Friday, May 30, 2014
ಕೊಂಕಣಿ ಕೃತಿಗಳಿಗೆ ಮೊಬೈಲ್ ಕೊಂಕಣಿ ಬಜಾರ್
ಕರ್ನಾಟಕ ಕೊಂಕಣಿ ಅಕಾಡೆಮಿಯ ವಿನೂತನ ಪ್ರಯತ್ನ * ಮನೆ ಬಾಗಿಲಲ್ಲಿ ಕೊಂಕಣಿ ಕೃತಿಗಳ ಬಿಕರಿ
* ಸ್ಟೀವನ್ ರೇಗೊ,ದಾರಂದಕುಕ್ಕು
ಸಾಹಿತ್ಯ ಕೃತಿಗಳನ್ನು ಖರೀದಿಸಿ ಓದುವ ಮನಸ್ಸು ಈಗ ಕಡಿಮೆಯಾಗುತ್ತಿದೆ ಎನ್ನುವ ಮಾತುಗಳು ಸದಾ ಕಾಲ ಸಾಹಿತ್ಯ ವಲಯದಲ್ಲಿರುವವರನ್ನು ಕಾಡುತ್ತಾ ಬಂದಿದೆ. ಹೊಸ ಹೊಸ ಪ್ರಯತ್ನಗಳ ಮೂಲಕ ಸಾಹಿತ್ಯ ಕೃತಿಗಳನ್ನು ಖರೀದಿ ಮಾಡಿ ಓದಿಸುವ ಕೆಲಸಗಳಂತೂ ಭರ್ಜರಿಯಾಗಿ ನಡೆಯುತ್ತಾ ಸಾಗುತ್ತಿದೆ. ಈ ಎಲ್ಲ ತಯಾರಿಗಳಿಂದ ಕನ್ನಡ ಸಾಹಿತ್ಯ ವಲಯ ಕೂಡ ಬಲಗೊಳ್ಳುತ್ತಿದೆ.
ಆದರೆ ಕರುನಾಡಿನಲ್ಲಿರುವ ಕೊಂಕಣಿ ಭಾಷೆಯಲ್ಲಿ ಹೊಸ ಹೊಸ ಲೇಖಕರು ಹುಟ್ಟಿಕೊಳ್ಳುವ ಜತೆಗೆ ಕೊಂಕಣಿ ಪುಸ್ತಕೋದ್ಯಮದಲ್ಲೂ ಹೊಸ ಕೊಂಕಣಿ ಸಾಹಿತ್ಯ ಕೃತಿಗಳು ಲಗ್ಗೆ ಹಾಕುತ್ತಿದೆ. ಆದರೆ ಇಂತಹ ಕೃತಿಗಳನ್ನು ಮಾರಾಟ ಮಾಡುವ ವ್ಯವಸ್ಥೆಯಂತೂ ನೆಟ್ಟಗೆ ಇಲ್ಲ ಎನ್ನುವುದು ಕೊಂಕಣಿ ಸಾಹಿತಿಗಳ ಮಾತು. ಇದಕ್ಕೆ ಉತ್ತರ ಎನ್ನುವಂತೆ ಕರ್ನಾಟಕ ಕೊಂಕಣಿ ಅಕಾಡೆಮಿ ಈಗ ಕೊಂಕಣಿ ಸಾಹಿತ್ಯ ಕೃತಿಗಳ ಮಾರಾಟಕ್ಕೆ ವಿನೂತನವಾದ ಪ್ರಯತ್ನವೊಂದು ಸಾಗಿದೆ. ‘ಮೊಬೈಲ್ ಕೊಂಕಣಿ ಬಜಾರ್’ ಎನ್ನುವ ಕಲ್ಪನೆಯನ್ನು ಹೊತ್ತುಕೊಂಡು ಕೊಂಕಣಿ ಅಕಾಡೆಮಿ ಕೊಂಕಣಿ ಸಾಹಿತ್ಯ ಕೃತಿಗಳ ಮಾರಾಟಕ್ಕೆ ಹೊರಟಿದೆ.
ಏನಿದು ಮೊಬೈಲ್ ಕೊಂಕಣಿ ಬಜಾರ್:
ಮೊಬೈಲ್ ಕೊಂಕಣಿ ಬಜಾರ್ ಎನ್ನುವ ಯೋಜನೆಯ ಕರ್ನಾಟಕ ಕೊಂಕಣಿ ಅಕಾಡೆಮಿಯ ಪ್ರಕಟಣೆಗಳ ಜತೆಗೆ ಕೊಂಕಣಿ ಅಕಾಡೆಮಿ ಲೇಖಕರಿಂದ ಪಡೆದುಕೊಳ್ಳುವ ಕೃತಿಗಳು, ಕೊಂಕಣಿ ಭಾಷೆಯ ನಾನಾ ಬಗೆಯ ಧ್ವನಿ ಸುರಳಿಗಳನ್ನು ಟೆಂಪೋ ಟ್ರಾವೆಲ್ಲರ್‌ವೊಂದರ ನೆರವಿನಿಂದ ಊರೂರೂ ಸುತ್ತಾಡಿಕೊಂಡು ಮಾರಾಟ ಮಾಡುವ ವ್ಯವಸ್ಥೆ. ಮುಖ್ಯವಾಗಿ ಸರಳ ಭಾಷೆಯಲ್ಲಿ ಹೇಳುವುದಾದರೆ ಸಂಚಾರಿ ಮಾದರಿಯ ಗ್ರಂಥಾಲಯ ಎನ್ನಬಹುದು.
ಈ ಸಂಚಾರಿ ಗ್ರಂಥಾಲಯದಲ್ಲಿ ಒಬ್ಬ ಚಾಲಕ ಸೇರಿದಂತೆ ಅವನಿಗೆ ನೆರವು ನೀಡಲು ಒಬ್ಬ ಸಹಾಯಕನಿರುತ್ತಾನೆ. ಈ ವಾಹನದಲ್ಲಿ ಕೊಂಕಣಿ ಸಾಹಿತ್ಯ ಕೃತಿಗಳ ಕುರಿತು ಊರೂರು ಹೇಳಿಕೊಂಡು ತಿರುಗಾಡಲು ಮೈಕ್ ಹಾಗೂ ಸೌಂಡ್ ಸಿಸ್ಟಂ ಕೂಡ ಜತೆಗಿರುತ್ತದೆ. ಇದರಿಂದ ಪ್ರಕಟವಾದ ಕೊಂಕಣಿಯ ಉತ್ತಮ ಸಾಹಿತ್ಯ ಕೃತಿಗಳು ಕೇವಲ ನಗರ ಕೇಂದ್ರಿತ ಮಾರುಕಟ್ಟೆಯಲ್ಲಿ ಉಳಿಯದೇ, ಹಳ್ಳಿಹಳ್ಳಿಗೂ ತಲುಪುತ್ತದೆ.
ಅಂದಹಾಗೆ ಮೊಬೈಲ್ ಕೊಂಕಣಿ ಬಜಾರ್‌ನ ಎರಡು ಭಾಗದಲ್ಲೂ ಯುವ ಕಲಾವಿದ ವಿಲ್ಸನ್ ಕಯ್ಯಾರ್ ಅವರು ಕೊಂಕಣಿ ಸಾಹಿತ್ಯ ಲೋಕದಲ್ಲಿ ವಿಶೇಷವಾಗಿ ದುಡಿದ ಹಿರಿಯ ಚೇತನಗಳನ್ನು ತಮ್ಮ ಕುಂಚದ ಮೂಲಕ ಬಿಡಿಸುವ ಕೆಲಸ ಮಾಡಿದ್ದಾರೆ. ಈ ಮೂಲಕ ಇಡೀ ಮೊಬೈಲ್ ಕೊಂಕಣಿ ಬಜಾರ್‌ನಲ್ಲಿ ಕೊಂಕಣಿ ಸಾಹಿತ್ಯ ಲೋಕದ ದಿಗ್ಗಜರು ಬ್ರಾಂಡ್ ಅಂಬಾಸೀಡರ್‌ಗಳಾಗಿ ಹೊರಹೊಮ್ಮಿದ್ದಾರೆ.
