇಷ್ಟಪಟ್ಟು ಕೇಳುತ್ತಿದ್ದ ಖ್ಯಾತ ಗಾಯಕಿ ಚಿತ್ರಾರ ಹಾಡುಗಳಿಂದಲೇ ಸ್ಫೂರ್ತಿ ಪಡೆದುಕೊಂಡು ಹಾಡಲು ಹೊರಟರು. ಈಗ ಚಂದ್ರಲೇಖಾ ಎಲ್ಲರಿಗೂ ಗೊತ್ತು ಅದರಲ್ಲೂ ಕೇರಳದ ಮಲಯಾಳಿಗಳು ಅವರ ಹಾಡುಗಳನ್ನು ಗುನುಗುನಿಸುತ್ತಾ ಇರುತ್ತಾರೆ. ಚಂದ್ರಲೇಖಾರ ಹಿಟ್ ಹಾಡು:
ಚಂದ್ರಲೇಖಾ ತನ್ನ ಮಗುವನ್ನು ಮಲಗಿಸಲು ಹಾಡಿದ ಹಾಡೊಂದು ಮೊಬೈಲ್ ಫೋನ್ ಮೂಲಕ ಸಾಮಾಜಿಕ ತಾಣಗಳಲ್ಲಿ ಒಂದಾದ ಯೂ ಟ್ಯೂಬ್‌ನಲ್ಲಿ ಹಾಕಿದ್ದರು. ನಾಲ್ಕು ನಿಮಿಷದ ಈ ಹಾಡಿನಿಂದ ದಿನಬೆಳಗಾಗುವುದರೊಳಗೆ ಮಲಯಾಳಂ ಎನ್ನುವ ಪುಟ್ಟ ರಾಜ್ಯದಲ್ಲಿ ಚಂದ್ರಲೇಖಾ ಹೆಸರು ದಿಢೀರ್ ಖ್ಯಾತಿಗೆ ಬಂತು. ಅಲ್ಲಿಂದ ಎರಡು ಲಕ್ಷಕ್ಕೂ ಅಧಿಕ ಮಂದಿ ಈ ಹಾಡನ್ನು ಕೇಳಿದ್ದಾರೆ. ಮಾತ್ರವಲ್ಲ ಡೌನ್‌ಲೋಡ್ ಮಾಡಿಕೊಂಡು ಕೇಳಿಸಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ನಾಲ್ಕೈದು ದಿನಗಳಲ್ಲಿ ಹಾಕಿರುವ ಈ ಹಾಡಿಗೆ ಈಗಾಗಲೇ ೩ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಪಿ. ಚಂದ್ರಲೇಖಾ ಮೂಲತಃ ಕೇರಳ ರಾಜ್ಯದ ಪತ್ತಾನಾಮಿಟ್ಟಾ ಜಿಲ್ಲೆಯ ವಾದಾಸಿರಿಖಾರಾ ಊರಿನವರು. ಅಂದಹಾಗೆ ಚಂದ್ರಲೇಖಾ ಎಂದಿಗೂ ಸಾರ್ವಜನಿಕವಾಗಿ ಹಾಡಿಲ್ಲ. ಆದರೆ ಈಗ ಮಲಯಾಳಂನ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ಚಂದ್ರಲೇಖಾ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡು ಈ ಬಳಿಕ ಅವರನ್ನು ಸಂಪರ್ಕಿಸಿ ಹಾಡಲು ಕೇಳಿದರೂ ಆದರೆ ಚಂದ್ರಲೇಖಾ ಮಾತ್ರ ಒಪ್ಪಿಕೊಳ್ಳಲಿಲ್ಲ. ಚಂದ್ರಲೇಖಾ ಅವರಲ್ಲಿ ಈ ಹಾಡಿನ ಕುರಿತು ಕೇಳಿದಾಗ ಹೇಳುವ ಮಾತು ಹೀಗಿದೆ: ನಮ್ಮ ಕುಟುಂಬದ ಸದಸ್ಯ ದರ್ಶನ್ ತನ್ನ ಮೊಬೈಲ್ ಫೋನ್‌ನಲ್ಲಿ ನಾನು ಹಾಡುವ ಹಾಡನ್ನು ರೆಕಾರ್ಡ್ ಮಾಡಿಕೊಂಡು ಯೂ ಟ್ಯೂಬ್‌ನಲ್ಲಿ ಆಪ್‌ಲೋಡ್ ಮಾಡಿದ ಆದರೆ ನನಗೆ ಇದ್ಯಾವುದರ ಪರಿಚಯವೇ ಇಲ್ಲ. ಕಂಪ್ಯೂಟರ್ ಅಂತೂ ನಮ್ಮ ಊರಿಗೆ ಬಂದಿರಲಿಲ್ಲ. ದೂರದ ಊರಿನಿಂದ ನೆಂಟರೊಬ್ಬರು ಕರೆ ಮಾಡಿ ಯೂ ಟ್ಯೂಬ್ ಕತೆಯನ್ನು ಬಿಚ್ಚಿಟ್ಟರು. ಬಹಳ ಖುಷಿಯಾಯಿತು. ಇದರ ಜತೆಗೆ ನನ್ನ ಮೊಬೈಲ್ ಸಂಖ್ಯೆಯನ್ನು ಕೂಡ ನಮೂದಿಸಿ ಬಿಟ್ಟಿದ್ದ ಇದರ ಪರಿಣಾಮ ದೇಶ- ವಿದೇಶದಿಂದ ಸಾವಿರಾರು ಕರೆಗಳು ಬಂದಿದ್ದವು.ಎಲ್ಲರೂ ಕೇಳುವ ಹಾಡು ಒಂದೇ ‘ರಾಜಹಂಸಮೇ....’ ಎನ್ನುತ್ತಾರೆ ಅವರು. ಚಂದ್ರಲೇಖಾ ಅವರು ತೀರಾ ಬಡತನ ಕುಟುಂಬದಲ್ಲಿ ಒಂದು ಪುಟ್ಟ ಗಂಡು ಮಗುವಿನ ಜತೆ ಬದುಕು ಕಟ್ಟುತ್ತಿದ್ದಾರೆ. ಪತಿ ರಘುನಾಥನ್ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಚಂದ್ರಲೇಖಾರಿಗೆ ಬಂದ ಆಫರ್: ‘ರಾಜಹಂಸಮೇ....’ ಹಾಡು ಯಾವ ರೀತಿಯಲ್ಲಿ ಕ್ಲಿಕ್ ಆಗಿದೆ ಎಂದರೆ ಈಗಾಗಲೇ ಚಂದ್ರಲೇಖಾ ಅವರನ್ನು ಹುಡುಕಿಕೊಂಡು ಮಲಯಾಳಂ ಸಿನಿ ಜಗತ್ತಿನ ಐದು ಸಂಗೀತ ನಿರ್ದೇಶಕರು ತಮ್ಮ ಮುಂದಿನ ಚಿತ್ರಕ್ಕೆ ಚಂದ್ರಲೇಖಾ ಹಾಡಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ. ಆದರೆ ಚಂದ್ರಲೇಖಾ ಈಗ ಸಿನಿಮಾ ಹಾಡುವೊಂದನ್ನು ಹಾಡಿದ್ದಾರೆ. ಚಿತ್ರದ ಹೆಸರು ‘ಲವ್ ಸ್ಟೋರಿ’ ಚಂದ್ರಲೇಖಾ ಹಾಡುವ ಹಾಡು ‘ಕನ್‌ಕಳೀರು ಕವಿತಾಯೇಸುಥಾವನ್...’ಈಗಾಗಲೇ ಚಿತ್ರದ ಸಿಡಿ ಮಾರುಕಟ್ಟೆಗೆ ಬಂದಿದೆ. ತೀರಾ ಇತ್ತೀಚೆಗೆ ಕೇರಳದ ಖ್ಯಾತ ಖಾಸಗಿ ವಾಹಿನಿಯೊಂದು ಚಂದ್ರಲೇಖಾರ ಕುರಿತು ಮಾಡಿದ ಕಾರ‍್ಯಕ್ರಮವೊಂದರಲ್ಲಿ ಖ್ಯಾತ ಗಾಯಕಿ ಚಿತ್ರಾ ಚಂದ್ರಲೇಖಾರ ಹಾಡನ್ನು ಹೊಗಳಿದಾಗ ಚಂದ್ರಲೇಖಾ ರಲ್ಲಿ ದುಃಖ ಉಲ್ಬಣಿಸಿಕೊಂಡು ಬಂದಿತ್ತು.ಇದು ಕೇರಳದ ಮನೆಯ ಹುಡುಗಿಯ ಮಾತು. ಇಂತಹ ಹತ್ತಾರು ಅಮ್ಮಂದಿರು ನಮ್ಮ ನಡುವೆ ಇದ್ದಾರೆ ಅವರಿಗೊಂದು ಅವಕಾಶ ಸಿಗಲೇಬೇಕು ಅಲ್ವಾ..?

Monday, April 14, 2014

ಭಿಕ್ಷೆ ಬೇಡುವ ಹುಡುಗಿ ಈಗ ಬಿ-ಟೌನ್ ಸಿಂಗರ್

* ಸ್ಟೀವನ್ ರೇಗೊ, ದಾರಂದಕುಕ್ಕು ದುರ್ಗಾ ಇದು ಮುಂಬಯಿಯ ರೈಲು ನಿಲ್ದಾಣದಲ್ಲಿ ಓಡುವ ರೈಲುಗಳಲ್ಲಿ ನಿಂತು ಹಾಡುಗಳನ್ನು ಹಾಡಿ ಪುಡಿಗಾಸು ಪಡೆಯುತ್ತಿದ್ದ ಹುಡುಗಿಯ ಹೆಸರು. ಕಳೆದ ಮೂರು ನಾಲ್ಕು ವರ್ಷಗಳಿಂದಲೂ ದುರ್ಗಾ ಇದೇ ವೃತ್ತಿಯನ್ನು ಮಾಡಿಕೊಂಡು ಬಂದವಳು. ಆದರೆ ಇಂತಹ ದುರ್ಗಾ ಎನ್ನುವ ಬಾಲೆ ಬಾಲಿವುಡ್ ಅಂಗಳದಲ್ಲಿ ಸಿಂಗರ್ ಆಗಿ ಬೆಳೆಯುತ್ತಾಳೆ ಎನ್ನುವುದು ಖುದ್ದು ಅವಳಿಗೂ ಗೊತ್ತಿರಲು ಸಾಧ್ಯವಿಲ್ಲ. ಅಂದಹಾಗೆ ದುರ್ಗಾ ಈಗ ಬಾಲಿವುಡ್ ಅಂಗಳದಲ್ಲಿ ವಿಶಿಷ್ಟ ಹಾಡುಗಳಿಂದ ಗುರುತಿಸಿಕೊಂಡವಳು. ರೈಲುಗಳ ಬೋಗಿಯಲ್ಲಿ ಬಾಲಿವುಡ್ ಹಾಡುಗಳನ್ನು ಹಾಡಿ ಕೈ ಮುಂದೆ ಮಾಡುತ್ತಾ ಭಿಕ್ಷೆ ಬೇಡುತ್ತಿದ್ದ ಹುಡುಗಿ ಲಕ್ ಬದಲಾಯಿಸಿದ್ದರ ಹಿಂದೆ ಪುಟ್ಟದಾದ ಕತೆ ಇದೆ. ಯಾರು ಕೂಡ ಬದುಕಿನಲ್ಲಿ ಏನೂ ಬೇಕಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ದುರ್ಗಾ ದೀ ಬೆಸ್ಟ್ ಸ್ಯಾಂಪಲ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಾಲಿವುಡ್ ನಿರ್ದೇಶಕ ಆನಂದ್ ಸುರಪುರ್ ಒಂದು ದಿನ ಮುಂಬಯಿಯ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ದುರ್ಗಾ ಬಾಲಿವುಡ್‌ನ ಹಿಟ್ ಹಾಡುಗಳನ್ನು ಹಾಡುತ್ತಾ ಬರುತ್ತಿದ್ದಳು. ಈ ಸಮಯದಲ್ಲಿ ಆನಂದ್ ತನ್ನ ಹೊಸ ಹಾಡಿನ ಆಲ್ಬಂಗಾಗಿ ಹೊಸ ಗಾಯಕಿಯನ್ನು ಹುಡುಕಾಟ ಮಾಡುತ್ತಿದ್ದರಂತೆ ಇದೇ ಸಮಯದಲ್ಲಿ ದುರ್ಗಾ ಕಣ್ಣಿಗೆ ಬಿದ್ದು ಬಿಟ್ಟರು. ಅಲ್ಲಿಂದ ಆನಂದ್ ಸುರಪುರ್ ತನ್ನ ಆಲ್ಬಂನ ಒಂದು ಹಾಡಿಗೆ ಹಾಡಿಸಿದರಷ್ಟೇ ತಕ್ಷಣ ದುರ್ಗಾ ಕ್ಲಿಕ್ ಆಗಿ ಹೋದರು.
