Wednesday, March 21, 2012

ಪ.ಗೋ.ಪ್ರಶಸ್ತಿಗೆ ಸ್ಟೀವನ್ ರೇಗೊ ಆಯ್ಕೆ


ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ.ಗೋ.ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ೨೦೧೧ನೇ ಸಾಲಿನಲ್ಲಿ ಪತ್ರಕರ್ತ ಸ್ಟೀವನ್ ರೇಗೊ ಆಯ್ಕೆಯಾಗಿದ್ದಾರೆ. ಅಕ್ಟೋಬರ್ ೩೧,೨೦೧೧ ರಂದು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಅವರ ‘ನಂದಿನಿ ಮಾಯವಾಗುವ ಮುನ್ನ...’ ವರದಿಗೆ ಈ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ ೨೬ರ ಸೋಮವಾರ ಪೂವಾಹ್ನ ೧೦.೩೦ ಗಂಟೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿಯು ರೂ.೫೦೦೧/, ಪ್ರಶಸ್ತಿ ಪತ್ರ, ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಮೊತ್ತವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಪ್ರಾಯೋಜಿಸುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನಿವಾಸ ನಾಯಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸ್ಟೀವನ್ ರೇಗೊ ಕಳೆದ ಐದು ವರ್ಷಗಳಿಂದ ಮಂಗಳೂರು ವಿಜಯ ಕರ್ನಾಟಕ ಬ್ಯೂರೋದಲ್ಲಿ ಉಪಸಂಪಾದಕ ಹಾಗೂ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣದ ಜತೆಗೆ ಸಂತ. ಫಿಲೋಮಿನಾ ಕಾಲೇಜು ಪದವಿ ಪೂರೈಸಿಕೊಂಡು ನಂತರ ಮಂಗಳೂರು ವಿವಿಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ಪುತ್ತೂರಿನ ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ದಂಪತಿಗಳ ಹಿರಿಯ ಪುತ್ರ. ಇವರ ಮತ್ತೊಬ್ಬ ಸಹೋದರ ಸುನೀಲ್ ರೇಗೊ ಭಾರತೀಯ ಭೂ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.