ಬೆಂಗಳೂರಿನಲ್ಲಿ ಭರ್ಜರಿ ವಹಿವಾಟು:
ಮೇ ೨೪ರಂದು ಬೆಂಗಳೂರಿನಲ್ಲಿ ಅಽಕೃತವಾಗಿ ಬಿಡುಗಡೆಯಾದ ‘ಮೊಬೈಲ್ ಕೊಂಕಣಿ ಬಜಾರ್’ ಬರೀ ಒಂದು ವಾರದಲ್ಲಿಯೇ ೫೦ ಸಾವಿರ ರೂಪಾಯಿ ವಹಿವಾಟು ನಡೆಸುವ ಮೂಲಕ ಕೊಂಕಣಿ ಅಕಾಡೆಮಿಯ ಹೊಸ ಪ್ರಯತ್ನಕ್ಕೆ ಗೆಲುವು ಬಂದಿದೆ. ‘ಮೊಬೈಲ್ ಕೊಂಕಣಿ ಬಜಾರ್‌ನ ಆರಂಭದಲ್ಲಿ ಸ್ವಲ್ಪ ಅಳುಕಿತ್ತು. ನಮಗೆ ಕೃತಿಗಳನ್ನು ಮಾರಾಟ ಮಾಡಿ ಲಾಭಗಳಿಸುವ ಇರಾದೆ ಇಲ್ಲ. ಆದರೆ ಕೊಂಕಣಿ ಸಾಹಿತ್ಯ ಕೃತಿಗಳಂತೂ ನಗರ ಮಾತ್ರವಲ್ಲದೇ ಹಳ್ಳಿಯ ಮೂಲೆ ಮೂಲೆಯಲ್ಲೂ ಸಿಗಬೇಕು ಎನ್ನುವ ಉದ್ದೇಶ ಮಾತ್ರವಿತ್ತು. ತಿಂಗಳಿಗೆ ೫೦ ಸಾವಿರ ರೂಪಾಯಿ ವಹಿವಾಟು ನಡೆಸಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಬೆಂಗಳೂರಿನಲ್ಲಿ ಮೊಬೈಲ್ ಕೊಂಕಣಿ ಬಜಾರ್‌ನ ವಹಿವಾಟಿನಿಂದ ಖುಷಿಯಾಗಿದೆ ಎನ್ನುತ್ತಾರೆ ಕರ್ನಾಟಕ ಕೊಂಕಣಿ ಅಕಾಡೆಮಿಯ ಅಧ್ಯಕ್ಷ ರೋಯ್ ಕ್ಯಾಸ್ಟೋಲಿನೋ ಹೇಳುತ್ತಾರೆ.
‘ರಾಜ್ಯದಲ್ಲಿ ಈಗ ಸದ್ಯಕ್ಕೆ ಒಂದೇ ಮೊಬೈಲ್ ಕೊಂಕಣಿ ಬಜಾರ್ ವಾಹನ ಇದೆ. ಕೊಂಕಣಿ ಅಕಾಡೆಮಿಯ ಕಾರ‍್ಯಕ್ರಮಗಳು ರಾಜ್ಯದ ಯಾವುದೇ ಪ್ರದೇಶದಲ್ಲಿ ನಡೆಯುವಾಗ ಅಲ್ಲಿಗೆ ಈ ಸಂಚಾರಿ ಗ್ರಂಥಾಲಯ ಹಾಜರಿರುತ್ತದೆ. ಇದರ ಜತೆಗೆ ಕರಾವಳಿಯಲ್ಲಿ ನಡೆಯುವ ಚರ್ಚ್‌ಗಳ ಹಬ್ಬದ ಸಮಯದಲ್ಲೂ ಈ ಮೊಬೈಲ್ ಕೊಂಕಣಿ ಬಜಾರ್ ಹೋಗುವಂತಹ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಿರುವ ಅಕಾಡೆಮಿಯ ಸದಸ್ಯರು ತಮ್ಮ ತಮ್ಮ ಊರುಗಳಲ್ಲಿ ಸಂಚಾರಿ ಗ್ರಂಥಾಲಯಕ್ಕೆ ನೆರವು ನೀಡಲಿದ್ದಾರೆ ಎನ್ನುತ್ತಾರೆ ರೋಯ್.
ಕೊಂಕಣಿ ಸಾಹಿತ್ಯ ಕೃತಿಗಳ ಪ್ರಕಟಣೆಯ ಸಂಖ್ಯೆಯಂತೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಅದರಲ್ಲೂ ಮಂಗಳೂರಿನ ಕೆಲವೊಂದು ಮಳಿಗೆಯಲ್ಲಿ ಮಾತ್ರ ಕೊಂಕಣಿ ಪುಸ್ತಕಗಳು ಲಭ್ಯವಾಗುತ್ತಿದೆ. ಆದರೆ ಮಂಗಳೂರು ಬಿಟ್ಟು ಬೇರೆ ಊರಿನವರಿಗಂತೂ ಕೊಂಕಣಿ ಸಾಹಿತ್ಯ ಕೃತಿಗಳು, ಧ್ವನಿ ಸುರುಳಿಗಳು ಸುಲಭದಲ್ಲಿ ಸಿಗುವುದಿಲ್ಲ. ಇಂತಹ ಮೊಬೈಲ್ ಕೊಂಕಣಿ ಬಜಾರ್‌ನಿಂದ ಕೊಂಕಣಿ ಸಾಹಿತಿಗಳ ಜತೆಗೆ ಓದುವವರಿಗೂ ಲಾಭವಾಗಲಿದೆ ಎನ್ನುತ್ತಾರೆ ಕೊಂಕಣಿ ಪುಸ್ತಕ ಪ್ರಕಾಶಕ ವಿಕ್ಟರ್ ಮಥಾಯಸ್. ಟೋಟಲಿ ಸರಕಾರದ ಅಕಾಡೆಮಿಯೊಂದು ವಿನೂತನ ಮಾದರಿಯಲ್ಲಿ ಪುಸ್ತಕ ಮಾರಾಟಕ್ಕೆ ಇಳಿದಿರೋದು ಶ್ಲಾಘನೀಯ ಎನ್ನಬಹುದು.
Thursday, May 8, 2014
ಎಳೆನೀರಿನ ತಿರಿಳಿನ ಐಸ್ ಕ್ರೀಮ್
* ಸ್ಟೀವನ್‌ರೇಗೊ, ದಾರಂದಕುಕ್ಕು
ಕರಾವಳಿಯಲ್ಲಿ ಈಗ ಸಿಕ್ಕಾಪಟ್ಟೆ ಬಿಸಿಲು. ಅದರಲ್ಲೂ ಈ ಬಿಸಿಲಿನ ಬೇಗೆ ತಪ್ಪಿಸಿಕೊಳ್ಳಲು ಎಳೆನೀರು, ಕಲ್ಲಂಗಡಿ ಹಣ್ಣು ,ಕೋಲ್ಡ್ ಡ್ರಿಂಕ್ಸ್‌ಗೆ ಈಗ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ಐಸ್‌ಕ್ರೀಮ್‌ವಂತೂ ಬಿಸಿಲಿಗೆ ತಂಪು ಕೊಡುತ್ತಿದೆ. ಮಂಗಳೂರಿನಲ್ಲಿ ಈಗಾಗಲೇ ಐಸ್‌ಕ್ರೀಮ್ ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಮುಖ್ಯವಾಗಿ ಹ್ಯಾಂಗ್ಯೋ, ಐಡಿಯಲ್ ಹಾಗೂ ನ್ಯಾಚುರಲ್ ಐಸ್‌ಕ್ರೀಮ್‌ಗಳ ಹುಟ್ಟು ಇಲ್ಲಿದೆ.
ಈಗಾಗಲೇ ಈ ಮೂರು ಕಂಪನಿಗಳು ತಮ್ಮ ಆಸ್ತಿತ್ವವನ್ನು ಮಂಗಳೂರಿನಲ್ಲಿ ಮಾತ್ರವಲ್ಲದೇ ದೇಶದ ನಾನಾಕಡೆಗಳಲ್ಲಿ ತಮ್ಮದೇ ಫ್ರಾಂಚೈಸಿಗಳನ್ನು ತೆರೆದುಕೊಂಡಿದೆ. ಇವುಗಳ ಜತೆಗೆ ಸಣ್ಣಪುಟ್ಟ ಐಸ್‌ಕ್ರೀಮ್ ಕಂಪನಿಗಳು ಕರಾವಳಿಯ ಬಿಸಿಲಿಗೆ ತಂಪು ಕೊಡುವಲ್ಲಿ ಕೆಲಸ ಮಾಡುತ್ತಾ ಬರುತ್ತಿದೆ. ಐಸ್‌ಕ್ರೀಮ್‌ನಲ್ಲಂತೂ ನೂರಾರು ವೈರೆಟಿಗಳು ಇದ್ದೇ ಇದೆ. ಕರಾವಳಿಯಲ್ಲಿ ಈಗ ಎಳೆನೀರಿನ ಐಸ್‌ಕ್ರೀಮ್ ಸಖತ್ ಫೇಮಸ್.
ಕರಾವಳಿಯಲ್ಲಿ ಸಿಗುವ ಎಳೆನೀರು ಸೇರಿದಂತೆ ತಮಿಳುನಾಡು, ರಾಜ್ಯದ ಹತ್ತಾರು ಊರುಗಳಿಂದ ಎಳೆನೀರು ತಂದು ಮಂಗಳೂರಿನ ನ್ಯಾಚುರಲ್ ಐಸ್‌ಕ್ರೀಮ್ ಕಂಪನಿ ಇಂತಹ ಐಸ್‌ಕ್ರೀಮ್ ತರುತ್ತಿದೆ. ಮಂಗಳೂರಿನಲ್ಲಿರುವ ನ್ಯಾಚುರಲ್ ಐಸ್‌ಕ್ರೀಮ್ ಔಟ್‌ಲೇಟ್‌ನಲ್ಲೂ ಇಂತಹ ಐಸ್ ಕ್ರೀಮ್ ಸಿಗುತ್ತದೆ. ಇವುಗಳ ಜತೆಗೆ ಇತರ ಐಸ್‌ಕ್ರೀಮ್ ಕಂಪನಿಗಳು ಇದೇ ಮಾದರಿಯ ಐಸ್‌ಕ್ರೀಮ್‌ಗಳನ್ನು ತಯಾರಿಸುತ್ತಿದೆ. ಆದರೆ ನ್ಯಾಚುರಲ್ ಐಸ್‌ಕ್ರೀಮ್ ಕಂಪನಿಯಂತೂ ಬರೀ ಮಂಗಳೂರು ಅಲ್ಲದೇ ದೇಶ- ವಿದೇಶಕ್ಕೂ ಎಳೆನೀರಿನ ತಿರಿಳಿನ ಐಸ್‌ಕ್ರೀಮ್ ರಫ್ತು ಮಾಡುತ್ತಿದೆ.
ಎಳೆನೀರಿನ ಐಸ್ ಕ್ರೀಮ್ ಯಾವ ರೀತಿಯಲ್ಲಿ ಮಾಡಲಾಗುತ್ತದೆ ಎನ್ನುವುದು ಸಾಮಾನ್ಯ ಕುತೂಹಲ. ಈ ಕುರಿತು ನ್ಯಾಚುರಲ್ ಸಂಸ್ಥೆಯ ಮುಖ್ಯಸ್ಥರೊಬ್ಬರು ಹೇಳುವ ಮಾತು ಹೀಗಿದೆ: ಎಳೆನೀರು ಆಯ್ಕೆಯಲ್ಲಿ ವಿಶೇಷವಾದ ಆಸ್ಥೆ ವಹಿಸಲಾಗುತ್ತದೆ. ಮುಖ್ಯವಾಗಿ ತೆಳುವಾದ ಎಳೆನೀರಿನ ತಿರುಳು ಉಂಟೋ ಇಲ್ಲವೋ ಎನ್ನುವುದನ್ನು ಖಾತರಿ ಮಾಡಿಕೊಂಡ ಬಳಿಕವೇ ಎಳೆನೀರು ಆಯ್ಕೆ ನಡೆಯುತ್ತದೆ. ಎಳೆನೀರಿನ ತಿರುಳು ತೆಗೆದ ಬಳಿಕ ಹಾಲು ಸೇರಿಸಲಾಗುತ್ತದೆ. ಸಕ್ಕರೆ ಹಾಗೂ ಫ್ರೆಶ್ ಕ್ರೀಮ್‌ಗಳನ್ನು ಸೇರಿಸಿಕೊಂಡ ಬಳಿಕ ಮಿಕ್ಸಿಂಗ್ ಕೆಲಸ ನಡೆಸಿ ಫ್ರಿಜರ್‌ನಲ್ಲಿ ಇಡಲಾಗುತ್ತದೆ. ಈ ಬಳಿಕ ಎಳೆನೀರಿನ ಐಸ್‌ಕ್ರೀಮ್ ರೆಡಿಯಾಗುತ್ತದೆ.
ಅಂದಹಾಗೆ ನ್ಯಾಚುರಲ್ ಐಸ್‌ಕ್ರೀಮ್ ೧೯೮೪ರಲ್ಲಿ ಮುಂಬಯಿಯಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿತ್ತು. ಈಗ ದೇಶದಲ್ಲಿ ೯೦ಕ್ಕೂ ಅಧಿಕ ಫ್ರಾಂಚೈಸಿಗಳನ್ನು ಹೊಂದಿದೆ. ನ್ಯಾಚುರಲ್ ಐಸ್‌ಕ್ರೀಮ್‌ನಲ್ಲಿ ಎಲ್ಲವೂ ನೈಸರ್ಗಿಕವಾದ ವಸ್ತುಗಳನ್ನೇ ಬಳಸಿಕೊಂಡು ಐಸ್‌ಕ್ರೀಮ್ ತಯಾರಿಸಲಾಗುತ್ತದೆ ಎನ್ನುವುದು ಸಂಸ್ಥೆಯ ಮಾಲೀಕ ಆರ್.ಎಸ್. ಕಾಮತ್ ಅವರ ಮಾತು. ಟೋಟಲಿ ಒಂದ್‌ಸಾರಿ ನ್ಯಾಚುರಲ್ ಐಸ್‌ಕ್ರೀಮ್ ಒಳಗಡೆ ಹೋದಾಗಲೇ ಅಲ್ಲಿನ ವೈರೆಟಿ ಆಫ್ ಐಸ್‌ಕ್ರೀಮ್‌ಗಳು ನಿಮಗೆ ಮೋಡಿ ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಆದರೆ ನ್ಯಾಚುರಲ್‌ನಲ್ಲಂತೂ ಎಳೆನೀರು ತಿರಿಳಿನ ಐಸ್‌ಕ್ರೀಮ್‌ವನ್ನಂತೂ ತಿನ್ನದೇ ವಾಪಸ್ ಬರಬೇಡಿ.
ಸಿಗಡಿ ಫ್ರೈ ತಿನ್ನಲು ಮಂಗಳೂರಿಗೆ ಬನ್ನಿ
* ಸ್ಟೀವನ್ ರೇಗೊ, ದಾರಂದಕುಕ್ಕು
ಸಿಗಡಿಯನ್ನು ತುಪ್ಪದಲ್ಲಿ ಹುರಿದು ತಯಾರಿಸುವ ಖಾದ್ಯ ಮಂಗಳೂರಿನಲ್ಲಿ ಅತೀ ಹೆಚ್ಚು ಜನಪ್ರಿಯ. ಕರಾವಳಿಯ ಪ್ರತಿಯೊಂದು ಮಾಂಸದೂಟ ವಿಭಿನ್ನ ರುಚಿ, ಪರಿಮಳ, ಸ್ವಾದಿಷ್ಟತೆಯನ್ನು ಹೊಂದಿ ಪಾಕ ಪ್ರಪಂಚದಲ್ಲೇ ಅದ್ಭುತ ಎನಿಸಿದೆ. ಸರಳ ಮಾಂಸಹಾರಿ ಅಡುಗೆಯಲ್ಲೂ ಕಂಡುಬರುವ ರುಚಿ ಮಂಗಳೂರಿನ ಮಸಾಲೆಗಿದೆ. ಅಂದಹಾಗೆ ಸಿಗಡಿ ಫ್ರೈ ಚಿಕನ್ ಫ್ರೈಗಿಂತಲೂ ಹೆಚ್ಚು ಜನಪ್ರಿಯ ಖಾದ್ಯವಾಗಿದ್ದು ಕರಾವಳಿಯಲ್ಲಂತೂ ಎಲ್ಲರ ಮನಸ್ಸು ಗೆದ್ದಿದೆ.
ಇದರ ರುಚಿ ಪ್ರತ್ಯೇಕವಾಗಿದ್ದು ಅನ್ನ ಚಪಾತಿ ರೋಟಿ ಹೀಗೆ ಪ್ರತಿಯೊಂದಕ್ಕೂ ಸೈಡ್‌ಡಿಶ್ ಆಗಿ ಮ್ಯಾಚ್ ಆಗುತ್ತದೆ. ಇದನ್ನು ತಯಾರಿಸುವ ವಿಧಾನ ಕೂಡ ಬಹಳ ಸುಲಭ ಎನ್ನುತ್ತಾರೆ ಮಂಗಳೂರಿನ ಸಿಗಡಿ ಫ್ರೈ ಅಡ್ಡೆಗಳಲ್ಲಿ ಒಂದಾದ ಚೇಫ್ಸ್ ನ ಕುಕ್ ನಿಕೋಲ್ ಅವರ ಮಾತು. ಅಂದಹಾಗೆ ಈ ಸಾಂಪ್ರದಾಯಿಕ ಸಿಗಡಿ ಫ್ರೈಗಾಗಿ ಜಂಬೊ ಸಿಗಡಿಗಳೇ ಲಯಾಕ್ಕು ಎನ್ನುವುದು ಅವರ ಮಾತು.
ಇದರ ಜತೆಗೆ ಕರಾವಳಿಯ ಬಹುತೇಕ ಮಾಂಸಹಾರಿ ಹೋಟೆಲ್‌ಗಳಲ್ಲಿ ತಯಾರಾಗುವ ಮೀನಿನ ಹಲವು ಬಗೆಯ ವ್ಯಂಜನಗಳು ರಾಜ್ಯದ ಹೊರಗೂ ಬಹು ಜನಪ್ರಿಯತೆಯನ್ನು ಪಡೆದಿದೆ. ಮಾಂಸಹಾರಿ ಆಹಾರದ ವಿಷಯಕ್ಕೆ ಬಂದಾಗ ಇಲ್ಲಿ ಮಾಂಜಿ, ಅಂಜಲ್, ಸಿಗಡಿ, ಏಡಿ, ಕಾನೆ ಹಾಗೂ ಇನ್ನಿತರ ಹಲವು ಮೀನುಗಳ ನಾನಾ ಅಡುಗೆಗಳು ನೋಡುತ್ತಿದ್ದಂತೆಯೇ ಬಾಯಿ ಚಪ್ಪರಿಸುವಂತೆ ಮಾಡುತ್ತದೆ. ಸೂಜಿ ರವೆಯಲ್ಲಿ ಕರಿದ ಕಾನೆ ಫ್ರೈ ಬಾಯಿಗಿಡುತ್ತಿದ್ದಂತೆ ಕರಗುವಷ್ಟು ಮೆದುವಾಗಿದ್ದರೆ, ಮಾಂಜಿ ತವಾ ಫ್ರೈ, ಸಿಗಡಿ ಗೀ ರೋಸ್ಟ್, ಏಡಿ ಗೀ ರೋಸ್ಟ್, ಕಾನೆ ಮೀನಿನ ಕರಿ ಇತ್ಯಾದಿ ಖಾದ್ಯಗಳು ಬಾಯಲ್ಲಿ ನೀರೂರಿಸುತ್ತವೆ. ಈ ಎಲ್ಲ ಪದಾರ್ಥಗಳಿಗೆ ಬ್ಯಾಡಗಿ ಮೆಣಸಿನ ಮಸಾಲೆ ಸಿಕ್ಕರೆಯಂತೂ ಪದಾರ್ಥ ಸೂಪರ್ ಆಗಿರುತ್ತದೆ.
ಮೀನು ಸಾರಿನ ಜೊತೆ ಮಂಗಳೂರು ಸ್ಪೆಷಲ್ ನೀರುದೋಸೆ, ಅಪ್ಪಂ ಮತ್ತು ಅನ್ನ ಊಟಕ್ಕೆ ಮತ್ತಷ್ಟು ಕಳೆ ನೀಡುತ್ತದೆ. ಒಟ್ಟಾರೆಯಾಗಿ ಕರಾವಳಿ ಪ್ರದೇಶದ ವಿಶೇಷವಾಗಿ ಸಮುದ್ರಾಹಾರವನ್ನು ಸೇವಿಸಲು ಬಯಸುವವರಿಗೆ ಕರಾವಳಿಯ ಮಾಂಸಹಾರಿ ಹೋಟೆಲ್‌ಗಳು ಇಷ್ಟವಾಗುತ್ತದೆ. ತೀರಾ ಇತ್ತೀಚೆಗೆ ಪ್ರಸಿದ್ಧ ಆಂಗ್ಲ ಪತ್ರಿಕೆ ಟೈಮ್ಸ್ ತನ್ನ ರೆಸ್ಟೊರಾಂಟ್ ರಿವೀವ್ ಅಂಕಣದಲ್ಲಿ ಕರಾವಳಿಯ ಮಾಂಸಹಾರಿ ಹೊಟೇಲ್‌ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಉತ್ತಮ ಅಂಕಗಳನ್ನು ನೀಡಿ ಪ್ರಶಂಸಿಸದೆ. ಟೋಟಲಿ ಮೀನಿನ ಊಟವಂದರೆ ಅದು ಕರಾವಳಿಯ ಹೋಟೆಲ್‌ಗಳೇ ದೀ ಬೆಸ್ಟ್ ಎನ್ನುವ ವಿಷ್ಯಾವಂತೂ ಒಪ್ಪಲೇ ಬೇಕು.
ಬಾಲಿವುಡ್ ಅಂಗಳದಲ್ಲಿ ಬಳ್ಳಾರಿ ಗಣಿ
* ಸ್ಟೀವನ್ ರೇಗೊ, ದಾರಂದಕುಕ್ಕು
ಗಣಿಗಾರಿಕೆ ವಿಷ್ಯಾ ಇದು ಬರೀ ಬಳ್ಳಾರಿಗೆ ಮಾತ್ರ ಸೀಮಿತವಲ್ಲ. ಇಡೀ ದೇಶವೇ ಗಣಿಗಾರಿಕೆಯ ಬಗ್ಗೆ ಮಾತನಾಡುತ್ತಿದೆ. ಅದರಲ್ಲೂ ಬಳ್ಳಾರಿಯಲ್ಲಿರುವ ಗಣಿಗಾರಿಕೆಯನ್ನು ಮತ್ತೆ ಕೆದಕುವ ಪ್ರಯತ್ನವನ್ನು ಬಾಲಿವುಡ್ ಅಂಗಳದಲ್ಲಿ ನಿರ್ದೇಶಕರು ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಬಾಲಿವುಡ್ ಅಂಗಳದಲ್ಲಿ ಎರಡು ಸಿನ್ಮಾಗಳು ತೆರೆಗೆ ಬಂದು ಅಪ್ಪಳಿಸಿ ದೊಡ್ಡ ಸುದ್ದಿಮಾಡಿತ್ತು.
ಬಾಲಿವುಡ್‌ನಲ್ಲಿ ೧೯೭೯ರಲ್ಲಿ ತೆರೆಗೆ ಬಂದ ‘ಕಾಲ ಪತ್ತರ್ ’ಹಾಗೂ ೨೦೧೨ರಲ್ಲಿ ಬಂದ ‘ಗ್ಯಾಂಗ್ಸ್ ಆ- ವಾಸೇಪುರ್’ನಲ್ಲಿ ಇದೇ ಗಣಿಗಾರಿಕೆಯ ಕುರಿತು ಪ್ರೇಕ್ಷಕರನ್ನು ಕುಟುಕಿದ ಸಿನ್ಮಾವಾಗಿತ್ತು. ತೀರಾ ಇತ್ತೀಚೆಗೆ ಬಂದ ‘ಗುಂಡೇ ’ಸಿನ್ಮಾ ಕೂಡ ಬಾಕ್ಸಾಫೀಸ್ ಗಲ್ಲಾಪೆಟ್ಟಿಗೆಯನ್ನು ದೋಚಿತ್ತು. ಚಿತ್ರದ ಕತೆ ಹಾಗೂ ನಟನೆಯಿಂದಾಗಿ ಈ ಮೂರು ಸಿನ್ಮಾಗಳು ಬಾಕ್ಸಾಫೀಸ್‌ನ ಲೆಕ್ಕಚಾರವನ್ನು ಉಲ್ಟಾಪಲ್ಟಾ ಮಾಡಿತ್ತು.
ಅಂದಹಾಗೆ ಬಾಲಿವುಡ್‌ನಲ್ಲಿ ಈಗ ಬರುತ್ತಿರುವ ಸಿನ್ಮಾ ಮಾತ್ರ ಕೊಂಚ ಡಿ-ರೆಂಟ್ ಆಗಲಿದೆ. ಇದಕ್ಕಿರುವ ಕಾರಣ ಬಾಲಿವುಡ್ ನಟ ಸುನೀಲ್ ಶೆಟ್ಟಿ. ಕರಾವಳಿಯ ಮೂಲದ ನಟ ಸುನೀಲ್ ಶೆಟ್ಟಿಗೆ ರಾಜ್ಯದಲ್ಲಿರುವ ಗಣಿಗಾರಿಕೆಯ ಕುರಿತು ಅರಿವಿದೆ. ಅದಕ್ಕೂ ಮುಖ್ಯವಾಗಿ ಕರ್ನಾಟಕದ ಗಣಿಗಾರಿಕೆ ಹಾಗೂ ಜಾರ್ಖಂಡ್ ರಾಜ್ಯದ ಗಣಿಗಾರಿಕೆಗಳನ್ನು ಒಟ್ಟಾಗಿ ಸೇರಿಸಿಕೊಂಡು ಸಿನ್ಮಾ ಮಾಡಲಾಗುತ್ತಿದೆ. ಚಿತ್ರದ ನಿರ್ದೇಶಕ ಅಶು ತಾರೀಕಾ ಮೂಲತಃ ಜಾರ್ಖಂಡ್ ರಾಜ್ಯದವರು. ಈ ಕಾರಣಗಳಿಂದ ಎರಡು ರಾಜ್ಯದ ಗಣಿಗಾರಿಕೆ ವಿಷ್ಯಾ ಬಾಲಿವುಡ್ ಅಂಗಳದಲ್ಲಿ ಪ್ರೇಕ್ಷಕರಿಗೆ ಕಾಣಸಿಗಲಿದೆ.
ಗಣಿಗಾರಿಕೆಯ ಕುರಿತು ಬರುತ್ತಿರುವ ಸಿನ್ಮಾಕ್ಕೆ ‘ಕೊಯ್ಲಾಂಚಲ’ ಎನ್ನುವ ಹೆಸರಿಡಲಾಗಿದೆ. ಇದರಲ್ಲಿ ಗಣಿಗಾರಿಕೆ, ರಾಜಕೀಯ, ಕಾರ್ಮಿಕರ ಬವಣೆಯನ್ನು ಚಿತ್ರಿಸಲಾಗುತ್ತದೆ. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಬಾಲಿವುಡ್ ನಟರಾದ ವಿನೋದ್ ಖನ್ನಾ ಹಾಗೂ ಸುನೀಲ್ ಶೆಟ್ಟಿ ಇರಲಿದ್ದಾರೆ ಎನ್ನುವುದು ಸದ್ಯಕ್ಕೆ ಚಿತ್ರತಂಡ ಹೊರಬಿಟ್ಟ ಮಾಹಿತಿ. ಉಳಿದ ಮಾಹಿತಿಗಳನ್ನು ಚಿತ್ರತಂಡ ಶೀಘ್ರದಲ್ಲಿಯೇ ಹೊರಗಿಡುವ ಸಾಧ್ಯತೆಗಳನ್ನು ಹೇಳುತ್ತಿದೆ.
ಚಿತ್ರದ ನಿರ್ದೇಶಕ ಅಶು ಹೇಳುವಂತೆ ‘ ಅಣ್ಣಾ( ಶೆಟ್ಟಿ) ಅವರ ಜತೆಗೆ ಚಿತ್ರದ ಕುರಿತು ಮಾತುಕತೆ ನಡೆದಿದೆ. ಇದರಲ್ಲಿ ಅಣ್ಣಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಐಎಎಸ್ ಅಽಕಾರಿ ಪಾತ್ರದಲ್ಲಿ ಮಿಂಚಲಿದ್ದಾರೆ. ಇದೊಂದು ಸಾಹಸ ಪ್ರಧಾನ ಚಿತ್ರವಾಗಿದೆ. ಚಿತ್ರ ಕತೆ ಕೇಳಿದಾಕ್ಷಣ ತಾನು ನಟಿಸುವುದಾಗಿ ಒಪ್ಪಿಕೊಂಡರು ಎಂದು ಅಶು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಖ್ಯ ಭೂಮಿಕೆಯಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಂಡರೆ ನೆಗೇಟಿವ್ ಶೇಡ್‌ನಲ್ಲಿ ವಿನೋದ್ ಖನ್ನಾ ಕಾಣಿಸುತ್ತಾರೆ. ಈ ಹಿಂದೆ ವಿನೋದ್ ಖನ್ನಾ ಅವರನ್ನು ನೆಗೆಟೀವ್ ಶೇಡ್‌ನಲ್ಲಿ ತೋರಿಸಿದ ದೀವಾನಾ ಪನ್(೨೦೦೧) ಚಿತ್ರ ಕೂಡ ಸಾಕಷ್ಟು ಹೊಗಳಿಕೆಗೆ ಪಾತ್ರವಾಗಿತ್ತು. ಈ ಬಳಿಕ ಅಶು ಅವರ ನಿರ್ದೇಶನದಲ್ಲಿ ವಿನೋದ್ ಖನ್ನಾ ಮತ್ತೊಂದು ಸಲ ನೆಗೆಟೀವ್ ಶೇಡ್‌ನಲ್ಲಿ ಗುರುತಿಸಿಕೊಳ್ಳಲಿದ್ದಾರೆ. ಚಿತ್ರದ ಕತೆಯಿಂದ ಸ್ಪೂರ್ತಿ ಪಡೆದ ಖನ್ನಾ ಅವರು ಚಿತ್ರದಲ್ಲಿ ನಟಿಸಲು ತಾನು ರೆಡಿ ಎಂದರಂತೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅಶು.
ಈ ವರ್ಷದ ಮಧ್ಯಭಾಗದಲ್ಲಿ ಚಿತ್ರದ ಶೂಟಿಂಗ್ ಕೆಲಸಗಳು ಆರಂಭವಾಗಲಿದೆ. ೪೫ ದಿನಗಳ ಒಂದೇ ಶೆಡ್ಯುಲ್‌ನಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ. ಚಿತ್ರದಲ್ಲಿ ಎರಡು ಭಾಗಗಳಲ್ಲಿ ಚಿತ್ರೀಕರಣ ನಡೆಯುತ್ತದೆ. ಒಂದನೇಯದ್ದು ಕರ್ನಾಟಕದ ಬಳ್ಳಾರಿ ಹಾಗೂ ಮತ್ತೊಂದು ಜಾರ್ಖಂಡ್‌ನ ರಾಮಘರ್, ಹಜಾರೀಭಾಗ್, ಅರ್‌ಗದಾದಲ್ಲಿ ಆದರೆ ಮೊದಲು ಎಲ್ಲಿ ಶೂಟಿಂಗ್ ಕೆಲಸ ಆರಮಭವಾಗುತ್ತದೆ ಎನ್ನುವುದು ಸಧ್ಯಕ್ಕೆ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ಕನ್ನಡದಲ್ಲಿ ಬಂದ ಪ್ರಥ್ವಿ:
ರಾಜ್ಯದ ಗಣಿಗಾರಿಕೆಯ ಕುರಿತು ಬೆಳಕು ಚೆಲ್ಲುವಂತಹ ವಿಶಿಷ್ಟ ಚಿತ್ರಗಳಲ್ಲಿ ಒಂದಾದ ‘ಪ್ರಥ್ವಿ’ಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡೀಸಿ ಪಾತ್ರದಲ್ಲಿ ಮಿಂಚಿದ್ದರು. ಇದರಲ್ಲೂ ಗಣಿಗಾರಿಕೆ, ರಾಜಕೀಯ , ಕಾರ್ಮಿಕರ ಸಮಸ್ಯೆ ಎಲ್ಲವನ್ನು ಕೊಡುವಲ್ಲಿ ಚಿತ್ರದ ನಿರ್ದೇಶಕರು ಗೆದ್ದುಕೊಂಡಿದ್ದರು. ಈಗ ಇಂತಹದ್ದೇ ಕತೆಯನ್ನು ಇಟ್ಟುಕೊಂಡು ಬಾಲಿವುಡ್‌ನಲ್ಲಿ‘ಕೊಯ್ಲಾಂಚಲ’ ಬರುತ್ತಿದೆಯಾ ಎನ್ನುವ ಅನುಮಾನಗಳು ಕಾಡುತ್ತಿದೆ. ಆದರೆ ಬಾಲಿವುಡ್‌ನಲ್ಲಿ ಬರಲಿರುವ ಈ ಚಿತ್ರವನ್ನು ನೋಡಿದ ಬಳಿಕವಷ್ಟೇ ನಿಖರವಾಗಿ ಹೇಳಿಬಿಡಬಹುದು ಅಲ್ವಾ..? ಚಿತ್ರಬರುವರೆಗೆ ಕಾಯಬೇಕಾಗುತ್ತದೆ ಎನ್ನುವುದು ಪ್ರೇಕ್ಷಕ ಮಹಾಪ್ರಭುಗಳ ಮಾತು.
