Friday, July 26, 2013

ಭಟ್ಟರದು ಹರಿದು ಹೋದ ಪೋಸ್ಟರ್ ಕತೆ

ಈಗ ಕಾಲ ಬದಲಾಗುತ್ತಿದೆ. ಎಲ್ಲ ಕೆಲಸಕ್ಕೂ ಮೆಷಿನ್‌ಗಳು ಬಂದು ಬಿಟ್ಟಿದೆ. ಆದರೆ ನನ್ನ ಕೆಲಸಕ್ಕಂತೂ ಯಾವುದೇ ಯಂತ್ರಗಳು ಬರಲು ಸಾಧ್ಯವಿಲ್ಲ. ಒಂದು ವೇಳೆ ಬಂದು ನಿಂತರೆ ಕೂಡ ಅವರಿಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಮಾರಾಯ್ರೆ. ಅಂದಹಾಗೆ ನನ್ನ ವೃತ್ತಿ ಉರೂರು ಸುತ್ತಾಡಿಕೊಂಡು ಸಿನಿಮಾಗಳ ಪೋಸ್ಟರ್‌ಗಳನ್ನು ಅಂಟಿಸುವುದು. ಯಾವ ಗೋಡೆಯಲ್ಲಿ ಯಾವ ಮಾದರಿಯ ಪೋಸ್ಟರ್, ಹೇಗೆ ಅಂಟಿಸಿದರೆ ಜನರು ಗುರುತಿಸುತ್ತಾರೆ ಮೊದಲಾದ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ಈ ಕಾ
ರಣದಿಂದ ಕಳೆದ ೪೦ ವರ್ಷಗಳಿಂದ ಇದೇ ನನ್ನ ಹೊಟ್ಟೆ ತುಂಬಿಸುವ ವೃತ್ತಿ. ಅದನ್ನು ಬಿಟ್ಟರೆ ನನಗೆ ಬೇರೆ ಕೆಲಸ ಗೊತ್ತಿಲ್ಲ. ಅಂದಹಾಗೆ ನನ್ನೂರು ಮಂಗಳೂರು. ಹೆತ್ತವರು ಪ್ರೀತಿಯಿಂದ ಬಾಲ್ಯದಲ್ಲಿ ಕರೆಯುತ್ತಿದ್ದ ಹೆಸರು ‘ವೆಂಕು ’ ಮತ್ತೆ ಶಾಲೆಗೆ ಬಂದಾಗ ಅಲ್ಲಿನ ರಿಜಿಸ್ಟ್ರಾರ್‌ನಲ್ಲಿ ಕಾಣಿಸಿಕೊಂಡದ್ದು ಬಿ. ವೆಂಕಟೇಶ್ ಭಟ್ಟ . ಆದರೆ ಈ ಎರಡು ಹೆಸರುಗಳು ಈಗ ಉಳಿದಿಲ್ಲ. ಈಗ ಉಳಿದಿರೋದು ಪೋಸ್ಟರ್ ಭಟ್ಟರು. ಇದೇ ಹೆಸರಿನಲ್ಲೇ ಎಲ್ಲರೂ ಕರೆಯುವುದು. ನನ್ನ ಬದುಕಿನ ಮೊದಲ ಸೋಲು ಕಾಣಿಸಿಕೊಂಡಿದ್ದು ಬಾಲ್ಯದಲ್ಲಿ...ಅದರಲ್ಲೂ ನಾನು ನಾಲ್ಕನೇ ತರಗತಿಯಲ್ಲಿರುವಾಗ ವಿದ್ಯಾರ್ಥಿಯೊಬ್ಬನ ಹೆತ್ತವರು ಹಣ ಕೊಟ್ಟರು ಎನ್ನುವ ಕಾರಣಕ್ಕೆ ನನ್ನನ್ನು ಫೇಲ್ ಮಾಡಿ ಅವನನ್ನು ಪಾಸ್ ಮಾಡಿದ್ರು.. ನನ್ನನ್ನು ಅದೇ ತರಗತಿಯಲ್ಲಿ ಕುಳ್ಳರಿಸಿದರು. ಈ ಕುರಿತು ಯಾರು ಕೂಡ ಕೇಳಿಲ್ಲ. ನಾನಾ ತೀರಾ ಬಡ ಕುಟುಂಬದಿಂದ ಬಂದವ ಆದರೂ ನನ್ನ ತಂದೆಯಂತೂ ಸಿಕ್ಕಾಪಟ್ಟೆ ಸ್ವಾಭಿಮಾನಿ. ಈ ವಿಚಾರ ಅವರಿಗೆ ತಿಳಿಯುತ್ತಿದ್ದಂತೆ ಅಲ್ಲಿಂದ ಬಿಡಿಸಿ ಮತ್ತೊಂದು ಶಾಲೆಗೆ ಭರ್ತಿ ಮಾಡಿದರು. ಅಲ್ಲೂ ನಾನು ಬಡವ ಎನ್ನುವ ಕಾರಣಕ್ಕೆ ಕಿರುಕುಳ ಆರಂಭವಾಯಿತು. ಹೀಗೇ ಮತ್ತೊಂದು ಶಾಲೆಗೆ ಭರ್ತಿಯಾದೆ. ಆದರೆ ಏಳರ ಘಟ್ಟ ಏರುತ್ತಿದ್ದಂತೆ ಫೇಲ್ ಆಗಿ ಹೋದೆ. ಇದು ನನ್ನ ಸೋಲಿನ ಮೊದಲ ಅಧ್ಯಾಯ ಎನ್ನುವುದು ನನಗೆ ತಿಳಿಯದೇ ಹೋದೆ. ನನ್ನ ತಂದೆಗೆ ಐವರು ಮಕ್ಕಳು ತಮ್ಮ ಪಾಡಿಗೆ ಕಲಿತು ಈಗ ಮಂಗಳೂರಿನ ಅಸುಪಾಸಿನಲ್ಲಿ ಬದುಕು ಕಟ್ಟುತ್ತಿದ್ದಾರೆ. ಆದರೆ ನಾನು ಕಲಿಯದೇ ತಂದೆ ಜತೆಯಲ್ಲಿ ಸೇರಿಕೊಂಡೆ. ಅಂದಹಾಗೆ ಅವರೇನು ದೊಡ್ಡ ವೃತ್ತಿಯಲ್ಲಿ ಇರಲಿಲ್ಲ. ಊರೂರು ಸುತ್ತಾಡಿಕೊಂಡು ಅಡುಗೆ ಭಟ್ಟರ ಕೆಲಸ ಮಾಡುತ್ತಿದ್ದರು. ನಾನು ಶಾಲೆ ಬಿಟ್ಟಾಗ ಮಂಗಳೂರಿನ ಬಂದರಿನ ಹತ್ತಿರ ಪುಟ್ಟ ಹೋಟೆಲ್ ತೆರೆದರು. ನಾನು ಅಲ್ಲಿಯೇ ಸೇರಿಕೊಂಡೆ. ಕೆಲವು ಸಮಯ ಹೋಟೆಲ್ ವಹಿವಾಟು ಸಾಧಾರಣ ಮಟ್ಟಿಗೆ ನಡೆಯುತ್ತಿತ್ತು. ಆದರೆ ಹೋಟೆಲ್ ವ್ಯವಹಾರದಲ್ಲಿ ನಮಗೆ ಸಾಕಷ್ಟು ಅನುಭವ ಇರಲಿಲ್ಲ. ಕಾರ್ಮಿಕರೇ ನಮ್ಮನ್ನು ಬೀದಿಗೆ ತಂದರು. ತಂದೆ ಮತ್ತೆ ಅಡುಗೆ ಭಟ್ಟರಾಗಿ ಊರೂರು ಪ್ರಯಾಣ ಮಾಡುತ್ತಿದ್ದರು. ನಾನು ಹನುಮಂತನಂತೆ ಅವರ ಹಿಂದೆ ಬಿದ್ದೆ. ಅವರ ಜತೆಯಲ್ಲಿ ಅಡುಗೆ ಸಹಾಯಕನಾಗಿ ಸೇರಿಕೊಂಡು ಮುಂದೆ ಬಂದೆ. ಕೆಲವೊಂದು ಸಲ ನನ್ನನ್ನು ಬಾಡಿಗೆ ರೂಂನಲ್ಲಿ ಬಿಟ್ಟು ಹೋಗುತ್ತಿದ್ದರು. ರೂಂನಲ್ಲೂ ತಿನ್ನಲು