ಆನಂದ್ ಸುರಪುರ್ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡನ್ನು ಹರಿಯಬಿಟ್ಟರು. ಆಲ್ಬಂ ಬಿಡುಗಡೆಯಾಗುವ ಮುಂಚೆನೇ ಹಿಟ್ ಆಯಿತು. ಇದೇ ಸಮಯದಲ್ಲಿ ಬಾಲಿವುಡ್‌ನಲ್ಲಿ ಬಿಗ್ ಹಿಟ್ ಅನ್ನಿಸಿಕೊಂಡ ‘ಗ್ಯಾಂಗ್ಸ್ ಆಫ್ ವಾಸೇಪುರ್’ ಚಿತ್ರದ ಸಂಗೀತ ನಿರ್ದೇಶಕಿ ಸ್ನೇಹಾ ಕನ್ವಾಲಕರ್ ದುರ್ಗಾಳಿಗೆ ಮತ್ತೊಂದು ಚಾನ್ಸ್ ಕೊಟ್ಟರು. ಇದು ‘ಗ್ಯಾಂಗ್ಸ್ ಆಫ್ ವಾಸೇಪುರ್’ ನ ‘ಚೀ ಚಾ ಲೆದರ್..’ಹಿಟ್ ಹಾಡು ದುರ್ಗಾಳಿಂದ ಹಾಡಿಸಿದರು. ಈ ಹಾಡು ೧೨ರ ಹರೆಯದ ದುರ್ಗಾ ಹಾಡಿರೋದು ಎನ್ನುವ ವಿಚಾರ ಬಹಳಷ್ಟು ಮಂದಿಗೆ ಗೊತ್ತಿರಲು ಸಾಧ್ಯವಿಲ್ಲ. ಕಾರಣ ಈ ಹಾಡಿನಲ್ಲಿ ಒಂದು ಪ್ರಬುದ್ಧತೆಯ ಕಂಠವಿದೆ ಎನ್ನುವುದು ಬಹಳಷ್ಟು ಬಾಲಿವುಡ್ ಸಂಗೀತ ನಿರ್ದೇಶಕರು ಹೇಳಿಕೊಂಡಿದ್ದರು. ಇಲ್ಲಿಂದ ದುರ್ಗಾ ಬಾಲಿವುಡ್ ಅಂಗಳದಲ್ಲಿ ಸಿಂಗರ್ ಆಗಿ ಗುರುತಿಸಿಕೊಂಡಿದ್ದಾಳೆ. ಅಂದಹಾಗೆ ದುರ್ಗಾ ಮೂಲತಃ ಆಂಧ್ರಪ್ರದೇಶದ ಹುಡುಗಿ. ಹೊಟ್ಟೆಪಾಡಿಗಾಗಿ ಹೆತ್ತವರ ಜತೆಯಲ್ಲಿ ಮುಂಬಯಿಯ ಕೊಳಗೇರಿ ಪ್ರದೇಶ್ಕೆ ಬಂದು ನಿಂತಳು. ಇಂತಹ ಕೊಳಗೇರಿ ಪ್ರದೇಶದ ಮುಖ್ಯ ವೃತ್ತಿ ಭಿಕ್ಷೆ ಬೇಡುತ್ತಾ ಹಣ ಸಂಪಾದನೆ ಮಾಡುವುದು. ಇದೇ ವೃತ್ತಿಯಲ್ಲಿ ದುರ್ಗಾ ಕೂಡ ಮುಂದುವರಿದಳು. ಆದರೆ ದುರ್ಗಾಳ ಅದೃಷ್ಟ ಮಾತ್ರ ನೆಟ್ಟಗೆ ಇತ್ತು. ಕೊಳಗೇರಿ ಪ್ರದೇಶದಲ್ಲಿ ಹೊಟ್ಟೆಪಾಡಿಗಾಗಿ ಹಾಡುಗಳನ್ನು ಹಾಡುತ್ತಾ ಬದುಕು ಕಟ್ಟುವ ಬದಲು ಬಾಲಿವುಡ್ ಅಂಗಳದಲ್ಲಿ ಗುರುತಿಸಿಕೊಳ್ಳುವ ಚಾನ್ಸ್ ಸಿಕ್ಕಿತು. ಈಗ ದುರ್ಗಾಳಿಗೆ ತೆಲುಗು ಚಿತ್ರಗಳಿಗೆ ಹಾಡಬೇಕೆಂಬ ಹೆಬ್ಬಯಕೆ ಇದೆ. ಬಾಲಿವುಡ್ ಅಂಗಳದಿಂದ ಬಹಳಷ್ಟು ಆಫರ್‌ಗಳು ಬರುತ್ತಿದೆ. ಇಲ್ಲೂ ನೆಲೆ ನಿಂತು ಟಾಲಿವುಡ್‌ನಲ್ಲೂ ಗುರುತಿಸಿಕೊಳ್ಳಬೇಕು ಎನ್ನುತ್ತಾರೆ ದುರ್ಗಾ. ಇಂತಹ ಪ್ರತಿಭೆಗಳು ಸಾಕಷ್ಟು ಪ್ರಮಾಣದಲ್ಲಿ ಬೆಳೆದುಬರಬೇಕು ಎನ್ನೋದು ಬಹಳಷ್ಟು ಮಂದಿಯ ಮಾತು. ಪಾರ್ಟ್ ೨ ನಲ್ಲೂ ಓಡುತ್ತೆ ಟ್ರೈನ್: ಬಾಲಿವುಡ್‌ನಲ್ಲಿ ಹಿಟ್ ಆದ ಗ್ಯಾಂಗ್ಸ್ ಆಫ್ ವಾಸೇಪುರ್‌ನ ಮುಂದುವರಿದ ಭಾಗ ಪಾರ್ಟ್ ೨ನಲ್ಲೂ ದುರ್ಗಾ ಒಂದು ಹಾಡನ್ನು ಹಾಡಲಿದ್ದಾರೆ.ಅನುರಾಗ್ ಕಶ್ಯಪ್ ಅವರ ಬತ್ತಳಿಕೆಯಲ್ಲಿ ಹೊರಡಲಿರುವ ಈ ಸಿನ್ಮಾದಲ್ಲಿ ದುರ್ಗಾ ಲೀಡ್ ಹಾಡೊಂದಕ್ಕೆ ಬುಕ್ ಆಗಿದ್ದಾಳೆ. ಚಿತ್ರ ಈ ವರ್ಷ ಬಿಡುಗಡೆ ಕಾಣಲಿದೆ. ಈ ಹಿಂದೆ ಇದ್ದ ಸಂಗೀತ ನಿರ್ದೇಶಕಿ ಸ್ನೇಹಾ ಈ ಸಿನ್ಮಾದಲ್ಲೂ ಮುಂದುವರಿಯಲಿದ್ದಾರೆ. ಈ ಬಾರಿ ದುರ್ಗಾ ಹಿಂದಿ ಭಾಷೆಯ ಜತೆಗೆ ಇಂಗ್ಲೀಷ್ ಭಾಷೆಯನ್ನು ಮಿಕ್ಸಿಂಗ್ ರೀತಿಯಲ್ಲಿ ಬಳಸಿಕೊಂಡು ಮನಸ್ಸು ಗೆಲ್ಲುವ ಕಾಯಕಕ್ಕೆ ಸಾಥ್ ಕೊಡಲಿದ್ದಾರೆ ಎನ್ನೋದು ಕಶ್ಯಪ್ ಮಾತು. .

ಕಾಲಿವುಡ್‌ನಲ್ಲಿ ಮತ್ತೆ ಹುಂಜ ಚಿತ್ರ!

* ಸ್ಟೀವನ್ ರೇಗೊ, ದಾರಂದಕುಕ್ಕು ಕಾಲಿವುಡ್ ಸಿನಿಮಾಗಳೇ ಹಾಗೇ ಇಲ್ಲಿನ ಕತೆಗಳೇ ಚಿತ್ರಕ್ಕೆ ಜೀವಾಳ. ಕಾಲಿವುಡ್ ಸಿನಿಮಾ ನಿರ್ದೇಶಕರು ಒಳ್ಳೆಯ ಕತೆ ಇದ್ದಾರೆ ಮಾತ್ರ ಸಿನ್ಮಾ ಮಾಡೋದು ಎನ್ನೋದು ಸಿನಿಮಾ ಮಂದಿಯವರು ಹೇಳುವ ಮಾತು. ಇದೇ ಒಂದು ಕಾರಣದಿಂದ ಇಲ್ಲಿನ ಸಿನಿಮಾಗಳನ್ನು ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರಿಯವರು ರಿಮೇಕ್ ಮಾಡಿಕೊಂಡು ಸಿನಿಮಾ ಗೆಲ್ಲಿಸುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಈಗ ಕಾಲಿವುಡ್‌ನಲ್ಲಿ ಮತ್ತೆ ಹುಂಜದ ಮೇಲೊಂದು ಸಿನಿಮಾ ಮೂಡಿಬರುತ್ತಿದೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಅವರ ಶಿಷ್ಯ ಎ.ಎಲ್. ವಿಜಯ್ ಅವರ ಹೊಸ ಚಿತ್ರ ‘ಶೈವಂ’ ನಲ್ಲಿ ಹುಂಜ ಹಾಗೂ ಬಾಲಕಿಯೇ ಲೀಡ್ ನಟರು. ಹೌದು. ವಿಜಯ್ ಈಗಾಗಲೇ ತಮಿಳಿನಲ್ಲಿ ದೈವ ತಿರುಮಗಳ್ ಚಿತ್ರ ಮಾಡಿದವರು. ಈ ಚಿತ್ರದಲ್ಲಿ ವಿಕ್ರಂ ಅವರನ್ನು ಬುದ್ದಿಮಾಂದ್ಯತಂದೆಯಂತೆ ಚಿತ್ರಿಸಿಕೊಂಡು ಮಗಳನ್ನು ಹುಡುಕುವ ಪಾತ್ರದಲ್ಲಿ ಪ್ರೇಕ್ಷಕರಿಗೆ ಕಣ್ಣೀರು ಕೊಟ್ಟವರು. ಈ ಚಿತ್ರದಲ್ಲಿ ನಟಿಸಿದ ಸಾರಾ ಅರ್ಜುನ್. ಶೈವಂ ಚಿತ್ರದಲ್ಲಿ ನಾಯಕಿ. ಈ ಪುಟಾಣಿಯ ಜತೆಗೆ ಹುಂಜವೊಂದು ನಟಿಸುತ್ತಿದೆ.