ಬಾಲಿವುಡ್‌ನಲ್ಲಿ ತಂದೆ ಮಗನ ಜುಗಲ್‌ಬಂಧಿ ಹವಾ ಎಬ್ಬಿಸುತ್ತಿರುವ ಹವಾಯಿ
* ಸ್ಟೀವನ್ ರೇಗೊ, ದಾರಂದಕುಕ್ಕು
ಸ್ಕೇಟಿಂಗ್ ಕ್ರೀಡೆಯನ್ನು ಸಿನ್ಮಾ ಮಾಡುವ ಯೋಜನೆ, ಯೋಚನೆ ಹಾಲಿವುಡ್ ಇರಲಿ ಬಾಲಿವುಡ್ ಅಂಗಳದಲ್ಲೂ ಇರಲಿಲ್ಲ. ಆದರೆ ಬಾಲಿವುಡ್‌ನಲ್ಲಿ ನಿಧಾನವಾಗಿ ಟ್ರೇಲರ್ ಮೂಲಕ ಹವಾ ಎಬ್ಬಿಸುತ್ತಿರುವ ‘ಹವಾ ಹವಾಯಿ’ ಸಿನ್ಮಾವಂತೂ ಸ್ಕೇಟಿಂಗ್ ಕ್ರೀಡೆಯನ್ನು ಪ್ರಧಾನವಾಗಿಟ್ಟುಕೊಂಡು ಥಿಯೇಟರ್‌ಗೆ ಬರುವ ತಿಂಗಳ ಆರಂಭದಲ್ಲಿ ಲಗ್ಗೆ ಹಾಕುತ್ತಿದೆ.
ಬಾಲಿವುಡ್‌ನಲ್ಲಿ ಬರುವ ಎಲ್ಲ ಚಿತ್ರಗಳಂತೆ ಈ ಚಿತ್ರ ಕೂಡ ಇರಲಿದೆ ಎನ್ನುವ ಕಲ್ಪನೆಯನ್ನು ನಿಮ್ಮ ತಲೆಯೊಳಗೆ ತಂದುಹಾಕಿದರೆ ಅದು ನಿಮ್ಮ ತಪ್ಪು ಕಲ್ಪನೆ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಈ ಚಿತ್ರ ವಿಶ್ವದಲ್ಲಿಯೇ ಮೊದಲ ಪ್ರಯತ್ನ. ಇಲ್ಲಿವರೆಗೂ ಅಥ್ಲೀಟ್, ಕ್ರಿಕೆಟ್, ಹಾಕಿ, ಬಾಕ್ಸಿಂಗ್ ಎಲ್ಲವನ್ನು ಸಿನ್ಮಾದಲ್ಲಿ ತೋರಿಸಿಕೊಂಡು ಪ್ರೇಕ್ಷಕರನ್ನು ಮೋಡಿ ಮಾಡಲಾಗಿದೆ. ಆದರೆ ಸ್ಕೇಟಿಂಗ್ ಎನ್ನುವ ಕ್ರೀಡೆಯನ್ನು ಒಂದು ವಿಭಿನ್ನ ರೀತಿಯಲ್ಲಿ ತೋರಿಸುವ ಕೆಲಸ ಹವಾ ಹವಾಯಿಯಲ್ಲಿ ನಡೆದಿದೆ.
ಈ ಹಿಂದೆ ಬಾಲಿವುಡ್ ಅಂಗಳದಲ್ಲಿ ವಿಶೇಷ ಮನ್ನಣೆಗಳಿಸಿದ ‘ಸ್ಟ್ಯಾನ್ಲಿ ಕಾ ಡಬ್ಬಾ’ ಸಿನ್ಮಾವನ್ನು ನಿರ್ದೇಶನ ಮಾಡಿದ ಅಮೂಲ್ ಗುಪ್ತೆ ಈ ಸಿನ್ಮಾದ ನಿರ್ದೇಶಕರು. ‘ಸ್ಟ್ಯಾನ್ಲಿ ಕಾ ಡಬ್ಬಾ’ ಚಿತ್ರದಲ್ಲಿ ನಟಿಸಿದ ಪಾರ್ತೋ ಗುಪ್ತೆ ಈ ಚಿತ್ರದ ಲೀಡ್ ನಟ. ಈ ಹಿಂದಿನ ಚಿತ್ರದಲ್ಲಿ ಪಾರ್ತೋ ನಟನೆಯನ್ನು ಬಾಲಿವುಡ್ ಮಂದಿ ಬಹಳಷ್ಟು ಹೊಗಳಿದ್ದರು. ಅದಕ್ಕೂ ಮುಖ್ಯವಾಗಿ ಪಾತ್ರಕ್ಕಾಗಿ ನಾನಾ ಪ್ರಶಸ್ತಿಗಳು ಕೂಡ ಬಂದಿತ್ತು. ಬಹಳ ಸಣ್ಣ ಬಜೆಟ್‌ನಲ್ಲಿ ಸಿದ್ಧವಾದ ಈ ಚಿತ್ರ ಬರೀ ಎರಡು ವಾರದಲ್ಲಿ ೩.೫ ಕೋಟಿ ರೂ ವ್ಯವಹಾರ ಮಾಡಿತ್ತು. ಸ್ಟ್ಯಾನ್ಲಿ ಜತೆಗೆ ಐದು ಮಂದಿ ಗೆಳೆಯರು, ಒಂದು ಶಾಲೆ, ಪುಟ್ಟ ಹೋಟೆಲ್‌ನಲ್ಲಿ ಪೂರ್ತಿ ಚಿತ್ರ ಸಿದ್ಧವಾಗಿತ್ತು. ಚಿತ್ರದ ನಿರ್ದೇಶಕರು ಪಾರ್ತೋ ಅವರ ತಂದೆಯಾಗಿರುವ ಕಾರಣ ಚಿತ್ರದ ಕೆಮಸ್ಟಿ ತುಂಬಾ ಚೆನ್ನಾಗಿ ವರ್ಕ್ ಔಟ್ ಆಗಿತ್ತು. ಈಗ ಇಂತಹ ತಂದೆ- ಮಗ ಮತ್ತೆ ಜತೆಗೂಡಿದ್ದಾರೆ. ಸ್ಕೇಟಿಂಗ್ ಎನ್ನುವ ಕ್ರೀಡೆಯನ್ನು ತಳಮಟ್ಟದಲ್ಲೂ ಕ್ಲಿಕ್ ಮಾಡಲು ಈ ಚಿತ್ರ ವರವಾಗಲಿದೆ.
ಹವಾ ಹವಾಯಿ ವಿಭಿನ್ನ ಕತೆ:
‘ಹವಾ ಹವಾಯಿ’ ಎನ್ನುವ ಪದ ಈ ಹಿಂದೆ ಮಿಸ್ಟರ್ ಇಂಡಿಯಾ ಸಿನ್ಮಾದಲ್ಲಿ ಶ್ರೀದೇವಿ ಬಳಸಿದ ಮಾತು. ಆದರೆ ಈ ಚಿತ್ರದಲ್ಲಿ ಮಾತ್ರ ಸ್ಕೇಟಿಂಗ್ ಕಲಿಯುವ ಕನಸ್ಸು ಹೊತ್ತ ಬೀದಿ ಬದಿಯ ಹುಡುಗ ಯಾವ ರೀತಿಯಲ್ಲಿ ಈ ಕ್ರೀಡೆಯನ್ನು ತನ್ನ ಬದುಕಿನಲ್ಲಿ ತೆಗೆದುಕೊಳ್ಳುತ್ತಾನೆ. ಅದಕ್ಕೆ ಬೆಂಬಲ ನೀಡುವ ಕೋಚ್ ಪಾತ್ರದಲ್ಲಿ ನಟ ಸಖೀಬ್ ಸಲಿಂ ಪಡುವ ಕಷ್ಟಗಳು. ಪಾರ್ತೊನ ಗೆಳೆಯರು ಅವನನ್ನು ಸ್ಕೇಟಿಂಗ್ ಸ್ಟಾರ್ ಮಾಡುವ ಮಜಬೂತಾದ ಕತೆ ಚಿತ್ರದಲ್ಲಿ ಕಾಣಸಿಗಲಿದೆ.