ಅನ್ನವೊಂದೇ ಇರುತ್ತಿತ್ತು. ಆದರೆ ಅದಕ್ಕೆ ಬೇಕಾದ ಪದಾರ್ಥವಂತೂ ಇರಲಿಲ್ಲ. ಗೆಳೆಯನೊಬ್ಬ ಕಡಿಮೆ ಬೆಲೆಗೆ ಒಣಮೀನು ಬರುತ್ತೆ.. ಒಳ್ಳೆಯ ಭರ್ಜರಿ ಊಟ ಮಾಡಬಹುದು ಎನ್ನುವ ಸಲಹೆಯನ್ನು ಕೊಡುತ್ತಿದ್ದ. ಒಣ ಮೀನು ತಂದು ಬೆಂಕಿಯಲ್ಲಿ ಸುಟ್ಟುಕೊಂಡು ತಿನ್ನುತ್ತಿದ್ದೆ. ಇಲ್ಲಿಂದಲೇ ನಾನು ಮಾಂಸ, ಮೀನು ಎಲ್ಲವನ್ನು ತಿನ್ನಲು ಆರಂಭ ಮಾಡಿದೆ. ಈ ವಿಚಾರಗಳು ಮನೆಯವರಿಗೆ ತಿಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ ತಂದೆ ನಮ್ಮನ್ನು ಬಿಟ್ಟು ಹೋದರು. ನನಗೆ ಕುಟುಂಬ ನಿರ್ವಹಣೆ ಮಾಡಲು ಕೆಲಸಕ್ಕೆ ಹೋಗಲೇ ಬೇಕಿತ್ತು. ನಾನು ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆ ಹತ್ತಿರ ಇರುವ ಜನಸೇವಾ ಸಂಘಕ್ಕೆ ತಿಂಗಳಿಗೆ ೬೫ ರೂಪಾಯಿಯಂತೆ ಸಂಬಳಕ್ಕಾಗಿ ಕೆಲಸಕ್ಕೆ ನಿಂತು ಬಿಟ್ಟೆ. ಅಲ್ಲಿ ರಸಗೊಬ್ಬರ ಕೃಷಿಕರಿಗೆ ಕೊಡುವ ಕೆಲಸ. ತುಂಬಾ ಸಮಯ ಉಳಿಕೆಯಾಗುತ್ತಿತ್ತು. ಇದೇ ಸಮಯದಲ್ಲಿ ಪಕ್ಕದಲ್ಲಿದ್ದ ರಾಮಕಾಂತಿ ಥಿಯೇಟರ್‌ನಲ್ಲಿ ಲಾಡು ಮಾರಾಟ ಮಾಡುತ್ತಿದ್ದೆ. ಥಿಯೇಟರ್ ಮಾಲೀಕರು ನನ್ನ ಕೆಲಸ ಹತ್ತಿರದಿಂದ ನೋಡಿದ್ದರು. ಕೆಲವೊಂದು ಸಲ ಟಿಕೇಟ್ ಗೇಟ್ ಕೀಪರ್ ರಜೆ ಹಾಕುತ್ತಿದ್ದಾಗ ನನ್ನನ್ನು ನೇಮಕ ಮಾಡುತ್ತಿದ್ದರು. ಈ ಹಿಂದೆ ಗೇಟ್ ಕೀಪರ್ ನಿಂತವರೇ ಸಿನಿಮಾಗಳ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದರು. ಇದೇ ರಾಮಕಾಂತಿ ಥಿಯೇಟರ್‌ನಲ್ಲಿದ್ದ ಗೇಟ್ ಕೀಪರ್ ರತ್ನಾಕರ ಶೆಟ್ಟಿ ನನಗೆ ಪೋಸ್ಟರ್ ಅಂಟಿಸುವ ಕೆಲಸಕ್ಕೆ ಬರಲು ಹೇಳಿದರು. ಆಗ ನನಗೆ ಹದಿನೆಂಟರ ಹರೆಯ ಜನಸಂಘದ ಕೆಲಸ ಜತೆಯಲ್ಲಿ ಲಾಡು ಮಾರಾಟ ಮಾಡಿ ಉಳಿದ ಸಮಯದಲ್ಲಿ ಪೋಸ್ಟರ್ ಅಂಟಿಸುವ ಕೆಲಸ ಮಾಡುತ್ತಿದ್ದೆ. ಈ ವಿಚಾರ ಬೇರೆ ಥಿಯೇಟರ್‌ನ ಮಾಲೀಕರಿಗೆ ತಿಳಿಯಿತು. ಅವರು ತಮ್ಮ ಥಿಯೇಟರ್‌ಗಳ ಪೋಸ್ಟರ್ ಅಂಟಿಸುವ ಕೆಲಸವನ್ನು ನನಗೆ ಕೊಟ್ಟರು. ಹೀಗೆ ಒಂದೆರಡು ವರ್ಷದಲ್ಲಿ ಮಂಗಳೂರಿನ ೯ಕ್ಕೂ ಅಧಿಕ ಸಿನಿಮಾ ಥಿಯೇಟರ್‌ಗಳ ಪೋಸ್ಟರ್ ಅಂಟಿಸುವ ಕೆಲಸ ನನಗೆ ಬಂತು. ಈ ಹಿಂದೆ ಸಿನಿಮಾ ಪೋಸ್ಟರ್‌ಗಳು ಚೆನ್ನೈ ಹಾಗೂ ಬೆಂಗಳೂರಿನಿಂದ ಸಿನಿಮಾ ವಿತರಕರ ಮೂಲಕ ಪ್ರತಿ ಭಾನುವಾರ ಮಂಗಳೂರು ಬಂದು ಸೇರುತ್ತಿತ್ತು. ಒಂದೆರಡು ಸಾವಿರ ಸಿನಿಮಾ ಪೋಸ್ಟರ್‌ಗಳನ್ನು ಸೈಕಲ್‌ನ ಹಿಂಬದಿಯ ಕೇರಿಯರ್‌ನಲ್ಲಿ ಇಟ್ಟುಕೊಂಡು ಬೆಳಗ್ಗಿನ ಜಾವ ಮೂರರಿಂದ ರಾತ್ರಿ ಹತ್ತರ ತನಕ ನಿರಂತರ ಸೈಕಲ್‌ನಲ್ಲಿ ೨೫೦ರಿಂದ ೩೦೦ ಕಿ.ಮೀ ಪ್ರಯಾಣ ಮಾಡುತ್ತಿದ್ದೆ. ದೇಹ ತಣಿದಾಗ ಎಲ್ಲಿ ಜಾಗ ಸಿಗುತ್ತೋ ಅಲ್ಲಿಯೇ ಮಲಗಿ ಹೋಗುತ್ತಿದ್ದೆ. ಯಾರೋ ಬಂದು ಎಬ್ಬಿಸಿದಾಗ ಎಚ್ಚರಗೊಂಡು ಮತ್ತೆ ಸೈಕಲ್ ಏರಿ ಹೋಗುತ್ತಿದ್ದೆ. ಹೀಗೆ ಪ್ರತಿ ಸೋಮವಾರದಿಂದ ಗುರುವಾರ ತನಕ ಪೋಸ್ಟರ್ ಅಂಟಿಸುತ್ತಾ ಶುಕ್ರವಾರ ಮಂಗಳೂರು ಮುಟ್ಟುತ್ತಿದ್ದೆ. ಹೀಗೆ ನೂರಾರು ಕಿ.ಮೀ ಸೈಕಲ್ ಪ್ರಯಾಣದಿಂದ ದೇಹ ತೀರಾ ದಣಿಯುತ್ತಿತ್ತು. ಊಟವಂತೂ ಸೇರುತ್ತಿರಲಿಲ್ಲ. ದೇಹದ ನೋವು ಮರೆಯಲು ಕುಡಿಯಲು ಆರಂಭ ಮಾಡಿದೆ. ನೈಂಟಿ ಹಾಕಿಯೇ ಸೈಕಲ್ ಏರುತ್ತಿದ್ದೆ. ಅಂದಹಾಗೆ ಪೋಸ್ಟರ್ ಅಂಟಿಸುವ ಕಾಯಕದಿಂದ ದೊಡ್ಡ ಮೊತ್ತವೇನೂ ಬರುತ್ತಿರಲಿಲ್ಲ. ಆದರೆ ಕುಟುಂಬ ನಿರ್ವಹಣೆ ಆಗಿ ಹೋಗುತ್ತಿತ್ತು. ನನ್ನ ಕುಡಿತದಿಂದ ಬಂದ ಹಣವೆಲ್ಲ ಶರಾಬು ಅಂಗಡಿ ಸೇರುತ್ತಿತ್ತು. ಒಂದು ಪೋಸ್ಟರ್‌ಗೆ ೧೨ ಪೈಸೆಯಿಂದ ಆರಂಭವಾಗಿ ಈಗ ಒಂದು ರೂಪಾಯಿಗೆ ಬಂದು ನಿಂತಿದೆ. ಆದರೂ ಮೈಲುತುತ್ತು, ರತಲ್ ಪೌಡರ್, ಮೈದಾ ಅವುಗಳನ್ನು ಒಟ್ಟಿಗೆ ಸೇರಿಸಲು ಬೇಕಾದ ಬೆಂಕಿ ಹೊತ್ತಿಸಲು ಕಟ್ಟಿಗೆ ಎಲ್ಲವೂ ಸೇರಿದಾಗ ಲಾಭವೇ ಇಲ್ಲ. ಆದರೂ ಅದೊಂದು ವೃತ್ತಿ. ಅರೆಹೊಟ್ಟೆಯನ್ನಾದರೂ ತುಂಬಿಸಿ ಬಿಡುತ್ತದೆ ಎನ್ನುವ ಧೈರ್ಯದಿಂದ ಕಳೆದ ೪೦ ವರ್ಷಗಳಿಂದ ಮಾಡುತ್ತಾ ಬಂದಿದ್ದೇನೆ. ಈ ಪೋಸ್ಟರ್ ವೃತ್ತಿಯಲ್ಲಿ ನನಗೆ ಬಹಳಷ್ಟು ಕಹಿ ಘಟನೆಗಳು ಬಂದು ಹೋಗಿದೆ. ಒ ಂದು ಬಾರಿ ವಾರವಿಡೀ ಕರಾವಳಿಯನ್ನು ಸುತ್ತಾಡಿಕೊಂಡು ಪೋಸ್ಟರ್ ಅಂಟಿಸಿದೆ. ಆದರೆ ಶುಕ್ರವಾರ ಈ ಸಿನಿಮಾದ ಬದಲು ಬೇರೆ ಸಿನಿಮಾ ಹಾಕಿದ್ರು.. ನನಗಂತೂ ಹಣ ಬಂತು. ಆದರೆ ನನ್ನ ಕೆಲಸ ಹಾಳಾಗಿ ಹೋಗಿತ್ತು. ಕೆಲವೊಂದು ಮಂದಿ ತಮ್ಮ ಗೋಡೆಗಳಿಗೆ ಪೋಸ್ಟರ್ ಅಂಟಿಸಬಾರದು ಎನ್ನುವ ಕಾರಣಕ್ಕೆ ಗೋಡೆಯಲ್ಲಿ ಮೊಳೆ ಬಡಿದು ಬಿಡುತ್ತಿದ್ದರು. ಬೆಳಗ್ಗಿನ ಜಾವದ ಮಂಪರು ಕಣ್ಣಿನಲ್ಲಿ ಪೋಸ್ಟರ್ ಅಂಟಿಸಲು ಹೋದಾಗ ಮೊಳೆ ಕೈಗೆ ತಗುಲಿ ರಕ್ತ ಹರಿದ ಘಟನೆಗಳು ಬೇಕಾದಷ್ಟಿವೆ. ಮೈಲುತುತ್ತು, ಮೈದಾ, ರತಲ್ ಪೌಡರ್‌ನಿಂದ ಈ ರಕ್ತ ಮರೆಯಾಗುತ್ತಿತ್ತು. ಈ ವೃತ್ತಿಯಲ್ಲಿ ನಾಲ್ಕೈದು ಸಲ ಏಣಿಯಲ್ಲಿ ಏರಿ ಪೋಸ್ಟರ್ ಅಂಟಿಸುತ್ತಿದ್ದಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದೇನೆ. ಒಂದಲ್ಸವಂತೂ ೧೮ ಅಡಿಯಿಂದ ಕೆಳಗೆ ಬಿದ್ದು ಬಿಟ್ಟೆ. ಏನಾಯಿತು ಎನ್ನೋದು ನನಗೂ ಅರಿವಿಗೆ ಬಂದಿರಲಿಲ್ಲ. ಸೀದಾ ಸೈಕಲ್ ಏರಿಕೊಂಡು ಶರಾಬು ಅಂಗಡಿಗೆ ಹೋಗಿ ನೈಂಟಿ ಏರಿಸಿ ಮನೆಗೆ ಹೋದೆ. ಆದರೆ ನೋವು ಜಾಸ್ತಿಯಾಯಿತು. ೧೦೮ಕ್ಕೆ ಕರೆ ಮಾಡಿ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಾದೆ. ಈ ಸಂದರ್ಭದಲ್ಲಂತೂ ಯಾವ ಥಿಯೇಟರ್ ಮಾಲೀಕನೂ ನನ್ನ ನೆರವಿಗೆ ಬರಲಿಲ್ಲ. ಕೆಲವು ಥಿಯೇಟರ್ ಮಾಲೀಕರು ಅಂಟಿಸಿದ ಪೋಸ್ಟರ್‌ಗಳಿಗೆ ಹಣ ಕೊಡದೇ ಮೋಸ ಮಾಡಿದ್ರು.. ಮತ್ತೊಂದೆಡೆ ನನ್ನ ತಾಯಿ ಕೈ ಬಿಟ್ಟು ಹೋದರು. ನನಗೆ ಮದುವೆಯಾಯಿತು. ನಾಲ್ಕು ಮಕ್ಕಳಾದರು. ನಂಬಿಕೆ ಇಟ್ಟು ಮಾಡಿದ ಸಿನಿಮಾ ಪೋಸ್ಟರ್‌ಗಳಿಂದ ನನ್ನ ಬದುಕು ಸೀದಾ ಆಗಲೇ ಇಲ್ಲ. ಇದ್ದ ಬದುಕು ಮೂರಾಬಟ್ಟೆಯಾಗಿ ಮೂಲೆಗೆ ಬಿತ್ತು. ಅದಕ್ಕೆ ಈಗ ಅದನ್ನು ಬಿಟ್ಟು ಬೇರೆ ಪೋಸ್ಟರ್‌ಗಳನ್ನು ಅಂಟಿಸುವ ಕೆಲಸ ಮಾಡುತ್ತಿದ್ದೇನೆ. ಮಗನೊಬ್ಬ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈಗಲೂ ಕೆಲವೊಂದು ಸಿನಿಮಾ ನಿರ್ಮಾಪಕರೇ ಬಂದು ಪೋಸ್ಟರ್ ಅಂಟಿಸಿ ಎಂದಾಗ ಎದ್ದು ಹೋಗುತ್ತೇನೆ. ಸುಣ್ಣ ಬಳಿದ ಶುಭ್ರ ಗೋಡೆಗಳು ಪೋಸ್ಟರ್‌ಗಾಗಿ ಕಾದು ಕೂತಿದೆ ಎನ್ನುವ ಭ್ರಮೆಯಲ್ಲಿಯೇ ಪೋಸ್ಟರ್ ಅಂಟಿಸಿಕೊಂಡು ಬರುತ್ತೇನೆ. ಅಲ್ಲಿ ಹುಟ್ಟಿದ ಹಣ ಮತ್ತೆ ಶರಾಬು ಅಂಗಡಿ ಸೇರಿ ಬಿಡುತ್ತದೆ. ಹೀಗೆ ಬದುಕು ನನ್ನ ಬದುಕು ಹರಿದ ಪೋಸ್ಟರ್‌ನಂತೆ ಯಾವಾಗಲೂ ಕಣ್ಣಿಗೆ ಬಡಿಯುತ್ತದೆ. ..... ಮಾತು : ವೆಂಕಟೇಶ ಭಟ್ಟ ನಿರೂಪಣೆ: ಸ್ಟೀವನ್ ರೇಗೊ, ದಾರಂದಕುಕ್ಕು (ಇದು ವಿಜಯ ಕರ್ನಾಟಕದ ಹೆಮ್ಮೆಯ ಅಂಕಣವಾದ ‘ಬದುಕು ಜಟಕಾ ಬಂಡಿ’ಯಲ್ಲಿ ೨೫.೦೭.೨೦೧೩ ಪ್ರಕಟವಾದ ಲೇಖನ)