ಶೈವಂನಲ್ಲಿ ಹುಂಜಕ್ಕೆ ಪಾಪಾ ಎನ್ನುವ ಹೆಸರಿದೆ. ಸಾರಾ ಪ್ರೀತಿಸುವ ಪಾಪಾ ಕಳೆದು ಹೋಗುತ್ತದೆ. ಹಳ್ಳಿಗಾಡಿನಲ್ಲಿ ಪಾಪಾ ಕ್ಷಿಡುಕಾಟ, ಅವರಿಬ್ಬರ ನಡುವಿನ ಪ್ರೀತಿಯ ಕತೆಯೇ ಶೈವಂನ ಪ್ಲಸ್ ಪಾಯಿಂಟ್‌ಗಳಲ್ಲಿ ಒಂದು. ಇಡೀ ಚಿತ್ರದಲ್ಲಿ ಸಾರಾ ಹಾಗೂ ಹುಂಜದ ನಟನೇ ಗಮನ ಸೆಳೆದುಬಿಡುತ್ತದೆ. ಇದರ ಜತೆಗೆ ಹಿರಿಯ ನಟ ನಾಜೀರ್ ಕೂಡ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಾರೆ. ಮುಂಬಯಿಯಲ್ಲಿ ಬೆಳೆದ ಹುಡುಗಿ ಸಾರಾ ಅರ್ಜುನ್ ಈಗಾಗಲೇ ೪೦೪ ಹಾಗೂ ಏಕ್ ತಿ ಡಯಾನ್ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಸಣ್ಣಪುಟ್ಟ ರೋಲ್‌ಗಳಲ್ಲಿ ಮಿಂಚುತ್ತಿರುವ ಅರ್ಜುನ್ ಅವರ ಪುತ್ರಿ ಸಾರಾ ಅವರನ್ನು ವಿಜಯ್ ಜಾಹೀರಾತು ಶೂಟಿಂಗ್‌ವೊಂದರಲ್ಲಿ ಕಂಡಿದ್ದರು. ಈ ಬಳಿಕ ಸಾರಾ ಅವರನ್ನು ಮುಖ್ಯವಾಗಿಟ್ಟುಕೊಂಡು ದೈವ ತಿರುಮಗಳ್ ಚಿತ್ರ ಮಾಡಿ ಬಾಕ್ಸಾಫೀಸ್‌ನಲ್ಲಿ ಹೊಸ ತಿರುವಿಗೆ ಕಾರಣವಾಗಿದ್ದರು. ಈಗ ಶೈವಂ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆ ಕಾಣುತ್ತಿದೆ. ಅದಕ್ಕೂ ಮೊದಲಾಗಿ ಚಿತ್ರದ ಟ್ರೈಲರ್ ಸಾಮಾಜಿಕ ತಾಣಗಳಲ್ಲಿ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ಅಂದಹಾಗೆ ೨೦೧೧ರಲ್ಲಿ ಕಾಲಿವುಡ್‌ನಲ್ಲಿ ಬಂದ ‘ಆಡುಕಲಂ’ ಚಿತ್ರದಲ್ಲಿ ಕೋಳಿ ಅಂಕದ ಕತೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿಮಾರನ್ ಈ ಚಿತ್ರವನ್ನು ತೆರೆಗೆ ತಂದಿದ್ದರು.
ಕಾಲಿವುಡ್ ಸ್ಟಾರ್ ನಟ ಧನುಷ್, ನಟ ಕಿಶೋರ್ ಹಾಗೂ ತಪಸಿ ನಟಿಸಿದ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಕೂಡ ಬಂದಿತ್ತು. ಕರಾವಳಿಯಲ್ಲಿ ನಡೆಯುತ್ತಿರುವ ಕೋಳಿ ಅಂಕ ವಿಶ್ವದಾದ್ಯಂತ ಖ್ಯಾತಿ ಪಡೆದಿದೆ. ಇದೇ ಮಾದರಿಯ ಕೋಳಿ ಅಂಕ ತಮಿಳುನಾಡಿನ ಮಧುರೈಯಲ್ಲೂ ಫೇಮಸ್. ನಿರ್ದೇಶಕ ವೆಟ್ರಿಮಾರನ್ ಮಧುರೈ ಅಸುಪಾಸಿನಲ್ಲಿ ನಡೆಯುತ್ತಿದ್ದ ಈ ಕೋಳಿ ಅಂಕದ ಕತೆಯನ್ನೇ ತನ್ನ ಚಿತ್ರಕ್ಕೆ ಜೀವಾಳ ಮಾಡಿಕೊಂಡು ಭಾರತೀಯ ಸಿನಿಮಾರಂಗದಲ್ಲಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದರು. ಈ ಬಳಿಕ ವೆಟ್ರಿಮಾರನ್ ಆನೆ ಮೇಲೊಂದು ಸಿನಿಮಾ ಮಾಡಿದ್ದರು. ಆದರೆ ‘ಆಡುಕಲಂ’ನಂತೆ ಬಾಕ್ಸಾಫೀಸ್‌ನಲ್ಲಿ ಗಳಿಕೆ ಮಾಡುವಲ್ಲಿ ವಿಫಲವಾಯಿತು. ಟೋಟಲಿ ಶೈವಂನಲ್ಲಿ ಹುಂಜವೊಂದರ ಕತೆ ಸಿನಿಮಾಗಳಲ್ಲಿ ಯಾವ ರೀತಿ ವರ್ಕ್ ಔಟ್ ಆಗುತ್ತೆ ಎನ್ನುವ ಕುತೂಹಲ ಸಿನಿಮಾ ಬಿಡುಗಡೆ ಕಂಡ ನಂತರವೇ ತಿಳಿಯಬೇಕು. ಅಲ್ಲಿವರೆಗೂ ಪ್ರೇಕ್ಷಕ ಕಾದು ಕೂರಬೇಕು.

Friday, April 11, 2014

ಭರವಸೆಯನ್ನು ಹುಟ್ಟುಹಾಕುವ ಹಬ್ಬವೇ ‘ಈಸ್ವರ್’

* ಸ್ಟೀವನ್ ರೇಗೊ, ದಾರಂದಕುಕ್ಕು ಕ್ರೈಸ್ತ ಸಮುದಾಯಗಳ ಹಬ್ಬದ ಕ್ಯಾಲೆಂಡರ್‌ಗಳಲ್ಲಿ ಕ್ರಿಸ್ಮಸ್ ಹಾಗೂ ಈಸ್ಟರ್ ಹಬ್ಬಕ್ಕೆ ತನ್ನದೇ ಆದ ಮಹತ್ವ ಇದೆ. ಒಂದು ಕ್ರಿಸ್ತ ಜನನದ ಕುರಿತಾಗಿ ಸಂಭ್ರಮವನ್ನು ಹಂಚುತ್ತಾ ಸಾಗಿದರೆ ಮತ್ತೊಂದು ಹೊಸ ಭರವಸೆಯನ್ನು ಮನುಕುಲದಲ್ಲಿ ಹುಟ್ಟು ಹಾಕುವ ಹಬ್ಬವಾಗಿ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಎರಡು ಹಬ್ಬಗಳಿಗೂ ಸಹಜವಾಗಿಯೇ ಧರ್ಮ, ಜಾತಿ ಮೀರಿದ ಮನ್ನಣೆ ಜನಪ್ರಿಯತೆ ಜತೆಯಾಗಿ ಸಾಗುತ್ತದೆ. ಒಂದು ಹಬ್ಬ ಸಂಭ್ರಮದ ನೆರಳಿನಲ್ಲಿ ಕುಣಿದಾಡಿದರೆ ಮತ್ತೊಂದು ಮನು ಕುಲದಲ್ಲಿ ನಂಬಿಕೆ, ವಿಶ್ವಾಸ, ಭರವಸೆಯ ಪಾಠವನ್ನು ಭೋದಿಸುತ್ತದೆ. ಇದೇ ಕಾರಣದಿಂದ ಕ್ರೈಸ್ತ ರ ಪವಿತ್ರವಾರ ಎಲ್ಲ ರೀತಿಯಿಂದಲೂ ಭಿನ್ನತೆ ಪಾಠವನ್ನು ಬೋಧನೆಯಲ್ಲಿ ತೊಡಗಿದಂತೆ ಭಾಸವಾಗುವುದಿದೆ.