ಚಿತ್ರವನ್ನು ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಾಣ ಮಾಡುತ್ತಿದೆ. ಅಮೂಲ್ ಗುಪ್ತೆ ಮೊದಲ ಬಾರಿಗೆ ಕಮರ್ಷಿಯಲ್ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ಶ್ರೀದೇವಿ ಕೂಡ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಹರಿದಾಡಿತ್ತು. ಆದರೆ ಶ್ರೀದೇವಿ ಚಿತ್ರದ ಕುರಿತು ಅಷ್ಟೊಂದು ಸಿರೀಯಸ್ ರೀತಿಯಲ್ಲಿ ಇಲ್ಲದೇ ಹೋದ ಕಾರಣ ಚಿತ್ರದಲ್ಲಿರುವ ಒಂದು ಪಾತ್ರವನ್ನು ನಟಿಯೊಬ್ಬರು ಮಾಡುತ್ತಿದ್ದಾರೆ. ಅಮೂಲ್ ಗುಪ್ತೆ ಈ ಚಿತ್ರಕ್ಕೆ ಒಂದು ಹಾಡನ್ನು ಬರೆದಿರುವ ಜತೆಗೆ ಹಾಡಿದ್ದಾರೆ. ಉಳಿದ ಹಾಡುಗಳನ್ನು ಹಿತೇಶ್ ಸೋನಿಕ್ ಮಾಡಿದ್ದಾರೆ. ಈ ಚಿತ್ರದ ಕತೆ ಹಾಗೂ ನಿರ್ದೇಶನ ಅಮೂಲ್ ಗುಪ್ತೆ ಮಾಡಿರೋದು ಮತ್ತಷ್ಟೂ ಹೈಫ್‌ಗೆ ಕಾರಣವಾಗಿದೆ. ಈ ಹಿಂದೆ ಅಮೂಲ್ ಬರೆದ ತಾರೇ ಜಮೀನ್ ಪರ್ ಸಿನ್ಮಾ ಬಾಲಿವುಡ್ ಅಂಗಳದಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತ್ತು ಎನ್ನುವ ನೆನಪು ಈಗಲೂ ಪ್ರೇಕ್ಷಕರಲ್ಲಿ ಉಳಿದುಕೊಂಡಿದೆ.
ಕುಡ್ಲದ ಗೋಳಿಬಜೆಗೆ ಇಂದ್ರಭವನ್
* ಸ್ಟೀವನ್ ರೇಗೊ, ದಾರಂದಕುಕ್ಕು
ಮಂಗಳೂರಿನ ಇಂದ್ರಭವನ್ ಹೋಟೆಲ್‌ನ ಪರಿಚಯ ಬಹಳಷ್ಟು ಮಂದಿಗೆ ಗೊತ್ತಿದೆ. ಕಾರಣ ಇಷ್ಟೇ ಕಳೆದ ೬೪ ವರ್ಷಗಳಿಂದ ಈ ಹೋಟೆಲ್ ಮಂಗಳೂರಿನ ಜನತೆಯ ಹೊಟ್ಟೆ ತುಂಬಿಸುತ್ತಾ ಕಾಲ ಕಳೆಯುತ್ತಿದೆ. ಇಂದ್ರಭವನ್ ಹೋಟೆಲ್‌ನ ಕಟ್ಟಡ ಕಂಡಾಗಲೇ ಅದೊಂದು ಹಳೆಯ ಹೋಟೆಲ್ ಎನ್ನುವ ಮಾಹಿತಿ ರವಾನೆಯಾಗುತ್ತದೆ. ಆದರೆ ತಿಂಡಿ-ತಿನಸುಗಳ ವಿಚಾರದಲ್ಲಂತೂ ಇಂದ್ರಭವನ ತನ್ನ ಗತ್ತು- ಗೈರತ್ತುವನ್ನು ಕಳೆದುಕೊಂಡಿಲ್ಲ.ಈಗಲೂ ಇಂದ್ರಭವನ ಹೋಟೆಲ್‌ಗೆ ಹಳೆಯ ಗಿರಾಕಿಗಳು ಹುಡುಕಿಕೊಂಡು ಬರುತ್ತಾರೆ. ಉಳಿದಂತೆ ಹೊಸ ಹೊಸ ಗ್ರಾಹಕರನ್ನು ಕೂಡ ಸೆಳೆಯುವಲ್ಲಿ ಇಂದ್ರಭವನ ತನ್ನ ಹೆಸರನ್ನು ಉಳಿಸಿಕೊಂಡಿದೆ.
ಇಂದ್ರಭವನ ಯಾಕೆ ತನ್ನ ಖ್ಯಾತಿ ಉಳಿಸಿಕೊಂಡಿದೆ ಎನ್ನುವುದಕ್ಕೆ ಎರಡು ಮುಖ್ಯ ಕಾರಣಗಳನ್ನು ಗ್ರಾಹಕರು ಹಾಗೂ ಹೋಟೆಲ್ ಮಾಲೀಕರು ಹೇಳುತ್ತಾರೆ. ಮಂಗಳೂರಿನ ನಗರ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳನ್ನು ಲೆಕ್ಕಹಾಕುತ್ತಾ ಹೋದರೆ ಈ ಹೋಟೆಲ್‌ನಲ್ಲಿ ತಿಂಡಿ- ತಿನಸುಗಳಿಗೆ ಬೆಲೆ ಕಡಿಮೆ. ಆದರೆ ಗುಣಮಟ್ಟದಲ್ಲಂತೂ ರಾಜಿ ಇಲ್ಲ. ಇದರ ಜತೆಗೆ ದಿನಕ್ಕೊಂದು ಬಗೆಯ ದೋಸೆ ಐಟಂಗಳು ಇಲ್ಲಿ ಲಭ್ಯ. ಮಸಾಲೆ ದೋಸೆ, ಸಾದಾ ದೋಸೆ ದಿನನಿತ್ಯನೂ ದೊರೆಯುತ್ತದೆ. ಆದರೆ ಮಧ್ಯಾಹ್ನ ನಂತರವಂತೂ ದೋಸೆ ಐಟಂಗಳೇ ಹೈಲೇಟ್.
ಒಂದೊಂದು ದಿನನೂ ಒಂದೊಂದು ಬಗೆಯ ದೋಸೆಗಳನ್ನು ಮಾಡಿ ಗ್ರಾಹಕರಿಗೆ ಕೊಡಲಾಗುತ್ತದೆ. ಹೋಟೆಲ್ ಟೈಮಿಂಗ್ಸ್ ನಲ್ಲೂ ಇಂದ್ರಭವನ್‌ನಲ್ಲಿ ವಿಶೇಷತೆ ಇದೆ. ಬೆಳಗ್ಗೆ ೬ರಿಂದ ಮಧ್ಯಾಹ್ನ ೧ರ ವರೆಗೆ ಹೋಟೆಲ್ ತೆರೆದಿರುತ್ತದೆ. ಈ ಬಳಿಕ ಮಧ್ಯಾಹ್ನ ೩ ರಿಂದ ಸಂಜೆ ೭ ಗಂಟೆಯ ವರೆಗೆ ಇಂದ್ರಭವನನಲ್ಲಿ ತಿಂಡಿ- ತಿನಸುಗಳನ್ನು ತಿನ್ನಬಹುದು. ಇಂದ್ರಭವನದಲ್ಲಿ ಈ ಹಿಂದೆ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಇತ್ತು. ಈಗವಂತೂ ಊಟದ ವ್ಯವಸ್ಥೆ ಇಲ್ಲ. ಆದರೆ ಮಂಗಳೂರಿನ ನಗರ ಹೋಟೆಲ್‌ಗಳಲ್ಲಿ ಸಿಗದ ತಿಂಡಿ ತಿನಸುಗಳಂತೂ ಇಲ್ಲೇ ಇದ್ದೇ ಇದೆ. ವಿಶೇಷವಾಗಿ ಸೌತೆಕಾಯಿ, ಕೊತ್ತಂಬರಿ ಸೊಪ್ಪು, ಕ್ಯಾಪ್ಸಿಕಮ್, ಪಾಲಕ್, ಬಾಳೆಹಣ್ಣು ದೋಸೆಯನ್ನು ತಯಾರಿಸಲಾಗುತ್ತದೆ. ಸ್ಪ್ರಿಂಗ್ ಆನಿಯನ್ (ಈರುಳ್ಳಿ) ದೋಸೆ, ರಾಗಿ ರೊಟ್ಟಿ ಮತ್ತು ಅಕ್ಕಿ ರೊಟ್ಟಿಗಳು ದೋಸೆ ವಿಭಾಗದಲ್ಲಿ ವಿಶಿಷ್ಟವೆನಿಸುತ್ತದೆ. ಅಲ್ಲದೆ ಹೆಸರು ಬೇಳೆ ಉಸ್ಲಿ, ಸೇಮಿಗೆ ಬಾತ್, ಬಾಳೆಹಣ್ಣಿನ ಬೋಂಡ, ಬಿಸ್ಕೆಟ್ ರೊಟ್ಟಿ, ಪತ್ರೊಡೆ, ಮೂಡೆ ಮತ್ತು ತೊವ್ವೆ, ಕೊಟ್ಟಿಗೆ, ಸೇಮಿಗೆ, ಕಾಯಿಹಾಲು, ಕಟ್ಲೆಟ್, ಗೋಳಿಬಜೆ, ಬಾಳೆಹಣ್ಣು ಪೋಡಿ, ಕ್ಯಾಪ್ಸಿಕಮ್ ಪೋಡಿ, ಗುಳ್ಳ ಪೋಡಿ, ಅವಲಕ್ಕಿ ಕಡ್ಲೆ, ಸಜ್ಜಿಗೆ ಬಜಿಲು (ಅವಲಕ್ಕಿ ಸಜ್ಜಿಗೆ)ಯೂ ಲಭ್ಯವಿದೆ.
ಗೋಳಿಬಜೆಯಲ್ಲಿ ನಂಬರ್ ವನ್:
ತೀರಾ ಇತ್ತೀಚೆಗೆ ಖಾಸಗಿ ರೇಡಿಯೋ ವಾಹಿನಿಯೊಂದು ಮಂಗಳೂರು ನಗರದ ಹೋಟೆಲ್‌ಗಳ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಗ್ರಾಹಕರು ಯಾವ ಹೋಟೆಲ್‌ನಿಂದ ಯಾವ ತಿಂಡಿಯನ್ನು ಹೆಚ್ಚು ಇಷ್ಟ ಪಡುತ್ತಾರೆ ಎನ್ನುವ ಪ್ರಶ್ನೆ ಕೇಳಿ ಉತ್ತರ ಹುಡುಕಲು ಪ್ರಯತ್ನ ಮಾಡಿತ್ತು. ಮಂಗಳೂರಿನ ಇಂದ್ರಭವನ್ ಹೋಟೆಲ್‌ವಂತೂ ಗೋಳಿಬಜೆಯಲ್ಲಿ ನಂಬರ್ ಒಂದು ಪಟ್ಟವನ್ನು ಪಡೆದುಕೊಂಡಿತು.
ಅಂದಹಾಗೆ ಗೋಳಿಬಜೆಯನ್ನು ಹೇಗೆ ತಯಾರಿಸುತ್ತಾರೆ ಎನ್ನುವ ಕುರಿತು ಇಂದ್ರಭವನ್‌ನ ಹೋಟೆಲ್ ಮಾಲೀಕರಾದ ಪ್ರಕಾಶ್ ಭಟ್ ಹೇಳುವುದು ಹೀಗೆ: ನಾಲ್ಕು ಮಂದಿಯ ಲೆಕ್ಕಚಾರದಲ್ಲಾದರೆ ಬೇಕಾಗುವ ವಸ್ತುಗಳು : ೧/೪ ಕೆಜಿ ಮೈದಾ ಹಿಟ್ಟು, ಸ್ವಲ್ಪ ಹುಳಿ ಮೊಸರು ಅಥವಾ ಮಜ್ಜಿಗೆ, ಕರಿಬೇವಿನಸೊಪ್ಪು (೫ ಎಸಳು), ಹಸಿಶುಂಠಿ (ಒಂದು ಸಣ್ಣ ತುಂಡು)
೪ ಹಸಿಮೆಣಸು (ಸ್ವಲ್ಪ ಖಾರ ಹೆಚ್ಚು ಬೇಕಾದವರು ಇನ್ನೆರಡು ಮೆಣಸು ಹಾಕಿಕೊಳ್ಳಬಹುದು)
ಚಿಟಿಕೆಯಷ್ಟು ಅಡುಗೆ ಸೋಡಾ, ಕರಿಯಲು ಎಣ್ಣೆ, ಎರಡೂವರೆ ಟೀ ಚಮಚ ಉಪ್ಪು ಇದ್ದಾರೆ ಗೋಳಿ ಬಜೆ ಸಿದ್ಧವಾಯಿತು ಎನ್ನುತ್ತಾರೆ ಅವರು.
ಕರಿಬೇವು, ಹಸಿಮೆಣಸು ಮತ್ತು ಹಸಿಶುಂಠಿಯನ್ನು ಸಣ್ಣಗೆ ಕತ್ತರಿಸಿಕೊಂಡು ಹಿಟ್ಟನ್ನು ಕಲೆಸುವ ಯಾವುದಾದರೂ ಪಾತ್ರಕ್ಕೆ (ಬಾಣಲಿ ರೀತಿಯ ಅಗಲ ಪಾತ್ರವಿದ್ದರೆ ಸೂಕ್ತ) ಹಾಕಿಕೊಳ್ಳಿ. ಅದಕ್ಕೆ ಉಪ್ಪು, ಮೈದಾ ಹಿಟ್ಟು ಮತ್ತು ಸೋಡಾ ಬೆರೆಸಿ. ನಂತರ ಮಜ್ಜಿಗೆ ಹಾಕಿ ಸ್ವಲ್ಪ ಹದವಾಗಿ ಕಲೆಸಿಕೊಳ್ಳಿ. ಕಲೆಸಿದ ಹಿಟ್ಟು ಬಹಳ ನೀರಾಗಿ ಅಥವಾ ಬಹಳ ಗಟ್ಟಿಯಾಗಿರಬಾರದು. ಒಂದು ಮಧ್ಯದ ಹದವಿರಬೇಕು. ನಂತರ ಒಂದೈದು ನಿಮಿಷ ಬಿಡಿ.
ಇಷ್ಟರ ಮಧ್ಯೆ ಹೇಗಿದ್ದರೂ ಒಲೆ ಹೊತ್ತಿಸಿ, ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟಿರುತ್ತೀರಾ. ಅದು ಕಾದಾಗ, ಈ ಹಿಟ್ಟನ್ನು ಮತ್ತೊಮ್ಮೆ ಕಲೆಸಿಕೊಂಡು ಬಜ್ಜಿ ಬಿಡುವಂತೆ ಬೆರಳಿನಲ್ಲಿ ಹಿಟ್ಟನ್ನು ಎಳೆದುಕೊಂಡು ಉಂಡೆ ಉಂಡೆಯಂತೆ ಎಣ್ಣೆಗೆ ಬಿಡುವುದು. ಕೆಂಪಾದ ಮೇಲೆ ತೆಗೆಯುವುದು. ಇದಕ್ಕೆ ಕಾಯಿ ಚಟ್ನಿ ಇದ್ದರೆ ತಿನ್ನಲು ರುಚಿ.
ಮನೆಯಲ್ಲಿ ಗೋಳಿಬಜೆ ತಯಾರಿಸುವಾಗ ಕೆಲವೊಂದು ಟಿಪ್ಸ್‌ಗಳನ್ನು ಭಟ್ಟರು ಹೇಳುತ್ತಾರೆ. ಕೇಳಿ.... ಮನೆಯಲ್ಲಿ ಮಾಡುವಾಗ ಸ್ವಲ್ಪ ಕಡಿಮೆಯೇ ಸೋಡಾ ಹಾಕಿ. ಇದರಿಂದ ಏನೂ ಆಗದು. ಬಜ್ಜಿ ಸ್ವಲ್ಪ ಗಟ್ಟಿ ಎನಿಸುವುದು ಹೌದು. ಆದರೆ ಇದರಿಂದ ತಿನ್ನುವಾಗ ಸುಸ್ತು ಎನಿಸಲಾರದು. ಹಿಟ್ಟು ನೀರಾದರೆ ಬಜ್ಜಿ ಎಣ್ಣೆಯನ್ನು ಹೆಚ್ಚು ಕುಡಿಯುತ್ತದೆ., ಸೋಡಾ ಜಾಸ್ತಿ ಹಾಕಿದರೆ ಬಜ್ಜಿ ಬಹಳ ಮೃದುವಾಗಿ ಬರುತ್ತದೆ. ಆದರೆ, ಹೆಚ್ಚು ಎಣ್ಣೆಯನ್ನು ಕುಡಿಯುತ್ತದೆ. ಅಲ್ಲದೇ ಸ್ವಲ್ಪ ತಣ್ಣಗಾದ ಕೂಡಲೇ ರಬ್ಬರ್ ಮಾದರಿ ಬಜ್ಜಿ ಆಗುತ್ತದೆ. ಇದಕ್ಕೆ ಕೆಲವರು ಜೀರಿಗೆ ಹಾಕುವುದುಂಟು. ಆದರೆ ಅದನ್ನು ಹಾಕಿದರೆ ಸ್ವಲ್ಪ ಕಹಿ ಎನಿಸುತ್ತದೆ ಎನ್ನುತ್ತಾರೆ ಪ್ರಕಾಶ್ ಭಟ್ಟರು. ಟೋಟಲಿ ಒಂದ್ ಸಾರಿ ಮಂಗಳೂರಿಗೆ ಬಂದಾಗ ಇಂದ್ರಭವನ್‌ನಲ್ಲಿ ಕೂತು ಒಂದು ಪ್ಲೇಟ್ ಗೋಳಿಬಜೆ ತಿಂದು ನೋಡಿ. ಮತ್ತೇ ತಪ್ಪದೇ ಗೋಳಿಬಜೆಯನ್ನು ತಿನ್ನಲು ಇಲ್ಲಿಗೆ ಬಂದೇ ಬರುತ್ತೀರಿ.
Subscribe to:
Posts (Atom)