ಪವಿತ್ರ ವಾರದ ಭಾನುವಾರದಂದು ಬರುವ ‘ಈಸ್ಟರ್’ ಕ್ರೈಸ್ತರಿಗೆ ನಿಜಕ್ಕೂ ಮಹತ್ವದ ಹಬ್ಬ. ಶನಿವಾರ ರಾತ್ರಿಯಿಂದಲೇ ಚರ್ಚ್‌ಗಳಲ್ಲಿ ನಡೆಯುವ ಪ್ರಾರ್ಥನೆ ಹಾಗೂ ವಿಧಿವಿಧಾನಗಳನ್ನು ಒಳಗೊಂಡ ‘ಪಾಸ್ಕಾ’ ಜಾಗರಣೆಯಲ್ಲಿ ಭಾಗವಹಿಸುವುದರೊಂದಿಗೆ ಕ್ರೈಸ್ತರು ಭಾನುವಾರ ಈಸ್ಟರ್ ಹಬ್ಬವನ್ನು ಸಂತಸ, ಸಂಭ್ರಮದಿಂದಲೇ ಎದುರುಗೊಳ್ಳುತ್ತಾರೆ. ಇದರ ಜತೆಯಲ್ಲಿ ಫೆಬ್ರವರಿ ತಿಂಗಳ ಎರಡನೇ ವಾರದಿಂದ ಆರಂಭವಾದ ೪೦ ದಿನಗಳ ತಪಸ್ಸು ಕಾಲದ ತ್ಯಾಗ, ದೇಹ ದಂಡನೆಯ ವ್ರತ ಈಸ್ಟರ್ ಹಬ್ಬದ ಮೂಲಕ ಮುಕ್ತಾಯಗೊಳ್ಳುತ್ತದೆ. ಯೇಸು ಕ್ರಿಸ್ತ ನಮಗಾಗಿ ಮತ್ತೆ ಬಂದಿದ್ದಾನೆ ಎನ್ನುವ ನಂಬಿಕೆಯ ಮೂಲಕ ಕ್ರೈಸ್ತ ಬಂಧುಗಳು ಹಬ್ಬವನ್ನು ಸಡಗರದಿಂದ ಆಚರಣೆಯಲ್ಲಿ ತೊಡಗುತ್ತಾರೆ. ಯೇಸುಕ್ರಿಸ್ತರ ದೈವತ್ವದ ಸಂಕೇತ: ಕರಾವಳಿ ಮಾತ್ರವಲ್ಲದೇ ವಿಶ್ವದ ನಾನಾ ದೇಶಗಳಲ್ಲಿ ಈ ಹಬ್ಬದ ಆಚರಣೆಯಲ್ಲಿ ವೈವಿಧ್ಯತೆ ಇರಬಹುದು. ಆದರೆ ಇದನ್ನು ಪಾಸ್ಕಾ ಹಬ್ಬ ಅಥವಾ ಪುನರುತ್ಥಾನದ ಹಬ್ಬ ಎಂದೂ ಕರೆಯಲಾಗುತ್ತದೆ. ಕ್ರೈಸ್ತ ರ ಪವಿತ್ರ ಗ್ರಂಥವಾದ ಬೈಬಲ್ ನಲ್ಲಿ ಹೇಳಿರುವಂತೆ ದುಷ್ಟ ಜನರ ಒಳಸಂಚಿನಿಂದ ಅನ್ಯಾಯದ ತೀರ್ಪಿಗೆ ಒಳಗಾಗಿ ಶಿಲುಬೆಯಲ್ಲಿ ಘೋರವಾದ ಮರಣವನ್ನು ಹೊಂದಿದ ಯೇಸು ಕ್ರಿಸ್ತ ಮೂರನೆಯ ದಿನ ಮತ್ತೆ ಜೀವಂತವಾಗಿ ಎದ್ದು ಬಂದು ತಮ್ಮ ದೈವತ್ವವನ್ನು ತೋರ್ಪಡಿಸಿದರು ಎಂಬುದರ ಸಂಭ್ರಮದ ಆಚರಣೆಯೇ ಈಸ್ಟರ್‌ನಲ್ಲಿ ಕಾಣ ಸಿಗುತ್ತದೆ. ಯೇಸುವಿನ ಸಾವಿನಿಂದ ಭಯಪಟ್ಟು, ಅಧಿಕಾರಸ್ಥರ ದರ್ಪದಡಿ ಎಲ್ಲಾ ಭರವಸೆಯನ್ನು ಕಳೆದುಕೊಂಡ ಶಿಷ್ಯರು ಹಾಗೂ ಹಿಂಬಾಲಕರಲ್ಲಿ ಸ್ವಾಮಿಯ ಈ ಪುನರುತ್ಥಾನ ಹೊಸ ಚೈತನ್ಯ, ಅಭಯವನ್ನು ನೀಡಿತು. ಅಲ್ಲದೆ ಕ್ರಿಸ್ತನ ಪ್ರೀತಿ ಶಾಂತಿಯ ಸಂದೇಶವನ್ನು ಎಲ್ಲೆಡೆ ಸಾರುವ ಸ್ಪೂರ್ತಿ ತುಂಬಿತ್ತು ಎನ್ನುವ ಸಂದೇಶ ಈ ಹಬ್ಬದ ಮೂಲಕ ಹೊರ ಜಗತ್ತಿಗೆ ರವಾನೆಯಾಗುತ್ತದೆ. ಬೈಬಲ್ ನ ಒಂದು ಅಧ್ಯಾಯದಲ್ಲಿ ತಿಳಿಸಿರುವಂತೆ ದಾಸ್ಯತ್ವದಿಂದ ಬಳಲುತ್ತಿದ್ದ ತನ್ನ ಜನರನ್ನು ದೇವರು ಬಿಡಿಸಿ ಅವರನ್ನು ಹೊಸ ನಾಡಿಗೆ ಹೊಸ ಬದುಕಿನೆಡೆಗೆ ಕರೆದೊಯ್ದ ಸಂಗತಿಯ ನೆನಪಿನ ಅಚರಣೆಯೂ ಈ ಹಬ್ಬಕ್ಕೆ ತಳಕು ಹಾಕಿಕೊಂಡಿದೆ. ಹೀಗಾಗಿ ಈಸ್ಟರ್ ದೈವತ್ವದ ಪ್ರತಿಪಾದನೆ ಮಾತ್ರವಲ್ಲದೆ, ಹೊಸ ಜೀವನ, ಹೊಸ ಸೃಷ್ಟಿ, ನಮ್ಮೊಳಗಿನ ಹೊಸ ಅನ್ವೇಷಣೆ ಹಾಗೂ ಸಾವೇ ಅಂತಿಮ ಅಲ್ಲ ಎಂಬುದರ ಸಂಕೇತವೂ ಹೌದು ಎಂದು ವ್ಯಾಖ್ಯಾನಿಸುವಂತಿದೆ. ಈಸ್ವರ್ ಗೇ ನಿರ್ದಿಷ್ಟ ದಿನವಿಲ್ಲ: ಕ್ರೈಸ್ತ ಸಮುದಾಯದಲ್ಲಿ ಕ್ರಿಸ್ಮಸ್ ಹಬ್ಬ ಎಂದಾಕ್ಷಣ ಡಿ.೨೫ ಎಂದು ಗೋಡೆಗೆ ತೂಗು ಹಾಕಿದ ಕ್ಯಾಲೆಂಡರ್ ನೆನಪು ಮಾಡುವಂತೆ ಈಸ್ವರ್ ಹಬ್ಬವನ್ನು ಕ್ಯಾಲೆಂಡರ್ ಮುಂಚಿತವಾಗಿ ತಿಳಿಸುವ ಕೆಲಸ ಮಾಡುವುದಿಲ್ಲ. ಪ್ರತಿ ವರ್ಷನೂ ಈಸ್ವರ್ ದಿನಾಂಕಗಳಲ್ಲಿ ಬದಲಾವಣೆ ಇದ್ದೇ ಇರುತ್ತದೆ. ೪೦ ದಿನಗಳ ಉಪವಾಸದ ದಿನಗಳು ಆರಂಭದ ದಿನದಿಂದ ಲೆಕ್ಕಚಾರದ ಮೂಲಕವೇ ಈಸ್ವರ್ ಹಬ್ಬವನ್ನು ಆಚರಿಸಲಾಗುತ್ತದೆ. ಅದಕ್ಕೂ ಮುಖ್ಯವಾಗಿ ಕ್ರೈಸ್ತರ ಪವಿತ್ರ ವಾರ ಎಂದು ಪರಿಗಣಿಸಲಾಗುವ ವಾರದಲ್ಲಿ ಗುರುವಾರ( ಮೋಂಡಿ ಥರ‍್ಸಡೇ) ಯೇಸು ಕ್ರಿಸ್ತ ಶಿಲುಬೆಗೆ ಏರುವ ಮುನ್ನ ತನ್ನ ಹದಿನಾಲ್ಕು ಮಂದಿ ಶಿಷ್ಯರ ಪಾದ ತೊಳೆಯವ ದಿನದ ಅಂಗವಾಗಿ ಕ್ರೈಸ್ತ ಚರ್ಚ್ ನಲ್ಲಿರುವ ಧರ್ಮಗುರುಗಳು ಚರ್ಚ್‌ನ ಅಧೀನದಲ್ಲಿರುವ ಸಂಘ ಸಂಸ್ಥೆಗಳ ಮುಖ್ಯಸ್ಥರ ಪಾದ ತೊಳೆಯವ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಅದರಲ್ಲೂ ಮುಖ್ಯವಾಗಿ ಶುಭ ಶುಕ್ರವಾರದಂದು ಯೇಸು ಕ್ರಿಸ್ತ ಶಿಲುಬೆಯಲ್ಲಿ ಪ್ರಾಣ ಬಿಡುವ ದಿನದ ಅಂಗವಾಗಿ ವಿಶೇಷ ಪೂಜಾ ವಿಧಿಗಳನ್ನು ಚರ್ಚ್‌ಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಈ ಬಳಿಕ ಶನಿವಾರ ಯೇಸು ಮತ್ತೇ ಮನು ಕುಲದ ಉದ್ಧಾರಕ್ಕಾಗಿ ಪುನರುತ್ಥಾನವಾಗುವ ದಿನವಾಗಿ ಆಚರಿಸಲಾಗುತ್ತದೆ. ಆದರೆ ಸಾಮಾನ್ಯವಾಗಿ ಮಾರ್ಚ್ ತಿಂಗಳ ೨೦ರ ತರುವಾಯ ಬರುವ ಪೌರ್ಣಿಮೆಯ ನಂತರದ ಭಾನುವಾರ ಆಚರಿಸಲಾಗುತ್ತದೆ. ಈ ಹಬ್ಬದ ನಂತರದ ೫೦ ದಿನಗಳ ಅವಧಿಯನ್ನು ಪಾಸ್ಕ ಕಾಲವೆಂದು ಕರೆಯಲಾಗುತ್ತದೆ. ಈಸ್ವರ್ ಹೊಸ ಬೆಳಕಿನ ಹಬ್ಬ: ಈಸ್ಟರ್ ಎಂದರೆ ಅದು ಹೊಸ ಭರವಸೆಯ ಹಬ್ಬ. ಯೇಸು ಮತ್ತೆ ಹುಟ್ಟಿ ಬರುತ್ತಾನೆ ಎನ್ನುವ ನಂಬಿಕೆಯ ಮೂಲಕ ಬದುಕಿನಲ್ಲಿ ಹೊಸ ಬೆಳಕು ಮೂಡುವ ಹಬ್ಬ ಎಂದೇ ಕ್ರೈಸ್ತ ಸಮುದಾಯದ ಬಂಧುಗಳು ಪರಿಗಣಿಸುತ್ತಾರೆ. ನಲವತ್ತು ದಿನಗಳ ‘ತಪಸ್ಸು ಕಾಲ’ದ ಬಳಿಕ ಈಸ್ಟರ್ ಸಂಭ್ರಮಕ್ಕೆ ಜನ ಚರ್ಚ್‌ಗಳಲ್ಲಿ ಸೇರುತ್ತಾರೆ ಶನಿವಾರ ರಾತ್ರಿ ದಿವ್ಯ ಬಲಿಪೂಜೆಗೆ ಮುಂಚಿತವಾಗಿ ಚರ್ಚ್‌ನ ಅಂಗಳದಲ್ಲಿ ಹಾಕಿದ ಹೊಸ ಬೆಂಕಿಯ ಸುತ್ತ ಜಮಾಯಿಸುತ್ತಾರೆ. ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸುತ್ತಾ ಆ ಬೆಂಕಿಯಿಂದ ತಮ್ಮ ಕೈಯಲ್ಲಿರುವ ದೊಡ್ಡ ಮೇಣದಬತ್ತಿಯನ್ನು ಬೆಳಗಿಸುತ್ತಾರೆ. ಅಲ್ಲಿರುವ ಭಕ್ತಾದಿಗಳು ಅದರಿಂದ ಮೇಣದಬತ್ತಿಯನ್ನು ಹೊತ್ತಿಸಿ ಚರ್ಚ್‌ನ ಒಳಗೆ ಪ್ರವೇಶಿಸುತ್ತಾರೆ. ಅಲ್ಲಿಯವರೆಗೆ ಚರ್ಚ್‌ನ ಒಳಗೆ ಗಾಢಾಂಧಕಾರ ನೆಲೆಸಿರುತ್ತದೆ. ಹೊಸ ಬೆಳಕಿನೊಂದಿಗೆ ಜನ ಒಳಪ್ರವೇಶಿಸಿದ ಬಳಿಕವೇ ಚರ್ಚ್‌ನ ದೀಪಗಳನ್ನು ಉರಿಸಲಾಗುತ್ತದೆ. ಬಳಿಕ ಸಂಭ್ರಮದ ಈಸ್ಟರ್ ಬಲಿಪೂಜೆ ನಡೆಯುತ್ತದೆ. ಜನ ಹೊಸ ಭರವಸೆಯೊಂದಿಗೆ ಪ್ರಾರ್ಥನೆ ಸಲ್ಲಿಸುತ್ತಾ ಬೆಳಕಿನ ಹಬ್ಬಕ್ಕೆ ಸ್ವಾಗತ ಕೋರುತ್ತಾರೆ.

ಮನುಕುಲದ ರಕ್ಷಣೆಯ ಶುಭ ಶುಕ್ರವಾರ

* ಸ್ಟೀವನ್ ರೇಗೊ, ದಾರಂದಕುಕ್ಕು ಶುಭ ಶುಕ್ರವಾರ ಕ್ರೈಸ್ತರಿಗೆ ಪವಿತ್ರ ದಿನ. ಕ್ರಿಸ್ಮಸ್ ಹೇಗೆ ಯೇಸುಕ್ರಿಸ್ತನ ಜನನವನ್ನು ಸೂಚಿಸುತ್ತದೆಯೋ ಹಾಗೆ ಶುಭ ಶುಕ್ರವಾರ ಯೇಸುಕ್ರಿಸ್ತನ ಮರಣವನ್ನು ಸಂಕೇತಿಸುತ್ತದೆ. ಯೇಸುಕ್ರಿಸ್ತ ಈ ಪವಿತ್ರ ಶುಭ ಶುಕ್ರವಾರದಂದು ಪ್ರಾಣತ್ಯಾಗ ಮಾಡಿ ಮಾನವತೆಯ ಅಂತಃಕರಣವನ್ನೇ ಕಲಕಿ ಪ್ರೇಮದ ನೆಲೆಯನ್ನು ಉದ್ಭವಗೊಳಿಸಿದವರು. ಈ ಅರ್ಥದಲ್ಲಿ ಶುಭ ಶುಕ್ರವಾರ ಕ್ರೈಸ್ತ ಬಂಧುಗಳಿಗೆ ಧ್ಯಾನ ದಿನ. ವಿಶ್ವಾದಾದ್ಯಂತ ಎಲ್ಲ ಕ್ರೈಸ್ತರು ಯೇಸುಕ್ರಿಸ್ತನ ಶಿಲುಬೆಯ ಮರಣದಲ್ಲಿ ಅಡಗಿರುವ ಅಪೂರ್ವವಾದ ತ್ಯಾಗ, ಬಲಿದಾನಗಳನ್ನು ಭಕ್ತಿಯಿಂದ ಸ್ಮರಣೆ ಮಾಡುತ್ತಾ ದೇವರನ್ನು ಕೊಂಡಾಡುವುದೇ ಈ ಆಚರಣೆಯ ಮಹತ್ವ. ಕೆಲವು ದಿನಗಳ ಹಿಂದೆ ವಿಭೂತಿ ಬುಧವಾರವನ್ನು ಆಚರಿಸಿ, ಕ್ರಿಸ್ತನ ನಿಜ ಅನುಯಾಯಿಗಳಾಗಲು ಕರೆ ನೀಡಿರುವ ಕ್ರೈಸ್ತ ಧರ್ಮಸಭೆ ಈ ತಪಸ್ಸು ಕಾಲದಲ್ಲಿ ಕ್ರೈಸ್ತ ಸಮುದಾಯದೊಡಗೂಡಿ ಕ್ರಿಸ್ತರ ಪಾಡು ಮರಣವನ್ನು ಧ್ಯಾನಿಸುತ್ತದೆ. ಬೂದಿ ಬುಧವಾರದಿಂದ ಶುಭ ಶುಕ್ರವಾದವರೆಗೆ ನಲ್ವತ್ತು ದಿನಗಳು ಉಪವಾಸ ಮಾಡುವುದು, ಧ್ಯಾನದಲ್ಲಿ ತೊಡಗುವುದು, ಧ್ಯಾನ, ಧರ್ಮ ಮತ್ತು ತ್ಯಾಗದಿಂದ ಕೂಡಿದ ಸೇವಾ ಕಾರ್ಯಗಳಲ್ಲಿ ಭಾಗವಹಿಸುವುದು ಇತ್ಯಾದಿಗಳು ಕ್ರೈಸ್ತರಲ್ಲಿ ಬಂದಿರುವ ಧಾರ್ಮಿಕ ಸಂಪ್ರದಾಯ. ಕೇವಲ ೩೦ ಬೆಳ್ಳಿನಾಣ್ಯಗಳ ಆಸೆಯಿಂದ ಯೇಸುವಿನ ಶಿಷ್ಯರಲ್ಲೊಬ್ಬನಾದ ಯೂದನು ತನ್ನ ಗುರುವನ್ನು ಹಿಡಿದು ಕೊಟ್ಟು ನಂತರ ತನ್ನ ಗುರುದ್ರೋಹಕ್ಕಾಗಿ ಪಶ್ಚಾತ್ತಾಪ ಪಟ್ಟು ಆತ್ಮಹತ್ಯೆ ಮಾಡಿಕೊಂಡ ಎಂದು ಚಾರಿತ್ರಿಕ ದಾಖಲೆಗಳು ತಿಳಿಸುತ್ತವೆ. ಯೇಸು ಬಂಧಿತರಾದ ರಾತ್ರಿಯನ್ನು ಕ್ರೈಸ್ತರು ಬಹು ಗಂಭೀರವಾಗಿ ಆಚರಿಸುತ್ತಾರೆ. ಇದನ್ನು ‘ಪಾಸ್ಕಾ ಹಬ್ಬದ ರಾತ್ರಿ’ ಎಂದು ಕರೆಯುತ್ತಾರೆ. ಇತಿಹಾಸದಲ್ಲಿ ಇಸ್ರೇಲರು ಈಜಿಪ್ಟ್ ದೇಶದಲ್ಲಿ ಗುಲಾಮರಾಗಿದ್ದಾಗ ದೇವರು ಅವರ ಪ್ರಾಣವನ್ನುಳಿಸಿ ದಾಸತ್ವದಿಂದ ಅವರನ್ನು ಬಿಡಿಸಿದ್ದನ್ನು ನೆನಪಿಸಿಕೊಂಡು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದೇ ಈ ರಾತ್ರಿಯ ಆಚರಣೆಯ ಉದ್ದೇಶ. ಶುಭ ಶುಕ್ರವಾರಕ್ಕೆ ಬೈಬಲ್ ವ್ಯಾಖ್ಯೆ:
ಆ ಕಾಲದಲ್ಲಿ ಮರಣದಂಡನೆಯ ಶಿಕ್ಷೆಯನ್ನು ಶಿಲುಬೆಗೆ ಹಾಕಿ ಸಾಯಿಸುವುದರ ಮೂಲಕ ವಿಧಿಸಲಾಗುತ್ತಿತ್ತು. ಯೇಸುವಿನ ಪ್ರಗತಿಯನ್ನು ಕಾಣಲಾರದೆ ಯೆಹೂದ್ಯ ಯಾಜಕರು, ಶಾಸ್ತ್ರಿಗಳು ಅವರ ಮೇಲೆ ಉರಿದು ಬಿದ್ದು ಅವರನ್ನು ಯಾವ ರೀತಿಯಲ್ಲಾದರೂ ನಿರ್ಮೂಲ ಮಾಡಬೇಕೆಂದು ಪ್ರಯತ್ನಪಟ್ಟರು. ಕ್ರಿಸ್ತರು ಈ ಪ್ರಗತಿಯೇ ಅವರ ಅಧಿಕಾರತ್ವಕ್ಕೆ ಮುಳ್ಳಾಗಬಹುದೆಂಬ ಅನುಮಾನ ಅವರಲ್ಲಿ ಮೊಳೆಯಿತು. ಆದುದರಿಂದ ಸುಳ್ಳು ಆರೋಪಗಳನ್ನು ಯೇಸುವಿನ ತಲೆಯ ಮೇಲೆ ಹೇರಿದ ಬಳಿಕ ಪಿಲಾತನನ್ನು ಹುರಿದುಂಬಿಸಿ, ಶಿಲುಬೆಗೇರಿಸು, ಶಿಲುಬೆಗೇರಿಸು ಎಂಬ ಅಟ್ಟಹಾಸದೊಡನೆ ಮೆರೆದು ಕಡೆಗೂ ಕ್ರಿಸ್ತರ ಹೆಗಲ ಮೇಲೆ ಭಾರವಾದ ಶಿಲುಬೆಯನ್ನು ಹೊರಿಸಿದರು. ಹೀಗೆ ಅಂಬರದಡಿಯ ಗಿರಿಕಂದರಗಳ ನಡುವೆ ಎದ್ದು ನಿಂತಿರುವ ಗೊಲ್ಗೋಥಾ ಬೆಟ್ಟವನ್ನು ಹತ್ತಿಸಿ ಯೇಸುವನ್ನು ಶಿಲುಬೆ ಮೇಲೆ ತೂಗಾಡಿಸಲು ತಾವು ಸಹ ಹೊರಟರು. ‘ಗೊಲ್ಗೋಥಾ’ದ ಗುರಿ ಮುಟ್ಟಿದ ಕ್ರಿಸ್ತರನ್ನು ಅರೆಬೆತ್ತಲೆಯಾಗಿಸಿ, ಶಿಲುಬೆ ಮರದ ಮೇಲೆ ಮಲಗಿಸಿ ಕೈಗೂ, ಕಾಲಿಗೂ ಮೊಳೆಯನ್ನು ಜಡಿದರು. ಯೇಸುವಿಗೆ ಶಿಕ್ಷೆ ವಿಧಿಸಿದ ನಂತರ ಹುರಿಮಾಡಲ್ಪಟ್ಟ ಕೊರಡೆಗಳಿಂದ (ಕೊರಡೆ ಎಂದರೆ ಚೂಪಾದ ಎಲುಬಿನ ತುಂಡುಗಳನ್ನು ತುದಿಗೆ ಸಿಕ್ಕಿಸಿದ ಚರ್ಮದ ಚಾವಟಿಗಳು ಹೊಡೆದರೆ ರಕ್ತ ಮಾಂಸ ಒಂದೇ ಏಟಿಗೆ ಹೊರಬರುತ್ತಿತ್ತು) ಬಲವಾಗಿ ಹೊಡೆದು, ನೋಯಿಸಿ ಮುಖದ ಮೇಲೆ ಗುದ್ದಿ ಅವಮಾನಿಸಿ ಅಂತಿಮವಾಗಿ ಮುಳ್ಳಿನಿಂದ ಹೆಣೆದ ಕಿರೀಟವೊಂದನ್ನು ತಲೆಯ ಮೇಲೆ ಒತ್ತಿ ಹಿಡಿದು ಕ್ರೂರವಾಗಿ ಹಿಂಸಿಸಲಾಯಿತು. ಹೀಗೆ ಅಂಗಾಲಿನಿಂದ ನಡು ನೆತ್ತಿಯವರೆಗೂ ಗಾಯಗಳು ಮತ್ತು ರಕ್ತ ಸ್ರಾವ ಎಂದು ಬೈಬಲ್‌ನಲ್ಲಿ ಯೇಸುವಿನ ಕಷ್ಟದ ಬಗ್ಗೆ ಉಲ್ಲೇಖಗಳಿವೆ. ಶುಭ ಶುಕ್ರವಾರ ಆಚರಣೆಗಳು: ಅಂದು ದೇವಾಲಯಗಳಲ್ಲಿ ಕ್ರಿಸ್ತನ ಸಾವಿನ ಸಂಬಂಧಿಸಿದ ಭೋದನೆ, ಪ್ರಸಂಗಗಳು ನಡೆಯುತ್ತವೆ. ವಿಶೇಷ ಕೀರ್ತನೆ ಗೀತೆಗಳನ್ನು ರಚಿಸಿ ಹಾಡುವುದು ಉಂಟು. ಪೂಜ್ಯ ಯೇಸುವಿನ ಹಾಡುಗಳು ಎಂಬ ಮಹಾರೂಪಕವನ್ನು ಅಭಿನಯಿಸುವುದರ ಮೂಲಕ ಶೋಕವನ್ನು ವ್ಯಕ್ತಪಡಿಸುವುದುಂಟು. ಯೇಸು ತನ್ನ ಶಿಷ್ಯರ ಪಾಪಗಳನ್ನು ತೊಳೆದು ಇತರರ ಸೇವೆಯ ಮಹತ್ವವನ್ನು ತೋರಿಸಿದಂತೆ ಹನ್ನೆರಡು ಶಿಷ್ಯರ ಪಾದ ತೊಳೆಯುವಿಕೆ ಎಂಬ ಕಾರ್ಯ ಪ್ರತಿ ಚರ್ಚ್‌ನಲ್ಲಿ ನಡೆಯುತ್ತದೆ. ಶುಭಶುಕ್ರವಾರ ಉಪವಾಸ ಮಾಡುವುದು, ಕಪ್ಪು ಬಟ್ಟೆಗಳನ್ನು ಧರಿಸುವುದು, ಮೌನವೃತ ಮತ್ತು ಧ್ಯಾನದಲ್ಲಿ ನಿರಂತರಾಗಿರುವುದು, ಆ ದಿನ ದೇವಾಲಯಗಳಲ್ಲಿ ಯಾವುದೇ ಅಲಂಕಾರ ಇರುವುದಿಲ್ಲ. ಗರ್ಭಗುಡಿಯ ಒಳಾಂಗಣವನ್ನು ಬಟ್ಟೆಯಿಂದ ಹೊದಿಸಿ, ಚರ್ಚುಗಳ ಗಂಟೆಗಳನ್ನು ಬಾರಿಸದೆ ಎಲ್ಲರೂ ಶೋಕವನ್ನು ಆಚರಿಸುತ್ತಾರೆ. ಆ ದಿನ ಮಧ್ಯಾಹ್ನ ೧೨ರಿಂದ ೩ ಗಂಟೆಯವರೆಗೂ ಕ್ರಿಸ್ತನು ಸಾಯುವ ಮುನ್ನ ಶಿಲುಬೆಯ ಮೇಲೆ ನುಡಿದರೆನ್ನಲಾದ ಏಳೂ ವಾಕ್ಯಗಳನ್ನು ವಿಸ್ತಾರವಾಗಿ ವ್ಯಾಖ್ಯಾನಿಸಿ ಧರ್ಮೋಪದೇಶ ಮಾಡಲಾಗುತ್ತದೆ. ಇದು ರೋಮನ್ ಕಥೋಲಿಕರು, ಪ್ರಾಟೆಸ್ಟೆಂಟರು ಮತ್ತು ಎಲ್ಲ ಪಂಗಡಗಳಲ್ಲಿಯೂ ಕಂಡು ಬರುವ ಒಂದು ಮುಖ್ಯವಾದ ಸಾರ್ವತ್ರಿಕ ಆಚರಣೆ. ದೈವ ಪ್ರೀತಿ, ಮಾನವ ಪ್ರೇಮ, ಮಾನವೀಯತೆಗಳಿಂದ ಕೂಡಿದ ಸೇವಾ ಮನೋಭಾವ ಮುಂತಾದವುಗಳನ್ನು ಪ್ರತಿಪಾದಿಸಿದ ಕ್ರಿಸ್ತನ ಬೋಧನೆ, ಸಾಧನೆ, ವಿಶ್ವ ಕಲ್ಯಾಣದಲ್ಲಿ ಅಸ್ಥೆ ಇರುವ ವಿಶ್ವ ಸಮಾಜದಲ್ಲಿ ನಂಬಿಕೆ ಇರಿಸಿಕೊಂಡಿರುವ ಎಲ್ಲ ಮತಧರ್ಮೀಯರ ಗಮನ ಸೆಳೆದಿದೆ.
* ಸ್ಟೀವನ್ ರೇಗೊ, ದಾರಂದಕುಕ್ಕು ಕ್ರಿಕೆಟ್ ವಿಷಯಕ್ಕೆ ಬಂದರೆ ಆತ ವಿಶ್ವದ ಅತೀ ವೇಗದ ಬೌಲರ್. ವೇದಿಕೆಯ ಮೇಲೆ ನಿಂತು ಗಿಟಾರ್ ವಿದ್ ಮೈಕ್ ಕೈಯಲ್ಲಿ ಹಿಡಿದು ನಿಂತರೆ ಆತ ಪಕ್ಕಾ ಒಬ್ಬ ರಾಕ್ ತಾರೆ. ರ‍್ಯಾಂಪ್ ಲೋಕಕ್ಕೆ ಬಂತು ನಿಂತರೆ ಈ ವಾಸ್ ಎ ಪ್ಯಾಶನ್ ಡಿಸೈನರ್. ಸೋ ಯಾರಾತಾ ಎಂದು ಕೇಳಿದ್ರೆ... ಆಸೀಸ್ ತಂಡದ ವೇಗದ ಬೌಲರ್ ಬ್ರೆಟ್ ಲೀ.
ಅಂದಹಾಗೆ ಆಸ್ಟ್ರೇಲಿಯದ ಮಾಜಿ ಸ್ಪೀಡ್‌ಸ್ಟರ್ ಬ್ರೆಟ್ ಲೀ ಎರಡನೇ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ತೀರಾ ಇತ್ತೀಚೆಗೆ ಹೊರಬಂದಿತ್ತು. ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದ ಗೆಳತಿ ಲಾನಾ ಆಂಡರ್ಸನ್ ಅವರನ್ನು ಲೀ ಖಾಸಗಿ ಸಮಾರಂಭವೊಂದರಲ್ಲಿ ಸರಳವಾಗಿ ವರಿಸಿದ್ದಾರೆ . ನ್ಯೂ ಸೌತ್ ವೇಲ್ಸ್‌ನ ಸೀಫೋರ್ತ್‌ನಲ್ಲಿರುವ ಬ್ರೆಟ್ ಲೀ ಅವರ ನೂತನ ಮನೆಯಲ್ಲಿ ಕಳೆದ ವಾರಾಂತ್ಯ ತೀರಾ ಖಾಸಗಿಯಾಗಿ ಈ ಮದುವೆ ನಡೆದಿದೆ. ೩೭ರ ಹರೆಯದ ಬ್ರೆಟ್ ಲೀ ಅವರ ಮೊದಲ ಮದುವೆ ೨೦೦೬ರಲ್ಲಿ ಎಲಿಜಬೆತ್ ಕೆಂಪ್ ಜತೆ ನಡೆದಿತ್ತು. ಬಳಿಕ ೨೦೦೮ರಲ್ಲಿ ವಿಚ್ಛೇದನವೂ ಆಗಿ ಹೋಯಿತು. ಈ ದಂಪತಿಗೆ ಪ್ರಸ್ಟನ್ ಎಂಬ ಹೆಸರಿನ ಮಗನೂ ಇದ್ದಾನೆ. ಲಾನಾ ಕಳೆದೊಂದು ವರ್ಷದಿಂದ ರೊಮ್ಯಾನ್ಸ್ ನಡೆಸುತ್ತ ಇದ್ದರು. ಕಳೆದ ಆಗಸ್ಟ್‌ನಲ್ಲಿ ಇದು ಮೊದಲ ಸಲ ಬಹಿರಂಗವಾಗಿತ್ತು. ಐಪಿಎಲ್ ಪಂದ್ಯಾವಳಿಯಲ್ಲಿ ಆಡುತ್ತಲೇ ಬಂದಿರುವ ಬ್ರೆಟ್ ಲೀ ಕಳೆದ ವರ್ಷ ಕೆಕೆಆರ್ ತಂಡದಲ್ಲಿದ್ದರು. ಆದರೆ ಮೊನ್ನೆಯ ಹರಾಜಿನಲ್ಲಿ ಅವರು ಯಾವ ಫ್ರಾಂಚೈಸಿಗಳಿಗೂ ಬೇಡವಾದರು. ಹೀಗಾಗಿ ಮದುವೆಯಾಗಲು ನಿರ್ಧರಿಸಿರಬೇಕು ಎನ್ನುವುದು ಅವರ ಆಪ್ತ ಗೆಳೆಯರ ಮಾತು. ಅಂದಹಾಗೆ ಲಾನಾ ಲೀಯನ್ನು ವರಿಸಲು ಇರುವ ಕಾರಣ ಏನೂ ಗೊತ್ತಾ..? ಬ್ರೆಟ್ ಲೀ ಒಬ್ಬ ಫ್ಯಾಶನ್ ಡಿಸೈನರ್ ಎನ್ನುವ ಕಾರಣಕ್ಕೆ ಎನ್ನುವುದು ಲಾನಾ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾಳೆ. ಲಾನಾ ಬೇಸಿಕಲಿ ಮೊಡೆಲ್ ಜತೆಗೆ ಲೀ ಜತೆಗೆ ಬಹಳಷ್ಟು ಫ್ಯಾಶನ್ ವರ್ಕ್‌ಗೆ ರ‍್ಯಾಂಪ್‌ವಾಕ್ ಕೂಡ ಮಾಡಿದ್ದಾಳೆ. ಬ್ರೆಟ್ ಲೀ ಎನ್ನುವ ಫ್ಯಾಶನ್ ಡಿಸೈನರ್: ಕ್ರಿಕೆಟ್ ಜಗತ್ತಿನ ಎನ್‌ಸೈಕ್ಲೋಪಿಡಿಯಾದಲ್ಲಿ ಬ್ರೆಟ್‌ಲೀ ಹೆಸರು ಕಂಗೊಳಿಸುತ್ತಿರೋದು ಕ್ರಿಕೆಟ್ ಪ್ರಿಯರಿಗೆ ಗೊತ್ತೇ ಇರೋ ವಿಚಾರ. ಆದರೆ ಬ್ರೆಟ್ ಲೀ ಕ್ರಿಕೆಟ್ ಹೊರತು ಏನೂ ಮಾಡುತ್ತಾರೆ ಎನ್ನುವ ಕೌತುಕದ ಪ್ರಶ್ನೆ ಸದಾ ಕಾಲ ಅವರ ಅಭಿಮಾನಿಗಳಿಗೆ ಕಾಡುತ್ತಾ ಇರುತ್ತದೆ. ಅದರಲ್ಲೂ ಬ್ರೆಟ್ ಲೀ ದೇಶದ ಮಹಾನ್ ಹಿನ್ನೆಲೆ ಗಾಯಕಿ ಆಶಾಜೀ ಜತೆಯಲ್ಲಿ ಹಾಡುವ ಆಲ್ಬಂಗಳಿರಲಿ...ಕೊಲ್ಕತ್ತಾದ ಚಾರಿಟಿ ಶೋಗಳಲ್ಲಿ ನಿಂತು ಕುಣಿಯುವ ದೃಶ್ಯಗಳಿರಲಿ ಎಲ್ಲವೂ ಎಲ್ಲರಿಗೂ ಗೊತ್ತಿರುವಂತದ್ದೇ ಮಾರಾಯ್ರೆ. ಆದರೆ ಬ್ರೆಟ್ ಲೀ ಒಳಗೊಬ್ಬ ಫ್ಯಾಶನ್ ಡಿಸೈನರ್ ಇದ್ದಾನೆ ಎನ್ನುವ ವಿಚಾರ ಎಷ್ಟು ಮಂದಿಗೆ ತಾನೇ ಗೊತ್ತು. ೨೦೦೧ ಮೇ ೧ರಂದು ಬ್ರೆಟ್ ಲೀ ತನ್ನ ವಿನ್ಯಾಸದ ‘ಬ್ರೆಟ್ ಲೀ ಕಲೆಕ್ಷನ್’ ಎನ್ನುವ ಲೆಬೆಲ್ ಇರುವ ವರೈಟಿ ಬಟ್ಟೆಗಳನ್ನು ಮಾರುಕಟ್ಟೆಗೆ ಇಳಿಯಬಿಟ್ಟಿದ್ದರು. ಈ ಬಟ್ಟೆಗಳು ಸ್ಟೈಲಿಶ್, ಮೊಡರ್ನ್ ಹಾಗೂ ಕಂಪಾರ್ಟ್‌ಟೇಬಲ್ ಝೋನ್‌ಗಳಲ್ಲಿ ಇರುವಂತೆ ಬ್ರೆಟ್ ಲೀ ನಿಗಾ ವಹಿಸಿಕೊಳ್ಳುತ್ತಾರೆ. ಅದರ ಜತೆಯಲ್ಲಿ ಈ ಬಟ್ಟೆಗಳಲ್ಲಿ ಬ್ರೆಟ್ ಲೀಯ ಸಹಿ ಕೂಡ ಒಳಗೊಂಡಿದೆ. ಅಂದಹಾಗೆ ಆಸೀಸ್ ತಂಡಕ್ಕೆ ಸೇರುವ ಮುಂಚೆನೇ ಬ್ರೆಟ್ ಲೀ ಒಬ್ಬ ಫ್ಯಾಶನ್ ಡಿಸೈನರ್. ಸಿಡ್ನಿಯ ಬರ್‌ಕ್ಲೇ ಮೆನ್ಸ್ ವೇರ್ ಎನ್ನುವ ಕಂಪನಿಯಲ್ಲಿ ಬ್ರೆಟ್ ಲೀ ದುಡಿಯುತ್ತಿದ್ದರು. ಅಲ್ಲಿಯ ಜ್ಞಾನ ಅವರ ಫ್ಯಾಶನ್ ಫೀಲ್ಡ್‌ನಲ್ಲಿ ವರ್ಕ್ ಔಟ್ ಆಯಿತು. ಆದರೆ ಅವರು ಕ್ರಿಕೆಟ್‌ನಲ್ಲಿ ಬೆಳೆಸಿಕೊಂಡಿದ್ದ ಆಸಕ್ತಿ ವಿಶ್ವದ ವೇಗದ ಬೌಲರ್‌ನ್ನಾಗಿ ಮಾಡಿತು. ಬ್ರೆಟ್ ಲೀ ವಿನ್ಯಾಸದ ಬಟ್ಟೆಗಳು ಬರೀ ಆಸೀಸ್‌ನ ಮಾರುಕಟ್ಟೆಯಲ್ಲಿ ಮಾತ್ರ ಆರಂಭದಲ್ಲಿ ಸಿಗುತ್ತಿತ್ತು. ಆದರೆ ಈಗ ವಿಶ್ವದ ಬಹುತೇಕ ಭಾಗಗಳಲ್ಲಿ ‘ಬ್ರೆಟ್ ಲೀ ಕಲೆಕ್ಷನ್’ ಎನ್ನುವ ರಿಟೈಲ್ ಶಾಪ್‌ಗಳಿವೆ. ಇದರ ಉಸ್ತುವಾರಿಯನ್ನು ಬ್ರೆಟ್ ಲೀ ಸಹೋದರ ಶೇನ್ ಲೀ ನೋಡಿಕೊಳ್ಳುತ್ತಿದ್ದಾರೆ. ಬ್ರೆಟ್ ಲೀ ಕಲೆಕ್ಷನ್‌ನಲ್ಲಿ ಬಣ್ಣಗಳದ್ದು ವಿಶೇಷ ಪಾತ್ರವಿದೆ. ಅದಷ್ಟೂ ತಾಜಾ ಬಣ್ಣಗಳಂದರೆ ಲೀಗೆ ಎಲ್ಲಿಲ್ಲದ ಪ್ರೀತಿ. ಕಡು ಆಕಾಶ ನೀಲಿ, ಶುದ್ದ ಬಿಳಿ, ನೇರಳೆ, ಲೈಟ್ ಆರೆಂಜ್, ಕಪ್ಪು, ಹಸಿರು ಹೀಗೆ ಬಣ್ಣಗಳ ಆಯ್ಕೆಯಲ್ಲಿ ಬ್ರೆಟ್ ಲೀ ಬಹಳ ಹುಷಾರು. ಈ ಬಣ್ಣಗಳಿಗೆ ತಕ್ಕಂತೆ ಇಟಲಿಯನ್ ಕೋಟನ್, ನೈಲಾನ್, ಸಾಪ್ಟ್ ಕೋಟನ್‌ಗಳ ಜತೆಯಲ್ಲಿ ಇತರ ಬಟ್ಟೆಗಳನ್ನು ಬಳಸಿಕೊಂಡು ಡಿಸೈನಿಂಗ್ ಬಟ್ಟೆಗಳನ್ನು ತಯಾರಿಸುತ್ತಾರೆ. ಟೋಟಲಿ ಬ್ರೆಟ್ ಲೀ ಕ್ರಿಕೆಟ್‌ನಲ್ಲಿ ಇರಲಿ, ಫ್ಯಾಶನ್ ವರ್ಲ್ಡ್‌ನಲ್ಲಿ ಇರಲಿ ಎಲ್ಲಿ ಹೋದರೂ ಸುದ್ದಿ ಮಾಡುತ್ತಾರೆ ಎನ್ನೋದು ನಿಜ.

ಕನ್ನಡಕ್ಕೆ ಬಂದ್ಳೂ ಡಿಯೋಲ್ ಕುಡಿ

*ಸ್ಟೀವನ್ ರೇಗೊ, ದಾರಂದಕುಕ್ಕು ದಕ್ಷಿಣ ಭಾರತದ ಸಿನಿಮಾ ರಂಗನೇ ಹಾಗೇ ಇಲ್ಲಿ ಯಾರು ಬಂದರೂ ಕೂಡ ಪ್ರೀತಿಯಿಂದ ಸ್ವೀಕಾರ ಮಾಡುವ ಸಿನಿ ಪ್ರಿಯರಿದ್ದಾರೆ. ಉತ್ತರ ಭಾರತ ಹಾಗೂ ಬಾಲಿವುಡ್ ಅಂಗಳದಿಂದ ಬಂದವರಿಗಂತೂ ಮೊದಲ ಮಣೆ ಸಿಕ್ಕೇ ಸಿಗುತ್ತದೆ. ಅದರಲ್ಲೂ ಸ್ಯಾಂಡಲ್‌ವುಡ್ ಸಿನಿಮಾವಂತೂ ಒಂದು ಹೆಜ್ಜೆ ಮುಂದೆನೇ ನಿಂತಿದೆ. ಇಲ್ಲಿ ಉತ್ತರ ಭಾರತದಿಂದ ಬಂದವರಂತೂ ನೆಲೆ ನಿಂತು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಗ್ಗಿಕೊಂಡವರು ಜಾಸ್ತಿ.ಉತ್ತರ ಭಾರತದಿಂದ ಬಂದ ಪೂಜಾ ಗಾಂಧಿ ನಿರ್ದೇಶಕ ಯೋಗರಾಜ್ ಭಟ್ಟರ ‘ಮುಂಗಾರು ಮಳೆ’ ಸಿನಿಮಾದ ಮೂಲಕ ಬಂದವರು ಈಗಲೂ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿಯೇ ಬದುಕು ಕಾಣುತ್ತಿದ್ದಾರೆ. ಇಂತಹ ಹತ್ತಾರು ಉದಾಹರಣೆಗಳು ಕನ್ನಡ ಸಿನಿಮಾ ಲೋಕದಲ್ಲಿ ಬೇಕಾದಷ್ಟು ಕಾಣಸಿಗುತ್ತದೆ. ಈಗ ಇಂತಹವರ ಸಾಲಿನಲ್ಲಿ ನಟಿ ಈಶಾ ಡಿಯೋಲ್ ಸೇರಿಕೊಂಡಿದ್ದಾರೆ.
ಹೌದು. ಬಾಲಿವುಡ್ ಬೆಡಗಿ ಈಶಾ ಡಿಯೋಲ್ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಿಶನ್ ನಿರ್ದೇಶನ ಮಾಡಿದ ‘ಕೇರಾಫ್ ಫುಟ್‌ಪಾತ್’ ಚಿತ್ರದ ಇನ್ನೊಂದು ಸಿಕ್ವೇಲ್ ಸೆಟ್ಟೇರುತ್ತಿದೆ. ಅಂದಹಾಗೆ ‘ಕೇರಾಫ್ ಫುಟ್ ಪಾತ್-೨’ನಲ್ಲಿ ಈಶಾ ಡಿಯೋಲ್ ನಟಿಸುವುದು ಬಹುತೇಕ ಖಚಿತಗೊಂಡಿದೆ. ಈಶಾ ಕುರಿತು ಚಿತ್ರದ ನಿರ್ದೇಶಕ ಕಿಶನ್ ಹೇಳುವ ಮಾತು ಹೀಗಿದೆ: ಕೇರಾಫ್ ಫುಟ್‌ಪಾತ್-೨ ಚಿತ್ರದಲ್ಲಿ ಬಾಲಿವುಡ್ ಕನಸ್ಸಿನ ಕನ್ಯೆ ಹೇಮಾ ಮಾಲಿನಿ ನಟಿಸುವುದು ಗ್ಯಾರಂಟಿಯಾಗಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಹೇಮಾ ಮಾಲಿನಿ ಬ್ಯುಸಿಯಾಗಿರುವ ಕಾರಣ ಹೇಮಾ ಮಾಲಿನಿ ಬದಲಾಗಿ ಅವರ ಪುತ್ರಿ ಈಶಾ ಡಿಯೋಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹೇಮಾ ಮಾಲಿನಿ ಹಾಗೂ ನಟ ಧರ್ಮೆಂದ್ರ ಈಶಾ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ಏಪ್ರಿಲ್ ೧೫ರ ನಂತರ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸುವ ಯೋಜನೆ ಇದೆ. ಕೇರಾಫ್ ಫುಟ್‌ಪಾತ್‌ನಲ್ಲಿ ಈಶಾ ಡಿಯೋಲ್ ವಕೀಲೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಕಿಶನ್ ಮಾತು. ಕಿಶನ್ ನಿರ್ದೇಶನದ ಕೇರಾಫ್ ಫುಟ್‌ಪಾತ್ ಚಿತ್ರದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಬಾಲಿವುಡ್ ನಟ ಜಾಕಿಶ್ರಾಫ್ ಕಾಣಿಸಿಕೊಂಡಿದ್ದರು. ‘ಕೇರಾಪ್ ಫುಟ್‌ಪಾತ್-೨’ರಲ್ಲಿ ಬಾಲಿವುಡ್‌ನ ಇನ್ನಷ್ಟೂ ನಟ- ನಟಿಯರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಾಲಿವುಡ್ ಅಂಗಳದಲ್ಲಿ ಈಶಾ ಡಿಯೋಲ್ ಹೇಳಿಕೊಳ್ಳುವಂತಹ ಬಿಗ್ ಹಿಟ್ ಚಿತ್ರಗಳನ್ನು ನೀಡಿಲ್ಲ. ಆದರೆ ಈಶಾ ನಟನೆಯಂತೂ ಬಾಲಿವುಡ್‌ನಲ್ಲಿ ಹೊಗಳಿಕೆಗೆ ಪಾತ್ರವಾಗಿರೋದು ನಿಜ. ಬಾಲಿವುಡ್ ಚಿತ್ರರಂಗದಲ್ಲಿ ಸಿಗದ ಅದೃಷ್ಟ ಸ್ಯಾಂಡಲ್‌ವುಡ್ ಇಲ್ಲದೇ ಹೋದರೆ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಿಗುವುದರಲ್ಲಿ ಸಂದೇಹ ಇಲ್ಲ. ಕಿಶನ್ ಕೇರಾಫ್‌ನಲ್ಲಿ ಏನಿದೆ: ಮಾಸ್ಟರ್ ಕಿಶನ್ ನಿರ್ದೇಶಿಸಿದ ‘ಕೇರಾಫ್ ಫುಟ್‌ಪಾತ್’ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಮಕ್ಕಳ ಶಿಕ್ಷಣದ ಪ್ರಾಮುಖ್ಯತೆಯ ಬಗ್ಗೆ ಹೇಳಿದ್ದ ಆ ಚಿತ್ರ ಅನೇಕ ಪ್ರಶಸ್ತಿಗಳನ್ನು ಕೂಡಾ ಬಾಚಿಕೊಂಡಿತು. ಈಗ ‘ಕೇರಾಫ್ ಫುಟ್‌ಪಾತ್’ ಆ ಚಿತ್ರದ ಮುಂದುವರಿದ ಭಾಗ. ಹಾಗಂತ ಕತೆಯ ವಿಷಯದಲ್ಲಿ ಅಲ್ಲ. ಏಕೆಂದರೆ, ಅಲ್ಲಿ ಶಿಕ್ಷಣದ ಬಗ್ಗೆ ಹೇಳಿದ್ದರೆ ಇಲ್ಲಿ ಮಕ್ಕಳ ಕ್ರೈಂ ಬಗ್ಗೆ ಹೇಳಲು ಹೊರಟಿದ್ದಾರೆ. ಕಿಶನ್ ಇಲ್ಲಿ ಬಾಲಾಪರಾಧಿಗಳ ಬಗ್ಗೆ ಸಿನಿಮಾ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಲ್ಲಿ ಕ್ರೈಂ ಮಾಡುವ ಮಕ್ಕಳು ಮುಂದೇನಾಗುತ್ತಾರೆ, ಅವರ ಮನಸ್ಥಿತಿ ಹೇಗಿರುತ್ತದೆ. ಮೂರು ವರ್ಷ ಶಿಕ್ಷೆಯಾದ ಬಳಿಕ ಅವರು ಹೇಗಾಗುತ್ತಾರೆ ... ಹೀಗೆ ಹಲವು ಅಂಶಗಳ ಕುರಿತು ‘ಕೇರಾಫ್ ಫುಟ್‌ಪಾತ್’ನಲ್ಲಿ ಹೇಳಲಿದ್ದಾರಂತೆ ಕಿಶನ್. ಅಂದಹಾಗೆ, ಕಿಶನ್‌ಗೆ ಈ ಕಥೆಗೆ ಪ್ರೇರಣೆ ವಿದೇಶಿ ಪತ್ರಕರ್ತೆ. ತಮ್ಮ ‘ಕೇರಾಫ್ ಫುಟ್‌ಪಾತ್’ ಸಿನಿಮಾದ ಪ್ರದರ್ಶನಕ್ಕಾಗಿ ಈಜಿಪ್ಟ್‌ಗೆ ಹೋಗಿದ್ದಾಗ ಅಲ್ಲಿನ ಪತ್ರಕರ್ತೆಯೊಬ್ಬರು, ‘ಈಗ ೧೩ನೇ ವರ್ಷಕ್ಕೆ ಮಕ್ಕಳ ಕೈಯಲ್ಲಿ ಗನ್ ಇರುತ್ತೆ. ೧೪ ರಿಂದ ೧೭ ವರ್ಷದವರೆಗಿನ ಮಕ್ಕಳು ಕ್ರೈಂನಲ್ಲಿ ತೊಡಗುತ್ತಿದ್ದಾರೆ. ಈ ವಿಷಯದ ಬಗ್ಗೆ ನೀವ್ಯಾಕೆ ಸಿನಿಮಾ ಮಾಡಬಾರದು’ ಎಂದು ಕೇಳಿದರಂತೆ. ಆಗ ಕೇಳಿದ ಅವರ ಪ್ರಶ್ನೆಗೆ ಉತ್ತರವಾಗಿ ಕಿಶನ್ ಈಗ ಬಾಲಪರಾಧದ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಇಲ್ಲಿ ೧೪ ರಿಂದ ೧೭ ವರ್ಷದ ಮಕ್ಕಳ ಮನಸ್ಥಿತಿ, ಅವರು ಮಾಡುವ ಕ್ರೈಂ ಮತ್ತು ಅವರು ಮುಂದೆ ಯಾವ ರೀತಿ ಬೆಳೆಯುತ್ತಾರೆ ... ಇಂತಹ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ಕಿಶನ್. ಕಿಶನ್ ಪ್ರಕಾರ ಇದೊಂದು ವರ್ಲ್ಡ್ ಸಿನಿಮಾ. ‘ಹರೆಯದಲ್ಲಿ ಮಾಡುವ ಕ್ರೈಂ ಮುಂದೆ ಅವರ ಇಡೀ ಜೀವನವನ್ನೇ ಬಲಿ ತೆಗೆದುಕೊಳ್ಳುತ್ತೆ. ಸಮಾಜ ಕೂಡಾ ಅವರನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ನಾನು ಅನೇಕ ಕೇಸ್ ಸ್ಡಡೀಸ್ ಮೂಲಕ ಹಾಗೂ ಸಂದರ್ಶನಗಳ ಮೂಲಕ ಕಥೆಗೆ ಬೇಕಾದ ಅಂಶಗಳನ್ನು ಪಡೆದುಕೊಂಡಿದ್ದೇನೆ’ ಎಂಬುದು ಕಿಶನ್ ಮಾತು. ಅಂದಹಾಗೆ ಇದು ಹಿಂದಿ ಹಾಗೂ ಕನ್ನಡದಲ್ಲಿ ತಯಾರಾಗುತ್ತಿದೆ. ಇನ್ನು ನೈಜ ಲೊಕೇಶನ್‌ಗಳಲ್ಲೇ ಚಿತ್ರೀಕರಣ ಮಾಡಲಿದ್ದು, ಸರ್ಕಾರದಿಂದ ಅನುಮತಿ ಕೂಡಾ ಸಿಕ್ಕಿದೆಯಂತೆ. ಚಿತ್ರದಲ್ಲಿ ಕೆಲವು ಸಚಿವರು ಕೂಡಾ ನಟಿಸುವ ಸಾಧ್ಯತೆ ಇದೆಯಂತೆ. ನಿರ್ದೇಶನದ ಜತೆಗೆ ಕಿಶನ್ ಪ್ರಮುಖ ಪಾತ್ರ ಕೂಡಾ ಮಾಡುತ್ತಿದ್ದಾರೆ. ಜತೆಗೆ ರಾಮ್‌ಚರಣ್ ಎಂಬವರು ಕೂಡಾ ನಟಿಸುತ್ತಿದ್ದು, ಅವೀಕಾ ಗೋರ್ ಚಿತ್ರದ ನಾಯಕಿ. ಇನ್ನು ‘ಸಲಾಂ ಬಾಂಬೆ’ಯಲ್ಲಿ ಬಾಲನಟನಾಗಿ ನಟಿಸಿದ ಶಫೀಕ್ ಸೈಯ್ಯದ್ ಇಲ್ಲಿ ಪಾನ್‌ವಾಲ ಪಾತ್ರ ಮಾಡುತ್ತಿದ್ದಾರೆ. ದೇವರಾಜ್ ಪಾಂಡೆ ‘ಕೇರಾಪ್ ಫುಟ್‌ಪಾತ್-೨’ನ ನಿರ್ಮಾಪಕರು. ಟೋಟಲಿ ಸಿನಿಮಾವಂತೂ ಕುತೂಹಲ ಕೆರಳಿಸಿದೆ.